ತಾಲ್ಲೂಕು ಮತ್ತು ಜಿಲ್ಲಾಡಳಿತ ಕಛೇರಿಗಳು

ಆಡಳಿತ ಮತ್ತು ಅಭಿವೃದ್ಧಿ, ಶಿಕ್ಷಣ ಹಾಗೂ ಸಾರ್ವಜನಿಕ ಸೌಲಭ್ಯಗಳಿಗೆ ಸಂಬಂಧಿಸಿದಂತೆ ತುಮಕೂರು ನಗರವು ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರವಾಗಿರುವುದರಿಂದ, ಅನೇಕ ಜನಪರ ಕಾರ್ಯಾಲಯಗಳನ್ನು ಹೊಂದಿದ್ದು, ಉತ್ತಮ ಆಡಳಿತ ನಡೆಸುತ್ತಿರುವ ಬಗ್ಗೆ ಜನಮೆಚ್ಚುಗೆ ಗಳಿಸಿದೆ. ಪ್ರತಿಯೊಂದು ಕಟ್ಟಡವು ವಿವಿಧ ಕ್ಷೇತ್ರಗಳ ಕಛೇರಿಗಳನ್ನು ಹೊಂದಿದ್ದು, ಅವುಗಳಲ್ಲಿ ಮುಖ್ಯವಾದವುಗಳು, ಮಿನಿ ವಿದಾನಸೌಧ, ಜಿಲ್ಲಾ ನ್ಯಾಯಾಲಯ, ಎಸ್.ಪಿ.ಕಛೇರಿ, ಜಿಲ್ಲಾ ಪಂಚಾಯತ್, ಜಿಲ್ಲಾ ಉಪನಿರ್ದೇಶಕರ ಕಛೇರಿ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ತಾಲ್ಲೂಕು ಪಂಚಾಯತ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಮುಂತಾದ ಕಛೇರಿಗಳನ್ನು ಒಳಗೊಂಡಿದೆ.

ರೈಲ್ವೆ ನಿಲ್ದಾಣ ಹಾಗೂ ಬಸ್ ನಿಲ್ದಾಣ

ತುಮಕೂರು ನಗರದ ರೈಲು ನಿಲ್ದಾಣ ಹಾಗು ಬಸ್ ನಿಲ್ದಾಣಗಳು ಸದಾ ಜನನಿಬಿಡವಾಗಿದ್ದು, ಪ್ರತಿದಿನ ಹಗಲು ರಾತ್ರಿಗಳೆನ್ನದೆ ಸಾವಿರಾರು ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಅನುಕೂಲಕರವಾದ ಈ ನಿಲ್ದಾಣಗಳು ಸಾರ್ವಜನಿಕರಿಗೆ ತಂಗುದಾಣಗಳನ್ನು ಒಳಗೊಂಡಂತೆ ಅತ್ಯುಪಯುಕ್ತವಾಗಿವೆ.

 

ಬುಗುಡನ ಹಳ್ಳಿ ಕೆರೆ

ದೂರ ಎಷ್ಟು?
ತಾಲ್ಲೂಕು : ತುಮಕೂರು
ತಾಲ್ಲೂಕು ಕೇಂದ್ರದಿಂದ: ೧೦ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೧೦ ಕಿ.ಮೀ

ತುಮಕೂರು ನಗರಕ್ಕೆ ಕುಡಿಯುವ ನೀರಿನ ಕ್ಷಾಮ ಎದುರಾದಂತಹ ಸಂದರ್ಭದಲ್ಲಿ, ಹೇಮಾವತಿ ನದಿಯಿಂದ ಕಾಲುವೆ ಮೂಲಕ, ನೀರನ್ನು ಹಾಯಿಸಿಕೊಂಡು ಶುದ್ಧೀಕರಣಮಾಡಿ, ತುಮಕೂರು ನಗರಕ್ಕೆ ಸರಬರಾಜು ಮಾಡಲಾಗುತ್ತಿದೆ. ಜೊತೆಗೆ ಕಾಲುವೆಗಳಿಂದ ಸುತ್ತಮುತ್ತಲಿನ ಕೆರೆಗೆ ನೀರು ಹಾಯಿಸಿ ವ್ಯವಸಾಯಕ್ಕೂ ಸಹ ಅನುಕೂಲ ಕಲ್ಪಿಸಲಾಗಿದೆ.

