ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಜಿಲ್ಲೆಯ ಶಿಕ್ಷಣದ ಮಿನಿ ವಿಶ್ವವಿದ್ಯಾಲಯ ದಂತಿದ್ದು ಜಿಲ್ಲೆಯ ಎಲ್ಲಾ ಸೇವ ಪೂರ್ವ ಹಾಗೂ ಸೇವ ನಿರತ ಶಿಕ್ಷಕರ ತರಬೇತಿ ಸಂಶೋದನೆ ಹಾಗೂ ಮಾರ್ಗದರ್ಶನ ನೀಡುತ್ತಿದೆ. ಪ್ರಸ್ತುತ ಪ್ರಾಂಶುಪಾಲರಾದ ಶ್ರೀ ಪ್ರಭಾಕರ್ ರವರ ಮಾರ್ಗದರ್ಶನದಲ್ಲಿ ಅತ್ಯಂತ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ ( ಚಿತ್ರ ಪುಟ ಸಂಖ್ಯೆ : ೧೭)

 

ಸಿದ್ಧಗಂಗಾ ಮಠ

ದೂರ ಎಷ್ಟು?
ತಾಲ್ಲೂಕ್ : ತುಮಕೂರು
ತಾಲ್ಲೂಕು ಕೇಂದ್ರದಿಂದ: ೬ ಕಿ.ಮೀ.
ಜಿಲ್ಲಾ ಕೇಂದ್ರದಿಂದ: ೬ ಕಿ.ಮೀ

ಶ್ರೀಕ್ಷೇತ್ರವು ಗೋಸಲ ಸಿದ್ದೇಶ್ವರರಿಂದ ೧೪ನೇಯ ಶತಮಾನದಲ್ಲಿ ಸ್ಥಾಪಿತವಾಗಿದ್ದು, ತ್ರಿವಿಧ ದಾಸೋಹ ಕೇಂದ್ರವಾಗಿದೆ. ಶ್ರೀಕ್ಷೇತ್ರದ ಕೀರ್ತಿಯನ್ನು ಅಂತರಾಷ್ಟ್ರೀಯ ಮಟ್ಟಕ್ಕೇರಿಸಿದ ಕೀರ್ತಿ, ನೂರು ವಸಂತಗಳನ್ನು ಕಂಡ ಪರಮಪೂಜ್ಯ ಡಾ|| ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳವರದು. ಜಾತಿ ಮತ ಭೇದವಿಲ್ಲದೆ ಸುಮಾರು ೯೦೦೦ ಮಕ್ಕಳಿಗೆ ತ್ರಿವಿಧ ದಾಸೋಹ ನೀಡುತ್ತಿದ್ದಾರೆ. ೧೨ ಶತಮಾನದ ಕಲ್ಯಾಣ ಕ್ರಾಂತಿಯನ್ನು ಇಲ್ಲಿ ಕಾಣಬಹುದಾಗಿದೆ. ವರ್ಷಕ್ಕೊಮ್ಮೆ ನಡೆಯುವ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ರಥೋತ್ಸವದಲ್ಲಿ ಲಕ್ಷಾಂತರ ಮಂದಿ ಸೇರುತ್ತಾರೆ. ಇವರಿಗೆ ಅನುಕೂಲವಾಗುವಂತೆ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಏರ್ಪಡಿಸಿ ಸಮಾಜಮುಖಿಯಾಗಿದ್ದಾರೆ. ಈ ಕ್ಷೇತ್ರದ ವತಿಯಿಂದ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ಸುಮಾರು ೧೫೦ ಶಿಕ್ಷಣ ಸಂಸ್ಥೆಗಳು ರಾಜ್ಯಾದ್ಯಂತ ವಿದ್ಯಾದಾನ ನೀಡುತ್ತಿವೆ. ಈ ಕ್ಷೇತ್ರ ಬೆಟ್ಟದ ತಪ್ಪಲಿನಲ್ಲಿದ್ದು, ಸುಂದರ ತಾಣವಾಗಿದೆ. ಈ ಕ್ಷೇತ್ರದ ಬೆಟ್ಟದ ಮೇಲೆ ಗುರುಗಳ ತಪೋಭೂಮಿಯಿದೆ, ಸ್ವಾಮಿ ದರ್ಶನ, ಗಂಗೋದ್ಭವದ ಜಲಕುಂಡಿಕೆ, ಭಕ್ತಾದಿಗಳನ್ನು ಆಕರ್ಷಿಸುತ್ತಿವೆ. ಭಕ್ತರ ಬಾಯಾರಿಕೆ ಹಿಂಗಿಸಲು, ಯತಿಗಳು ಕಲ್ಲಿನ ಬಂಡೆಯಿಂದ ಗಂಗೆಯನ್ನು ಬರಿಸಿದ ಪವಾಡದಿಂದಾಗಿ, ಈ ಕ್ಷೇತ್ರಕ್ಕೆ ಸಿದ್ಧಗಂಗೆ ಎಂದು ಹೆಸರು ಬಂದಿದೆ. “ಶಿವಗಂಗೆ ನೋಟ ಚೆಂದ, ಸಿದ್ದಗಂಗೆಯ ಊಟ ಚೆಂದ” ಎಂಬ ನಾಣ್ಣುಡಿ ಜನಜನಿತವಾಗಿದೆ ಸಂಜೆಯ ಸಾಮೂಹಿಕ ಪ್ರಾರ್ಥನೆ.

