(ಬೆಳಕಾಗಿದೆ. ತುಕ್ರ ಬಾರೆ ಬಾರೆಲೆ ತರುಣಿ ಎಂದು ಕನವರಿಸುತ್ತ ಮಲಗಿದ್ದಾನೆ. ಅಯ್ಯ ಬರುತ್ತಾನೆ.)
ಅಯ್ಯ : (ಮೆಲ್ಲ ನೆ) ತುಕ್ರ, ಏ ತುಕ್ರ…….
ತುಕ್ರ : (ಎಚ್ಚತ್ತು ) ಬಂದರಾ ಅಯ್ಯನೋರೇ?
ಅಯ್ಯ : ಹೌದು ಬಂದು ಹೊರಗೆ ಕಾಯುತ್ತಿದ್ದಾರೆ.
ತುಕ್ರ : ಆಯ್ತು ಬಿಡಿ ಇಗೋ ಹೊರಟೆ. (ಹೊರಗೆ ನೋಡಿ) ಅರೆ ಪೋಲೀಸರು ಬಂದಾರಲ್ಲಾ ಅಯ್ಯನವರೆ!
ಅಯ್ಯ : ಹೌದು. ನೀನು ಹೇಳಿದ್ದು ಅವರೇ ಅಲ್ಲವಾ?
ತುಕ್ರ : ಅಲ್ಲ, ಹೋಗಲಿ, ಪೋಲೀಸರು ಯಾಕೆ ಬಂದಿದ್ದಾರೆ ಅಯ್ಯನವರೇ?
ಅಯ್ಯ : ನಿನ್ನೆ ರಾತ್ರಿ ಪಟೇಲರ ಮನೆ ದರೋಡೆ ಆಗಿದೆ.
ತುಕ್ರ : ಯಾರು ಮಾಡಿದ್ದು.
ಅಯ್ಯ : ಗೊತ್ತಿಲ್ಲ, ನಿನ್ನನ್ನೇ ಹುಡುಕುತ್ತಿದ್ದಾರೆ.
ತುಕ್ರ : ನನಗೂ ದರೋಡೆಗೂ ಏನು ಸಂಬಂಧ?
ಅಯ್ಯ : ಗೊತ್ತಿಲ್ಲಪ್ಪ
(ಪೋಲಿಸರು ಬರುತ್ತಾರೆ. ತುಕ್ರನ ಜುಟ್ಟು ಹಿಡಿದುಕೊಳ್ಳುವರು)
ಪೋಲೀಸ್ : ತುಕ್ರ ಅಂದರೆ ನೀನೇ ತಾನೆ?
ತುಕ್ರ : ಆದರೆ-
ಪೋಲೀಸ್ : (ಒದೆಯುವನು) ಕೇಳಿದಷ್ಟೇ ಬೊಗಳು. ತುಕ್ರ ಅಂದರೆ ನೀನೇತಾನೆ?
ತುಕ್ರ : ಹೌದು.
ಪೋಲೀಸ್ : ಸಾಂತ ಎಲ್ಲಿ?
ತುಕ್ರ : ಗೊತ್ತಿಲ್ಲ ಸ್ವಾಮಿ.
ಪೋಲೀಸ್ : ಗೊತ್ತಿಲ್ಲವ (ಒದೆಯುವನು) ಸಾಂತ ಎಲ್ಲಿ?
ತುಕ್ರ : ಅವರು ಬರಲಿಲ್ಲ ಸ್ವಾಮಿ.
ಪೋಲೀಸ್ : ಯಾರು?
ತುಕ್ರ : ಸಳುವಳಿಯವರು.
ಪೋಲೀಸ್ : ದರೋಡೆ ಆಗೋವಾಗ ನೀನೇನು ಮಾಡ್ತಿದ್ದೆ?
ತುಕ್ರ : ಗೊತ್ತಿಲ್ಲ ಸ್ವಾಮಿ. ಅವರು ಬರಲೇ ಇಲ್ಲ.
ಪೋಲೀಸ್ : (ಒದದು) ಏನು ಮಾಡ್ತಿದ್ದೆ? ಗೆಣಸು ಕರೀತಿದ್ದೆಯಾ?
ತುಕ್ರ : ಕನಸು ಕಾಣುತ್ತಿದ್ದೆ ಸ್ವಾಮಿ.
