ಮೊದಲ ನುಡಿಹಬ್ಬ

ನುಡಿಹಬ್ಬ ನಾವು ನಿರೀಕ್ಷಿಸಿದಂತೆ ನಡೆಯುವ ಸಾಧ್ಯತೆಗಳಿರಲಿಲ್ಲ. ಇವು ಮಳೆಯ ದಿನಗಳಲ್ಲ ನಿಜ. ಆದರೂ ಪೂರ್ವದ ಚಂಡಮಾರುತದ ಮುನ್ಸೂಚನೆ ಬಂದು ಚಡಪಡಿಕೆ ಶುರುವಾಗಿತ್ತು. ಒಬ್ಬಿಬ್ಬರ ಹೊರತು ನಾವು ಆಮಂತ್ರಿಸಿದವರೆಲ್ಲ ಬಂದಿದ್ದರು. ಮೊದಲನೇ ದಿನದ ಕಾರ್ಯಕ್ರಮ ವಿಶ್ವವಿದ್ಯಾಲಯದ ಮಂಟಪದಲ್ಲಿ ಡಾ. ಸಿದ್ಧಯ್ಯ ಪುರಾಣಿಕರು ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀ ಕೆ.ವಿ. ಸುಬ್ಬಣ್ಣನವರ ಅಧ್ಯಕ್ಷತೆಯಲ್ಲಿ ಮೊದಲನೇ ಗೋಷ್ಠಿ ನಡೆಯಿತು. ಮಳೆ ಬಂತಾದರೂ ಕಾರ್ಯಕ್ರಮ ತೊಂದರೆಯಿಲ್ಲದೆ ನಡೆಯಿತು. ಸಂಜೆಯ ಯಕ್ಷಗಾನದ ಬಗ್ಗೆ ಆತಂಕವಿತ್ತು. ಆಗಲೂ ಅನಿರೀಕ್ಷಿತವಾಗಿ ಮಳೆ ಬಾರದೆ ಯಕ್ಷಗಾನ ಚೆನ್ನಾಗಿ ನಡೆಯಿತು. ಇಷ್ಟಾದರೆ ಮಾರನೇ ದಿನದ ಬಗ್ಗೆ ಭರವಸೆ ಮೂಡದಿದ್ದೀತೆ? ಬಹಳ ನಂಬಿಕೆಯಿಂದ ಸ್ವಾಮಿ ವಿರೂಪಾಕ್ಷನಿಗೂ ಸೂರ್ಯನಾರಾಯಣನಿಗೂ ನಮಸ್ಕರಿಸುತ್ತಲೇ ಎದ್ದೆವು. ಸಂಜೆಯವರೆಗಿನ ಕಾರ್ಯಕ್ರಮ ಚೆನ್ನಾಗಿತ್ತು.

ಗಜಶಾಲೆಯ ಹುಲ್ಲಿನ ಮೇಲೆ ಸರಳ ಸಮಾರಂಭ. ಮೊದಲನೆಯದು ನಮ್ಮ ವಿಶ್ವವಿದ್ಯಾಲಯದ ಪ್ರಥಮ ರಿಪೋರ್ಟ್ ಕೊಟ್ಟ ಶ್ರೀ ಎಸ್.ಎಸ್. ಒಡೆಯರ್ ಅವರ ಸನ್ಮಾನ. ನಮ್ಮ ವಿಶ್ವವಿದ್ಯಾಲಯದ ಮೊಟ್ಟ ಮೊದಲನೆಯ ಮೀಸಲು ಸನ್ಮಾನವಿದು. ನಮ್ಮ ವಿಶ್ವವಿದ್ಯಾಲಯದ ಘಟಿಕೋತ್ಸವದ ಆರಂಭವೂ ಒಂದರ್ಥದಲ್ಲಿ ಇದೇ ಎನ್ನಬೇಕು. ಶಿಲ್ಪಶಾಸ್ತ್ರದಲ್ಲಿ ಒಂದು ಮಾತಿದೆ. “ಶಿಲ್ಪಿಯು ಕಲ್ಲಿನಲ್ಲಿ ಮೂರ್ತಿಯನ್ನು ಮಾಡುವುದಿಲ್ಲ. ಮೂರ್ತಿ ಆ ಕಲ್ಲಿನಲ್ಲಿ ಮೊದಲೇ ಇರುತ್ತದೆ. ಅದರಲ್ಲಿಯ ಅನಗತ್ಯ ಕಲ್ಲನ್ನು ತೆಗೆದು ಆ ಮೂರ್ತಿ ಕಾಣುವ ಹಾಗೆ ಮಾಡುವುದೇ ಶಿಲ್ಪಿಯ ಕೆಲಸ”. ಇಡೀ ವರ್ಷದ ಆ ಕೆಲಸದಲ್ಲಿ ಮೂರ್ತಿ ಸ್ಥೂಲ ರೂಪ ಮೂಡಿತು. ಈ ಹಂತದಲ್ಲಿ ಶ್ರೀ ಎಸ್.ಎಸ್. ಒಡೆಯರ್ ಸನ್ಮಾನವನ್ನು ಇಟ್ಟುಕೊಂಡಿದ್ದೆವು.