 

ನವೋದಯ ಶಾಲೆ

ದೇವರಾಯನ ದುರ್ಗದ ಕಾನನದ ಮಧ್ಯೆ ಕೇಂದ್ರ ಸರ್ಕಾರದ ವತಿಯಿಂದ ತೆರೆಯಲಾದ ಜವಹರ್ ನವೋದಯ ವಿದ್ಯಾಲಯವಿದ್ದು, ಎಲ್ಲ ಮೂಲ ಸೌಕರ್ಯಗಳನ್ನು ಒಳಗೊಂಡಿದೆ. ಇಲ್ಲಿ ೬ ನೇ ತರಗತಿಯಿಂದ ಪಿ.ಯು.ಸಿ ವರೆಗೆ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ೫ ನೇ ತರಗತಿಯಲ್ಲಿ ತೇರ್ಗಡೆ ಹೊಂದಿದ ಜಿಲ್ಲೆಯ ಎಲ್ಲೆಡೆ ನಡೆಸಲಾಗುವ ಆಯ್ಕೆ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ೮೦ ಮಕ್ಕಳು ಪ್ರತಿ ವರ್ಷ ದಾಖಲು ಮಾಡಿಕೊಳ್ಳಲಾಗುತ್ತಿದೆ. ಪೋಷಕರಿಗೆ ಹೊರೆಯಲ್ಲದ ಈ ವ್ಯವಸ್ಥೆ ತುಂಬಾ ಉತ್ತಮವಾಗಿದ್ದು ಮಕ್ಕಳಿಗೆ ಊಟ, ವಸತಿ, ಶೈಕ್ಷಣಿಕ ಹಾಗು ಇತರೆ ಸೌಲಭ್ಯಗಳನ್ನು ಉತ್ತಮ ರೀತಿಯಲ್ಲಿ  ಪೂರೈಸಲಾಗುತ್ತಿದೆ. ವಿಷಯ ಪರಿಣಿತಿ ಹೊಂದಿದ ಶಿಕ್ಷಕರು ಉತ್ತಮ ರೀತಿಯ ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯ, ಕ್ರೀಡಾಂಗಣ, ಸೌಲಭ್ಯಪೂರಿತ ವಸತಿ ನಿಲಯಗಳು ಕಲಿಕೆಗೆ ಉತ್ತಮ ಅವಕಾಶ ಕಲ್ಪಿಸಿದೆ.

 

ತುಮಕೂರು ಡೈರಿ

ದೂರ ಎಷ್ಟು?
ತಾಲ್ಲೂಕು : ತುಮಕೂರು
ತಾಲ್ಲೂಕು ಕೇಂದ್ರದಿಂದ: ೧೦ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೧೦ ಕಿ.ಮೀ

 ಸುಮಾರು ೩೦ ವರ್ಷಗಳ ಹಿಂದೆ ಸಣ್ಣ ಪ್ರಮಾಣದಲ್ಲಿ ಪ್ರಾರಂಭವಾದ ಹಾಲು ಸಂಗ್ರಹಣ ಕೇಂದ್ರ, ಈಗ ಬೃಹತ್ ಪ್ರಮಾಣದಲ್ಲಿ ಬೆಳೆದಿದ್ದು, ಸುಮಾರು ೩ ಲಕ್ಷ ಲೀ. ಹಾಲನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. ಶೇಖರಿಸಿದ ಹಾಲನ್ನು ಸಂಸ್ಕರಿಸಿ ಸಂಶೋಧನೆಗೊಳಪಡಿಸಿ, ಪೌಷ್ಠಿಕಾಂಶಯುಕ್ತ ಹಾಲನ್ನು ರಾಜ್ಯ ಹಾಗೂ ಹೊರರಾಜ್ಯಗಳಿಗೆ ನೀಡುತ್ತಿದೆ. ಹೆಚ್ಚಿನ ಹಾಲನ್ನು ಬೆಣ್ಣೆ, ತುಪ್ಪ, ಮೊಸರು, ಮಜ್ಜಿಗೆ ಮತ್ತು ಸಿಹಿತಿಂಡಿ ತಯಾರಿಕೆಗೆ ಬಳಸುತ್ತಾರೆ. ಈ ಕೇಂದ್ರ ರೈತರ ಆಶಾಕಿರಣವಾಗಿದ್ದು, ಗ್ರಾಮದ ಹಾಲು ಒಕ್ಕೂಟಗಳಿಗೆ ಸಹಾಯಹಸ್ತ ನೀಡುತ್ತಾ ಪಶುಪಾಲನೆಗೆ ಅಗತ್ಯವಾದ ತರಬೇತಿಗಳನ್ನು ನೀಡುತ್ತಾ ಬಂದಿದೆ.