(ಪೋಲೀಸರು ನಗುವರು)
ಪೋಲೀಸ್ : ಎಳೆದುಕೊಂಡು ನಡೀರಿ ಬೋಳೀಮಗನ್ನ. ಜೇಲಲ್ಲಿಡಿ. ಅಲ್ಲಿ ಬಾಯಿ ಬಿಡತಾನೇನೋ ನೋಡೋಣ. ನಡೀರಿ.
(ತುಕ್ರನನ್ನು ಎಳೇದೊಯ್ಯುವರು)
ಕೊನೆಯಆಸೆ
(ಜೇಲು. ಪೋಲೀಸ್ ಇನ್ಸ್ಪೆಕ್ಟರ್ ಕೂತಿದ್ದಾನೆ. ಸೋತ ತುಕ್ರನನ್ನು ಒಬ್ಬ ಪೋಲೀಸು ಕೋಳ ಹಾಕಿ ಎಳೆದು ತರುತ್ತಾನೆ)
ಇನ್ಸ್ಪೆಕ್ಟರ್ : ಬಾಯಿ ಬಿಟ್ಟನೆ?
ಪೋಲೀಸ್ : ಇಲ್ಲ ಸಾರ್.
ಇನ್ಸ್ಪೆಕ್ಟರ್ : ಯೋ ದ್ರಾಬೆ. ಸರಿಯಾಗಿ ನಿಂತ್ಕೊಂಡು ನಿಜ ಬೊಗಳು. ನಿನ್ನ ಬಿಡತೀನಿ.
ತುಕ್ರ : ನಿಜ ಅಂದ್ರೆ ನನಗೇನೂ ಗೊತ್ತಿಲ್ಲ ಸ್ವಾಮಿ.
ಇನ್ಸ್ಪೆಕ್ಟರ್ : ಸಾಂತ ಮತ್ತವನ ಗ್ಯಾಂಗೆಲ್ಲಿ?
ತುಕ್ರ : ಅವರು ನನ್ನ ಕರೀಲೇ ಇಲ್ಲ ಸ್ವಾಮಿ.
ಇನ್ಸ್ಪೆಕ್ಟರ್ : ಸಾಂತನಿಗೆ ನೀನು ಸೇಂದಿ ಕುಡಿಸಿದೆ ಅಲ್ಲವ?
ತುಕ್ರ : ಹೌದು ಸ್ವಾಮಿ.
ಇನ್ಸ್ಪೆಕ್ಟರ್ : ಅವನು ರಾತ್ರಿ ಬರ್ತೇನೆ ಅಂದ.
ತುಕ್ರ : ಹೌದು ಸ್ವಾಮಿ.
ಇನ್ಸ್ಪೆಕ್ಟರ್ : ಬಂದವನೆಲ್ಲಿದ್ದಾನೆ.
ತುಕ್ರ : ಗೊತ್ತಿಲ್ಲ ಸ್ವಾಮಿ. ಅವನು ನನ್ನ ಕರೀಲಿಕ್ಕೆ ಬರಲೇ ಇಲ್ಲ ಸ್ವಾಮಿ.
ಇನ್ಸ್ ಪೆಕ್ಟರ್ : ಲೋ ದರಿದ್ರದವನೇ, ಕಡೇ ಸಲ ಕೇಳ್ತಿದ್ದೇನೆ, ಈಗ ಹೇಳದೆ ಹೋದರೆ ನಾಳೆ ನಿನ್ನ ಗಲ್ಲಿಗೇರಿಸುತ್ತೇನೆ. ನಾ ಹೇಳಿದ್ದು ಗೊತ್ತಾಗ್ತಿದೆಯ?
ತುಕ್ರ : ಗೊತ್ತಿಲ್ಲ ಸ್ವಾಮಿ.
ಇನ್ಸ್ಪೆಕ್ಟರ್ : ಹಾಗಿದ್ದರೆ ನಿನ್ನ ಕೊನೇ ಆಸೆ ಏನು? ಈಗಲೇ ಹೇಳಿಬಿಡು.
ತುಕ್ರ : ಅವರು ನನ್ನ ಕರೀಲಿಕ್ಕೆ ಬರಲೇ ಇಲ್ಲ ಸ್ವಾಮಿ.
ಇನ್ಸ್ ಪೆಕ್ಟರ್ : ಥೂ ಎಳೆದೊಯ್ಯಿರಯ್ಯಾ. ನಾಳೆ ಗಲ್ಲಿನ ವ್ಯವಸ್ಥೆ ಮಾಡಿ.
(ತುಕ್ರನನ್ನು ಎಳೆದೊಯ್ಯುವರು)
Leave A Comment