ಕನ್ನಡ ವಿಶ್ವವಿದ್ಯಾಲಯದ ನುಡಿಹಬ್ಬದ ಭಾಷಣ ಮಾಡುವ ಅವಕಾಶವನ್ನು ನನಗೆ ಕೊಟ್ಟ ಸನ್ಮಾನ್ಯ ಕುಲಪತಿಗಳಾದ ಡಾ. ಎ. ಮುರಿಗೆಪ್ಪನವರಿಗೆ, ಕಾರ‍್ಯಕಾರಿ ಮಂಡಳಿಗೆ ಹಾಗೂ ಸಂಬಂಧಪಟ್ಟ ಎಲ್ಲರಿಗೆ ನನ್ನ ಧನ್ಯವಾದಗಳನ್ನು ಸಲ್ಲಿಸುತ್ತೇನೆ.

ಕನ್ನಡ ವಿಶ್ವವಿದ್ಯಾಲಯ ಕನ್ನಡಕ್ಕೆ-ಕನ್ನಡಕ್ಕೆ ಮಾತ್ರವೇ ಬದ್ಧವಾದ ವಿಶ್ವವಿದ್ಯಾಲಯ, ಬೆಂಗಳೂರಿನಲ್ಲಿರುವಂತೆ ಅಡಿಗೆ ಮನೆಗೊಂದು, ಹೊರಗಿನ ವ್ಯವಹಾರಕ್ಕೊಂದು, ಚಿಂತನೆ ಉಪಯೋಗವಾಗಬೇಕೆಂಬ ಘನೋದ್ದೇಶದಿಂದ ಕನ್ನಡಿಗರ ಬೌದ್ಧಿಕ ಅಗತ್ಯವನ್ನು ಪೂರೈಸಲು ಕಟ್ಟಿಕೊಂಡ ವಿಶ್ವವಿದ್ಯಾಲಯ ಇದು. ಆದ್ದರಿಂದ ಇದಕ್ಕೆ ಕೆಲವು ಜವಾಬ್ದಾರಿಗಳು ಇವೆ. ಸಂದರ್ಭಕ್ಕೆ ತಕ್ಕಂತೆ ಜವಾಬ್ದಾರಿಗಳ ಸ್ವರೂಪ ಮತ್ತು ತೀವ್ರತೆಗಳೂ ಭಿನ್ನವಾಗುತ್ತವೆ. ಅವುಗಳನ್ನು ತಿಳಿಯುವ ಒಂದು ನಿರಂತರ ಪ್ರಕ್ರಿಯೆ ಇರಬೇಕಾಗುತ್ತದೆ. ಅಂದರೆ ಇದೊಂದು ಬಗೆಯ ಕಾವಲು ಸಮಿತಿಯ ಕೆಲಸ ಮಾಡುವುದೆಂದರೂ ಸರಿ. ನಾನು ಗ್ರಹಿಸಿದಂತೆ ಕೆಲವು ಜವಾಬ್ದಾರಿಗಳನ್ನು ತಮ್ಮ ಅವಗಾಹನೆಗೆ ತರಲು ಬಯಸುತ್ತೇನೆ.

ನಿಮಗೇ ಗೊತ್ತಿರುವಂತೆ ನಮಗೆ ಆಯ್ಕೆಯ ಅವಕಾಶವೇ ಇಲ್ಲದಂತೆ ಕೆಲವು ಕಲ್ಪನೆಗಳು ಬಂದು ನಮ್ಮ ಬದುಕಿನಲ್ಲಿ ಸೇರಿಕೊಂಡುಬಿಟ್ಟಿವೆ. ನಮಗಿವು ಬೇಕೆ? ಬೇಡವೆ? ಎಂಬ ಚರ್ಚೆಯನ್ನೂ ಅನಗತ್ಯವಾಗುವಂತೆ ಮಾಡಿವೆ. ಮೊದಮೊದಲು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಅವನ್ನು ಎದುರಿಸುವ ಮಾತಾಡಿದವರು ಈಗ ಅವರೂ ಸುಮ್ಮನಾಗಿದ್ದಾರೆ. ರೈತನ ಮೇಟಿಯ ಸುತ್ತ ಬೆಳೆದ ಸಂಸ್ಕೃತಿ ನಮ್ಮದಾಗಿದ್ದು ಜಾಗತೀಕರಣದ ಮೊದಲೇಟು ಅವನ ಮೇಲೆ. ಹೀಗಾಗಿ ಕಲೆಗಳು ಮಾತ್ರವಲ್ಲ, ಕನ್ನಡ ಭಾಷೆ ಕೂಡ ಸರ್ಕಾರದ ಕೃಪೆಗಾಗಿ ಕಾಯುತ್ತ ಕೂರುವ ಸನ್ನಿವೇಶ ನಿರ್ಮಾಣವಾಗಿದೆ. ಈ ಮಧ್ಯೆ ಯಾವುದೇ ನಿಯಂತ್ರಣವಿಲ್ಲದ ದೃಶ್ಯಮಾಧ್ಯಮ ನುಗ್ಗಿ ಬಂದು ಸಂಸ್ಕೃತಿಯನ್ನೇ ದೈನ್ಯಾವಸ್ಥೆಗೆ ತಳ್ಳಿದೆ.

ಒಂದು ಜನಾಂಗ ಮಾಡುತ್ತಿರುವವರೆಗೆ ಅವರ ಮಾತೃಭಾಷೆ ಜೀವಂತವಾಗಿರುತ್ತದೆ. ತಾವು ಮಾಡುವ ಲೋಕ ವ್ಯವಹಾರದ ಮೂಲಕ ತಮ್ಮ ಭಾಷೆಯನ್ನು ಜನ ಬದುಕಿಸುತ್ತಾರೆ. ವ್ಯವಹಾರದ ಭಾಷೆ ವಿದೇಶೀ ಭಾಷೆಯಾದರೆ ಮಾತೃಭಾಷೆಯ ಬಳಕೆ ಸೀಮಿತವಾಗಿರುತ್ತದೆ. ಲಿಪಿ ಇಲ್ಲದಿದ್ದರಂತೂ ಬರೀ ಮೌಖಿಕವಾಗಿದ್ದ ಭಾಷೆ ಬಹುಬೇಗ ನಾಸದ ಅಂಚಿಗೆ ಸರಿಯುತ್ತದೆ. ಸುದೈವದಿಂದ ಸಾವಿರಾರು ವರ್ಷಗಳಿಂದ ಲಿಪಿಯನ್ನು ಹೊಂದಿರುವ ಭಾಷೆಯಾದ್ದರಿಂದ ಕನ್ನಡಕ್ಕೆ ಅಂಥ ಸ್ಥಿತಿ ಬಂದಿಲ್ಲ.

ಕನ್ನಡದಲ್ಲಿ ಗ್ರಂಥದಾನಕ್ಕೆ ಶಾಸ್ತ್ರದಾನವೆಂಬ ಹೆಸರಿದೆ. ಆದರೆ ನಾವು ಕಂಡುಕೊಂಡಿದ್ದ ಶಾಸ್ತ್ರಗಳೆಲ್ಲ ಬ್ರಿಟಿಷರು ಬಂದ ಮೇಲೆ ಗೊಡ್ಡುಪುರಾಣಗಳಾದರೆ ಬೇರೆ ದೇಶಗಳ ಉದ್ಯಮಶೀಲತೆಗೆ ನಮ್ಮ ದೇಶ ಒಂದು ಪೇಟೆಯಾಯಿತು. ನಮ್ಮ ದೇಶ ಈಗಲೂ ಪಾಶ್ಚಾತ್ಯರ ಅಧ್ಯಯನಕ್ಕೆ ವಿಷಯವಾಗಿದೆ. ಬ್ರಿಟಿಷರಿಂದ ಬಂದ ಔದ್ಯಮೀಕರಣ ಮತ್ತು ಹೊಸ ರೀತಿಯ ಶಿಕ್ಷಣ ಇವುಗಳ ಪ್ರಭಾವ ನಮ್ಮ ಜೀವನ ವಿಧಾನದ ಮೇಲೆ ಹ್ಯಾಗೆ ಆಗಿದೆಯೆಂಬುದನ್ನು ನಾವಿನ್ನೂ ಶೋಧಿಸಬೇಕಾದ್ದಿದೆ.

ಶಿಕ್ಷಣದ ಮಾಧ್ಯಮದ ಬಗ್ಗೆ ನಮ್ಮಲ್ಲಿ ಗೊಂದಲವಿದೆ ನಿಜ. ಶಾಲೆಗಳು ಭಾಷೆಯ ಸಾಮರ್ಥ್ಯವನ್ನು ಕೊಡಬಲ್ಲವು. ಆದರೆ ಭಾಷಾ ಬಳಕೆಯ ಅವಕಾಶಗಳನ್ನು ಸರಕಾರವೇ ಕೊಡಬೇಕಾಗುತ್ತದೆ. ಯಾವ ಭಾಷೆಯಿಂದ ಹೆಚ್ಚು ಪ್ರಯೋಜನಗಳು ಸಿಗುತ್ತವೆಯೋ ಆ ಭಾಷೆಯನ್ನೇ ಜನ ಬಳಸುತ್ತಾರೆ. ಇಂಗ್ಲಿಷಿನಿಂದಲೇ ಎಲ್ಲ ಸೌಲಭ್ಯಗಳು ಸಿಕ್ಕುವಂತಿದ್ದರೆ ಮೊದಲು ಪಾಲಕರೇ ಇಂಗ್ಲಿಷನ್ನು ಒಪ್ಪಿಕೊಳ್ಳುತ್ತಾರೆ. ಈಗ ಬೆಂಗಳೂರಿನಲ್ಲಿರುವ ಎಲ್ಲ ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ಪಾಲಕರೇ ಸಮರ್ಥಿಸುತ್ತಿದ್ದಾರೆ.