 

ಭಾರತೀಯ ತೋಟಗಾರಿಕೆ ಸಂಶೋಧನಾ ಕೇಂದ್ರ ಹಿರೇಹಳ್ಳಿ

ದೂರ ಎಷ್ಟು?
ತಾಲ್ಲೂಕು : ತುಮಕೂರು
ತಾಲ್ಲೂಕು ಕೇಂದ್ರದಿಂದ: ೧೨ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೧೨ ಕಿ.ಮೀ

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ

ರೈತಾಪಿ ವರ್ಗದ ತೋಟದ ಬೆಳೆಗಾರರಿಗೆ ಅನುಕೂಲ ಕಲ್ಪಿಸಲು ತೆರೆಯಲಾದ ಸಂಸ್ಥೆಯೇ ಅಡಿಕೆ ಸಂಶೋಧನಾ ಕೇಂದ್ರ. ಇದು ಬೀಜ ಉತ್ವಾದನಾ ಕೇಂದ್ರವೂ ಆಗಿದ್ದು  ಉತ್ತಮ ತಳಿಗಳನ್ನು ಬೆಳೆಸಿ ರೈತರಿಗೂ ನೀಡುತ್ತಿದೆ.

 

ಹೆಚ್.ಎಂ.ಟಿ ಕೈಗಡಿಯಾರ ಕಾರ್ಖಾನೆ

ತುಮಕೂರು ಬೆಂಗಳೂರು ಮಾರ್ಗದ ಹೆದ್ದಾರಿ ಪಕ್ಕದಲ್ಲಿ ನಗರದ, ಪೂರ್ವಭಾಗದಲ್ಲಿ ೧೯೭೮ ರಲ್ಲಿ ತಲೆಯೆತ್ತಿನಿಂತ ನಗರದ ಪ್ರಥಮ ಬೃಹತ್ ಕಾರ್ಖಾನೆ ಇದಾಗಿದ್ದು ಸುಮಾರು ೧೦೦೦ ಎಕರೆ ವಿಸ್ತಾರ ಪ್ರದೇಶವನ್ನು ಆವರಿಸಿಕೊಂಡಿದೆ. ಇಲ್ಲಿ ಎಲೆಕ್ಟ್ರಾನಿಕ್ಸ್ ಗಡಿಯಾರಗಳಿಗೆ ಸಂಬಂಧಿಸಿದ ಸೂಕ್ಷ್ಮವಸ್ತುಗಳನ್ನು ಇಲ್ಲಿ ತಯಾರಿಸಲಾಗುತ್ತಿದ್ದು ಸುಮಾರು ೨೦೦೦ ಕೆಲಸಗಾರರನ್ನು ಹೊಂದಿತ್ತು. ಈಗ ಉತ್ಪಾದನಾ ಕಾರ್ಯ ಕಡಿಮೆಗೊಂಡಿದ್ದು ಸುಮಾರು ೬೦೦ ಮಂದಿ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ.

