ಇಲ್ಲಿ ನಡೆಯಲಿರುವ ವಿಚಾರ ಸಂಕಿರಣಕ್ಕೆ ತಮ್ಮೆಲ್ಲರಿಗೂ ಸ್ವಾಗತವನ್ನು ಬಯಸಲು ನನಗೆ ಸಂತೋಷವಾಗುತ್ತದೆ. ಈ ವಿಚಾರ ಸಂಕಿರಣ ನಡೆಯುವುದು ಮತಂಗನ ‘ಬೃಹದ್ದೇಶಿ’ಯ ಬಗ್ಗೆ. ಇಂದು ಸಂಗೀತ ಕಲೆಯಾಗಿ ನಮ್ಮ ಮನಸ್ಸನ್ನು ಸುಲಭವಾಗಿ ಆಕರ್ಷಿಸಿ ರಂಜನೆಯನ್ನೀಯುತ್ತದೆ. ಆದರೆ ಶಾಸ್ತ್ರವಾಗಿ ಅನೇಕ ಸಮಸ್ಯೆಗಳನ್ನು ಒಡ್ಡುತ್ತದೆ. ಈ ಶಾಸ್ತ್ರದ ಬಗ್ಗೆ ಸಂಶೋಧನೆಯನ್ನು ತಜ್ಞರು ಮಾತ್ರ, ಅದೂ ಕಷ್ಟದಿಂದ ಮಾಡಬಲ್ಲರು. ಸಂಗೀತದ ಆಕರ್ಷತೆಯ ಬಗ್ಗೆ “ಶಿಶುರ್ವೇತ್ತಿ, ಪಶುರ್ವೇತ್ತಿ” ಎಂಬ ಮಾತಿದೆ. ಆದರೆ ಶಿಶುಗಳನ್ನು ಪಶುಗಳನ್ನು ಆಕರ್ಷಿಸುವ ಈ ಸಂಗೀತದ ಶಾಸ್ತ್ರೀಯ ಸ್ವರೂಪ ಮಾತ್ರ ಅದರಲ್ಲಿ ನಿಷ್ಣಾತರಾದವರಿಗೆ ಮಾತ್ರ ವೇದ್ಯವಾಗಬಲ್ಲದು.

ಸಂಗೀತದ ಶಾಸ್ತ್ರೀಯ ಚಿಂತನ ಭರತನ ನಾಟ್ಯಶಾಸ್ತ್ರದಷ್ಟು ಹಳೆಯದು ನಿಜ. ಆದರೆ ಅಂದಿನ ಸಂಗೀತದ ಸ್ವರೂಪವೇ ಇಂದಿಗೂ ಉಳಿದಿದೆಯೇ? ಈ ಪ್ರಶ್ನೆಗೆ ಉತ್ತರ ಹೇಳುವುದು ಕಷ್ಟ. ರಾಗಗಳ ಸ್ವರೂಪದಲ್ಲಿ, ಅವುಗಳ ರಚನಾಕ್ರಮದಲ್ಲಿ ಸಾಕಷ್ಟು ಬದಲಾವಣೆಗಳಾಗಿ ಹೋಗಿವೆ. ವೈದಿಕ, ಅಭಿಜಾತ, ಜಾನಪದ ಸಂಗೀತ ಪದ್ಧತಿಗಳನ್ನು ವಿಂಗಡಿಸಿ ಹೇಳುವ ರೀತಿ ಇತ್ತೆಂದು ತೋರುತ್ತದೆ. ಸಂಗೀತದಲ್ಲಿಯೂ ಮಾರ್ಗ ಮತ್ತು ದೇಸಿ ಎಂಬ ಪದಗಳನ್ನು ಶಾಸ್ತ್ರಕಾರರು ಉಪಯೋಗಿಸುತ್ತಾರೆ. ಮುಂದೆ ಮುಸಲ್ಮಾನ ಅರಸರ ಆಳ್ವಿಕೆಯಲ್ಲಿ ನಮ್ಮ ಸಂಗೀತ ಹೊಸ ಪ್ರಭಾವಗಳಿಗೆ ಈಡಾಯಿತು. ಆದರೆ ಸಂಗೀತದ ಸ್ವರೂಪವೇ ಒಂದು ಭಾಷೆಯಾಗಿ ಅರ್ಥವನ್ನು ಕಟ್ಟಿಕೊಳ್ಳಬಹುದೇ ಎಂಬುದನ್ನು ಸಂಗೀತಗಾರರು ಮತ್ತು ಸಂಗೀತತಜ್ಞರು ಕೂಡಿಯೇ ವಿಚಾರ ಮಾಡಬೇಕಾಗಿದೆ. ತ್ಯಾಗರಾಜರ, ಪುರಂದರದಾಸರ ಸಂಗೀತಕ್ಕೂ ಅದಕ್ಕಿಂತ ಮೊದಲು ಪ್ರಚಾರದಲ್ಲಿದ್ದ ಅಭಿಜಾತ ಸಂಗೀತಕ್ಕೂ ಇರುವ ಮೌಲಿಕ ಭೇದಗಳನ್ನು ಈಗ ಕಂಡು ಹಿಡಿಯಬೇಕಾಗಿದೆ. ಶಾಸ್ತ್ರಬದ್ಧವಾದ ಸಂಗೀತ ಕೂಡ ಬದಲಾವಣೆಗಳಿಗೆ ಹೊರತಾಗಿಲ್ಲ ಎಂದರೆ ಬದಲಾವಣೆಯ ಮೂಲಶಕ್ತಿಗಳನ್ನು ಹುಡುಕಿಕೊಂಡು ಹೋಗಬೇಕಾಗುತ್ತದೆ.

