ತುಪ್ಪದ ಹೀರೆಕಾಯಿ ಹರಿತವಿರುವ ಉದ್ದ ಏಣುಗಳಿಂದ ಕೂಡಿರುತ್ತವೆ. ಮೇಲ್ಮೈ ಒರಟು. ಹೀರೆಕಾಯಿಯಷ್ಟು ವ್ಯಾಪಕವಾಗಿ ಇದನ್ನು ಬೆಳೆಯುವುದಿಲ. ಬೀಜ ಹೊರತೆಗೆದ ಒಣಕಾಯಿಗಳ ಮೇಲಿನ ಸಿಪ್ಪೆ ಬಿಡಿಸಿ ಮೈಯ್ಯುಜ್ಜುವ ಹಾಗೂ ಪಾತ್ರೆ ಉಜ್ಜುವ ಬ್ರಷ್‌ಗಳನ್ನು ಮಾಡುತ್ತಾರೆ.

ಪೌಷ್ಟಿಕ ಗುಣಗಳು: ತುಪ್ಪದ ಹೀರೆ ರುಚಿಯಾಗಿರುವುದರ ಜೊತೆಗೆ ಪೌಷ್ಟಿಕ ತರಕಾರಿ ಸಹ ಆಗಿದೆ. ಇದರ ಕಾಯಿಗಳಲ್ಲಿ ಶರೀರದ ಬೆಳವಣಿಗೆಗೆ ಅಗತ್ಯವಿರುವ ಶರ್ಕರಪಿಷ್ಟ, ಪ್ರೊಟೀನ್, ಖನಿಜ ವಸ್ತುಗಳು ಹಾಗೂ ಜೀವಸತ್ವಗಳು ಸಾಕಷ್ಟಿರುತ್ತವೆ. ದಿನನಿತ್ಯದ ಆಹಾರದಲ್ಲಿ ಇದನ್ನು ಹೆಚ್ಚುಹೆಚ್ಚಾಗಿ ಸೇವಿಸಬೇಕು. ತುಪ್ಪದ ಹೀರೆಕಾಯಿಗಳಲ್ಲಿನ ಪೋಷಕಾಂಶಗಳು ಹೀಗಿವೆ.

೧೦೦ ಗ್ರಾಂ ಕಾಯಿ, ಗೆಡ್ಡೆ ಮತ್ತು ಚಿಗುರುಗಳಲ್ಲಿನ ವಿವಿಧ ಪೋಷಕಾಂಶಗಳು

ತೇವಾಂಶ -೯೪.೩ ಗ್ರಾಂ
ಶರ್ಕರಪಿಷ್ಟ – ೪.೪ ಗ್ರಾಂ
ಪ್ರೊಟೀನ್ – ೦.೮ ಗ್ರಾಂ
’ಎ’ ಜೀವಸತ್ವ – ೩೩೦ ಪಿ.ಯು
’ಸಿ’ ಜೀವಸತ್ವ – ೮ ಮಿ.ಗ್ರಾಂ
ಕೊಬ್ಬು – ೦.೮ ಗ್ರಾಂ

ಔಷಧೀಯ ಗುಣಗಳು : ಈ ತರಕಾರಿಯನ್ನು ಸೇವಿಸುತ್ತಿದ್ದಲ್ಲಿ ಹೊಟ್ಟೆಯಲ್ಲಿನ ಆಮ್ಲತೆ ಶಮನಗೊಳ್ಳುತ್ತದೆ. ಇದರಲ್ಲಿ ಶೈತ್ಯಕಾರಕ ಗುಣಗಳಿವೆ. ಶರೀರದ ಭಾರವನ್ನು ಕುಗ್ಗಿಸುವಲ್ಲಿ  ನೆರವಾಗುತ್ತದೆಯಲ್ಲದೆ ಮೂತ್ರೋತ್ಪಾದಕ ಗುಣಗಳನ್ನೂ ಸಹ ಹೊಂದಿದೆ. ಬೇಸಿಗೆ ದಿನಗಳಲ್ಲಿ ಇದನ್ನು ಹೆಚ್ಚಾಗಿ ಸೇವಿಸಬೇಕು. ಬೀಜಗಳಿಗೆ ಮಲಬದ್ಧತೆಯನ್ನು ಹೋಗಲಾಡಿಸುವ ಸಾಮರ್ಥ್ಯವಿದೆ. ಚಿಗುರೆಲೆ ಮತ್ತು ಕುಡಿಗಳು ಸೊಪ್ಪು ತರಕಾರಿಯಾಗಿ ಉಪಯುಕ್ತ. ಬೀಜಗಳಿಂದ ತೆಗೆದ ಎಣ್ಣೆ ಚರ್ಮರೋಗಗಳಿಗೆ ಒಳ್ಳೆಯ ಔಷಧಿ. ಕಾಂಡಭಾಗಗಳನ್ನು ಜಜ್ಜಿ ಇಲ್ಲವೇ ನುಣ್ಣಗೆ ಅರೆದು ತೆಗೆದ ರಸವನ್ನು ಉಸಿರಾಟದ ತೊಂದರೆಗಳಲ್ಲಿ ನಿರ್ದೇಶಿಸುವುದುಂಟು.

