ಉಪಕಥೆ ಒಂದು

ಮೇಳ : ಕಥಾನಾಯಕ ದಿಗ್ವಿಜಯಕೆ,
ಹೊರಟೆ ಬುಟ್ಟ ನೋಡ್ರಿ |
ಆಜೂ ಬಾಜೂ ಯಾರೆಲ್ಲಿದ್ದರು

ಅಲ್ಲೆ ದಾರಿ ಬಿಡ್ರಿ ||

ಹೊಲಮನೆ ಕೆಲಸ ಧಾನ್ಯ ದವಸ
ಕೂಲಿ ಚಾಖರಿ ಮಾಡಿ |
ಅಂತೂ ಜೀವನ ಸಾಗಿಸುತ್ತಿದ್ದ
ಕುಟ್ಟೀ ಬೀಸೀ ಗುಡಿಸಿ ||

ಯಾರಿಗೆ ಯಾರೋ ಅಂದರು ನೀ ಭಲೆ
ಭಾರಿ ನಿಯತ್ತಿನ ಆಸಾಮಿ |
ತನಗೇ ಕೊಟ್ಟರು ಬಿರುದನು ಎನ್ನುತ
ಬೀಗಿದ ತುಕ್ರನು ಕೊಬ್ಬಿ ||
ರೆಕ್ಕೆಗಳೊಡೆದವು ತುಕ್ರನ ಮನಸಿಗೆ
ಹಾರಿದ ಹಾರಿದ ಮ್ಯಾಲೆ |
ಇನ್ನಾತನ ಧರೆಗಿಳಿಸುವರ್ಯಾರು?
ರೆಕ್ಕೆ ಮುರಿಯಬೇಕಷ್ಟೆ ||

(ತುಕ್ರ ಜಾಲಿಯಾಗಿ ಹೊರಟಿದ್ದಾನೆ. ಸಾನುಭೋಗ ಎದುರಾಗುತ್ತಾನೆ)

ಸಾನುಭೋಗ : ಏನಯ್ಯಾ ತುಕ್ರ, ಮಹಾಪಂಡಿತ ನೀನು, ಕಜ್ಜಿ ಹುರುಕಿನ ಬಗ್ಗೆ ನಿನ್ನ ಅಭಿಪ್ರಾಯ ಹೇಳಲೇ ಇಲ್ಲವಲ್ಲಾ.

ತುಕ್ರ : (ಅಸಹನೆಯಿಂದ ಪರಪರ ಕೆರೆದುಕೊಂಡು) ಯಾಕೆಂದರೆ ನನಗೆ ಕಜ್ಜಿ ಹುರುಕು ಆಗಿದೆ, ಅಷ್ಟೆ ತಾನೆ? ನನಗೆ ಕಜ್ಜಿ ಆಗಿದ್ದರೆ ನಿಮ್ಮದೇನು ತಕರಾರಿಲ್ಲ, ಅಲ್ಲ? ಕೊನೇಪಕ್ಷ ಕೊಳೆತು ನಾರೋ ಹಕ್ಕಾದರೂ ನನಗಿದೆಯೋ?

ಸಾನುಬೋಗ : ಅದು ಸರಿಯಪ್ಪಾ, ಅದನ್ನು ಒಪ್ಪಿಕೊಂಡೇ ಕೇಳ್ತಿದೀನಿ; ಪ್ರತಿಯೊಂದರ ಬಗ್ಗೆ ಬುದ್ಧಿವಂತನಾದ ನಿನ್ನ ಅಭಿಪ್ರಾಯ ಒಂದಿದ್ದರೆ ಒಳ್ಳೇದಲ್ಲವೆ? ಅದಕ್ಕಂದೆ.

ತುಕ್ರ : ನಿಮ್ಮಂಥಾ ದೊಡ್ಡೋರು ಕಜ್ಜೀ ಬಗ್ಗೆ ಹಂಗೆಲ್ಲಾ ಹಗುರವಾಗಿ ಮಾತಾಡಬಾರದು ಸಾನುಭೋಗರೇ . ಯಾಕಂತೀರೋ? ಅದು ರಾಜರೋಗ. ಅದ್ಯಾರೋ ಉಪ್ಪು ಹಿಡಕೊಂಡು ಸಳುವಳಿ ಮಾಡ್ತಾನಂತಲ್ಲ-ಗಾಂಧೀನಾ ಯಾರದು – ಕಜ್ಜಿ ಆಗಿರೋದು ಅವನಿಗೆ. ಅವನ್ನ ಬಿಟ್ಟರೆ ಇಡೀ ದೇಶದಲ್ಲಿ ನನಗೇ ಆಗಿರೋದು. ಜಾಸ್ತಿ,  ವಿಚಾರ ಮಾಡೋರ ಹಣೇ ಬರಾನೇ ಇಷ್ಟೋ ಏನೊ!

ಸಾನುಭೋಗ : ಎಲ್ಲಾ ಅಯೋಗ್ಯ; ಬಿದ್ದರೂ ಮೀಸೆ ಮಣ್ಣಾಗಿಲ್ಲ ಅಂತೀಯಲ್ಲ; ಆಗ ಪಟೇಲರ ಪೈಕಿ ಅಂದೆ. ಈಗ ಗಾಂಧಿ ಹೆಸರು ತಗೊಂತೀಯಾ; ನೀನು ಪಟೇಲರ ವಂಶದವನು ಇದ್ದರೂ ಇರಬಹುದು ಕಣ್ಲ!

ತುಕ್ರ : ಅಲ್ಲ ಸಾನುಭೋಗರೇ, ಆ ವಂಶದಲ್ಲಿ ಹುಟ್ಟಿದ ನನಗೇ ಅನುಮಾನ ಬಂದಿಲ್ಲ, ನಿಮಗ್ಯಾಕೆ ಬಂತು?

ಸಾನುಭೋಗ : ಮತ್ತೆ ಏಟು ತಿನ್ನೋವಾಗ ಸುಮ್ಮನೇ ಇದ್ದೆ?

ತುಕ್ರ : ಏಕಕಾಲಕ್ಕೆ ಎರಡು ಕೆಲಸ ಹೆಂಗೆ ಮಾಡೋದು ಸಾನುಭೋಗರೇ? ಏಟು ತಿನ್ನಬೇಕು, ಇಲ್ಲಾ ಮಾತಾಡಬೇಕು. ನೀವೇ ನೋಡಿದಿರಿ : ಆ ಪಟೇಲ ನನ ಮಗನಿಗೆ ಎಷ್ಟು ಕೊಬ್ಬಿದೆ ಅಂತ. ಬೂಟುಗಾಲಿಂದ ಹೆಂಗೆ ಒದ್ದ ನೋಡಿದಿರ? ಮನಸ್ಸಿನಲ್ಲಿ ನಾನೂ ಅವನನ್ನ ಒದ್ದೆ. ಆದರೆ ಬೂಟುಗಾಲಲ್ಲಿ ಅಲ್ಲ.

