ಜಗತ್ತಿನ ಕೇಂದ್ರವೆಂದು ಈಗಾಗಲೇ ವಿಶ್ವದಾದ್ಯಂತ ಅನೇಕರು ಒಪ್ಪಿಕೊಂಡಿರುವಂಥ ನೆಲದಲ್ಲಿ ನಿಂತು ನಾನೀಗ ಮಾತನಾಡುತ್ತಿದ್ದೇನೆ. ನಾನು ವಾಸವಾಗಿರುವ ಭೂಭಾಗದಲ್ಲಿ ಹೊಸ ತಲೆಮಾರಿನ ಯುವಕರಿಗೆ ಭವಿಷ್ಯ ಅಂದರೆ ಅಮೇರಿಕ ಎಂಬಂಥಾಗಿದೆ. ಹಳೆಯದೆಲ್ಲದಕ್ಕೆ ಅವರು ವಿದಾಯ ಹೇಳಿ ಹೆಚ್ಚು ಸಮೃದ್ಧಿ ಹಾಗೂ ಹೆಚ್ಚು ಅಂತರ್ ಸಂಪರ್ಕ ಒದಗಿಸಬಲ್ಲಂಥ ಪ್ರಪಂಚವಾದ ಅಮೇರಿಕದ ಕಡೆ ನೋಡುತ್ತಿದ್ದಾರೆ. ಗತಕಾಲದ ಎಲ್ಲ ಸಾಮ್ರಾಜ್ಯಶಾಹಿ ಕೇಂದ್ರಗಳ ರೀತಿಯಲ್ಲೇ ಈವತ್ತಿನ ವಿಶ್ವಕೇಂದ್ರವಾಗಿರುವ ಅಮೇರಿಕ ದೂರದೂರದ ಭೂಭಾಗಗಳ ಭಾಷೆಗಳು ಮತ್ತು ಸಂಸ್ಕೃತಿಗಳನ್ನು ಅಳಿಸಿಹಾಕಿ ಅವುಗಳ ಜಾಗದಲ್ಲಿ ತನ್ನ ವಸ್ತುಬಲ ಮತ್ತು ಸೈನ್ಯದ ಬಲದಿಂದೊದಗುವ ವಿಧಾನವನ್ನು ಸ್ಥಾಪಿಸುತ್ತಿದೆ. ಈ ಪ್ರಕ್ರಿಯೆಯಲ್ಲಿ ಪುರಾತನವೂ ಕಾಲದ ಪರೀಕ್ಷೆಯಲ್ಲಿ ಗೆದ್ದಿರುವಂಥವೂ ಆದ ಅನೇಕ ಭಾಷೆಗಳು ಮತ್ತು ಸಂಸ್ಕೃತಿಗಳನ್ನು ಭೂಮವಾದಂಥ ಈ ಕೇಂದ್ರ ತನ್ನ ಸುಳಿಯೊಳಕ್ಕೆ ಎಳೆದುಕೊಂಡು ಬಿಡಬಹುದಾಗಿದೆ. ಆ ಭಾಷೆಗಳು ಮತ್ತು ಸಂಸ್ಕೃತಿಗಳನ್ನು ತನ್ನಲ್ಲಿ ಅಡಗಿಸಿಕೊಂಡುಬಿಡುತ್ತಿದೆ. ಇಲ್ಲವೆ ಅವುಗಳನ್ನು ಅಳಿಸಿಹಾಕುತ್ತಿದೆ. ಆ ತರಹದ ಅಂತರ್ಧಾನ, ಬುಡಮೇಲು, ಸ್ಥಾನಪಲ್ಲಟದ ಪರಿಣಾಮಗಳು ಒಂದು ಜನಸಮುದಾಯದ ಪ್ರಮುಖ ಕೊಂಡಿಗಳಾದ ಆಡುಮಾತು ಮತ್ತು ಬರೆಹದ ಮೇಲೆ ಕಾಣಿಸಿಕೊಳ್ಳುವುವು. ಒಂದು ಭಾಷೆಯ ಅತ್ಯಂತ ಸಂವೇದನಾಶೀಲವಾದ ಅಂಗವೆಂದರೆ ಅದರ ಪುರಾಣ ಕಲ್ಪನೆ ಮತ್ತು ರೂಪಕ ಶಕ್ತಿಯೇ ಆಗಿದೆ. ಮೇಲೆ ಹೆಸರಿಸಿದ ಪಲ್ಲಟಗಳು ಈ ಅಂಗದಲ್ಲಿ ಢಾಳಾಗಿ ಕಾಣಿಸಿಕೊಳ್ಳುವುವು. ಚಾರಿತ್ರಿಕವಾದ ಒತ್ತಡದ ಪರಿಣಾಮವಾಗಿ ಈ ಪಲ್ಲಟ ಪ್ರಕ್ರಿಯೆಗೆ ಒಳಗಾಗಿರುವಂಥ ನನ್ನ ಭಾಷೆ ಮತ್ತು ಸಾಹಿತ್ಯ ಮರಣಶಯ್ಯೆಯಲ್ಲಿರುವ ವ್ಯಕ್ತಿಯೊಬ್ಬ ತನ್ನ ನೆನಪುಗಳನ್ನು ಹೇಳಿಕೊಲ್ಳು ತವಕಿಸುವಂಥ ಪರಿಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಆದರೆ ಆ ನೆನಪುಗಳನ್ನು ಹೊಸರೀತಿಯ ವಿನ್ಯಾಸನಿರಾಕರಿಸುವುದರಿಂದ ಅವಕ್ಕೆ ಭವಿಷ್ಯವಿಲ್ಲ ಎನ್ನುವುದು ಖಚಿತವಾದಂತೆಯೇ ಪೌರಾಣಿಕ ಅಂತರ್ ಸಂಪರ್ಕವನ್ನು ನನ್ನ ಭಾಷೆ ಕಳೆದುಕೊಂಡಿದೆ ಎಂದ ಬಳಿಕ ಅದರ ಹೊಳೆಯುವಿಕೆ ಮತ್ತು ಚೈತನ್ಯವಷ್ಟೇ ಕುಗ್ಗಲಿಲ್ಲ. ಜೊತೆಗೆ ಅದರ ಬೇರೆ ಬೇರೆ ಅಂಗಗಳ ಸಂಯೋಜನೆಯ ಮೇಲೂ ದುಷ್ಪರಿಣಾಮವುಂಟಾಗಿದೆ. ನನ್ನ ಸಂಸ್ಕೃತಿಯಲ್ಲಿ ಅತ್ಯಂತ ಪಲ್ಲಟಕ್ಕೊಳಗಾಗಿರುವಂಥದು ನನ್ನ ಭಾಷೆ. ಸದ್ಯದ ಪರಿಸ್ಥಿತಿಯಲ್ಲಿ ನೆನಪು ಮತ್ತು ಭವಿಷ್ಯದ ನಡುವಿನ ರಣಾಂಗಣವಾಗಿದೆ ನನ್ನ ಭಾಷೆ ಬೇರೆ ರೀತಿ ಹೇಳುವುದಾದರೆ, ಭವಿಷ್ಯದ ಭರವಸೆಗಳೇನಾದರೂ ಇದ್ದ ಪಕ್ಷದಲ್ಲಿ ರೂಪಕಾತ್ಮಕ ಚೈತನ್ಯದಿಂದ ಸಾವಿರ ವರ್ಷಗಳಷ್ಟು ಹಳೆಯದಾದ ನೆನಪುಗಳಿಂದ ರೂಪಿತವಾದ ಭಾಷೆಯಲ್ಲಿ ಅಭಿವ್ಯಕ್ತಿಗೊಳಿಸಲಾಗದು ಎಂಬುದೇ ನನ್ನ ಅಭಿಮತ.

