ಪ್ರಶ್ನೆ : ಜಾಗತೀಯಕರಣದ ಸಂದರ್ಭದಲ್ಲಿ ಭಾರತೀಯ ರಂಗಭೂಮಿಯ ಭವಿಷ್ಯವೇನು?

ಉತ್ತರ: ಆಧುನಿಕ ಜಗತ್ತಿನಲ್ಲಿ ನಾವೆಲ್ಲಾ ಸಂಸ್ಕೃತಿಯಲ್ಲಿನ ಬಿಕ್ಕಟ್ಟನ್ನು ಎದುರಿಸುತ್ತಿದ್ದೇವೆ. ವಾಣಿಜ್ಯೀಕರಣಗೊಂಡಿರುವಂಥ ಕಲೆ ಒಂದು ಪದಾರ್ಥವಾಗಿ ಹಾಗೆಯೇ ಐಷಾರಾಮದ ಸಂಗತಿಯಾಗಿ ಬಳಕೆಯಾಗುತ್ತಿದೆ. ಆಧುನಿಕ ಜಗತ್ತಿನ ಅತ್ಯಂತ ಪ್ರಬಲವಾದ ಸಂಸ್ಥೆಗಳೆಂದರೆ ವಾಣಿಜ್ಯ ಮತ್ತು ರಾಜಕಾರಣ: ವಿಜ್ಞಾನ ಕೂಡ ಈ ಸಂಸ್ಥೆಗಳ ಕೈಯ್ಯಲ್ಲಿ ಒಂದು ಸಲಕರಣೆಯಾಗಿ ಬಿಟ್ಟಿದೆ. ಮಾನವ ಸಂಬಂಧಗಳ ವಿನ್ಯಾಸವನ್ನೇ ಅವು ಬದಲಿಸಿದೆ. ಇದಕ್ಕಿಂತಲೂ ಅಪಾಯಕಾರಿಯಾದ ಸಂಗತಿಯೆಂದರೆ ಮುಂದೊಂದು ದಿನ ನಮ್ಮ ಪರವಾಗಿ ಮಾತನಾಡುವ, ಹಾಡುವ, ಅನುವಾದಿಸುವ ಹಾಗೂ ಆಲೋಚಿಸುವ ಯಂತ್ರಗಳು ಮಾನವ ಜಗತ್ತನ್ನು ಆಕ್ರಮಿಸಿಕೊಳ್ಳಬಹುದು. ನಮ್ಮ ಜಗತ್ತಿಗೆ ಕಲೆಯೊಂದೇ ಭರವಸೆ ಎಂದು ನನಗನ್ನಿಸುತ್ತಿದೆ. ಕೇವಲ ನಾಟಕ ಮತ್ತು ರಂಗಭೂಮಿಗೆ ನನ್ನನ್ನು ಸೀಮಿತಗೊಳಿಸಿಕೊಳ್ಳುತ್ತೇನೆ. ವಾಣಿಜ್ಯದ ಸ್ವಾಮ್ಯ ರಂಗಭೂಮಿಯ ಜಾಗವನ್ನು ಆಕ್ರಮಿಸಿಕೊಳ್ಳಬಾರದೆಂದು ನನ್ನ ಆಸೆ. ಮನುಷ್ಯನ ತುಡಿತ, ಕನಸಗಳು, ದುಃಖ ಮತ್ತು ಸುಖ, ಅವನ ಬಂಧನ ಮತ್ತು ಸ್ವಾತಂತ್ರ್ಯ ಇವೆಲ್ಲ ರಂಗಭೂಮಿಯ- ಕೇಂದ್ರದಲ್ಲಿವೆ.