 

ಸಿದ್ಧಗಂಗಾ ತಾಂತ್ರಿಕ ವಿದ್ಯಾಲಯ

ತುಮಕೂರ ನಗರದ ಪೂರ್ವಭಾಗದಲ್ಲಿ ಬೃಹದಾಕಾರದಲ್ಲಿ ಅಭಿವೃದ್ಧಿ ಹೊಂದಿರುವ ವಿದ್ಯಾಲಯವೇ ಎಸ್.ಐ.ಟಿ. ೧೯೬೩ ರಲ್ಲಿ ಪ್ರಾರಂಭವಾದ ಈ ಸಂಸ್ಥೆ ಮೊದಲು ಬಿ.ಇ ಸಿವಿಲ್ ಮೈಕಾನಿಕಲ್ ಹಾಗೂ ಎಲೆಕ್ಟ್ರಾನಿಕ್ ವಿಭಾಗಗಳನ್ನು ಹೊಂದಿದ್ದು ಈಗ ಎಲ್ಲ ವಿಧವಾದ ಕೋರ್ಸಗಳನ್ನು ಹೊಂದಿದೆ. ಒಟ್ಟು ೭೫೭ ಕೊಠಡಿಗಳನ್ನು ಹೊಂದಿದ್ದು ೯೮೦ ಕಂಪ್ಯೂಟರ್ ಗಳನ್ನು ಒಳಗೊಂಡ ಇಂಟರ್ ನೆಟ್ ಸಂಬಂಧವಿರುವ, ೨೫ ಕಂಪ್ಯೂಟರ್ ಸೆಂಟರ್ ಗಳನ್ನು ಹೊಂದಿದೆ. ಹಾಗೆಯೇ ೧೭ ಟೆಕ್ನಾಲಜಿ ಡಿಪಾರ್ಟ್ಮೆಂಟ್ ಗಳನ್ನು ಹೊಂದಿದೆ. ಒಟ್ಟು ೪೦೦೦ ವಿದ್ಯಾರ್ಥಿಗಳನ್ನು ಒಳಗೊಂಡ ಈ ತಾಂತ್ರಿಕ ವಿದ್ಯಾಲಯ ಸುಮಾರು ೬೫ ಎಕರೆಗಳಷ್ಟು ವಿಸ್ತಾರವನ್ನು ಹೊಂದಿದ್ದು ಸುಂದರ ಉದ್ಯಾನವನ, ಶಿವದೇವಾಲಯ, ವ್ಯಾಯಾಮ ಶಾಲೆ, ಗ್ರಂಥಾಲಯ, ಎಲ್ಲಾ ಆಟಗಳ ಸೌಲಭ್ಯವಿರುವ ಕ್ರೀಡಾಂಗಣ ಹಾಗೂ ಬಿರ್ಲಾ ಆಡಿಟೋರಿಯಂಗಳನ್ನು ಹೊಂದಿದೆ. ೧೨ ಯು.ಜಿ.ಕೋರ್ಸ್ ೭ ಪಿ.ಜಿ. ಕೋರ್ಸ್ ಹಾಗೂ ಕೈಗಾರಿಕಾ ತರಬೇತಿ ಕೇಂದ್ರಗಳನ್ನು ಹೊಂದಿದ ಈ ವಿದ್ಯಾಲಯ ಭಾರತದಲ್ಲಿ ಹೆಸರುಗಳಿಸಿದೆ.

 