ನನ್ನ ಭಾಷಿಕ ಸಮುದಾಯದಲ್ಲಿ ತೆಲೆದೋರಿರುವ ವಿಚಲಿತಗೊಳಿಸುವ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕಾದರೆ ಕಳೆದ ಎರಡು ದಶಕಗಳ ಬೆಳವಣಿಗೆಯನ್ನು ಗಮನಿಸುವುದರ ಅಗತ್ಯವಿದೆ. ಮೂಲತಃ ಚಲನಶೀಲವೂ ಸ್ವಯಂಚೈತನ್ಯವುಳ್ಳದ್ದೂ ಆಗಿರುವ ಸಾವಿರ ವರ್ಷಗಳ ಇತಿಹಾಸವುಳ್ಳ ನನ್ನ ಭಾಷೆಗೆ ಈ ತರಹದ ಕುತ್ತು ಈ ಮೊದಲು ಬಂದಿರಲಿಲ್ಲ. ನನ್ನ ಸಾಹಿತ್ಯವನ್ನು ಬಹಳ ಹಿಂದಿನಿಂದ ಗಮನಿಸುವುದಕ್ಕೆ ಬದಲಾಗಿ, ಈಗಿನದಕ್ಕೆ ಹೋಲಿಸುವ ಸಲುವಾಗಿ ಕಳೆದ ಶತಮಾನದಲ್ಲಿ ಚಿತ್ರ ಹೇಗಿತ್ತು ಎಂದು ಅಂದಾಜು ಮಾಡಿದರೆ ಪರಿಸ್ಥಿತಿಯ ನೈಜಸ್ವರೂಪ ಅರಿವಾಗುತ್ತದೆ. ಕಳೆದ ಶತಮಾನದ ಮೊದಲರ್ಧ ಭಾಗದಲ್ಲಿ ಸಾಹಿತ್ಯ ನಿರ್ಮಾಣದಲ್ಲಿ ತೊಡಗಿದ್ದಂಥ ಉದ್ಧಾಮ ಲೇಖಕರು ಭಾಷೆಯನ್ನು ಪುನರುಜ್ಜೀವನ ಗೊಳಿಸುವವರ ಸಂಕಲ್ಪ ಮತ್ತು ಶ್ರದ್ಧೆಯಲ್ಲಿ ದುಡಿದಿದ್ದರು ಎಂಬುದು ಉತ್ಪ್ರೇಕ್ಷೆಯಲ್ಲಿ ಇತರ ಭಾಷೆಗಳಲ್ಲಿನ ಸಹ ಲೇಖಕರ ಮಾದರಿಯಲ್ಲೇ ಬ್ರಿಟಿಷ್ ವಿರೋಧದ ಸ್ವಾತಂತ್ರ್ಯ ಚಳುವಳಿಯ ಸ್ಪೂರ್ತಿಯೇ ಅವರಿಗೆ ಆಧಾರವಾಗಿತ್ತೆಂಬುದು ನಿಜ. ಅದ್ಬುತವಾದ ಭೂತದೊಡನೆ ಅದ್ಭುತವಾದ ಭವಿಷ್ಯವನ್ನು ಬೆಸೆಯಲು ಅವರು ಉದ್ಯುಕ್ತರಾದದ್ದು ವಿಸ್ಮಯಕಾರಿಯಾದ ಒಂದು ಚಾರಿತ್ರಿಕ ಚಳುವಳಿಯ ಹಿನ್ನಲೆಯಲ್ಲಿ ಇದರಿಂದಾಗಿ ಅವರು ಒಂದು ಹೊಸ ರೀತಿಯ ಸಾಹಿತ್ಯಕ ಭಾಷೆಯನ್ನೇ ಸೃಷ್ಟಿಸಿದರು ಎನ್ನಬೇಕು. ಈ ಪ್ರಯತ್ನದಿಂದ ಅವರು ಹಳೆಯ ಸಾಹಿತ್ಯ ಪ್ರಕಾರಗಳನ್ನು ಮತ್ತೆ ಶೋಧಿಸಿದ್ದಲ್ಲದೆ ಪಾಶ್ಚಾತ್ಯರಿಂದ ಪಡೆದುಕೊಂಡಂಥ ಕಾದಂಬರಿಯಂಥ ಹೊಸ ಮಾದರಿಯನ್ನು ಅನುಸರಿಸಿದರು. ಪಶ್ಚಿಮದ ಗದ್ಯದ ಪ್ರಪಂಚದ ಮೇಲೆ ಹೊಸ ಹಾಡು ಕಥೆ, ನಾಟಕ ಪ್ರಬಮಧ ಮತ್ತು ವಿಮರ್ಶೆಯ ವಿನ್ಯಾಸ ಬಿಡಿಸುವಾಗ ಪರಂಪರಾನುಗತವಾಗಿ ಬಂದ ಕಥಾನಕ, ನಾಟಕ ಮತ್ತು ಶ್ರದ್ಧಾ ಸಾಹಿತ್ಯವನ್ನು ಬದಲಾವಣೆಗೆ ಒಗ್ಗಿಸಲು ಪ್ರಯತ್ನಿಸಿದರು. ಗತಕಾಲದಲ್ಲಿ ನಮಗೆ ಪದ್ಯದ ವಿನಃ ಗದ್ಯವಿರಲೇ ಇಲ್ಲ ಎಂತಲ್ಲ. ಆದರೆ ನಿಲುಗಡೆ ಚಿನ್ಹೆಗಳನ್ನೊಳಗೊಂಡ ನೇರ ನಡೆಯ ಹೊಸ ಗದ್ಯಕ್ಕೂ ಒಂದು ಸ್ಥಿರ ಸಂಸ್ಕೃತಿಯ ಸೂಚಕವಾದ ಲಯಗಾರಿಕೆಯ ಗದ್ಯಕ್ಕೂ ವ್ಯತ್ಯಾಸವಿದ್ದಿತು. ಹಳೆಯ ಕಾಲದ ಗದ್ಯ ಮತ್ತು ಪದ್ಯವನ್ನು ಪಶ್ಚಿಮದ ವೈಚಾರಿಕತೆ, ಚಾರಿತ್ರಿಕತೆ ಹಾಗೂ ನೇರನಡೆಯನ್ನು ಅಭಿವ್ಯಕ್ತಿಸುವ ಹೊಸಕಾಲದ ಗದ್ಯವಾಗಿ ಮತ್ತು ಪದ್ಯವಾಗಿ ಪರಿವರ್ತಿಸುವುದು