(ತುಕ್ರ ಜನರಿಂದ ತಪ್ಪಿಸಿಕೊಂಡು ಓಡೋಡುತ್ತ ಬರುತ್ತಾನೆ. ಯಾರಾದರೂ ಇದ್ದಾರೆಯೇ ಎಂದು ಕದ್ದು ನೋಡಿ ಭಾಗವತ ಮತ್ತವನ ಮೇಳವೆಂದು ಖಾತ್ರಿಯಾದ ಮೇಲೆ ತುಸು ನೆಮ್ಮದಿಯಿಂದ ಕೂರುತ್ತಾನೆ)

ತುಕ್ರ : (ಸಂಕಟದಿಂದ) ಮೂರು ದಿನಗಳಿಂದ ಒಂದು ತುತ್ತನ್ನ ತಿಂದಿಲ್ಲ. ಹಸಿವು…….ಬಾಯಾರಿಕೆ……..ಏನಾದರೂ ತಿನ್ನಲಿಕ್ಕಿದರೆ ಕೊಡೀಯಪ್ಪಾ.

ಭಾಗವತ : ನಮ್ಮ ಹತ್ತಿರ ಏನಿದ್ದೀತು ತುಕ್ರ?

ತುಕ್ರ : ಇಲ್ಲದಿದ್ದರೆ ಬೇಡ. ಸದ್ಯ ಅಳದಿದ್ದರೆ ಸಾಕು. ಅಕ್ಕಪಕ್ಕ ಯಾರೂ ಇಲ್ಲ ತಾನೆ?

ಭಾಗವತ : ಇಲ್ಲ; ನಿಶ್ಚಿಂತನಾಗಿರು.  ಯಾಕೆ ಹಿಂಗಾಯ್ತೂಂತ ನನಗೊಂದು ಅರ್ಥವೇ ಆಗುತ್ತಿಲ್ಲವೆ!

ತುಕ್ರ : ಕನಸಿನಲ್ಲಿ ಒಂದು ಮರ ಕಂಡೆ ಭಾಗವತರೇ, ಮರದಲ್ಲಿ ಒಂದು ಹಣ್ಣು ಕಂಡೆ. ಕಿತ್ತುಕೊಳ್ಳೋದಕ್ಕೆ ಕೈಹಾಕಬೇಕೆಂದಾಗ ಹಣ್ಣು ತೊಟ್ಟು ಕಳಚಿ ನನ್ನ ಕೈಗೇ ಬಿತ್ತು, ಎಚ್ಚರಾಯ್ತು. ಎಚ್ಚರಾದ ಮೇಲೆ ತಿನ್ನಬೇಕಂತ ಬಾಯಿಗಿಟ್ಟೆ. ಕೈಯಲ್ಲಿ ಹಣ್ಣೇ ಇರಲಿಲ್ಲ! ಇಷ್ಟೆ ಸ್ವಾಮಿ ನಡೆದದ್ದು. ನೀವೇ ಕಂಡಂತೆ ಇದೇನಂಥಾ ಅಪರಾಧವೇ ಹೇಳಿ ಸ್ವಾಮಿ? ಆ ಕಸಬರಿಗೆ ಸುಳಿಯೋಳು ಮಹಾ ಗರತೀನ? ದನ ಕೊಟ್ಟಿಗೇಲಿರಬೇಕು, ಹೆಂಗಸು ಮನೇಲಿ ಬಿದ್ದಿರಬೇಕಲ್ಲವೆ? ಅವಳು ಅಂಥಾ ಹೊತ್ನಲ್ಲಿ ಯಾಕೆ ಹೊರಗೆ ಬಂದಳು? ನೀವೇ ಹೇಳಿ ಸ್ವಾಮಿ.

ಭಾಗವತರು : ಜನ ಹುಚ್ಚುನಾಯಿ ಥರಾ ಅಟ್ಟಿಸಿಕೊಂಡು ಬಂದು ಹೊಡೆದರಲ್ಲ. ಮೈ ತುಂಬಾ ನೋವಾಗಿದೆಯೆ?

