(ಹೆಂಡದಂಗಡಿ. ಕುಳ್ಳೀರ, ಸಿಂಗ್ರ, ಒಗ್ಗ, ಡಿಂಗ್ರ ಕುಡಿಯುತ್ತಿದ್ದಾರೆ. ತುಕ್ರ ಸಾಂತ ಬಂದು ಸೇಂದಿ ಕೊಂಡು ಒಂದು ಮೂಲೆಯಲ್ಲಿ ಕೂರುವರು. ಸಿಂಗ್ರ ಓಡಿ ಬಂದುಅಡ್ಡ ಬಿದ್ದೆ ತುಕ್ರಣ್ಣಾಎಂದು ನಮಸ್ಕರಿಸುವನು. ಒಗ್ಗ ಇವರನ್ನೇ ನೋಡಿ ಏನೋ ಹೇಳುತ್ತಿದ್ದವನು ಈಗ ನೇರವಾಗಿ ಮಾತಾಡುತ್ತಾನೆ.)

ಒಗ್ಗ : ಹೇನಪ್ಪಾ ತುಕ್ರ, ಪಟೇಲರ ತಾವ ಓಗಿದ್ದೆಯಂತೆ.

ತುಕ್ರ : ಹೌದು ಕಣ್ಲಾ! ದೇಶದ ಬಗ್ಗೆ ವಿಚಾರಿಸಿಕೊಳ್ಳೋಕ್ಕೆ ಹೋಗಿದ್ದೆ.

ಒಗ್ಗ : (ವ್ಯಂಗ್ಯದಿಂದ)

ಕಂಡೀನಪ್ಪ ಕಂಡಿದ್ದೀನಿ ಮೋಸ ಮಾಡವನ
ಕಳ್ಳತನವ ಸ್ವಂತ ಮಾಡದೆ ಶೂರನಾದವನ
ಗುರುವಿನ ಮಾಲು ಕದ್ದುಕೊಂಬುದು ಹೊಟ್ಟೆ ಹೊರೆಯೋನ
ಮಾತಿನಲ್ಲಿ ತನ್ನ ಬಾವುಟ ಆರಿಸಿಕೊಂಬವನ!
(ಸಿಂಗ್ರನನ್ನು ಬಿಟ್ಟು ಎಲ್ಲರೂ ನಗುವರು)

ತುಕ್ರ : (ತನ್ನಲ್ಲಿ) ಎಲ ಎಲಾ! ಒಂದೇ ದಿನದಲ್ಲಿ ನನ್ನ ಮಕ್ಕಳ ಕಣ್ಣಲ್ಲಿ ನನ್ನ ರೇಟು ಇಷ್ಟು ಕಮ್ಮಿ ಆಗಿಹೋಯ್ತೆ!
(ಜನ ಇನ್ನೂ ನಗಾಡುತ್ತಿದ್ದಾರೆ. ತುಕ್ರ ಒಮ್ಮೆಲೆ ಮೈ ತುಂಬಿದಂತೆ ಕಿಟಾರನೆ ಕಿರುಚುತಾನೆ. ಎಲ್ಲರೂ ಸುಮ್ಮನಾಗುತ್ತಾರೆ)

ತುಕ್ರ : ನನ್ನ ಮಕ್ಕಳ್ರಾ ಸಳುವಳಿ ಅಂದ್ರೇನು ಗೊತ್ತೇನ್ರೊ? ಗಾಂಧೀ ನೇಸನ್‌ ಅಂದರೆ ಗೊತ್ತೇನ್ರೋ? ಇನ್‌ಕ್ಲಬ್‌ ಇಂಡಿಯಾ ಅಂದರೆ ಗೊತ್ತೇನ್ರೋ?

ಲೇ ಒಗ್ಗ, ನನ್ನ ಮಗನೆ ನಿನಗ್ಗೊತ್ತೇನ್ಲೆ ಜಿಂದಾಬಾದ್‌ ದೇಸ ಅಂದರೆ? ನಿನ್ನ ಪಟೇಲನ ಅಜ್ಜೀ ಪಿಂಡಕ್ಕಾದರೂ ಗೊತ್ತೇನೋ ವಂದೇ ಮಾತರಂ ಅಂದರೆ? ಎಷ್ಟು ಮಂದಿ ಇಂಗರೇಜಿಗಾಗಿ ಮನೆ ಮಟ ಕಳಕಂಡವರೆ! ನೋಡ್ರೋ ನನ್ನ ಗೆಣಿಕಾರನ್ನ!
(ಸಾಂತನನ್ನು ತೋರಿಸಿ)

