(ಗಲ್ಲುಗಂಬ, ತುಕ್ರನ ಹಿಂದಿಬ್ಬರು ಮುಂದಿಬ್ಬರು ಪೋಲೀಸರು. ಮುಂದೆ ಇನ್ಸ್ಪೆಕ್ಟರ್ ನಿಂತಿದ್ದಾನೆ. ಇನ್ಸ್ಪೆಕ್ಟರ್ ತುಕ್ರನ ಮುಂದೆ ಒಂದು ಕಾಗದ ಚಾಚಿ ಪೆನ್ನು ಕೊಡುತ್ತ.)

ಇನ್ಸ್‌ಪೆಕ್ಟರ್ : ಇದರ ಮೇಲೆ ಸಹಿ ಮಾಡು.
(ಈಗ ತುಕ್ರ ನಿಜವಾಗಿ ಹೆದರುತ್ತಾನೆ)

ತುಕ್ರ : ನನಗೆ ಬರೆಯೋದಕ್ಕೆ ಬರೋದಿಲ್ಲ ಸ್ವಾಮಿ.

ಇನ್ಸ್‌ಪೆಕ್ಟರ್ : ಹೌದೋ? ಹಾಗಾದರೆ ಸಹಿ ಬದಲು ಒಂದು ಸೊನ್ನೆ ಬರಿ; ಸಾಕು. ಅದರ ಮೇಲೆ ಏನೇನು ಬರೆದಿದೆ ಗೊತ್ತೊ?

ತುಕ್ರ : ಗೊತ್ತಿಲ್ಲ ಸ್ವಾಮಿ.

ಇನ್ಸ್‌ಪೆಕ್ಟರ್ : ನೀನು ಮಾಡಿದ ದರೋಡೆ, ಖೂನಿ, ಅತ್ಯಾಚಾರ ಮುಂತಾದ ಅಪರಾಧಗಳ ದೊಡ್ಡ ಪಟ್ಟಿಯಿದೆ . ಓದಲೇ?

ತಿಕ್ರ : ಬ್ಯಾಡಿ ಸ್ವಾಮಿ.  ಸೊನ್ನೆ ಎಲ್ಲಿ ಬರೆಯಲಿ?

ಇನ್ಸ್‌ಪೆಕ್ಟರ್ : ಪಟ್ಟಿಯ ಕೆಳಗೆ ಬರಿ.
(ತುಕ್ರ ಬರೆಯತೊಡಗುತ್ತಾನೆ, ಒಳ್ಳೆಯ ಸೊನ್ನೆ ಬರೆಯಬೇಕೆಂದು ಸಾಕಷ್ಟು ಸಮಯ ತಗೊಳ್ಳುತ್ತಾಣೆ. ಕೊನೆಗೂ ಅವನು ಬರೆದ ಸೊನ್ನೆ ಅವನಿಗೆ ತರಪ್ತಿ ನೀಡೋದಿಲ್ಲ; ಖಿನ್ನನಾಗುತ್ತಾನೆ.)
(
ಇನ್ಸೆಪೆಕ್ಟರ್ ಕಾಗದ ಇಸಿದುಕೊಂಡು ಅದರ ಕೆಳಗೆ ತುಕ್ರನ ಹೆಸರು ಬರೆಯಲು ಸಿದ್ಧನಾಗಿ)

ಇನ್ಸ್‌ಪೆಕ್ಟರ್ : ನಿನ್ನ ಸರಿಯಾದ ಹೆಸರೇನಯ್ಯಾ?

ತುಕ್ರ : ಇಲ್ಲ ಸ್ವಾಮಿ.