ಒಂದು ಪಂಥಾಹ್ವಾನದ ಕೆಲಸವಾಗಿತ್ತು. ಕೆಲವು ಅದೃಷ್ಟಶಾಲಿಗಳು ಗತಕಾಲದ ಅಭಿಜಾತ ಹಾಗೂ ಜಾನಪದೀಯ ಸ್ಮೃತಿಗಳು ಹಾಗೂ ಚರಿತ್ರೆ ಮತ್ತು ಭವಿಷ್ಯಕ್ಕೆ ಹೊಂದಾಣಿಕೆ ಮಾಡುವಲ್ಲಿ ಪ್ರಮಾಣಿಕ ಪ್ರಯತ್ನ ಮಾಡಿರುವುದನ್ನು ನಾವು ಕಾಣಬಹುದಾಗಿದೆ. ಕುವೆಂಪು ಅವರ ಸಾಹಿತ್ಯಕ್ಕೆ ಶಕ್ತಿ ಅದ್ಭುತವಾಗಿ ಈ ಕಾರ್ಯವನ್ನು ಸಾಧಿಸಿದೆ. ನಮ್ಮ ಅಭಿಜಾತ ಪರಂಪರೆ ಹಾಗೂ ತನ್ನ ಬಾಲ್ಯದ ನೆನಪುಗಳ ಸಹಾಯದಿಂದ ಪಶ್ಚಿಮ ನೀಡಿದ ಇಂಗ್ಲಿಷ್ ಶಿಕ್ಷಣದ ಮೂಲಕವಾಗಿ ಕುವೆಂಪು ಅವರು ಕಾವ್ಯ, ಗದ್ಯ, ನಾಟಕ ಮತ್ತು ವಿಮರ್ಶೆಯ ವಿಶಾಲ ತಳಹದಿಯ ಒಂದು ವಿಶಿಷ್ಟ ಮನೋಲೋಕವನ್ನು ನಿರ್ಮಿಸಿದರು. ಅವರ ಮಹಾಕಾವ್ಯ “ರಾಮಾಯಣದರ್ಶನಂ” ಹಾಗೂ ಅವರ ಎರಡು ಮಹಾ ಕಾದಂಬರಿಗಳು ಅವರ ಅಪರೂಪದ ಸಾಧನೆಗೆ ಹಿಡಿದ ಕನ್ನಡಿಯಾಗಿವೆ. ಅವರ ಮನೋಲೋಕದಲ್ಲಿ ಕಂಡುಬರುವ ಒಂದೇ ಒಂದು ನ್ಯೂನತೆ ಎಂದರೆ ಜನಪದದ ನೆಲಕ್ಕೆ ಹತ್ತಿರವಾದ ನುಡಿಗಟ್ಟನ್ನು ಅಲ್ಲಿ ಬೆಸೆಯದೇ ಹೋದದ್ದು. ಆ ಕಾಲದ ಇನ್ನೊಬ್ಬ ಮಹಾಮೇಧಾವಿ ಬೇಂದ್ರೆಯಲ್ಲಿ ಜನಪದ ಅಭಿವ್ಯಕ್ತಿಗೊಂಡಿತು. ಆದರೆ ಬೇಂದ್ರೆಯವರ ಪ್ರಪಂಚ ಎಷ್ಟೇ ಆಕರ್ಷಕವಾದರೂ ಭವಿಷ್ಯವನ್ನದು ಅನುಸಂದಾನ ಮಾಡುವುದಿಲ್ಲ. ಒಳ್ಳೆಯ ಗದ್ಯ ಬರೆಯಲು ಅವರಿಗೆ ಸಾಧ್ಯವಿಲ್ಲದ್ದು ಅಚ್ಚರಿಯೆನಿಸದು. ಹಾಗಾಗಿಯೇ ನುಡಿಯ ಐಂದ್ರಿಕ ಪರಿಣಾಮದ ಬಗ್ಗೆಯೇ ಅವರ ಲಕ್ಷ್ಯ ಹೆಚ್ಚಾಗಿತ್ತೇ ವಿನಃ ಅರ್ಥಕ್ಕವರು ತಲೆಕೆಡಿಸಿಕೊಂಡಿಲ್ಲವೆನ್ನುವುದು ಸ್ವಷ್ಟ.

ಸ್ವಾತಂತ್ರ್ಯ ಪೂರ್ವದ ಕಾಲಘಟ್ಟದಲ್ಲಿ ಸಮುದಾಯ ಸ್ಮೃತಿ ಹಾಗೂ ವೈಯಕ್ತಿಕ ವರ್ತಮಾನ ಮತ್ತು ಭವಿಷ್ಯ ಕುರಿತ ಕಾವ್ಯದ ನಡುವೆ ಉಂಟುಮಾಡಿಕೊಂಡಿದ್ದ ಒಂದು ರಾಜೀಸೂತ್ರ ಬಹಳ ಕಾಲ ಉಳಿಯಲಿಲ್ಲ. ನೆಹರು ಅವರ ‘ಭವಿಷ್ಯದೊಡನೆಯ ಒಪ್ಪಂದ’ ರಾಷ್ಟ್ರ ವಿಭಜನೆ ಮತ್ತು ರಕ್ತಪಾತದಲ್ಲಿ ಕೊನೆಗೊಳ್ಳುತ್ತಿದ್ದಂತೆಯೇ, ಮತಾಂಧನೊಬ್ಬನ ಗುಂಡೇಟಿನಿಂದ ಗಾಂಧಿ ಆದರ್ಶವಾದವು ಛಿದ್ರಗೊಂಡಿತ್ತು. ಉದಾರವಾದ ಸ್ವಾತಂತ್ರ್ಯ ಮತ್ತು ಸಮಾಜವಾದಗಳನ್ನು ಬೆಸೆಯುವಂಥ ನೆಹರೂ ಅವರ ಪ್ರಯೋಜನವಾದವೂ ಕೂಡ ನೆಲಕಚ್ಚಿತು. ೧೯೫೦ಕ್ಕಿಂತ ಮೊದಲಿನ ಬರವಣಿಗೆಯಲ್ಲಿ ಕಾಣಿಸಿಕೊಂಡಿದ್ದ ಮಧ್ಯಮವರ್ಗ ಮತ್ತು ಮೇಲ್ಜಾತಿಯವರ ವೈಚಾರಿಕ ರಮ್ಯವಾದವು ನನ್ನ ಮತ್ತು ನನ್ನ ಸಮಕಾಲೀನರ ದೃಷ್ಟಿಯಲ್ಲಿ ನಮ್ಮ ಕಾಲದ ಆತಂಕಗಳೆದುರು ಒಂದು ಕೊಳಕು ತಮಾಷೆಯಾಗಿ ಕಂಡಿತು.