ತುಕ್ರ : ಚರ್ಮದ ತುಂಬಾ ನೋವು ತುಂಬಿವೆ ಭಾಗವತರೇ. ಇದು ಊರಲ್ಲ ತಿಪ್ಪೇ ಗುಂಡಿ. ಇಷ್ಟು ದಿನ ಈ ಊರ ಸೇವೆ ಮಾಡಿದೆ. ನಿಯತ್ತಿನಾಸ್ವಾಮಿ ಅಂತ ಬಿರುದು ತಗೊಂಡೆ. ಕುಟ್ಟಿದೆ, ಬೀಸಿದೆ, ಉತ್ತಿಕೊಟ್ಟೆ, ಬಿತ್ತಿಕೊಟ್ಟೆ. ಇವರ ಖಾಯಿಲೆ ಕಸಾರಿಕೆ ನೋಡಿಕೊಂಡೆ. ಸುಖದುಃಖ ಹಂಚಿಕೊಂಡೆ. ಒಬ್ಬನಾದರೂ ತುಕ್ರನ್ನ ಹೊಡೀಬ್ಯಾಡ್ರಿ ಅನ್ನಲಿಲ್ಲ. ಒಬ್ಬನಾದರು ಕರೆದು ತುತ್ತನ್ನ ಹಾಕಲಿಲ್ಲ. ಹಳೇ ಗೆಳೆಯರು ಅಂತ ರಾತ್ರಿ ಆಸರೆಗೆ ಹೋದರೆ ಅವರಾಗಲೇ ಹೆಸರು ಬದಲಿಸಿಕೊಂಡಿದ್ದಾರೆ! ಗೂಳಿ ಬಿದ್ದರೆ ಆಳಿಗೊಂದು ಕಲ್ಲು ಅಂಧಂಗೆ ಕಂಡಕಂಡವರೆಲ್ಲಾ ಹೊಡೆಯೋರೇ, ಬಡಿಯೋರೇ, ಬೈಯೋರೇ! ಅದಿರಲಿ ಭಾಗವತರೇ, ಈ ಮೂರು ದಿನಗಳಿಂದ ನಾನು ಕೆಲಸ ಮಾಡಲಿಲ್ಲವಲ್ಲ-ಪಟೇಲ, ಗೌಡ, ಸಾನುಭೋಗ ಇವರೆಲ್ಲಾ ಏನ್ಮಾಡ್ತಿದಾರೆ? ತಮ್ಮ ಕೆಲಸ ತಾವೆ ಮಾಡಿಕೊಳ್ತಿದಾರ?

ಭಾಗವತ : ಯಾಕೆ, ಸಿಂಗ್ರ ಇಲ್ಲವ? ಅವನ್ನ ಕರೀತಿದಾರೆ.

ತುಕ್ರ : ಸಿಂಗ್ರ? ಸರಿ, ಯಾರಿಗೂ ನಾನಿಲ್ಲ ಅನ್ನೋ ಕೊರತೇನೆ ಇಲ್ಲಾಂತೀರಾ?

ಭಾಗವತ : ಇಲ್ಲ, ಆದರೆ ಸಿಂಗ್ರ ಇದಾನಲ್ಲಪ.

ತುಕ್ರ : (ಸಿಂಗ್ರನನ್ನು ಕಲ್ಪಿಸಿ) ಎಲಾ ದ್ರೋಹಿ! ಎಷ್ಟೊಂದು ಸಹಾಯ ಮಾಡಿದ್ದೆ ನಿನಗೆ! ತಲೆ ಖಾಲಿ ಅಂದರೆ ಹೃದಯವೂ ಖಾಲೀನೇ ನಿನಗೆ! ನಿನ್ನನ್ನ ಬಿಡೋದಿಲ್ಲ.

