(ತುಕ್ರ ಜನರಿಂದ ತಪ್ಪಿಸಿಕೊಂಡು ಓಡೋಡುತ್ತ ಬರುತ್ತಾನೆ. ಯಾರಾದರೂ ಇದ್ದಾರೆಯೇ ಎಂದು ಕದ್ದು ನೋಡಿ ಭಾಗವತ ಮತ್ತವನ ಮೇಳವೆಂದು ಖಾತ್ರಿಯಾದ ಮೇಲೆ ತುಸು ನೆಮ್ಮದಿಯಿಂದ ಕೂರುತ್ತಾನೆ)

ತುಕ್ರ : (ಸಂಕಟದಿಂದ) ಮೂರು ದಿನಗಳಿಂದ ಒಂದು ತುತ್ತನ್ನ ತಿಂದಿಲ್ಲ. ಹಸಿವು…. ಬಾಯಾರಿಕೆ…… ಏನಾದರೂ ತಿನ್ನಲಿಕ್ಕಿದ್ದರೆ ಕೊಡೀಯಪ್ಪಾ.

ಭಾಗವತ : ನಮ್ಮ ಹತ್ತಿರ ಏನಿದ್ದೀತು ತುಕ್ರ?

ತುಕ್ರ : ಇಲ್ಲದಿದ್ದರೆ ಬೇಡ. ಸದ್ಯ ಅಳದಿದ್ದರೆ ಸಾಕು. ಅಕ್ಕಪಕ್ಕ ಯಾರೂ ಇಲ್ಲ ತಾನೆ?

ಭಾಗವತ : ಇಲ್ಲ; ನಿಶ್ಚಿಂತನಾಗಿರು. ಯಾಕೆ ಹಿಂಗಾಯ್ತೂಂತ ನನಗೊಂದೂ ಅರ್ಥವೇ ಆಗುತ್ತಿಲ್ಲವೆ!

ತುಕ್ರ : ಕನಸಿನಲ್ಲಿ ಒಂದು ಮರ ಕಂಢೆ ಭಾಗವತರೇ, ಮರದಲ್ಲಿ ಒಂದು ಹಣ್ಣು ಕಂಡೆ. ಕಿತ್ತುಕೊಳ್ಳೋದಕ್ಕೆ ಕೈಹಾಕಬೇಕೆಂದಾಗ ಹಣ್ಣು ತೊಟ್ಟು ಕಳಚಿ ನನ್ನ ಕೈಗೇ ಬಿತ್ತು, ಎಚ್ಚರಾಯ್ತು. ಎಚ್ಚರಾದ ಮೇಲೆ ತಿನ್ನಬೇಕಂತ ಬಾಯಿಗಿಟ್ಟೆ. ಕೈಯಲ್ಲಿ ಹಣ್ಣೇ ಇರಲಿಲ್ಲ! ಇಷ್ಟೆ ಸ್ವಾಮಿ ನಡೆದದ್ದು. ನೀವೇ ಕಂಡಂತೆ ಇದೇನಂಥಾ ಅಪರಾಧವೇ ಹೇಳಿ ಸ್ವಾಮಿ? ಆ ಕಸಬರಿಗೆ ಸುಳಿಯೋಳು ಮಹಾ ಗರತೀನ? ದನ ಕೊಟ್ಟಿಗೇಲಿರಬೇಕು, ಹೆಂಗಸು ಮನೇಲಿ ಬಿದ್ದಿರಬೇಕಲ್ಲವೆ? ಅವಳು ಅಂಥಾ ಹೊತ್ನಲ್ಲಿ ಯಾಕೆ ಹೊರಗೆ ಬಂದಳು? ನೀವೇ ಹೇಳಿ ಸ್ವಾಮಿ.

ಭಾಗವತರು : ಜನ ಹುಚ್ಚುನಾಯಿ ಥರಾ ಅಟ್ಟಿಸಿಕೊಂಡು ಬಂದು ಹೊಡೆದರಲ್ಲ. ಮೈ ತುಂಬಾ ನೋವಾಗಿದೆಯೆ?

