ತುಕ್ರ : ಎಲ್ಲಪ್ಪ ಮೇಳದವರು?

ಮೇಳ : ಏನು ತುಕ್ರ?
ತುಕ್ರ : ನಾನು ಹಾಡಿಕೊಂಡು ಬೀದಿಗಳಲ್ಲಿ, ಬಂದೆನಲ್ಲ. ಜನ ನನ್ನನ್ನೇ ಭಯ ಮತ್ತು ಬೆರಗಿನಿಂದ ನೋಡ್ತಾ ಇದ್ದರು. ಅಲ್ಲವೆ?

ಮೇಳ : ಹೌದು.

ತುಕ್ರ : ಏನೇನೋ ಮಾತಾಡಿಕೊಳ್ತಿದ್ದರು, ಅಲ್ಲವೆ?

ಮೇಳ : ಹೌದು.

ತುಕ್ರ : ಏನೇನು ಮಾತಾಡಿಕೊಂಡರು ಅಂತ ಇನ್ನೊಮ್ಮೆ ಹೇಳ್ತೀರಾ? ಬೇಕಾದರೆ ನಾನು ಕದ್ದು ಕೇಳ್ತೇನೆ. ಆಗಬಹುದಲ್ಲ? ಬರಲಾ? (ತುಕ್ರ ಒಳಕ್ಕೆ ಹೋಗಿ ಹಾಡುತ್ತ ಬರುವನು. ಮೇಳದವರು ಜನರ ಗುಂಪನ್ನು ಅನುಕರಿಸುವರು)

ತುಕ್ರ : ವಂದೆ ಮಾತರಂ! ವಂದೆ ಮಾತರಂ!
ಜಯಭಾರತ ಮಾತೇ!!
ಸೇರುವೆ ಸಳುವಳಿ! ಇಂಗರೇಜಿಗೆ
ಕೊಡುವೆ ಜಾಪಾಳ ಮಾತ್ರೆ!!

ಮೇಳ ೧ : ಹಿವನೇನಪ ನನ್ನ ಮಗ ತುಕ್ರ! ಹೇನೋ ಪುಡಗೋಸಿ ಹಂದುಕೊಂಡಿದ್ದಿವಿ. ಈಗ ನೋಡಿದರೆ ಸಳುವಳಿ ಸೇರಿಬಿಟ್ಟವನೆ!

ಮೇಳ ೨ : ಎಂದಿನಿಂದ ಅವ್ನೆ ಕಣಪ್ಪೊ : ನಮಗೆ ಯೀಗಷ್ಟೇ ಗುಟ್ಟು ಬಿಟ್ಟುಕೊಟ್ಟ.

ಮೇಳ ೩. : ಪಟೇಲ ಏಳತಿದ್ನಲ್ಲ- ಸ್ವಂತ ಕಳ್ಳತನ ಕೂಡ ಮಾಡಲಾರದ ಏಡಿ ಅಂತ. ಹದೆಲ್ಲಾ ಸುಳ್ಳಿರಬೇಕಪೊ-

ಮೇಳ ೧ : ನೋಡ್ತಿರು ನನ್ನ ಮಗ ತುಕ್ರ ಒಂದು ದಿನ ಪಟೇಲನಿಗೇ ಕಿಟ್ಟಿಂಡಿಯಾ ಮಾಡಿದರೂ ಮಾಡಿದನೆ!

(ಕದ್ದು ಕೇಳುತ್ತಿದ್ದ ತುಕ್ರ ಪ್ರತ್ಯಕ್ಷನಾಗಿ ಪ್ರೇಕ್ಷಕರಿಗೆ)

ತುಕ್ರ : ಒಂದು ದಿನ ಯಾಕೆ? ಇವತ್ತೇ ಮಾಡ್ತೀನಿರಿ.

