ಕೋಲೊಂದರಲ್ಲಿ ಹಲವು ಕುಲದ ಗೋವುಗಳ ಚಲಿಸದೆ ನಿಲಿಸುವಂತೆ,
ಏಕಚಿತ್ತನಾಗಿ, ಸರ್ವ ವಿಕಾರಂಗಳ ಕಟ್ಟುವಡೆದು
ಇಂದ್ರಿಯಗಳ ಇಚ್ಛೆಯಲ್ಲಿ ತ್ರಿವಿಧವ ಹಿಡಿದಿರುವರ ಸಂದಿಯಲ್ಲಿ ನುಸುಳದೆ
ವಸ್ತುವಿನ ಅಂಗದಲ್ಲಿಯೆ ತನ್ನಂಗ ತಲ್ಲೀಯವಾಗಿಪ್ಪುದೆ
ಮಹಾನಿಜದ ನೆಲೆ
ಗೋಪತಿನಾಥ ವಿಶ್ವೇಶ್ವರ ಲಿಂಗವನರಿವುದಕ್ಕೆ ಇದೆ ಬಟ್ಟೆ       (ವ. ೭)

ಇದು ಬಸವಣ್ಣನವರ ಸಮಕಾಲೀನನಾದ ತುರುಗಾಹಿ ರಾಮಣ್ಣ ಎಂಬ ವಚನಕಾರನ  ಒಂದು ವಚನ. ಇದರಲ್ಲಿ ಸಾಧಕನಾದ ಶರಣನೊಬ್ಬನು ‘ಮಹಾನಿಜದ ನೆಲೆ’ಯಾದ ಗೋಪತಿ ವಿಶ್ವೇಶ್ವರಲಿಂಗವನ್ನು ಅರಿತು-ಬೆರೆಯುವ ದಾರಿ ಯಾವುದು ಎಂಬ ಆಧ್ಯಾತ್ಮಿಕ ಅನುಭವವನ್ನು ತುಂಬ ಖಚಿತವಾದ ಧ್ವನಿಯಲ್ಲಿ ತನ್ನ ಕಾಯಕದ ಪರಿಭಾಷೆಯ ಮೂಲಕ ಅಭಿವ್ಯಕ್ತ ಪಡಿಸಿದ್ದಾನೆ.

ತುರುಗಾಹಿ ರಾಮಣ್ಣನ ವಚನಗಳ ಸಂಖ್ಯೆ ಈಗ ಉಪಲಬ್ಧರಾಗಿರುವಂತೆ ಕೇವಲ ನಲವತ್ತೆ ದು. ಕವಿಚರಿತಕಾರರಾದ ಶ್ರೀಆರ್. ನರಸಿಂಹಾಚಾರ್ಯರು ‘ಈತನ ಕಾಲ ೧೧೬೦ ಎಂದು ಹೇಳಿ, ಇವನ ವಚನಗಳ ಸಂಖ್ಯೆ ೪೫; ಇವನ ವಚನಗಳಲ್ಲಿ ಗೋಪತಿನಾಥ ವಿಶ್ವೇಶ್ವರ ಲಿಂಗ ಎಂಬ ಅಂಕಿತವಿದೆ’ -ಎಂಬ ಇಷ್ಟು ಸಂಗತಿಯನ್ನು ತಿಳಿಸಿ, ಆತನ ಎರಡು ವಚನಗಳನ್ನು ಉಲ್ಲೇಖಿಸುತ್ತಾರೆ. ಅನಂತರ ತುರುಗಾಹಿ ರಾಮಣ್ಣನ ೪೫ ವಚನಗಳನ್ನು ಶ್ರೀ ಡಿ.ಎಲ್. ನರಸಿಂಹಾಚಾರ್ಯರು, ಶರಣ ಸಾಹಿತ್ಯ ಕಾರ್ಯಾಲಯದ ಶ್ರೀ ಬಿ. ಶಿವಮೂರ್ತಿ ಶಾಸ್ತ್ರಿಗಳವರಿಗೆ ದೊರಕಿಸಿಕೊಟ್ಟ ಕಾರಣದಿಂದ, ಶಾಸ್ತ್ರಿಗಳು ೧೯೫೦ರಲ್ಲಿ ‘ತುರುಗಾಹಿ ರಾಮಣ್ಣನ ವಚನ’ಗಳು ಎಂಬ ಹೆಸರಿನ ಕಿರು ಸಂಗ್ರಹವೊಂದನ್ನು ಪ್ರಕಟಿಸಿದ್ದಾರೆ. ಮುಂದೆ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ಸಮಗ್ರ ವಚನ ವಾಙ್ಮಯ ಪ್ರಕಟಣ ಯೋಜನೆಯಲ್ಲಿ, ಡಾ|| ಎಂ.ಎಸ್. ಸುಂಕಾಪುರ ಅವರ ಸಂಪಾದಕತ್ವದಲ್ಲಿ ಪ್ರಕಟವಾದ ‘ಸಕಲ ಪುರಾತನರ ವಚನಗಳು’ ದ್ವಿತೀಯ ಸಂಪುಟ (೧೯೭೬)ದಲ್ಲಿ ‘ತುಱುಗಾಹಿ ರಾಮಣ್ಣನ ವಚನಗಳು’ ಎಂಬ ವಿಭಾಗದಲ್ಲಿ, ಹಿಂದೆ ಶಿವಮೂರ್ತಿ ಶಾಸ್ತ್ರಿಗಳು ಪ್ರಕಟಿಸಿದ ಅವೇ

ನಲವತ್ತೆ ದು ವಚನಗಳು, ಹೆಚ್ಚು ಕಡಿಮೆ ಯಥಾವತ್ತಾಗಿ ಪ್ರಕಟವಾಗಿವೆ.

ತುರುಗಾಹಿ ರಾಮಣ್ಣನು ಬಸವಣ್ಣನವರ ಕಾಲದಲ್ಲಿ, ಅಂದಿನ ಸಮಾಜದ ಕೆಳಗಿನ ಸ್ತರದಿಂದ ಬಂದ ಅನೇಕ ವಚನಕಾರರಲ್ಲಿ ಒಬ್ಬ. ಈತ ಬಸವಣ್ಣನವರ ಸಮಕಾಲೀನನಾಗಿದ್ದ ಎಂಬುದನ್ನು, ಆತನ ಒಂದು ವಚನ ದಾಖಲಿಸುತ್ತದೆ. ಕಲ್ಯಾಣ ಕ್ರಾಂತಿಯ ಅನಂತರ, ಹಿರಿಯ ಶರಣರು ಹೇಗೆ ಮತ್ತು ಎಲ್ಲೆಲ್ಲಿಗೆ ಕಲ್ಯಾಣವನ್ನು ಬಿಟ್ಟು ಹೋದರು ಎಂಬುದನ್ನು ಕುರಿತು-

ಸಬಂದಿತ್ತು ದಿನ, ಬಸವಣ್ಣ ಕಲ್ಲಿಗೆ
ಚೆನ್ನಬಸವಣ್ಣ ಉಳುವೆಯಲ್ಲಿಗೆ
ಪ್ರಭು, ಅಕ್ಕ, ಕದಳೀದ್ವಾರಕ್ಕೆ
ಮಿಕ್ಕಾದ ಪ್ರಮಥರೆಲ್ಲರೂ ತಮ್ಮ ಲಕ್ಷಕ್ಕೆ
ನಾ ತುರುವಿನ ಬೆಂಬಳಿಯಲ್ಲಿ, ಹೋದ ಮರೆಯಲ್ಲಿ
ಅಡಗಿಹ
[]ರೆಲ್ಲರು ಅಡಗಿದುದ ಕೇಳಿ ನಾ
ಗೋಪತಿನಾಥ ವಿಶ್ವೇಶ್ವರ ಲಿಂಗದಲ್ಲಿಯೆ ಉಡುಗುವೆನು (ವ. ೪೫)

