(ಸಾಂತ, ತುಕ್ರ ಊರ ಹೊರಗೆ ಬರುತ್ತಾರೆ . ಬಹುಶಃ ತುಕ್ರ ಓಡಿಹೋಗದಿರಲೆಂದು ಸಾಂತ ಅವನ ಕೈ ಹಿಡಿದಿದ್ದಾನಾದ್ದರಿಂದ ತುಕ್ರ ಇನ್ನೂ ಆತಂಕದಲ್ಲೇ ಇದ್ದಾನೆ)

ಸಾಂತ : ಹಲ್ಲವಯ್ಯಾ, ಗುರುವಿನ ಮಾಲನ್ನೇ ಕದ್ದುಕೊಂಬಂದೆಯಲ್ಲ, ಹಿದು ನ್ಯಾಯವ?

ತುಕ್ರ : ಸಾಂತಣ್ಣಾ, ನೀನೂ ಕಳ್ಳ, ನಾನೂ ಕಳ್ಳ. ಕಳ್ಳತನದ ಮ್ಯಾಲೆ ಆಣಿ ಮಡಿ ಹೇಳಣ್ಣ, ಆ ದಿನ ನೀನು ನನ್ನ ಕೈಲಿ ಗಂಟು ಕೊಟ್ಟು ಒಳಕ್ಕೆ ಹೋದೆಯಲ್ಲಾ,- ನನ್ನ ಸ್ಥಳದಲ್ಲಿ ನೀನೇ ಇದ್ದಿದ್ದರೆ ಏನು ಮಾಡುತ್ತಿದ್ದೆ? ನನ್ನ ಬಗ್ಗೆ ಯೋಚ್ನೆ ಮಾಡು : ಕೈಯಲ್ಲಿ ಭರ್ತಿ ಮಾಲು ತುಂಬಿದ ಗಂಟು! ಸುತ್ತ ಕತ್ತಲು! ಗಂಟಿನ ಮಾಲೀಕ ನೀನು ಇಲ್ಲ! ಪೋಲಿಸ್ನೋರು ಎಲ್ಲಿಂದ ಯಾವಾಗ ಗುಂಡು ಹಾಕ್ತಾರೆ ಅಂತ ಗೊತ್ತಿಲ್ಲ! ಈಗ ನಾನೇನು ಮಾಡಬೇಕು? ನಿಜ ಹೇಳ್ತೀನಣ್ಣಾ : ನನ್ನ ಸ್ಥಳದಲ್ಲಿ ದೇವರು ಇದ್ದಿದದರೂ ನನ್ನ ಹಾಗೇ ಓಡಿ ಹೋಗ್ತಿದ್ದ! ಅಲ್ಲವೆ?

ಸಾಂತ : ಎಲಾ ಬೆರಿಕೀ! ಮಾತಿನಲ್ಲಿ ಮತ್ತೆ, ನಿನ್ನ ಬಾವುಟಾನೆ ಹಾರಿಸಿದೆಯಲ್ಲಪ್ಪ!

ತುಕ್ರ : ಬರೀ ಮಾತಲ್ಲ ಸಾಂತಣ್ಣ, ಇವು ನನ್ನ ಕರುಳಿನ ತುಂಡುಗಳು ಅಂತ ನೀನು ನಂಬಬೇಕು . ಹಿಂದೆ ಕಳ್ಳತನ ಮಾಡೋವಾಗ ನಿನ್ನನ್ನ ಸರಿಯಾಗಿ ಕಂಡಿರಲಿಲ್ಲ. ಪಟೇಲನ ಮನೇಲಿ ನೋಡಿದೆನಲ್ಲ. ಆಗಲೇ ನನಗೆ ಗೊತ್ತಾಗಿ ಬಿಟ್ಟಿತು!

ಸಾಂತ : ಹೇನಂತ?

ತುಕ್ರ : ನೀ ನನ್ನ ಅಣ್ಣ ಅಂತ.