ಸಿಂಗ್ರಾ ನಿನ್ನ ಕೊಲೆ ಮಾಡೋತನಕ ತೃಪ್ತಿ ಇಲ್ಲ ನನಗೆ, (ಭಾಗವತರಿಗೆ) ಭಾಗವತರೇ, ಸಿಂಗ್ರನ್ನ ಎದುರಿಸಲಿಕ್ಕೆ ಶಕ್ತಿಯಾದರೂ ಬರಲಿ, ಒಂದು ಹನಿ ಹೆಂಡ ಇದ್ದರೆ ಕೊಡೀಯಪ್ಪ.

ಭಾಗವತ : ಇಲ್ಲವಲ್ಲ ತುಕ್ರ.

ತುಕ್ರ : ಮೂರು ದಿನದಿಂದ ನಾನೂ ಕುಡಿಯೋದನ್ನ ಬಿಟ್ಟಿದೀನಿ, ಬೇಡ ಬಿಡಿ. ಬಾಯಾರಿ ಕೈಗೆ ತೊಟ್ಟು ನೀರಾದರೂ ಕೊಡಿ.

ತುಕ್ರ : ಅವನಿಗೆ ಕೊಬ್ಬು ಇದೆ. ನಾನು ಯಾರು ಅಂತ ತಿಳೀತಾನೆ ಇಲ್ಲ!

ಮೇಳ : ಕೊಬ್ಬು ಕರಗಿದ ಮ್ಯಾಲೆ ನಿಮಗೊಂದು ನಮಸ್ಕಾರ ಮಾಡತಾನೆ ಬಿಡಿ.

ತುಕ್ರ : ಹಾಗಂತ ನಾಯಿಗೆ ಸಲಿಗೆ ಕೊಟ್ಟರೆ ತಲೆಗೇರದೆ ಬಿಟ್ಟೀತೇನಪ್ಪ? ಇರು ಇರು ಬುದ್ಧಿ ಕಲಿಸ್ತೇನೆ.
(ಹೋಗಿ ಒಗ್ಗನ ಪಕ್ಕ ಕೂರುತ್ತಾನೆ. ತಾನೂ ಶರ್ಟು ಕಳಚಿ ಕೂರಿ ಒರೆಯ ತೊಡಗುತ್ತಾನೆ. ಆದರೆ ಒಗ್ಗನಿಗೆ ಸಿಕ್ಕಷ್ಟು ಕೂರಿ ಇವನಿಗೆ ಸಿಕ್ಕುವುದಿಲ್ಲವಾದ್ದರಿಂದ ನಿರಾಸೆಯಾಗುತ್ತದೆ)

ತುಕ್ರ : ಕಣ್ಣು ನೆತ್ತಿಗೇರಿದರೆ ಹಿಂಗೇ ಆಗೋದು – ಎದುರಿಗಿದ್ದವರು ಕಾಣಸೋದೇ ಇಲ್ಲ. ಮುಖದ ತುಂಬ ಮೀಸೆ ಬಂದರಾಯ್ತೆ? ಕರಡಿಗೂ ಮೈತುಂಬ ಕೂದಲಿರುತ್ತೆ. ಹಂಗಂತ ಅದನ್ನ ಸಜ್ಜನ ಅನ್ನಲಿಕ್ಕಾಗತ್ತ?
(ಒಗ್ಗ ತನ್ನ ಪಾಡಿಗೆ ತಾನು ಕೂರಿ ಒರೆಯುವ ಕೆಲಸ ಮುಂದುವರಿಸುವನು)
ಏಯ್‌ ಒಗ್ಗ ಒಂದು ಕೆಲಸ ಮಾಡು : ದಿನಾ ಬೇವಿನ ಸೊಪ್ಪಿನ ಜೊತೆ ಕರಡಿಯ ಮೂರು ಹಿಕ್ಕೆ ತಿನ್ನು. ಬಿಟ್ಟೂ ಬಿಡದೆ ನಲವತ್ತೆಂಟು ದಿವಸ ತಿಂದರೆ ನಿನ್ನ ತಲೆಯಲ್ಲಿ ಸ್ವಲ್ಪ ಮೆದುಳು ಹುಟ್ಟಿದ್ದು ಗೊತ್ತಾಗುತ್ತೆ. ಮೆದುಳು ಹುಟ್ಟಿದ ಗುರುತು ಯಾವುದಪ್ಪಾ ಅಂದರೆ ನಿನ್ನ ಮೀಸೆ ಮತ್ತು ಕರಡಿ ಕೂದಲು ಬೇರೆ ಬೇರೆ ಅಂತ ಗೊತ್ತಾಗೋದು ಅಥವಾ ನಿನ್ನ ಮೀಸೇ ಈಚೆಗಿರೋ ನಾನು ಕಾಣಿಸ್ತೀನಿ ನೋಡು – ಅದೇ ಗುರುತು.
(ಈಗಲೂ ಒಗ್ಗ ತನ್ನ ಕೆಲಸ ಸುಮ್ಮನೆ ಮುಂದುವರಿಸಿದ್ದಾನೆ. ತಕ್ಷಣ ತುಕ್ರ ಮ್ಯಾಲೆದ್ದು ತನ್ನಂಗಿ ಕೆಳಕ್ಕೆಸೆದು ತಿರಸ್ಕಾರದಿಂದ ತುಳಿಯುತ್ತ)
ಥೂ ಕಜ್ಜೀಕರಡಿ!

