(ಪಟೇಲನ ಮನೆ. ತಾಯಿ, ಮಗ ಮಾತಾಡುತ್ತಿದ್ದಾರೆ.)

ತಾಯಿ : ಬರ್ತಾನೋ ಇಲ್ಲವೋ, ಕಳೆದ ಸಲ ಇಟ್ಟಾಡಿಸಿ ಒಡೆದದ್ದು ನೆನಪಾದರೆ ಬರಲಾರ ಹಂತ್ಲೇ ನನ್ನ ನಂಬಿಕೆ.

ಪಟೇಲ : ನಾನು ಹೇಳಿಕಳಿಸಿದೀನಿ, ಬಂದೇ ಬರ್ತಾನೆ.

ತಾಯಿ : ಏಳಿಕಳಿಸಿ ಎರಡು ತಾಸಾಯ್ತು. ಬರೋದರೊಳಗೆ ತನ್ನತ್ತಿರ ಇದ್ದ ಮಾಲನ್ನೆಲ್ಲ ಮಾರಿ ಬಂದರೆ ಹೇನು ಪ್ರಯೋಜನ? ನೀನಿದ್ದೀಯಾ-ಎಷ್ಟು ಸಲ ಬೆಂಗಳೂರಿಗೆ ಹೋಗಿ ಬಂದೆ, ಒಂದೆರಡು ಸೀಮೆ ಲಂಗ, ಬ್ರಾ ತರಲಿಕ್ಕಾಗಲಿಲ್ಲ. ಈಗ ನೋಡು ತುಕ್ರನಂಥಾ ಕತ್ತೇಕಾಲು ಇಡೀಬೇಕಾಗಿ ಬಂದಿದೆ!

ಪಟೇಲ : ನನ್ನ ಮಾತು ಕೇಳಮ್ಮಾ : ಅವು ಸಿಕ್ಕೋದು ಇಬ್ಬರಿಗೆ ಮಾತ್ರ : ಬ್ರಿಟಿಷರಿಗೆ ಮತ್ತು ದೇಶೀ ಕಳ್ಳರಿಗೆ. ನಾನೆರಡೂ ಅಲ್ಲ. ಏನು ಮಾಡಲಿ? ಸೀಮೆ ಲಂಗ ಹಾಕ್ಕೊಳ್ಳದಿದ್ದರೆ ನಿನ್ನ ಸೊಸೆ ಸಾಯೋದಿಲ್ಲ.

ತಾಯಿ : ತುಕ್ರನ್ನ ಪಡಸಾಲೆಗಿಂತ ಒಳಕ್ಕೆ ಬಿಡಲೇ ಬಾರದು. ಹವನು ಆ ಮಠದಲ್ಲಿ ಅಲ್ಲವ ಮಲಗೋದು?

ಪಟೇಲ : ಹೌದು.

ತಾಯಿ : ಅವಯ್ಯನಿಗೂ ಇವನ ಬಗ್ಗೆ ಉಸಾರಾಗಿರಲಿಕ್ಕೆ ಏಳಬೇಕು. ಅವನ ಮ್ಯಾಲೊಂದು ಕಣ್ಣಿಡಬೇಕಂತ ಅಳಬನಿಗೂ ಏಳಿವ್ನಿ, ಹಾತ ಬಂದಾಗಲೂ ಅಷ್ಟೆ, ಕೊಂಚ ಕಡಿಮೆ ಬುದ್ಧಿವಂತಿಕೆಯಿಂದ ಮಾತಾಡು. ದೇಶ, ಪ್ರೇಮ, ಗಾಂಧೀಗೀಂಧಿ ಅನ್ನಬೇಡ. ಅವನೆಲ್ಲವ್ನೆ?

ಪಟೇಲ : ಯಾರು? ಆ ತುಕ್ರನ ನಂಟನ? ದನದ ಕೊಟ್ಟಿಗೇಲಿ ಕೂರಿಸಿದೀನಿ. ತುಕ್ರನ ನಿಜ ತಿಳಿದುಕೊಳ್ಳೋಣ ಅಂತ.

