ದೇಶದ ಬೆಳವಣಿಗೆಯಲ್ಲಿ ಭಾಷೆಯ ಬೆಳವಣಿಗೆಗೆ ಗಣನೀಯ ಸ್ಥಾನವಿದೆ. ವಿಜ್ಞಾನ, ಶಿಕ್ಷಣ, ಸಂಸ್ಕೃತಿ, ಆರ್ಥಿಕತೆ ಮೊದಲಾದ ವಲಯಗಳಲ್ಲಿ ನಡೆಯುವ ಬೆಳವಣಿಗೆಯ ಮೇಲೆ ಭಾಷೆಯ ಬೆಳವಣಿಗೆಯ ಪ್ರಭಾವವಿರುತ್ತದೆ. ಏಕೆಂದರೆ ಈ ವಲಯಗಳಲ್ಲಿ ನಡೆಯುವ ಬೆಳವಣಿಗೆಯು ಅಭಿವ್ಯಕ್ತಗೊಳ್ಳುವುದು ಭಾಷೆಯ ಮೂಲಕವೇ.

ಸಾಮಾಜಿಕ, ಆರ್ಥಿಕ ಮತ್ತು ತಾಂತ್ರಿಕ ಬದಲಾವಣೆಗಳು ತರುವ ಒತ್ತಾಯಗಳಿಗೆ ಹೊಂದಿಕೊಳ್ಳುವ ಮೂಲಕ ಕನ್ನಡ ಮತ್ತಿತರ ಭಾರತೀಯ ಭಾಷೆಗಳನ್ನು ಹೊಸ ಬಗೆಯ ಸಾಧನ ಸಾಮಗ್ರಿಗಳ ಮೂಲಕ ಸನ್ನದ್ಧಗೊಳಿಸಬೇಕಾಗಿದೆ. ಹೊಸ ವಲಯಗಳಲ್ಲಿ ಬಳಕೆ ಸಾಧ್ಯವಾಗುವಂತೆ ಪದರಚನೆಯಲ್ಲಿ, ವ್ಯಾಕರಣದಲ್ಲಿ ಹೊಸತನಗಳನ್ನು ತರಬೇಕಾಗಿದೆ.

ತಂತ್ರಜ್ಞಾನದಲ್ಲಿ ಬದಲಾವಣೆಗಳಾದಂತೆ ಭಾಷೆಯ ಮೇಲಿನ ಒತ್ತಡಗಳೂ ಹೆಚ್ಚುತ್ತಾ ಹೋಗುತ್ತವೆ. ಮುದ್ರಣ ತಂತ್ರಜ್ಞಾನವು ಭಾಷೆಯ ರೂಪ ಮತ್ತು ಬಳಕೆಗಳ ಮೇಲೆ ತೀವ್ರ ಪ್ರಭಾವ ಬೀರಿದೆ. ಭಾಷೆ ಈಗ ಪ್ರಜಾಪ್ರಭುತ್ವೀಕರಣಕ್ಕೊಳಗಾಗಿದೆ. ಆದ್ದರಿಂದ ಕೇವಲ ಕೆಲವೇ ಜನರ ಹಿಡಿತದಲ್ಲಿದ್ದ ಹಿಂದಿನ ಪರಿಸ್ಥಿತಿ ಈಗ ಬದಲಾಗಿದೆ.

ಬರಹಗಾರರಿಂದ ಹಿಡಿದು ಮುದ್ರಕರವರೆಗೆ ಹಲವರು ಮುದ್ರಣ ಕ್ರಿಯೆಯಲ್ಲಿ ಭಾಗಿಯಾಗುತ್ತಿರುವುದರಿಂದ ಭಾಷಿಕ ರಚನೆಗಳ ಸೃಷ್ಟಿ ಒಂದು ಸಾಮೂಹಿಕ ರಚನೆಯಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ಭಾಗಿಯಾಗುವವರೆಲ್ಲರೂ, ಮುದ್ರಿತವಾದ ಭಾಷೆಯಾದರೂ ಓದಿದವರಿಗೆ ತಲುಪಬೇಕು ಹಾಗೂ ಆಕರ್ಷಕವಾಗಿರಬೇಕು ಎಂದು ಬಯಸುವವರೇ ಆಗಿರುತ್ತಾರೆ. ಹೇಳುವ ವಿಷಯದಷ್ಟೇ ಹೇಳುತ್ತಿರುವ ವಿಧಾನವೂ ಮುಖ್ಯ. ಹೀಗೆ ಮುದ್ರಿತ ಪುಟವೊಂದನ್ನು ರೂಪಿಸಲು ಕಾರ್ಯನಿರತರಾಗಿರುವ ಹಲವು ಬಗೆಯ ಜನರ ಸೌಲಭ್ಯಕ್ಕಾಗಿ ಈ ಶೈಲಿ ಕೈಪಿಡಿಯನ್ನು ರೂಪಿಸಲಾಗಿದೆ.