ಇನ್ನು ಮುಂದೆ ಪ್ರಥಮಪುರುಷದಲ್ಲಿ ಬರವಣಿಗೆ ಮುಂದುವರಿಸಲಾರೆ. ಪೊಳ್ಳು ವಸ್ತುನಿಷ್ಠತೆಯನ್ನು ನಾನು ನಟಿಸಲಾರೆನಾದ್ದರಿಂದ ದಯವಿಟ್ಟು ನನ್ನೊಡನೆ ಸಹಕರಿಸಿ. ನನ್ನ ಕೆಲವು ಸಮಕಾಲೀನರ ಆತಂಕಗಳನ್ನು ನಾನು ಹಂಚಿಕೊಂಡಿದ್ದೇನೆ. ಸ್ವಾತಂತ್ರ್ಯ ಪೂರ್ವದ ಆದರ್ಶಕ್ಕೆ ನನ್ನಿಂದ ಹೋಗಲಾಗಲಿಲ್ಲ. ಭಾರತ ಸ್ವಾತಂತ್ರ್ಯ ಪೂರ್ವಕಾಲದ ಎಲ್ಲ ಸೂಕ್ಷ್ಮ ಸಂವೇದನೆಯ ಬರಹಗಾರರ ಹಣೆಬರಹವೂ ಇದೇ ಆಗಿದೆ. ಆ ಕಾಲದಲ್ಲಿ ಬರೆಯುತ್ತಿದ್ದ ನನ್ನ ಭಾಷೆಯ ಮತ್ತು ಇತರ ಭಾಷೆಯ ಲೇಖಕರು ಸ್ಪೂರ್ತಿಗಾಗಿ ಬೇರೆ ಕಡೆ ನೋಡಬೇಕಾದದ್ದು ಅನಿವಾರ್ಯವಾಯಿತು. ಕೆಲವರು ವಾಮಪಂಥೀಯ ಸಿದ್ಧಾಂತದಲ್ಲೂ ಮತ್ತೆ ಕೆಲವರು ಪ್ರಗತಿಶೀಲ ಆಧುನಿಕತೆಯಲ್ಲೂ ಆಶ್ರಯ ಪಡೆದರು. ಇನ್ನು ಕೆಲವರು ಪಶ್ಚಿಮದ ಅತಿ ಆಧುನಿಕ ಪ್ರಯೋಗಾತ್ಮಕ ಆಧುನಿಕತೆಗೆ ಜೋತುಬಿದ್ದರು. ನನ್ನ ತಲೆಮಾರಿನ ಲೇಖಕರು ಗ್ರಾಮೀಣ ಹಿನ್ನಲೆಯಿಂದ ಬಂದವರಾಗಿದ್ದರೂ ಅವರು ಮೇಲ್ಜಾತಿಗೆ ಸೇರಿದವರಾಗಿದ್ದುದರಿಂದ, ತಮ್ಮ ಅಂತರಾಳದಲ್ಲಿ ತಮ್ಮ ಸಾಂಸ್ಕೃತಿಕ ಆಸ್ಮಿತೆಯನ್ನು ಅನುಭವಿಸಲು ಸಮರ್ತರಾಗಲಿಲ್ಲ. ಈ ನೆಲ ಮತ್ತು ರಕ್ತದೊಡನೆ ಗಾಢವಾದ ಸಂಬಂಧವನ್ನು ಹೊಂದಿರಲಿಲ್ಲವಾಗಿ ಮೇಲ್ಜಾತಿಯವರಿಗೆ ಇಂಗ್ಲೀಷ್ ಭಾಷೆಯನ್ನನುಸರಿಸುವುದು ಕಷ್ಟವಾಗಲಿಲ್ಲ. ಏಕೆಂದರೆ ನನ್ನ ಹಿನ್ನಲೆಯೇ ಬೇರೆ, ಹಿಂದುಳಿದ ಒಂದು ಕುಶಲಕರ್ಮಿ ಜನಾಂಗಕ್ಕೆ ಸೇರಿದವನು ನಾನು. ಹಾಗಾಗಿ, ಆಗಿನ ಆತಂಕಗಳಿಗೆ ನಾನು ನನ್ನ ನೆಲದ ಮೂಲದಿಂದ ಪ್ರತಿಸ್ಪಂದಿಸಿದೆ. ನನ್ನ ಸಮಕಾಲೀನರನ್ನು ಬೇರಿರದ ಆಧುನಿಕರಾದ ಎಲಿಯಟ್ ಮತ್ತು ಪೌಂಡ್ ಪ್ರಭಾವಿಸಿದ ಹಾಗೆ ನನ್ನನ್ನು ಮುಟ್ಟಲಿಲ್ಲ. ನೆಲದ ಸಂಪರ್ಕದಿಂದ ಯಾವತ್ತೂ ದೂರ ಸರಿಯಾದ ಏಟ್ಸ್ ಮತ್ತು ಲೋರ್ಕಾ ಅವರು ನನಗೆ ಸ್ಪೂರ್ತಿ ನೀಡಿದರು. ವ್ಯಂಗ್ಯವನ್ನು ಸವ್ಯರೂ ಇನ್ನಿಲ್ಲವೆಂಬಂತೆ ಆರಾಧಿಸತೊಡಗಿದಾಗ ಜನಪದರ ಹಾಡುಗಳು ಮತ್ತು ಕಥಾನಕಗಳನ್ನು ಅವರು ದೂರ ಮಾಡಿದರು, ನೆಲದ ಜೊತೆಗಿನ ಅವರ ನಂಟು ಬಹಳ ಸಪೂರವಾಗಿತ್ತು. ನನ್ನ ಸಮುದಾಯದ ಹಾಡು ಮತ್ತು ನೃತ್ಯವನ್ನು ನಾನು ಯಾವಾಗಲೂ ನನ್ನ ಜೊತೆಯೇ ಧರಿಸಿದ್ದೆ, ಯುರೋ ಅಮೇರಿಕನ್ ಪ್ರಯೋಗಿಕ ಆಧುನಿಕತೆಯ ವಕ್ತಾರರಾದ ಗೋಪಾಲಕೃಷ್ಣ ಅಡಿಗರು ಒಂದು ಅಭಿಜಾತ ನೆಲೆಯಲ್ಲಿ ಅಂದರೆ ಬ್ರಾಹ್ಮಣ ಪರಿಪ್ರೇಕ್ಷ್ಯದಲ್ಲಿ ಆತಂಕಗಳಿಗೆ ಪ್ರತಿಕ್ರಿಯಿಸಿದರು. ಬ್ರಾಹ್ಮಣರು ಅಥವಾ ಬ್ರಾಹ್ಮಣೇತರಿರಲಿಲ್ಲ ಲಂಕೇಶ, ರಾಮಚಂದ್ರ ಶರ್ಮ, ಅನಂತಮೂರ್ತಿ ಮುಂತಾದ ಲೇಖಕರು ಅದೇ ಮಾರ್ಗವನ್ನನುಸರಿಸಿದರು. ಈ ಲೇಖಕರು ವ್ಯಂಗ್ಯದಲ್ಲಿ ತಮ್ಮ ಭಾಷೆಯನ್ನು ನಿಶಿತಗೊಳಿಸಿದರು. ಬರಹದ ಕುಶಲತೆಗೆ ಒಂದು ಹೊಳಪು ನೀಡಿದರು ಎಂಬುದು ನಿಜವಾದರೂ ಅವರ ತರ್ಕ ಎಷ್ಟು ವಿಪರೀತಕ್ಕೆ ಹೋಯಿತೆಂದರೆ ಅವರ ಚಮತ್ಕಾರದ ಬರವಣಿಗೆಗಳಿಂದ ಉತ್ಕಟತೆ ಮಾಯವಾಯಿತು. ಮುಕ್ತ ಛಂದಸ್ಸಿನಲ್ಲಿ ಬರೆಯಲು ಅವರು ಮುಂದಾದದ್ದರ ಬಗ್ಗೆ ಯಾರ ತಕರಾರೂ ಇಲ್ಲ. ಆದರೆ ಛಂದಸ್ಸಿಗೆ ಭಾಷಿಕ ಅರಾಜಕತೆ ಹಾಗೂ ಲಯರಾಹಿತ್ಯವೇ ಪರ್ಯಾಯವಲ್ಲ. ನಮ್ಮ ತಲೆಮಾರಿನವರಲ್ಲಿ ಕಾಮ ಪ್ರಧಾನವಾಗಿ ಕಾಣಿಸಿಕೊಂಡಿತು. ಆದರೆ ಅದನ್ನು ಬಹುತೇಕರು ಬೌದ್ಧಿಕ ತರ್ಕವಾಗಿಸಿಕೊಂಡರು. ಪ್ರಯೋಗಿಕ ಆಧುನಿಕತೆಯು ನನ್ನ ಸಮಕಾಲೀನರಲ್ಲಿ ‘ಕಾಟದ ಮಗುವಿನ ರೋಗಲಕ್ಷಣ’ಕ್ಕಿಂತ ಹೆಚ್ಚಿಗೆ ಏನನ್ನೂ ಸಾಧಿಸಲಾಗಲಿಲ್ಲ. ನನ್ನ ಮಾದರಿಗಳು ಪಶ್ಚಿಮದಲ್ಲಿಲ್ಲದ್ದರಿಂದ ಬೇರೆ ಮಾರ್ಗವನ್ನೇ ನಾನು ಹುಡುಕಿಕೊಳ್ಳಬೇಕಾಯಿತು. ಏಟ್ಸ್ ಕರೆಯುವ “ಮಹಾಸ್ಮೃತಿ”ಯಲ್ಲಿ ಬೇರುಬಿಟ್ಟ ಪ್ರತಿಮೆಗಳು ಮತ್ತು ಸಂಕೇತಗಳಿಗೆ ನಾನು ಬದ್ಧನಾದೆ. ಅಷ್ಟರಮಟ್ಟಿಗೆ ನಾನು ದೇಶೀವಾದಿ ಚಮತ್ಕಾರಕ್ಕೆ ನವ್ಯತೆ ಆ ಬಗೆಯಾಗಿ ಜೋತುಬಿದ್ದಿದ್ದರಿಂದ ಕಾವ್ಯದಿಂದ ಸಂಗೀತ, ಕಥೆ, ಅದರ ಮಹಾಕಾವ್ಯ ವಿಸ್ತಾರ, ನಾಟಕೀಯತೆ ಮತ್ತು ರಂಗಚಹರೆ ಎಲ್ಲ ಮಾಯವಾಯಿತು.