ತಾಯಿ : ಹವನಾಗಲೀ ನಿನ್ನ ಮಲಗೋ ಕೋಣೇಲಿ ಹಿಣುಕಿದ್ದನ್ನ ಕಂಡೆನಲ್ಲ! ಹಿಂದೆ ಮುಂದೆ ಗೊತ್ತಿಲ್ಲವೆ ಯಾರ್ಯಾನೋ ವೊಳಕ್ಕೆ

ಬಿಡೋದು ತಪ್ಪು. ತುಕ್ರ ಬಂದ ನೋಡು, ಇವನೆಲ್ಲಿದಾನೆ ನೋಡ್ತಿವ್ನಿರು.
(ತಾಯಿ ಒಳಕ್ಕೆ ಹೋಗುವಳು, ತುಕ್ರ ಬರುವನು. ತಕ್ಷಣ ಎಲ್ಲಿಂದಲೋ ಸಿಂಗ್ರ ಪ್ರವೇಶಿಸುವನು)

ಸಿಂಗ್ರ : ಹಡ್ಡಬಿದ್ದೆ ತುಕ್ರಣ್ಣಾ, ಎಂಗಿದೀರಿ ಬುದ್ಧಿ?

ತುಕ್ರ : ಚೆನ್ನಾಗಿದೀನಪ್ಪ, ನೀನು ಹೆಂಗಿದೀಯಾ?

ಸಿಂಗ್ರ : ಏನೋ ಇಷ್ಟರ ಮಟ್ಟಿಗೆ. ಎಲ್ಲಾ ನಿಮ್ಮಾಶೀರ್ವಾದ, ಬರ್ಲಾ ಬುದ್ಧಿ?

ತುಕ್ರ : ಸರಿಯಪ್ಪ.
(ಹೋಗುವನು. ಪಟೇಲ ಅವಾಕ್ಕಾಗಿ ನೋಡುವನು. ಒಂದು ಕ್ಷಣ ಸಾವರಿಸಿ ಕೊಂಡಾದ ಮೇಲೆ)

ಪಟೇಲ : ಬಾರಯ್ಯಾ ತುಕಾರಾಂ. ಹೇಳಿಕಳಿಸಿ ಎರಡು ತಾಸಾಯ್ತು. ಈಗ ಬರೋದೇನಯ್ಯಾ?

ತುಕ್ರ : (ತನ್ನಲ್ಲಿ) ಅಬ್ಬ ತುಕಾರಾಂ! ಹಿಂಗೆ ದಾರಿಗೆ ಬಾ ಮಗನೆ (ಪ್ರಕಾಶ) ಜನ ಮುತ್ತಿಕೊಂಢವರು ಬಿಡಲೇ ಇಲ್ಲ ನೋಡಿ-

ಪಟೇಲ : ಅಮ್ಮ ನಿನ್ನ ಜೊತೆ ಮಾತಾಡಬೇಕಂತೆ, ಬಾಮ್ಮಾ……

ತುಕ್ರ : (ಒಳಗಿನಿಂದ ಬರುತ್ತಿರುವ ಮುದುಕಿಯನ್ನ ನೋಡಿ ತನ್ನಲ್ಲಿ) ಅದೇನು ಹಾಗೆ ಬೆಪ್ಪು ಬೆಪ್ಪಾಗಿ, ಪಿಳಿ ಪಿಳಿ ಕಣ್‌ ಬಿಡ್ತ, ಬೆಕ್ಕಿನ ಹಾಗೆ ನನ್ನನ್ನೇ ನೋಡಿಕೊಂಡು ಬರ್ತಾ ಇದೆ ಈ ಮುದುಕಿ!
(ತಾಯಿ ಬರುವಳು)

ತಾಯಿ : ಹೇನಪಾ ತುಕ್ರ, ತುಂಬ ಅಣ ಮಡಗಿದ್ದೀಯಂತೆ. ಊರವರ ಕಣ್ಣಲ್ಲಿ ಭಾರಿ ಬೆಲೆಯಂತಲ್ಲ ನಿನಗೀಗ!

