ಹ್ಯಾಗಿರುವನುಗುರುಪುತ್ರ | ನಮ್ರ |

ನಾಗಿರುವನು | ಸುಪವಿತ್ರ ||ಪ||

ರಾಗದ್ವೇಷಂಗಳ | ತ್ಯಾಗವಮಾಡಿವಿ |

ರಾಗದಿಬಂದುದ | ಭೋಗಿಸಿಮುಗಿಸುವ ||ಅ|ಪ||

ತನುವಸೇವೆಯೊಳ್ದಣಿಸಿ | ತನ್ನ |

ಮನವಗುರುಬೋಧೆಯೊಳ್ತಣಿಸಿ ||

ಧನವನ್ನುಗುರುಕಾರ್ಯಕನುಕೂಲವಾಗಿಸಿ |

ತನುಮನಧನಗಳ | ಗುರುಪಾದಕರ್ಪಿಸಿ ||1||

ನಷ್ಟಕ್ಕೆಭಯಪಡದಿಹನು | ಲೋಕದಿಬಂದ |

ಕಷ್ಟಕ್ಕೆಎದೆಗೆಡದಿಹನು ||

ಎಷ್ಟುದುಃಖವುಬರ | ಲಿಷ್ಟುಹಿಂಜರಿಯನು |

ದುಷ್ಟಗುಣಗಳಮೀರಿ | ನಿಷ್ಠನಾಗಿರುವನು ||2||

ನರಹರಿಗುರುವಿನಬೋಧಾ | ಎಲ್ಲ

ನರರಿಗೆಪಾವನವೇದಾ ||

ಶರಣಜನಕಾಹ್ಲಾದ | ದುರಿತಸಂಶಯಛೇದ |

ಪರಮಾರ್ಥಸುಸ್ವಾದ | ಪರತರಪರನಾದ ||3||

ದಾನವರು ಮಾಡಿದ ವ್ಯಾಪಾರ | ಇದ

ಮಾನವರು ಹೂಡಿದ ವ್ಯವಹಾರ ||ಪ||

ಏನೇನು ಹುರುಳಿಲ್ಲ ಸಂಸಾರ | ನಿಜ |

ವೇನೊಂದು ಅರಿಯದು ಇಲ್ಲಿ ಪೂರ ||ಅ|ಪ||

ಮಾಯೆಗೆ ಮೀಸಲಾದ ಅಧಿಕಾರ | ಈ |

ಕಾಯವ ನಿರ್ಮಿಸುತ್ತಹಂಕಾರ ||

ಸಾಯುತ ಹುಟ್ಟುತಿತ್ತು ಮಮಕಾರ | ಶಿವ |

ಕಾಯುವನೆನ್ನಲಿಲ್ಲ ಬಡಿವಾರ ||1||

ಕಳ್ಳರು ಕಾಮಕ್ರೋಧ ನಿರ್ಧಾರ | ಬಲು |

ಸುಳ್ಳರು ಲೋಭ ಮೋಹ ವಿಸ್ತಾರ ||

ಕೊಳ್ಳೆಯ ಹೊಡೆದು ಮದ ಮತ್ಸರ | ಬಿಡು |

ವಿಲ್ಲದೆ ಮಾಡುತಾರೆ ದರ್ಬಾರ ||2||

ದುರುಳರ ಓಡಿಸುತ್ತ ಬಲು ದೂರ | ಶಿವ |

ಶರಣರ ಕೂಡಿ ಮಾಡು ಸುವಿಚಾರ ||

ನರಹರಿ ಇಳಿಸಿಬಿಟ್ಟ ಭವಭಾರ | ಅರೆ |

ಮರುಳರು ನಂಬಲಿಲ್ಲ ಮನಸಾರ ||3||

ಇನ್ನಿಲ್ಲ ಯಮ ಬಾಧೆಯು | ಶ್ರೀಗುರುವಿನೊ |

ಳಿನ್ನಾಯ್ತು ಘನ ಬೋಧೆಯು ||ಪ||

ತನ್ನಲ್ಲಿಯೇ ತಾನೆ | ಚನ್ನಾಗಿ ತಿಳಿಯಲು ||ಅ|ಪ||

ನಡೆಯಲ್ಲಿ ಮೌನಾ | ನುಡಿಯಲ್ಲಿ ಧ್ಯಾನಾ |

ನಡೆನುಡಿಯೆರಡರ | ನಡುವಾತ್ಮ ಸಂಧಾನ ||1||

ಹಗಲಿರುಳೊಂದೆ | ಬಗೆಯಲ್ಲಿ ಬಂದೇ ||

ಮಿಗೆ ತಿರುಗಲು ಹಿಂದೆ | ಯುಗಯುಗದಿಂದೆ ||2||

ಜಡಧಿಯೊಳ್ಮುಳುಗಿ | ಜಡತೆಯ ನೀಗಿ ||

ಕುಡಿ ಮಿಂಚಿನಂದದಿ | ಮೂಡಿದಾನಂದದಿ ||3||

ಉರಿವಗ್ನಿ ತನ್ನ | ಘೋರ ರೂಪನ್ನ ||

ಪರಿದಿಕ್ಕಿ | ಶಾಂತಿಯೊ | ಳುರಿಯಿತು ಮುನ್ನ ||4||

ಮರುತ ಸಂಚಾರ | ವಿಮಿಸಿ ಪೂರ ||

ಮರಣಕ್ಕೆ ದೂರ | ವಿರುತಿರುವದತಿಸಾರ ||5||

ಆಕಾಶ ತಾನೆ | ಏಕತ್ವವನ್ನೆ ||

ಸ್ವೀಕರಿಸಿ ನರಹರಿ | ಬೇಕೆಂದು ಬೆರೆಯೆ ||6||

ಪಂಚಬ್ರಹ್ಮರಿಗೆ | ವಂಚಿಸಿ ಹೊರಗೆ |

ಮಿಂಚಿ ಬರುತಿರುವಂಥ | ಸಂಚಿತ ನರಹರಿ ||7||

ಗುರಿಯ ಪೇಳಿರಯ್ಯ ಗುರುಪುತ್ರರಾದರೇ |

ಪಾರಮಾರ್ಥ ಬಲ್ಲ ಜ್ಞಾನವಂತರಾದರೆ ||ಪ||

ಕಿವಿಗಳಿಲ್ಲದಾತನೇನು ಕೇಳನಲ್ಲವೇ |

ಕಿವಿಗಳಾತ ನಿಲ್ಲದಿರಲು ಕೇಳಬಲ್ಲುವೇ ||

ಕಿವಿಯು ಕೇಳ್ವುದಾತನಲ್ಲಿ ಸೇರಿತಲ್ಲವೇ |

ಕಿವಿಯು ಕೇಳ್ದು ನಿರ್ಗುಣಕ್ಕೆ ಹೋಯಿತಲ್ಲವೇ ||1||

ಚರ್ಮವಿಲ್ಲದಾತನೇನನು ಮುಟ್ಟಬಲ್ಲನೇ |

ಚರ್ಮವಾತ ನಿಲ್ಲದೇನು ಮುಟ್ಟಬಲ್ಲುದೇ ||

ಚರ್ಮಸ್ಪರ್ಶಮಾಳ್ಪುದೆಲ್ಲ ಆತಗಲ್ಲವೇ |

ನಿರ್ಮಲಾತ್ಮ ನಿರ್ಗುಣವನು ಪಡೆಯಲಿಲ್ಲವೇ ||2||

ಕಣ್ಣು ಇಲ್ಲದವನು ಎಲ್ಲ ನೋಡಲಿಲ್ಲವೇ |

ಕಣ್ಣು ಆತನನ್ನು ನೋಡಲಾರದಲ್ಲವೇ ||

ಕಣ್ಣು ಕಾಣುತಿರುವುದೆಲ್ಲ ನಾಶವಲ್ಲವೇ |

ಕಣ್ಣಿನೊಳಗೆ ತಾನೆ ಸೇರಿ ಇರುವನಲ್ಲವೇ ||3||

ಜಿಹ್ವೆಯಿಲ್ಲದಾತನೇನು ರುಚಿಸಬಲ್ಲನೇ |

ಜಿಹ್ವೆಯಾತನಿಲ್ಲದಿರಲು ರುಚಿಸಬಲ್ಲುದೇ ||

ಜಿಹ್ವೆಯರಿತರ ಸಾಸ್ವಾದವಾತಗಲ್ಲವೇ |

ಸಹ್ಯ ರುಚಿಯ ನಿರ್ಗುಣಕ್ಕೆ ತಂದನಲ್ಲವೇ ||4||

ಮೂಗು ಇಲ್ಲದಾತನೇನು ಮೂಸಿನೋಳ್ಪನೇ |

ಮೂಗು ಗಂಧವರಿತುದೆಲ್ಲ ಆತಗಲ್ಲವೇ |

ಬೇಗ ನಿರ್ಗುಣಕ್ಕೆ ಆತ ಒಯ್ದನಲ್ಲವೇ ||5||

ಆತನಿಲ್ಲದಾವ ಕಾರ್ಯವಾಗದಲ್ಲವೇ |

ಆತ ಸಿಲುಕಲಿಲ್ಲವಾವ ಕರ್ಮಕಲ್ಲವೇ ||

ಆತನಿಂದ ಸಗುಣ ತೋರ್ಕೆಯಾಯಿತಲ್ಲವೇ |

ಆತ ತಾನೆ ನಿರ್ಗುಣ ನರಹರಿಯಲ್ಲವೇ ||6||

ವೇದವನೋದಿದರೇನು | ನಾದವನು ಪರಿ |

ಶೋಧಿಸದವನು ||ಪ||

ಸಾಧನೆಯಲಿ ಗುರು | ಬೋಧೆಯನರಿತು |

ಆದಿಯಲೀ ಪರ | ನಾದವ ಬಿಟ್ಟು ||ಅ|ಪ||

ಮಾತೇ ವೇದಶಾಸ್ತ್ರಗಳಾಯ್ತು |

ಮಾತೇ ಬೋಧಾ ಮಂತ್ರವಾಯ್ತು ||

ಸಾಧುಸಂತರ ಸಂಗವಾಯ್ತು | ಸಾಧನೆ ನಿಜವಾಯ್ತು ||1||

ಪೃಥ್ವಿಯಲ್ಲಿ ತಾನೆ ಆಫೋ |

ತತ್ವದಲ್ಲಿ ತಾನೆಯಿತ್ತು ||

ಹೊತ್ತಿ ಉರಿವ ವಹ್ನಿಯಲ್ಲಿ | ಸುತ್ತಿ ಸುಳಿವ ಮರುತ ||2||

ಕಣ್ಣಿನಲ್ಲಿ ಬಣ್ಣವಿತ್ತು |

ಬಣ್ಣ ನಾನಾ ರೂಪವಾಯ್ತು ||

ತನ್ನ ತಾನೇ ಕಾಣದಾಯ್ತು | ಬಣ್ಣವು ಬಯಲಾಯ್ತು ||3||

ಮೇಲುಕೀಳು ಇಲ್ಲದಾತ್ಮ |

ಲೀಲಾಜಾಲವಾಗಿ ಬೆರೆದು ||

ಕಾಲಕರ್ಮವೆಲ್ಲ ಮೀರಿ | ಸೋಲದೆ ನಿಂತಿತ್ತು ||4||

ನಂಬಿದವರಿಗಿಂಬು ಕೊಡುವ |

ಶಂಭು ತಾನೆ ತುಂಬಿಯಿರುವ |

ನೆಂಬ ಮರ್ಮ ತಿಳಿದ ಜನರ | ಬೆಂಬಲ ನರಹರಿಯು ||5||

ಸಂಸಾರ ಬಿಟ್ಟಾತ | ಸನ್ಯಾಸಿಯಲ್ಲ ||

ಸಂಸಾರ ಸನ್ಯಾಸಿಗಡ್ಡಿಯಾಗಿಲ್ಲ ||ಪ||

ಸಂಸಾರವೆಂದರೆ ಸತಿಸುತರಲ್ಲಾ |

ಸಂಸಾರ ಧನಧಾನ್ಯ ಮನೆಮಠವಲ್ಲಾ ||ಅ|ಪ||

ತನುವೊಂದೆ ಸಂಸಾರವಾಗಿಹುದಲ್ಲಾ |

ತನುವ ಬಿಟ್ಟಿರಬಲ್ಲ ಸನ್ಯಾಸಿಯಿಲ್ಲಾ ||

ತನುವನ್ಯವೆಂಬಾತ ಸಂಸಾರಿಯಲ್ಲಾ |

ತನು ತಾನೆ ಎಂದಾತ ಸನ್ಯಾಸಿಯಲ್ಲಾ ||1||

ಆಸೆಯುಳ್ಳಾತನು ಸನ್ಯಾಸಿಯಲ್ಲಾ |

ಆಸೆಯಳಿದಾತನು ಸಂಸಾರಿಯಲ್ಲಾ ||

ವೇಷ ಸನ್ಯಾಸಿಯು ಜನ್ಮ ನೀಗಿಲ್ಲಾ |

ಆಸೆಬಿಟ್ಟಾತಂಗೆ ಜನ್ಮವೆಯಿಲ್ಲಾ ||2||

ಮುಕ್ತಿಗೆ ವೈರಾಗ್ಯ ಸಾಧನವಹುದು |

ಭಕ್ತಿಗೆ ಸುಜ್ಞಾನ ಬೀಜವಾಗಿಹುದು ||

ಭಕ್ತಿಯಿಂದಲೆ ಮುಕ್ತಿ ಪಡೆಯಲುಬಹುದು |

ಮುಕ್ತಿ ನರಹರಿ ಬೋಧೆಯಿಂದಾಗುತಿಹುದು ||3||

ದೇಹವ ಜರಿಯುವೆ ಯಾಕಪ್ಪ | ಈ |

ದೇಹವು ಮುಕ್ತಿಗೆ ಬೇಕಪ್ಪ ||ಪ||

ಮೋಹವ ಬಿಟ್ಟರೆ ಸಾಕಪ್ಪ | ಸಂ |

ದೇಹವನಾಚೆಗೆ ನೂಕಪ್ಪ ||ಅ|ಪ||

ಜ್ಞಾನಕೆ ದೇಹವು ಬೇಕಪ್ಪ | ಅ |

ಜ್ಞಾನವ ಬಿಟ್ಟರೆ ಸಾಕಪ್ಪ ||

ಧ್ಯಾನಕೆ ದೇಹವು ಬೇಕಪ್ಪ | ಅಭಿ |

ಮಾನವ ಬಿಟ್ಟರೆ ಸಾಕಪ್ಪ ||1||

ದುರ್ಗುಣ ಬಿಟ್ಟಿರಬೇಕಪ್ಪ | ನೀ |

ಸದ್ಗುಣಿಯಾದರೆ ಲೇಸಪ್ಪ ||

ರಾಗವ ಬಿಟ್ಟರೆ ಸಾಕಪ್ಪ | ಅನು |

ರಾಗವು ಗುರುವಿನೊಳಿರಲಪ್ಪ ||2||

ದೇಹವು ಭಕ್ತಿಗೆ ಆಶ್ರಯವು | ಈ |

ದೇಹವು ಜ್ಞಾನಕೆ ಸಾಧನವು ||

ದೇಹವು ಜೀವನ ವಾಹನವು | ಹಂ |

ಸೋಹಂ ಭಾವವು ಶಿವಮಯವು ||3||

ಆನಂದಾತ್ಮನು ನೀನಪ್ಪ | ಪರ |

ಮಾನಂದವ ನೀ ಪಡೆಯಪ್ಪ ||

ಸ್ವಾನುಭಾವ ತುಂಬಿರಲಪ್ಪ | ಈ |

ತನುವಿಂದ ಮುಕ್ತಿಯ ಪಡೆಯಪ್ಪ ||4||

ತನು ಮೋಹವನು ನೀಗಪ್ಪಾ | ಈ |

ತನು ಪರಶಿವನ ಸೊತ್ತಪ್ಪ ||

ಚಿನ್ಮಯ ಜ್ಞಾನದಿ ನೆಲಸಪ್ಪಾ | ನಿನ್ನ |

ಧ್ಯಾನದಿ ನರಹರಿ ಇರಲಪ್ಪ ||5||

ಎಲ್ಲಿರುವಾ | ಶಿವ | ಎಲ್ಲಿರುವಾ ||

ಎಲ್ಲರ ಹೃದಯದಿ ನಿಂತಿರುವಾ ||ಪ||

ಸರ್ವೇಂದ್ರಿಯಗಳ | ನಿರ್ವಹಿಸುತ್ತಲಿ ||

ಸರ್ವಸುಖಂಗಳ | ಸಂಗ್ರಹಿಸುತ್ತಲಿ ||

ತೋರ್ವನು ಜಾಗ್ರದಿ | ಸೇರ್ವನು ಶೀಘ್ರದಿ ||1||

ಶರೀಂದ್ರಿಯಗಳು | ವಿರಮಿಸಿ ನಿಲ್ಲಲು |

ಕರಣೇಂದ್ರಿಯಗಳು | ಕಾರ್ಯ ನಿರ್ವಹಿಸಲು ||

ತೋರುವ ಕನಸದು | ಮರುಳಾಗಿರಲು ||2||

ಸಾಕಾರ ಸಗುಣವ | ಸ್ವೀಕರಿಸುವನು ||

ಜೋಕಾಗಿ ಪಡೆವ ನಿ | ರಾಕಾರ ತಾನು ||

ಶೋಕಹರನು ಶಿವ | ಏಕಾಂತ ನಿರ್ಗುಣ ||3||

ಸಗುಣವನೆಲ್ಲವ | ನಿರ್ಗುಣವೆನಿಸುವ ||

ಬಿಗಿದು ಸುಷುಪ್ತಿಯ | ಸೊಗಸುತ ತೃಪ್ತಿಯ ||

ಅಗಣಿತ ಸುಖವಾ | ಮಿಗೆ ಪೊದಿರುವಾ ||4||

ನಾದವ ಕೂಡುತ | ವೇದದೊಳಾಡುತ ||

ಶೋಧಿಸಿ ನೋಡಲು | ವಾದವೀಡಾಡಲು ||

ಬೋಧೆಯೊಳಗೆ ನಿಜಾ | ನಂದವ ಪಡೆವಾ ||5||

ಅಕ್ಷರ ಬ್ರಹ್ಮನು | ಸಾಕ್ಷಿಕ ಧರ್ಮನು ||

ಶಿಕ್ಷಣಗೈವನು | ತಕ್ಷಣ ಅರಿವನು ||

ಪಕ್ಷಿವಾಹನ ಶ್ರೀ | ನರಹರಿ ತಾನು ||6||

ಕೇಳಲಾರದೆ ಕೆಟ್ಟು ಹೋದೆನಲ್ಲಾ | ದುಃಖವು ಬಿಡಲಿಲ್ಲ ||

ತಾಳಲಾರೆನೆಂದರೆ ಕೇಳ್ವವರಿಲ್ಲ ||ಪ||

ಬಾಳುವೆಯೆಂಬುದನರ್ಥವಾಯಿತು |

ಕಾಲವೆಲ್ಲವೂ ವ್ಯರ್ಥ ಹೋಯಿತು ||

ಮೂಲ ಮಂತ್ರದ ಸೂತ್ರ ತಪ್ಪಿತು |

ಕಾಲಬಾಧೆಗೆ ಪಾತ್ರವಾಯಿತು ||ಅ|ಪ||

ನರನೆಂದೆನ್ನುತ ಜರಿದುಬಿಟ್ಟೆನಲ್ಲಾ | ಶ್ರೀ ಗುರುದೇವರನು |

ಮರೆತುಕೊಂಡು ನಾ ಬರಿದೆ ಕೆಟ್ಟೆನಲ್ಲಾ ||

ಗುರುಪದ ತೀರ್ಥವ ಜಲವೆಂದರಿದೆ |

ಗುರುಪ್ರಸಾದವನು ಮಲವಹುದೆಂದೆ ||

ಗುರುಮಂತ್ರಗಳ ನುಡಿಗಳು ಎಂದೆ |

ಗುರುಬೋಧೆಯ ನಾ ನಂಬಿಕೊಳ್ಳದೇ ||1||

ಜನ್ಮಕೋಟಿಗಳ ಕಳೆದು ಬಂದೆನಲ್ಲಾ | ಮಾನವ ಜನ್ಮದೊಳು |

ಕರ್ಮಕೋಟಲೆಯ ನೀಗಿಕೊಳ್ಳಲಿಲ್ಲಾ ||

ಧರ್ಮದರ್ಥವನು ತಿಳಿಯಲೆ ಇಲ್ಲಾ |

ನಿರ್ಮಲಾತ್ಮನೊಳು ಬೆರೆಯಲೆ ಇಲ್ಲಾ ||

ಕೂರ್ಮಕೂಪದ ನ್ಯಾಯದೊಳೆಲ್ಲಾ |

ಮರ್ಮವರಿಯದೆ ಹೋಗುವೆನಲ್ಲಾ ||2||

ವೇದಸಾರವನು ತಾನೆ ಪೇಳ್ದನಲ್ಲಾ | ಗುರು ನರಹರಿಯು |

ಬೋಧೆಯೊಳೆನ್ನಯ ಎರಕ ಹೊಯ್ದನಲ್ಲಾ ||

ಸಾಧನ ಮಾರ್ಗವ ಹಿಡಿಸಿದನಲ್ಲಾ |

ಶುದ್ಧಾತ್ಮನೆನ್ನನು ಮಾಡಿದನಲ್ಲಾ ||

ವಾದ ಭೇದಗಳ ನಳಿಸಿದನಲ್ಲಾ |

ಚಿದಾನಂದನನು ಮಾಡಿದನಲ್ಲಾ ||3||

ನೋಡೀ ಮನೆ ಎಲೆ | ಮೂಢಾತ್ಮನೇ |

ಗೂಢದಿ ಶಿವನಿರುವಂಥಾ ಮನೆ ||ಪ||

ಶಿವ ಕಟ್ಟಿದ ಮನೆ | ಶಿವ ಮುಟ್ಟಿದ ಮನೆ |

ಶಿವನೇ ಗುಟ್ಟಾಗಿರುವ ಮನೆ ||

ಶಿವ ಕೊಟ್ಟಿಹ ಮನೆ | ಶಿವ ಬಿಟ್ಟರೆ ಕೊನೆ |

ಶಿವಪಟ್ಟವ ಪಡೆವಂಥಾ ಮನೆ ||1||

ಶಿಷ್ಟಗೆ ಗುರುಮನೆ | ದುಷ್ಟಗೆ ಸೆರೆಮನೆ |

ನಿಷ್ಠಾವಂತರಿಗೆ ಗರಡೀಮನೆ ||

ಭ್ರಷ್ಟಗೆ ಬರಿ ಮನೆ | ಶ್ರೇಷ್ಠಗೆ ಅರಮನೆ |

ಸೃಷ್ಟಿಗೆ ಸೋಜಿಗ ಶಿವನ ಮನೆ ||2||

ಅರಿತರೆ ಶಿವಲೋಕ | ಮರೆತರೆ ಯಮಲೋಕ |

ದೊರಕಿಸಿ ಕೊಡುತಿರುವಂಥಾ ಮನೆ ||

ನರರಿಗೆ ಮೋಹಕ ಮನೆ | ಶರಣಗೆ ಗುರುಮನೆ |

ಮರುಳರಿಗಾಯಿತು ತವರುಮನೆ ||3||

ಏಳು ಕೋಣೆಯೊಳು | ಏಳು ದೈವಗಳು |

ಏಳು ಜ್ಯೋತಿ ಕಳೆಯುಳ್ಳಮನೆ ||

ಮೂಲ ಜ್ಯೋತಿಗಿದೇ | ಆಲಯವಾಗಿದೆ |

ಕಾಲಕಾಲಕೆ ನಿಜ ಪೂಜಾಮನೆ ||4||

ಮಂತ್ರಘೋಷಗಳು | ಸಂತತ ನಡೆಯುವ |

ಸಂತರಿಗಾಯಿತು ಶಾಂತಿಮನೆ ||

ಚಿಂತೆಗಳಲಿ ಕುದಿ | ವಂಥ ಮನುಜರಿಗೆ |

ಆತಂಕನಾಲಯವಿಂಥಾ ಮನೆ ||5||

ನಶ್ವರ ತನುವೆನಬೇಡಮ್ಮಾ | ಇದು |

ಈಶ್ವರನಾಲಯ ನೋಡಮ್ಮಾ ||ಪ||

ದೃಶ್ಯವ ನಂಬಿರಬೇಡಮ್ಮಾ | ಅ |

ದೃಶ್ಯನು ಶಿವನನು ಕೂಡಮ್ಮಾ ||ಅ|ಪ||

ದೇಹವೆ ದೇವನ ಗುಡಿಯಮ್ಮ | ಸಂ |

ದೇಹವನೀಗಲೆ ಕಳೆಯಮ್ಮಾ ||

ಮೋಹವ ಛೇದಿಸಿ ನಡೆಯಮ್ಮಾ | ನೀ |

ಸೋಹಭಾವವ ಪಡೆಯಮ್ಮಾ ||1||

ಹೊರಮನೆ ಸ್ಥೂಲದ ತನುವಮ್ಮಾ | ಒಳ |

ಗಿರುವುದೆ ಸೂಕ್ಷ್ಮದ ಮನೆಯಮ್ಮಾ ||

ಅರಮನೆ ಕಾರಣವಿಹುದಮ್ಮಾ | ನೀ |

ನಿರುವುದೆ ಮಹ ಕಾರಣವಮ್ಮಾ ||2||

ಜಪತಪ ಯೋಗಕೆ ಬೇಕಮ್ಮಾ | ತನು |

ವಿಪುಲ ವಿಜ್ಞಾನದ ಬೀಡಮ್ಮಾ ||

ಅಪರೋಕ್ಷವ ನೀ ಪಡೆಯಮ್ಮಾ | ಗುರು |

ಕೃಪೆಯೊಳು ತನುಭಾವ ನೀಗಮ್ಮಾ ||3||

ಸಾವಿಗೆ ಅಂಜುವೆ ಯಾಕಮ್ಮ | ಸಾ |

ಯುವ ದೇಹವು ನಿನದಲ್ಲಮ್ಮ ||

ಶಿವನೇ ಕೊಟ್ಟಿಹ ದೇಹವನು | ನೀ |

ಶಿವಗರ್ಪಿಸಿ ಧನ್ಯಳಾಗಮ್ಮ ||4||

ಶಾಶ್ವತ ಬ್ರಹ್ಮವ ತಿಳಿಯಮ್ಮ | ಜ್ಞಾ |

ನೈಶ್ವರ್ಯವನೀ ಗಳಿಸಮ್ಮಾ ||

ವಿಶ್ವಾಸವನು ಬೆಳೆಸಮ್ಮಾ | ಪರ |

ಮೇಶ್ವರ ಭಕ್ತರನೊಲಿಸಮ್ಮಾ ||5||

ವೇದಾಂತಾರ್ಥವ ಗ್ರಹಿಸಮ್ಮಾ | ಪರ |

ನಾದಾಂತವ ನಿರ್ವಹಿಸಮ್ಮಾ ||

ಶೋಧಿಸಿ ಶಿವನನು ಹಿಡಿಯಮ್ಮಾ | ಗುರು |

ಪಾದವ ನಂಬಿರಬೇಕಮ್ಮಾ ||6||

ಭವಸಾಗರವನು ದಾಟಮ್ಮ | ತನು |

ನಾವೆಯೆ ಸಾಧನ ನಿನಗಮ್ಮಾ ||

ಜೀವ ಭಾವವನು ಕಳೆಯಮ್ಮಾ | ನಿನ್ನ |

ಕಾವನು ನರಹರಿ ತಾನಮ್ಮಾ ||7||

ಬಾರೈಯ ಕಳಹಂಸನೆ | ಮುತ್ತಿನ | ಹಾರವ ಕೊಡು ಬೇಗನೆ ||ಪ||

ಹಾರುತ ಬಾರೈ | ಹಾರವ ತಾರೈ | ಕಾರುಣ್ಯ ಪರಮಾತ್ಮನೇ ||ಅ|ಪ||

ಮುತ್ತಿನ ಸರ ನುಂಗಿದೆ | ನೀನೇ |

ಚಿತ್ರದ ಮರೆತಂಗಿದೆ || ಮರ್ತ್ಯರು ನಂಬದ |

ಕೃತ್ಯವಗೈದೆ | ಮತ್ತೀಗತಡಮಾಡದೇ ||1||

ನೋಡಿರಿ ಕಳಹಂಸನಾ | ಸಂಶಯ |

ಮಾಡದೆ ಜಗದೀಶನಾ || ಆಡುತ ಪಾಡುತ |

ನೋಡುತ ಕೂಡುತ | ರೂಢಿಯೊಳ್ ಮೆರೆವಾತನಾ ||2||

ಜೀವನು ನೀನಲ್ಲವೇ | ಲೋಕಕೆ |

ದೇವನು ನೀನಲ್ಲವೇ || ಕೇವಲವೆನಿಸುವೆ |

ಪಾವನಗೈಯುವೆ | ಸಾವನ್ನು ಗೆಲಿದಾತನೇ ||3||

ಮೂಲಾಧಾರದಲೀ | ಇರುತಿಹೆ |

ಕಾಲ ಸ್ವರೂಪದಲೀ || ಕಾಲನ ಮೀರಿಹೆ |

ಲೀಲೆಯ ತೋರುವೆ | ಮಾಲೆಯ ಕೊಡು ಬೇಗನೇ ||4||

ಕಣ್ಣಿಗೆ ಕಣ್ಣಾಗಿಹೆ | ನಾನಾ |

ಬಣ್ಣರೂಪಗಳಾಗಿಹೆ ||ಪುಣ್ಯ ನರಹರಿ ನಿನ್ನ |

ಕಣ್ಣೊಳು ಕಂಡವ | ಧನ್ಯನು ಜಗದೊಳಗೆ ||5||

ಗಂಡ ಎಂಥವನಾದರೇನಕ್ಕ | ಮಾಡುಂಬುವಾಕೆಗೆ |

ಗಂಡ ಎಂಥವನಾದರೇನಕ್ಕ ||ಪ||

ಗಂಡ ಎಂಥವನಾದರೇನು |

ಗಂಡುಸಾಗಿ ದುಡಿಯುವಾಕೆಗೆ ||ಅ|ಪ||

ಅತ್ತೆ ಮಾವನ ಮೂಲೆಗೊತ್ತಿ ಹಿಡಿದು | ಮತ್ತಾರು ಮಂದಿ |

ಅತ್ತಿಗೆಯರ ಹಾರಿ ತಾ ಹೊಡೆದು ||

ಮತ್ತೆ ಏಳು ಮಂದಿ ಮೈದುನ | ರೆತ್ತ ಆಡದಂತೆ ಮಾಡಿ |

ಚಿತ್ತವಿಟ್ಟು ಗಂಡನ ಕೂಡಿ ನಿತ್ಯ ಬಾಳುವೆ ಮಾಡುವಾಕೆಗೆ ||1||

ಎಂಟು ಮಂದಿ ಮಕ್ಕಳನು ತಡೆದು | ಮತ್ತಾರು ಮಂದಿ |

ಭ್ರಷ್ಟ ಭಾವನವರ ಬಾಯಿ ಬಡಿದು |

ಶ್ರೇಷ್ಠ ಮಾರ್ಗ ತೋರಿದ |

ಗಂಡನ ಕೂಡ ನಿತ್ಯ ಬದುಕು ಮಾಡುವಾಕೆಗೆ ||2||

ತುರುವಪುರದ ಮರ್ಮವನು ತಿಳಿದು | ತನ್ನರುವಿನೊಳಗೆ |

ಕುರುಹು ತೋರಿ ನಿಜವ ಸಾರಿ | ಮೆರೆವ ಶ್ರೀಗುರು |

ನರಹರಿಯ ಚರಣಕಮಲ ನಂಬಿದಾಕೆಗೆ ||3||

ತಿಳಿಸುವ ಮಾತಲ್ಲ | ತಿಳಿಸದೆ | ತಿಳಿಯುವ ಮಾತಲ್ಲಾ ||ಪ||

ತಿಳಿಸದೆ ತಿಳಿಯದು | ತಿಳಿಯದೆ ಹೊಳೆಯದು |

ಹೊಳೆಯದೆ ಇಳಿಯದು | ಇಳಿಯದೆ ಉಳಿಯದು ||ಅ|ಪ||

ಬೇಧವಳಿಯಬೇಕು | ಮನದ ವಿ |

ವಾದವಳಿಯಬೇಕು || ಸಾಧುಸಂತರ ಸಂಗವ ಸಾಧಿಸಿ |

ತತ್ವದ ಹಾದಿಯ | ಮೋದದಿ ಪಿಡಿಯದೆ ||1||

ಹಮ್ಮನಳಿಯಬೇಕು | ಬ್ರಹ್ಮದ |

ಮರ್ಮ ತಿಳಿಯಬೇಕು ||

ಕರ್ಮವ ಛೇದಿಸಿ ನಿರ್ಮಮ | ಕಾರದಿ |

ಧರ್ಮವರಿತು | ಸನ್ಮಾರ್ಗವ ಹಿಡಿಯದೆ ||2||

ಸಾಧಿಸುವುದು ಮುಕ್ತಿ | ನರಹರಿ |

ಬೋಧೆಯೊಳಗೆ ಯುಕ್ತಿ ||

ನಾದಬಿಂದು ಕಳೆಗಾದಿಯ ತಿಳಿದು |

ಅರ್ಧ ಮಾತ್ರೆಯನು | ಶೋಧಿಸಿ ತಿಳಿಯದೆ ||3||

ಸತ್ಯಧರ್ಮಗಳ ನಿತ್ಯವು ಬೋಧಿಸೆ |

ತೊತ್ತಿನ ಮನಸಿಗೆ ಹಿಡೀದೀತೆ ||ಪ||

ತತ್ವದರ್ಥವ ವಿಚಿತ್ರದಿ ಬೋಧಿಸೆ

ಕತ್ತೆಯ ಮನಸಿಗೆ ಹತ್ತೀತೆ ||ಅ|ಪ||

ಪುತ್ಥಳಿ ಬೊಂಬೆಯ ಚಿತ್ರದಿ ಬಣ್ಣಿಸೆ |

ಚಿತ್ತವರಳಿ ಮಾತಾಡೀತೆ ||

ಹೀನ ಮನುಜಗೆ ಜ್ಞಾನವ ಬೋಧಿಸೆ |

ಹೀನ ವಿಷಯವು ಅಳೀದೀತೆ ||1||

ಭಾನುಪ್ರಕಾಶನ ಭಜನೆಯ ಮಾಡದೆ |

ಹೀನಗೆ ಮುಕುತಿಯು ದೊರಕೀತೆ ||

ಮಂಗಳ ಮಹಿಮನ | ಅಂಘ್ರಿಯ ಕಾಣದೆ |

ಮಂಗಗೆ ಮುಕುತಿಯು ದೊರಕೀತೆ ||2||

ಅರಿತು ಅನುಭವವ | ಆಚರಿಸದ ಯೋಗ್ಯಗೆ |

ಗುರೂಪದೇಶವು ಅರಿತೀತೆ ||

ವರಪುರ ಬಳ್ಳಾರಿ ನರಹರಿ ತಾತನ | ಸ್ಮರಿಸದಾತಗೆ

ಮುಕುತಿಯು ಸಿಕ್ಕೀತೆ ||3||

ಶ್ರೀಗುರುವಿಗೆ ಶರಣು | ಕರುಣಾ |

ಸಾಗರನಿಗೆ ಶರಣು ||ಪ||

ರಾಗವನಳಿಸುತ | ಯೋಗವ ತಿಳಿಸುತ ||

ಬೇಗನೆ ಸಲಹಿದ | ಯೋಗಿವರೇಣ್ಯಗೆ ||ಅಪ||

ಮನುಮುನಿ ವಂದಿತಗೆ | ಭಕ್ತರ |

ಮನದೊಳು ಮೆರೆವವಗೆ||

ಅನವರತವು ತನ್ನ | ನೆನೆವರಭೀಷ್ಟವ |

ಅನುನಯದಿಂ ಕೊಡು | ವನುಪಮ ಮಹಿಮಗೆ ||1||

ಸುಜ್ಞಾನವ ತಿಳಿಸೀ | ಲೋಕದ |

ಅಜ್ಞಾನವನಳೀಸೀ|| ವಿಘ್ನಗಳೆಲ್ಲವ |

ಭಗ್ನವ ಮಾಡುವ | ಪ್ರಜ್ಞೆಯನೀಯುವ| ಯಜ್ಞವಗೈಯುವ ||2||

ದುರಿತಗಳೆಲ್ಲವನು | ತಾಂಪರಿ |

ಹರಿಸಲು ಬಲ್ಲವನು || ನರ ರೂಪದ ಶ್ರೀ|

ಹರಿಯೆಂದೆನಿಸುವ || ನರಹರಿ ಸದ್ಗುರು | ವರ ಪರಮಾತ್ಮಗೆ ||3||

 

