ಮೇಳ : ಎಷ್ಟೆಲ್ಲ ತಿಳಿದವರು ಇಷ್ಟು ಹೇಳಿರಿ ಸಾಕು
ಹೆಣ್ಣೆಂದರೇನು ಸ್ವಾಮಿ?
ಹೊಳೆದರೆ ಹೇಳಿರಿ ಇಲ್ಲದಿದ್ದರೆ ಬೇಡ
ನಾನೇ ಹೇಳುವೆ ಕೇಳಿರಿ.

ಹೆಣ್ಣು ಅಂದರೆ ಶಿವನು ಗಂಡಸಿಗೆ ಮಾಡಿರುವ
ದಿನನಿತ್ಯ ನೋಯುವ ನೋವಲ್ಲವೆ?
ಹುಣ್ಣಿನ ನೋವನ್ನ ಅಮಲಾಗಿ ಕಲ್ಪಿಸುವ
ಗಂಡಸಿನ ತಲೆ ಅದಕು ಹಿರಿದಲ್ಲವೆ?

ಸೇಂದಿಗು ಹೆಂಗಸಿಗು ಫರಕೊಂದು  ಉಳಿದೈತಿ
ಸೇಂದಿಗೆ ಬಾಯಿಲೊಲ, ಹೌದಲ್ಲವೆ?
ಹೆಣ್ಣು ಬಲೆ ವಾಚಾಳಿ, ಗೋಳು ಬೀಸುವ ಗಿರಣಿ,
ನಮ್ಮ ಧರಣಿಯ ಹಾಗೆ ಅವಳಲ್ಲವೆ?

ಸದ್ದುಗದ್ದಲ ಗೌಜು ಕಿರಿಕಿರಿಯ ದಿನಚರಿ
ಸಂಸಾರವೆಂದರೆ ಇದೆ ಅಲ್ಲವೆ?
ಸಂಸಾರವಿಲ್ಲದೆ ಗಂಡಸಿನ ಜನ್ಮಕ್ಕೆ
ಕೊಂಚವಾದರು ಅರ್ಥ ಇದೆಯೆ? ಹೇಳಿ.

ಮೇಳ ೧ : ಎದ್ದಿರಾ ತುಕ್ರಣ್ಣ ನಮಸ್ಕಾರ.

ತುಕ್ರ : ಇದಪ್ಪ ಸಂಸ್ಕೃತಿ ಅಂದರೆ. ಇಕಾ ತಗೋ ಒಂದು ಅದ್ದೇಲಿ. ಸಂಸ್ಕೃತಿಗೆ ಯಾವಾಗಲೂ ಬೆಲೆ ಕೊಡೋ ಮನುಷ್ಯ ನಾನು. ಈ ಸಂಪನ್ನತೆಯನ್ನ ಹಿಂಗೇ ಕಾಪಾಡಿಕೊಳ್ಳಪ್ಪ.
(ಅದ್ದೇಲಿ ಕೊಡುವನು. ಮೇಳ ತಗೊಂಡು)

ಮೇಳ : ಎಷ್ಟಂದರೂ ದೊಡ್ಡ ಮನುಷ್ಯ ಅಲ್ಲವೆ?
(ತನ್ನ ಪಾಡಿಗೆ ತಾನು ತನ್ನಂಗಿಯ ಕೂರಿ ಒರೆದು ತಿನ್ನುತ್ತ ಕೂತ ಒಗ್ಗನನ್ನು ನೋಡಿ)

ತುಕ್ರ : ಯಾವೋನಯ್ಯಾ ಅವನು, ಎಳೆ ಬಿಸಿಲಲ್ಲಿ ಕೂರಿ ಹೆಕ್ಕಿ ತಿನ್ನೋನು?

ಮೇಳ : ಅವನ? ಹುರಕಜ್ಜೀ ಕಲ್ಲೀಮೀಸೆ ಒಗ್ಗ; ನಿಮ್ಮ ಮಗ ಪಟೇಲನ ಆಳು.