(ಇನ್ನೊಂದು ರಸ್ತೆಯಲ್ಲಿ  ನಡೆದು ಬರುವಂತೆ ಮುಂದುವರಿಯುವನು)

ವಂದೆ ಮಾತರಂ! ವಂದೆ ಮಾತರಂ!
ಜಯಭಾರತ ಮಾತೇ!!
ಸೇರುವೆ ಸಳುವಳಿ! ಇಂಗರೇಜಿಗೆ
ಕೊಡುವೆ ಜಾಪಾಳ ಮಾತ್ರೆ!!
(ಹೇಳಿ ಮರೆಯಾಗುವನು. ಮೇಳ ಇನ್ನೊಂದು ಗುಂಪು ಎಂಬಂತೆ ಹೊರಬಂದು)

ಮೇಳ ೧ : ಸಾಕಪ್ಪಾ ಈ ತುಕ್ರನ ಸಾವಾಸ. ಹಿವನನ್ನ ಇಡಿದುಕೊಟ್ಟರೆ ಹೈದು ಸಾವಿರ ರೂಪಾಯಿ ಭೌಮಾನವಂತೆ! ನನ್ನ ಮಗ ಸರಕಾರಕ್ಕೂ ತಲೆನೋವಾಗಿದ್ದಾನೆ.

ಮೇಳ ೨ : ಪಟೇಲನ ಮನಸ್ಸಲ್ಲಂತೂ ತನ್ನೆಸರು ಶಾಶ್ವತವಾಗಿ ನೆಲಸೋ ಅಂಗೆ ಮಾಡವ್ನೆ, ಯಿವನೆಸರು ಏಳಿದರು ಸಾಕು ಹುರಿದುರಿದು ಬೀಳ್ತಾನೆ.

ಮೇಳ ೩ : ಅಮ್ಮಾ ತಂಗಿ ತುಕ್ರನ್ನ ಕಡೆ ಜಾಸ್ತಿ ನೋಡಬೇಡಮ್ಮಾ; ಕನಸಿನಲ್ಲಿ ಬರ್ತಾನೆ.

ತುಕ್ರ : (ಹೊರಗೆ ಬಂದುಇದು ತುಂಬ ಚೆನ್ನಾಗಿದೆ. ಬೇಕಾದರೆ ನೀವಿದನ್ನ  ಊರಲ್ಲಿ ಹೇಳಿಕೊಂಡಿರಿ.
(ಮತ್ತೆ ಇನ್ನೊಂದು ರಸ್ತೆಯಲ್ಲಿ ನಡೆದಿರುವಂಥೆ ಹೊರಡುವನು. ಮೇಳ ಅಡಗುವುದು)

ವಂದೆ ಮಾತರಂ! ವಂದೆ ಮಾತರಂ!
ಜಯಭಾರತ ಮಾತೇ!!
ಸೇರುವೆ ಸಳುವಳಿ! ಇಂಗರೇಜಿಗೆ
ಕೊಡುವೆ ಜಾಪಾಳ ಮಾತ್ರೆ!!
(ಹೇಳಿ ಮರೆಯಾಗುವನು. ಮೇಳ ಜನರ ಇನ್ನೊಂದು ಗುಂಪು ಎಂಬಂತೆ ಹೊರಬಂದು)

ಮೇಳ : ತುಕ್ರ ಸಳುವಳಿ ಸೇರವ್ನೆ ಹಂದಮ್ಯಾಕೆ ಆ ನನ್ನ ಮಕ್ಳು ಯಿಂಗರೇಜಿನೋರು ಮಣ್ಣು ಮುಕ್ಕಿದರೂಂತಲೇ ಲೆಕ್ಕ.

ಮೇಳ : ಈಗ ತುಕ್ರ ನಿಲ್ಲು ಹಂದರೆ ದೇಶದ ಹಿರುವೆ ಕೂಡ ನಿಂತು ಓಗುತ್ತಪ್ಪ! ಪಟೇಲ ಇನ್ನು ಮ್ಯಾಕೆ ಕೋತಿ ತರ ಆಡತವ್ನೆ ನೋಡ್ತಿರು.

ತುಕ್ರ : ಚೆನ್ನಾಗಿದೆ, ಇಂಗೇ ಹೇಳಿಕೊಂಡಿರಿ, ಅರೆ! ನಾನಾಗಲೇ ಮಠಕ್ಕೆ ಬಂದಾಗಿದೆ. (ಅಲ್ಲಿ ಒಬ್ಬ ಜಂಗಮ ನಿಂತಿದ್ದಾನೆ)

ನಮಸ್ಕಾರ ಅಯ್ಯನೋರೇ.