ಇನ್ಸ್‌ಪೆಕ್ಟರ್ : ಹೇಳಯ್ಯಾ ಅಂದರೆ,

ತುಕ್ರ : ಅಯ್ಯೋ ಕೋಟಿ ಕೋಟಿ ಜನ ನನ್ನಂಥವರಿದ್ದಾರೆ ಸ್ವಾಮಿ. ಯಾರೋ ಒಬ್ಬ ಅಥವಾ ಎಲ್ಲರೂ ಅಂತ ತಿಳಿದುಕೊಳ್ಳಿ. (ಇನ್ಸ್ ಪೆಕ್ಟರ್ ಏನೋ ಬರೆದುಕೊಳ್ಳುವನು. ಅಷ್ಟರಲ್ಲಿ ಮೊದಲ ದೃಶ್ಯದಲ್ಲಿ ಬಂದ ನಾಯಿ ಅವನ ಹತ್ತಿರ ಬರುತ್ತದೆ.)

ಇನ್ಸ್ ಪೆಕ್ಟರ್ : ಇನ್ನೇನಾದರೂ ನಿನಗೆ ಕೊನೇ ಆಸೆ ಇದೆಯಾ?

ತುಕ್ರ : ಎರಡಿದೆ ಸ್ವಾಮಿ. ಒಂದು : ಈ ನಾಯಿ ಜತೆಗೆ ಒಂದೆರಡು ಮಾತು ಆಡಲೇ ಸ್ವಾಮಿ?

ಇನ್ಸ್‌ಪೆಕ್ಟರ್ : ಆಡು.

ತುಕ್ರ : (ನಾಯಿಯ ಹತ್ತಿರ ಹೋಗಿ ದುಃಖದಿಂದ) ಬಾ ತಮ್ಮಾ. ಈ ಪ್ರಪಂಚದಲ್ಲಿ ಹುಚ್ಚು ಕೆರಳದ ಒಂದೇ ಒಂದು ಜೀವ ನೀನು. ಹುಚ್ಚರ ಮಧ್ಯೆ ಇದ್ದೂ ನಿನಗ್ಯಾಕೆ ಇನ್ನೂ ಹುಚ್ಚು ಹಿಡಿದಿಲ್ಲ? ನನ್ನ ಮಾತನ್ನು ನಂಬು ತಮ್ಮಾ-ಹುಚ್ಚು ಹಿಡಿಸದೇ ದೇವರು ನಿನಗೆ ಭಾರೀ ಅನ್ಯಾಯ ಮಾಡಿದ್ದಾನೆ. ನೀನು ಕಚ್ಚಿದರೆ ಜನಕ್ಕೆ ಹುಚ್ಚು ಹಿಡೀತದೆ ಅಂತಾರೆ. ತಪ್ಪು : ಜನ ಸೇರಿ ದಿನಾ ನನ್ನ ಆತ್ಮ ಕಚ್ಚಿದ್ದಾರೆ. ಅದಕ್ಕಾಗಲೇ ಹುಚ್ಚು ಹತ್ತಿ ಏನೇನೋ ಕನವರಿಸುತ್ತ ಇದೆ . ನನಗದು ಕೇಳಿಸುತ್ತದೆ. ಆದರೆ ಅರ್ಥವಾಗೋಲ್ಲ. ನನಗೂ ದೇವರು ಹುಚ್ಚು ನಾಯಿಯ ನಾಲಿಗೆ ಕೊಡಬಾರದಿತ್ತೆ? ಆದರೆ ಯಾರನ್ನ ಕಚ್ಚಲಿ? ಎಲ್ಲರಿಗೂ ಆಗಲೇ ಹುಚ್ಚು ಹಿಡಿದಿದೆ.
(ಸಾವಿನ ಭಯದಲ್ಲಿ ಮಾತಿನ ತರ್ಕ ತಪ್ಪುತ್ತ ಹೋಗುತ್ತದೆ)