ಹತ್ತು ತಲೆಮಾರು ತಿಂದರೂ ಮುಗೀದಷ್ಟಿದ್ದ ಆಸ್ತೀನೆಲ್ಲಾ ಕಳಕೊಂಡು ಇವತ್ತು ಒಂದೂಟಕ್ಕೆ ಗತಿಯಿಲ್ಲದೆ ಕೂತವನೆ! ಯಾಕಾಗಿ? ದೇಶಕ್ಕಾಗಿ ಕಣ್ರಲೇ-ದೇಶಕ್ಕಾಗಿ! ಲೇ ಒಗ್ಗ ನೀ ಕುಡಿಯೋ ಸೇಂದಿ ಅಣಿ ಮಾಡಿ ಹೇಳ್ತೀನೋ ಪಟೇಲನಿಗೆ ನಾಚಿಕೇನೇ ಇಲ್ಲ. ಇವನನ್ನ ಹಿಡಿದು ಸರಕಾರಕ್ಕೆ ಕೊಡಬೇಕಂತ ಮಸಲತ್ತು ಮಾಡಿದ್ದ. ಸಾಂತ ನನ್ನ ಹತ್ರ ಓಡಿ ಬಂದ. ನಾನು ಪಾರು ಮಾಡ್ದೆ. ಅಲ್ಲವೇನೋ ಸಾಂತ?

ಸಾಂತ : ಔದೌದು.

ತುಕ್ರ : ಮಕ್ಕಳ್ರಾ ನಾನು ಒಮ್ಮೊಮ್ಮೆ ಉಸಿರಾಟ ಕೂಡ ನಿಲ್ಲಿಸಿ ದೇಶದ ಬಗ್ಗೆ ಕಾಳಜಿ ಮಾಡಿದ್ದೀನಿ. ಪಟೇಲ ಒಮ್ಮೆಯಾದರೂ ಮಾಡ್ಯಾನೇನ್ರೆಲೇ?

ಸಿಂಗ್ರ : ಇಲ್ಲ ತಗೀರಿ.

ತುಕ್ರ : ಮಕ್ಕಳ್ರಾ, ಸಾಂತ ಮತ್ತು ನಾನು ಎಂತೆಂಥಾ ಸಳುವಳಿ ಮಾಡಿದ ಈವಂತ ಗೊತ್ತೇನ್ರೋ?

ಮಲ್ಲ : ಸಿಟ್ಟಿಗ್ಯಾಕೇಳ್ತಿ? ಅಂಗೇ ಏಳು ತುಕ್ರಣ್ಣಾ.

ತುಕ್ರ : ಕಿಟ್ಟಿಂಡಿಯಾ ತಗೊ-ನಾವೇ! ಇನ್‌ಕ್ಲಬ್‌ ತಗೋ – ನಾವೇ! ಬೆಳಗಾವಿ ಕಲೆಕ್ಟರ ಯಾವಾಗ್ಲೂ ಏನಂತ ಗೊಣಗತಾನೆ ಗೊತ್ತ? ಏನು ಗಂಟು ಬಿದ್ರಪ್ಪ ಈ ನನ್ನ ಮಕ್ಕಳು ತುಕ್ರ ಮತ್ತು ಸಾಂತ! ಮುಂಬೈಗೆ ಹೋದರಂತೆ. ಇವರು ಹೋಗೋದೇ ತಡ ಕೂಲಿಕಾರರೆಲ್ಲಾ ಕೆಲಸಾ ನಿಲ್ಲಿಸಿ ಬಿಟ್ಟರಂತೆ೧ ಪೋಲೀಸರು ಇವರ ಮ್ಯಾಲೆ ಗುಂಡು ಹಾರಿಸೋದಿಲ್ಲ – ಅಂತ ಹಟ ಹಿಡಿದರಂತೆ! ಹೋಗಲಿ ಅಂದರೆ ಆ ನನ್ನ ಮಗ ತುಕ್ರನನ್ನ ಮಾಮಲೇದಾರನ ಹೆಂಡ್ತಿ ತಬ್ಬಿಕೊಂಡು ಬಿಟ್ಟಳಂತೆ! ಛೇ! ನನ್ನ ಮಕ್ಕಳು ಎಲ್ಲಿದ್ದರೂ ಸಳುವಳಿ ಮಾಡ್ತಾರಲ್ಲಪ್ಪ! ಅಂತ. ನಾನೊಂದು ಹಾಡು ಕಟ್ಟಿದ್ದು ಯಾರಿಗೂ ಗೊತ್ತಿಲ್ಲ. ಆ ಹಾಡು ಕೇಳಿದರೆ ಇಂಗ್ಲೆಂಡ್‌ ರಾಣಿ ಗಾಂಧೀ ಸುಬಾರಸರನ್ನ ಬಿಟ್ಟು ಆ ತುಕ್ರ ಯಾರು? – ಅಂತ ನನ್ನನ್ನೇ ವಿಚಾರಿಸಿಕೊಂಡಿರೋಳು. ಹಾಡಲಾ ಆ ಹಾಡನ್ನೀಗ?