ಅಯ್ಯ : ನಮಸ್ಕಾರಪ.

ತುಕ್ರ : ಅಯ್ಯನೋರೇ, ಇವತ್ತು ಮಲಗಿ ಕನಸು ಕಾಣತೇನೆ, ನಮ್ಮೋರ್ಯೊರೋ ಬರೋರಿದ್ದಾರೆ. ಬಂದು ಎರಡು ಸಾರಿ ಕಿಟಕಿ ಬಾಗಿಲು ಬಡೀತಾರೆ, ಅಷ್ಟೆ. ನೀವು ದಯಮಾಡಿ ಬಂದು ನನ್ನನ್ನ ಎಚ್ಚರ ಮಾಡಬೇಕಲ್ಲಾ.

ಅಯ್ಯ : ಮಾಡೋಣ. ಯಾರಪ್ಪಾ ಅಷ್ಟೊತ್ತಿನಲ್ಲಿ ಬರೋದು?

ತುಕ್ರ : ಆಮೇಲೆ ನಿಮಗೇ ಗೊತ್ತಾಗುತ್ತದೆ : ಎಬ್ಬಿಸ್ತೀರಿ ತಾನೆ?

ಅಯ್ಯ : ಆಯ್ತಪ್ಪ.
(ಹೋಗುವನು. ತುಕ್ರ ಮಲಗುವ ತಯಾರಿ ಮಾಡುತ್ತ)

ತುಕ್ರ : ಸ್ವಾಮೀ ಭಾಗವತರೇ, ಹಿಂದೆ ನನ್ನ ಕನಸುಗಳನ್ನು ಕೊಳೆ ಬೆಲ್ಲೊದಲ್ಲಿ ಹೂತಿಟ್ಟಿದ್ದೆ. ಅದೀಗ ಭಟ್ಟಿ ಸೆರೆ ಆಗಿದ್ದರೆ ಕುಡೀಬಹುದಲ್ಲ – ಅಂತ.

ಭಾಗವತ : ಅದಕ್ಕೇನಂತೆ ಆಗಬಹುದು.

ತುಕ್ರ : ಎಲ್ಲಿ, ಸ್ವಲ್ಪ ಬೆಳದಿಂಗಳು ಮಾಡಿ.

ಭಾಗವತ : ಇವತ್ತು ಅಮಾವಾಸ್ಯೆ ತುಕ್ರಣ್ಣ. ಬೆಳದಿಂಗಳು ಹ್ಯಾಗೆ ಮಾಡೋದು?

ತುಕ್ರ : ತುಕಾರಾಂ ಪಟೇಲನ ಕನಸು ಅಂದರೆ ನಿಮ್ಮ ಅಮಾವಾಸ್ಯೆ ಹುಣ್ಣಿಮೆ ಯಾವ ಲೆಕ್ಕಾರಿ? ನಾನು ಬಯಸಿದೆ ಅಂದರೆ ಬೆಳಂದಿಂಗಳಿರಬೇಕು, ಅಷ್ಟೆ.

ಭಾಗವತ : ಅಯ್ತಪ. (ಬೆಳಕಿನ ವ್ಯವಸ್ಥೆ ಮಾಡಿ ಬೆಳದಿಂಗಳನ್ನ ಸೃಷ್ಟಿಸುವನು)

ತುಕ್ರ : ಇನ್ನು ಸುರು ಮಾಡೋಣ? ಹಾಡುಗೀಡು ಹೇಳಿ ಸ್ವಾಮಿ. ತುಕ್ರನ ಕನಸಿಗೆ ಒಂದು ಹಾಡಿನ ಯೋಗ್ಯತೆಯೂ ಇಲ್ಲವೆ?