ಇತ್ತ ಹಗಲಲ್ಲ, ಅತ್ತ ರಾತ್ರಿಯಲ್ಲದ ಸಮಯದಲ್ಲಿ ಕಾರ್ಯಕ್ರಮ ಶುರುವಾಯಿತು. ನಮ್ಮ ಪ್ರಸಾರಾಂಗದ ಪ್ರಕಟಣೆಗಳ ಬಗ್ಗೆ ಐವರು ವಿದ್ವಾಂಸರು ಪರಿಚಯ ಭಾಷಣ ಮಾಡಿದರು. ಶ್ರೀ ಮುದೇನೂರು ಸಂಗಣ್ಣನವರು ಬಿಡುಗಡೆಗಾಗಿ ಪುಸ್ತಕಗಳನ್ನು ಎತ್ತಿಕೊಂಡಿದ್ದೇ ತಡ ಮಲ್ಲಿಗೆಯ ಮೊಗ್ಗರಳಿದ ಹಾಗೆ ಬೆಳದಿಂಗಳು ಮೂಡಿತು. ಸಂಗಣ್ಣನವರು ಪ್ರೀತಿಯ ಮಾತಾಡಿ ನಮ್ಮನ್ನೆಲ್ಲ ಹುರಿದುಂಬಿಸಿದರು. ಶ್ರೀ ಎಂ.ಪಿ. ಪ್ರಕಾಶ್ ಅವರು ಒಡೆಯರ್ ಅವರ ಬಗ್ಗೆ ಮಾತನಾಡಲು ಪ್ರಾರಂಭಿಸಿದಂತೆ ಬೆಳದಿಂಗಳ ಮಾಯೆ ಸದ್ದಿಲ್ಲದೆ ನಮ್ಮನ್ನು ಆವರಿಸತೊಡಗಿತು. ಒಡೆಯರ್ ದಂಪತಿಗಳ ಔದಾರ್ಯ ದೊಡ್ಡದು. ನಮ್ಮ ಸಣ್ಣ ಸನ್ಮಾನವನ್ನೇ ದೊಡ್ಡದಾಗಿ ಸ್ವೀಕರಿಸಿ ‘ವಿಶ್ವವಿದ್ಯಾಲಯ ಒಳ್ಳೆಯ ಕೆಲಸ ಮಾಡುತ್ತಿದೆ’ ಎಂದು ನಮ್ಮನ್ನೇ ಹರಸಿ ಹುರಿದುಂಬಿಸಿದರು. ಇನ್ನು ಶ್ರೀಮತಿ ಗಂಗೂಬಾಯಿ ಹಾನಗಲ್ ಅವರ ಹಾಡುಗಾರಿಕೆ. ಈವರೆಗಿನ ಕಾರ್ಯಕ್ರಮ ನುಡಿಹಬ್ಬವಾದರೆ, ಇನ್ನು ಮೇಲೆ ನುಡಿ ಮೀರಿದ ಹಬ್ಬ ಶುರುವಾಗಬೇಕಿತ್ತು. ಇಲ್ಲಿಯೇ ನಮಗೆ ದೈವ ಕೈಕೊಟ್ಟಿತು. ಈತನಕ ಹಿಡಿದಿಟ್ಟಂತೆ ಇದ್ದ ಮಳೆ ಈಗ ಕಟ್ಟೊಡೆದು ನುಗ್ಗಿತು. ಬಿರುಗಾಳಿಗೆ ಬೆಳದಿಂಗಳು ನಂದಿ ಹೋಗಿ ಆಕಾಶದ ತುಂಬ ಕರಿಮೋಡ ಆವರಿಸಿತು. ಅದರೊಂದಿಗೆ ನಮ್ಮ ನುಡಿಹಬ್ಬದ ಕನಸುಗಳೂ ಹಳವಂಡಗಳಾದವು. ಇದೇ ಚಿಂತೆಯಲ್ಲಿ ಮುಂಬೈಗೆ ಹೋದೆ.