ತುಕ್ರ : ಚರ್ಮದ ತುಂಬಾ ನೋವು ತುಂಬಿವೆ ಭಾಗವತರೇ. ಇದು ಊರಲ್ಲ ತಿಪ್ಪೇಗುಂಡಿ. ಇಷ್ಟು ದಿನ ಈ ಊರ ಸೇವೆ ಮಾಡಿದೆ. ನಿಯತ್ತಿನಾಸಾಮಿ ಅಂತ ಬಿರುದು ತಗೊಂಡೆ. ಕುಟ್ಟಿದೆ, ಬೀಸಿದೆ, ಉತ್ತಿಕೊಟ್ಟೆ, ಬಿತ್ತಿಕೊಟ್ಟೆ. ಇವರ ಖಾಯಿಲೆ ಕಸಾರಿಕೆ ನೋಡಿಕೊಂಡೆ. ಸುಖದುಃಖ ಹಂಚಿಕೊಂಡೆ. ಒಬ್ಬನಾದರೂ ತುಕ್ರನ್ನ ಹೊಡೀಬ್ಯಾಡ್ರಿ ಅನ್ನಲಿಲ್ಲ. ಒಬ್ಬನಾದರು ಕರೆದು ತುತ್ತನ್ನ ಹಾಕಲಿಲ್ಲ. ಹಳೇ ಗೆಳೆಯರು ಅಂತ ರಾತ್ರಿ ಆಸರೆಗೆ ಹೋದರೆ ಅವರಾಗಲೇ ಹೆಸರು ಬದಲಿಸಿಕೊಂಡಿದ್ದಾರೆ! ಗೂಳಿ ಬಿದ್ದರೆ ಆಳಿಗೊಂದು ಕಲ್ಲು ಅಂಧಂಗೆ ಕಂಡಕಂಡವರೆಲ್ಲಾ ಹೊಡೆಯೋರೇ, ಬಡಿಯೋರೇ, ಬೈಯೋರೇ! ಅದಿರಲಿ ಭಾಗವತರೇ, ಈ ಮೂರು ದಿನಗಳಿಂದ ನಾನು ಕೆಲಸ ಮಾಡಲಿಲ್ಲವಲ್ಲ-ಪಟೇಲ, ಗೌಡ, ಸಾನುಭೋಗ ಇವರೆಲ್ಲಾ ಏನ್ಮಾಡ್ತಿದಾರೆ? ತಮ್ಮ ಕೆಲಸ ತಾವೆ ಮಾಡಿಕೊಳ್ತಿದಾರ?

ಭಾಗವತ : ಯಾಕೆ, ಸಿಂಗ್ರ ಇಲ್ಲವ? ಅವನ್ನ ಕರೀತಿದಾರೆ.

ತುಕ್ರ : ಸಿಂಗ್ರ? ಸರಿ, ಯಾರಿಗೂ ನಾನಿಲ್ಲ ಅನ್ನಕೋ ಕೊರತೇನೆ ಇಲ್ಲಾಂತೀರಾ?

ಭಾಗವತ : ಇಲ್ಲ, ಆದರೆ ಸಿಂಗ್ರ ಇದಾನಲ್ಲಪ.

ತುಕ್ರ : (ಸಿಂಗ್ರನನ್ನು ಕಲ್ಪಿಸಿ) ಎಲಾ ದ್ರೋಹಿ! ಎಷ್ಟೊಂದು ಸಹಾಯ ಮಾಡಿದ್ದೆ ನಿನಗೆ! ತಲೆ ಖಾಲಿ ಅಂದರೆ ಹೃದಯವೂ ಖಾಲೀನೇ ನಿನಗೆ! ನಿನ್ನನ್ನ ಬಿಡೋದಿಲ್ಲ. ಸಿಂಗ್ರಾ, ನಿನ್ನ ಕೊಲೆ ಮಾಡೋತನಕ ತೃಪ್ತಿ ಇಲ್ಲ ನನಗೆ, (ಭಾಗವತರಿಗೆ) ಭಾಗವತರೇ, ಸಿಂಗ್ರನ್ನ ಎದುರಿಸಲಿಕ್ಕೆ ಶಕ್ತಿಯಾದರೂ ಬರಲಿ, ಒಂದು ಹನಿ ಹೆಂಡ ಇದ್ದರೆ ಕೊಡೀಯಪ್ಪ.

