ಮಹನೀಯರೆ, ಮಹಿಳೆಯರೆ,

ಕಲೆ ಮತ್ತು ವಾಸ್ತುಶಿಲ್ಪವನ್ನು ಕುರಿತು ಗಣಪತಿ ಸ್ವಪತಿಯವರ ನೇತೃತ್ವದಲ್ಲಿ ನಡೆದ ಆಲ್ಕು ದಿನಗಳ ಈ ವಿಚಾರ ಸಂಕಿರಣದ ಸಮಾರೋಪ ಭಾಷಣ ಮಾಡಲು ಆಹ್ವಾನಿಸಿ ನನಗೆ ಹೆಚ್ಚಿನ ಗೌರವಾದರಗಳನ್ನು ತೋರಿಸಿದ್ದೀರಿ. ಎರಡು ಕಾರಣಗಳಿಗಾಗಿ ನಾನು ಈ ಆಹ್ವಾನವನ್ನು ಒಪ್ಪಿಕೊಂಡೆ. ಮೊದಲನೆಯದಾಗಿ ಶತಮಾನಗಳ ಉದ್ದಕ್ಕೂ ಸಂಸ್ಕೃತಿಯ ಎರಡನೆಯ ಜಗತ್ತನ್ನೇ ನಿರ್ಮಿಸುವುದರಲ್ಲಿ ನಿರತವಾದ ಕಲಾವಿದರ ಸಮುದಾಯಕ್ಕೆ ಸೇರಿದವನು ನಾನು. ಎರಡನೆಯದಾಗಿ ಶಿಲ್ಪ ಮತ್ತು ವಾಸ್ತುಕಲೆಗಳ ಬಗೆಗೆ ಸಂಶೋಧನೆ ಮಾಡಲು ಅವಕಾಶವಿರುವ ಒಂದು ವಿಶ್ವವಿದ್ಯಾಲಯವನ್ನು ಕಟ್ಟುವ ಕೆಲಸದಲ್ಲಿ ನಾನು ನಿರತವಾಗಿದ್ದೇನೆ. ಅದು ವಾಸ್ತುಶಿಲ್ಪವಾಗಲಿ, ಕಾವ್ಯವಾಗಲಿ, ಸಕಲ ಕಲೆಗಳ ಮೂಲತತ್ವ ಕಟ್ಟುವುದು ಎಂಬುದು ನನ್ನ ನಂಬಿಕೆ. ಏಕೆಂದರೆ ಕಟ್ಟುವ ಕ್ರಿಯೆಯಲ್ಲಿ ಸಂವಹನ ಮತ್ತು ಅಭಿವ್ಯಕ್ತಿ ಎರಡೂ ಇವೆ. ಅವೆರಡೂ ಯಾವುದೇ ಕಲೆಯ ಎರಡು ಮುಖ್ಯ ಕಾರ್ಯಗಳು ಬಯಲಿನಲ್ಲಿ ಕಟ್ಟುವ ಒಂದು ದೇವಾಲಯ ನಿರ್ಮಾಣವು ಕಲಾತ್ಮಕ ಅಭಿವ್ಯಕ್ತಿಯ ಸೊಗಸಾದ ಮಾದರಿ. ಅದು ಪರಿವರ್ತನರಹಿತವಾದ ಅಭಿವ್ಯಕ್ತಿ ಸೌಂದರ್ಯತತ್ವದ ಮೂರ್ತ ನಿದರ್ಶನ. ಅದೇ ಸಮಯದಲ್ಲಿ ಅದು ಸಂವಹಿಸುತ್ತದೆ. ಏಕೆಂದರೆ ಅದು ಪೂಜೆ ಮತ್ತು ಪ್ರಾರ್ಥನೆಗಳು ನಡೆಯುವ ಸ್ಥಳವಾಗಿದೆ. ಕಲ್ಲಿನ ಪ್ರತಿಮೆಗಳಿಗೆ ಅವುಗಳದೇ ಒಂದು ಮಾಯಾಜಾಲವಿದೆ. ನೋಡುವವನು ತಮ್ಮೊಂದಿಗೆ ಸಂಭಾಷಣೆ ಮಾಡುವಂತೆ ಮಾಡುವ ಶಕ್ತಿಯಿದೆ. ಪ್ರತಿಮೆಯ ಮೌನವು ಮಾತಿಗಿಂತಲೂ ಹೆಚ್ಚು ನಿರರ್ಗಳವಾದುದು. ಅದು ಸಂವಹಿಸುವುದು ಮೌನದ ಅಸ್ತಿತ್ವವನ್ನು, ಮಾತಿನ ಅಸ್ತಿತ್ವವನ್ನಲ್ಲ.