ಎಂಬ ಈ ವಚನ ಹೇಳುತ್ತದೆ. ‘ಬಂದಿತ್ತು ದಿನ’ ಎಂಬ ಮಾತು ಕಲ್ಯಾಣ ಕ್ರಾಂತಿಯ ಕೊನೆಯ ಆ ಅನಿವಾರ್ಯದ ದಿನ ಬಂದೇ ಬಂದಿತು ಎನ್ನುವುದನ್ನೂ, ಆಗ ‘ಬಸವಣ್ಣ ಕಲ್ಲಿಗೆ’ ಎಂದರೆ ಬಸವಣ್ಣನವರು ಕೂಡಲ ಸಂಗಮಕ್ಕೆ (ಇಲ್ಲಿ ಕಲ್ಲಿಗೆ ಎಂಬ ಪದದ ಅರ್ಥ ಸಂದಿಗ್ಧವಾಗಿದೆ), ಚೆನ್ನಬಸವಣ್ಣ ಉಳುವೆಗೆ, ಪ್ರಭು ಅಕ್ಕಮಹಾದೇವಿ ಇವರು ಶ್ರೀ ಶೈಲದ ಕದಳೀ ವನಕ್ಕೆ, ಮಿಕ್ಕ ಶರಣರೆಲ್ಲರೂ ತಮ್ಮ ತಮ್ಮ ಗುರಿಗಳ ಕಡೆ ಹೋದರು. ಅದನ್ನು ಕೇಳಿ ನಾನು ತುರುವಿನ ಬೆಂಬಳಿಯಲ್ಲಿ ಹೋಗಿ ನನ್ನ ಇಷ್ಟ ದೈವವಾದ ಗೋಪತಿನಾಥ ವಿಶ್ವೇಶ್ವರ ಲಿಂಗದಲ್ಲಿ ಐಕ್ಯವಾಗುತ್ತೇನೆ- (ಉಡುಗು, ಎಂದರೆ ಸಂಕೋಚಗೊಳ್ಳು, ಕಿರಿದಾಗು ಎಂದು ಅರ್ಥವಿದೆ. ಅದು ‘ಅಡಗು’ ಎಂದಿದ್ದರೆ, ಅರ್ಥ ಸ್ಪಷ್ಟವಾಗುತ್ತಿತ್ತು, ಈಗಲೂ ‘ಉಡುಗು’ ಎಂಬ ಪದದಿಂದ ಮುಖ್ಯಾರ್ಥಕ್ಕೆ ಅಂತಹ ಬಾಧೆಯೇನೂ ಇಲ್ಲ)- ಎಂಬುದು ಈ ವಚನ ತಿಳಿಯಪಡಿಸುವ ಐತಿಹಾಸಿಕ ಸಂಗತಿ. ಈ ವಚನದ ಸಂದರ್ಭದಿಂದ ತುರುಗಾಹಿ ರಾಮಣ್ಣ ಬಸವಣ್ಣನವರ ಸಮಕಾಲೀನ ಎಂಬುದು ಸ್ಪಷ್ಟವಾಗುತ್ತದೆ.

ಈಗ ದೊರಕಿರುವ ೪೫ ವಚನಗಳು, ತುರುಗಾಹಿ ರಾಮಣ್ಣನನ್ನು ಕುರಿತ ಮೊದಲ ಉಲ್ಲೇಖವಾಗಿದೆ. ಆಶ್ಚರ್ಯದ ಸಂಗತಿ ಎಂದರೆ, ಹರಿಹರನಿಂದ ಮೊದಲುಗೊಂಡು ಬೇರೆ   ಯಾವ ವೀರಶೈವ ಕವಿಗಳೂ ಈತನನ್ನು ಕುರಿತು ಬರೆದಿಲ್ಲ.

