ತುಮಕೂರು ಜಿಲ್ಲೆ ಸುಜನ ಜನಪದ ಜಿಲ್ಲೆ ಎಂದು ಹೆಸರಾಗಿದ್ದು, ಕಲ್ಪತರು ನಾಡೆಂದು ಕೀರ್ತಿ ಪಡೆದಿದೆ. ಇದು ಕರ್ನಾಟಕದಲ್ಲಿ ಆಗ್ನೇಯ ದಿಕ್ಕಿನಲ್ಲಿದ್ದು, ನಾಡಿನ ರಾಜಧಾನಿ ಬೆಂಗಳೂರು ನಗರಕ್ಕೆ ೬೮ ಕಿ.ಮೀ ಅಂತರದಲ್ಲಿದೆ. ಕ್ರಿ.ಶ. ೧೦ನೇ ಶತಮಾನದ ಶಾಸನವೊಂದರಲ್ಲಿ ತುಂಬೆ ಊರು ಎಂಬ ಉಲ್ಲೇಖವಿದ್ದು, ಮುಂದೆ ಇದು ತುಮಕೂರು ಎಂದಾಯಿತೆಂದು ತಿಳಿದು ಬರುತ್ತದೆ. ಹಾಗೂ ಇಲ್ಲಿಯ ಜನ ಟುಮಕಿ ಬಾರಿಸುತ್ತಿದ್ದುದ್ದರಿಂದ ತುಮಕೂರು ಆಯಿತೆಂದು ಇತಿಹಾಸ ತಿಳಿಸುತ್ತದೆ.

ತ್ರಿವಿಧದಾಸೋಹಿ ಕರ್ನಾಟಕ ರತ್ನ ಡಾ.ಶ್ರೀ.ಶ್ರೀ.ಶಿವಕುಮಾರ ಮಹಾಸ್ವಾಮಿಗಳ ಕರ್ಮಭೂಮಿ ಶ್ರೀ.ಸಿದ್ಧಗಂಗಾ ಮಠ ಜಿಲ್ಲೆಯ ಕೀರ್ತಿರತ್ನವಾಗಿದೆ.

ಶ್ರೀ ಎಡೆಯೂರು ಸಿದ್ಧಲಿಂಗೇಶ್ವರರು ನಡೆದಾಡಿದ ಪುಣ್ಯಭೂಮಿ, ನಾಟಕರತ್ನ ದಿವಂಗತ ಗುಬ್ಬಿ ವೀರಣ್ಣ, ಕನ್ನಡದ ಕಣ್ಣ ಬಿ.ಎಂ.ಶ್ರೀ., ಹಾಗೂ ಆಚಾರ್ಯ ತಿ.ನಂ.ಶ್ರೀಕಂಠಯ್ಯನವರಂತಹ ಕವಿವರ್ಯರುದಿಸಿದ ಮಾತೃ ಜಿಲ್ಲೆ ತುಮಕೂರು.

ಜಿಲ್ಲೆಯ ಭೌಗೋಳಿಕ ವಿಸ್ತೀರ್ಣ ೧೦೫೯೮ ಚ.ಕಿ.ಮೀ ಇದ್ದು ೧೨.೪೫ ಡಿಗ್ರಿ ರಿಂದ ೧೪.೨೪ ಡಿಗ್ರಿ ಉತ್ತರ ಅಕ್ಷಾಂಶ ಮತ್ತು ೭೬.೨೦ ರಿಂದ ೭೭.೩೨ ಪೂರ್ವರೇಖಾಂಶಗಳ ನಡುವೆ ನೆಲೆಸಿದೆ. ಈಶಾನ್ಯಕ್ಕೆ ಆಂದ್ರಪ್ರದೇಶ, ಪೂರ್ವಕ್ಕೆ ಕೋಲಾರ, ದಕ್ಷಿಣಕ್ಕೆ ಮಂಡ್ಯ ಮತ್ತು ವಾಯುವ್ಯಕ್ಕೆ ಹಾಸನ ಹಾಗೂ ಚಿತ್ರದುರ್ಗ ಜಿಲ್ಲೆಗಳಿವೆ. ಈಶಾನ್ಯ ಭಾಗದ ಪಾವಗಡ ಇತರೆ ತಾಲ್ಲೂಕುಗಳಿಗಿಂತ ಪೂರ್ಣವಾಗಿ ಬೇರ್ಪಟ್ಟಿರುವುದು ವಿಶೇಷವಾಗಿದೆ.

