(ತುಕ್ರ ಹಾಳು ದೇವಸ್ಥಾನದಲ್ಲಿ ಅದೇ ಕೆನ್ನೆಯ ಮೇಲೆ ಕೈಯಾಡಿಸಕೊಳ್ಳುತ್ತ ಕುಳಿತಿದ್ದಾನೆ)

ತುಕ್ರ : (ತನ್ನಲ್ಲಿ) ಛೇ! ಏನಿದ್ದರೇನು, ಹೆಣ್ಣೊಂದಿಲ್ಲದಿದ್ದರೆ ಜೀವನ ವ್ಯರ್ಥ. ಆದರೆ ಹುಡುಗಿ ನಾನು ಬಯಸಿದಂಥವಳಿರಬೇಕು.  ಕೊನೇ ಪಕ್ಷ ಅವಳು ಕನ್ಯೆಯಾಗಿರಬೇಕು ಮತ್ತು ದಡ್ಡಿಯಾಗಿರಬೇಕು. ಕನ್ಯೆ ಯಾಕೆಂಧರೆ ಮೈಮರೆತು ಮಲಗಿರ್ತಾಳಲ್ಲ ಆವಾಗ ಕಾಲುಸಪ್ಪಳಾಗದಂಗೆ ಹೋಗಿ ಅವಳಿಗೆಚ್ಚರವಾಗದಂಗೆ ಕೈಹಾಕಿ ಅವಳ ಹೃದಯವನ್ನ ಇನ್ನೊಬ್ಬರಿಗೆ ಮುಂಚೆಯೇ ಕದ್ದುಕೊಂಡು ಬರಬೌದು. ದಡ್ಡಿ ಯಾಕೆಂದರೆ ನಾನು ಹೇಳೋ ಸುಳ್ಳುಗಳನ್ನೆಲ್ಲ ನಂಬಬೇಕು. ಆದರೆ ಅಂಥ ಹುಡುಗಿ ಸಿಕ್ಕಬೇಕಲ್ಲ! ಇಲ್ಲೀತನಕ ನಾನು ಮನಸ್ಸು ಮಾಡಿರಲಿಲ್ಲವಾದ್ದರಿಂದ ದೇವರಮ್ಯಾಲೆ ತಪ್ಪು ಹೊರಿಸಲಾರೆ. ಆದರೆ ಈಗ ನಾನು ಒಪ್ಪಿಕೊಂಡಾಗಿದೆ. ದೇವರಿಗೆ ನನ್ನ ಭಕ್ತಿ ಬೇಕಾಗಿದ್ದರೆ ನನಗೆ ಅಂಥ ಒಬ್ಬ ಹುಡಿಗೀನ್ನ ದಯಪಾಲಿಸಲಿ; ಇಲ್ಲದಿದ್ದರೆ ಬೇಡ.
(ಅಲ್ಲಿಗೆ ನಾಗ ಎಂಬ ಎಂಟು ವರ್ಷದ ಹುಡುಗ ಬಂದು ಕೂರುತ್ತಾನೆತುಕ್ರನನ್ನು ಕಂಡು ಆತಂಕವಾಗುತ್ತದೆ. ತೋರಿಸಿಕೊಳ್ಳುವುದಿಲ್ಲ. ಕಾಗದ ಹಿಡಿದ ಕೈಯನ್ನ ಬೆನ್ನ ಹಿಂದೆ ಅಡಗಿಸಿಕೊಳ್ಳುತ್ತಾನೆ)

ತುಕ್ರ : ಯಾರಯ್ಯಾ ಅದು?

ನಾಗ : ನಾನು ಕಣಣ್ಣಾ ನಾಗ.

ತುಕ್ರ : ಇಷ್ಟೊತ್ನಲ್ಲಿ ಇಲ್ಲಿಗ್ಯಾಕೋ ಬಂದೆ? ಮನೇಲಿ ಜಗಳಾಡಿದೆಯಾ?

ನಾಗ : ಇಲ್ಲ.

ತುಕ್ರ : ಕದ್ದುಸಿಕ್ಕುಬಿದ್ದೆಯಾ?

ನಾಗ : ಇಲ್ಲ.

ತುಕ್ರ : ಕೈಕೊಡು ನೋಡೋಣ.

ನಾಗ : ಕೊಡೋದಿಲ್ಲ.