ಸಾಂತ : ಬ್ಯಾಡ ಕಣಪ್ಪಾ. ಹವಳು ಗಾಂಧಿ ಸುಭಾಸನ್ನೇ ವಿಚಾರಿಸಿಕೊಂಡು ಬಿದ್ದಿರಲಿ ಬುಡು.

ಕುಳ್ಳೀರ : (ಕರಗಿ) ಹೌದು ಕಣಪ್ಪಾ, ಇತ್ತಲಗಿಡ ಮದ್ದಲ್ಲ ಹಂದಂಗೆ ನಮಗೇ ತಿಳಿದಿಲ್ಲ ನಮ್ಮ ತುಕ್ರನ ಮೈಮೆ.

ತುಕ್ರ : ನನ್ನ ಮ್ಯಾಲೆ ಏನು ವಾರಂಟೈತಿ ಗೊತ್ತೇನೋ ಒಗ್ಗ? ಹೇಳಲೇನೋ ಸಾಂತ?

ಸಾಂತ : ಏಳಿಬುಡಣ್ಣಾ, ಭಯ ಯಾಕೆ?

ತುಕ್ರ : ನನ್ನ ತಲೆ ತಂದವರಿಗೆ ಐದು ಸಾವಿರ ರೂಪಾಯಿ ಬಹುಮಾನ! ನನ್ನ ತಲೆ ತಗಂಡ್ಹೋಗಿ ಕೊಡೋ ಒಗ್ಗ – ಐದು ಸಾವಿರ ಬೆಳ್ಳೀ ರೂಪಾಯಿ! ಯಾರಿಗುಂಟು ಯಾರಿಗಿಲ್ಲ-ಮಗನೇ-

ಸಿಂಗ್ರ : ಅಯ್ಯೋ ಬುಡಣ್ಣಾ, ಹೈದು ಸಾವಿರ ರೂಪಾಯಾದಾರೆ ವೊಗ್ಗ ಯಾಕೆ ನಿನ್ನ ತಲೆ ಕೊಡಬೇಕು? ನಾನಿಲ್ಲವ? ಬ್ಯಾರೇದವರಿಗೆ ಸಿಕ್ಕೋ ಅಣ ನಮಗೇ ಸಿಕ್ಕಲೇಳು!

ತುಕ್ರ : ಪ್ರಸಂಗ ಹಾಗೆ ಬಂದರೆ ನನ್ನ ತಲೆ ನಾನೇ ಕೊಟ್ಟು ಐದು ಸಾವಿರ ಈಸಿಕೊಳ್ತೀ ನಯ್ಯಾ. ನಿನಗ್ಯಾಕೆ ಕೊಡ್ಲಿ? ಏನೊ ಸಾಂತ?

ಸಾಂತ : ಹಾಯ್ತು ನನ್ನೊಡೆಯಾ?

ತುಕ್ರ : ಸಾಂತ ಅವರನ್ನ ಕರಕೊಂಬರ್ತೀಯಲ್ಲ?

ಸಾಂತ : ವೋ ಹೋ!

ತುಕ್ರ  ಯಾವಾಗ?

ಸಾಂತ : ಇವತ್ತೆ.

ತುಕ್ರ : ಗೊತ್ತಲ್ಲ, ನಾ ಎಲ್ಲಿ ಮಲಗಿರ್ತೇನೆ ಅಂತ? ಆಮ್ಯಾಲೆ ಗೊತ್ತಾಗುತ್ತೆ ನಿಮ್ಮ ಪಟೇಲನಿಗೆ ಈ ತುಕ್ರ ಯಾರೂಂತ….. ಬಾಣ್ಣಾ ಹೋಗೋಣ.
(ಇಬ್ಬರೂ ಹೆಗಲ ಮೇಲೆ ಕೈ ಹಾಕಿಕೊಂಡು ಹಾಡುತ್ತ ಹೊರಡುವರು)

ಬುದ್ಧಿಯ ಲಿಸುವೆ!
ದಡ್ಡ ಪಟೇಲಗೆ-!!
ವಂದೆ ಮಾತರಂವಂದೆ ಮಾತರಂ
ಜಯಭಾರತ ಮಾತೆ