ದೇವರಾಯನ ದುರ್ಗ

ದೂರ ಎಷ್ಟು?
ತಾಲ್ಲೂಕ್ : ತುಮಕೂರು
ತಾಲ್ಲೂಕು ಕೇಂದ್ರದಿಂದ: ೧೪ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೧೪ ಕಿ.ಮೀ

ತುಮಕೂರಿನಿಂದ ವಾಯುವ್ಯ ದಿಕ್ಕಿಗೆ ಊರ್ಡಿಗೆರೆ ರಸ್ತೆಯಲ್ಲಿ ಮಲೆನಾಡಿನ ಹಸಿರು ಸೌಂದರ್ಯವನ್ನು ನೆನಪಿಸುವ, ಸುಮಾರು ೩೮೯೬ ಅಡಿ ಎತ್ತರದ ದೇವರಾಯನ ದುರ್ಗ ಗಿರಿಧಾಮ ಭಕ್ತಾದಿಗಳಿಗೆ ತೀರ್ಥಕ್ಷೇತ್ರವಾಗಿ, ಪ್ರವಾಸಿಗಳಿಗೆ ಹುರುಪು ನೀಡುವ ಸ್ಥಳವಾಗಿ, ಟ್ರಕ್ಕಿಂಗ್ ಪ್ರಿಯರಿಗೆ ಸವಾಲಾಗಿರುವ ತಾಣವಾಗಿದೆ. ವಿಜಯನಗರದ ಅರಸರ ಕಾಲದಲ್ಲಿ ಕರಿಗಿರಿ ಎಂಬ ಹೆಸರಿದ್ದು, ಕಾಲಾನಂತರ ಜಡಕನ ಆಳ್ವಿಕೆಯಿಂದ ಜಡಕದುರ್ಗ ಎಂದಾಗಿ, ಕ್ರಿ.ಶ, ೧೬೯೬ ರ ಚಿಕ್ಕದೇವರಾಯ ಒಡೆಯರು ಗೆದ್ದುದರಿಂದ ಇದು ದೇವರಾಯನ ದುರ್ಗವಾಯಿತು. ಬೆಟ್ಟದ ಮೇಲೆ ಯೋಗನರಸಿಂಹ ಮತ್ತು ಭೋಗನರಸಿಂಹ ದೇವಾಲಯಗಳಿದ್ದು ಲಕ್ಷಾಂತರ ಮಂದಿ ದೇವರ ದರ್ಶನಕ್ಕೆ ಆಗಮಿಸುತ್ತಾರೆ. ೧೮೫೮ ರಲ್ಲಿ ಮೈಸೂರು ಮುಮ್ಮಡಿ ಕೃಷ್ಣದೇವರಾಜ ಒಡೆಯರ ಕಾಲದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಗಳು ಉತ್ತಮ ಸ್ಥಿತಿಯಲ್ಲಿವೆ. ಬೆಟ್ಟದ ಮೇಲೆ ರಾಮತೀರ್ಥ, ಧನುಷ್ ತೀರ್ಥ, ಕಲ್ಯಾಣಿಗಳಿವೆ, ಪಕ್ಕದಲ್ಲಿರುವ ಗುಹೆಯಲ್ಲಿ ರಾಮ, ಸೀತೆ, ಲಕ್ಷ್ಮಣ ವಿಗ್ರಹಗಳು ಪ್ರತಿಷ್ಠಾಪಿತವಾಗಿರುವ ದೃಶ್ಯ ಮನೋಹರ. ಹತ್ತಾರು ದೊಣೆಗಳು ವಿವಿಧ ಹೆಸರುಗಳಿಂದ ಭಕ್ತಾದಿಗಳನ್ನು ಆಕರ್ಷಿಸುತ್ತಿವೆ. ಇದು ಶಿಂಷಾ ಮತ್ತು ಜಯಮಂಗಲಿ ನದಿಗಳ ಉಗಮ ಸ್ಥಾನವಾಗಿದೆ, ಈ ನದಿಗಳು ಜಿಲ್ಲೆಯ ಪ್ರಮುಖ ನದಿಗಳಾಗಿವೆ, ಈ ಬೆಟ್ಟವು ಏಳು ಸುತ್ತಿನ ಕೋಟೆಗಳಿಂದ ಕೂಡಿದ್ದು ಕೋಟೆಗಳು ವಿನಾಶದ ಅಂಚಿನಲ್ಲಿವೆ. ಈಗಲೂ ಕೆಲವು ದ್ವಾರಗಳನ್ನು ಕಾಣಬಹುದಾಗಿದೆ. ಇದು ಜಿಲ್ಲೆಯ ಪ್ರಮುಖ ಪ್ರಸಿದ್ಧ ಪ್ರವಾಸಿ ತಾಣವಾಗಿದೆ.