ಮಹಾಪೂರ

ನವೆಂಬರ್ ೧೮ ರಂದು ಬೆಂಗಳೂರಿಗೆ ಬಂದು ಎಲ್ಲಾ ಕೆಲಸಗಳನ್ನು ಮುಗಿಸಿ ಮಾರನೇ ದಿನ ಹಂಪಿಗೆ ಬರುವುದೆಂದು ನನ್ನ ಕಾರ್ಯಕ್ರಮವಿತ್ತು. ಮಧ್ಯಾಹ್ನ ‘ಹಂಪಿಯಲ್ಲಿ ವಿಪರೀತ ಮಳೆ, ನಮ್ಮ ವಿಶ್ವವಿದ್ಯಾಲಯಕ್ಕೆ ನೀರು ನುಗ್ಗಿದೆ’ ಎಂಬ ಸಂದೇಶ ಬಂದಿತು. ಹೇಳಿದವರ‍್ಯಾರೆಂದು ಇರಲಿಲ್ಲ. ಕೇಳಿ ತಿಳಿಸಿದವರು ಯಾರೆಂದು ಗೊತ್ತಾಗಲಿಲ್ಲ. ಆದ್ದರಿಂದ ನಾನು ಇದನ್ನು ನಂಬಲಿಲ್ಲ. ಮಳೆ ನೀರಿನಿಂದ ವಿಶ್ವವಿದ್ಯಾಲಯಕ್ಕೆ ನೀರು ನುಗ್ಗುವುದೆಂದರೇನು? ನದಿಯ ಪಾತ್ರ ತುಂಬಲಿಕ್ಕೆ ಒಂದೆರಡು ಪ್ರಳಯಗಳಷ್ಟು ನೀರು ಬರಬೇಕು. ನಮ್ಮ ವಿಶ್ವವಿದ್ಯಾಲಯ ಇರೋದು ನೆಲದ ಪಾತಳಿಯಿಂದ ಐದು ಅಡಿ ಮೇಲೆ. ಅದು ತುಂಬಿ ಬರಲಿಕ್ಕೆ ಒಂದು ಮಿನಿ ಡ್ಯಾಂನಷ್ಟಾದರೂ ನೀರು ಬೇಕು. ಸಾಧ್ಯವಿಲ್ಲ ಎಂದುಕೊಂಡು ಪುನಃ ಕೆಲಸ ಶುರು ಮಾಡಿದೆ. ಸಚಿವಾಲಯ, ವಾರ್ತಾ ಇಲಾಖೆ, ಗೃಹಮಂಡಳಿ ಇವುಗಳನ್ನು ತಿರುಗಿ ಸಂಪರ್ಕಿಸಿದೆ. ವಿಶೇಷ ಸುದ್ದಿ ಸಿಕ್ಕಲಿಲ್ಲ. ಮನೆಗೆ ಬಂದಾಗ, ರಾತ್ರಿ ೧೦ ಗಂಟೆಗೆ ಹಂಪಿಯಿಂದ ದೂರವಾಣಿ ಕರೆ ಬಂತು. ನಮ್ಮ ಸಿಬ್ಬಂದಿ ಶಿವಾನಂದನ ಆರ್ತವಾಣಿ ಕೇಳಿ ಗಾಬರಿಯಾಯಿತು. ನಾನು ನಂಬಲಾರದ್ದೆಲ್ಲಾ ನಡೆದುಹೋಗಿತ್ತು. ಪ್ರಳಯದಂತಹ ಮಳೆ ಬಂದಿತ್ತು. ತುಂಗಭದ್ರಾ ಡ್ಯಾಂನಿಂದ ೩.೬೯ ಲಕ್ಷ ಕ್ಯೂಸೆಕ್ಸ್ ನೀರು ಬಿಟ್ಟಿದ್ದರು. ಇದರ ಮೇಲೆ ಮಳೆ ನೀರು ಬೇರೆ. ೧೯೬೨ರಲ್ಲಿ ೨ ಲಕ್ಷ ಕ್ಯೂಸೆಕ್ಸ್ ನೀರು ಬಿಟ್ಟಾಗಲೇ ಜಲಪ್ರಳಯವಾಗುವುದೆಂದು ಜನ ಹೌಹಾರಿದ್ದರಂತೆ. ಈಗ ಮೂರೂವರೆ ಲಕ್ಷ ಕ್ಯೂಸೆಕ್ಸ್ ನೀರೆಂದರೆ ಪಂಪಾಪತಿ ವಿರೂಪಾಕ್ಷನೇ ಕಾಪಾಡಬೇಕು. ದುರ್ದೈವವೇನೆಂದರೆ ಅವನು ಕಾಪಾಡಿರಲಿಲ್ಲ. ಶಿವಲಿಂಗನ ವಿರೂಪಾಕ್ಷಿಯಿಂದ ಬೆಂಕಿಯ ಬದಲು ನೀರು ನುಗ್ಗಿ ವಿಶ್ವವಿದ್ಯಾಲಯವನ್ನು ನುಂಗಿಬಿಟ್ಟಿತ್ತು. ಮೈ ಥಣ್ಣಗಾಗಿ ವಿಶ್ವವಿದ್ಯಾಲಯದ ಕಲ್ಲು ಮಂಟಪದ ಜೊತೆಗೆ ನಾನೂ ನೀರಲ್ಲಿ ಮುಳುಗಿ ಹೋದೆ.