ಜಿಲ್ಲೆಯಲ್ಲಿ ಕಾವೇರಿ, ಕೃಷ್ಣ, ಉತ್ತರ ಪಿನಾಕಿನಿ, ಜಲಾನಯನ ಪ್ರದೇಶಗಳಿದ್ದು ಶಿಂಷಾ, ಜಯಮಂಗಲಿ, ಸುವರ್ಣಮುಖಿ ನದಿಗಳು ಪ್ರಮುಖವಾಗಿವೆ. ಅಲ್ಲದೆ ದೇವರಾಯನದುರ್ಗ, ಮಧುಗಿರಿ ಏಕಾಶಿಲಾಬೆಟ್ಟ, ನಿಡಗಲ್ಲು ದುರ್ಗ, ಮಿಡೀಗೆಶಿ ದುರ್ಗ, ಹುಲಿಯೂರು ದುರ್ಗ, ಸಿದ್ದರಬೆಟ್ಟ ಮುಂತಾದುವುಗಳು ಜಿಲ್ಲೆಯ ಪ್ರಸಿದ್ಧ ಬೆಟ್ಟಗಳಾಗಿವೆ.

ಇತಿಹಾಸ ಪ್ರಸಿದ್ಧ ತುಮಕೂರು ಜಿಲ್ಲೆ ಅನೇಕ ರಾಜ ಮನೆತನಗಳ ಆಡಳಿತಕ್ಕೆ ಒಳಪಟ್ಟಿತ್ತು. ಗಂಗರು, ರಾಷ್ಟ್ರಕೂಟರು, ನೊಳಂಬರು, ಜೋಳರು, ವಿಜಯನಗರದ ಅರಸರು, ಮೈಸೂರು ಅರಸರು ವಿವಿಧ ಪ್ರದೇಶಗಳಲ್ಲಿ ತಮ್ಮ ಆಡಳಿತವನ್ನು ವಿಸ್ತರಿಸಿದ್ದರು.

ಹೊಯ್ಸಳರು ಜಿಲ್ಲೆಯಲ್ಲಿ ಹಲವಾರು ದೇವಾಲಯಗಳನ್ನು ಕಟ್ಟಿಸಿದ್ದು, ಕಲೆ ಮತ್ತು ವಾಸ್ತು ಶಿಲ್ಪಕ್ಕೆ ಹೆಸರಾಗಿದೆ. ಉದಾಹರಣೆಗೆ ಕೈದಾಳ ಮತ್ತು ಅರಳಗುಪ್ಪೆ ದೇವಾಲಯಗಳು. ಜಿಲ್ಲೆಯಲ್ಲಿ ಸಾಹಿತ್ಯ ನಿರ್ಮಾಣಕ್ಕಾಗಿ ಗುಬ್ಬಿ ಮಲ್ಲಣ್ಣ ಬೆಳ್ಳಾವಿ ನರಹರಿ ಶಾಸ್ತ್ರಿ, ಬಿ.ಎಂ.ಶ್ರೀಕಂಠಯ್ಯ,ತಿ.ನಂ.ಶ್ರೀಕಂಠಯ್ಯ, ನರಸಿಂಹಚಾರ್, ರಾಘವಾಚಾರ್, ಬಿ.ಶಿವಮೂರ್ತಿಶಾಸ್ತ್ರಿ ಮುಂತಾದವರು ಶ್ರಮಿಸಿದ್ದಾರೆ. ಅಲ್ಲದೆ ಅಮೂಲ್ಯ ಸೇವೆಯ ಮೂಲಕ ತಾಳಕೆರೆ ಸುಬ್ರಮಣ್ಯ, ಬಾಣಸಂದ್ರದ ಹುಚ್ಚೆಗೌಡ, ಗುಬ್ಬಿ ತೋಂಟದಪ್ಪ, ನಿಡಸಾಲೆ ಚನ್ನಂಜಪ್ಪನವರು, ನಿಟ್ಟೂರು ಶ್ರೀನಿವಾಸರಾಯರು, ಜಿಲ್ಲೆಗಷ್ಟೆ ಅಲ್ಲದೆ ನಾಡಿಗೂ ಕೀರ್ತಿತಂದಿದ್ದಾರೆ.