ತುಕ್ರ : (ತನ್ನಲ್ಲಿ) ಛೇ, ಈ ಮುದುಕಿ ಬಾಯಿಗೆ ಇಷ್ಟೊಂದು ದುರ್ವಾಸನೆಯೆ! ಹೆಂಗೆ ಸಹಿಸೋದು? ನೋಡೋಣ ಮೂಗು ಮುಚ್ಚಿಕೊಂಡೇ ಮಾತಾಡ್ತೀನಿ. (ಮೂಗು ಮುಚ್ಚಿಕೊಂಡು ಪ್ರಕಾಶ) ಅಯ್ಯೋ ನಿಮ್ಮೆದುರಿಗೆ ನಾವೆಲ್ಲ ಯಾರು ಬಿಡಿ.

ತಾಯಿ : ಹದ್ಯಾಕೆ ಮೂಗು ಮುಚ್ಚಿಕೊಂಡೆಯಲ್ಲ, ನಮ್ಮ ಮನೆಯಲ್ಲಿ ದುರ್ವಾಸನೆಯೆ?

ತುಕ್ರ : ಇಲ್ಲವಲ್ಲ. ನಾನಿವತ್ತು ಸ್ನಾನ ಮಾಡಿಲ್ಲ, ಅದಕ್ಕೆ.

ತಾಯಿ : ಹದೇನೋ ಸೀಮೆಲಂಗ, ರಾಣಿಸೋಪು ತಂದೀಯಂತಲ್ಲ. ನಮಗ ಕೊಡಪ್ಪಾ, ನ್ಯಾಯಬೆಲೆ ಕೊಡೋಣ.

ತುಕ್ರ : ಹೆಚ್ಚಿಗೇನು ತಂದಿರಲಿಲ್ಲ.  ತಂದಷ್ಟನ್ನು ಜನ ನಾ ನೀ ಅಂತ ಕಚ್ಚಾಡಿ ಕೇಳಿದ ಬೆಲೆ ಕೊಟ್ಟು ಕೊಂಡುಬಿಟ್ಟರು.

ತಾಯಿ : ಅಂದರೆ ನಮಗೇನೂ ಹುಳಿದಿಲ್ಲವ?

ತುಕ್ರ : ಇಲ್ಲ.

ತಾಯಿ : ಬೇರೆಯವರಿಗಿಂತ ನಾವೇನು ಕಡಿಮಕೆ ಕೊಡೋದಿಲ್ಲಪ್ಪ.

ತುಕ್ರ : ಹೆಚ್ಚಿಗೆ ಕೊಟ್ಟರೂ ಇಲ್ಲವಲ್ಲ. ನಾನಿನ್ನು ಬರಲಾ? (ಏಳುತ್ತ)

ಪಟೇಲ : ಯಾಕೆ ಹೊರಟೇ ಬಿಟ್ಟೆಯಲ್ಲ. ಇರು ಇರು.
(ತುಕ್ರ ಕೂರುವನು. ತಾಯಿ ನಿರಾಸೆಯಿಂದ ಒಳಕ್ಕೆ ಹೋಗುವಳು)

ಪಟೇಲ : ನೋಡು ತುಕ್ರಾ, ನೀನು ಒಪ್ಪು ಬಿಡು. ನೀನು ನಮ್ಮ ಪೈಕಿ ಅಂದ ಮೇಲೆ ನಿಗಾ ಇಡಬೇಕಾಗ್ತದೆ. ಮೊನ್ನೆ ಬೆಂಗಳೂರಿಗೆ ಮಾಮಲೇದಾರ ಆಫೀಸಿಗೆ ಹೋಗಿದ್ದಾಗ-ಕಳ್ಳರ ಹೆಸರಿನ ಪಟ್ಟಿ ಮಾಡ್ತಿದ್ದರು. ಅದರಲ್ಲಿ ನಿನ್ನ ಹೆಸರೂ ಇತ್ತು.

ತುಕ್ರ : ಏನಂತ ಇತ್ತು? ತುಕಾರಾಂ ಪಟೇಲಂತ್ಲ?

ಪಟೇಲ : ಅಲ್ಲ, ತುಕ್ರ ಅಂತ.

ತುಕ್ರ : ಅಂಗಿದ್ದರೆ ಅದು ನನ್ನ ಹೆಸರಲ್ಲ ಬಿಡಿ;

ಪಟೇಲ : ಇಲ್ಲಿ ಕೇಳು. ಸಾವ್ಕಾರ ಸೋಮಣ್ಣನವರು ಗೊತ್ತಲ್ಲ ನಿನಗೆ?