ರಾತ್ರಿ ಇಡೀ ಸರಿಯಾಗಿ ನಿದ್ದೆ ಬರಲಿಲ್ಲ. ಕಣ್ಣು ಮುಚ್ಚಿದರೆ ಹಳವಂಡಗಳು. ಮೂರ್ತಗೊಳ್ಳಲಾರದ ಹಸಿ ಹಸಿ ಆಕಾರಗಳು. ಕಾವಿ ಉಟ್ಟುಕೊಂಡ ಭೂಸನೂರುಮಠರು ಕಾಣಿಸಿದರು. ಅದ್ಯಾಕೆಂದು ತಿಳಿಯದು. ಯಾಕೆಂದರೆ ನಾನು ಈ ಅಧಿಕಾರ ವಹಿಸಿಕೊಂಡಾಗಿ ನಿಂದಲೂ ಅವರು ಕನಸಿನಲ್ಲಿ ಕಂಡಿರಲಿಲ್ಲ. ಈ ಮಧ್ಯೆ ಹಲವಾರು ಬಾರಿ ದೂರವಾಣಿಯಿಂದ ಹಂಪಿಗೆ ಸಂಪರ್ಕಿಸಲು ಪ್ರಯತ್ನಿಸಿದೆ. ಫಲ ಸಿಗಲಿಲ್ಲ. ಬೆಳಿಗ್ಗೆ ಹಂಪಿಗೆ ಹೊರಟೆ.