ನಾನಿಲ್ಲಿ, ನಿಮ್ಮ ಕಲೆಯ ತತ್ವಗಳನ್ನು ಕುರಿತು ಬೋಧಿಸಲಾಗಲಿ, ಚರ್ಚಿಸಲಾಗಲಿ ಬಂದಿಲ್ಲ. ಅದು ನನ್ನ ಅರಿವಿಗೆ ಮೀರಿದ್ದು. ಈ ಕಲೆಗಳಿಗೆ ಸಂಬಂಧಿಸಿದಂತೆ ನಾನು ಏನೂ ತಿಳಿಯದ ಅಜ್ಞ, ಆದರೆ ನಿಮ್ಮೊಂದಿಗೆ ಮಾತನಾಡುವ ಧೈರ್ಯ ಮಾಡಿರುವುದಕ್ಕೆ ಕಾರಣ, ನಾನು ಕಲಾವಿದರ ಸಮುದಾಯಕ್ಕೆ ಸೇರಿದವನಾಗಿರುವುದು, ಅದು ಅರ್ಥವನ್ನೂ ಮೌಲ್ಯ ಪ್ರಜ್ಞೆಯನ್ನೂ ಸೃಷ್ಟಿಸಬಲ್ಲ. ಏಕೈಕ ಜನಾಂಗ ಡಬ್ಲ್ಯು. ಬಿ. ಯೇಟ್ಸ್ ಹೇಳುತ್ತಾನೆ. “ಮನುಷ್ಯನು ಎರಡು ನಿರಂತರಗಳ ನಡುವೆ ಬದುಕುತ್ತಾನೆ. ಒಂದು ಜನಾಂಗ ಇನ್ನೊಂದು ಆತ್ಮ” ಜನಾಂಗದಿಂದ ನಾನೊಬ್ಬ ಕುಲಶಕರ್ಮಿ, ಆದರೆ ವ್ಯಕ್ತಿಶಃ ನಾನೊಬ್ಬ ಕವಿ. ಕಾವ್ಯಕಲೆಯನ್ನು ಶಿಲ್ಪಕಲೆಗೆದುರಾಗಿ ಇರಿಸಿ ನೋಡಲು ನನಗೆ ಬಯಕೆಯಾಗುತ್ತದೆ. ಶಿಲ್ಪಕಲೆ ಮೌನವಾದದ್ದು ಆದರೆ ಗೋಚರವಾದುದು, ಕಾವ್ಯಕಲೆಯ ನಿರರ್ಗಳ ಶಾಬ್ದಿಕವಾದದ್ದು ಆದರೆ ಅಗೋಚರವಾದುದು. ಹೋಮರ್ ಮತ್ತು ಮಿಲ್ಟನ್ ಅಂಧರಾಗಿದ್ದರು, ಎಂದೇ ಅವರ ಭಾಷೆ ಆತ್ಮವನ್ನು ಕಲಕುವ ಒಂದು ದಿವ್ಯ ಸಂಗೀತವನ್ನು ಒಳಗೊಂಡಿದೆ. ವ್ಯತ್ಯಾಸಗಳು ಹಾಗಿರಲಿ. ಈ ಎರಡೂ ಕಲೆಗಳ ನಡುವೆ ಸಮಾನವಾದ ಅಂಶಗಳು ಬೇಕಾದಷ್ಟಿವೆ. ಕನ್ನಡ ಸಾಹಿತ್ಯ ಇತಿಹಾಸದ ಮೊದಲ ಹಂತದ ಕವಿಗಳ ಕಾವ್ಯವು ಸಾವಿರ ಕಂಬಗಳ ದೇವಾಳಯದ ಮಂಟಪವನ್ನು ನೆನಪಿಗೆ ತರುತ್ತದೆ. ಅಲ್ಲಮನ ಅನುಭಾವ ವಚನಗಳು ಸುಂದರ ರತ್ನಗಳಲ್ಲಿ ಕೆತ್ತಿದ ಕಿರುಪ್ರತಿಮೆಗಳಂತಿವೆ. ನಮ್ಮ ಪ್ರಾಚೀನ ಕವಿಗಳು ಒಳ್ಳೆಯ ಕುಶಲಕರ್ಮಿಗಳಾಗಿದ್ದರು. ಈಗ ಕಾವ್ಯವು ತನ್ನ ಕುಶಲಕಲೆಯನ್ನು ಕಳೆದುಕೊಂಡು ಬಿಟ್ಟಿದೆ. ಅದಕ್ಕೆ ಕಾರಣ ನಮ್ಮ ವಿದ್ಯಾವಂತ ಬರಹಗಾರರ ಮೇಲೆ ಬ್ರಿಟಿಷ್ ಸಾಹಿತ್ಯದ ಪ್ರಾಭಾವವಾಗಿರುವುದು.