ತುರುಗಾಹಿ ರಾಮಣ್ಣ, ಆತನ ಹೆಸರೇ ಸೂಚಿಸುವಂತೆ, ಶರಣರ ಮನೆಯ ದನಗಳನ್ನು ಕಾಯುವ ವೃತ್ತಿಯವನು. ಬಸವಣ್ಣನವರ ಕಾಲದಲ್ಲಿ, ಸಾಮಾಜಿಕ-ಧಾರ್ಮಿಕ ಸ್ವರೂಪದ ಚಳುವಳಿಯೊಳಕ್ಕೆ ಇವನಂತೆಯೇ ಅಂದಿನ ಸಮಾಜದ ವಿವಿಧ ವೃತ್ತಿಗಳವರು ಬಂದು ಸೇರಿಕೊಂಡರೆಂಬುದು ತಿಳಿದ ವಿಚಾರವಾಗಿದೆ. ಅಂಬಿಗರ ಚೌಡಯ್ಯ, ಸುಂಕದ ಬಂಕಣ್ಣ.  ಮಾದಾರ ಚೆನ್ನಯ್ಯ, ಮೇದರ ಕೇತಯ್ಯ, ಮಡಿವಾಳ ಮಾಚಯ್ಯ, ಜೇಡರ ದಾಸಿಮಯ್ಯ, ಹಡಪದ ಅಪ್ಪಣ್ಣ, ಡಕ್ಕೆಯ ಮಾರಯ್ಯ, ಕದರಿ ರೆಮ್ಮವ್ವೆ, ಮೋಳಿಗೆ ಮಾರಯ್ಯ-ಈ ಕೆಲವು ಹೆಸರುಗಳನ್ನು ಗಮನಿಸಿದರೆ, ಅವರ ಹೆಸರಿನ ಮೊದಲರ್ಧ ಅವರು ಅಂದಿನ ಸಾಮಾಜಿಕ ಪರಿಸರದಲ್ಲಿ ಕೈಕೊಂಡ ವೃತ್ತಿಗಳನ್ನು ಸೂಚಿಸುತ್ತದೆ. ಈ ವಿವಿಧ ವೃತ್ತಿಗಳು ಶರಣಧರ್ಮ ಒದಗಿಸಿದ ಸಮಾನತೆಯ ನೆಲೆಯಲ್ಲಿ, ‘ಕಾಯಕ’ಗಳಾಗಿ ಪರಿವರ್ತಿತವಾದ ಕಾರಣದಿಂದ, ಅದುವರೆಗೂ ತಮ್ಮ ತಮ್ಮ ವೃತ್ತಿಗಳೊಂದಿಗೆ ಸಂಗಡಿಸಿಕೊಂಡು ಬಂದ ಕೀಳರಿಮೆಗಳನ್ನು ಕಳೆದುಕೊಂಡು, ಈ ಸಾಮಾನ್ಯ ಜನ ಒಂದು ಬಗೆಯ ಆತ್ಮಪ್ರತ್ಯಯವನ್ನೂ ಪ್ರತಿಭಟನೆಯ ದನಿಯನ್ನೂ ಪಡೆದು ಕೊಂಡರು. ಅಂದಿನ ಸಮಾಜದ ಮೇಲುವರ್ಗದಿಂದ ಬಂದ ಚೆನ್ನಬಸವ, ಬಸವ, ಅಲ್ಲಮ, ಅಕ್ಕಮಹಾದೇವಿ ಇವರಂತೆಯೇ, ಇವರ ಜತೆಗೆ ಒಂದಾಗಿ ಈ ವಚನಕಾರರೂ ಏಕಕಾಲಕ್ಕೆ ಆಧ್ಯಾತ್ಮ ಸಾಧಕರೂ, ಸಮಾಜದ ಸುಧಾರಕರೂ ಆಗಿ, ತಮ್ಮ ತಮ್ಮ ಅನುಭವಗಳನ್ನೂ, ಪ್ರತಿಕ್ರಿಯೆಗಳನ್ನೂ ವಚನ ಎಂಬ ವಿಶಿಷ್ಟಾಭಿವ್ಯಕ್ತಿಯಲ್ಲಿ ತೋಡಿ ಕೊಂಡವರಾಗಿದ್ದಾರೆ. ಅಂದಿನ ಸಮಾಜದ ಮೇಲು ವರ್ಗದಿಂದ ಬಂದ ವಚನಕಾರರಿಗೆ ಹೋಲಿಸಿದರೆ, ಕೆಳವರ್ಗದಿಂದ ಬಂದ ವಚನಕಾರರ ವಿಶಿಷ್ಟ ಲಕ್ಷಣ ಮೂರು ರೀತಿಯವು: ಮೊದಲನೆಯದು, ಈ ವಚನಕಾರರೊಳಗಿನ ಬಂಡಾಯದ ದನಿ ಅಥವಾ ಪರಂಪರೆ ಹಾಗೂ ಪ್ರಸ್ತುತ ವ್ಯವಸ್ಥೆಯನ್ನು ಕುರಿತ ಪ್ರತಿಭಟನೆಯ ದನಿ, ಮೇಲುವರ್ಗದಿಂದ ಬಂದ ವಚನಕಾರರಲ್ಲಿಗಿಂತ ಹೆಚ್ಚು ಪ್ರಮಾಣದ್ದಾಗಿದೆ; ಎರಡನೆಯದಾಗಿ, ಈ ವಚನಕಾರರು ಹೆಚ್ಚು ಸಂಖ್ಯೆಯ ಬೆಡಗಿನ ವಚನಗಳನ್ನು ಬರದೆವರಾಗಿದ್ದಾರೆ; ಮೂರನೆಯದಾಗಿ, ಬಹು ಮಟ್ಟಿಗೆ ತಮ್ಮ ತಮ್ಮ ಕಾಯಕದ ಅನುಭವಗಳಿಂದ ರೂಪುಗೊಂಡ ದೃಷ್ಟಾಂತ, ಸಂಕೇತ, ಪ್ರತೀಕಗಳ ಮೂಲಕ ತಮ್ಮ ವಚನಾಭಿವ್ಯಕ್ತಿಗಳನ್ನು ರೂಪಿಸಿಕೊಂಡಿದ್ದಾರೆ. ಇದರಿಂದಾಗಿ ತಮ್ಮ ತಮ್ಮ ವೃತ್ತಿಗಳು ಅಥವಾ ಕಾಯಕಗಳು, ಬೇರೊಂದು ಆಧ್ಯಾತ್ಮಿಕ ನಿಲುವಿಗೆ ಸಂಕೇತಗಳಾಗುವುದರ ಮೂಲಕ, ವ್ಯಕ್ತಿಯಲ್ಲಿ ವೃತ್ತಿ ಹಾಗೂ ಪ್ರವೃತ್ತಿಗಳ ಏಕರೂಪತೆಯನ್ನು ಸಾಧಿಸಿಕೊಳ್ಳುವ ವಿಧಾನಗಳೂ ಆಗುತ್ತವೆ. ಅಂಬಿಗರ ಚೌಡಯ್ಯ ದೋಣಿಯನ್ನು ನಡೆಯಿಸುತ್ತಾ ನಡೆಯಿಸುತ್ತಾ, ತನ್ನ ಆ ಕಾಯಕಕ್ಕೆ ಇರುವ ಅನುಭಾವಿಕ ಸಂಕೇತವನ್ನು ಕಂಡುಕೊಳ್ಳುತ್ತಾನೆ; ದೋಣಿ ನಡೆಯಿಸುವ ಕೆಲಸ ಮೇಲೆ ನೋಡಲು ಒಂದು ‘ವೃತ್ತಿ’ಯಂತೆ ಕಂಡರೂ, ಅದು ತನ್ನನ್ನೂ ಇತರರನ್ನೂ ಈ ಸಂಸಾರ ಸಾಗರದಲ್ಲಿ ಕಡೆಹಾಯಿಸುವ ಒಂದು ಆಧ್ಯಾತ್ಮಿಕ ಸಾಧನೆಯಂತೆ ಬೇರೊಂದು ನಿಲುವಿಗೆ ಗೋಚರಿಸುತ್ತದೆ; ಬೊಕ್ಕಸದ ಚಿಕ್ಕಣ್ಣ, ಅರಮನೆಯ ಬೊಕ್ಕಸದ ಹಣವನ್ನು ಎಣಿಸುವ ಹಾಗೂ ವಿತರಣೆ ಮಾಡುವ ಕೆಲಸವನ್ನು ಮಾಡುತ್ತ ಮಾಡುತ್ತ, ಈ ಮನುಷ್ಯ ಶರೀರವೇ ಪರಮಾನುಭವದ ಬೊಕ್ಕಸವಾಗಿರುವಾಗ ಇದನ್ನು ತೆರೆಯುವ ಕೀಲಿಕೈ ಇಲ್ಲವಲ್ಲ ಎಂಬ ಬೇರೊಂದು ‘ಅರ್ಥ’ವನ್ನು ಕಂಡುಕೊಳ್ಳುತ್ತಾನೆ; ಸುಂಕ ವಸೂಲ್ಮಾಡುವ ಬಂಕಣ್ಣನ ಪಾಲಿಗೆ, ಮನುಷ್ಯನ ಜೀವನವೆನ್ನುವುದು ಭಕ್ತಿರೂಪದ ಸುಂಕವನ್ನು ಕೊಟ್ಟು ದೇವನನ್ನು ಒಲಿಸಿಕೊಳ್ಳಬೇಕಾದ ಒಂದು ವ್ಯವಹಾರ- ಎಂಬ ಸತ್ಯ ಗೋಚರಿಸುತ್ತದೆ. ಹೀಗೆ ಮಾಡುವ ಮಾಟದಿಂದಲೇ ಬೇರೊಂದನ್ನು ಅರಿಯುವ, ವಿಧಾನವಾಗಿದೆ. ಹೀಗೆ, ವಿವಿಧ ವೃತ್ತಿಗಳಿಂದ ಬಂದು, ಸಾಧಕರಾದ ಈ ಶರಣರು, ತಮ್ಮ ತಮ್ಮ ಕಾಯಕದ ಅನುಭವಗಳಿಂದಲೇ ತಮ್ಮ ಅಭಿವ್ಯಕ್ತಿಯ ಸಾಮಗ್ರಿಯನ್ನು ರೂಪಿಸಿಕೊಂಡವರಾಗಿದ್ದಾರೆ ಎನ್ನುವುದು ಒಂದು ವಿಶೇಷದ ಸಂಗತಿಯಾಗಿದೆ. ಈ ಸರಣಿಗೆ ಸೇರುವ ಶರಣರಲ್ಲಿ ತುರುಗಾಹಿ ರಾಮಣ್ಣನೂ ಒಬ್ಬ. ಕಲ್ಯಾಣದಲ್ಲಿ ಶರಣರ ದನಗಳನ್ನು, ಮುಖ್ಯವಾಗಿ ಹಸು, ಎತ್ತು, ಕರುಗಳನ್ನು (‘ಎಮ್ಮೆಕೋಣ ಕುಲವ ನಾ ಕಾಯಲಿಲ್ಲ; ಅವು ಎನ್ನ ತುರುವಿಗೆ ಹೊರಗು’- ಎನ್ನುತ್ತಾನೆ) ಕಾಯುವ ‘ಕಾಯಕ’ದವನು. ಅವನು ಬರೆದ ಒಟ್ಟು ನಲವತ್ತೆ ದು ವಚನಗಳಲ್ಲಿ, ತನ್ನ ಕಾಯಕದ ಅನುಭವದ ಮೂಲ ಮಾನದಲ್ಲಿ ಬರೆದ ವಚನಗಳೇ  ಹದಿನೈದರಷ್ಟಿವೆ. ಕೆಲವು ಬೆಡಗಿನ ವಚನಗಳೂ ಇವೆ. ಇನ್ನು ಕೆಲವು ಆತನ ಆಧ್ಯಾತ್ಮಿಕ ಅನುಭವಗಳನ್ನು ಕುರಿತವು. ಆದರೆ ಸಾಮಾಜಿಕವಾದ, ಹಾಗೂ ಪ್ರತಿಭಟನೆಯ ದನಿಯ ಒಂದು ವಚನವೂ ಇಲ್ಲ. ಅದಕ್ಕೆ ಕಾರಣ ಈತನ ಬದುಕಿನ ಬಹು ಭಾಗ, ತುರುಮಂದೆಯ ಜತೆಗೆ ಬೆಳಗಿಂದ ಸಂಜೆಯತನಕ ಊರಿನಾಚೆಯ ಪರಿಸರದಲ್ಲಿದ್ದುದೇ ಇರಬಹುದು. ಈತ ದನಗಳನ್ನು ಕಾಯುತ್ತಾ ಕಾಯುತ್ತಾ, ತನ್ನ ದನಗಾಹಿತನದ ಅನುಭವಗಳನ್ನು, ತನ್ನ ಅಂತರಂಗದ ಕಾಮನೆಗಳನ್ನು ಕಾಯುವ ಹಾಗೂ ಪಳಗಿಸುವ ಕ್ರಿಯೆಗೆ ಸಂಕೇತವನ್ನಾಗಿ ತನ್ನ ವಚನಗಳಲ್ಲಿ  ಬಳಸುತ್ತಾನೆ. ಅವನ ಈ ಕಾಯಕದ ವಚನಗಳಲ್ಲಿ ಮೇಲಿನ ಅರ್ಥ, ದನಗಳನ್ನು ಕಾಯುವ ‘ವೃತ್ತಿ’ಯನ್ನೂ, ಅದರೊಳಗೆ ಅವನ ತುರುಮುಂದೆ ಎದುರಿಸಬೇಕಾದ ಕಷ್ಟಗಳನ್ನೂ ಸೂಚಿಸಿದರೆ, ಒಳಗಿನ ಅರ್ಥ ಇಂದ್ರಿಯಗಳನ್ನೂ, ಅದಕ್ಕೆ ಅಧೀನವಾದ ಮನಸ್ಸಿನ ಹಾಗೂ ವ್ಯಕ್ತಿತ್ವದ ಚಾಂಚಲ್ಯಗಳನ್ನೂ ಪಳಗಿಸುವ ಆಧ್ಯಾತ್ಮಿಕ ಸಾಧನೆಗಳನ್ನು ಸಾಂಕೇತಿಸುತ್ತದೆ. ತಾನು ಈ ದನಗಳನ್ನು ಕಾಯಲು ‘ಹಸುವಿಗೆ ಹಾಗ (ನಾಲ್ಕಾಣೆ), ಎತ್ತಿಗೆ ಹಣವಡ್ಡ (ಏಳಾಣೆ), ಮತ್ತು ಕರುವಿಗೆ ಮೂರು ಹಣ’ (ವ.೧) ವನ್ನು ಕೂಲಿಯನ್ನಾಗಿ ಪಡೆಯುತ್ತಾನಂತೆ; ಅವನ ಕೆಲಸ ‘ನಾನಾ ವರ್ಣದ ಹುಲ್ಲಮೇದು’ (ವ.೨), ನೀರಡಸಿ, ಅಲೆದಾಡುವ ಈ ತುರುಗಳನ್ನು ‘ತೊಂಡುಹೋಗದಂತೆ ಕಾಯ್ದು’ (ವ.೨) ಗೋಪತಿನಾಥ ವಿಶ್ವೇಶ್ವರ ಲಿಂಗಕ್ಕೆ ಒಪ್ಪಿಸುವುದು. ಈ ಕೆಲಸ ಸುಲಭದ್ದಲ್ಲ. ಯಾಕೆಂದರೆ ‘ಮೂರು ಬೆಟ್ಟದ ತಪ್ಪಲಿನ ಮಧ್ಯದಲ್ಲಿ, ದೊಡ್ಡ ಹುಲಿ ಹುಟ್ಟಿ ಹಾಯಿತ್ತು ಹಸುವ…. ಮಧ್ಯದ ಬೆಟ್ಟದಲ್ಲಿ ಹುಟ್ಟಿದ ತೋಳ ಹಿಡಿಯಿತ್ತು ಕರುವಿನ ಕೊರಳ’ (ವ. ೧೫). ಈ ಕೆಲವು ವಚನಗಳ ಮೂಲಕ, ಆಧ್ಯಾತ್ಮಿಕ ಸಾಧಕನೊಬ್ಬ ತನ್ನ ಸಾಧನೆಯ ಹಾದಿಯಲ್ಲಿ ಎದುರಿಸಬೇಕಾಗಿ ಬಂದ ಕಷ್ಟಗಳನ್ನು ಸಂಕೇತ ಭಾಷೆಯಲ್ಲಿ ಅಭಿವ್ಯಕ್ತ ಪಡಿಸುತ್ತವೆ. ತುರುಗಳನ್ನು ಕಾಯುವ ಇಡೀ ‘ವೃತ್ತಿ’ಯೇ ಸಾಧಕನಾದವನಿಗೆ ತನ್ನ ಅಂತರಂಗದ ಬದುಕಿನ ‘ಪ್ರವೃತ್ತಿ’ಯೂ ಆಗಿರುವುದು ಗಮನಿಸಬೇಕಾದ ಸಂಗತಿಯಾಗಿದೆ. ತುರುಗಳನ್ನು ಮೇಯಿಸುವ ಸಾಮಾನ್ಯ ವ್ಯಕ್ತಿಯೊಬ್ಬ, ಅನುಭಾವಿಯೂ ಆಗಿ ರೂಪುಗೊಂಡನೆಂಬುದು ಸಾಮಾನ್ಯವಾದ ಸಂಗತಿಯಲ್ಲ.