ತುಕ್ರ : ಗೊತ್ತು.

ಪಟೇಲ : ಅವರ ಮನೆಯಲ್ಲೆ ಕಳ್ಳತನ ಆಗಿರೋದು. ಅವರ ಮನೆಯಲ್ಲಿ ಬೇಕಾದಷ್ಟು ಸೀಮೆ ಸಾಮಾನಿತ್ತಂತೆ. ಇಲ್ಲಿ ನೋಡಿದರೆ ನಿನ್ನ ಹತ್ತಿರಾನೂ ಇವೆ. ಅದಕ್ಕೂ ಇದಕ್ಕೂ ಏನಾದರೂ ಸಂಬಂಧ ಇದೆಯ? ಇಲ್ಲವ?-ಅಂತ ಕೇಳೋದಕ್ಕೆ ಕರೆಸಿದೆ.

ತುಕ್ರ : (ಗಾಬರಿಯಾದರೂ ತೋರಿಸಿಕೊಳ್ಳದೆ) ಛೇ ಛೆ! ಎಲ್ಲಾದರೂ ಉಂಟೇ ಸ್ವಾಮ?>

ಪಟೇಲ : ಅದ್ಯಾರೋ ಸಾಂತ ಅಂಥೆ, ಅವನ್ಯಾರು?

ತುಕ್ರ : (ಇನ್ನೂ ಗಾಬರಿಯಾಗಿ) ಸಾಂತ? ಇದ್ಯಾವುದೋ ಎತ್ತಿನ ಹೆಸರಿದ್ದಂಗಿದೆ.

ಪಟೇಲ : ಆ ಎತ್ತಿನಂಥವನು ಮತ್ತು ನೀನು ಸೇರಿ ಸಾವ್ಕಾರ ಸೋಮಣ್ಣನವರ ಮನೆಗೆ ಹೋದಿರಂತೆ. ಅವನು ಒಳಕ್ಕಿಳಿದು ನಿನ್ನನ್ನ ಹೊರಗೇ ನಿಲ್ಲಿಸಿದ್ನಂತೆ, ಒಳಗಿಂದ ನಿನಗೊಂದು ಗಂಟು ಕೊಟ್ಟು ಇನ್ನಷ್ಟು ತರ್ತೀನಿ ಇರು ಅಂತ ಹೇಳಿ ಅವನು ಪುನಃ ಒಳಕ್ಕೆ ಹೋಗಿದ್ದಾಗ ನೀನು ಗಂಟು ಸಮೇತ ಓಡಿಬಂದಿಯಂತೆ.

ತುಕ್ರ : (ಈಗ ಭಂಡತನದಿಂದ) ಇಂಥಾ ಕತೆಗಳನ್ನ ನೀವೂ ನಂಬತೀರಾ ಪಟೇಲರೆ? ನಿಜ ಹೇಳ್ತೀನಿ ಪಟೇಲರೆ ನಾನೊಮ್ಮೆ ಮಾಮಲೇದಾರ ಕಚೇರಿಗೆ ಹೋಗಿದ್ದಾಗ ಕಳ್ಳರ ಹೆಸರಿನ ಪಟ್ಟೀಲಿ ನಿಮ್ಮೆಸರೂ ಸೇರಿಸಿ ಬಿಟ್ಟಿದ್ದರು. ಏನಂತೀರಾ! “ಸ್ವಾಮಿ ಮಾಮಲೇದಾರ ಸಾಹೇಬರಾ, ನಮ್ಮ ಪಟೇಲರು ಅಂತವರಲ್ಲ, ಅವರ ಹೆಸರು ಹೊಡದಾಕಿ ಬಿಡಿ” ಅಂತ ನಾನೇ ಹೇಳಿದೆ.

ಪಟೇಲ : ಅಲ್ಲವೆ? ಎಷ್ಟೆಂದರೂ ನೀನು ನಮ್ಮ ಪೈಕಿ ಅಲ್ಲವೆ? ನೀನಲ್ಲದೆ ನನ್ನ  ಪರವಹಿಸಿ ಯಾರು ಮಾತಾಡ್ತಾರೆ, ಹೇಳು.  (ಧ್ವನಿ ಬದಲಿಸಿ) ಕಳ್ಳ ನನ್ನ ಮಗನೆ…….

