ಇದು ತುದಿ ಇರದ ದಾರಿ. ಹೌದು ಈ ಅನುಭವ, ಬರವಣಿಗೆ ಇವುಗಳಿಗೆ ಕೊನೆಯೆಂಬುದೇ ಇರುವುದಿಲ್ಲ. ನಾನು ನನ್ನ ಅನುಭವದಲ್ಲಿ ಕಂಡುಕೊಂಡ ಕೆಲವೊಂದನ್ನು ಆಗೀಗ ಬರಹಕ್ಕೆ ಇಳಿಸುತ್ತಲೇ ಬಂದಿದ್ದೇನೆ. ಅಂತಹ ಕೆಲವೊಂದು ಅನುಭವದ ತುಣುಕುಗಳು ಪ್ರಸ್ತುತ ಕೃತಿಯಲ್ಲಿ ಇವೆ. ಸಾಹಿತ್ಯ ಮಿತ್ರರ ಜೊತೆ, ಕಲಾವಿದರ ಸಂಸರ್ಗದಲ್ಲಿ, ಹಿರಿಯ ವಿದ್ವಾಂಸರ ಒಡನಾಟದಲ್ಲಿ, ಕನ್ನಡ ವಿಶ್ವವಿದ್ಯಾಲಯದಂತಹ ನಾಡಿನ ಉನ್ನತ ಶೈಕ್ಷಣಿಕ ಸಂಸ್ಥೆಯನ್ನು ಕಟ್ಟಿ ಬೆಳೆಸುವಾಗಿನ ನನ್ನ ಆಲೋಚನೆಗಳು – ಹೀಗೆ ಎಲ್ಲ ಅನುಭವಗಳು ಇಲ್ಲಿನ ಬರಹಗಳಲ್ಲಿ ಸೇರಿಕೊಂಡಿವೆ. ಸುವರ್ಣ ಕರ್ನಾಟಕದ ‘ಹೊನ್ನಾರು ಮಾಲೆ’ಯಲ್ಲಿ ಇವುಗಳನ್ನು ಒಟ್ಟುಗೂಡಿಸಿ ಪ್ರಕಟಿಸಲು ಬಯಸಿದವರು ಕನ್ನಡ ವಿಶ್ವವಿದ್ಯಾಲಯದ ಅಂದಿನ ಕುಲಪತಿಗಳಾದ ಪ್ರೊ. ಬಿ.ಎ. ವಿವೇಕ ರೈ ಅವರು. ಕಾರಣಾಂತರಗಳಿಂದ ವಿಳಂಬವಾದರೂ ವಿಶ್ವವಿದ್ಯಾಲಯದ ಇಂದಿನ ಕುಲಪತಿಯವರಾದ ಪ್ರೊ. ಎ. ಮುರಿಗೆಪ್ಪನವರು ಇದನ್ನು ಪ್ರಕಟಿಸಲು ಆಸಕ್ತಿ ವಹಿಸಿದ್ದಾರೆ.

ಪುಸ್ತಕವನ್ನು ಸುಂದರವಾಗಿ ಹೊರತಂದಿರುವ ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಮೋಹನ ಕುಂಟಾರ್ ಹಾಗೂ ಪ್ರಸಾರಾಂಗದ ಕ್ರಿಯಾಶೀಲ ಸಿಬ್ಬಂದಿವರ್ಗ ಇವರೆಲ್ಲರಿಗೂ ನನ್ನ ಹೃತ್ಪೂರ್ವಕವಾದ ಕೃತಜ್ಞತೆಗಳು ಸಲ್ಲುತವೆ.

ಚಂದ್ರಶೇಖರ ಕಂಬಾರ