ತುರುಗಾಹಿಕೆಯನ್ನು ತನ್ನ ಕಾಯಕವನ್ನಾಗಿ ಮಾಡಿಕೊಂಡ ವಚನಕಾರ ಬಹುಶಃ ರಾಮಣ್ಣನೊಬ್ಬನೇ ಎಂದು ಕಾಣುತ್ತದೆ. ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಈ ಬಗೆಯ ಕಾಯಕವನ್ನು ಕೈಕೊಂಡ ಇನ್ನೂ ಮೂವರು ಶರಣರು ನಮ್ಮ ಗಮನಕ್ಕೆ ಬಂದಿದ್ದಾರೆ. ಅವರಲ್ಲಿ ಒಬ್ಬ ಆನಯನಾರ್; ಮತ್ತೊಬ್ಬ ಮುಗ್ಧ ಸಂಗಮ; ಇನ್ನೊಬ್ಬ ತುರುಗಾಹಿ ಮಾರಣ್ಣ. ಆನಯನಾರ್ ಪುರಾತನ ಶರಣ. ಇವನನ್ನು ಕುರಿತು ಹರಿಹರನು ಒಂದು ರಗಳೆಯನ್ನು ಬರೆದಿದ್ದಾನೆ. ಚೋಳ ದೇಶದ ಮಂಗಳಪುರದಲ್ಲಿ ಹುಟ್ಟಿದ ಈತ, ಹುಟ್ಟಿದಂದಿನಿಂದ ಪಂಚಾಕ್ಷರಿ ಜಪ ಮಾಡುತ್ತಾ, ಊರ ಗೋವುಗಳನ್ನು ಕಾಯುತ್ತಿದ್ದ. ಒಂದೊಂದು ಗೋಜನ್ಮವನ್ನು ತಾಳಿದ ಋಷಿಗಳೆಲ್ಲರೂ ಬಂದು, ಜೀವದನಗಳಾಗಿ, ಈತನ ಮಂದೆಯಲ್ಲಿ ಸೇರಿಕೊಳ್ಳುತ್ತಾರೆ. ಈತನ ಕೊಳಲ ದನಿಗೆ ಮರುಳಾಗಿ ಗೋವುಗಳೆಲ್ಲವೂ ಅವನ ಸುತ್ತ ಬಂದು ಮೇವು ಮರೆತು ಆಲಿಸುತ್ತ ನಿಲ್ಲುತ್ತವೆ. ಗೋವುಗಳು ಮಾತ್ರವಲ್ಲ ಅಳಿಕುಳಗಳೂ, ತರುಗಿರಿಗಳೂ ಈತನ ಕೊಳಲ ದನಿಗೆ ಮುಗ್ಧವಾಗುತ್ತವೆ. ಹೀಗೆ ಗೋವುಗಳನ್ನು ಕಾಯುತ್ತಾ-

‘ತನ್ನ ಗೋವಂ ಕಾವ ಇದಿರಗೋವಂ ಸೋವ
ಉನ್ನತಯಶಂ ಜಿತೇಂದ್ರಿಯನಾಗುತುಂ ಕಾವ
ಅವರಿಚ್ಛೆ ತಾನಲ್ಲ, ತನ್ನಿಚ್ಛೆ ಗೋವಾಗಿ
ಭವನಿಚ್ಛೆ ತಾನಾಗಿ ತನ್ನಿಚ್ಛೆಭವನಾಗಿ
ಪಂಚಾಕ್ಷರಿಗಳಲ್ಲಿ ತೀವಿ ಕೊಳಲೂದುವಂ
ಪಂಚವದನಂಗಳೊಳ್ಪೊಕ್ಕು ಕೊಳಲೂದುವಂ’
[1]

ಹೀಗೆ ಆನಯನಾರ್ ತನ್ನ ‘ಕಾಯಕ’ವನ್ನು ಮಾಡುತ್ತಾನೆ. ಇಲ್ಲಿಯೂ ಗೋವುಗಳನ್ನು ಕಾಯುವ ಕ್ರಿಯೆ, ತನ್ನ ಇಂದ್ರಿಯಗಳನ್ನು ಹಾಗೂ ಮನಸ್ಸನ್ನು ಕಾಯ್ದುಕೊಳ್ಳುವ ಸಾಧಕನ ಪ್ರಯತ್ನದ ಸಂಕೇತವಾಗಿದೆ ಎನ್ನುವುದನ್ನು ಗಮನಿಸಬಹುದು. ಹೀಗೆ ತುರುಗಳನ್ನು ಕಾಯುವ ಆನಯನಾರನನ್ನು ಪರೀಕ್ಷಿಸಲು ಶಿವನೇ ಬಂದು ಕಕ್ಕೆಯ ಮರವೊಂದರಲ್ಲಿ ಅಡಗಿ ಕೂರುತ್ತಾನೆ. ಆನಯನಾರನ ಕೊಳಲ ದನಿಗೆ ಶಿವನೇ ಮರುಳಾಗಿ ಮೈದೋರಿ ಒಲಿದಪ್ಪಿಕೊಳ್ಳುತ್ತಾನೆ. ಜೀವದನಗಳ ರೂಪವನ್ನು ತಾಳಿದ ಋಷಿಗಳೆಲ್ಲರೂ ಸ್ವಸ್ವರೂಪದಲ್ಲಿ ನಿಂತು ಶಿವನ ದರ್ಶನದಿಂದ ಪುನೀತರಾಗುತ್ತಾರೆ. ಶಿವ ಆನಯನಾರನನ್ನು ಕೈಲಾಸಕ್ಕೆ ಕರೆದುಕೊಂಡು ಹೋಗುತ್ತಾನೆ.[2]