ಸಾಂತ : ಬುರುಡೆ ಬುಡಬ್ಯಾಡಯ್ಯಾ………

ತುಕ್ರ : ಏನಣ್ಣಾ ಇಂಗಂತೀಯಾ? ಒಡಹುಟ್ಟ ಇದ ಹಣ್ಣ ಅಲ್ಲದೆ ಹಿನ್ಯಾರಿದ್ದರೂ ಪಟೇಲನ ಮುಂದೆ ನನ್ನ ಮಾನ ಉಳಿಸ್ತಿದ್ದರ? ತುಕ್ರ ಅಲ್ಲ, ಟಕ್ರ ಅಂತ ನಾಟಕ ಮಾಡಿ ನನ್ನ ಬದುಕಿಸಿದೆಯಲ್ಲ-ಬಿಡ್ತೀನ ನಿನ್ನ? ಹಣ್ಣಾ- (ಸಾಂತನ ಕೈ ಹಿಡಿದು) ಇವು ನಿನ್ನ ಕಾಲು ಅಂತ ತಿಳಿದು ಹಿಡಕೊಂಡು ಕೇಳ್ತೀನಣ್ಣಾ – ಸಾಂತಣ್ಣಾ ನಾ ನಿನ್ನ ತಮ್ಮ. ತಪ್ಪು ಮಾಡಿದ್ದೇನೆ, ಕ್ಷಮಿಸಣ್ಣಾ…… (ಅಳುವನು)

ಸಾಂತ : ಛೇ ಛೇ ಹೇನಯ್ಯಾ ಹಿದು!

ತುಕ್ರ : (ಇನ್ನೂ ಅಳುತ್ತ) ಈ ತಮ್ಮನನ್ನು ಕ್ಷಮಿಸಿದೀನಿ ಅಂತ ಒಂದ್ಸಾರಿ ಹೇಳಣ್ಣಾ……

ಸಾಂತ : ಹಾಯ್ತಪ್ಪ ನಿನಗೆ ಸಮಾಧಾನವಾಗೊವಂಗಿದ್ರೆ ಅಂಗೇ ಏಳೋವಾ…..ಅದ್ಸರಿ ಗಂಟಲ್ಲಿರೋ ಮಾಲು ಹೇನ್ಮಾಡಿದೆ? ಮಾರಿದ ಹಣ ಹೆಲ್ಲಾ ಕರಗಿತ? ಇನ್ನೂ ಇದೆಯ?

ತುಕ್ರ : ಓ ಅದೊಂದು ದೊಡ್ಡ ಕಥೆ. ಗಾಂಧೀ ಕಥೆಯಷ್ಟು ದೊಡ್ಡದಲ್ಲ ಅಂದ್ಕೋ, ಆದರೂ ನನ್ನ ಜೀವನದಲ್ಲೂ ಒಂದು ಸಣ್ಣ ಕಥೆ ನಡೀತಣ್ಣಾ : ಅಲ್ಲಿಂದ ಗಂಟು ಹೊತ್ತುಕೊಂಡೇ, ಅದೇ ನೀ ಕೊಟ್ಟ ಗಂಟು ಹೊತ್ತುಕೊಂಡೇ, ಓಡಿ ಓಡಿ ಬಂದೆ ನೋಡು – ಬತ್ರಿರಬೇಕಾದರೆ – ಸೂರ್ಯೋದಯ ಆಗ್ತಿದೆ, – ದೂರದ ನಮ್ಮೂರು ಕಾಣಿಸ್ತಿದೆ. ನನಗೆ ಒಂದೇ ಸಮ ಏದುಸಿರು ಮಾರಾಯಾ- ಆವಾಗ ಎದುರಿಗೆ ದೇವರು ಕೈ ಊರಿಕೊಂಡು ಬಂದಂಘೆ ಒಂದು ನಾಯಿ ಬರ್ತಿದೆ೧

ಸಾಂತ : ನಾಯಿ?