ತುಕ್ರ : ಯಾಕೆ?

ನಾಗ : ಯಾಕೆಂದರೆ ಅದು ನನ್ನ ಕೈ.

ತುಕ್ರ : ಕೈಯಲ್ಲೇನ್ಲಾ ಅದು?
ನಾಗ : ಕಾಗದ.

ತುಕ್ರ : ಯಾರೋ ಕೊಟ್ಟದ್ದು? ಎಂಥಾ ಕಾಗದ?

ನಾಗ : ಪಟೇಲರು ಕೊಟ್ಟರು.

ತುಕ್ರ : (ಆಸಕ್ತಿ ಕೆರಳಿ ಹತ್ತಿರ ಬಂದು) ಏನೆಂದೆ? ಪಟೇಲ ಕೊಟ್ಟನ? ಯಾರಿಗೆ ಕೊಡ್ತೀಯಾ ಅದನ್ನ?

ನಾಗ : ಹೇಳೋದಿಲ್ಲ.

ತುಕ್ರ : ನೋಡಣ್ಣ, ಪಟೇಲ ನಿನಗೇನು ಕೊಟ್ಟ?

ನಾಗ : ಜೇಬಿನ ತುಂಬ ಕಳ್ಳೇಬೀಜ.

ತುಕ್ರ : ನೀನು ಶೆಟ್ಟರಂಗಡಿ ಲಾಡು ತಿಂದಿದ್ದೀಯಾ?

ನಾಗ : ಇಲ್ಲ.

ತುಕ್ರ : ಎಷ್ಟು ರುಚಿಯಾಗಿರುತ್ತೆ ಗೊತ್ತೇನಯ್ಯಾ? ತಿನ್ನೋದಕ್ಕೆ ಇಷ್ಟ ಇಲ್ಲವ?

ನಾಗ : ಇಷ್ಟ ಬೇಕಾದಷ್ಟಿದೆ! ಸಿಕ್ಕಬೇಕಲ್ಲಾ.

ತುಕ್ರ : ನಾನು ಕೊಡ್ತೀನಯ್ಯಾ. ಮೊದಲು ಹೇಳು. ಪಟೇಲ ಆ ಕಾಗದ ಯಾರಿಗೇಂತ ಕೊಟ್ಟ?

ನಾಗ : ನಾನು ಹೇಳೋದಿಲ್ಲಪ್ಪ.

ತುಕ್ರ : ಲಾಡು ಬೇಡವಾ?

ನಾಗ : ಮೊದಲು ಲಾಡು ಕೊಡು, ಹೇಳ್ತಈನಿ.

ತುಕ್ರ : (ಜೇಬಿನಿಂದ ಅದ್ದೇಲಿ ತೆಗೆದು ತೋರಿಸುತ್ತ) ನೋಡಪ್ಪ, ಇದು ಅದ್ದೇಲಿ. ದುಡ್ಡಿಗೆ ನಾಲ್ಕು ಲಾಡು ಅಂದರೆ ಅದ್ದೇಲಿಗೆ ಎರಡು. ಇಕಾ ನೋಡಿಲ್ಲಿ-ಈ ಅದ್ದೇಲಿ ಕೊಟ್ಟರೆ ಆ ಕಾಗದ ಕೊಡ್ತೀಯಾ?

ನಾಗ : ಓಹೋ ಮೊದಲು ನೀ ಕೊಡು.

ತುಕ್ರ : ಕೊಡೋದು ಆಮೇಲೆ; ನಾನು ಮೊದಲು ದುಡ್ಡು ತೋರಿಸ್ತೀನಿ. ನೀನು ಕಾಗದ ತೋರಿಸು. (ತೋರಿಸುತ್ತ) ಇಕಾ ನನ್ನ ಅದ್ದೇಲಿ ನೋಡಿದೆಯಾ? (ತೋರಿಸುತ್ತ)

ನಾಗ : ನನ್ನ ಕಾಗದ ನೋಡಿದೆಯಾ?