ತುರುಗಾಹಿ ಕಾಯಕದ ಮತ್ತೊಬ್ಬ ಶರಣ ಮುಗ್ಧಸಂಗಮ. ಉಪ್ಪುರಗಟ್ಟಿ ಎಂಬ ಊರಿನಲ್ಲಿದ್ದ ಈ ಶರಣನು ಊರದನಗಳನ್ನು ಕಾಯುವ ಕೆಲಸದಲ್ಲಿ ತೊಡಗಿರುವಾಗ, ಶ್ರೀಶೈಲಕ್ಕೆ ಹೊರಟ ಯಾತ್ರಿಕರ ತಂಡವೊಂದು ಕಾಣಿಸಲಾಗಿ, ಅವರ ಹಿಂದೆಯೇ ಅರುವತ್ತು ಗಾವುದವನ್ನು ಒಂದೇ ದಿನದಲ್ಲಿ ನಡೆದು ದೇವರ ದರ್ಶನ ಮಾಡಿ ಕೊಂಡು ಹಿಂದಕ್ಕೆ ಬರುತ್ತಾನೆ.[3] ಇನ್ನೊಬ್ಬ ತುರುಗಾಹಿ ಮಾರಣ್ಣ. ದನಕಾಯುವ ಕಾಯಕದಿಂದ ಗುರುಲಿಂಗ ಜಂಗಮರ ಸೇವೆ ಮಾಡಿದ.[4]

ತುರುಗಾಹಿ ರಾಮಣ್ಣನ ಕಾಯಕದ ವಚನಗಳ ಮೂಲಕವಾಗಿ, ದೇವ-ಜೀವರ ಸಂಬಂಧವನ್ನು, ಪಶು ಮತ್ತು ಪಶುಪತಿಯ ಸಂಬಂಧವನ್ನಾಗಿ ಭಾವಿಸುವ ನಿಲುವೊಂದು ಪ್ರತೀತವಾಗುತ್ತದೆ. ಜೀವಿಗಳೆಲ್ಲರೂ ತುರುಗಳು ಅಥವಾ ಪಶುಗಳು. ಈ ಪಶುಗಳನ್ನು ‘ತೊಂಡು ಹೋಗದಂತೆ’ ಕಾಯ್ದು ಗೋಪತಿನಾಥ ವಿಶ್ವೇಶ್ವರ ಲಿಂಗಕ್ಕೆ ಒಪ್ಪಿಸಬೇಕು ಎಂಬ ಈ ಪರಿಕಲ್ಪನೆ, ಮುಖ್ಯವಾಗಿ ಜೀವರನ್ನು ಪಶುಗಳೆಂದೂ ದೇವರನ್ನು ಪಶುಪತಿ ಎಂದೂ ಭಾವಿಸುವ ‘ಪಾಶುಪತ’ ಎಂಬ ಶೈವಸಿದ್ಧಾಂತವೊಂದನ್ನು ನೆನಪಿಗೆ ತರುತ್ತದೆ. ತುರುಗಾಹಿ ರಾಮಣ್ಣನ ವಚನಗಳ ಅಂಕಿತವಾದ ‘ಗೋಪತಿನಾಥ’ ಎನ್ನುವುದು ಪಾಶುಪತ ಶೈವದ ಶಿವನ ಕಲ್ಪನೆಯನ್ನೇ ಸಮರ್ಥಿಸುತ್ತದೆ.

ಕರ್ನಾಟಕದಲ್ಲಿ ವೀರಶೈವವು ಒಂದು ನಿರ್ದಿಷ್ಟ ರೂಪವನ್ನು ತಾಳಿ, ಸಾಮಾಜಿಕ- ಧಾರ್ಮಿಕ, ಆಂದೋಳನವಾದದ್ದರ ಹಿನ್ನೆಲೆಯಲ್ಲಿ, ಜೈನಧರ್ಮವೂ, ಮತ್ತು ಲಕುಲೀಶ, ಪಾಶುಪತ, ಕಾಪಾಲಿಕ ಕಾಳಾಮುಖಗಳೆಂಬ ಶೈವಧರ್ಮ ಪಂಥಗಳೂ ಪ್ರಭಾವಶಾಲಿ- ಯಾಗಿದ್ದವು. ಈ ಜೈನೇತರ ಧರ್ಮಗಳ ಹಲವು ಅಂಶಗಳನ್ನು ವೀರಶೈವವು ತನ್ನೊಳಗೆ ಅಳವಡಿಸಿಕೊಂಡಿತೆಂಬುದನ್ನು ಈಗಾಗಲೇ ಹಲವು ವಿದ್ವಾಂಸರು ಗುರುತಿಸಿದ್ದಾರೆ.[5] ಇವುಗಳಲ್ಲಿ ಪಾಶುಪತದ ಪ್ರಭಾವವನ್ನು ಶಿವಶರಣರ ಅನೇಕ ವಚನಗಳಲ್ಲಿ ಗುರುತಿಸಬಹುದು. ಪಾಶುಪತದ ಪ್ರಕಾರ ಪ್ರತಿಯೊಂದು ಜೀವಿಯೂ ಪಶು; ಅವರನ್ನು ಕಟ್ಟಿ ಹಾಕಿರುವುದು ಪಾಶ; ಈ ಜೀವಿಗಳ  ಒಡೆಯ ಪಶುಪತಿ. ಜೀವನನ್ನು ಕಟ್ಟಿ ಹಾಕಿರುವ ಪಾಶವನ್ನು ಕತ್ತರಿಸಲು, ಪಶುಪತಿಗೆ ಜೀವವು ಶರಣಾಗಬೇಕು. ಇದು ಪಾಶುಪತ ಧರ್ಮದ ತಿರುಳು. ತನ್ನನ್ನು ಪಶು ಎಂದುಕೊಳ್ಳುವ, ಶಿವನನ್ನು ಪಶುಪತಿ ಎಂದು ಭಾವಿಸುವ ಅನೇಕ ಉಕ್ತಿಗಳು ಹಲವು ವಚನಕಾರರಲ್ಲಿ ಕಂಡುಬರುವುದನ್ನು ನೋಡಿದರೆ, ಪಾಶುಪತದ ಪ್ರಧಾನವನ್ನು ಈ ಶರಣ ಧರ್ಮ ಸ್ವೀಕರಿಸಿತೆನ್ನುವ ಸಂಗತಿ ಸ್ಪಷ್ಟವಾಗುತ್ತದೆ. ‘ಪಶುವಾನು, ಪಶುಪತಿ ನೀನು’ (ವ. ೫೩). ‘ಬಡಪಶು ಪಂಕದಲ್ಲಿ ಬಿದ್ದರೆ ಕಾಲ ಬಡಿವುದಲ್ಲದೆ ಬೇರೆ ಗತಿಯುಂಟೆ’ (ವ. ೫೩) ‘ಅಡವಿಯೊಳಗೆ ಹೊಲಬುಗೆಟ್ಟ ಪಶುವಿನಂತೆ’ (ವ. ೫೪) ‘ಕೆಸರಲ್ಲಿ ಬಿದ್ದ ಬಡಪಶುವಿನಂತೆ ಆನು ದೆಸೆದೆಸೆಗೆ ಬಾಯಬಿಡುತ್ತಿದ್ದೇನೆ ಅಯ್ಯಾ’ (ವ. ೫೨) -ಎಂಬ ಇಂಥ ಕೆಲವು ಉಕ್ತಿಗಳಲ್ಲಿ ಬಸವಣ್ಣನವರು ತಮ್ಮನ್ನು ‘ಪಶು’ ಎಂಬ ಸಂಕೇತದಲ್ಲಿ ಕರೆದುಕೊಂಡಿರುವುದನ್ನು ಗಮನಿಸಬಹುದು. ಹಾಗೆಯೇ ಕೋಲಶಾಂತಯ್ಯನೆಂಬ ಶರಣ ‘ಗೋವು ಮೊದಲು ಚತುಷ್ಪಾದಿ ಜೀವಂಗಳು ತಾವು ಬಂದ ಹಾದಿಯ ಮೂಸಿ ನೋಡಿ ಬೀಡಿಂಗೆ ಹೋಹಂತೆ, ಆ ಪರಿ ನಿನಗಿಲ್ಲ’ (ಸ.ಪು.ವ. ೯೪) ಎನ್ನುತ್ತಾನೆ. ಮೋಳಿಗೆ ಮಾರಯ್ಯನವರು ತಮ್ಮದೊಂದು ವಚನದಲ್ಲಿ ‘ಐದುವರ್ಣದ ಪಶುವಿನ ಬಸುರಿನಲ್ಲಿ ಮೂರುವರ್ಣದ ಕರುಹುಟ್ಟಿ, ಒಂದೇ ವರ್ಣದ ಹಾಲ ಸೇವಿಸಿ ಹಲವು ಹೊಲನಲ್ಲಿ ತಿರುಗಾಡುತಿದ್ದಿತು, ನಿಃಕಳಂಕ ಮಲ್ಲಿಕಾರ್ಜುನ ಲಿಂಗದ ಕುಳದ ಹೊಲಬುಗಾಣದೆ’ (ಸ.ಪು.ವ. ೫೫೯) ಎನ್ನುತ್ತಾರೆ. ಗುಪ್ತಮಂಚಣ್ಣನ ವಚನವೊಂದರಲ್ಲಿ ‘ಸಕಲ ಜೀವದ ಆಧಾರ ಗೋಮಯ ಗೋಕುಲಕ್ಕೆ ಒಡೆಯ ಗೋಪತಿಧರ ಗೋಪ್ರಾಣ ಸ್ವರೂಪನಾದ ರಾಮನಾಥ (ಸ.ಪು.ವ. ದ್ವಿತೀಯ ಸಂಪುಟ ವ. ೫೮೫)ನನ್ನು ಕುರಿತು ನೆನಕೆಯಿದೆ. ‘ವಿಶೇಷಾನುಭವ ಷಟ್‌ಸ್ಥಲ’ (ಸಂ. ಡಾ. ಆರ್.ಸಿ. ಹಿರೇಮಠ, ಕ.ವಿ.ವಿ. ೧೯೭೧)ದಲ್ಲಿ ‘ವಸುಧೆಯೊಳಗುಬ್ಬಸವಾದ ಪ್ರಾಣಿಗಳನ್ನೆಲ್ಲ ವಶಕ್ಕೆ ತಂದು ಕಾವ ಗೋವ’ ಎಂಬುದಕ್ಕೆ, ‘ಜಗದೊಳಗೆ ಘೋರ ಸಂಸಾರ ದುಃಖಕ್ಕೊಳಗಾದ ಸಕಲಾತ್ಮರ…. ನಡಸುವ ಪಶುಪತಿಯೆ ಶಿವ’ (ವ.೧೦) ಎಂಬ ಟೀಕೆಯಿದೆ. ನಮ್ಮಗಮನಕ್ಕೆ ಬಂದ ಈ ಕೆಲವು ಸಂಗತಿಗಳನ್ನು ನೋಡಿದರೆ, ಜೀವನನ್ನು ‘ಪಶು’ ಎಂದೂ ಪರಮಾತ್ಮನನ್ನು ‘ಪಶುಪತಿ’ ಎಂದೂ ಭಾವಿಸುವ ಈ ಕಲ್ಪನೆ ನೇರವಾಗಿ ಪಾಶುಪತ ಶೈವ ಸಿದ್ಧಾಂತದಿಂದ ಸ್ವೀಕೃತವಾದದ್ದು, ಎನ್ನುವುದರಲ್ಲಿ ಸಂದೇಹವೆ ಇಲ್ಲ. ತುರುಗಾಹಿ ರಾಮಣ್ಣನ ವಚನಗಳ ತಾತ್ವಿಕ ನೆಲೆಗಟ್ಟು ಮೂಲತಃ ಪಾಶುಪತದ್ದೇ ಆಗಿರುವಂತೆ ತೋರುತ್ತದೆ.