ಸಾನುಭೋಗ : ಸ್ವಲ್ಪ ಯೋಚನೆ ಮಾಡಯ್ಯ ತುಕ್ರ. ಪಟೇಲರು ನಿನ್ನನ್ನು ಒದ್ದರು ಅಂತಲ್ಲವ ನಿನ್ನ ಸಿಟ್ಟು? ಆದರೆ ಒದ್ದದ್ದು ಬೂಟುಗಾಲಿಂದ ಹೆಂಗೆ ಒದ್ದ ನೋಡಿದರಿ? ಮನಸ್ಸಿನಲ್ಲಿ ನಾನೂ ಅವನನ್ನ ಒದ್ದೆ. ಆದರೆ ಬೂಟುಗಾಲಲ್ಲಿ ಅಲ್ಲ.

ಸಾನುಭೋಗ : ಸ್ವಲ್ಪ ಯೋಚನೆ ಮಾಡಯ್ಯ ತುಕ್ರ. ಪಟೇಲರು ನಿನ್ನನ್ನು ಒದ್ದರು ಅಂತಲ್ಲವ ನಿನ್ನ ಸಿಟ್ಟು? ಆದರೆ ಒದ್ದದ್ದು ಬೂಟುಗಾಲಿಂದ! ಆ ಬೂಟುಗಳಿಗೆ ಬೆಲೆ ಎಷ್ಟು ಗೊತ್ತ? ಹತ್ತು ರೂಪಾಯಿ! ಹತ್ತು ರೂಪಾಯಿ ಬೂಟುಗಳಿಂದ ಒದೆಸಿಕೊಳ್ಳೋ ಭಾಗ್ಯ  ಯಾರಿಗುಂಟಯ್ಯ? ನಿಜ ಹೇಳುತ್ತೇನೆ; ಒದೆಸಿಕೊಂಡಾದ ಮೇಲೆ ನಿನ್ನ ಮರ್ಯಾದೆ ಜಾಸ್ತಿಯಾಗಿದೆ ಗೊತ್ತ?

ತುಕ್ರ : ಇಂಗಂತೀರಾ? ಅಂಗಿದ್ದರೆ ಸಾನುಭೋಗರೇ ಆ ಮರ್ಯಾದೆ ಹಿರೀಕರಾದ ನಿಮಗೇ ಮೊದಲು ಸಿಕ್ಕಬೇಕು : ಏನಂತೀರಾ?

ಸಾನುಭೋಗ : ಎಲಾ ಅಯೋಗ್ಯ. (ತುಕ್ರನನ್ನು ಎದುರಿಸಲಾರದೆ ಅವಸರದಿಂದ ಹೋಗುವನು)

ಉಪಕಥೆ ಎರಡು

(ತುಕ್ರ ಹಾಡುತ್ತ ಬರುತ್ತಾನೆ)

ತುಕ್ರ : ಕೇಳೆನ್ನ ದೇಶವೆ, ಶ್ರೀಮಂತರನು ಮಾತ್ರ
ಕಣ್ಣಲ್ಲಿ ಕಣ್ಣಿಟ್ಟು ನೋಡದಿರು;
ನಿನಗೆ ಮಾಟಾ ಮಾಡಿ ಮೈಮರೆಸಿ ಬಡವರ
ಕಡೆ ನೋಡದಂತೆಯೇ ಮಾಡುವರು.

ದಿನನಿತ್ಯ ನಿನ್ನನ್ನ ಉನ್ಮಾದದಲ್ಲಿರಿಸಿ
ಸುತ್ತ ಹುಚ್ಚಾಸ್ಪತ್ರೆ ಮಾಡಿ
ನೀ ಉಣ್ಣುವನ್ನವನು ಹಸಿರು ಕಾಗದ ಮಾಡಿ
ತುರುಕಿ ಬಾಯಿಗೆ ಉಸಿರುಗಟ್ಟಿಸುವರು.
ಕೇಳೆನ್ನ ದೇಶವೆ ಉನ್ಮಾದ ಬದುಕಲ್ಲ
ಮಾಯಾಬಜಾರಿನಲಿ ಬೆಳೆಯಲಾರೆ
ಆಸ್ಪತ್ರೆಯಿಂದೋಡಿ ಹೊರಗೆ ಬಾ ಗಾಳಿಯಿದೆ
ಬೆಳಕು ಇದೆ, ತುಕ್ರನೂ ಇಲ್ಲೆ ಇರುವೆ.
(ಕುಡಿದ ಪಟೇಲ ತೂರಾಡುತ್ತ ಒಂದು ನಾಯಿ ಸಮೇತ ಬರುತ್ತಾನೆ)

ಪಟೇಲ : ಯಾರದು ಹಾಡ್ತಿರೋದು?

ತುಕ್ರ : ನಾನು ತುಕಾರಾಂ ಉರ್ಫ್ ತುಕ್ರ.

ಪಟೇಲ : ಯಾವುದರ ಬಗ್ಗೆ ಹಾಡುತ್ತಿದ್ದೆ ನೀನು?

ತುಕ್ರ : ದೇಶದ ಬಗ್ಗೆ.

ಪಟೇಲ : ಭಲೇ! ದೇಶದ ಬಗ್ಗೆ ! ಎಷ್ಟು ದೊಡ್ಡ ಮನುಷ್ಯನಯ್ಯಾ ನೀನು! ಲೇ ತುಕ್ರ, ಈ ನಾಯೀ ಬಗ್ಗೆ ಒಂದು ಹಾಡು ಹೇಳೊ. ನೀನು ಹೇಳೋದಷ್ಟೇ ತಡ ಅತ್ತು ಬಿಡ್ತೀನಿ ಕಣೋ, ಹೇಳು.

ತುಕ್ರ : ನಾಯಿಗಳನ್ನ ಕಂಡರೆ ನನಗಾಗೋದಿಲ್ಲ ಸ್ವಾಮಿ.

ಪಟೇಲ : ಯಾಕೆ, ನೀನೂ ನಾಯೀಥರಾ ಇದ್ದೀಯಲ್ಲ, ಅದಕ್ಕೊ?

ತುಕ್ರ : ಇರಬಹುದೋ ಏನೋ.

ಪಟೇಲ : ಹಾಗಿದ್ದರೆ ಹಾಡೋದಕ್ಕೆ ನಿನಗಿನ್ನೂ ಒಳ್ಳೆ ಕಾರಣ ಸಿಕ್ಕಿತಲ್ಲಯ್ಯಾ.  ಅದು ನಿನ್ನ ಅಣ್ಣನೋ ತಮ್ಮನೋ ಆಗಿರಬೇಕು. ನಿನ್ನ ಕುಲಬಾಂಧವನ ಬಗ್ಗೆ ಹಾಡು ಹೇಳದಿದ್ದರೆ ನಿನಗೆ ನಿನ್ನ ಕಜ್ಜಿ ಮೇಲಾಣೆ ನೋಡು.

ತುಕ್ರ : ಬ್ಯಾಡಿ ಸ್ವಾಮೀ ನನ್ನ ಮೈಗಾದ ಹಾಗೆ ನನ್ನ ಹಾಡಿಗೂ ಕಜ್ಜಿಯಾಗಿದೆ.