ತುಕ್ರ : ಅದೇನಯ್ಯಾ, ಕೂರಿ ಬಿಟ್ಟರೆ ಲೋಕದಲ್ಲಿ ಬೇರೇನೂ ಇಲ್ಲ ಅನ್ನ ಓರಂಗಿದಾನೆ, ಕೂರಿಗಿಂತ ದೊಡ್ಡದನ್ನ ಆತ ಕಂಡೇ ಇಲ್ಲವೆ?

ಮೇಳ : ನೀವಿಲ್ಲವೆ? ಆದರೆ ಅವರಿಗೆ ಕಾಣೋ ಕಣ್ಣಿಲ್ಲ. ಅದು ಬಿಡಿ ದೇವರ ತಪ್ಪು.

ತುಕ್ರ : ಅವನಿಗೆ ಕೊಬ್ಬು ಇದೆ. ನಾನು ಯಾರು ಅಂತ ತಿಳೀತಾನೆ ಇಲ್ಲ!

ಮೇಳ : ಕೊಬ್ಬು ಕರಗಿದ ಮ್ಯಾಲೆ ನಿಮಗೊಂದು ನಮಸ್ಕಾರ ಮಾಡತಾನೆ ಬಿಡಿ.

ತುಕ್ರ : ಹಾಗಂತ ನಾಯಿಗೆ ಸಲಿಗೆ ಕೊಟ್ಟರೆ ತಲೆಗೇರದೆ ಬಿಟ್ಟೀತೇನಪ್ಪ? ಇರು ಇರು ಬುದ್ಧಿ ಕಲಿಸ್ತೇನೆ.
(ಹೋಗಿ ಒಗ್ಗನ ಪಕ್ಕ ಕೂರುತ್ತಾನೆ. ತಾನೂ ಶರ್ಟು ಕಳಚಿ ಕೂರಿ ಒರೆಯ ತೊಡಗುತ್ತಾನೆ. ಆದರೆ ಒಗ್ಗನಿಗೆ ಸಿಕ್ಕಷ್ಟು ಕೂರಿ ಇವನಿಗೆ ಸಿಕ್ಕುವುದಿಲ್ಲವಾದ್ದರಿಂದ ನಿರಾಸೆಯಾಗುತ್ತದೆ)

ತುಕ್ರ : ಕಣ್ಣು ನೆತ್ತಿಗೇರಿದರೆ ಹಿಂಗೇ ಆಗೋದು-ಎದುರಿಗಿದ್ದವರು ಕಾಣಸೋದೇ ಇಲ್ಲ. ಮುಖದ ತುಂಬ ಮೀಸೆ ಬಂದರಾಯ್ತೆ? ಕರಡಿಗೂ ಮೈತುಂಬ ಕೂದಲಿರುತ್ತೆ. ಹಂಗಂತ ಅದನ್ನ ಸಜ್ಜನ ಅನ್ನಲಿಕ್ಕಾಗತ್ತ?
(ಒಗ್ಗ ತನ್ನ ಪಾಡಿಗೆ ತಾನು ಕೂರಿ ಒರೆಯುವ ಕೆಲಸ ಮುಂದುವರಿಸುವನು)