ಈ ಹಿನ್ನೆಲೆಯಿಂದ ಚಿಂತನೆಗಾಗಿ ಪ್ರಸ್ತುತ ವಚನವನ್ನು ಕುರಿತು ಪರಿಶೀಲಿಸಬಹುದು:

ಕೋಲೊಂದರಲ್ಲಿ ಹಲವು ಕುಲದ ಗೋವುಗಳ ಚಲಿಸದೆ ನಿಲಿಸುವಂತೆ
ಏಕಚಿತ್ತನಾಗಿ, ಸರ್ವವಿಕಾರಂಗಳ ಕಟ್ಟುವಡೆದು
ಇಂದ್ರಿಯಗಳ ಇಚ್ಛೆಯಲ್ಲಿ ತ್ರಿವಿಧವ ಹಿಡಿದಿರುವರ ಸಂದಿಯಲ್ಲಿ ನುಸುಳದೆ
ವಸ್ತುವಿನ ಅಂಗದಲ್ಲಿಯೆ ತನ್ನಂಗ ತಲ್ಲೀಯವಾಗಿಪ್ಪುದೆ
ಮಹಾನಿಜದ ನೆಲೆ
ಗೋಪತಿನಾಥ ವಿಶ್ವೇಶ್ವರ ಲಿಂಗವನರಿವುದಕ್ಕೆ ಇದೆ ಬಟ್ಟೆ       (ವ.೭)

ಈ ವಚನದಲ್ಲಿ ಪರಂಪರಾಗತವಾದ ಹಾಗೂ ವೀರಶೈವಕ್ಕೇ ವಿಶಿಷ್ಟವಾದ ಕೆಲವು ಪಾರಿಭಾಷಿಕ ಶಬ್ದಗಳಿವೆ. ‘ವಸ್ತು’ ಎಂಬ ಪದವಿದೆ; ‘ತ್ರಿವಿಧ’ ಎಂಬ ಪದವಿದೆ; ‘ನಿಜದ ನೆಲೆ’ ಎಂಬ ಪದವಿದೆ, ‘ಅಂಗ’ ಮತ್ತು ‘ಲಿಂಗ’ ಎಂಬ ಪದಗಳೂ ಇವೆ. ‘ವಸ್ತು’ ಎಂದರೆ ದೇವರು. ದೇವರೆಂಬ ಕಲ್ಪನೆಯನ್ನು ಭಾರತೀಯ ವೇದಾಂತ ‘ವಸ್ತು’ ‘ಪರವಸ್ತು’ ಎಂದು ನಿರ್ದೇಶಿಸುತ್ತದೆ. ಈ ಪದವನ್ನು ಶರಣರು ನೇರವಾಗಿ ಭಾರತೀಯ ವೇದಾಂತದಿಂದ ಸ್ವೀಕರಿಸಿದ್ದಾರೆ. ಅದನ್ನೆ ‘ಲಿಂಗ’ ಎಂದೂ ಕರೆದಿದ್ದಾರೆ. ‘ಪ್ರಥಮದಲ್ಲಿ ವಸ್ತು ದಿವ್ಯ ನಿರಾಲಂಬ ಸ್ಥಾನದಲ್ಲಿ, ನಿತ್ಯ ನಿರಂಜನವಾಗಿ ಮಹಾಶೂನ್ಯಾಕಾರಮಂ ತಾಳಿ ನಿಷ್ಕಲವೆನಿಸಿ ನಿಜಲೀಲೆಯಿಂದಖಂಡ ತೇಜೋಮೂರ್ತಿಯಾಗಿ ಸಕಲ ನಿಷ್ಕಲರೂಪಿನಿಂ ಸಹಜ ಸ್ವಭಾವದಿಂ ನಟಿಸುತ್ತಿರ್ಪುದು’[6] ಎಂದು ವಸ್ತುವಿನ ಲೀಲಾವಿನೋದ ಸ್ವರೂಪವನ್ನು ವರ್ಣಿಸಲಾಗಿದೆ. ಇದನ್ನೇ ‘ಘನವಸ್ತು’ ‘ನಿಜವಸ್ತು’ ‘ಅನಾದಿ ವಸ್ತು’ ‘ನಿರಂಜನ ವಸ್ತು’ ಎಂದು ಕರೆಯಲಾಗಿದೆ, “ಇಂತು ಮಹಾಘನವಸ್ತು ತನ್ನ ಲೀಲಾ ಶಕ್ತಿಯಿಂ ಪಂಚಭೂತಾದಿ ಜಗತ್ಪ್ರಪಂಚಮಂ ರಚಿಸಿ ನಿರ್ಲೇಪದಿಂ ಪ್ರೇರಕವಾಗಿ ವಿನೋದಿಸುತಿರ್ದುದೆಂತನೆ”[7] ಎಂದು, ಆ ಪರವಸ್ತುವೇ ದೃಶ್ಯ ಪ್ರಪಂಚವೂ ಆಗಿ ಅದನ್ನು ಪ್ರೇರೇಪಿಸುವ ಪರಿಯನ್ನು ವ್ಯಾಖ್ಯಾನಿಸಲಾಗಿದೆ. ಈ ಮಹಾ ಘನವಸ್ತುವನ್ನೆ ಈ ವಚನದಲ್ಲಿ ‘ಮಹಾನಿಜದ ನೆಲೆ’ ಎಂದೂ ನಿರ್ದೇಶಿಸಲಾಗಿದೆ. ಇನ್ನು ‘ಅಂಗ’ ಎಂಬುದು ಶರೀರಧಾರಿಯಾದ ‘ಜೀವ’ನನ್ನೂ, ‘ಲಿಂಗ’ ಎಂಬುದು, ಆ ಪರಾತ್ಪರ ಘನವಸ್ತುವನ್ನೂ ಸೂಚಿಸುತ್ತದೆ. ವೀರಶೈವದ ಪ್ರಕಾರ ಈ ಅಂಗವೂ ಆ ಲಿಂಗದಲ್ಲಿ ಸಾಮರಸ್ಯವನ್ನು ಪಡೆಯುವುದೆ ಅನುಭಾವದ ಗುರಿಯಾಗಿದೆ. ಅದೇ ‘ಅರಿವು’. ಈ ವಚನದಲ್ಲಿ ‘ತ್ರಿವಿಧ’ ಎಂಬ ಇನ್ನೊಂದು ಪದವಿದೆ, ಅದಕ್ಕೆ ವೀರಶೈವ ಸಿದ್ಧಾಂತದಲ್ಲಿ ಹದಿನಾರು ಅರ್ಥಚ್ಛಾಯೆಗಳಿವೆ.[8] ಅವುಗಳಲ್ಲಿ ಈ ವಚನದ ಅರ್ಥೈಸುವಿಕೆಗೆ ಯಾವುದು ಸೂಕ್ತ ಎಂಬುದನ್ನು ವಿವರಣೆಯ ಸಂದರ್ಭದಲ್ಲಿ ನೋಡೋಣ.