ನಿನ್ನ ಕಂಡರೆ ನನಗೆ ಬಹಳ ಆನಂದವಾಗುತ್ತದೆ.  ನಾಯಿ ತಮ್ಮಾ, ನೀನು ನನ್ನ ಕಡೆ ನೋಡಿದಾಗಲೆಲ್ಲ ‘ಅಣ್ಣಾ’ ಅಂದ ಹಾಗಿರುತ್ತದೆ. ಹಾಗೆ ಜಾಸ್ತಿ  ನೋಡಬೇಡ. ನನಗೆ ನಿನ್ನ ನೋಟ ನೆನಪಾಗಿ ದುಃಖವಾಗುತ್ತದೆ . ಆದರೆ ಖಂಡಿತ ನೀನ್ಯಾವನೋ ಪೂರ್ವಜನ್ಮದ ಬಂಧುವಾಗಿರಬೇಕು. ಇಲ್ಲದಿದ್ದರೆ ಈ ಪರಿ ನಾವು ಪರಸ್ಪರ ಮಿಡಿಯುತ್ತಿರಲಿಲ್ಲ. ಇದು ನಾನು ಕಟ್ಟಿದ ಲೋಕವಲ್ಲ, ಯಾರ ಓ ಕಟ್ಟಿದ್ದು. ನಾನಾಗಿ ಇಲ್ಲಿಗೆ ಬಂದವನೂ ಅಲ್ಲ. ಯಾರೋ ತಳ್ಳಿದ್ದು. ಆ ತಳ್ಳಿದವ ಯಾರನ್ನೋದು ನನ್ನ ದಿವಂಗತ ತಾಯಗರ್ಭದಲ್ಲಿ ಹೂತು ಹೋಗಿದೆ . ಈಗ ತಬ್ಬಲಿ ನನ್ನ ಆತ್ಮ. ಆಗಲೇ ನೀನೇ ನೋಡಿದೆಯಲ್ಲ. ನನಗೊಂದು ಸೊನ್ನೆ ಬರೆಯಲು ಅವಕಾಶ ಕೊಟ್ಟರು. ಸೊನ್ನೆಯನ್ನ ದುಂಡಾಗಿ ಬರೆಯಬೇಕಂತ ತುಂಬ ಪ್ರಯತ್ನ ಮಾಡಿದೆ . ಆಗಲಿಲ್ಲ. ಅದು ದುಂಡಾಗಿದ್ದರೆ ನನಗೆ ಬಹಳ ಸಂತೋಷವಾಗುತ್ತಿತ್ತು. ನನ್ನ ಭಾಗ್ಯದಲ್ಲಿ ಅದೂ ಇಲ್ಲ, ಎಲಾ ಲೋಕವೇ, ನಾನು ಸತ್ತ ನಂತರ ತುಸು ಕಾಲ ನೀನು ಬಂಜರಾಗಬಹುದು. ಆಮೇಲೆ ಮಳೆ ಬಂದು ನಿನ್ನ ಪಾತಳಿಯ ಮೇಲೆ ಹೊಸ ಹುಲ್ಲು ಹುಟ್ಟುತ್ತದೆ. ಎಳೆ ಕುದುರೆ, ದನ ಕರು ಅಲ್ಲಿ ಸುಳಿದಾಡುತ್ತವೆ. ತುಳಿದಾಡುತ್ತವೆ. ಮರೆಯಲಾಗದ ತಂಪನ್ನು ಅನುಭವಿಸುತ್ತವೆ.  ಆದರೆ ಒಂದು ಬಾರಿ ಅವೆಲ್ಲ ಹುಲ್ಲಿಗೆ ಕೃತಜ್ಞತೆ ಹೇಳಿದ್ದರೆ ಚೆನ್ನಾಗಿತ್ತು.