ಟಿ.ವಿ.ಎಸ್. ಕಾರ್ಖಾನೆ

ತುಮಕೂರು ಬೆಂಗಳೂರು ಹೆದ್ದಾರಿಯ ೧೦ ಕಿ.ಮೀ ದೂರದಲ್ಲಿ ಎಡಭಾಗಕ್ಕೆ ೧ ಕಿ.ಮೀ ದೂರದಲ್ಲಿ ತಲೆ ಎತ್ತಿ ನಿಂತ ಕೈಗಾರಿಕೆಯೇ ಟಿ.ವಿ.ಎಸ್. ಇಲ್ಲಿ ಗಣಕಯಂತ್ರಕ್ಕೆ ಸಂಬಂಧಿಸಿದಂತೆ ಎಲ್ಲ ವಿಧವಾದ ಉಪಕರಣಗಳನ್ನು ತಯಾರಿಸುತ್ತಿದ್ದು, ಹೆಸರು ಪಡೆದಿದೆ. ಉತ್ತಮ ಸೌಲಭ್ಯದ ಶಿಕ್ಷಣ ಸಂಸ್ಥೆಯನ್ನು ಹೊಂದಿದ್ದು ವಸತಿಗೃಹಗಳು, ಉದ್ಯಾನವನ, ಆಟದ ಮೈದಾನ, ಗ್ರಂಥಾಲಯ ಇದೆ. ಇದರ ವತಿಯಿಂದ ಅನೇಕ ದೇವಾಲಯಗಳು ಜೀರ್ಣೋದ್ಧಾರಗೊಂಡಿದ್ದು ಅಕ್ಕಪಕ್ಕದ ಅನೇಕ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಮಕ್ಕಳ ಶೈಕ್ಷಣಿಕ ಸೌಲಭ್ಯ ಪೂರೈಸುತ್ತಿದೆ.

 

ಸಿದ್ಧಾರ್ಥ ಇಂಜಿನಿಯರಿಂಗ್ ಕಾಲೇಜ್ ಮತ್ತು ಗ್ಲೋಬಲ್ ಲೈಬ್ರೆರಿ

ಇದು ಕುಣಿಗಲ್ ರಸ್ತೆಯಲ್ಲಿ ತುಮಕೂರು ನಗರದ ದಕ್ಷಿಣಭಾಗದಲ್ಲಿದೆ, ಈ ಸಂಸ್ಥೆ ಕ್ರಿ.ಶ. ೧೯೭೯ ರಲ್ಲಿ ಪ್ರಾರಂಭಗೊಂಡು, ತಾಂತ್ರಿಕ ವಿದ್ಯಾಲಯ ಹಾಗೂ ಮೇನೇಜ್ಮೆಂಟ್ ಸ್ಟಡೀಸ್ ವಿಭಾಗಗಳನ್ನು ಹೊಂದಿದೆ. ಮಲ್ಟಿ ಮೀಡಿಯಾ ಮತ್ತು ಅನಿಮೇಶನ್ ಇಲ್ಲಿ ಮಾತ್ರ ಲಭ್ಯವಿದ್ದು, ಹೊರದೇಶಗಳಿಂದಲೂ ವಿದ್ಯಾರ್ಥಿಗಳು ಆಗಮಿಸುತ್ತಾರೆ. ವಿದ್ಯಾರ್ಥಿಗಳಿಗಾಗಿ ವರ್ಷಕ್ಕೊಮ್ಮೆ “ಕಲೋತ್ಸವ” ಎಂಬ ಸಂತೋಷಕೂಟವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಇಲ್ಲಿ ಸ್ಥಾಪಿಸಲಾಗಿರುವ ಎಲ್ಲ ಕ್ಷೇತ್ರಗಳ ಎಲ್ಲ ಮಾದರಿಯ ಎಲ್ಲ ಕೋರ್ಸ್ ಗಳ ಶೈಕ್ಷಣಿಕ ಪುಸ್ತಕಗಳನ್ನು ಒಳಗೊಂಡ ಸಿದ್ದಾರ್ಥ ಗ್ಲೋಬಲ್ ಲೈಬ್ರರಿ ಕರ್ನಾಟಕದಲ್ಲಿಯೇ ಹೆಸರಾಂತ ಸೆಟಲೈಟ್ ಆಧಾರಿತ ಲೈಬ್ರೆರಿಯಾಗಿರುತ್ತದೆ. ಇದೇ ಸಂಸ್ಥೆಯ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಸಿದ್ಧಾರ್ಥ ನಗರದಲ್ಲಿದೆ. ಈ ಸಂಸ್ಥೆ ನೂರಾರು ಶಿಕ್ಷಣ ಸಂಸ್ಥೆಗಳನ್ನು ನಾಡಿನೆಲ್ಲೆಡೆ ನಡೆಸುತ್ತಿದೆ.