ಮನುಜಾ ನೀ ತಿಳಿಯಲಿಲ್ಲೇನು | ನಿನ್ನ |

ಮನದಲ್ಲೆ ಪರಶಿವನಿಹನು ||ಪ||

ಮನ ಶುದ್ಧಿಯಾದರೆ || ನಿನಗಾತ ತೋರ್ಪನು|

ಅನುಮಾನವಿಲ್ಲದೆ| ನೆನೆಯೀಗ ಶಿವನನ್ನು ||ಅಪ||

ಹೊರಗೊಳಗೊಂದಾಗಿರುವನು | ತನ್ನ|

ನರಿಯದವರಿಗೆ ಕಾಣಿಸನು ||

ಅರಿತ ಮಹಾತ್ಮರ | ಬೆರೆತುಕೊಂಡಿರುವನು ||

ಕರುಣಿಯಾಧೀಶನ | ನರಿತುಕೋ ಗುರುವಿಂದ ||1||

ಎಲ್ಲಿ ನೋಡಿದರಲ್ಲೆ ಇರುವ | ತನ್ನ|

ಬಲ್ಲವರೊಡನಾಡುತಿರುವ||

ನಿಲ್ಲದೆ ಹಗಲಿರುಳು| ಭಕ್ತರೊಡನಿರ್ಪನು | ಸೊಲ್ಲು

ಸೊಲ್ಲಿಗೆ ಶರಣ| ರಲ್ಲೆ ತುಂಬಿರುವನು ||2||

ತಾನೆ ತಾನಾಗಿರುವವನು | ಭಕ್ತ |

ರೇನು ಬೇಡಲು ಕೊಡುವವನು ||

ನಾನೆಂಬುದಳಿದಮ | ಹಾನುಭಾವರಿಗಿನ್ನು ||

ಜ್ಞಾನಿ ಶ್ರೀನರಹರಿಯೆ | ತಾನೆನ್ನಿಸಿರುವನು ||3||

ನೋಡಿದೆನಮ್ಮಾ | ಗುರುಮೂರ್ತಿಯ | ಪಾಡಿದೆನಮ್ಮಾ ||ಪ||

ನೋಡಿದೆ ತನುವನೀ| ಡಾಡಿದೆ ಪದದೊಳು|

ಮಾಡಿದೆ ಭಕ್ತಿಯ | ಕೂಡಿದೆ ಮುಕ್ತಿಯ ||ಅಪ||

ನರ ರೂಪದಿಂದ | ಈ ಲೋಕಕ್ಕೆ| ಪರಮಾತ್ಮ ಬಂದ||

ಕರುಣೆಯನಿರಿಸಿದ | ನರರನುದ್ಧರಿಸಿದ|

ಪರಿಪೂರ್ಣ ಪರಬ್ರಹ್ಮ | ದರಿವಿತ್ತನಮ್ಮಾ ||1||

ಭವಬಂಧ ಹರಿದ | ಸದ್ಗುರುರಾಯ| ಶಿವಮಂತ್ರವೊರೆದ |

ಶಿವಜೀವರೈಕ್ಯಾನು| ಭವ ಬೋಧೆಯನು ಮಾಡಿ|

ಸುವಿವೇಕದೊಳು ಯನ್ನ | ಶಿವನೆನಿಸಿದವನಾ ||2||

ಮಿಥ್ಯಾ ಸಂಸಾರ | ತನಗಿಲ್ಲೆಂಬ | ಸತ್ಯಾರ್ಥ ಸಾರ |

ಗೊತ್ತು ಮಾಡಿದ ಪ್ರತ್ಯ | ಗಾತ್ಮನೆ ನಿಜವೆಂದು |

ಸತ್ತು ಚಿದಾನಂದ ನಿತ್ಯ ಪರಿಪೂರ್ಣನ ||3||

ಅಂಬರವನೆಲ್ಲಾ | ಇಂಬಿಲ್ಲದೆ | ತುಂಬಿರುವನಲ್ಲಾ |

ನಂಬಿದ ಭಕ್ತರಿಗೆ | ಬೆಂಬಲನಾಗಿರುವ |

ಕುಂಭಿನಿ ಸ್ಥಲದಿ ವಿ | ಜೃಂಭಿಸಿ ತೋರ್ಪವನ ||4||

ಯಾರಿಗು ಕಾಣ | ಬಾರದ ಶಿವನ ತೋರಿಸಿದ ಜಾಣ ||

ಪಾರಮಾರ್ಥವ ತೋರಿ| ಪಾರು ಮಾಡಿದನಮ್ಮ|

ಮೂರು ಮೂರ್ತಿಯ ರೂಪ| ಧಾರಿ ಶ್ರೀ ನರಹರಿಯ ||5||

ಯಾರಿಗೆ ಯಾರಿಲ್ಲ ಮಾನವಾ | ಮತ್ತೆ |

ಯಾರಿದ್ದರೇನಯ್ಯ ಮಾನವಾ ||ಪ||

ಕಾರುಣ್ಯನಿಧಿಯಾದ ಗುರುದೇವನಲ್ಲದೆ|

ಪಾರು ಮಾಡುವರುಂಟೆ ಮಾನವಾ ||ಅಪ||

ತಂದೆ ತಾಯಿಗಳಿದ್ದರೇನು| ನಿನ್ನ |

ಬಂಧು ಬಳಗಗಳಿದ್ದರೇನು ||

ಮುಂದೆ ಬರುವ ಯಮ | ಬಂಧ ಬಿಡಿಸುವರುಂಟೆ|

ಹೊಂದು ಸದ್ಗುರುಪಾದ ಮಾನವಾ ||1||

ಧನಧಾನ್ಯ ಸಂಪತ್ತು ಇದ್ದರೂ| ದೊಡ್ಡ |

ಮನೆತೋಟ ಹೊಲಗಳು ಇದ್ದರೂ||

ಕೊನೆಗಾಲದಲ್ಲೇನು | ನಿನಗಾಗಲಾರವು|

ಘನವಂತ ಗುರು ಕಾಯ್ವ ಮಾನವಾ ||2||

ತಪ್ಪು ಮಾಡಿದರೇನು ಮಾನವಾ |

ನಿನ್ನ ತಪ್ಪು ನೀನೊಪ್ಪಿಕೋ ಮಾನವಾ||

ತಪ್ಪು ಮಾಡದ ಹಾಗೆ | ಒಪ್ಪವಾಗಿರು ಮುಂದೆ |

ಮುಪ್ಪು ಬಾರದ ಮುನ್ನ ಮಾನವಾ ||3||

ಅಣುರೇಣು ತೃಣಕಾಷ್ಠದಲ್ಲಿಯು |

ತಾನೆ ಮನೆ ಮಾಡಿ ಶಿವನುಂಟೆಲ್ಲಿಯು |

ಅನುಮಾನ ಬಿಡಬೇಕು | ಒಣ ಮೋಹ ಸುಡಬೇಕು |

ನೆನೆಯುತ್ತ ನರಹರಿಯ ಮಾನವಾ ||4||

ಮಡದಿ ಮಕ್ಕಳು ಹಿಂದೆ ಬಾರರು |ಒಳ್ಳೆ |

ಒಡವೆ ವಸ್ತ್ರಗಳೊಂದು ಬಾರವು||

ಕಡು ಮೋಹದಿಂದ ಕಂ | ಗೆಡಬೇಡ ನರಹರಿಯ |

ಕಡೆಗಾಣಬೇಡಯ್ಯ ಮಾನವಾ ||5||

ಗಂಡನ ಮಾಡಿಕೊಂಡೆ | ಮುಪ್ಪಾಗದ |

ಮುತ್ತೈದೆತನವ ಕಂಡೆ ||ಪ||

ಗಂಡನನ್ನು ಕೂಡಿಕೊಳ್ಳದೆ |

ಭಂಡತನದಲಿ ಬಾಳುತಿದ್ದೆ ||

ಗಂಡ ಬಂದು ಯನ್ನ ಕೊರಳಿಗೆ |

ದುಂಡುಮುದ್ರೆ ಹಾಕಿಬಿಟ್ಟ ||ಅಪ||

ಬುದ್ಧಿಯಿಲ್ಲದೆ ಬಾಳಿದೆ | ಈ ಲೋಕದ |

ಸುದ್ದಿಯಲ್ಲವ ಕೇಳಿದೆ ||

ಗುದ್ದಿಗುದ್ದಿಯೆನ್ನ ಕೆಟ್ಟ |

ಬುದ್ಧಿಯನ್ನೆ ತಿದ್ದಿಬಿಟ್ಟ|

ಮದ್ದು ಮಂತ್ರ ಮಾಡಿ ಸೊಟ್ಟಾ |

ಗಿದ್ದ ಕಾಲು ಮುರಿದುಬಿಟ್ಟ ||1||

ಕಂಡ ಕಡೆ ತಿರುಗುತಿದ್ದೆ| ಮನದಲ್ಲಿಯೆ |

ಕಂಡವರ ನೆನೆಯುತಿದ್ದೆ||

ಗಂಡುಗಲಿಯಾದೆನ್ನ ಗಂಡ |

ಪುಂಡುತನವ ಕಂಡುಕೊಂಡ |

ಮೊಂಡು ಬುದ್ಧಿ ಬಿಡಿಸಿಬಿಟ್ಟ |

ಮಂಡೆಯಲಿ ಹೂ ಮುಡಿಸಿಬಿಟ್ಟ ||2||

ಪಾತರಗಿತ್ತಿಯಂತೆ | ಕುಣಿಯುತ ನಾನು|

ಪಾತಕ ಹೊತ್ತು ನಿಂತೆ ||

ಮಾತು ಮಾತಿಗೆನ್ನ ಬೈದ |

ಮಾತಿನಲ್ಲೆ ಮಂತ್ರಗೈದ |

ನೀತಿ ಮಾರ್ಗದಲ್ಲೆ ಒಯ್ದು |

ಭೀತಿಯಳಿದ ನರಹರೀಂದ್ರ ||3||

ಮೂಗಿನೊಳಗಿನ ಮೂಗುತೀ | ನೀ |

ನೋಡಿಕೊಳ್ಳೆಲೆ ಬೀಗಿತಿ ||ಪ||

ಮೂಗುತಿಯ ಮಹಿಮೆಯನು ತಿಳಿದರೆ |

ಬೇಗ ಧನ್ಯಳಾಗುತೀ ||ಅಪ||

ಯೋಗಿ ಧರಿಸಿದ ಮೂಗುತೀ | ನಿಜ|

ಭೋಗಿ ಇರಿಸಿದ ಮೂಗುತೀ||

ನಾಗ ರತ್ನದ ಕಾಂತಿಯಲಿ ಸೊಗ|

ಸಾಗಿ ಮೆರೆಯುವ ಮೂಗುತೀ ||1||

ಜಾತಿ ಮುತ್ತಿನ ಮೂಗುತೀ | ಚಿ|

ಜ್ಯೋತಿ ತುಂಬಿದ ಮೂಗುತೀ ||

ಭೂತ ಪಂಚಕದಾಟವೆಲ್ಲಕೆ |

ಸೂತ್ರವಾಗಿಹ ಮೂಗುತೀ ||2||

ಜಗವ ತುಂಬಿದ ಮೂಗುತೀ | ಇದು |

ಯುಗಯುಗಾಂತರ ಸಂಗತೀ ||

ಅಗಣಿತಾನಂದದಲಿ ಬೆಳಗುತ|

ಬಿಗಿದ ನರಹರಿ ಮೂಗುತೀ ||3||

ಮುತ್ತಿನಾರತಿ ಎತ್ತಿ ಬೆಳಗಿರಿ | ಸತ್ಯಸದ್ಗುರು ದೇವಗೆ ||ಪ||

ಮುಕ್ತಿದಾತಗೆ ನಿತ್ಯ ನಿರ್ಮಲ | ವಸ್ತುವೆಂದೆನಿಸಿರ್ಪಗೆ ||ಅಪ||

ಈಡೆ ಪಿಂಗಳೆ ಕೂಡಿದಾ ನಡು | ನಾಡಿಯೊಳಗಿರ್ಪಾತಗೆ ||

ಬೇಡಿದಿಷ್ಟಾರ್ಥಂಗಳೀಯುತ | ಮೂಡಿ ತೋರುತ ಬರ್ಪಗೆ ||1||

ಮೂರವಸ್ಥೆಯ ಮೀರಿ ತೋರುವ | ಧೀರ ಮೂಲಧಾರಗೆ ||

ಆರು ವರ್ಣವ ಮೂರು ವರ್ಣದಿ | ತೋರಿದಾ ಸುವಿಚಾರಿಗೆ ||2||

ಧರೆಯೊಳಗೆ ಬಳ್ಳಾರಿಪುರದೊಳು| ಮೆರೆವ ನರಹರಿ ಗುರುವಿಗೆ||

ನಿರುತ ನಿತ್ಯಾನಂದವೀಯುವ | ಪರಮ ಬೋಧಾಧಾರಿಗೆ ||3||

ಎಂಥ ಭಕ್ತಿಯೋ | ಇದಕೆ |

ಎಂಥ ಮುಕ್ತಿಯೋ ||ಪ||

ಅಂತು ಇಂತು ಎನ್ನಲಾಗ |

ದಂಥ ಶಿವನ ಕಾಣಲೀಗ ||ಅಪ||

ಶಿಲೆಯ ಬಸವನನ್ನು ನೋಡಿ |

ನಲಿದು ಪೂಜೆಯನ್ನು ಮಾಡಿ||

ಚಲಿಪ ಜೀವ ಬಸವನನ್ನು |

ಕೊಲ್ಲುವರಲ್ಲ ದುಡಿಸಿ ದುಡಿಸಿ ||1||

ಕಲ್ಲುನಾಗರವನು ಕಂಡು |

ಸಲ್ಲಿಸುವರು ಪೂಜೆಯನ್ನು ||

ಚೆಲ್ವ ಜೀವ ನಾಗರವನು |

ಕಲ್ಲು ಹೊಡೆದು ಕೊಲ್ಲುತಿಹರು ||2||

ತಾವೆ ಗೈದ ಪ್ರತಿಮೆಗಳಿಗೆ |

ತಾವೆ ಪೂಜೆ ಮಾಡುತಿಹರು||

ದೇವಗೈದ ಪ್ರತಿಮೆಗಳಿಗೆ |

ಸೇವೆ ಮಾಡಿ ತುತ್ತುಯಿಡರು ||3||

ತಿನ್ನದಿರುವ ವಿಗ್ರಹಕ್ಕೆ |

ತಿನ್ನಲೆಡೆಯನಿಕ್ಕುತಿಹರು ||

ತಿನ್ನಬಲ್ಲ ವಿಗ್ರಹಕ್ಕೆ |

ತಿನ್ನಲಿಡರು ಎಂಥ ನರರು ||4||

ಜಾಯೆಯಲ್ಲಿ ಪ್ರೀತಿಯಿಟ್ಟು |

ತಾಯಿಯನ್ನು ಬೈದುಬಿಟ್ಟು |

ಪ್ರೀಯದಿಂದ ಸುತನ ಕರೆದು |

ಹೇಯ ಮಾಡಿ ಪಿತನ ಮರೆದು ||5||

ಗುರುವಿನಾಜ್ಞೆ ಮೀರುತಿಹರು |

ಗುರುವಿಗುತ್ತರ ಕೊಡುತಲಿಹರು |

ಗುರುವು ನರನು ಎನ್ನುತಿಹರು |

ಗುರುವೆ ನರಹರಿಯೆನ್ನದಿಹರು ||6||

ತಂದೆ ತಾಯಿ ಗುರುವೇ ದೈವ |

ವೆಂದು ಪೂಜೆ ಮಾಡಲಿಲ್ಲಾ ||

ಬಂದ ತಿಥಿಯ ಪೂಜಿಸದ |

ಮಂದಿಯಿವರು ನರಹರೀಂದ್ರ ||7||

ಮಣ್ಣಿನಿಂದಲೆ ಹುಟ್ಟಿದೆ | ತನು |

ಮರಳಿ ಮಣ್ಣಿಗೆ ಹೊರಟಿದೆ |

ಮಣ್ಣಿನಲ್ಲಿಯೇ ಬೆಳೆದಿದೆ | ತನು |

ಮಣ್ಣು ಪಾಲಾಗುತ್ತಿದೆ ||ಪ||

ಮರೆತು ಮಣ್ಣಿಗೆ ಬಂದಿದೆ | ಇದು |

ಮರುಳು ಹಿಡಿದೇ ನಿಂತಿದೆ ||

ಮರಳಲಾರದೆ ಕೂತಿದೆ | ಇದು |

ಮರಳಿ ಮಣ್ಣಿಗೆ ಹೊರಟಿದೆ ||1||

ಕಾಯವೆನ್ನಿಸಿ ಬಂದಿದೆ | ಇದು|

ಮಾಯೆಯನ್ನೇ ನಂಬಿದೆ ||

ಪ್ರೀಯವೆನ್ನುತ ನಿಂದಿದೆ| ಇದು |

ಛಾಯೆಗೇ ಬೆರಗಾಗಿದೆ ||2||

ಸುಳ್ಳು ಮನೆಯನು ಮಾಡಿದೆ | ಇದು |

ಜಳ್ಳು ವಿಷಯವ ಕೂಡಿದೆ ||

ಕಳ್ಳತನ ಮೈಗೂಡಿದೆ | ಇದು |

ಎಲ್ಲವನು ಬಿಟ್ಟೋಡಿದೆ ||3||

ನಾಳೆ ನಾಡಿದುಯೆನ್ನುತಾ | ಇದು|

ಕಾಲ ವ್ಯರ್ಥವ ಮಾಡುತ||

ಮೂಲಬ್ರಹ್ಮವ ಮರೆಯುತ | ಇದು |

ಬಾಳಿ ಮಣ್ಣಿಗೆ ಸೇರುತ ||4||

ದಿನವು ರೋಗದಿ ನೊಂದರೂ |

ಜನಿತ ದುಃಖದಿ ಬೆಂದರೂ |

ಇನಿತು ಜ್ಞಾನವ ಪೊಂದದು |

ಘನ ವಿರಕ್ತಿಯ ತಾಳದು ||5||

ನಷ್ಟವೆಷ್ಟೇ ತೋರಲು |

ಕಷ್ಟಗಳು ಮಿತಿಮೀರಲು |

ಇಷ್ಟವಾಗದು ಸಾಯಲು |

ಎಷ್ಟು ದಿನ ಕಳೆದಾಗಲು ||6||

ಏಳಲಾರದೆ ಇದ್ದರೂ |

ಮೂಲೆಯಲ್ಲಿಯೆ ಬಿದ್ದರೂ |

ಬೀಳುವಂತೆಯೆ ಒದ್ದರೂ |

ಬಾಳಿನಾಸೆಯ ನೀಗದು ||7||

ತಡೆದು ನಿಂದಿಸುವಾಗಲೂ |

ಹಿಡಿದು ಬಂಧಿಸುವಾಗಲೂ |

ಹೊಡೆದು ನೂಕಿರುವಾಗಲೂ |

ದೃಢ ವಿರಕ್ತಿಯ ತಾಳದು ||8||

ಮರವೆಯೇ ತವರಾಗಿದೆ | ಇದು |

ಅರಿವು ಹೊಂದದೆ ಸಾಗಿದೆ ||

ನರಕಕೇ ಗುರಿಯಾಗಿದೆ | ಶ್ರೀ

ನರಹರಿಯ ಮೊರೆ ಬೀಳದೆ ||9||

ಯಂಥ ಯಕ್ಷಿಣಿಗಾರನು | ಸದ್ಗುರುದೇವ |

ಮಂತ್ರಮಾಟದ ಧೀರನು ||ಪ||

ಅಂತರಂಗದೊಳಿದ್ದ | ಭ್ರಾಂತಿಯನಳಿಸಿದ್ದ ||

ಚಿಂತೆಯೆಂಬುದೆಯಿಲ್ಲ| ದಂತೆ ಮಾಡಿದನಲ್ಲ ||ಅಪ||

ಕಾಣುವೀ ಜಗವೆಲ್ಲವ | ನಶ್ವರ ಮಾಡಿ | ಕಾಣದೆನ್ನಿಸಬಲ್ಲವಾ ||

ಕಾಣದ ಪರತತ್ವ | ಕಾಣಲೆಂದರಿವಿತ್ತ |

ಮಾಣಿಸಿದ ಜೀವತ್ವ| ತಾನಿತ್ತ ದೇವತ್ವ ||1||

ಮಾಂಸಪಿಂಡವ ಬಿಡಿಸಿದಾ | ಮಂತ್ರದ ಪಿಂಡ |

ವಂಶವೃದ್ಧಿಯ ಪಡಿಸಿದಾ ||

ಸಂಶಯಂಗಳನ್ನೆಲ್ಲ| ಧ್ವಂಸ ಮಾಡಿದನಲ್ಲ |

ಹಂಸ ಸ್ವರೂಪದಿ | ವ್ಯಾಂಶ ತೋರಿದನಲ್ಲ ||2||

ನಂಬಿ ಕೂಡಿದ ಸತಿಯನು | ಬಿಡದಂತಿದ್ದು |

ನಂಬಿಕೊಳ್ಳದ ಮತಿಯನು || ತುಂಬಿಯನ್ನೊಳು ಶಿವನ |

ನಂಬಿಸುತ್ತಲಿ ಧ್ಯಾನ | ಸಂಭ್ರಮಗೊಳಿಸಿದ |

ಶಂಭು ನರಹರಿಯಾದ ||3||

ಹೊಳೆಯಲ್ಲಿ ಮುಳುಗಿದರೆ | ಕಳೆದ ಜನ್ಮದ ಪಾಪ |

ತೊಳೆಯಲಾಗುವುದೇನು ಮೂಢ ||ಪ||

ಬಲವಂತ ಗುರುನಾಥ | ಒಲಿದು ಬೋಧಿಸದಿರಲು |

ತಿಳಿಯದೆಂದಿಗು ತತ್ವಗೂಢ ||ಅಪ||

ವೇದಶಾಸ್ತ್ರಗಳೆಲ್ಲ | ಓದಿಕೊಂಡರು ಬ್ರಹ್ಮ |

ಬೋಧೆಯಾಗದು ತಿಳಿದು ನೋಡಾ||

ವಾದವನು ಬಿಟ್ಟು ಗುರು | ಪಾದವನು ಮರೆಹೊಗಲು |

ಸಾಧಿಸುವುದಿದು ಮರೆಯಬೇಡಾ ||1||

ಧರೆಯ ತೀರ್ಥಗಳೆಲ್ಲ | ಗುರುಪಾದ ತೀರ್ಥಕ್ಕೆ |

ಸರಿಯಾಗಲಾರವೋ ಮೂರ್ಖ||

ಪರಿಪರಿಯ ಸಂಶಯ | ಹರಿದು ಪಾವನಗೈವ |

ಗುರುವಿಂದ ಕಳೆ ನಿನ್ನ ದುಃಖ ||2||

ಶಿರದಲ್ಲಿ ಹುಟ್ಟುವುದು | ನೆರೆ ರೋಮ ತಾನಲ್ಲ|

ಪರವಸ್ತು ತಾನಾಯಿತಲ್ಲಾ||

ಪರನಾದವೆನಿಸುತ್ತ | ಶರೀರವನು ತೊರೆಯುತ್ತ |

ಬೆರದೇಕವಾಗಿರುವುದಲ್ಲಾ ||3||

ದೇಹದಲಿ ಬೆಳಗುವುದು | ದೇಹವದು ತಾನಲ್ಲ |

ದೇಹ ಮೋಹವನಳಿಸಿತಲ್ಲಾ ||

ಊಹೆಗೂ ಮೀರಿಹುದು | ಸಾಹಸಕೆ ಸಿಕ್ಕದಿದು |

ಸೋಹಮೆಂದೆನಿಸಿರುವುದಲ್ಲಾ ||4||

ಸಾಕಾರದಲ್ಲಿಯೆ | ನಿರಾಕಾರ ಮಾಡಿಹುದು |

ಬೇಕಾದುದೆಲ್ಲವೀಯುವುದು||

ಆಕಾಶದಲ್ಲಿ ತಾ| ನೇಕವಾಗಿರುತಿಹುದು |

ಲೋಕೇಶ ನರಹರಿಯೊಳಿಹುದು ||5||

ನಾನೆಂಬುದನು ಬಿಟ್ಟು | ಜ್ಞಾನ ಗುರುವಿನ ಗುಟ್ಟು |

ನೀನರಿತು ಸುಖಿಯಾಗು ತಮ್ಮಾ||

ಆನಂದ ಧಾಮನಿಗೆ | ಶ್ರೀ ನರಹರೀಂದ್ರನಿಗೆ |

ನೀನೆರಗಲಾಗುವೆ ಬ್ರಹ್ಮಾ ||6||

ಭ್ರಾಂತಿಯ ಬಿಡು ನೀನೆಲೆ ಮನವೇ| ಸುಖ |

ಶಾಂತಿಯ ಪಡೆ ನೀನನುದಿನವೇ ||ಪ||

ಧನಧಾನ್ಯವು| ಇದು| ನಿನಗನ್ಯವು ||

ತನು ಭೋಗವು |ಬಂ| ಧನ ರೋಗವು ||1||

ವಿಷಯಂಗಳು| ಬಲು | ವಿಷಮಂಗಳು||

ಹಸನಾಗವು| ಬರಿ| ಪುಸಿತಾನಿವು ||2||

ಸತಿ ಪುತ್ರರು| ಸಂ| ಚಿತಮಾತ್ರರು||

ಅತಿಮಿತ್ರರು| ಅನು | ಮತಿ ಪಾತ್ರರು ||3||

ಜಗವೆಂಬುದು | ಸೋ| ಜಿಗವಾದುದು ||

ಸೊಗವೆಂಬುದು| ನಾ| ಳೆಗೆ ನಿಲ್ಲದು ||4||

ಕರುಣಾಕರ | ಗುರು| ಪರಮೇಶ್ವರ ||

ಶರಣೋದ್ಧರ| ನರ| ಹರಿ ನಿರ್ಧರ ||5||

ಲಿಂಗವಿಲ್ಲದ ಜೀವಿ ಜಗದೊಳಗಿಲ್ಲ ||ಪ||

ಲಿಂಗವನರಿದಾತ ಗುರುವಾಗ ಬಲ್ಲ ||ಅಪ||

ಧರೆಯನ್ನು ಧರಿಸಿಹುದಾಚಾರಲಿಂಗ|

ಹರಿವ ಜಲದೊಳಗಿದೆ ಶ್ರೀ ಗುರು ಲಿಂಗ ||

ಮೆರೆವಗ್ನಿ ಸೇರಿಹುದಾ ಶಿವಲಿಂಗ|

ಚರಿಪ ವಾಯುವಿನೊಳು ಜಂಗಮಲಿಂಗ ||1||

ಆಕಾಶದೊಳಗೆ ಪ್ರಸಾದದ ಲಿಂಗ|

ಏಕಾಕ್ಷರಾಂತ್ಯದಿ ಶ್ರೀ ಮಹಲಿಂಗ ||

ಲೋಕಕ್ಕೆ ಕ್ಷೇಮವನೀಯುವ ಲಿಂಗ|

ಸಾಕಾರದಲ್ಲೆ ನಿರಾಕಾರಲಿಂಗ ||2||

ಲಿಂಗವಿಲ್ಲದೆ ಯಾರು ಉಣಲಾರರಲ್ಲಾ |

ಲಿಂಗವಿಲ್ಲದೆ ಗಂಗಾಪಾನವದಿಲ್ಲಾ||

ಲಿಂಗವಿಲ್ಲದೆ ಯಾರು ನಡೆಯುವುದಿಲ್ಲ |

ಲಿಂಗವಿಲ್ಲದೆ ನುಡಿಯಾಡುವುದಿಲ್ಲ ||3||

ಯಾರಾರು ಉಣ್ಣದೆ ತಾನುಂಬ ಲಿಂಗ |

ಯಾರೂ ಕುಡಿವವರಿಲ್ಲ ಕುಡಿವುದು ಲಿಂಗ||

ಯಾರು ಕೇಳದೆ ತಾನೆ ಕೇಳ್ವುದು ಲಿಂಗ |

ಯಾರು ಕಾಣದೆ ತಾನೆ ಕಾಣ್ವುದು ಲಿಂಗ ||4||

ಲಿಂಗವೆ ಜಗವೆಲ್ಲ ತುಂಬಿಹುದಂತೆ |

ಲಿಂಗವಿಲ್ಲದ ಜಾಗ ಕಾಣಿಸದಂತೆ ||

ಲಿಂಗವನುಳ್ಳಾತ ಜಂಗಮನಂತೆ |

ಲಿಂಗವ ಬಲ್ಲಾತ ನರಹರಿಯಂತೆ ||5||

ನಿನ್ನಲ್ಲಿ ನಾನಿದ್ದೆ ಲಿಂಗಯ್ಯ| ನೋಡೆ |

ನನ್ನಲ್ಲಿ ನೀನಿದ್ದೆ ಲಿಂಗಯ್ಯ ||ಪ||

ನಿನ್ನನ್ನು ಅರಿಯದೆ ಲಿಂಗಯ್ಯ | ಜೀವ|

ನೆನ್ನಿಸಿ ನಾನಿದ್ದೆ ಲಿಂಗಯ್ಯ ||ಅಪ||

ನಾದ ರೂಪನು ನೀನೆ ಲಿಂಗಯ್ಯ | ಶುದ್ಧ |

ವಾದ ಬಿಂದುವು ನೀನೆ ಲಿಂಗಯ್ಯ ||

ಆದಿಕಳೆ ನೀನಾದೆ ಲಿಂಗಯ್ಯ | ಸತ್ಯ |

ಬೋಧ ರೂಪನು ನೀನೆ ಲಿಂಗಯ್ಯ ||1||

ಮರವೆ ಮಾಯಾ ದೂರ ಲಿಂಗಯ್ಯ | ನೀನೆ |

ಅರಿವಿಗಾಧಾರನು ಲಿಂಗಯ್ಯ ||

ದುರಿತ ದುಃಖಕೆ ದೂರ ಲಿಂಗಯ್ಯ|

ನಿನ್ನ | ಬೆರೆದಾತ ಮುಕ್ತನು ಲಿಂಗಯ್ಯ ||2||

ಅರಿವಿಂದ ಗುರುವಾದೆ ಲಿಂಗಯ್ಯ | ನೀನೆ|

ಮರೆತಾಗ ಶಿಷ್ಯನು ಲಿಂಗಯ್ಯ|| ಅರಿವು

ಮರವೆಗೆ ಸಾಕ್ಷಿ ಲಿಂಗಯ್ಯ| ನೀನೆ|

ಗುರುಲಿಂಗ ನರಹರಿ ಲಿಂಗಯ್ಯ ||3||

ಮಾತಿನೊಳಗಿದೆ ಮಂತ್ರವು|

ಮಾತು ಚೇತನ ತಂತ್ರವು ||ಪ||

ಮಾತಿನೊಳು ಭವ ಭಂಗವು|

ಮಾತೆ ಜ್ಯೋತಿರ್ಲಿಂಗವು ||ಅಪ||

ಮಾತೆ ವೇದವು ಶಾಸ್ತ್ರವು|

ಮಾತೆ ಬೋಧಾ ಸೂತ್ರವು||

ಮಾತೆ ಜ್ಞಾನಕೆ ಹೇತುವು|

ಮಾತಿಗೆಲ್ಲವು ಸೋತವು ||1||

ಮಾತಿನೊಳು ಶಿವನಿರುವನು|

ಮಾತಿಗೆ ಶಿವ ಬರುವನು||

ಮಾತಿನೊಳು ಮರುಳಾದನು|

ಮಾತಿನೊಳು ತಿರುಳಾದನು ||2||

ಮಾತಿನೊಳಗಿದೆ ಸತ್ಯವು|

ಮಾತೆ ನೋಡಲು ಚಿತ್ತುವು||

ಮಾತಿನೊಳಗಾನಂದವು|

ಮಾತೆ ನಿತ್ಯವು ಪೂರ್ಣವು ||3||

ಮಾತಿನೊಳು ವ್ಯವಹಾರವು|

ಮಾತಿನೊಳು ವ್ಯಾಪಾರವು||

ಮಾತಿನೊಳು ಸತ್ಕಾರವು|

ಮಾತಿನೊಳು ಸುವಿಚಾರವು ||4||

ಮಾತೆ ಲೋಕಕೆ ಮಾತೆಯು||

ಮಾತೆ ಆತ್ಮ ಜ್ಯೋತಿಯು||

ಮಾತೆ ಗುರುವಿಗೆ ಕೀರ್ತಿಯು|

ಮಾತೆ ನರಹರಿ ಮೂರ್ತಿಯು ||5||

ಬೆಳಗುತ್ತಲಿದೆ ಜ್ಯೋತಿ | ಬೆಳಗುತ್ತಲಿದೆ ಜ್ಯೋತಿ|

ಬೆಳಗುತ್ತಲಿದೆ ಜ್ಯೋತಿ ನೋಡಮ್ಮಾ ||ಪ||

ಕಳೆಕೋಟಿ ಸೂರ್ಯರ| ಬೆಳಕಿಗಿಮ್ಮಿಗಿಲಾಗಿ|

ಧಳ ಥಳಿಸುತ್ತಿದೆ ಕೂಡಮ್ಮ ||ಅಪ||

ಇಳೆ ತತ್ವದೊಳು ತಾನೆ | ಕಳಹಂಸನೆನ್ನಿಸಿ |

ಚಲಿಸುತ್ತಾಡುತಲಿದೆ ನೋಡಮ್ಮಾ ||

ಒಳಗೆಹೊರಗೊಂದಾಗಿ| ಬೆಳಗುತ್ತಲಿರುವುದು |

ಸಲೆಗಂಧ ಪೂಜೆಯ ಮಾಡಮ್ಮ ||1||

ಜಲತತ್ವದೊಳಗೆ ನಿರ್ಮಲ ನುಡಿಯೆನ್ನಿಸಿ|

ಮಲಿನವ ತೊಳೆದಿದೆ ನೋಡಮ್ಮಾ||

ಝಳಝಳ ಮಾಡಿ ಪ್ರ | ಜ್ವಲಿಸುತ್ತಲಿರುವುದು|

ಒಲಿದು ರಸಪೂಜೆಯ ಮಾಡಮ್ಮ ||2||

ಅನಲ ತತ್ವದಿ ತಾನೆ| ಮಿನುಗುತ್ತ ಕಾಂತಿಯ|

ನೆನಹು ಮಾತ್ರದ ಜ್ಯೋತಿ ನೋಡಮ್ಮಾ |

ಜನಿಸಿದವಸ್ಥೆ ಮೂ| ರೆನಿಸಿ ಬೆಳಗುತ್ತಿದೆ|

ಘನದರೂಪದ ಪೂಜೆ ಮಾಡಮ್ಮಾ ||3||

ವಾಯು ತತ್ವವ ಸೇರಿ| ಕಾಯಕರ್ಮದ ದಾರಿ|

ಕಾಯುತ್ತಲಿರುತಿದೆ ನೋಡಮ್ಮಾ||

ಮಾಯಾವಿಕಾರಕ್ಕ| ಜೇಯವೆಂದೆನಿಸಿದೆ|

ಪ್ರೀಯ ಸ್ಪರ್ಶದ ಪೂಜೆ ಮಾಡಮ್ಮಾ ||4||

ಅಂಬರವನೆಲ್ಲವ| ತುಂಬುತ್ತ ಬೆಳಗುವ|

ಇಂಬಾದ ಜ್ಯೋತಿಯ ನೋಡಮ್ಮಾ||

ಶಂಭು ನರಹರಿ ಮೂರ್ತಿ| ಯೆಂಬ ನಿಶ್ಚಯದಿಂದ|

ನಂಬಿ ಶಬ್ದದ ಪೂಜೆ ಮಾಡಮ್ಮ ||5||

ಅಲ್ಲಮ ಪ್ರಭುದೇವಾ| ಯೆನ್ನೊಳು| ನಿಲ್ಲಿಸು ಸದ್ಭಾವಾ ||ಪ||

ಅಲ್ಲದ ದುರ್ಗುಣ| ವೆಲ್ಲವ ನಿರ್ಗುಣ |

ದಲ್ಲಿಯೆ ನಿಲ್ಲಿಸ| ಬಲ್ಲ ಮಹಾತ್ಮನೆ ||ಅಪ||

ಅಲ್ಲದ ಮಾಯೆಯನು | ನೀನೇ | ಗೆಲ್ಲುತ ನಿಂತವನು||

ಸಲ್ಲಿಸಿ ಜ್ಞಾನವ| ನಲ್ಲಿಯೆ ಧ್ಯಾನವ ||

ಸೊಲ್ಲಿಸುವನುಭವ| ಬಲ್ಲ ನೀನೆ ಶಿವ ||1||

ಮದ್ದಳೆಯನು ನುಡಿಸೀ| ದುಷ್ಟರ | ಪದ್ಧತಿಯನು ಕೆಡಿಸೀ||

ಶುದ್ಧ ಜ್ಞಾನದ| ಮದ್ದನು ಕುಡಿಸಿದೆ||

ಸಿದ್ಧರಾಮನಿಗೆ| ಬುದ್ಧಿಯ ಕಲಿಸಿದೆ ||2||

ಶಿವಶರಣರ ಸೇರೀ | ಶಿವನನು| ಭವವನು ನೀ ಸಾರೀ||

ಶಿವನವತಾರಿಯೆ| ಭುವನೋದ್ಧಾರಿಯೆ ||

ಅವಿರಳ ಜ್ಯೋತಿಯೆ | ಶಿವ ನರಹರಿಯೇ ||3||

ನಿಜಗುಣ ಶಿವಯೋಗೀ| ನಿನ್ನನು| ಭಜಿಸುವೆ ನಿಜವಾಗಿ ||ಪ||

ರಜಗುಣ ನೀಗಲು| ಸುಜನಕೆ ಬಾಗಲು||

ವಿಜಯಕೆ ಸಾಗಲು| ನಿಜವೆನಗಾಗಲು ||ಅಪ||

ವೇದಾಂತದ ಭೇರಿ| ಮೊಳಗಿಸಿ| ನಾದಾಂತದಿ ಸೇರೀ||

ಬೋಧಿಸಿದನುಭವ| ಸಾಧಿಸಲೀಭವ||

ಬಾಧೆಯ ಹರಿಸುವ| ಸಾಧುವೆ ನೀ ಶಿವ ||1||

ಆರು ಶಾಸ್ತ್ರರಚಿಸೀ| ಬ್ರಹ್ಮವಿ| ಚಾರ ಸೂತ್ರವಚಿಸೀ||

ಸಾರಿದೆ ತತ್ವವ| ತೋರಿದೆ ಜ್ಞಾನವ||

ಚಾರು ಕನ್ನಡದ | ಸಾರ ನುಡಿಗಳೊಳು ||2||

ಅಜ್ಞಾನವ ಹರಿದೇ| ಪರತರ | ಸುಜ್ಞಾನವ ನೊರೆದೇ||

ಪ್ರಜ್ಞೆಯ ನೀಡಿದೆ| ವಿಘ್ನಗಳಿಲ್ಲದೆ||

ಸುಜ್ಞನೆ ನರಹರಿ| ಯಾಜ್ಞೆಯಿದೇ ಸರಿ ||3||

ಸರ್ಪಭೂಷಣ ಯೋಗಿವರೇಣ್ಯಾ |

ತೋರ್ಪುದೆನ್ನೊಳು ನಿನ್ನ ಕಾರುಣ್ಯಾ ||ಪ||

ಕರ್ಪೂರವನುಂಡ ಜ್ಯೋತಿಯೊಲೆನ್ನ|

ದರ್ಪಗುಣವಳಿದರೆ ನಾನೆ ಧನ್ಯ ||ಅಪ||

ವೇದದರ್ಥವ ಬಿತ್ತರಿಸುತ್ತ|

ಭೋಧಿಸುತ್ತಿರೆ ಶಿಷ್ಯರ ಮೊತ್ತ ||

ಸಾಧಿಸಿಲ್ಲವೆ ವೇದಾಂತಾರ್ಥ|

ವಾದವೇತಕೆ ನೀನೆ ಸಮರ್ಥ ||1||

ಬರೆದೆ ಕೈವಲ್ಯ ಕಲ್ಪವಲ್ಲರಿಯಾ|

ಸುರಿದೆ ಕನ್ನಡದೊಳು ಜ್ಞಾನ ಸುಧೆಯಾ ||

ಪರಮ ಪುರುಷಾರ್ಥ ಮುಕ್ತಿಯ ಮಳೆಯ|

ಸುರಿಸಿ ಪಾವನವೆನಿಸಿದೆ ಧರೆಯಾ ||2||

ಸಕಲ ಕಲ್ಯಾಣ ಗುಣಗಳ ಗಣಿಯೇ|

ಭಕುತ ಹೃತ್ಕಮಲಕೆ ದಿನಮಣಿಯೆ ||

ಮುಕುತಿ ಮಂತ್ರಾಸಕ್ತರು ಕುಣಿಯೇ|

ಸುಖದಿ ಬೋಧಿಪೆ ನರಹರಿ ತಣಿಯೇ ||3||

ಪೊರೆಯೆನ್ನ ತಿಪ್ಪೇರುದ್ರ | ಪರಮಾರ್ಥ ಜ್ಞಾನಸಮುದ್ರ ||ಪ||

ಪರಿಪೂರ್ಣ ಯೋಗದ ಮುದ್ರಾ| ಪರನಾದ ನೀನತಿ ಭದ್ರಾ ||ಅಪ||

ತನುವೆಂಬ ಗುಡಿಯೊಳಗಿದ್ದೆ |

ಅನುಮಾನ ಮಾರಿಯ ಗೆದ್ದೆ||

ಫಣಿಯಪ್ಪನನು ಕರುಣಿಸಿದೇ|

ಫಣಿಭೂಷಣನು ನೀನಾದೆ ||1||

ಸಲಿಸುತ್ತ ಮಾದಿಗರೆಡೆಯ|

ಕಲಿಸುತ್ತ ಲೋಕಕೆ ನಡೆಯ ||

ನಿಲಿಸುತ್ತ ಸತ್ಯದ ನುಡಿಯ| ಬೆಳಗುತ್ತಲಿರುವೆನ್ನೊಡೆಯ ||2||

ಸತ್ತೆಮ್ಮೆಯೆಬ್ಬಿಸಿ ಕರೆದೇ|

ನಿತ್ಯತ್ವ ನಿಜವನು ಮೆರೆದೇ||

ಸತ್ಯಾರ್ಥ ಲೋಕಕೆ ವೊರೆದೇ| ಚಿತ್ತಕ್ಕೆ ಶಾಂತಿಯ ಸುರಿದೇ ||3||

ಅದೃಶ್ಯ ಲಿಂಗಗಳನ್ನು ಸಾದೃಶ್ಯವೆನಿಸಿದೆ ನೀನು||

ನಿರ್ದೇಶಮಾಡಿರುವವನು| ರುದ್ರ ಸ್ವರೂಪನೆ ನೀನು ||4||

ಮರಳಲ್ಲಿ ಕೂಲಿಯ ತೋರಿ|

ಕೆರೆಯನ್ನು ಕಟ್ಟಿದೆ ಭಾರಿ||

ಕರುಣಾಳು ಯನ್ನೊಳು ಸೇರಿ| ಪೊರೆಯೀಗ ನರಹರಿ ಸೂರಿ ||5||

ಕನಕದಾಸನೆ ನಿನ್ನನು | ನಂಬಿದೆ ನಿನ್ನು | ಕನಿಕರಿಸಿ ಸಲಹೆನ್ನನು ||ಪ||

ಕನಸು ಮನಸೊಂದಾಗಿ| ನೆನೆದು ನಾನಿರಲಾಗಿ||

ಯನಗೆ ನಿರ್ಮಲ ಭಕ್ತಿ| ಯನು ನೀಡು ನಿಜವಾಗಿ ||ಅಪ||

ಹೊಳೆಯಲ್ಲಿ ಇಳಿದು ನಿಂತೇ| ದೇಹದ ಹೊರಗೆ |

ಒಳಗೆಲ್ಲ ತೊಳೆದೆಯಂತೇ||

ಒಳಹೊರಗೆವೊಂದಾಗಿ| ತೊಳೆದೆ ನಿರ್ಮಲವಾಗಿ||

ಒಳಗೆ ತೊಳೆಯುವ ಮರ್ಮ| ತಿಳಿಸೆನೆಗೆ ಈ ಧರ್ಮ ||1||

ಉಡುಪಿ ಕೃಷ್ಣನ ನೋಡಲು| ನಿನ್ನನು ಬಿಡದೆ|

ತಡೆಯೆ ಪೂಜಾರಿಗಳು||

ಗುಡಿಯ ಹಿಂದೆಯೆ ಮೊರೆಯ| ನಿಡಲು ಕೂಡಲೆ ಕಂಡಿ||

ಹೊಡೆದು ದರ್ಶನವಿತ್ತ | ನೊಡೆಯ ಕೃಷ್ಣನು ತಿರುಗಿ ||2||

ನಾನು ಹೋದರೆ ಮುಕ್ತಿಯು | ಎಂದೆನ್ನುವುದು|

ನೀನೆ ಪೇಳಿದ ಯುಕ್ತಿಯು||

ಜ್ಞಾನ ಡಂಗುರವಿದನು| ನೀನೆ ಬಾರಿಸಿದವನು ||

ಆನಂದ ಪದವಿತ್ತ| ಶ್ರೀನಿವಾಸನು ತಾನು ||3||

ಕುರುಬ ದಾಸನು ಎಂಬರು| ವೈದಿಕರೆಲ್ಲ|

ಕರುಬುತ್ತಮಡಿ ಮಾತ್ರರು||

ಕುರುಡರಾದರು ಹರಿಯ | ಕುರುಹುಗಾಣದೆ ಬರಿಯ||

ಬರಡು ಬಾಹ್ಯಾಚಾರ| ಪರರಿಂಗೆ ಹರಿದೂರ ||4||

ಹರಿಯ ಸಂಕೀರ್ತನೆಯಾ| ಮಾಡುತ ನಿತ್ಯ |

ಮೆರೆದೆ ಸದ್ವರ್ತನೆಯಾ||

ಪರಮ ಪಾವನ ಕನಕ || ಪೊರೆಯನ್ನು ಕೊನೆತನಕ||

ನರಹರಿಯ ಪಾದಕ್ಕೆ| ಯೆರಗಿದಾಗಲೆ ಸಿಕ್ಕೆ ||5||

ಗಾಳೀಪಟ| ತನು| ಗಾಳೀಪಟ||

ಗಾಳಿಯು ನಿಂತರೆ ಧೂಳೀಪಟ ||ಪ||

ದುರ್ಭರ ದುಃಖದ| ನಿಬ್ಬರ ಸಂಕಟ|

ಗರ್ಭದೊಳಗೆ ಸೆರೆಮನೆ ಪಾಠ||

ಗಬ್ಬು ಮಲವು ಮೂತ್ರದಿ ಹೊರಳಾಟ|

ದಬ್ಬಲು ಹೊರಗಿದೆ ಮರುಳಾಟ ||1||

ಬಾಲತನದೊಳಗೆ ಬಲು ಹುಡುಗಾಟ|

ಮೇಲಿನ ಯವ್ವನ ನಲಿದಾಟ||

ಬಾಳಿನ ಸಂಕಟದೊಳು ಹೋರಾಟ|

ಬಾಳಲು ಮುಪ್ಪದು ಗೋಳಾಟ ||2||

ಪಶುವಿನ ರೀತಿಯ ಶಿಶುತನದಾಟ |

ವಸುಧೆಯೊಳಾಯಿತು ಹರಿದಾಟ ||

ವ್ಯಸನದ ಕಾಟ | ವಿಷಯದ ಊಟ |

ದೆಸೆಗೆಟ್ಟಾಡಿತು | ಹೋರಾಟ ||3||

ಕರ್ಮದ ಬಾಲಕೆಳಗೊಲೆದಾಟ |

ನಿರ್ಮಿಸಿ ನಿಂತಿತು ಹೊಯ್ದಾಟ ||

ಕರ್ಮವು ಸವೆಯಲು ನಿಂತಿತು ಓಟ |

ನಿರ್ಮೂಲವಾಯಿತು ಹಾರಾಟ ||4||

ಪೂರಕ ಕುಂಭಕ ರೇಚಕ ಕೂಟ|

ಮೂರೇ ಸೂತ್ರದ ಗಾಳಿಪಟ||

ಹಾರಿತು ಏರಿತು ತೋರಿತು ಆಟ|

ಸೇರಿತು ಗಗನವ ಗಾಳಿಪಟ ||5||

ಆಯುಷ್ಯ ಸೂತ್ರವು ಇರಲಿದರಾಟ|

ಮಾಯದೊಳಾಡಲು ಸವಿನೋಟ||

ನೋಯುವ ಬೇಯುವ ಜಡ ಜಂಜಾಟ |

ಸಾಯುವ ಕಾಲಕೆ ಲಾಗಾಟ ||6||

ಮರಣದ ಬಿರುಗಾಳಿಯು ಬರಲಾಕ್ಷಣ|

ಹರಿಯಲಾಯುಷ್ಯದ ಸೂತ್ರವಿದು||

ಒರಗಿತು ಗಾತ್ರ| ಪರಮ ವಿಚಿತ್ರ|

ನರಹರಿಯಿಂದಲೆ ಪರಮಾರ್ಥ ||7||

 