ಎಲ್ಲಾ ದಾರಿಗಳ ಒಡೆಯನಾದ ಶಿವಲಿಂಗ ಸ್ವಾಮಿ, ಸೂರ್ಯನ ಮೂಲಕ ನಿನ್ನ ಪ್ರಕಾಶ ಈ ಗಲ್ಲುಗಂಬದ ಮೇಲೆ ಬಿದ್ದ ಹಾಗೆಯೇ ಗಲ್ಲುಗಂಬದಾಚೆ ನಾನು ಹೋಗಬೇಕಾದ ಸ್ಥಳದ ಮೇಲೂ ಬಿದ್ದಿರಬೇಕಲ್ಲವೆ? ಅದನ್ನಷ್ಟು ತೋರಿಸಿದ್ದರೆ ಚೆನ್ನಾಗಿತ್ತು.  ಈ ನನ್ನ ತಮ್ಮ ನಾಯಿಗೆ ಒಂದೆರಡು ಬುದ್ಧಿ ಮಾತು ಹೇಳಬಹುದಾಗಿತ್ತು.

ನನ್ನ ಪ್ರೀತಿಯ ತಮ್ಮಾ, ನಾನಂತೂ ಈ ಕನಸುಗಳ ಬೆನ್ನ ಹಿಂದೆಯೇ ಇಷ್ಟು ವರ್ಷ ಬದುಕಿದೆ. ಅವನ್ನು ಕುರಿತು ಹಾಡಿದೆ, ಕುಣಿದೆ, ಪ್ರತಿಭಟಿಸಿದೆ, ಸಾಪ ಹಾಕಿದೆ, ಈಗ ಇಲ್ಲಿದ್ದೇನೆ. ನನ್ನ ಅನುಭವವನ್ನು ನಿನ್ನಂಥ ಎಳೆಯರಿಗೆ ಹೇಳಬೇಕು. ಹೇಳೋದಕ್ಕೆ ನಾಚಿಕೆ ಯಾಕೆಂದರೆ ನನ್ನ ಕನಸುಗಳಿಗಾಗಲೇ ವಯಸ್ಸಾಗಿದೆ.  ಕಣ್ಣು ಕಾಣೋದಿಲ್ಲ. ಹಲ್ಲಿಲ್ಲ, ಮಾತಾಡೋದಕ್ಕೆ ಬಾಯಿ ತೆಗೆದಾಗಲೆಲ್ಲಾ ಗುರು ಗುರು ಅನ್ನೋದು ನಿನಗೂ ಕೇಳಿಸುತ್ತದಲ್ಲವೆ? ಅವೆಲ್ಲ ಬಂಜೆಗನಸು. ಯಾಕೆಂದರೆ ನನಗವು ಸೊನ್ನೆ ಬರೆಯೋದನ್ನ ಕಲಿಸಲೇ ಇಲ್ಲ. ನೀನು ಮಾತ್ರ ನೆನಪಿಡು ತಮ್ಮಾ- ನೀನು ನಡೆವ ದಾರಿಯ ಇಕ್ಕೆಲಗಳಲ್ಲಿ ಸಮೃದ್ಧಿಯಾಗಿ ಬೆಳೆದ ಕನಸುಗಳು ಇರುವಂತೆ ನೋಡಿಕೋ. ಹಾಗೆಯೇ ಅವು ಕೊನೇ ಪಕ್ಷ ನಿನಗೊಂದು ಸುಂದರ ಸೊನ್ನೆ ಬರೆಯುವಷ್ಟನ್ನಾದರೂ ಕಲಿಸುವಂತೆ ನೋಡಿಕೋ. ತಿಳಿಯಿತಲ್ಲ? ಇನ್ನು ಹೊರಡು.
(ಇನ್ಸ್ಪೆಕ್ಟರಿಗೆ)
ಸ್ವಾಮಿ ಒಂದು ಬೆಳ್ಳೀ ರೂಪಾಯಿ ಕೊಡುತ್ತೀರಾ?
(ಇನ್ಸ್ಪೆಕ್ಟರ್ ಕೊಡುವನು )
ಸ್ವಾಮೀ ಭಾಗವತರೇ .
(ಭಾಗವತ ಬರುವನು.)
ಭಾಗವತರೇ, ನನ್ನ ಕಥೆ ಹೇಳಿದ್ದಕ್ಕೆ ಹಿಂದೊಮ್ಮೆ ನಿಮಗೆ ಅಂಗಿಯ ಗುಂಡಿ ಕೊಟ್ಟು – ಅದನ್ನು ವಾಪಸ್ಸು ಕೊಟ್ಟಾಗ ಬೆಳ್ಳಿ ರೂಪಾಯಿ ಕೊಡುತ್ತೇನಂತ ಹೇಳಿದ್ದೆ. ನೆನಪಿದೆಯಾ?