ಕನ್ನಡ ಕಾವ್ಯಭಾಷೆಯಾಗಿರುವಂತೆ ಶಾಸ್ತ್ರಭಾಷೆಯೂ ಆಗಬೇಕು. ಕನ್ನಡ ಕೇವಲ ಮಾಧ್ಯಮವಾದರೆ ಸಾಲದು. ಅದು ನಮ್ಮ ಮೌಲ್ಯವ್ಯವಸ್ಥೆಯ ಒಂದು ಪ್ರಮಾಣ, ನಮ್ಮ ಸಂಸ್ಕೃತಿ, ನಮ್ಮ ಭಾವನಾತ್ಮಕ, ಬೌದ್ಧಿಕ ವ್ಯಕ್ತಿತ್ವ ಅದೀಗ ವಿಶ್ವಚೇತನದ ಭಾಷೆಯಾಗಬೇಕು. ಸಾಹಿತ್ಯ, ಶಾಸ್ತ್ರ, ತತ್ವಚಿಂತನೆಗಳ ಜೊತೆಗೆ ಪರಮಾಣು ವಿಜ್ಞಾನದ ಬಗ್ಗೆ ಕೂಡ ಕನ್ನಡದಲ್ಲಿ ಆಳವಾಗಿ ಯೋಚಿಸುವಂತಾಗಬೇಕು. ಇದಕ್ಕಾಗಿ ಧಾರ್ಮಿಕ ವ್ರತವೆಂಬಂತೆ ದೃಢನಿಷ್ಠೆಯಿಂದ ನಮ್ಮ ಬದುಕಿನ ಎಲ್ಲ ವಲಯಗಳಲ್ಲಿ ಕನ್ನಡವನ್ನು ಬಳಸುವುದರಿಂದ ಮಾತ್ರ ಇದು ಸಾಧ್ಯ. ಕನ್ನಡಕ್ಕೆ ಮಹತ್ವ ನೀಡಬೇಕೆಂಬುದು ಭಾವಾವೇಶದ ಮಾತಲ್ಲ. ಅದು ನಮ್ಮ ಸಾಂಸ್ಕೃತಿಕ ಅಗತ್ಯ.

ಹಲವಾರು ಚಾರಿತ್ರಿಕ ಕಾರಣಗಳಿಂದ ನಾವು ದ್ವಿಭಾಷಿಕರಾಗಿದ್ದೇವೆ. ಅಷ್ಟೇ ಅಲ್ಲ ಶಿಕ್ಷಣ ಮಾಧ್ಯಮವಾಗಿ ಇಂಗ್ಲಿಷನ್ನೇ ಬಳಸುತ್ತಿದ್ದೇವೆ. ಮೆಕಾಲೆ ಯಾವುದೋ ಕಾಲದಲ್ಲಿ ದುರುದ್ದೇಶದಿಂದ ಮಾಡಿದ ತೀರ್ಮಾನವನ್ನು ನಾವಿನ್ನೂ ಎತ್ತಿ ಹಿಡಿಯುತ್ತಿರುವುದು ಆಶ್ಚರ‍್ಯಕರ ಸಂಗತಿಯಾಗಿದೆ. “ಭಾರತೀಯರ ಬಣ್ಣ ಮತ್ತು ರಕ್ತದಲ್ಲಿ ಮಾತ್ರ ಭಾರತೀಯರಾಗಿರಬೇಕು. ಮಿಕ್ಕಂತೆ ಅಭಿರುಚಿ, ಅಭಿಪ್ರಾಯ, ನೀತಿಗಳಲ್ಲಿ ಹಾಗೂ ಬೌದ್ಧಿಕತೆಯಲ್ಲಿ ಅವರು ಇಂಗ್ಲಿಷರಾಗಿರಬೇಕು”. ಇಂಥ ಸ್ಪಷ್ಟವಾದ ಉದ್ದೇಶವನ್ನಿಟ್ಟುಕೊಂಡೇ ಇಂಗ್ಲಿಷ್ ಮಾಧ್ಯಮದ ಮೂಲಕ ಭಾರತೀಯರಿಗೆ ಶಿಕ್ಷಣ ಕೊಡಬೇಕೆಂದು ಆತ ಹೇಳಿದ್ದನ್ನು ಕೂಡಲೇ ಕಾರ್ಯ ರೂಪಕ್ಕೆ ತರಲಾಯಿತು. ಕ್ರಿ.ಶ. ೧೮೩೫ ಏಪ್ರಿಲ್ ತಿಂಗಳಲ್ಲಿ ಆಜ್ಞೆ ಹೊರಡಿಸಿ ಶಿಕ್ಷಣಕ್ಕೆಂದು ಮೀಸಲಾದ ಹಣವನ್ನೆಲ್ಲ ಇಂಗ್ಲಿಷ್ ಮಾಧ್ಯಮದ ಶಿಕ್ಷಣಕ್ಕೆಂದು ಬಳಸಲಾಯಿತು.

ಅನೇಕ ವರ್ಷಗಳು ಕಳೆದ ಮೇಲೆ ಪ್ರಾದೇಶಿಕ ಭಾಷೆಗಳಲ್ಲಿ ಶಿಕ್ಷಣ ಕೊಡಬೇಕೆಂಬ ಆಜ್ಞೆಯೇನೋ ಬಂತಾದರೂ ಪರಿಸ್ಥಿತಿ ಆಗಲೇ ಕೈಮೀರಿ ಹೋಗಿತ್ತು. ಭಾರತೀಯರಲ್ಲಿ ಕೀಳರಿಮೆ ಬಂದುಬಿಟ್ಟಿತ್ತು. ಈಗ ಇಂಗ್ಲಿಷ್ ಮಾಧ್ಯಮದಲ್ಲೇ ಶಿಕ್ಷಣ ಬೇಕೆಂಬ ಬೇಡಿಕೆ ಜನರಿಂದಲೇ ಬರಲು ಸುರುವಾಯಿತು. ಸ್ವಾತಂತ್ರ‍್ಯ ಬಂದ ಮೇಲೆ ಅದಿನ್ನೂ ಹೆಚ್ಚಾಗಿದೆ. ಇದು ಭಾರತೀಯರ ಬೌದ್ಧಿಕ ಗುಲಾಮಗಿರಿಯ ಸಂಕೇತವೆಂದರೂ ದೊಡ್ಡವರ ಮಾತು ಏನೂ ಪರಿಣಾಮ ಬೀರಿಲ್ಲ.