ತುಕ್ರ : ಹೂ ಕಣಣ್ಣಾ ನಾಯಿ! ಎಂಗಿತ್ತು ಅಂತೀಯಾ? ಥೇಟ್‌ ನಾಯ ಈ ಅಂಗೇ ಅದೆ! ಅದನ್ನ ನೋಡಿದ್ದೇ ನನಗೆ ಜ್ಞಾನ ಓದಯ ಆಯ್ತು! ಮರೀಬೇಡಣ್ಣಾ ಆ ಕಡೆ ಸೂರ್ಯೋದಯ, ಈ ಕಡೆ ನನ್ನ ತಲೇಲಿ ಜ್ಞಾನೋದಯ! “ಎಲ ಎಲಾ” ಈ ನಾಯಿಗೂ ನನಗೂ ಏನು ವ್ಯತ್ಯಾಸ ಅದೆ? ಕಳ್ಳನಾಗಿ ನಾನು ನಾಯೀ ಕೆಲಸಾನೇ ಮಾಡ್ತಾ ಇದ್ದೀನಲ್ಲಾ! ಈ ನಾಯಿ ಜೀವನಕ್ಕೆ ದಿಕ್ಕಾರ, ನಾನು ಮಾಡ್ತಿರೋದು ತಪ್ಪು, ಇನ್ನು ಮೇಲೆ ಕಳ್ಳತನ ಮಾಡೋದಿಲ್ಲ” ಅಂತ ನಾಯೀನ್ನ ಮುಟ್ಟಿ ಪ್ರಮಾಣ ಮಾಡಿದೆ. ಆಗ ನೋಡಣ್ಣ ಮನಸ್ಸಿಗೆ ಎಷ್ಟು ಸಂತೋಷ ಆಯ್ತು ಅಂಧರೆ ಗಂಟಲ್ಲಿತ್ತಲ್ಲ ಎಲ್ಲಾ ಮಾಲು ತಗೊಂಡು ನಿನ್ನ ಹೆಸರು ಹೇಳಿ ಯಾರ್ಯಾರಿಗೋ ದಾನ ಮಾಡಿಬಿಟ್ಟೆ!

ಸಾಂತ : ಹಂದರೆ ನಿನ್ನ ತಾವ ಈಗೇನೂ ವುಳಿದಿಲ್ಲ ಅನ್ನು.

ತುಕ್ರ : ಇಲ್ಲಣ್ಣ.

ಸಾಂತ : ಅಂಗಿದ್ದರೆ ಒಟ್ಟೇಪಾಡಿಗೇನು ಮಾಡಿಕೊಂಡಿದ್ದೀಯಾ?

ತುಕ್ರ : ಏನೊ ಅಷ್ಟೋ ಇಷ್ಟೋ ಗಾಂದಿ ಜಿಂದಾಬಾದ್‌ ಕಿಟ್ಟಿಂಡಿಯಾ ಮಾಡಿಕೊಂಡಿದ್ದೀನಿ ಕಣಣ್ಣಾ. ಅಂದಂಗೆ ಸಾಂತಣ್ಣಾ, ನಾ ಓಡಿ ಬಂದ ಮ್ಯಾಕೆ ನೀನೇನ್‌ ಮಾಡ್ದೆ?