ಭಾಗವತ : ಓಹೋ. ಅದಾಗಲೇ ನನ್ನ ಕಥೆಯಲ್ಲಿ ದಾಖಲಾಗಿದೆ.

ತುಕ್ರ : ಆಯ್ತು. ಅದನ್ನು ಕೊಡಿ . (ಭಾಗವತ ಕೊಡುವನು)
ತಗೊಳ್ಳಿ ಬೆಳ್ಳಿ ರೂಪಾಯಿ. ನೀವು ದಯಮಾಡಿ ಇನ್ನೊಂದು ಕೆಲಸ ಮಾಡಬೇಕು.  ಈ ಜಗತ್ತು ನಡೆಯೋ ದಾರಿಯನ್ನ ರಿಪೇರಿ ಮಾಡುವಷ್ಟು ದೊಡ್ಡ ಮನುಷ್ಯ ನಾನಲ್ಲ. ಆದರೆ ಭಯ ಮತ್ತು ಅಪಾಯವಿಲ್ಲದೆ ನೆಮ್ಮದಿಯಿಂದ,  ಸಾಧ್ಯವಾದರೆ ಭುಜದ ಮ್ಯಾಲೆ  ತಲೆ ಇಟ್ಟುಕೊಂಡು ನಡೆಯೋದು ಸಾಧ್ಯವೇ ಅಂತ ನೋಡಿದೆ. ನನಗಾಗಲಿಲ್ಲ. ಮುಂದಿನವರಿಗೆ ಪ್ರಯತ್ನ ಮಾಡಲಿಕ್ಕೆ ಹೇಳಿ. ನಿಮಗೇನಾದರೂ ದೇವರು ಸಿಕ್ಕರೆ ನೀನು ತುಕ್ರನಿಗೆ ನ್ಯಾಯ ಒದಗಿಸಲಿಲ್ಲ ಅಂತ ಧೈರ್ಯವಾಗಿ ಹೇಳಬೇಕು. ಹಾಗೆಯೇ ಇದನ್ನೂ ನೆನಪಿಡಿ, ಆ ಪಟೇಲ ಸತ್ತರೆ ಹುಲ್ಲಿರುವಲ್ಲಿ ಹೂಳಬೇಡಿ. ಕೊನೇ ಮಾತು: ಸ್ವರ್ಗಕ್ಕೆ ಲಾಯಕ್ಕಾದವರು ಯಾರಾದರು ಸಿಕ್ಕರೆ ಅವರ ಕೈಯಲ್ಲಿ ಒಂದು ಕೊಳಲು ಕೊಟ್ಟು ಕಳಿಸಿಯಪ್ಪ. ಗಾಂಧೀಜಿ ಬರೋತನಕ ಒಬ್ಬನೇ ಇರೋದಕ್ಕೆ ಬೇಜಾರು. ಅವರು ಬರೋತನಕ ಹುಲ್ಲಿನ ಹಾಡನ್ನಾದರೂ ನುಡಿಸುತ್ತಿರಬಹುದು.
(ಇನ್ಸ್ಪೆಕ್ಟರಿಗೆ)
ಆಯ್ತು ಸ್ವಾಮೀ ನಾನು ಸಿದ್ದ.

(ಮುಗಿಯಿತು)