ಇದು ಪದವಿ ಪತ್ರಗಳನ್ನು ಪಡೆದಿರುವ ಎಲ್ಲಾ ಅಭ್ಯರ್ಥಿಗಳನ್ನೂ ನಾನು ಅಭಿನಂದಿಸುತ್ತೇನೆ. ಅವರಿಗೆ ಉಜ್ವಲ ಭವಿಷ್ಯವನ್ನು ಹಾರೈಸುತ್ತೇನೆ. ಭಾರತದ ರಂಗಭೂಮಿಯು ನಿಮ್ಮ ಕೊಡುಗೆಯನ್ನು ಎದುರು ನೋಡುತ್ತಿದೆ. ನಿಮ್ಮ ರಂಗ ಚಟುವಟಿಕೆಗಳು ಭಾರತೀಯ ರಂಗಭೂಮಿಯಲ್ಲಿ ಹೊಸ ಗಾಳಿಯ ಸಂಚಾರವಾಗುವಂತೆ ಮಾಡುತ್ತದೆ ಎಂದು ಆಶಿಸುತ್ತೇನೆ.

ಈ ವರ್ಷ ವಿಶಿಷ್ಟವಾದದ್ದು. ಏಕೆಂದರೆ ಈ ವರ್ಷದ ಪ್ರತಿಯೊಂದು ದಿನಾಂಕ ಅಥವಾ ತಿಂಗಳು ಈ ಶತಮಾನದಲ್ಲಿ ಆ ಬಗೆಯ ಕೊನೆಯ ದಿನವಾಗಿರುತ್ತದೆ ಅಥವಾ ತಿಂಗಳಾಗಿರುತ್ತದೆ. ಮುಂದಕ್ಕೂ ಹಿಂದಕ್ಕೂ ನೋಡಲು ಸಾಧ್ಯವಾಗುವ ಒಂದು ನೆಲೆಗೆ ನಾವು ಸುಲಭವಾಗಿ ತಳ್ಳಲ್ಪಡುತ್ತೇವೆ. ಈ ವರ್ಷ ಭೂತ ಭವಿಷ್ಯತ್ತುಗಳ ‘ಸಂಕ್ರಮಣ’ದಲ್ಲಿ ನಾವು ಜೀವಿಸಿದ್ದೇವೆ.

ನಾಟಕಕಾರನಾಗಿ ನಾನು ಅದೃಷ್ಟಶಾಲಿ. ನನ್ನ ಸೃಜನಶೀಲತೆಯು ನನ್ನ ಭಾಷೆಯಾದ ಕನ್ನಡದಲ್ಲಿ ಅಪಾರವಾದ ಸೃಜನಶೀಲತೆಯು ಕಂಡುಬಂದ ಸಮಯದೊಂದಿಗೆ ಹೊಂದಿ ಕೊಂಡಿತ್ತು. ಗಿರೀಶ ಕಾರ್ನಾಡರು ಅದೇ ಸಮಯದಲ್ಲೇ ತಮ್ಮ ಅತ್ಯುತ್ತಮ ರಚನಶೀಲತೆಯನ್ನು ಸಾಧಿಸಿದರು. ನಮ್ಮ ಬೆನ್ನಹಿಂದೆಯೇ ಕೈಲಾಸಂ, ಶ್ರೀರಂಗ, ಸಂಸ ಮೊದಲಾದ ಶಕ್ತಿಯುತ ಸಮರ್ಥ ನಾಟಕಕಾರರಿದ್ದರು. ವಿಶಾಲ ದೃಷ್ಟಿಯಿಂದ ನೋಡುವುದಾದರೆ ಆಗ ಭಾರತೀಯ ರಂಗಭೂಮಿಯಲ್ಲಿ ರವೀಂದ್ರನಾಥ ಟಾಗೋರ್, ಮೋಹನ್, ರಾಕೇಶ್, ಬಾದಲ್ ಸರ್ಕಾರ್, ವಿಜಯ ತೆಂಡೂಲ್ಕರ್ ಅವರಂತಹ ಉಜ್ಜಲ ಪ್ರತಿಭಾವಂತರಿದ್ದರು. ಸಂಕ್ಷೇಪದಲ್ಲಿ, ಅದು ನಾಟಕದಲ್ಲಿ ಹಲವು ಬಗೆಯ ಸೃಜನಶೀಲ ಚಟುವಟಿಕೆಗಳು ಕುಡಿವರಿದಿದ್ದ ಕಾಲ. ನಮ್ಮ ನಾಟಕಕಾರರು ಹಲವು ಬಗೆಯ ನಿರ್ಮಿತಿಗಳಿಂದ ಸ್ವಾತಂತ್ರೋತ್ತರ ಪ್ರಚೋದನೆಗೆ ಸ್ಪಂದಿಸಲು ಪ್ರಯತ್ನಿಸುತ್ತಿರುವಂತೆ ತೋರಿತು. ಅತ್ಯಂತ ಜಟಿಲವಾದ ಒಂದು ಪರಿಸ್ಥಿತಿಯಲ್ಲಿ ನಮ್ಮ ಇತಿಹಾಸ, ಸಂಪ್ರದಾಯ, ಐತಿಹ್ಯ ಮತ್ತು ಧರ್ಮ ಇದ್ದಕ್ಕಿದ್ದಂತೆ ಜಾಗತಿಕ ಪ್ರಜ್ಞೆಯೊಂದಕ್ಕೆ ತೆರೆದುಕೊಂಡುವು. ನಮ್ಮ ಕಾಲದ ಸೃಜನಶೀಲ ಕಲಾವಿದನು ತನ್ನ ಶಿಥಿಲಗೊಂಡ ಜಗತ್ತನ್ನು ಯಾವ ರೀತಿ ಕಂಡನೋ ಆ ರೀತಿಯಲ್ಲಿ ಭಾರತೀಯ ನಾಟಕಕಾರರು ತಮ್ಮ ಸೃಜನಶೀಲತೆಯ ತಳಹದಿಯನ್ನು, ಹುಡುಕಲು ನುಗ್ಗಿದರು. ನನ್ನಂತಹ ಕೆಲವರು ಜಾನಪದ ಕಥೆಗಳ ಕಡೆಗೆ ತಿರುಗಿದೆವು (ಸಂಸ್ಕೃತದ ವಸ್ತುವಲ್ಲ) ಇತರರು ಕಾಲಕ್ಕೆ ತಕ್ಕಂತೆ ತಮ್ಮ ಸಂವೇದನೆಗೆ ರೂಪುಕೊಡಲು ಪುರಾಣಗಳು ಮತ್ತು ಇತಿಹಾಸದಿಂದ ವಸ್ತುಗಳನ್ನು ಬಳಸಿಕೊಂಡರು. ಗಿರೀಶ ಕಾರ್ನಾಡರ ಯಯಾತಿ ಮತ್ತು ತುಘಲಕ್ ಇದಕ್ಕೆ ಉತ್ತಮ ನಿದರ್ಶನಗಳು. ಇನ್ನಿತರ ಕೆಲವರು ಅಸ್ತಿತ್ವವಾದ ಮತ್ತು ಅಸಂಗತಗಳನ್ನು ತಾತ್ಕಾಲಿಕವಾಗಿ ಪರಿಚಯಿಸಿ ಸಾಮಾಜಿಕ ವಾಸ್ತವಿಕತೆಯನ್ನು ಪ್ರಯತ್ನಿಸಿದರು. ಪಶ್ಚಿಮವು ನಮ್ಮ ಮನಸ್ಸುಗಳಲ್ಲಿ ಇನ್ನೂ ವಸಾಹತು ಕಡೆದ ಕಾಲುವೆಗಳಲ್ಲಿ ಹರಿಯುತ್ತಿದ್ದಿತು. ಈ ಕಾಲಾವಧಿಯಲ್ಲಿ ಜಾಗತಿಕ ಇತಿಹಾಸ ಪ್ರಕ್ರಿಯೆಯಲ್ಲಿ ಹಲವು ಸ್ವಾರಸ್ಯವಾದ ವಿಚಾರಗಳು ಕಂಡುಬಂದುವು.