ಮಧ್ಯಾಹ್ನ ಹಂಪಿಗೆ ಬಂದರೆ ಏನಿದೆ? ನಮ್ಮ ಕನಸುಗಳಿಗೆ ನೀರು ಅಕ್ರಮ ಪ್ರವೇಶಿಸಿ ಆಕ್ರಮಣ ಮಾಡಿಬಿಟ್ಟಿತ್ತು. ಎಲ್ಲಾ ಮುಳುಗಿ ಹೋಗಿತ್ತು. ಹೆಬ್ಬಾವಿನಂಥ ನೀರು ವಿಶ್ವವಿದ್ಯಾಲಯವನ್ನು ಇಂಚಿಂಚಾಗಿ ನುಂಗಿತ್ತು. ನನ್ನ ಸಹೋದ್ಯೋಗಿಗಳು ಹತಾಶರಾಗಿ ಮುಳುಗಿದ ಗ್ರಂಥಾಲಯದ ಮುಂದೆ ನಿಸ್ಸಾಹಾಯಕರಾಗಿ ನಿಂತಿದ್ದರು. ಅತ್ತು ಅತ್ತು ಈಗಷ್ಟೇ ಮುಖ ಒರೆಸಿಕೊಂಡವರಂತೆ ಇದ್ದರು ಈಗ ನನ್ನನ್ನು ಕಂಡು ಅವರಿಗೆ ಮತ್ತೆ ದುಃಖ ಆವರಿಸಿತು. ಮುಖ ಆ ಕಡೆ ತಿರುಗಿಸಿದರು. ಯಾರೇನೂ ಮಾತಾಡಲಿಲ್ಲ. ಎಲ್ಲವನ್ನು ನೀರೇ ಹೇಳುತ್ತಿತ್ತು. ನಾನು ಬಾಗಿಲ ಕಿಂಡಿಗಳಿಂದ ಗ್ರಂಥಾಲಯ ನೋಡಿದೆ. ನಮ್ಮ ಪ್ರೀತಿಯ ಪುಸ್ತಕಗಳು ತೇಲುತ್ತಿದ್ದವು. ಹಿರಿಯರು, ಮಠಾಧೀಶರು, ಆತ್ಮೀಯರು, ಗ್ರಂಥಾಲಯಕ್ಕೆ ದಾನಕೊಟ್ಟು ಹರಸಿದ್ದ ಅಪರೂಪದ ಗ್ರಂಥಗಳವು. ಎದ್ದಂತೆ ಬಿದ್ದಂತೆ ಅಲುಗುತ್ತ ತೇಲುತ್ತಿದ್ದವು. ಮಂಟಪದ ಕಲ್ಲುಗಳು ಭಯಭೀತರಂತೆ ಮೂಕವಾಗಿ ಕಣ್ಣು ಮುಚ್ಚಲಾರದೆ ಸಾಕ್ಷಿಕರಾಗಿ ನಿಂತಿದ್ದವು. ನೀರ ತೆರೆಗಳು ಮಸೆವ ಆಯುಧಗಳಂತೆ ಹೊಳೆದವು.

ಕಲ್ಲು ಮಂಟಪ ವಿಶ್ವವಿದ್ಯಾಲಯಕ್ಕಾಗಿ ಕಟ್ಟಿದ ಕಟ್ಟಡವೇನಲ್ಲ. ಹಿಂದಿದ್ದ ಮಂಟಪಗಳನ್ನೇ ರಿಪೇರಿ ಮಾಡಹೋಗಿ ಅವುಗಳ ಮಾದರಿಯಲ್ಲಿ ನಿರ್ಮಿತವಾದ ನಿರುದ್ದಿಶ್ಯ ರಚನೆಗಳವು. ಅಂಕಣಕ್ಕೊಂದು ಕಂಬ ಬರುವುದರಿಂದ ಯಾವ ಆಧುನಿಕ ಕೆಲಸಕ್ಕೂ ಅವನ್ನು ಬಳಸುವಂತಿಲ್ಲ. ಅದು ಬಿಟ್ಟರೆ ನಮಗೆ ಬೇರೆ ಜಾಗವೇ ಇರಲಿಲ್ಲವಾದ್ದರಿಂದ ಇದ್ದ ಅಂಕಣಗಳನ್ನೇ ವಿಭಾಗಿಸಿ ಕಛೇರಿಯಂತೆ, ಗ್ರಂಥಾಲಯದಂತೆ, ಸಭಾಂಗಣದಂತೆ ನಿರ್ಮಿಸಿಕೊಂಡಿದ್ದೆವು. ಅದು ನಮಗೆ ನಳಂದ ವಿಶ್ವವಿದ್ಯಾಲಯಕ್ಕಿಂತಲೂ ಅರ್ಥಪೂರ್ಣ ಹಾಗೂ ಭಾವನಾಪೂರ್ಣ ಕಟ್ಟಡವಾಗಿತ್ತು. ಆದರೀಗ ಆ ನಮ್ಮ ನವ್ಯ ನಿರ್ಮಿತಂಗಳೆಲ್ಲ ನೀರು ಪಾಲಾಗಿದ್ದವು. ತಮ್ಮ ಸುತ್ತ ಪರಿವಾರದೊಂದಿಗೆ ಬರುತ್ತಿದ್ದ ನಮ್ಮ ಕಲ್ಪನೆಗಳು ನೀರಲ್ಲಿ ನಿಂತು ಮೈ ಹಸಿರೇರಿದ್ದವು. ಕಣ್ಣೀರಿಲ್ಲದೆ ಆ ದೃಶ್ಯ ನೋಡುವುದು ಸಾಧ್ಯವಿರಲಿಲ್ಲ.