ಮೇಳ : ನಭೋ ಮಂಡಲದಲ್ಲಿ
ಚಂದ್ರ ತಾರಾ ಚುಕ್ಕೆ
ಇಲ್ಲಿ ತುಕ್ರನ ಕನಸು
ಗಳಿಗೆ ಮೂಡಿವೆ ರೆಕ್ಕೆ
ಬೆಲೆಯುಳ್ಳ ತಲೆಯುಳ್ಳ
ಸಂಪನ್ನ ತುಕ್ರನು
ಅಲ್ಪಕ್ಕೆ ಕಲ್ಪನೆಯ
ಬೆರೆಸಿದನು ತುಕ್ರನು :
(ತುಕ್ರನ ಕನಸು ಶುರುವಾಗುತ್ತದೆ. ಮುಂದಿನ ಹಾಡಿನಲ್ಲಿ ವರ್ಣಿಸಿದಂಥ ಹಕ್ಕಿ ಬರುತ್ತದೆ)

ಕ್ರೂರವಾದ ಹಕ್ಕಿಯೊಂದು
ಬೇರೆ ಸೀಮೆಯಿಂದ ಹಾರಿ
ಇಳಿದು ಬಂತು ನಮ್ಮ ಸೀಮೆಗೆ!

ಮುಗಿಲ ನೀಲಿ ಮುಚ್ಚುವಂತೆ
ಬಿರುಗಾಳಿಯ ರೆಕ್ಕೆ ಬೀಸಿ
ಹಸಿರ ಮ್ಯಾಲೆ ಉಸುಕು ಚೆಲ್ಲಿದೆ!!

ಕೆಂಪು ಮೋತಿ ಕೆಂಡಗಣ್ಣು
ಕೊಕ್ಕಿನಲ್ಲಿ ತಕ್ಕಡಿಯಿದೆ
ಲೋಡು ಮಾಡಿ ಬಂದೂಕಿದೆ ಕಾಲ ಬೆರಳಿ!

ಆಚೆ ಬೆಳಕು ಕಾಣದಂತೆ
ಕ್ಷಿತಿಜದಲ್ಲಿ ಬೆಟ್ಟದಂತೆ
ಬೇಟೆಗಾಗಿ ಕಾದು ಕುಂತಿದೆ!

ಕನಸು ಕಾಂಬ ಕಣ್ಣ ಕುಕ್ಕಿ
ಚಂದ್ರ ತಾರೆ ಚುಕ್ಕೆ ಮುಕ್ಕಿ
ತಿಂದು ತೇಗಿ ಹಸಿವೆ ನೀಗಿದೆ!!

(ಮೇಲೆ ವರ್ಣಿತವಾದ ಹಕ್ಕಿ ಹಾಗೂ ಅದರ ಚಲನವಲನದ ಅಭಿನಯವಾಗುತ್ತದೆ. ಭಯಂಕರ ಮತ್ತು ವಿಚಿತ್ರವಾದ ಹಕ್ಕಿ ಒಬ್ಬ ಮುದುಕಿಯನ್ನು ತಿನ್ನುವುದಕ್ಕೆ ಹೊಂಚಿ, ಅಟ್ಟಿಸಿಕೊಂಡು ಬರುತ್ತದೆ. ರಂಗದ ತುಂಬ ಅವಳನ್ನು ಓಡಾಡಿಸುಇತ್ತದೆ. ಅವಳ ಮಕ್ಕಳ ಕೂಗಾಟ, ಚೀರಾಟ, ಗಾಂಧಿಯಂಥವನೊಬ್ಬ ಅದರೆದುರು ನಿಲ್ಲುತ್ತಾನೆ. ಆದರೆ ಹಕ್ಕಿಯನ್ನು ಎದುರಿಸಲಾರದೆ ಸಾಯುತ್ತಾನೆ. ಈಗ ತುಕ್ರ ಬಂದು ಹಕ್ಕಿಯನ್ನು ಎದುರಿಸುತ್ತಾನೆ. ಮುದುಕಿ ತಪ್ಪಿಸಿಕೊಂಡು ಮರೆಯಾಗುತ್ತಾಳೆ. ಕೊನೆಗೂ ತುಕ್ರ ಜಯಶಾಲಿಯಾಗಿ ಹಕ್ಕಿಯನ್ನು ಗಾಯಗೊಳಿಸುತ್ತಾನೆ. ಆದರೆ ಅವನಿಗೆ ಬೇಕಾದಷ್ಟು ಗಾಯಗಳಾಗಿವೆ. ಅಷ್ಟರಲ್ಲಿತುಕಾರಾಂ ಪಟೇಲ ಜಿಂದಾಬಾದ್‌” ಎಂಬ ಘೋಷಣೆ ಕೇಳಿ ಬರುತ್ತದೆ. ಜನ ಅಂದರೆ ಒಗ್ಗ, ಸಿಂಗ್ರ, ಮಲ್ಲ, ಕುಳ್ಳಈರ, ಡಿಂಗ್ರ, ಸಾಂತ ಮುಂತಾದವರು ಹಕ್ಕಿಯನ್ನು ಹೊತ್ತುಕೊಂಡು ಬರುತ್ತಾರೆ. ಅದಿನ್ನೂ ಒದ್ದಾಡುತ್ತಿದೆ. ತುಕ್ರ ಇನ್ನೂ ಚೇತರಿಸಿಕೊಂಡ ಇಲ್ಲ. ಕ್ಷೀಣ ಸ್ವರದಲ್ಲಿ ಮಾತಾಡುತ್ತಾನೆ.)