ದೇವರೇ ಕಟ್ಟಿರುವ ದೇವಾಲಯ|

ಜೀವರಿಗೆ ಕೊಟ್ಟಿರುವ ಸೇವಾಲಯ ||ಪ||

ಪಾವನಕೆ ಹುಟ್ಟಿತೀ ದೇಹಾಲಯ|

ಕೈವಲ್ಯ ಮುಟ್ಟಲಿದು ಯೋಗಾಲಯ ||ಅಪ||

ದೇವರೇ ಪ್ರತ್ಯಕ್ಷ ಕುಂತನಿಲ್ಲಿ|

ಜೀವನೇ ಕಾಯುತ್ತ ನಿಂತನಿಲ್ಲಿ||

ಸೇವಿಸುತ್ತಿರ್ಪನು ಜೀವನಿಲ್ಲಿ|

ಸಾವು ಹುಟ್ಟಳಿವುದು ಪೂಜೆಯಲ್ಲಿ ||1||

ಮುನಿಗಳೇ ತಪ ಮಾಡುತ್ತಿದ್ದರಿಲ್ಲಿ|

ಮನುಗಳೇ ಜಪ ಮಾಡಿ ಗೆದ್ದರಿಲ್ಲಿ||

ಅನುಮಾನವಿಲ್ಲದೇ ಶಿದ್ಧರಿಲ್ಲಿ|

ಅನುಭಾವ ಸಂಪಾದಿಸಿದ್ದರಿಲ್ಲಿ ||2||

ಒಂಭತ್ತು ಬಾಗಿಲ ದೇವಾಲಯ|

ಇಂಬಾಗಿ ಲೋಕವೇ ತುಂಬಿತಯ್ಯ||

ನಂಬಿದ್ದ ಮಾತ್ರಕೆ ನಿಲ್ಲದಯ್ಯ |

ಶಂಭು ಪೂಜೆಗೆ ನಿಂತುಕೊಳ್ಳಿರಯ್ಯ ||3||

ನಾದ ವಾದ್ಯಂಗಳ ಕೇಳಿರಿಲ್ಲಿ|

ವೇದ ಘೋಷಂಗಳ ಮಾಡಿರಿಲ್ಲಿ ||

ಬೋಧಾಮೃತದ ಗಂಗೆ ಹರಿವಳಿಲ್ಲಿ|

ಭೇದವಿಲ್ಲದೆ ಸ್ನಾನ ಮಾಡಿರಿಲ್ಲಿ ||4||

ಇಲ್ಲಿವೇ ಕೈಲಾಸ ವೈಕುಂಠವು|

ಇಲ್ಲಿವೆ ಸ್ವರ್ಗವು ಯಮ ಲೋಕವು||

ಇಲ್ಲಿಯೇ ಹರಿಹರ ಬ್ರಹ್ಮರುಂಟು|

ಇಲ್ಲಿಯೇ ನರಹರಿ ತಾನೆವುಂಟು ||5||

ಮೂರವಸ್ಥೆಗಳಿಗೆ ತಾನೆ |ತೋರುತಿರ್ಪ ಸಾಕ್ಷಿಯಾಗಿ |

ಭೂರಿಬ್ರಹ್ಮ ತಾನೆಯೆಂಬ ಸಾರ ತಿಳಿಯಲು ||ಪ||

ಹಾರುತಿಹುದು ಬಂಧ ಮನವು | ಸೇರುತಿಹುದು ಬ್ರಹ್ಮದಲ್ಲಿ |

ಸೂರೆಯಹುದು ಮುಕ್ತಿ ರಾಜ್ಯ ಸೇರಿ ಸುಖಿಸುವಾ ||ಅಪ||

ತಾನೆ ಭಕ್ತ ತಾ ಮಹೇಶ | ತಾನೆ ಸುಪ್ರಸಾದಿಯಾಗಿ |

ಪ್ರಾಣಲಿಂಗಿ ಶರಣ ಐಕ್ಯ ಭಾವ ಬಲಿಯುತಾ||

ಜ್ಞಾನಯೋಗಿ ಕರ್ಮನೀಗಿ ಮೌನಿಯಾಗಿ ನಿಲ್ಲಲಾಗಿ|

ಸ್ವಾನುಭಾವದಿಂದ ಜೀವಭಾವ ನೀಗುವಾ ||1||

ಮೂಲಮಂತ್ರ ತಿಳಿಯಲಾಗಿ| ಕಾಲತಂತ್ರ ಕಳೆದುಹೋಗಿ |

ಮೂಳಯಂತ್ರ ದೇಹದಾಸೆಯೆಲ್ಲ ನೀಗಲು||

ಹಾಳು ಸಂಸೃತಿಗಳು ತೊಲಗಿ| ಕೀಳು ದುರ್ಗುಣಗಳು ಮುಳುಗಿ|

ಮೂಲಬ್ರಹ್ಮ ತಾನೆಯಾಗಿ ಬೆಳಗುತಿರ್ಪನು ||2||

ತನಗೆ ತಾನೆ ನಡೆವ ಯೋಗ| ತನಗೆ ತಾನೆ ನಡೆವ ಯಜ್ಞ |

ವನು ವಿಚಾರದಿಂದ ತಿಳಿದು ನರಹರೀಂದ್ರನ||

ವಿನುತ ಬೋಧೆಯಿಂದ ನಿತ್ಯ | ಅನುಭವಕ್ಕೆ ತಂದು ಸತ್ಯ|

ಅನುಪಮಾತ್ಮ ಜ್ಞಾನ ಪಡೆಯಲವನೆ ಬ್ರಹ್ಮವು ||3||

ಇದು ಸತ್ಯಸಾರ| ಬೋಧಾ ವಿಚಾರ ||ಪ||

ಹೃದಯಾಹ್ಲಾದ | ಸುಧೆಯಾಸ್ವಾದಾ ||ಅಪ||

ಶರೀರವೆ ಶಿವಮಂ| ದಿರವಾಗಿಹುದೆನೆ||

ಶರೀರದ ಶೋಧನೆ| ಪರಮನ ಸಾಧನೆ ||1||

ಸಾಕಾರವೆಲ್ಲನಿ| ರಾಕಾದಲ್ಲಿಯೆ ||

ಏಕೀಕರಿಸಿ ನಿ | ರಾಕಾರವಾದುದು ||2||

ಮಿಥ್ಯವು ಲೋಕವು| ಸತ್ಯವು ಬ್ರಹ್ಮವು||

ನಿತ್ಯಾನಿತ್ಯದ | ವಸ್ತು ವಿವೇಕವು ||3||

ಈಷಣತ್ರಯಯುತ | ಆಸೆಯ ನೀಗುತ||

ಈಶನ | ಕಾಂಬುದು| ಲೇಸೆಂದೆಂಬುದು ||4||

ಹರಿಯವತರಿಸುತ| ಗುರುವೆಂದೆನಿಸುತ||

ನರಹರಿ ನಾಮದೊ| ಳಿರುತಿಹನೆಂಬುದು ||5||

ಕಾಲ ಕಳೆಯಲೇಕೋ| ಗುರುವಿನ|

ಕೀಲು ತಿಳಿಯಬೇಕೋ ||ಪ||

ನಾಳೆಯೆನ್ನದೆ | ತಾಳುಯೆನ್ನದೆ |

ಬಾಳುವೆ ಕೊನೆಯ| ವೇಳೆಯ ತನಕ ||ಅಪ||

ಧನವು ನಿತ್ಯವಲ್ಲ| ನೋಡಲು | ತನುವು ಸತ್ಯವಲ್ಲಾ||

ಮನೆ ಮಠ ಹೊಲವು| ಕನಸಿನ ನಿಲುವು ||

ವನಿತೆ ಪುತ್ರರು| ನಿನಗೆ ದಕ್ಕರು ||1||

ಇಂದ್ರಿಯಂಗಳಿಂದ ತೋರ್ಪುದು| ಇಂದ್ರ ಜಾಲದಿಂದ ||

ಮುಂದುಗೆಟ್ಟು ನಿಜ | ವೆಂದು ಭ್ರಮಿಸದೆ||

ಚಂದದಿ ಗುರುಪದ| ಹೊಂದಿ ನಿಲ್ಲೆಲೊ ||2||

ಮೂರು ದಿನದ ಸಂತೆ| ಸಂಸೃತಿ | ಮೇರೆಯಿಲ್ಲದಂತೆ||

ಮೀರಿದ ಚಿಂತೆ| ತೋರಿತು ಕಂತೇ|

ಹಾರಲು ಪ್ರಾಣ| ಯಾರದು ಜಾಣ ||3||

ಯಾವ ವೇಳೆಯಲ್ಲಿ | ಬರುವುದೊ| ಸಾವು ತಪ್ಪದಿಲ್ಲಿ||

ನೋವು ರೋಗವು| ಜೀವಕಿರುವವು||

ಭಾವ ಭಕ್ತಿಯೊಳು| ಸೇವಿಸಿ ಬಾಳು ||4||

ಗುರುವಿನಡಿಯ ಸೇರು| ತತ್ವದ | ಗುರಿಯನೀಗ ಸಾರು||

ಮರಣದ ಮುನ್ನ | ನರಹರಿಯನ್ನ|

ಬೆರೆಯುವ ಯುಕ್ತಿ| ಪರತರ ಮುಕ್ತಿ ||5||

ಈತನಾರು ಈತನಾರು ನೋಡಿರಮ್ಮಾ| ಬಂದು | ಪಾಡಿರಮ್ಮ ||ಪ||

ಭೂತನಾಥ ಚೇತನಾತ್ಮ ತಾನೆಯಮ್ಮಾ| ಸತ್ಯ| ಕಾಣಿರಮ್ಮಾ ||ಅಪ||

ನಾಸಿಕಾ ನಿವಾಸಿಯಾಗಿ ನಡೆದು ಬಂದ| ದೇಹ| ಪಡೆದೆನೆಂದಾ||

ವಾಸನಾ ವಿಲಾಸಿಯಾಗಿ ಭೋಗಿಯಾದ| ಮುಂದೆ| ಯೋಗಿಯಾದ ||1||

ರಸನೆ ಕೂಡಿ ವಸತಿ ಮಾಡಿ ನಿಂತುಕೊಂಡ| ನಿತ್ಯ| ಶಾಂತಿ ಕಂಡಾ||

ರಸವನುಂಡು ತೃಪ್ತಿಗೊಂಡು ಎದ್ದು ಹೋದ| ಮಂತ್ರ| ಸಿದ್ಧನಾದ ||2||

ಕಣ್ಣು ಕೂಡಿ ಬಣ್ಣ ನೋಡಿ ನುಂಗಿಬಿಟ್ಟ | ಅಲ್ಲೆ| ತಂಗಿಬಿಟ್ಟ ||

ಕಣ್ಣುಮುಚ್ಚಿ ತನ್ನ ಮೆಚ್ಚಿ ನಿದ್ರೆಗೈದ| ಯೋಗ| ಮುದ್ರೆಯೆಂದಾ ||3||

ತ್ವಕ್ಕು ಸೇರಿ ಲೆಕ್ಕ ಮೀರಿ ವ್ಯಾಪಿಸಿದ್ದ | ಎಲ್ಲ | ರೂಪಿಸಿದ್ದ ||

ಸಿಕ್ಕ ಸ್ಪರ್ಶ ಮಿಕ್ಕು ಹರ್ಷ ತೋರುತಿದ್ದ| ಬ್ರಹ್ಮ| ಸೇರುತಿದ್ದ ||4||

ಕಿವಿಗಳೆಂಬ ಗವಿಯ ತುಂಬ ಸೇರಿಕೊಂಡ| ಮುಕ್ತಿ | ದಾರಿ ಕಂಡ||

ಶ್ರವಣ ಮಾಡಿ ಶಿವನ ಕೂಡಿ ನರಹರೀಂದ್ರ| ನಿಂದ| ಹರುಷದಿಂದ ||5||

ನಂಬಿ ಕೆಟ್ಟವರಿಲ್ಲವೋ | ಸದ್ಗುರುವನ್ನು | ನಂಬದವರುಳಿದಿಲ್ಲವೋ ||ಪ||

ಡಂಭವನುಳಿದು ಆ| ಡಂಬರವಳಿದು ನಿಜ||

ಹಂಬಲದೊಳು ಭಕ್ತಿ| ತುಂಬಿರಲು ಮನದೊಳು ||ಅಪ||

ದಿಟ್ಟತನವಿರಲು ಬೇಕು| ಸದ್ಭಕ್ತಿಯೊಳು|

ಗಟ್ಟಿಯಾಗಿರಲು ಬೇಕು||

ಪಟ್ಟು ಹಿಡಿದುದರರಿವು| ಬಿಟ್ಟು ಹೋಗದೆ ಮನವು||

ಮುಟ್ಟಿನಿರ್ಮಲನಾಗಿ| ತುಟ್ಟ ತುದಿಯೊಳು ಸಾಗಿ ||1||

ನಂಬಿ ನಂಬದ ಹೇಡಿಯಾ| ಮಾತನು ಕೇಳಿ|

ನಂಬಿ ಕೆಡದಿರು ಕಂಡೆಯಾ||

ತುಂಬಿ ತುಳುಕುವ ಭವ| ದಂಬುಧಿಯ ದಾಂಟುವ||

ನಂಬಿಗೆಯ ಹಡಗೇರಿ| ಕೊಂಬುದೆ ನಿಜ ದಾರಿ ||2||

ಎಲ್ಲಿ ನೋಡಲು ತುಂಬಿದಾ| ಪರಬ್ರಹ್ಮವೆ|

ಬಲ್ಲೆಯಾ ಗುರುವೆಂಬುದಾ||

ಉಲ್ಲಾಸಮಯ ಭಕ್ತಿ | ಉಳ್ಳವರಿಗಿದು ಯುಕ್ತಿ||

ಸುಳ್ಳೆಂದುಕೊಂಡರೆ| ಸುಳ್ಳೆ ಎಂಬುದು ಖರೆ ||3||

ತನುಮನಧನವೀಯುತಾ| ಗುರು ಪಾದಕ್ಕೆ |

ವಿನಯದಿಂ ಶಿರ ಬಾಗುತಾ||

ಅನುಮಾನವನು ಬಿಟ್ಟು | ಅನುಭಾವವಳವಟ್ಟು||

ಘನಸೇವೆಯೊಳು ಪಟ್ಟು| ತನಗಾಯ್ತು ಗುರು ಗುಟ್ಟು ||4||

ಜನ್ಮ ಕೋಟಿಯ ಪುಣ್ಯವು | ಕೂಡುತ ಮನುಜ|

ಜನ್ಮವಾಯಿತು ಗಣ್ಯವು|| ಚಿನ್ಮಯಾತ್ಮಕ

ಜಗ| ದಾಣ್ಮ ನರಹರಿಯಿಂದ||

ಜನ್ಮಬಂಧವು ಕಳೆಯೆ| ತನ್ಮಯತ್ವವ ತಳೆಯೆ ||5||

ಹೋಯಿತೇನು ಭ್ರಾಂತಿ| ನಿನ|

ಗಾಯಿತೇನು ಶಾಂತಿ ||ಪ||

ತಾಯಿ ತಂದೆ ಬಂಧು ಬಳಗ||

ಕಾಯುತಿರ್ಪರಂತೀ| ಅ| ನ್ಯಾಯದಲ್ಲೆ ನಿಂತೀ ||ಅಪ||

ಆಗ ಈಗ ಅಂತೀ| ಬಿಡು| ವಾಗಲಿಲ್ಲ ಅಂತೀ||

ಬೇಗ ಬಂದು ಗುರು ಪಾದಕ್ಕೆ |

ಬಾಗಲೊಲ್ಲೆನಂತೀ| ಅರಿ| ವಾಗದಂತೆ ಕುಂತೀ ||1||

ಕಾವಿ ಕಪಿನಿ ಹೊದ್ದೆ| ದು|

ರ್ಭಾವದಲ್ಲೆ ಬಿದ್ದೆ| ಸಾವು ಹುಟ್ಟು ಎಲ್ಲಿ ಗೆದ್ದೆ||

ಜೀವ ಭಾವವಿದ್ದು| ನಿನ| ಗಾವುದಿಲ್ಲ ಮದ್ದು ||2||

ತಿಂದುತಿಂದು ಹೊರಳಿ| ನೀ|

ಬಂದೆ ಹುಟ್ಟಿ ಮರಳಿ|| ಬಂಧದಲ್ಲೆ ಬಿದ್ದು ನರಳಿ||

ಹಂದಿಯಂತೆ ಬಾಳಿ| ಪರ| ನಿಂದೆಯನ್ನು ತಾಳಿ ||3||

ಯಾರು ನಿನ್ನ ಬಂಧು| ಉ| ದ್ಧಾರಗೈವರಿಂದು||

ಪಾರು ಮಾಡು ಗುರುವೆಯೆಂದು |

ಸೇರಲೊಲ್ಲೆ ಬಂದು| ಬಡಿ| ವಾರದಲ್ಲೆ ನಿಂದು ||4||

ಧರಣಿಯಲ್ಲಿ ಬಂದೆ | ಸಂ | ಚರಿಸುತಿಲ್ಲೆ ನಿಂದೆ |

ಉರಿವ ತಾಪತ್ರಯಗಳಿಂದೆ ||

ನರಳಿ ನೀನೆ ನೊಂದೆ | ನೀ |

ಮರುಳು ಹಿಡಿದು ಬೆಂದೆ ||5||

ದಾನ ಧರ್ಮವಿಲ್ಲ | ಸ | ನ್ಮಾನ ಸತ್ಯವಿಲ್ಲ |

ಏನು ಕಂಡು ಧೈರ್ಯವಾಗಿ ||

ನೀನು ಬಾಳ್ವೆಯಿಲ್ಲಿ | ನಿಜ | ವೇನು ಪೇಳಬಲ್ಲಿ ||6||

ಹರನು ತಾನೆ ಬಂದ| ಗುರು| ವರನ ರೂಪದಿಂದ||

ನರನು ಎಂದು ಗುರುವನಿಂದು| ಮರೆಯಬೇಡ

ಕಂದ| ನರ| ಹರಿಯೆ ಕಳೆವ ಬಂಧ ||7||

ಈತ ಜಂಗಮ ಕಾಣಿರೋ | ಸುಖ|

ದಾತ ಜಂಗಮ ಕಾಣಿರೋ ||ಪ||

ಭೂತ ಪಂಚಕ ಕೂಡಿ ಸುಖಪಡು|

ವಾತ ಜಂಗಮ ಕಾಣಿರೋ ||ಅಪ||

ನಾಸಿಕಾಗ್ರದಿ ನಿಂತನು | ಸ|

ನ್ಯಾಸಿ ನಿಷ್ಠಾವಂತನು ||

ಆಸೆಯೆನ್ನುವ ಪಾಶ ಹರಿದನು |

ದೋಷಹರಣನು ಶಾಂತನು ||1||

ಪ್ರಾಣಲಿಂಗಿಯ ಪೂಜೆಗೊಲಿದು |

ತ್ರಾಣವಿತ್ತನು ನೋಡಿರೋ||

ತಾನೆ ತೀರ್ಥ ಪ್ರಸಾದಕೊಳ್ವನು |

ಜ್ಞಾನವೀವನು ಬೇಡಿರೋ ||2||

ನಡೆಯ ನಿರ್ಮಿಸುತಿರ್ಪನು ಸ |

ನ್ನುಡಿಯ ಧರ್ಮದಿ ತೋರ್ಪನು ||

ನಡೆನುಡಿಯ ನಡುರಂಗ ನಾಟ್ಯವ |

ಬಿಡದ ನರಹರಿಯೀತನು ||3||

ಬಾರೋ ಬಾ ಮಳೆ ದೇವನೇ | ದಯ|

ತೋರು ದೇವರ ದೇವನೆ ||ಪ||

ಧಾರಿಣಿಗೆ ಸುಖವೀವನೇ | ನಿ|

ರ್ಧಾರವಾಗಿಯೆ ಕಾವನೇ ||ಅಪ||

ಹಸಿವು ಎನ್ನುವ ಭೂತವು | ಬಾ|

ಧಿಸಲು ಮರಣಕೆ ಹೇತುವು ||

ಕುಸಿದು ಜೀವವು ಸೋತವು| ಇದು|

ವಸುಧೆಯೊಳಗಪಘಾತವು ||1||

ಮಸಣವಾಯಿತು ಲೋಕವು| ನಿ|

ಟ್ಟುಸಿರು ಕೂಡಿದ ಶೋಕವು||

ಮಸೆದು ನಿಂತಿದೆ ಕ್ಷಾಮವು | ದು|

ರ್ದೆಶೆಗೆ ಜಗವೆ ವಿರಾಮವು ||2||

ಬಡವರಿಗೆ ದಿಕ್ಕಿಲ್ಲವು| ಬಾ|

ಯ್ಬಿಡಲು ಕೊಡುವವರಿಲ್ಲವು||

ಪೊಡವಿ ಜೀವರಿಗೆಲ್ಲವು| ನೀ |

ಕೊಡುವ ದಾನಿಯು ಬಲ್ಲೆವು ||3||

ಪಶುಗಳಂಬಾ ಎಂಬವು | ಎಳೆ |

ಶಿಶುಗಳಮ್ಮಾ ಎಂಬವು ||

ಹಸಿದು ಆತುರಗೊಂಬವು| ಜೀ|

ವಿಸುವ ಆಸೆಯ ನಂಬವು ||4||

ಎತ್ತ ನೋಡಲು ಕುತ್ತವು| ಕುಣಿ|

ಯತ್ತ ಬರುತಿದೆ ಮೃತ್ಯುವು ||

ಬತ್ತಿದುದು ಸಮ ಚಿತ್ತವು| ನಿ|

ನ್ನತ್ತ ನರಹರಿ ಸತ್ಯವು ||5||

ರಂಗಯ್ಯ ತಾನಾದ ಲಿಂಗಯ್ಯ | ಶಂಭು|

ಲಿಂಗಯ್ಯ ತಾನಾದ ರಂಗಯ್ಯ ||ಪ||

ಕಂಗೊಳಿಸುತಿರುವಾಗ ರಂಗಯ್ಯ | ಅಂತ|

ರಂಗದೊಳಿರುವಾಗ ಲಿಂಗಯ್ಯ ||ಅಪ||

ನಾಮಧಾರಿಯು ತಾನೆ ರಂಗಯ್ಯ | ಸರ್ವ|

ನಾಮ ದೂರನು ತಾನೆ ಲಿಂಗಯ್ಯ ||

ಕಾಮಪಿತನಾಗಿದ್ದ ರಂಗಯ್ಯ| ನೋಡೆ|

ಕಾಮಹರನಾಗಿದ್ದ ಲಿಂಗಯ್ಯ ||1||

ಗಂಗೆಗೆ ಪಿತನಾದ ರಂಗಯ್ಯ | ದೇವ|

ಗಂಗೆಗೆ ಪತಿಯಾದ ಲಿಂಗಯ್ಯ ||

ಅಂಗವಾಗಿರುವಾಗ ರಂಗಯ್ಯ| ಶೂನ್ಯ|

ಲಿಂಗವಾಗಿರುವಾಗ ಲಿಂಗಯ್ಯ ||2||

ಸರ್ಪ ಶಾಯಿಯು ತಾನೆ ರಂಗಯ್ಯ | ನಿತ್ಯ|

ಸರ್ಪ ಭೂಷಣನಾದ ಲಿಂಗಯ್ಯ||

ಕಪ್ಪು ಬಣ್ಣದೊಳಿದ್ದ ರಂಗಯ್ಯ | ತಾನೆ|

ಕಪ್ಪುಗೊರಳಾದಾಗ ಲಿಂಗಯ್ಯ ||3||

ನುಡಿಯಲ್ಲಿ ಬಂದಾಗ ರಂಗಯ್ಯ | ಶುದ್ಧ|

ನಡೆಯಲ್ಲಿ ನಿಂದಾಗ ಲಿಂಗಯ್ಯ ||

ಕಡಲಲ್ಲಿ ಇದ್ದಾಗ ರಂಗಯ್ಯ| ಬೆಟ್ಟ |

ದೆಡೆಯಲ್ಲಿ ಇದ್ದಾಗ ಲಿಂಗಯ್ಯ ||4||

ಸಾಕಾರ ಮೂರ್ತಿಯೇ ರಂಗಯ್ಯ | ತಾನಿ |

ರಾಕಾರ ನಿರ್ಗುಣ ಲಿಂಗಯ್ಯ||

ಏಕ ರೂಪನು ರಂಗ ಲಿಂಗಯ್ಯ | ಸದ್ವಿ|

ವೇಕ ನರಹರಿ ಗುರು ಲಿಂಗಯ್ಯ ||5||

ಮಂಗಳಾರತಿ ಮಾಡಿ| ಕಂಗಳಲ್ಲಿಯೆ ನೋಡಿ|

ಮಂಗಳಾತ್ಮಕನಾದ ನರಹರಿಗೆ ||ಪ||

ಲಿಂಗಾಂಗ ಸಮರಸ| ದಿಂಗಿತವನು ಕೂಡಿ|

ಅಂಗನಾಮಣಿಯರು|| ಗುರುವರೆಗೆ ||ಅಪ||

ಎಲ್ಲಿ ಸಿಕ್ಕಿದ ವಸ್ತು| ವಿಲ್ಲೆ ಸಿಕ್ಕುವುದೆಂದು |

ಉಲ್ಲಾಸದಿಂದ ತೋರಿಸಿದವಗೆ ||

ಬಲ್ಲ ಯೋಗಿಯು ಮಾಡ| ಬಲ್ಲ ಜ್ಞಾನದ ಯೋಗ|

ದಲ್ಲಿ ನಿಲ್ಲಿಸಿದಂಥ ನರಹರಿಗೆ ||1||

ಜಗವೆಲ್ಲ ತಾನಾಗಿ ಯುಗ | ಯುಗದೊಳು ಸಾಗಿ|

ಯುಗ ಪುರುಷನಾಗಿರ್ಪ|| ದೇವನಿಗೆ ||

ಜಗದೀಶನೆನಿಸುತ್ತ | ಬಗಳಾಂಬೆಯೊಳು ಕೂಡಿ|

ನಿಗಮಾಗಮವ ಪೇಳ್ದ ನರಹರಿಗೆ ||2||

ನಾದದಲ್ಲಿಯೆ ಬಂದ| ವೇದವೆನ್ನಿಸಿ ನಿಂದ|

ಬೋಧಾತ್ಮನಾದಂಥ || ಪರತರಗೆ ||

ಆದಿ ಮೂಲದ ಬ್ರಹ್ಮ| ವೇದಾಂತ ನಿಜ ಧರ್ಮ |

ಶೋಧಿಸಿ ಪೇಳ್ದಂಥ ನರಹರಿಗೆ ||3||

ಎಲ್ಲವು ಶಿವನಾಟ| ಏನೇ| ನಿಲ್ಲವು ನರರಾಟ ||ಪ||

ನಿಲ್ಲದು ಆಟ| ಮಾಯದ ಮಾಟ| ಇಲ್ಲವು ಜಗದಾಟ ||ಅಪ||

ಎಲ್ಲವ ಮಾಡಿದನು| ತಾನಿದ| ರಲ್ಲಿಯೆ ಕೂಡಿದನು ||

ಎಲ್ಲವನಾಡಿಸಿ | ಎಲ್ಲವ ರೂಢಿಸಿ| ನಿಲ್ಲುವ ವಿಂಗಡೀಸೀ ||1||

ನಾದದಿ ಕೂಡಿದನು | ಸುಂದರ| ವೇದವ ಪಾಡಿದನು||

ಶೋಧಿಸಿ ನೋಡಲು | ವಾದವ ಬಿಡಲು| ಬೋಧೆಯ ಮಾಡಿದನು ||2||

ನಡೆವುದು ಶಿವನಾಟ| ಎಲ್ಲವ| ನುಡಿವುದು ಶಿವನಾಟ|

ನಡೆನುಡಿ ಕೂಟ| ದೆಡೆಯೊಳು ನೋಟ| ಪಡೆದರೆ ನಿಜಪಾಠ ||3||

ಇಂದ್ರಿಯಗಳನೆಲ್ಲಾ| ತಾನೇ| ಬಂಧಿಸಿರುವನಲ್ಲಾ||

ಎಂದಿಗು ಜಗಕಾ| ನಂದವನೀಯುತ| ನಿಂದಿರುತಿಹನಲ್ಲಾ ||4||

ವಿಷಯಂಗಳ ಕೂಟ | ನಾನಾ | ವ್ಯಸನದಿ ಹರಿದಾಟ ||

ಹಸನ ಮಾಡಿ ಘಟ | ಪುಸಿಯೆನೆ ಸಂಕಟ | ಹೆಸರಿಲ್ಲದಾಯ್ತಕಟ ||5||

ಅಂತರಂಗದೊಳಗೆ | ನೀನೇ | ನಿಂತ ವೇಳೆಯೊಳಗೆ ||

ಚಿಂತೆಯ ಹರಿದೆ | ಸಂತಸ ಮೆರೆದೆ | ಶಾಂತಿಯ ಸುಧೆ ಸುರಿದೆ ||6||

ಸಾಧುಗಳೊಳು ಕೂಡಿ | ಅನುಭವ | ವಾದುದ ಮೈಗೂಡಿ ||

ಸಾಧನೆ ಮಾಡಿ | ವೇದವ ನೋಡಿ | ವಾದವನೀಡಾಡಿ ||7||

ಗಂಗಾ ಯಮುನೆಗಳು | ನಿಂತಿಹ | ಸಂಗಮ ತಾಣದೊಳು ||

ಶೃಂಗಾರದಿ ಭವ | ಭಂಗವ ಮಾಡುವ | ಮಂಗಳನೀ ಶಿವನು ||8||

ಆತನ ಕಂಡವನು | ಜನ್ಮದ | ಭೀತಿಯ ಕಳೆಯುವನು||

ಆತನ ನಾಮ | ಚೇತನ ಧಾಮ| ಶ್ರೀ ನರಹರಿನಾಮ ||9||

ಎಂಥ ಮಾನವ ಜನ್ಮವು | ಇದ|

ರಂಥ ಜನ್ಮವೆ ಇಲ್ಲವು ||ಪ||

ಚಿಂತೆಯಲ್ಲಿಯೆ ಸಾಯ್ವುದು| ಶಿವ|

ಚಿಂತನವ ತಾನೊಲ್ಲದು ||ಅಪ||

ದಿನವು ರೋಗದಿ ನೊಂದರೂ |ಸಂ|

ಜನಿಪ ದುಃಖದಿ ಬೆಂದರೂ||

ಇನಿತು ಜ್ಞಾನವ ಪೊಂದದು | ನಿ|

ರ್ಗುಣ ವಿರಕ್ತಿಯ ತಾಳದು ||1||

ಕಷ್ಟವೆಷ್ಟೇ ತೋರಲು| ಅತಿ |

ನಷ್ಟಗಳು ಮಿತಿಮೀರಲು ||

ಇಷ್ಟವಾಗದು ಸಾಯಲು | ತಾ |

ನೆಷ್ಟು ದಿನ ಕಳೆದಾಗಲು ||2||

ಏಳಲಾರದೆ ಇದ್ದರೂ | ತಾ|

ಮೂಲೆಯಲ್ಲಿಯೆ ಬಿದ್ದರೂ||

ಬೀಳುವಂತೆ ಒದ್ದರೂ| ಈ |

ಬಾಳಿನಾಸೆಯು ನೀಗದು ||3||

ತಡೆದು ನಿಂದಿಸಿದಾಗಲೂ | ಕೈ|

ಹಿಡಿದು ಬಂಧಿಸಿದಾಗಲೂ ||

ಹೊಡೆದು ನೂಕಿರುವಾಗಲೂ| ಮನ|

ದೃಢ ವಿರಕ್ತಿಯ ತಾಳದು ||4||

ಸಾಲಸೋಲಗಳಾದರೂ| ಸಂ|

ಕೋಲೆಯಲ್ಲಿಯೆ ಇದ್ದರೂ||

ಶೂಲದಿಂದಿರಿದಾಗಲೂ| ಶ್ರೀ|

ಲೋಲ ನರಹರಿಯೆನ್ನದು ||5||

ಎಂತಿರುವನು ಯೋಗಿ| ಚಿಂತೆಗಳನು ನೀಗಿ|

ಸಂತೋಷ ಪರನಾಗಿ| ಶಾಂತಿಯುತನಾಗಿ ||ಪ||

ಅಂತಿಂತುಯೆನಲಾಗ| ದಂಥ ಚಿದ್ಘನನಾಗಿ |

ಪಂಥವಾಸಿಗಳಿಲ್ಲದಂಥ ಸುವಿರಾಗಿ ||ಅಪ||

ಕಾಣುತ್ತಲಿಹ ಜಗವ| ಏನಿಲ್ಲವೆ| ನುತಿರುವಾ|

ಕಾಣದಂತಿಹ ಬ್ರಹ್ಮ| ತಾನಿರುವುದೆನುವಾ|

ಏನೋ ಸ್ವಲೀಲೆಯೊ| ಳಾನಂದಪಡುತಿರುವ |

ಹಾನಿ ವೃದ್ಧಿಯು ತನಗೇನಿಲ್ಲವೆನುವಾ ||1||

ಜಲದಿ ಪುಟ್ಟಿದ ಕಮಲ| ಜಲವಂಟದಿರುವಂತೆ||

ಮಲಿನ ದೇಹದೊಳಿದ್ದು | ಇಲ್ಲದಂತಿರುವ||

ಬಲಿತು ಮಾಗಿದ ಹಣ್ಣು| ಕಳಚುತ್ತಲಿರುವಂತೆ|

ಸುಲಭವಾದನುಭವದಿ ಕಡೆಗಾಗುತಿರುವಾ ||2||

ತೆರೆಯಿಲ್ಲದಂಬುಧಿ| ಯಿರುವಂತೆ ಶಾಂತಿಯ|

ಧರಿಸುತ್ತ ನಿಶ್ಚಲವ ನಿರ್ಮಲ ಯೋಗಿ ||

ಮರದ ನೆರಳೊಳು ತನ್ನ | ನೆರಳಡಗುವಂದದಿ|

ನರಹರಿಯೊಳಗೈಕ್ಯವಾಗಿರುತಿಹನಾಗಿ ||3||

ಜ್ಞಾನದಿಂದಲೆ ಮುಕ್ತಿಯು| ಸು|

ಜ್ಞಾನವೇ ಸುವಿರಕ್ತಿಯು ||ಪ||

ಧ್ಯಾನವೇ ಸದ್ಭಕ್ತಿಯು | ಸಂ|

ಧಾನವೇ ಗುರು ಯುಕ್ತಿಯು ||ಅಪ||

ಅದ್ರಿಗುಹೆ ಗುಲ್ಮಂಗಳೊಳಗೆ |

ಇದ್ದರಾಗದು ಮುಕ್ತಿಯು||

ಬದ್ಧಮನ ಸಂಕಲ್ಪವಳಿಯುತ|

ಶುದ್ಧನಾದರೆ ಮುಕ್ತಿಯು ||1||

ಜಪತಪಾದಿ ಯೋಗ ಮಾರ್ಗದಿ|

ಸಫಲವಾಗದು ಮುಕ್ತಿಯು||

ಕಪಟವಳಿದ ಪರೋಕ್ಷ ಜ್ಞಾನನೆ|

ಸುಪಥವಿದು ವೇದೋಕ್ತಿಯು ||2||

ತೀರ್ಥಯಾತ್ರೆಗಳಿಂದಲು ಸ|

ತ್ಪಾತ್ರದಾನಗಳಿಂದಲು ||

ಮೂರ್ತಿ ಪೂಜೆಗಳಿಂದಲಾಗದು|

ಮುಕ್ತಿ ಜನ್ಮವು ತಪ್ಪದು ||3||

ನೀರ ಮುಳುಗಿದರಾಗದು ಸಂ|

ಸಾರ ಬಿಟ್ಟರೆ ಸಾಗದು|

ಬಾರಿ ಬಾರಿಗು ಮಂತ್ರ ಸಾಸಿರ|

ಸಾರಿ ಜಪಿಸಿದರಾಗದು ||4||

ಭಕ್ತಿಭಾವವು ತುಂಬದೆ | ಗುರು |

ಯುಕ್ತಿ ಮನದೊಳು ನಂಬದೇ ||

ಮುಕ್ತನಾಗಲು ಸಾಧ್ಯವೇ ಸುವಿ |

ರಕ್ತಿ ಪಾಮರ ವೇದ್ಯವೇ ||5||

ಜ್ಞಾನವಿಲ್ಲದೆ ಭಕ್ತಿ ಜಪತಪ |

ವೇನು ಸಾರ್ಥಕವಾಗದು ||

ಮೌನಿ ನರಹರಿ ಪೇಳ್ದ ಬೋಧಾ |

ಜ್ಞಾನವಾದರೆ ಮುಕ್ತಿಯು ||6||

ಆಗ ಈಗೆಂದೆನ್ನದೇ ಒಣ|

ಭೋಗದಾಸೆಗೆ ಹೋಗದೇ|

ಬೇಗ ನರಹರಿ ದೇವನಂಘ್ರಿಗೆ

ಬಾಗಿದರೆ ಸುಖವಾಗದೇ ||7||

ಶಿವನೇ ಜಗದಾದಿ ಕಾರಣನು | ಭವರೋಗ ಹರನು ||ಪ||

ನವಲೀಲೆಯಿಂದಲಾಡುವನು| ಸುವಿರಾಗಪರನು ||ಅಪ||

ನಡೆ ತಪ್ಪಿ ನುಡಿಯನಾಡುವನು | ತಡೆಯಿಲ್ಲದವನು ||

ನುಡಿ ತಪ್ಪಿ ನಡೆಯತೊಡಗುವನು | ಕಡುಜಾಣ ಶಿವನು ||1||

ನಡು ನಾಡಿ ತುದಿಯನೇರುವನು| ಒಡನಾಡಿ ತಾನು||

ಹೊಡೆದಾಡಿ ವರವನೀಯುವನು | ಒಡಲಿಲ್ಲದವನು ||2||

ಅಮರರೊಳು ಅಮರನಾದವನು| ನಮಗಾದ ನರನು||

ವಿಮಲಾತ್ಮ ಗುರುವು ಎಂದೆನಿಸಿದನು| ಸಮಭಾವ ಪರನು ||3||

ಮೈದೋರಿ ಬಂದ ತಾನಿಲ್ಲಿ| ಮೂದೇವರಲ್ಲಿ|

ನಾದಾಂತವಾದೋಂಕಾರದಲಿ| ವೇದಾಂತದಲ್ಲಿ ||4||

ಚಕ್ರಂಗಳಾರು ಗೆದ್ದವನು | ಚಕ್ರೇಶ್ವರನಿವನು ||

ಭಿಕ್ಷಾಟನದಿಂದ ಬದುಕುವನು | ಲಕ್ಷಾಧೀಶ್ವರನು ||5||

ಯಾರಾರಿಗೆಲ್ಲಿ ಕಾಣಿಸನು | ಊರಲ್ಲೆ ಇಹನು ||

ಧೀರರಿಗೆ ತಾನೆ ತೋರುವನು | ಧಾರಾಳಿಯಿವನು ||6||

ನರನೆಂದು ಮೋಸ ಹೋದವರು| ನರಕಕ್ಕೈದುವರು|

ನರಹರಿಯ ನಂಬದಿರುತಿಹರು| ನರಪಶುವಾಗುವರು ||7||

ನಿನ್ನದೆ ಜಗವೆಲ್ಲಾ | ನನ್ನದು ಏನಿಲ್ಲ ||ಪ||

ನಿನ್ನದೆನ್ನದೆ ಪಾಪಿ| ಯೆನಿಸಿದೆನಲ್ಲಾ ||ಅಪ||

ಇಳೆ ನಿನ್ನದಾಗಿದೆ| ಜಲ ನಿನ್ನದಾಗಿದೆ|

ಮಳೆ ನಿನ್ನದಾಗಿದೆ| ಬೆಳೆ ನಿನ್ನದಯ್ಯಾ ||1||

ಪೊಳೆವಗ್ನಿ ನಿನ್ನದು | ಚಲಿಸುವ ಮಾರುತ||

ನೆಲೆಯಿಲ್ಲದಾಗಸ| ಗಳು ನಿನ್ನವಯ್ಯ ||2||

ರವಿಚಂದ್ರ ತಾರೆಗ| ಳಿವು ಎಲ್ಲ ನಿನ್ನವು||

ನವಚೇತನಾತ್ಮವೈ| ಭವ ನಿನ್ನದಯ್ಯಾ ||3||

ನಿನ್ನದೆ ಉಂಡುಟ್ಟೆ| ನಿನ್ನೊಳು ಸುಖಪಟ್ಟೆ ||

ನಿನ್ನ ಮರೆತುಬಿಟ್ಟೆ | ನಾನೀಗ ಕೆಟ್ಟೆ ||4||

ತನು ನಿನ್ನದಯ್ಯ ಈ | ಮನ ನಿನ್ನದಯ್ಯ ||

ಧನ ನಿನ್ನದಯ್ಯ ವಾ | ಚನ ನಿನ್ನದಯ್ಯ ||5||

ನಿನ್ನದೀ ಬುದ್ಧಿಯು | ನಿನ್ನವಿಂದ್ರಿಯಗಳು ||

ನಿನ್ನದೀ ಸರ್ವವು | ನನ್ನದೇನಲ್ಲಾ ||6||

ನಿನ್ನದು ಸಂಸಾರ | ನಿನ್ನದು ವ್ಯಾಪಾರ ||

ನಿನ್ನದು ವ್ಯವಹಾರ | ನನಗಿದು ದೂರ ||7||

ನಿನ್ನೊಳು ನಾನಿದ್ದು | ನನ್ನೊಳು ನೀನಿದ್ದು |

ನಿನ್ನ ಕಾಣದೆ ಇದ್ದು | ದೆನ್ನದು ತಪ್ಪು ||8||

ನಶ್ವರವರಿತೆನಲ್ಲ | ಶಾಶ್ವತ ಮರೆತೆನಲ್ಲ ||

ಈಶ್ವರ ನಿನ್ನೊಳೆಲ್ಲ | ವಿಶ್ವವಿತ್ತಲ್ಲಾ ||9||

ಅನ್ಯವೆಲ್ಲವನರಿತೇ | ನನ್ನ ನಾನೇ ಮರೆತೆ ||

ನನ್ನ ನಾನರಿಯಲಾಗಿ | ನಿನ್ನೊಳು ಬೆರೆತೇ ||10||

ಗುರು ರೂಪಧಾರಿಯೆ | ಧರೆಯ ಸಂಚಾರಿಯೆ||

ಪರತತ್ವ ಲಹರಿಯೆ | ಪೊರೆ ನರಹರಿಯೇ ||11||

ಮಾಡು ಮಾನವ| ಶಿವನ ಧ್ಯಾನವ|

ಬೇಡು ನೀ ಸುಜ್ಞಾನವಾ ||ಪ||

ಕೂಡು ಮೌನವ ಗುರು ವಿಧಾನವ |

ನೋಡು ಬ್ರಹ್ಮದ ವೈಭವಾ ||ಅಪ||

ಯಾರ ನಂಬಿದರಾಗದು| ಗುರು|

ತೋರದಿರೆ ಗುರುತಾಗದು||

ಧೀರನೆಂದರೆ ಸಾಗದು | ಸಂ|

ಸಾರಬಿಡೆ ಭವನೀಗದು ||1||

ಅಡವಿಯೊಳು ಸೇರಿದ್ದರೂ| ಬಲು|

ಜಡೆಗಳನು ಬೆಳೆಸಿದ್ದರೂ||

ಬಿಡದೆ ಕಾವಿಯ ಹೊದ್ದರೂ | ಭವ|

ಬಿಡದು ಪರ್ಣವ ಮೆದ್ದರೂ ||2||

ಬೆತ್ತಲಾದರು ತಪ್ಪದು| ತನು|

ಬತ್ತಿದರು ಭವ ತಪ್ಪದು ||

ಮೆತ್ತಿ ಬೂದಿಯ ಮೈಯೊಳು| ತಿರು|

ಗುತ್ತಲಿದ್ದರು ತಪ್ಪದು ||3||

ಜಪವ ಮಾಡಿದರಿಲ್ಲವು | ಬಲು |

ತಪವು ಮುಕ್ತಿಗೆ ಅಲ್ಲವು ||

ಜಪತಪಂಗಳಿವೆಲ್ಲವು| ಸುಖ|

ವಿಪುಲ ಜನ್ಮವ ನೀವುವು ||4||

ನುಡಿಯೆ ಮಂತ್ರದ ಸಿದ್ಧಿಯು | ಸ |

ನ್ನಡೆಯೆ ಯಂತ್ರದ ಸಿದ್ಧಿಯು ||

ನಡುವೆ ನಿಂತುದೆ ಶುದ್ಧಿಯು | ಗುರು |

ಕೊಡುವ ನಿಶ್ಚಯ ಬುದ್ಧಿಯು ||5||

ಯೋಗ ಜಪತಪವೆಲ್ಲವು | ಶಿವ |

ಯೋಗಕೆಣೆಯೇನಲ್ಲವು ||

ಯೋಗವೇ ನಿಜ ಜ್ಞಾನವು | ಶಿವ |

ಯೋಗಿ ನರಹರಿ ಧ್ಯಾನವು ||6||

ಆಸೆಯಳಿಯದೆ ಮುಕ್ತಿಯೇ | ಸ|

ನ್ಯಾಸಿ ವೇಷಕೆ ಮುಕ್ತಿಯೇ ||

ವಾಸನಾತ್ರಯ ದೂರನೇ | ಭವ|

ನಾಶ ನರಹರಿ ಧೀರನೇ ||7||

ನಾದ ರೂಪನಾದ ಶಿವನ | ನೋಡಿರವ್ವ| ಇಲ್ಲೆ | ಕೂಡಿರವ್ವ ||ಪ||

ವೇದವೋದಿ ಸತ್ಯವಾದಿ| ಯಾದನವ್ವ | ಗುಪ್ತ| ನಾದನವ್ವ ||ಅಪ||

ಯಂತ್ರ ಹಿಡಿದು | ಮಂತ್ರ ನುಡಿದು |

ನಿಂತನವ್ವ | ಸತ್ಯ| ವಂತನವ್ವ||

ತಂತ್ರ ತಿಳಿಸಿ| ಚಿಂತೆಯಳಿಸಿ|

ಕುಂತನವ್ವ| ನಿತ್ಯ | ಶಾಂತನವ್ವ ||1||

ಮೂರಕ್ಷರದೊಳೊಂದಕ್ಷರವೆ|

ಸೇರಿತವ್ವ | ಎಲ್ಲ| ತೋರಿತವ್ವ ||

ಮೀರಿ ಕೊನೆಯ ಸೇರಿ ಬೇರೆ|

ಸಾರಿತವ್ವ | ಬ್ರಹ್ಮ| ಸೇರಿತವ್ವ ||2||

ಎರಡಕ್ಷರದೊ | ಳೊಂದಕ್ಷರವ |

ನೊರೆದನವ್ವ | ಅಲ್ಲೆ ಬೆರೆದನವ್ವ ||

ಮೆರೆದು ಮೂರ | ಕ್ಷರವ ಮಾಡಿ |

ಬರುವನವ್ವ | ಒಂದಾಗಿರುವನವ್ವ ||3||

ಐದು ದಾರಿಗೈದು ರೂಪ |

ನಾದನವ್ವ | ಬಂದು| ಹೋದನವ್ವ ||

ಐದು ಕಲೆತ ಹಾದಿಯನ್ನು |

ಕಾದನವ್ವ | ಬ್ರಹ್ಮ | ನಾದನವ್ವ ||4||

ನೇತ್ರ ಮಾತ್ರನೆಂದುಕೊಳ್ಳ | ಬೇಡಿರವ್ವ |

ನಿಂತು | ನೋಡಿರವ್ವ ||

ಸೂತ್ರಧಾರಿ ಸತ್ಯ ತೋರಿ| ನಿಂದಾನವ್ವ |

ನಿತ್ಯಾ | ನಂದನವ್ವ ||5||

ಮೂರು ಮೂಲೆ ಕೋಣೆಯಲ್ಲಿ |

ತೋರ್ಯಾನವ್ವ | ತಾನೆ | ತೂರ್ಯಾನವ್ವ ||

ಮೂರು ಕಾಲಿನ ಹಂಸನನ್ನು |

ಏರ್ಯಾನವ ಯೋಗಿ ವರ್ಯಾನವ್ವ ||6||

ಹುಡುಕಿ ಹುಡುಕಿ ಸಿಕ್ಕದವನ |

ಹಿಡಿಯಿರವ್ವ | ನಂಬಿ | ನಡೆಯಿರವ್ವ ||

ನಡೆವ ನುಡಿ| ವ | ನರಹರೀಂದ್ರ |

ಒಡೆಯನವ್ವ | ಮುಕ್ತಿ | ಕೊಡುವನವ್ವ ||7||

ಅರಿವಲ್ಲ| ಇದು | ಅರಿವಲ್ಲ|| ನಿಜ|

ವರಿಯದೆ ಅಜಹರಿ| ಹರರು ಬೇರೆಂಬುದು ||ಪ||

ಶಿವ ಬೇರೆಯಿಲ್ಲ ಕೇ| ಶವ ಬೇರೆಯಿಲ್ಲ||

ಶಿವ ಕೇಶವರು ಸೇರಿ | ರುವ ರೀತಿ ತಿಳಿದಿಲ್ಲ ||1||

ಮಾಧವ ಬೇರೆ ಉ| ಮಾಧವ ಬೇರಿಲ್ಲ||

ಶೋಧಿಸಿ ನೋಡಲೊಂ| ದಾದುದ ತಿಳಿದಿಲ್ಲ ||2||

ಸಗುಣವು ಬೇರಿಲ್ಲ| ನಿರ್ಗುಣಕೆ ದೂರಿಲ್ಲ ||

ಸಗುಣವೆ ನಿರ್ಗುಣದ | ಬಗೆಯಾದುದರಿತಿಲ್ಲ ||3||

ಸಾಕಾರವೆಲ್ಲ ನಿ| ರಾಕಾರವಾಯ್ತಲ್ಲ ||

ಏಕ ರೂಪದೊಳಿರ| ಬೇಕಾದುದರಿತಿಲ್ಲ ||4||

ಶಿವ ಬೇರೆಯಲ್ಲ | ಜೀವನು ಬೇರೆಯಲ್ಲ ||

ಶಿವಜೀವರೈಕ್ಯ ಸ | ತ್ಯವ ತಿಳಿದಿಲ್ಲ ||5||

ಅಂಗಬೇರಿಲ್ಲ ವಾ | ಲಿಂಗವು ಬೇರಿಲ್ಲ ||

ಲಿಂಗಾಂಗ ಸಮರಸ | ದಿಂಗಿತವರಿತಿಲ್ಲ ||6||

ನಾನೆಂಬುದಿಲ್ಲವು | ನೀನೆಂಬುದಿಲ್ಲವು ||

ತಾನೆ ತಾನೆಂಬುದು | ತಾನರಿತಿಲ್ಲವು ||7||

ನಡೆ ಬೇರೆಯಲ್ಲ | ವಾ| ನುಡಿ ಬೇರೆಯಲ್ಲ ||

ನಡೆ ನುಡಿವೊಂದಾದ | ಬೆಡಗರಿತಿಲ್ಲ ||8||

ನರ ಬೇರೆಯಿಲ್ಲವು| ಹರಿ ಬೇರೆಯಿಲ್ಲವು||

ನರಹರಿ ಗುರುಮಂತ್ರ| ಪರಿಕಿಸದಿರುವುದು ||9||

ಸಾಕಬೇಕಮ್ಮಾ | ಇಂಥಾ ಕೂಸು | ಸಾಕಬೇಕಮ್ಮಾ ||ಪ||

ಸಾಕಿದವರಿಗೆ ಸರ್ವ | ಸೌಖ್ಯವಾಗುವುದಮ್ಮ | ||ಅಪ||

ಲೋಕಕ್ಕೆ ಬೇಕಾದ| ಸೌಕರ್ಯವೀಯುತ್ತ ||

ಸಾಕಾರದಲ್ಲೇ ನಿ| ರಾಕಾರವೀ ಕೂಸು ||1||

ಶುದ್ಧಾತ್ಮರೊಳು ಬಲು| ಮುದ್ದಾಗಿರುವ ಕೂಸು||

ಬದ್ಧ ಜೀವಿಗಳಲ್ಲಿ | ಇದ್ದು ಇಲ್ಲದ ಕೂಸು ||2||

ಅಖಿಲಾಂಡ ಕೋಟಿಯ| ಪ್ರಕಟ ಮಾಡಿದ ಕೂಸು||

ಸಕಲ ವಲಯಗೊಂಡು| ಸುಖಿಸುತ್ತಲಿಹ ಕೂಸು ||3||

ಸಾವಿಲ್ಲದಿಹ ಕೂಸು| ನೋವರಿಯದಿಹ ಕೂಸು ||

ಸೇವೆಗೊಲಿವ ಕೂಸು| ಪಾವನಾತ್ಮದ ಕೂಸು ||4||

ಕಂಡಕಂಡವರೆತ್ತಿ | ಕೊಂಡಾಡಿಸುವ ಕೂಸು|

ಪಿಂಡ ಬ್ರಹ್ಮಾಂಡೈಕ್ಯ | ಗೊಂಡು ಆಡುವ ಕೂಸು ||5||

ಕಂಡು ಕಾಣದ ಕೂಸು | ಗಂಡುಗಲಿಯೀ ಕೂಸು||

ಭಂಡರೆಲ್ಲರ ಕಿವಿಯ | ಹಿಂಡಿ ಕೂಗುವ ಕೂಸು ||6||

ಮಿಗಿಲು ಸೌಂದರ್ಯದಿ | ದಿಗಿಲು ಬಿಡಿಸುವ ಕೂಸು |

ಜಗವೆಲ್ಲ ತುಂಬಿ ಯಾ | ರಿಗು ಕಾಣಿಸದ ಕೂಸು ||7||

ಆನಂದ ರೂಪ ಸು | ಜ್ಞಾನ ಮಾತ್ರದ ಕೂಸು |

ಮೌನೀಂದ್ರ ನರಹರಿಯು | ತಾನೆ ತಾನೀ ಕೂಸು ||8||

ನಾದವಾಗಿಹ ಕೂಸು| ವೇದವಾದರೆ ಲೇಸು ||

ಬೋಧಾಮೃತವಸೂಸು| ವಾದಿ ನರಹರಿ ಕೂಸು ||9||

ಜಯ ಮಂಗಳ | ಜಯ| ಜಯ ಮಂಗಳ ||ಪ||

ದಯದಿಂದ ತೋರ್ಪ ಯನ್ನಯ ಕಂಗಳ | ಚಿ |

ನ್ಮಯ ಮೂಲ ಜ್ಯೋತಿಗೆ ಶುಭ ಮಂಗಳಾ ||ಅಪ||

ಗುಣವೆಲ್ಲವಾ | ನಿ| ರ್ಗುಣಗೈಯುವಾ |

ತನು ಮಾನಸಂಗಳ್ಗೆ ಬೆಳಕೀಯುವಾ | ಚೇ|

ತನ ಮಾತ್ರ ಮೂರ್ತಿಗೆ ಸನ್ಮಂಗಳಾ ||1||

ಪ್ರಣವಾಗ್ರದೀ | ಬೋ| ಧನ ಮಾರ್ಗದೀ||

ಮಿನುಗುತ್ತ ಶೀಘ್ರದಿ ನಿಜ ಜಾಗ್ರದೀ | ಸಂ|

ಜನಿಪರ್ಧ ಮಾತ್ರೆಗೆ ಜಯ ಮಂಗಳಾ ||2||

ನಿಗಮಾಗಮ | ಪದ| ಯುಗ ಸಂಗಮಾ ||

ಸುಗಮಾರ್ಥ ವೈಭವದೊಳು ನಿರ್ಗಮಾ| ಗುರು |

ಜಗದಾತ್ಮ ನರಹರಿಗಿದೆ ಮಂಗಳಾ ||3||

ಸತ್ಯಕ್ಕೆ ಬಲವಿಲ್ಲ ಮತ್ರ್ಯದೊಳಗೆಲ್ಲ | ಸತ್ಯವಂತರಿಗಿಲ್ಲಿ ಉಳಿಗಾಲವಿಲ್ಲ ||ಪ||

ಸತ್ಯವಂತರಿಗೆ ಆಪತ್ತು ತಪ್ಪಿದುದಲ್ಲ| ಮಿಥ್ಯಕ್ಕೆ ಬೆಂಬಲವು ದೊರೆತಿರ್ಪುದಲ್ಲಾ ||ಅಪ||

ಗ್ರೀಕ ತತ್ವಜ್ಞಾನಿ ಸಾಕ್ರಟೀಸನು ಸದ್ವಿ |

ವೇಕವನು ಬೋಧಿಸಲು ಕಾಕು ಜನರು ||

ಲೋಕ ಕೆಡಿಸಿದನಿವನ | ಸಾಕು ಮಾಡಿರಿಯೆಂದು |

ಬೇಕೆಂದು ವಿಷವಿತ್ತು ಸಾಯಿಸಿದರಲ್ಲಾ ||1||

ಭಾಸುರದ ತತ್ವೋಪದೇಶ ಮಾಡುತಲಿದ್ದ |

ಯೇಸುಕ್ರಿಸ್ತನ ಹಿಡಿದು ಹೇಸಿ ಜನರು ||

ಮೋಸಗಾರನು ಎಂದು| ದ್ವೇಷ ಬುದ್ಧಿಯೊಳವನ |

ನಾ ಶಿಲುಬೆಗೇರಿಸುತ ಕೊಂದು ಹಾಕಿದರು ||2||

ಕುಲಜಾತಿ ಭೇದಗಳ | ನಳಿದು ನಿ

ರ್ಮಲ ತತ್ವಗಳ ಹೇಳುತಿರಲಾಗಿ ಬಸವಣ್ಣನು ||

ಛಲದಿಂದ ವೈರಿಗಳು| ಬಳಸಿ ಕಾಡುತಿರಲು |

ಉಳವಿ ಕ್ಷೇತ್ರವ ಸೇರಿ ಬಯಲಾದ ತಾನು ||3||

ಅರಬರಿಗೆ ದೈವಾಜ್ಞೆಯರುಹಿ ಸಂಚರಿಸುತ್ತ |

ಬರುವ ಮಹಮದನನ್ನು ದುಷ್ಟ ಜನರು||

ತರುಬಿ ಮಕ್ಕಾದಿಂದ ಹೊರಡಿಸುತ ಮತ್ತಲ್ಲಿ |

ಬರಲಾಗದೆನ್ನುತ್ತ ಓಡಿಸಿದರು ||4||

ಲೋಕಕ್ಕೆ ಗುರುವಾದ | ಶ್ರೀಕೃಷ್ಣ ಪರಮಾತ್ಮ |

ಲೋಕದಾಟವನೆಲ್ಲ ಸಾಕು ಮಾಡುತ್ತ ||

ಆ ಕಾನನವ ಸೇರಿ | ಏಕಾಕಿಯಾಗಿರಲು |

ಕಾಕುವ್ಯಾಧನು ಬಾಣದಿಂ ಹೊಡೆದನಲ್ಲ ||5||

ಸಾಗರದ ನೀರು ಸಿಹಿ| ಯಾಗಲೆಂದೆನ್ನುತ್ತ |

ಬೇಗದಿಂದ ಸಕ್ಕರೆಯ ಬೆರೆಸಲೆಷ್ಟು ||

ಹ್ಯಾಗೆ ಉಪ್ಪಾಗಿಹುದೊ | ಹಾಗೆ ಲೋಕವು ನೆಟ್ಟ |

ಗಾಗದೈ ನರಹರಿಯ ಕರುಣವಿಲ್ಲದೆಯೆ ||6||

ಭಾರತ ಪಿತಾಮಹನು ಧೀರ ಗಾಂಧಿಯು ತಾನು|

ಸಾರುತಿರೆ ಸತ್ಯಾರ್ಥ ಸಾರವನ್ನು ||

ಕ್ರೂರಿ ಖಳ ಗುಂಡಿಕ್ಕಿ ತೀರಿಸಿದನೇಕೆಂದು |

ಸಾರಿದನು ನರಹರಿಯು ಸತ್ಯಾರ್ಥವನ್ನು ||7||

ಭಕ್ತನೆಂತಿಹನೆನ್ನುವುದೇಕೆ |

ಶಕ್ತನೀತನು ನೋಡಿರಿ ಜೋಕೆ ||ಪ||

ಭಕ್ತ ಹೃದಯದಿ ಶಿವನಿರಲಿಕ್ಕೆ|

ಭಕ್ತನಾದವಗೇ ನಿಲ್ಲ ಬಯಕೆ ||ಅಪ||

ತಾನುವುಣ್ಣದೆ ಪರರನುಣ್ಣಿಸುವಾ|

ಏನು ಮಿಕ್ಕುದ ತಾನುಣ್ಣತಿರುವಾ||

ಸಾನುರಾಗದಿ ಸರ್ವರೊಳಿರುವಾ |

ದೀನ ಜನರನು ಮನ್ನಿಸುತಿರುವಾ ||1||

ವಿನಯ ವಾಕ್ಯದೊಳಾದರಿಸುವನು |

ಅನುಭವಾಮೃತವನು ಸುರಿಸುವನು ||

ಜನರು ಹೊಗಳಲು ಹಿಗ್ಗದಿರುವನು |

ಜನರ ನಿಂದೆಗೆ ತಗ್ಗದಿರುವನು ||2||

ನಡೆದು ಭಕ್ತನ ಸೋಲಿಪರಿಲ್ಲಾ|

ನುಡಿದು ಭಕ್ತನ ಗೆದ್ದವರಿಲ್ಲ||

ತಡವಿ ಭಕ್ತನ ಉಳಿದವರಿಲ್ಲಾ |

ಕಡೆಗೆ ಭಕ್ತನ ಹಳಿದವರಿಲ್ಲ ||3||

ಪ್ರಾಣಿ ಮಾತ್ರದಿ ಕರುಣೆಯುಳ್ಳವನು |

ದಾನ ಧರ್ಮವ ಮಾಡಬಲ್ಲವನು ||

ಜ್ಞಾನಿಗಳ ಕಂಡು ಮಣಿದು ನಿಲ್ಲುವನು |

ಹಾನಿ ವೃದ್ಧಿಗಳೊಂದೆನ್ನುವವನು ||4||

ತನಗೆ ಅಪಕಾರ ಮಾಡಿದರೇನು |

ಮುನಿಸದುಪಕಾರ ಮಾಡುವ ತಾನು|

ಅನುಪಮಾನಂದ ಪರನಾದವನು |

ನೆನೆವ ನರಹರಿ ಪಾದಪದ್ಮವನು ||5||

ಶಿವಮಂತ್ರ ನೆನೆಯಪ್ಪ ತರಳಾ | ಪರ|

ಶಿವನನ್ನು ಮರೆದಾತ ಲೋಕದಿ ಮರುಳಾ ||ಪ||

ಜವನಿಗೊಪ್ಪಿಸಬೇಡ ಕೊರಳಾ | ಲೋ|

ಕವನಂಬಿ ವ್ಯರ್ಥ ಕಳೆಯದೆ ಹಗಲಿರುಳಾ ||ಅಪ||

ಗುರುಪೇಳ್ವ ಸದ್ಬೋಧೆ ಸರಳಾ| ಸ|

ದ್ಗುರುವಿಂದ ತಿಳಿ ನೀನು ವೇದದ ತಿರುಳಾ||

ಗುರುನಿಂದೆಗೈವಾತ ದುರುಳಾ | ದು |

ರ್ಭರ ನರಕದಿಂದಾತನೆಂದಿಗು ಮರಳಾ ||1||

ಗುರುವಾಕ್ಯ ನಂಬದವ ಕೆಡುಕಾ | ಗುರು|

ಶರಣ ಮಂಡಲಿಯಲ್ಲಿ ಈತ ಬಾಯ್ಬಡುಕಾ ||

ಅರಿಯದವರಿಗೆ ತಂದ ತೊಡಕಾ | ಬಂ|

ದಿರುವುದೀತಗೆ ಯಮ ಶಿಕ್ಷೆಯ ನಡುಕಾ ||2||

ಸುಗುಣಂಗಳೆಲ್ಲವನು ಕಲಿತು| ಮಾ|

ಯೆಗೆ ವಶ ತಾನಾಗದಿರುವುದೆ ಒಳಿತು||

ಸಗುಣದಾಟವನೆಲ್ಲ ಮರೆತು | ತ್ರೈ |

ಜಗದಾತ್ಮ ನರಹರಿಯ ನೀನಾಗಿ ಬೆರೆತು ||3||

ಹೊಲೆಯರೆನ್ನುವ ಬೇರೆ ಕುಲವುಂಟು ಎಂಬುದು ಸತ್ಯಾ ತಾನಲ್ಲ ||ಪ||

ಹೊಲೆಯರಿರಬಹುದೆಲ್ಲ| ಕುಲದಲ್ಲಿ ಎಂಬುದು ಮಿಥ್ಯಾ ತಾನಲ್ಲಾ ||ಅಪ||

ತಾಯಿ ತಂದೆಗೆ ಅನ್ನ |

ವೀಯದಿರುವಾತನು ಹೊಲೆಯನಲ್ಲೇನು||

ನ್ಯಾಯವ ಬಿಟ್ಟು ಅ|

ನ್ಯಾಯವ ಪೇಳ್ವಾತ ಹೊಲೆಯನಲ್ಲೇನು ||1||

ಕಳವು ಹಾದರ ಹಿಂಸೆ |

ಗಳ ಮಾಡುತಿರುವಾತ ಹೊಲೆಯನಲ್ಲೇನು ||

ತಿಳಿದು ಪಾಪದ ಕೃತ್ಯ|

ಗಳ ಮಾಡುವಾತನು ಹೊಲೆಯನಲ್ಲೇನು ||2||

ಬಾಯಿಗೆ ಬಂದಂತೆ |

ಬೈಯುತ್ತಲಿರುವಾತ ಹೊಲೆಯನಲ್ಲೇನು ||

ಕಾಯವೆ ಸ್ಥಿರವೆಂದು|

ಸಾಯುತ್ತಲಿರುವಾತ ಹೊಲೆಯನಲ್ಲೇನು ||3||

ಶಿವಮಂತ್ರ ನುಡಿಯದ |

ಅವಿವೇಕಿ ಮನುಜನು ಹೊಲೆಯನಲ್ಲೇನು ||

ದಿವರಾತ್ರಿ ವಿಷಯಲಂ|

ಪಟನಾದ ಮಾನವ ಹೊಲೆಯನಲ್ಲೇನು ||4||

ದುರಹಂಕಾರಕ್ಕೆ |

ಗುರಿಯಾದ ಮಾನವ ಹೊಲೆಯನಲ್ಲೇನು||

ನರಹರಿ ಸದ್ಬೋಧೆ|

ಸರಿಯೆನ್ನದಿರುವಾತ ಹೊಲೆಯನಲ್ಲೇನು ||5||

ನೀತಿಯಿದ್ದರೆ ನೀನೆ ಜಾಣ | ದು|

ರ್ನೀತಿ ಪರನಾದರೆ ನೀನಾದೆ ಕೋಣ ||ಪ||

ನೀತಿಯೀಶ್ವರನಾಜ್ಞೆ ಕಾಣಾ| ಸ|

ನ್ನೀತಿಯೆಂಬುದೆ ಸರ್ವಲೋಕದ ತ್ರಾಣ ||ಅಪ||

ಕದ್ದು ತಿನ್ನುವುದೆ ದುರ್ನೀತಿ | ತನ|

ಗಿದ್ದುದ ಬಡವರ್ಗೆ ಕೊಡುವುದೆ ನೀತಿ ||

ಮದ್ಯ ಕುಡಿಯುವುದೆ ದುರ್ನೀತಿ| ತನ

ಗಿದ್ದ ದುಶ್ಚಟಗಳ ಬಿಡುವುದೆ ನೀತಿ ||1||

ಸುಳ್ಳಾಡುತಿಹುದೆ ದುರ್ನೀತಿ| ನಿಜ|

ವುಳ್ಳ ನುಡಿಯಾಡುವುದೆ ಸತ್ಯ ಸನ್ನೀತಿ||

ಕೊಲ್ಲುತಿರುವುದೆ ದುರ್ನೀತಿ| ಜಗ|

ವೆಲ್ಲ ತನ್ನಂತೆ ಕಾಣುವುದೆ ಸುನೀತಿ ||2||

ಪರ ನಿಂದೆ ಪಾಪದ ಮೂಟೆ| ನಿ|

ಷ್ಟುರ ವಾಕ್ಯವೆಂಬುದೆ ನರಕದ ಕೋಟೆ||

ಕರುಣ ಶಾಂತಿಯೆ ಶಿವನ ಪೇಟೆ | ನರ|

ಹರಿ ವಾಕ್ಯ ಹರಿಸಿತ್ತು ಜನ್ಮದ ತೀಟೆ ||3||

ಸಾಧು ಸಮಾಗಮವು| ಮುಕ್ತಿಯ|

ಸಾಧನೆಗನುಪಮವು ||ಪ||

ಭೇದವ ನಿಡದೆ ವಿ| ನೋದದಿ ಭಜಿಸುತ||

ಆದರಿಸಲು ಸಂ| ಪಾದನೆ ಸುಕೃತವು ||ಅಪ||

ಸಾಧುಗಳೆನಲಾರು| ಜ್ಞಾನವ |

ಸಾಧಿಸಿಕೊಂಡವರು||

ಶೋಧಿಸಿ ಭಕ್ತಿಯ | ಭೇದವಿರಕ್ತಿಯ||

ಬೋಧನ ಶಕ್ತಿಯ ನೈದಿದ ಚಿನ್ಮಯ ||1||

ದರುಶನ ಮಾತ್ರದೊಳು | ಪೂರ್ವದ |

ದುರಿತಂಗಳು ಬಿಡಲು||

ಕರಣದದೋಷವ | ಕರಗಿಸುತಿರುವ | ಕರುಣಾಮೃತವನು |

ಸುರಿಸುತ ಪೊರೆವರು ||2||

ಸ್ಪರ್ಶವ ಮಾಡುತಲೀ| ಪುಣ್ಯೋ |

ತ್ಕರ್ಷವ ನೀಡುತಲೀ||

ಹರ್ಷದಿ ಮನವಾ | ಕರ್ಷಣಗೈವರು ||

ಸ್ಪರ್ಶಿಸುತಮೃತದ | ವರ್ಷವನು ಸುರಿವರು ||3||

ಸಂಭಾಷಣೆಯೊಳಗೆ ಮಾಯಾ |

ಸಂಬಂಧವೆ ತೊಲಗೆ||

ನಂಬುವ ಶ್ರವಣವ | ತುಂಬಿಸಿ ಮನನವ|

ಶಂಭುನಿಧಿಧ್ಯಾ| ಸಂಬಲಪಡಿಸುವ ||4||

ಶಾಂತಿಯನುಳ್ಳವರು| ಬ್ರಹ್ಮದ |

ಕಾಂತಿಯ ಬಲ್ಲವರು||

ಸಂತರು ಭಕ್ತರ| ಚಿಂತೆಯ ಹರಿವರು||

ಸಂತತ ನರಹರಿ| ಚಿಂತನಗೈವರು ||5||

ಬೇಸಾಯವನು ಮಾಡಿರೋ| ನಿತ್ಯವು|

ಬೇಸರಪಡಬೇಡಿರೋ ||ಪ||

ಬೇಸಾಯವೇ ಜಗ| ದೀಶನ| ಸೇವೆಯು |

ಈಶನ ದಾಸರ| ಐಸಿರಿ ತಾನೆಯು ||ಅಪ||

ಭೂದೇವಿಯೊಡನಾಡಿರೋ| ಬರುವಳು|

ಶ್ರೀದೇವಿ ನಿಜ ನೋಡಿರೋ ||

ಆಧಾರವು ಕೃಷಿ | ಸಾಧಿಸಿದವ ಋಷಿ|

ಮೇದಿನಿ ದೇವಿಯಾ| ರಾಧಕರೆನ್ನಿಸಿ ||1||

ಉದ್ಯೋಗದೊಳು ಶ್ರೇಷ್ಠವು || ಲೋಕದ |

ಉದ್ಧಾರವಿದು ಸ್ಪಷ್ಟವು||

ವೃದ್ಧಿಯು ಸೌಖ್ಯವು| ಹೊದ್ದದು ದುಃಖವು||

ವಿದ್ಯೆಗಳೊಳು ಪರಿ| ಶುದ್ಧವಿದೇ ಸರಿ ||2||

ಅನ್ನ ಲೋಕಕೆ ದೇವರು| ಬೆಳೆಯುವ|

ಧಾನ್ಯವಿದ್ದರೆ ಜೀವರು||

ಉನ್ನತ ತೃಪ್ತಿಯ| ಮನ್ನಣೆ ಪಡೆವರು |

ಸನ್ನುತ ನರಹರಿ| ಯೆನ್ನುತ ನುಡಿವರು ||3||

ನಸ್ಯದಲ್ಲಿದೆ ಲೋಕವಶ್ಯ| ಸಾ|

ದೃಶ್ಯ ಮಾಡಿಯೆ ನೋಡಿರಿದರ ರಹಸ್ಯಾ ||ಪ||

ನಸ್ಯದೊಳು ನೇತ್ರಾಲಸ್ಯ | ಪರಿ|

ಹಾಸ್ಯವಲ್ಲವೆ ಸೀನು ಬರುವಂಥ ದೃಶ್ಯ ||ಅಪ||

ಮೂಗಿಗೇರಿಸಲಾಗಿ ನಸ್ಯ| ಸಂ|

ಯೋಗ ಮಾತ್ರದಿ ತೋರುತಿಹುದು ಭವಿಷ್ಯ ||

ಆಗಮನಿಗಮಾದಿ ಭಾಷ್ಯ | ಸೊಗ|

ಸಾಗಲೀ ನಸ್ಯವು ಬಹಳ ಸ್ವಾರಸ್ಯ ||1||

ಕೈಮುಗಿದು ಕೊಡಬೇಕು ನಸ್ಯ | ಈ

ನೇಮವಿಲ್ಲದೆ ಕೊಟ್ಟ ನಸ್ಯವು ದೂಷ್ಯ |

ಸೋಮಸೂರ್ಯರ ಸುಖಲಾಸ್ಯ|ನಿ|

ಸ್ಸೀಮ ಜ್ಞಾನದ ಚೂರ್ಣಧರೆ ತತ್ವವಶ್ಯ ||2||

ಶಿವ ಜೀವರಿಗೆ ಸಾಮರಸ್ಯ | ಅನು|

ಭವವಾಗಲೀ ನಸ್ಯವೊಂದು ಸಮಸ್ಯಾ ||

ಶಿವಯೋಗದೊಳಗೆ ಪ್ರಕಾಶ್ಯ | ಬೆಳ|

ಗುವ ಹಂಸ ನರಹರಿಯ ಯೋಗ ವಿಶೇಷ್ಯ ||3||

ಕುದುರೆ ಕೊಂಡುಕೊಂಡೇ | ಹತ್ತಲು|

ಹೆದರಿ ನಿಂತುಕೊಂಡೇ ||ಪ||

ಕುದುರಿ ಕೊಳ್ಳದೆ | ಬೆದರಿನಿಂತಿದೆ||

ಗದರಿಕೊಂಡರೆ | ಹೆದರದಂತಿದೆ ||ಅಪ||

ಮಾಯಕಾರಿಯಾಗಿ | ಎಲ್ಲೋ| ಮೇಯುತಿತ್ತು ಹೋಗೀ ||

ಹೇಯವಾದುದೇ| ಪ್ರೀಯವೆಂದಿದೆ ||

ಸಾಯಬಡಿದರೂ | ನ್ಯಾಯ ತಿಳಿಯದಿದೆ ||1||

ಒಳ್ಳೆ ತಿಂಡಿ ಹಾಕಿ | ಸಾಕಲು| ಒಲ್ಲೆನೆಂದು ನೂಕೀ||

ಕಳ್ಳ ಮೇವನಿದು| ಮೆಲ್ಲುತಲಿರುವುದು||

ನಿಲ್ಲದೆಸಾಗಿದೆ | ಎಲ್ಲಿಯೋ ಹೋಗಿದೆ ||2||

ಮನಸು ಎಂಬ ಕುದುರೇ| ನಾನಾ|

ದಿನಸು ಕಾಂಬ ಕುದುರೇ || ನೆನಿಸಿಕೊಂಡರೆ|

ಮುನಿಸಿಕೊಂಡಿದೆ|| ಕೊನೆಗೆ ನರಹರಿ| ಮುನಿಗೆ ವಶವಿದೆ ||3||

ಪರನಿಂದೆಯೆಂದೆಂಬ ಹಂದೀ| ನೀ|

ಬರಬೇಡ ಎಂದೆಂದು ನನ್ನನ್ನು ಹೊಂದಿ ||ಪ||

ನರಕಕ್ಕೆ ನೀನೆ ಸಂಬಂಧೀ| ನೀ|

ಪರರ ಮೇಧ್ಯವ ತಿನ್ನಲಿದು ಒಳ್ಳೇ ಸಂಧೀ ||ಅಪ||

ಪಾಪಕ್ಕೆ ಹೆದರದಂತಿರುವೇ | ಬಹಿ |

ರೂಪಕ್ಕೆ ಮರುಳಾಗಿ ಶಿವನನ್ನು ಮರೆವೇ ||

ಕೋಪ ತಾಪಗಳ ನೀ ತರುವೇ | ಸ |

ರ್ವಾಪರಾಧಕೆ ನೀನೆ ತವರಾಗಿ ಮೆರೆವೇ ||1||

ಯಾರನ್ನು ನಿಂದಿಸುತಿರುವೇ| ಶಿವ|

ಯಾರಲ್ಲಿ ಸೇರಿಲ್ಲ ನಿನಗೆಷ್ಟು ಮರವೇ||

ನೂರಾರು ಜನ್ಮಗಳ ಹೊರುವೇ || ಸುವಿ|

ಚಾರಕ್ಕೆ ದೂರವಪ್ಪುದು ನಿನಗೆ ತರವೇ ||2||

ಗುರುಗುಟ್ಟುತಿಹ ಕೆಟ್ಟ ಹಂದೀ | ಶ್ರೀ |

ಗುರುವಿನ ಗುಟ್ಟನ್ನು ಮರೆತ ದುರ್ಗಂಧೀ ||

ಹರಿಯುವರಾಹನಾದಂತೇ | ನೀ|

ಪರಿಶುದ್ಧನಾಗು ನರಹರಿ ವಾಕ್ಯವಾಂತೇ ||3||

ಸಾಕಿದೆ ನೀ ಗಿಣಿಯಾ | ಶಿವನನು|

ಸೋಕಿದ ನಿಜ ಗುಣಿಯಾ ||ಪ||

ಬೇಕಾಗಿಹ ಗಿಣಿ| ಶ್ರೀಕಾರದ ಗಣಿ||

ಸ್ವೀಕರಿಸಿದ ಋಣಿ| ಏಕಾಂತದ ಮಣಿ ||ಅಪ||

ಬೇಸರವಿನಿತಿಲ್ಲಾ | ಸಾಕಲು | ಲೇಸಿದು ನಿಮಗೆಲ್ಲಾ ||

ಸೋಸಿದ ಸನ್ನುಡಿ| ಸೂಸುತನಲ್ನುಡಿ||

ವಾಸನ ತ್ರಯಗಳ| ನಾಶಕಿದೇ ಬಲ ||1||

ದೇಹದ ಪಂಜರದೇ| ತಾನಿದೆ| ಮೋಹವ ತಾಂ ಜರಿದೇ||

ದಾಹದ ಬೆಕ್ಕಿಗೆ | ಬಾಹ್ಯದ ಸಿಕ್ಕಿಗೆ||

ಊಹಿಸೆ ಸಿಕ್ಕದೆ | ಸೋಹಂದಕ್ಕಿದೆ ||2||

ಸವಿನುಡಿಯಾಡುವುದು| ಈಗಿಣಿ| ಶಿವನೊಳು ಕೂಡಿಹುದು||

ಭವಹರಗೈವುದು| ಶಿವಮಂತ್ರವೆಯಿದು ||

ಸುವಿಚಾರದೊಳಿದು| ನರಹರಿಯೆನುವುದು ||3||

ಮರುಳಾಗಲೇಕೆ ಈ ಜಗಕೇ| ನೀ|

ಮರಳೀ ಮರಳಿ ಹುಟ್ಟಿಯಳಿವ ಸೋಜಿಗಕೆ ||ಪ||

ಬರಿಯ ಬಾಹ್ಯಾಡಂಬರಕ್ಕೆ | ಬಲು|

ಮರುಳಾಗಿ ಸಿಕ್ಕುವೆ ಘೋರ ನರರಕ್ಕೆ ||ಅಪ||

ಕತ್ತೆಯಂದದಿ ದುಡಿಯುತಿರುವೆ| ಸಂ|

ಪತ್ತೆನಗಾಯ್ತೆಂದು ಹಿಗ್ಗುತ್ತಲಿರುವೇ ||

ಹೊತ್ತು ಬಂದರೆ ಓಡುತಿರುವೆ| ದು|

ಷ್ಕೃತ್ಯಕ್ಕೆ ಹೇಸದೆ ಹೊರಳಾಡುತಿರುವೆ ||1||

ಸತ್ತ ಮೇಲಾರದೀ ಧನವು| ಈ|

ವಿತ್ತ ತೋರಲು ನಿನ್ನ ಪ್ರಾಣಹರಣವು ||

ನಿತ್ಯ ರೋಗದ ಪಾಲು ತನುವು| ಸತಿ|

ಪುತ್ರ ಮೋಹದೊಳಾಯ್ತು ಜನ್ಮ ಕಾರಣವು ||2||

ತನುವ ನಂಬಿದರೇನು ಸುಖವು | ಈ|

ತನು ಭೋಗದಾಸೆಯೆ ಪರಮ ಪಾತಕವು||

ಅನುಮಾನ ನಿನ್ನ ದುಷ್ಕೃತವು | ನೀ|

ನೆನೆಯೀಗ ನರಹರಿಯ ನಂಬುವುದೆ ಹಿತವು ||3||

ಹುಚ್ಚುನಾಯಿ| ನೀನು | ಮುಚ್ಚು ಬಾಯಿ ||ಪ||

ಮೆಚ್ಚಿದವರ ಕಡೆ| ಎಚ್ಚರವಿಲ್ಲದೆ||

ಹೆಚ್ಚಿ ಜಂಭವನು| ಕೊಚ್ಚುವ ನಾಯಿ ||ಅಪ||

ಪರರನ್ನಕೆ ಬಾ| ಯ್ತೆರೆಯುವ ನಾಯಿ|

ಪರರುನ್ನತಿಗೇ ಮರುಗುವ ನಾಯಿ||

ಗುರು ಹಿರಿಯರು ಎಂದರಿಯದ ನಾಯಿ|

ಮರುಳರ ಹಿಂದೇ ತಿರುಗುವ ನಾಯಿ ||1||

ನ್ಯಾಯವನರಿಯದೆ ಸಾಯುವ ನಾಯಿ|

ಬಾಯೊಳ ಸತ್ಯವ ಬೊಗಳುವ ನಾಯಿ||

ಕಾಯವ ನಂಬುತ ನೋಯುವ ನಾಯಿ|

ಮಾಯದ ಹೊಲ ಮನೆ ಕಾಯುವ ನಾಯಿ ||2||

ಸನ್ನುಡಿಯರಿಯದ ಕುನ್ನಿಯು ನೀನು|

ಸನ್ನಡೆಯಿದ್ದರೆ ಚೆನ್ನಲ್ಲೇನು||

ಸನ್ನುತಿಗೈದರೆ ಭೈರವ ನೀನು|

ಮನ್ನಿಸು ನರಹರಿ ಬೋಧೆಗಳನ್ನು ||3||

ಭಂಗಿ ಸೇದುವನೆ ನಿಸ್ಸಂಗೀ| ತನು|

ಭಂಗಿ ಭಂಗಿಸಬಲ್ಲ ವೇದ ವ್ಯಾಸಂಗಿ ||ಪ||

ಹಂಗಿಲ್ಲದೇ ಮಾಯೆ ಹಿಂಗಿ|

ಬಹಿರಂಗಾಂತರಂಗ ನಿರ್ಮಲನು ಸತ್ಸಂಗೀ ||ಅಪ||

ತನುಭಂಗಿ ಮನಭಂಗಿ ಊದಿ| ನಿ|

ರ್ಗುಣ ಹೊಂಗಿದಾತ್ಮಾನುಸಂಧಾನ ವೈದಿ||

ಅನುಭಾವ ಭಂಗಿಯನು ಸೇದಿ| ತಲೆ|

ಯನು ತೂಗುತಿರುವಂಥ ಬ್ರಹ್ಮೈಕ್ಯವಾದಿ ||1||

ಸಿದ್ಧಾನುಭವ ಸಿದ್ಧ ಪತ್ರೆ| ಪರ|

ಮುದ್ರೆಯೆನ್ನಿಸಿದಂಥ ಚಿಲುಮೆಯೆ ಪಾತ್ರೆ||

ಶುದ್ಧ ಜ್ಞಾನಾಗ್ನಿ ಪುಟವಿತ್ತು| ಸೇ|

ದಿದ್ದ ತನ್ನೊಳು ಬ್ರಹ್ಮಜ್ಞಾನ ಸಂಪತ್ತು ||2||

ಮೂರು ಕಾಲಿನ ಪ್ರಣವ ಭೃಂಗಿ | ಸೊಂ |

ಪೇರಿ ನಾದಾನಂದದೊಳ್ಕುಣಿವ ಭಂಗಿ ||

ಮೂರು ಕಣ್ಣಿನ ಶಿವ ಏಕಾಂಗಿ | ವಿ |

ಸ್ತಾರದಾನಂದ ಪರನಾದನು ಹೊಂಗಿ ||3||

ಎಲ್ಲವಂ ಭಂಗಿಸುವ ಭಂಗಿ | ಶಿವ |

ಗಲ್ಲದಿನ್ನಾರಿಗಿಲ್ಲೆಂಬ ನಿಸ್ಸಂಗಿ ||

ಸೊಲ್ಲೊಳಗೆ ಪ್ರಣವವನು ಹೊಂಗಿ | ಪರ |

ಮೋಲ್ಲಾಸದೊಳು ಸೇದಿಬಿಟ್ಟ ನೀ ಭಂಗಿ ||4||

ನಾದವೆನ್ನುವುದೊಂದು ಭಂಗಿ | ಚಿ|

ನ್ನಾದಾಂತ್ಯ ಚಿದ್ಬಿಂದುವಹುದೊಂದು ಭಂಗಿ||

ವೇದ ಚಿತ್ಕಳೆಯೊಂದು ಭಂಗಿ| ಸ|

ದ್ಭೋಧೆ ನರಹರಿಯೀವುದದು ಸತ್ಯಭಂಗಿ ||5||

ಕೊಳಲನೂದುವ ಕೃಷ್ಣನ ಕಂಡೆ |

ಕಳೆದು ಪಾಪವನಾನುಳಿದುಕೊಂಡೆ ||ಪ||

ಉಳಿಮೆಯಾದಾತ್ಮನನು ತಿಳಿದುಕೊಂಡೆ |

ಒಲುಮೆಯೊಳು ಕೃಷ್ಣನನು ಬಲಗೊಂಡೆ ||ಅಪ||

ಪಿಂಡ ಬ್ರಹ್ಮಾಂಡ ಮಧ್ಯದೊಳಿರುವಾ|

ಅಂಡಕೋಟಿಯ ತಾಳಿಕೊಂಡಿರುವಾ||

ಕಂಡು ಕಾಣದವೊಲು ಮೆರೆಯುತಿರುವಾ|

ಮಂಡಲ ತ್ರಯಕೆ ಸಾಕ್ಷಿಯಾಗಿರುವಾ ||1||

ಹತ್ತು ಅವತಾರಗಳ ನೆತ್ತಿ ಬಂದಾ |

ಹತ್ತಿ ದಶವಿಧನಾದ ಸಂಬಂಧಾ ||

ಸತ್ತು ಚಿತ್ತಾನಂದ ಸ್ವರೂಪ |

ಸತ್ಯಶಾಂತಿಗಳ ನಿತ್ಯಕಲಾಪ ||2||

ಯಾರಿಗೆಲ್ಲೆಲ್ಲಿ ಕಾಣಿಸದವನು|

ತೋರಿ ಸೇರಿದನೆನ್ನ ಮನವನು ||

ಏರಿ ಗರುಡನ ಜಗವ ಸುತ್ತುವನು|

ಸಾರಿದನು ನರಹರಿಯೆಂದು ತಾನು ||3||

ಮಗಳೆ ಯಾತಕ್ಕೆ ಈ ರಗಳೇ | ನುಡಿ|

ಮಗಳೆ ಕಾಯ್ವವು ನಿನ್ನ ಶಿವನ ನಾಮಗಳೇ ||ಪ||

ಮಗಳೆ ತಿಳಿ ನಿಗಮಾಗಮಗಳೇ| ಜನು|

ಮಗಳೆಯಿಲ್ಲೆನುತಿವೆ ಶಿವನಾಮ ಪೊಗಳೇ ||ಅಪ|

ಹಗಲುಗಳ್ಳರು ಆರು ಮಂದಿ| ಬಂ|

ಧುಗಳಂತೆ ನಟಿಸಿ ಬಂದರು ನಿನ್ನ ಹೊಂದಿ||

ಜಗಳಗಂಟರಿಗಾಯ್ತು ಸಂಧಿ| ಯಾ|

ರಿಗೆ ಕಾಣದೊಲು ಗಂಟು ಹಾರಿಸುವ ಮಂದಿ ||1||

ಎಂಟು ಜನ ತುಂಟರಿಲ್ಲುಂಟು | ನಿನ|

ಗಂಟಿಕೊಂಡವರೀಗ ಹೊಡೆವರು ಗಂಟು||

ಒಂಟಿಯಿರೆ ಬೀಳುವರು ಗಂಟು | ಶಿವ|

ಜಂಟಿಯಾದರೆ ಜಾರಿಕೊಳ್ಳುವುದುಂಟು ||2||

ಮಕ್ಕಳೈವರ ನಂಬಬೇಡ | ಅವ|

ರಿಕ್ಕಿದೂಟವನುಂಡು ಮೈಮರೆಯಬೇಡಾ ||

ದುಕ್ಕಕ್ಕೆ ನೀ ಸಿಕ್ಕಬೇಡಾ| ಮೊರೆ|

ಹೊಕ್ಕು ನರಹರಿ ಪಾದಕ್ಕೆರಗು ನೀ ಗಾಡಾ ||3||

ಸಜ್ಜನರ ಸಹವಾಸವನು ಮಾಡಿ ನೋಡು|

ದುರ್ಜನರೊಡನಾಟದಿಂದುಂಟು ಕೇಡು ||ಪ||

ಸಜ್ಜನರು ಬೈದರೂ ಸುಖವೆಂದು ಕೂಡು|

ದುರ್ಜನರು ಹೊಗಳಿದರು ನಿನಗುಂಟು ಕೇಡು ||ಅಪ||

ಸುಜನರಿಕ್ಕಿದ ಊಟ ಅಮೃತದ ಊಟ|

ಕುಜನರಿಕ್ಕಿದ ಊಟವದು ಕಾಲಕೂಟ||

ಸುಜನರಾಡುವ ಮಾತು ವೇದದ ವಾಕ್ಯ|

ಕುಜನರಾಡುವ ಮಾತು ಮೋಸಕ್ಕೆ ಮುಖ್ಯ ||1||

ಹುಲಿಯ ಬಾಯೊಳು ಸಿಕ್ಕಿ ಪಾರಾಗಬಹುದು|

ಕೊಲುವ ಸಿಂಹನ ಮುಂದೆ ಹೋರಾಡಬಹುದು||

ಬಲು ಘೋರ ಸರ್ಪವ ಹಿಡಿದು ತರಬಹುದು|

ಕಲಹ ಮಾಡುವ ದೃಷ್ಟರನು ಗೆಲ್ಲಲರಿದು ||2||

ಜೇನು ಸಕ್ಕರೆಯಂತೆ ಸಜ್ಜನರ ಸಂಗ||

ಶ್ವಾನ ಮಾಂಸದ ಹಾಗೆ ದುರ್ಜನರ ಸಂಗ||

ಆನಂದ ಸಾಮ್ರಾಜ್ಯ ಸಜ್ಜನರ ಕೂಟ|

ಶ್ರೀ ನರಹರೀಂದ್ರನ ಸದ್ಭಕ್ತರಾಟ ||3||

ಏನು ಪುಣ್ಯ ಮಾಡಿ ಬಂದೇ | ನಿನ್ನ ಪಾದ ಕಂಡೆ ತಂದೆ ||ಪ||

ಮೌನಿವರ್ಯ ಜ್ಞಾನಸೂರ್ಯ | ನೀನೆ ಪರಮ ಕರುಣಿಯಾರ್ಯ ||ಅಪ||

ಧ್ಯಾನಮೌನ ಜಪವು ಬೇಡ| ಏನು ಕರ್ಮ ತಪವು ಬೇಡ||

ತಾನು ತನ್ನ ತಿಳಿಯಲಿಕ್ಕೆ | ಜ್ಞಾನವೊಂದೆ ಸಾಕು ಎಂದೆ ||1||

ಯೋಗದಿಂದ ಬಳಲಲೇಕೆ | ಯೋಗ ಫಲಗಳಾಸೆ ನೂಕೆ||

ಆಗ ಜ್ಞಾನ ಯೋಗವೆಂದೆ | ತ್ಯಾಗ ಮಾಡು ವಿಷಯವೆಂದೆ ||2||

ನರಕ ಕೂಪದಲ್ಲಿ ಮುಳುಗಿ| ನರಳುತಿರುವ ಯನ್ನೊಳ್ಮರುಗಿ||

ಪರಮ ತತ್ವವರುಹಿಮುಕ್ತಿ | ಕರುಣಿಸಿ ನೀಕಾಯ್ದ ಯುಕ್ತಿ ||3||

ನಡೆಯು ನುಡಿಯು ಒಂದೆಯಾಗಿ| ಪಡೆಯಲವನೆ ಜ್ಞಾನಯೋಗಿ ||

ಕಡು ಸುಖಾತ್ಮ ನೀನೆಯೆಂದು| ದೃಢವಮಾಡಿ ಪೇಳ್ದೆಯಿಂದು ||4||

ಗುರುವರೇಣ್ಯ ನರಹರೀಂದ್ರ| ಶರಣ ಹೃದಯ ಕುಮುದ ಚಂದ್ರ||

ನಿರುತ ನೆನೆವೆ ನಿನ್ನ ಪಾದ| ಸರಸಿಜವನು ಕಳೆದು ಬಾಧ ||5||

ಚೆನ್ನಬಸವಣ್ಣ ಯೋಗಿವರೇಣ್ಯಾ | ಶೂನ್ಯ ಸಂಪಾದನೆಯು ನಿನ್ನ ಪುಣ್ಯಾ ||ಪ||

ನಿನ್ನ ಷಡುಸ್ಥಲ ನಿರ್ಣಯಗಣ್ಯಾ| ಪೂರ್ಣ ತಿಳಿದಿರ್ಪ ಲೋಕಶರಣ್ಯಾ ||ಅಪ||

ಐದು ಭೂತಂಗಳಾತ್ಮನು ಸೇರಿ | ಆದುವಾರು ತತ್ವಗಳೆಂದು ಸಾರಿ||

ಶೋಧಿಸುತ್ತಾರು ಸ್ಥಲಗಳ ತೋರಿ| ಬೋಧಿಸಿದೆ ಷಡುಸ್ಥಲ ಸುವಿಚಾರಿ ||1||

ಆರುಸ್ಥಲ ಜೀವನಾರು ಅಂಗಗಳು| ಆರು ಅಂಗದೊಳಾರು ಲಿಂಗಗಳು||

ಆರು ವಿಷಯಂಗಳಾರು ಪೂಜೆಗಳು | ಮಾರಹರ ಲಿಂಗಕೆಂದು ಬೋಧಿಸಲು ||2||

ಇಳೆಯೊಳಾಚಾರ ಲಿಂಗಕ್ಕೆ ಗಂಧ | ಸಲಿಸಿ ಭಕ್ತ ಪೂಜೆಯ ಮಾಡಿ ನಿಂದ||

ಜಲದಿ ಗುರುಲಿಂಗ ರಸಪೂಜೆಯಿಂದ| ನಲಿಯೆ ಮಾಹೇಶನರ್ಪಣವೆಂದ ||3||

ಅನಲನೊಳು ಶಿವಲಿಂಗಕ್ಕೆ ರೂಪ| ವನು ಪ್ರಸಾದಿಯೆ ಸಲಿಸುತ್ತಲಿರ್ಪ ||

ಅನಿಲದೊಳು ಚರಲಿಂಗಕ್ಕೆ ಸ್ಪರ್ಶ | ಎನುವ ಪ್ರಾಣಲಿಂಗಿಯ ಪೂಜೆ ಹರ್ಷ ||4||

ಅಂಬರದೊಳು ಪ್ರಸಾದಲಿಂಗವನು | ತುಂಬಿ ಶಬ್ದವ ಶರಣ ಪೂಜಿಪನು ||

ನಂಬಿ ಐಕ್ಯನು ಮಹಲಿಂಗವನ್ನು | ಇಂಬುಗೊಂಡು ನರಹರಿಯೆಂದನಿನ್ನು ||5||

ಹುಚ್ಚ ನಾಗಲಿಂಗ ಯೋಗಿ ಪಾಲಿಸೆನ್ನನು |

ಹುಚ್ಚನಾದಯನ್ನ ಹುಚ್ಚು ಬಿಡಿಸು ಎಂಬೆನು ||ಪ||

ಸಚ್ಚರಿತ್ರ ನಿನ್ನ ನಾನು ಮೆಚ್ಚಿ ಬಂದೆನು |

ಇಚ್ಛೆಯೆಂಬ ಹುಚ್ಚು ಬಿಟ್ಟು ಸ್ವಚ್ಛವಾದೆನು ||ಅಪ||

ಜೀವ ಭಾವವಳಿದ ನೀನೆ ಪರಮಹಂಸನು|

ಜೀವಭಾವವುಳ್ಳ ನಾನೆ ಜೀವಹಂಸನು||

ಕೇವಲತ್ವ ಪಡೆದ ನೀನೆ ಈಶನೆಂಬೆನು |

ಭಾವಶುದ್ಧಿಯೀವುದೆಂದು ಬೇಡಿಕೊಂಬೆನು ||1||

ಭಕ್ತಿಯೆಂಬ ಯುಕ್ತಿಯನ್ನು ನೀನೆ ತೋರಿದೆ|

ಭಕ್ತಿಯೇ ವಿರಕ್ತಿಯಾದುದನ್ನು ಸಾರಿದೆ ||

ಭಕ್ತಿ ಜ್ಞಾನಶಕ್ತಿಯಾಗಲೆಲ್ಲ ಮೀರಿದೆ|

ಭಕ್ತಿಯಿಂದ ಮುಕ್ತಿ ಮಾರ್ಗವನ್ನು ಸೇರಿದೆ ||2||

ಧರೆಗೆ ಮೂಷ್ಟೂರು ಪುಣ್ಯಕ್ಷೇತ್ರವೆನಿಸಿದೆ|

ಪರಮ ಭಕ್ತ ಕಲವೃಕ್ಷವಾಗಿ ನೆಲೆಸಿದೆ||

ಸುರಸ ಬೋಧೆಯೆಂಬ ಸುಧೆಯ ನೀನೆ ಕುಡಿಸಿದೆ|

ನರಹರೀಂದ್ರ ನೀನೆಯೆಂದು ವ್ಯಕ್ತಪಡಿಸಿದೆ ||3||

ಅನ್ನ ದಾನವ ಮಾಡಿರೋ| ದಾನದಿಶ್ರೇಷ್ಠ |

ಅನ್ನ ದಾನವೆ ಕಾಣಿರೋ ||ಪ||

ಅನ್ಯದಾನಗಳೆಲ್ಲ | ಅನ್ನಕ್ಕೆ ಸಮನಲ್ಲ||

ಎನ್ನುತ ಶೃತಿಪೇಳ್ದು| ದನ್ನು ಮನ್ನಿಸಿ ಕೇಳ್ದು ||ಅಪ||

ಅನ್ನದೊಳು ಶಿವನಿರ್ಪನು | ಪರಶಿವ ತಾನು|

ಅನ್ನದೊಳು ಸಂತೃಪ್ತನು||

ಕನ್ಯಭೂಮಿಯ ದಾನ | ಹೊನ್ನು ವಸ್ತ್ರದ ದಾನ||

ಧಾನ್ಯ ಗೋವಿನ ದಾನ| ವನ್ನದಾನಾಧೀನ ||1||

ಅನ್ನ ಸರ್ವಾಧಾರವು| ಭೂತಗಳೆಲ್ಲ|

ಅನ್ನದೊಳು ಪರಿಪೂರ್ಣವು||

ಅನ್ನದಾನವು ಶಿವನ| ಪುಣ್ಯ ಪೂಜೆ ವಿಧಾನ ||

ಅನ್ನ ಶಿವನಿಗೆ ಇಷ್ಟ| ಇನ್ನು ಪುಣ್ಯ ಯಥೇಷ್ಟ ||2||

ಅನ್ನ ಶಿವನಿಗೆ ಇಷ್ಟವು | ಈ ಲೋಕದಿ |

ಅನ್ನ ದಾನವೆ ಶ್ರೇಷ್ಠವು ||

ಅನ್ನದಿ ಪುಷ್ಟಿಯು | ಅನ್ನದಿ ತುಷ್ಟಿಯು |

ಅನ್ನವನೀಯಲು | ಪುಣ್ಯ ಯಥೇಷ್ಟವು ||3||

ಸರ್ವ ಜೀವರುಗಳಲ್ಲಿ | ಪರಮಾತ್ಮನು |

ನಿರ್ವಂಚನೆಯೊಳಿಹನು ||

ಸರ್ವ ಜೀವರಿಗನ್ನ | ನಿರ್ವಾಹವನು ಮಾಡೆ |

ಸರ್ವಾತ್ಮನಿಗೆ ಪೂಜೆ | ಯುರ್ವಿಯೊಳೆನ್ನುತ ||4||

ಸಾಕು ಸಾಕೆನಿಸುವುದು | ಪರಮಾತ್ಮನಿಗೆ |

ಸ್ವೀಕಾರವಾಗಿಹುದು| ಬೇಕಾದ ರುಚಿಗೊಂಡು|

ಏಕಾಂತ ಶಿವನುಂಡು||

ಬೇಕಾದ ಸುಖವೀವ| ಲೋಕಕ್ಕೆ ನರಹರಿಯು ||5||

ಪರಿಹಾಸ್ಯವನುಗೈವ ಕೋತಿ| ಇದು|

ತರವಲ್ಲ ನಿನಗೆ ತಪ್ಪದು ನರಕ ಭೀತಿ ||ಪ|||

ಪರಣಾಮವಲ್ಲವೀ ರೀತಿ| ಶಿವ|

ಶರಣರೊಪ್ಪರು ನೋಡು ನಿನ್ನ ದುರ್ನೀತಿ ||ಅಪ||

ಅನ್ಯರನ್ನಣಕಿಸಲೇಕೆ| ಅವ|

ರನ್ನು ಸೇರಿದ ಪಾಪ ನಿನಗಾಗಲಿಕ್ಕೆ ||

ಇನ್ನೆಷ್ಟೊ ಜನ್ಮ ಹೊಂದಲಿಕೆ|

ನಿನ್ನ ಪುಣ್ಯರಾಶಿಯ ನೀನೆ ಹಾಳು ಮಾಡಲಿಕೆ ||1||

ಶಿವ ಕೊಟ್ಟ ರೂಪಗಳ ಜರಿವೇ| ಹೀ|

ನವ ಮಾಡಿ ದುರ್ಭಾವದಿಂದ ಪಲ್ಗಿರಿವೇ||

ಅವರ ರೂಪವ ನೀನು ಪಡೆವೇ| ಅವ|

ರವಮಾನದೊಳು ನೊಂದ ಶಾಪದಿ ಕೆಡುವೇ ||2||

ಪರರನ್ನು ನೋಯಿಸಿದ ಪಾಪ| ಮುಂ|

ಬರುವ ಜನ್ಮಕೆ ಸಂಚಕಾರದ ರೂಪಾ||

ಪರಹಿಂಸೆಯೊಳು ಪರಿತಾಪ| ನಿ|

ರ್ಧರವೆಂಬ ನರಹರಿಯ ನುಡಿ ಜ್ಞಾನದೀಪ ||3||

ತೇರು ನೋಡಿರಮ್ಮ ತಂಗಿ| ತೇರು ನೋಡಿರೇ ||ಪ||

ತೇರನೇರಿ ಬಂದ ದೇವ| ರಾರು ನೋಡಿರೇ ||ಅಪ||

ದೈವ ಕಟ್ಟಿದಂಥ ತೇರು ಏನು ಸುಂದರ|

ದೈವಲೀಲೆಗಾಗಿ ನಿಂತಿತೇನು ಬಂಧುರ ||

ದೇವರನ್ನು ಕಾಣದಿರಲು ತೇರು ವ್ಯರ್ಥವು |

ದೇವರನ್ನು ಕಂಡರಾಯ್ತು ತೇರಿನರ್ಥವು ||1||

ತಾಳಮೇಳ ವಾದ್ಯರಭಸ ತಾಳಿ ನಿಂತಿದೆ |

ಕಾಲಕಾಲಕೆಲ್ಲ ಪೂಜೆಯಾಗುವಂತಿದೆ ||

ಲೀಲೆಗಾಗಿ ತೇರು ಬಂತು ನೋಡಲಾಗದೆ |

ಕೈಲಿ ಮುಟ್ಟಿ ಎಳೆವರಿಲ್ಲ ತಾನೆ ಹರಿವುದೆ ||2||

ಸೂರ್ಯ ಚಂದ್ರ ಬೀದಿಯಲ್ಲೆ ತೇರು ಸಾಗಿದೆ|

ತೂರ್ಯದಲ್ಲೇ ಹೋಗಿ ಪಾದಗಟ್ಟೆ ಸೇರಿದೆ||

ಆರ್ಯರಿಂದ ತಿಳಿಯಬೇಕು ಇದರ ಮರ್ಮವಾ |

ಧೈರ್ಯದಿಂದ ಎಳೆಯಬೇಕು ತಿಳಿದು ಧರ್ಮವಾ ||3||

ಯಾವ ಜಾತ್ರೆಯಲ್ಲಿ ಇಂಥ ತೇರು ಎಲ್ಲಿದೆ |

ಯಾವ ಜಾತ್ರೆಯಾಗದಿಂಥ ತೇರು ಇಲ್ಲದೆ ||

ಯಾವ ತೇರು ಸಾಗದಿಂಥ ತೇರು ಎಳೆಯದೆ |

ಜೀವವುಳ್ಳ ತೇರು ನೋಡಿ ದೇಹವೆಂಬುದೆ ||4||

ತನಗೆ ತಾನೆ ಹರಿವ ತೇರು ನೋಡಬಾರದೆ|

ಕೊನೆಗೆ ಪಂಚ ಕಲಶವುಳ್ಳ ತೇರು ಸಾಗಿದೆ||

ಮಿನುಗುವೇಳು ನೆಲೆಗಳನ್ನು ಸೇರಿಸಿಟ್ಟಿದೆ||

ಮುನಿಪ ನರಹರೀಂದ್ರಗಾಗಿ ತೇರು ಕಟ್ಟಿದೆ ||5||

ಹೊರಗಿಲ್ಲ ಸಂಸಾರ| ನಿನ್ನ| ಶರೀರವೆ ಸಂಸಾರ ||ಪ||

ಶರೀರ ಬಿಟ್ಟರೆ ಏನು | ಶರೀರ ಮುಂದಿಲ್ಲೇನು ||

ಶರೀರ ದಾಸೆಯ ನೀಗಿ| ಇರುವಾತನೇ ಯೋಗಿ ||ಅಪ||

ಎಲ್ಲ ಬಿಟ್ಟೆನು ಎಂದು | ಅಡವಿ| ಯಲ್ಲಿ ಸೇರಿರಲಿಂದು||

ಎಲ್ಲ ನಿನ್ನಯ ದೇಹ| ದಲ್ಲೆ ನಂತಿರೆಮೋಹ||

ಎಲ್ಲ ಬಿಟ್ಟುದೆ ಸುಳ್ಳು| ಇಲ್ಲೆ ಮೋಹವ ತಳ್ಳು ||1||

ಸಂಸಾರದೊಳಗಿದ್ದು| ತನ್ನ | ಸಂಶಯಂಗಳಗೆದ್ದು ||

ಹಂಸ ಸ್ವರೂಪಾಗಿ| ಹಿಂಸೆಯೆಲ್ಲವ ನೀಗಿ||

ಸಂಸೃತಿ ಬಿಡಲಾಗಿ| ಸಂಸಾರಿ ನಿಜಯೋಗಿ ||2||

ಅಂಟಿ ಅಂಟದ ಹಾಗೆ| ದೇಹ| ಜಂಟಿಯಿಲ್ಲದೆ ಹೋಗೆ ||

ತುಂಟ ಗುಣಗಳ ತುಳಿದು| ಕಂಟಕಂಗಳನಳಿದು||

ಒಂಟಿನರಹರಿಪಾದ| ಕ್ಕಂಟಿ ನಿರ್ಮಲನಾಗು ||3||

ಜೂಜು ಆಡಬೇಡಾ| ಜೂಜಿನ | ಗೋಜು ಕೇಡು ನೋಡಾ ||ಪ||

ಜೂಜು ಕೆಟ್ಟ ರೂಢಿ| ಜೂಜುಗಾರ ಕೇಡಿ||

ಜೂಜಿನಿಂದ ಮನೆಮಠಗಳು ಜಾಡಿ ||ಅಪ||

ನಳನು ಧರ್ಮರಾಜ| ಕೆಟ್ಟರು| ಕಳೆದು ಸರ್ವತೇಜಾ ||

ಬಳಲಿ ದುಃಖಿಸಿದುದಾ | ತಿಳಿದುಕೊಂಡು ನಡೆದಾ||

ಬಲವಂತನೆ ಸುಖಿಯೆಂದೆನ್ನಿಸಿದಾ ||1||

ಮೋಸಕ್ಕಿದು ದಾರಿ | ನಾನಾ ದೋಷಕೆ ಬಲಕಾರಿ||

ಆಸೆಯನ್ನು ತೋರಿ| ದ್ವೇಷ ಬೇರು ಊರಿ||

ನಾಶದ ಪಥಕಾಯಿತು ಸಹಕಾರಿ ||2||

ಸುಳ್ಳಿಗೆ ತವರೂರು | ಜೂಜಿದು| ಕಳ್ಳತನದ ಬೇರು||

ಎಳ್ಳಿನಷ್ಟು ಸುಖವು| ಇಲ್ಲ ದುಃಖ ಮುಖವು|

ಉಳ್ಳುದೆಲ್ಲ ಹೋದುದೆ ಕೌತುಕವು ||3||

ಹೆಂಡಿರು ಮಕ್ಕಳಿಗೆ| ತಿನ್ನುವ | ತಿಂಡಿ ತೀರ್ಥಗಳಿಗೆ ||

ಭಂಡತನವ ಮಾಡಿ| ಕಂಡುದೆಲ್ಲ ತೋಡಿ||

ಕೊಂಡು ಹೋಗಿ ಜೂಜಾಡುವ ಖೋಡಿ ||4||

ಕುಡುಕರ ಸಹವಾಸ | ನಾನಾ | ಕೆಡುಕರ ಉಪದೇಶ ||

ಒಡಕು ಹುಟ್ಟಿ ಮನೆಯು | ದುಡಿಮೆಗಾಯ್ತು ಕೊನೆಯು ||

ಕಡೆಯಾಯಿತು ನಿಜ ಶಾಂತಿಯ ಧ್ವನಿಯು ||5||

ತಂದೆ ತಾಯ್ಗಳಿಲ್ಲ | ಜೂಜಿಗೆ | ಬಂಧು ಬಳಗವಿಲ್ಲ ||

ಹೊಂದಿದಂಥ ಹಿತರು | ಮುಂದುಗಾಣದಿಹರು ||

ಕಂದಿ ಕುಂದುತಿರುವರು ಸತಿಸುತರು | ||6||

ನಂಬಿಕೆ ಹೋಗುವುದು| ಸಾಲವು| ತುಂಬುತ ಸಾಗುವುದು||

ಇಂಬು ಇಲ್ಲವಾಗಿ| ಜಂಭವೆಲ್ಲ ಹೋಗಿ||

ಹಂಬಲಿಸುವ ಶ್ರೀ ನರಹರಿಗಾಗಿ ||7||

ನೋಡಿರೈ ಶಿವ | ನಿಮ್ಮೊಳಿರುವಾ| ಬೇಡಿರೈ ವರವಾ|

ತಾನೆ | ಕೂಡಲೇ ಕೊಡುವಾ ||ಪ||

ನೋಡಿ ಶಿವನಾ ಬೇಡಿದವನಾ | ಕೂಡಿಯೇ ಕಾ| ಪಾಡುವವನಾ||

ಕೂಡಿ ಮೌನಾ| ಮಾಡಿ ಧ್ಯಾನಾ| ರೂಢಿಯೊಳು ನಿಂ| ತಾಡುವವನಾ ||1||

ನಡೆಯು ನಿಂದು| ನುಡಿಗೆ ಬಂದು| ನುಡಿಯು ನಿಂದು| ನಡೆಗೆ ಬಂದು||

ನಡೆಗೆ ನುಡಿಗೆ | ನಡುವೆ ಬಿಂದು| ವೊಡಲನಾಂತ| ಕಡೆಗೆ ನಿಂತ ||2||

ಒಂದು ವರ್ಣ ಮೂರು ಎನಿಸಿ | ಮುಂದೆ ಸಪ್ತ ಕೋಟಿ ಗುಣಿಸಿ ||

ಬಂದ ಮಂತ್ರಗಳನು ಕುಣಿಸಿ | ನಿಂದುದರ್ಧ ಮಾತ್ರೆ ಧ್ವನಿಸಿ ||3||

ಪಂಚಭೂತ ಹಂಚಿದಾತ | ಸಂಚು ಮಾಡಿ ಜಗವ ಹೂಡಿ |

ಪಂಚಕೋಶ ಪಂಚಕ್ಲೇಶ | ಸಂಚಯವನು ಮಿಂಚಿಯಿಹನು ||4||

ಹಲವು ಶಾಸ್ತ್ರ | ಕಲಿತು ಸೂತ್ರ| ತಿಳಿಯಲಿಲ್ಲಾ| ಫಲವು ಇಲ್ಲಾ||

ಸುಲಭವಲ್ಲಾ| ಗುರುವೆ ಬಲ್ಲಾ| ಕಳೆಯೊ ಬಂಧ| ನರಹರಿಯಿಂದ ||5||

ಮಡಿ ಯಾವುದಯ್ಯ ಮೈಲಿಗೆ ಯಾವುದಯ್ಯಾ||

ವೊಡಲೆಲ್ಲ ಹುಡುಕಿದರು ಮಡಿ ಕಾಣದಯ್ಯಾ ||ಪ||

ವೊಡಲ ಸಾಕ್ಷಿಯ ಬ್ರಹ್ಮ ಮಡಿ ಯೆಂಬಮರ್ಮ||

ದೃಢ ಮಾಡಿಕೊಂಡಾತ ತಾನಾದ ಬ್ರಹ್ಮ ||ಅಪ||

ಮಲಭಾಂಡ ಕಾಯ ಮಡಿಯೆಂಬುದನ್ಯಾಯ|

ಕೊಳೆತು ನಾರುವ ದೇಹ ತೊಳೆದರೇನಯ್ಯ ||

ಒಳಗೆ ತುಂಬಿದೆ ರಕ್ತಮಾಂಸವ ಸಹ್ಯ |

ತೊಳೆದೆ ಚರ್ಮವ ಮೇಲೆ ಅದು ನೋಡೆ ಬಾಹ್ಯ ||1||

ದುರ್ಗುಣಗಳೆ ನಿನ್ನೊಳಿರುವ ಮೈಲಿಗೆಯು||

ನಿರ್ಗುಣನು ನೀನಾದರಾಗುವುದು ಮಡಿಯು||

ಸ್ವರ್ಗಾದಿ ಭೋಗದಾಸೆಗಳು ಮೈಲಿಗೆಯು|

ವರ್ಗ ತ್ರಯಕೆ ದೂರನಾಗುವುದೆ ಮಡಿಯು ||2||

ತನು ಮೋಹ ಧನ ದಾಹ| ಮನದ ಮೈಲಿಗೆಯು |

ವನಿತೆ ಮಕ್ಕಳ ಮೋಹ ಬಿಡಲಾಗ ಮಡಿಯು||

ಘನ ಮಂತ್ರದೊಡಲಾದ ಧ್ಯಾನವೆ ಮಡಿಯು|

ಪ್ರಣವಾತ್ಮ ನರಹರಿಯ ಕೂಡುವುದೆ ಮಡಿಯು ||3||

ಇದು ಏನು ಸೋಜಿಗ| ವಿದು ಏನು ಸೋಜಿಗ ಕಂಡೆವಮ್ಮಾ ||ಪ||

ಹೃದಯಕ್ಕೆ ಆನಂದ| ಸುಧೆಯಿತ್ತ ಗುರುವೆಂದುಕೊಂಡೆವಮ್ಮ ||ಅಪ||

ಹಾರಾಡುತಿಹ ಹಂಸ| ಹಾರಾಟ ನಿಲಿಸಿತ್ತು ನೋಡಿರಮ್ಮಾ ||

ಬೇರೊಂದು ಗೂಡನ್ನು| ಸೇರುತ್ತ ಕುಳಿತಿತ್ತು ಕೂಡಿರಮ್ಮ ||1||

ಜಾರುತ್ತಲತಿಸಣ್ಣ | ದ್ವಾರದಿಂದಲಿಳಿಯುತ್ತ ಬಂದಿತಮ್ಮಾ ||

ನೀರಲ್ಲಿ ಸೇರುತ್ತ | ಭೋರುಗುಟ್ಟುತ ತಾನೆ ನಿಂದಿತಮ್ಮಾ ||2||

ನೀರೊಳಗೀಜುತ್ತ | ಸೇರಿತ್ತು ಗಗನವ ನೋಡಿರಮ್ಮ ||

ಮೀರಿಯಗ್ನಿಯ ಗೂಡು | ಸೇರುತ್ತ ನಿಂತಿತು ಕೇಳಿರಮ್ಮ ||3||

ಆ ದನಿಯ ಕೇಳಲು | ಹೋದೀತು ಭವಭಯ ಕೇಳಿರಮ್ಮ ||

ನಾದಾನುಸಂಧಾನ | ವಾದರೆ ಸಿಕ್ಕೀತು ನೋಡಿರಮ್ಮ ||4||

ಆಕಾಶವಾಣಿಯೆ | ಸಾಕ್ಷಿ ತಾನಾಗಿತ್ತು ಕೇಳಿರಮ್ಮ ||

ಏಕಾಂತವಾಗಿ ನಿ | ರಾಕಾರವೆನಿಸಿತ್ತು ನೋಡಿರಮ್ಮ ||5||

ದುಂಬಿಯೆ ತಾನೆ ಮೈ | ದುಂಬಿ ಝೇಂಕರಿಸಿತು ಕೇಳಿರಮ್ಮ ||

ಅಂಬರವನೆಲ್ಲವ | ತುಂಬಿ ಮೈಮರೆಯಿತು ನೋಡಿರಮ್ಮ ||6||

ಓಂಕಾರವನ್ನದು | ಝೇಂಕಾರ ಮಾಡಿತು ಕೇಳಿರಮ್ಮಾ ||

ಸೋಂಕಿ ತಾನಿಲ್ಲದೆ | ಅಂಕೆ ಮೀರಿರುವುದು ನೋಡಿರಮ್ಮ ||7||

ಆನಂದದೊಳು ಸಾಮ| ಗಾನ ಮಾಡುತಲಿತ್ತು ಕೇಳಿರಮ್ಮಾ||

ತಾನೆ ಗಗನಕ್ಕೇರಿ | ಶ್ರೀ ನರಹರೀಂದ್ರನ ಸೇರಿತಮ್ಮಾ ||8||

ನರಹರಿ ಗುರುಪಾದ | ದೊರಕಿದರಾಯಿತು ನೋಡಿರಮ್ಮ ||

ಪರಮಾರ್ಥ ಪುರುಷಾರ್ಥ | ಪರಿಣಾಮವಾಯಿತು ಕೇಳಿರಮ್ಮಾ ||9||

ಅತಿಯೆಂದೆಂದಿಗೂ ಬೇಡಾ|

ಮಿತಿಯೇ ಸೌಖ್ಯದ ನೆಲೆ ನೋಡಾ ||ಪ||

ಅತಿ ಭೋಗದೊಳಾ | ಯಿತು ಘನ ರೋಗಾ||

ಮಿತ ಭೋಗದೊಳಾ |ಯಿತು ಶಿವಯೋಗಾ ||ಅಪ||

ಯೋಗವು ಮಿತವಿರಬೇಕು|

ಯೋಗಿಗೆ ಬ್ರಹ್ಮಸ್ಥಿತಿ ಸಾಕು||

ಯೋಗವು ಮಿತಿಮೀರಲು ಪಲ್ಲಟವು |

ಯೋಗವು ಸಾಗದು ಹೋಗಲು ಘಟವು ||1||

ಅತಿಯಾಸೆಯೆ ಗತಿಗೇಡು |

ಮಿತವಾದಾಸೆಯೆ ಬಲು ಪಾಡು||

ಮಿತವಾಗಿರುವುದು| ಹಿತವೆನಿಸುವುದು||

ಅತಿಯಿಂದಲೆ ದು | ಷ್ಕೃತ ಜನಿಸುವುದು ||2||

ಅತಿಯೆಂಬುದು ಅಜ್ಞಾನ |

ಮಿತಿ ಎಂದೆಂಬುದೆ ಸುಜ್ಞಾನ ||

ಇತಿಮಿತಿಯರಿವು| ಶೃತಿ ಸಮ್ಮತವು ||

ಪ್ರತಿಹತವಿಲ್ಲವು| ನರಹರಿಮತವು ||3||

ಬ್ರಹ್ಮವಿದೇ ನೋಡೋ | ಗುರುವಿನ|

ಮರ್ಮ ತಿಳಿದು ಕೂಡೋ ||ಪ||

ಕರ್ಮದ ಬಂಧದ| ನಿರ್ಮಿತ ಹೊಂದಿದ |

ದುರ್ಮಲ ಕಾಯದ | ಧರ್ಮವ ಸೇರದ ||ಅಪ||

ಸಾಕ್ಷಿಯಿದೇ ನೋಡೋ | ಕರಣದೊ| ಳೀಕ್ಷಿಸಲೇ ಬೇಡೋ ||

ಈಕ್ಷಣ ಮಾತ್ರದಿ| ಅಕ್ಷರ ಸೂತ್ರದಿ |

ತಕ್ಷಣ ಬೆಳಗುವ | ಸೂಕ್ಷ್ಮ ನಿರಾಳವು ||1||

ನಾದದೊಳಿರುತಿಹುದು | ನಿರ್ಮಲ| ನಾದರೆ ಕಾಣುವುದು||

ನಾದದ ಭೇದವ| ಶೋಧಿಸಿ ಬ್ರಹ್ಮವ |

ಸಾಧಿಸಬೇಕೋ | ವಾದವು ಸಾಕೋ ||2||

ಅನ್ಯವಿದೇನಲ್ಲ| ಇದು ಸಾ| ಮಾನ್ಯರ ಸ್ವತ್ತಲ್ಲಾ ||

ನಿನ್ನೊಳಗಿರುವುದು| ನಿನ್ನನೆ ಬೆರೆವುದು||

ಚಿನ್ಮಯವಾದುದು | ತನ್ಮಯ ತಾನಿದು ||3||

ಪೃಥ್ವಿಯೊಳಿರುತಿಹುದು | ನಿತ್ಯವು | ಬೆತ್ತಲೆ ತಿರುಗುವುದು||

ಹೊತ್ತಿದೆ ದೀಪವ | ನೆತ್ತಿಯೊಳುರಿಸುವ||

ವಸ್ತುವೆ ತಾನೆ| ತ್ತೆತ್ತಲು ತೋರುವ ||4||

ನಂದದೆ ಇರುವಂಥ | ಆತ್ಮಾ | ನಂದದಿ ಬೆರೆದಂಥ||

ನಂದಾದೀಪವಾ | ನಂದದಿ ಬೆಳಗಿಸಿ ||

ನಂದಿವಾಹನ ತಾ | ನೆಂದು ತಿಳಿಯುತ ||5||

ನರಕ ಕೂಪದಲಿ | ಲೋಕವು | ನರಳಲು ತಾಪದಲಿ ||

ನರರಿಗೆ ಸತ್ಯವ | ನರುಹುತ ಮಿಥ್ಯವ ||

ನರುಹಿದ ಯೋಗಿ | ನರಹರಿಯಾಗಿ ||6||

ದೇಹವು ನೀನಲ್ಲಾ | ನಿನ್ನೊಳು |

ಮೋಹವು ಬಿಡದಲ್ಲಾ || ಊಹಿಸಲಾಗದ| ಸೋಹಂಭಾವದ||

ವಾಹಕ ನರಹರಿ| ಸಾಹಸದಿಂದರಿ ||7||

ಗುರು ಪುತ್ರನಾಗಿರಬೇಕು| ತನ್ನ| ಗುರುವನ್ನೆ ನಂಬಿದರೆ ಸಾಕು ||ಪ||

ಗುರು ಬ್ರಹ್ಮವಿಷ್ಣುವು | ಗುರುರುದ್ರ ಈಶ್ವರ||

ಗುರುಸದಾಶಿವನೆಂದು| ಗುರಿಯರಿತಿರಬೇಕು ||ಅಪ||

ಗುರು ಪಾದ ತೀರ್ಥವ ಕೊಂಡು| ಕೊಟ್ಟ | ಕರುಣ ಪ್ರಸಾದವನುಂಡು ||

ಗುರು ಧರ್ಮವನು ಕಂಡು | ಗುರುಪೂಜೆ ಮನಗಂಡು||

ಗುರುಮಂತ್ರ ಬಲಗೊಂಡು | ಗುರುತಾಗಿ ನೆಲೆಗೊಂಡು ||1||

ಎಲ್ಲ ದೇವರ್ಕಳು ಬಂದು| ಗುರುವಿ| ನಲ್ಲಿ ಸೇರಿರುವರು ಎಂದು ||

ಉಲ್ಲಾಸಗೊಳ್ಳುತ್ತ | ಎಳ್ಳಷ್ಟು ಸಂದೇಹ |

ಇಲ್ಲದೆ ಸರ್ವತ್ರ| ದಲ್ಲಿ ಗುರುವನು ಕಂಡು ||2||

ತತ್ಪದ ಶೋಧಿಸಬೇಕು | ಬೋಧಾ | ತತ್ಪರನಾಗಿರಬೇಕು ||

ತತ್ಪದ ಶಿವನಲ್ಲಿ | ತ್ವಂಪದ ಜೀವನು |

ತಪ್ಪದೆ ಸೇರುತ್ತ | ಲಿರ್ಪುದೆ ಅಸಿಪದ ||3||

ವೇದ ವಿಚಾರವ ಮಾಡಿ| ಪೇಳ್ದ| ಬೋಧೆಯ ನಿಶ್ಚಯ ಮಾಡಿ||

ನಾದದೊಳಡಗಿದ | ಭೇದ ವಸ್ತುವ ಕೂಡಿ |

ಆದ್ಯಂತವಿಲ್ಲದ| ನಾದಿ ನರಹರಿಯಲ್ಲಿ ||4||

ಆನಂದ ತಾನಾಗಬೇಕು | ಸತ್ಯ | ಜ್ಞಾನ ಸ್ವರೂಪಾಗಬೇಕು ||

ಏನೊಂದನರಿಯದೆ | ತಾನೆ ತಾನಾಗುತ್ತ |

ಮೌನೀಂದ್ರ ನರಹರಿ | ತಾನೆಂದು ನಿಶ್ಚಯಿಸಿ ||5||

ಯನಗುಂಟೆ ಸಂಸಾರ ಭಾರ| ತಾನೆ|

ಹೊಣೆಗಾರನಾಗಿರ್ಪ ಶಿವನದಿದು ಪೂರಾ ||ಪ||

ಯನಗೇತಕ್ಕಿದರ ವಿಚಾರ | ನಿತ್ಯ |

ನೆನೆಯುತ್ತ ಶಿವನನ್ನು ಬದುಕುವುದೆ ಸಾರ ||ಅಪ||

ಯನ್ನದಲ್ಲವು ನೋಡೆ ತನುವು | ಮಿಥ್ಯ |

ವೆನ್ನಿಸುತ ಶಿವನಾಜ್ಞೆ ಕಾಯ್ದುದನು ದಿನವು ||

ಯನ್ನ ವಶವಲ್ಲವೀ ಮನವು | ಮಾಯೆ |

ಯೆನ್ನಿಸುತ ಶಿವನ ಕೈವಶ ಪ್ರತಿಕ್ಷಣವು ||1||

ಸತಿಪುತ್ರರೆನ್ನವರಲ್ಲಾ| ಇವರೆ |

ಗತಿಯೆಂದು ನಂಬಿದ್ದು ಹಿತವಾಗಲಿಲ್ಲಾ |

ಅತಿ ಮೋಹಪಡುತಿದ್ದೆನಲ್ಲಾ | ಯನ್ನ |

ಹಿತನು ಸದ್ಗುರುನಾಥ ಕಾಪಾಡಬಲ್ಲಾ ||2||

ಧನ ನನ್ನದೆಂದೆಂಬ ಮೋಹ| ಮುಂದೆ |

ಕೊನೆಯಿಲ್ಲದಂತೆ ಬೆಳೆಯುತಲಿತ್ತು ದಾಹ||

ಯನಗಾಗದೊಲು ಶಿವದ್ರೋಹ| ಯನ್ನ |

ಜನಕ ನರಹರಿ ಕಳೆದುಬಿಟ್ಟ ಸಂದೇಹ ||3||

ಪಡೆದುದುಣ್ಣಲು ಬರುವುದಲ್ಲದೆ|

ದುಡಿದುದುಣ್ಣಲು ಬರುವುದೇ ||ಪ||

ದುಡಿದುದೆಲ್ಲವು ಪರರಿಗಾಯಿತು |

ಪಡೆದುದೇ ತನಗಾಯಿತು ||ಅಪ||

ಪಡೆದುದುಣ್ಣುತ ದುಡಿದುದೆಲ್ಲರಿ|

ಗಿಡದೆ ಋಣವದು ತೀರದು ||

ಮಡಿವ ಕಾಲಕೆ ದುಡಿಮೆಯೆಲ್ಲಕೆ |

ಒಡೆಯನಾರೋ ತೋರದು ||1||

ಪರರ ಮಕ್ಕಳ ಕೊಲ್ಲಿದಾತಗೆ |

ಇರುವ ಮಕ್ಕಳು ಬದುಕರು ||

ಬರಿದೆ ಮಕ್ಕಳು ಸಾಯ್ವರೆನ್ನುತ |

ಹೊರಳಿ ಅತ್ತರು ನಿಲ್ಲರು ||2||

ಪರರ ಸತಿಯನು ಕೊಂದು ಹುಟ್ಟಲು|

ಇರುವ ಹೆಂಡತಿ ಸಾಯ್ವಳು||

ಕೊರಗಿ ದುಃಖಿಸೆ ಕರುಣೆ ಬಾರದು|

ಪರಮ ನಿಷ್ಠುರ ವಿಧಿಯಿದು ||3||

ಪರರ ಸತಿಯರ ಕೆಡಿಸಿದಾತಗೆ |

ಬೆರೆದ ಸತಿ ಕೆಡುತಿರ್ಪಳು||

ಪರರ ಧನವನು ಕೊಂಡು ಹುಟ್ಟಲು|

ಇರುವ ಧನ ಕೈ ಸೇರದು ||4||

ಪರರಿಗಿತ್ತು ಹುಟ್ಟಿದಾತಗೆ |

ಕೊರತೆಯಿಲ್ಲದೆಯಿರ್ಪುದು ||

ನರಹರಿಯ ಪದಪದ್ಮ ಸೇರಲು |

ದುರಿತವೆಲ್ಲವು ಪೋಪುದು ||5||

ಗುರುವಿನ ಪಾದಯನಗೆ ದೊರೆಯಿತವ್ವ | ಮೈ| ಮರತೇನವ್ವಾ ||ಪ||

ಕರುಣಪ್ರಸಾದ | ಪಡೆದುಕೊಂಡೆನವ್ವ | ನಾನುಂಡೇ ನವ್ವ ||ಅಪ||

ಮೇಲ ಮಹಡಿಗೆಯನ್ನ ಕರೆದು ಒಯ್ದಾ | ಸುಖ| ಲೀಲೆಯಗೈದಾ ||

ಕೀಲು ಮಂಚದಾ ಮೇಲೆ ಏರಿಸಿದ್ದಾ | ಭವ| ಮೂಲವ ಗೆದ್ದಾ ||1||

ಯಾರು ಇಲ್ಲದಾ ಕಡೆಗೆಯನ್ನ ಕರೆದಾ | ನಿಜ| ತೋರಿಸಿ ಮೆರೆದಾ||

ಸೂರೆ ಮಾಡಿ ಏಕಾಂತ ಬೋಧೆವೊರೆದ | ಸುವಿ | ಚಾರದಿ ಬೆರೆದಾ ||2||

ಗಂಡುಗಲಿಗಳ ಗಂಡನೀತನೆಂದೇ | ಬಲ| ಗೊಂಡೇ ನಿಂದೇ||

ಚಂಡಮರುತನ ಗಂಡುಗೆಡಿಸಿನಿಂದಾ | ನೆಲೆ | ಗೊಂಡೇ ನಿಂದಾ ||3||

ಹಂಸತಲ್ಪದೊಳೆನ್ನ ಕೂಡಿಕೊಂಡಾ | ನಿ| ಸ್ಸಂಶಯಗೊಂಡಾ||

ಧ್ವಂಸ ಮಾಡಿದ ಜೀವಗುಣದ ಹಿಂಡಾ| ಶಿವ| ನಂಶವ ಖಂಡಾ ||4||

ನಾದದೊಳಗೆ ಪರ | ನಾದವಿರುವುದವ್ವಾ | ತಾನದು ಪರದೈವಾ ||

ಬೋಧೆಯನರಿತರೆ | ಮುಕ್ತಿಯಾಯಿತವ್ವಾ | ತಾನಿದು ಗುರುಸೇವಾ ||5||

ಬಯಲೊಳಗೆ | ಬಯಲಡಗಿ ಹೋಯಿತವ್ವ | ಭಯವಿಲ್ಲವವ್ವಾ ||

ದಯದೊಳು ನರಹರಿ | ಯನ್ನ ಕಾಯ್ವನವ್ವ | ಸುಖಿಯಾದೆನವ್ವಾ ||6||

ಭೋಗದೊಳು ಶಿವ| ಯೋಗ ತೋರಿಕೊಟ್ಟ | ಶಿವ| ಯೋಗದಿ ಧಿಟ್ಟಾ||

ವಾಗದ್ವೈತವ ನರಹರೀಂದ್ರ ತೊಟ್ಟ | ಭವ| ರೋಗವ ಸುಟ್ಟಾ ||7||

ನಿಜ ವೈರಾಗ್ಯವು ಬೇಕೋ | ಜನ್ಮ ಸಾಕೋ| ಭವಬಾಧೆಯಿನ್ಯಾಕೋ ||ಪ||

ತನು ಮರಣದ ನಂಟು | ಮನವು ಮಾಯೆಯ ಗಂಟು|

ಧನವು ನಶ್ವರದಂಟು| ಎನಲು ಮುಕ್ತಿಯು ಉಂಟು ||1||

ದುಃಖ ಮೂಲವು ಜಗ| ಸೌಖ್ಯವಿಲ್ಲದ ಜಾಗ||

ಲೆಕ್ಕವಿಲ್ಲದ ರೋಗ| ಕುಕ್ಕಿ ಕೊಲುತಿರುವಾಗ ||2||

ಆಸೆಯೆನ್ನುವ ಪಾಶ| ದೋಷ ಸರ್ವದ ನಾಶ||

ಮೋಸ ಮಾಡುವ ವೇಷ| ಸೂಸಿಕಾಂಬುದು ಕ್ಲೇಶ ||3||

ದೇಹ ನಂಬಿರಬೇಡ | ಮೋಹ ತುಂಬಿರಬೇಡ||

ದಾಹವೆಂಬುದು ಕೂಡ| ದ್ರೋಹವಾಯಿತು ನೋಡ ||4||

ತಂದೆ ತಾಯಿಗಳಿಲ್ಲ| ಬಂಧು ಬಳಗಗಳಿಲ್ಲ||

ನಂದನ ಸತಿ ಮಿತ್ರ | ರಿಂದ ಸದ್ಗತಿಯಿಲ್ಲ ||5||

ಸತ್ಯ ಜೀವನ ಬಿಟ್ಟು | ನಿತ್ಯ ಕ್ಲೇಶವ ಪಟ್ಟು ||

ಸತ್ತು ಹೋಗುವೆ ಕೆಟ್ಟು | ಮತ್ತೆ ಯಮನೊಳು ಪೆಟ್ಟು ||6||

ಜ್ಞಾನವ ನೀ ಹೊಂದು| ಆನಂದದೊಳು ನಿಂದು ||

ಮೌನಿ ನರಹರಿ ಪಾದ| ಧ್ಯಾನದಿಂದಿಂಪಾದ ||7||

ಜ್ಯೋತಿಯ ಬೆಳಗುವ ಬಾರೆ ಸಖೀ | ಚಿ|

ಜ್ಯೋತಿ ಸ್ವರೂಪಗೆ ಚಂದ್ರಮುಖೀ ||ಪ||

ಚೇತನಮೂರ್ತಿಯೆ ನಿತ್ಯಸುಖೀ | ನಿ|

ರ್ಭೀತ ಗುರೂತ್ತಮ ಪದ ಸೋಕೀ ||ಅಪ||

ಮೂಲಾಧಾರದಿ ಸಂಚರಿಸೀ| ಭವ |

ಮಾಲಾಛೇದಕನವತರಿಸೀ||

ನೀಲಜ್ಯೋತಿಯೊಳು ಕಂಗೊಳಿಸಿ | ಚಿ|

ನ್ಮೂಲನೆನಿಸಿದನು ಪ್ರಜ್ವಲಿಸೀ ||1||

ಈಡಾಪಿಂಗಳೆ ಕೂಡಿಸಿದಾ| ನಡು|

ನಾಡಿಯೊಳಗೆ ನುಡಿಯಾಡಿಸಿದಾ||

ರೂಢಿಯನೆಲ್ಲವ ಝಾಡಿಸಿದಾ| ಆ |

ರೂಢನೆನೆಸಿ ನಲಿದಾಡಿಸಿದಾ ||2||

ಶಿವ ಜೀವೈಕ್ಯ| ನಿವೇದಕಗೆ | ಬಲಿ|

ಯುವ ಕರ್ಮದ ವಿಚ್ಛೇದಕಗೆ || ಸುವಿವೇಕದ

ಸುಖಸಾಧಕಗೆ | ಅನು|

ಭವಿಯಹ ನರಹರಿ ಬೋಧಕಗೆ ||3||

ಶ್ರೀ ಗುರೂತ್ತಮ ಲಾಲಿಸೈ | ಸಮ್ಯಜ್ಞಾನ | ಯೋಗವಂದಯ ಪಾಲಿಸೈ ||ಪ||

ರಾಗ ದ್ವೇಷಗಳೆಲ್ಲ ಕೆಡಿಸೈ| ಭೋಗ ವಾಸನೆಯನ್ನೆ ಬಿಡಿಸೈ||

ತ್ಯಾಗ ಬುದ್ಧಿಯೊಳೆನ್ನ ನಡೆಸೈ | ಯೋಗ ಸಿದ್ಧಿಯನೀಗ ಕೊಡಿಸೈ ||ಅಪ||

ಸಾಂಖ್ಯ ಯೋಗವ ಸಾಧಿಸಿ | ಬಹು ವಿಧತತ್ವ |

ಸಂಕುಲವ ಪರಿಶೋಧಿಸಿ||

ಸಂಖ್ಯೆಯೆಲ್ಲಕ್ಕೊಂದೆ ಮೂಲವು|

ಸೋಂಕುವೀಶ್ವರನೆನಿಪ ಸಗುಣವು ||

ಅಂಕವಲ್ಲದ ಸೊನ್ನೆ ಪೂಜ್ಯವು |

ಶಂಕಿಸದ ನಿರ್ಗುಣದ ಬ್ರಹ್ಮವು ||1||

ಮಂತ್ರ ಕೋಟಿಗಳೆಲ್ಲವು | ತಾರಕ ಯೋಗ|

ತಂತ್ರವೆನ್ನಿಸಬಲ್ಲವು ||

ಮಂತ್ರವರ್ಣಗಳೆಲ್ಲ ಈಶ್ವರ|

ಮಂತ್ರ ತಾರಕ ಲೀನವಾ ಪರ||

ತಂತ್ರ ಶೂನ್ಯ ಬ್ರಹ್ಮ ನಿರ್ಧರ|

ನಿಂತ ನಿರ್ಗುಣವಿದು ಪರಾತ್ಪರ ||2||

ಅಮನಸ್ಕ ರಾಜಯೋಗಿ | ನಿರ್ಗುಣ ಬ್ರಹ್ಮ |

ಸಮತಾನುಭಾವವಾಗಿ||

ಸುಮನಸಾನಂದಾತ್ಮನೆನ್ನಿಸಿ |

ಅಮರನಾದಾಂತವನು ಸಂಧಿಸಿ||

ವಿಮಲ ಬ್ರಹ್ಮಾತ್ಮೈಕ್ಯ ಸಾಧಿಸಿ|

ರಮಿಸಿ ನರಹರಿ ಯೋಗಿಯೆನ್ನಿಸಿ ||3||

ಇರುವೇ ಜಗವ ತುಂಬಿರುವೇ | ನಿನ್ನ |

ಅರಿವಿಲ್ಲದವರಿಗೆ ಮರೆಯಾಗುತಿರುವೇ ||ಪ||

ಅತಿ ಸೂಕ್ಷ್ಮವಿರುವೆ ಸ| ದ್ಗತಿಯೀಯುತಿರುವೇ||

ಮತಿಗೇಡಿಗಳಿಗೆ ಸ| ಮ್ಮತವಾಗದಿರುವೇ ||1||

ಧರೆಯಲ್ಲಿ ಗೂಡಿಟ್ಟು | ಹರಿದಾಡುವುದೇ ಗುಟ್ಟು |

ಶರಧಿಯಲ್ಲೀಜಾಡಿ| ಸುರಸಾಮತವನೂಡಿ ||2||

ಮೆರೆವಗ್ನಿಯೊಳು ನಿಂತೆ | ಬರುವ ರೂಪವನಾಂತೆ||

ಮರುತನಲ್ಲಿಯೆ ಸ್ಪರ್ಶ| ವರಿತು ತಾಳಿದೆ ಹರ್ಷ ||3||

ಗಗನವೆಲ್ಲವ ತುಂಬಿ| ಸೊಗದಿ ಶಬ್ದವ ನಂಬಿ||

ಅಗಣಿತ ಬ್ರಹ್ಮಾಂಡ ಬಿಗಿಯುತ್ತ ನೆಲೆಗೊಂಡ ||4||

ನೀನಿಲ್ಲದಿಹ ಜಾಗ| ಏನಿಲ್ಲದಿರುವಾಗ||

ಜ್ಞಾನ ಸಾಗರನಾದೆ| ಶ್ರೀ ನರಹರಿಯಾದೆ ||5||

ಹಾವಿನ ಹೆಡೆಯೊಳು ನಾಟ್ಯವನಾಡುವ|

ದೇವನ ತಿಳಿ ನೀ ನಿನ್ನೊಳಗೆ ||ಪ||

ಸಾವಿನ ಭಯವಿಲ್ಲಾತನ ಪಾದವ|

ಸೇವಿಸಿದಾಗಲೆ ಸುಖ ನಿನಗೆ ||ಅಪ||

ಮಧುರಾಪುರದೊಳು ವಾಸವ ಮಾಡುತ|

ಮಧುರ ರಸಂಗಳನುಣ್ಣುವನು ||

ಮಧುರ ವಚನಗಳ ಸುಖ ಸಂಗೀತವ|

ಮುದದಿಂ ನುಡಿಸುತ ಕೇಳುವನು ||1||

ದ್ವಾರಕಿಯೊಳು ತಾ ಸೇರುತ ಮಂತ್ರದ |

ದ್ವಾರವ ತೆರೆಯುತ ವೇದವನು | ಸಾರಾಸಾರ

ವಿಚಾರವ ಪೇಳ್ವನು| ಸಾರುತ ಭಗವದ್ಗೀತೆಯನು ||2||

ಬೃಂದಾವನದೊಳು ಸುಂದರ ಗೋಪೀ|

ಬೃಂದದಿ ನಲಿವನು ಗೋವಿಂದ| ಬಂಧವ ಹರಿವ

ಮುಕುಂದನು ತಾನೇ| ಬಂದನು ನರಹರಿ ರೂಪಿಂದ ||3||

ನೋಡಲಿಲ್ಲವೆ ನಮ್ಮ ಶಿವನಾ | ನಿಮ್ಮ |

ಕೂಡಿಯಾಡುತಲಿರ್ಪ ಲೋಕ ಪಾವನನಾ ||ಪ||

ಬೇಡಿದಿಷ್ಟಾರ್ಥವೀವವನಾ| ತಾನೆ|

ರೂಢಿಯೆಲ್ಲವನು| ಕಾಪಾಡಬಲ್ಲವನಾ ||ಅಪ||

ಪೃಥ್ವಿ ತತ್ವದಿ ನಡೆಯುವವನಾ | ಅಪ್ಪು |

ತತ್ವದೊಳಗೆ ಮಂತ್ರಜಪಗೈಯುವವನಾ||

ನೇತ್ರಾಗ್ನಿಯೊಳು ಸೇರಿದವನಾ|

ಮೂರವಸ್ಥೆಯೊಳು ಮೂರವತಾರವಾದವನಾ ||1||

ಮರುತ ತತ್ವವ ಕೂಡಿದವನಾ ಯೋಗ ನಿರತನೆನ್ನಿಸಿ

ಪರಮಹಂಸನಾದವನಾ||

ಪರನಾದ ಬೆರೆತು

ತೋರ್ಪವನಾ| ಸರ್ವ| ಭರಿತನೆನ್ನಿಸಿ

ಪ್ರಣವಾಂತ್ಯ ಗೋಚರನಾ ||2||

ಗಗನ ಮಾರ್ಗದಿ ಹೋಗುವವನಾ | ತೋರ್ಪ|

ಸಗುಣವೆಲ್ಲವನು ನಿರ್ಗುಣ ಮಾಡುವವನಾ ||

ಜಗವೆಲ್ಲ ಬಿಗಿದು ನಿಂತವನಾ | ಭಕ್ತ|

ರಿಗೆ ತೋರುತಿರುವಂಥ ನರಹರೀಶ್ವರನಾ ||3||

ಶೂನ್ಯವೆನಿರ್ಗುಣ ಪರಬ್ರಹ್ಮ ಪರಿ|

ಪೂರ್ಣವಿದೊಂದೇ ನಿಷ್ಕರ್ಮ ||ಪ||

ಶೂನ್ಯವೆ ಪೂಜ್ಯವು ನಿಜಧರ್ಮಾ | ಸಾ|

ಮಾನ್ಯರಿಗರಿಯದು ಈ ಮರ್ಮಾ ||ಅಪ||

ಒಂದೆನ್ನುವುದೀಶ್ವರ ರೂಪ| ಇದ|

ರಿಂದಾಯ್ತಸಂಖ್ಯ ಜಗ ರೂಪ||

ಮುಂದಿದು ಸಗುಣವು ಸಾಕಾರ| ಎರ|

ಡೆಂದೆನಿಸಿತು ಜೀವೇಶ್ವರರಾ ||1||

ಮೂರು ಗುಣಂಗಳು ಮೈದೋರಿ | ತ್ರೈ|

ಮೂರು ತಿಗಳಿಗಾಯಿತು ದಾರಿ||

ತೋರುವ ಸೃಷ್ಟಿ ಸ್ಥಿತಿಲಯವು | ಜಗ|

ಕಾರಣ ಸತ್ವರಜಸ್ತಮವು ||2||

ವೇದವು ನಾಲ್ಕೆಂದೆನಿಸಿತ್ತು| ಪರ|

ನಾದಾಶ್ರಯದೊಳು ಜನಿಸಿತ್ತು ||

ಐದು ಭೂತಗಳಿಗಿಂಬಾಯ್ತು | ಮೂ|

ಲಾಧಾರದೊಳೇ ತುಂಬಿತ್ತು ||3||

ಆರು ಶಾಸ್ತ್ರಗಳು ತೋರಿದುವು| ಸುವಿ|

ಚಾರದ ಮಾರ್ಗವ ಸಾರಿದವು ||

ಆರನೆ ಮನ ಪಂಚೇಂದ್ರಿಯವು| ವಿ|

ಸ್ತಾರ ವಿಚಾರಕೆ ಸಾಧನವು ||4||

ಏಳು ಚಕ್ರ ಪರಿಶೋಧನೆಯು || ಭವ|

ಮೂಲವ ಛೇದಿಪ ಸಾಧನೆಯು||

ಕಾಲಹರಂಗೆ ನಿವೇದನೆಯು | ಗುರು|

ಕೀಲಿದು ನರಹರಿ ಬೋಧನೆಯು ||5||

ಕಣ್ಣು ಗೆದ್ದವ ಯೋಗಿಯು || ಕಾಣುವುದೆಲ್ಲ |

ತನ್ನದೆಂಬುವ ಭೋಗಿಯು ||ಪ||

ಕಣ್ಣು ಕಾಂಬುದೆ ಶಿವನ | ಪುಣ್ಯ ರೂಪೆಂಬವನ ||

ಕಣ್ಣಿನಲ್ಲಿಯೆ ಪಾಪಾರಣ್ಯವೆಲ್ಲವು ದಹನ ||ಅಪ||

ನಯನ ಕಾರಣ ದೇಹವು| ಕಾಣುವ ರೂಪ|

ಪ್ರಿಯವೆನ್ನುವುದೆ ಮೋಹವು ||

ನಯನ ಸರ್ವೇಂದ್ರಿಯ | ಕ್ರಿಯೆಗೆ ಕಾರಣ ತೇಜ|

ನಯನ ಜಾಗ್ರಕೆ ಸ್ವಪ್ನ| ನಿಯತ ಸುಪ್ತಿಗೆ ಸಹಜ ||1||

ನೇತ್ರಗಾತ್ರದ ಸೂತ್ರವು | ಪುಣ್ಯವು ಪಾಪ|

ವೃತ್ತಿಯೆಲ್ಲಕೆ ಪಾತ್ರವು || ನೇತ್ರವರಿಷಡ್ವರ್ಗ |

ಕ್ಷೇತ್ರವೆನಿಸಿಪುದು || ಚಿತ್ರವಿಚಿತ್ರ ರೂ|

ಪಾರ್ಥ ಮಾಯಾ ವಶವು ||2||

ಕಾಣುತಿರ್ಪುದು ನಶ್ವರ| ಶಾಶ್ವತವಾಗಿ |

ಕಾಣದಿರ್ಪನು ಈಶ್ವರ||

ಕಾಣುವುದ ನಂಬಿದವ | ಕಾಣುವನು ಯಮನನ್ನು ||

ಜ್ಞಾನ ನೇತ್ರದಿ ಶಿವನ ಕಾಣು ನರಹರಿಯಲ್ಲಿ ||3||

ಬಾಳೆ ಹಣ್ಣಾಗಬೇಕು| ಶಿವ ಪೂಜೆಗೆ | ಬಾಳೆ ಹಣ್ಣಾಗಬೇಕು ||ಪ||

ಬಾಳೆ ಹಣ್ಣಾದರೆ | ಮೇಲು ನೈವೇದ್ಯಕೆ ||

ನೀಲಕಂಠನೆ ತೃಪ್ತಿ | ತಾಳುತ್ತ ವರವೀವ ||ಅಪ||

ಭಕ್ತಿ ರಸಭರಿತವಾದ | ಸದ್ಗುಣ

ಸುವಿ| ರಕ್ತಿಯನುಭವ ತುಂಬಿದ||

ಯುಕ್ತ ಸೇವಾ ಮಧು | ರತ್ವದೊಳು ಕೂಡಿದ||

ಮುಕ್ತ ಭಾವದ ಜ್ಞಾನ| ಶಕ್ತಿಪೂರಿತವಾದ ||1||

ಬಾಳೆ ಹದವಾಗಬೇಕು| ಪೂಜಿಸುವವನ |

ಬಾಳೆ ಮೃದುವಾಗಬೇಕು| ಬಾಳೆ ಸತ್ಯವು ಶಾಂತಿ|

ತಾಳಿಕೊಂಡರೆ ಕಾಂತಿ||

ಬಾಳೆಲ್ಲ ಸದ್ಧರ್ಮ | ಶೀಲವಾಗಿರಬೇಕು ||2||

ವಿನಯ ವಿಶ್ವಾಸಂಗಳು| ದಯೆ ದಾಕ್ಷಿಣ್ಯ |

ಘನತೆ ಸೌಜನ್ಯಂಗಳು ||

ಮನದಿ ನಿರಹಂಕಾರ| ದನುಭಾವವಿರೆ ಪೂರ||

ಅನಘನರ ಹರಿಪಾದ| ವನಜಕರ್ಪಿತವಾದ ||3||

ನಾದ ಬಿಂದು ಕಳೆಗಳಂ ಪ್ರಸಾದಿಸುವುದು ಬ್ರಹ್ಮವು |

ನಾದ ಬಿಂದು ಕಳೆಗತೀತವಾಯ್ತು ಬ್ರಹ್ಮ ಧರ್ಮವು ||ಪ||

ವೇದಶಾಸ್ತ್ರ ಉಪನಿಷತ ಪುರಾಣವೆಂಬಿವೆಲ್ಲವು |

ನಾದ ಬಿಂದು ಕಳೆಗಳಿಂದ ತೋರಿ ಬೆಳಗುತಿರ್ಪವು ||ಅ|ಪ||

ನಾದ ಲೀನಮಾದ ಸಪ್ತಕೋಟಿ ಮಹಾಮಂತ್ರವು |

ನಾದ ಬಿಂದು ಕೂಡಿದಾಗ ಕಳಾರೂಪವಾಂತವು ||

ನಾದ ಮಂತ್ರ ಬಿಂದು ತಂತ್ರ ಕಳೆ ಸ್ವತಂತ್ರ ಜ್ಞಾನವು |

ನಾದ ದಾದಿಯಂತ್ಯ ಬಿಂದು ನಿಂದು ತೋರೆ ಧ್ಯಾನವು ||1||

ನಾದ ಬಿಂದು ಲೀನವಾದ ಕಳಾರೂಪ ಮೌನವು |

ನಾದ ಬ್ರಹ್ಮ ಬಿಂದು ವಿಷ್ಣು ಕಳೆಯೆ ರುದ್ರ ತಾಣವು ||

ನಾದ ವೇದ ರೂಪವಾಗಿ ಬೆಳಗಲಾಗಿ ಮಂತ್ರವು |

ವೇದ ಬೋಧ ರೂಪವಹುದು ಕಳಾರೂಪ ತಂತ್ರವು ||2||

ವರ್ಣನಾದ ಪೂರ್ಣಬಿಂದು ಧ್ವನಿಯ ರೂಪವಾದುದು |

ಪೂರ್ಣವಾದ ಕಳೆಯೆ ವಿದ್ಯೆ ಪ್ರಣವವೆನ್ನಿಸಿರ್ಪುದು ||

ಸ್ವರ್ಣ ಒಡವೆಯಾದ ರೀತಿ ಪ್ರಣವ ಸರ್ವವಾದುದು |

ವರ್ಣ ರಹಿತ ದರ್ಧ-ಮಾತ್ರೆ ನರಹರೀಂದ್ರ ತಾನದು ||3||

ಯೋಗಿ ಬಂದನು ನೋಡೆ ಅಕ್ಕಾ | ಶಿವನ|

ಹಾಗೆ ಕಾಣಿಸುತಾನೆ ಪಕ್ಕಾ ||ಪ||

ಯೋಗ ಭೋಗಗಳ ಸಂ| ಯೋಗವಾದರೆ ಸಿಕ್ಕ ||

ರಾಗ ವಿರಾಗ ಪ್ರಯೋಗಕ್ಕೆ ತಾ ಮಿಕ್ಕ ||ಅಪ||

ಭೋಗಿಭೂಷಣ ಧರೆಗೆ ಬಂದಾ | ಸರ್ವ |

ಭೋಗಿಯೆನ್ನಿಸಿ ನಡೆದು ನಿಂದಾ||

ರಾಗ ಪಾಡುತಲಿದ್ದ | ರಾಗ ಬುದ್ಧಿಯ ಗೆದ್ದ ||

ತ್ಯಾಗಿಯೆನ್ನಿಸಿ ಕೊನೆಗೆ | ಸಾಗಿ ಬಂದನು ಮನೆಗೆ ||1||

ನಿಗಮಾಗಮಾರ್ಥವ ನುಡಿದಾ | ಸರ್ವ |

ಜಗದಾತ್ಮ ತಾನಾಗಿ ನಡೆದಾ ||

ಹಗಲು ರಾತ್ರಿಗಳಿಲ್ಲ | ಯುಗ ಭೇದಗಳೆಯಿಲ್ಲ ||

ಸೊಗಸಿ ಮಹಿಮೆಯ ತೋರಿ|

ಸುಗಮ ಮಂತ್ರವ ಸಾರಿ ||2||

ಕಣ್ಣು ಸನ್ನೆಯ ಮಾಡಿಬಿಟ್ಟಾ | ಜಾಗ್ರ|

ವೆನ್ನುತ್ತ ಬಹಿರೂಪ ತೊಟ್ಟಾ ||

ಕಣ್ಣು ಸನ್ನೆಯೊಳೆಲ್ಲ | ವನ್ನು ನುಂಗಿದನಲ್ಲ||

ಪುಣ್ಯ ನರಹರಿ ಸುಪ್ತಿ| ಯನ್ನು ತಾಳಲು ತೃಪ್ತಿ ||3||

ಕೂಗು ಕೂಗಲೆ ಕೋಗಿಲೆ | ಹಂಸನ |

ಯೋಗವಾಗಿರುವಾಗಲೆ ||ಪ||

ಮಾಗಿಯ ಕಾಲವು | ಪೋಗಿ ವಸಂತವು ||

ಆಗಮಿಸಿರುವುದು | ಯೋಗವೆ ನಿನಗಿದು ||ಅಪ||

ಗಾನ ಯೋಗಿಯೆ ನಿನ್ನನು | ನಂಬಿದ|

ಜ್ಞಾನ ಯೋಗಿಯೆ ಧನ್ಯನು||

ಮೌನವು ನಡೆಯೊಳು || ಧ್ಯಾನವು

ನುಡಿಯೊಳು ತಾನೆ ತಾನಾಗಲು|

ನೀನಿರು ಕೊನೆಯೊಳು ||1||

ಕಾಗೆ ಸಾಕಿದುದೆಂಬರು| ನಿನ್ನನು |

ಕೂಗದಿದ್ದರೆ ನಂಬರು|| ಕಾಗೆಗೆ

ಬಾರದ | ರಾಗವ ನೀನಿದ|

ಹೇಗೆ ಕಲಿತೆಯನ | ಗಾಗಿದೆ ಸೋಜಿಗ ||2||

ಮಂತ್ರ ಮೂಲದಿ ಪಾಡುವೆ |

ಸರ್ವ ಸ್ವತಂತ್ರ ಬ್ರಹ್ಮನ ಕೂಡುವೆ ||