ಭಾಗವತ : ಇಲ್ಲವಲ್ಲ ತುಕ್ರ.

ತುಕ್ರ : ಮೂರು ದಿನದಿಂದ ನಾನೂ ಕುಡಿಯೋದನ್ನ ಬಿಟ್ಟಿದೀನಿ, ಬೇಡ ಬಿಡಿ. ಬಾಯಾರಿಕೆಗೆ ತೊಟ್ಟು ನೀರಾದರೂ ಕೊಡಿ.

ಭಾಗವತ : ಅದೂ ಇಲ್ಲವಲ್ಲ ತುಕ್ರ. ಬೇಕಾದರೆ ದುರ್ದೈವದ ಬಗ್ಗೆ ಒಂದು ಹಾಡು ಹೇಳೋಣವ?

ತುಕ್ರ : ಅದು ಬಿಟ್ಟು ನಿಮ್ಮಿಂದ ಇನ್ನೇನೂ ಸಹಾಯ ಆಗೋದಿಲ್ಲ, ಅಲ್ಲ?

ಭಾಗವತ : ಇಲ್ಲ ಕಣಪ್ಪ.

ತುಕ್ರ : ಹಾಗಿದ್ದರೆ ತೆಪ್ಪಗಿರಿ. ಅಗೋ ಬಂದನಲ್ಲ. ಅವನೇ ಅಲ್ಲವೇ ಸಿಂಗ್ರ?

ಭಾಗವತ : ಹೌದು.

ತುಕ್ರ : ಎಲವೋ ಸಿಂಗ್ರ-
(ಎಂದು ವೀರಾವೇಶದಿಂದ ಹಾರಿ ನಿಲ್ಲುವನು. ಭಾಗವತ ಹಿಂದೆ ಸರಿದು ಚಂಡೆ ಹೊಡೆಯುತ್ತಾನೆ. ಪ್ರವೇಶವಾದೊಡನೆ ತುಕ್ರ ಅವನೆದುರು ನಿಲ್ಲುತ್ತಾನೆ. ಆಶ್ಚರ್ಯವೆಂದರೆ ಸಿಂಗ್ರೆ ಥೇಟ್ತುಕ್ರನ ಪ್ರತಿಬಿಂಬದ ಹಾಗೇ ಇದ್ದಾನೆ. ಮಾತೂ ಹಾಗೇನೆ ಇದೆ)

ತುಕ್ರ : ಎಲವೆಲವೋ ಕಂತ್ರೀನಾಯಿ, ಚರಂಡಿ………..
(ಇವನೂ ತುಕ್ರನಂತೆಯೇ ನಿಂತು ಅವೇ ಮಾತುಗಳನ್ನು ಆಡಿದಂತೆ ತುಕ್ರನ ಮಾತಿನ ಕೊನೇ ಶಬ್ದ ಕೇಳಿಸುತ್ತದೆ, – ತುಕ್ರನ ಮಾತಿಗೆ ಪ್ರತಿಧ್ವನಿಯಂತೆ).

ಸಿಂಗ್ರ : ……….. ಚರಂಡಿ.

ತುಕ್ರ : ಕೀಳು ಜಂತು. ಕ್ರಿಮಿ, ಸೆಗಣಿ.

ಸಿಂಗ್ರ : …………… ಸೆಗಣಿ

ತುಕ್ರ : ಸಾರಿ ಸಾರಿ ಹೇಳ್ತೀನೋ ನೀನು ದ್ರೋಹಿ.