ಈ ವಚನ ಮುಖ್ಯವಾಗಿ ಚಿತ್ತವೃತ್ತಿಗಳನ್ನು ಯೋಗಮಾರ್ಗದಲ್ಲಿ ಪಳಗಿಸಿ ತನ್ನ ಇಷ್ಟದೈವದ ನೆನಹಿನಲ್ಲಿ ನಿಲ್ಲಿಸುವ ಕ್ರಮವನ್ನು ಕುರಿತದ್ದಾಗಿದೆ. ಆ ಕ್ರಮವನ್ನು ತುರುಗಾಹಿ ರಾಮಣ್ಣನು ತನ್ನ ಕಾಯಕದ ಪರಿಭಾಷೆಯ ಒಂದು ದೃಷ್ಟಾಂತದ ಮೂಲಕ ಮಂಡಿಸುತ್ತಾನೆ. ಗೋವುಗಳನ್ನು ಕಾಯುವ ‘ತುರುಗಾಹಿ’ ಒಂದೇ ಕೋಲಿನ ಮೂಲಕ ಹಲವು ಕುಲದ ಗೋವುಗಳನ್ನು ಅತ್ತಿತ್ತ ಹೋಗದಂತೆ ಒಂದು ಕಡೆಗೆ ತರುಬಿ ನಿಲ್ಲಿಸುವಂತೆ, ಹಲವು ದೆಸೆಗೆ ಹರಿದು ಹೋಗುವ ಚಿತ್ತವೃತ್ತಿಗಳನ್ನು ಏಕಾಗ್ರತೆಗೆ ತರಬೇಕು ಎಂದು ಹೇಳುತ್ತಾನೆ. ಇಲ್ಲಿ ಸಾಧಕನು ತನ್ನನ್ನೂ, ಮತ್ತು ತನ್ನನ್ನು ನಿಯಂತ್ರಿಸುವ ಅಂತರಂಗದ ಕಾಮನೆಗಳನ್ನು ಹಾಗೂ ವಿಕಾರಗಳನ್ನು ಪಶುವಿಗೆ ಹೋಲಿಸಿಕೊಳ್ಳುತ್ತಾನೆ. ಈ ಹೋಲಿಕೆ ಅವನಿಗೆ ತನ್ನ ದೈನಂದಿನ ಕಾಯಕದ ಅನುಭವದಿಂದ ನೇರವಾಗಿ ಬಂದದ್ದು. ಅವನಿಗೆ, ತಾನು ದಿನವೂ ಕಾಯುವ ಗೋವುಗಳ ಸ್ವಭಾವ ಚಿರಪರಿಚಿತವಾದದ್ದು. ಮನಸ್ಸೂ ಕೂಡಾ ಈ ಪಶುಗಳ ಹಾಗೆ ಹತ್ತು ದಿಕ್ಕಿಗೆ ಹರಿದು ಹೋಗುವಂಥದ್ದು. ತುರುಗಾಹಿ ರಾಮಣ್ಣ ಬೇರೊಂದೆಡೆ ಈ ಗೋವುಗಳು ‘ನಾನಾ ವರ್ಣದ ಹುಲ್ಲಮೇದು’ (ವ.೩) ದಾರಿ ತಪ್ಪುವ ಸಂಗತಿಯನ್ನು ಪ್ರಸ್ತಾಪಿಸುತ್ತಾನೆ. ಇಲ್ಲಿ ಬರುವ ‘ನಾನಾ ವರ್ಣದ ಹುಲ್ಲು’ ಎಂಬ ಮಾತು ಸಹಜವಾಗಿಯೆ, ಬಸವಣ್ಣನವರ ವಚನವೊಂದರಲ್ಲಿ ಬರುವ ‘ನಾನಾವರ್ಣದ ಸಂಸಾರ’ ಎಂಬ ಮಾತನ್ನು ನೆನಪಿಗೆ ತರುತ್ತದೆ. ಹಾಗೆಯೇ ‘ವಿಷಯವೆಂಬ ಹಸುರನೆನ್ನ ಮುಂದೆ ಪಸರಿಸದಿರಯ್ಯ, ಹಸುವೇನಬಲ್ಲುದು ಹಸುರೆಂದೆಳಸುವುದು.’ (ವ. ೫೧) ಎಂಬ ಉಕ್ತಿಯೂ ನೆನಪಿಗೆ ಬರುತ್ತದೆ. ತುರುಗಾಹಿ ರಾಮಣ್ಣನ ವಚನಗಳ ಮೇಲೆ ಬಸವಣ್ಣನವರ ಈ ‘ಪ್ರತೀಕ’ಕ್ಕೆ ಸಂಬಂಧಿಸಿದ ವಚನಗಳ ಪ್ರಭಾವಗಳಿದ್ದರೂ, ತುರುಗಾಹಿ ರಾಮಣ್ಣನ ‘ನಾನಾವರ್ಣದ ಹುಲ್ಲುಮೇದು’ ಎಂಬ ಮಾತು ಹೆಚ್ಚು ಅರ್ಥವತ್ತಾದ ಉಕ್ತಿಯಾಗಿದೆ. ಹೀಗೆ ನಾನಾವರ್ಣದ ಹುಲ್ಲುಮೇಯುತ್ತ ಎಲ್ಲೆಂದರೆ ಅಲ್ಲಿ ಅಲೆಯುವ ಈ ಗೋವುಗಳನ್ನು ‘ತೊಂಡು ಹೋಗದಂತೆ ಕಾಯ್ದೊಪ್ಪಿಸಬೇಕು, ಗೋಪತಿನಾಥ ವಿಶ್ವೇಶ್ವರಲಿಂಗದಲ್ಲಿ’, ಎಂಬ ತುರುಗಾಹಿ ರಾಮಣ್ಣನ ಉಕ್ತಿಯು ಆತನ ಆಧ್ಯಾತ್ಮಿಕ ವ್ಯಕ್ತಿತ್ವದ ಧ್ಯೇಯವನ್ನು ಸ್ಪಷ್ಟವಾಗಿ ಹಿಡಿದಿಡುವ ಒಂದು ಪ್ರತೀಕವಾಗಿದೆ. ಪ್ರಸ್ತುತ ವಚನದ ಮೊದಲ ಪಂಕ್ತಿಯ ಉಪಮೆಯೂ ಇದನ್ನೇ ಕುರಿತದ್ದು. ಈ ಪಂಕ್ತಿಯಲ್ಲಿ ‘ಹಲವು ಕುಲದ ಗೋವುಗಳು’ ಹತ್ತು ದಿಕ್ಕಿಗೆ ಎಳೆಯುವ ಹಲವು ಚಿತ್ತವೃತ್ತಿಗಳಿಗೆ ಸಂಕೇತವಾದರೆ, ಒಂದೆ ಕೋಲು, ಅಥವಾ ಕೋಲೊಂದರಲ್ಲಿ ಎಂಬ ಉಕ್ತಿಯೊಳಗಿರುವ ‘ಕೋಲು’ ಮನಸ್ಸನ್ನು ನಿಯಂತ್ರಿಸುವ ಇಚ್ಛಾಶಕ್ತಿಗೆ ಅಥವಾ ದೃಢವಾದ ಸಂಕಲ್ಪಕ್ಕೆ ಸಂಕೇತವಾಗಿದೆ. ಮೊದಲ ಒಂದೂಕಾಲು ಪಂಕ್ತಿಯಷ್ಟೇ ಸಾಂಕೇತಿಕ ಅಭಿವ್ಯಕ್ತಿಗೆ ಒಳಪಡುವಂಥದ್ದು; ಇನ್ನುಳಿದದ್ದೆಲ್ಲ ನೇರವಾದ ಒಂದು ಆಧ್ಯಾತ್ಮಿಕ ತಿಳಿವಳಿಕೆಯನ್ನು ಇತರರಿಗೆ ಹೇಳುವ ಕ್ರಮವನ್ನು ಕುರಿತದ್ದು.