ಯಂತ್ರದ ದೇಹದಿ | ನಿಂತು ಸುಶ್ರಾವ್ಯದಿ||

ಸಂತತ ನರಹರಿ | ಚಿಂತನವೇ ಸರಿ ||3||

ಕಂಠಪಾಠವ ಮಾಡಿರೋ | ಪ್ರಣವದ ಕೊನೆಯ |

ಘಂಟಾನಾದವ ಕೂಡಿರೋ ||ಪ||

ಜಂಟಿ ವರ್ಣಗಳಳಿದ| ಒಂಟಿಯಾಗಿಹನಾದ ||

ಉಂಟಲ್ಲಿ ಶ್ರೀನೀಲ| ಕಂಠ ದೇವನ ಲೀಲ ||ಅಪ||

ಪವನಯೋಗವ ಸಾಧಿಸಿ| ನಿಶ್ಚಲವಾದ|

ಶಿವನ ಮೂಲವ ಶೋಧಿಸಿ||

ನವಲೀಲೆಯಿಂದಲ್ಲಿ | ಶಿವನಾಡುತಿರುವಲ್ಲಿ||

ಅವಿರಳಾನಂದದಲಿ | ಶಿವಪಾದ ಕೂಡುತಲಿ ||1||

ನಾದ ಬಿಂದುವು ಕೂಡುತ| ಕಳೆಯೆನಿಸುತ್ತ |

ಬೋಧ ವೈಖರಿ ಮೂಡುತ ||

ವೇದವೆಂದೆನಿಸುತ್ತ | ನಾದ ಬ್ರಹ್ಮವೆ ನಿತ್ಯ ||

ಬೋಧ ರೂಪಾಗುತ್ತ || ಲೈದುತಿರ್ಪುದೆ ಸತ್ಯ ||2||

ಧರೆಯ ಹಂಸನು ಹಾರುತ | ಶರಧಿಯ ಪೊಕ್ಕು |

ಹೊರಗೆ ಶಬ್ದವತೋರುತ||

ಭರದಿ ಗಗನಕ್ಕೇರಿ| ಪರಮಾನಂದವ ಬೀರಿ||

ನರಹರೀಂದ್ರನ ಸೇರಿ| ದರಿವು ನಿಮ್ಮೊಳು ತೋರಿ ||3||

ಗಣಿತಕ್ಕೆ ಮೀರಿದ ಶಾಸ್ತ್ರವಿನ್ನಿಲ್ಲಾ |

ಗಣಿತದಿಂದಾದುವು ಶಾಸ್ತ್ರಂಗಳೆಲ್ಲಾ ||ಪ||

ಗಣಿತಕ್ಕೆ ಸಿಕ್ಕಹುದೀ ಜಗವೆಲ್ಲಾ |

ಗಣಿತಕ್ಕೆ ಪರಬ್ರಹ್ಮ ಸಿಕ್ಕಲೆಯಿಲ್ಲಾ ||ಅಪ||

ಸಾಂಖ್ಯ ಯೋಗವೆ ಗಣಿತವೆಲ್ಲಕ್ಕೆ ಮೂಲ |

ಸಂಖ್ಯೆಯಲ್ಲಿದೆ ಲೋಕ ವ್ಯಾಪಾರ ಜಾಲ||

ಸಾಂಖ್ಯದಿಂದಲೆ ತಾರಕಕ್ಕನುಕೂಲ|

ಸಾಂಖ್ಯದಿಂದ ಮನಸ್ಕ ಯೋಗ ವಿಶಾಲ ||1||

ಅಂಕವಲ್ಲದ ಸೊನ್ನೆ ಎಣಿಕೆಗಾಧಾರ|

ಅಂಕೆಯಿಲ್ಲದ ಬ್ರಹ್ಮ ಶೂನ್ಯ ನಿರ್ಧಾರ||

ಶಂಕೆ ಯಾತಕೆ ಸೊನ್ನೆ ನಿರ್ಗುಣ ಪೂರ|

ಸಂಖ್ಯೆ ಒಂದೇ ಸಗುಣ ಈಶ್ವರಾಕಾರ ||2||

ಅಗಣಿತ ಬ್ರಹ್ಮಕ್ಕೆ ಗಣಿತವಿನ್ನೇಕೆ |

ಸಗುಣ ಭ್ರಾಂತಿಯನೇತಿಗಳೆದು ನೋಡಲಿಕೆ ||

ಜಗವೆಲ್ಲ ಮೋಹಿಪ ಸಾಂಖ್ಯದ ತೋರ್ಕೆ|

ಬಗೆದು ಬೋಧಿಪ ನರಹರಿಗಿಲ್ಲ ಬಯಕೆ ||3||

ಹೊರಗೆ ತೋರುತಿಹ ವಿಶ್ವವನೆಲ್ಲವ|

ಶರೀರದಿ ತೋರಿದ ಗುರುದೇವ ||ಪ||

ಧರೆಜಲಶಿಖಿ ಮರುತಾಗಸವೆಲ್ಲವ|

ಪರಿಕಿಸಿ ಪೇಳಿದನನುಭಾವ ||ಅ||ಪ||

ಗಂಧದ ಗುಣಮಯ ಪೃಥ್ವಿಗೆ ಸ್ಥಾನವು |

ಗಂಧವನರಿಯುವ ಘ್ರಾಣವದು||

ಮಂದಿರವಾಗಿದೆ ಹಂಸನ ಯೋಗಕೆ|

ಬಂಧುರವೆಂದನು ತಾನೊಲಿದು ||1||

ರಸಗುಣಮಯ ಜಲತತ್ವಕೆ ಸ್ಥಾನವು|

ರಸವಂಗ್ರಹಿಸುವ ಜಿಹ್ವೆಯಿದು||

ರಸನೆಯೊಳೇಸನ್ಮಂತ್ರದ ಸೃಷ್ಟಿಯು |

ಎಸೆವುದು ಎಂದನು ತಾಂ ನಲಿದು ||2||

ರೂಪ ಗುಣವನು | ದ್ದೀಪಿಸುವಗ್ನಿಗೆ |

ರೂಪವನರಿಯುವ ಚಕ್ಷುವಿದು||

ವ್ಯಾಪಕ ಸ್ಥಾನವು ಮೂರವಸ್ಥೆಗಳ|

ಕಾಪಾಡುತ ತಾನಿರುತಿಹುದು ||3||

ಸ್ಪರ್ಶ ಗುಣದ ಮಾರುತನಿಗೆ ಸ್ಥಾನವು|

ಸ್ಪರ್ಶವ ತಿಳಿವತ್ವಗಿಂದ್ರಿಯವು||

ಹರ್ಷದಿ ಬ್ರಹ್ಮಸ್ಪರ್ಶದಯೋಗದಿ|

ಶೀರ್ಷದಿ ಕುಂಭಕ ನಿಶ್ಚಯವು ||4||

ಶಬ್ದ ಗುಣಾನ್ವಿತ ಗಗನಕೆ ಸ್ಥಾನವು|

ಶಬ್ದವ ಗ್ರಹಿಸುವ ಶ್ರೋತ್ರವಿದು||

ಲಬ್ದವು ಶ್ರವಣವು ಜ್ಞಾನದೊಳಾ ಪ್ರಾ|

ರಬ್ಧವು ನರಹರಿಯಲ್ಲಿರದು ||5||

ಕೋಶ ಪಂಚಕ ಸೇರಿ ಜೀವ| ಸರ್ವ |

ಕ್ಲೇಶಕ್ಕೆ ಬಲಿಯಾಗಿ ಬಳಲುತ್ತಲಿರುವ ||ಪ||

ಸೋಸಿ ತಿಳಿಯಲು ಜೀವಭಾವ | ತಾನೆ|

ನಾಶ ಮಾಡುತ ಬಂತು ಸೋಹಂಭಾವ ||ಅಪ||

ಅನ್ನದಿಂದಾಗಿರ್ಪ ಕಾಯ| ನೋಡೆ|

ಅನ್ನಮಯ ಕೋಶವು ಸ್ಥೂಲವು ಮಾಯ||

ಇನ್ನಿದರ ಮೋಹವಪಾಯ| ಎಂದು|

ಚೆನ್ನಾಗಿ ತಿಳಿದಾಗ ಮುಕ್ತಿಗುಪಾಯ ||1||

ಪ್ರಾಣ ಪಂಚಕ ಕೂಡಿ ನಿಂದು| ದೇಹ|

ತ್ರಾಣವಾಯಿತು ಪ್ರಾಣಮಯ ಕೋಶವೆಂದು||

ಪ್ರಾಣ ಧರ್ಮವು ತನಗಿಲ್ಲ| ಎಂಬ |

ಜ್ಞಾನದಿಂದೀಕೋಶ ಹರಿದು ಹೋಯ್ತಲ್ಲಾ ||2||

ಮನದ ಸಂಕಲ್ಪ ವಿಕಲ್ಪ | ಕೋಶ|

ವೆನಿಸಿ ಮನೋಮಯವಿದು ಜನ್ಮತಲ್ಪ||

ಮನಧರ್ಮ ತನಗಿಲ್ಲವೆಂದು| ಜ್ಞಾನ|

ತನಗಾದ ಕೂಡಲೆ ನಾಶ ತಾನಹುದು ||3||

ವಿಜ್ಞಾನಮಯ ಕೋಶ ಬುದ್ಧಿ | ತನ್ನ |

ಪ್ರಜ್ಞೆಯಿಂ ಬಾಹ್ಯವನರಿದಾಯ್ತು ವೃದ್ಧಿ ||

ಸುಜ್ಞಾನದಿಂದು ಶುದ್ಧಿ| ತನ್ನ|

ಅಜ್ಞಾನವಳಿದಾಗ ತಾನಾಯ್ತು ಸಿದ್ಧಿ ||4||

ಆನಂದಮಯ ಕೋಶದೊಳಗೆ| ನಿದ್ರೆ|

ಯಾನಂದದೊಳು ತಾನೆ ತಾನಾಗಿ ಮುಳುಗೆ |

ಏನೇನು ಬೇಕಿಲ್ಲವಾಗೆ | ಸತ್ಯ|

ಜ್ಞಾನವಾಗಲು ಲೀನ ನರಹರಿಯೊಳಗೆ ||5||

ನಿರ್ಗುಣನಾ ಪರಶಿವನು | ದುರ್ಗುಣಿ ಜೀವಗೆ ಕಾಣಿಸನು ||ಪ||

ದುರ್ಗುಮವಾದಾ| ವರ್ಗತ್ರಯವ |

ನಿಗ್ರಹ ಮಾಡಿದ| ಭರ್ಗನು ತಾನು ||ಅ||

ಕಣ್ಣಿಗೆ ಕಾಣನು ಶಿವನು |

ಕಣ್ಣೊಳು ನಿಂತೇ ನೋಡುತಲಿಹನು ||

ಕಣ್ಣಿಗೆ ಕಂಡುದ ಭ್ರಮಿಸಿದ ಜೀವ|

ಅನ್ಯವಿದೆನ್ನುತಲರಿತನು ಶಿವನು ||1||

ಸಗುಣವು ಶಿವನೊಳಗಿಲ್ಲಾ|

ಸಗುಣವನೆಲ್ಲವನಾಡಿಸಬಲ್ಲಾ ||

ಸಗುಣದ ಹಂಗಿನೊಳಿದ್ದವ ಜೀವಾ|

ಸಗುಣಕೆ ಸಾಕ್ಷಿಯು ಶಿವನು ||2||

ಸಾಕಾರವು ಶಿವಗಿಲ್ಲಾ |

ಸಾಕಾರವ ತಾ ಕೂಡಿರಬಲ್ಲ ||

ಸಾಕಾರವ ಮೋಹಿಸುವನು ಜೀವಾ|

ಸಾಕೆನ್ನುತ ಕಡೆ ಮಾಡಿದ ಶಿವನು ||3||

ವಿಷಯವು ಶಿವನಲ್ಲಿಲ್ಲಾ |

ವಿಷಯಾನಂದವ ಹೊಂದಿರಬಲ್ಲ||

ವಿಷಯದ ವಾಸನೆ ಜೀವನಿಗಾಯ್ತು|

ವಿಷಯಾತೀತನು ನಿರ್ಗುಣ ಶಿವನು ||4||

ಭೂತವ ಭೂತಕೆ ಬೆರಸೀ|

ಭೌತಿಕ ಕಾಯವ ಶಿವನೇ ರಚಿಸಿ||

ಭೌತಿಕ ಕಾಯುವ ನಂಬಿದ ಜೀವಾ |

ಭೂತಾಂತರ್ಗತ ನರಹರಿ ಶಿವನು ||5||

ತೂಗುತ್ತಲಿರುವುದುಯ್ಯಾಲೆ | ನಮ್ಮ |

ನಾಗಭೂಷಣ ಗೌರಿಗಾನಂದ ಲೀಲೆ ||ಪ||

ಯೋಗ ಕುಂಭಕವಿದರ ಕೀಲೆ| ಸರ್ವ|

ಯೋಗ ಭೋಗಕ್ಕೆ ಮೂಲಾಧಾರದಲ್ಲೆ ||ಅಪ||

ತಾನೆ ತಾನಾಗಿ ತೂಗುವುದು| ಧ್ಯಾನ|

ಜ್ಞಾನ ಮೌನಕ್ಕೆ ಸಂಧಾನವಾಗಿಹುದು||

ಸ್ವಾನುಭವಕೆ ಗಮ್ಯವಹುದು| ನೋಡೆ|

ತಾನ ಜಪ ಗಾಯತ್ರಿಯೆಂದೆನ್ನಿಸಿಹುದು ||1||

ಮೂರವಸ್ಥೆಯೊಳೊಂದೆ ರೀತಿ| ನಿಜ|

ದಾರೋಹಣಾವರೋಹಣವುಳ್ಳ ನೀತಿ||

ಮೂರೇಳು ಸಾವಿರದ ಮೇಲೆ| ಆರು|

ನೂರು ಸಲ ಪ್ರತಿನಿತ್ಯ ತೂಗಿತುಯ್ಯಾಲೆ ||2||

ನಿದ್ದೆ ಬಂದರು ನಿಲ್ಲದಲ್ಲಾ | ಜಾಗ್ರ|

ವಿದ್ದಾಗ ನಿಲ್ಲದೆ ತೂಗುತಿತ್ತಲ್ಲಾ||

ಬಿದ್ದ ಸ್ವಪ್ನದ ಲಕ್ಷ್ಯವಿಲ್ಲಾ| ಯೋಗ|

ಸಿದ್ಧ ನರಹರಿ ಪರಮಹಂಸನೆ ಬಲ್ಲಾ ||3||

ನಾಗರಹಾವನು ನೋಡಮ್ಮಾ | ನೀ|

ನೀಗಲೆ ಪೂಜೆಯ ಮಾಡಮ್ಮಾ ||ಪ||

ಭೋಗಿಯು ತಾನಾಗಿಹುದಮ್ಮಾ| ಶಿವ|

ಯೋಗಿಗೆ ವಶವಾಗಿಹುದಮ್ಮಾ ||ಅಪ||

ಪೃಥ್ವಿಯ ತಾನೆ ಹೊತ್ತಿಹುದು| ಪರ|

ಮಾರ್ಥವ ಸಾರುತ ಸುತ್ತುವುದು|

ಸತ್ವರಜಸ್ತಮ ಕೂಡಿಹುದು| ತನು|

ಹುತ್ತದಿ ವಾಸವ ಮಾಡುವುದು ||1||

ಸರಿಯಲು ಒಳಗಡೆ ಪೂರಕವು| ತಾಂ|

ಬರಲದು ಹೊರಗಡೆ ರೇಚಕವು||

ಚರಿಸದೆ ನಿಂತುದೆ ಕುಂಭಕವು| ಈ |

ಪರಿ ಯೋಗದೊಳಿರೆ ಸಾರ್ಥಕವು ||2||

ಕಾಲಿಲ್ಲದೆ ಹರಿದಾಡುವುದು| ಜನ|

ಜಾಲವನೆಲ್ಲವ ಕೂಡಿಹುದು||

ಕಾಲವನೆಣಿಸುತ ಸಾಗುವುದು| ಮಂ|

ತ್ರಾಲಯ ನರಹರಿಗಾಗಿಹುದು ||3||

ನಿದ್ರೆಯೊಳೆಚ್ಚರವಾಗಿಹುದು | ಪರ |

ಮುದ್ರೆಯ ನಿಶ್ಚಯ ಮಾಡಿಹುದು ||

ಬುದ್ಧಿಯ ನುಂಗಿಯೆ ಕೂಡಿಹುದು |

ತನುವಿದ್ದರು ಇಲ್ಲದೊಲಾಡುವುದು ||4||

ಪರಮಾನಂದದೊಳಾಡುವುದು | ಸಂ |

ಚರಿಸುತ ಸರ್ವವ ಕೂಡುವುದು ||

ಗುರುವಿನ ಪಾದವ ಸೇರುವುದು | ಅ |

ಕ್ಷರ ರೂಪದೊಳಿದು ತೋರುವುದು ||5||

ಪವನಾ ಹಾರವ ಮಾಡುವುದು | ಪರ |

ಶಿವನಾಭರಣವೆ ತಾನಹುದು ||

ಭುವಿಯೆಲ್ಲವ ತಾ ಹೊತ್ತಿಹುದು | ಶಾಂ |

ಭವಜ್ಞಾನವ ತಾನೀಯುವುದು ||6||

ಅಂಬರ ತುಂಬಿಯೆ ನಿಂದಿಹುದು | ಜಗ |

ವೆಂಬುದ ನಂಬದೆ ಬಂದಿಹುದು ||

ಶಂಭುವಿನೊಡವೆಯಿದಾಗಿಹುದು | ವಿ |

ಜೃಂಭಿಸಿ ನರಹರಿಯಾಗಿಹುದು ||7||

ನಿದ್ರೆಯ ಮಾಡಿದ ಶಿವಯೋಗಿ| ಪರ|

ಮುದ್ರೆಯ ಕೂಡುತ ಸುಖಿಯಾಗಿ ||ಪ||

ಕ್ಷುದ್ರ ವಿಷಯ ಸುಖಗಳ ನೀಗಿ|

ಬಲು| ಭದ್ರ ಸಮಾಧಿಯು ತನಗಾಗಿ ||ಅಪ||

ತನುಮನ ಧನಗಳು ತನಗಿಲ್ಲ| ಗುಣ|

ಗಣ ಕರಣೇಂದ್ರಿಯ ಸೋಂಕಿಲ್ಲಾ||

ತನಗೆ ಕಾಣಿಸಲು ಜಗವಿಲ್ಲಾ| ನಿ|

ರ್ಗುಣ ವೈರಾಗ್ಯದೊಳಿರಬಲ್ಲಾ ||1||

ತಾನೇ ತಾನಾಗಿರುತಿಹನು | ಬೇ|

ರೇನೊಂದಿಲ್ಲದೆ ಮೆರೆಯುವನು||

ಜ್ಞಾನಾನಂದವ ಬೆರೆದಿಹನು| ತಾ|

ಮೌನದಿ ಬ್ರಹ್ಮವ ಸೇರಿಹನು ||2||

ರೇಚಕ ಪೂರಕ ಕುಂಭಕವು| ಯೋ|

ಗಾಚರಣೆಗಳು ಸಮರ್ಪಕವು||

ಭೂಚರಿ ಮುದ್ರಾ ಸೂಚಕವು| ಸಚ|

ರಾಚರ ನರಹರಿ ವ್ಯಾಪಕವು ||3||

ನನ್ನದು ಏನೂ ತಪ್ಪಿಲ್ಲಾ| ಶಿವ|

ನಿನ್ನದೆ ನೋಡಿ ತಪ್ಪೆಲ್ಲಾ ||ಪ||

ನನ್ನದು ಎಂಬುದು ಏನಿಲ್ಲಾ | ಶಿವ|

ನಿನ್ನದೆ ಕಾಣುವ ಜಗವೆಲ್ಲಾ ||ಅಪ||

ನೀ ನಡೆಸಿದ ಪರಿ ನಡೆಯುವೆನು | ಶಿವ|

ನೀ ನುಡಿಸಿದವೊಲು ನುಡಿಯುವೆನು ||

ಏನೇನರಿಯದ ಬಾಲಕನು | ಶಿವ|

ನೀನಾಡಿಸಿದಂತಾಡುವೆನು ||1||

ತನುಮನ ಧನಗಳು ನಿನಗುಂಟು |ಯ|

ನ್ನನು ಸೇರಿರುವುದು ಬರಿಗಂಟು||

ಯನಗೀ ಕರ್ಮವು ಬಿಡದುಂಟು| ಅನ|

ಘನೆ ಬಿಡಿಸೀಮಾಯದನಂಟು ||2||

ಎಲ್ಲವು ನಿನ್ನದೆಯೆನಲಾಗಿ| ಯನಗಿಲ್ಲವು

ಜನ್ಮವು ನಿಜವಾಗಿ||

ಎಲ್ಲಕೆ ಪ್ರೇರಕ ನೀನಾಗಿ| ನೀ|

ನಲ್ಲವೆ ನರಹರಿ ಶಿವಯೋಗಿ ||3||

ಅರಿಯದ ಕಂದನ ತಪ್ಪನ್ನು | ತಾಯ್‌ |

ಮರೆದೇ ಮನ್ನಿಸುತಿಹಳಿನ್ನು ||

ಪರಮ ದಯಾಳುವೆ ಯನ್ನನ್ನು | ನೀ |

ಮರೆತೇಬಿಟ್ಟುದು ಸರಿಯೇನು ||4||

ಆಳು ತಪ್ಪಿದರೆ ಯಜಮಾನ | ಸರಿ |

ಪೇಳುತ ತಿದ್ದುವ ಪರಿ ದೀನ ||

ಪಾಲನೆ ಕರುಣಿಸು ಸುಜ್ಞಾನ | ಗುಣ |

ಶೀಲನೆ ನರಹರಿ ಸುವಿಧಾನ ||5||

ಪರ ವಸ್ತುವೆಲ್ಲಿದೆ ನೋಡಿರಿ|

ನಿಮ್ಮ ಶರೀರದೊಳಡಗಿದೆ ಕೂಡಿರೀ||

ಪರ ನಾದದೊಳು ಹುಡುಕಾಡೀರೀ| ಗುರು|

ಕರುಣಾಮೃತವ ಬೇಡಿಕೊಳ್ಳಿರಿ ||ಪ||

ಗುರುವಿತ್ತ ಬೋಧಾ| ಕರುಣ ಪ್ರಸಾದ|

ಪರಮಾರ್ಥ ವಿದ್ಯಾಸುಧಾ| ಭವ|

ಹರಮಾದ ಪರಮೌಷಧ ||ಅಪ||

ಓಂಕಾರದಲ್ಲಿದೆ ನೋಡೀರೀ| ನಿರ|

ಹಂಕಾರ ಭಾವವ ಕೂಡೀರೀ|

ಝೇಂಕಾರವನು ಕೊನೆ ಮಾಡಿರಿ| ಸಾ|

ಲಂಕಾರವರ್ಣವೀಡಾಡೀರೀ||

ಅಂಕುರ ತಾನಾಗಿದೆ| ಶಂಕೆಯಿಲ್ಲವಾಗಿದೆ||

ಅಂಕೆಯಿಲ್ಲದಂತಾಗಿದೆ| ನವ|

ಶಂಖ ಧ್ವನಿಯ ತಾ ಮೀರಿದೆ ||1||

ಮಹಿಯಲ್ಲಿ ಓಡಾಡಿಕೊಂಡಿದೆ| ದಿನ|

ವಹಿಸು ಪ್ರಸಾದವನುಂಡಿದೆ||

ಗುಹೆಯಲ್ಲಿ ತಪ ಮಾಡಿ ನಿಂದಿದೆ| ಸಂ|

ಗ್ರಹಿಸುತ್ತ ಮಂತ್ರಕೆ ಸಂದಿದೆ||

ಬಹಿರಂಗವಾಗುವ| ಮಹಿಮಾ ಸ್ವರೂಪವ |

ವಹಿಸುತ್ತಲನುಭಾವವ | ಪಡೆ|

ದಿಹುದು ಸೋಹಂಭಾವವ ||2||

ನಡೆಯುತ್ತ ಪೃಥ್ವಿಯ ಸೇರಿತು| ಬಲು|

ನುಡಿಯುತ್ತ ಜಲದೊಳು ಜಾರಿತು||

ದುಡಿಯುತ್ತಲಗ್ನಿಯ ಸಾರಿತು| ತಡೆ|

ಹಿಡಿಯುತ್ತ ಮರುತನ ಮೀರಿತು||

ಗುಡುಗುತ್ತಲಾಗಸ | ದೆಡೆಯಲ್ಲಿ ಏರಿತು|

ಜಡಭೂತ ಗುಣ ಹೋಯಿತು| ಸುಖ|

ಪಡೆದು ಗುರು ನರಹರಿಯಾಯಿತು ||3||

ಬರಬಾರದೆಂದೆಂದೀಗೀ ವೂರಿಗೆ | ಇಲ್ಲಿ |

ಪರಿಣಾಮವೇಯಿಲ್ಲ ಯಾರ‍್ಯಾರಿಗೆ ||ಪ||

ನೆರಳಿಲ್ಲ ನೀರಿಲ್ಲದೀ ಊರಿಗೆ | ಎಲ್ಲಿ|

ತಿರಿದು ತಿಂದರು ತೀರದೆಲ್ಲರಿಗೆ ||ಅಪ||

ಬುದ್ಧಿವಂತರು ಇಲ್ಲಿ ಇರಲಾರರು| ಬ್ರಹ್ಮ|

ವಿದ್ಯೆ ಬಲ್ಲವರಿಲ್ಲಿ ಬರಲಾರರು ||

ಬದ್ಧಾತ್ಮರೀವೂರೆ ಸುಖವೆಂಬರು| ಪರಿ|

ಶುದ್ಧಾತ್ಮರೆಂದೆಂದಿಗಿದ ನಂಬರು ||1||

ರೋಗರುಜಿನವು ದುಃಖ ದಾರಿದ್ರ್ಯವು | ಕೆಟ್ಟ|

ರಾಗದ್ವೇಷವು ಚಿಂತೆ ತುಂಬಿರ್ಪವು||

ಭೋಗ ಭಾಗ್ಯಗಳೆಲ್ಲ ಕನಸಾದವು| ಪಾಪ|

ಭಾಗಿಗಳಿಗೆ ಸತ್ಯವೆನಿಸಿರ್ಪವು ||2||

ಸಾವುನೋವಿಗೆ ತವರು ಮನೆಯಾಗಿದೆ| ನಿತ್ಯ |

ಜೀವ ಸಂದೇಹಕ್ಕೆ ನೆಲೆಯಾಗಿದೆ||

ದೇವರೆನ್ನುವ ಸುದ್ದಿ ಸುಳ್ಳಾಗಿದೆ| ಸತ್ಯ|

ಭಾವವೆನ್ನುವುದಿಲ್ಲಿ ಪೊಳ್ಳಾಗಿದೆ ||3||

ಕಳ್ಳಕಾಕರು ಇಲ್ಲಿ ತುಂಬಿರ್ಪರು| ಪಕ್ಕ|

ಸುಳ್ಳು ಠಕ್ಕುಗಳನ್ನೆ ನಂಬಿರ್ಪರು||

ಎಲ್ಲಿ ಹೋದರು ಬೆನ್ನು ಹತ್ತಿರ್ಪರು| ಮೋಸ|

ದಲ್ಲಿ ಕೊಂಡೊಯ್ದು ಕೊಲ್ಲುತ್ತಿರ್ಪರು ||4||

ಅನ್ಯಾಯ ಪುರಿಯೆಂಬರೀ ಊರಿಗೆ| ಎಲ್ಲ|

ರನ್ನು ನೂಕುವರಿಲ್ಲಿ ಯಮನೂರಿಗೆ||

ಮಾನ್ಯ ನರಹರಿ ತನ್ನ ಭಕ್ತರಿಗೆ | ದಾರಿ|

ಯನ್ನು ತೋರಿಸಿಬಿಟ್ಟ ಶಿವನೂರಿಗೆ ||5||

ಮಂಗಳಾರತಿ ಮಾಡುವೆ| ಗುರುಪಾದ

ಪದು| ಮಂಗಳನೇ ಪಾಡುವೆ ||ಪ||

ಮಂಗಳ ಮಂತ್ರ ಕುಸು| ಮಂಗಳಂಜಲಿಯೀವೆ||

ಮಂಗಳ ನಿಗಮಾಗ| ಮಂಗಳಂ ಪಠಿಸುವೆ ||ಅಪ||

ದೇವದುಂದುಭಿ ನಾದವ | ಕೇಳೆಂದೆನ್ನ|

ಜೀವ ಭಾವವ ನೀಗುವ ||

ದೇವ ಶ್ರೀಗುರುವೀವ| ಕೇವಲಾನಂದವ||

ಸಾವಧಾನದಿ ಪಡೆದು| ಭಾವ ನಿರ್ಮಲಗೈದು ||1||

ಮೂರು ಮೂರ್ತಿಗಳೈಕ್ಯವ|

ಪ್ರಣವದಿ ತೋರಿ| ತಾರಕಾಗ್ರದ ಸೌಖ್ಯವಾ||

ಧಾರಾಕಾರದಿ ಸುರಿವ| ಸಾರ ಬೋಧಾಮೃತವ||

ಹೀರಿಸುಖಿಸೆನ್ನುವ| ಧೀರ ಶ್ರೀಗುರುವಿಗೆ ||2||

ಮೂಲ ಮಂತ್ರವ ಕೀಲಿಸಿ|

ನಿರ್ಗುಣ ಬ್ರಹ್ಮ| ಲೀಲೆಯೆಲ್ಲವನಾಲಿಸಿ||

ಕಾಲಕರ್ಮವನೀಗಿ| ಏಳುಚಕ್ರದಿ ಸಾಗಿ||

ಲೋಲ ನರಹರಿ ಯೋಗಿ | ಪೇಳಿದ್ದೆ ನಿಜವಾಗಿ ||3||

ಏಳು ಚಕ್ರದಿ ಮೂಲ ಹಂಸನು|

ಲೀಲೆಗೈಯುವ ವಿಧವನು ||ಪ||

ಕೇಳಿ ತಿಳಿದವ ಧನ್ಯನಪ್ಪನು |

ತಾಳುವನು ಪರ ಸುಖವನು ||ಅಪ||

ರೇಚಕವು ಪೂರಕವು ಕುಂಭಕ|

ವಾಚರಿಸುತಾ ಹಂಸನು||

ಆಚರಾಚರ ಜಗವ ಪೊರೆವುದ|

ಸೂಚಿಸಿದ ಗುರುದೇವನು ||1||

ಧಾರಿಣಿಯೊಳಾಧಾರಕಮಲವಿ|

ಹಾರಿ ಗಣಪತಿದೇವನು||

ಸೇರಿದಳ ನಾಲ್ಕರೊಳು ನಡೆಸುವ|

ನಾರು ನೂರರ ಜಪವನು ||2||

ವಾರಿಸ್ವಾಧಿಷ್ಠಾನ ಕಮಲದಿ|

ವಾರಿಜಾಸನ ಬ್ರಹ್ಮನು||

ಆರು ದಳಗಳ ಸೇರಿ ನಡೆಸುವ|

ನಾರು ಸಾವಿರ ಜಪವನು ||3||

ತೋರುವಗ್ನಿಯ ತತ್ವದೊಳು ಮಣಿ|

ಪೂರಕದಿ ಮಹವಿಷ್ಣವು||

ಸೇರಿ ದಶದಳ ಮಧ್ಯೆ ನಡೆಸುವ|

ನಾರು ಸಾವಿರ ಜಪವನು ||4||

ಮಾರುತನ ತತ್ವದೊಳನಾಹತ|

ವಾರಿಜದೊಳಾರುದ್ರನು||

ಸೇರಿದ್ವಾದಶ ದಳದಿ ನಡೆಸುವ|

ನಾರು ಸಾವಿರ ಜಪವನು ||5||

ಗಗನ ತತ್ವ ವಿಶುದ್ಧ ಕಮಲವ|

ಸೊಗಸಿದಾ ಜೀವಾತ್ಮನು||

ಬಿಗಿದು ಷೋಡಶ ದಳದಿ ನಡೆಸುವ|

ನೊಗೆದು ಸಾಸಿರ ಜಪವನು ||6||

ಬೆಳಗುವಾ ಜ್ಞಾನಚಕ್ರ ಕಮಲದಿ|

ನಲಿದು ಶ್ರೀಗುರು ದೇವನು ||

ತಿಳಿದು ಎರಡೇ ದಳದಿ ನಡೆಸುವ|

ನೊಲಿದು ಸಾಸಿರ ಜಪವನು ||7||

ವರಸಹಸ್ರಾರಾರವಿಂದದಿ |

ಪರಮ ಗುರು ಶ್ರೀ ನರಹರಿ||

ಬೆರೆದು ಸಾಸಿರ ದಳದಿ ನಡೆಸುವ|

ನರಿದು ಸಾಸಿರ ಜಪವನು ||8||

ಅಷ್ಟಾಂಗ ಯೋಗ| ಜ್ಞಾನದ ಮಾರ್ಗ|

ಶ್ರೇಷ್ಠ ತಿಳಿಯೀಗ ||ಪ||

ಕಷ್ಟವಿದರೊಳಗಿಲ್ಲ| ನಿಷ್ಠೆ ಬಲಿದಿರಬಲ್ಲ|

ಶಿಷ್ಟ ಜನಕೆಲ್ಲ ಸಂ| ತುಷ್ಟಿಯೀಯಲು ಬಲ್ಲ ||ಅ||

ಯಮವೆಂಬ ಯೋಗ| ಬಾಹ್ಯೇಂದ್ರಿಯವ | ರಮಿಸದಿದ್ದಾಗ ||

ಭ್ರಮೆಯೆಲ್ಲ ಕೈಬಿಟ್ಟು| ಕ್ರಮ ಶುದ್ಧಿಯಳವಟ್ಟು||

ತಮವಳಿದು ಶ್ರವಣದಿ| ಯಮಬಾಧೆಯಳಿಯಲು ||1||

ನಿಯಮದ ಯೋಗ| ಅಂತಃಕರಣ | ನಿಯಮವಾದಾಗ||

ನಯನೀತಿ ಬಲವಾಗಿ| ಭಯಭ್ರಾಂತಿಗಳ

ನೀಗಿ| ಕ್ರಿಯೆಯೆಲ್ಲ ಮನನದಿ| ಲಯವೆಂಬುದರಿವಾಗಿ ||2||

ಅಸನಯೋಗ| ಮನದೊಳು ವಿಷಯ| ದಾಸೆಯಳಿದಾಗ|

ವಾಸನೆಯಳಿದುಪ| ದೇಶದಿ ಮನ ನಿಂತು||

ಸೂಸದಂತಿರೆ ನಿಧಿ| ಧ್ಯಾಸವಾಗಿರಲಿಂತು ||3||

ಯೋಗ ಪ್ರಧಾನ| ಪ್ರಾಣಾಯಾಮ| ಭೋಗ ಸಂಧಾನ||

ಯೋಗ ಕುಂಭಕವಾಗಿ | ಸಾಗಿ ಮಂತ್ರವ ತಾಗಿ||

ಬೇಗ ಮನ ಲಯವಾಗಿ | ಭೋಗಿ ಭೋರ್ಗರೆಯಲು ||4||

ನಡೆಯನಾಹಾರ | ಮಾಡುತ್ತಲಾ | ನುಡಿಯಾಯ್ತು ಪೂರ ||

ಒಡಲಿನೊಳಗಿಹ ಸರ್ವ | ತೊಡಕುಗಳೆಲ್ಲವ |

ನುಡಿಯಾಂತ ಕಾರಣ | ನುಡಿ ಪ್ರತ್ಯಾಹಾರವು ||5||

ಯೋಗ ಮಂತ್ರದೊಳು | ಪ್ರತ್ಯಾಹಾರ| ವಾಗಿ ನಡೆಯಿರಲು||

ಆಗಾಗಲಾಹಾರ | ವಾಗಿ ನಡೆಯಾಧಾರ||

ಯೋಗ ನುಡಿಬ್ರಹ್ಮದ| ಅಗರವಾಗಲು ||6||

ಧ್ಯಾನ ಸಂಯೋಗ| ನಾದಬ್ರಹ್ಮ| ದಾನಂದವೀಗ||

ತಾನೆ ತಾನಾದಂಥ | ಜ್ಞಾನವಾರ್ಜಿಸಿ ನಿಂತ||

ಮೌನ ನಡೆಯಾಗಲು| ಧ್ಯಾನ ನುಡಿಯಾಗಲು ||7||

ಧಾರಣ ಯೋಗ| ಬ್ರಹ್ಮಾತ್ಮೈಕ್ಯ | ಕಾರಣವೀಗ||

ಭೋರೆಂಬ ಪರನಾದ | ಸೇರಿ ಬಹುವರ್ಣಗಳ ||

ಧಾರಣಗೈದು ವಿ| ಸ್ತಾರವೆಂದೆನಿಸಲು ||8||

ನುಡಿ ನಿಲ್ಲಲಾಗಿ | ನಿಶ್ಚಲನಾಗಿ | ನಡೆಯಿಲ್ಲವಾಗಿ||

ನಡೆನುಡಿ ಮಧ್ಯದಿ| ಗುಡುಗುವ ಬ್ರಹ್ಮದ ||

ಒಡಲರ್ಧ ಮಾತೃಕೆ | ಕಡುಸು ಸಮಾಧಿಯು ||9||

ಯೋಗ ಸೂತ್ರಗಳು| ಎಂಟನು ಕೂಡಿ| ದಾಗ ಮಂತ್ರಗಳು||

ಆಗುತ್ತಲಿಹಜ್ಞಾನ| ಯೋಗಾನುಸಂಧಾನ ||

ಶ್ರೀಗುರು ನರಹರಿ | ಯೋಗಿ ಬೋಧಾಸಿರಿ ||10||

ಜ್ಞಾನಯೋಗದಲಿ | ಅಷ್ಟಾಂಗವ ತಾನೆ ತಿಳಿಯುತಲಿ ||

ಆನಂದ ತಾನಾಗಿ | ಏನಿಲ್ಲದಂತಾಗಿ ||

ಜ್ಞಾನಮೂರುತಿ ಬೆಳಗಿ | ಶ್ರೀನರಹರಿ ಯೋಗಿ ||11||

ಪಂಚ ಮುದ್ರೆಯ ತಿಳಿಯೋ| ಶ್ರೀಗುರುವಿಂದ|

ಸಂಚಿತಂಗಳ ಕಳೆಯೊ ||ಪ||

ಪಂಚೇಂದ್ರಿಯಗಳೆಂಬ | ಪಂಚ ಸ್ಥಾನಗಳಲ್ಲಿ ||

ಪಂಚ ಮುದ್ರೆಗಳುಂಟು | ಸಂಚು ಗುರುವಿನೊಳುಂಟು ||ಅಪ||

ಪೃಥ್ವಿ ತತ್ವದಿ ನಡೆವ| ಸದ್ರೂಪದ| ವಸ್ತುವೆಂದೆನಿಸಿರುವ ||

ಪ್ರತ್ಯಕ್ಷವಾಗಿರ್ಪ | ಪ್ರತ್ಯಗಾತ್ಮನೆ ಹಂಸ ||

ಸತ್ಯವೆಂಬರ್ಥವೆ| ಮತ್ತೆ ಭೂಚರಿ ಮುದ್ರೆ ||1||

ಜಲ ತತ್ವದೊಳು ನುಡಿವ| ಚಿದ್ರೂಪದ|

ಪೊಳೆವ ಮಂತ್ರದಿ ನಲಿವ ||

ಸುಲಲಿತ ಪ್ರಣವವ| ತಿಳಿದು ಪರಮಾರ್ಥವ||

ಕಳೆಯಲಜ್ಞಾನವು| ಸುಲಭ ಶಾಂಭವಿ ಮುದ್ರೆ ||2||

ಅಗ್ನಿ ತತ್ವದೊಳಿರುವ| ಆನಂದದ ಪ್ರಜ್ಞಾ ರೂಪದಿ ಮೆರೆವಾ||

ಯಜ್ಞ ಮುಖದಿಂದ ಸ| ರ್ವಜ್ಞನ ಪೂಜಿಸಿ||

ಸುಜ್ಞಾನ ದರ್ಶನ| ಮಗ್ನ ಷಣ್ಮುಖಿಮುದ್ರೆ ||3||

ನಡೆನುಡಿಗಳ ಮಧ್ಯದಿ| ಮಾರುತ ತತ್ವ|

ದೊಡಲಾದ ನಿತ್ಯತ್ವದಿ||

ಘುಡುಘುಡಿಸುತಲಿರ್ಪ| ಬೆಡಗಿನ ಬ್ರಹ್ಮವ||

ಎಡೆಬಿಡದೊಲು ಕೂಡಿ| ದೊಡೆ ಮಧ್ಯಲಕ್ಷವು ||4||

ಆಕಾಶ ತತ್ವದೊಳಗೆ| ಪರಿಪೂರ್ಣತ್ವ|

ದೇಕಾಂತ ಶ್ರವಣಬೆಳಗೆ ||

ಏಕಾಕ್ಷರಾಂತ್ಯದಿ| ಸಾಕಾರವಳಿದ| ನಿರಾಕಾರ

ನರಹರಿ ಖೇಚರಿ ಮುದ್ರೆಯು ||5||

ಜ್ಞಾನಮುದ್ರೆಗಳೈದನು | ತಿಳಿಯುತ ಸಮ್ಯ|

ಜ್ಞಾನ ಸಿದ್ಧಿಸಿದಾತನು ||

ಮೌನಿಯಂತರ್ಲಕ್ಷ್ಯ | ಸ್ವಾನುಭವಾತ್ಮ ಸಂ|

ಧಾನದಿ ನರಹರಿ ಗುರುವಾಗಿ ಸುಖಿಪನು ||6||

ನೋಡಿರಿ ಪರಶಿವನಾ | ಭಕ್ತರು | ಕೂಡಿ ಸದಾಶಿವನಾ ||ಪ||

ಮಾಡಿರಿ ಧ್ಯಾನವ | ಕೂಡಿರಿ ಮೌನವ ||

ಬೇಡಿರಿ ಜ್ಞಾನವ | ಕೂಡಲೆ ಕಾಣುವ ||ಅ|ಪ||

ಧರೆ ಸದ್ಯೋಜಾತಾ | ಮುಖದೊಳು | ಧರಿಸಿ ಸರ್ವಭೂತ||

ನರ ಪಶು ಪಕ್ಷಿಯ | ತರುಲತೆಗುಲ್ಮವ ||

ನೆರೆ ಸೃಷ್ಟಿಸಿ ವಿ | ಸ್ತರಿಸಿದ ಬ್ರಹ್ಮನು ||1||

ಜಲವೆ ವಾಮದೇವಾ | ಮುಖದೊಳು | ನಿಲುತ ವಿಷ್ಣುದೇವಾ ||

ಸುಲಲಿತ ರಕ್ಷಣೆ | ಯೊಳು ಜೀವಿಗಳನು||

ಇಳೆಯೊಳು ತರುಲತೆ | ಗಳ ಬೆಳೆಯಿಸುವನು ||2||

ಅಗ್ನಿಯ ಘೋರ ಮುಖಾ | ಸರ್ವರ | ಪ್ರಜ್ಞಾರೂಪ ಸುಖಾ ||

ಯಜ್ಞಫಲವ ಸ | ರ್ವಜ್ಞ ರುದ್ರನಿಗೆ ||

ಪ್ರಜ್ಞೆಯೊಳರ್ಪಿಸು | ವಾಜ್ಞೆ ಸುಪ್ತಿಲಯ ||3||

ವಾಯುವೆ ತತ್ಪುರುಷಾ | ಮುಖದೊಳು | ಕಾಯುವ ಪರಮೇಶಾ ||

ಮಾಯಾಧೀಶ್ವರ | ಕಾಯವ ಪಿಡಿದಿಹ ||

ದಾಯುವ ತಿಳಿದವ | ಸಾಯದೆ ಉಳಿಯುವ ||4||

ಗಗನವೆ ಈಶಾನ | ಮುಖವಿದು | ಜಗವೆಲ್ಲಕೆ ಸ್ಥಾನ ||

ಅಗಣಿತ ಜಗಗಳ | ಸಗುಣ ಸದಾಶಿವ |

ಮಿಗೆ ತುಂಬಿರುವುದ| ಬಗೆದನು ನರಹರಿ ||5||

ಪಂಚಭೂತಗಳೆಂಬ | ಮುಖದಿ ಪ್ರ | ಪಂಚ ರಚಿಸಿ ಸಾಂಬ ||

ಪಂಚಬ್ರಹ್ಮರಿಗೆ | ಹಂಚಿದ ಕರ್ಮದಾ |

ಸಂಚಿತವೆಲ್ಲವ | ವಂಚಿಸುತಿರುವಾ ||6||

ಆರನೆ ನೆಲೆಯಲ್ಲಿ | ಪರಶಿವ | ಸೇರಿದ ತಿಳಿಯಿಲ್ಲಿ ||

ಮೂರು ಗುಣಂಗಳ | ಮೀರಿದ ಮಂಗಳ |

ಮೂರುತಿ ನರಹರಿ | ತೋರಿದ ದಾರಿ ||7||

ವೇದಾ ಸುನಾದ ಸುಬೋಧಾ ಪ್ರಸಾದಾತ್ಮ |

ನಾದಾತ ಗುರುನಾಥ ನೋಡಿರಮ್ಮಾ ||ಪ||

ಆಧಾರವೇ ಮೊದ| ಲಾದೇಳು ಚಕ್ರವ|

ಭೇದಿಸಿ ಬರುತಿದೆ ನಾದಬ್ರಹ್ಮ ||ಅಪ||

ಆಧಾರದಿಂದ ಸ್ವಾಧಿಷ್ಠಾನ ಕಮಲಕ್ಕೆ |

ಆ ದಿವ್ಯ ಪರನಾದವೇರಿ ತಮ್ಮ ||

ಹಾದಿಯೊಳು ಮಣಿ ಪೂರಕವ ಪೊಕ್ಕನಾಹತ|

ಕೈದಲ್ಕೆ ಪಶ್ಯಂತಿ ತೋರಿ ತಮ್ಮ ||1||

ಬಂದಾವಿ ಶುದ್ಧಿಯ ಮುಂದೆಯಾಜ್ಞಾ ಚಕ್ರ||

ಹೊಂದಿ ಮಧ್ಯಮನಾದ ಬೆಳಗಿ ತಮ್ಮ ||

ಕುಂದಿಲ್ಲದಾನಂದದಿಂದಾ| ಸಹಸ್ರಾರ|

ಮುಂದೇ ವೈಖರಿನಾದ ಮೊಳಗಿತಮ್ಮ ||2||

ಪರಮಾರ್ಥವೆನಿಸಿದ್ದ | ಪರನಾದವೇ ಶುದ್ಧ |

ಪರಿಪೂರ್ಣ ಶೂನ್ಯವ ಬೆರೆಯಿತಮ್ಮ ||

ಧರೆಯಲ್ಲಿ ಗುಡುಗುತ್ತ ಬರುವರ್ಧಮಾತ್ರೆಯೆ |

ನರಹರಿ ಗುರುವಾಗಿ ಮೆರೆಯಿತಮ್ಮ ||3||

ಮೂರು ಗುಣವಂ ಕಳೆದು| ಸಾರಮಂತ್ರವ ತಿಳಿದು|

ಚಾರುಮುಕ್ತಿಯ ತಾಳು ಮನವೇ ||ಪ||

ತಾರಕಾಗ್ರದೊಳು ಸುವಿ| ಚಾರ ಮಾಡುತ ಮುಕ್ತ|

ದ್ವಾರದೊಳು ನೀನಿಲ್ಲು ಮನವೇ ||ಅಪ||

ಎಲ್ಲ ವರ್ಣಂಗಳೊಳು | ನಿಲ್ಲದೇ ಬೆಳಗುತಿರ|

ಬಲ್ಲ ಬ್ರಹ್ಮವ ಕಾಣು ಮನವೇ ||

ಸೊಲ್ಲಿನ ಕೊನೆಯಲ್ಲಿ | ಕಳ್ಳ ಗಂಡಿಯ ತೂರಿ|

ನಿಲ್ಲುತ್ತ ಕೂಗುವನು ಮನವೇ ||1||

ಧರೆಯಲ್ಲಿ ತಾನೆ ಸಂಚರಿಸುತ್ತಲಿರುವಂಥ |

ಪರಮಹಂಸನ ಸೇರು ಮನವೇ||

ಮರುತ ಯೋಗದಿ ನಿಂತು| ಮೊರೆಯುತ್ತ ಬರುವಂಥ|

ಪರಮಾತ್ಮನೊಳಗಾಡು ಮನವೇ ||2||

ಶರಧಿಯೊಳು ನಿಬ್ಬರದೊಳಬ್ಬರಿಸಿ ಬರುತಿರ್ಪ |

ಹರಿಪಾದದೊಳು ನಿಲ್ಲು ಮನವೇ||

ಪರತರಾಪೋ ಜ್ಯೋತಿ| ಹರನೆನ್ನುವನುಭೂತಿ|

ನರಹರಿಯೊಳರಿಯೀ ಗಮನವೇ ||3||

ತೊಗಲುಗೊಂಬೆ ಮಾಡಿ ಕೂಡಿದಾ| ನಮ್ಮ

ಶಿವನು | ಜಗದೊಳೆಲ್ಲ ಆಟವಾಡಿದಾ ||ಪ||

ಸೊಗಸಿನಿಂದ ಕೂಡಿಸಿದನು|

ತಗುಲಿ ತಾನೆಯಾಡಿಸಿದನು||

ಹಗಲು ರಾತ್ರಿ ಕುಣಿಸಿ ದಣಿಸಿ|

ಮಿಗಿಲಿನಾಸೆಯಿಂದ ಮಣಿಸಿ ||ಅಪ||

ಎಲುಬಿನಿಂದ ಮಾಡಿ ಪಂಜರ| ನರಗಳೆಂಬ|

ಬಲೆಯ ಕಟ್ಟಿ ಬಿಗಿಯೆ ಬಂಧುರ||

ಮಲವು ಮೂತ್ರ ಮಾಂಸರಕ್ತ |

ಹೊಲಸುಕೀವು ಮಜ್ಜೆಯುಕ್ತ ||

ಒಳಗೆ ರಕ್ತ ತುಂಬಿ ಮೇಲೆ|

ಹೊಳೆವ ಚರ್ಮ ಮುಚ್ಚಿಬಿಟ್ಟು ||1||

ಹಲವು ಹೆಣ್ಣು ಗೊಂಬೆ ಮಾಡಿದಾ | ನಮ್ಮ ಶಿವನು |

ಹಲವು ಗಂಡು ಗೊಂಬೆ ಮಾಡಿದಾ ||

ಕಲಸಿ ಹೆಣ್ಣು ಗಂಡು ಜೋಡಿ |

ಹಲವು ಗೊಂಬೆ ಸೃಷ್ಟಿ ಮಾಡಿ|

ಬೆಳೆಸಿ ಎಲ್ಲ ಗೊಂಬೆಯಾಡಿ |

ಇಳೆಯ ತುಂಬಿ ಬರಿದು ಮಾಡಿ ||2||

ಜಾಗ್ರವಾಗಲೆದ್ದು ಆಡುತ| ಜಗವ ಕಂಡು|

ಶೀಘ್ರವಾಗಿ ಮೋಹಗೊಳ್ಳುತಾ||

ಅಗ್ಗವಾದ ವಿಷಯಗಳಿಗೆ|

ನುಗ್ಗಿ ಹೋಗಿ ದುಃಖಗಳಿಗೆ |

ವ್ಯಗ್ರವಾಗಿ ಮತ್ತೆ ಬೆರೆವ|

ಹಿಗ್ಗಿ ಜಗ್ಗಿ ಸಾಯುತಿರುವ ||3||

ಪೃಥ್ವಿಯಲ್ಲಿ ಮಾಡಿ ಸೂತ್ರವಾ | ಈ ಗೊಂಬೆಗಳಿಗೆ |

ತೀರ್ಥದಲ್ಲಿ ತುಂಬಿ ಮಂತ್ರವಾ ||

ನರ್ತಿಸುವವು ಅಗ್ನಿಯಿಂದ |

ವರ್ತಿಸುವವು ವಾಯುವಿಂದ |

ಬಿತ್ತರಿಸುವ ವಾಗಸದಲಿ |

ನಿತ್ಯ ಶಕ್ತಿಯಾಂತು ಕುಣಿವ ||4||

ಮಂತ್ರಶಕ್ತಿಯಿಂದ ಕುಣಿಸಿದ| ನಿದ್ರೆಯಲ್ಲಿ|

ಯಂತ್ರಗಳನು ಮುಚ್ಚಿಯಿರಿಸಿದ ||

ತಂತ್ರದಿಂದಲಾಡಿಸುತ್ತ|

ಯಂತ್ರ ಮುರಿಯೆ ಝಾಡಿಸುತ್ತ||

ಮಂತ್ರಮೂರ್ತಿ ನರಹರಿ

ಸ್ವತಂತ್ರ ಸೂತ್ರಧಾರಿಯಾಗಿ ||5||

ನಡೆವುದೆ ಬ್ರಹ್ಮ | ದೇಹದಿ ನಿಂತು| ನುಡಿವುದೆ ಬ್ರಹ್ಮ ||ಪ||

ನಡೆನುಡಿ| ಗಳ ನೀಗಿ| ನಡುವೆ ನಿಶ್ಚಲವಾಗಿ||

ಕಡುಸುಖ ರೂಪಾಗಿ| ಒಡಲ ಸಾಕ್ಷಿಕವಾಗಿ ||ಅಪ||

ಕೇಳುವುದು ಬ್ರಹ್ಮ| ಕೇಳ್ದುದ ತಾನೆ| ಹೇಳುವುದು ಬ್ರಹ್ಮ ||

ಹೇಳಿ ಕೇಳಿದುದೆಲ್ಲ | ತಾಳಿ ನಿಶ್ಚಯ ಮಾಡಿ||

ಮೂಲಾನುಭವದಿಂದ | ಓಲಾಡುವುದು ಬ್ರಹ್ಮ ||1||

ಮುಟ್ಟುವುದು ಬ್ರಹ್ಮ| ಮುಟ್ಟುತ ನುಡಿಯ|

ಕಟ್ಟುವುದು ಬ್ರಹ್ಮ||

ಮುಟ್ಟುತ್ತಲಾನಂದ | ಪಟ್ಟು ನಿಂದುದು ಬ್ರಹ್ಮ ||

ಮುಟ್ಟಂಟು ಇಲ್ಲದ| ಬಟ್ಟಬಯಲೀ ಬ್ರಹ್ಮ ||2||

ನೋಡುವುದು ಬ್ರಹ್ಮ | ನೋಡಿದುದ ಮಾ |

ತಾಡುವುದು ಬ್ರಹ್ಮ ||

ನೋಡಿಯಾನಂದವ| ಕೂಡಿ ನಿರ್ಮಲ ಭಾವ||

ನೋಡಿ ನಶ್ವರವ ನೀ| ಡಾಡುವುದೇ ಬ್ರಹ್ಮ ||3||

ರುಚಿಸುವುದು ಬ್ರಹ್ಮ| ರುಚಿಸಿದುದೆಲ್ಲ |

ವಚಿಸುವುದು ಬ್ರಹ್ಮ||

ರುಚಿಯಿಂದಲಾನಂದ| ಪ್ರಚುರಗೈವುದು ಬ್ರಹ್ಮ||

ವಚನ ನಿರ್ಗುಣಗೈಯು| ತಚಲವಾದುದು ಬ್ರಹ್ಮ ||4||

ಮೂಸಿಪುದು ಬ್ರಹ್ಮ | ಮೂಸಿಸಿ ನುಡಿಯ |

ಸೂಸುವುದು ಬ್ರಹ್ಮ ||

ಮೂಸಿಸಿಯಾನಂದ| ಲೇಸಾಗಿ ಭವಬಂಧ ||

ವಾಸನೆಯಳಿದ ವಿ| ಲಾಸ ನರಹರಿ ಬ್ರಹ್ಮ ||5||

ನಾದದೊಳಿಹುದು | ಪರ ನಾದದಿ |

ಶೋಧಿಸಬಹುದು ||

ನಾದ ಬಿಂದುಗಳೇಕ | ವಾದುದು ಕಳೆಯಾಗಿ |

ಬೋಧ ಪ್ರಸಾದದಿ | ಸಾಧಿಸಬಹುದು ||6||

ಅರಿವುದು ಬ್ರಹ್ಮ | ಅರಿತುದ ತಾನೆ |

ಮರೆವುದು ಬ್ರಹ್ಮ ||

ಅರಿತು ಸಗುಣವಾಗಿ | ಮರೆತು ನಿರ್ಗುಣವಾಗಿ |

ಅರಿವು ಮರವೆಗೆ ಸಾಕ್ಷಿ | ನರಹರಿ ಬ್ರಹ್ಮ ||7||

ಗುರು ದೊರಕುವುದೆ ದುರ್ಲಭವು | ಸ|

ದ್ಗುರು ದೊರಕಿದಾಗಲೆ ಲಾಭವು ಶುಭವು ||ಪ||

ಪರಮ ಪುಣ್ಯದ ಪೂರ್ವ ಫಲವು| ಒದ|

ಗಿರಲಾಗಿ ಗುರುಪಾದ ದರ್ಶನದೊಲವು ||ಅಪ||

ಪಾಪಿಯೆಂದಿಗು ಕಾಣಲರಿಯ | ಭವ |

ತಾಪ ನಿರ್ಮೂಲವ ಮಾಡುವೀ ಸಿರಿಯ ||

ಭೂಪತಿ ಕಾಣನೀ ಪರಿಯ| ಬಹಿ|

ರೂಪ ಸನ್ಯಾಸಿ ಮುಟ್ಟಿಲ್ಲ ಈ ಗುರಿಯ ||1||

ನರನಲ್ಲ ಸದ್ಗುರುನಾಥ| ಪುರ|

ಹರನೆಂದು ತಿಳಿದಾತ ತಾನೆ ಪುನೀತಾ||

ಹರಿ ರೂಪ ತಾನೆಯಾದಾತ| ಸುರ|

ವರರನ್ನು ತನ್ನಲ್ಲಿ ಸೆರೆಯಿಟ್ಟನೀತಾ ||2||

ಗುರುವು ಕಾಣನು ಮಾಯಮರವೆ | ನಿಜ|

ದರಿವೆ ತಾನಾಗಿರ್ಪ ನಿರ್ಗುಣದಿರವೇ||

ಗುರುವೆ ಭಕ್ತರ ಕಲ್ಪತರವೇ | ಶ್ರೀ|

ಗುರು ವೀರನರಹರಿಯೆ ಸತ್ಯದಾಗರವೇ ||3||

ಅರ್ಧ ನಾರೀಶ್ವರನಿರುವ| ತಾನೆ|

ಅರ್ಧ ಮಾತೃಕೆಯಾಗಿ ಜಗವನ್ನು ಪೊರೆವ ||ಪ||

ಮಾರ್ದನಿಗೊಡುತ ತಾಬರುವ| ಸತ್ಯ |

ಸಿದ್ಧ ಮಹಾತ್ಮರ ತಾನಾಗಿ ಬೆರೆವ ||ಅಪ||

ಎಡಭಾಗ ಹೆಣ್ಣಾಗಿ ತೋರ್ಪ| ಬಲ|

ಗಡೆಯೆಲ್ಲ ಪುರುಷನ ರೂಪನಾಗಿರ್ಪ||

ಎಡಬಲ ಒಂದಾಗುತಿರ್ಪ | ನಿಂತ|

ಕಡೆಯಲ್ಲಿ ಅರ್ಧ ನಾರೀಶ್ವರನೆನಿಪ ||1||

ಶಿವಶಕ್ತಿಯರು ಕೂಡಿ ಬಂದು| ದೇಹ|

ಭವನವ ಸೇರುತ್ತ ಹಂಸನೊಳು ನಿಂದು||

ಶಿವಜೀವರೈಕ್ಯ ಸುಖತಂದು| ಅನು |

ಭವವಾಗಲಾಕ್ಷಣ ಮುಕ್ತಿಯಹುದೆಂದು ||2||

ವರ್ಣವೆಲ್ಲವು ಶಕ್ತಿರೂಪ| ಸರ್ವ|

ವರ್ಣಕಾರಣದರ್ಧಮಾತ್ರೆ ಚಿದ್ರೂಪ||

ಪೂರ್ಣ ಓಂಕಾರದಿ ತೋರ್ಪ| ಪರಿ|

ಪೂರ್ಣ ಬ್ರಹ್ಮವೆ ನರಹರಿಯಾಗುತಿರ್ಪ ||3||

ಕುಣಿಯುತಾಳೆ ಕುಣಿಯುತಾಳೆ | ಯಲ್ಲಮ್ಮದೇವಿ |

ಕುಣಿಯತಾಳೆ ಕುಣಿಯುತಾಳೆ ||ಪ||

ಕುಣಿಯುತಾಳೆ ಜಗದೊಳೆಲ್ಲ | ಕುಣಿಸುತಾಳೆ ಜಗವನೆಲ್ಲ||

ಎಣಿಸುತಾಳೆ ಎಲ್ಲವನ್ನು || ಮಣಿಸಿ ತಾನೆ ಥೈ ಥೈ ಎಂದು ||ಅಪ||

ಶರೀರ ಚೌಡಿಕೆಯ ಮಾಡಿ| ಅದರಲ್ಲೆ ಹುಟ್ಟಿ|

ಬರುವನಾದ ತಂತಿ ಮಾಡಿ||

ಕರಣವೆಂಬ ಗೆಜ್ಜೆ ಕಟ್ಟಿ|

ಸ್ಮರಣೆಯೆಂಬ ಬೆರಳು ಮುಟ್ಟಿ||

ಧರಣಿಯೆಲ್ಲವನ್ನು ಮೆಟ್ಟಿ|

ಹರುಷಹುಟ್ಟಿ ಥೈ ಥೈ ಎಂದು ||1||

ಜಗವನೆಲ್ಲ ಹೆತ್ತಿದಾಳೆ| ಜಾಗ್ರವನು ಕೂಡಿ|

ಜಗವ ತಾನೆ ಹೊತ್ತಿದಾಳೆ||

ಮಿಗಿಲು ಮಾಯೆ ಸ್ವಪ್ನ ಕೂಡಿ|

ಹಗರಣಕ್ಕೆ ತಾನೆ ಹೂಡಿ||

ಹಗಲು ರಾತ್ರಿವೊಂದೆ ಮಾಡಿ|

ಸೊಗಸಿನಿಂದು ಥೈ ಥೈ ಎಂದು ||2||

ನಿದ್ರೆಯೆನಿಸಿ ಬಂದಿದಾಳೆ | ಜಗಕೆಲ್ಲ ಬೀಗ|

ಮುದ್ರೆ ಹಾಕಿ ನಿಂದಿದಾಳೆ||

ಇದ್ದು ಇಲ್ಲವಾಗಿ ಲೋಕ|

ಬಿದ್ದುಹೋಯಿತೆಲ್ಲ ಮೂಕ||

ಶುದ್ಧ ನರಹರೀಂದ್ರಪಾದ| ಹೊದ್ದಿ ನಿಂತು ಥೈ ಥೈ ಎಂದು ||3||

ತ್ರಿಪುರ ದಹನವ ಮಾಡಿದಾ| ಪರಶಿವ

ಸರ್ವ| ತ್ರಿಪುಟಿಯನ್ನೀಡಾಡಿದ ||ಪ||

ತ್ರಿಪುರವೇ ದೇಹ ತ್ರಯಂಗಳು|

ತ್ರಿಪುರರೇ ಜೀವ ತ್ರಯಂಗಳು||

ತ್ರಿಪುರ ಸತಿಯರೆ ಮೂರವಸ್ಥೆಯು|

ತ್ರಿಪುರ ಕೋಟೆಗಳೇ ಗುಣತ್ರಯ ||ಅಪ||

ಧಾರಿಣಿಯೆ ರಥವಾಯಿತು| ಪರಮೇಶ್ವರಗೆ|

ಮೇರುವೆ ಬಿಲ್ಲಾಯಿತು||

ವಾರಿಜಾನಸ ಸೂತ್ರನಾದನು|

ವಾರಿಜಾಕ್ಷನು ಬಾಣವಾದನು||

ಚಾರುವೇದವೆ ವಾರುವಂಗಳು|

ಸೂರ್ಯಚಂದ್ರರೆ ಗಾಲಿಯಾಗಲು ||1||

ಸರಸಿ ಜಾಸನನಿತ್ತನು | ತ್ರಿಪುರರ ತಪಕೆ |

ಭರದಿ ಮೆಚ್ಚುತ ವರವನು ||

ವರುಷ ದಿವ್ಯ ಸಹಸ್ರ ತೀರಲು|

ಪುರಗಳೊಂದೇ ಕೀಲು ಸೇರಲು||

ಗುರಿಯ ತಪ್ಪದೆವೊಂದೆ ಲಕ್ಷ್ಯದಿ|

ಹರನು ಮುರಿದನು ತ್ರಿಪುರ ಕೀಲನು ||2||

ಮಡಿಯದಿದ್ದರು ಯುದ್ಧದಿ| ತ್ರಿಪುರರು

ತಮ್ಮ | ಮಡದಿಯರ ವ್ರತ ಬಲದಿ||

ಜಡಜನಾಭನು ನರಹರೀಂದ್ರನು|

ಒಡಲು ಬೆತ್ತಲೆ ಬೌದ್ಧ ರೂಪನು ||

ನಡೆದು ಸತಿಯರ ಪಾತಿವ್ರತ್ಯವ|

ಕೆಡಿಸಿಕಳೆದನು ತ್ರಿಪುರರಸುವನು ||3||

ದೇವಿ ಮಹಾತ್ಮೆಯನೋದಿರಿ ಕೇಳಿರಿ|

ದೇವಿಯೊಳೈಕ್ಯವ ಸಾಧಿಸಿರಿ ||ಪ||

ದೇವಿಯ ಕೃಪೆಯನು ಸಂಪಾದಿಸಿರಿ|

ಭಾವದಿ ಭಕ್ತಿಯ ನಿಲ್ಲಿಸಿರಿ ||ಅಪ||

ಕಿವಿಯೊಳು ಹುಟ್ಟಿದ ಮಧುಕೈಟಭರು|

ಭವಭಯ ಸಂಶಯ ಪಾತಕರು|

ಶ್ರವಣ ಸುದರ್ಶನ ಚಕ್ರದಿ ಸೀಳ್ದಳು|

ಶಿವಮಹಕಾಳಿಯೆ ಹರಿಯಹಳು ||1||

ಮದವೇ ಮಹಿಷನು ಕೋಣನ ರೂಪನು |

ಹೆದರಿಸುತಿದ್ದನು ಸುರರನ್ನು ||

ಮಧುರ ಜ್ಞಾನದ ಮಧುವನು ಕುಡಿಯುತ|

ಕದನದಿ ಕೊಂದಳು ಮಹಲಕ್ಷ್ಮಿ ||2||

ತಾಯಿಯ ರಕ್ತದಿ ತಂದೆಯ ಬೀಜದಿ |

ಕಾಯರೂಪ ರಕ್ತ ಬೀಜನನು ||

ಬಾಯೊಳು ನಾಲಗೆ ಮೇಲೆ ಸಂಹರಿಸಿದ |

ಮಾಯಾ ರೂಪಿಣಿ ಮಹಶಕ್ತಿ ||3||

ಮನಮತಿ ಚಿತ್ತಾಹಂಕಾರಗಳಲಿ |

ಜನಿಪ ಬಿಡಾಲ ರುದಗ್ರರನು ||

ಘನ ಚಿಕ್ಷುರ ರಸಿಲೋಮರ ಕೊಂದ|

ಜನನಿಯ ನೆನೆಯಿರಿ ಮನದಲ್ಲಿ ||4||

ಶಿರದಲಿ ಜ್ಞಾನೇಂದ್ರಿಯಗಳ ಚಂಡನು |

ಬೆರೆತು ಕರ್ಮೇಂದ್ರಿಯಗಳ ಮುಂಡ ||

ತರಿದು ವಿಚಾರದ ಯುದ್ಧದೊಳವರನು|

ಮೆರೆವಳು ಪ್ರಣವದ ಚಾಮುಂಡಿ ||5||

ನಾನೆನ್ನುವಹಂಕಾರವೆ ಶುಂಭನು|

ನನ್ನದೆಂಬ ಗುಣ ನಿಶ್ಯುಂಭ||

ಜ್ಞಾನರೂಪಳಾ ಭಾರತಿ ಕೊಂದಳು|

ತಾನೇ ನರಹರಿ ಬೋಧೆಯೊಳು ||6||

ಸಪ್ತಮಾತ್ರೆಯರು | ನರ್ತನಗೈಯಲು |

ಸಪ್ತಕೋಟಿ ಮನುಗಳು ನುತಿಸೆ ||

ದೀಪ್ತಿಯಿಂ ದೇವ ಕೋಟಿಗಳೆಲ್ಲ ಸೇವಿಸೆ |

ತೃಪ್ತಳಾದಳು ಮಂತ್ರದೇವತೆ ||7||

ಸಪ್ತ ಚಕ್ರಂಗಳ ಗುಪ್ತದಿ ಸೇರುತ |

ಲಿಪ್ತನಾಗದೆಯಿರ್ಪ ಶಿವನನ್ನು ||

ಜ್ಞಪ್ತಿ ಮಾತ್ರದಿ ಸುಷುಪ್ತಿಯೊಳಾಡುತ |

ವ್ಯಾಪ್ತಳೆನಿಸಿದೀ ದೇವಿಯನು ||8||

ಸರ್ವಕಾಲ ದುರ್ವಿಷಯ ರಕ್ಕಸರ |

ನಿರ್ವಿಷಯಗಳೆನೆ ಸಂಹರಿಸಿ ||

ಶರ್ವಾಣಿಯು ತಾ ಸರ್ವಮಂಗಳೆಯು |

ಸರ್ವಾತ್ಮ ನರಹರಿಯಲ್ಲಿಹಳು ||9||

ಅಷ್ಟಸಿದ್ಧಿಯ ಹೊಂದಿದಾತನು | ಶ್ರೇಷ್ಠ ಯತಿವರನು |

ಪಡೆವನು | ಇಷ್ಟಸಿದ್ಧಿಯನು ||ಪ||

ನಡೆಯೊಳಿಹುದು ಅಣಿಮ ಸಿದ್ಧಿ |

ನುಡಿಯೊಳುಂಟು ಮಹಿಮ ಸಿದ್ಧಿ ||

ನಡೆಗೆ ನುಡಿಗೆ ನಡುವೆ ವೃದ್ಧಿ |

ಪಡೆದು ನಿಲ್ಲೆಲಘಿಮ ಸಿದ್ಧಿ ||1||

ತುಂಬಿದಾ ಸುಷುಮ್ನೆ ಶುದ್ಧಿ |

ಗೊಂಬುದೆಲ್ಲ ಗರಿಮಸಿದ್ಧಿ ||

ಅಂಬರದೊಳಾ ಪ್ರಾಪ್ತಿ ಸಿದ್ಧಿ |

ನಂಬಲಲ್ಲೆ ಸರ್ವಸಿದ್ಧಿ ||2||

ಅರ್ಧ ಮಾತ್ರಾ ರೂಪದಿಂದ |

ವೃದ್ಧಿಸಿರುವ ವರ್ಣವೃಂದ |

ಶುದ್ಧ ನಾದದೊಳೈಕ್ಯವಾದ |

ಸಿದ್ಧಿತಾನೆ ವಶಿತ್ವ ಸಿದ್ಧಿ ||3||

ಅಗ್ನಿಯೊಳು ಪ್ರಾಕಾಮ್ಯ ಸಿದ್ಧಿ |

ಪ್ರಜ್ಞೆಯಿಂದೀ ಶತ್ವಸಿದ್ಧಿ ||

ಸುಜ್ಞ ನರಹರೀಂದ್ರ ಸಿದ್ಧಿ |

ಸಂಜ್ಞೆಯೇ ವಶಿತ್ವ ಸಿದ್ಧಿ ||4||

ಅಷ್ಟಸಿದ್ಧಿಯ ಪಡೆದು ತಾನು |

ದುಷ್ಟಕರ್ಮವ ಸುಟ್ಟುಬಿಡುವನು |

ಸೃಷ್ಟಿಗೊಡೆಯನು ನರಹರೀಂದ್ರ |

ಶಿಷ್ಟ ರಕ್ಷಣ ಸುಗುಣಸಾಂದ್ರ ||5||

ಆರು ಲಕ್ಷಣವಿರ್ಪವು| ನಿರ್ಗುಣ ಯೋಗಿ|

ಗಾರು ತೋರದೆ ಬರ್ಪವು ||ಪ||

ತೋರುವಂಧನು ಬಧಿರ ಮೂಕನು |

ಚಾರುಬಾಲೋನ್ಮತ್ತನೆನಿಪನು||

ಮೀರಿ ದೆವ್ವವು ಹಿಡಿದವನ ಪರಿ|

ಧಾರಿಣಿಯೊಳಿಹ ಯೋಗಿಯೇ ಸರಿ ||ಅಪ||

ಅಂಧನಂತಿರುತಿರ್ಪನು| ಯೋಗೀಶ್ವರನು|

ಸಂದೇಹವಳಿದಿರ್ಪನು ||

ಮುಂದೆ ಕಾಣುವ ಜಗವು ನಶ್ವರ|

ವೆಂದು ನಿಶ್ಚಯ ಮಾಡಿ ಎಚ್ಚರ||

ಹೊಂದಿ ಕಾಣ್ಬುದ ನಂಬದೀಶ್ವರ|

ನಂದವನು ನೆನೆಯುವ ಯತೀಶ್ವರ ||1||

ಕಿವುಡನಂತಿರುವಾತನು| ನಿಶ್ಚಲ ಯೋಗಿ|

ಭವದೂರ ನಿರ್ಭೀತನು ||

ಶ್ರವಣ ಮಾತ್ರದಿ ಕವಿದ ಲೌಕಿಕ|

ವಿವಿಧ ರೂಪದ ಶಬ್ದ ಸೂತಕ||

ಕಿವಿಯ ಸೋಕದೆಯಿದ್ದು ಪಾತಕ|

ನಿವಹ ಕಳೆದನು ಜ್ಞಾನಸಾಧಕ ||2||

ಮೂಕನಾಗಿಹ ಯೋಗಿಯು| ಜಗದಾಟವನು |

ಸೋಕದಿಹ ನಿಜವಾಗಿಯು||

ಲೌಕಿಕಾರ್ಥವ ಮಾತನಾಡನು |

ಬೇಕುಬೇಡೆಂಬೆರಡುನೋಡನು ||

ಕಾಕು ನುಡಿಗಳ ನೂಕಿಬಿಡುವನು|

ಶೋಕಮೋಹವ ತಾಕದಿರ್ಪನು ||3||

ಬಾಲನಂದದೊಳಿರ್ಪನು| ನಿರ್ಮಲನಾಗಿ|

ಬಾಲಲೀಲೆಯ ತೋರ್ಪನು||

ಬಾಲನೊಲು ನಿಷ್ಕಪಟ ಭಾವವು|

ಶೀಲಮಡಿಗಳು ಕಾಣಲಾರವು||

ಹಾಳು ರಾಗದ್ವೇಷವೆಲ್ಲವು|

ಹೇಳಿಕೇಳದೆ ಕಾಲು ಕಿತ್ತುವು ||4||

ಹುಚ್ಚು ಹಿಡಿದವನಂದದಿ|

ಪರಮಾಶ್ಚರ್ಯ | ಹೆಚ್ಚಿತಾನಾನಂದದಿ||

ಹಚ್ಚಿಕೊಳ್ಳದೆ ಲೋಕವರ್ತನ |

ಮೆಚ್ಚಿಗೈವನು ಶಿವನ ಕೀರ್ತನ|

ಅಚ್ಚಬ್ರಹ್ಮದ ಲೀಲೆ ನರ್ತನ|

ಬಿಚ್ಚಿ ತೋರ್ಪನು ಜಗವಿಲಕ್ಷಣ ||5||

ದೆವ್ವ ಬಡಿದವನಂತಿಹ| ಪಾವನ ಯೋಗಿ|

ದೈವ ಚಿಂತನವಾಂತಿಹ||

ನವ್ಯ ಭಾವನೆಯುಕ್ಕಿಬ್ರಹ್ಮದಿ|

ದಿವ್ಯ ತತ್ವವ ಕಂಡು ಸರ್ವದಿ||

ಭವ್ಯ ಸಾಧನೆಯೈಕ್ಯ ಭಾವದಿ|

ಸೇವ್ಯ ನರಹರಿ ಪಾದತಲದಿ ||6||

ರಕ್ತಬೀಜನ ಕೊಂದಳಲ್ಲಾ | ಜ್ಞಾನ |

ಶಕ್ತಿಯ ಮಹಿಮೆಯ ಪೊಗಳಲಳವಲ್ಲಾ ||ಪ||

ರಕ್ತಬಿಂದುವೆ ಜನ್ಮಮೂಲ| ಲೋಕ|

ರಕ್ತಬೀಜಾಸುರನಮಯವಾಯಿತಲ್ಲಾ ||ಅಪ||

ಸತಿಯ ರಕ್ತದಿ ಪತಿಯ ಬೀಜ|

ಕೂಡಲತಿಶಯ ದುಶ್ಪತ್ತಿ ತಾನಾಯ್ತು ನೈಜ||

ಮೃತಿ ಹೊಂದಿದರು ಜನ್ಮಬೀಜ| ಪೋಗ |

ದತಿಯಾಗಿ ಹೆಚ್ಚುತ್ತಲಿರುವುದೆ ಸಹಜಾ ||1||

ನಾಲಗೆಯೆ ರಣರಂಗವಾಗಿ| ಜನ್ಮ |

ಮೂಲ ಛೇದಿಸೆ ಬೋಧಶಕ್ತಿ ನಿಲಲಾಗಿ||

ಕಾಳಗವು ನಡೆಯೆ ಜೋರಾಗಿ| ಸತ್ತು|

ಬೀಳುತಿದ್ದನು ರಕ್ತಬೀಜ ಭವರೋಗಿ ||2||

ಸಪ್ತಚಕ್ರದ ಸದ್ವಿಚಾರ| ನಮ್ಮ |

ಸಪ್ತಮಾತೃಕೆ ಗಣದ ನಿಜ ಪರಿವಾರ|

ಪ್ರಾಪ್ತಿಯಾಯ್ತು ಸುರ ಸಂಹಾರ|

ತಾನೇ ತೃಪ್ತಳಾದಳು ದೇವಿ ನರಹರಿ ಪೂರ ||3||

ನೋಡಿರಿ ಕಳಹಂಸನಾ| ಸರ್ವರೊ|

ಳಾಡುವ ಜಗದೀಶನಾ ||ಪ||

ರೂಢಿಯನೆಲ್ಲವ | ನಾಡಿಸಬಲ್ಲವ |

ಈಡಿಲ್ಲ ಕಡುವೈಭವಾ ||ಅಪ||

ಬಿಚ್ಚಿರುವುದು ಬಾಗಿಲು| ತಾನಿದು|

ಮುಚ್ಚದು ಯಾವಾಗಲು||

ಎಚ್ಚರದೊಳು ಬಲು| ಎಚ್ಚರ ಕಾವಲು||

ಹೆಚ್ಚಿತ್ತು ಹಗಲಿರುಳು ||1||

ಕಣ್ಣಿಗೆ ಕಣ್ಣಾದನು| ನಾನಾ|

ಬಣ್ಣವಲಯಗೈದನು ||

ಚಿನ್ಮಯನೀತನು| ತನ್ಮಯನಾದನು |

ಭಿನ್ನಭಾವವ ಕಾಣನು ||2||

ಯಾರಿಗು ಕಾಣಿಸನು | ಸರ್ವಕೆ|

ಕಾರಣನಾಗಿರ್ಪನು||

ಮೂರು ಜಗಂಗಳ| ಸೇರಿದ ಮಂಗಳ|

ಮೂರುತಿ ತಾನಾದನು ||3||

ಮೂಲಾಧಾರದಲಿ| ತಾನಿಹ |

ಕಾಲವನಳೆಯುತ್ತಲಿ||

ಲೀಲಾ ಜಾಲದಿ | ಸ್ಥೂಲದಿ ಸೂಕ್ಷ್ಮದಿ |

ಕೇಳಿಯಾಡುತಲಿರ್ಪನು ||4||

ಬಿಡುವಿಲ್ಲದೆ ನಡೆವಾ | ತಾನೇ |

ಬೆಡಗಿಂದಲೆ ನುಡಿವಾ||

ಕಡೆಯೊಳು ನರಹರಿ| ಅಡಿಯೊಳು ಸೇರಿ|

ಕಡುಸುಖ ಪಡೆದಿರ್ಪನು ||5||

ಶೂನ್ಯ ಸಂಪಾದನೆಯ | ಮಾಡಲಿ ಬೇಕು|

ಧ್ವನ್ಯಾತ್ಮ ಶೋಧನೆಯ ||ಪ||

ಶೂನ್ಯವೆ ಪರಬ್ರಹ್ಮ | ಶೂನ್ಯ ನಿರ್ಗುಣ ಬ್ರಹ್ಮ||

ಅನ್ಯವಲ್ಲವು ತಾನೆ| ಎನ್ನುವರ್ಥವ ತಿಳಿದು ||ಅಪ||

ಬೇರೆಬೇರೆಂದೆನಿಸುವ| ಲೋಕವನೆಲ್ಲ |

ಸೇರಿ ಐಕ್ಯವ ಮಾಡುವ ||

ಭೂರಿ ಬ್ರಹ್ಮವೇ ಮೂಲಾ| ಧಾರದೊಳನುಕೂಲ||

ತೋರಿ ತನ್ನೊಳು ತಾನೆ| ಸೇರಿ ನಿರ್ಗುಣವಪ್ಪ ||1||

ವರ್ಣವೆಲ್ಲವ ತೋರುತ | ಎಲ್ಲವ ನೀಗಿ |

ತನ್ನಲ್ಲೆ ತಾ ಸೇರುತ|| ಅನ್ಯವೆಲ್ಲವ ಮರೆತು|

ತನ್ನತಾ ಮರೆಯದೆ|

ಸೊನ್ನೆ ಪೂಜ್ಯವು ಬಿಂದು| ವೆನ್ನಿಸಿ ಪೂರ್ಣವು ||2||

ಕಳೆಯಾಗಿ ಹೊಳೆಯುತಿದೆ| ತನ್ನೊಳು ಜ್ಞಾನ |

ಬೆಳಗುತ್ತ ನಲಿಯುತಿದೆ||

ಕಳೆದೆಲ್ಲವನ್ನು ನಿ| ಷ್ಕಳೆಯಾಗಿ ಸುಖಿಸುತ್ತ|

ಉಳಿಮೆಯೆ ನರಹರಿ| ಯೊಲಿಮೆಯೆಂದರಿಯುತ್ತ ||3||

ಏನು ಗಾರುಡಿಗಾರನಮ್ಮ ಯನ್ನ ಸ್ವಾಮಿಯು ||ಪ||

ಮೌನ ಧ್ಯಾನದೊಳೊಂದೆಯಾದನು ಭಕ್ತಪ್ರೇಮಿಯು ||ಅಪ||

ಮಡಿದು ಹೋಗುವ ಮಾಂಸಪಿಂಡವ ದೂರವಿಟ್ಟನು||

ಮಡಿಯದಿರ್ಪಾ ಮಂತ್ರಪಿಂಡವ ತೋರಿಕೊಟ್ಟನು ||1||

ನಾದಬ್ರಹ್ಮವು ವೇದ ಮೂಲವು ಸಾಧಿಸೆಂದನು||

ಬೋಧೆಯಲ್ಲಿದೆ ಮುಕ್ತಿ ಮಾರ್ಗವು ಶೋಧಿಸೆಂದನು ||2||

ಕಾಣುತಿರುವುದು ಸುಳ್ಳು ಎಂದೀ ಜಾಣ ಪೇಳಿದಾ||

ಕಾಣಲಾಗದ ಬ್ರಹ್ಮವೇ ನಿಜವೆಂದು ತೋರಿದಾ ||3||

ಹಿಡಿದ ಮೋಹದ ದೆವ್ವ ಮಂತ್ರದಿ ಬಿಡಿಸಿಬಿಟ್ಟನು||

ಕಡೆಗೆ ಬ್ರಹ್ಮವ ಮಂತ್ರದಲ್ಲೇ ಹಿಡಿದು ಕೊಟ್ಟನು ||4||

ಭೋರುಗುಟ್ಟುವ ಸರ್ಪವನು ಕೈ | ಸೇರಿಸಿದ್ದನು ||

ಮೇರೆಯಿಲ್ಲದ ದರ್ಪವನ್ನು | ಮೀರಿಸಿದ್ದನು ||5||

ಪುಂಗಿ ನಾದದ ಇಂಗಿತದಿ ಭವ | ಹಿಂಗಿಸೆಂದನು ||

ಕಂಗಳೆಂದಿಗು ಕಾಣದಂತಹ | ಭಂಗಿ ತೋರಿದನು ||6||

ಹೆಣಗಳನ್ನೇ ಕುಣಿಸಿ ದಣಿಸಿ | ಮಣಿಸಿಬಿಟ್ಟನು ||

ಕ್ಷಣಕೆ ಕಂಡುದು ಕಾಣಲಾರ | ದೆನಿಸಿಬಿಟ್ಟನು ||7||

ಒಂದರಿಂದಲೆ ಬಂದುದೆಲ್ಲವು | ಎಂದು ತೋರಿಸಿದ ||

ಒಂದರೊಂದಿಗೆ ಮುಂದೆ ಎಲ್ಲವ | ತಂದು ಕೂಡಿಸಿದ ||8||

ನುಡಿಯೊಳೆನ್ನನು ಬೆರಗು ಮಾಡಿದ ಬೆಡುಗು ತೋರಿದ||

ಒಡಲ ಕರ್ಮವ ಬಿಡಿಸಿ ನರಹರಿ ಕಡಲ ಸೇರಿದ ||9||

ಸಗುಣವೆನ್ನಬಹುದೇ| ಬ್ರಹ್ಮವ | ನಿರ್ಗುಣವೆನಬಹುದೇ ||ಪ||

ಸಗುಣವೆನ್ನಲದು ನಿರ್ಗುಣವಪ್ಪುದು||

ನಿರ್ಗುಣವೆನ್ನಲು ಸಗುಣವಾಗುವುದು ||ಅಪ||

ಸಾಕಾರದೊಳಿಹುದು| ಮತ್ತೆ ನಿ|

ರಾಕಾರಕೆ ಬಹುದು|| ಸಾಕಾರವ ತಾ|

ಸ್ವೀಕರಿಸುತ್ತ ನಿ| ರಾಕಾರವನಂ| ಗೀಕರಿಸುತ್ತಿದೆ ||1||

ಸಗುಣವು ಸಾಕಾರ| ಜಾಗ್ರದಿ| ಸೊಗಸಿಹುದಿದು ಪೂರಾ||

ಹಗರಣಸ್ವಪ್ನದೊ| ಳೊಗೆದುದುತೋರ್ಕೆಯು ||

ಬಗೆದುದನೆಲ್ಲವ | ಮುಗಿಸಿತು ಸುಪ್ತಿಯು ||2||

ನಿದ್ರೆ ನಿಜಾನಂದ| ನಿರ್ಗುಣ| ಮುದ್ರೆಯಹುದದರಿಂದ||

ಇದ್ದ ದೇಹ ಜಗ| ವಿದ್ದರಿಲ್ಲದೊಲು|

ಶುದ್ಧ ನರಹರಿಯೊ| ಳೆದ್ದು ಹೋಯ್ತು ಜಡ ||3||

ಹಂಸನ ದರ್ಶನವಾದವನು | ನಿ|

ಸ್ಸಂಶಯ ಜ್ಞಾನವ ಹೊಂದುವನು ||ಪ||

ಧ್ವಂಸವ ಮಾಡಿದ ಪಾಪವನು||

ಬ್ರ| ಹ್ಮಾಂಶವೆ ತಾನೆಂದೆನಿಸುವನು ||ಅಪ||

ಮೂರವಸ್ಥೆಗಳ ಸಾಕ್ಷಿಯಿದು| ಮಹ|

ಕಾರಣವೆನ್ನಿಸಿ ಮೆರೆಯುವುದು||

ಮೂರೇಳ್ ಸಾವಿರದಾರ್ನೂರು| ಜಪ|

ತೀರಿಸಿ ಮಾಳ್ಪುದು ತಪಮೂರು ||1||

ಚಿತ್ರ ವಿಚಿತ್ರದ ತನುಗಳನು| ಧರಿ|

ಸುತ್ತಲೆಸಗಿ ಸಂಚಾರವನು ||

ಬೆತ್ತಲೆ ಹಾರುತ ಪೋಪುದನು | ನೋ |

ಡುತ್ತಲೆ ತಿಳಿಯಿರಿ ಜ್ಞಾನವನು ||2||

ಭೂತಗಳೆಲ್ಲವ ನುಂಗಿಹುದು | ನವ|

ನೂತನ ಚೇತನವಾಂತಿಹುದು||

ಜ್ಯೋತಿಯೆ ತಾನೆಂದೆನಿಸಿಹುದು | ಪ್ರ|

ಖ್ಯಾತಿಯು ನರಹರಿಯೊಳಗಿಹುದು ||3||

ದೀಪಾವಳೀ | ನಿಜ| ದೀಪಾವಳೀ ||ಪ||

ಆಪೋಜ್ಯೋತಿ ಸ್ವರೂಪಾ ತೀಳೀ ||ಅಪ||

ಪಾಪದ ತಾಮಸ| ರೂಪವನಳಿಸುವ ||

ಆ ಪರಂಜ್ಯೋತಿಯೆ ದೀಪಾವಳಿ||

ಪ್ರಾಪಂಚಿಕದನು| ತಾಪವ ನೀಗುತ||

ವ್ಯಾಪಕವೆನಿಸಿದ ದೀಪಾವಳಿ ||1||

ಈಡೆಪಿಂಗಳೆಗಳು| ಜೋಡಿ ಬತ್ತಿಗಳು||

ಕೂಡಿ ಸುಷುಮ್ನೆಯ ಪ್ರಣತಿಯೊಳು||

ಮೂಡಿಸಿ ಜ್ಞಾನವ| ರೂಢಿಸಿ ಬೆಳಗುವ||

ಗೂಢ ಪ್ರಣವಮಯ ದೀಪಾವಳಿ ||2||

ಎಲ್ಲವ ಬೆಳಗುತ | ಎಲ್ಲಿಯು ತೋರದೆ |

ಚೆಲ್ವ ಸುಜ್ಞಾನದ ದೀಪಾವಳೀ ||

ಒಳ್ಳೆಯ ಬೆಳಕನು | ಚೆಲ್ಲುತ ಸಿರಿಹರಿ |

ಯಲ್ಲಿಯೆ ಸಲ್ಲುವ ದೀಪಾವಳೀ ||3||

ನರಕ ಚತುರ್ದಶಿ | ಯರಿವೆ ತತ್ವಮಸಿ |

ಬೆರೆಯುತ ಬೆಳಗುವ ದೀಪಾವಳಿ ||

ನರರಿಗೆ ಪಾವನ | ಪರಿಪೂರ್ಣದ ಘನ |

ನರಹರಿ ಬೋಧೆಯ ದೀಪಾವಳಿ ||4||

ಜ್ಞಾನ ದೀಪಾವಳಿ| ಧ್ಯಾನ ದೀಪಾವಳಿ||

ಮೌನದಿ ಬೆಳಗುವ ದೀಪಾವಳಿ||

ಆನಂದಾಮೃತ| ಸ್ವಾನುಭಾವಯುತ||

ಶ್ರೀ ನರಹರಿ ನುಡಿ ದೀಪಾವಳೀ ||5||

ಉಂಡುಪವಾಸಿಯ ತಿಳಿಯಮ್ಮ | ಭವ|

ದಂಡಲೆಯೆಲ್ಲವನಳಿಯಮ್ಮ ||ಪ||

ಉಂಡರು ತೃಪ್ತಿಯೆ ಇಲ್ಲಮ್ಮ | ತಾ|

ಕಂಡುದ ಬಿಡುವವನಲ್ಲಮ್ಮ ||ಅಪ||

ವಿಷಯಗಳೆಷ್ಟೇ ಬರಲಾಗಿ|

ಸಂತಸದಿಂದುಂಬನು ತಾನಾಗಿ||

ಹಸಿವೇ ಜಾಗ್ರದಿ ಬಲವಾಗಿ| ಹೊಸ|

ವಿಷಯವ ಬೇಡುವ ನೀಯೋಗಿ ||1||

ಜಗವಾತ್ಮನಿಗೀಡಾಗದಿದೆ| ಸೋ|

ಜಿಗವಾತ್ಮನ ಹಸಿವಡಗದಿದೆ||

ಹಗರಣ ಜಾಗ್ರದೊಳಾಗುತಿದೆ| ಮೈ|

ದೆಗೆದು ಸುಷುಪ್ತಿಗೆ ಸಾಗುತಿದೆ ||2||

ಬಳಸಿದ ಬಹ್ಮಚಾರಿಯನು | ನೀ|

ತಿಳಿದುಕೊ ಸುಷುಪ್ತಿಯೊಳಗಿಹನು ||

ಬಳಸಿದ ದೇಹೇಂದ್ರಿಯಗಳನು | ಕಳೆ|

ದುಳಿದಿಹ ನರಹರಿಯೊಳು ತಾನು ||3||

ಭವರೋಗ ವೈದ್ಯಾ| ಸದ್ಗುರು ದೇವಾ|

ಶಿವಯೋಗ ವೇದ್ಯಾ ||ಪ||

ಶಿವ ಮಂತ್ರ ಸದ್ವಿದ್ಯ| ಶಿವಯೋಗದೊಳು ಸಾಧ್ಯ ||

ಪವನ ಯೋಗದ ಮಧ್ಯ| ಸುವಿಚಾರವಿದು ಚೋದ್ಯ ||ಅಪ||

ಹಂಸಗುಣ ನೀಗಿ| ಯೋಗದಿ ಪರಮ| ಹಂಸ ತಾನಾಗಿ||

ಸಂಶಯಂಗಳ ನೀಗಿ| ಹಿಂಸೆಯಿಲ್ಲದೆ ಸಾಗಿ||

ಸಂಸಾರ ಬಂಧವಿ| ಧ್ವಂಸ ನೀಸುವಿರಾಗಿ ||1||

ನಾದ ಸಂಚಾರಿ| ವೇದವ ಸಾರಿ| ಬೋಧಾವತಾರಿ||

ಭೇದವಿಲ್ಲದೆ ತೋರಿ| ನಾದಬ್ರಹ್ಮದ ದಾರಿ |

ವೇದಾಂತವನು ಸೇರಿ| ಸಾಧಿಸಿದ ಸುವಿಚಾರಿ ||2||

ಜೀವ ಭಾವವನು| ನೀಗುತ ಸೋಹಂ| ಭಾವ ಪಡೆದವನು ||

ಕೈವಲ್ಯದಾತನು| ಪಾವನನೀತನು||

ಸೇವೆಯಿಂ ಪ್ರೀತನು| ದೇವ ನರಹರಿ ತಾನು ||3||

\

ಹೊಡೆವೆನಾ ಡಂಗೂರವಾ| ಸದ್ಗುರು|

ನುಡಿದ ಬೋಧಾಸಾರವಾ ||ಪ||

ಒಡಲಿನೊಳಾಸೆಯ| ಬಿಡದವ ಮುಕ್ತಿಯ||

ಪಡೆವುದು ಸುಳ್ಳೆಂದು| ನುಡಿಯಿದು ನಿಜವೆಂದು ||ಅಪ||

ಧನವ ನಂಬಿರಬೇಡಿರೋ| ದುರ್ಗುಣ|

ಮನದಿ ತುಂಬಿರಬೇಡಿರೋ||

ಘನತರ ಮಂತ್ರವ| ನೆನೆದವ ಮೃತ್ಯುವ||

ಜನನವ ಗೆಲ್ಲುವ| ನೆನುವ ನಿಜಾರ್ಥವ ||1||

ಶ್ರವಣ ಭಕ್ತಿಗೆ ಸಾಧನಾ| ಮನನವೆ|

ಶಿವಜ್ಞಾನ ಸಂಪಾದನಾ||

ಸುವಿರತಿ ಸಾಧನ| ಶಿವನಿಧಿ ಧ್ಯಾಸನ||

ಭವಹರವಹುದೆಂದು| ನವಸುಖ ತಾನೆಂದು ||2||

ಕೋಟಿ ಮಂತ್ರಗಳೆಲ್ಲವು| ಪ್ರಣವಕೆ|

ಸಾಟಿಯೆನ್ನಿಸಲಾರವು||

ನಾಟಕ ಜಗವಿದ| ರಾಟವ ನಂಬದೆ||

ದಾಟಲು ನರಹರಿ| ಪಾಠವಿದೇ ಸರಿ ||3||

ಲೆಕ್ಕಾಚಾರವೆ ಮೂಲಾಧಾರ| ಚಕ್ರದಿ ಹಂಸನ ಸಂಚಾರ ||ಪ||

ಲೆಕ್ಕವೆ ಸಾಂಖ್ಯಯೋಗ ವಿಚಾರ| ಲೆಕ್ಕಿಸಿ ಕಳೆಯಿರಿ ಸಂಸಾರ ||ಅಪ||

ಲೆಕ್ಕವ ತಿಳಿದರೆ ದುಃಖವೆ ಇಲ್ಲ|

ಸಿಕ್ಕನು ಬಿಡಿಸಲುಬಹುದಲ್ಲಾ||

ಸಿಕ್ಕಿದೆ ಗುರುವಿಗೆ ಲೆಕ್ಕವಿದೆಲ್ಲಾ|

ಲೆಕ್ಕವ ಮೀರಿದ ಶಿವಬಲ್ಲಾ ||1||

ಎಲ್ಲಾ ಶಾಸ್ತ್ರಕೆ ಮೂಲವು ಲೆಕ್ಕ|

ಎಲ್ಲರಿಗರಿಯದು ಇದು ಪಕ್ಕಾ||

ಬಲ್ಲವರಿಗೆ ನಿಜ ತೋರುವ ಲೆಕ್ಕ|

ಸುಳ್ಳನು ಸೇರದು ಇದು ಚೊಕ್ಕ ||2||

ಕೂಡುವ ಲೆಕ್ಕದಿ ಬಂದಿತು ಜನ್ಮ|

ಕೂಡಿ ಕಳೆವುದೇ ಸದ್ಧರ್ಮ ||

ಕೂಡಿ ಕಳೆದ ಮೇಲುಳಿದುದೆ ಬ್ರಹ್ಮ|

ನೋಡಲು ತಾನಿದು ನಿಷ್ಕರ್ಮ ||3||

ಗುಣಾಕಾರವೇ ಸಗುಣದ ಮರ್ಮ|

ಗುಣರಹಿತವೆ ನಿರ್ಗುಣ ಬ್ರಹ್ಮ||

ಗುಣಕವ ಭಾಗಿಸಿ ನಿಲ್ಲುವ ಶೇಷವು|

ಗಣನಾತೀತವು ನಿರ್ಗುಣವು ||4||

ಸೊನ್ನೆಯೆ ಲೆಕ್ಕಕೆ ಮೀರಿದ ಪೂಜ್ಯ|

ಪೂರ್ಣವು ತಾನಿದು ಅವಿಭಾಜ್ಯ||

ಶೂನ್ಯವೆ ಬ್ರಹ್ಮದ ನಿಜಸಾಮ್ರಾಜ್ಯ|

ಭಿನ್ನತೆ ನರಹರಿಯೊಳು ತ್ಯಾಜ್ಯ ||5||

ಎಂಥಾ ಮಹಿಮನು ಸದ್ಗುರುನಾಥನು |

ಚಿಂತನ ಮಾತ್ರದೊಳೊಲಿಯುವನು ||ಪ||

ಸಂತ ಸಾಧುಗಳ | ಪಂಥವ ತೋರಿಸಿ |

ಚಿಂತೆಗಳೆಲ್ಲವ ಹರಿಸಿದನು ||ಅ|ಪ||

ಮೂರೇಳ್ ಸಾಸಿರ | ದಾರುನೂರು ಜಪ |

ತೀರಿಪನೊಂದೇ ದಿನದಲ್ಲಿ ||

ಮೂರಕ್ಷರಗಳ ಮಂತ್ರದಿಂದ ಭವ |

ಹಾರಿಸಿದನು ಕ್ಷಣದಲ್ಲಿ ||1||

ಈರೇಳ್ ಜಗವ ಶ | ರೀರದಿ ಧರಿಸಿದ |

ಕಾರಣ ಬ್ರಹ್ಮನು ತಾನಾದ ||

ಮೂರವಸ್ಥೆಗಳ ಸಾಕ್ಷೀರೂಪವ |

ತೋರುತ ಮಾಡಿದ ಸದ್ಬೋಧಾ ||2||

ಅಕ್ಷಯವಾಗಿರು | ವಕ್ಷರ ಬ್ರಹ್ಮವ |

ತಕ್ಷಣ ತೋರ್ಪನು ತನ್ನೊಳಗೆ ||

ಶಿಕ್ಷಾರಕ್ಷಣ ಸಮರ್ಥ ನರಹರಿ |

ರಕ್ಷಿಪನೆಲ್ಲರ ಧರೆಯೊಳಗೆ ||3||

ಮಹಾಮಹಿಮನು | ಮಹಾ ಕಾರಣದಿ |

ಮಹೀಪ್ರಕಾಶವ ಮಾಡುವನು ||

ಅಹೀಂದ್ರ ಭೂಷಣ | ವಿಹಾರಗೈವನು |

ಅಹೋರಾತ್ರಿ ಸಂಚಾರವನು ||4||

ವಿಚಾರ ಸಾರನು | ಶುಚಿಸ್ವರೂಪನು |

ಅಚಿಂತ್ಯ ರೂಪನು ತಾನಿಹನು ||

ವಿಚಿತ್ರ ಚರಿತ್ರ | ಪ್ರಚಾರ ಪವಿತ್ರ |

ಅಚಲಾತ್ಮಕ ನರಹರಿ ತಾನು ||5||

ಎಲ್ಲವು ನಿನ್ನೊಳಗಿರುವಲ್ಲಿ| ಭಯ|

ಗೊಳ್ಳುವೆ ಯಾಕೀ ಭುವಿಯಲ್ಲಿ ||ಪ||

ಎಲ್ಲವ ನಿಶ್ಚಯ ಮಾಡುತಲೀ | ನೀ|

ನಿಲ್ಲೈ ಪರಶಿವ ಪಾದದಲಿ ||ಅಪ||

ಶೃತಿಯಿರುತಿಹವಾಕಾಶದೊಳು| ನಿಜ|

ಸ್ಮೃತಿಯಿಹವಗ್ನಿಯ ತತ್ವದೊಳು ||

ಇತಿಹಾಸವು ಧರೆ ತತ್ವದೊಳು| ಸ|

ನ್ನುತ ಪೌರಾಣವು ವಾರಿಯೊಳು ||1||

ಕೃತಯುಗವುಂಟೈ ಪೃಥ್ವಿಯೊಳು| ಸ|

ಮ್ಮತ ತ್ರೇತಾಯುಗವಗ್ನಿಯೊಳು||

ಅತಿಶಯ ದ್ವಾಪರ ಗಗನದೊಳು| ನಿ|

ಶ್ಚಿತ ಕಲಿಯುಗವಿದೆ ವಾರಿಯೊಳು ||2||

ಇಳೆ ತತ್ವದೊಳಿದೆ ಋಗ್ವೇದ | ಶಿಖಿ|

ಸ್ಥಲದಲ್ಲಿಹುದು ಯಜುರ್ವೇದ|

ಜಲದೊಳಗಿದೆ ಸಾಮದ ವೇದ| ನಭ|

ದೊಳಗಿಹುದಥರ್ವಣದ ವೇದ ||3||

ಧರೆಯ ತತ್ವದೊಳು ಧರ್ಮವಿದೆ| ವಿ|

ಸ್ತರ ಜಲತತ್ವದೊಳರ್ಥವಿದೆ||

ಮೆರೆವಗ್ನಿಯೊಳೇ ಕಾಮ್ಯವಿದೆ| ಅಂ|

ಬರ ತತ್ವದೊಳೇ ಮೋಕ್ಷವಿದೆ ||4||

ದಾನವು ಆಪೋ ತತ್ವದೊಳು| ತಪ|

ತಾನಿದೆ ಪೃಥ್ವೀ ತತ್ವದೊಳು||

ನಾನಾ ಯಜ್ಞಗಳಗ್ನಿಯೊಳು | ಸಂ|

ಧಾನವು ನರಹರಿ ಬೋಧೆಯೊಳು ||5||

ಅಜಪಾ ಮಂತ್ರವ ಜಪಿಸುವ ಯೋಗಿ |

ನಿಜವನು ಕಾಣುವ ಚಿರಸುಖಿಯಾಗಿ ||ಪ||

ಸುಜನಕೆ ಪೂಜ್ಯನು ಪರಮ ವಿರಾಗಿ |

ತ್ರಿಜಗಕೆ ಪಾವನನೀ ಶಿವಯೋಗಿ ||ಅ|ಪ||

ಜಪಿಸದೆ ತಾನೇ ಜಪಿಸುವ ಮಂತ್ರ |

ತ್ರಿಪುಟಿಗೆ ಕಾರಣ ಬ್ರಹ್ಮದ ತಂತ್ರ ||

ಚಪಲರಿಗೆಂದಿಗು ಸಿಕ್ಕದು ಸೂತ್ರ |

ಜಪತಪ ಯೋಗಕೆ ಸಾಧನ ಮಾತ್ರ ||1||

ಪೂರಕ ರೇಚಕ ಕುಂಭಕ ಯೋಗ |

ದ್ವಾರದಿ ಸತತವು ನಡೆಯುವ ಯೋಗ ||

ತೋರುವುದಷ್ಟಾಂಗದ ಸಂಯೋಗ |

ತಾರಕ ಮಂತ್ರಾಧಾರವಿದೀಗ ||2||

ಸೃಷ್ಟಿ ಸ್ಥಿತಿ ಲಯ ಕಾರಣ ಮಂತ್ರ |

ಸ್ಪಷ್ಟದಿ ತಿಳಿಯಲು ಹಂಸನ ಮಂತ್ರ ||

ವ್ಯಷ್ಟಿಯನಳಿವ ಸಮಷ್ಟಿಯ ತಂತ್ರ |

ಶ್ರೇಷ್ಠವು ನರಹರಿ ಸೋಹಂ ಸೂತ್ರ ||3||

ಜ್ಯೋತಿ ಲಿಂಗವನು| ಪೂಜಿಸಿರಾತ್ಮ | ಜ್ಯೋತಿ ಲಿಂಗವನು ||ಪ||

ನೇತ್ರ ಮಧ್ಯದೊಳಿರ್ದು| ಜ್ಯೋತಿಲಿಂಗವುತೋರ್ದು||

ಗಾತ್ರವೆಲ್ಲಕೆ ತಾನೆ| ಸೂತ್ರವಾಗಿರುತಿರ್ಪ ||ಅಪ||

ಧರೆಯಲ್ಲಿ ಬಂದು| ಗಂಧದ ಪೂಜೆ| ಧರಿಸುತ್ತ ನಿಂದು||

ಚರಿಸುವ ಹಂಸನ | ಬೆರೆಯುತ್ತಲನುದಿನ||

ಪರಮಹಂಸನ ಕೂಡಿ| ಮೆರೆವ ಲಿಂಗವ ನೋಡಿ ||1||

ಜಲದೊಳು ಸೇರಿ| ಸುರಸದ ಪೂಜೆ| ನಲಿಸುತ್ತ ತೋರಿ||

ಬೆಳಗುವ ಮಂತ್ರದ| ಬಲದಿಂದ ವೇದದ||

ಕಳೆಯಾಗಿ ತೋರುವ| ತಿಳಿವಾಗಿ ಸಾರುವ ||2||

ಅಗ್ನಿಯೊಳು ನಿಂತು| ರೂಪದ ಪೂಜೆ| ಪ್ರಜ್ಞೆಯೊಳಾಂತು||

ಯಜ್ಞ ಜಾಗ್ರದಿ ಮಾಡಿ| ವಿಘ್ನವಿಲ್ಲದೆ ಕೂಡಿ|

ಪ್ರಾಜ್ಞನೆನ್ನಿಸಿ ಸುಪ್ತಿ| ಮಗ್ನಾನಂದದೊಳಿರ್ಪ ||3||

ಮಾರುತ ಸ್ಥಲದಿ| ಸ್ಪರ್ಶದ ಪೂಜೆ| ಸೇರಿರ್ಪ ಬಲದಿ||

ಸಾರಿ ಲಿಂಗವು ಸ್ಪರ್ಶ | ತೋರುತ್ತಲತಿ ಹರ್ಷ ||

ಮೀರಿಶಕ್ತಿಯ ಯೋಗ| ದ್ವಾರವ ಕಾದಿರ್ಪ ||4||

ಅಂಬರದೊಳಿರುತಾ| ಶಬ್ದದ ಪೂಜೆ| ಗಿಂಬಾಗಿನಿರುತಾ||

ತುಂಬಿ ಪರಿಪೂರ್ಣತ್ವವೆಂಬರ್ಧ ಮಾತ್ರೆಯ|

ನಂಬಿ ನರಹರಿಯ ಪಾ| ದಾಂಬುಜವನು ಸೇರಿ ||5||

ನಿನ್ನ ಪಾಲಿನ ದೈವ| ನಿನ್ನೊಳಗಿರಲಿಕ್ಕೆ|

ಇನ್ನು ಚಿಂತಿಸಲೇಕೆ ವ್ಯರ್ಥ ಜೀವಾತ್ಮ ||ಪ||

ನಿನ್ನ ಪಾಲಿನ ದೈವ| ನಿನ್ನ ಕೈಬಿಡಲಾಗಿ||

ಅನ್ಯ ದೈವವು ಬಂದು| ನಿನ್ನ ಕಾಪಾಡುವುದೆ ||ಅಪ||

ನಿತ್ಯವಿಪ್ಪತ್ತೊಂದು ಸಾವಿರದಾರ್ನೂರು |

ಸುತ್ತು ಕಾವಲು ಬಂದು ಪೋಗುತ್ತಲಿರುವಾ||

ಪ್ರತ್ಯಕ್ಷವಾಗಿರ್ಪ ಪರ ದೈವವನು ಬಿಟ್ಟು|

ವ್ಯರ್ಥ ಪರದೈವಗಳ ಮೊರೆ ಬೀಳುತಿರ್ಪೆ ||1||

ಈ ದೇವರನು ಬಿಟ್ಟು| ಯಾವ ದೇವರುಯಿಲ್ಲ|

ಈ ದೇವರೊಳಗುಂಟು| ಎಲ್ಲ ದೈವಗಳು||

ಆ ದೇವರೀದೇವರಾದಿ ದೈವವೆಯಿದು|

ಮೇದಿನಿಯೊಳಗುಂಟು ಸಾಧಿಸಿ ನೋಡು ||2||

ಯೋಗಂಗಳೊಳು ದೈವ| ಯೋಗದಿಂದಲೆ ಸರ್ವ|

ಭೋಗ ಭಾಗ್ಯಗಳುಂಟು ಕೇಳು ಜೀವಾತ್ಮ ||

ಶ್ರೀಗುರು ನರಹರಿ ಯೋಗಿ ಪಾದಂಗಳಿಗೆ |

ಬಾಗಿದಾಗಲೆ ಜ್ಞಾನಯೋಗ ನಿನಗಾಗುವುದು ||3||

ಅಬ್ಬಬ್ಬಾಯಿದು ಘಟಸರ್ಪ| ಯಾ|

ರೊಬ್ಬರ ತಾ ಕೈಬಿಡದಪ್ಪ ||ಪ||

ನಿಬ್ಬರ ನೋಡಲು ಬಲುದರ್ಪ| ನೀ|

ತಬ್ಬಿಕೊಂಡು ಇರಬೇಕಠಿಜಿಪ್ಪ ||ಅಪ||

ಮಂತ್ರಾಧೀನವು ಈ ಸರ್ಪ | ಗುರು|

ಮಂತ್ರ ಧ್ಯಾನವು ಬಲಿದಿರ್ಪ ||

ತಂತ್ರವೆ ಯೋಗವು ನೋಡಪ್ಪ| ತನು|

ಯಂತ್ರದ ಕೀಲೇ ತಾನಪ್ಪ ||1||

ಬಿಡುವಿಲ್ಲದೆ ಚರಿಸುತ್ತಿಹುದು|

ಜಗದೊಡೆಯನ ಕೊರಳಿಗೆ ಸುತ್ತಿಹುದು||

ನಡುನಾಡಿಯ ಸೇರುತ್ತಿಹುದು| ಸ|

ನ್ನುಡಿ ಮಂತ್ರವನಾಡುತ್ತಿಹುದು ||2||

ನಿದ್ರೆಯ ಕಾಣದ ಘಟಸರ್ಪ| ಪರ|

ಮುದ್ರೆಯ ಸಾಧಿಸಲೈತರ್ಪ||

ಭದ್ರ ಸಮಾಧಿಯ ಸಂದಿರ್ಪ |

ಭವ| ಛಿದ್ರಿಸಿ ನರಹರಿ ಬಂದಿರ್ಪ ||3||

ಎಲ್ಲಿ ಸಿಕ್ಕದು ಇಂಥ ಮುತ್ತಿನ ಮಾಲೆ|

ಉಲ್ಲಾಸವಾಯ್ತವ್ವ ಧರಿಸಿದ ಮೇಲೆ |

ಕಳ್ಳರಿಗೆ ಸಿಕ್ಕದು ಸುಳ್ಳರಿಗೆ ದಕ್ಕದು|

ಒಳ್ಳೆ ಭಕ್ತರಿಗಿತ್ತ ಗುರುನಾಥನೊಲಿದು ||ಅಪ||

ಮೂರೇಳು ಸಾವಿರದಾರ್ನೂರು ಮುತ್ತು|

ಈರೇಳು ಲೋಕಕ್ಕೆ ತಾನೆ ಸಂಪತ್ತು||

ಭಾರಿ ಬೆಲೆ ಬಾಳುವ ಜಾತಿಯ ಮುತ್ತು|

ಹಾರ ಮಾಡಿರುವಂಥ ಗುರುವಿಗೆ ಗೊತ್ತು ||1||

ಮುಕ್ತಾತ್ಮ ಧರಿಸಿದ ಮುಕ್ತಾಹಾರ|

ಭಕ್ತಿ ಸುಜ್ಞಾನ ವೈರಾಗ್ಯಾಧಾರ||

ಯುಕ್ತಾನುಭವಸಾರ ಸರ್ಪಾಕಾರ|

ಸೂಕ್ತ ಯೋಗದ್ವಾರ ಸಾಕ್ಷಾತ್ಕಾರ ||2||

ನಡೆಯೊಳು ಹಂಸ ಸ್ವರೂಪಾದ ಮಾಲೆ|

ನುಡಿಯೊಳು ಸೋಹಂ ಸ್ವರೂಪದ ಕೀಲೆ||

ನಡೆ ನುಡಿ ಮಧ್ಯದೊಳಿದು ಕಂಠಮಾಲೆ|

ಪೊಡವಿ ತತ್ವದೊಳುಂಟು ನರಹರಿಯ ಲೀಲೆ ||3||

ಮುಕ್ತ ದ್ವಾರವ ಸೇರೆಲೆ ನಾರಿ|

ಮುಕ್ತಿಯ ಮಂದಿರ ಸೇರುವ ದಾರಿ ||ಪ||

ಭಕ್ತಿಯೊಳರ್ಚಿಸು ಗಣಪನ ಸಾರಿ|

ರಕ್ತಿಯ ಹಂಬಲ ಬಿಡೆ ವೈಯ್ಯಾರಿ ||ಅಪ||

ಮೂಲಾಧಾರವೆ ಮುಕ್ತ ದ್ವಾರ|

ಕಾಲಾಧಾರವು ಸತ್ಯ ವಿಚಾರ ||

ಸ್ಥೂಲ ಶರೀರ ವಿಕಾರಕೆ ದೂರ|

ಲೀಲಾಜಾಲದ ಮಂತ್ರಾಧಾರ ||1||

ಮೂರವಸ್ಥೆಯೊಳು ಮುಚ್ಚದದ್ವಾರ|

ಹಾರುವ ಹಂಸನ ಬಲು ಸಂಚಾರ||

ತೋರಿತಾದಿ ಶೇಷನ ಅವತಾರ||

ಧಾರಿಣಿಯೊಳು ಮಹಕಾರಣ ಶರೀರ ||2||

ಗಂಧದ ದ್ವಾರಾನಂದ ವಿಹಾರ|

ನಿಂದಿಹ ಧನಪತಿಯಾದ ಕುಬೇರ||

ಬಂಧುರ ಯೋಗದ ಸಾಕ್ಷಾತ್ಕಾರ|

ಹೊಂದಿರು ನರಹರಿ ಬೋಧಾಸಾರ ||3||

ಕುಣಿಯುತ್ತಲಿರುವಂಥ ನವಿಲೇ| ನಿನ್ನ |

ಕುಣಿತಕ್ಕೆ ಸಾಲದು ಬ್ರಹ್ಮಾಂಡ ಬಯಲೇ ||ಪ||

ದಣಿವಿಲ್ಲದೊಲು ಕುಣಿವ ಲೀಲೆ| ನೋಡಿ|

ಮಣಿದಿತ್ತು ಜಗವೆಲ್ಲ ಬೆರಗಾದ ಮೇಲೆ ||ಅಪ||

ಮೈಯೆಲ್ಲ ಕಣ್ಣಾದ ನವಿಲೆ| ಸರ್ವ |

ಕಾಯ ಕರ್ಮಕ್ಕೆಲ್ಲ ನೀನಾದೆ ಕೀಲೆ||

ಮಾಯೆಗಾಶ್ರಯದ ಸಂಕೋಲೆ | ಕಂಡ|

ಛಾಯೆಗೆ ಮರುಳಾಗಿ ಕುಣಿವಂಥ ನವಿಲೆ ||1||

ಸೌಂದರ್ಯ ನಿಧಿಯಾಗಿ ಮೆರೆವೆ| ಲೋಕ|

ಬಾಂಧವ್ಯಕೆಲ್ಲ ಕಾರಣವಾಗುತಿರುವೇ||

ಆಂದೋಲನವನೆಬ್ಬಿಸಿರುವೇ| ನಿನ್ನ|

ಮುಂದೆ ಕಾಮನು ಕುಣಿಯಲಾಗ ಮೈಮರೆವೆ ||2||

ಮೂರು ರೂಪಾಗುತ್ತ ಬಂದೇ| ಜಾಗ್ರ |

ತೋರಿ ಕುಣಿದಾಟಕ್ಕೆ ಮೊದಲಾಯಿತೆಂದೇ||

ಮೀರಿ ಸುಪ್ತಿಯ ಕೂಡಿ ನಿಂದೇ| ಸ್ವಪ್ನ||

ಸೇರಿ ಸುಮ್ಮನೆಯಿದ್ದು ನರಹರಿಯೆಂದೇ ||3||

ನುಡಿಯೇ ಪರಶಿವನೊಡಲಮ್ಮ | ನಿ|

ನ್ನೊಡಲೇ ಶಿವನಿಗೆ ಗುಡಿಯಮ್ಮ ||ಪ||

ನುಡಿಯೊಳು ಶಿವನನು ಹಿಡಿಯಮ್ಮ| ಶಿವ|

ನಡಿಯೇ ಪ್ರಣವದ ಮುಡಿಯಮ್ಮ ||ಅಪ||

ನಡೆಯೆನ್ನುವ ನಾಗಾಭರಣ| ಸ |

ನ್ನುಡಿಯೆನ್ನುವ ಯೋಗಾಚರಣ||

ಪಿಡಿದಾಡುತಲಿದೆ ಶಿವಚರಣ| ನೀ|

ಹಿಡಿದರೆ ನಿನಗಿಲ್ಲವು ಮರಣ ||1||

ನಡೆ ಸಂಧಾನವೆ ತತ್ವಮಸಿ| ಸ|

ನ್ನುಡಿ ಸಂಯೋಗವೆ ತ್ವಂತದಸಿ||

ನಡೆನುಡಿಯೆರಡನು ಸಂಗಮಿಸಿ | ಶಿವ|

ನಡುವೇನಿಂದನು ಸಂಭ್ರಮಿಸಿ ||2||

ಮಂದಿಯ ಗೊಡವೆಯು ಯಾಕಮ್ಮ | ಶಿವ|

ನೊಂದಿಗೆ ನೀನಿರಬೇಕಮ್ಮ ||

ಬಂಧುವೇ ನರಹರಿ ನೋಡಮ್ಮ | ಭವ |

ಬಂಧವ ದೂರವ ಮಾಡಮ್ಮ ||3||

ಹಾವಾಡಿಗ ಬಂದಾ|

ಹಾವಿನ ಆಟವ ನೋಡೆಂದಾ ||ಪ||

ಹಾವಾಡಿಗ ಗುರುನಾಥ |

ಜೀವನ ಪಾವನ ಸುಖದಾತ ||1||

ಏಳು ಹೆಡೆಯ ಘಟಸರ್ಪ |

ಬಾಳುವೆಗಾಗಿಹುದನು ತೋರ್ಪ ||2||

ತನುವೆನ್ನುವ ಹುತ್ತದೊಳು|

ಅನುಗಾಲವು ಚರಿಸುತಲಿರಲು ||3||

ರೇಚಕ ಪೂರಕವೆನಿಸೀ|

ಗೋಚರಿಪುದು ಕುಂಭಕ ವಾಸಿ ||4||

ವಸುಧೆಯೊಳಾಡುತಲಿಹುದು |

ಬುಸುಗುಟ್ಟುತಲಿದೆ ತಾನಲಿದು ||5||

ಕಚ್ಚದ ಕೊಲ್ಲದ ಹಾವು|

ಎಚ್ಚರವಾಗಿಹುದನು ದಿನವು ||6||

ಗಾಳಿಯೆ ಇದಕಾಹಾರ |

ಕೀಲಿದು ಯೋಗಕ್ಕಾಧಾರ ||7||

ಇದರ ತಲೆಯೊಳಿದೆ ರತ್ನ |

ಇದ ಪಡೆವುದೆ ಯೋಗಿಯ ಯತ್ನ ||8||

ಮಂತ್ರಕೆ ವಶವೀ ಸರ್ಪ|

ತಂತ್ರವ ನರಹರಿ ಗುರು ತೋರ್ಪ ||9||

ಸಾಕಿಕೊಳ್ಳಿರವ್ವ ತಂಗಿ ಈ ಕೂಸು| ಮುಂದೆ |

ಬೇಕು ನಿಮ್ಮ ಸಾಕಲಿಕ್ಕೆ ಈ ಕೂಸು ||ಪ||

ಲೋಕವನ್ನೆ ಸಾಕಬಲ್ಲುದೀಕೂಸು| ನಿಮ್ಮ |

ಶೋಕವನ್ನೆ ನೀಗಿಬಿಡುವುದೀ ಕೂಸು ||ಅಪ||

ಮರವೆಯೆಂಬುದರಿಯದವ್ವ ಈ ಕೂಸು|

ಅಚ್ಚ| ಅರಿವೆಂದೆನ್ನಿಸಿರುವುದವ್ವ ಈ ಕೂಸು||

ಪೊರೆದವರ್ಗೆ ಸುಖವ ನೀವುದೀ ಕೂಸು| ಯಾವ|

ಪರಿಯ ರೋಗರುಜಿನ ಕಾಣದೀಕೂಸು ||1||

ಅಳುವುದನ್ನೆ ಕಾಣದವ್ವ ಈ ಕೂಸು| ಮುಂದೆ|

ಅಳುವ ಜನರ ನಗಿಸುತಿರ್ಪುದೀ ಕೂಸು||

ಬೆಳೆಸಿರವ್ವ ಶ್ರದ್ಧೆಯಿಂದ ವೊಲವಿಂದ| ನಿಮ್ಮ |

ಬಳಿಯೊಳಿದ್ದು ಕೊಡುವುದವ್ವ ಆನಂದ ||2||

ದಿನವು ಶ್ರವಣವೆಂಬ ಹಾಲು ಕುಡಿಸುತ್ತ | ಸತ್ಯ |

ಗುಣದ ತಿಂಡಿ ತೀರ್ಥವನ್ನು ಕೊಡಿಸುತ್ತ ||

ಮನನವೆಂಬ ತೊಟ್ಟಿಲಲ್ಲಿ ತೂಗುತ್ತ | ಜ್ಞಾನ |

ವೆನಿಪ ಕೂಸು ನರಹರೀಂದ್ರ ತಾನಿತ್ತ ||3||

ನೋಡು ನಿನ್ನೊಳು ಬ್ರಹ್ಮವಾ| ತನು|

ಕೂಡುತಾಡುವ ಧರ್ಮವಾ ||ಪ||

ಕೂಡಿ ಮಂತ್ರದ ಮರ್ಮವಾ| ಈ|

ಡಾಡು ಹಿಂದಿನ ಕರ್ಮವಾ ||ಅಪ||

ನಡೆಯೊಳಾಡುತಲಿರ್ಪುದು| ಸ|

ನ್ನುಡಿಯ ಕೂಡುತ ಬರ್ಪುದು||

ಒಡಲ ಕರ್ಮಕೆ ಸಿಕ್ಕದು | ನಿಲು|

ಕಡೆಯೊಳಾರಿಗು ದಕ್ಕದು ||1||

ಶರೀರ ಹೊಗುವುದೆ ಪೂರಕ| ಇದು|

ಶರೀರ ಬಿಡಲದು ರೇಚಕ||

ಶರೀರದೊಳು ನಿಲೆಕುಂಭಕ | ಈ|

ಪರಿಯೆ ಯೋಗದ ಕಾಯಕ ||2||

ಯೋಗವೇ ತಾನಾದುದು | ಶಿವ |

ಯೋಗಿಗೇ ವಶವಾದುದು ||

ಭೋಗಿಗೆಂದಿಗು ತೋರದು | ಸುವಿ |

ರಾಗಿಯನು ಬಿಡಲಾರದು ||3||

ನಿಂತು ಕುಂಭಕ ದಲ್ಲಿದು | ತನು |

ಯಂತ್ರವಾಡಿಸಬಲ್ಲುದು ||

ಮಂತ್ರವೆನ್ನಿಸಿ ನಿಲ್ವುದು | ಸ್ವಾ |

ತಂತ್ರ ರೂಪವ ತಾಳ್ವುದು ||4||

ದೇಹವೆಲ್ಲವ ಹಿಡಿದಿದೆ | ನಿ|

ರ್ದೇಹಿಯೆನ್ನಿಸಿ ನಡೆದಿದೆ ||

ಸೋಹಮೆನ್ನುತ ನುಡಿದಿದೆ| ನಿ|

ರ್ಮೋಹಿ ನರಹರಿಯೊಡಲಿದೇ ||5||

ನೋಡೈ ಶಿವನಾ | ಕ್ರೀಡಾ ಭವನಾ |

ರೂಢಿಸಿ ತುಂಬಿಹುದೀ ಭುವನಾ ||ಪ||

ಕೂಡುತದೇಹವ ಝಾಡಿಸಿ ಮೋಹವ ||

ಪಾಡುತ ಮಂತ್ರವ ಶಿವ ಬರುವಾ ||ಅಪ||

ನಾದ ಪ್ರಕಾಶವ | ನಾದರಿಸುತ ಶಿವ |

ವೇದಾಧ್ಯಯನವ ಶೋಧಿಸುವಾ||

ಬೋಧಾಮೃತವಾ| ಭಕ್ತರಿಗೀಯುವ|

ನಾದ ಸಮಾಧಿಯ ಸಾಧಿಸುವಾ ||1||

ಬಂಧಿಸಿ ಚಂದ್ರನ | ಸಂಧಿಸಿ ಸೂರ್ಯನ|

ಹೊಂದಿಸಿ ಯಗ್ನಿಯ ಬಲ ಮಾಡಿ||

ಮುಂದೆ ಸುಷುಮ್ನಾ | ಮಂದಿರ ದ್ವಾರದಿ||

ನಿಂದನು ಮಂತ್ರವ ಘೋಷಿಸುತ ||2||

ಕುಂಭಕ ಯೋಗ| ತುಂಬುತ ಬೇಗ |

ಶಂಭುವಾಗಮಿಸಿದ ತಾನೀಗ ||

ಅಂಬುಧಿಯೊಳಗೆವಿ| ಜೃಂಭಿಸಿ ಮೊಳಗೆ|

ಸಂಭ್ರಮವಾಯಿತು ನರಹರಿಗೆ ||3||

ಏಕ ದಾರಿ ಸಿಕ್ಕಿತೆನಗೆ ಏಕ ದಾರಿ| ಸದ್ವಿ|

ವೇಕಕೆಲ್ಲಾ ದಾರಿಯಾದ ಏಕ ದಾರಿ ||ಪ||

ಶೋಕ ದೂರ ಮಾಡಬಲ್ಲ ಏಕ ದಾರಿ| ಈ |

ಲೋಕಕೆಲ್ಲ ಶಾಂತಿಯೀವ ಏಕ ದಾರಿ ||ಅಪ||

ಮೂರು ವರ್ಣ ಒಂದೆಯಾದ ಏಕ ನಾದ | ಕೊನೆಯ|

ಸೇರಿ ಏಕವಾಗಿ ನಿಂತ ಏಕ ನಾದ||

ಮೀರಿದರ್ಧ ಮಾತ್ರೆಯೆನಿಸಿದೇಕ ನಾದ | ನಿರ್ವಿ|

ಕಾರ ಬ್ರಹ್ಮ ಸೇರಿ ನಿಂತ ಏಕ ನಾದ ||1||

ಒಂದೆ ತಂತಿ ಒಂದೆ ಕಾಸು ಒಂದೆ ಬುರುಡೆಯು ||

ಒಂದೇ ಕುದುರೆ ಒಂದೇ ಗಣೆಯು ಒಂದೇ ಬಿರಡೆಯು||

ಹೊಂದಿಯೆಲ್ಲ ವೊಂದೆಯಾದ ಏಕ ದಾರಿಯು| ತಾನು |

ಮುಂದೆ ಮುಕ್ತಿಯಾಗಲಿಕ್ಕೆ ಒಂದೆ ದಾರಿಯು ||2||

ನಾದ ತಂತಿಯಾಗಿ ನುಡಿದ ಏಕ ನಾದ | ಬಿಂದು |

ವಾದ ಕಾಸು ಹೊಂದಿ ನಿಲುವ ಏಕ ನಾದ || ಬೋಧ

ಕಳೆಯ ಬಿರಡೆಯುಳ್ಳ ಏಕ ನಾದ| ನಮ್ಮ |

ವೇದಮೂರ್ತಿ ನರಹರೀಂದ್ರನಿತ್ತ ಬೋಧ ||3||

ಸಾಧು ಸಂತರಾದರಿಸುವೇಕ ದಾರಿ | ನಿತ್ಯ |

ಸಾಧಿಸಿದರೆ ಮುಕ್ತರಾಗುವೇಕ ದಾರಿ ||

ನಾದಮಾತ್ರವಾಗಿ ತೋರುವೇಕ ದಾರಿ | ಗುರು |

ಪಾದದಲ್ಲೆ ಲೀನಗೈಯುವೇಕ ದಾರಿ ||4||

ನುಡಿ ಮಂತ್ರಸಿದ್ಧವಾದುದೇಕ ದಾರಿ | ಹಂಸ |

ನಡೆ ಯಂತ್ರ ಶುದ್ಧವಾದುದೇಕ ದಾರಿ ||

ನಡುವೆ ತಂತ್ರದಿ ನಿಂತ ಏಕದಾರಿ | ತಾನೆ |

ಕಡು ಸ್ವತಂತ್ರವಾಗಿ ನುಡಿವೇಕ ದಾರಿ ||5||

ಜೀವ ಬ್ರಹ್ಮರೈಕ್ಯವಾದ ಏಕ ನಾದ | ಒಂದೇ |

ದೇವ ವರ್ಣಮಾತ್ರ ನುಡಿಯುವೇಕ ನಾದ ||

ಸಾವು ಹುಟ್ಟು ಮೀರಿ ನಿಂತ ಏಕ ನಾದ | ಗುರು |

ದೇವ ನರಹರೀಂದ್ರ ಕೊಟ್ಟ ಏಕ ನಾದ ||6||

ಜ್ಞಾನ ಯೋಗವ ತಿಳಿಯೊ | ಅ|

ಜ್ಞಾನವ ಕಳೆಯೊ || ಆನಂದ ಭಾವ ತಳೆಯೊ ||ಪ||

ಸ್ವಾನುಭಾವ ಸಂಧಾನದಿ ನಲಿಯೊ |

ಮೌನದಿಂದ ಶಿವ ಧ್ಯಾನದಿ ಬಲಿಯೊ ||ಅಪ||

ರೇಚಕ ಪೂರಕ ಕುಂಭಕದೊಳು ಗುರು|

ಸೂಚಿಸಿರುವ ಪರಿಯಾಚರಿಸುತ್ತಲಿ ||1||

ತಾರಕ ಯೋಗ ವಿಚಾರವ ಮಾಡುತ|

ತಾರಕ ಮಂತ್ರದ ಕೊನೆಯೊಳು ನಿಲ್ಲುವ ||2||

ನಾದಬ್ರಹ್ಮಾ | ರಾಧನೆಯಲಿ ವರ |

ವೇದಗಳೆಲ್ಲವು | ಬೋಧೆಯೊಳಿರುವ ||3||

ನಡೆ ನುಡಿಗಳ ನಿಲು | ಕಡೆಯಲಿ ನಿಲ್ಲುತ |

ದೃಢತರ ಜ್ಞಾನವ | ಪಡೆವ ವಿಧಾನದ ||4||

ಸಗುಣವನೆಲ್ಲವ ನಿರ್ಗುಣಗೈಯುವ|

ಅಗಣಿತ ಬ್ರಹ್ಮವ ನಗಲದೆ ಸೇರುವ ||5||

ಹೊರಗೊಳಗೊಂದಾಗಿರುತಿಹ ಬ್ರಹ್ಮವ |

ಬೆರೆತುಕೊಂಡು ಮೈ ಮರೆಯುತ ನಿಲ್ಲುವ ||6||

ತಾನೆ ತಾನಹ ಏನೊಂದಿಲ್ಲದ |

ಸ್ವಾನುಭಾವ ಪಡೆ ಶ್ರೀ ನರಹರಿಯೊಳು ||7||

ಜ್ಞಾನ ನಂದಾ ದೀಪವು | ಸು|

ಜ್ಞಾನ ನಂದಾ ದೀಪವು ||ಪ||

ಜ್ಞಾನಿಗಳ ಹೃತ್ಕಮಲ ದೇವ|

ಸ್ಥಾನದಲ್ಲಿಹ ದೀಪವು ||ಅಪ||

ದೇವನಿರಿಸಿದ ದೀಪವು | ಸ|

ದ್ಭಾವ ಧರಿಸಿದ ದೀಪವು || ಜೀವ ಭಾವದ ಕತ್ತಲು |

ಹರಿ| ದೀವ ಬೆಳಕಿದೆ ಸುತ್ತಲು ||1||

ಎಣ್ಣೆ ಬತ್ತಿಗಳಿಲ್ಲದೆ | ಜಗ | ವನ್ನು

ಬೆಳಗಿತು ನಿಲ್ಲದೆ || ಕಣ್ಣು ನೋಡಲಿಕಾಗದೆ |

ಬೆಳ| ಕನ್ನು ಬೀರುತ ಸಾಗಿದೆ ||2||

ಮೂಲ ಮಂತ್ರದೊಳಡಗಿದೆ| ಗುರು|

ಕೀಲು ತೋರಿಸ ತೊಡಗಿದೆ||

ಕಾಲ ಕರ್ಮವ ಮೀರಿದೆ | ಭವ|

ಮೂಲ ಛೇದಿಸಿ ತಾನಿದೆ ||3||

ನಂದದೆಂದಿಗೆ ನಿಂದಿದೆ| ಆ |

ನಂದ ಭಾವವ ಹೊಂದಿದೆ ||

ಮಂದಮತಿಗಳಿಗರಿಯದೆ | ಗ |

ರ್ವಾಂಧಕಾರವ ನೀಗಿದೆ ||4||

ಎಲ್ಲಿ ಹೊರಗಿದು ಕಾಣದು | ತ|

ನ್ನಲ್ಲೆ ನೋಡಲು ಕಾಂಬುದು||

ಎಲ್ಲರೊಳಗೂ ಇರ್ಪುದು | ಇದ|

ರಲ್ಲೆ ನರಹರಿ ತೋರ್ಪುದು ||5||

ಏಳು ಕೋಟಿ ಮೈಲಾರಲಿಂಗ ಬಂದಾ||

ಏಳು ಕೋಟಿ ಮಂತ್ರಗಳ ಸೈನ್ಯ ತಂದಾ ||ಪ||

ಏಳು ಚಕ್ರದೊಳಗಾಡಿ ತಾನೆ ನಿಂದಾ|

ಮೇಲೆ ಬಿದ್ದ ರಕ್ಕಸರನೆಲ್ಲ ಕೊಂದ ||ಅಪ||

ತನುವೆ ಮಣ್ಣು ಮೈಲಾರವಾಯಿತೆಂದಾ ||

ಮನವೆ ಹೊನ್ನು ಮೈಲಾರವಾಗಲೆಂದಾ||

ವನಿತೆ ಗಂಗೆಮಾಳಮ್ಮ ನುಡಿಯೊಳೆಂದಾ|

ವಿನುತಳಾದ ಗೌರಮ್ಮ ನಡೆಯೊಳೆಂದಾ ||1||

ಮಲ್ಲನೆಂಬಹಂಕಾರ ಸತ್ತು ಹೋದ||

ಸುಳ್ಳುಮಾಯ ಮಣಿಕ ತಲೆ ತೆತ್ತು ಹೋದ||

ಎಲ್ಲ ವೇದನಾಯಿಗಳು ಬೊಗಳಲೆಂದ|

ಚೆಲ್ವವೇಷ ಗೊರವಯ್ಯನಾಗಿ ನಿಂದಾ ||2||

ನಾದ ಬ್ರಹ್ಮ ಡಮರುಗವ ಬಾರಿಸುತ್ತ|

ವೇದ ಧರ್ಮ ಗುಟ್ಟುಗಳ ತೋರಿಸುತ್ತ|

ಆದಿ ದಕ್ಷಿಣಾಮೂರ್ತಿಯೆನ್ನಿಸುತ್ತ ||

ಬೋಧ ಮರ್ಮ ನರಹರಿಯ ಕೈಯೊಳಿತ್ತ ||3||

ಈಜು ಕಲಿಸಿದಾ| ಗುರುವು| ಈಜು ಕಲಿಸಿದಾ ||ಪ||

ರಾಜಯೋಗವೆಂಬ ಒಳ್ಳೆ ಈಜು ಕಲಿಸಿದಾ ||ಅಪ||

ಬುರುಡೆ ಕಟ್ಟಿದ| ಜ್ಞಾನ| ಬುರುಡೆ ಕಟ್ಟಿದಾ||

ದುರಿತ ಕೂಪದಲ್ಲಿ ಮುಳುಗದಂತೆ ಮಾಡಿದ ||1||

ಸನ್ನೆ ತಿಳಿಸಿದಾ| ಒಂದು| ಸೊನ್ನೆ ಕಲಿಸಿದಾ||

ಯನ್ನ ಭವದ ಭಾರವನ್ನೆ ಶೂನ್ಯವೆನಿಸಿದಾ ||2||

ಭಕ್ತಿ ಬಲಿಸಿದಾ | ಜ್ಞಾನ| ಶಕ್ತಿ ಸಲಿಸಿದಾ||

ಯುಕ್ತಿಯಿಂದ ಭವಸಮುದ್ರ ಪಾರು ಮಾಡಿದಾ ||3||

ಜಲದ ಭಯವನು | ಬಿಟ್ಟು | ನಲಿವುದೆಂದನು||

ಜಲವಿದೆಲ್ಲ ಮಂತ್ರಜಲವು ತಿಳಿವುದೆಂದನು ||4||

ಧ್ಯಾನ ನಂಬಿಸೀ| ಶಿವನ| ಜ್ಞಾನ ತುಂಬಿಸೀ|

ಜ್ಞಾನ ಸಿಂಧು ನರಹರೀಂದ್ರಯನ್ನ ಪಾಲಿಸಿ ||5||

ಯೋಗ ಮಾಯೆಯ ಗೆಲ್ಲದೆ | ಯೋಗಿಯೊಳಿರ್ಪ |

ಭೋಗ ವಾಸನೆ ಪೋಪುದೆ ||ಪ||

ಯೋಗಿ ಮಾಡಿದ | ಕಾಮ್ಯ |

ಯೋಗದಿ ಫಲಸಿದ್ಧಿ ||

ಅಗಲದರಾಸೆಯಿಂ| ಸಾಗುವನು ಜನ್ಮಕ್ಕೆ ||ಅಪ||

ಕರ್ಮ ಯೋಗಿಗಳೆಲ್ಲರು| ಫಲದಾಸೆಯೊಳು

ಜನ್ಮ ಹೊಂದುತಲಿರ್ಪರು||

ಕರ್ಮದಿಂದಲೆ ಪುಣ್ಯ| ಜನ್ಮ ಹೊಂದುತ ಬ್ರಹ್ಮ ||

ಧರ್ಮವರಿಯದೆ ಕಾಲ| ಕರ್ಮ ವಶರಾಗುವರು ||1||

ಯೋಗವಿಲ್ಲದ ಜೀವಿಯು| ಜಗದೊಳಗಿಲ್ಲ |

ಯೋಗ ಈಶ್ವರ ಸೇವೆಯು||

ತ್ಯಾಗ ಮಾಡುತ ಕರ್ಮ | ಯೋಗದಿಂದಲೆ ಜನ್ಮ ||

ನೀಗಿಕೊಳ್ಳುವ ಜ್ಞಾನ | ಯೋಗ ಸಂಜೀವನ ||2||

ಅರಿದು ರೇಚಕ ಪೂರಕ| ಕುಂಭಕ ಯೋಗ|

ಮೆರೆದು ಮಂತ್ರಾಧಾರಕ||

ವರ ಮಂತ್ರಯೋಗದಿ| ಬೆರೆಯುತ್ತ ಬ್ರಹ್ಮದಿ||

ನರಹರಿ ಗುರುಪಾದ| ಸ್ಥಿರಮುಕ್ತಿ ಸಂಪದ ||3||

ಪ್ರಸಾದ ಸಿಕ್ಕಿತೆನಗೆ | ಹಸಿವೆಯೆಂಬ

ವ್ಯಸನವಿಲ್ಲ ಬೋಧಾಮೃತ ||ಪ||

ಪ್ರಣವನಾದ ಸುಪ್ರಸಾದ| ಯನಗೆ ಸಂಪದಾ||

ಮನ ವಿನೋದಾವಾದಸ್ವಾದ | ನೆನಹಿಗೇ ಸುಧಾ ||1||

ಶ್ರವಣದಿಂದ ಮನನವಾಗಿ | ಸವಿಯಿದಾಯಿತು||

ಶಿವನಿಧಿ ಧ್ಯಾಸನವು ಬಲಿದು| ಭವವೆ ಹೋಯಿತು ||2||

ನರರಿಗೆಂದು ದೊರೆಯದಂಥ | ಸುರಸವಾದುದು ||

ಸುರರು ಉಂಡು ತೃಪ್ತಿಗೊಂಡು | ಮೆರೆಯುವಂಥದು ||3||

ಎಲ್ಲಿ ಎಂದರಲ್ಲೆ ತುಂಬಿ | ನಿಲ್ಲುತಿರ್ಪುದು ||

ಅಲ್ಲಿ ಇಲ್ಲಿ ಎಂಬ ಭೇದ | ವಿಲ್ಲದಿರ್ಪುದು ||4||

ಬಳಸಿದಂಥ ಬ್ರಹ್ಮಾಚಾರಿ| ಸಲಿಸುತಿರ್ಪನು ||

ತಿಳಿಯಲುಂಡುಪವಾಸಿ ತೃಪ್ತಿ| ಗೊಳುತಲಿರ್ಪನು ||5||

ಎಂಜಲೆಂದು ಅಂಜದಂತೆ| ಭುಂಜಿಸಿರ್ಪೆನು||

ಭಂಜಿಸುತ್ತ ಭವವ ನಾನೆ| ರಂಜಿಸಿರ್ಪೆನು ||6||

ಆದಿಯಲ್ಲೆ ನಾದದೊಳಗ | ನಾದಿ ಬಿಂದುವು ||

ಭೇದಿಸುತ್ತ ಬಂದು ಕಳೆಗೆ | ಹಾದಿಯಾಯಿತು ||7||

ಮೂರು ವರ್ಣ ಸೇರಿ ಮುಕ್ತಿ | ದ್ವಾರವಾಗಿದೆ ||

ಧೀರ ನರ ಹರೀಂದ್ರನುಕ್ತಿ | ಸಾರವಾಗಿದೆ ||8||

ಏಳು ಕೋಟಿ ಮಂತ್ರಕೆಲ್ಲ | ಕೀಲು ತಾನಿದು||

ಮೂಲ ಬ್ರಹ್ಮ ನರ ಹರೀಂದ್ರ | ಲೀಲೆಯಾದುದು ||9||

ನಂಬಿದೆ ಗುರು ಪಾದವ ಮನದೊಳು|

ತುಂಬಿದೆ ನಿಜ ಬೋಧವಾ ||ಪ||

ಅಂಬುಧಿಯೊಳಗೆ ವಿ| ಜೃಂಭಿಸಿ

ಮೊರೆಯುವ ಶಾಂಭವಿಯನುಭಾವವಾ ||ಅಪ||

ಎಚ್ಚರವನು ಕೂಡಿದೆ| ಬ್ರಹ್ಮದ |

ಅಚ್ಚರಿಗಳ ನೋಡಿದೆ ||

ಹುಚ್ಚರ ನುಡಿಗಳ| ತುಚ್ಛವ ಮಾಡಿದೆ||

ನಿಶ್ಚಯದೊಳಗಾಡಿದೆ ||1||

ಭೂತಗಳನು ಕೂಡದೆ| ಬ್ರಹ್ಮವು|

ಸ್ವಾತಂತ್ರ್ಯದೊಳಗಾಡಿದೆ||

ಚೇತನ ಮಾತ್ರದಿ ಸೂತ್ರವ ಹಿಡಿದಿದೆ||

ಸಾತಿಶಯಾನಂದದೇ ||2||

ನುಡಿಯೊಳು ತಾ ತುಂಬಿದೆ|

ಬ್ರಹ್ಮವು | ನಡೆಯೊಳು ಮೈದುಂಬಿದೆ||

ಒಡಲಿಗೆ ಸಾಕ್ಷಿಯು| ಕಡು ಸುಖಾಪೇಕ್ಷಿಯು||

ಒಡೆಯ ಶ್ರೀ ನರಹರಿಯು ||3||

ಹಂಸನನ್ನು ನೋಡೋ| ಪರಮಾ|

ಹಂಸನನ್ನು ಕೂಡೋ ||ಪ||

ಸಂಶಯಂಗಳೆಲ್ಲಾ | ಧ್ವಂಸ ಮಾಡಬಲ್ಲಾ||

ಹಿಂಸೆಯಿಲ್ಲದಿಹ ಯೋಗವ ಮಾಡೋ ||ಅಪ||

ಪೊಡವಿಯಲ್ಲಿ ತೂರಿ| ಸಂತತ|

ನಡೆದು ನಡೆದು ತೋರಿ||

ಬಿಡದೆ ಜಲವ ಸೇರಿ| ನುಡಿಯ ಬೆಡಗು ಸಾರಿ||

ಕೊಡವಿ ಏರುತಿದೆ ಗಗನ ವಿಹಾರಿ ||1||

ಸಪ್ತ ಚಕ್ರ ಬಳಸಿ| ಹಂಸನು| ಗುಪ್ತಗಾಮಿಯೆನಿಸಿ||

ಸಪ್ತ ಕೋಟಿ ಮಂತ್ರ| ವ್ಯಾಪ್ತವಾದ ತಂತ್ರ||

ತೃಪ್ತಿಯಾಂತ ನಿ| ರ್ಲಿಪ್ತ ಮಹಂತ ||2||

ಕಣ್ಣಿನಲ್ಲಿ ಸೇರಿ | ನಾನಾ | ಬಣ್ಣವನ್ನು ತೋರಿ |

ಬಣ್ಣವೆಲ್ಲ ಮೀರಿ | ಅನ್ಯವೆಲ್ಲ ಜಾರಿ |

ತನ್ನ ತಾನೆ ಕಂಡಾನಂದಿಸುವ ||3||

ನಾದವಾಗಿ ಬಂದು | ತಾನೇ | ವೇದವಾಗಿ ನಿಂದು |

ಭೇದವಿಲ್ಲದಂತೆ | ಬೋಧೆಯಾಯಿತಂತೆ ||

ನಾದ ಬಿಂದು ಕಳೆ ಮೀರಿಹುದಂತೆ ||4||

ಇರವು ಪೃಥ್ವಿಯೊಳಗೆ | ಹಂಸನ| ಅರಿವು ತೀರ್ಥ ಬೆಳಗೆ ||

ಬೆರೆಯಲಗ್ನಿ ಸುಖವು |

ಮರುತ ನಿತ್ಯ ಮುಖವು||

ಪರಿಪೂರ್ಣದ ನಭ| ನರಹರಿಗೆಂಬ ||5||

ಕಳ್ಳರ ಕೈಯೊಳಾದ ವ್ಯಾಪಾರ| ಇದು|

ಸುಳ್ಳರ ಬಾಯೊಳಿದ್ದ ವ್ಯವಹಾರ ||ಪ||

ಎಲ್ಲರು ಜಾರಿ ಬಿದ್ದ ಸಂಸಾರ| ಗುರು|

ವಿಲ್ಲದೆ ಆಗದಯ್ಯ ಪರಿಹಾರ ||ಅಪ||

ಕಳ್ಳರು ಆರು ಮಂದಿ ಬಂದಾರು| ಹಗ|

ಲಲ್ಲೆ ಮನೆಯನ್ನು ಹೊಕ್ಕು ಕುಳಿತಾರು||

ಕೊಳ್ಳೆಯ ಹೊಡೆಯಲಿಕ್ಕೆ ನಿಂತಾರು| ಗೆಲ|

ಬಲ್ಲ ವೀರನ ಕಂಡು ಮಣಿದಾರು ||1||

ಸುಳ್ಳರು ಮೂರು ಮಂದಿ ಸೇರುವರು | ಜಗ|

ವೆಲ್ಲವ ತಾರು ಮಾರು ಮಾಡುವರು||

ಎಲ್ಲರ್ಗೆ ಮೂರವಸ್ಥೆ ತೋರುವರು| ಮೈ|

ಗಳ್ಳರು ಗುರುವಿಗೆರಗಿ ಸಾರುವರು ||2||

ಜ್ಞಾನ ಧನವನು ಕಳ್ಳರೊಯ್ದಾರು| ಅ|

ಜ್ಞಾನ ಹಬ್ಬಿಸಿ ಸುಳ್ಳರಿದ್ದಾರು||

ಸ್ವಾನುಭವಾನಂದ ಪಡೆದವರು| ನಮ್ಮ |

ಮೌನಿ ನರಹರಿಯಿಂದ ಗೆದ್ದಾರು ||3||

ನಡೆ ನುಡಿಗಳೆ ಧರ್ಮಾ | ಎರಡಕೆ|

ನಡುವಿದೆ ಪರಬ್ರಹ್ಮ ||ಪ||

ಒಡಲಿನ ಕರ್ಮವ | ಬಿಡಿಸುವ ಮರ್ಮವ |

ನುಡಿಯಿಂದರಿತವ | ಪಡೆವನು ಮೋಕ್ಷವ ||ಅಪ||

ನಡೆ ಹಂಸನ ಧರ್ಮ| ಮಂತ್ರದ | ನುಡಿ ಸೋಹಂ ಮರ್ಮ||

ನಡೆಯನು ನಿಲ್ಲಿಸಿ | ನುಡಿಯನು ಸೊಲ್ಲಿಸಿ||

ನುಡಿ ಕೊನೆಯೆನ್ನಿಸಿ| ದೊಡೆ ತತ್ವಮಸಿ ||1||

ಯೋಗವೆ ನಡೆ ನುಡಿಯು| ಶಿವಸಂ| ಯೋಗವೆನಿಲು ಕಡೆಯು||

ಆಗಮ ನಿಗಮವು| ಭೋಗವು ಯೋಗವು ||

ಶ್ರೀಗುರು ಮಂತ್ರವು| ಯೋಗದ ತಂತ್ರವು ||2||

ಬಿಂದುವು ನಡುವಿರ್ಪ ಹಂಸನು | ಬಂಧಿತನಾಗಿರ್ಪ||

ಬಿಂದುವು ಕೊನೆಯೊಳು | ನಿಂದುದೆ ಸೋಹಂ||

ಬಂಧನ ಹರವಹು| ದೆಂದನು| ನರಹರಿ ||3||

ನಮ್ಮ ಕೋಳಿಯ ಕಂಡಿರೇನಮ್ಮಾ | ನಿಮ್ಮಂಗಳದೊಳಿದು|

ಮರ್ಮ ಬಿಟ್ಟೇ ಕೂಗಿತಲ್ಲಮ್ಮಾ ||ಪ||

ಒಮ್ಮೆ ಕೇಳಿದ ಪುಣ್ಯವಂತರು| ನಿರ್ಮಲಾತ್ಮ ಜ್ಞಾನವಾಂತರು||

ರಮ್ಯವಾಗಿಹ ಮೂರು ವರ್ಣವೆ| ಬ್ರಹ್ಮ ಸಾಕ್ಷಾತ್ಕಾರವೆನ್ನುವ ||ಅಪ||

ಕಾಲಜ್ಞಾನವ ತೋರಿ ಕೂಗುವುದು| ತಾನಾಗಿಯೆಚ್ಚರ|

ತಾಳಿ ಎಲ್ಲರನೆಚ್ಚರಿಸುತಿಹುದು|

ಕೇಳಿ ಯೆಚ್ಚರ ತಾಳಿದವರು|

ಕಾಲ ವ್ಯರ್ಥವ ಮಾಡಲಾರರು |

ಬಾಳುವೆಯನೇಹಸನು ಮಾಳ್ಪರು|

ಮೂಲ ಹಂಸನ ಉದಯ ತಿಳಿವರು ||1||

ಮೂರು ನದಿಗಳ ಸಂಗಮದೊಳಿಹುದು| ಹಾರಾಡಲೊಲ್ಲದೆ |

ಮೀರಿದುಚ್ಚ ಸ್ವರದಿ ಕೂಗುವುದು||

ಏರಿಮೇಲಕ್ಕಾಸುಷುಮ್ನಾ|

ದ್ವಾರದಲ್ಲಿಯೇ ನಿಂತು ಬ್ರಹ್ಮಾ|

ಗಾರವೆಲ್ಲವ ತುಂಬಿ ಜ್ಞಾನದ |

ಸಾರವೆಲ್ಲವ ತೋರಿ ಕೂಗಿದ ||2||

ಸಪ್ತಕೋಟಿ ಸುಮಂತ್ರ ದೊಡಲಮ್ಮಾ| ನಮ್ಮ ಕೋಳಿಗೆ |

ಸಪ್ತ ಚಕ್ರದ ಸೂತ್ರ ಬಿಡದಮ್ಮಾ||

ಗುಪ್ತ ದ್ವಾರವ ಸೇರಿಹುದುನಿ |

ರ್ಲಿಪ್ತವಾಗಿಯೆ ಕೂಗುತಿರ್ಪುದು||

ತೃಪ್ತಿಯಲಿ ನರಹರಿಯ ಪಾದದ|

ಪ್ರಾಪ್ತಿ ಮುಕ್ತಿಗೆಯೆಂದು ಕೂಗುವ ||3||

ಅಮನಸ್ಕ ರಾಜಯೋಗಿ| ಮಮಕಾರವೆಲ್ಲ ನೀಗಿ ||ಪ||

ಸುಮನಸರ ಮೀರಿ ಹೋಗಿ| ಸಮತಾನು ಭಾವವಾಗಿ ||ಅಪ||

ನರನೆನ್ನಲಾಗದಿವನ| ಸುರವಂದ್ಯನೆನಿಸಿದವನ ||

ಹರನನ್ನು ಕೂಡಿ ಜಗದ| ಗುರುವೆನ್ನಿಸುತ್ತ ಮೆರೆದ ||1||

ಆಸೆಗಳ ಸೇರಲೊಲ್ಲ| ವೇಷಗಳ ಭ್ರಾಂತಿಯಿಲ್ಲ||

ದೋಷಂಗಳಲ್ಲಿ ನಿಲ್ಲ| ಈಶನನು ತೋರಬಲ್ಲ ||2||

ತನಗಿಲ್ಲ ಕಾಯಕರಣ| ತನಗಿಲ್ಲ ಜನ್ಮ ಮರಣ||

ಅನುಮಾನ ಲೇಶಕಾಣ| ಅನುಭಾವವುಳ್ಳ ಶರಣ ||3||

ಜಗವೆಲ್ಲ ತಾನೆಯೆಂಬ | ಯುಗ ನಾಲ್ಕರಲ್ಲಿ ತುಂಬ||

ಸೊಗಸಾಗಿ ಸೇರಿಕೊಂಬ| ಭಗವಂತನನ್ನು ಕಾಂಬ ||4||

ಕಣ್ಣಲ್ಲಿ ಕಂಡುದೆಲ್ಲ | ತನ್ನಲ್ಲಿ ನಿಲ್ಲಲಿಲ್ಲ ||

ತನ್ನನ್ನು ತಾನೆ ಬಲ್ಲ | ಅನ್ಯವನು ಕಾಣಲಿಲ್ಲ ||5||

ಶಿವಗೆಂದು ಉಣ್ಣುತಿರುವ | ಶಿವಗೆಂದು ಉಟ್ಟು ಮೆರೆವ ||

ಶಿವಗಾಗಿ ಕೊಟ್ಟು ತರುವಾ | ಶಿವನಲ್ಲಿ ನಿತ್ಯ ಬೆರೆವ ||6||

ಇವಗಿಲ್ಲ ವಿಧಿ ನಿಷೇಧ | ಇವಗಿಲ್ಲ ಜಾತಿ ಭೇದ ||

ಇವಗಿಲ್ಲ ಶುಷ್ಕವಾದ | ಇವಗಿಲ್ಲ ಕರ್ಮಬಾಧ ||7||

ತನಗಿಲ್ಲ ಸೃಷ್ಟಿ ಲಯವು | ತನಗಿಲ್ಲ ಕಾಲ ಭಯವು ||

ತನಗಿಲ್ಲ ತಾಪತ್ರಯವು | ಅನುಭಾವವಾದ ಫಲವು ||8||

ಮಾನಾಪಮಾನ ದೂರ| ಆನಂದಭಾವ ಪೂರ||

ಶ್ರೀ ನರಹರೀಂದ್ರ ಚರಣ| ಧ್ಯಾನದಲಿ ನಿಂತ ಶರಣ ||9||

ಶ್ರೀ ಗುರುನಾಥನ ಯೋಗ ಪುನೀತನ|

ಬೇಗನೆ ಮೊರೆ ಬೀಳೆಲೊ ಎಲೋ ||ಪ||

ಆಗೀಗೆನ್ನದೆ ಜಾಗು ಮಾಡದೇ|

ಸಾಗು ಗುರುವಿನೆಡೆಗೆಲೋ ಎಲೋ ||ಅಪ||

ನಶ್ವರ ತನುವಿದು ನಶ್ವರ ಧನವಿದು|

ನಶ್ವರ ಮನವಿದು ಎಲೋ ಎಲೋ||

ನಶ್ವರ ಸತಿ ಸುತರೀಶ್ವರ ಧ್ಯಾನದಿ |

ವಿಶ್ವಾಸವನಿಡು ಎಲೋ ಎಲೋ ||1||

ಉಂಡುಪವಾಸಿಯ |

ಖಂಡ ಮೂರುತಿಯ |

ತಾಂಡವವಾಡುವನೆಲೋ ಎಲೋ ||

ಹೆಂಡಿರು ಮಕ್ಕಳ |

ಕೊಂಡಿಯ ತಪ್ಪಿಸಿ |

ಕೊಂಡರು ಕಾಣಿಸನೆಲೊ ಎಲೋ ||2||

ಎಲ್ಲವ ಸಲ್ಲಿಸಿ ಎಲ್ಲವ ನಿಲ್ಲಿಸಿ |

ಇಲ್ಲೇ ನಿಂತಿಹ ನೆಲೋ ಎಲೋ||

ಎಲ್ಲೆಲ್ಲಿಯು ತಾ| ನಿಲ್ಲದ ಸ್ಥಲವೇ|

ಇಲ್ಲದೆ ಇರುತಿಹ ನೆಲೋ ಎಲೋ ||3||

ಭೂತಗಳೆಲ್ಲ ವಿನೀತವಾಗಿ ನಿಂ|

ದೀತನ ಸೇವಿಪವೆಲೊ ಎಲೋ||

ಈತನಿಲ್ಲದಿರೆ ಭೂತಲ ನಿಲ್ಲದು|

ಚೇತನ ನರಹರಿ ಎಲೋ ಎಲೋ ||4||

ಬಲವಿಲ್ಲದ ಬಡವರು ನಾವು|

ಎಂತು ಪೂಜಿಪೆವು ಶಿವನ ಎಂತು ಕಾಣುವೆವು ||ಪ||

ತಿಳಿವಿಲ್ಲದ ಮೂಢರು ನಾವು|

ಎಂತು ತಿಳಿಯುವೆವು ಶಿವನ ಎಂತು ಒಲಿಸುವೆವು ||ಅಪ||

ತಪ ಮಾಡುವ ಬಲ ನಮಗಿಲ್ಲ||