ಸುದ್ದಿ ಆಗಲೇ ಹಬ್ಬಿಬಿಟ್ಟಿತ್ತು. ಟೂರಿಸ್ಟರು ಹಾಳು ಹಂಪಿಯನ್ನು ನೋಡಲು ಬರುವಂತೆ ಜನ ಮುಳುಗಿದ್ದ ವಿಶ್ವವಿದ್ಯಾಲಯವನ್ನು ನೋಡಲು ಬರುತ್ತಿದ್ದರು. ಆದರೆ ಆಳು ಮುಳುಗುವಷ್ಟು ನೀರಿದ್ದುದರಿಂದ ಕೆಲವರು ದೂರದಿಂದಲೇ ನೋಡಿ ಮರುಗಿದರೆ, ಇನ್ನು ಕೆಲವರು ಹರಿಗೋಲುಗಳಲ್ಲಿ ಅಲ್ಲೀತನಕ ಬಂದು ಕರುಣೆ ತೋರುತ್ತಿದ್ದರು. ಗಾಯದ ಮ್ಯಾಲೆ ಕೈ ಆಡಿಸಿದ ಹಾಗೆ ಕೆಲವು ವಿದ್ವಾಂಸರು ವಿಶ್ವವಿದ್ಯಾಲಯ ಮುಳುಗಿತು ಎಂದೂ ಹೇಳಿದರು.

ಹಾಗಂತ ಕೈ ಹೊತ್ತು ಕೂರುವ ಹಾಗೂ ಇರಲಿಲ್ಲ. ಮುಂದೇನೆಂದು ಸಹೋದ್ಯೋಗಿಗಳು ಪ್ರಶ್ನಾರ್ಥಕವಾಗಿ ನನ್ನನ್ನೇ ನೋಡುತ್ತಿದ್ದರು. ಮಾತಾಡುವ ಸ್ಥಿತಿಯಲ್ಲಿ ನಾನಿರಲಿಲ್ಲ. ಮೌನವಾಗಿಯೇ ಕಮಲಾಪುರದ ನಮ್ಮ ಮೂಲ ಕಛೇರಿಯ ಬಳಿಗೆ ಹೊರಟೆ. ಮಾತಿಲ್ಲದೆ ಅವರೂ ಅಲ್ಲಿಗೆ ಬಂದರು. ನಿರಾಶೆ ನಮ್ಮ ಕೆನ್ನೆಗಳ ರಕ್ತವನ್ನು, ಕಣ್ಣುಗಳ ಬೆಳಕನ್ನು ಹೀರಿಬಿಟ್ಟಿತ್ತು. ನಿಜ ಹೇಳಬೇಕೆಂದರೆ ವಿರೂಪಾಕ್ಷಸ್ವಾಮಿ ಈಗಷ್ಟೆ ಚಿಗುರುತ್ತಿದ್ದ ನಮ್ಮ ಕನಸುಗಳ ಚಂಡಿ ಚಿವುಟಿಬಿಟ್ಟಿದ್ದ. ಹಾಗಂತ ಕತ್ತು ಚೆಲ್ಲಬಾರದಲ್ಲ. ಸಹೋದ್ಯೋಗಿಗಳಿಗೆ ಹೇಳಿದೆ: “ಮುಳುಗಿದ್ದ ಕಲ್ಲು ಮಂಟಪ, ವಿಶ್ವವಿದ್ಯಾಲಯವಲ್ಲ, ನಾಳೆಯಿಂದ ಮುಂದಿನ ವ್ಯವಸ್ಥೆ ಆಗುವ ತನಕ ಕಮಲಾಪುರದಲ್ಲೇ ಕೆಲಸ ನಡೆಯಲಿ”. ಆದರೆ ನನ್ನ ಶಬ್ದಗಳಿಗೆ ಮೊದಲಿನ ತಾರುಣ್ಯ ಇರಲಿಲ್ಲವೆಂದು ನನಗೆ ಗೊತ್ತಿತ್ತು. ನನ್ನ ಸಹೋದ್ಯೋಗಿಗಳ ಕಿವಿ ತಲುಪುವುದರೊಳಗಾಗಿ ಅವು ಮುಗ್ಗರಿಸಿ ಬೀಳುವಂತಿದ್ದವು.