ಉಗಮ ಮತ್ತು ಹಂಚಿಕೆ : ತುಪ್ಪದ ಹೀರೆಕಾಯಿಯ ತವರೂರು ಭಾರತ. ನಮ್ಮ ದೇಶದಲ್ಲಿಯೇ ಅಲ್ಲದೆ ಜಗತ್ತಿನ ಹಲವಾರು ಉಷ್ಣ ಹಾಗೂ ಸಮಶೀತೋಷ್ಣ ಪ್ರದೇಶಗಳಲ್ಲಿ ಬೆಳೆಯಲಾಗುತ್ತಿದೆ.

ಸಸ್ಯ ವರ್ಣನೆ : ತುಪ್ಪದ ಹೀರೆಕಾಯಿ ಕುಕುರ್ಬಿಟೇಸೀ ಕುಟುಂಬಕ್ಕೆ ಸೇರಿದ ವಾರ್ಷಿಕ ಬಳ್ಳಿ, ಕಾಂಡ ಬಲಹೀನ, ಹಲವಾರು ಕವಲು ಹಂಬಲುಗಳಿರುತ್ತವೆ. ಹಂಬುಗಳು ಹಸುರು ಬಣ್ಣವಿದ್ದು, ದುಂಡಗಿರುತ್ತವೆ. ಎಲೆಗಳು ಹಸ್ತದ ಆಕಾರವಿದ್ದು ಉದ್ದವಾದ ತೊಟ್ಟುಗಳಿಂದ ಕೂಡಿರುತ್ತವೆ. ಎಲೆಗಳ ಬಣ್ಣ ಹಸುರು. ಎಲೆಯಂಚು ಕಚ್ಚುಗಳಿಂದ ಕೂಡಿದ್ದು ಸ್ಫುಟವಾದ ನರಗಳ ಬಲೆಕಟ್ಟನ್ನು ಹೊಂದಿರುತ್ತವೆ. ಹೂವು ಉದ್ದನಾದ ಗೊಂಚಲುಗಳಲ್ಲಿ ಬುಡ ಭಾಗದಿಂದ ಸುಳಿಯುತ್ತ ಮೂಡಿ ಅರಳುತ್ತಾ ಹೋಗುತ್ತವೆ. ಹೂವು ಏಕಲಿಂಗಿಗಳು; ದಳಗಳ ಬಣ್ಣ ಹಳದಿ. ಪರಾಗಸ್ಪರ್ಶಗೊಂಡ ನಂತರ ಹೀಚು ಬಹುಬೇಗ ವೃದ್ಧಿ ಹೊಂದುತ್ತವೆ. ಕಾಯಿಗಳು ದುಂಡಗೆ ಉದ್ದವಾಗಿದ್ದು ಬುಡ ಹಾಗೂ ತುದಿ ಭಾಗಗಳತ್ತ ಸಂಕುಚಿತಗೊಂಡಿರುತ್ತವೆ. ಅವುಗಳ ಮೇಲ್ಮೈನಯವಾಗಿದ್ದು, ಬಿಳಿಹಸುರು ಬಣ್ಣದ್ದಿರುತ್ತದೆ. ತಿರುಳು ರಸವತ್ತಾಗಿದ್ದು ಅದುಮಿದರೆ ಸ್ಪಂಜಿನಂತಿರುತ್ತದೆ. ತಿರುಳಿನ ಮಧ್ಯೆ ಉದ್ದನೆಯ ಕವಾಟಗಳಲ್ಲಿ ಬೀಜ ಹುದುಗಿದ್ದು ಅದುಮಿನಂತೆ, ಸ್ವಲ್ಪ ಮಟ್ಟಿಗೆ ಅಂಡಾಕಾರ, ಮಾಸಲು ಬಿಳುಪು, ನಯವಾಗಿರುತ್ತವೆ. ಕಾಯಿಗಳು ಒಣಗಿದಾಗ ಅಲುಗಾಡಿಸಿದರೆ ಒಳಗಿನ ಬೀಜಗಳು ಶಬ್ದ ಹೊರಡಿಸುತ್ತವೆ.