ತುಕ್ರ : ಏನಂದಿರಿ?

ಪಟೇಲ : ಸುವ್ವರ್ ನನ ಮಗನೆ,

ತುಕ್ರ : ಎಲಾ ಇವರ!

ಪಟೇಲ : ಸೊಥಾ ಕಳ್ಳತನ ಮಾಡೋ ಯೋಗ್ಯತೆ ಇಲ್ಲ. ಊರಲ್ಲಿ ಮಹಾಶೂರನ ಹಾಗೆ ಮೆರೆದಾಡ್ತಿದಾನೆ ಬೋಳೀಮಗ! ಎದ್ದೇಳೋ ಭೋಸಡೀಕೆ….

ತುಕ್ರ : (ಗಾಬರಿಯಲ್ಲಿ ಏಳುತ್ತ) ಸ್ವಾಮಿ!….

ಪಟೇಲ : ಕರೀಲಾ ಸಾಂತನ್ನ? ಸಾಂತ….ಏ ಸಾಂತ ಸಾಂತ

ತುಕ್ರ : ಎಲ್ಲಿದಾನೆ?
(ಸಾಂತ ಬರುವನು. ತುಕ್ರ, ಸಾಂತ ಪರಸ್ಪರ ನೋಡಿಕೊಳ್ಳುವರು. ತುಕ್ರ ಭಾರೀ ಗಾಬರಿಯಲ್ಲಿ ಓಡುವ ಸನ್ನಾಹದಲ್ಲಿದ್ದಾನೆ. ಅವನು ಓಡಿಯಹೋಗದ ಹಾಗೆ ಪಟೇಲ ಅಡ್ಡ ನಿಲ್ಲುತ್ತಾನೆ. ಇದ್ದಕ್ಕಿದ್ದಂತೆ ಸಾಂತ ಗಹಗಹಿಸಿ ನಗುತ್ತಾನೆ.)

ಸಾಂತ : ಹೆ ಹೆ ಹೆ ಹೆ ಇವನ್ಯಾರು ಪಟೇಲರೆ?

ಪಟೇಲ : ಇವನೇ ತುಕ್ರ, ಗುರುತಾಗಲಿಲ್ಲವೆ?

ಸಾಂತ : ಛೇ ಛೇ, ನಾನು ಹೇಳಿದ್ದು ಟಕ್ರ ಅಂತ. ಆ ಟಕ್ರ ನನಗೆ ಮೋಸ ಮಾಡಿದ್ದು ಇವನಲ್ಲ ಸ್ವಾಮಿ!

ಪಟೇಲ : (ನಿರಾಸೆಯಿಂದ) ಹವದ?

ತುಕ್ರ : (ನಿರುಮ್ಮಳನಾಗಿ) ಬಾಯಿ ತಪ್ಪಿ ಏನೇನೋ ಅಂದಿರಿ ಅಂತ ನನಗೇನೂ ಬೇಜಾರಿಲ್ಲ; ನೀವೂ ಬೇಜಾರು ಮಾಡಿಕೊಬೇಡಿ ಪಟೇಲರೆ.

ಸಾಂತ : ಬಿಡಣ್ಣಾ, ಹವರ್ಯಾಕೆ ಬೇಜಾರು ಮಾಡಿಕೊಂತಾರೆ!

ತುಕ್ರ : ಆದರೂ ಪಟೇಲರೆ, ಒಂದು ಮಾತು ಕೇಳೋಣು ಅಂತ. ನಾನೂ ಅಷ್ಟೋ ಇಷ್ಟೋ ಕಾಂಗ್ರೆಸ್‌ ಮಾಡತೀನಿ. ನನ್ನನ್ನೂ ಸಳುವಳೀಲಿ ಸೇರಿಸ್ಕಂಡ್ರೆ…….

ಪಟೇಲ : (ಕೋಪದಿಂದ) ಏನಂದೆ………..

ಸಾಂತ : ನೀ ಬಾಪ್ಪಾ, ಸುಮ್ಮನೆ…………

(ತುಕ್ರನನ್ನು ಕರೆದುಕೊಂಡು ಸಾಂತ ಹೊರಡುವನು)