ಏಯ್‌ ಒಗ್ಗ ಒಂದು ಕೆಲಸ ಮಾಡು : ದಿನಾ ಬೇವಿನ ಸೊಪ್ಪಿನ ಜೊತೆ ಕರಡಿಯ ಮೂರು ಹಿಕ್ಕೆ ತಿನ್ನು. ಬಿಟ್ಟೂ ಬಿಡದೆ ನಲವತ್ತೆಂಟು ದಿವಸ ತಿಂದರೆ ನಿನ್ನ ತಲೆಯಲ್ಲಿ ಸ್ವಲ್ಪ ಮೆದುಳು ಹುಟ್ಟಿದ್ದು ಗೊತ್ತಾಗುತ್ತೆ. ಮೆದುಳು ಹುಟ್ಟಿದ ಗುರುತು ಯಾವುದಪ್ಪಾ ಅಂದರೆ ನಿನ್ನ ಮೀಸೆ ಮತ್ತು ಕರಡಿ ಕೂದಲು ಬೇರೆ ಬೇರೆ ಅಂತ ಗೊತ್ತಾಗೋದು ಅಥವಾ ನಿನ್ನ ಮೀಸೇ ಈಚೆಗಿರೋ ನಾನು ಕಾಣಿಸ್ತೀನಿ ನೋಡು- ಅದೇ ಗುರುತು.
(ಈಗಲೂ ಒಗ್ಗ ತನ್ನ ಕೆಲಸ ಸುಮ್ಮನೆ ಮುಂದುವರಿಸಿದ್ದಾನೆ. ತಕ್ಷಣ ತುಕ್ರ ಮ್ಯಾಲೆದ್ದು ತನ್ನಂಗಿ ಕೆಳಕ್ಕೆಸೆದು ತಿರಸ್ಕಾರದಿಂದ ತುಳಿಯುತ್ತ)
ಥೂ ಕಜ್ಜೀಕರಡಿ!

ಒಗ್ಗ : ಯಾರಿಗೋ ನೀನು ಕಜ್ಜೀ ಕರಡಿ ಅಂದದ್ದು?

ತುಕ್ರ : ಯಾರಿಗೆ ತಟ್ಟುತ್ತೋ ಅವರಿಗೆ.

ಒಗ್ಗ : ಯಾರಿಗೆ ತಟ್ಟುತ್ತೆ ಅನ್ನೋದನ್ನ ತೋರಿಸಲ?
(ತುಕ್ರನ ಜುಟ್ಟು ಹಿಡಿದು ಎಳೆಯತೊಡಗುವನು. ತುಕ್ರ ಅವನನ್ನು ಎದುರಿಸಲಾರದೆ ಎಳೆದತ್ತ ಹೋಗುವನು.)

ತುಕ್ರ : ನೀನೇನು ತೋರಿಸಬೇಕಾಗಿಲ್ಲ. ನಿನಗೆ ತಟ್ಟಿಲ್ಲ ಅಂದ ಮೇಲೆ ನೀನು ಕರಡಿ ಅಲ್ಲ ಅಂತಾಯ್ತಲ್ಲ; ಸುಮ್ಮನಿರು.

ಒಗ್ಗ : ನಾನು ಯಾರು ಅಂತಾದರೂ ತೋರಿಸ್ತೇನೆ, ಇರು.

ತುಕ್ರ : ಸುಮ್ಮನೆ ಬಿಡು ನನ್ನ . ಇದ್ದೆ ಹೋದ್ರೆ………

ಒಗ್ಗ : ಇಲ್ಲದೆ ಹೋದರೆ…………?

ತುಕ್ರ : ನಿನಗೇನೇನೋ ಅನ್ನಬೇಕಾಗುತ್ತೆ.

ಒಗ್ಗ : ಅನ್ನು.

ತುಕ್ರ : ನೀನು ಅದಕ್ಕೂ ನಾಲಾಯಕ್ಕು.

ಒಗ್ಗ : ನೀನು ಏನಕ್ಕೆ ಲಾಯಕ್ಕಂತ ತಿಳಿಸ್ತೇನೆ, ಇರು.
(ಗೋಡೆಗೆ ತುಕ್ರನ ತಲೆ ಅಪ್ಪಳಿಸುವನು)

ತುಕ್ರ : ಸಜ್ಜನರು ತಿಳಿಸೋದಕ್ಕ ಬಾಯಿ ಬಳಸ್ತಾರೆ, ಕೈಯನ್ನಲ್ಲ.