 

ನಾಮದ ಚಿಲುಮೆ

ದೇವರಾಯನ ದುರ್ಗದ ಪಶ್ಚಿಮದ ತಪ್ಪಲಿನಲ್ಲಿ ಹರವಾದ ಬಂಡೆಯ ಮಧ್ಯದಲ್ಲಿ, ಒಳಕಲ್ಲಿನ ಆಕಾರದ ಚಿಲುಮೆಯಿದ್ದು, ಬೇಸಿಗೆಯಲ್ಲೂ ನೀರನ್ನು ಹೊರಸೂಸುತ್ತದೆ. ಈ ಒಳಕಲ್ಲಿಗೆ ಪೂಜೆ ಸಲ್ಲಿಸಿದ ನರಸಿಂಹ ಸ್ವಾಮಿ ಭಕ್ತರು ನಾಮವನ್ನು ಬಳಿದ ಕಾರಣ, ನಾಮದಚಿಲುಮೆ ಎಂಬ ಹೆಸರು ಪಡೆದಿದೆ. ಶ್ರೀರಾಮಚಂದ್ರ ಸೀತಾನ್ವೇಷಣೆಗಾಗಿ ಬರುತ್ತಿದ್ದಾಗ ಸಂಧ್ಯಾಕಾಲದ ಪೂಜೆಗೆ ನೀರು ದೊರೆಯದಿದ್ದಾಗ, ಬಾಣ ಬಿಟ್ಟು ನೀರನ್ನು ಹೊರತೆಗೆದನೆಂಬ ಪ್ರತೀತಿಯೂ ಇದೆ. ಇಲ್ಲಿಯ ಜಿಂಕೆವನ ಪ್ರವಾಸಿಗರಿಗೆ ಅಚ್ಚುಮೆಚ್ಚಾಗಿದೆ. ಸಮೀಪದಲ್ಲಿ ಔಷದೀಯ ವನವಿದೆ. ದೇವರಾಯನದುರ್ಗದ ಒಡಲಿನಲ್ಲಿರುವ ನಾಮದ ಚಿಲುಮೆ ಈ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿದೆ.

 

ಬಸದಿ ಬೆಟ್ಟ

ದೂರ ಎಷ್ಟು?
ತಾಲ್ಲೂಕು : ತುಮಕೂರು
ತಾಲ್ಲೂಕು ಕೇಂದ್ರದಿಂದ: ೯ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೯ ಕಿ.ಮೀ