ಸಾಂತ : ಹದೂ ಕತೇನೇ ಹನ್ನು. ಹಿನ್ನಷ್ಟು ತರ್ತಿನಿರು ಹಂತ ಹೊಳಕ್ಕೆ ಓದೆನಲ್ಲ, ಹಿನ್ನೊಂದು ಗಂಟು ಕಟ್ಟಿಕೊಂಡು ಬತ್ರ ಇದ್ದೆ, ಹದೆಂಗೋ ಮನೆ ಎಂಗ್ಸಿಗೆ ಹೆಚ್ಚರಾಗಿ ಕಿಟಾರನೆ ಕಿರಿಚ ಇತು ! ಮನೆ ಮಂದಿ ಉಸಾರಾಗಿ ಎದ್ದು ಬಂದರು! ಎಂಗೊ ಹೇನೋ – ಹಾವೇಸ ಬಂತು ನೋಡು : ಗಾಂಧೀಕಿ ಜಿಂದಾಬಾದ್‌ ಅಂದೆ! ಮನೆ ಮಂದಿ ಹೆಲ್ಲಾರು – ತಣ್ಣಗಾದರು! ನಾನೂ ಒಬ್ಬ ಸಳುವಳಿಕಾರ ಅಂದುಕೊಂಡರಪ! ಹಂದುಕೊಡದ್ದೆ “ಓಗು ಓಗು ಓಡಿ ಓಗು” ಅಂದರು! ಬದುಕಿದೆ ಹಂತ ನಾನು ಮುಂಬಾಗಿಲಿಂದ ಬರ್ತಿದ್ದರೆ “ಬೇಡ ಬೇಡ ಇತ್ತಲ  ಬಾಗಿಲಿಂದ ಓಡಣ್ಣಾ” ಹಂತಂದು ಅವರೆ ದಾರಿ ತೋರಿದರಪ್ಪ! ಸಾಲದ್ದಕ್ಕೆ ಮನೆ ಯಜಮಾನ ನೂರು ರೂಪಾಯಿ ಬೇರೆ ಕೊಟ್ಟನಪ್ಪ!

ತುಕ್ರ : ಅಣ್ಣಾ ನೀನು ಸಳುವಳಿಯವನ?

ಸಾಂತ : ಹೇನೋ ಹಾವಾಗೀವಾಗ ನಾನೂ ಕಿಟ್ಟಿಂಡಿಯಾ ಮಾಡತಿವ್ನಿ.

ತುಕ್ರ : (ಸಾಂತನ ಕೈಹಿಡಿದುಕೊಂಡು) ಸಾಂತಣ್ಣಾ, ನೀನು ಒಪ್ಪಿಗೆ ಕೊಡಲೇ ಬೇಕು.

ಸಾಂತ : ಹೊಪ್ಪಿಗೆ? ಹೇನಕ್ಕೆ?

ತುಕ್ರ : ನಿನ್ನ ದಾಸನಾಗಲಿಕ್ಕೆ.  ನಿನ್ನ ದಾಸಾನುದಾಸನಾಗಿ ನನ್ನ ಜೀವನ ಸಾರ್ಥಕ ಮಾಡಿಕೋ ಬೇಕು ಅಂತಿದ್ದೇನೆ. ದಯಮಾಡಿ ದೊಡ್ಡ ಮನಸು ಮಾಡಿ ನಿನ್ನ ದಾಸನ್ನ ಮಾಡಿಕೊಳ್ಳಣ್ಣ!

ಸಾಂತ : ಛೇ ಛೇ ………….

ತುಕ್ರ : ದಿನಾಲು ನಿನ್ನ ಕಾಲೊತ್ತಿ ನಿಟ್ಟುಸಿರು ಬಿಡೋದಕ್ಕಾದರು ಅವಕಾಶ ಕೊಟ್ಟರೆ ಸಾಕು. ಅದೇ ನನ್ನ ಪುಣ್ಯ ಅಂದುಕೋತ ಈನಿ (ಅಳುವನು) ದಯಮಾಡಿ ಅಪ್ಪಣೆ ಕೊಡಣ್ಣಾ.

ಸಾಂತ : ಅಂಗಂದರೇನ್‌ ಮಾಡ್ಲಿ?

ತುಕ್ರ : ನಿನ್ನ ತಮ್ಮ ನನ್ನನ್ನೂ ಸಳುವಳೀಗಿ ಸೇರಿಸ್ಕೊ.

ಸಾಂತ : ಇಂಗ? ಸರಿ ಬುಡು, ನೀನೂ ಸೇರ್ಕೊ ಹದ್ಕೇನಂತೆ!

ತುಕ್ರ : ಅದ್ಸರಿ ಸಳುವಳಿ ಅಂದರೆ ಏನೇನ್ಮಾಡ್ತೀರಿ?