ಇಂದಿನ ಪ್ರಪಂಚದ ಸಮಸ್ಯೆಯೇನೆಂದರೆ, ನಾವು ಕುಶಲಕಲೆಯನ್ನು ಕಲೆಯಿಂದ ಬೇರ್ಪಡಿಸಿದ್ದೇವೆ; ಜ್ಞಾನದಿಂದ ಕೌಶಲವನ್ನು, ಅರಿವಿನಿಂದ ಅನುಭವವನ್ನು ಬೇರೆ ಮಾಡಿದ್ದೇವೆ. ಒಬ್ಬ ಶಿಲ್ಪಿಯ ನುರಿತ ಕೈಗಳು ಪ್ರತಿಮೆಗೆ ಆಕಾರವನ್ನು ಕೊಡುವ ಮಹತ್ವದ ತತ್ವಗಳನ್ನು ಅನುಭವಕ್ಕೆ ತಂದುಕೊಳ್ಳುವುದಿಲ್ಲ. ಇದರ ಫಲ, ಆರಂಭಿಕ ಕಲಾವಿದನು ಮೃತ ಪ್ರತಿಮೆಗಳನ್ನಷ್ಟೇ ಸೃಷ್ಟಿಸುತ್ತಾನೆ. ಒಂದು ದೇವಾಲಯದಲ್ಲಿರುವ ದೇವವಿಗ್ರಹಕ್ಕೂ, ಬೀದಿಯ ಚೌಕದಲ್ಲಿ ನಿಲ್ಲಿಸಿರುವ ರಾಜಕೀಯ ನಾಯಕನೊಬ್ಬನ ಪ್ರತಿಮೆಗೂ ಇರುವ ವ್ಯಾತ್ಯಾಸವೇನು? ದೇವರ ವಿಗ್ರಹವು ಸದಾ ಜೀವಂತವಾಗಿರುತ್ತದೆ. ರಾಜಕೀಯ ನಾಯಕನ ವಿಗ್ರಹವು ಸತ್ತಿರುತ್ತದೆ. ಈ ವ್ಯತ್ಯಾಸಕ್ಕೆ ಕಾರಣವೇನೆಂಬುದನ್ನು ನಾವು ಕಂಡು ಹಿಡಿಯಬೇಕು. ವ್ಯತ್ಯಾಸವಿರುವುದು ಕಲಾವಿದನಿಗೆ ಅವನ ಕಲೆಯ ವಸ್ತುವಿನೊಂದಿಗಿರುವ ಸಂಬಂಧದಲ್ಲಿ. ಈ ಸಂಬಂಧವಾದರೋ ಸಂಪೂರ್ಣವಾಗಿ ವೈಯಕ್ತಿಕವಾದುದಲ್ಲ. ಕಲಾ ವಸ್ತುವಿನೊಂದಿಗೆ ಸಾರ್ವಜನಿಕರಿಗೆ ಇರುವ ಸಂಬಂಧವೂ ಒಂದು ಕಲಾಕೃತಿಯ ಮಹತ್ವಕ್ಕೆ ಪೋಷಕವಾಗುತ್ತದೆ. ನಮ್ಮ ದೇಶದ ಜನಪದ ಕಲಾವಿದರು ಕಲೆಯ ತಾಂತ್ರಿಕತೆಯಲ್ಲಿ ತಜ್ಞರಲ್ಲ. ಅವರ ಕಲೆ ಶುದ್ಧಾಂಗವಾಗಿ ಹುಟ್ಟೂರಿನಿಂದ ಬಂದದ್ದು. ಪ್ರತಿಭಾಜನ್ಯವಾದುದಲ್ಲ. ಕಲಾ ವಸ್ತುವಿನೊಂದಿಗೆ ಸಾರ್ವಜನಿಕರಿಗೆ ಇರುವ ಅಮೋಘವಾದ ಕಲಾಕೃತಿಗಳನ್ನು ಸೃಷ್ಟಿಸಬಲ್ಲಷ್ಟು ಆಳವಾಗಿ ಅದರಲ್ಲಿ ತೊಡಗಿಕೊಂಡಿರುತ್ತಾರೆ. ಜನರಿಗೆ ಕಲಾಕೃತಿಯು ಬೇಕು ಎಂದು ಅವರು ಬಲ್ಲರು. ತಾವು ಅದನ್ನು ತಯಾರಿಸಬೇಕೆಂದೂ ಅವರಿಗೆ ಗೊತ್ತು. ಕಲೆಯ ಕ್ಷೇತ್ರದಲ್ಲಿ ಬಲಾತ್ಕಾರಕ್ಕೆ ಎಡೆಯಿಲ್ಲ. ಕಲಾವಿದನು ಸ್ವತಂತ್ರನಾಗಿರಬೇಕು. ರಾಜಕೀಯ ನಾಟಕನ ವಿಗ್ರಹದ ವಿಷಯಕ್ಕೆ ಮರಳುವುದಾದರೆ, ನಾನು ಹೇಳುವುದು ಇಷ್ಟೇ. ಅದು ಕಲಾವಿದನ ಸ್ವಾತಂತ್ರ್ಯದಿಂದ ಮೂಡಿದ ಕಲಾಕೃತಿಯಲ್ಲ. ಅಧಿಕಾರಶಾಹಿಯ ಆದೇಶದ ಪ್ರಕಾರ ಉತ್ಪಾದಿಸಿದ ಕೃತಿ, ಕಲೆಯು ಕುಶಲಕರ್ಮದಿಂದ ಬೇರೆಯಾಗಿದೆ.

ನಾನಿಲ್ಲ ಒಂದು ಮನವಿ ಮಾಡಿಕೊಳ್ಳಲು ಬಂದಿದ್ದೇನೆ. ನೀವು ಲಲಿತಕಲೆಯ ಮಹಾನ್ ಪರಂಪರೆಯ ವಾರಸುದಾರರಾಗಿದ್ದೀರಿ. ನಿಮ್ಮ ಕಲೆಯ ಅತಿ ಸೂಕ್ಷ್ಮ ನೈಪುಣ್ಯಗಳಲ್ಲಿ ತರಬೇತಿ ಪಡೆದಿದ್ದೀರಿ. ನಿಮ್ಮ ನುರಿತ ಕೈಗಳು ಈ ದೇಶದ ವಿದ್ಯಾವಂತ ತಲೆಗಳಿಗಿಂತಲೂ ಅತ್ಯಧಿಕವಾಗಿ ತಿಳಿದುಕೊಂಡಿವೆ. ಆದ್ದರಿಂದ ನಿಮ್ಮ ಕುಶಲಕರ್ಮದ ಅನುಭವ ಸಮಸ್ತವನ್ನೂ ನಿಮ್ಮ ದೇಶದ ಆಧುನಿಕ ಜ್ಞಾನದ ಸಮೀಪಕ್ಕೆ ತರಬೇಕಾದ ಒಂದು ನೈತಿಕ ಹೊಣೆಗಾರಿಕೆ ನಿಮ್ಮದಾಗಿದೆ. ನೈಪುಣ್ಯವೂ ಜ್ಞಾನವೂ ಒಂದುಗೂಡಿ ನೂತನ ಅರ್ಥಗಳನ್ನು ಸೃಷ್ಟಿಸಬೇಕು. ಪ್ರಾಚೀನ ಕುಶಲಕಲೆಯಲ್ಲಿ ಜೀವಂತ ಜ್ಞಾನದ ಅಭಾವವಿದೆ. ಜೀವಂತವಾಗಿ ಮಿಡಿಯುತ್ತಿರುವ ನೂತನ ಜ್ಞಾನದಲ್ಲಿ ಯಾವುದೇ ಕಲಾಕೌಶಲವಿಲ್ಲ. ನಾನು ಕಾವ್ಯದ ಕ್ಷೇತ್ರದಲ್ಲಿ ನನ್ನದೇ ಆದ ಅಲ್ಪವಿಧಾನದಿಂದ ಮಾಡಿರುವುದು ಇದೇ ಕೆಲಸವನ್ನೇ. ಪ್ರಾಚೀನರಿಗೆ ತಿಳಿದಿರುವ ನನ್ನದೇ ಒಂದು ಅಳಲು, ನನ್ನದೇ ಬಿಕ್ಕಟ್ಟಿನ ಪ್ರಜ್ಞೆಗಳಿರುವ ಆಧುನಿಕ ಕವಿ ನಾನು. ಆದರೆ ನಾನು ಬರವಣಿಗೆಯ ಕಲೆಯನ್ನು ಕಲಿತದ್ದು ಜಾನಪದ ಕವಿಗಳಿಂದ, ಜಾನಪದ ನಾಟಕಕಾರರಿಂದ ಅವರು ಎಲಿಯಟ್ಟನನ್ನಾಗಲಿ ಕಾಫ್ಕಾನನ್ನಾಗಲಿ ಸುತರಾಂ ಅರಿಯರು. ಆದರೆ ಅವರು ತಮ್ಮ ಅಭಿವ್ಯಕ್ತಿ ವಿಧಾನವನ್ನೂ ಭಾಷೆಯನ್ನೂ ಪ್ರತಿಮಾ ಸಂಪದವನ್ನೂ ನನಗೆ ಕೊಟ್ಟಿದ್ದಾರೆ. ನಮ್ಮ ಕಲೆ ಉಳಿಯಲು ಇದೊಂದೇ ದಾರಿ. ಪರಂಪರೆಯನ್ನು ಉಳಿಸಬೇಕು. ಅಲಂಕೃತ ಪಿರಮಿಡ್ಡುಗಳಲ್ಲಿ ಮಮ್ಮಿಯನ್ನು ಇಡುವಂತೆ ಭಾವನಾತ್ಮಕ ಕಾರಣಗಳಿಗಾಗಿ ಅಲ್ಲ. ಪರಂಪರೆಯನ್ನು ಖಂಡಿತವಾಗಿ ಮುಂದುವರಿಸಲೇಬೇಕು. ಭೂತಕಾಲವು ವರ್ತಮಾನಕಾಲಕ್ಕೆ ಹರಿದು ಬಂದು ಮುಂದೆ ಅರ್ಥಪೂರ್ಣವಾದ ಭವಿಷ್ಯತ್ಕಾಲಕ್ಕೆ ಹರಿಯಲು ನಾವು ಅವಕಾಶ ಕೊಡಬೇಕು. ಪ್ರಸ್ತುತದಲ್ಲಿ ನಾನು ಕೊಡಬಹುದಾದ ಒಂದೇ ಒಂದು ಸಂದೇಶ ಇದು.