ಒಗ್ಗ : ಯಾರಿಗೋ ನೀನು ಕಜ್ಜೀ ಕರಡಿ ಅಂದದ್ದು?

ತುಕ್ರ : ಯಾರಿಗೆ ತಟ್ಟುತ್ತೋ ಅವರಿಗೆ.

ಒಗ್ಗ : ಯಾರಿಗೆ ತಟ್ಟುತ್ತೆ ಅನ್ನೋದನ್ನ ತೋರಿಸಲ?
(ತುಕ್ರನ ಜುಟ್ಟು ಹಿಡಿದು ಎಳೆಯತೊಡಗುವನು. ತುಕ್ರ ಅವನನ್ನು ಎದುರಿಸಲಾರದೆ ಎಳೇದತ್ತ ಹೋಗುವನು.)

ತುಕ್ರ : ನೀನೇನು ತೋರಿಸಬೇಕಾಗಿಲ್ಲ. ನಿನಗೆ ತಟ್ಟಿಲ್ಲ ಅಂದ ಮೇಲೆ ನೀನು ಕರಡಿ ಅಲ್ಲ ಅಂತಾಯ್ತಲ್ಲ; ಸುಮ್ಮನಿರು.

ಒಗ್ಗ : ನಾನು ಯಾರು ಅಂತಾದರೂ ತೋರಿಸ್ತೇನೆ, ಇರು.

ತುಕ್ರ : ಸುಮ್ಮನೆ ಬಿಡು ನನ್ನ . ಇಲ್ದೆ ಹೋದ್ರೆ……..

ಒಗ್ಗ : ಇಲ್ಲದೆ ಹೋದರೆ………………?

ತುಕ್ರ : ನಿನಗೇನೇನೋ ಅನ್ನಬೇಕಾಗುತ್ತೆ.

ಒಗ್ಗ : ಅನ್ನು.

ತುಕ್ರ : ನೀನು ಅದಕ್ಕೂ ನಾಲಾಯಕ್ಕು.

ಒಗ್ಗ : ನೀನು ಏನಕ್ಕೆ ಲಾಯಕ್ಕಂತ ತಿಳಿಸ್ತೇನೆ, ಇರು.
(ಗೋಡೆಗೆ ತುಕ್ರನ ತಲೆ ಅಪ್ಪಳಿಸುವನು)

ತುಕ್ರ : ಸಜ್ಜನರು ತಿಳಿಸೋದಕ್ಕ ಬಾಯಿ ಬಳಸ್ತಾರೆ, ಕೈಯನ್ನಲ್ಲ.