ಮೊದಲನೆಯದಾಗಿ ೩೦೦೦ ವರ್ಷಗಳ ಇತಿಹಾಸದಲ್ಲಿ ಮೊತ್ತಮೊದಲನೆಯ ಬಾರಿಗೆ ಭಾರತ ಉಪಖಂಡವು ಸ್ವತಂತ್ರ ರಾಷ್ಟ್ರ ಸ್ಥಾನಮಾನವನ್ನು ಪಡೆಯಿತು. ಇದರ ಜೊತೆಗೇ ಅಭಿವೃದ್ಧಿ ಹೊಂದಿದ ಪಾಶ್ಚಾತ್ಯ ದೇಶಗಳಲ್ಲಿ ರಾಷ್ಟ್ರೀಯತೆಯ ಪ್ರಜ್ಞೆಯ ಸಡಿಲಗೊಂಡಿತು. ಭಯಾನಕವಾದ ಎರಡು ಮಹಾಯುದ್ಧಗಳು ರಾಷ್ಟ್ರೀಯತೆಯ ಭೀಕರ ಪರಿಣಾಮಗಳನ್ನು ತೋರಿಸಿದ್ದುವು. ಥಾಮಸ್ ಹಾರ್ಡಿ, ಸಾರ್ತ್ರೆ, ಕಾಮೂ ಮತ್ತು ಇತರರು ತಮ್ಮ ಕೃತಿಗಳನ್ನು ಈ ಮನೋಧರ್ಮವನ್ನು ವ್ಯಕ್ತಪಡಿಸಿದರು. ಭಾರತದ ನಮ್ಮ ಲೇಖಕನೂ ತನ್ನ ಪಾಶ್ಚಾತ್ಯ ಸರಿಕ ಲೇಖಕನೊಂದಿಗೆ ಸಂವೇದಿಸಿಕೊಂಡುದರಲ್ಲಿ ಸಂದೇಹವಿಲ್ಲ. ಆದರೆ ವಸಾಹತಾಗಿದ್ದು ಈಗಷ್ಟೇ ರಾಷ್ಟ್ರೀಯತೆ ವಿಕಾಸಗೊಳ್ಳುತ್ತಿರುವ ಒಂದು ಜಗತ್ತಿನಲ್ಲಿ ತಾನಿದ್ದೇನೆ ಎಂಬುದರ ಅರಿವು ಅನನಿಗಿರಬೇಕಾಗಿತ್ತು. ಪಾಶ್ಚಾತ್ಯ ದೇಶಗಳಲ್ಲಾದರೆ ರಾಷ್ಟ್ರೀಯತೆಯು ಜನಪ್ರಿಯತೆ ಕಳೆದುಕೊಳ್ಳುತ್ತಿದ್ದಿತು. ೫೦ ಮತ್ತು ೬೦ನೇ ದಶಕಗಳು ಹಿಪ್ಪಿ ಸಂಸ್ಕೃತಿಯನ್ನು ಬೀಟ್ಸ್ ಮುಂತಾದ ಮಾದಕ ಜೀವನ ವಿಧಾನದ ಪ್ರಯೋಗಗಳನ್ನು ಉತ್ಪಾದಿಸಿತು. ಇದೆಲ್ಲ ಗತ ಸಾಮಾಜಿಕ ಧಾರ್ಮಿಕ ಮತ್ತು ರಾಜಕೀಯ ಸಾಂಸ್ಥಿಕತೆಗಳಲ್ಲಿ ನಂಬುಗೆ ಕಳೆದುಕೊಂಡದ್ದು ಮತ್ತು ಅವುಗಳನ್ನು ನಿರಾಕರಿಸಿದ್ದರ ಬಹುಮುಖ್ಯ ಫಲವಾಗಿತ್ತು. ಗಂಭೀರವಾಗಿ ನೋಡಿದರೆ ಇದರಲ್ಲಿ ಭಾರತಕ್ಕೆ ಸಮಾನಾಂತರತೆ ಯಾವುದೂ ಇರಲಿಲ್ಲ. ಕೇವಲ ದೊಡ್ಡ ನಗರಗಳಲ್ಲಿ ಗಣ್ಯ ವರ್ಗದ ನಿಸ್ಸತ್ವ ಅನುಕರಣೆ ಕಂಡು ಬರುತ್ತಿದ್ದಿತು ಅಷ್ಟೆ. ಸಂಪೂರ್ಣವಾಗಿ ಭಾರತೀಯ ಇಂದು ಹೇಳಲಾಗದ ಪ್ರಭಾವಗಳ ಫಲವಾದ ಅಚ್ಚಿನಲ್ಲಿ ತನ್ನನ್ನಿರಿಸಿಕೊಂಡು