ಕನ್ನಡ ಮತ್ತಿರ ಭಾರತೀಯ ಭಾಷೆಗಳಿಗೆ ಇಂಥ ಕೈಪಿಡಿಗಳ ಅವಶ್ಯಕತೆ ಹೆಚ್ಚು. ಬರವಣಿಗೆಯ ಚಿಹ್ನೆಗಳ ಬಳಕೆ, ಹೊಸ ಪದಗಳ ಅಕ್ಷರ ಸಂಯೋಜನೆ ಮುಂತಾದ ನೆಲೆಗಳಲ್ಲಿ ಒಂದು ಬಗೆಯ ಅಸ್ತವ್ಯಸ್ತತೆ ತುಂಬಿದೆ. ಪ್ರಮಾಣೀಕರಣವಿಲ್ಲವಾಗಿದೆ. ಇಂಥ ನೆಲೆಗಳಲ್ಲಿ ಶೈಲಿ ಕೈಪಿಡಿಯು ಸೂಕ್ತ ಸಲಹೆಗಳನ್ನು ಒದಗಿಸುತ್ತದೆ.

ಭಾಷೆಯ ಬೆಳವಣಿಗೆಯ ಬಗೆಗೆ ಯೋಜನೆಗಳನ್ನು ರೂಪಿಸಿ ಜಾರಿಗೆ ತರಲೆಂದು ನಾಡಿನಲ್ಲಿ ಹಲವು ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ. ಕನ್ನಡ ವಿಶ್ವವಿದ್ಯಾಲಯ ಮತ್ತು ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ ಇವೆರಡೂ ಅಂಥ ಸಂಸ್ಥೆಗಳು. ಈ ಸಂಸ್ಥೆಗಳಲ್ಲಿರುವ ಭಾಷಾ ಶಾಸ್ತ್ರ ಮತ್ತು ಕನ್ನಡ ಭಾಷಾಧ್ಯಯನ ಕ್ಷೇತ್ರಗಳಲ್ಲಿನ ತಜ್ಞರನ್ನು ಸೇರಿಸಿ ಈ ಶೈಲಿ ಕೈಪಿಡಿಯನ್ನು ರಚಿಸುವ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಲಾಗಿದೆ. ಭಾಷೆಯ ಬಳಕೆಯ ಹತ್ತಾರು ವಲಯಗಳನ್ನು ಗುರುತಿಸಿ ಆ ಎಲ್ಲ ವಲಯಗಳಿಗೂ ಕನ್ನಡವನ್ನು ಸನ್ನದ್ಧಗೊಳಿಸುವ ಉದ್ದೇಶ ಈ ಸಂಸ್ಥೆಗಳಿಗಿದೆ.

ಕಳೆದ ತೊಂಬತ್ತು ವರ್ಷಗಳಿಂದ ಇಂಗ್ಲಿಷ್ ಬಳಸುವವರಿಗೆ ಲಭ್ಯವಿರುವ ‘ಶಿಕಾಗೋ ಸ್ಟೈಲ್ ಮ್ಯಾನುಯೆಲ್’ ಮಾದರಿಯ ಕೃತಿಯೊಂದು ಕನ್ನಡಕ್ಕೆ ಬೇಕೆಂದು ತಿಳಿದು ಈ ಯತ್ನದಲ್ಲಿ ತೊಡಗಿಸಿಕೊಳ್ಳಲಾಗಿದೆ. ಈ ಕೃತಿಯಿಂದ ಈಗಿರುವ ಕೊರತೆ ಸ್ವಲ್ಪಮಟ್ಟಿಗಾದರೂ ನಿವಾರಣೆಯಾದೀತೆಂದು ತಿಳಿದಿದ್ದೇವೆ. ಕನ್ನಡ ಭಾಷೆಯನ್ನು ಸಮರ್ಥವಾಗಿ ಬಳಸಲು ಹಾಗೂ ಸಂವಹನಶೀಲವಾಗುವಂತೆ ಪ್ರಕಟಿಸಲು ಈ ಕೈಪಿಡಿ ನೆರವಾಗಬಹುದೆಂಬ ಆಸೆ ನಮ್ಮದು. ಯಾವುದೇ ಶೈಲಿ ಕೈಪಿಡಿಯು ಎಂದೂ ಅಂತಿಮಗೊಳ್ಳುವುದಿಲ್ಲ. ಭಾಷೆಯನ್ನು ಬಳಸುವವರ ಅಪೇಕ್ಷೆಗಳು ಬದಲಾದಂತೆ, ತಂತ್ರಜ್ಞಾನದಲ್ಲಿ ಬೆಳವಣಿಗೆಯಾದಂತೆ ಶೈಲಿ ಕೈಪಿಡಿಯಲ್ಲೂ ಪರಿವರ್ತನೆಗಳು ಅವಶ್ಯವಾಗುತ್ತವೆ. ಇದು ಮೊದಲ ಹೆಜ್ಜೆ. ಈ ಕೈಪಿಡಿಯ ಬಳಕೆಯಿಂದ ಕನ್ನಡಿಗರಿಗೆ ದೊರೆಯುವ ಅನುಭವ ಇನ್ನೂ ಉತ್ತಮವಾದ ಕೈಪಿಡಿಗಳ ರಚನೆಗೆ ನಾಂದಿಯಾಗುತ್ತದೆಂದು ಆಶಿಸುತ್ತೇನೆ.

* * *

* ‘ಕನ್ನಡ ಶೈಲಿ ಕೈಪಿಡಿ’ ಗ್ರಂಥಕ್ಕೆ ಬರೆದ ಮುನ್ನುಡಿ