ಇದು ತುಮಕೂರಿನಿಂದ ಬೆಂಗಳೂರು ಹೆದ್ದಾರಿಯಲ್ಲಿ ಪಂಡಿತನಹಳ್ಳಿ ಪಕ್ಕದಲ್ಲಿ ಏಕಶಿಲೆಯ ಬೃಹತ್ ಬಂಡೆಯ ಮೇಲಿರುವ ಜೈನ ಯಾತ್ರಾಸ್ಥಳ. ಇದು ಏಕಶಿಲಾ ಬಂಡೆಯಾಗಿದೆ. ಇದನ್ನು ಕ್ರಿ.ಶ. ೧೧೬೦ ರಲ್ಲಿ ನಿರ್ಮಿಸಲಾಗಿದ್ದು, ಮಂದರಗಿರಿ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಭಕ್ತರಿಗೆ ಮೆಟ್ಟಿಲನ್ನು ಬಂಡೆಯಲ್ಲಿ ಕೊರೆದು ನಿರ್ಮಿಸಲಾಗಿದೆ. ಪ್ರಾಚೀನ ಇತಿಹಾಸವನ್ನು ಶಾಸನಗಳ ಮೂಲಕ ಹೊಂದಿರುವ ಈ ಕ್ಷೇತ್ರದ ಬೆಟ್ಟದ ತುದಿಯಲ್ಲಿ ಅನೇಕ ಜೈನ ತೀರ್ಥಂಕರರ ಬಸದಿಗಳಿವೆ. ಇದೊಂದು ಪ್ರಮುಖ ಪ್ರವಾಸಿ ತಾಣವಾಗಿದೆ. ಉತ್ತರದ ತಪ್ಪಲಿನಲ್ಲಿ ಸುತ್ತುವರೆದಿರುವ ಮೈದಾಳಕೆರೆ ಇದನ್ನು ಮೋಹಕ ತಾಣವನ್ನಾಗಿಸಿದೆ. ಸುಮಾರು ೨ ವರ್ಷಗಳ ಹಿಂದೆ ಬೆಟ್ಟ ಏರುವ ತಪ್ಪಲಿನ ತಾಣದಲ್ಲಿ, ಸುಮಾರು ೨೦ ಅಡಿ ಎತ್ತರದ ಗೊಮ್ಮಟ ವಿಗ್ರಹವನ್ನು ಕಲ್ಲಿನಿಂದ ಕಡೆದು ನಿರ್ಮಿಸಲಾಗಿದೆ. ಇದು ಆಕರ್ಷಣೀಯ ಕೇಂದ್ರವಾಗಿದ್ದು ಪೂಜ್ಯನೀಯವಾಗಿದೆ.

 

ಗೂಳೂರು

ದೂರ ಎಷ್ಟು?
ತಾಲ್ಲೂಕು : ತುಮಕೂರು
ತಾಲ್ಲೂಕು ಕೇಂದ್ರದಿಂದ: ೪ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೪ ಕಿ.ಮೀ

ಗಣಪನ ಖ್ಯಾತಿಯ ಈ ಗ್ರಾಮವನ್ನು ಹಿಂದೆ ಚೋಳರು, ಗಂಗರು, ರಾಷ್ಟ್ರಕೂಟರು ಸಂಸ್ಥಾನವನ್ನಾಗಿ ಮಾಡಿಕೊಂಡು ಆಳ್ವಿಕೆ ನಡೆಸುತ್ತಿದ್ದರು. ಆಗ ವೃಷಭಪುರಿ ಎಂಬ ಹೆಸರಿದ್ದು, ಮುಂದೆ ನಾಗರಿಕತೆ ಬೆಳೆಯುತ್ತಾ ಹೋದಂತೆ ಗೂಳೂರು ಎಂದು ಪರಿವರ್ತನೆಗೊಂಡಿತು. ಇಲ್ಲಿ ಪ್ರತಿವರ್ಷ ಬೃಹದಾಕಾರದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಿದ್ದು, ಕಾರ್ತಿಕ ಮಾಸದ ಅಮಾವಾಸ್ಯೆ ಕಳೆದ, ಮಾರನೇ ದಿನ ಗಣೇಶನ ವಿಗ್ರಹವನ್ನು ಮಣ್ಣಿನಿಂದ ಮಾಡಿ, ಒಂದು ತಿಂಗಳ ಕಾಲ ಪೂಜೆ ಸಲ್ಲಿಸುವ ವಾಡಿಕೆಯುಂಟು.