ಭಾರತೀಯ ನಾಟಕಕಾರನು ಬರೆಯತೊಡಗಿದನು. ಇಲ್ಲೊಂದು ಪ್ರಶ್ನೆ ಏಳುತ್ತದೆ. ಅವನು ಪರಿಕಲ್ಪನೆಯ ಕಪಟಕ್ಕೆ ಬಲಿಯಾದನೆ? ಯೂರೋಪು ಮತ್ತು ಭಾರತ ಉಪಖಂಡಗಳಲ್ಲಿ ಭಾರೀ ಪ್ರಮಾಣದ ಏರುಪೇರುಗಳು ನಡೆದಿದ್ದುವು. ಮಹಾಯುದ್ಧಗಳು ಜರ್ಮನಿ ಮತ್ತು ರಷ್ಯಾಗಳಲ್ಲಿ ಮಿಲಿಯಗಟ್ಟಲೆ ಜನರನ್ನು ಕೊಂದಿದ್ದುವು. ವಿಭಜನಾ ನಂತರದ ವಲಸೆಗಳಿಂದಾಗಿ ಭಾರತದಲ್ಲಿ ಲಕ್ಷಾಂತರ ಜನರು ಸಾವಿಗೀಡಾದರು. ಪಾಶ್ಚಾತ್ಯ ಲೇಖಕನು ತನ್ನನ್ನು ರೂಪಿಸಿದ್ದ ಮೌಲ್ಯ ವ್ಯವಸ್ಥೆಯನ್ನೇ ಪ್ರಶ್ನಿಸಿ, ನಿರಾಕರಿಸಿ ತನ್ನ ಪ್ರತಿಕ್ರಿಯೆ ವ್ಯಕ್ತಪಡಿಸಿದನು. ಪಶ್ಚಿಮದೇಶಗಳ ಯುದ್ದಾ ನಂತರದ ತರಣನು ಅಲ್ಲಿಯ ಐಶ್ಚರ್ಯವನ್ನೂ ಅಧಿಕಾರವನ್ನೂ ತಿರಸ್ಕರಿಸಿ, ಇತರ ಯೂರೋಪೇತರ ಮತ್ತು ಪ್ರಾಚೀನತರ ಸಂಸ್ಕೃತಿಗಳೊಂದಿಗೆ ಹಾಗೂ ಬದುಕಿನೊಂದಿಗೆ ಪ್ರಯೋಗ ಮಾಡಲು ಬಯಸಿದನು. ಇದಕ್ಕೆ ವ್ಯತಿರಿಕ್ತವಾಗಿ ಶಕ್ತಿಯುತ ಪ್ರತಿಕ್ರಿಯೆಯನ್ನು ತೋರಿಸಲಾರದಾದನು. ಭಾರತೀಯ ತರುಣರಲ್ಲಿ ಯಾವುದೇ ಮೂಲಭೂತ ವ್ಯತ್ಯಾಸ ಕಂಡು ಬರದಾಯಿತು. ಐಐಟಿಗಳಲ್ಲಿ ಓದುವಾಗ ಅವರೂ ಜೀನ್ಸ್‌ಗಳನ್ನು ಟಿ-ಷರ್ಟುಗಳನ್ನೂ ಧರಿಸುತ್ತಾರೆ. ಆದರೆ ಪದವಿ ಪಡೆದ ನಂತರ ಪಾಶ್ಚಿಮಾತ್ಯ ದೇಶಗಳಲ್ಲಿ ನೌಕರಿ ಹುಡುಕುತ್ತಾರೆ. ಭಾರತೀಯ ಲೇಖಕನು ಅಸಂಗತ ನಾಟಕಗಳನ್ನೋ ಜಾನಪದ ನಾಟಕಗಳನ್ನೋ ಬರೆದದ್ದು, ಪುರಾಣೈತಿಹ್ಯಗಳನ್ನೇ ಕುರಿತ ವಸ್ತುಗಳನ್ನೇ ಬಳಸಿದ್ದು ಐಐಟಿ ವಿದ್ಯಾರ್ಥಿಗಳು, ತಂದೆಯು ಭಾರೀ ಪ್ರಮಾಣದ ಡೊನೇಷನ್ ಕೊಟ್ಟು ಸೇರಿಸಿದಾಗ ಜೀನ್ಸ್ ಧರಿಸಿ ಓಡಾಡುವಂತೆಯೇ ಆಯಿತು ಎಂದು ಕೆಲವು ವೇಳೆ ನನಗನ್ನಿಸಿದೆ. ಇದಕ್ಕೆ ಬೇರೆ ವಿವರಣೆ ಅನಗತ್ಯ.