ನಿಸರ್ಗದಿಂದಾವೃತವಾದ ಹುಟ್ಟಿದೂರಿನ ನೇರವಾದ ಜನಪದ ಸಂಸ್ಕೃತಿಯ ಸಂಪರ್ಕ ಹಾಗೂ ತರುವಾಯ ಜನಪದ ತಜ್ಞನಾಗಿ ನಾನು ಪಡೆದ ತರಬೇತಿ-ಇವುಗಳಿಂದಾಗಿ ಯುರೋ ಕೇಂದ್ರದ ಅಧುನಿಕತೆಗೆ ತಮ್ಮ ಆತ್ಮಗಳನ್ನು ಅರ್ಪಿಸಿಕೊಂಡಿದ್ದ ನನ್ನ ಸಮಕಾಲೀನರಿಂದ ಆಚೆ ನೋಡುವುದಕ್ಕೆ ನನಗೆ ಸಾಧ್ಯವಾಯಿತು. ನನ್ನ ಕಾವ್ಯ ಕಥೆ ಹಾಗೂ ನಾಟಕಗಳು ನಮ್ಮ ಪರಂಪರೆಯ ಪುರಾಣಸೃಷ್ಟಿಯ ಭಾಷೆಯ ಮೂಲಕ ಸಮುದಾಯಗಳ ವಿಘಟನೆಯನ್ನು ವಿಶ್ಲೇಷಿಸಲು ಪ್ರಯತ್ನಿಸುತ್ತದೆ. ಬೇರೆ ಮಾತಿನಲ್ಲಿ ಹೇಳುವುದಾದರೆ ಬಹುತೇಕ ನವ್ಯ ಬರಹಗಾರರು ಏಕ ಪರಿಮಾಣಾತ್ಮಕವಾಗಿ ಪುರಾಣಗಳನ್ನು ಒಡೆಯಲು ಪ್ರಯತ್ನಿಸುತ್ತಿದ್ದೆ. ಅಂದ ಬಳಿಕ. ನನ್ನ ಸಮಕಾಲೀನರ ಆಮದು ಮಾಡಿಕೊಂಡ ಆಧುನಿಕತೆಯು ನನ್ನ ನೆಲದಲ್ಲಿ ಬೇರೂರಿದ ಆಧುನಿಕ ಬರಹಗಳೊಡನೆ ನನ್ನ ಭಾಷೆಯ ಆಧುನಿಕತೆಯ ಚಿತ್ರವನ್ನು ಪೂರ್ಣಗೊಳಿಸುತ್ತದೆ.

ನವ್ಯ-ಪೂರ್ವದ ಸಾಹಿತ್ಯಕ ಅನುಭವವು ಸ್ಮೃತಿಯನ್ನು ಆದರ್ಶ ರಾಜ್ಯದ ಕನಸಿನೊಡನೆ ರಾಜಿ ಮಾಡಲು ಹವಣಿಸಿದರೆ, ನವ್ಯರ ಅಭಿವ್ಯಕ್ತಿಗಳು ಗತದ ನೆನಪು ಮತ್ತು ಭವಿಷ್ಯದ ಕನಸಿನೊಡನೆ ಒಂದು ಬೆಸುಗೆ ಏರ್ಪಡಿಸುವ ಪ್ರಯತ್ನದಲ್ಲಾದಂಥ ಭಗ್ನತೆ ಮತ್ತು ಸೋಲನ್ನು ಪ್ರತಿಫಲಿಸುತ್ತವೆ. ಪುರಾಣದ ಭಾಷೆಯನ್ನು ಮತ್ತೆ ಪಡೆಯುವ ಪ್ರಯತ್ನದ ಮೂಲಕ ಪಶ್ಚಿಮದ ದೊಡ್ಡ ಆಧುನಿಕ ಬರಹಗಾರರು ಚರಿತ್ರೆಯ ಕುರೂಪದ ಬೆಳವಣಿಗೆಯ ವಿರುದ್ಧ ಬಂಡೆದ್ದರು. ಆ ತರಹದ ಅಪಾಯಕಾರಿ ಹೆಜ್ಜೆ ಇಡಲು ಅಂಜುಬುರುಕರಾದ ನಮ್ಮ ನವ್ಯರಿಗೆ ಚೈತನ್ಯವಿರಲಿಲ್ಲ. ನನ್ನ ವಿನಮ್ರ ಪ್ರಯತ್ನದಲ್ಲಿ ನನ್ನ ಆತಂಕಭರಿತ ವರ್ತಮಾನವನ್ನು ಅಭಿವ್ಯಕ್ತಗೊಳಿಸಲು ನಾನು ಹುಟ್ಟಿನಿಂದ ಪಡೆದ ನನ್ನ ಭಾಷೆಯ ಉಕ್ತಿ ವಿನ್ಯಾಸವನ್ನು ಬಳಸಿಕೊಂಡೆ. ಎಷ್ಟೇ ದುರಂತದ್ದಾದರೂ ಫಲಶಕ್ತಿಯ ಹುಡುಕಾಟವನ್ನು ನನ್ನ ಕೃತಿಗಳಲ್ಲಿ ಒಬ್ಬ ಸತ್ಯಾರ್ಥಿಯ ಉತ್ಕಟತೆಯಲ್ಲಿ ನಡೆಸಿದ್ದೇನೆ. ಹಳೆಯ ವ್ಯವಸ್ಥೆಗಳನ್ನು ಪುನರ್ ಸ್ಥಾಪಿಸುವುದು ಎಷ್ಟು ಅಸಾಧ್ಯೆವೆಂದು ನನಗೆ ಚೆನ್ನಾಗಿ ತಿಳಿದಿದೆ. ಆದರೆ ವರ್ತಮಾನದ ಬರಡುತನವನ್ನು ಸಹಿಸಿಕೊಳ್ಳಬೇಕಾದರೆ ಆ ವ್ಯವಸ್ಥೆಗಳ ಉತ್ಕಡತೆ ಅತ್ಯಗತ್ಯವಾಗಿ ಬೇಕು ಎಂಬುದನ್ನು ನಾನು ಮನಗಂಡವನಾಗಿದ್ದೇನೆ.