ಸಿಂಗ್ರ : …………….. ದ್ರೋಹಿ.

ತುಕ್ರ : ನಿನ್ನ ಮರ್ಯಾದೆ ಹರಾಜಿಗಿಟ್ಟರೂ ಎರಡು ಬಿಲ್ಲೆ ಹುಟ್ಟೋದಿಲ್ಲವೊ………

ಸಿಂಗ್ರ : ………..ದಿಲ್ಲವೋ

ತುಕ್ರ : ನೀ ತಿನ್ನೋ ರೊಟ್ಟಿ ಆಣಿ ಮಾಡಿ ಹೇಳ್ತೀನೋ ನೀನು ಕೊಳಕ!

ಸಿಂಗ್ರ : ಕೊಳಕ!

ತುಕ್ರ : ಎಲವೋ ಆಳೋದಕ್ಕೆ ಹುಟ್ಟಿದವನೇ-

ಸಿಂಗ್ರ : …………..ದವನೇ-
(ತುಕ್ರ ಹೋಗಿ ಸಿಂಗ್ರನನ್ನು ಹಿಡಿದುಕೊಳ್ಳಲುವನು. ಇಬ್ಬರೂ ಸಮಬಲದಲ್ಲಿ ಎಳೆದಾಡುವರು. ತಳ್ಳಿದಾಗ ಇಬ್ಬರೂ ಎದುರು ಬದುರಾಗಿ ಬಿಂಬ ಪ್ರತಿಬಿಂಬದಂತೆ ಬೀಳುವರು)

ತುಕ್ರ : ಥೇಟು ನಾ ಮಾಡಿದ ತಪ್ಪಿನಂಗೇ ಇದ್ದೀಯಲ್ಲೋ ಮುಂಡೇದೇ.

ಸಿಂಗ್ರ : ಮುಂಡೇದೇ.

ತುಕ್ರ : ಮಾತು ಬೇರೆ ನಿನಗೆ ಕೇಡು.

ಸಿಂಗ್ರ : ……… ಕೇಡು.

ತುಕ್ರ : ಛೇಧ, ಇವನೇನು ಹೇಳ್ತಿದಾನೆ ಭಾಗವತರೇ?

ಸಿಂಗ್ರ : ……….ವತರೇ ……….

ಭಾಗವತ : ನೀ ಹೇಳಿದ್ದನ್ನೇ.

ತುಕ್ರ : ನನಗಿಂತ ಭಿನ್ನವಾಗಿ ಎಂಜಲು ತಿನ್ನೋದಕ್ಕೂ ಬರೋದಿಲ್ಲವೆ?

ಸಿಂಗ್ರ : ……… ದಿಲ್ಲವೇ?

ತುಕ್ರ : (ತಿರಸ್ಕಾರದಿಂದ) ತನ್ನನ್ನೇ ಗೇಲಿ ಮಾಡಿಕೊಂಡಂಗೆ ಹೆಂಗೆ ನಗ್ತಾನೆ ನೋಡಿ!

ಸಿಂಗ್ರ : …….. ನೋಡಿ!
(ತಕ್ಷಣ ತುಕ್ರನಿಗೆ ತಾನು ಇವನಂಥೆ ಇದ್ದೇನಂತ ಜ್ಞಾನೋದಯವಾಗಿ ಹೃತ್ಪೂರ್ವಕ ದುಃಖವಾಗುತ್ತದೆ. ಅಳುತ್ತ ಓಡಿ ಹೋಗಿ ಸಿಂಗ್ರನನ್ನ ತಬ್ಬಿಕೊಂಡು)

ತುಕ್ರ : ಸಿಂಗ್ರ, ಬಾ ನನ್ನ ಬಾಂಧವಾ, ನಾನೆಂಗೆ ಬಾಳಿದೆ, ನಾನು ಯಾರೂಂತ ನನಗೀಗ ಜ್ಞಾನೋದಯವಾಯಿತಲ್ಲೋ ನನ್ನ ಅರಳೀಮರವೇ! ಸಿಂಗ್ರ ನೀನು ನನ್ನಂಗೇ ಇರೋದ್ರಿಂದ ನನಗಾದರು ಗೌರವ ಕೊಟ್ಟುಕೊಂಡು ಸುಲಮ್ಮನಾಗ್ತೇನೆ. ನಾವಿನ್ನು ಜಗಳಾಡೋದು ಬೇಡಪ್ಪ.

ಸಿಂಗ್ರ : ಬೇಡ.

ತುಕ್ರ : ಬಂಧು ನನಗೆ ಅನುಕೂಲಸಿಂಧುವಾಗ್ತೀಯ?

ಸಿಂಗ್ರ : ಎಂಗೆ?

ತುಕ್ರ : ನೀನೇ ನೋಡ್ತಿಯಲ್ಲಪ ನಾವು ಹೆಂಗೆ ಬದುಕ್ತ ಇದ್ದೀವಂತ. ಇದಕ್ಕೆ ಜೀವನ ಅಂತಾರೇನಪ? ಅನ್ನೋದಾದರೆ ನೀ ಅಂದುಕೊ. ನಾ ಅನ್ನೋದಿಲ್ಲ. ಭಿನ್ನಾಭಿಪ್ರಾಯ ಹೇಳಿದೆ ಅಂತ ಬೇಜಾರಿಲ್ಲ ತಾನೆ?

ಸಿಂಗ್ರ : ಇಲ್ಲ.

ತುಕ್ರ ಈ ಊರಿನಿಂದ ನ್ಯಾಯ ನೀತಿ ಹೊರಟೋಗದೆ ಕಣಪ್ಪ. ನ್ಯಾಯ ನೀತಿ ಇಲ್ಲದಲ್ಲಿ ಅದಿದ್ದವರು ಬದುಕಬಾರದು. ಸಾಯಬೇಕಂತ ತೀರ್ಮಾನ ಮಾಡಿಬಟ್ಟೀನಿ. ಸಾಯೋನು ನಾನಾದ್ದರಿಂದ ಗೋರಿ ತೋಡಲಿಕ್ಕೆ ನನ್ನಂಥವನಿಗೇ ಅವಕಾಶ ಕೊಡಬೇಕಂತ ದೊಡ್ಡ ಮನಸ್ಸು ಮಾಡೀನಿ. ದಯಮಾಡಿ ಒಂದು ಗೋರಿ ತೋಡಿಕೊಡ್ತೀಯಪ್ಪ?

ಸಿಂಗ್ರ : ಕೂಲಿ?

ತುಕ್ರ : ಕೊಡೋಣಯ್ಯ. ಪುಕ್ಕಟೆ ಕೆಲಸ ತಗೀಲಿಕ್ಕೆ ನಾನೇನು ಪಟೇಲನ? ನನ್ನ ಸೊಂಟದಲ್ಲೊಂದು ಬೆಳ್ಳಿ ಉಡುದಾರ ಇದೆ. ಗೋರಿ ತೋಡುತ್ತೀಯಲ್ಲ, ನಾನು ಒಳಕ್ಕಿಳಿದು ಸಾಯತೀನಿ. ನೀನು ನಾಳೆ ಬೆಳಿಗ್ಗೆ ಬಂದು, ಉಡುದಾರ ತಕ್ಕೊಂಡು ಮಣ್ಣು ಮುಚ್ಚಿ ಹೋಗು, ಆಯ್ತ?

ಸಿಂಗ್ರ : ಹಾಯ್ತು ಬುಡು. ಸಾಯೋ ಒತ್ನಲ್ಲಿ ಸಾಯ ಮಾಡದೆ ಇನ್ಯಾವಾಗ ಮಾಡೋದು? ಗೋರಿ ಎಲ್ಲಿ?- (ಸ್ಥಳ ತೋರಿಸುತ್ತ) ಇಲ್ಲಿ ತೋಡಲಾ?