ಆಧುನಿಕ ಭಾರತೀಯ ರಂಗಭೂಮಿ ಬೊಂಬಾಯಿಯಲ್ಲಿ ೧೮೫೩ರಲ್ಲಿ ಸ್ಥಾಪನೆಯಾಯಿತು. ನಗರ ಪ್ರದೇಶದ ಜನರ ಮನರಂಜನೆಗಾಗಿ ಮೊದಲು ಇಂಗ್ಲಿಷ್ ಭಾಷೆಯಲ್ಲಿ, ತರುವಾಯ ಉರ್ದುವಿನಲ್ಲಿ ನಾಟಕಗಳನ್ನಾಡಲು ಮುಂದಾದವರು ಒಂದು ಪಾರ್ಸಿ ತಂಡದವರು. ವೃತ್ತಿಪರವಾದ್ದರಿಂದ ಅದು ಜನಪ್ರಿಯ ರಂಗಭೂಮಿಯಾಗಿತ್ತು. ಆದಾಗ್ಯೂ, ಈ ಜನಪ್ರಿಯ ರಂಗಭೂಮಿ ಜನರ ಅಂತರಂಗದ ಉತ್ಕಟತೆಯಲ್ಲಿ ಒಡಮೂಡಿದ್ದಾಗಿರಲಿಲ್ಲ. ಹೊರಗಿನಿಂದ ಹೇರಲ್ಪಟ್ಟಿದ್ದಾಗಿತ್ತು. ಬೇರೆ ಆಯ್ಕೆಯಿಲ್ಲದೆ ಜನರು ಇದ್ದಕ್ಕೆ ಒಗ್ಗಿಕೊಂಡರು.

ಪಾರ್ಸಿ ರಂಗಭೂಮಿಯ ಪ್ರಭಾವ ಸೃಜನಾತ್ಮಕವಾಗಿತ್ತು, ಏಕೆಂದರೆ ಎಲ್ಲ ಭಾಷೆಗಳ ರಂಗಭೂಮಿಯೂ ಹೆಚ್ಚೂ ಕಡಿಮೆ ಪಾರ್ಸಿ ರಂಗಭೂಮಿಯ ಚಾರಿತ್ರಿಕ ಬೆಳವಣಿಗೆ ಅನ್ನಬೇಕು. ಮಧ್ಯಯುಗದಲ್ಲಿ ಯಾವುದೇ ಪ್ರಾದೇಶಿಕ ಭಾಷೆಗಳಲ್ಲೂ ನಾಟಕವಿರಲಿಲ್ಲ. ಸಂಸ್ಕೃತ ನಾಟಕದ ದೀರ್ಘವೂ, ವೈಭವೋಪೇತವೂ ಆದ ಕಾಲದ ನಂತರ ನಾಟಕ ಉಳಿದದ್ದು ಜಾನಪದ ರೂಪದಲ್ಲಿ. ಇಂದಿಗೂ ಕೂಡ ಜನಪದ ರಂಗಭೂಮಿ ತನ್ನ ಜೀವಕಳೆಯನ್ನು ಕಳೆದುಕೊಂಡಿಲ್ಲ. ಆದಾಗ್ಯೂ ಶೇಕ್ಸ್‌ಪಿಯರ್, ಕಾಳಿದಾಸ ಹಾಗೂ ಭಾಸನ ನಾಟಕಗಳ ಅನುವಾದ ಒಂದು ಸ್ವತಂತ್ರ ಪ್ರಕಟನೆಯಾಗಿಯೇ ಕಾಣಿಸಿಕೊಂಡಿದೆ. ವಾಸ್ತವವಾಗಿ ನಾಟಕ ವಿಮರ್ಶೆಗೂ ಸಾಹಿತ್ಯ ವಿಮರ್ಶೆಗೂ ನಮ್ಮಲ್ಲಿ ಅಂಥ ವ್ಯತ್ಯಾಸ ಕಾಣಿಸುತ್ತಿಲ್ಲ. ಎಲ್ಲ ಅದ್ಭುತ ನಾಟಕಗಳೂ ರಂಗಭೂಮಿ ಮರೆಯಾದ ಮೇಲೆ ಕಾವ್ಯವಾಗಿ ಉಳಿಯುವುದು ನಿಜದ ಮಾತು. ಸಂಸ್ಕೃತದ ಒಂದು ನಿರೂಪಣೆಯ ಪ್ರಕಾರ ನಾಟಕ ಎನ್ನುವುದು ‘ದೃಶ್ಯ ಕಾವ್ಯ’. ಹಾಗನ್ನುವಾಗ ಅವರು ‘ದೃಶ್ಯ’ ಎನ್ನುವ ಪದಕ್ಕೆ ಒತ್ತು ನೀಡಿದರೋ ಅಥವಾ ‘ಕಾವ್ಯ’ ಕ್ಕೋ ತಿಳಿಯದಾಗಿದೆ. ಏನೇ ಇರಲಿ, ನಮ್ಮ ಅನೇಕ ಪಂಡಿತರ/ ವಿದ್ವಾಂಸರ ದೃಷ್ಟಿಯಲ್ಲಿ ನಾಟಕವೇ ಬಹು ಪ್ರಮುಖವಾದ ಸಾಹಿತ್ಯ ಪ್ರಕಾರವಾಗಿದೆ.