ತುಕ್ರ : ವೈರಿ ನಾಶವಾದನೆ?

ಸಿಂಗ್ರ : ಸತ್ಯಾನಾಶವಾದ, ಆದರೂ ಒದ್ದಾಡತವನೆ, ಯಾಕಂತ ತಿಳೀವೊಲ್ದು ಒಡೆಯಾ.

ತುಕ್ರ : ಅವನ ಚರ್ಮ ಸುಲಿದು ಒಳಗೇನಿದೆ ನೋಡಿ.

ಒಗ್ಗ : ಅಂಗೇ ಹಾಗಲಿ ಒಡೆಯಾ.
(ಹಕ್ಕಿಯನ್ನು ನಿಲ್ಲಿಸಿ ಅದರ ಚರ್ಮ ಕುಯ್ಯುವರು. ಅದರೊಳಗಿನಿಂದ ಪಟೇಲ ಬರುವನು. ಎಲ್ಲರಿಗೂ ಆಘಾತವಾಗುವುದು. ಅವನು ಓಡಿಹೋಗಬೇಕೆಂಬಷ್ಟರಲ್ಲಿ ಜನ ಅವನ ಮೈಮೇಲೆ ಬಿದ್ದು ಬಂಧಿಸುವರು)

ತುಕ್ರ : ಎಲಾ ಅಯೋಗ್ಯ ನನ ಮಗನೆ! ಒಗ್ಗ, ಮಲ್ಲ, ಸಿಂಗ್ರ ಸರಿಯಾಗಿ ಕೇಳಿಕೊಳ್ಳಿ. ಊರಿನ ಹೇನುಕೂರಿಗಳನ್ನು ಇವನ ಮೈಮೇಲೆ ಬಿಡಬೇಕು. ಒಂದೆರಡು ದಿನಗಳಲ್ಲೇ ಇವನಿಗೆ ಮೈತುಂಬ ಕಜ್ಜಿಹುರುಕು ಆಗುವಂತೆ ಮಾಡಿ ಈತ ಪರಪರ ಕರೆದುಕೊಳ್ಳುತ್ತ, ತನ್ನ ಚರ್ಮವನ್ನು ಚಿಂದಿ ಮಾಡಿಕೊಳ್ಳುತ್ತ ಭಿಕ್ಷೆ ಎತ್ತುವ ಹಾಗೆ ಮಾಡಬೇಕು.

ಮಲ್ಲ : ಆಯ್ತು ಹೊಡೆಯಾ.

ತುಕ್ರ : ಹೂ, ಹೋಗಿ ……….
(ಒಗ್ಗ, ಮಲ್ಲ, ಸಿಂಗ್ರ ಕಿರುಚುತ್ತಿರುವ ಪಟೇಲನನ್ನು ಎಳೇದೊಯ್ಯುವರು. ಅಷ್ಟರಲ್ಲಿ ಮೇಳದ ವಿಶೇಷ ಸಂಗೀತಕ್ಕೆ ಹೆಜ್ಜೆ ಹಾಕುತ್ತಾ ತಾರಾ ಕೈಯಲ್ಲಿ ಮಾಲೆ ಹಿಡಿದು ಬಂದು ತುಕ್ರನ ಕತ್ತಿಗೆ ಹಾಕುವಳು. ತುಕರ ಈಗ ಚೇತರಿಸಿಕೊಂಡೇಳುವನು. ನೋಡಿದ ಜನ ಸಂತೋಷದಿಂದ ಜೋಡಿಗೆ ಅನುಕೂಲವಾಗಲೆಂಬಂತೆ ಮರೆಯಾಗುವರು. )

ತುಕ್ರ : ದೇವ ಈ, ಈಗ ನೀವು ನಿಮ್ಮ ಪುಟ್ಟ ಮನಸ್ಸನ್ನು ಬಿಚ್ಚಿ, ಅದರಲ್ಲಿ ಹೇನಿದೆ ಅಂತ ಏಳ್ತೀರಾ?