ತುಮಕೂರು ಪ್ರಸಿದ್ಧ ವಿದ್ಯಾಕೇಂದ್ರವಾಗಿದ್ದು ಶ್ರೀ ಸಿದ್ಧಗಂಗಾ ಮತ್ತು ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳು ಪ್ರಮುಖವಾಗಿವೆ. ವೈದ್ಯಕೀಯ, ಇಂಜಿನಿಯರಿಂಗ್ ಹಾಗೂ ಶಿಕ್ಷಕರ ಶಿಕ್ಷಣ ಕಾಲೇಜುಗಳಿದ್ದು, ತುಮಕೂರು ವಿಶ್ವವಿದ್ಯಾನಿಲಯ ಆರಂಭವಾಗಿರುವುದು ವಿಶೇಷವಾಗಿದೆ.

ಸಮೃದ್ಧ ಇತಿಹಾಸ ಪರಂಪರೆ ಹೊಂದಿರುವ ಈ ಜಿಲ್ಲೆ ಅಭಿವೃದ್ಧಿಯತ್ತ ಮುನ್ನಡೆಯುತ್ತಿದೆ.

ತುಮಕೂರು ತಾಲ್ಲೂಕು ಕಿರುಪರಿಚಯ

ತುಮಕೂರು ಮೊದಲ ಹೆಸರು ತುಮ್ಮೆಗೂರು, ಎಂದು ಕ್ರಿ.ಶ. ೯೯೫ ರಲ್ಲಿ ನಿರ್ಮಿಸಲಾದ ಸೋಮೇಶ್ವರ ದೇವಾಲಯದ ಕಲ್ಲಿನ ಶಾಸನದಲ್ಲಿ ಕಾಣಬಹುದು. ಈ ಹೇರಳವಾಗಿ ತುಂಬೆ ಹೂ ಬಿಡುತ್ತಿದ್ದುದರಿಂದಲೂ ಆ ಹೆಸರು ಬಂದಿದೆ ಎಂಬ ಪ್ರತೀತಿಯಿದೆ. ಮತ್ತೊಂದು ಹೆಸರು ಟುಮುಕಿಹಳ್ಳಿ, ಸಮೀಪದ ಕೈದಾಳ (ಕ್ರೀಡಾಪುರ) ದಲ್ಲಿದ್ದ ಹೋಯ್ಸಳ ಸಾಮಂತನಾದ ಬಾಚಿದೇವ ಎಂಬುವನ ಶತೃಗಳ ದಾಳಿಯ ಬಗ್ಗೆ ಎಚ್ಚರಿಕೆ ನೀಡಲು ತಮಟೆ (ಟುಮುಕಿ) ಹೊಡೆಯುವ ಕಾವಲುಗಾರರನ್ನು ಇಲ್ಲಿ ನೆಲೆಗೊಳಿಸಿದ್ದರಿಂದ ಈ ಹೆಸರು ಬಂದಿದೆ. ತುಮಕೂರು ಪ್ರಮುಖ ಶಿಕ್ಷಣ ಕೇಂದ್ರವಾಗಿದ್ದು, ಈ ತಾಲ್ಲೂಕಿನಲ್ಲಿ ಹಲವಾರು ಶಾಸನಗಳು ದೊರೆತಿವೆ.