ತುಕ್ರ : ಪರವಾಗಿಲ್ಲ. ಒಳ್ಳೆ ಜಾಗಾನೇ ಹುಡುಕಿದ್ದೀ ಯಾ, ತೋಡು.(ಸಿಂಗ್ರ ಗೋರಿ ತೋಡತೊಡಗುತ್ತಾನೆ)

ಸ್ವಾಮಿ ಭಾಗವತರೇ, ಗೋರಿ ತೊಡೋತನಕ ನನ್ನ ದುರಾದೃಷ್ಟದ ಬಗ್ಗೆ ಒಂದು ಹಾಡಾದರು ಹೇಳಿ. ಆ ಹಾಡು ಕೇಳಿ ಕಣ್ಣೀರು ಬಂದರೆ ಬಾಯಾರಿಕೆಗೆ ಅವನ್ನಾದರೂ ಕುಡೀಬೌದು.

ಮೇಳ : ಎಲ್ಲಾ ಇದ್ದರು ಇನ್ನೊಂದ್ಬೇಕು
ಅದಕಂತಾರೆ ಅದೃಷ್ಟ,
ಅದೇ ಇಲ್ಲದೆ ಎಲ್ಲಾ ಇದ್ದರು
ತಪ್ಪೋದಿಲ್ಲ ಕಷ್ಟ.

ಅದು ಇದ್ದಲ್ಲಿಗೆ ಓಡಿ ಬರುತ್ತವೆ
ಹೆಣ್ಣೂ ಮತ್ತೂ ಹೊನ್ನು,
ಅದರಾಸೆಯೇ ತಪ್ಪಿದರಾಯಿತು
ಅನ್ನವಾಗುವುದು ಮಣ್ಣು.

ಹೆಣ್ಣೂ ಗಂಡೂ ಕೂಡೋದಕ್ಕೆ
ಕೂಡಿ ಬರಬೇಕು ಕಾಲ.
ಹೆಣ್ಣೂ ಕಾಲ ಎರಡೂ ಇದ್ದರು
ತುಕ್ರನಿಗೋ ದುಷ್ಕಾಲ!

ಗ್ರಹಗಳ ಗತಿಯೇ ತಪ್ಪಿದೆಯಾದರೆ
ಅದೃಷ್ಟ ಮಾಡೀತೇನು?
ಅದೃಷ್ಟವಿಲ್ಲದ ಗ್ರಹಗಳ ಗತಿ ಗಿತಿ
ಮಾಡೀತಾದರು ಏನು?

ಅದೃಷ್ಟ ಗ್ರಹಗತಿ ಎಲ್ಲಾ ಸುಳ್ಳು
ಕನ್ಯೆ ನಿನ್ನನ್ನು ಕಂಡು,
ಕಿಸಿಕಿಸಕ್ಕಂತ ನಕ್ಕರೆ ಆಕೆಯ
ಆಸೆ ಬಿಡುವುದೇ ಮೇಲು.

ತುಕ್ರ : ಗೋರಿ ಅಗಿಯೋದು ಮುಗೀತೇನಪ್ಪ?

ಸಿಂಗ್ರ : ಮುಗೀತು.
ತುಕ್ರ : ಆಯ್ತು, ಹಂಗಿದ್ದರೆ ನಾಳೆ ತಪ್ಪದೆ ಬಂದು ಉಡುದಾರ ತಗೊಂಡ್ಹೋಗು.

(ಸಿಂಗ್ರ ಹೋಗುವನು)

ಭಾಗವತರೇ ಇಲ್ಲಿ ಬನ್ನಿ,
ಭಾಗವತರೇ : ಇನ್ನೇನಪ್ಪ?