ತಾರಾ : ಪ್ರಭು, ನೀವು ಹೀಗೆ ಮಾತಿಗೊಮ್ಮೆ ನೀವು ತಾವು ಅಂತ ಮಾತಾಡಿದರೆ ನನಗೆ ಖಸವಿಸಿ ಆಗುತ್ತೆ. ಎಷ್ಟೆಂದರೂ ನೀವು ದೊಡ್ಡವರು. ಪಟೇಲರ ವಂಶಸ್ಥರು….ದೇಶ ಕಾಪಾಡಿದವರು….

ತುಕ್ರ : ಛೇ , ಛೇ, ದೊಡ್ಡವನು ಅಂತ ಗರ್ವ, ಅಹಂಕಾರ ನನಗಿಷ್ಟೂ ಇಲ್ಲ. ಇದ್ದಿದ್ದರೆ ನಿನ್ನ ಜೋಡಿ ಮಾತಾಡುತ್ತಿದ್ದೆನೆ?

ತಾರಾ : ನನಗೆ ತುಂಬಾ……

ತುಕ್ರ : ಬೇಜಾರಾಯ್ತೆ-ಪಟೇಲನಿಗೆ ಶಿಕ್ಷೆ ಕೊಟ್ಟದ್ದಕ್ಕೆ?

ಅವನು ಇದ್ದಾನಲ್ಲಾ
ಅಂಥವನು ನಾನಲ್ಲಾ
ನಾನಲ್ಲ ಕ್ಷುದ್ರ ಪಾಟೀಲ!
ನಂಬದಿರು ಅವನ
ಅವನೊಬ್ಬ ಹೆಗ್ಗಣ
ಹಾಳು ಮಣ್ಣು ಕೊಡದ ಜಿಪುಣ!!

ತಾರಾ : ಛೇ! ಹಣ ಯಾರಿಗೆ ಬೇಕು! ಬ್ಯಾಂಕಿನಲ್ಲಿ ಬೇಕಾದಷ್ಟು ಬಿದ್ದಿರುತ್ತೆ. ಮುಖ್ಯ ಬೇಕಾದ್ದು ಪ್ರೇಮ.

ತುಕ್ರ : ಕಾಮ ದೇವರ ಬಿಟ್ಟು
ಬೇರೆ ದೇವರ ಕಾಣೆ
ಪ್ರೇಮದಲಿ ನಾ ಸಿದ್ಧಿ ಸಾಧಿಸಿರುವೆ!
ಯಾವುದಕ್ಕೂ ಸಿದ್ಧ
ಯಾವುದಕ್ಕೂ ಬದ್ಧ
ನೋಡು ಈಗಲೆ ಒರೆಗೆ ಹಚ್ಚಿ!!

ತಾರಾ : ಬದುಕಿಗೆ ಪ್ರೇಮ ಪ್ರೀತಿ ಸಾಕೆ? ಗುಣ ಬೇಡವೆ?

ತುಕ್ರ : ಗುಣ ಎಷ್ಟು ಬೇಕು ನಿನಗೆ? ಶೌರ್ಯ, ಧೈರ್ಯ-ಏನು ಬೇಕು? ಆದರೆ ನನ್ನದೊಂದು  ದೌರ್ಬಲ್ಯ ಅಂದರೆ-ನನ್ನಲ್ಲಿ ದುಷ್ಟತನ ಇಲ್ಲ. ಇದ್ದಿದ್ದರೆ ಆ ಪಟೇಲನನ್ನ ಸುಮ್ಮನೆ ಬಿಡುತ್ತಿರಲಿಲ್ಲ. ಅಷ್ಟೋ ಇಷ್ಟೋ ವಿವೇಕ ಇರೋದ್ರಿಂದ ಸಿಟ್ಟನ್ನ ನಿಯಂತ್ರಿಸಿ ಕೊಂಡೆ.