ಎಡಪಂಥೀಯವಾದ ಪ್ರಗತಿಪರ ಆಧುನಿಕತೆಯು ಕನ್ನಡ ಬರಹದಲ್ಲಿ ನೆಲದಿಂದ ಮೇಲೇಳಲಿಲ್ಲ. ಸ್ವಾತಂತ್ರ್ಯ ಪೂರ್ವದ ಪ್ರಗತಿಶೀಲರು ನಿರ್ಜೀವವಾದ ಕಥಾಸಾಹಿತ್ಯವನ್ನು ಯಾಂತ್ರಿಕವಾಗಿ ಹೊರಹಾಕಲಷ್ಟೇ ಸಮರ್ಥರಾಗಿದ್ದರು. ಆದರೆ ತದನಂತರದ ಪ್ರಗತಿಶೀಲರು ಚಾರಿತ್ರಿಕವಾಗಿ ಮುಖ್ಯಪಾತ್ರ ವಹಿಸಿದ್ದನ್ನು ನಾವು ಮರೆಯುವಂತಿಲ್ಲ. ತುರ್ತುಪರಿಸ್ಥಿತಿ ಕಾಲದ ಅನುಭವಗಳಿಗೆ ಪ್ರತಿಸ್ಪಂದನೆಯಾಗಿ ಎಪ್ಪತ್ತರ ದಶಕದ ಕೊನೆಯಲ್ಲಿ ಕಾಣಿಸಿಕೊಂಡ ದಲಿತ-ಬಂಡಾಯ ಚಳುವಳಿ ‘ಖಡ್ಗವಾಗಲಿ ಕಾವ್ಯ’ ಎಂಬ ಧ್ಯೇಯ ಹೊತ್ತು ಜನರ ಸಾಮಾಜಿಕ ರಾಜಕೀಯ ಅಗತ್ಯಗಳಿಗೆ ಸಮವೇದಿಯಾದ ಹೊಸ ಸಾಹಿತ್ಯವನ್ನು ನಿರ್ಮಿಸಲು ಪ್ರಯತ್ನಿಸಿತು. ಅಣುಬಾಂಬಿನ ಯುಗದಲ್ಲಿ ಕಾವ್ಯ ಖಡ್ಗವಾಗುವುದಾದರೂ ಹೇಗೆ? ಈ ಲೇಖಕರು ಗತವೆನ್ನುವುದೆಲ್ಲ ಸಾಚಿಕ ಪಡಬೇಕಾದ ಪ್ರಸಂಗವಾಯಿತು. ಭವಿಷ್ಯಕ್ಕೆ ಮಾತ್ರ ಸುಖ ನೀಡಬಲ್ಲ. ಸೂತ್ರವಿರುವುದೆಂದಾಯಿತು. ಈ ಚಳುವಳಿಯ ಆಸಕ್ತಿದಾಯಕ ಅಂಶವೆಂದರೆ ಅತ್ಯಂತ ತುಳಿತಕೊಳ್ಳಗಾದ ದಲಿತರು ಹಾಗೂ ಅಸ್ಪೃಶ್ಯ ಸಮುದಾಯಗಳಿಂದ ಬರಹಗಾರರು ಹೊರಹೊಮ್ಮಲು ಸಾಧ್ಯವಾದದ್ದು. ಈ ಚಳುವಳಿಯ ಅತ್ಯಂತ ಸಮರ್ಥ ಧ್ವನಿಯಾಗಿ ಕಾಣಿಸಿಕೊಂಡ ಸಿದ್ಧಲಿಂಗಯ್ಯ ಕ್ರಾಮತಿಕಾರಿ ಹುರುಪಿನಿಂದ ಪುಟಿಯುವ ಎರಡು ಕವನ ಸಂಕಲನಗಳನ್ನು ಹೊರತಂದರು, ಸ್ವೀಕೃತವಾದ ಕಾವ್ಯದ ಪರಿಕಲ್ಪನೆಯನ್ನೇ ಈ ಪದ್ಯಗಳು ಸಮರ್ಥವಾಗಿ ಪ್ರಶ್ನಿಸಿದವು. ಗಮನಾರ್ಹವಾದ ಮತ್ತೊಬ್ಬ ಲೇಖಕರೆಂದರೆ ಅದೇ ಹಿನ್ನಲೆಯಿಂದ ಬಂದ ದೇವನೂರು ಮಹಾದೇವ, ಅಂಚಿಗೆ ತಳ್ಳಲ್ಪಟ್ಟ ಜನರ ಸಾಮಾಜಿಕ ಸಾಂಸ್ಕೃತಿಕ ವಾಸ್ತವಗಳನ್ನು ಇವರು ತಮ್ಮ ಕಥಾಲೋಕದಲ್ಲಿ ಪಡಿಮೂಡಿದರು. ಅತ್ಯಂತ ಭರವಸೆ ಹುಟ್ಟಿಸುವ ಬರಹಗಳನ್ನು ನೀಡಿದ ಬಳಿಕ ಈ ಇಬ್ಬರು ಲೇಖಕರೂ ಬರಹದ ವ್ಯವಹಾರದಿಂದ ದೂರವಾದಂತೆ ತೋರುತ್ತದೆ. ಕವಿ ಸಿದ್ಧಲಿಂಗಯ್ಯನವರು ಭವಿಷ್ಯದ ಭರವಸೆಗಳನ್ನು ನಗರದ ಕೊಳಚೆ ಪ್ರದೇಶಗಳು ಹೇರುವ ಭಾಷಿಕ ಮಿತಿಯನ್ನು ಮೀರಿ ಪ್ರತಿಫಲಿಸುವಷ್ಟು ಸಮರ್ಥರಾಗಲಿಲ್ಲ. ಸಾಮುದಾಯಿಕವಾದ ಪೌರಾಣಿಕ ಕಲ್ಪನೆ ಹಾಗೂ ವರ್ತಮಾನದ ಆತಂಕ ಇವುಗಳ ನಡುವೆ ಒಂದು ಸೂತ್ರವನ್ನು ಕಂಡುಹಿಡಿದುಕೊಳ್ಳಲಾಗದ ಮಹಾದೇವರ ಬರವಣಿಗೆ ಕೂಡ ಆಯ ತಪ್ಪಿತು. ಭೂತಕಾಲದ ಅಥವಾ ವರ್ತಮಾನದ ಮಾದರಿಯನ್ನು ಅನುಸರಿಸಲಾರದಂಥ ಅಸಮರ್ಥತೆ ಹಾಗೂ ಜಿಡ್ಡುಗಟ್ಟಿದ, ಜೀವಂತ ಅನುಭವದ ಪರೀಕ್ಷೆಗೆ ಒಳಪಡದಂಥ ಸಿದ್ಧಂತವೊಂದಕ್ಕೆ ಬದ್ಧವಾಗುವ ಪರಿಪಾಠದಿಂದಾಗಿ ಕನ್ನಡದ ಬಹುತೇಕ ದಲಿತ ಬರವಣಿಗೆ ಕಂಗೆಟ್ಟಿದೆ. ಎಂಬತ್ತರ ದಶಕದ ಸಂಗತಿಯಾದ ಮಹಿಳೆಯರ ಧ್ವನಿ ಕೂಡ ಅಭಿವ್ಯಕ್ತಿಗಾಗಿ ಶೋಧನೆ ನಡೆಸಿರುವಂಥ ಮತ್ತೊಂದು ಗುಂಪು. ಎಚ್.ಎಲ್. ಪುಷ್ಪ ಮತ್ತು ವೈದೇಹಿ ಅವರ ಕೃತಿಗಳ ಅಪರೂಪದ ಭರವಸೆಯ ನಂತರ ಮಹಿಳಾ ಬರಹಗಳ ನುಡಿಹಟ್ಟು ಸಾಹಿತ್ಯಕ ಅಂಶಗಳಿಗಿಂತ ಹೆಚ್ಚಾಗಿ ಒಂದು ಸಮಾಜಶಾಸ್ತ್ರಿಯ ಸಂಗತಿಯಾಗಿ ಕಾಣತೊಡಗಿದೆ. ಬೇರೆ ಮಾತಿನಲ್ಲಿ ಹೇಳುವುದಾದರೆ, ನನ್ನಂಥ ವಯಸ್ಸಾಗುತ್ತಿರುವ ಲೇಖಕನೊಬ್ಬ ಅವರ ಬರಹಗಳಿಂದ ಪ್ರೇರೇಪಿತನಾಗಿ ಹೊಸ ಬೆಳಕಿನಲ್ಲಿ ನನ್ನ ಸೃಜನಶೀಲತೆಯನ್ನು ಪುನರ್ ಶೀಲನೆಗೆ ಒಳಗು ಮಾಡುವ ಪಂಥಾಹ್ವಾನವೇನೂ ಕಾಣಿತ್ತಿಲ್ಲ. ಇಂಥ ಆಹ್ವಾನ ನೀಡುವ ಕವಿ ಈಗಲೂ ಕೂಡ ಕನ್ನಡದಲ್ಲಿ ಎಚ್.ಎಸ್. ಶಿವಪ್ರಕಾಶ್ ಒಬ್ಬರೇ.