ಎರಡು ಭಾಷೆಗಳು ಸಂಪರ್ಕಕ್ಕೆ ಬಂದಾಗ ಪ್ರಬಲ ಭಾಷೆ ದುರ್ಬಲ ಭಾಷೆಯ ತಾರತಮ್ಯ ಭಾವನೆಗಳನ್ನು, ಮೌಲ್ಯಗಳನ್ನು, ಸರಿ ತಪ್ಪುಗಳ ಕಲ್ಪನೆಗಳನ್ನು ಬದಲಿಸುತ್ತದೆ, ತಿದ್ದುತ್ತದೆ. ಇಂಗ್ಲಿಷ್‌ನ ಸಂಪರ್ಕದಿಂದಾಗಿ ನಮ್ಮಲ್ಲಿ ಜ್ಞಾನವೆಲ್ಲ ನಿಷ್ಪ್ರಯೋಜಕವೆಂದು ನಮ್ಮಲ್ಲಿ ಕೀಳರಿಮೆ ಹುಟ್ಟಿಕೊಂಡಿದ್ದು ಈಗ ಕನ್ನಡ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದ ಮೂಲಕ ಸಿದ್ಧಗೊಳಿಸಿ ಕಾರ್ಪೋರೇಟ್ ಪ್ರಪಂಚದ ಕೆಲಸ ಮಾರ್ಕೆಟ್ಟಿಗೆ ಅಂತಾರಾಷ್ಟ್ರೀಯ ಕೆಲಸದ ಮಾರ್ಕೆಟ್ಟಿಗೆ ತಳ್ಳುತ್ತಿದ್ದವರಿಗೆ ಶ್ರೀ ಬಾಳಿಲ ಸಿ.ಎಚ್. ಕೃಷ್ಣಶಾಸ್ತ್ರಿಗಳು ಹೇಳಿದ ಒಂದು ಉದಾಹರಣೆ ಕಣ್ಣು ತೆರಸಬೇಕು. ೨೦೦೫ರ ಏಪ್ರಿಲ್‌ನಲ್ಲಿ ಕಾನ್ಪುರದಲ್ಲಿ ದೇಶದ ಐ.ಐ.ಟಿ. ಪ್ರಾಧ್ಯಾಪಕರು ಸೇರಿ ಚರ್ಚಿಸಿದರು. ಅವರ ಪ್ರಕಾರ :

೧. ಇತ್ತೀಚಿನ ಎರಡು ವರ್ಷಗಳಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಐ.ಐ.ಟಿ. ಬರುತ್ತಿರುವ ಬಹಳಷ್ಟು ವಿದ್ಯಾರ್ಥಿಗಳಿಗೆ ತಮ್ಮ ವಿಶೇಷ ಪರಿಣತಿ ವಿಷಯದಲ್ಲಿ ಆಳವಾದ ಮತ್ತು ಮೂಲಭೂತವಾದ ಪರಿಜ್ಞನ ಇರುವುದಿಲ್ಲ.

೨. ಅವರು ಸಂಶೋಧನಾ ಕಾರ್ಯ ಕೈಗೊಳ್ಳಲು ಅರ್ಹರಲ್ಲ.

೩. ಆಶ್ಚರ‍್ಯವೆಂದರೆ ಅರ್ಜಿ ಹಾಕಿದ ಎಲ್ಲರೂ ಅರ್ಹತ ಪದವಿ ಪರೀಕ್ಷೆಯಲ್ಲಿ ಶೇಕಡಾ ೯೬% ರಷ್ಟು ಅಂಕ ಪಡೆದವರು.

೪. ಮುಂದೆಯೂ ಅವರು ಕಲಿಯುತ್ತಾರೆಂಬ ಭರವಸೆಯಿಲ್ಲ. ಯಾಕೆಂದರೆ ಅದರಲ್ಲಿ ಕಲಿಯುವ ಪ್ರವೃತ್ತಿಯನ್ನು ಬೆಳೆಸಿಕೊಂಡಿಲ್ಲ. ಈ ಸಮಸ್ಯೆಗೆ ಮೂಲ ಕಾರಣ: ಮಕ್ಕಳ ಬಾಲ್ಯದಲ್ಲಿನ ಶಿಕ್ಷಣದ ಭಾಷೆ ಅರ್ಥಾಥ್ ಶಿಕ್ಷಣ ಮಾಧ್ಯಮ ಇಂಗ್ಲಿಷ್ ಆಗಿರುವುದೇ ಆಗಿದೆ.