ಒಗ್ಗ : ನಾನು ಸಜ್ಜನ ಅಲ್ಲ.
(ತುಕ್ರನನ್ನ ಗೋಡೆಗೆ ಸಾಕಾಗುವಷ್ಟು ಅಪ್ಪಳಿಸಿ ಹೋಗುವನು. ತುಕ್ರ ಸಾವರಿಸಿಕೊಳ್ಳುತ್ತ)

ತುಕ್ರ : ಮಗನ ಆಳಿನಿಂದಲೇ ಏಟು ತಿನ್ನಬೇಕಾಯ್ತಲ್ಲಪ : ಜುಟ್ಟು ಹಿಡಿದು ಕೆನ್ನೆಗೆರಡೇಟು ಬಾರಿಸಿ ಬುದ್ದಿಕಲಿಸೋಣ ಅಂದರೆ ಅವನ ಮಂಡಬೋಳು. ನಿಜ ಹೇಳ್ತೇನೆ : ನನ್ನ ಮಗನಿಗೆ ಆಳುಗಳನ್ನ ಹೆಂಗಿಟ್ಟುಕೊಳ್ಳಬೇಕು ಅಂತ ಗೊತ್ತೇ ಇಲ್ಲ.
(ಇವನು ಮಾತಾಡುತ್ತಿದ್ದಾಗ ರಂಗಿ ಬರುತ್ತಾಳೆ. ಇವನ ಸ್ಥಿತಿ ನೋಡಿ ನಗುತ್ತಾಳೆ) ಎಲಾ ಇವಳ, ನನ್ನ ಕಂಡು ಇವಳಿಗೂ ನಗು ಬಂತೆ! ಲೇ ಲೇ ರಂಗಿ ಬಾರೆ ಇಲ್ಲಿ.

ರಂಗಿ : ಯಾಕಲಾ ಲೇ ಲೇ ಅಂತಿಯಾ? ನಾನೇನು ನಿನ್ನ ಎಂಡ್ರಾ?

ತುಕ್ರ : ನಾನೊಪ್ಪಿದರೆ ತಾನೆ! ಅಲ್ಲವೇ ಅದೇನೇ ರಸ್ತೇಲಿ ನಿಂತು ಗಂಡಸರಿಗೆ ಪಿಸಿ ಪಿಸಿ ಅಣಕಿಸಿ ನಗೋದು? (ನೆನಪಿಸಿಕೊಂಡು) ಅರೆ ಇದು ಹೋಳಿ ಹುಣ್ಣಿಮೆ ಅಲ್ಲವ? ಇರು ನಿನಗೆ ಮಾಡತೇನೆ………….. (ಹೋಳೀ ಹುಣ್ಣಿಮೆಯಲ್ಲಿ ಭಾಗವಹಿಸುವ ಪೋಲೀ ಹುಡುಗರಂತೆ ನಿಂತು ಹಾಡುವನು)

ಎಲೆಗೆಲಗೆ ಕಾಮಾಕ್ಷಿ!
ಕಣ್ಣು ಹೊಡೆಯುವ ದ್ರಾಕ್ಷಿ!!
ನನ್ನ ಪ್ರೀತಿಗೆ ನಿನ್ನ ಎರಡು ಎದೆ ಸಾಕ್ಷಿ!!
(ಬಾಯಿ ಬಾಯಿ ಬಡಿದುಕೊಳ್ಳುವನು)

ಮೇಳ : ಓಹೋ ತುಕ್ರ ರಂಗಿಗೆ ತಗಲಿಕೊಂಡನಪೊ.

ರಂಗಿ : ಎಲಾ ಬಿಕನಾಸಿ!

ತುಕ್ರ : ಕಣ್ಣೋಟ ಆಳ!
ಅದು ಎಸೆವ ಗಾಳ!
ತೋಳೆಂಬ ಕೋಳದಲಿ ಬಿಗಿ ನನ್ನ ಕೊರಳ!!
(ಬಾಯಿ ಬಾಯಿ ಬಡಿದುಕೊಳ್ಳುವನು)

ರಂಗಿ : ಯಾಕಲಾ ಬೇಬರಿಸಿ, ಏನೇನೋ ಹಾಡ್ಹೇಳ್ತಿ, ಕರೀಲಾ ನಮ್ಮಮ್ಮನ್ನ?

ಮೇಳ : ಓಹೋಹೋ ತುಕ್ರಾ ಸೋತೆಯಲ್ಲೊ!