ಜನಪದ ರಂಗಭೂಮಿಯಿಂದ ನಾವಿನ್ನೂ ಕಲಿಯಬೇಕಾದದ್ದು ಬಹಳವಿದೆ; ಹಾಗೆಯೇ ಪಾಶ್ಚಾತ್ಯ ರಂಗಭೂಮಿಯಿಂದ ಕಲಿತ ಅನೇಕ ಸಂಗತಿಗಳನ್ನು ಮರೆಯಬೇಕಿದೆ. ಚಲಾವಣೆಗೆ ಬಂದ ಸಾಹಿತ್ಯ ನಾಟಕಗಳು ವೃತ್ತಿನಾಟಕಗಳನ್ನು ಅವಾಸ್ತವ ಮತ್ತು ಅತಿ ಅಲಂಕಾರಿಕವೆಂದು ಕಣೆಗಣಿಸಿದವು. ಆದರೆ ಬರಹದಲ್ಲಿ ಹೊಸದಾಗಿ ಕೂಡಿಕೊಂಡಿದ್ದು ಮಾತ್ರ ಸಮಕಾಲೀನ ಕಥೆ ಮತ್ತು ಸಮಕಾಲೀನ ಸಮಸ್ಯೆಗಳು. ವೃತ್ತಿಪರ ನಾಟಕವಾಗಲಿ ಸಾಹಿತ್ಯಕ ನಾಟಕವಾಗಲಿ ರಂಗಭೂಮಿ ಪ್ರಪಂಚವನ್ನು ಅರ್ಥ ಮಾಡಿಕೊಳ್ಳಲಿಲ್ಲವೆಂದೇ ನನ್ನ ಅಭಿಮತ. ಭಾರತೀಯ ಅಭಿಜಾತ ರಂಗಭೂಮಿ ಹಾಗೂ ಜನಪದ ರಂಗಭೂಮಿ-ಎರಡು ಕೂಡ ರಂಗಭೂಮಿ ಪ್ರಪಂಚದ ಬಗ್ಗೆ ಅರಿವುಳ್ಳವಾಗಿದ್ದವು; ರಂಗಭೂಮಿ ಜಗತ್ತಿಗೆ ತನ್ನದೇ ಅದಂಥ ಹಾವಭಾವದ ಭಾಷೆಯಿರುತ್ತದೆ, ಸಂಗೀತವಿರುತ್ತದೆ-ಮತ್ತು ಇವು ಅದರ ರಿವಾಜಿನಲ್ಲೇ ನಿರ್ಧರಿತವಾಗುವಂಥವು. ರಂಗಭೂಮಿಯ ಸಾಧ್ಯತೆಗಳಿಗೆ ನಾವು ಕುರುಡಾಗಲು ಕಾರಣ ಭಾಷೆಯ ಹಾಗೆ ರಂಗಭೂಮಿಯನ್ನೂ ಕೂಡ ನಾವು ಒಂದು ಮಾಧ್ಯಮವಾಗಿ ನೋಡುತ್ತಿರುವುದು.

ಪ್ರಶ್ನೆ: ಸಿನಿಮಾ ಮತ್ತು ಟಿವಿ.ಗಳಿಂದ ರಂಗಭೂಮಿಯ ಮೇಲೆ ಪ್ರಭಾವವುಂಟಾಗಬಹುದೆ?”