ಪಟೇಲ : ಈಗೇನು ಹಾಡ್ತೀಯೋ? ಇಲ್ಲವೋ?

ತುಕ್ರ : ಇಲ್ಲ ಸ್ವಾಮಿ.

ಪಟೇಲ : ಎಲಾ ಬಡ್ಡೀ ಮಗನೆ, ಊರ ಪಟೇಲ ನಾನು, ಹಾಡು ಅಂದಾಗ ಹುಲಿ ಕೂಡ ನಿಂತು ಹಾಡಿ ಹೋಗ್ತದೆ. ನೀನು ಹಾಡೋದಿಲ್ಲ ಅಂತೀಯಾ?
(ಪಟ ಪಟ ಹೊಡೆಯುವನು. ತುಕ್ರ ಹೊಡೆಸಿಕೊಂಡು ಸುಮ್ಮನಾಗುವನು. ಸಾಕಾಗುವಷ್ಟು ಹೊಡೆದು ತೂರಾಡುತ್ತ ಪಟೇಲ ಹೋಗುವನು)

ತುಕ್ರ : ಅಯ್ಯೊ ಅಯ್ಯೊ ದುರ್ದೈವವೇ, ಆ ಮೂರ್ಖನಾಯಿ ನನಗೆ ಇನ್ನೊಂದು ಏಟು ಹಾಕಿ ‘ಲೇ ತುಕ್ರ’-ಅಂದಿದ್ದರೆ ಸಾಕಿತ್ತು-, ಮುಖದ ಮ್ಯಾಲುಗಿದು ಕೆನ್ನೆಗೆರಡೇಟು ಬಿಗಿದು ಕಳಿಸುತ್ತಿದ್ದೆ. ಛೇ, ನನ್ನಲ್ಲಿ ಇಷ್ಟೆಲ್ಲ ಬಲ ಇದ್ದೇನು ಪ್ರಯ  ಓಜನ?
(ಎನ್ನುತ್ತ ತಲೆಮೇಲಿನ ಟೋಪಿ ತೆಗೆದು ನೆಲಕ್ಕೆ ಹಾಕಿ ತುಳಿಯುತ್ತಾನೆ. ಪಟೇಲ ನಾಯಿ ಸಮೇತ ವಾಪಸ್ಸು ಬಂದಾಗ ಟೋಪಿ ತಲೆಗಿಟ್ಟುಕೊಂಡು ನಮಸ್ಕಾರ ಮಾಡುತ್ತಾನೆ)

ಪಟೇಲ : ನಾಯಿಗೇನಂದೆ ನೀನು?

ತುಕ್ರ : ಏನಿಲ್ಲವಲ್ಲ ಸ್ವಾಮಿ,

ಪಟೇಲ : ನಿಜ ಬೊಗಳು,

ತುಕ್ರ : ನಿಜವಾಗ್ಲೂ ಏನೂ ಅನ್ನಲಿಲ್ಲ ಸ್ವಾಮಿ.

ಪಟೇಲ : ಅದನ್ನ ನಾಯಿಗೆ ಹೇಳು.

ತುಕ್ರ : ನಾಯಣ್ಣಾ ನಾನು ನಿನಗೇನೂ ಅನ್ನಲಿಲ್ಲ ಕಣ್ಲ. (ಪಟೇಲನಿಗೆ) ನೋಡಿದಿರಾ ನನ್ನನ್ನು ಕಂಡು ಹೆಂಗೆ ಸ್ನೇಹದಿಂದ ಬಾಲ ಆಡಿಸುತ್ತ ಇದೆ!

ಪಟೇಲ : ಹೌದಲ್ಲವೆ! ಹಾಗಾದರೆ ನಾಯೀ ಸೇವೆಗೆ ನೀನೇ ಸೈ. ಅಯ್ಯಾ ತುಕ್ರ, ನೀನು ಹುಟ್ಟಿದ್ದನ್ನ ಸಾರ್ಥಕ ಮಾಡಿಕೊಳ್ಳೋದಕ್ಕೆ ಒಂದು ಅವಕಾಶ ಕೊಡ್ತೀನಿ. ತಗೋ ಈ ಹಂದಿ ಮಾಂಸ ಅದಕ್ಕೆ ತಿನ್ನಿಸು.

ತುಕ್ರ : ಹಂದೀ ಮಾಂಸ ನಾಯಿ ತಿನ್ನುತ್ತಾ ಸ್ವಾಮಿ?

ಪಟೇಲ : ತಿನ್ನದೇನಯ್ಯಾ, ನೀನೇ ಹಂದಿಯಾಗಿದ್ದರೂ ತಿಂತಿತ್ತು, ಸಧ್ಯ ನೀನು ಹಂದಿಯಲ್ಲವಲ್ಲ. ಇದನ್ನೇ ಕೊಡು.
(ಪಟೇಲ ತುಕ್ರನ ಕೈಗೆ ಮಾಂಸ ಕೊಡುವನು. ಮಾಂಸ ತೋರಿಸುತ್ತಾ ತುಕ್ರ ಬಾಬಾ ಎಂದು ನಾಯಿಯನ್ನು ಕರೆಯುವನು. ನಾಯಿ ಇನ್ನೂ ದೂರ ಹೋಗಿ ಬಾಲ ಅಲ್ಲಾಡಿಸುವುದು.)

ತುಕ್ರ : ನಾಯಿ ಬರತ್ ಇಲ್ಲ ಸ್ವಾಮಿ.

ಪಟೇಲ : ಹಂಗಂದರೆ ಹೆಂಗಪಾ? ತುಂಟತನ ಮಾಡ್ತಿದೆ. ಬುದ್ಧಿ ಹೇಳಿ ಕರೆದರೆ ತಾನೇ ಬರ್ತದೆ.
(ನಾಯಿ ಬೊಗಳುತ್ತದೆ)

ತುಕ್ರ : ಲೇ ದರಿದ್ರ ನಾಯಿ, ಮಾಂಸ ಇಲ್ಲಿದೆ ಬಾ………

ಪಟೇಲ : (ರೇಗಿ) ‘ದರಿದ್ರ ನಾಯಿ’? ಹಂಗೆಲ್ಲಾ ಒರಟಾಗಿ ಹೇಳಬ್ಯಾಡವೋ ಬಡ್ಡೀಮಗನೆ. ಬುದ್ಧಿ ಹೇಳೋವಾಗ ಒರಟಾಗಿ ಹೇಳಿದರೆ ಯಾರು ಕೇಳ್ತಾರೆ? ಅಣ್ಣಯ್ಯಾ ಬಾಪ್ಪಾ, ತಮ್ಮಣ್ಣಾ ಬಾಪ್ಪಾ – ಅಂತ ಮೃದುವಾಗಿ ಹೇಳು.

ತುಕ್ರ : ಅಯ್ಯಾ ಅಣ್ಣಯ್ಯಾ ಮಾಂಸ ಬೇಕ? ಮೂಳೆ ಬೇಕ? ಇಕೋ ಇಲ್ಲಿದೆ. ಹೊಟ್ಟೆ ಹರಿಯೋಗಂಟ ತಿನ್ನು. ಆದರೆ ಮೆಲ್ಲಗೆ ತಿನ್ನು.