ತುಕ್ರ : ಹೇ ಕಾಂತೆ, ಗುಣವಂತೆ!
ಬಗೆಹರಿಸು ನನ ಚಿಂತೆ!
ಕುಣಿಬಾರೆ ನವಿಲಂತೆ ಎಲೆಲೆ ಕಾಂತೆ!!
(ಮತ್ತೆ ಬಾಯಿ ಬಡಿದುಕೊಳ್ಳುವನು. ಮೇಳ ನಗುವುದು)

ರಂಗಿ : ಎಲಾ ಬಾಂಚೋದ್‌, ಬೇಕಾ ನಿನಗ ಚಪ್ಲಿ ರುಚಿ?
(ಚಪ್ಪಲಿ ಹಿರಿಯುವಳು. ಮೇಳ ಇಬ್ಬರಿಗೂ ಪ್ರೋತ್ಸಾಹಿಸುವುದು. ಅವಳು ಹೊಡೆಯಹೋದಾಗ ತುಕ್ರ ಅವಳ ಕೈಹಿಡಿದುಕೊಳ್ಳುವನು.)

ತುಕ್ರ : ಕೆರೆಯ ಏರಿಯ ಮ್ಯಾಲೆ
ಕ್ಯಾದೀಗಿ ಮೆಳೆಯೊಳಗೆ
ಏನೇನು ನಡೆಯಿತಣ್ಣ| ಗುರುವಾರ!!

ಗೊತ್ತಮ್ಮ ಮಸಲತ್ತು
ಸಂಜೀಯ ಕಸರತ್ತು!
ಸುಸ್ತಾದ ನಮ್ಮ ಮುದಿಪಾದ್ರಿ!!
(ಬಾಯಿ ಬಡಿದುಕೊಳ್ಳುವನು, ಈಗ ರಂಗಿ ತನ್ನ ಗುಟ್ಟು ಗೊತ್ತಾಗಿದೆಯೆಂದು ಅನ್ನಿಸಿ ಕೈಬಿಡಿಸಿಕೊಂಡು ಅಳುವಳು.)

ರಂಗಿ : (ಅಳುತ್ತ) ತುಕ್ರ ನನ್ನಂಥಾ ಹೆಣ್ಣಿನ ಮುಖ ನಿನಗ ಕಾಣದಂಗಾಗ್ಲಿ.

ತುಕ್ರ : ನಿನ್ನ ಕೆನ್ನೆ ಮೇಲೆ ನನ್ನ ಕೈ ಆಡಲಿ.
(ಅವಳ ಕೆನ್ನೆ ಹಿಸುಕುವನು. ಅವಳು ಅವನ ಕೈಗೆ ಏಟು ಹಾಕುವಳು. ಮೇಳ ನಗುವುದು.)

ರಂಗಿ : ನಿನ್ನ ಕಣ್ಣಲ್ಲಲಿ ಜೇಡಬಲೆ ಹೆಣೀಲಿ.

ತುಕ್ರ : ನಿನ್ನ ತುಟಿ ಮ್ಯಾಲೆ ನನ್ನ ತುಟಿ ಆಡಲಿ.

ರಂಗಿ : ನಿನ್ನ ನಾಲಿಗೆ ಗೆದ್ದಲು ತಿನ್ನಲಿ.

ತುಕ್ರ : ಯಾಕೆ ಪಾದ್ರೀಗಂದರೆ ಸುಮ್ಮಕೀರ್ತಿಯಾ…………………..ನನಗಂದರೆ
(ರಂಗಿ ಇನ್ನೂ ದುಃಖಿಸುತ್ತ ಅವನ ಕೆನ್ನೆಗೆ ಏಟು ಹಾಕಿ ಓಡುವಳು. ಅವಳು ಏಟು ಹಾಕಿದಲ್ಲಿ ಕೈಯಾಡಿಸಿಕೊಳ್ಳುತ್ತ ತುಕ್ರ ಭಾವುಕನಾಗುವನು).