ಈ ಮಾತಿಗೆ ಕನ್ನಡ ವಿಶ್ವವಿದ್ಯಾಲಯದ ಒಂದು ಉದಾಹರಣೆಯೇ ಇದೆ. ಹಿಂದೆ ಪದವಿಪೂರ್ವ ತರಗತಿಗಳ ನಾಲ್ಕು ವಿಜ್ಞಾನದ ಪಠ್ಯಗಳನ್ನು ಕನ್ನಡದಲ್ಲಿ ತಯಾರಿಸಿ ಪ್ರಕಟಿಸಿದ್ದೆವು. ಶಿವರಾಮ ಕಾರಂತರು ಈ ಯೋಜನೆಯನ್ನು ಮೆಚ್ಚಿಕೊಂಡಿದ್ದರು. ಹೀಗೆ ಮಾಡಿರೆಂದು ನಮ್ಮನ್ಯಾರು ಕೇಳಿರಲಿಲ್ಲ. ಪಿಯು ಬೋರ್ಡ್‌‌ನವರು ಆ ಪಠ್ಯಗಳನ್ನು ಗುರುತಿಸಲು ಹಿಂದೇಟು ಹಾಕಿದರು. ಸದರಿ ಪಠ್ಯಗಳು ಮಾರಾಟವಾಗಿ ಪುನರ್ಮುದ್ರಣ ಕಾಣದಾದಾಗ ಕಳ್ಳಪೇಟೆಯಲ್ಲಿ ಗೈಡಿನಂತೆ ಮಾರಾಟವಾಗುತ್ತಿವೆ ಯಾಕೆ? ವಿದ್ಯಾರ್ಥಿಗಳಿಗೆ ತರಗತಿಗಳ ಗಿಳಿಪಾಠ ತಿಳಿಯದೆ ಮನೆಗೆ ಬಂದು ಕನ್ನಡ ಪಾಠ ಓದಿ ವಿಷಯ ತಿಳಿಯುತ್ತಾರೆ.

ಭಾಷಾಮಾಧ್ಯಮದ ಬಗ್ಗೆ ಕೊಂಚ ದೀರ್ಘವಾಗಿಯೇ ಮಾತಾಡಿದ್ದೇನೆ. ಯಾಕೆಂದರೆ ಈ ಬಗ್ಗೆ ಕನ್ನಡ ವಿಶ್ವವಿದ್ಯಾಲಯ ನಿರ್ವಹಿಸಲೇಬೇಕಾದ ಜವಾಬ್ದಾರಿಯೊಂದಿದೆ ಎಂದೇ ನಂಬಿಕೆಯಾಗಿದೆ. ಅದು:

೧. ಕನ್ನಡ ವಿಶ್ವವಿದ್ಯಾಲಯ ಎಲ್.ಕೆ.ಜಿ.ಯಿಂದ ಎಂ.ಎ., ಎಂ.ಎಸ್.ಸಿ.ವರಿಗೆ ಕನ್ನಡ ಮಾಧ್ಯಮದಲ್ಲಿ ಬೋಧನೆ ಮಾಡುವ, ತನ್ನಂಗವಾಗಿ ತನ್ನ ಆವರಣದಲ್ಲಿಯೇ ಇರುವಂತೆ ಶಿಕ್ಷಣ ಸಂಸ್ಥೆಯೊಂದನ್ನು ಶುರು ಮಾಡಬೇಕು. ಇದರಲ್ಲಿ ಪಾರಂಪರಿಕ ವಿಜ್ಞಾನದ ವಿಷಯಗಳಲ್ಲದೆ ಇಂದಿಗೆ ಪ್ರಸ್ತುತವಾಗಿರುವ ವಿಜ್ಞಾನ ಶಾಖೆಗಳಿಗೂ ಅವಕಾಶಗಳಿರಬೇಕು.

ಇದರ ಜೊತೆಗೆ ಕನ್ನಡ ಮಾಧ್ಯಮದ ಮೂಲಕ ಬೋಧನೆ ಮಾಡುವ ತಾಂತ್ರಿಕ (ಎಂಜಿನಿಯರಿಂಗ್) ಹಾಗೂ ವೈದ್ಯಕೀಯ ಕಾಲೇಜುಗಳೂ ಇರಬೇಕು.

ಇದಕ್ಕೆ ಹಣ, ಸರಕಾರದ ಅಪ್ಪಣೆ ಬೇಕೆಂದು ಕೋರುವ ಕಾಲವಿದಲ್ಲ. ವಿಶ್ವವಿದ್ಯಾಲಯದ ಮಿತಿಯಲ್ಲಿಯೇ ಮೊದಲು ಎಲ್ಲ ಪಠ್ಯಗಳ ರಚನೆ ಶುರುವಾಗದೆ ಕನ್ನಡದಲ್ಲಿ ಬೋಧನೆ ಮಾಡಲು ಅನೇಕ ಶಿಕ್ಷಕರು ಸಿದ್ಧರಿದ್ದಾರೆ. ಪಠ್ಯಗಳನ್ನು ಮೊದಲು ವಿದ್ಯಾರ್ಥಿಗಳೇ ಆಧಾರ ಗ್ರಂಥಗಳಾಗಿ ಓದುತ್ತಾರೆ. ಆಮೇಲೆ ಆಯಾ ಬೋರ್ಡುಗಳೂ ಮುಂದೆ ಬಂದೇ ಬರುತ್ತವೆ.