ಪಟೇಲ : ಹ್ಯಾಗೆ ತಿನ್ನಬೇಕು ಅಂತ ಸ್ವಲ್ಪ ತೋರಿಸಯ್ಯಾ, ಮೂಕ ಪ್ರಾಣಿ ಅದಕ್ಕೇನು ತಿಳೀತದೆ ಪಾಪ.

ತುಕ್ರ : (ತಿನ್ನುವುದನ್ನು ಅಭಿನಯಿಸುತ್ತ) ಹಿಂಗೆ ತಿನ್ನು.

ಪಟೇಲ : ಲೋ ನನ್ನ ಮಗನೆ, ನೀನೇ ಮಾಂಸ ತಿನ್ನೋದಕ್ಕೆ ಸುರು ಮಾಡಿದೆಯಾ?

ತುಕ್ರ : ಇಲ್ಲ ಸ್ವಾಮಿ, ದವಡೆ ಅಗಿದು ತೋರಿಸಿದೆ.

ಪಟೇಲ : ದವಡೆಯಲ್ಲಿ ಏನಿಟ್ಟುಕೊಂಡಿದ್ದೆ?

ತುಕ್ರ : ಏನಿಲ್ಲ, ಅಷ್ಟೋ ಇಷ್ಟೋ ಸಿಟ್ಟು ಇಟ್ಟುಕೊಂಡಿದ್ದೆ.

ಪಟೇಲ : ಸಿಟ್ಟು? ಯಾರ ಬಗ್ಗೆ?

ತುಕ್ರ : ನನ್ನ ಬಗ್ಗೆ.

ಪಟೇಲ : ಭೇಶ್‌ ಭೇಶ್‌, ಮುಂದೆ ಹೇಳು.

ತುಕ್ರ : (ನಾಯಿಗೆ) ಅಣ್ಣಯ್ಯಾ ಹಿಂಗೆ ಮಾಂಸ ತಿನ್ನು. ಆದರೆ ಬೊಗಳಬೇಡ ಅಂತ ಯಜಮಾನರು ಹೇಳ್ತಿದಾರೆ.

ಪಟೇಲ : ಹಾಗೆ ಹೇಳಯ್ಯಾ ಜಾಣ ನೀನು.

ತುಕ್ರ : ಅಣ್ಣಯ್ಯಾ ಹಂಗೆಲ್ಲ ಬಾಲ ಬಡಿಯಬೇಡ. ಬಾಲಲ ಬಡೀತಾ ಇದ್ದರೆ ನನ್ನ ಮಾತು ನಿನಗೆ ಕೇಳಿಸೋದೇ ಇಲ್ಲ. ಇಷ್ಟಾಗಿ ನೀನು ಬಾಲ ಬಡಿದರೆ ನಾನು ನಿನ್ನ ತಿಗದ ಮ್ಯಾಲೆ ಒದೀಬೇಕಾಗ್ತದೆ.

ಪಟೇಲ : (ರೇಗಿ ) ಲೇ ತುಕ್ರಾ, ಬೋಸಡೀ ಮಗನೆ, ಹಾಂಗೆಲ್ಲ ನೀನು ನಾಯಿಗೆ ಅವಮಾನ ಮಾಡೋದನ್ನ ಸಹಿಸೋದಿಲ್ಲ ನಾನು. ಮರ್ಯಾದೆ ಕೊಟ್ಟು ಮಾತಾಡಿಸಿದರೆ ಸರಿ : ಇಲ್ಲದಿದ್ದರೆ ತಿಗದ ಮೇಲೆ ಒದೀತೇನೆ, ಹುಷಾರ್-

ತುಕ್ರ : ಅಣ್ಣಯ್ಯಾ ನಿನಗೆ ಬಾಲವಿರೋದು ಸಹಜ. ಆದರೆ ಆ ಬಾಲದ ಮ್ಯಾಕೆ ನಿನಗೆ ನಿಯಂತ್ರಣ ಇದ್ದಿದ್ದರೆ ಚೆನ್ನಾಗಿತ್ತು. ಆ ಬಾಲ ನೀನಾದರೂ ಯಾಕೆ ಬಡೀಬೇಕು? ನೊಣ ಓಡಿಸಲಿಕ್ಕೆ, ಸರಿ ತಾನೆ? ಆದರೆ ಅಣ್ಣಯ್ಯಾ ಬದುಕೋ ಹಕ್ಕು ನಿನಗಿದ್ದಷ್ಟೇ ನೊಣಕ್ಕೂ ಇದೆ! ಅಲ್ಲವೆ? ನೀನು ಮಾಂಸ ತಿಂದರೆ ಅದು ನಿನ್ನ ಬಾಲ ತಿನ್ನಲಿ.  ನೋಡು ಆ ನೊಣ ನಿನ್ನ ಮಾಂಸಕ್ಕೆ ಬಾಯಿ ಹಾಕುತ್ತದೆ ಅಂತ ರೇಗ ಬೇಡ. ಯಾಕೆಂದರೆ ಆ ಮಾಂಸ ನಿನ್ನದಲ್ಲ, ಯಜಮಾನರದ್ದು. ಅವರ ಔದಾರ್ಯದಿಂದ ನಿನಗೆ ಮಾಂಸ ಸಿಕ್ಕಿದೆ. ಹಂಗೆ ನಿನ್ನ ಔದಾರ್ಯದಿಂದ……..

ಪಟೇಲ : ಅದೂ ನನ್ನ ಔದಾರ್ಯವೇ-

ತುಕ್ರ : ಹಂಗೇ ಯಜಮಾನರ ಔದಾರ್ಯದಿಂದ ಅದಕ್ಕೆ ನಿನ್ನ ಬಾಲ ಸಿಕ್ಕಿದೆ!

ಪಟೇಲ : ಭೇಶ್‌ ತುಕ್ರಾ, ಇದು ಕಣೋ ಗಾಂಧಿ ಹೇಳಿದ್ದು. ಸಳುವಳಿ ಸತ್ಯಾಗ್ರಹ  ಅಂದರೆ ಇದೇ ಕಣೋ ಬಡ್ಡೀಮಗನೆ. ಇನ್ನಷ್ಟು ಹೇಳು-

ತುಕ್ರ : ಅಣ್ಣಯ್ಯಾ, ಗಾಂಧಿ ಅಂದರೆ ಅದೊಂದು ಹೆಸರು. ಆ ಹೆಸರು ಹೇಳಿ ಮಾಂಸ ಗಿಟ್ಟಿಸಬೌದು. ಆ ಹೆಸರಿನಲ್ಲಿ ನಮ್ಮ ಕಳ್ಳತನ, ಹೇಡಿತನ, ದುಷ್ಟತನಗಳನ್ನು ಮುಚ್ಚಿಡಬೌದು (ನಾಯಿ ತನ್ನ ಪಾಡಿಗೆ ಮಾಂಸ ತಿನ್ನುತಿದ್ದುದ್ದನ್ನು ಗಮನಿಸಿ) ಸ್ವಾಮೀ, ನನ್ನ ಒಂದು ಮಾತೂ ನಾಯೀ ಕಿವಿಗೆ ಬೀಳುತ್ತಿಲ್ಲ. ಹೊಟ್ಟೆ ತುಂಬೋ ತನಕ ಅದು ನನ್ನ ಮಾತು ಕೇಳೋದಿಲ್ಲ. ತುಂಬಿದ ಮ್ಯಾಲೆ ಅದಿಲ್ಲಿ ಇರೋದಿಲ್ಲ. ಅಂದರೆ ನಾ ಹೇಳಿದ ಗಾಂಧೀ ತತ್ವ ಎಲ್ಲಾ ಸುಳ್ಳು ಅನ್ನಲೆ?