ಸಂಗೀತಕ್ಕೂ ಕಾವ್ಯಕ್ಕೂ ಇರುವ ಸಂಬಂಧಗಳನ್ನು ಕುರಿತು ಹೆಚ್ಚು ಹೇಳಬೇಕಾಗಿಲ್ಲ, ಪುರಂದರದಾಸರ ಕೀರ್ತನೆಗಳು ಶ್ರೇಷ್ಠ ಕಾವ್ಯವಿದ್ದಂತೆ ಶ್ರೇಷ್ಠ ಸಂಗೀತವೂ ಹೌದು ಎಂಬ ಮಾತನ್ನು ಎಲ್ಲರೂ ಒಪ್ಪಿಕೊಂಡದ್ದಾಗಿದೆ. ಜಯದೇವನ ‘ಗೀತಗೋವಿಂದ’ ಕೃತಿಯಲ್ಲಿ ಸಂಗೀತದ ಭಾಗವನ್ನು ಮರೆತು ಓದಿದರೆ ಕಾವ್ಯ ಸಂಗೀತಕ್ಕಿಂತ ಹೆಚ್ಚು ಅರ್ಥವನ್ನು ಕಳೆದುಕೊಳ್ಳುತ್ತದೆ. ಅಲ್ಲಿ ಸಂಗೀತ, ಕಾವ್ಯದ ಮೈಯಲ್ಲಿ ರಕ್ತದಂತೆ ಸಂಚರಿಸುತ್ತದೆ. ಅಂದರೆ ಕಾವ್ಯ ಮತ್ತು ಸಂಗೀತಳೆರಡು ಪರಸ್ಪರ ಉಪಕಾರವಾದ ಕಲೆಗಳಾಗಿವೆ. ಉತ್ತರ ಭಾರತದಲ್ಲಿ ರಾಗಮಾಲೆಗಳ ಚಿತ್ರಗಳನ್ನು ಬರೆಯುವ ರೂಢಿ ಪ್ರಚಾರದಲ್ಲಿತ್ತು. ರಾಗಗಳ ಅಭಿಮಾನಿ ದೇವತೆಗಳ ಚಿತ್ರಗಳನ್ನು ಅನೇಕ ಸಂಗ್ರಹಗಳಲ್ಲಿ ನೋಡಿರಬಹುದು. ಅದೇ ರೀತಿಯಲ್ಲಿ ನೃತ್ಯ ಮತ್ತು ನಾಟಕಗಳಲ್ಲಿ ಸಂಗೀತದ ಪಾತ್ರ ಏನೆಂಬುದನ್ನು ಹೆಚ್ಚು ವಿವರಿಸಿ ಹೇಳುವ ಅಗತ್ಯವಿಲ್ಲವೆಂದು ತೋರುತ್ತದೆ. ಭರತನಾಟ್ಯಗಳಲ್ಲಿ ಒಂದು ಕಾವ್ಯಕೃತಿಯ ಅನುವಾದ ಅನೇಕ ವಿಧಗಳಲ್ಲಿ ನಡೆಯುತ್ತದೆ.