ತಾರಾ : ಗುಣ ಸಾಕು ಬಿಡಿ. ಇನ್ನು ನಡವಳಿಕೆ?

ತುಕ್ರ : ನನ್ನಲ್ಲಿ ಅದು ದಂಡಿಯಾಗಿ ಬಿದ್ದಿದೆ. ದಡ್ಡ ಪಟೇಲನಿಗೆ ಕರವಸ್ತ್ರದಿಂದ ಸಿಂಬಳ ಒರೆಸಿಕೊಳ್ಳೋದಕ್ಕೂ ಬರೋದಿಲ್ಲ. ಅಂಗಿ ತೋಳಿನಿಂದ ಒರೆಸಿಕೊಳ್ತಿದ್ದ!

ತಾರಾ : ಆಯ್ತು ಬಿಡಿ. ಇನ್ನು ಸಂಸ್ಕೃತಿ ಒಂದಾದರೆ……

ತುಕ್ರ : ಒಂದ್ಯಾಕೆ ಎರಡು ಕೊಡ್ತೀನಿ, ತಗೋ-

ನನ್ನೆದೆಯ ಬಲ್ಬನ್ನು
ಬೆಳಗೋ ಕರಂಟಿ!
ಮದನ ಕದನಕೆ ಬಾರೆ
ಜಗಳಗಂಟಿ!!

ತಾರಾ : ನೀವು ಹೀಗೆ ಮಾತಿಗೊಮ್ಮೆ ಹಾಡುತ್ತ ಹೋದರೆ ಒಂದು ದಿನ ನಿಮ್ಮನ್ನು ನಾನು ಪ್ರೀತಿ ಮಾಡಬೇಕಾಗುತ್ತದೆ, ಅಷ್ಟೆ.

ತುಕ್ರ : ಈಗಲೆ ಮಾಡಬಹುದಲ್ಲಾ!

ತಾರಾ : ಹ್ಯಾಗೆ ಬಂದಿರಿ ನೀವು ಹಾಗೆ ನುಗ್ಗಿರಿ ಒಳಗೆ
ಅಂಗಳದಲ್ಲಿ ಮಾತ್ರ ನಿಲ್ಲಬ್ಯಾಡ್ರಿ.
ನಿರ್ದಯೀ ಮನ್ಮಥನು ಮರ್ದಿಪನು ಸಂತತ
ನನ ಮ್ಯಾಲೆ ಕೂಡಲೇ ದಯಮಾಡಿರಿ.

ತುಕ್ರ :  ಬೇಡುವೇ ನಿನ್ನನ್ನು ಕಾಡಬ್ಯಾಡೆನ್ನನು
ಕಾಮಿಸು ಎಲೆ ಕಾಂತೆಯೆ!
ಸ್ಮರಶರಘಾತಕೆ ಗುರಿಯಾಗಿ ಮರುಗುವೆ
ಕರುಣಿಸಿ ಮಾತಾಡೆಲೆ!!

ತಾರಾ : ದೀನಳಾದೆನ್ನಯ ಮಾನಸವನು ಕದ್ದು
ಅನುರಾಗವನು ತೋರುತ!
ಮಾರನಾಟವನಾಡಿ ಸಾರಸುಖ ತೋರಿಸು
ದಶವಿಧ ಚುಂಬಿಸುತ!!
(ಸೇವಕಿಯ ವೇಷದಲ್ಲಿ ರಂಗಿ ಪ್ರವೇಶಿಸಿ)

ರಂಗಿ : ಪ್ರಭು ಶಯ್ಯಾಗ್ರಹ ತಮ್ಮ ಮದನ ಕದನಕೆ ಸಜ್ಜಾಗಿದೆ.

ತುಕ್ರ : ಬಾರೆ ಬಾರೆಲೆ ತರುಣಿ
ಮೊಲೆ ಚಿನ್ನಾಭರಣಿ
ಪರಿಣಯಕೆ ತಡವ್ಯಾತಕೆ!!
(ಇಬ್ಬರೂ ಹೋಗುವರು)