ಪಟೇಲ : ಗಾಂಧೀ ತತ್ವ ಎಂದಾದರೂ ಸುಳ್ಳಾಗುತ್ತೇನೋ ಬೋಳೀಮಗನೆ? ನೀನು ಸುಳ್ಳ, ನಿನ್ನಪ್ಪ ಸುಳ್ಳ! ಗಾಂಧೀಗೆ ಸುಳ್ಳ ಅಂತೀಯಾ?
(ಪಟ ಪಟ ತುಕ್ರನನ್ನು ಹೊಡೆಯುವನು)
ಹಾಳಾಗಿ ಹೋಗು. ಎಲ್ಲಿಗೆ ಹೋಗ್ತೀಯಾ?

ತುಕ್ರ : ಮಲಗೋದಕ್ಕೆ.

ಪಟೇಲ : ಮುಂಡೇದೆ ನಿನ್ನಮ್ಮನ ಹತ್ತಿರ ಹೋಗು, ಈ ಜನ್ಮದಲ್ಲಿ ಭಾರೀ ಕೊಳಕಾಗಿದ್ದೀಯಾ. ಇನ್ನೊಮ್ಮೆ ಹಸನಾಗಿ ಹುಟ್ಟಿ ಬಾ ಹೋಗು ಬಡ್ಡೀಮಗನೆ. (ಮತ್ತೆ ಪಟ ಪಟ ಹೊಡೆದು ಹೋಗುವನು. ಅವನು ಹೋದದ್ದು ಖಾತ್ರಿಯಾದ ಮೇಲೆ)

ತುಕ್ರ : ಛೇ, ನನ್ನ ಮಗನ ಕೈಲೇ ಏಟು ತಿನ್ನಬೇಕಾಗಿ ಬಂತಲ್ಲಪ್ಪ! ಹಡೆದ ತಂದೆ ಬಗ್ಗೆ ಸ್ವಲ್ಪಾದರೂ ಭಯಭಕ್ತಿ ಇದೆಯೇ ನೋಡಿ, ಎಂಥಾ ಕಲಿಗಾಲ ಬಂತಪ್ಪ!
(ಪಟೆಲ ಕೇಳಲಿಸಿಕೊಂಡು ತಿರುಗಿ ಬರುವನು)

ಪಟೇಲ : ಬಡ್ಡೀಮಗನೆ, ಇದು ಮಗ ತಂದೆಗೆ ಹಾಕೋ ಏಟಲ್ಲ, ಮನುಷ್ಯ ದನಕ್ಕೆ ಹಾಕೋ ಏಟು. ಹೇಳು : ಇದು ಮನುಷ್ಯ ದನಕ್ಕೆ ಹಾಕೋ ಏಟು – (ಮತ್ತೆ ಹೊಡೆದು ಹೋಗುವನು)

ತುಕ್ರ : ಪಾಠ ಕಲಿಸುತ್ತಾನಂತೆ ಪಾಠ. ಸ್ಕೂಲ್‌ ಮೇಷ್ಟ್ರೀಗೇ ಪಾಠ ಕಲಿಸಿದ ಹಾಗೆ ಕನಸು ಕಂಡವನು ನಾನು.
(ಮೇಳ ಮುಂದೆ ಬರುತ್ತದೆ)

ಭಾಗವತ : ನೋಡಿದಿರಲ್ಲ, ಇವನಿಗೆ ಪಾಠ ಕಲಿಸೋದು ಎಷ್ಟು ಕಷ್ಟ ಅಂತ.

ಮೇಳ ೧ : ಲೇ ತುಕ್ರ, ಬೇಕಾದಷ್ಟು ಏಟು ತಿಂದಿದ್ದೀಯಾ ಹೋಗಿ ಮಲಗಿಕೋ, ನಾಳೆ ಬೆಳಿಗ್ಗೆ ರೆಡಿಯಾಗಬೇಕು-

ಮೇಳ ೨ : ಮತ್ತೆ ಏಟು ತಿನ್ನೋದಕ್ಕೆ.

ತುಕ್ರ : ತಗೀಯಪ್ಪ, ಇವನ್ಯಾವನೋ ಕಿರಸ್ತಾನ ಪಾದ್ರಿ ಹಂಗೆ ಮಾತಾಡ್ತವನೆ. ಸ್ವಾಮೀ, ದೇವೀ ಪೂಜೆ ಮಾಡೋ ಒಳ್ಳೆ ಕೆಲಸಕ್ಕೆ ಹೊರಟಿದ್ದೇನೆ. ಎಲ್ಲಿಗೆ ಅಂತ ಅಡ್ಡಬಾಯಿ ಹಾಕಬ್ಯಾಡಿ. ಈ ಕಡೆ ಬನ್ನಿ.

ಮೇಳ ೧ : ಎಲಾ ಇವನ, ಇಷ್ಟೊತ್ತಿನಲ್ಲಿ ಯಾ ದೇವೀ ಪೂಜೆ ಮಾರಾಯಾ?

ತುಕ್ರ : ಈಚಲು ಮರದವ್ವನ ಪೂಜೆ ಹೊ ಹೋ………
(ತುಕ್ರ ಮೇಳಕ್ಕೆ ಅಣಕಿಸುತ್ತ ಹೋಗುವನು)

ಉಪಕಥೆ ಮೂರು

(ಸೇಂದಿ ಅಂಗಡಿ. ಇನ್ನೊಂದು ಬದಿಗೆ ಟಗರಿನ ಕಾಳಗದ ಪೂರ್ವಸಿದ್ಧತೆಗಳು ನಡೆದಿವೆ. ತುಕ್ರ ಸೇಂದಿ ಕೊಂಡು ಕುಡಿಯುತ್ತ ಹಾಡತೊಡುಗ್ತಾನೆ)

ತುಕ್ರ : ಕೆದರಿದ ಕೂದಲಿನ ಈಚಲ ಮರದವ್ವೆ
ಮುಖದಲ್ಲಿ ಹುರಿಮೀಸೆ ಗಡ್ಡದವಳೆ
ಕಣ್ಣಲಿಪ್ಪತ್ತೆಂಟು ನರಕಗಳ ಆಳುವಳೆ
ಉಧೋ ಉಧೋ ಹಡೆದವ್ವೆ ಅಡ್ಡಬಿದ್ದೆ.
ಕಂಡಿರಾ ಕೆಲಮಂದಿ ಮನಸಿನ ಗೆರೆ ಮೀರಿ
ದೇವರು ಇಲ್ಲವೆ ದೈತ್ಯರಾಗಿ
ಇಲ್ಲ ಕೋತಿಗಳಾಗಿ ನಾಯಿ ಕತ್ತೆಗಳಾಗಿ
ಕುಣಿಯುವರು ತಾಯ ಕರುಣೆ ತಾಗಿ
ಎಲ್ಲಿಯೋ ಸಣ್ಣ ಕಿಡಿ ತಾಗಿ ಬೊಂಬಾಟಾಗಿ
ಬೆಂಕಿ ಭುಗಿಲೆದ್ದಿತೋ? ಹೌದು ಎನ್ನಿ.
ಕರುಳು ಕತ್ತರಿಸಿ ವಿಲವಿಲನೆ ಒದ್ದಾಡಿದರೆ
ಅವಳ ಹೆಸರಿಗೆ ಒಂದು ಹೂವೇರಿಸಿ.