ಉತ್ತರ: ಛಾಯಾಗ್ರಹಣದಿಂದ ಚಿತ್ರಕಲೆಯ ಮೇಲೆ ಪರಿಣಾಮ ಆದಂತೆ ಸಿನಿಮಾದಿಂದ ರಂಗಭೂಮಿಯ ಮೇಲೇ ಪರಿಣಾಮವಾಗಿದೆ. ಜೀವಂತ ನಟನೊಬ್ಬ ರಂಗದ ಮೇಲೆ ಸಾವಯವವಾಗಿ ಏನು ತೋರಿಸಬಲ್ಲ ಅದನ್ನು ಕೃತಕವಾಗಿ ಸಿನಿಮಾದಲ್ಲಿ ತೋರಿಸಲಾಗುತ್ತದೆ. ರಂಗಭೂಮಿ ಕೂಡ ಸಹಜ ಅಲ್ಲ ಕೃತಕ ಅಂತ ನನಗೆ ಚೆನ್ನಾಗಿ ಗೊತ್ತು. ಆದರೆ ರಂಗಭೂಮಿಯ ಕೃತಕತೆಗೂ ಸಿನಿಮಾದ ಕೃತಕತೆಗೂ ಬಹಳ ವ್ಯತ್ಯಾಸವಿದೆ. ರಂಗಭೂಮಿಯ ಸಲಕರಣೆ ಚಿತ್ರಕಲೆಯಲ್ಲಿನ ಬಣ್ಣದಂತೆ ಮಹತ್ವ ಪಡೆಯುವಂಥದು. ಸಿನಿಮಾ ತಂತ್ರಜ್ಞಾನದ ಭಾಷೆಯನ್ನು ಬಳಸುತ್ತದೆ, ಆ ಭಾಷೆಗೆ ಸ್ವತಂತ್ರ ಸಂದೇಶವೆಂಬುದು ಇಲ್ಲ. ಧ್ವನಿವರ್ಧಕದ ಹಾಗೆ ನಿಮ್ಮ ಧ್ವನಿಯನ್ನದು ದೊಡ್ಡದು ಮಾಡುತ್ತದೆ.

ಕಳೆದ ಐವತ್ತು ವರ್ಷಗಳಲ್ಲಿ ನಮ್ಮ ರಂಗಭೂಮಿಯಲ್ಲಿ ಅದ್ಭುತವಾದಂಥ ಬೆಳವಣಿಗೆಯಾಗಿದೆ. ಈ ಕ್ಷೇತ್ರದಲ್ಲಿನ ಸಾಧನೆಯ ಮೌಲ್ಯಮಾಪನ ಮತ್ತು ಅಂದಾಜು ಮಾಡುವುದು ಕಷ್ಟ. ನಮ್ಮ ಅಭಿಜಾತ ರಂಗಭೂಮಿಯನ್ನು ನಾವು ಪತ್ತೆ ಮಾಡಿರುವ ಹಾಗೆಯೆ ಜನಪದ ರಂಗಭೂಮಿಯ ಹಲವು ರೂಪಗಳನ್ನು ಗುರ್ತಿಸಿದ್ದೇವೆ. ಪಶ್ಚಿಮದಿಂದ ನಾವು ಎರವಲು ತಂದ ವಾಸ್ತವವಾದೀ ನಾಟಕ ತನ್ನ ಮಹತ್ವ ಕಳೆದುಕೊಳ್ಳುತ್ತಿದೆ. ಸೃಷ್ಟಿಯಾಗಿರುವಂಥಗೊಂದಲ ಪೂರ್ತಿ ನಿವಾರಣೆಯಾಗಿಲ್ಲ ಎಂಬುದು ನನಗೆ ಗೊತ್ತಿದೆ; ಆದರೆ ನಮ್ಮ ಜನರ ಅಭಿರುಚಿಯನ್ನು ತೃಪ್ತಿಗೊಳಿಸುವಂಥ ಹೊಸ ರಂಗಭೂಮಿಯನ್ನು ನಾವು ಅಭಿವೃದ್ಧಿಗೊಳಿಸಬೇಕಾಗಿದೆ. ತನ್ಮೂಲಕ ರಂಗಭೂಮಿ ಇಲ್ಲದೇ ಒಂದು ಸಂಸ್ಕೃತಿ ಇಲ್ಲವೆಂದು ಸಾಬೀತು ಮೂಡಬೇಕಾಗಿದೆ; ಏಕೆಂದರೆ ರಂಗಭೂಮಿಯಲ್ಲಿ ಮಾತ್ರ ‘ನಾನು’ ಮತ್ತು ‘ಇದಿರು’ ಹಾಗೂ ‘ರೂಪ’ ಮತ್ತು ‘ವಸ್ತು’ವಿನ ನಡುವಿನ ದ್ವಂದ್ವವನ್ನು ನಿವಾರಿಸಲು ಸಾಧ್ಯ.

* * *