ಆ ರಾತ್ರಿಯೂ ನಿದ್ದೆ ಬರಲಿಲ್ಲ. ಬೆಳಗ್ಗೆ ದೂರವಾಣಿ ಕರೆ ಬಂತು. ಶ್ರೀ ಕೊಟ್ಟೂರು ಸಂಗನ ಬಸವಸ್ವಾಮಿಗಳ ಧ್ವನಿ ಕೇಳಿಸಿತು. ಅವರು ಸಾಂತ್ವನದ ಮಾತಾಡಿ, “ವಿಶ್ವವಿದ್ಯಾಲಯದ ಬಾಲಗ್ರಹ ಪೀಡೆ ಹೋಯ್ತು ಬಿಡ್ರಿ; ಇನ್ನಷ್ಟು ಹುರುಪಿನಿಂದ ಕೆಲಸ ಮಾಡ್ರಿ” ಎಂದು ಆಶೀರ್ವದಿಸಿ ಹುರಿದುಂಬಿಸಿದರು.

ಅವಸರದಲ್ಲಿ ಪುನಃ ಹಂಪಿಗೆ ಹೋದೆ. ನಾನು ತಲುಪುವುದರೊಳಗೆ ನನ್ನೆಲ್ಲ ಸಹೋದ್ಯೋಗಿಗಳು ಅಲ್ಲಿದ್ದರು. ನೀರು ಇಳಿದು ಹೋಗಿತ್ತು. ಮಹಾಪೂರದ ಗುರುತು ನಮ್ಮ ಹೃದಯ ಮತ್ತು ಕಟ್ಟಡಗಳ ಮೇಲೆ ಬರೆ ಎಳೆದಂತೆ ಉಳಿದಿತ್ತು. ಕಟ್ಟಡಗಳ ತುಂಬ ಒಂದಡಿ ಕೆಸರಿತ್ತು. ದುರ್ವಾಸನೆ ಹರಡಿತ್ತು. ಇದ್ಯಾವುದನ್ನು ಲೆಕ್ಕಿಸದೆ ನನ್ನ ಸಹೋದ್ಯೋಗಿಗಳು ಅಳಿದುಳಿದ ಪಳೆಯುಳಿಕೆಗಳನ್ನು ಹೊರಗೆ ತೆಗೆಯುತ್ತಿದ್ದರು. ಕೆಸರು ಮೆತ್ತಿ ಒದ್ದೆಯಾದ ಪುಸ್ತಕಗಳನ್ನು ಹೆಕ್ಕಿ ಹೆಕ್ಕಿ ತೆಗೆದು ಬಟ್ಟೆಗಳ ಹಾಗೆ ಹಿಂಡುತ್ತಿದ್ದರು. ವಿವರ್ಣವಾದ ವರ್ಣಚಿತ್ರಗಳನ್ನು ಬಿಸಿಲಲ್ಲಿ ಒಣಹಾಕುತ್ತಿದ್ದರು. ನಮ್ಮ ಎಳೆ ಪಂಡಿತರು ಉತ್ಸಾಹದಿಂದ ತಮ್ಮ ಕನಸುಗಳಿಗೆ ಮೆತ್ತಿಕೊಂಡಿದ್ದ ಕೆಸರನ್ನು ತೊಳೆಯುತ್ತಿದ್ದರು. ಅವರ ಕಣ್ಣುಗಳಲ್ಲಿ ನಿಧಾನವಾಗಿ ಬೆಳಕಿನ ಗೆರೆ ಮೂಡತೊಡಗಿತು.

* * *

* ೧೯೯೨ ನವೆಂಬರ್ ೧೭, ೧೮ ರಂದು ಸುರಿದ ಭಾರೀ ಮಳೆ ಮತ್ತು ಪ್ರವಾಹದಿಂದ ವಿಶ್ವವಿದ್ಯಾಲಯದ ಕಲ್ಲು ಮಂಟಪ ಜಲಾವೃತಗೊಂಡ ಸಂದರ್ಭದಲ್ಲಿ ಚೆಲುವ ಕನ್ನಡಕ್ಕೆ ಬರೆದ ಲೇಖನ.