ಕಾರ್ಯಕಾರಣವಿರದೆ ಎನಾದರಾಯಿತೇ
ಅಥವಾ ಹಾಳಾಯಿತೇ ಹೇಳಿರಯ್ಯ
ಆಕಾಶ ಪಾತಾಳ ಚಕಮಕಿ ಸಿಡಿದರೆ
ಅವಳ ನೂರೊಂದು ಸಲ ನೆನೆಯಿರಯ್ಯ.

(ಜನ ಸೇರಿದ್ದಾರೆ. ಟಗರಿನ ಕಾಳಗಕ್ಕೆ ರೆಡಿಯಾಗಿ ಪಣ ಕಟ್ಟುತ್ತಿದ್ದಾರೆ. ಬೋರ, ಮಾರ ಎರಡೂ ಕಡೆ ಪಣದ ಹಣ ವಸೂಲಿ ಮಾಡುತ್ತಿದ್ದಾರೆ.)

ಬೋರ : (ತನ್ನ ಟಗರಿನ ಮೈದಡುವುತ್ತ) ಬನ್ನಿ ಬನ್ನಿ ಝಟಾಪಟ್‌ ಟಗರ್ ಕುಸ್ತಿ. ನವಲೂರ ಟೈಗರ್‌ ಟಗರನ್ನ ಮೂರು ಬಾರಿ, ಸುಲ್ತಾನಪುರ ಸಿಂಗ್ಯಾ ಟಗರನ್ನ ಎರಡು ಬಾರಿ ಹಿರಿದಂತಾ ಟೈಗರ್ ಬೀರನ ಕಡೆ ಬನ್ನಿ, ಬನ್ನಿರಯ್ಯಾ ಬನ್ನಿ.

ಮಾರ : (ತನ್ನ ಟಗರಿನ ಡುಬ್ಬ ತಟ್ಟುತ್ತ) ಜಡೆಮುನಿ ಕಡೆ ಬನ್ರಯ್ಯಾ ಬನ್ನಿ. ಕೆದರಿದ ಜಡೆ ನೋಡು, ಕಿಸಿದಂಥಾ ಕಣ್‌ ನೋಡು. ಐಸಾ ಅಂತಿರೀತಾನೆ ಕೈತುಂಬ ಪೈಸ ತರತಾನೆ – ಜಡೆಮುನಿ ಕಡೆ ಬನ್ನಿರಯ್ಯಾ ಬನ್ನಿ ಬನ್ನಿ.

ಬೋರ : ವ್ಯವಹಾರವೆಲ್ಲಾ ಪೈಸಾ ಅದ್ದೇಲಿ!
ಕೊನೇಬೆಟ್ಟು ಒಂದೇ ಬಿಲ್ಲಿ!
ಪೈಸಾ ನಿಕಾಲ್‌! ದೇಖೋ ಖೇಲ್‌!

ಮಾರ : ಮರೆಯಬೇಡಿ, ಮರೆತು ಮರುಗಬೇಡಿಕ
ಪೈಸಾ ನಿಕಾಲ್‌ ದೇಖೋ ಖೇಲ್‌!

ಒಬ್ಬ : ಜಡೆಮುನಿ ನಿನ್ನ ಕೊಂಬಿಗೆ ದೆವ್ವಿನ ಶಕ್ತಿ ಬರಲಪ್ಪಾ. ಜಡೆಮುನಿ ಮ್ಯಾಲೆ ನಂದೊಂದು ಬಿಲ್ಲೆ (ಮಾರನ ಮುಂದೆ ಹಣ ಇಡುವನು).

ಇನ್ನೊಬ್ಬ : ನನ್ನ ಗೆಲ್ಲಿಸದಿದ್ದರೆ ಜಡೆಮುನಿ ನಿನಗೆ ನನ್ನ ಕೂರಿ ಹೇನಿನ ಆಣೆ. ನಂದೆರಡು ಬಿಲ್ಲೆ| (ಮಾರನ ಮುಂದೆ ಹಣ ಇಡುವನು)

ಮತ್ತೊಬ್ಬ : ಜಡೆಮುನಿ, ನಿನ್ನ ನೋಡಿದರೇ ಗೆದ್ದು ಬಿಡ್ತಿ ಅಂತ ಅನ್ನಿಸುತ್ತಯ್ಯಾ. ನಿನ್ನ ಒಂದೊಂಧು ರೋಮಕ್ಕೂ ಒಂದೊಂದು ಕೊಂಬಿನ ಶಕ್ತಿ ಬರಲಪ್ಪಾ. ಜಡೆಮುನಿ ಮ್ಯಾಲೆ ನಂದೊಂದು ಬಿಲ್ಲೆ (ಮಾರನ ಮುಂದೆ ಹಣ ಇಡುವನು)

ಮಗುದೊಬ್ಬ : ಎಲಾ ಇವನ; ಎಲ್ಲಾರು ಜಡೆಮುನಿ ಮ್ಯಾಲೇನ! ನಂದೂ ಒಂದಿರಲಿ.

ಮತ್ತೊಬ್ಬ : ನಂದೆರಡು (ಮಾರನ ಮುಂದೆ ದುಡ್ಡು ಇಡುವನು).

ಒಬ್ಬ : ಎರಡು ಬಿಲ್ಲೆ! ಇವನ್ಯಾವನೋ ಊರ ಗೌಡ ಇರಬೇಕಪೊ!