ಸಂಗೀತದೊಂದಿಗೆ ಉಳಿದ ಕಲೆಗಳ ಸಂಬಂಧವನ್ನು ಕುರಿತು ವಿಚಾರ ಮಾಡಿದಾಗಲೆಲ್ಲ ಸಂಸ್ಕೃತಿಯ ಸಮನ್ವಿತವಾದ ಚಿತ್ರವೊಂದು ಕಣ್ಣೆದುರು ಮೂಡುತ್ತದೆ. ಈ ಚಿತ್ರ ಈಗ ಉಳಿದಿಲ್ಲ. ನಮ್ಮ ಸಾಹಿತ್ಯಜ್ಞರಿಗೆ ಸಂಗೀತವಾಗಲಿ ಚಿತ್ರಕಲೆಯಾಗಲಿ ಗೊತ್ತಿಲ್ಲ. ಸಂಗೀತಗಾರರಿಗೆ ಉಳಿದ ಕಲೆಗಳ ಪರಿಚಯವಿಲ್ಲ. ಬಹುಶಃ ಸಂಸ್ಕೃತಿಯನ್ನು ಸಮನ್ವಯಗೊಳಿಸಲು ಕಾಲ ಮತ್ತೆ ಬಂದಿದೆ ಎಂದು ತೋರುತ್ತದೆ. ಇಂಥ ವಿಚಾರ ಸಂಕಿರಣಗಳು ಈ ಕಾರ್ಯದಲ್ಲಿ ನೆರವು ನೀಡಬಲ್ಲವು. ಮತಂಗನ ‘ಬೃಹದ್ದೇಶಿ’ ಒಂದು ಸಂಗೀತದ ಗ್ರಂಥವಾಗಿದೆ ನಿಜ. ಆದರೆ ಅದು ಆ ಕಾಲದ ಸಮನ್ವಿತ ಚಿತ್ರದ, ಸಮನ್ವಿತ ಸಂಸ್ಕೃತಿಯ ಒಂದು ಗ್ರಂಥವಾಗಿದೆ. ಆದ್ದರಿಂದ ತಜ್ಞರು ಅದರ ಸಾಂಸ್ಕೃತಿಕ ಅರ್ಥಪೂರ್ಣತೆಯನ್ನು ತೆರೆದು ತೋರಿಸಬೇಕು. ಅಂಥ ಒಂದು ವಿಚಾರ ಸಂಕಿರಣ ನಮ್ಮ ವಿಶ್ವವಿದ್ಯಾಲಯದ ಮೂಲಕ ನಡೆಯುತ್ತಿರುವುದು ಅಭಿಮಾನದ ವಿಷಯವಾಗಿದೆ. ಅನೇಕ ವಿಧದ ಕಲೆಗಳಿಗೆ ಶಸ್ತ್ರಗಳಿಗೆ ಜನ್ಮವಿತ್ತ ಈ ನೆಲದಲ್ಲಿ ಅಂಥ ಕಾರ್ಯ ಮತ್ತೆ ನಡೆಯಬೇಕಾಗಿದೆ. ಅದಕ್ಕಾಗಿ ತಮ್ಮೆಲ್ಲರಿಗೆ ಹೃತ್ಪೂರ್ವಕವಾದ ಸ್ವಾಗತವನ್ನು ಬಯಸುತ್ತೇನೆ.

* * *

* ಮತಂಗ ಮುನಿಯ ಬೃಹದ್ದೇಶಿಯನ್ನು ಕುರಿತು ದೆಹಲಿಯ ಸಂಗೀತ ನಾಟಕ ಅಕಾಡೆಮಿಯ ಸಹಯೋಗದೊಂದಿಗೆ ನಡೆಸಿದ ಅಂತಾರಾಷ್ಟ್ರೀಯ ವಿಚಾರ ಸಂಕಿರಣದ ಸ್ವಾಗತ ಭಾಷಣ-೧೯೯೫