೨. ಕನ್ನಡಕ್ಕೆ, ಕನ್ನಡ ಸಂಸ್ಕೃತಿಗೆ ಒದಗುವ ಅಪಾಯಗಳನ್ನು ಮನಗಂಡು ಅವನ್ನು ಎದುರಿಸುವ ಪೂರ್ವಸಿದ್ಧತೆಗಳ ಸೂಚನೆ ಕನ್ನಡ ವಿಶ್ವವಿದ್ಯಾಲಯದಿಂದ ಮೊದಲಾಗಬೇಕು. ಹಾಗೆ ಬಂದ ಅಪಾಯಕಾರಿ ಆತಂಕ-ದೃಶ್ಯ ಮಾಧ್ಯಮ ಇದಕ್ಕೆ ನಿಯಂತ್ರಣವೆಂಬುದಿಲ್ಲ. ಚಲನಚಿತ್ರಗಳಿಗಾದರೆ ಸೆನ್ಸಾರ್ ಮಂಡಳಿಯಿದೆ. ಇದಕ್ಕೆ ಅದು ಇಲ್ಲ. ಪತ್ರಿಕೆಗಳಿಗೆ ಯಜಮಾನ ಅಂತ ಒಬ್ಬನಿರುತ್ತಾನೆ. ಹೇಳಕೇಳುವುದಕ್ಕೆ ಇದಕ್ಕೆ ಯಾರಿದ್ದಾರೆಂದು ತಿಳಿಯುವುದಿಲ್ಲ. ಆಡಿಸುವವರು ಅಡಗಿಸಿಟ್ಟು ಆಡುವ ಗೊಂಬೆಯಂತೆ ಆಡಬಾರದ ಆಟಗಳನ್ನೆಲ್ಲಾ ಆಡುತ್ತಿದೆ. ಅದರ ದೊಡ್ಡ ಬಲವೆಂದು ಅದೇನು ತೋರಿಸಿದರೂ ಜನ ನಂಬುತ್ತಾರೆ. ತನಗಾಗದವರನ್ನು ಅಮಾನುಷವಾಗಿ ಶತ್ರುಗಳೆಂಬಂತೆ ಚಿತ್ರಿಸಬಲ್ಲ, ತನಗಿಷ್ಟವಾದದ್ದನ್ನು ದೇವತೆಯೆಂದು ಮೆರೆಸಬಲ್ಲ ಶಕ್ತಿ ಅದಕ್ಕಿದೆ. ಅದರ ಅಪಾಯಗಳನ್ನು ಹೀಗೆ ಸಂಗ್ರಹಿಸಬಹುದು.

ಈ ಮಾಧ್ಯಮಕ್ಕೆ ಸಂಸ್ಕೃತಿಯಲ್ಲಿ ನಂಬಿಕೆ ಇಲ್ಲ. ರೋಚಕತೆ ಒಂದೇ ಇದರ ಗುರಿ. ಆದ್ದರಿಂದ ಎಗ್ಗಿಲ್ಲದೆ ಸುಳ್ಳನ್ನು ಕೂಡ ಹೇಳುತ್ತದೆ. ಶಬ್ದಾರ್ಥಗಳ ಕ್ರಮವನ್ನು ತಪ್ಪಿಸಿ ನಮ್ಮ ಕಾರಣ ಶಕ್ತಿಯನ್ನು ಕದಡುತ್ತದೆ. ಚಲನಚಿತ್ರದಲ್ಲಿ ದೃಶ್ಯ- ಅದಕ್ಕೆ ತಕ್ಕ ಅರ್ಥವಿವರಣೆ ಇರುತ್ತದೆ. ಇಲ್ಲಿ ಕ್ಷಣಕ್ಕೊಂದು ದೃಶ್ಯ ಬದಲಾವಣೆ ಆಗುವುದರಿಂದ ಕ್ಷಣ ಭಂಗುರವನ್ನೇ ಸಂಭ್ರಮಿಸುತ್ತೇವೆ. ಕ್ಷಣಕ್ಷಣಕ್ಕೂ ಹೊಸತನವನ್ನು ಅರ್ಥವನ್ನು ಮರೆಮಾಚಿ ಕ್ಷಣಕ್ಷಣಕ್ಕೂ ಹೊಸ ದೃಶ್ಯವನ್ನು ಹಂಬಲಿಸುವಂತೆ ಮಾಡುತ್ತದೆ. ಹೀಗೆ ಶಬ್ದಾರ್ಥಗಳ ವ್ಯವಸ್ಥೆಯನ್ನೇ ತಲೆಕೆಳಗಾಗುವಂತೆ ಮಾಡಿ ಕಾರಣ ಶಕ್ತಿಯನ್ನು ಘಾತಿಸುತ್ತಿದೆ. ಇದು ಉಪಯೋಗಿಸುವ ಭಾಷೆಯೂ ಅಪಾಯಕಾರಿ. ಅದು ಕನ್ನಡ ಭಾಷಿಕ ಸ್ಮರಣೆಗಳನ್ನು ನಾಶ ಮಾಡುತ್ತಿದೆ. ಇದನ್ನೇ ಕೆಲವರು ಗ್ಲೋಬಲೈಜೇಶನ್ ಎನ್ನುತ್ತಿದ್ದಾರೆ. ಇದನ್ನು ‘ಗೋಳೀಕರಣ’ ಎಂದು ಸೂಕ್ತ ಹೆಸರಿನಿಂದ ಕರೆದಿದ್ದಾರೆ. ಉಪಭೋಗಕ್ಕೆ ಸಹಾಯಕವಾಗುವ ಸ್ವಂತದ್ದೊಂದು ಸೌಂದರ‍್ಯ ಮೀಮಾಂಸೆಯನ್ನೇ ಸೃಷ್ಟಿ ಮಾಡಿಕೊಂಡು ಜನರನ್ನು ಸೆಳೆಯುತ್ತಿದೆ.