ವಿಮರ್ಶಾ ಬರವಣಿಗೆಯ ಸಮೃದ್ಧಿಯಾದರೂ ಇದ್ದಿದ್ದರೆ ಪರಿಸ್ಥಿತಿ ಉತ್ತಮವಾಗುತ್ತಿತ್ತು. ಕೀರ್ತಿನಾಥ ಕುರ್ತಕೋಟಿ ಮತ್ತು ಡಿ.ಆರ್. ನಾಗರಾಜ್ ಅವರನ್ನು ಬಿಟ್ಟರೆ ಮಹಾತ್ವಾಕಾಂಕ್ಷೆಯ ವಿಮರ್ಶಕರನ್ನು ನಾವು ಪಡೆಯಲಿಲ್ಲ. ಇವರಿಬ್ಬರಲ್ಲೂ ಪರಂಪರೆಗಳ ದೃಷ್ಟಿಯಿಂದ ವರ್ತಮಾನವನ್ನು ವಿಶಾಲವಾದ ಪರಿಪ್ರೇಕ್ಷದಲ್ಲಿಟ್ಟು ದೋಡುವ ಸಾಮರ್ಥ್ಯವಿತ್ತು. ಡಿ.ಆರ್. ನಾಗರಾಜ ಅವರು ಕೆಲವು ವರ್ಷಗಳ ಹಿಂದೆ ಅಕಾಲಿಕವಾಗಿ ಮರಣಹೊಂದಿದಾಗ ಕನ್ನಡದ ಬರವಣಿಗೆಗೆ ದೊಡ್ಡ ನಷ್ಟ ಉಂಟಾಯಿತು. ಹಿರಿಯ ವಿಮರ್ಶಕರಾದ ಕುರ್ತಕೋಟಿ ಅವರೂ ಇತ್ತೀಚೆಗೆ ತೀರಿಕೊಂಡರು. ವಿಮರ್ಶೆಯಲ್ಲಿ ಉಂಟಾದ ರಿಕ್ತಸ್ಥಾನ ದಿನೇದಿನೇ ದೊಡ್ಡದಾಗುತ್ತಿದೆ.

ನಲವತ್ತು ವರ್ಷಗಳ ಹಿಂದೆ ನಾನು ಬರೆಯಲು ತೊಡಗಿದಾಗಿನ ವಿದ್ಯಮಾನಕ್ಕೂ ಈಗ್ಗೂ ಜಗತ್ತು ಬಹಳ ಬದಲಾಗಿದೆ. ನಾನು ನನ್ನ ಹಿನ್ನಲೆಯಿಂದ ಪಡೆದುಕೊಂಡ ಭಾಷೆಯನ್ನು ಪುನಶ್ಚೇತನಗೊಳಿಸಿ ನನ್ನ ಸೃಜನಾತ್ಮಕತೆಗೆ ಉಪಯೋಗಿಸಿಕೊಂಡು ವರ್ತಮಾನದ ದಿಗಲನ್ನು ಅಭಿವ್ಯಕ್ತಿಗೊಳಿಸುವ ಸನ್ನಿವೇಶದಲ್ಲಿ ನನ್ನ ಸಮಕಾಲೀನರಿಗಿಲ್ಲದ ಒಂದು ಅನುಕೂಲವನ್ನು ಪಡೆದಿದ್ದೆ. ಗತಕಾಲದ ಸಮೃದ್ಧ ಬಾಷೆಯಲ್ಲಿ ಇನ್ನೂ ಉಳಿದಿರುವ ಚೈತನ್ಯವನ್ನು ಉದ್ವೀಪನಗೊಳಿಸಿಕೊಂಡು ನಾನೀಗಾಗಲೇ ಸೃಜಿಸಿರುವ ಪುರಾಣಕ್ಕೆ ಹೊಸ ಆಯಾಮಗಳನ್ನು ಕೊಡಲು ಕೆಲಸ ಮಾಡುತ್ತಿದ್ದೇನೆ. ಎಚ್.ಎಸ್. ಶಿವಪ್ರಕಾಶರ ಹೊರತಾಗಿ ನನ್ನ ಭಾಷೆಯ ಹೊಸ ತಲೆಮಾರಿನ ಬರಹಗಾರರಲ್ಲಿ ಆ ತರಹದ್ದೇನನ್ನೂ ನಾನು ಕಾಣೆ. ಇದಕ್ಕೆ ಕಾರಣಗಳೂ ಇವೆ. ವರ್ತಮಾನದ ಮೂಲಕ ಗತದ ವಿಧಾನದಿಂದ ಭವಿಷ್ಯತ್ತಿನ ರೀತಿಗೆ ಹೊರಳಿಕೊಳ್ಳುವಂಥ ಕ್ರಿಯೆಯನ್ನು ಸಮುದಾಯ ನಡೆಸದಿರುವುದೇ ಭಾಷೆ ಸಂಕೋಚಗೊಳ್ಳಲು ಪ್ರಧಾನವಾದ ಕಾರಣ. ನನಗೆ ಲಭ್ಯವಿರುವ ಜಾನಪದ ಭಾಷೆ ಈ ತಲೆಮಾರಿನ ಬರಹಗಾರರ ಅಗತ್ಯಗಳಿಗೆ ಓಗೂಡುವಂತೆ ತೋರುತ್ತಿಲ್ಲ. ಆದರೆ ಸ್ಮರಣೆಯ ಆಳದಲ್ಲಿ ಬೇರಿಬಿಟ್ಟ ಜೀವಂತ ನುಡಿಗಟ್ಟನ್ನರಿಯುವ ಶಕ್ತಿಯಿಲ್ಲದೆ ವರ್ತಮಾನವನ್ನು ಅವರು ಹೇಗೆ ತಾನೆ ಪಡಿಮೂಡಿಸುತ್ತಾರೆ?