ಹವಾಗುಣ : ಬೆಚ್ಚಗಿನ ಹವಾಗುಣ ಇದಕ್ಕೆ ಸೂಕ್ತ. ಸೌಮ್ಯ ಹವೆ ಇರುವೆಡೆಗಳಲ್ಲಿ ವರ್ಷದ ಎಲ್ಲಾ ಕಾಲಗಳಲ್ಲಿ ಬೆಳೆಯಬಹುದು. ಶೈತ್ಯ ಹವೆ ಇರುವ, ಹಿಮಸುರಿಯುವ, ಅಧಿಕ ಉಷ್ಣತೆ ಇರುವ ಹಾಗೂ ಬಹಳಷ್ಟು ತೇವದಿಂದ ಕೂಡಿದ ವಾತಾವರಣ ಇದಕ್ಕೆ ಹಿಡಿಸುವುದಿಲ್ಲ. ಬಿತ್ತನೆಗೆ ಜೂನ್-ಜುಲೈ ಅತ್ಯಂತ ಸೂಕ್ತ ಕಾಲ.

ಭೂಗುಣ : ಇದರ ಬೇಸಾಯಕ್ಕೆ ಮಣ್ಣು ಫಲವತ್ತಾಗಿರಬೇಕು ಹಾಗೂ ನೀರು ಬಸಿಯುವಂತಿರಬೇಕು. ಮರಳು ಮಿಶ್ರಿತ ಕೆಂಪು ಗೋಡು ಹಾಗೂ ಮರಳು ಮಿಶ್ರಿತ ಕಪ್ಪುಮಣ್ಣುಗಳು ಹೆಚ್ಚು ಸೂಕ್ತ. ತಗ್ಗು ಪ್ರದೇಶಗಳು ಹಾಗೂ ಜೌಗಿನಿಂದ ಕೂಡಿದ ಪ್ರದೇಶಗಳು ಸೂಕ್ತವಿರುವುದಿಲ್ಲ.

ತಳಿಗಳು : ತುಪ್ಪದ ಹೀರೆಯಲ್ಲಿ ಪೂಸಾ ಚಿಕ್ನಿ ಸುಧಾರಿತ ಹಾಗೂ ಅಧಿಕ ಇಳುವರಿ ಕೊಡುವ ತಳಿಯಾಗಿದೆ. ಇದು ಬಹುಬೇಗ ಕೊಯ್ಲಿಗೆ ಬರುವ ತಳಿ, ಬಿತ್ತನೆ ಮಾಡಿದ ಕೇವಲ ೪೫ ದಿನಗಳಲ್ಲಿ ಹೂವು ಬಿಟ್ಟು ಕಾಯಿ ಕಚ್ಚುತ್ತವೆ. ಒಂದೊಂದು ಬಳ್ಳಿಗೆ ಸುಮಾರು ೧೫ ಕಾಯಿ ಸಿಗುತ್ತವೆ. ಕಾಯಿಗಳ ಮೇಲ್ಮೈ ನಯವಾಗಿದ್ದು, ಹಸುರು ಬಣ್ಣದ್ದಿರುತ್ತದೆ. ಈ ತಳಿ ವಸಂತ ಋತು ಹಾಗೂ ಬೇಸಿಗೆಗಳಿಗೆ ಸೂಕ್ತ.

ಗೊಬ್ಬರ, ನೀರಾವರಿ, ಅಂತರ ಬೇಸಾಯ ಹಾಗೂ ಕಳೆ ಹತೋಟಿ, ಆಸರೆ ಒದಗಿಸುವುದು, ಕೊಯ್ಲು ಮತ್ತು ಇಳುವರಿ ಹಾಗೂ ಕೀಟ ಮತ್ತು ರೋಗಗಳು ಮತ್ತು ಬೀಜೋತ್ಪಾದನೆ ಹೀರೆಕಾಯಿಯಲ್ಲಿ ಇದ್ದಂತೆ.

* * *