ಕೋಲೊಂದರಲ್ಲಿ ಹಲವು ಕುಲದ ಗೋವುಗಳನ್ನು ಚಲಿಸದೆ ನಿಲಿಸುವಂತೆ, ದೃಢವಾದ ಸಂಕಲ್ಪದ ಮೂಲಕ ಚಿತ್ತವೃತ್ತಿಗಳನ್ನು ನಿರೋಧಿಸಬೇಕು. ಹೀಗೆ ಅದು ಏಕಾಗ್ರತೆಗೆ ಬಂದಾಗ ಅದು ಎಲ್ಲ ಬಗೆಯ, ವಿಕಾರಗಳಿಂದಲೂ (ಕಟ್ಟುವಡೆದು) ಬಿಡುಗಡೆಯನ್ನು ಪಡೆದು ಒಂದು ನಿಶ್ಚಿತ ನೆಲೆಗೆ ಬರುತ್ತದೆ.

ಮುಂದಿನ ಹೆಜ್ಜೆಯೆಂದರೆ, ಹೀಗೆ ಒಂದು ನಿಶ್ಚಿತ ನೆಲೆಗೆ ಬಂದ ಅಥವಾ ತಂದು ಕೊಂಡ ಈ ಮನಸ್ಸು ಯಾವುದೇ ಕಾರಣಕ್ಕೆ ಮತ್ತೆ ‘ಇಂದ್ರಿಯಗಳ ಇಚ್ಛೆಯಲ್ಲಿ ತ್ರಿವಿಧವ ಹಿಡಿದಿರುವರ ಸಂಧಿಯಲ್ಲಿ ನುಸುಳದೆ, ವಸ್ತುವಿನ ಅಂಗದಲ್ಲಿಯೇ ತಲ್ಲೀನ’ವಾಗಬೇಕು. ಎಂದರೆ ಈ ಮನಸ್ಸು ‘ಇಂದ್ರಿಯಗಳ ಹಿಂದೆ’ ಹೋಗಬಾರದು; ಇಂದ್ರಿಯಗಳು ಮನಸ್ಸಿಗೆ ಅಧೀನವಾಗಿರಬೇಕು. ಹಾಗೆ ಇಂದ್ರಿಯಗಳ ಇಚ್ಛೆಗೆ ಮನಸ್ಸು ಅಧೀನವಾಯಿತೋ ಆಗ ಅದು ‘ತ್ರಿವಿಧವ ಹಿಡಿದಿರುವರ ಸಂದಿಯಲ್ಲಿ’ ಎಂದರೆ ‘ಹೊನ್ನು, ಹೆಣ್ಣು, ಮಣ್ಣು’ಗಳೆಂಬ ತ್ರಿವಿಧಗಳನ್ನು ಭದ್ರವಾಗಿ ಹಿಡಿದುಕೊಂಡ ಪ್ರಾಪಂಚಿಕರ ಸಂದಿಯಲ್ಲಿ ನುಗ್ಗಿ ತಪ್ಪಿಸಿಕೊಂಡು ಹೋಗುತ್ತದೆ. ಹಾಗೆ ಒಮ್ಮೆ ವಶವರ್ತಿಯಾದ ಮನಸ್ಸನ್ನು ಪ್ರಾಪಂಚಿಕ ವಿಷಯಗಳ ಕಡೆಗೆ ನುಸುಳಿಹೋಗಲು  ಬಿಡದೆ, ಅದನ್ನು ಆ ಪರವಸ್ತುವಿನ ಅಂಗದಲ್ಲಿ, ತನ್ನ ‘ಅಂಗ’ ಎಂದರೆ ವ್ಯಕ್ತಿತ್ವ ಸಮಸ್ತವನ್ನೂ ಲೀನಗೊಳಿಸುವ ಅಥವಾ ಸಾಮರಸ್ಯಗೊಳಿಸುವುದೇ ಆ ‘ಮಹಾ ನಿಜದ ನೆಲೆ’ಯಾದ ಗೋಪತಿನಾಥ ಲಿಂಗವನ್ನು ಅರಿಯುವುದಕ್ಕೆ ಇರುವ ಏಕೈಕ ಮಾರ್ಗ.

ಈ ವಚನ ಮುಖ್ಯವಾಗಿ ಲಿಂಗಾಂಗ ಸಾಮರಸ್ಯ ತತ್ವವನ್ನು ವಿವರಿಸುವ ಸ್ವರೂಪದ್ದಾಗಿದೆ.

ವಚನ ಚಿಂತನ (೧೯೯೨)

* * *


[1] ಹರಿಹರನ ರಗಳೆಗಳು : ಭಾಗ ೧; ಪಿ.ಜಿ. ಹಳಕಟ್ಟಿ-ಪುಟ ೫೯.

[2] ಉತ್ತರ ದೇಶದ ಬಸವಲಿಂಗ ದೇವರ ‘ಕಥಾಸಾಗರ’ದಲ್ಲಿ, ಪಾಲ್ಕುರಿಕೆ ಸೋಮನಾಥನ ‘ಸೋಮೇಶ್ವರ ಪುರಾಣ’ದಲ್ಲಿ, ಗುಬ್ಬಿ ಮಲ್ಲಣಾರ್ಯನ ‘ವೀರಶೈವಾಮೃತ ಮಹಾಪುರಾಣ’ದಲ್ಲಿ, ‘ತ್ರಿಶಷ್ಠಿ ಪುರಾತನವಿಲಾಸ’ದಲ್ಲಿ ಈತನ ಬಗ್ಗೆ ಉಲ್ಲೇಖಗಳಿವೆ. ನೋಡಿ : ತ.ಸು. ಶಾಮರಾಯರ ‘ಶಿವಶರಣ ಕಥಾರತ್ನಕೋಶ’ ಪು. ೩೦.

[3] ತ.ಸು. ಶಾಮರಾಯ : ಶಿವಶರಣ ಕಥಾರತ್ನಕೋಶ, ಪು. ೩೪೨

[4] ಅಲ್ಲೇ. ಪು. ೩೪೨

[5] ನೋಡಿ : ಡಾ. ಎಂ. ಚಿದಾನಂದಮೂರ್ತಿ : ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ,  ಪು. ೧೨೭-೧೨೯ ಮತ್ತು ಡಾ. ಎಸ್. ವಿದ್ಯಾಶಂಕರ : ವಚನಾನುಶೀಲನ, ಪು. ೧೭೬.

[6] ಡಾ. ಆರ್.ಸಿ. ಹಿರೇಮಠ : ವಿಶೇಷಾನುಭವ ಷಟ್‌ಸ್ಥಲ, ಪು.೯

[7] ಅಲ್ಲೆ. ಪು. ೧೮.

[8] ಡಾ. ಆರ್.ಸಿ. ಹಿರೇಮಠ : ಚೆನ್ನಬಸವಣ್ಣನವರ ವಚನಗಳು (ಪಾರಿಭಾಷಿಕ ಶಬ್ದಕೋಶ), ಪು. ೭೮೬.