ಕವಿಯೂ ನಾಟಕಕಾರರೂ ಆದ ಶಿವಪ್ರಕಾಶ್ ಭಾಷೆಯ ಭರವಸೆಯನ್ನು ಜೀವಂತವಾಗಿಟ್ಟಿರುವುದರಿಂದ ಅವರ ಹೆಸರನ್ನು ನಾನು ಅಗತ್ಯವಾಗಿ ಹೇಳಬೇಕಾಗಿದೆ. ಸಮೃದ್ಧವಾದ ಜಾನಪದ ಸಂಸ್ಕೃತಿ ಬಾಲ್ಯದಲ್ಲಿ ನನಗೆದಕ್ಕಿದ ಹಾಗೆ ಅವರಿಗೆ ದೊರಕ್ಕಿಲ್ಲ. ಅವರದು ಸಂಪೂರ್ಣವಾಗಿ ನಗರ ಜೀವನದ ಹಿನ್ನಲೆ. ಆದರೆ ನವ್ಯದ ಮಾದರಿಯಲ್ಲಿ ಪ್ರಯೋಗವನ್ನು ನಡೆಸಿದ ಬಳಿಕ ಆ ಮಾರ್ಗದ ವ್ಯರ್ಥತೆ ಅವರಿಗೆ ಅರಿವಾಯಿತು. ಈಗಿನ ಬಂಡವಾಳಶಾಹಿ ಉಪಯೋಗಿ ಭಾಷೆ ಮತ್ತು ಪರಿಸ್ಥಿತಿಯ ಸ್ಮೃತಿ ರಹಿತವಾದ ಸ್ಥಿತಿಯನ್ನು ಮೀರಿ ನಡೆಯಬೇಕೆಂದು ಶಿವಪ್ರಕಾಶ್ ಮನಗಂಡು ಬರವಣಿಗೆಯ ಅನುಭವಕ್ಕೆ ಸ್ಮರಣೀಯವಾದ ರೂಪಗಳನ್ನು ಕೊಡಲು ಮುಂದಾದರು. ಕರ್ನಾಟಕದ ವೈಚಾರಿಕ ಭಕ್ತಿ ಪರಂಪರೆಯಲ್ಲಿ ತನ್ನ ಈ ಸಾಮರ್ಥ್ಯವನ್ನು ಕಂಡುಕೊಳ್ಳುತ್ತಾ ಈ ಕಾಲದ ಛಿಧ್ರಗೊಂಡ ಭರವಸೆಯನ್ನು ಪ್ರತಿಫಲಿಸಲು ಆ ನುಡಿಗಟ್ಟನ್ನು ಅದ್ಭುತವಾಗಿ ಒಗ್ಗಿಸಿಕೊಂಡಿದ್ದಾರೆ. ನಮ್ಮ ಭಾಷೆಗೆ ನವೀನ ರೀತಿಯ ಅಭಿವ್ಯಕ್ತಿಯನ್ನು ತರುವುದರ ಜೊತೆಗೆ ಸರಳೀಕೃತವಾದ ಆದರ್ಶರಾಜ್ಯದ ಕಲ್ಪನೆಗೆ ಪಕ್ಕಾಗುವ ಅಪಾಯದಿಂದ ಪಾರಾಗಿ ಭಾಷೆಗೆ ದ್ರಷ್ಟಾರನ ಆಯಾಮವನ್ನು ಒದಗಿಸಿಕೊಟ್ಟಿದ್ದಾನೆ. ನನ್ ಸಮಕಾಲೀನರು ಮತ್ತು ಅವರ ವಾರಗೆಯ ಬರಹಗಾರರಗಿಂತ ವ್ಯತಿರಿಕ್ತವಾಗಿ ಶಿವಪ್ರಕಾಶರು ಬರೆಯುತ್ತಲೇ ಇದ್ದಾರೆ. ನಿಂತ ನೀತಾಗಿಲ್ಲ. ಭಾಷೆಯ ಆ ಮಗ್ಗಲನ್ನು ತಲುಪಲು ಅವರು ಯಾವಾಗಲೂ ಪ್ರಯತ್ನಿಸುವ ತವಕದಲ್ಲಿ ಸಮವಹನವನ್ನು ಬಲಿಕೊಡದಂತೆ ನೋಡಿ ಕೊಂಡಿದ್ದಾರೆ. ರೂಪ ಮತ್ತು ವಸ್ತುವಿನ ವಿಷಯದಲ್ಲಿ ಶಿವಪ್ರಕಾಶ್ ಏಕತಾನತೆಯನ್ನು ತರುವುದಿಲ್ಲ. ನಮ್ಮ ಪ್ರಯೋಗಿಕ ಹಾಗೂ ಪ್ರಗತಿಪರ ನವ್ಯರಿಗೆ ಈ ಏಕತಾನತೆಯನ್ನು ಮೀರಲಾಗಿಲ್ಲ. ಶಿವಪ್ರಕಾಶರ ಶೈಲಿ ಹಾಗೂ ವಸ್ತುವೈವಿಧ್ಯ ಆಶ್ಚರ್ಯಕರವಾದದ್ದು. ಈ ಹೊತ್ತಿನ ಸಂದರ್ಭದಲ್ಲಿ ಬಳುವಳಿಯಾಗಿ ಬಂದ ಭಾಷೆಯನ್ನು ಪುನರ್ ನಿರ್ಮಾಣ ಮಾಡುತ್ತಿರುವ ಏಕೈಕ ಬರಹಗಾರ ಶಿವಪ್ರಕಾಶ್ ಅವರ ಇತ್ತೀಚಿನ ಕವನ ಸಂಕಲನ ‘ಮಳೆಯೇ ಮಂಟಪ’ ಕನ್ನಡ ಸಾಹಿತ್ಯಕ ಭಾಷೆಯ ‘ನಿರ್ಗಮನ ರಹಿತ’ ಸ್ಥಿತಿಯಿಂದ ಉದುರಿಸಿಕೊಂಡು ಹೊರಬಂದಿದೆ. ಅವರ ವಿಷಾದ ಹಾಗೂ ದುರಂತ ತುಂಬಿದ ಆಶಾವಾದದಿಂದ ಹೊರಗೆ ನನ್ನ ಆಭಷೆ ಮತ್ತು ಸಾಹಿತ್ಯದ ಭವಿಷ್ಯ ಒಂದು ದೊಡ್ಡ ಪ್ರಶ್ನಾರ್ಥಕ ಚಿನ್ಹೆಯಾಗಿದೆ.

ಸ್ಮೃತಿ ಮತ್ತು ಭರವಸೆ, ಆಸೆ ಹಾಗೂ ಫಲದ ನಡುವಿನ ಒಪ್ಪಂದ ನನ್ನ ಭಾಷಿಕ ಸಮುದಾಯದಲ್ಲಿ ಸಂಪೂರ್ಣವಾಗಿ ಮುರುದುಬಿದ್ದಿದೆ. ಇದನ್ನೇ ನಾನು ಕನ್ನಡ ನುಡಿ ಮತ್ತು ಲೋಕದ ಬಿಕ್ಕಟ್ಟುಗಳು ಎಂದು ಕರೆದಿರುವುದು.

—-
೨೦೦೩
ರಲ್ಲಿ ನ್ಯೂಯಾರ್ಕಿನ ಭಾರತೀಯ ಸಾಹಿತ್ಯ ಸಮ್ಮೇಳನದಲ್ಲಿ ಮಂಡಿಸಿದ ಪ್ರಬಂಧದ ಕನ್ನಡಾನುವಾದ. ಅನುವಾದಸಿ. ನಾಗಣ್ಣ.

* * *