ಇನ್ನೊಬ್ಬ : ಪಟೇಲ ಕಣಪ್ಪೊ|

ತುಕ್ರ : (ತನ್ನಲ್ಲಿ) ಪಟೇಲ? ನನ್ನ ಮಗ ಇಲ್ಲಿಗೂ ಬಂದನ? ಇವನೇ ಬೇರೆ. ಯಾವೂರಿನಲ್ಲಿ ಇವನಿಗೆ ನಾನು ತಂದೆಯಾದೆ? ಇವನ ತಾಯಿ ಜೊತೆ ಸುಖದಲ್ಲಿ ಮೈಮರೆತಿದ್ದಾಗ ಯಾವಾಗ್ಲೋ ಇವನು ಮೈತಳೆದ. ನನಗೆ ಗೊತ್ತಾಗದಂಗೆ ಕದ್ದು ಹೊರಗೆ ಬಂದವನೆ ಬೇಕೂಫ. ಅದಕ್ಕೇ ಗುರ್ತು ಸಿಗ್ತಾ ಇಲ್ಲ. ಇರಲಿ ತಂದೆಯಾದ ತಪ್ಪಿಗೆ ಈ ಮಗನಿಗೆ ಬುದ್ಧಿ ಕಲಿಸಲೇಬೇಕು (ಪ್ರಕಶ) ಅಯ್ಯಾ ಇಲ್ಲಿ ತಗೊಳ್ಳಣ್ಣಾ ಒಂದಾಣೆ; ಬೀರೇ ದೇವರ ಮ್ಯಾಲೆ.
(ಬೋರನ ಮುಂದೆ ಹಣ ಇಡುವನು. ಎಲ್ಲರೂ ಇವನನ್ನೇ ಬೆರಗಿನಿಂದ ನೋಡುವರು)

ಇನ್ನೊಬ್ಬ : ಟೈಗರ್ ಬೀರನ ಮ್ಯಾಲೆ ಒಂದಾಣೆ! ಯಾರಪಾ ಇವನು?

ತುಕ್ರ : ಪಟೇಲನ ಅಪ್ಪ.

ಮಾರ : ಬಿಡೋಣವಾ?

ತುಕ್ರ : ಬಿಟ್ಟುಬಿಡು ಇನ್ನ…………..
(ಬೋರ, ಮಾರ ಎರಡೂ ಟಗರು ರೆಡಿ ಮಾಡುವರು)

ಒಬ್ಬ : (ಜಡೆಮುನಿಗೆ) ನನ್ನ ದುಡ್ಡು, ಮಾನ ಎರಡೂ ನಿನ್ನ ಕೊಂಬಲ್ಲಿದೆಯಪ್ಪ- ಜಡೆಮುನಿ.

ಇನ್ನೊಬ್ಬ : ನೆಪ್ಪಿರಲಣ್ಣಾ, ನೀನು ಮೇಯೋ ಮಾಳ, ಮೆಳೆ ನಂದು. (ಎರಡೂ ಟಗರು ಬಿಡವರು. ಬೀರ ಒಂದೆರಡು ಹೆಜ್ಜೆ ಮುಂದೆ ಹೋಗಿ ಹಿಂದೆ ಬರುವುದು. ತುಕ್ರ, ಬೋರಇಬ್ಬರನ್ನುಳಿದು ಉಳಿದವರು ನಗುವರು).

ತುಕ್ರ : ಇರಿ ಇರಿ. ಆಗಲೇ ಗೆದ್ದವರ ಹಾಗೆ ಮಾಡ್ತೀರಲ್ಲ.
(ಬೀರನನ್ನು ಕರೆದುಕೊಂಡು ಒಂದು ಕಡೆ ಹೋಗಿ ಬೇರೆಯವರಿಗೆ ಕೇಳಿಸದಂತೆ) ಸ್ವಾಮೀ ಬೀರೇದೇವಾ, ಒಂದು ಸಲ ಕಣ್‌ ಬಿಟ್ಟು ಜಡೆಮುನಿಯನ್ನ ನೋಡಣ್ಣ, ನಿನ್ನ ಕಣ್ಣುಗುಡ್ಡೆ ಹೊರಕ್ಕೆ ಬಂದರೂ ಪರವಾಯಿಲ್ಲ, ಚೆನ್ನಾಗಿ ನೋಡು. ಉದ್ದವಾದ ಕತ್ತಿನ ಕೂದಲು, ಸಣ್ಣ ಕಣ್ಣು – ಮುಖಕ್ಕೆ ಮುಖ ಕೊಟ್ಟು ನಿನ್ನ ಕಡೆ ನೋಡೋದೇ ಇಲ್ಲ, ಹೌದಾ? ಯಾಕೆ ಹೇಳು? ಗುರುತು ಸಿಕ್ಕಿತ? ಕಳೆದ ಜನ್ಮದಲ್ಲಿ ಅದು ನಿನ್ನ ಪ್ರೇಯಸಿಯಾಗಿದ್ದ ಕುರಿ ಅಲ್ಲವೇನಪ್ಪಾ? ಬೇರೆ ಹಿಂಡಿನಲ್ಲಿದ್ದರೂ ನಿನ್ನ ಹತ್ತಿರ ಕದ್ದು ಬಂದು ಹೋಗುತ್ತಿದ್ದುದನ್ನು ಜ್ಞಾಪಿಸುಕೋ ಮಾರಾಯಾ. ಜಡೆಮುನಿಯೂ ಒಂದು ಟಗರು ಅನ್ನ ಓದಕ್ಕೆ ತುಟಿ ಕಚ್ಚಿಕೊಂಡರೂ ನನಗೆ ನಗೆ ಬರ್ತಾ ಇದೆ. ನೀನು ನಿಂತಿದ್ದೀಯಲ್ಲಪ ಗಾಬರಿಯಾಗಿ. ಹೋಗೋ ನನ್ನ ರಾಜಾ. ಮುನ್ನುಗ್ಗೋ ನನ್ನ ಸುದೈವ!

ಹೋಗೋ ನುಗ್ಗೊ ಐಸಾ|
ತಗಂಬಾರೊ ಪೈಸಾ||

ಮಾರ ಮತ್ತು ಉಳಿದವರು :
ನುಗ್ಗೊ ರಾಜಾ ಐಸಾ!
ಜಡಿಮುನಿ ನುಗ್ಗೊ ಯಸಾ!
ಜಡೆಮುನಿ ತಾರೋ ಪೈಸಾ!!
(ಹೀಗೆ ಎರಡೂ ಟಗರುಗಳನ್ನು ಬಿಟ್ಟು ಹುರಿದುಂಬಿಸುವರು. ಟಗರುಗಳೆರಡೂ ತುಸು ಹೊತ್ತು ಹೋರಾಡಿದ ಮೇಲೆ ಜಡೆಮುನಿ ಓಡಿಹೋಗುತ್ತದೆ. ಜನ ಹೋ ಎಂದು ಕಿರುಚುತ್ತಾರೆ.)
ಚಾಂಗುಭಲಾ ನನ ಬೀರೇ ದೇವಾ
ಮಡಿಲಿಗೆ ದಯಮಾಡಿ ಬಾ ಸ್ವಾಮಿ ಬಾ
(ಎನ್ನುತ್ತ ತುಕ್ರ ಜಡೆಮುನಿ ಕಡೆಯ ಹಣದ ಕುಪ್ಪೆ ಹಿಡಿದುಕೊಳ್ಳುವನು. ಅದನ್ನು ಬಾಚಿ ತಬ್ಬಿಕೊಳ್ಳುವಷ್ಟರಲ್ಲಿಹೊಡಿ ಬಡಿ”-ಎಂಬ ಬೈಗುಳ ಒದೆತ ಹೊಡೆದಾಟ ಸುರುವಾಗುವುದು. ತುಕ್ರ ಏನಾಯಿತೆಂದು ನೋಡ ನೋಡುವಷ್ಟರಲ್ಲಿ ಹಣದ ಎರಡೂ ಕುಕಪ್ಪೆ ಮಾಯಾವಾಗಿ ಜನರೂ ಮಾಯವಾಗುತ್ತಾರೆ. ತುಕ್ರನೊಬ್ಬನೇ ದಿಗಿಲಿನಲ್ಲಿ ನಿಂತಿದ್ದಾನೆ)

ತುಕ್ರ : ನಾನು ಸುದೈವ ಗೆದ್ದದ್ದು ಗೊತ್ತಾಗೋ ಮೊದಲೇ ಹಣವೆಲ್ಲಾ ಮಾಯವಾಗಿದೆಯೆ!