 

ಕೈದಾಳ

ಗೂಳೂರಿನಿಂದ ಪಶ್ಚಿಮಕ್ಕೆ ಒಂದು ಕಿ.ಮೀ ದೂರದಲ್ಲಿ ಕಂಡುಬರುವ ಕ್ಷೇತ್ರವೇ ಕೈದಾಳ. ಇದರ ಮೊದಲ ಹೆಸರು ಕ್ರೀಡಾಪುರ. ಕ್ರಿ.ಶ.೧೧೫೦ ರಲ್ಲಿ ಹೊಯ್ಸಳ ದೊರೆ ನರಸಿಂಹನ ಕಾಲದಲ್ಲಿ ಸಾಮಂತನಾದ ಗೂಳೇಬಾಚಿದೇವ ನಿರ್ಮಿಸಿದ ಕಪ್ಪೆಚಿನ್ನಿಗರಾಯಸ್ವಾಮಿ ವಿಗ್ರಹ ಬೇಲೂರಿನ ಚನ್ನಕೇಶವಸ್ವಾಮಿಯನ್ನು ಹೋಲುವುದರಿಂದ, ಆ ಹೆಸರಿನಿಂದಲೂ ಪ್ರಸಿದ್ಧವಾಗಿದೆ. ಈ ವಿಗ್ರಹವನ್ನು ಕೆತ್ತುವ ಸಂದರ್ಭದಲ್ಲಿ, ಕಲ್ಲಿನ ಮಧ್ಯೆ ಕಪ್ಪೆಸೇರಿಕೊಂಡಿದ್ದು, ಶಿಲ್ಪಿ ಜಕಣಾಚಾರಿಯು ವಿಗ್ರಹವನ್ನು ಕೆತ್ತುವ ಸಂದರ್ಭದಲ್ಲಿ ತಂದೆ ಡಂಕಣಾಚಾರಿ ಇದನ್ನು ಮನಗಂಡು ಲೋಪವನ್ನು ತೋರಿಸಿದಾಗ, ಕೊಟ್ಟಮಾತಿನಂತೆ ಮಗ ಒಂದು ಕೈಯನ್ನು ಕತ್ತರಿಸಿಕೊಂಡನು. ನಂತರ, ಮೊಂಡಾದ ಕೈನಿಂದಲೇ ಚೆನ್ನಕೇಶವಸ್ವಾಮಿ ವಿಗ್ರಹವನ್ನು ಕೆತ್ತಿದನು. ಆ ಕ್ಷಣದಲ್ಲಿ ಶಿಲ್ಪಿಗೆ ಮತ್ತೆ ಕೈ ಮೂಡಿಬಂದಿತು. ಇದರಿಂದಾಗಿ ಈ ಗ್ರಾಮಕ್ಕೆ ಕೈದಾಳ ಎಂಬ ಹೆಸರು ಬಂದುದಾಗಿ ವಾಡಿಕೆಯಿದೆ.

 

ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮ

ಶ್ರೀ ರಾಮಕೃಷ್ಣರು ಮತ್ತು ಸ್ವಾಮಿವಿವೇಕಾನಂದರ ಧ್ಯೇಯಾದರ್ಶಗಳನ್ನು ಜನತೆಗೆ ಮುಟ್ಟಿಸುವ ಸಲುವಾಗಿ ತಲೆಯೆತ್ತಿ ನಿಂತಿರುವ, ಶ್ರೀ ರಾಮಕೃಷ್ಣಾಶ್ರಮ, ಕುಣಿಗಲ್ ರಸ್ತೆಯ ಎಡಭಾಗದಲ್ಲಿ ಪವಿತ್ರ ತಾಣವಾಗಿ ಬೆಳೆದಿದೆ. ಈ ಆಶ್ರಮ ಉಜ್ವಲ ಉಪನ್ಯಾಸನೀಡುವ ಶ್ರೀ ಸ್ವಾಮಿವೀರೇಶಾನಂದಜಿ ಸ್ವಾಮೀಜಿಯವರ ಸತ್ ನಂಕಲ್ಪದಿಂದ, ಜ್ಞಾನ ದೀವಿಗೆಯಾಗಿ ಪ್ರಜ್ವಲಿಸುತ್ತಿದೆ. ಧಾರ್ಮಿಕ ಹಾಗೂ ಶೈಕ್ಷಣಿಕ ಪ್ರಕಟಣೆಗಳನ್ನು ಮಾಡಿ, ಶೈಕ್ಷಣಿಕ ಸಮ್ಮೇಳನಗಳನ್ನು ನಡೆಸುತ್ತಾ, ಶಿಕ್ಷಣಕ್ಕೆ ಒತ್ತುನೀಡಿ ಶಿಸ್ತು, ಸಂಯಮ, ಧಾರ್ಮಿಕ ಪ್ರಿಯತೆ ಉಂಟುಮಾಡುವ ಮೂಲಕ, ವಿದ್ಯಾರ್ಥಿಗಳಿಗೆ ಮತ್ತು ವಿದ್ಯಾಸಕ್ತರಿಗೆ ಆದರ್ಶ ಪ್ರಾಯವಾಗಿದೆ. ಅಧ್ಯಯನ ಕೇಂದ್ರವೂ ಆಗಿರುವ ಈ ಆಶ್ರಮ, ಶಿಕ್ಷಣದ ಅಭಿವೃದ್ಧಿಗಾಗಿ ಸದಾ ಶ್ರಮಿಸುತ್ತಿದೆ.