ತುಕ್ರ : ಹಂಗೆಲ್ಲಾ ಬ್ಯಾಡಪ, ನಾನು ಅದ್ದೇಲಿ ಮ್ಯಾಲೆ ಬರೆದದ್ದನ್ನು ಓದ್ತೀನಿ, ನೀನು ಕಾಗದದ ಮ್ಯಾಲೆ ಬರೆದದ್ದನ್ನು ಓದು. ಮೊದಲು ನಾ ಓದಲಾ? (ನಾಣ್ಯ ತಿರುಗಿಸಿ ಓದುವಂತೆ ನಟಿಸುತ್ತ) “ಇಂಗ್ಲೆಂಡ್‌ ರಾಣಿಗೆ ಜೈ, ಇನ್‌ಕ್ಲಬ್‌ ಜಿಂದಾಬಾದ್‌” ಎಲ್ಲಿ? ಈಗ ಕಾಗದದಲ್ಲಿರೋದನ್ನ ನೀ ಓದು.

ನಾಗ : (ಓದುತ್ತ) ಇವತ್ತು ಬೇಡ. ನಾಳೆ ಬಾ.

ತುಕ್ರ : ಸರಿಯಪ್ಪ ನಾನು ದುಡ್ಡು ಕೊಡ್ತೇನೆ. ನೀನು ಆ ಕಾಗದ ಕೊಡ್ತೀಯಾ?

ನಾಗ : ತಗೋ ಹಾಗಾದರೆ.
(ಕೊಡುವನು. ಇವನು ದುಡ್ಡು ಕೊಡುವನು)

ತುಕ್ರ : ಹೌದು. ಆದರೆ ಯಾರಿಗೆ ಕೊಡಬೇಕು ಅಂತ ಹೇಳಲೇ ಇಲ್ಲವಲ್ಲ.

ನಾಗ : ಇಲ್ಲಿಗೆ ದಿನಾಲು ನಮ್ಮ ತಾರಾಮೇಷ್ಟ್ರು ಪಟೇಲರನ್ನ ನೋಡೋದಕ್ಕೆ ಬರ್ತಾರೆ. ಇಬ್ಬರೂ ಇಲ್ಲೇ ಮಜಾ ಮಾಡ್ತಾರೆ!

ತುಕ್ರ : ಎಷ್ಟೊತ್ತಿನಲ್ಲಿ?

ನಾಗ : ಇನ್ನೇನು ಬರೋ ಹೊತ್ತಾಯ್ತು.

ತುಕ್ರ : ಅಯ್ತಪ್ಪ ಈ ಅದ್ದೇಲಿ ತಗೊಂಡು ನೀನು ಲಾಡು ತಿನ್ಹೋಗು. ನಾನು ತಾರಾ ಮೇಷ್ಟ್ರಿಗೆ ಈ ಕಾಗದ ಕೊಡ್ತೀನಾಯ್ತ? ಆದರೆ ಒಂದು ಕರಾರು : ಯಾರ ಮುಂದೂ ಹೇಳಬಾರದು. ಸರಿಯಾ? ಹೋಗು.
(ನಾಗ ಆನಂದದಿಂದ ಓಡುವನು)

ತುಕ್ರ : ಯಾರಾದರೊಬ್ಬರು ಮೇಳದವರು ಬರ್ತೀರಾ?

ಮೇಳ : ಕರೆದಿರಾ ಸ್ವಾಮಿ?

ತುಕ್ರ : ತಾರಾಮೇಷ್ಟ್ರು ನಿನಗೆ ಗೊತ್ತಲ್ಲ?

ಮೇಳ : ಹೌದು.

ತುಕ್ರ : ಹೆಂಗೆ, ಪರವಾ ಇಲ್ಲವ?

ಮೇಳ : ಯಾಕಂದಿರಿ?

ತುಕ್ರ : ಆಕೆ ಜೊತೆ ಪ್ರೀತಿ ಮಾಡೋಣಂತ ದೊಡ್ಡ ಮನಸ್ಸು ಮಾಡೀನಿ. ನಮ್ಮಿಬ್ಬರ ಜೋಡಿ ಸರಿಯಾಗಿರುತ್ತಲ್ಲಾ?

ಮೇಳ : ಓಹೋ ಬೊಂಬಾಟಾಗಿರುತ್ತದೆ.

ತುಕ್ರ : ಆಕೆ ಬರೋದರೊಳಗೆ ಆಕೆ ಜೊತೆ ಮಾತಾಡೋದನ್ನ ತಾಲೀಮು ಮಾಡಿರೋಣ ಅಂತ. ಆಕೆ ಹಂಗೇನೆ ಒಂದೆರಡು ನಿಮಿಷ ನಿಂತುಕೊಳ್ತೀಯಾ?