ಅದು ಉಪಯೋಗಿಸುವ ಭಾಷೆಯನ್ನು ಕಂಗ್ಲಿಷ್ ಎಂದು, ಅದರ ಶೋಗಳನ್ನು ಕ್ರಿಯಾಲಿಟಿ ಶೋಗಳೆಂದು ಮಾಧ್ಯಮ ಮಿತ್ರರು ಕರೆದ ಅದರ ಭಾಷೆ ಸ್ಟ್ಯಾಂಡರ್ಡ್‌ಕನ್ನಡವಂತೂ ಅಲ್ಲ, ಪ್ರಾದೇಶಿಕ ಕನ್ನಡವೂ ಅಲ್ಲ. ಕನ್ನಡವೂ ಅಲ್ಲ, ಸದರಿ ಮಾಧ್ಯಮದ ಇಂಥ ಅಪಾಯಗಳ ಬಗ್ಗೆ ಅಧ್ಯಯನ ಮಾಡಿ ಕಾಲಕಾಲಕ್ಕೆ ಜನರಿಗೆ, ಸರಕಾರಕ್ಕೆ ಎಚ್ಚರಿಕೆ ಕೊಡುವಂಥ ಒಂದು ಅಧ್ಯಯನ ವಿಭಾಗವನ್ನು ಶುರು ಮಾಡುವುದು ಸಕಾಲಿಕವೆಂದು ನನ್ನ ಭಾವನೆ. ನಮ್ಮ ಮೂಲಭೂತ ಸಮಸ್ಯೆಗಳನ್ನೇ ವಿಸ್ಮೃತಿಗೆ ತಳ್ಳುವ, ಪ್ರಜಾಪ್ರಭುತ್ವ ವ್ಯವಸ್ಥೆಯೇ ಅಲ್ಲಗಳೆವ, ಕನ್ನಡದ ನುಡಿಗಟ್ಟನ್ನೇ ವಿಕಾರಗೊಳಿಸುವ ಒಂದು ಮಾಧ್ಯಮದ ಬಗ್ಗೆ ನಾವು ಅಧ್ಯಯನ ಮಾಡಬೇಕಾದದ್ದು ಅಗತ್ಯವೆಂದೇ ನಾನು ನಂಬಿದ್ದೇನೆ.

೩. ಇದರ ಜೊತೆಗೆ ತಂತ್ರಾಂಶದ ಅಭಿವೃದ್ಧಿಗಾಗಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಒಂದು ದೊಡ್ಡ ಪೂರ್ಣ ಪ್ರಮಾಣದ ವಿಭಾಗವೇ ಅಸ್ತಿತ್ವಕ್ಕೆ ಬರಬೇಕಾಗಿದೆ. ಇವತ್ತು ಪ್ರಪಂಚದ ವಿಶ್ವವಿದ್ಯಾಲಯಗಳೆಲ್ಲ ಮಾಹಿತಿಯನ್ನು ಸಂಗ್ರಹಿಸಿ ಮಾರಾಟ ಮಾಡುತ್ತಿರುವಾಗ ತಂತ್ರಾಂಶದ ಮೂಲಕ ಶಿಕ್ಷಣ ಕೊಡುತ್ತಿರುವ ದೇಶದ ಭಾಷೆಗಳ ತಂತ್ರಾಂಶದಲ್ಲಿ ಅಗಾಧವಾದ ಪ್ರಗತಿ ಸಾಧಿಸಿರುವಾಗ ಕನ್ನಡಕ್ಕಾಗಿ ಹುಟ್ಟಿದ ವಿಶ್ವವಿದ್ಯಾಲಯ ಒಂದು ಸ್ವತಂತ್ರ ವಿಭಾಗವನ್ನು ತೆರೆಯದಿರುವುದು ಆಶ್ಚರ‍್ಯಕರ ಸಂಗತಿಯಾಗಿದೆ. ಪೂರ್ಣ ಪ್ರಮಾಣದ ತಂತ್ರಾಂಶ ವಿಭಾಗವನ್ನು ಕೂಡಲೇ ತೆರೆಯಬೇಕೆಂದು ಒತ್ತಾಯಿಸುತ್ತೇನೆ.

೪. ಮಾಡಬೇಕಾದ ಇನ್ನೊಂದು ಕೆಲಸವನ್ನು ಹೇಳಿ ನನ್ನ ಮಾತು ಮುಗಿಸುತ್ತೇನೆ. ಕೂಡಲೇ ಪದಕೋಶಗಳ ಒಂದು ಪ್ರತ್ಯೇಕ ವಿಭಾಗವನ್ನು ಶುರು ಮಾಡಬೇಕು. ಮಾರುಕಟ್ಟೆಯಲ್ಲಿ ಕನ್ನಡ ಪದಕೋಶಗಳ ಅಭಾವ ಎಷ್ಟಿದೆಯೆಂದರೆ ಸಾಮಾನ್ಯರಿಗೆ ಹಳೆಯ ಕೋಶಗಳು ಸಿಗುತ್ತಿಲ್ಲ. ಹೊಸ ಕೋಶಗಳು ಬರುತ್ತಿಲ್ಲ. ಕೆಟ್ಟಿಲ್‌ರ ಪುನರಾವೃತ್ತಿ ಆಗಿದೆ; ಆದರದು ಸಾಮಾನ್ಯರಿಗೆ ಭಾರ. ಇಂಥ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯ ಓದುಗರಿಗೆ ಅಗತ್ಯವಿರುವ ಕನ್ನಡ ಪದಕೋಶ ತಯಾರಿಕೆಗೆ ಮುಂದಾಗಬೇಕು. ಅಪರೂಪದ ಪದಕೋಶಗಳನ್ನಷ್ಟೇ ತಯಾರಿಸುವುದಿಲ್ಲ. ಜೊತೆಗೆ ಜನಪ್ರಿಯ ಪದಕೋಶಗಳ ರಚನೆಗೆ ಮುಂದೆ ಬರಬೇಕು. ಕನ್ನಡ ವಿಶ್ವವಿದ್ಯಾಲಯದ ಪದಕೋಶ ಪ್ರಮಾಣೀಭೂತವಾದ ಕೋಶವಾಗಬೇಕು.