ಒಗ್ಗ : ನಾನು ಸಜ್ಜನ ಅಲ್ಲ.
(ತುಕ್ರನನ್ನ ಗೋಡೆಗೆ ಸಾಕಾಗುವಷ್ಟು ಅಪ್ಪಳಿಸಿ ಹೋಗುವನು. ತುಕ್ರ ಸಾವರಿಸಿ ಕೊಳ್ಳುತ್ತ)

ತುಕ್ರ : ಮಗನ ಆಳಿನಿಂದಲೇ ಏಟು ತಿನ್ನಬೇಕಾಯ್ತಲ್ಲಪ : ಜುಟ್ಟು ಹಿಡಿದು ಕೆನ್ನೆಗೆರಡೇಟು ಬಾರಿಸಿ ಬುದ್ಧಿಕಲಿಸೋಣ ಅಂದರೆ ಅವನ ಮಂಡಬೋಳು. ನಿಜ ಹೇಳ್ತೇನೆ : ನನ್ನ ಮಗನಿಗೆ ಆಳುಗಳನ್ನ ಹೆಂಗಿಟ್ಟುಕೊಳ್ಳಬೇಕು ಅಂತ ಗೊತ್ತೇ ಇಲ್ಲ.
(ಇವನು ಮಾತಾಡುತ್ತಿದ್ದಾಗ ರಂಗಿ ಬರುತ್ತಾಳೆ. ಇವನ ಸ್ಥಿತಿ ನೋಡಿ ನಗುತ್ತಾಳೆ) ಎಲಾ ಇವಳ, ನನ್ನ ಕಂಡು ಇವಳಿಗೂ ನಗು ಬಂತೆ! ಲೇ ಲೇ ರಂಗಿ ಬಾರೆ ಇಲ್ಲಿ.

ರಂಗಿ : ಯಾಕಲಾ ಲೇ ಲೇ ಅಂತಿಯಾ? ನಾನೇನು ನಿನ್ನ ಎಂಡ್ರಾ?

ತುಕ್ರ : ನಾನೊಪ್ಪಿದರೆ ತಾನೆ! ಅಲ್ಲವೇ ಅದೇನೇ ರಸ್ತೇಲಿ ನಿಂತು ಗಂಡಸರಿಗೆ ಪಿಸಿ ಪಿಸಿ ಅಣಕಿಸಿ ನಗೋದು? (ನೆನಪಿಸಿಕೊಂಡು) ಅರೆ ಇದು ಹೋಳಿ ಹುಣ್ಣಿಮೆ ಅಲ್ಲವ? ಇರು ನಿನಗೆ ಮಾಡತೇನೆ………… (ಹೋಳೀ ಹುಣ್ಣಿಮೆಯಲ್ಲಿ ಭಾಗವಹಿಸುವ ಪೋಲೀ ಹುಡುಗರಂತೆ ನಿಂತು ಹಾಡುವನು)

ಎಲೆಗೆಲಗೆ ಕಾಮಾಕ್ಷಿ!
ಕಣ್ಣು ಹೊಡೆಯುವ ದ್ರಾಕ್ಷಿ!!
ನನ್ನ ಪ್ರೀತಿಗೆ ನಿನ್ನ ಎರಡು ಎದೆ ಸಾಕ್ಷಿ!!

(ಬಾಯಿ ಬಾಯಿ ಬಡಿದುಕೊಳ್ಳುವನು)

ಮೇಳ : ಓಹೋ ತುಕ್ರ ರಂಗಿಗೆ ತಗಲಿಕೊಂಡನಪೊ.

ರಂಗಿ : ಎಲಾ ಬಿಕನಾಸಿ!

ತುಕ್ರ : ಕಣ್ಣೋಟ ಆಳ!
ಅದು ಎಸೆವ ಗಾಳ!
ತೋಳೆಂಬ ಕೋಳದಲಿ ಬಿಗಿ ನನ್ನ ಕೊರಳ!!
(ಬಾಯಿ ಬಾಯಿ ಬಡಿದುಕೊಳ್ಳುವನು)

ರಂಗಿ : ಯಾಕಲಾ ಬೇಬರಿಸಿ, ಏನೇನೋ ಹಾಡ್ಹೇಳ್ತಿ, ಕರೀಲಾ ನಮ್ಮಮ್ಮನ್ನ?