ಮೇಳ : ನಾನ?

ತುಕ್ರ : ಹೌದಪ್ಪ ನೀನೇ.

ಮೇಳ : ಆಯ್ತು ಸ್ವಾಮಿ, ಹೇಳಿ, ಹ್ಯಾಗೆ ಬಂದು ನಿಂತುಕೊಳ್ಲಿ?

ತುಕ್ರ : ಅವಳು ರೆಕ್ಕೆ ಬೀಸಿ ಹಾರಿ ಬಂಧಂಗೆ ಬರ್ತಾಳೆ, ಥೈ ಥೈ ಥೈಃ ನಡೀತಾಳೇ. (ನಡೆದು ತೋರಿಸುವನು. ಮೇಳ ಅನುಕರಿಸುವನು)

ಹೀಗೆ ನಿಂತುಕೊಂಡಾದ ಮ್ಯಾಲೆ ನಾನೇನು ಹೇಳಿದರೂ ‘ಓಹೊ ಆಗಲಿ’ ಅನ್ನೋದಕ್ಕೆ ಸಿದ್ಧವಾಗಿರುತ್ತಾಳೆ. ಅರ್ಥವಾಯ್ತಲ್ಲ?

ಮೇಳ : ಓಹೋ, ಆಗಲಿ.

ತುಕ್ರ : ಆಯ್ತ, ಈಗ ಒಳಕ್ಕೆ ಹೋಗಿ ನಾನು ಕರೆದ ಕೂಡಲೆ ಬರಬೇಕು. ಹೋಗು. (ಮೇಳ ಒಳಕ್ಕೆ ಹೋಗುವನು)

ಬನ್ನಿ ಬನ್ನಿ ತಾರಾ ಮೇಡಂ. ನಿಮ್ಮ ಸೌಂದರ್ಯ ನೋಡಿ ನನಗೆಂಥಾ ಕಣ್ಣ ಉರಿ ಸುರುವಾಗಿದೆಯೆಂದರೆ – ಕಣ್ಣು ಸರಿಯಾಗಿ ಕಾಣಿಸುತ್ತಲೇ ಇಲ್ಲ. ಈ ಮಧ್ಯೆ ನೀವು ಯಾವಾಗಲೋ ಕದ್ದು ನನ್ನ ಹೃದಯ ಪ್ರವೇಶ ಮಾಡಿ ಲಾಗಾ ಹಾಕುತ್ತಿದ್ದೀರ. ಕೈಮುಗಿದು ಕೇಳಿಕೊಳ್ತೇನೆ : ಹಾಗೆಲ್ಲಾ ಲಾಗ ಹಾಕಬೇಡಿ. ನನ್ನ ಹೃದಯ ಪಕ್ಕೆಲವುಗಳಿಗೆ ಒದ್ದು ಹುಣ್ಣು ಮಾಡ್ತಾ ಇದೆ. (ಈಗ ಮೇಳದ ಬದಲು ತಾರಾ ಮೇಷ್ಟ್ರೇ ಬರುತ್ತಾಳೆ)

ತಾರಾ : ಯಾರದು ತುಕ್ರ ಅಲ್ಲವ?

ತುಕ್ರ : (ಎಚ್ಚತ್ತು) ಅರೆ! ನೀನು ಯಾವಾಗ ಬಂದೆ?

ತಾರಾ : ಅದ್ಯಾಕೆ ಹುಚ್ಚನಾಯಿ ಥರಾ ದುರುಗುಟ್ಟಿ ನೋಡ್ತೀಯಾ?

ತುಕ್ರ : ಇಲ್ಲವಲ್ಲ, ಪ್ರೀತಿಯಿಂದ ನೋಡ್ತಾ ಇದ್ದೀನಿ.

ತಾರಾ : ಪ್ರೀತಿ? ಯಾಕೋ ನಾಲಿಗೆ ಉದ್ದ ಬಿಡ್ತೀಯಾ? ನಾಚ್ಗೆ ಆಗೋಲ್ವಾ?

ತುಕ್ರ : ಪ್ರೀತಿ ಮಾಡ್ಲಿಕ್ಕೆ ನಾಚಿಕೆ ಪಟ್ಟುಕೋಬೇಕಾ? ಇದೇನು ಪ್ರಸ್ತವಾ?