 

ಮಹಾತ್ಮ ಗಾಂಧಿ ಕ್ರೀಡಾಂಗಣ

ತುಮಕೂರು ನಗರದ ಪ್ರಥಮ ದರ್ಜೆ ಕಾಲೇಜಿನ ಪಕ್ಕದಲ್ಲಿರುವ, ಅತಿ ದೊಡ್ಡ ಹಾಗೂ ಸೌಲಭ್ಯಪೂರಿತವಾಗಿರುವ ಮಹಾತ್ಮ ಗಾಂಧಿ ಕ್ರೀಡಾಂಗಣ, ಎಲ್ಲ ಸ್ಪರ್ಧೆ ಮತ್ತು ಆಟೋಟಗಳಿಗೆ ಅನುಕೂಲವಾಗಿದೆ. ಇಲ್ಲಿ ನಾಡಹಬ್ಬ ಹಾಗೂ ರಾಷ್ಟ್ರೀಯ ಹಬ್ಬಗಳನ್ನು ಧ್ವಜಾರೋಹಣದೊಂದಿಗೆ ಅದ್ದೂರಿಯಿಂದ ಆಚರಿಸಲಾಗುತ್ತದೆ.

 

ಚರ್ಚ್ ಮತ್ತು ಮಸೀದಿಗಳು

 ತುಮಕೂರು ನಗರದ ಮಧ್ಯಬಾಗದಲ್ಲಿ ಅತ್ಯಂತ ಪ್ರಾಚೀನವಾದ ಚರ್ಚ್ ಮತ್ತು ಮಸೀದಿಗಳು ಇದ್ದು, ಸುಂದರ ಕಟ್ಟಡಗಳನ್ನು ಹೊಂದಿವೆ. ಇವು ಧಾರ್ಮಿಕ ಪ್ರಾರ್ಥನಾ ನೆಲೆಗಳಾಗಿದ್ದು, ಪ್ರಖ್ಯಾತಿ ಹೊಂದಿವೆ. ಮಂಡಿಪೇಟೆ ಬಳಿಯಿರುವ ಆಂಗ್ಲರು ಆಳ್ವಿಕೆಯ ಕಾಲದ, ಕ್ರಿ.ಶ. ೧೮೪೮ ರಲ್ಲಿ ಕ್ರೈಸ್ತಮಿಷನರಿ ಶಾಲೆತೆರೆಯುವ ಮೂಲಕ ಸ್ಥಾಪನೆಯಾದ ಚರ್ಚ್ ಸುಂದರವಾದ ಕಟ್ಟಡ ವಾಗಿದೆ.

 

ಅಗ್ನಿ ಶಾಮಕ ದಳ

ಇದು ತುಮಕೂರು ನಗರದ ಪೂರ್ವ ಭಾಗದಲ್ಲಿ ಹೆಚ್.ಎಂ.ಟಿ. ಕಾರ್ಖಾನೆಯ ಎದುರು ಬೆಂಗಳೂರು ರಸ್ತೆಯಲ್ಲಿದೆ. ೧೯೮೫ ರಲ್ಲಿ ಸುಸಜ್ಜಿತವಾಗಿ ರೂಪುಗೊಂಡ, ಈ ಅಗ್ನಿಶಾಮಕ ದಳವು ಉತ್ತಮ ರೀತಿಯ ಅಗ್ನಿಶಾಮಕ ವಾಹನಗಳನ್ನು ಹೊಂದಿ ಕಾರ್ಯನಿರ್ವಹಿಸುತ್ತಿದೆ.