ಮೇಳ :  ಓಹೋಹೋ ತುಕ್ರಾ ಸೋತೆಯಲ್ಲೊ!

ತುಕ್ರ : ಹೇ ಕಾಂತೆ, ಗುಣವಂತೆ!
ಬಗೆಹರಿಸು ನನ್ನ ಚಿಂತೆ!
ಕುಣಿಬಾರೆ ನವಿಲಂಥೆ ಎಲೆಲೆ ಕಾಂತೆ!!
(ಮತ್ತೆ ಬಾಯಿ ಬಡಿದುಕೊಳ್ಳುವನು. ಮೇಳ ನಗುವುದು)

ರಂಗಿ : ಎಲಾ ಬಾಂಚೋದ್‌, ಬೇಕಾ ನಿನಗ ಚಪ್ಲಿ ರುಚಿ?

(ಚಪ್ಪಲಿ ಹಿರಿಯುವಳು. ಮೇಳ ಇಬ್ಬರಿಗೂ ಪ್ರೋತ್ಸಾಹಿಸುವುದು. ಅವಳು ಹೊಡೆಯಹೋದಾಗ ತುಕ್ರ ಅವಳ ಕೈಹಿಡಿದುಕೊಳ್ಳುವನು.)

ತುಕ್ರ : ಕೆರೆಯ ಏರಿಯ ಮ್ಯಾಲೆ
ಕ್ಯಾದೀಗಿ ಮೆಳೆಯೊಳಗೆ
ಏನೇನು ನಡೆಯಿತಣ್ಣ| ಗುರುವಾರ!!

ಗೊತ್ತಮ್ಮ ಮಸಲತ್ತು
ಸಂಜೀಯ ಕಸರತ್ತು!
ಸುಸ್ತಾದ ನಮ್ಮ ಮುದಿಪಾದ್ರಿ!!
(ಬಾಯಿ ಬಡಿದುಕೊಳ್ಳುವನು, ಈಗ ರಂಗಿ ತನ್ನ ಗುಟ್ಟು ಗೊತ್ತಾಗಿದೆಯೆಂದು ಅನ್ನಿಸಿ ಕೈಬಿಡಿಸಿಕೊಂಡು ಅಳುವಳು.)

ರಂಗಿ : (ಅಳುತ್ತ) ತುಕ್ರ ನನ್ನಂಥಾ ಹೆಣ್ಣಿನ ಮುಖ ನಿನಗ ಕಾಣದಂಗಾಗ್ಲಿ.

ತುಕ್ರ : ನಿನ್ನ ಕೆನ್ನೆ ಮೇಲೆ ನನ್ನ ಕೈ ಆಡಲಿ.
(ಅವಳ ಕೆನ್ನೆ ಹಿಸುಕುವನು. ಅವಳು ಅವನ ಕೈಗೆ ಏಟು ಹಾಕುವಳು. ಮೇಳ ನಗುವುದು.)

ರಂಗಿ : ನಿನ್ನ ಕಣ್ಣಲ್ಲಿ ಜೇಡಬಲೆ ಹೆಣೀಲಿ.

ತುಕ್ರ : ನಿನ್ನ ತುಟಿ ಮ್ಯಾಲೆ ನನ್ನ ತುಟಿ ಆಡಲಿ.

ರಂಗಿ : ನಿನ್ನ ನಾಲಿಗೆ ಗೆದ್ದಲು ತಿನ್ನಲಿ.

ತುಕ್ರ : ಯಾಕೆ ಪಾದ್ರೀಗಂದರೆ ಸುಮ್ಮಕಿರ್ತೀಯಾ…………….ನನಗಂದರೆ
(ರಂಗಿ ಇನ್ನೂ ದುಃಖಿಸುತ್ತ ಅವನ ಕೆನ್ನೆಗೆ ಏಟು ಹಾಕಿ ಓಡುವಳು. ಅವಳು ಏಟು ಹಾಕಿದಲ್ಲಿ ಕೈಯಾಡಿಸಿಕೊಳ್ಳುತ್ತ ತುಕ್ರ ಭಾವುಕನಾಗುವನು).