ಚಪಲರಾದವರು| ನಾವು| ಕಪಟವುಳ್ಳವರು||

ಜಪ ಮಾಡುವ ಯೋಗ್ಯತೆಯಿಲ್ಲ ||

ಕಪಿಗಳಂಥವರು ಕುಂಟು ನೆಪಪೇಳ್ವವರು ||1||

ಶಿವಯೋಗವ ನರಿಯೆವು ನಾವು||

ಭವದಿ ಬಿದ್ದವರು| ಮಾಯಾ ಕವಿದು ಯಿದ್ದವರು||

ಶಿವ ಭಕ್ತಿಯ ಕಂಡವರಲ್ಲ | ಶಿವನ ಕಾಣುವೆವೇ |

ಬೋಧೆ| ಶ್ರವಣ ಮಾಡುವೆವೇ ||2||

ಗುರು ಪಾದವೆ ಗತಿ ನಮಗಿಂದು| ಪರಮ ಪಾವನವು|

ನಮ್ಮ | ದುರಿತ ಪರಿಹರವು||

ಹರಿಪಾದವ ಸೇರಿಸುವವನು|

ನರಹರೀಶ್ವರನು| ನಮ್ಮ| ನಿರುತ ಕಾಯ್ವವನು ||3||

ಒಂದೆ ಧರ್ಮದ ಸೂತ್ರ ಜಗಕೇ | ಬೇರೆ |

ಎಂದು ತಿಳಿಯುವುದೆಲ್ಲ ಲೋಕಕ್ಕೆ ಕೆಡುಕೇ ||ಪ||

ಸಂದೇಹವೇನಿಲ್ಲ ಇದಕೇ | ಸತ್ಯ |

ಸಂಧರೆಲ್ಲರು ಪೇಳಿಕೊಂಡು ಹೋದುದಕೇ ||ಅ|ಪ||

ಇಳೆಯೆಂಬುದೆಲ್ಲರಿಗೆ ಒಂದೇ | ಕುಡಿವ |

ಜಲವೆಂಬುದೆಲ್ಲರಿಗೆ ತಾನಿರ್ಪುದೊಂದೇ ||

ಜ್ವಲಿಸುವಗ್ನಿಯು ತಾನು ಒಂದೇ | ವಾಯು |

ಚಲಿಸುತ್ತಲಿರುತಿಹುದೆಲ್ಲರಿಗೆ ವೊಂದೇ ||1||

ಗಗನವೆಲ್ಲರಿಗೊಂದೆ ಯಿಹುದು | ಮೇಲೆ |

ಸೊಗಸಿ ಬೆಳಗುವ ಸೂರ್ಯವೊಬ್ಬನೆ ಯಿಹುದು ||

ಜಗಕೊಬ್ಬ ಚಂದ್ರನಿರುತಿಹನು | ಎಲ್ಲ |

ರಿಗೆ ಚೇತನಾತ್ಮನು ತಾನೊಬ್ಬನಿರುತಿಹನು ||2||

ತನು ಧರ್ಮವೆಲ್ಲರಿಗೆ ವೊಂದೆ | ಪ್ರಾಣ |

ಮನ ಬುದ್ಧಿ ಕರಣಾದಿ ಧರ್ಮಗಳೊಂದೇ ||

ಜನನ ಮರಣಗಳೆಲ್ಲರೊಳಗೆ ಒಂದೇ |

ಯೆನಲಿಕ್ಕೆ ಭೇದಗಳು ಯಾಕೆ ನಮ್ಮೊಳಗೆ ||3||

ಅರಿವು ಮರವೆಯು ಜಾಗ್ರಸುಪ್ತಿ | ಶೋಕ |

ಹರುಷ ಭಯ ಕ್ರೋಧ ಶಾಂತಿಗಳೆಲ್ಲ ವ್ಯಾಪ್ತಿ ||

ಯಿರಲೊಂದೆ ಪರಿಯಲ್ಲಿ ಪ್ರಾಪ್ತಿ |

ನಮ್ಮ ನರಹರಿಗೀ ಭೇದದಿಂದಿಲ್ಲ ತೃಪ್ತಿ ||4||

ಯೋಗಿವರನ ವಿರಾಗ ಪರನ ಸ |

ರಾಗದಿಂದ ಭಜಿಸಿರಯ್ಯ ||ಪ||

ನಾಗಭೂಷಣನಾಗಿ ಬಂದು |

ನೀಗುವನು ಭವ ರೋಗವೆಂದು ||ಅ|ಪ||

ನಡೆಯುತಿರುವಾ ಹಂಸ ಮಂತ್ರದ |

ನಡುವೆ ನಿಂತನು ನೋಡಿರಯ್ಯ ||

ನುಡಿಯ ಸೋಹಂ ಮಂತ್ರ ಮುಗಿಸಿ |

ಕಡೆಗೆ ನಿಂತನು ಕೂಡಿರಯ್ಯ ||1||

ಒಂದು ಬೀಜವನಂತ ಬೀಜಕೆ |

ಮುಂದೆ ಕಾರಣವಾದ ರೀತಿ ||

ಒಂದು ಮಾತ್ರೆಯ ಸಂಖ್ಯ ಮಾತ್ರೆ ಗ |

ಳಿಂದ ಶೋಭಿಸಿದಂಥ ಜ್ಯೋತಿ ||2||

ಮೆರೆವ ಸೋಹಂ ಮಂತ್ರದಲ್ಲಿಯೆ |

ದೊರೆವ ಸಹಕಾರಗಳತೆಗೆ ದಾ||

ಬರುವ ಓಂಕಾರವೆ ಜಗತ್ರಯ |

ಭರಿತವಾಗಿರೆ ತಾ ನರಹರಿಯೇ ||3||

ಪೊಡವಿಯಲ್ಲೆ ಒಡೆದೂ ಮೂಡಿ |

ಕಡಲು ಸೇರಿದ ಕಾಣಿರೋ ||

ಕಡಲೊಳೆದ್ದು ದಡವ ಸೇರಿ |

ನಡುವೆ ಅಗ್ನಿಯ ತೂರಿದ ||4||

ಜಡಿದು ವಾಯುವ ಮೀರಿ ಬಂದು |

ಒಡನೆ ಆಗಸಕೇರಿದ ||

ಒಡೆಯ ನರಹರಿ ಒಡೆದು ನಭವನು |

ಮೃಢನೊಳೈಕ್ಯವ ಪೊಂದಿದ ||5||

ಗೊಂಬೆಯಾಟಗಾರನೀತ ಬಂದನಲ್ಲಾ|

ಗೊಂಬೆಯಾಟವಾಡಿಸುತ್ತ ನಿಂದನಲ್ಲಾ ||ಪ||

ಶಂಭುವೀತನೆಂದು ನಾವು ತಿಳಿಯಲಿಲ್ಲಾ|

ತುಂಬಿಕೊಂಡ ಮೋಹವನ್ನು ಕಳೆಯಲಿಲ್ಲಾ ||ಅ.ಪ||

ಆಸೆಪಟ್ಟು ಆಡುತಿಹವು ತೊಗಲು ಗೊಂಬೆ |

ಮೋಸಪಟ್ಟು ಓಡುತಿಹವು ದಿನವು ತುಂಬೆ||

ಲೇಶಸುಖವು ಇಲ್ಲ ರಾಗ ದ್ವೇಷ ತುಂಬೆ|

ಘಾಸಿಗೊಂಡು ನಾಶವಾದುವೇನನೆಂಬೆ ||1||

ನಿದ್ರೆಯೆಂಬ ಕೋಣೆಯೊಳಗೆ ನೂಕಿಬಿಟ್ಟಾ |

ಭದ್ರವಾಗಿ ಬೀಗ ಮುದ್ರೆ ಹಾಕಿಬಿಟ್ಟಾ ||

ಸುದ್ದಿ ಸದ್ದುಯಿಲ್ಲದಂತೆ ಮಾಡಿಬಿಟ್ಟಾ |

ಇದ್ದು ಇಲ್ಲದಂತೆ ಬಿದ್ದುವೆಂದುಬಿಟ್ಟಾ ||2||

ಕುಣಿಯಲೆಂದು ಜಾಗ್ರದಲ್ಲಿ ಹೊರಗೆ ಬಿಟ್ಟಾ|

ತಣಿಯಲೆಂದು ಸ್ವಪ್ನದಲ್ಲಿ ಸೆರೆಯನಿಟ್ಟಾ ||

ಮಣಿಯಲೆಂದು ನಿದ್ರೆಯನ್ನು ತಂದುಕೊಟ್ಟಾ |

ಕೊನೆಗೆ ತಾನೆ ನಿಂತು ನೋಡಿ ನಕ್ಕು ಬಿಟ್ಟಾ ||3||

ಪೃಥ್ವಿ ತತ್ವದಲ್ಲೇ ಮಾಡಿ ಸೂತ್ರವನ್ನು |

ಮತ್ತೆ ತೀರ್ಥದಲ್ಲೇ ಕೂಡಿ ಮಂತ್ರವನ್ನು ||

ನರ್ತನಕ್ಕೆ ಅಗ್ನಿಯಲ್ಲಿ ತಂತ್ರವನ್ನು |

ವರ್ತನಕ್ಕೆ ವಾಯು ಗಗನವಾಯಿತಿನ್ನು ||4||

ಇಲ್ಲೆ ತನುವಿನಲ್ಲೇ ನೋಡಿ ಗೊಂಬೆಯಾಟ|

ಬಲ್ಲ ಗುರುವಿನಿಂದ ತಿಳಿದು ಶಿವನ ಕೂಟ||

ಇಲ್ಲೆ ಮಾಡಿಕೊಳ್ಳಬೇಕು ಮಂತ್ರ ಪಾಠ|

ಚೆಲ್ವ ನರಹರೀಂದ್ರ ಕೊಡುವ ಬೋಧೆಯಾಟ ||5||

ಲಿಂಗಪೂಜೆಯ ಮಾಡಬೇಕಣ್ಣಾ| ನಿಮ್ಮೊಳಗೆ

ನಿತ್ಯ | ಜಂಗಮಾತ್ಮನ ಕೂಡಬೇಕಣ್ಣಾ ||ಪ||

ಲಿಂಗ ಪೂಜೆಯೊಳಂಗ ಭಾವವ|

ಹಿಂಗಿದಾತನೆ ಧನ್ಯನಾಗುವ||

ಮಂಗಳಾತ್ಮಕ ಶಿವನೊಳೈಕ್ಯವ | ಅಂಗ

ಲಿಂಗದ ಸಂಗವೆನಿಸುವ ||ಅಪ||

ಲಿಂಗವೇ ಪರಮಾತ್ಮನೆನಿಸಿಹುದು|

ದೇಹಾತ್ಮ ಬುದ್ಧಿಯ ಅಂಗವೇ ಜೀವಾತ್ಮನೆನಿಸಿಹುದು||

ಲಿಂಗ ನಿರ್ಗುಣ ವಂಗಸ ಗುಣವು |

ಲಿಂಗದೊಳಗೀ ಯಂಗದೈಕ್ಯವು||

ಲಿಂಗಮಯ ನಿಸ್ಸಂಗಿಯಾಗಲು||

ಲಿಂಗ ದೇಹವು ಭಂಗವಾಗಲು ||1||

ತನುವಿನೊಳಗಿಹುದಿಷ್ಟಲಿಂಗವದು |

ಸರ್ವೇಂದ್ರಿಯದ ಚೇ | ತನದೊಳಿರುವುದು ಪ್ರಾಣ ಲಿಂಗವದು ||

ಮನದೊಳಡಗಿದೆ ಭಾವಲಿಂಗವು |

ಮನನದಿಂದ ಮನಸ್ಕವಾಗಲು ||

ಜನನ ಮರಣ ಪ್ರವಾಹವಡಗಲು |

ಮಿನುಗಿ ಭಾವವೆ ಲಿಂಗವಾಗಲು ||2||

ಇಳೆಯ ತತ್ವದಿ ಭಕ್ತನಿರುತಿಹನು| ಆಚಾರ

ಲಿಂಗವ| ನೊಲಿದು ಗಂಧದಿ ಪೂಜೆಗೈಯುವನು||

ತಿಳಿಯಲೀಯಾಚಾರ ಲಿಂಗದ|

ಬಲವೆ ಸರ್ವಾಚಾರ ಸಂಪದ||

ಕಳೆಯೆ ವಾಸನೆಯುಳಿಯೆ ತಾನೇ |

ಚಲಿಸುತಿರ್ಪನು ಹಂಸ ರೂಪನೆ ||3||

ವಾರಿತತ್ವ ಮಹೇಶನಿಗೆ ಸ್ಥಲವು| ಗುರುಲಿಂಗ ಕಲ್ಲಿಯೆ|

ಸಾರರಸ ಪೂಜಾ ಸಮರ್ಪಣವು||

ಹೀರಿ ಸುರಸದಿ ತೃಪ್ತಿಗೊಂಬುದು|

ತೋರ ಶರೀರವ ಸಾಕಿಕೊಂಬುದು||

ಸಾರ ಬೋಧಾಮೃತವ ನೀವುದು|

ತೋರಿ ತೋರದೆ ಪ್ರಣವವಾದುದು ||4||

ಅನಲ ತತ್ವ ಪ್ರಸಾದಿಗಿ ಸ್ಥಲವು|

ಶಿವಲಿಂಗಕಿಲ್ಲಿಯೆ| ಘನ ಸುರುಪದ ಪೂಜೆಯೇ ಬಲವು||

ಇನಿತು ಲಿಂಗಗಳಿಗೆ ಪ್ರಸಾದವು|

ಮುನಿದೊಡೀತನು ಸಲಿಸಲಾರವು||

ತನುವಿನೊಳಗಹ ಕರ್ಮವೆಲ್ಲಕೆ |

ಜನಿಪ ಜ್ಞಾನಕೆ ಸಾಕ್ಷಿಯೆನಲಿಕೆ ||5||

ಪ್ರಾಣ ಲಿಂಗಿಗೆ ಮರುತವೇ ಸ್ಥಾನ|

ಜಂಗಮ ಸುಲಿಂಗಕೆ |

ಮೌನ ಧ್ಯಾನದ ಸ್ಪರ್ಶ ಪೂಜೆ ಕಣಾ||

ತಾನೆ ಜಂಗಮ ಲಿಂಗ ಮುಟ್ಟುವ |

ಜ್ಞಾನ ಸಂಧಾನವನು ಮಾಡುವ||

ಸ್ವಾನುಭವ ನಿರ್ಗುಣದಿ ನಿಲ್ಲುವ ||6||

ಏನು ಮುಟ್ಟಿದುದೆಲ್ಲ ಸಲಿಸುವ|

ಶರಣನಿಂಗಾಕಾಶವೇ ಸ್ಥಲವು |

ಪ್ರಸಾದ ಲಿಂಗಕೆ| ಮೆರೆವ ಶಬ್ದದ

ಪೂಜೆ ನಿರ್ಮಲವು||

ಪರಮ ಬೋಧಾಮೃತವ ಸಲ್ಲಿಸಿ|

ಕರಣ ನಿರ್ಮಲನಾಗಿ ವಂದಿಸಿ||

ಶರಣು ಮಾಡುತ ಶರಣನೆನ್ನಿಸಿ|

ದುರಿತ ಕರ್ಮವನೆಲ್ಲ ನಿಲ್ಲಿಸಿ ||7||

ಸರ್ವ ಲಿಂಗವ ತನ್ನೊಳಾಂತಿರುವ |

ಮಹಲಿಂಗ ಕೆಲ್ಲವ| ಸರ್ವದಾ ಪೂಜಿಸುತ ನಿಂತಿರುವಾ||

ಸರ್ವ ಶ್ರೇಷ್ಠನು ಐಕ್ಯನೀತನು| ನಿರ್ವಯಲ

ನಿರ್ಗುಣನು ಶೂನ್ಯನು||

ಶರ್ವ ನೀತನೆ ನರ ಹರೀಂದ್ರನು |

ಪೂರ್ವ ಸಂಚಿತ ಕರ್ಮವಳಿದನು ||8||

ಹೇಗೆ ಪೂಜಿಸಲೀ | ದೇವರ ನಾನು| ಹೇಗೆ ಪೂಜಿಸಲೀ ||ಪ||

ಹಾಗೆ ಹೀಗಿರ್ಪ ನೆನ| ಲಾಗದಂತಿರುವವನ||

ಯೋಗಿಗಳ ಮನದಿ ಸಂ| ಯೋಗವಾಗಿರುವವನಾ ||ಅಪ||

ಮೂಗಿಲ್ಲದವಗೆ | ಸದ್ಗಂಧ ಸಂ | ಯೋಗವದು ಹೇಗೆ||

ಈಗೆನ್ನ ಮೂಗಿಂದ ಆಘ್ರಾಣಿಸಿದ ಗಂಧ||

ತಾಗಿ ತಾನಾನಂದ| ಸಾಗರನು ತಾನಾದ ||1||

ರಸನೆಯಿಲ್ಲದವ | ಷಡ್ರಸಗಳ| ರಸವನೆಂತರಿವಾ ||

ರಸನೆಯಿಂ ನಾನಾಸ್ವಾ| ದಿಸಿದ ರಸರುಚಿಗಳನು ||

ಒಸೆದು ಸ್ವೀಕರಿಸಿ ಸಂ |ತಸ ವಾಂತು ನಿಲ್ಲುವನು ||2||

ಕಣ್ಣಿಲ್ಲದವನು | ಸುಂದರ ರೂಪವನ್ನೆಂತರಿವನು||

ಕಣ್ಣಲ್ಲಿ ನಾ ಕಂಡ | ಬಣ್ಣ ರೂಪವ ಕೊಂಡ||

ಉನ್ನತಾ ನಂದವ| ತನ್ನಲ್ಲೆ ಹೊಂದುವ ||3||

ಚರ್ಮವಿಲ್ಲದ ವಾ| ಸುಸ್ಪರ್ಶದಾ ಮರ್ಮವೆಂತರಿವಾ||

ಚರ್ಮದೊಳು ನಾನರಿವ| ಧರ್ಮ ಸುಸ್ಪರ್ಶವಾ ||

ಕರ್ಮ ರಹಿತನು ಪಡೆವ| ನಿರ್ಮಲಾನಂದವಾ ||4||

ಕಿವಿಯಿಲ್ಲದವನು | ಸವಿನುಡಿ ಗಾನ|

ಶ್ರವಣ ಪೂಜೆಯನು | ಕಿವಿಗೊಟ್ಟು ನಾ ಕೇಳ್ವ|

ಶ್ರವಣದಲ್ಲಿಯೆ ತಾಳ್ವ||

ಭವದೂರ ನಹವರವ| ಜವದಿ ನರಹರಿ ಕೊಡುವ ||5||

ಕಾಯರಹಿತಗೆ | ಪೂಜೆಗಳಿಂದ

ಪ್ರಿಯವೆಂತಹುದು ||

ಕಾಯದಿ ನಾಗೈವ | ಆಯಾ ಕರ್ಮಗಳೆಲ್ಲ |

ನ್ಯಾಯವಾಗಿಹ ಪೂಜೆ | ಆಯಿತು ಶಿವನಿಗೆ ||6||

ಮಂತ್ರಪುಷ್ಪಗಳ | ಮುಡಿಸುತ್ತ ನಾ |

ನಿಂತುಕೊಂಡಿರಲು ||

ಸಂತೋಷದಿಂದ ತಾ | ನಿಂತು ವರವಿತ್ತನು |

ಸಂತತ ನರಹರಿಯ | ಚಿಂತನದೊಳಿಹುದೆಂದು ||7||

ಶರಣು ಶರಣು ಗುರು| ವರಗೇ ಶರಣು ||

ಸುರವರ ವಂದ್ಯಗೆ | ಕರುಣಾ ಸಾಂದ್ರಗೆ ||ಪ||

ಪರಮಾ ಕರುಣಾ| ಶರಧಿಗೆ ನಮಿಸೀ||

ಹರುಷದೊಳಿದ್ದೆನು| ದುರಿತವ ಹರೀಸೀ ||ಅಪ||

ದೇಹದಿ ಸುಳಿದನು | ಹಂಸನುಯೆನಿಸೀ|

ದೇಹವ ನುಳಿದನು ಸೋಹಂ ಎನಿಸೀ||

ದೇಹದ ಸಂಗದಿ ತೋರಿಯು ತೋರಿದ|

ದೇಹಾತೀತಗೆ ಮೋಹಕೆ ದೂರಗೆ ||1||

ನಾದಕೆ ಕಾರಣ ಬಿಂದುವ ತೋರಿದ|

ಆದಿಯು ಬಿಂದುವಿಗಾ ಕಳೆಯೆಂದಾ|

ಶೋಧಿಸೆ ಕಳೆಗಾದಿಯೆ ತಾನಾದ|

ಸಾಧಿಸಿ ಬೋಧಿಸಿ ಕೊನೆಯಾಳು ನಿಂದಾ ||2||

ಪರಮಾರ್ಥವನು ಅರುಹಿದ ತಾನು|

ಮರಣದ ಭಯವನು | ಹರಿದಿರುವವನು||

ಹರಿಹರ ಬ್ರಹ್ಮನ ತೋರಿಸಿದವನು |

ನರಹರಿಯೆನ್ನಿಸಿ ಮೆರೆವನು ತಾನು ||3||

ಈ ದೇಹದೊಳಗಿರುವ| ಆ ದಿವ್ಯ ಪರವಸ್ತು||

ನಾದಾಂತ್ಯದೊಳಗಿರುವುದಣ್ಣಾ ||ಪ||

ಸಾಧಿಸಿದ ಮಹನೀಯ| ಸಾಧುವೆಂದೆನಿಸುವನು ||

ಶೋಧಿಸಿಯೆ ತಿಳಿಯಬೇಕಣ್ಣಾ ||ಅಪ||

ಎಲ್ಲೆಲ್ಲಿ ತುಂಬಿಹುದು | ಎಲ್ಲರಿಗೆ ಕಾಣಿಸದು||

ಎಲ್ಲರೊಳು ಸೇರಿರುವುದಣ್ಣಾ ||

ಬಲ್ಲ ಗುರುವಿನ ಪಾದ| ದಲ್ಲಿ ಶರಣಾದವಗೆ |

ಎಲ್ಲೆಂದರಲ್ಲಿರುವುದಣ್ಣಾ ||1||

ಮೂರು ಮಾತ್ರೆಯ ಮೀರಿ| ತೋರುತ್ತಲಿದೆ ಸಾರಿ|

ಸಾರತರದರ್ಧ ಮಾತೃಕೆಯು||

ಮೂರವಸ್ಥೆಗೆ ತಾನೆ ಕಾರಣದ ಪರವಸ್ತು|

ಧೀರ ಗುರು ವಿಂದರಿಯಿರಣ್ಣಾ ||2||

ಕುಲಗೋತ್ರ ಜಾತಿಗಳ | ಕಲೆಯಿಲ್ಲವದರೊಳಗೆ|

ಕಲೆತಿರುವುದೈ ಸರ್ವರೊಳಗೇ||

ಒಳಗೆ ಹೊರಗೊಂದಾಗಿ | ಬೆಳಗುವುದು ಶಿವಯೋಗಿ|

ಕುಲಚಂದ್ರ ನರಹರಿಯೊಳಣ್ಣಾ ||3||

ಗುಪ್ತವಾಗಿರುತಿಹುದು | ಸಪ್ತಚಕ್ರವ ಹಾದು |

ಸಪ್ತಕೋಟಿಯ ಮಂತ್ರವಹುದು ||

ಆಪ್ತ ಗುರುವಿನ ಪಾದ | ಕೊಪ್ಪಿಸುತ ನಿಂದಿಹುದು |

ತಪ್ಪದೇ ಮುಕ್ತಿಯಾಗುವುದು ||4||

ಇರವು ತಾನಾಗಿಹುದು | ಅರಿವು ತಾನಾಗಿಹುದು |

ಪರಸುಖವು ತಾನೆಯಾಗಿಹುದು ||

ಪರಮ ಗುರು ನರಹರಿಯ | ಚರಣ ಕಮಲಂಗಳಿಗೆ |

ಎರಗಿದವರಿಗೆ ದೊರೆಯುತಿಹುದು ||5||

ಬ್ರಹ್ಮವನು ತಿಳಿದವನು | ಬ್ರಹ್ಮವೇ ಆಗುವನು |

ಬ್ರಹ್ಮ ನಿನ್ನೊಳಗುಂಟು ತಮ್ಮಾ ||ಪ||

ಬ್ರಹ್ಮವನು ತೋರಿಸಲು| ಬ್ರಹ್ಮವದು ಬೇರಿಲ್ಲಾ ||

ಬ್ರಹ್ಮವರಿತರೆ ನೀನೆ ಬ್ರಹ್ಮ ||ಅಪ||

ಗುಪ್ತವಾಗಿದೆ ಬ್ರಹ್ಮ | ಸಪ್ತ ಚಕ್ರದ ಮರ್ಮ|

ಸಪ್ತ ಕೋಟಿಯ ಮಂತ್ರ ತಮ್ಮಾ ||

ಆಪ್ತ ಶ್ರೀ ಗುರುಪಾದ| ಪ್ರಾಪ್ತಿಯಾಗಲು ಬೋಧ|

ಲುಪ್ತವಾಯಿತು ಸರ್ವ ಕರ್ಮಾ ||1||

ಸಾಕಾರ ತಾನಲ್ಲ | ಏಕಾಂತವಿರಬಲ್ಲ|

ಲೋಕೈಕವಾ ಪರಬ್ರಹ್ಮಾ||

ಬೇಕಾದುದೀಯುವುದು| ಆಕಾಶದಂತಿಹುದು||

ಸ್ವೀಕರಿಸಿ ನಿರ್ಗುಣವ ತಮ್ಮಾ ||2||

ಇರವು ತಾನಾಗಿತ್ತು | ಅರಿವೆನಿಸಿ ತೋರಿತ್ತು|

ಪರಮ ಸುಖ ತಾನಾಯ್ತು ತಮ್ಮಾ ||

ಗುರುಲಿಂಗ ನರಹರಿಯ| ಚರಣ ಕಮಲಂಗಳಿಗೆ |

ಎರಗಿದವರಿಗೆ ದೊರೆವ ಬ್ರಹ್ಮಾ ||3||

ಎಲ್ಲವು ತಾನೆ ತಾನಾಯ್ತು| ಉಲ್ಲಾಸ ಯನಗಾಯ್ತು ||ಪ||

ಅಲ್ಲಿ ಇಲ್ಲಿ ಎಲ್ಲೆಡೆಯಲ್ಲಿ| ಎಳ್ಳಷ್ಟು ಬಿಡುವಿಲ್ಲದಂತೆ||

ಸೊಲ್ಲು ಸೊಲ್ಲಿಗೆ ತಾನೆಯಾಗಿ| ನಿಲ್ಲುವುದಾ ಬ್ರಹ್ಮ ||ಅಪ||

ಹಾನಿವೃದ್ಧಿ ಏನೂ ಇಲ್ಲ| ದಾನಂತಾತ್ಮ ತಾನಾಗಿತ್ತು||

ಸ್ವಾನುಭಾವ ಸುಖ ಸಂಪತ್ತು| ತಾನೇ ನೆಲೆಸಿತ್ತು ||1||

ದೇಹವೆನ್ನುವ ಯಂತ್ರದೊಳಗೆ| ಸೋಹಂ ಎನ್ನುವ ಮಂತ್ರಮೊಳಗೆ ||

ಮೋಹ ಮುಳುಗೆ| ಬ್ರಹ್ಮ ಬೆಳಗೆ | ಊಹೆ ಕೊನೆಯೊಳಗೆ ||2||

ಹೆಣ್ಣು ಗಂಡು ಹೊನ್ನು ಮಣ್ಣು | ಕಣ್ಣಿನಲ್ಲಿ ಕಾಂಬುದನ್ನು||

ಭಿನ್ನವೆನ್ನದೆಲ್ಲ ಬ್ರಹ್ಮ | ವೆನ್ನುತ ನಿಜವರಿಯೆ ||3||

ನಾದದಲ್ಲಿ ವೇದವಾಯ್ತ| ವೇದದಲ್ಲಿ ಬೋಧೆಯಾಯ್ತು||

ಬೋಧೆಯೊಳು ಗುರು| ಪಾದವಿತ್ತು| ಪಾದವೆ ಗತಿಯಾಯ್ತು ||4||

ಗುರುವೆ ಬ್ರಹ್ಮ ಗುರುವೆ ವಿಷ್ಣು | ಗುರುವೆ ರುದ್ರ| ಗುರುವೀಶ್ವರನು||

ಗುರುವೆ ಸದಾಶಿವ ಪಂಚಬ್ರಹ್ಮ| ನರಹರಿ ಗುರುಲಿಂಗ ||5||

ಸಂಶಯ ಪಡಬೇಡೋ | ಹಂಸನ ಕೂಡಿಯೆ ನೀನಾಡೋ ||ಪ||

ಗುರುವಿನ ಪಾದವ ಹಿಡಿಯೋ |

ಪರತರ ಜ್ಞಾನವ ನೀ ಪಡೆಯೊ ||1||

ಮೂಲಾಧಾರವ ಸೇರಿ|

ಕಾಲವ ಕಳೆದನು ಸಂಚಾರಿ ||2||

ಕಡಲೊಳು ಮುಳುಗಿರಬಲ್ಲಾ |

ಗುಡುಗುತ ತೇಲಿ ಬರುವನಲ್ಲಾ ||3||

ಅಗ್ನಿಯ ಮಧ್ಯದಿ ನಿಂತಾ|

ಯಜ್ಞಾಹುತಿಗಳ ತಾನಾಂತ ||4||

ಮಂಗಳ ಸೂತ್ರವ ಪಿಡಿದಾ|

ಮಂಗಳಕರ ಮಂತ್ರವ ನುಡಿದಾ ||5||

ಅಂಬರವೇರುತ ನಡೆದಾ |

ಸಂಭ್ರಮಿಸುತ ಮುಕ್ತಿಯ ಪಡೆದಾ ||6||

ಮಂತ್ರದ ಮೂಲದ ಶಿರಿಯು |

ಯಂತ್ರದ ಚಾಲಕ ನರಹರಿಯು ||7||

ಗುರುವೆಂಥಾ ಕರುಣಾವಂತಾ | ನಾ| ನಾದೆ ನಿಶ್ಚಿಂತಾ ||ಪ||

ಜಡದೇಹವನು | ನಡೆಸಿದ ಶಿವನು ||

ನುಡಿಸುತ ತನುವಾ| ಬಿಡುತಿಹನೆನುವಾ ||1||

ನಡೆ ನುಡಿಯೆರಡರ| ನಡುವೆ ಪರಾತ್ಪರ ||

ಕಡುಸುಖವಾಂತ | ಕಡೆಯೊಳು ನಿಂತಾ ||2||

ಅಂಗವ ಶೋಧಿಸಿ | ಲಿಂಗವ ಸಾಧಿಸಿ||

ಲಿಂಗಾಂಗೈಕ್ಯದ | ಸಂಗತಿಯರುಹಿದ ||3||

ಗಂಗಾ ಯಮುನಾ| ಸಂಗಮ ಗಮನಾ||

ಮಂಗಳ ರೂಪವ| ಹಿಂಗದೆ ತೋರುವ ||4||

ನರನಿವನೆಂದವ | ನರಕವ ಪೊಂದುವ ||

ನರಹರಿಯೆಂದವ | ಹರಿಯುವ ಬಂಧವ ||5||

ಈತ ಗಾರುಡಿಗಾರನು | ಶ್ರೀ ಗುರುನಾಥ|

ಮಾತು ಮಂತ್ರವಗೈದನು ||ಪ||

ಈ ತಂತ್ರ ನೋಡೆಂದ | ಭೀತಿಯೆ ಬೇಡೆಂದ||

ಪಾತಕವಿಲ್ಲೆಂದ| ಸೂತಕ ಸುಳ್ಳೆಂದ ||ಅಪ||

ಬುಸುಗುಟ್ಟುತಿಹ ಸರ್ಪವಾ| ಕೊರಳಿಗೆ ಸುತ್ತಿ |

ಮಿಸುಕದಾಡಿಸುತಿರ್ಪವಾ ||

ಅಸಮ ಪುಂಗಿಯೊಳು ಮೋ| ಹಿಸುವ ನಾಗಸ್ವರ|

ವೆಸೆಯೆ ವಿಷಯಾರ್ಥದ| ವಿಷ ಕಳೆದೂದಿದ ||1||

ಸೂರ್ಯ ಚಂದ್ರರ ಬಂಧಿಸಿ| ಸುಷುಮ್ನೆಯಾ|

ದ್ವಾರದಲ್ಲಿಯೆ ಸಂಧಿಸಿ||

ಧಾರಿಣಿ ಜಲವಗ್ನಿ | ಮಾರುತಾಕಾಶವ ||

ಮೀರಿದ ಸುಸ್ವರವ| ತೋರಿದ ಪ್ರಣವವ ||2||

ಮಂತ್ರದಂಡವ ಮುಟ್ಟಿಸಿ | ಕಳೆಯನು ತುಂಬಿ |

ಮಂತ್ರ ಪಿಂಡವ ಸೃಷ್ಟಿಸಿ ||

ತಂತ್ರದಿಂದೆಲ್ಲ ಸ್ವ| ತಂತ್ರ ಸಂಪಾದಿಸಿ ||

ಸ್ವಾಂತದಲ್ಲಿಯೆ ನೆಲೆ| ನಿಂತ ನರಹರಿಯಾಗಿ ||3||

ಭೂತಂಗಳೆಲ್ಲವನು | ತನ್ನಾಜ್ಞೆಯೊ |

ಳೀತ ನಿಲಿಸಬಲ್ಲನು ||

ಭೂತಂಗಳಾಟವ | ನೀತನೆ ನಿಲ್ಲಿಸಿ |

ಸ್ವಾತಂತ್ರ್ಯವಾಗಿ | ನಿ | ರ್ಭೀತನಾಗಿರ್ಪನು ||4||

ಮಾಯ ಮಾಟವ ಮಾಡಿದ | ನಿರ್ಮಾಯನೀ |

ಕಾಯ ಕರ್ಮವ ಕಳೆದ ||

ಸಾಯುವ ಹುಟ್ಟುವ | ದಾಯವ ತಪ್ಪಿಸಿ |

ಬಾಯಬ್ರಹ್ಮನು ಗುರು | ರಾಯಶ್ರೀ ನರಹರಿ ||5||

ಪರನಾದವನೇ ಕೇಳಿದವ | ಪರಶಿವನ ಕೂಡಿರುವ ||ಪ||

ನಾದವಿದೇ ವರ ವೇದವಿದೇ |

ಆದಿ ಪರಾತ್ಪರ ಬ್ರಹ್ಮವಿದೇ||

ಬೋಧಿಸದೇ ಇದು ತಿಳಿಯುವುದೇ|

ಶೋಧಿಸಲಿದು ಶಿವಯೋಗ ಸುಧೆ ||1||

ಮೋಹವನಳಿಸುವ ಮಂತ್ರವಿದೇ|

ಊಹೆಗೆ ಮೀರಿದ ತಂತ್ರವಿದೇ||

ದೇಹಿಗಳರಿಯದ ವಾಹನ ಹಂಸದ||

ಸೋಹಂಭಾವದ ಜ್ಯೋತಿಯಿದೇ ||2||

ಜಗದೊಳಗೆಲ್ಲಿಯು ತುಂಬಿಹುದು|

ಹಗರಣ ಮಾಡಲು ಕಾಣಿಸದು||

ಹಗಲಿರುಳೆನ್ನದೇ ಮಿಗೆ ನಡೆಯುತ್ತಿದೆ|

ಯುಗಯುಗ ಕಳೆದೇ ಬೆಳಗುತಿದೆ ||3||

ಪ್ರಣವವಿದೆನ್ನಿಸಿ ಮೆರೆಯುತಿದೆ|

ತನುವ ವಿಜೃಂಭಿಸಿ ಬರುತಲಿದೆ|

ಮನು ಮುನಿಯಾಶ್ರಯ ವಾಗುತಿದೆ|

ಘನತರ ಮಹಿಮೆಯ ತೋರುತಿದೆ ||4||

ಗುರು ತೋರಿಸಿದರೆ ಕಾಣುತಿದೆ|

ಗುರುತಾದವರಿಗೆ ಮುಕ್ತಿಯಿದೆ ||

ಗುರಿ ಮುಟ್ಟಿದರಿದು ಶೂನ್ಯವಿದೆ|

ಗುರುವರ ನರಹರಿ ತಾನೆಯಿದೆ ||5||

ಏಳಿರೋ ಬೇಗ ಏಳಿರೊ| ನಮ್ಮ |

ಕೋಳಿಯ ಕೂಗನ್ನು | ಕೇಳಿ ಎಚ್ಚರಗೊಂಡು ||ಪ||

ಮೂರು ವರ್ಣದ ಕೋಳಿ| ಮೀರಿ ಕೂಗಿತು ಏಳಿ||

ಬೇರೆ ವರ್ಣವ ತಾಳಿ| ಸಾರುತ್ತಲಿದೆ ಕೇಳಿ ||1||

ಆರು ಮೆಟ್ಟಿಲು ಏರಿ| ದ್ವಾರದಲ್ಲಿಯೆ ಸೇರಿ|

ಪಾರಮಾರ್ಥಕೆ ದಾರಿ| ತೋರಿ ಕೂಗಿತು ಭಾರಿ ||2||

ಜ್ಞಾನ ಸೂರ್ಯನು ಬಂದು| ತಾನೆ ಬೆಳಗುವನೆಂದು ||

ಆನಂದದೊಳು ನಿಂದು | ತಾನೆ ಕೂಗಿತು ಇಂದು ||3||

ತಂದೆ ತಾಯಿಗಳಿಲ್ಲ| ಬಂಧು ಬಳಗವಿಲ್ಲ ||

ಮುಂದೇನು ಗತಿಯಿಲ್ಲ| ವೆಂದು ಕೂಗಿತು ನೋಡಿ ||4||

ಮಂದಿ ಮಧ್ಯದೊಳಿದ್ದು| ಪಂದ್ಯದಲ್ಲಿಯೆ ಗೆದ್ದು ||

ಸಂದೇಹವಳಿಸಿತ್ತು| ಒಂದೆ ಕೂಗುತಲಿತ್ತು ||5||

ಚಾರ ಚೋರರು ಬೆದರಿ| ಸಾರಲೆನ್ನುತ ಒದರಿ||

ಭೂರಿ ಬ್ರಹ್ಮಾತ್ಮೈಕ್ಯ| ಸಾರಿ ಕೂಗಿತು ವಾಕ್ಯ ||6||

ತಿಪ್ಪೆಯ ಕೆದರುತ್ತ | ಲಿರ್ಪಂಥ ಕೋಳಿಯು ||

ಸರ್ಪಭೂಷಣ ಶಿವ | ನೊಪ್ಪಿದ ಕೋಳಿಯು ||7||

ತಪ್ಪುಗಳೆಂದಿಗು | ಒಪ್ಪದೀ ಕೋಳಿಯು ||

ಮುಪ್ಪಾಗದೆಂದಿಗು | ಗುಪ್ತವಾಗಿರುವುದು ||8||

ಗುರುವೆ ಸಾಕಿದ ಕೋಳಿ| ಗುರುವಿನಾಜ್ಞೆಯ ತಾಳಿ|

ನರಹರಿ ಶಿವನೆಂದು| ಮೆರೆದು ಕೂಗಿತು ಯಿಂದು ||9||

ಶಿವಯೋಗಿಯ ನಾ ನೋಡಿದೆನು | ಈ ||

ಭವರೋಗವ ನೀಡಾಡಿದೆನು ||ಪ||

ಪವನ ಯೋಗದೊಳು ಕೂಡಿದೆನು | ಅನು|

ಭವಸುಖ ಮುಕ್ತಿಯ ಬೇಡಿದೆನು ||ಅಪ||

ಅಂಗಳದಲ್ಲಿಯೆ ಹಾಡುವನು | ಭವ|

ಭಂಗವ ಮಾಡಲು ಬಂದವನು |

ಕಂಗಳ ಮಧ್ಯದಿ | ಬೆಳಗುವನು | ಸ|

ನ್ಮಂಗಳ ರೂಪವ ತೋರುವನು ||1||

ಎಲ್ಲರೊಳೀತನು ಭಿಕ್ಷುಕನು | ನಿಜ|

ಬಲ್ಲವರಿಗೆ ಸಂರಕ್ಷಕನು ||

ಕಳ್ಳ ಸುಳ್ಳರಿಗೆ ಶಿಕ್ಷಕನು | ಗುರಿ|

ಬಲ್ಲವರಲ್ಲಿ ಪರೀಕ್ಷಕನು ||2||

ಮಾತಿನ ಮಲ್ಲನು ತಾನಾದ | ಚಿ|

ಜ್ಯೋತಿಯ ತೋರುತ ಸುಖಿಯಾದ|

ಜಾತಿಯ ಸೂತಕವಳಿದವನು | ನಿ|

ರ್ಭೀತಿಯೊಳಿದ್ದನು ನಿಶ್ಚಲನು ||3||

ಮಾಯೂ ಮಾನವ ವಿಗ್ರಹನು| ಈ|

ಕಾಯಗುಣಂಗಳ ನಿಗ್ರಹನು ||

ನ್ಯಾಯೋಪಾಯ ಪರಿಗ್ರಹನು | ನಿ|

ರ್ಮಾಯ ಸುಬೋಧಾ ಸಂಗ್ರಹನು ||4||

ರವಿ ಚಂದ್ರರನೇ ನುಂಗಿದನು | ಮಾ|

ನವ ಗುಣಗಳನೇ ಹಿಂಗಿದನು ||

ನವಲೀಲೆಯೊಳವತರಿಸಿದನು | ವೈ|

ಭವದಿಂ ನರಹರಿ ಪರ ಶಿವನು ||5||

ಗುರು ಪುತ್ರರಾದವರು| ಗುರುತನ್ನು ಬಲ್ಲವರು|

ಗುರಿಯನ್ನು ಪೇಳಿರಿ ಗುರು ಪುತ್ರರು ||ಪ||

ಚಂದ್ರ ಸೂರ್ಯರು ಮುಳುಗಿ| ಬಂದ ಬೆಳಕಾವುದು |

ಒಂದಕ್ಷರದ ಮಂತ್ರದಿರವಾವುದು ||

ಬಂಧ ಬಿಡುಗಡೆಯಾಗಿ| ನಿಂದ ನೆಲೆ ಯಾವುದು|

ಒಂದೆರಡು ಮೂರಾದ ಪರಿ ಯಾವುದು ||1||

ನಡೆಯೆಂಬುದಾವುದು| ನುಡಿಯಾದುದಾವುದು|

ನಡೆನುಡಿ ಯೊಳೊಂದಾದ ಬೆಡಗಾವುದು ||

ನಡೆನುಡಿಗಳ ಕೂಡಿ| ನಡುವಿರ್ಪುದಾವುದು||

ಒಡಲ ಸಾಕ್ಷಿಯ ಬ್ರಹ್ಮ ನೆಲೆಯಾವುದು ||2||

ಉಂಡುಪವಾಸಿ ನೆಲೆ| ಗೊಂಡಿರ್ಪುದಾವೆಡೆ ||

ಕೊಂಡು ಬಳಸಿದ ಬ್ರಹ್ಮಚಾರಿಯೆಲ್ಲಿ ||

ಪಿಂಡಾಂಡ ಬ್ರಹ್ಮಾಂಡ | ಖಂಡವಾಗದೆ ಕೂಡಿ|

ಕೊಂಡು ನರಹರಿಯಿರ್ಪ ನೆಲೆಯೆಲ್ಲಿ ||3||

ಇನ್ನುಂಟೆ ಭವ ಬಾಧೆಯು | ಸದ್ಗುರುವಿಂದ|

ಚೆನ್ನಯ್ತು ನಿಜ ಬೋಧೆಯು ||ಪ||

ಪೊಡವಿಯನ್ನಾಂತೇ | ಬಿಡುವಿಲ್ಲದಂತೇ||

ನಡೆವ ಸಂಚಾರದಿ| ಒಡಗೂಡಿ ಬ್ರಹ್ಮದಿ ||1||

ಜಲಧಿಯೊಳ್ಬರು ತಾ| ಸುಲಲಿತವಿರುತಾ||

ಸುಲಭ ಬೋಧಾಮೃತ | ಸಲಿಸಲು ನಿರುತಾ ||2||

ಉರಿವಗ್ನಿಯೊಳಗೆ | ಪರಕಾಂತಿ ಬೆಳಗೆ||

ಪರತರ ಚಿತ್ಕಳೆ| ಹೊರಹೊಮ್ಮಿದಾಗಳೆ ||3||

ಮರುತ ಸಂಚಾರ| ವಿರಮಿಸಲು ಪೂರಾ||

ಮರಣಕ್ಕೆ ದೂರ| ಸರಿದ ವಿಚಾರದಿ ||4||

ಆಕಾಶ ಮೀರಿ| ಏಕತ್ವ ಸೇರಿ||

ಲೋಕದಾಧಾರಿ| ತಾಕಲು ನರಹರಿ ||5||

ಕೈವಲ್ಯ ಪಡೆದಾತನು | ಗುರು| ಭಾವಾರ್ಥ ಹಿಡಿದಾತನು ||ಪ||

ಜೀವಾತ್ಮ | ಶಿವನಾಗಿ| ಸಾವಿಲ್ಲದಂತಾಗಿ|

ಸೇವಾರ್ಥ ನಿಜವಾಗಿ| ದೇವತ್ವ ನೆಲೆಯಾಗಿ ||ಅಪ||

ಚಾಪಲ್ಯಗಳ ನೀಗಲು| ಗುರು| ಶ್ರೀಪಾದಗಳ ಕಾಣಲು||

ಸಾಫಲ್ಯ ತನಗಾಗಿ | ಪಾಪಂಗಳನು ನೀಗಿ||

ಆಪೋ ಜ್ಯೋತಿಯೆ ಶಿವ| ರೂಪೆಂಬುದರಿವಾಗಿ ||1||

ನಾದಾನುಸಂಧಾನವು| ನಿಜ| ವೇದಾರ್ಥ ಸುಜ್ಞಾನವು||

ನಾದಾತ್ಮವೇ ವೇದ| ವೇದಾತ್ಮವೇ ಬೋಧ|

ನಾದಾಂತ ಪರಿಶುದ್ಧ | ವೇದಾಂತವಾಗಿದ್ದ ||2||

ಸೂತ್ರಾತ್ಮ ತಾನಾಗಿಯೇ| ಸುಖ| ಸ್ವಾತಂತ್ರಪರ ಯೋಗಿಯೇ||

ಸ್ವಾರ್ಥಂಗಳನು ಬಿಟ್ಟು| ನಿತ್ಯತ್ವವಳವಟ್ಟು||

ತೀರ್ಥ ಸ್ವರೂಪಾದ| ಮೂರ್ತಿ ನರಹರಿ ಬೋಧ ||3||

ಸುಳ್ಳೇ ಸಂಸಾರವೆಲ್ಲವು| ಬಾಳುವೆ|

ಎಳ್ಳಷ್ಟು ಸಾರವಿಲ್ಲವು ||ಪ||

ಜಳ್ಳು ದೇಹ ನಿತ್ಯವಲ್ಲ|

ಪೊಳ್ಳು ಮೋಹ ಕೃತ್ಯವೆಲ್ಲ||

ಎಲ್ಲ ನಿನ್ನದೆಂದು ಕೆಟ್ಟೆಯೋ| ಎಲ್ಲವ|

ಇಲ್ಲೆ ಬಿಟ್ಟು ಹೋಗಿಬಿಟ್ಟೆಯೊ ||ಅಪ||

ಇಲ್ಲೇ ಕೈಲಾಸವಿಲ್ಲವೇ | ಜ್ಞಾನಿಯ|

ಸೊಲ್ಲೇ ವೈಕುಂಠವಲ್ಲವೇ||

ಎಲ್ಲ ಮೋಹವನ್ನು ಕಳೆಯ|

ಬಲ್ಲ ಸೋಹಮೆಂಬ ಕಳೆಯ|

ನಿಲ್ಲಿಸುತ್ತ ಶಿವನ ಕಾಣುವ| ಶ್ರೀಹರಿ|

ಯಲ್ಲೆ ಸೇರಿ ತಾನೆಯೆನ್ನುವ ||1||

ಮೋಸಪಟ್ಟು ಹೋಗಬೇಡಿರಿ| ಲೋಕದ|

ಆಶೆ ಬಿಟ್ಟು ಶಿವನ ಕೂಡಿರಿ||

ಆಸೆಯೇ ಪಿಶಾಚಿಯಾಗಿ|

ಏಸು ಜನ್ಮವನ್ನು ನೀಗಿ|

ನಾಶವಾಗಿ ಲೋಕ ಕೆಟ್ಟಿತೋ|

ನರಹರಿ ದಾಸನನ್ನು ಪಾಪ ಬಿಟ್ಟಿತೋ ||2||

ದೇವದುಂದುಭೀ ಸುನಾದವ | ಕೇಳ್ದವ |

ದೇವರಲ್ಲಿ ಸೇರಿಹೋಗುವ ||

ಭಾವದಲ್ಲಿ ಶುದ್ಧರಾಗಿ |

ಸಾವು ಗೆದ್ದು ನಿತ್ಯರಾಗಿ ||

ದೇವ ನರಹರೀಂದ್ರ ಪಾದವ | ಸೇರುತ |

ಪಾವನಾತ್ಮರಾಗಿ ನಿಲ್ಲುವ ||3||

ಗುರುವಿನ ಬೋಧಾ | ಅರಿತರೆ ಸ್ವಾದಾ ||

ಪರತರದಾನಂದಾ | ನಿಲ್ಲಲು | ಹರಿವುದು ಭವಬಂಧಾ ||ಪ||

ತಿಲದೊಳು ಎಣ್ಣೆ | ಪಾಲೊಳು ಬೆಣ್ಣೆ ||

ನೆಲೆಸಿರುವಂತಿರುವ | ಜಗದೊಳು | ಕಲೆತು ಬೇರೆಯಿರುವಾ ||1||

ಅಜಪಾಮಂತ್ರ | ಭಜಿಸುವ ತಂತ್ರ ||

ನಿಜವನು ತಿಳಿಯೆಂದಾ | ಭವಭಯ | ರುಜಿನವ ಕಳೆಯೆಂದಾ ||2||

ನೀತಿಯ ತಿಳಿದು | ಭೀತಿಯ ಕಳೆದು ||

ಪಾತಕ ತೊಳೆಯೆಂದಾ | ಬ್ರಹ್ಮದ | ಚೇತನ ತಿಳಿಯೆಂದಾ ||3||

ಭ್ರಾಂತಿಯನಳಿದು | ಶಾಂತಿಯ ತಳೆದು ||

ಚಿಂತೆಯ ಬಿಡು ಎಂದಾ | ಬ್ರಹ್ಮದ ಚಿಂತನ ಮಾಡೆಂದಾ ||4||

ಮೊಟ್ಟಮೊದಲೊಳು | ತುಟ್ಟ ತುದಿಯೊಳು||

ನಟ್ಟನಡುವೆ ನಿಂದಾ | ನರಹರಿ | ಬಟ್ಟಬಯಲೆ ಎಂದಾ ||5||

ವ್ಯಾಕರಣದಲ್ಲಿ ವೇದಾಂತ | ಏ |

ಕೀಕರಿಸಲು ಸತ್ಯ ಸಿದ್ಧಾಂತ ||ಪ||

ಲೋಕಕ್ಕೆ ಬೆಳಕೀವ | ವ್ಯಾಕುಲವ ಕಳೆಯುವ |

ಸಾಕಾರವಳಿದ ನಿ| ರಾಕಾರ ಪ್ರಣವದ ||ಅ.ಪ||

ನಡೆಯೊಳಾಗಮ ಸಂಧಿ ನಿಂತು | ನಿನ್ನ |

ನುಡಿಯೊಳಾದೇಶವು ಬಂತು||

ನಡೆನುಡಿಯೆರಡನ್ನು | ನಡುವೆ ಲೋಪವ ಮಾಡಿ ||

ಕಡೆಯಲ್ಲಿ ಉಳಿದಂಥ | ನುಡಿಬ್ರಹ್ಮದರಿವಾಂತ ||1||

ನಾನೆಂಬುದುತ್ತಮ ಪುರುಷ | ನೋಡೆ |

ನೀನೆನಲು ಮಧ್ಯಮ ಪುರುಷ ||

ತಾನೆಂಬುದಾತ್ಮಾರ್ಥ | ಅವನೆ ಪ್ರಥಮ ಪುರುಷ ||

ತಾನೆ ತಾನಾದಾತ | ತಾನೆ ಪುರುಷೋತ್ತಮ ||2||

ಕರ್ತೃಪದವದೆ ಶಿವತತ್ವ | ಜೀವ |

ತತ್ವವೆ ಕರ್ಮದ ಪದವು ||

ತ್ವಂಪದಗಳ ಏ | ಕತ್ವ ಕ್ರಿಯಾಪದ |

ಮತ್ತಿದು ಅಸಿಪದ | ಸತ್ಯವೆಂದರುಹುವ ||3||

ನುಡಿ ಬ್ರಹ್ಮ ವ್ಯಾಕರಣಾರ್ಥ | ಸರ್ವ

ನುಡಿ ಧರ್ಮ ಪ್ರಣವದ ಸೂತ್ರ ||

ನುಡಿಯೆ ಶ್ರೀಗುರುಲಿಂಗ | ದೊಡಲಾಗಿ ನಿಸ್ಸಂಗ ||

ಪಡೆದರ್ಗೆ ಭವಭಂಗ || ಒಡೆಯ ನರಹರಿ ರಂಗ ||4||

ಐದು ಸಮಾಸಂಗಳರ್ಥ | ಮುಕ್ತಿ |

ಸಾಧನೋಪಾಯದ ಸೂತ್ರ ||ಪ||

ಮೋದದಿ ಶ್ರೀ ಗುರುಪಾದವ ಸೇರುತ್ತ ||

ಸಾಧಿಸಿದರೆ ತತ್ವ | ಶೋಧನವಾಗಲು ||ಅ|ಪ||

ಪೃಥ್ವಿಯ ಸ್ಥಾನದೊಳಿರುವ | ನೈಜ |

ತತ್ವದ ವಾಚ್ಯವಾಗಿರುವ ||

ತತ್ಪುರುಷನೆ ಶಿವ | ಸತ್ಯವೆಂಬರ್ಥವ ||

ಬಿತ್ತರಿಸಿ ಪೇಳ್ವುದೆ | ತತ್ಪುರುಷ ಸಮಾಸ ||1||

ಕರ್ಮ ಕಲಾಪಂಗಳೆಲ್ಲಾ | ನುಡಿಯೆ |

ನಿರ್ಮಿಸಿ ಹಿಡಿದಿಹುದಲ್ಲಾ ||

ಕರ್ಮವ ಕೂಡಿ ನಿ| ಷ್ಕರ್ಮಿಯಾಗಿರಬಲ್ಲ |

ಧರ್ಮ ಸಮಾಸವೆ | ಕರ್ಮ ಧಾರಯವೆಂಬ ||2||

ಅಂಶಿಯೆಂದೆನ್ನಿಪ ಶಿವನು | ಜೀವ |

ನಂಶವೆಂದೆನ್ನಿಸುತಿಹನು || ಸಂಶಯಾತ್ಮಕ ಜೀವ |

ಹಂಸ ಜ್ಞಾನಾಗ್ನಿಯೊಳು |

ಅಂಶಿ ಶಿವನೊಳು ಸೇರ | ಲಂಶೀ ಸಮಾಸವು ||3||

ದ್ವಂದ್ವವೆನಿಸುವ ಶಿವಶಕ್ತಿ | ಕೂಡಿ |

ಒಂದಾಗಿ ನಿಂತಿರ್ಪ ಯುಕ್ತಿ |

ನಿಂದು ವಾಯುಸ್ಥಾನ | ಹೊಂದಿ ನಿಶ್ಚಲವಾಗಿ ||

ಸಂಧಿಸಿರ್ಪುದು ತಾನೆ | ದ್ವಂದ್ವ ಸಮಾಸವು ||4||

ಬಹುವಾಗಿ ಕೇಳುತ್ತ ತಿಳಿದು | ತಾನೆ |

ವಹಿಸುತ್ತಲನುಭಾವ ತಳೆದು ||

ವಿಹಿತಾರ್ಧಮಾತ್ರೆ ಸಂ | ನ್ನಿಹಿತಾರ್ಥ ವೈಭವ ||

ಮಹಿಮ ನರಹರಿಯೊಳ | ಗಿಹುದೆ ಬಹುವ್ರೀಹಿಯು ||5||

ಕಂಡೆ ಶಿವಯೋಗಿಯ | ಮಂಡಲತ್ರಯ ಮಧ್ಯ |

ಚಂಡ ಪ್ರಕಾಶದಿ ಬೆಳಗುತಿರ್ಪವನಾ ||ಪ||

ಪಿಂಡಾಂಡ ಬ್ರಹ್ಮಾಂಡ | ಮಂಡಲಾ ಖಂಡನ |

ತಾಂಡವ ನೃತ್ಯದೊಳಾನಂದ ಪರನಾ ||ಅ|ಪ||

ಧರೆಯಲ್ಲಿ ಸಂತತ ಚರಿಸುತಿರ್ಪಾತನ |

ಶರಧಿಯೊಳೀಜುತ್ತ ಮೊರೆವಾತನಾ ||

ಉರಿವಗ್ನಿ ಮಧ್ಯದಿ | ಉರು ತಪವಗೈವನ |

ಮರುತನ ನಿಲಿಸುತ್ತ ಮೆರೆವಾತನಾ ||1||

ಆಕಾಶದೊಳು ತುಂಬಿ | ಏಕಾಂತವಾದವನಾ |

ಏಕನಾದವ ತೋರಿ ಸ್ವೀಕರಿಸಿದವನಾ ||

ಭೂಕಾಂತೆಗಾಕಾಶ | ಕ್ಕೇಕವಾಗಿರುವವನ |

ಸಾಕಾರವಳಿದ ನಿರಾಕಾರ ಪರನಾ ||2||

ಮಂತ್ರ ರೂಪಕನ ತ್ರೈ | ಮೂರ್ತಿ ಸ್ವರೂಪನ |

ಸ್ತೋತ್ರ ಪಾತ್ರನ ಸತ್ಯ ಚಿನ್ಮಾತ್ರ ಘನನಾ ||

ಸೂತ್ರಧಾರಕನ ವಿ | ಚಿತ್ರ ಚರಿತ್ರನ |

ಸತ್ತು ಚಿದಾನಂದ ನರಹರಿಯೆನಿಪನ ||3||

ಅಕ್ಷರ ಪರಬ್ರಹ್ಮ ಯೋಗ | ಸರ್ವ |

ರಕ್ಷಕ ನುಡಿಬ್ರಹ್ಮ ಪ್ರಣವವಿದೀಗ ||ಪ||

ಅಕ್ಷರವೆ ಶಿವ ತತ್ವವೆನಿಸಿ | ಸರ್ವ |

ಸಾಕ್ಷಿಚೇತನ ಬ್ರಹ್ಮ ತಾನೆ ತಾನೆನಿಸೀ ||ಅ|ಪ||

ಸರ್ವಾಕ್ಷರದ ಮೂಲವಹುದು | ತಾನೆ |

ಸರ್ವಾಕ್ಷರವ ನುಂಗಿ ನಿರ್ಗುಣವಿಹುದು ||

ದುರ್ವಾದಿಗಳಿಗೆ ಕಾಣಿಸದು | ತಾನೆ |

ಸರ್ವ ವೇದಾರ್ಥವ ಬಿತ್ತರಿಸುತಿಹುದು ||1||

ಮಂತ್ರಮೂಲದ ಪರಬ್ರಹ್ಮ | ತನ್ನ|

ತಂತ್ರದಿಂ ಜಗವನಾಡಿಸುವುದೇ ಧರ್ಮ ||

ಮಂತ್ರದಂತ್ಯದೊಳು ನಿಷ್ಕರ್ಮ | ರೂಪ|

ವಾಂತು ಬೆಳಗುವುದಿದು ಗುರುವಿನ ಮರ್ಮ ||2||

ಸ್ವರ ದೇವತೆಗಳೆಲ್ಲ ಬಂದು | ಭಕ್ತಿ |

ಭರದಿ ಸುಷುಮ್ನೆಯ ದ್ವಾರದಿ ನಿಂದು ||

ಪರಮಾತ್ಮನಿಗೆ ಪೂಜೆಯೆಂದು | ಧ್ಯಾನ |

ಪರರಾಗಿರಲು ನುಡಿಯಾಗುವುದೆಂದು ||3||

ಸ್ವರರಹಿತವೆ ಪರನಾದ | ಸರ್ವ |

ಸ್ವರಸಹಿತ ಬರಲದು ಪಶ್ಯಂತಿ ನಾದ||

ವರ ವ್ಯಂಜನಗಳೆ ಮಧ್ಯಮವು | ಎಲ್ಲ |

ಬೆರೆದಾದ ಪದವಾಕ್ಯ ವೈಖರಿ ಕ್ರಮವು ||4||

ವರ್ಣಾತ್ಮ ಜೀವತ್ವವಹುದು| ಪೂರ್ಣ|

ಧ್ವನ್ಯಾತ್ಮ ಬ್ರಹ್ಮವ ಕೂಡುತ್ತಲಿಹುದು||

ವರ್ಣಂಗಳೆಲ್ಲವನಳಿದು| ಶೂನ್ಯ|

ಪೂರ್ಣ ಬ್ರಹ್ಮವೆ ಪೂಜ್ಯ ನರಹರಿಯಹುದು ||5||

ಗುರು ಕೊಟ್ಟ ಮಂತ್ರ ಪಿಂಡವನು | ಸೇರಿ|

ಪರಮಾರ್ಥ ಸಾಧನೆ ಮಾಡಿಕೊಂಡವನು ||ಪ||

ಪರಮುಕ್ತಿ ಸುಖವ ಹೊಂದುವನು| ತಾನೆ|

ಪರಬ್ರಹ್ಮನಾಗಿ ಪ್ರಕಾಶಿಸುತ್ತಿಹನು ||ಅಪ||

ಅಕ್ಷರಂಗಳೆ ಮಂತ್ರಪಿಂಡ| ಸರ್ವ|

ಅಕ್ಷರಂಗಳೊಳಿರ್ಪ ಮಂತ್ರವ ಖಂಡ||

ಅಕ್ಷರದೊಳಗೆ ಬ್ರಹ್ಮಾಂಡ| ಸರ್ವ|

ಅಕ್ಷರಾತ್ಮಕ ಶಿವನು ನಾದದೊಳು ಕಂಡಾ ||1||

ಹದಿನಾರು ಸ್ವರದೊಳಗೆ ಜೀವಾ| ಕೂಡಿ|

ಹದಿನೇಳು ತತ್ವವೆ ಸೂಕ್ಷ್ಮತನು ಭಾವ||

ಇದು ಕಳೆವುದೆ ಬ್ರಹ್ಮಸೂತ್ರ| ಪರಮ|

ಪದನಾದ ಶೂನ್ಯ ಕೊನೆಗುಳಿದರ್ಧ ಮಾತ್ರ ||2||

ಸ್ವರಗಳೆ ಸುರರೆನ್ನಬಹುದು | ಸರ್ವ |

ಸ್ವರ ಗಮನವೆ ಸ್ವರ್ಗ ಸುಷುಮ್ನೆಯಹುದು ||

ಪರವಾದ ಬ್ರಹ್ಮ ಸಂಧಿಸುತ್ತ | ತಾವು |

ಪರಮಾತ್ಮ ಸೇವೆಯಗೈವರು ಸತತ ||3||

ಐದು ವರ್ಗವೆ ಪಂಚಭೂತ| ವರ್ಗ| ವೈದು

ಇಪ್ಪತ್ತೈದು ವ್ಯಂಜನ ಮೊತ್ತ||

ಆದ ಮಂತ್ರಪಿಂಡ ಸ್ಥೂಲ| ದೇಹ|

ದಾಧಾರ ಸ್ವರ ಸೂಕ್ಷ್ಮವಾಯ್ತು ವಿಶಾಲ ||4||

ಉಳಿದ ವರ್ಗೀಯಗಳೆಂಟು | ಕೂಡಿ|

ಹೊಳೆವಷ್ಟ ಪ್ರಕೃತಿಯೆ ಮಾಯೆಯ ಗಂಟು||

ಕಳೆದರಾಗಲೆ ಮುಕ್ತಿಯುಂಟು| ಮರವೆ|

ಬೆಳೆದು ಕಾರಣ ದೇಹ ಜನ್ಮಕ್ಕೆ ನಂಟು ||5||

ಇದು ಮಂತ್ರಪಿಂಡದ ಸ್ಥೂಲ | ದೇಹ |

ವಿದು ಸ್ವರ ಸೂಕ್ಷ್ಮದಿಂದಾಯ್ತು ವಿಶಾಲ ||

ಇದು ಸ್ವರ ಜಾಲದಿ ಕಾಲ | ಕರ್ಮ |

ಹದವಾಗಿಯಳಿವುದು ಜನ್ಮದ ಮೂಲ ||6||

ಮಂತ್ರ ಪಿಂಡದ ಶಿರವೆ ಸ್ವರವು| ನೋಡೆ|

ಮಂತ್ರಪಿಂಡದ ಹೊಟ್ಟೆ ಸರ್ವ ವ್ಯಂಜನವು||

ಮಂತ್ರ ಪಾದವೆ ಯೋಗವಾಹ| ಇಂಥ|

ಮಂತ್ರ ಪಿಂಡವೆ ನರಹರಿ ಯೋಗಿ ದೇಹ ||7||

ಎತ್ತುವೆನಾರತಿಯಾ | ಗುರುವಿಗೆ | ಎತ್ತುವೆನಾರತಿಯಾ ||ಪ||

ದತ್ತಾತ್ರೇಯಗೆ | ಸತ್ಯಸನಾತನಗೆತ್ತುವೆನಾರತಿಯಾ ||ಅಪ||

ಮೂವರು ಮೂರ್ತಿಗಳು| ಸೇರಿದ| ಪಾವನ ರೂಪದೊಳು ||

ಕೇವಲ ಪ್ರಣವ ಪ್ರ| ಭಾವದಿ ಮೆರೆಯುವ|| ದೇವರ ದೇವನಿಗೆ ||1||

ನಾದವೆ ಪಾದಗಳು| ಬಿಂದುವೆ| ಆದುದೀತ ನೋಡಲು||

ಭೇದರಹಿತ ಕಳೆ| ಯಾದ ಶಿರಸ್ಸಿನ| ಸಾಧುವೆನಿಸಿದವಗೇ ||2||

ಓಂಕಾರವು ಎನೀಸೀ| ತಾನಿರ| ಹಂಕಾರದಿ ಜನಿಸೀ||

ಝೇಂಕರಿಸುತ ಹರಿ| ಶಂಕರ ಬ್ರಹ್ಮರ| ಸೋಂಕಿದ ನರಹರಿಗೆ ||3||

ಮಂತ್ರಾರ್ಥವರಿದಾತ ಯೋಗಿ| ಹಂಸ|

ಮಂತ್ರಮಧ್ಯದೊಳಿರ್ಪ ನಿರ್ಗುಣನಾಗಿ ||ಪ||

ಮಂತ್ರ ಸೋಹಂ ಕೊನೆಗೆ ಸಾಗಿ | ಸರ್ವ|

ತಂತ್ರ ಸ್ವತಂತ್ರನು ತಾನೆ ತಾನಾಗಿ ||ಅಪ||

ವರ್ಣಂಗಳೈವತ್ತು ಕೂಡಿ| ದೇವ|

ವರ್ಣ ಮಾದೋಂಕಾರದೊಳು ಮನೆ ಮಾಡಿ||

ವರ್ಣ ಮೂರರೊಳೊಡಗೂಡಿ | ಸರ್ವ|

ವರ್ಣ ಸೃಷ್ಟಿ ಸ್ಥಿತಿ ಲಯವಾಯ್ತು ನೋಡಿ ||1||

ಸರ್ವ ವರ್ಣಂಗಳ ಸೇರಿ | ತಾನೆ |

ಸರ್ವ ವರ್ಣಗಳ ವಿಜೃಂಭಿಸಿ ತೋರಿ ||

ಸರ್ವ ವರ್ಣಗಳನು ಮೀರಿ | ಕೊನೆಗೆ |

ಸರ್ವ ಸಾಕ್ಷಿಯು ಉಳಿಯಿತು ನಿರ್ವಿಕಾರಿ ||2||

ಯೋಗವಾಹದೊಳೊಂದು ಸೊನ್ನೆ | ಬ್ರಹ್ಮ |

ಯೋಗವ ಪಡೆಯಲು ತಾನಿದು ಸನ್ನೆ ||

ಆಗಿರ್ಪುದಿದು ತಾನೆ ಬಿಂದು | ಪೂರ್ಣ |

ವಾಗಿ ಶೂನ್ಯವು ಪೂಜ್ಯ ಕೊನೆಯಲ್ಲಿ ನಿಂದು ||3||

ಎರಡು ಸೊನ್ನೆಯ ಯೋಗವಾಹ | ನೋಡೆ |

ಪರಮ ಜೀವರಿಗೆ ಸಂಕೇತ ನಿರ್ವಾಹ ||

ಮೆರೆವಹಕಾರವೀ ಶತ್ವ | ಬಂದು |

ಬೆರೆದ ಸಕಾರವೆ ಶಕ್ತಿಯ ತತ್ವ ||4||

ಓಂಕಾರದೊಳಗುಂಟು ಸುರರು| ನಿಂದ|

ಝೇಂಕಾರದೊಳಗುಂಟು ಮನು ಮುನೀಶ್ವರರು||

ಓಂಕಾರವೇ ವೇದ ಶಾಸ್ತ್ರ| ನಿಂತ|

ಝೇಂಕಾರ ಬೋಧೆ ನಿರ್ಗುಣ ಬ್ರಹ್ಮ ಸೂತ್ರ ||5||

ಜಗದಾದಿ ಬ್ರಹ್ಮವೇ ಪ್ರಣವ | ಸರ್ವ|

ಯುಗಧರ್ಮ ಮೂಲವಂದೆನಿಸಿರ್ಪ ಘನವಾ||

ಝಗಝಗಿಸುವುದಾದಿ ಪ್ರಣವ | ನಮ್ಮ |

ಜಗದಾತ್ಮ ನರಹರಿ ತಾನಾದ ಪ್ರಣವ ||6||

ಛಂದಸ್ಸು ಶಾಸ್ತ್ರದ ಸಾರ| ಕರ್ಮ| ಬಂಧಗಳಳಿವ ವಿಚಾರ ||ಪ||

ಛಂದೋ ಭಂಗವೆಯಿಲ್ಲ| ದಂದವ ಶಿವಬಲ್ಲ|

ಒಂದೆ ನಾದವ ಕೂಡಿ| ಬಂದ ವೇದವ ನೋಡಿ ||ಅಪ||

ನಡೆಯಲ್ಲಿ ಪ್ರಾಸಾನುಪ್ರಾಸ | ಆದಿ| ಕಡೆಗಿರ್ಪ ಪ್ರಾಸ ವಿಲಾಸ||

ನುಡಿಯೊಳಕ್ಷರ ಗಣ| ದೊಡಲಾಗಿ ನುಡಿ ನಿಂತ|

ಕಡೆಯಲ್ಲಿ ಯತಿಯಿದ್ದ| ದೃಢಯೋಗದೊಳು ಸಿದ್ಧ ||1||

ಮಾತ್ರೆಯೆರಡೆಂಬುದೆ ಗುರುವು | ಒಂದು

ಮಾತ್ರೆಯ ಕಾಲವೆ ಲಘುವು ||

ಮಾತ್ರೆಯೆರಡು ಬ್ರಹ್ಮ | ಸೂತ್ರವಾಗಿರುವುದು ||

ಮಾತ್ರೆ ಒಂದಕೆ ಜೀವ | ಮಾತ್ರವೆಂದರುಹುವ ||2||

ಅಕ್ಷರಗಳ ಮೊತ್ತ ಗಣವು | ಸರ್ವ |

ಅಕ್ಷರ ಸೃಷ್ಟಿ ಕಾರಣವು ||

ಅಕ್ಷರವೆಲ್ಲ ನಿ | ರಕ್ಷರದೊಳಗಿರ್ಪ ||

ಲಕ್ಷ್ಯವನರಿಯಲು | ಸಾಕ್ಷಿಯಾಗಿರುತಿರ್ಪ ||3||

ಛಂದಸ್ಸಿನಲಿ ವೇದಶಾಸ್ತ್ರ | ಬ್ರಹ್ಮ |

ದಂದಕ್ಕೆ ಒಪ್ಪುವ ವಸ್ತ್ರ ||

ಛಂದಸ್ಸು ಬ್ರಹ್ಮಾಸ್ತ್ರ | ದಿಂದ ಛೇದಿಸಿ ಸರ್ವ |

ಸಂದೇಹವಳಿದು ನಿ| ರ್ದ್ವಂದ್ವವೆಂದೆನಿಸುವ ||4||

ಛಂದಸ್ಸಿನೊಳು ಸರ್ವ ಕಾವ್ಯ ಕೂಡಿ|

ಸೌಂದರ್ಯದಿಂದ ಸುಶ್ರಾವ್ಯ ||

ಬಂಧುರ ಪದವಾಕ್ಯ| ಬೃಂದದಲಂಕಾರ|

ದಿಂದ ಶಾರದೆಯಾಗಿ| ಬಂದ ನರಹರಿಯೋಗಿ ||5||

ಕವಿ ಹೃದಯೂರವಿಂದದೊಳು | ಸೇರಿ|

ಶಿವ ಬಂದನಾನಂದ ಪಡಲು||

ನವ ಸ್ಫೂರ್ತಿಯೀಯುವ| ಸುವಿಲಾಸ ಗೈಯುವ||

ಶಿವಶಕ್ತಿ ನ್ಯಾಟಸಂ| ಭವವಾದ ಕವನವೆ ||6||

ಗಾನವೆನ್ನಿಸಿ ಗಾಯತ್ರೀ | ಸಮ್ಯ |

ಜ್ಞಾನವೆನ್ನಿಸಿ ಸಾವಿತ್ರೀ ||

ಧ್ಯಾನ ರೂಪವ ತಾಳಿ | ಮೌನಿ ನರಹರಿ ಪೇಳಿ |

ದಾನಂದದೊಳು ಕೇಳಿ | ಜ್ಞಾನ ಸಿದ್ಧಿಸಿಕೊಳ್ಳಿ ||7||

ಆಶ್ರಮಗಳು ಇಲ್ಲಾ| ಜ್ಞಾನಿಗೆ | ಆಶ್ರಯ ಬೇಕಿಲ್ಲಾ ||ಪ||

ವಿಶ್ವವಿದೆಲ್ಲವ | ವಿಶ್ರಮಿಸಿರುವವ |

ಶಾಶ್ವತ ನೆನುವ| ತ್ಯಾಶ್ರಮಿ ತಾನಿವ ||ಅಪ||

ಮಹಿಯೊಳು ಗೃಹದಲ್ಲಿ | ದಂಪತಿ |

ವಿಹಿತದೊಳಿಹರಿಲ್ಲಿ|| ಗೃಹ ಧರ್ಮವ ಸಂ|

ಗ್ರಹಿಸುತ ನಡೆಯುತ|| ಇಹ ಶಿವಶಕ್ತಿಯ| ಮಹಿಮೆಯ ನರಿತರೆ ||1||

ವಾರಿಯೊಳಾಶ್ರಯವ ಪಡೆದುವಿ|

ಚಾರದಿ ಮೈತೊಳೆವಾ ಸೇರುತ ಗುರುಕುಲ|

ಸಾರ ವಿದ್ಯೆಗಳ| ಹೀರುವ ಬ್ರಹ್ಮ| ಚಾರಿಯನರಿತರೆ ||2||

ವನವಾಸದ ಮಾಡಿ| ಮುನಿವರ|

ರನು ಸೇವಿಸಿ ಕೂಡಿ|| ಘನವಾನಪ್ರ|

ಸ್ಥನು ಶ್ರವಣಾರ್ಥಿಯು|| ಮಿನುಗುತ ಗಗನದಿ| ವಿನಯದೊಳಿರ್ಪಗೆ ||3||

ಅಗ್ನಿಯ ಸಹವಾಸಿ| ನಿರ್ಮಲ|

ಪ್ರಜ್ಞೆಯ ಸನ್ಯಾಸಿ|| ಯಜ್ಞದಿ ತಾ ಸ| ರ್ವಜ್ಞನ ಕೂಡುತ|

ಪ್ರಾಜ್ಞನೆನಿಸಿ ಸ್ವ| ಪ್ರಜ್ಞೆಯೊಳಿರುವಗೆ ||4||

ಪವನ ಯೋಗದೊಳಗೆ | ಕೂಡುತ| ಶಿವ ಸನ್ನಿಧಿಯೊಳಗೆ||

ಅವಿರಳ ತೇಜದಿ| ದಿವಿಜರ ಮೇಳದಿ|

ಶಿವನರಹರಿಯೊಳು | ಪ್ರವರವ ತಿಳಿಯಲು ||5||

ಇಂದೇ ಬಂದೇ| ಶ್ರೀ ಗುರು ತಂದೆ ||ಪ||

ಸಂದೇಹವನು| ಛೇದಿಸಿ ನಿಂದೇ|

ಸುಂದರ ಬೋಧಾ ನಂದವ ತಂದೇ ||ಅಪ||

ನಡೆಯುತ ಬಂದೇ| ನುಡಿಯುತ ನಿಂದೇ|

ನಡೆ ನುಡಿಯೊಂದೇ| ಕಡೆಯೊಳಗೆಂದೇ||

ಕಡು ಸುಖದಿಂದೇ| ಅಡಗುತ ನಿಂದೇ||

ಜಡತೆಯ ಕೊಂದೇ| ಪೊಡವಿಗೆ ತಂದೇ ||1||

ನೀನಾಗಮಿಸೇ| ತಾನೆಸಕಾರ| ನೀ

ನಿರ್ಗಮಿಸೇ| ತಾನೆಹಕಾರ||

ನೀನಾಗಮ ನಿರ್ಗಮ ಸಂಚಾರ|

ನೀನೆ ನಿಲ್ಲಿಸೆ ಬಿಂದುವೆ ಪೂರಾ ||2||

ತಾರಕ ಯೋಗವೆಯನ್ನೀ ಭವಕೆ|

ತಾರಕವೆಂಬುದ ನೆನ್ನನು ಭವಕೆ||

ತೋರಿದ ನಿನ್ನೀ ಉಪಕಾರಕ್ಕೆ |

ಮೀರಿದುದಿಲ್ಲವು ನರಹರಿ ತಂದೇ ||3||

ತಾನೆ ಲಿಂಗ ತಾನೆ ಲಿಂಗ| ತನಗನ್ಯವಾಗಿ| ಕಾಣುವಂಗ ಮೂರುಭಂಗ ||ಪ||

ಜ್ಞಾನ ಮಾತ್ರ ಸ್ವಾನುಭಾವ| ಭಾನು ಕೋಟಿ ತೇಜವೀವ ||ಅಪ||

ಮೌನವ್ಯಾಕೆ| ಧ್ಯಾನವ್ಯಾಕೆ ತನ್ನನ್ನು ತಿಳಿಯ|

ಲೇನು ಸಾಧನಂಗಳೇಕೆ||

ನಾನು ನೀನು ಎಂಬ ಭೇದ| ಏನು ಇಲ್ಲದಾತ್ಮನಾದ|

ತಾನೆ ಸರ್ವಸಾಕ್ಷಿಯಾಗಿ| ಜ್ಞಾನ ಮಾತ್ರನಾದ ಯೋಗಿ ||1||

ಮೂಲ ಮಂತ್ರ ತಿಳಿಯಲಾಗಿ| ದೇಹಾತ್ಮಭಾವ|

ಮೂಲವಳಿದು ನಿತ್ಯನಾಗಿ||

ಕಾಲು ಕೈಯಿ ಕಣ್ಣು ಬಾಯಿ| ಕೇಳ್ವ ಕಿವಿಯು ಮೂಗು ಚರ್ಮ |

ಮೇಲೆ ಗುಹ್ಯಗುದವು ಜಿಹ್ವೆ| ಸ್ಥೂಲತನುವು ಜಡಗಳೆನಲು ||2||

ತನಗೆ ತೊರುವಂತರಿಂದ್ರಿಯ| ತನಗನ್ಯವೆಂದು|

ಎಣಿಸಿ ನೋಡಿ ತಿಳಿದು ಸಂಧಿಯ||

ಮನವು ಬುದ್ಧಿ ಚಿತ್ತ ಹಮ್ಮು| ಮಿನುಗುವಾತ್ಮನನ್ನು ತಿಳಿಯ|