ಈ ಉದ್ದೇಶಕ್ಕಾಗಿಯೇ ಕರ್ನಾಟಕದಲ್ಲಿ ಸಣ್ಣ ಪತ್ರಿಕೆಗಳನ್ನು ವಿಶ್ವವಿದ್ಯಾಲಯ ತರಿಸಿ, ಅವುಗಳ ಸಂದರ್ಭಾನುಸಾರ ಟಂಕಿಸುವ ಶಬ್ದಗಳನ್ನು ಸಂಗ್ರಹಿಸುವ, ಪತ್ರಿಕೆಯಲ್ಲಿ ಪ್ರಕಟಿಸುವ ವ್ಯವಸ್ಥೆಯಿತ್ತು. ಅದಿನ್ನೂ ಮುಂದುವರಿದಿದ್ದರೆ ಅದರ ನೆರವಿನಿಂದ ಕನ್ನಡ ಶಬ್ದಕೋಶವನ್ನು ನಿಯಮಿತವಾಗಿ ಐದು ವರ್ಷಗಳಿಗೊಮ್ಮೆ ಪರಿಷ್ಕರಿಸುವ ಕಾರ್ಯವೂ ನಡೆಯಬೇಕು.

ಸರಕಾರಕ್ಕೆ ಇಂಥ ಅನೇಕ ಪದಕೋಶಗಳ ಅಗತ್ಯವಿದ್ದುದನ್ನು ನಾನು ಮನಗಂಡಿದ್ದೇನೆ. ಆಡಳಿತ ಪದಕೋಶ, ತಂತ್ರಾಂಶ ಪದಕೋಶ ಮುಂತಾದ ಅನೇಕ ಪದಕೋಶಗಳ ಅಗತ್ಯವಿದ್ದೂ ಮಾಡುವವರಿಲ್ಲದೆ ನೆನೆಗುದಿಗೆ ಬಿದ್ದಿವೆ. ಹಾಗೆಯೇ ಅನೇಕ ಜ್ಞಾನಶಿಸ್ತುಗಳ ಕೆಲಸ ಬಾಕಿ ಇದೆ. ಬರಗೂರು ರಾಮಚಂದ್ರಪ್ಪನವರು ೨೦೦೮ರ ನುಡಿಹಬ್ಬದ ಭಾಷಣದಲ್ಲಿ ಹೇಳಿದ ಹಾಗೆ “ಎಲ್ಲ ಜ್ಞಾನಶಿಸ್ತುಗಳ ಕನ್ನಡೀಕರಣವು ಕನ್ನಡ ವಿಶ್ವವಿದ್ಯಾಲಯದ ಕಾರ್ಯವ್ಯಾಪ್ತಿಯಾಗಿದೆ. ಇಂದು ಜಾಗತೀಕರಣವೆಂಬ ಹಣೆಪಟ್ಟಿ ಹೊತ್ತು ಬಂದಿರುವ ಅಮೆರಿಕೀಕರಣಕ್ಕೆ ಕನ್ನಡೀಕರಣದ ಮೂಲಕ ಉತ್ತರ ಕೊಡುವ ಸಾಂಸ್ಕೃತಿಕ ಸವಾಲನ್ನು ಕನ್ನಡ ವಿಶ್ವವಿದ್ಯಾಲಯ ಸ್ವೀಕರಿಸಬೇಕಾಗಿದೆ”. ಜೊತೆಗೆ ರಸಾಯನಶಾಸ್ತ್ರ, ಜ್ಯಾಮಿತಿ, ಭೂಗೋಳ, ಮುಂತಾದ ಪದಕೋಶಗಳೂ ಸಿದ್ದವಾಗಬೇಕು.

ಕೊನೆಯದಾಗಿ ನನ್ನ ಕವನ ಒಂದು ಪದ್ಯದಿಂದ ಮಾತು ಮುಗಿಸುತ್ತೆನೆ.

ಕುರಿತು ಓದದ ಕಾವ್ಯ ಪರಿಣತರ ಮಾಲೆ
ಸಂತರ ಶರಣs ಮಂತ್ರದ ಮಾಲೆ
ಶಬ್ದಕ್ಕೆ ಬೆಳಕನ್ನ ಮುಡಿಸುವ ಕವಗs
ದಿನಬೆಳಗು ಹೊಗಳುವರು ನಿನ್ನ ಕೀರ್ತಿಯನೆ
ಸಾವಿರದ ಶರಣವ್ವ ಕನ್ನಡದ ತಾಯೇ ||

* * *