ಎಲ್ಲಾ ಕಲಾವಿದರು, ಅವರು ಚಿತ್ರ ಕಲಾವಿದರಾಗಲಿ, ಶಿಲ್ಪಗಳಾಗಲಿ, ವಾಸ್ತುಶಿಲ್ಪಗಳಾಗಲಿ, ಕವಿಗಳಾಗಲಿ ಅಥವಾ ಗಾಯಕರಾಗಿರಲಿ ಒಂದೇ ಸಮುದಾಯಕ್ಕೆ ಸೇರಿದವರು. ಏಕೆಂದರೆ ಎಲ್ಲ ಕಲೆಗಳೂ ಪರಸ್ಪರ ಪೂರಕವಾದವು. ಕಲಾವಿದರು ಈಗ ವ್ಯಕ್ತಿ ವಿಶಿಷ್ಟರಾಗುತ್ತಿದ್ದಾರೆ. ಅದು ಒಂದು ಸಮುದಾಯದ ಆರೋಗ್ಯವಂತ ಲಕ್ಷಣವಲ್ಲ. ದೇವಾಳಯ, ನಾಟಕ, ಸಂಗೀತ ಅಷ್ಟೇಕೆ ನಮ್ಮ ಕಥನ ಕಾವ್ಯ ಎಲ್ಲವೂ ವ್ಯಕ್ತಿಗತವಾಗಿರಲು ಸಾಧ್ಯವಿಲ್ಲ. ಏಕೆಂದರೆ ಈ ಕಲಾಕೃತಿಗಳು ಜನರನ್ನು ಉದ್ದೇಶಿಸಿದವು. ಈಗಲೂ ಹೇಳುತ್ತೇನೆ. ಒಂದು ದೇವಾಲಯವು ಒಂದು ಸಾಮಾಜಿಕ ಸಂಸ್ಕೃತಿಯ ಅತ್ಯಂತ ಸುಂದರ ಅಭಿವ್ಯಕ್ತಿ. ಅದು ಅತ್ಯಂತ ಸೂಕ್ಷ್ಮ ಹಂತದ ಜಾನಪದ ಕಲೆಯ ರೂಪ. ಜನರು ಈ ಕಲಾಕೃತಿಯನ್ನು ಅರ್ಥಮಾಡಿಕೊಳ್ಳುತ್ತಾರೆ. ಅದರಿಂದ ಜೀವಿಸುತ್ತಾರೆ. ಅಲ್ಲಿ ಪೂಜಿಸುತ್ತಾರೆ, ಪ್ರಾರ್ಥನೆ ಮಾಡುತ್ತಾರೆ. ಒಂದು ದೇವಾಲಯವನ್ನು ರಕ್ಷಿಸಿ ಪಾಲಿಸುವುದರಿಂದ ಒಂದು ಸಮಾಜವು ಪೋಷಣೆಯನ್ನು ಪಡೆಯುತ್ತದೆ.

ನಾವು ಅದೃಷ್ಟವಂತರು, ದಕ್ಷರಾದ ಶಿಲ್ಪಿ ಗಣಪಿ ಸ್ಥಪತಿಯವರು ನಮ್ಮ ಜೊತೆಯಲ್ಲಿದ್ದಾರೆ. ಅವರು ವಿಶ್ವಕರ್ಮದಿಂದ ಹುಟ್ಟಿದ ಭಾರತೀಯ ಕಲಾ ಪರಂಪರೆಯೊಂದರ ಪ್ರತಿನಿಧಿಯಾಗಿದ್ದಾರೆ. ಅವರ ನೇತೃತ್ವದಲ್ಲಿ ಭಾರತೀಯ ವಾಸ್ತುಶಿಲ್ಪವು ಹೊಸ ಅರ್ಥಗಳನ್ನು ಹೊಸ ಎತ್ತರಗಳನ್ನೂ ಪಡೆಯುತ್ತದೆ ಎಂದು ಆಶಿಸುತ್ತೇನೆ.

ಈ ಸಂಕಿರಣದ ಸಮಾರೋಪದ ನಾಲ್ಕು ಕೊನೆಯ ಮಾತುಗಳನ್ನಾಡುವ ಅವಕಾಶವನ್ನು ನನಗೆ ಒದಗಿಸಿದ ಸಂಕಿರಣದ ವ್ಯವಸ್ಥಾಪಕರನ್ನು ಹೃತ್ಪೂರ್ವಕವಾಗಿ ವಂದಿಸುತ್ತೇವೆ.

* * *

* ಚೆನ್ನೈಯಲ್ಲಿ ಶಿಲ್ಪಶಾಸ್ತ್ರ ಕುರಿತ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಮಾಡಿದ ಭಾಷಣ-೧೯೯೬.