ಸಾಂತ : ಪೋಸ್ಟ್‌ ಡಬ್ಬ ಹೊಡೀತೀವಿ, ಗಾಂಧೀಕಿ ಜೈ ಹಂತೀವಿ. ಜೆಂಡಾ ಆರಿಸ್ತೀವಿ. ಬಾಂಬ್‌ ಆಕ್ತೀವಿ………… ದೊಡ್ಡವರ ಮನೆ ಲೂಟಿ ಮಾಡ್ತೀವಿ.

ತುಕ್ರ : ಸಾಂತಣ್ಣಾ, ನಮ್ಮೂರಲ್ಲಿ ಯಾವಾಗ ಸಳುವಳಿ ಮಾಡೋಣ?

ಸಾಂತ : ಯಾವಾಗಂದರೆ? ಯೀಗಂದರೆ ಯೀಗ್ಲೆ, ಹಾಗಂದರ ಹಾಗ್ಲೇ………..

ತುಕ್ರ : ನಿನ್ನ ಜೊತೆಗಾರರು ಬ್ಯಾಡವಾ?

ಸಾಂತ : ಬೇಕು. ಬೇಕಂದರೆ ಹೀವತ್ತೇ ಕರಿಸ್ತೀನಿ.

ತುಕ್ರ : ಇವತ್ತೇ ರಾತ್ರಿ ನಾವು ಸಳುವಳಿ ಮಾಡಬೇಕು. ಸಾಂತಣ್ಣಾ,- ನಿನ್ನಗ್ಗೊತ್ತಿಲ್ಲ ನಮ್ಮ ಪಟೇಲ ಎಂಥವನು ಅಂತ. ನನ್ನ ಮಗ ಎಂಥಾ ಶ್ರೀಮಂತ ಅಂತೀಯ! ಪೆಟ್ಟಿಗೆ ತುಂಬ ಆಭರಣ, ಹಂಡೆ ತುಂಬ ಹಣ……..

ಸಾಂತ : ಅದ್ನೆಲ್ಲಾ ಹೆಲ್ಲಿಟ್ಟವನ್ನೆ ನನ್ನ ಮಗ?

ತುಕ್ರ : ಅದೆಲ್ಲಾ ನಿನಗ್ಯಾಕೆ? ನನಗೊತ್ತು. ಕೊಟ್ಟಿಗೇಲಿ ಮೇವಿನ ಕಟ್ಟೆ ಇಲ್ಲವೆ? ಅದೇ ಅವನ ತಿಜೋರಿ ಜಾಗ . ಬಾಗಿಲು ಆ ಕಡೆಗಿದೆ. ನೀನು ನಿನ್ನ ಜೊತೆಗಾರರ ಜೊತೆ ಬಾ. ನಾನು ಊರ ಹೊರಗಿನ ಮಠದಲ್ಲಿ ಮಲಗಿರ್ತೀನಿ. ನೀನು ಬಂದು ಒಂದು ಬಾರಿ ಗಾಂಧಿ ಜಿಂದಾಬಾದ್‌ ಅಂದರೆ ಸಾಕು. ನಾನೆದ್ದು ಬರ್ತೀನಿ. ಸಳುವಳಿಗೆ ಸಳುವಳೀನೂ ಆಯ್ತು. ಪಟೇಲನಿಗೆ ಬುದ್ಧಿ ಕಲಿಸಿದ ಹಾಂಗೂ ಆಯ್ತು. ಏನಂತೀಯಾ?

ಸಾಂತ : ಹೋ ಹೋ!  ಹಿವತ್ತೇ ಗಾಂಧಿ ಜಿಂದಾಬಾದ್‌!

ತುಕ್ರ : ಇಂಗನ್ನು. ಬಾ ಒಂಚೂರು ಗಾಂಧಿ ಹೆಸರಲ್ಲಿ ಸೇಂದಿ ಕುಡಿಯೋಣ. ಕುಡಿಯೋ ವಾಗ ನಾ ಏನೇನೋ ಅಂತೀನಿ-ಕಾಂಗ್ರೆಸ್‌ ನೋಡು, -ಮನಸ್ಸಿಗೆ ಹಚ್ಚಿಕೋ ಬೇಡಣ್ಣಾ……. ಬಾ.
(ಹೋಗುವರು)