ತಾರಾ : (ಹಿಂದೆ ಸರಿಯುತ್ತ) ಪಟೇಲರು ಬರ್ತಾರೆ, ಹುಷಾರು………………..

ತುಕ್ರ : ಇವತ್ತು ಬರಬೇಡ ಅಂತ ಪಟೇಲನ್ನ ವಾಪಸು ಕಳಿಸಿದೀನಿ, ಬಾರೆ.

ತಾರಾ : ಒಂದು ಹೆಜ್ಜೆ ಮುಂದಿಟ್ಟರೆ ಚೀರ್ತಿನಿ.

ತುಕ್ರ : ಮೊಲೆ ಬಲಿತರೂ ತಲೆ ಬಲಿತಿಲ್ಲ ಅನ್ನೋದು ಅದಕ್ಕೇ. ಯಾರೂ ಬಾರದ ಜಾಗ ಅಂತ ತಾನೇ ನೀವು ಈ ಜಾಗ ಆರಿಸಿಕೊಂಡಿರೋದು? ಸುಮ್ಮನೆ ಗಲಾಟೆ ಮಾಡಬೇಡ. ನಿನ್ನ ಪ್ರಾಯದ ಮೇಲೆ ಒಂದಿಷ್ಟು ಸವಾರಿ ಮಾಡಿ ಕಳಿಸಿಕೊಡ್ತೀನಿ, ಬಾರೆ.

ತಾರಾ : ಎಲಾ ಕಂತ್ರೀ ನಾಯಿ!

ತುಕ್ರ : ನಾಯಿ ಅಲ್ಲವೇ, ನಿನ್ನ ಮಾವ ತುಕಾರಾಂ ಪಟೇಲ ಕಣೆ, ಪಟೇಲನ ಅಪ್ಪ.

ತಾರಾ : ಹಂದಿ!

ತುಕ್ರ : ನೀನು ಏನು ಮಾತಾಡಿದರೂ ಹಾಸಿಗೆಗೆ ಕರೆದಂತಾಗುತ್ತದೆ. ಬಾರೆ  ಚಿನ್ನಾ……………. (ಮುಂದುವರಿಯುತ್ತಾನೆ. ತಾರಾ ಗಾಬರಿಯಾಗುತ್ತಾಳೆ.)

ತಾರಾ : ಅಯ್ಯೋ ದೇವರೆ!

ತುಕ್ರ : ಇಂಥಾ ಸಣ್ಣ ಕೆಲಸಕ್ಕೆಲ್ಲಾ ದೇವರ್ಯಾಕೆ ಬೇಕು, ನಾನಿಲ್ಲವೆ? ಬಾ; ಬಾ…..

ತಾರಾ : (ಕಿರುಚುತ್ತ) ಅಯ್ಯೋ ಅಯ್ಯೋ! ಯಾರಾದರೂ ಬನ್ನಿಯಪ್ಪಾ. ತುಕ್ರ ನನ್ನ ಮಾನ ತಗೀತಿದಾನೆ.

ತುಕ್ರ : ಎಲಾ ಹಲ್ಕಾ ಮುಂಡೆ! ಕಿರುಚಬೇಡವೇ, ನೀನು ಹಾಗೇ ಮಾತಾಡಿದರೂ ಕಿರಿಚಿದ ಹಾಗಿರುತ್ತೆ.

ತಾರಾ : ಅಯ್ಯೋ ಬನ್ನೀಪ್ಪಾ…..ಅಯ್ಯೋ……….

(ದೂರದಿಂದತುಕ್ರ’ ‘ತಾರಾ ಮೇಷ್ಟ್ರು’, ‘ಮಾನ’, ‘ಕಳ್ಳ ನನ್ನ ಮಗ ಅವನಿಗೇನು ರೋಗ? ಹೊಡೀರಿ, ಹಿಡೀರಿ’. ಇತ್ಯಾದಿ ಮಾತು ಕೇಳಿ ತುಕ್ರ ಅಧೀರನಾಗುತ್ತಾನೆ . ತಾರಾ ಕಿರುಚುತ್ತಲೇ ಇದ್ದಾಳೆ. ಜನ ಓಡಿ ಬಂದು ತುಕ್ರನ್ನ ಹಿಡಿದುಕೊಂಡು ಹೊಡೆಯುತ್ತಾರೆ).