ಭಾಗವತ : (ಕಾಣಿಸಿಕೊಂಡು) ಕೊಚ್ಚಿಕೊಳ್ತ ಇದ್ದೆಯಲ್ಲಪ ಬುದ್ಧಿವಂತ ಅಂತ. ಎಲ್ಲಿ ಹೋಯ್ತು ನಿನ್ನ ಬುದ್ಧಿವಂತಿಕೆ?

ತುಕ್ರ : ಅಯ್ಯೋ ಆ ಹಣದ ಕುಪ್ಪೆ ಸಿಕ್ಕಿದ್ದರೆ….

ಭಾಗವತ : ಎಲ್ಲಾ ಇತ್ತು, ದೈವ ಒಂದಿರಲಿಲ್ಲ ಅಷ್ಟೆ.

ತುಕ್ರ : ಅವರ್ಯಾರೂ ನಮ್ಮೂರವರಲ್ಲ ಅಲ್ಲವೆ ? ಕಳ್ಳರನ್ನು ಹೆಂಗೆ ಪತ್ತೆ ಮಾಡೋದು?

ಭಾಗವತ : ನಮ್ಮೂರವರಲ್ಲ ಅಂದಮ್ಯಾಲೆ ಪತ್ತೆ ಮಾಡಲಿಕ್ಕಾಗೋದಿಲ್ಲ. ಏನೇ ಆದರೂ ಕದ್ದವರು ನಿನ್ನ ಮಕ್ಕಳಲ್ಲವೇ?

ತುಕ್ರ : ಅಯ್ಯೋ ನನ್ನ ನಿಧಿ ಹೋಯ್ತಲ್ಲಾ………..

ಭಾಗವತ : ನೀನೊಂದು ದನ ಅಲ್ಲವೇನಪ್ಪಾ? ದನಕ್ಕೆ ಯಾಕೆ ಹಣ?

ತುಕ್ರ : ಅಲ್ಲ ಹಂಗಲ್ಲ ಭಾಗವತರೇ ಇರಿ-
(ತುಕ್ರ ಒಂದು ಮೂಲೆಗೆ ಹೋಗಿ ಕೆನ್ನೆಗೆ ಪಟಪಟ ಹೊಡೆದುಕೊಳ್ಳುವನು. ಮೇಳದವರು ಹೋಗಿ ಅವನ ಕೈ ಹಿಡಿಯುವರು.)

ಭಾಗವತ : ಏನಪ್ಪ-ಇದು ಮೂರ್ಖತನ ಅಲ್ಲವೆ? ಯಾಕೆ ಹಾಗೆ ಹೊಡೆದುಕೊಂಡೆ?

ತುಕ್ರ : ಹೊಡೆದುಕೊಳ್ಳಲಿಲ್ಲ ಸ್ವಾಮಿ, ಹೊಡೆದೆ.

ಭಾಗವತ : ಯಾರನ್ನ? ಯಾಕೆ?

ತುಕ್ರ : ಅದೇ ಸ್ವಾಮಿ, ತುಕ್ರ ಗೊಳೋ ಅಂತ ಅಳ್ತಿದ್ದ. ‘ಯಾಕೋ ತುಕ್ರ ಅಂದೆ.
“ಅಯ್ಯೊ ಕಳಕೊಂಡ್ನೆಪೊ” ಅಂತ ಗೋಳಾಡಿದ.
“ಏನೋ ಕಳಕೊಂಡೆ”?
“ಮೂರ್ಖತನ ಕಳಕೊಂಡೆ”? ಅಂದ.
“ಅಷ್ಟೂ ಮೂರ್ಖತನ ನೀನೇ ಯಾಕೋ ಇಟ್ಟುಕೊಂಡೆ ಜುಗ್ಗ?
ಅಷ್ಟೋ ಇಷ್ಟೋ ದೊಡ್ಡೋರಿಗೊ ಹಂಚಬಾರದಿತ್ತೆ?”——-
“ಹಂಚಿದಮ್ಯಾಲೂ ನನಗೊಂದಿಷ್ಟು ಇರಲಿ ಅಂತ ಇಟ್ಟುಕೊಂಡಿದ್ದೆ. ಯಾರೋ ಜೂಜುಕೋರರು ಓಡಿಬಂದು ಅಷ್ಟೂ ಮುರ್ಖತನವನ್ನ ಲೂಟಿ ಮಾಡಿಕೊಂಡು ಹೋದರಪ್ಪೋ”-ಅಂದ.

ಭಾಗವತ : ಅದಾಯ್ತಲ್ಲ, ಮತ್ಯಾಕೆ ತುಕ್ರನಿಗೆ ಏಟು ಬಿಗಿದೆ?

ತುಕ್ರ : ಮೂರ್ಖತನ ಹೋದ ಮೇಲೆ ತಲೆ ಖಾಲಲಿಯಾಗಿತ್ತಲ್ಲ; ಬುದ್ಧಿಯಾದರೂ ಬರಲಿ ಅಂತ ಎರಡೇಟು ಸಾಲ ಕೊಟ್ಟೆ.

ಮೇಳ : ಸಾಲ ಯಾಕೆ, ನಾವು ಪುಕ್ಕಟೆ ಬುದ್ಧಿ ಕೊಡ್ತೀವಿ ತಗೊಳ್ಳಪ.
(ಮೇಳದವರು ಹೊಡೆಯುವರು)

ತುಕ್ರ : ಆದರೂ ಭಾಗವತರೇ, ಯಾಕಂತ ಗೊತ್ತಿಲ್ಲ. ಜೀವನ ಬೇಸರವಾಗಿದೆ : ಹೇಸಲು ಯೋಗ್ಯವಾಗಿದೆ. ಇದನ್ನೆಲ್ಲಾ ಮರೆಯಬೇಕು.

ಮರೆವು ಬೇಕೋ ನನಗೆ
ಮರೆವು ಬೇಕು!
ಸಾವಿನಂಥಾ ದಿವ್ಯ ಮರೆವು ಬೇಕು!!
ಸೋಲು ಅವಮಾನಗಳ
ಜಯವಾಗಿ ಖುಶಿಯಾಗಿ
ಪರಿವರ್ತಿಸುವ ದಿವ್ಯ
ಮರೆವು ಬೇಕು!!