ತುಕ್ರ : ಇಲ್ಲೀತನಕ ನನ್ನ ಕಥೆ ಹೇಳಿದ್ದಕ್ಕೆ ಕೊನೇ ಪಕ್ಷ ನಿಮಗೊಂದು ಬೆಳ್ಳೀ ರೂಪಾಯಿ ಕೊಡೋಣ ಅಂತ ದೈವಪ್ರೇರಣೆ ಆಗ್ತಾ ಇದೆ. ಆದರೆ ಬೆಳ್ಳೀ ರೂಪಾಯಿ ಇಲ್ಲ. ಶರ್ಟಿನ ಗುಂಡಿ ಇದೆ, ತವರಿಂದು. ಇದನ್ನಿಟ್ಟುಕೊಂಡಿರಿ. ನಾನು ಮುಂದಿನ ಜನ್ಮದಲ್ಲಿ ಪಟೇಲನಾಗಿ ಹುಟ್ಟಿಬಂದಾಗ ಈ ತವರಿನ ಗುಂಡಿ ತೋರಿಸಿ. ಇದರ ಬದಲು ಬೆಳ್ಳೀ ರೂಪಾಯಿ ಕೊಡುವಾ! ಆಯ್ತ? ಸಧ್ಯ ಇದು ನಿಮ್ಮ ಬಳಿ ಇರಲಿ. ನಮಸ್ಕಾರ (ಗುಂಡಿ ಕೊಡುವನು)

ಭಾಗವತ : ಸರಿಯಪ್ಪ ನಮಸ್ಕಾರ.

ತುಕ್ರ : ನಾನು ಕಣ್ಣು ತಕ್ಕೊಂಡೇ ಸತ್ತಿರ್ತೇನೆ. ನೀವು ಆಮೇಲೆ ಕಣ್ಣು ಮುಚ್ಚೀ ಯಪಾ. ಯಾಕೆಂದರೆ ನಾಳೆ ಸಿಂಗ್ರ ಬಂದು ನನ್ನನ್ನ ತನ್ನ ಭೂತ ಅಂದು ಕೊಂಡಾನು!

ಭಾಗವತ : ಆಯ್ತಪ.

ತುಕ್ರ : ಗೋರಿಯಲ್ಲಿಳೀತೀನಿ, ಸ್ವಲ್ಪ ನೆರವಾಗಿಯಪ್ಪ.
(ಭಾಗವತ ಕೈ ಹಿಡಿದು ತುಕ್ರನನ್ನ ಗೋರಿಯಲ್ಲಿ ಇಳಿಸುವನು. ಇಳಿದವನೇ ಮತ್ತೆ ಮೇಲಕ್ಕೆದ್ದು ಬರುವನು)

ಭಾಗವತ : ಯಾಕಪ್ಪ, ತಿರುಗಿ ಬಂದೆ, ಏನಾದರೂ ಮರೆತಿದ್ದೆಯಾ?

ತುಕ್ರ : ಏನಿಲ್ಲ ಭಾಗವತರೇ, ಭವಿಷ್ಯದಲ್ಲಿ ನನಗೆ ಭಾರೀ ನಂಬಿಕೆ ಬಂದು ಬಿಟ್ಟಿತು! ನಿಮ್ಮ ಋಣ ಇದೇ ಜನ್ಮದಲ್ಲಿ ತೀರಿಸೋಣ ಅಂತ ತಿರುಗಿ ಬಂದೆ.

ಭಾಗವತ : ಅಂದರೆ?

ತುಕ್ರ : ಬೆಂಗಳೂರಿಗೆ ಹೋಗಿ ಬರ್ತೀನಿ. ಬಂದು ನಿಮಗೊಂದು ಬೆಳ್ಳೀ ರೂಪಾಯಿ ಕೊಡ್ತೀನಿ. ಅಲ್ಲೀತನಕ ನಾ ಕೊಟ್ಟ ತವರಿನ ಗುಂಡಿ ನಿಮ್ಮ ಹತ್ತಾನೇ ಇರಲಿ. ನಮಸ್ಕಾರ. (ಹೋಗುವನು)