ಆದ್ದರಿಂದ ೨೧ನೆಯ ಶತಮಾನದ ಹೊಸ್ತಿಲಿನಲ್ಲಿ ನಾವು ಎಲ್ಲಿ ನಿಂತಿದ್ದೇವೆ? ಹೊಸತನ ಹೊರಟಹೋಯಿತು, ಫ್ಯಾಷನ್ನುಗಳು ಬೇಗ ಮುಸುಕಾಗಿ ಹೋಗುತ್ತದೆ. ಈಗ ಭಾರತದಲ್ಲಿ ಕನ್ನಡದಲ್ಲಾಗಲಿ ಬೇರೆ ಭಾಷೆಗಳಲ್ಲಾಗಲಿ ಮುಖ್ಯವಾದ ಕಾವ್ಯ ರಚಿತವಾಗುತ್ತಿರುವಂತೆ ತೋರುವುದಿಲ್ಲ. ಯೇಟ್ಸ್, ಎಲಿಯಟ್, ಆಡೆನ್, ಸಿಲ್ಡಿಯಾ ಪ್ಲಾಟ್ಸ್ ಎಲ್ಲ ಸತ್ತು ಹೋದರು. ಏನಾದರೂ ಸಂಬಂಧ ಕಾಣುತ್ತದೇನು?

ನಾವು ಹೀಗೆ ಹೀಗೆ ಎಂದು ಭಾವಿಸಿಕೊಂಡು ಬಿಟ್ಟಿರುವ ಕೆಲವು ವಿಚಾರಗಳನ್ನು ಕುರಿತು ಮತ್ತೆ ನೋಡಬೇಕು ಎಂದು ಸೂಚಿಸಬಯಸುತ್ತೇನೆ. ಉದಾಹರಣೆಗೆ ಭಾರತ ಉಪಖಂಡವು ಕೈಗಾರಿಕೆಗಿಂತ ಕೃಷಿಗೆ, ಬೇಸಾಯಕ್ಕೆ ಹೆಚ್ಚು ಹತ್ತಿರವಾದ ಒಂದು ಸಂಸ್ಕೃತಿಯನ್ನು ಹೊಂದಿದೆ.

ಹಳ್ಳಿಯಲ್ಲಿರುವ ರೈತನು ಹಲವಾರು ಪೂರ್ಣವೂ ಮಂದಗತಿಯರೂ ಆದ ಪರಿವರ್ತನೆಯ ಪ್ರಕ್ರಿಯೆಗಳಿಗೆ ಸಾಕ್ಷಿಯಾಗಿದ್ದಾನೆ. ಅವನು ಬಿತ್ತುವ ಬೀಜಗಳು ಕೆಲವು ತಿಂಗಳುಗಳಲ್ಲಿ ಅವನ ಸಮೃದ್ಧ ಫಸಲಾಗಬಹುದು ಇಲ್ಲವೆ ಅವನ ಪಾಲಿಗೆ ಬರವನ್ನು ತರಬಹುದು. ಅಷ್ಟು ತಿಂಗಳು ಅವನು ತನ್ನ ಹೊಲ-ಗದ್ದೆಗಳನ್ನು ಕಾಯುತ್ತಾನೆ. ಸಸಿ ಬೆಳೆಯುತ್ತದೆ, ಆದರೆ ಅವನಿಗೆ ಅದರ ಬೆಳವಣಿಗೆ ಕಾಣಿಸುವುದಿಲ್ಲ. ಅಸಲಿತನಕ್ಕಾಗಲಿ ಹೊಸತನಕ್ಕಾಗಲಿ ಅತಿರೇಕದ ಮೌಲ್ಯವನ್ನು ಕಟ್ಟಬೇಕಾಗಿಲ್ಲ. ಕನ್ನಡದ ಪ್ರಸಿದ್ಧ ಕವಿಯೊಬ್ಬರು ಹೇಳುತ್ತಾರೆ. “ನನ್ನ ಮನಸ್ಸು ಈಗಾಗಲೇ ಬೇಕಾದಷ್ಟು ಸಾರಿ ಪುನರುಕ್ಷಿಸಿಯಾಗಿರುವುದನ್ನೇ ಮತ್ತೆ ಮತ್ತೆ ಹೇಳಿ ಬಳಲಿದೆ”. ಒಟ್ಟಾರೆ ಭಾರತೀಯ ಸಂದರ್ಭದಲ್ಲಿ ಈ ನಿಲುವು ಸುಳ್ಳು ಎಂದು ನಾನು ಹೇಳಬಹುದೆ? ಈ ನೆಲೆಯಲ್ಲಿ ನಿಂತ ಮನಸ್ಸು ನಮ್ಮನ್ನು ಎಂತಹ ಬರವಣಿಗೆ ಕೊಡುವಂತೆ ಮಾಡಿದೆಯೆಂದರೆ, ಭಾರತದ ಶಾಸ್ತ್ರೀಯ ಸಂಗೀತದ ಅತ್ಯತ್ಕೃಷ್ಟ ರಚನೆಯೊಂದರೊಂದಿಗೆ ಅದು ಹೋಲಿಕೆಗೆ ನಿಲ್ಲಲಾರದು. ನಮ್ಮ ಶಾಸ್ತ್ರೀಯ ಸಂಗೀತವು ಅಸಲಿತನವನ್ನು ಹುಡುಕಿಸಿಕೊಂಡು ಓಡಾಡಿಲ್ಲ. ನಮ್ಮ ಪ್ರಾಚೀನ ಸಾಹಿತ್ಯದಂತೆಯೇ ಅದು ಸುಪ್ರಸಿದ್ಧ ರಾಗಗಳ ಮೂಲಕ ಅತ್ಯುತ್ಕೃಷ್ಟತೆಯ ಅಭಿವ್ಯಕ್ತಿಯನ್ನು ಆರಿಸಿಕೊಂಡಿದೆ. ಸುಪ್ರಸಿದ್ಧ ಕಥಾವಸ್ತುಗಳನ್ನು ಉಪಯೋಗಿಸಿಕೊಂಡೇ ನಮ್ಮ ಭಾಸ, ಕಾಳಿದಾಸ, ಭವಭೂತಿ ಮತ್ತು ಶೂದ್ರಕರು ತಮ್ಮ ನಾಟಕಗಳನ್ನು ಮಹಾಕಾವ್ಯಗಳನ್ನು ರಚಿಸಿದರು. ಹಾಗೆ ನೋಡಿದರೆ ಪರಿಚಿತ ಕಥಾ ವಸ್ತುವನ್ನೋ ಸುಪ್ರಸಿದ್ಧ ರಾಗಗಳನ್ನೋ ಉಪಯೋಗಿಸುವುದಕ್ಕೆ ಕಾರಣ, ರಚನೆಯ ಸರ್ವೋತ್ಕೃಷ್ಟ ಅಂಶಗಳನ್ನು ಓದುಗನೋ ಪ್ರೇಕ್ಷಕನೋ ಶ್ರೋತೃವೋ ಸವಿಯಲಾರದೆ ಹೋಗುವಂತಾಗದಿರಲಿ, ಅವನ ಗಮನ ಬೇರೆ ಕಡೆಗೆ ಚದುರಿ ಹೋಗದಿರಲಿ ಎನ್ನುವುದು. ನಾವು ಈ ಉಪಖಂಡದಲ್ಲಿ ಗಂಭೀರವಾಗಿ ಬರೆಯಬೇಕಾದರೆ ಬಹುಶಃ, ಈ ನಾಡಿನಲ್ಲೇ ವಿಕಾಸಗೊಂಡ ರಚನಶೀಲತೆಯ ಊರ್ಜಿತ ಮೂಲಗಳನ್ನು ಕುರಿತು ಸ್ವಲ್ಪ ಆಲೋಚಿಸಬೇಕು. ಬಹುಶಃ ಇದರಿಂದ ೨೧ನೆಯ ಶತಮಾನದಲ್ಲಿ ಹೆಚ್ಚು ತಾಳಿಕೆಯುಳ್ಳ ರಚನೆ ಸಾಧ್ಯವಾಗುವುದಕ್ಕೆ ದಾರಿಯಾಗಬಹುದು.

* * *

*