ವೆನುತ ನಂಬಿ ನರಹರೀಶ| ನನಘನೆನ್ನೊಳೈಕ್ಯವೆನಲು ||3||

ಗುರು ಪಾದವನು ಕೂಡಿ| ಪರಮಾನು ಭವ ಮಾಡಿ ||ಪ||

ಕರುಣೆಯ ಬೇಡುತ| ಪರಮನೊಳಾಡುತ ||ಅಪ||

ಘಟಸರ್ಪ ತಾನೆಂತು| ಘಟಿಸಿಪುದೆಂದರಿತು||

ಘಟ ಚಕ್ರದ ಸಂ| ಘಟನೆಯ ಬೆರೆತು ||1||

ಭೋರ್ಗರೆವ ಸರ್ಪವನು | ನಿಗ್ರಹಿಸಿ ದರ್ಪವನು||

ಮಾರ್ಗದಿ ನಿಲಿಸುತ| ದುರ್ಗತಿಯಳಿಸುತ ||2||

ಮಂತ್ರಕ್ಕೆ ವಶನಾಗಿ| ನಿಂತದ್ದೆ ನಿಜವಾಗಿ||

ತಂತ್ರವ ಕೂಡಿ| ಚಿಂತನ ಮಾಡಿ ||3||

ಕುಂಡಲಿಯ ವಶ ಮಾಡಿ| ಕೊಂಡಾತ ಮಹನೀಯ||

ಮಂಡಲತ್ರಯದಾ| ಖಂಡವ ಸೇರುತ ||4||

ಸೂರ್ಯ ಚಂದ್ರಾಗ್ನಿಗಳ | ಮೀರಿರುವ ಮಹತೇಜ||

ಮೂರುತಿ ನರಹರಿ| ತೋರಿದ ನೀಪರಿ ||5||

ದೇಹವೆ ದೇವಾಲಯ| ಇದಕೆ| ಸಂದೇಹವೇ ಇಲ್ಲವಯ್ಯ ||ಪ||

ಮೋಹವ ಬಿಟ್ಟರೆ| ಸಾಹಸಪಟ್ಟರೆ ||ಅಪ||

ಪೃಥ್ವಿಯೊಳಗೆ ನಡೆ| ದಿತ್ತು ಪ್ರದಕ್ಷಿಣೆ||

ಹೊತ್ತು ಹೊತ್ತಿಗಾ | ಗುತ್ತಿದೆ ಪೂಜೆಯು ||1||

ಸುರಸ ಪ್ರಸಾದವ | ವರ ಜಲತತ್ವದಿ ||

ಬೆರೆಯುವನಾತ್ಮನು | ವರ ನೈವೇದ್ಯವ ||2||

ಅಗ್ನಿಯೇ ದೀಪವು| ಪ್ರಜ್ಞಾ ರೂಪವು ||

ವಿಘ್ನವೆ ಇಲ್ಲದೆ| ಬೆಳಗುತಲಿರುತಿದೆ ||3||

ವಾಯುವೆ ಮಂದಿರ| ಕಾಯುವ ಭಂಟನು ||

ಕಾಯಕರ್ಮಗಳದಾಯವ ಬಲ್ಲವ ||4||

ಅಂಬರ ಬಹಳಾ| ಡಂಬರ ವಾದ್ಯದಿ ||

ತುಂಬಿದೆ ಮಂತ್ರದ| ಸಂಭ್ರಮ ಪೂಜೆಯ ||5||

ಜೀವನೆ ದೇವರ| ಸೇವೆಯಗೈವನು ||

ಪಾವನನೀತನು| ಕೇವಲನಪ್ಪನು ||6||

ನರನೇ ಹರಿಯಾಗಿರುತಿಹನೆನ್ನುವ||

ಪರಿಯನು ಪೇಳ್ವನು | ನರಹರಿ ತಾನು ||7||

ಗಣಿತವೆಂಬುದು ನಿಜಶಾಸ್ತ್ರ| ಎಲ್ಲ |

ಗಣಿತಕ್ಕೆ ಸಿಕ್ಕಿದೆ ಈ ಜಗ ಸೂತ್ರ ||ಪ||

ಎಣಿಸಿ ಎಲ್ಲವ ಕೂಡಿ ಕಳೆದಾ | ಮುಂದೆ |

ಗುಣಿಸಿ ಭಾಗಿಸಿ ನೋಡೆ ಸೊನ್ನೆಯೊಂದುಳಿದಾ ||ಅಪ||

ಕೂಡಿದ್ದುದೆಲ್ಲವು ಬಂಧ| ಕಳೆದು |

ನೋಡಿದ್ದುದೆಲ್ಲವು ಮುಕ್ತಿ ಸಂಬಂಧ||

ಮಾಡಿ ಗುಣಿಸಿದುದೆಲ್ಲ ಮಾಯ| ಭಾಗ|

ಮಾಡಿ ತತ್ವಾರ್ಥವ ತಿಳಿಯೆ ನಿರ್ಮಾಯ ||1||

ಗುಣಿಸಿ ಹೆಚ್ಚುವುದೆಲ್ಲ ಬಂಧ | ಬಂದ |

ಗುಣಲಬ್ಧವಳಿವುದೆ ಮೋಕ್ಷ ||

ಗುಣಗಳ ಗುಣಿಸದೆ | ಗುಣವಾವುದೆಣಿಸದೆ |

ಗುಣಕತೀತನು ಬ್ರಹ್ಮ | ಗಣನೆಗೆ ಮೀರಿಹ ||2||

ಭಾಗವ ಹಂಚುತ ಭೂತ | ಕೊಟ್ಟ |

ಭಾಗವನವಕೆಲ್ಲ ವಿತ್ತ ||

ಭಾಗಾಹಾರವ ಮಾಡಿ | ಭೋಗ ದೂರವ ಮಾಡಿ |

ಭಾಗವಿಭಾಗ ಪ್ರ | ಯೋಗದಿ ನಿಜಗೂಡಿ ||3||

ಸೊನ್ನೆಯೆ ಪೂಜ್ಯವಾಗಿಹುದು| ಮುಂದೆ|

ಸೊನ್ನೆಯಿಂದಲೆ ಲೆಕ್ಕ ಬೆಳೆಯುತ್ತಲಿಹುದು||

ಶೂನ್ಯವೆಂಬುದೆ ಪರಬ್ರಹ್ಮ | ತಾನೆ|

ಉನ್ನತೋನ್ನತ ಲೋಕದಾಧಾರ ಧರ್ಮ ||4||

ಸಂಖ್ಯೆ ಎಂಬುದು ಬೇರೆಯಿಲ್ಲ| ಜಗದ|

ಸಂಖ್ಯ ವಸ್ತುಗಳನ್ನು ಸೇರಿರ್ಪುದಲ್ಲಾ ||

ಸೊಂಕಿ ಸೋಂಕದೆ ನಿಂತಿತಲ್ಲಾ| ಶುದ್ಧ |

ಸಾಂಖ್ಯ ಯೋಗವ ನರಹರಿ ತಾನೆ ಬಲ್ಲಾ ||5||

ಮಾಡಿದೆ ಸಾಧನೆಯ | ಶ್ರೀಗುರು| ಮಾಡಿದ ಬೋಧನೆಯ ||ಪ||

ನೋಡಿದೆ ಬ್ರಹ್ಮವ| ಗೂಢ ರಹಸ್ಯವ| ಕೂಡಿದೆನುಲ್ಲಾಸವಾ ||ಅಪ||

ಅಂತರಂಗದೊಳಗೆ| ತಾನೇ |

ನಿಂತುಕೊಂಡು ಬೆಳೆಗೇ||

ಚಿಂತೆಯು ಹರಿಯೆ| ಚಿಂತನ ಬೆರೆಯೆ|

ಶಾಂತಿಯ ಸುಖ ಸೇರಿಯೇ ||1||

ಸಾಧುಗಳೊಳು ಕೂಡುತಾ| ಅನುಭವ|

ಸಾಧನೆ ಮೈಗೂಡುತಾ||

ಬೋಧೆಯ ಕೂಡುತ| ವೇದವ ನೋಡುತ|

ವಾದವ ಕಡೆ ಮಾಡುತಾ ||2||

ಗಂಗಾ ಯಮುನೆಗಳು | ನಿಲ್ಲುವ|

ಸಂಗಮ ತಾಣದೊಳು||

ಶೃಂಗಾಟಕದೊಳು| ಭೃಂಗದ ರವದೊಲು|

ಸಂಗೀತವಿಂಪಾಗಲು ||3||

ವಿಷಯಂಗಳ ಕೂಟ| ನಾನಾ|

ವ್ಯಸನದ ಹರಿದಾಟ|

ಹಸನಾಗಲು ದಿಟ| ಪುಸಿಯಾಯಿತು ಘಟ|

ನಶಿಸಲು ಭವ ಸಂಕಟಾ ||4||

ನರನೆಂದೆನ್ನುವರೇ| ರೌರವ|

ನರಕದಿ ಬೀಳುವರೇ||

ನರತನ ಹರಿಸುವ | ಹರಿಯೊಳು ಬೆರೆಸುವ |

ನರಹರಿ ಗುರುವೇ ಶಿವಾ ||5||

ಇದು ನಿಜವಾದರೆ ಕೇಳಿ| ಇಲ್ಲ| ವಾದರೆ ನಿಜವನು ಹೇಳಿ ||ಪ||

ತನುವಿದು ನೀರಿನ ಮೇಲಣ ಗುಳ್ಳೆಯು||

ಮನವಿದು ನೋಡಲು ಸುಳ್ಳು | ಕಂಡ|

ಕನಸಿನ ಪರಿಧನ ಜೊಳ್ಳು ||1||

ಕಾಣುವುದೆಲ್ಲವು| ನಿಲ್ಲುವುದಲ್ಲವು ||

ಕಾಣಿಸದಾ ಪರಬ್ರಹ್ಮ| ಬಲ್ಲ|

ಜಾಣರಿಗರಿವುದು ಮರ್ಮ ||2||

ಅಭಿಮಾನಿಸುವುದೆ ಬಂಧಕೆ ಕಾರಣ|

ಅಭಿಮಾನದ ಪರಿಹಾರ| ಮುಕ್ತಿ |

ಲಭಿಸಲು ಮುಕ್ತಿಯ ದ್ವಾರ ||3||

ನಡೆಯನು ತಿಳಿದರೆ ಸರ್ವವು ಶುದ್ಧವು|

ನುಡಿಯೊಳು ತಾನೆ ಪ್ರಸಿದ್ಧಿ| ನಿಂತ|

ಕಡೆಯೊಳು ಸರ್ವವು ಸಿದ್ಧಿ ||4||

ದುರ್ಗುಣವಳಿಯುತ | ಸದ್ಗುಣ ಬೆಳೆಯುತ|

ನಿರ್ಗುಣದಲ್ಲಿಯೆ ಬೆರೆತ| ನಮ್ಮ |

ಭರ್ಗನು ನರಹರಿ ನಿರುತಾ ||5||

ತಾನೆ ತಾನಾಗಬೇಕು| ತನ್ನೊಳು ತತ್ವ| ಜ್ಞಾನವಾದರೆ ಸಾಕು ||ಪ||

ಆನಂದ ರೂಪಾತ್ಮ| ತಾನೆಂದು ತಿಳಿಯುತ ||ಅಪ||

ನಡೆಯಲ್ಲಿ ಸಂಚಾರಿ| ನುಡಿ ರೂಪ ಸುವಿಚಾರಿ||

ನಡುವೆ ಗದ್ದುಗೆ ಏರಿ| ಕಡೆಗೆಲ್ಲವನು ಮೀರಿ ||1||

ನಾದಾನುಸಂಧಾನ | ದಾದ್ಯಂತ ಸುವಿಧಾನ ||

ವೇದಾಂತ ಸಾಧನ| ವಾದ ಸಮ್ಯಜ್ಞಾನ ||2||

ಸರ್ವ ಸಾಕ್ಷಿಯು ತಾನೆ| ಸರ್ವಾನು ಭವಜ್ಞಾನ ||3||

ಆಪೋಸ್ಥಾನವೆ ಸ್ಥೂಲ | ರೂಪ ದೇಹಕೆ ಮೂಲ ||

ಪೃಥ್ವಿಯಲಿ ಶಿವಸ್ವ | ರೂಪವಂತಾ ಕಂಡು ||4||

ಅಗ್ನಿಸರ್ವೇಂದ್ರಿಯ | ಪ್ರಜ್ಞೆ ಕಾರಣವಾಗಿ ||

ಸ್ವಜ್ಞಪ್ತಿಯಿಂದಾತ್ಮ | ನಾಜ್ಞೆಯೊಳಾಡುತ್ತ ||5||

ಎಲ್ಲವನು ತನ್ನಲ್ಲಿ | ನಿಲ್ಲಿಸಿ ಹೊರಡಿಸ ||

ಬಲ್ಲವಾಯು ಸ್ಥಲ | ದಲ್ಲಿ ಶಿವನನು ಕೂಡಿ ||6||

ಆಕಾಶ ಸ್ಥಾನವೇ | ಸೂಕ್ಷ್ಮ ಶರೀರವೇ ||

ಸ್ವೀಕರಿಸಿ ಜ್ಞಾನವ | ಮೋಕ್ಷವಂ ಪಡೆಯುತ್ತ ||7||

ನಾನು ನೀನೆನ್ನದೇ| ಏನೊಂದು ತೋರದೆ||

ಧ್ಯಾನ ಮೌನಗಳೆರಡು| ತಾನೆವೊಂದಾಗಲು ||8||

ಅರಿದೆನೆಂದೆನ್ನದೆ | ಮರೆದೆನೆಂದೆನ್ನದೆ ||

ಅರಿವು ಮರವೆಗೆ ಸಾಕ್ಷಿ| ಇರುವ ನರಹರಿಸೇರಿ ||9||

ಸತ್ಯ ಸಾಧನೆ ಮಾಡಿರೋ| ನಿಮ್ಮೊಳಗಿರ್ಪ| ನಿತ್ಯ ವಸ್ತುವ ಕೂಡಿರೋ ||ಪ||

ಮಿಥ್ಯವೆಲ್ಲವ ಕಳೆದು| ಪ್ರತ್ಯಗಾತ್ಮನ ತಿಳಿದು ||ಅಪ||

ಆಪೋ ಸ್ಥಾನವೆ ಸ್ಥೂಲ| ರೂಪ ದೇಹದ ಮೂಲ||

ಪ್ರಾಪಂಚಿಕದ ಮಂತ್ರ ವ್ಯಾಪಾರ ಸ್ವಾತಂತ್ರ್ಯ ||1||

ಆಕಾಶ ಸ್ಥಾನದಿ| ಸೂಕ್ಷ್ಮ ಶರೀರದಿ||

ಏಕಾಂತ ಜ್ಞಾನವ| ಸ್ವೀಕರಿಸಿದನುಭವ ||2||

ಅಗ್ನಿ ಸರ್ವೇಂದ್ರಿಯದ | ಪ್ರಜ್ಞೆ ಕಾರಣ ದೇಹ||

ವಿಘ್ನವಿಲ್ಲದೆ ಆತ್ಮ| ನಾಜ್ಞೆ ಪಾಲಿಸುತಿರ್ಪ ||3||

ಮಹಿತತ್ವದೊಳಗಿಹ | ಮಹ ಕಾರಣ ದೇಹ||

ವಹಿಸಿ ಸಂಚರಿಸುವ | ಮಹಿಮಾತ್ಮನನು ಕಂಡು ||4||

ಎಲ್ಲವ ತನ್ನೊಳಗೆ| ನಿಲ್ಲಿಸಿಕೊಂಡಿರ್ದು||

ಎಲ್ಲವ ಮೈದೋರ | ಬಲ್ಲ ತೂರ್ಯವ ಕಂಡು ||5||

ಆದಿಯಲ್ಲಿಯೆ ಇದ್ದು| ಭೇದ ವರ್ಣವ ಗೆದ್ದು||

ನಾದಾಂತ್ಯದೊಳು ನಿಂತ| ಬೋಧಾತ್ಮ ತಾನೆಂತ ||6||

ಪರಿಪೂರ್ಣನಾಗಿದ್ದು| ಪರತತ್ವವೆನಿಸಿದ್ದು ||

ಮೆರೆವ ತೂರ್ಯಾತೀತ| ನರಹರಿ ಗುರುವೀತ ||7||

ಮೊದಲು ನಾ ಮಾಡಿದ ಪೂಜಾ ಫಲವು|

ಒದಗಲು ದೊರಕಿತು ಗುರುಪದ ದೊಲವು ||ಪ||

ಕರ್ಮ ಭಕ್ತಿಗೆ ಸೇರಿ| ನಿರ್ಮಲ ಮನವಾಗಿ||

ಬ್ರಹ್ಮ ಜ್ಞಾನಕೆ ದಾರಿ| ನಿರ್ಮಿಸುತಿರಲಾಗಿ ||1||

ದೇಹ ನಾನೆನ್ನುವ | ಮೋಹವೆ ಹೋಯ್ತು ||

ಸೋಹಂಭಾವಕ್ಕೆ | ಸಾಹಸವಾಯ್ತು ||2||

ಮರವೆ ಕತ್ತಲೆಯಲ್ಲಿ| ನರಳುತಲಿದ್ದೆ||

ಅರಿವು ದೀಪವ ಕೊಟ್ಟು | ಪೊರೆದನು ಗುರುವೆ ||3||

ನಡೆಯಲ್ಲಿ ಶಿವ ಪಾದ| ಹಿಡಿದೆ ನಾನೀಗ|

ನುಡಿಯಲ್ಲಿ ಶಿವನೊಳು| ಕೂಡಿದೆ ಬೇಗ ||4||

ನರಕವ ನೈದುತ್ತು| ಲಿರುವವನನ್ನು |

ಕರೆಯುತ್ತ ಶಿವಮಂತ್ರ| ನರಹರಿಯಿತ್ತನು ||5||

ದುರ್ಗಣಗಳ ಗೆದ್ದೆ | ದುರ್ಗತಿ ಒದ್ದೆ||

ನಿರ್ಗುಣದೊಳಗಿದ್ದೆ| ಸದ್ಗತಿ ಪಡೆದೇ ||6||

ನಾನಾಸಂಶಯಗಳ || ತಾನೆ ಬಿಡಿಸಿದಾ ||

ಜ್ಞಾನ ಬೋಧೆಯನ್ನಿತ್ತ | ಶ್ರೀನರಹರಿ ಸದಾ ||8||

ಸಾಧಿಸು ಸುಖ ಶಾಂತಿಯಾ| ಬ್ರಹ್ಮವ| ಶೋಧಿಸಿ ಕಳೆ ಭ್ರಾಂತಿಯಾ ||ಪ||

ಕ್ರೋಧವ ವರ್ಜಿಸಿ| ವೇದವನಾರ್ಜಿಸಿ| ಸಾಧುತ್ವದೊಳುರಾಜೀಸೀ ||ಅಪ||

ಕಾರಣ ಪರಬ್ರಹ್ಮವು| ಏಕಾ| ಕಾರದೊಳಿಹ ಧರ್ಮವು ||

ಸಾರಾಸಾರ ವಿಚಾರವ ಮಾಡುತ| ಧೀರತ್ವವನು ತಾಳುತಾ ||1||

ಮಂತ್ರವ ನೀ ಸಾಧಿಸು | ಕಾಯದ| ಯಂತ್ರವ ನೀ ಶೋಧಿಸು||

ಚಿಂತನ ಮಾಡಿ ಪ್ರ| ಶಾಂತತೆ ಗಳಿಸುತ| ತಂತ್ರಾತ್ಮನೊಳು ಕೂಡುತಾ ||2||

ಆನಂದದೊಳಗಾಡುತ | ಬ್ರಹ್ಮವೆ| ನೀನೆಂದು ನಿಜ ಮಾಡುತ||

ತಾನೆ ನಡೆವ ಜಪ ತಾನೆ ನಡೆವ ತಪ | ಜ್ಞಾನ ನಿಶ್ಚಯ ಮಾಡುತಾ ||3||

ಕಳೆಯುತ ಸಾಕಾರವಾ| ನಿನ್ನೊಳು| ತಿಳಿದು ನಿರಾಕಾರವಾ||

ಅಳಿಯಲು ಮಿಥ್ಯವು ಬಲಿಯಲು ಸತ್ಯವು| ಉಳುಮೆಯೆ ನೀನಾಗುತಾ ||4||

ದುರ್ಗಣಂಗಳ ನೀಗುತಾ | ಪಾತಕ| ದುರ್ಗವ ನೀ ಗೆಲ್ಲುತಾ||

ನಿರ್ಗುಣ ನರಹರಿ| ಮಾರ್ಗವಿದೇ ಸರಿ | ಶೀಘ್ರವೆ ನೀ ಸೇರುತಾ ||5||

ಏತಕೆ ಬಡಿದಾಡುವೆ | ಶಬ್ದದ| ಸೂತಕ ಹಿಡಿದೋಡುವೆ ||ಪ||

ಭೂತದ ಜಾಲದ | ಪಾತಕ ಮೂಲದ| ನೀತಿಯ ಹಿಡಿದಾಡುವೆ ||ಅಪ||

ನಾನೆನ್ನುವುದು ಯಾವುದು | ಹಂಸನ| ಜ್ಞಾನವೆ ತಾನೇಯಿದು ||

ನಾನು ನೀನೆಂಬುದು | ಏನಿಲ್ಲವಾದುದು| ಆನಂದವೇ ತಾನದು ||1||

ಅಸ್ತಿ ಭಾತಿಯ ತೋರಿದೆ | ತನ್ನೊಳು| ಸ್ವಸ್ಥತೆ ಪ್ರಿಯವಾಗಿದೆ||

ಅಸ್ಥಿರ ದೇಹಕ್ಕೆ | ವಿಸ್ತರ ಮೋಹಕ್ಕೆ| ದುಸ್ಥಿತಿಗೀಡಾಗದೆ ||2||

ಪಾಪ ಪುಣ್ಯವ ಸೇರದೆ| ಬ್ರಹ್ಮವು| ರೂಪನಾಮಕೆ ಮೀರಿದೆ||

ಕೋಪತಾಪಗಳಿಗೆ ವ್ಯಾಪಕವಾಗದೆ| ತಾಪತ್ರಯವ ಸೇರಿದೆ ||3||

ಸಗುಣವ ಮೀರುತ್ತಿದೆ ನಿರ್ಗುಣ | ಸೊಗಸುತ ಬೇರೆಯಿದೆ||

ಅಗಣಿತ ಸುಖಗಳ| ಬಗೆಗೊಂಡಡಗಿದೆ | ನಿಗಮಾರ್ಥದೊಳು ಸಾಗಿದೆ ||4||

ತೋರಿ ತೋರದೆ ನಿಂತಿದೆ| ಸರ್ವವ| ಸೂರೆ ಮಾಡುತ ಕುಂತಿದೆ||

ಮೂರು ಗುಣಂಗಳ| ಸೇರದೆ ತಾನಿದೆ| ಧೀರ ನರಹರಿಯಾಗಿದೆ ||5||

ಮೂಲ ಕಾಲಜ್ಞಾನ | ಹೇಳುವೆನೆಲ್ಲರು ಕೇಳಿರಣ್ಣಾ ||ಪ||

ಈ ಲೋಕವೆಲ್ಲವು| ಕಾಲದಧೀನವು ನೋಡಿರಣ್ಣಾ ||ಅಪ||

ಪೊಡವಿಯೆಲ್ಲವು ಮುಳುಗಿ| ಕಡಲುಕ್ಕಿ ಹರೀದೀತು ಕೇಳಿರಣ್ಣಾ||

ಕಡಲುಕ್ಕಿ ಚಿಮ್ಮಲು| ಗುಡುಗಿತಾಕಾಶವು ನೋಡಿರಣ್ಣಾ ||1||

ಕಡಲ ಮಧ್ಯದೊಳೆದ್ದ| ಬಡಬಾಗ್ನಿ ಹಬ್ಬಿತು ಕೇಳಿರಣ್ಣಾ||

ಬಡಬಾಗ್ನಿಯುರಿ ತಗ್ಗಿ| ಸಿಡಿಲೆರಗಿಬಿಟ್ಟಿತು ನೋಡಿರಣ್ಣಾ ||2||

ವಾಯು ಸಂಚಾರನಿ | ರ್ದಾಯದಿ ನಿಂತೀತು ಕೇಳಿರಣ್ಣಾ||

ಕಾಯ ಕರ್ಮಗಳು ನಿ| ರ್ಮಾಯವಾಗುತಲಿವೆ ನೋಡಿರಣ್ಣಾ ||3||

ಜಾತಿ ಭೇದಗಳೆಲ್ಲ | ಪೂರ್ತಿಯಾಗಳಿದಾವು ಕೇಳಿರಣ್ಣಾ||

ರೀತಿ ನೀತಿಗಳೆಲ್ಲ | ಸೋತುವೊಂದಾದಾವು ನೋಡಿರಣ್ಣಾ ||4||

ಎಲ್ಲರೂ ಗುರುಮಠ| ದಲ್ಲೆ ತಿರಿದುಂಡಾರು ಕೇಳಿರಣ್ಣಾ||

ಅಲ್ಲಿ ಸುಖವೀವನು | ಚೆಲ್ವ ನರಹರಿರಾಯ ನೋಡಿರಣ್ಣಾ ||5||

ಹರುಷದಿ ಕೇಳಿದೆ| ವೀಣಾ ನಾದವ ||ಪ||

ಪರಮಾರ್ಥದ ಸುಖದೊಳು ಮೈಮರೆತೇ ||ಅಪ||

ಸಪ್ತ ಚಕ್ರಗಳು| ಸಪ್ತ ಹಂತಗಳು |

ಗುಪ್ತ ಸುನಾದವು|| ಪ್ರಾಪ್ತಿ ಸುಬೋಧವು ||1||

ಏಳು ಸ್ವರಂಗಳು| ಮೇಳನವಾಗಲು||

ಬಾಲ ಸರಸ್ವತಿ | ಲೀಲೆ ಚಮತ್ಕೃತಿ ||2||

ಶರೀರದ ವೀಣೆಯ | ಧರಿಸಿದ ಜಾಣೆಯ||

ಅರಿತೆನು ರಾಗದಿ| ಮೆರೆದೆ ಸುಯೋಗದಿ ||3||

ವೀಣೆಯ ಶಾರದೆ| ಪಾಣಿಯ ಯೋಗದೆ ||

ಗಾನ ವಿಶಾರದೆ| ವಾಣಿಯ ಭರದೇ ||4||

ಇದರ ಸುನಾದವ | ಪದುಳದಿ ಕೇಳ್ದವ||

ಹೆದರನು ಭವ ಭಯ| ಕಿದು ನರಹರಿ ದಯ ||5||

ನನ್ನ ನಾನೆ ಅರಿತುಕೊಂಡೆ | ನರಹರೀಂದ್ರ|

ಅನ್ಯವೆಲ್ಲ ಮರೆತುಕೊಂಡೆ ||ಪ||

ನನ್ನ ನಾನೆ ಅರಿಯಲಾಗಿ| ಶೂನ್ಯದಲ್ಲೆ ಬೆರೆತು ಹೋಗಿ|

ನನ್ನ ನಿನ್ನ ನಡುವೆ ಭೇದ| ವನ್ನು ನೀಗಿ ನಿಲ್ಲಲಾಗಿ ||ಅಪ||

ಹೊರಗೆ ಏನು ಕಾಣದಾದೆ| ಕಾಂಬುದೆಲ್ಲ|

ಬರಿಯ ತೋರ್ಕೆಯಾದುದೆಂದೆ ||

ಕರಣ ಧರ್ಮದಲ್ಲಿ ಕಾಂಬು| ದರಿಯುವಾತ್ಮ ಸರ್ವಸಾಕ್ಷಿ|

ಯಿರುವನೆಂದು ತಿಳಿದುಕೊಂಡೆ| ಪರಮ ನಾನೆಯೆಂದುಕೊಂಡೆ ||1||

ದೇಹ ನಾನು ಅಲ್ಲವೆಂದೆ| ಅದರ ಮೇಲೆ |

ಮೋಹವನ್ನು ಬಿಟ್ಟು ನಿಂದೆ||

ದೇಹಧರ್ಮವಾದ ವಿಷಯ| ದಾಹವನ್ನು ಮೀರಿ ನಿಂತೆ|

ಊಹೆಯನ್ನು ಮೀರಿದಂಥ| ಸೋಹಮೆಂಬ ಭಾವವಾಂತೆ ||2||

ಸಗುಣ ರೂಪ ಜಗವಿದೆಲ್ಲಾ | ನಿರ್ಗುಣಕ್ಕೆ |

ಸೊಗಸಿ ಸೇರಿ ಹೋಯಿತಲ್ಲಾ ||

ಅಗಣಿತಾತ್ಮ ಸುಪ್ತಿಯಲ್ಲಿ | ಜಗವ ನುಂಗಿ ಕುಂತನಲ್ಲ||

ಮಿಗಿಲು ನಿಜಾನಂದವಾಗಿ| ವೊಗೆದು ನರಹರೀಂದ್ರ ಯೋಗಿ ||3||

ಕೇಳಿರಣ್ಣ ಕೇಳಿರಣ್ಣ ಕೇಳಿರಣ್ಣ ಏನು ಹೇಲಳಣ್ಣಾ ||ಪ||

ಮೂಲ ಬ್ರಹ್ಮದ ಲೀಲೆ ಕೇಳಿರಣ್ಣ ಸುಖ ತಾಳಿರಣ್ಣ ||ಅಪ||

ಹುಟ್ಟು ಬಂಜೆಗೈದು ಮಕ್ಕಾಳಾದರಂತೆ| ಮಿಕ್ಕ | ಯೋಧರಂತೆ ||

ಕಟ್ಟಕಡೆಗೆ ಹುಟ್ಟಿದವನೆ ದಿಟ್ಟನಂತೆ ಮೀರಿಬಿಟ್ಟನಂತೆ ||1||

ಇರುವೆಯೊಂದು ಆನೆಯನ್ನು | ಹೊರವುದಂತೆ ತಾನೆ ಹರಿವುದಂತೆ||

ಶರಧಿಯನ್ನೆ ಕುಡಿದುಬಿಟ್ಟು| ಮೆರೆಯಿತಂತೆ ಎಲ್ಲವರಿಯಿತಂತೆ ||2||

ನರಿಯು ಏಳು ಗಿರಿಯ ಹತ್ತಿ| ಕೂಗಿತಂತೆ ಮುಂದೆ ಸಾಗಿತಂತೆ ||

ನೆರಳು ಬೀಳದಿರುವ ಪಕ್ಷಿ| ನೋಡಿತಂತೆ ಬಂದು ಹಾಡಿತಂತೆ ||3||

ಹಾಳುವೂರಿಗೇಳು ಮಂದಿ | ಗೌಡರಂತೆ| ಒಂದು ಗೂಡರಂತೆ||

ಹೇಳಿದಂತೆ ಕೇಳಿಕೊಂಡು| ಹೋಗನಂತೆ ಶಾನುಭೋಗನಂತೆ ||4||

ನಾಲಿಗಿಲ್ಲದಿದ್ದ ಗಂಟೆ ನುಡಿಯಿತಂತೆ | ಎಲ್ಲ ಪಡೆಯಿತಂತೆ ||

ಕಾಲು ಇಲ್ಲದೆತ್ತು ನಡೆದುಹೋಯಿತಂತೆ | ನೀರೊಳೀಜಿತಂತೆ ||5||

ಬೆಂಕಿ ಕುದುರೆ ಲೋಕವೆಲ್ಲ ತಿರುಗಿತಂತೆ | ನೋಡಿ ಮರುಗಿತಂತೆ ||

ಮಂಕು ಮುಚ್ಚಿ ಮುಂದುಗಾಣದಾಯಿತಂತೆ | ಸಿಕ್ಕಿ ಸಾಯಿತಂತೆ ||6||

ಬಾಲೆಯೊಬ್ಬಳೊಂದು ವೀಣೆ ಪಿಡಿದಳಂತೆ | ಕೈಲಿ ಮಿಡಿದಳಂತೆ ||

ಮೇಲೆ ಗಗನದಲ್ಲಿ ಪಕ್ಷಿ ಕೇಳಿತಂತೆ | ಸೌಖ್ಯ ತಾಳಿತಂತೆ ||7||

ಎರಡು ರೆಕ್ಕೆಯುಳ್ಳ ಹಂಸ ಹಾರಿತಂತೆ | ಗೂಡು ಸೇರಿತಂತೆ ||

ಸರಸಿಯಲ್ಲಿ ಈಜಿ ದಡವ ಸೇರಿತಂತೆ | ಗಗನಕ್ಕೇರಿತಂತೆ ||8||

ಐದು ಮಂದಿ ದುಡಿದುದೊಬ್ಬನುಂಡನಂತೆ | ಬಹಳ ಪುಂಡನಂತೆ ||

ಭೇದವಿಲ್ಲದಂತೆ ಕೂಡಿಕೊಂಡನಂತೆ | ಎಲ್ಲ ಕಂಡನಂತೆ ||9||

ಬಯಲಿನಲ್ಲಿ ಬಯಲು ಸೇರಿ| ಕೊಂಡಿತಂತೆ ಎಲ್ಲ ಕಂಡಿತಂತೆ||

ಭಯವೆಯಿಲ್ಲ ನರಹರೀಂದ್ರ | ಪೇಳಿದಂತೆ ನಾನು ಕೇಳಿ ನಿಂತೆ ||10||

ಬ್ರಹ್ಮಾಂಡಾನಂತವ ಧರಿಸಿರುವಾ|

ಬ್ರಹ್ಮವು ತನ್ನೊಳು ಸೇರಿರುವಾ ||ಪ||

ಮರ್ಮವನರಿತವ ತಾನೇ ದೈವಾ|

ಬ್ರಹ್ಮವ ಸೇರುತ ಸುಖಪಡುವಾ ||ಅಪ||

ಎಲ್ಲೆಡೆಯಲ್ಲಿಯು ತುಂಬಿಹುದು| ಬಯ|

ಲಲ್ಲಿಯೆ ಇದ್ದರು ಕಾಣಿಸದು||

ಎಲ್ಲವ ಚೇತನಗೊಳಿಸುವುದು | ಮತಿ|

ಯಿಲ್ಲದ ಮನುಜಗೆ ಕಾಣಿಸದು ||1||

ನಾದ ಬಿಂದು ಕಳೆ ತೋರುವುದು ದು|

ರ್ವಾದಾತೀತ ಸುನಾದವಿದು||

ವೇದಾಂತವೆ ತಾನಾಗಿರುತಿಹುದು |

ಸಾಧಕರಾದರೆ ವಶವಹುದು ||2||

ತತ್ವಮಸೀ ಪದದರ್ಥ ತಿಳಿಯೆ ಪರ|

ತತ್ವವೆ ತಾನಾಗಿರುತಿಹುದು||

ನಿತ್ಯಾನಿತ್ಯದ ವಸ್ತು ವಿವೇಕದಿ|

ನಿತ್ಯಾನಂದವು ದೊರೆಯುವುದು ||3||

ಸತ್ತು ಚಿತ್ತು ಆನಂದದ ವಸ್ತುವು|

ನಿತ್ಯವು ಪರಿಪೂರ್ಣವೆ ತಾನು||

ಪ್ರತ್ಯಗಾತ್ಮವೇ ತಾನಾಗಿಹುದು|

ಮಾತ್ರಾರ್ಧವೆ ತಾನಾಗಿಹುದು ||4||

ಮೂರು ದೇಹಗಳ ಮೀರಿಹುದು ಮಹ|

ಕಾರಣದಲ್ಲಿಯೆ ತೋರುವುದು||

ತೂರ್ಯಾತೀತವು ತಾನಹುದು ಚಿ|

ತ್ಸೂರ್ಯನೆ ನರಹರಿಯಾಗಿಹುದು ||5||

ಗುರುವಿನ ಮಠದೊಳು ಸಮಾರಾಧನೆಯು|

ಜರುಗುತಲಿರ್ಪುದು ಬಾರಮ್ಮ ||ಪ||

ಶರಣರಿಗಾಯಿತು| ಕರುಣ ಪ್ರಸಾದವು|

ಬೆರೆಯುತಲಲ್ಲಿಯೆ ಸೇರಮ್ಮ ||ಅಪ||

ಹುಳಿಯದ ಕೊಳೆಯದ ಬಲು ಸಾಮಗ್ರಿಯ|

ಝಳಝಳ ಮಾಡಿದೆ ಕಾಣಮ್ಮ ||

ಒಳಗೇ ತುಂಬಿದೆ ತಿಳಿಯದು ಯಾರಿಗೆ |

ಬಳಸಲು ಬಯಲಿಗೆ ಬಂತಮ್ಮ ||1||

ಅಡಿಗೆ ಮಾಡಿದುದು | ಕೆಡದೆಂದೆಂದಿಗೆ|

ಪಡೆದರೆ ಪರಮ ಪ್ರಸಾದವಿದು||

ಕೊಡುವವನಾಟವು ಕಡು ಸುಖದೂಟವು|

ತಡೆಯದೆ ಮುಕ್ತಿಯ ನೀಯುವುದು ||2||

ಹೊರಗಿನ ಸಾಮಗ್ರಿಗಳನು ತಾರದೆ|

ತರತರದಡಿಗೆಯ ಮಾಡಿದನು ||

ತರುವುದು ಹೊರುವುದು ನೆರವೇನಿಲ್ಲದೆ|

ನೆರೆದಾಕ್ಷಣವೇ ನೀಡಿದನು ||3||

ಪಾತ್ರೆಯು ಪಡಗಗಳೇನೇನಿಲ್ಲದೆ|

ಜಾತ್ರೆಗೆ ನೀಡುವ ನೋಡಮ್ಮ ||

ಖಾತ್ರಿಯೊಳೂಟವ| ಸತ್ಯದ ಪಾಠವ |

ಪಾತ್ರವ ನರಿದೀಯುವನಮ್ಮ ||4||

ಎಲ್ಲರಿಗಾಗುವುದಿಲ್ಲಿಯೆ ಊಟವು|

ಬಲ್ಲವರಾದರೆ ಪಾಡಮ್ಮ ||

ಸಲ್ಲಿಸಿದರೆ ಕೈವಲ್ಯವನೀಯುವ|

ನಿಲ್ಲೇ ನರಹರಿ ನೋಡಮ್ಮ ||5||

ಎಚ್ಚರವಿರಬೇಕು| ಈ ಲೋಕದ| ನೆಚ್ಚಿಕೆ ಬಿಡಬೇಕು ||ಪ||

ಹುಚ್ಚನಂದದಿ ಮನ| ಮೆಚ್ಚಿದಂತಾಡದೆ ||ಅಪ||

ಇಂದ್ರಜಾಲದ ರೀತಿ| ಯಿಂದ ಕಾಣುವ ಲೋಕ|

ದಂದವಂ ನಂಬದೆ | ಸಂದೇಹ ತುಂಬದೆ ||1||

ನಾನಾ ವಿಕಾರದಿ | ಏನೇನೊ ಪರಿಯಲ್ಲಿ ||

ಕಾಣುತ್ತ ಗುರುವಿನ| ಧ್ಯಾನ ಕೆಡಿಸುವುದೆಂಬ ||2||

ಹೆಣ್ಣು ಹೊನ್ನಿನೊಳಾಸೆ| ಯನ್ನು ಮಾಡಲಿ ಬೇಡ|

ತನ್ನ ದೇಹವೆ ತನಗೆ| ಅನ್ಯವಾಗಿಹುದೆಂಬ ||3||

ವ್ಯರ್ಥ ಕಾಲವ ಕಳೆದು| ಸ್ವಾರ್ಥದಿಂದಲಿ ಬೆಳೆದು||

ತತ್ವಾರ್ಥವರಿಯದೆ| ಮತ್ತನಾಗಿರದಂತೆ ||4||

ಯಾರ ಗೊಡವೆಯು ಯಾಕೆ| ಪಾರಮಾರ್ಥದ ಜೋಕೆ|

ಸಾರುತಿರುವೆಚ್ಚರಿಕೆ| ಮೀರದೆ ನರಹರಿಯ ||5||

ಗುರುನಾಥನ ಮಹಿಮೆ | ಲೋಕದೊ| ಳರಿದಾಯ್ತೀ ಹಿರಿಮೆ ||ಪ||

ಹೊರಗಿನ ವಿಶ್ವವ| ಶರೀರದಿ ತೋರಿದ||

ಪರತರ ಬ್ರಹ್ಮವನರುಹುತ ಸಾರಿದ ||ಅಪ||

ಮೇದಿನಿ ತತ್ವವನು | ಘ್ರಾಣದಿ| ಸಾಧಿಸಿ ನಿಲಿಸಿದನು ||

ಮೋದದಿ ಗಂಧವ| ನಾದರಿಸುತ್ತಲಿ||

ಶೋಧಿಸಿ ಹಂಸನ| ಹಾದಿಯ ಪೇಳಿದ ||1||

ಜಲತತ್ವವ ತಂದಾ | ಜಿಹ್ವೆಯೆ | ಸ್ಥಲವಾಗಿಹುದೆಂದಾ ||

ಸುಲಲಿತ ರಸಗಳ| ಸಲಿಸುತ ನುಡಿಗಳ||

ಬೆಳಗಿಸಿ ಕರ್ಮವ| ಕಳೆ| ಯುವೆನೆನ್ನುವ ||2||

ಅಗ್ನಿಗೆ ಸ್ಥಲವೆಂದಾ| ಚಕ್ಷುವೆ | ಪ್ರಜ್ಞೆಗೆ ನೆಲೆಯೆಂದಾ||

ಮಗ್ನ ಸುರೂಪದ| ಜಾಗ್ರದೊಳರಿಯುತ ||

ಯಜ್ಞ ಕರ್ಮಗಳ| ತಜ್ಞನುಗೈಯುವ ||3||

ಮಾರುತ ತತ್ವವನು| ತ್ವಕ್ಕಿಗೆ ಸೇರಿಸಿ ತೋರಿದನು||

ಸಾರುತ ಸ್ಪರ್ಶವ| ಸೇರುತ ಹರ್ಷವ||

ಕಾರಣ ಬ್ರಹ್ಮವು| ತೋರುವುದೆನ್ನುವ ||4||

ಆಕಾಶದ ತತ್ವಾ | ಶ್ರೋತ್ರದೊ| ಳೇಕೀಕರಿಸುತ್ತಾ||

ಸೋಕುವ ಶಬ್ದವ | ಸ್ವೀಕರಿಸುತ ಭವ||

ತಾಕದೆ ನಿಲ್ಲುವ| ಶ್ರೀಕರ ನರಹರಿ ||5||

ನಾದೋಪಾಸನ| ವೇದದ ಶಾಸನ||

ಭೇದ ವಿನಾಶನ| ವಾದ ನಿರಸನ ||ಪ||

ನಡೆ ತತ್ಪದವು | ನುಡಿತ್ವಂಪದವು| ನಡೆನುಡಿ

ನಿಂತಿಹ| ಕಡೆಯಸಿ ಪದವು ||1||

ನಡೆಯೊಳು ಶಿವನು | ನುಡಿಯೊಳು ಜೀವನು ||

ನಡೆ ನುಡಿಯೈಕ್ಯದಿ| ಒಡಗೂಡಿಹರು ||2||

ನಡೆಯೆ ಸ್ವರಾಟವು| ನುಡಿಯೆ ವಿರಾಟವು||

ನಡೆನುಡಿ ಕೂಟವು| ಕಡು ಬ್ರಹ್ಮದಾಟವು ||3||

ಧ್ವನ್ಯಾತ್ಮ ಶಿವನು | ವರ್ಣಾತ್ಮ ಜೀವನು ||

ವರ್ಣಾತೀತನು | ಪೂರ್ಣ ಮಹಾತ್ಮನು ||4||

ನಾದೋಪಾಸಕ| ನಾದವನಿಗೆ ಸುಖ|

ಬೋಧಕ ನರಹರಿ | ಸಾಧಕರೈಸಿರಿ ||5||

ನುಡಿಶಬ್ದ ಬ್ರಹ್ಮ | ನಡೆಯೆ ನಿಶ್ಶಬ್ದವು ||

ನಡೆನುಡಿ ಸಂಧಿಸಿ | ದೊಡೆ ಪರಬ್ರಹ್ಮವು ||6||

ನುಡಿಯೊಳು ಸೇರಿ | ಬೆಡಗನು ತೋರಿ ||

ಕಡುಸುಖ ಬೀರಿ | ದೊಡೆಯನು ನರಹರಿ ||7||

ಆನಂದವೆನಗಾಯಿತು| ಬ್ರಹ್ಮವೆ| ತಾನೆಂದುದರಿವಾಯಿತು ||ಪ||

ಏನೊಂದು ಮಿಸುಕಿಲ್ಲ| ತಾನೇ ತಾನಾಯ್ತಲ್ಲ|

ಮೌನ ಮುದ್ರೆಯು ನಿಂತು| ಜ್ಞಾನ ಮುದ್ರೆಯನಾಂತು ||ಅಪ||

ಎಲ್ಲೆಲ್ಲಿ ತುಂಬಿರ್ಪುದು| ಬ್ರಹ್ಮವೆ ಉಲ್ಲಾಸದಿಂಬರ್ಪುದು||

ಬಲ್ಲ ಸತ್ಪರುಷರ್ಗೆ| ಎಲ್ಲೆಂದರಲ್ಲುಂಟು||

ಸಲ್ಲೀಲೆಯಿಂದ ನಿಂ| ತಲ್ಲೇ ತೋರುವುದುಂಟು ||1||

ಪರಿಪೂರ್ಣ ತಾನಾದುದು| ಬ್ರಹ್ಮವು| ಪರವಸ್ತುವೆನಿಸಿರ್ಪುದು||

ಕರುಣಾಳುವಾಗಿದ್ದು| ಪರಿಶುದ್ಧವೆನಿಸಿದ್ದು||

ಗುರುನಾಥನೆನಿಸುತ್ತ | ಬರಲೆನ್ನ ಹರಸುತ್ತ ||2||

ಧ್ವನ್ಯಾತ್ಮ ನಿರ್ಧಾರವು| ಬಹು ವಿಧ | ವರ್ಣಾತ್ಮ ದಾಧಾರವು||

ಚಿನ್ಮಾತ್ರೆಯೆನಿಸುತ್ತ| ವಿನ್ಯಾಸ ಜನಿಸುತ್ತ ||

ಶೂನ್ಯದಲ್ಲಿಯೆ ನಿಂದೆ| ಮಾನ್ಯ ನರಹರಿಯಿಂದೆ ||3||

ಪರಮಾರ್ಥ ತಾನಿದು| ಪರನಾದವೆಂಬುದು ||ಪ||

ನಡೆಯುವ ಹಂಸ ಸ್ತಂಭಿಸಿ| ನಡುವೆ ಕುಂಭಿಸಿ| ನುಡಿಯ ತುಂಬಿಸಿ||

ಕಡೆಯಲ್ಲಿ ಪೂರ್ಣನೆನಿಸಿ| ಕಡು ಬ್ರಹ್ಮ ರಾಜಿಸೀ ||1||

ಎರಡರ ಮಧ್ಯ ಬಿಂದುವು| ಪರಮಾನಂದವು| ಹರಿದು ಬಂಧವು||

ಧರಿಸುತ್ತ ತೋರಿ ನಿಂದ| ಪರಬಿಂದು ಚಂದವು ||2||

ಎರಡರ ಕೊನೆಯ ಬಿಂದುವು| ಶರಣರ ಬಂಧುವು| ಕರುಣ ಸಿಂಧುವು||

ಪರಿಪೂರ್ಣದರ್ಧ ಮಾತ್ರೆ| ಪರತರಾನಂದವು ||3||

ಒಂದನೆ ಮೂರು ಮಾಡುತ | ನಿಂದು ನೋಡುತ | ಕುಂದದಾಡುತ ||

ಬಂಧಿಸುತ ನಿಂದುದನ್ನೆ | ಸಂಧಿಸುತ ಕೂಡುತ ||4||

ಪ್ರಣವದ ಕೊನೆಯೊಳಿರುವುದು| ಮಿನುಗುತಿರುವುದು | ಗುಣಗಳಳಿದುದು ||

ಜನನ ಮರಣಕ್ಕೆ ಮೀರಿ| ಘನವೇ ತಾನಾದುದು ||5||

ನಾದವ ಶೋಧ ಮಾಡುತ | ಭೇದವರಿಯುತ | ಸಾಧ್ಯ ಮಾಡುತ ||

ಸಾಧು ಸತ್ಪುರುಷರಿಂದ | ಬೋಧೆಯನು ಕೇಳುತ ||6||

ಶುದ್ಧವು ಬುದ್ಧ ವಸ್ತುವು | ಸಿದ್ಧ ಮಾತ್ರವು | ಅರ್ಧ ಮಾತ್ರವು

ಸಿದ್ಧಾಂತ ಮಾಡಿ ನೋಡಿ | ಶ್ರದ್ಧೆಯನು ತಾಳಲು ||7||

ನರಹರಿ ಗುರು ಪದಾಬ್ಜವ | ನಿರುತನಂಬುವ | ಪರಮ ಸಾಧುವ ||

ಶರಣೆಂದು ಮೊರೆಯ ಹೊಕ್ಕೆ | ವರಮುಕ್ತಿ ಹೊಂದುತ ||8||

ಗುರುವಿನ ಗುಟ್ಟು ತಾನಿದು| ಗುರುತು ಮಾಣದು| ಗುರಿ ಅರಿಯಲಾಗದು||

ನರಹರಿಯೇ ಕರುಣಿಸಲ್ಕೆ | ಗುರಿಯಾಗಿ ನಿಲ್ವುದು ||9||

ಯುಗ ನಾಲ್ಕಿವೆ ನೋಡಿ| ನಿಮ್ಮೊಳು| ಜಗಧರ್ಮಕೆ ಜೋಡಿ ||ಪ||

ಯುಗವೆನೆ ಕಾಲವು| ಯುಗವೆನೆ ಜೋಡಿಯು||

ಅಗಣಿತ ಬ್ರಹ್ಮವು| ಸೊಗಸಿದ ಧರ್ಮವು ||ಅಪ||

ಮೂಲಾಧಾರದೊಳು| ಹಂಸನ| ಲೀಲೆಯು ಹಗಲಿರುಳು||

ಕಾಲವನಳೆಯುತ | ಕಾಲವ ಕಳೆಯುತ||

ತಾಳಿರಲೀ ಜಗ| ಮೂಲದ ಕೃತಯುಗ ||1||

ತ್ರೇತಾಯುಗವಗ್ನಿ | ತಿಳಿಯಲವ | ಸ್ಥಾತ್ರಯ||

ಪಾತಕವಳಿದು ಸು| ನೀತಿಯ ನಿರ್ಮಲ||

ರೀತಿಯನಾರ್ಜಿಸಿ| ಸಾರ್ಥಕವಾಗಲು ||2||

ದ್ವಾಪರವೇ ಗಗನ| ಶ್ರವಣದ| ರೂಪ ವಿಚಾರ ಘನ||

ತಾಪವ ಪಾಪದ| ರೂಪವನಳಿದು ನೀ|

ರಾಪದ ನರಹರಿ| ಶ್ರೀಪದ ಕಾಣಲು ||3||

ಜಲ ತತ್ವವೆ ಕಲಿಯು|| ನುಡಿಗಳ| ಕಲಿಯುತ್ತಿಹ ನೆಲೆಯು||

ಸುಲಲಿತ ಧ್ಯಾನವೆ| ಕಲಿಯುಗ ಧರ್ಮವು||

ತಿಳಿದರೆ ಮುಕ್ತಿಯು ಫಲಿಸುವುದೀಗಲು ||4||

ಕಾಲವೆ ಕೀಲಾಗಿ| ಯುಗಗಳು| ನಾಲ್ಕೂ ಒಂದಾಗಿ||

ಮೇಳನವಾಗಿ ನಿ| ರಾಳದ ಬ್ರಹ್ಮದ||

ಲೀಲೆಯೊಳಿಹುದನು | ಪೇಳಿದ ನರಹರಿ ||5||

ಹುಚ್ಚು ನಾಯಿ| ಮನವೇ| ಹುಚ್ಚು ನಾಯಿ ||ಪ||

ಇಚ್ಛೆ ಬಂದ ಹಾಗೆ ವಿಷಯದ |ಹುಚ್ಚು ಹಿಡಿದು ಕಚ್ಚಿ ನಡೆದ ||ಅಪ||

ಪಂಚ ವಿಷಯ ಮಗ್ನವಾಗಿ | ಕೊಂಚ ಬಿಡುವು ಇಲ್ಲವಾಗಿ||

ಮಿಂಚಿ ಪಾಪದೊಳಗೆ ನುಗ್ಗಿ| ಹೊಂಚು ಹಾಕುತಿಹುದು ಜಗ್ಗಿ ||1||

ರಗಳೆಯನ್ನು ಹಚ್ಚಿಕೊಂಡು| ಜಗಳವನ್ನೆ ಮೆಚ್ಚಿಕೊಂಡು||

ಹಗಲು ರಾತ್ರಿ ಯೆಚ್ಚರಗೊಂಡು| ಬೊಗಳುತಿಹುದು ಸುಜನರ ಕಂಡು ||2||

ಒಂದು ನಿಮಿಷವಾದರು ತಾ | ನೊಂದು ವಿಷಯದಲ್ಲಿ ನಿಲ್ಲದೆ ||

ಮುಂದೆ ಬರುವುದರಿಯದೆಲ್ಲ | ತೊಂದರೆಗಳ ತಂದುಹಾಕುವ ||3||

ನಾನು ನನ್ನದೆಂದು ದುರಭಿ | ಮಾನದಲ್ಲಿ ನಿಂತು ತರುಬಿ ||

ಹಾನಿ ವೃದ್ಧಿಯರಿಯದಿರುವ| ಜ್ಞಾನವನ್ನೇ ಸೇರದಿರುವ ||4||

ನಾನು ಶಿವನ ನೆನೆಯಲಾಗಿ| ತಾನೆ ಬೇರೆ ಕಡೆಯೊಳು ಹೋಗಿ||

ಧ್ಯಾನವನ್ನೆ ಕೆಡಿಸಿಹುದಲ್ಲಾ| ಕಾಣದಂತೆ ನಡೆದಿಹುದಲ್ಲಾ ||5||

ಕೆಟ್ಟ ನಾಯಿ ಇದರ ಬಾಲ| ಸೊಟ್ಟವಾಗಿ ಬಹಳ ಕಾಲ|

ನೆಟ್ಟಗಿರಿಸೆ ಕೊಳವೆಯೊಳಗೆ | ಬಿಟ್ಟರಾಯ್ತು ಮೊದಲ ಹಾಗೆ ||6||

ನಂಬಬಾರದುದನೆ ನಂಬಿ | ನಂಬಬೇಕಾದುದನೆ ಬಿಟ್ಟು |

ಕಂಬಿ ಬಿಟ್ಟ ರೈಲಿನಂತೆ | ಜಂಭದಿಂದ ನುಗ್ಗುತಿರುವ ||7||

ವೇದವಾಕ್ಯ ನಂಬಲಿಲ್ಲ | ಬೋಧೆಯನ್ನು ಕೇಳಲಿಲ್ಲ ||

ಸಾಧುಸಂತರೆನ್ನಲಿಲ್ಲ | ಬೈದು ಬೊಗಳಿ ಕಚ್ಚಿತಲ್ಲ ||8||

ಕಚ್ಚಿದೊಡನೆ ವಿಷಯ ವಿಷವ | ಹೆಚ್ಚಿಸುತ್ತ ಹುಚ್ಚು ಹತ್ತಿಸಿ ||

ಮುಚ್ಚಿ ಮಾಯಾ ಕಲ್ಪನೆಗಳ | ಮೆಚ್ಚಿಕೊಂಡು ತಿರುಗುತಿರುವ ||9||

ಹಾದಿ ಬೀದಿ ಸುದ್ದಿ ಕೇಳಿ| ವೇದವೆಂದು ನಂಬಿ ಬೊಗಳಿ||

ವಾದ ಭೇದವನ್ನು ತಾಳಿ| ಸಾಧು ಸಂತರನ್ನು ತಗಲಿ ||10||

ಪರರ ಧನಕೆ ಪರರ ಸತಿಗೆ| ಪರರ ಸ್ವತ್ತಿಗಾಸೆ ಮಾಡಿ||

ನರಕ ಭಾಗಿಯಾಗಿ ತಿರುಗಿ| ನರಹರೀಂದ್ರನೆನ್ನದಿರುವ ||11||

ನೋಡು ಹಂಸನ | ನಿನ್ನೊ| ಳಾಡುವಾತನ ||ಪ||

ಆಡಿಪಾಡಿ ನೋಡಿ ಕೂಡಿ| ಮೂಡಿದಾತನ ||ಅಪ||

ಲೋಕವೆಲ್ಲವ | ತುಂಬಿ| ಸೋಕಿ ನಿಲ್ಲುವ||

ಶೋಕವನ್ನು ತಾಕದಿರುವ| ಏಕ ದೈವವಾ ||1||

ಅಜಪ ಮಂತ್ರವಾ |ತನ್ನ | ನಿಜದ ತಂತ್ರವಾ||

ಭಜಿಪರಿಂಗೆ ವಿಜಯವೀವ ಸುಜನ ಬಾಂಧವಾ ||2||

ನಾದ ರೂಪನ | ಪರಮ | ಬೋಧ ರೂಪನ ||

ನಾದ ಬಿಂದು ಕಳೆಯ ಮೀರಿದಾದಿ ದೇವನ ||3||

ಕೋಟಿ ಸೂರ್ಯರ | ಕಳೆಯ | ದಾಟಿದಾರ್ಯನ ||

ಸಾಟಿಯಿಲ್ಲದಾಟವಾಡ್ವ | ಕೂಟ ಸಾಕ್ಷಿಯ ||4||

ಆ ಸುಷುಮ್ನೆಯ | ದ್ವಾರ| ಕೀಶ ಚಿನ್ಮಯ|

ಭಾಸುರ ಪ್ರಕಾಶ ಕಾಯ| ಕೋಶ ತನ್ಮಯಾ ||5||

ಪರಮ ಹಂಸನಾ|| ಸರ್ವ | ದುರಿತ ನಾಶನಾ ||

ಸುರನರೋರಗಾದಿ ಭುವನ| ಧರಿಸಿದಾತನಾ ||6||

ಮೂರು ದೇಹವಾ| ಸೇರಿ| ಮೀರಿ ಮೋಹವಾ||

ಧೀರ ನರಹರೀಂದ್ರ ದೇವ| ಸಾರಿ ವೈಭವಾ ||7||

ಯಾರಿಗಾಯ್ತು | ಮುಕ್ತಿ| ಯಾರಿಗಾಯ್ತು ||ಪ||

ಧೀರ ಗುರು| ವರನಿಂದ ತತ್ವ | ಸಾರವರಿತ ಭಕ್ತಗಲ್ಲದೆ ||ಅಪ||

ಘೋರ ವಿಪಿನವ ಸೇರಿ ನಿತ್ಯ| ಮೂರು ಹೊತ್ತು ಸ್ನಾನ ಮಾಡಿ||

ಬಾರಿ ಬಾರಿಗು ಮಂತ್ರ ಜಪಿಸೆ| ತೋರದಾತ್ಮ ಜ್ಞಾನ ಮೂಡಿ ||1||

ಗ್ರಂಥ ಸಾಸಿರ ಪಠಿಸಿ ಪಠಿಸಿ| ಮಂತ್ರ ಕೋಟಿಯ ಜಪಿಸಿ ಜಪಿಸಿ ||

ಮಂತ್ರದರ್ಥವ ತಿಳಿಯದೇ ಭವ| ಯಂತ್ರವೆಂದಿಗು ಹೋಗದು ನಶಿಸೀ ||2||

ತೀರ್ಥಯಾತ್ರೆಯಗೈದರಿಲ್ಲಾ | ಮೂರ್ತಿ ಪೂಜೆಗೆ ಕುಂತರಿಲ್ಲಾ ||

ನಿತ್ಯ ದಾನವ ಕೊಟ್ಟರಿಲ್ಲಾ | ಮತ್ತೆ ವ್ರತಗಳಗೈದರಿಲ್ಲಾ ||3||

ಯೋಗ ಸಾಧನೆ ಮಾಡಲೇನು | ನೀಗಲಾರದು ಜನ್ಮವನ್ನು ||

ಯೋಗ ಫಲದಿಂ ಪುಣ್ಯ ಜನ್ಮ | ಭೋಗವಲ್ಲದೆ ಮುಕ್ತಿಯಿಲ್ಲಾ ||4||

ಜಪವ ಮಾಡುತ ಕುಂತರಿಲ್ಲ| ತಪವ ಮಾಡುತ ನಿಂತರಿಲ್ಲ||

ಜಪ ತಪಂಗಳ ಮಹಿಮೆಯೆಲ್ಲ| ವಿಪುಲ ಜನ್ಮವ ಕೊಟ್ಟಿತಲ್ಲಾ ||5||

ಯಾರಿಗಿಲ್ಲವು ಮುಕ್ತಿ ದೇಹ| ಸೇರಿ ಬಂದಿಹ ಜೀವ ಮೋಹ|

ಮೀರಿ ನರಹರಿ ಪೇಳ್ದ ಬೋಧ| ಸಾರವರಿತರೆ ಮುಕ್ತನಾದ ||6||

ಮನವಿದು ಮಾಯಾ| ಕನಸಿನ ಛಾಯಾ| ಅನುದಿನ ಪರ್ಯಾಯ ||ಪ||

ಮನದೊಳು ಭ್ರಾಂತಿ| ಜನಿಸಲು ಶಾಂತಿ| ತನಗಾದುದು ಮುಕುತೀ ||ಅಪ||

ಇಂದ್ರಿಯ ಘಟನೆ| ಯಿಂದಲೆ ನಟನೆ| ಹೊಂದಿತು ಮನ ತಾನೆ||

ಎಂದಿಗು ನೀತಿ| ಹೊಂದದ ರೀತಿ| ತಂದಿತು ಬಲು ಭೀತಿ ||1||

ಹೇಳುವ ಮಾತು| ಕೇಳದು ಕೂತು| ಬಾಳದು ಸುಖವಾಂತು||

ಹಾಳು ವಿಷಯಕೆ | ಬೀಳುವ ಬಯಕೆ| ತಾಳಿಹುದಾಕ್ಷಣಕೆ ||2||

ತನುವಿದು ಯಂತ್ರ| ಮನಸಿನ ತಂತ್ರ| ನೆನೆಯದು ಶಿವಮಂತ್ರ||

ತನುವಿನ ಕರ್ಮ| ಮನಸಿನ ಧರ್ಮ | ನೆನೆದಾಯಿತು ಜನ್ಮ ||3||

ತನ್ನನೆ ಹೆಚ್ಚು| ಎನ್ನುವ ಹುಚ್ಚು| ಕುನ್ನಿ ಮನಕೆ ಮೆಚ್ಚು||

ಮುನ್ನಿನ ಕರ್ಮ | ಮನ್ನಿಸಿ ಜನ್ಮ | ವೆನ್ನುವದಿದು ತಮ್ಮಾ ||4||

ಗುರುವಿನ ಪಾದ| ದೊರೆಯಲು ಬೋಧಾ| ಹರಿವುದು ಮನ ಭೇದಾ ||

ನರಹರಿ ಗುರುವೇ| ಕರುಣಿಸಿದರಿವೇ | ದುರಿತ ಮನೌಷಧವೇ ||5||

ಏನು ಬೇಡ ಕಾಮ್ಯ ಯೋಗವು| ಪರಮಾರ್ಥ ಸಾಧನೆ|

ಗೇನು ಬೇಡ ಕರ್ಮ ಯೋಗವು ||ಪ||

ಜ್ಞಾನ ಮಾತ್ರವೆ ಸಾಕು ಮುಕ್ತಿಗೆ| ಹೀನ ಕರ್ಮಗಳೆಲ್ಲ ಭುಕ್ತಿಗೆ ||ಅಪ||

ಮೌನ ಧ್ಯಾನ ಜಪವು ತಪವಿ| ಧಾನದಲ್ಲಿ ಕಾಮ್ಯವಿರಲು||

ತಾನು ಪುನಃ ಜನಿಸಲಿಕ್ಕೆ | ಏನೋ ಪುಣ್ಯ ಸಾಧನಕ್ಕೆ ||1||

ಕರ್ಮದಿಂದಲೆ ಮುಕ್ತಿಯಿಲ್ಲವು| ನಿರ್ಮಲಾತ್ಮನ ಜ್ಞಾನ ಕಲ್ಲವು||

ಕರ್ಮ ಫಲದಿ ಬಂಧವಿರ್ಪುದು| ಕರ್ಮದಿಂದಲೆ ಜನ್ಮ ಬರ್ಪುದು ||2||

ಮಡಿಯು ಮೈಲಿಗೆ ಇಲ್ಲ ಶಿವನಿಗೆ | ಒಡಲ ಮೈಲಿಗೆ ಸೇರದವನಿಗೆ ||

ಮಡಿಯು ಜ್ಞಾನವು ಕರ್ಮ ಮೈಲಿಗೆ| ಒಡಲ ಮೋಹವ ಬಿಟ್ಟವನಿಗೆ ||3||

ಶ್ರವಣ ಮಾಡುತ ಮನನ ಕೂಡುತ| ತವನಿಧಿ ಧ್ಯಾಸದೊಳು ನಿಲ್ಲುತ||

ಶಿವನನರಿಯಲು ಮುಕ್ತಿಯಪ್ಪುದು| ಭವವನಾಗಲೆ ಗೆಲ್ಲಬಹುದು ||4||

ಆಶೆಯೆಂಬುದ ನೀಗಿ ಭವದ| ಪಾಶ ಹರಿದೊಡಾತನೇ ಬುಧ ||

ದೋಷ ಹರಣನಾದ ನರಹರಿ| ದಾಸನಾದರೆ ಮುಕ್ತನೇ ಸರಿ ||5||

ಮನವೇ ಸಾಧನವು | ಮುಕ್ತಿಗೆ| ಘನವೇ ಬೋಧನವು ||ಪ||

ಮನ ನೈರ್ಮಲ್ಯವೆ | ಘನ ಕೈವಲ್ಯವು||

ಮನಕೇ ಬಂಧವು | ಮನಕೇ ಮೋಕ್ಷವು ||1||

ಯೋಗದಿ ತನ್ಮಯ | ವಾಗಲು ಮೋಕ್ಷವು ||

ಭೋಗದಿ ತನ್ಮಯವಾಗಲು ಬಂಧವು ||2||

ರಾಗದಿ ಕೂಡುತ | ಸಾಗಲು ಭವ ಭಯ||

ಶ್ರೀಗುರು ಮಂತ್ರವ | ತಾಗಲು ಸುಖಮಯ ||3||

ಪರಮ ವಿರಕ್ತಿಯ | ಪರತರ ಭಕ್ತಿಯ ||

ನಿರುತವು ಸೇರುತ| ಲಿರಲು ನಿರಾಮಯ ||4||

ಹರಿದಾಟ ನೀಗಲು| ವರಶಾಂತಿ ತಾಗಲು||

ನರಹರಿಯೆನ್ನಲು | ದೊರೆವುದು ಮೋಕ್ಷವು ||5||

ಮನವೇ ಬಂಧಕೆ | ಮೋಕ್ಷಕೆ ಹೊಂದಿಕೆ ||

ಮನವೇ ಸತ್ಯವು | ಮನವೇ ಮಿಥ್ಯವು ||6||

ಪರಮಾತ್ಮನ ಸೆರೆ | ಹಿಡಿದುದು ಮನುವು ||

ನರಹರಿ ಎನ್ನುತ | ಬೆರೆದುದು ಮನವು ||7||

ಭಗವಂತನು ನಿರ್ಮಿಸಿದೀ ಬಂದೀಖಾನೆ| ದೇಹವು ||ಪ||

ಮಾಯಕಾರ ಮಾಡಿಯಿಟ್ಟ|

ಸಾಯುವವರೆಗೆ ಶಿಕ್ಷೆಗಳನು ಕೊಟ್ಟ| ಸಂಕಟ ||1||

ತಾನೆಗೈದ ಕರ್ಮ ತನಗೆ |

ತಾನಿದೆ ಬಂದೀಖಾನೆಯ ಕಾವಲಿಗೆ | ಬಾಳಿಗೇ ||2||

ಜೀವನೆಂಬ ಖೈದಿಯಿರುವಾ|

ಕೇವಲ ಮೋಹದಿ ನೋವನು ಸಹಿಸಿರುವಾ | ಬಾಳುವಾ ||3||

ದ್ವಾರವೊಂಬತ್ತಿದ್ದ ಜೈಲು|

ಸಾರಲು ಹೊರಗೆ ಧಾರಾಳವೆ ಬಯಲು | ನೋಡಲು ||4||

ಜನನ ಮರಣ ರೋಗ ರುಜಿನ|

ದಿನ ದಿನ ತಪ್ಪದು ಘನ ಶಿಕ್ಷಾ ಸದನ | ಬಂಧನ ||5||

ಹಸಿವು ಶೃಷೆಯು ನಿದ್ರೆ ನೋವು|

ಬಿಸಿಲು ಛಳಿ ಮಳೆ ವ್ಯಸನಂಗಳ ಠಾವು | ನಿತ್ಯವು ||6||

ಜೈಲುವಾಸ ಬಹಳ ಮೋಸ|

ಕಾಲದ ಪಾಶ ಬಾಳೆಂಬುದೆ ನಾಶ ಯಮ | ವಶಾ ||7||

ಹೊತ್ತುಹೊತ್ತಿಗನ್ನವಿಲ್ಲ || ಸತ್ತೆನು ಎಂದರೆ |

ಹತ್ತಿರ ಯಾರಿಲ್ಲ | ನೋಡಿರೋ ||8||

ತಾಪತ್ರಯದ ಬಹಳ ಚಿಂತೆ ||

ಆಪದವಂತೇ| ಕಾಪಾಡುವರುಂಟೆ | ನೋಡಿರೋ ||9||

ಕೆಟ್ಟ ರೋಗ ತಟ್ಟಿದಾಗ || ದುಷ್ಟ ಗುಣಂಗಳು |

ಮೆಟ್ಟಿ ಕೊರೆಯುವಾಗ | ನೋಡಿರೋ ||10||

ಬಿಡುವೆಯಿಲ್ಲ ದುಡಿಯಬೇಕು || ದುಡಿದುದು ಎಲ್ಲವ |

ಇಲ್ಲಿಯೆ ಬಿಡಬೇಕು| ನೋಡಿರೋ ||11||

ಹೊಟ್ಟೆಗನ್ನ ಮೈಗೆ ಬಟ್ಟೆ || ಕಟ್ಟಕಡೆಗೆ ಬರಿ |

ಬತ್ತಲೆಯಾಗಿತ್ತು | ನೋಡಿರೋ ||12||

ಇಂಥ ಕಾರಾಗೃಹವುವುಂಟೆ || ಸಂತತ ದುಃಖದ |

ಸಂತೆಯು ಬಲು ತಂಟೆ | ನೋಡಿರೋ ||13||

ಸಾಲ ಸೋಲ ಮುಪ್ಪು ಚಿಂತೆ |

ಬಾಳುವೆ ಬಡತನವೇ ಶಿಕ್ಷೆಗಳಂತೆ | ಬಾಧ್ಯತೆ ||14||

ಇದರೊಳಾರು ಬದುಕಿದವರು |

ಮುದದೊಳು ನರಹರಿ ಪದ ಸೇವಾ ಪರರು | ಸಾಯರು ||15||

ಎಂಥಾ ಕೂಸಮ್ಮ | ಈ ಕೂಸಿಂದ| ಬಂತು ಲೇಸಮ್ಮಾ ||ಪ||

ಸಂತ ಸಾಧುಗಳೆಲ್ಲ | ನಿಂತು ಸಾಕಿದರಮ್ಮ ||ಅಪ||

ಕಂಡ ಕಂಡವರೆತ್ತಿ| ಕೊಂಡಾಡಿಸುವರಮ್ಮ ||

ಪಿಂಡ ಬ್ರಹ್ಮಾಂಡೈಕ್ಯ | ಗೊಂಡಾಡುತಿಹುದಮ್ಮ ||1||

ಮಿಗಿಲು ಸೌಂದರ್ಯದಿ| ದಿಗಿಲು ಬಿಡಿಸಿದುದಮ್ಮ ||

ಜಗವೆಲ್ಲ| ತುಂಬಿ ಯಾ| ರಿಗು ಕಾಣದಿಹುದಮ್ಮ ||2||

ಕಂಡು ಕಾಣದ ಕೂಸು| ಗಂಡುಗಲಿ ಯೀ ಕೂಸು||

ಭಂಡರೆಲ್ಲರ ಕಿವಿಯ| ಹಿಂಡಿ ಕೂಗುವ ಕೂಸು ||3||

ನಕ್ಕು ನಗಿಸುವ ಕೂಸು| ಮಿಕ್ಕು ಸೊಗಸುವ ಕೂಸು||

ಸಿಕ್ಕಿ ಸಿಕ್ಕದ ಕೂಸು| ಸೊಕ್ಕು ಮುರಿಯುವ ಕೂಸು ||4||

ಆನಂದ ರೂಪಸು | ಜ್ಞಾನ ಮಾತ್ರದ ಕೂಸು||

ಮೌನೀಂದ್ರ ನರಹರಿ| ತಾನೆ ತಾನೀ ಕೂಸು ||5||

ಬಾರೆ ಈಗಲೆ ನಾರಿ| ಸೇರಿ ಜಾತ್ರೆಯು ಭಾರಿ ||ಪ||

ಮೂರೇ ದಿನಗಳು ತೋರುವ ಜಾತ್ರೆ ||ಅಪ||

ಒಂದು ದಿನ ಬಾಲ್ಯದೊಳು | ಒಂದು ದಿನ ಪ್ರಾಯದೊಳು ||

ಒಂದು ದಿನ ಮುಪ್ಪು | ಹೊಂದಿದ ಜಾತ್ರೆ ||1||

ವ್ಯಾಪಾರಗಳು ಭಾರಿ| ಕಾಪಟ್ಯಗಳು ಸೇರಿ||

ಜೋಪಾನವಾಗಿ | ಚಾಪಲ್ಯ ನೀಗಿ ||2||

ತೇರು ಬಂದಿತು ಸಾಗಿ| ಸೇರು ಮುಂದಕೆ ಹೋಗಿ||

ಧಾರಾಳವಾಗಿ| ಸಾರುತ ಬಾಗಿ ||3||

ದೇವರಿಗೆ ಕೈ ಮುಗಿದು| ಭಾವ ಭಕ್ತಿಯ ಪಡೆದು ||

ಸೇವಿಸು ಹೋಗು| ಪಾವನಳಾಗು ||4||

ನರಹರಿಯ ಪಾದಗಳ| ಸ್ಮರಿಸುತ್ತ ಬೋಧೆಗಳ||

ತೊರೆಯೀ ಜಾತ್ರೆ| ಬರದಿರು ಮತ್ತೆ ||5||

ಲಾಲಿ ಲಾಲಮ್ಮ | ಈ ಬಾಲನ| ಲೀಲೆ ಮೇಲಮ್ಮ ||ಪ||

ಮೂಲಾಧಾರದಿ ನಮ್ಮ | ಜೋಲಿ ತೂಗುವುದಮ್ಮ ||ಅಪ||

ಎತ್ತಿ ಕೊಂಡಾಡೋಣ| ನಿತ್ಯವೀ ಬಾಲನ ||

ಎತ್ತಿ ಕೊಂಡಾಕ್ಷಣ | ಮುತ್ತಿಕೊಂಬರು ಜನ ||1||

ಎಲ್ಲರಿಗೆ ನಡುವಿದ್ದು| ಎಲ್ಲರರಿಯದೆ ಗೆದ್ದು ||

ಬಲ್ಲವರೊಳಾಡುತ್ತ | ಸೊಲ್ಲೆನ್ನಿಸಿದ ನಿತ್ತ ||2||

ಇರವೆನ್ನಿಸಿದ ಬಾಲ| ಅರಿವೆನ್ನಿಸಿದ ಲೀಲ||

ಬೆರೆತವರೊಳು ಲೋಲ | ಪರಮಾನಂದದ ಮೂಲ ||3||

ಶ್ರವಣವೆನ್ನುವ ಪಾಲ| ಸವಿದು ಬೆಳದೀ ಬಾಲ||

ಸುವಿರಾಗ ಸದ್ಭಾವ | ಸುವಿವೇಕ ಗಳನೀವ ||4||

ಹುಟ್ಟಿದಾಗಲೆ ನುಡಿಯ| ಥಟ್ಟನಾಡುವ ಒಡೆಯ||

ಕಟ್ಟ ಕಡೆಯೊಳು ಮುಕ್ತಿ| ಕೊಟ್ಟ ನರಹರಿ ಮೂರ್ತಿ ||5||

ಬೇಗ ಬಾರಮ್ಮ | ಈ ತೊಟ್ಟಿಲು| ತೂಗು ಬಾರಮ್ಮ ||ಪ||

ತೂಗುತ್ತ ನಿತ್ಯವು | ಜೋಗುಳ ಪಾಡಮ್ಮ ||ಅಪ||

ಎಲ್ಲ ಲೋಕದ ಸುದ್ದಿ| ಇಲ್ಲೆಯಾಯಿತು ವೃದ್ಧಿ||

ಬಲ್ಲವರೊಡನಾಡಿ| ಉಲ್ಲಾಸವನು ಕೂಡಿ ||1||

ಗುರುಪಾದ ಕೃಪೆಯಿಂದ | ದೊರೆಯಿತೀ ತೊಟ್ಟಿಲು||

ಗುರು ಬೋಧೆಗಾಯ್ತಿದು| ಮೆರೆಯುವ ಮೆಟ್ಟಿಲು ||2||

ಕಾಲ ಕರ್ಮವ ಮೀರಿ| ಲೀಲೆಯಾಡುವ ಬಾಲ||

ಏಳು ಕೋಟಿಯ ಮಂತ್ರ| ಮೂಲ ತಾನನುಕೂಲ ||3||

ಈರೇಳು ಲೋಕದಾ| ಧಾರವಾಗಿಹ ಬಾಲ||

ಸೇರಿರುವ ತೊಟ್ಟಿಲು | ಮೂರವಸ್ಥೆಗೆ ಮೂಲ ||4||

ಇಲ್ಲೆ ನರಹರಿ ಮೂರ್ತಿ | ನಿಲ್ಲುತ್ತ ಸತ್ಕೀರ್ತಿ ||

ಯೆಲ್ಲ ಹೊಂದಿದನಂತೆ| ಸೊಲ್ಲೊಳಗಿಹನಂತೆ ||5||

ಅರ್ಥ ಹೇಳಿರಯ್ಯ ಗುರು ಪುತ್ರರಾದರೆ ||ಪ||

ವ್ಯರ್ಥ ಕಾಲ ಕಳೆಯದೆ ಸಮರ್ಥರಾದರೆ ||ಅಪ||

ಮೂಕ ಮಂತ್ರವಾದಿ ನಿಂತನೋಡಲಿಲ್ಲವೇ|

ತಾಕಿ ಮಂತ್ರ ಜಾಣ ನುಡಿದ ಕೇಳಲಿಲ್ಲವೇ||

ಮೂಕ ಜಾಣರಿಬ್ಬರೊಂದೆಯಾದರಲ್ಲವೇ|

ಏಕ ನಾದದಲ್ಲಿ ಕೇಳಿ ತಿಳಿಯಲಿಲ್ಲವೇ ||1||

ದೇಹದಲ್ಲೆ ಹುಟ್ಟಿ ಬಂದು ದೇಹವಾಗದು|

ಮೋಹವನ್ನೆ ಮೆಟ್ಟಿ ನಿಂದು ಮೆರೆವುದಾವುದು ||

ಸೋಹಮೆಂದು ಬಿರುದುಗೊಂಡು ಬಂದುದಾವುದು|

ಸಾಹಸಕ್ಕೆ ಮೀರಿ ನಿಂತು ತೋರಿತಾವುದು ||2||

ನಾಮರೂಪ ಕ್ರಿಯೆಯ ಮೀರಿ ನಿಂತುದಾವುದು

ನಾಮರೂಪ ಕ್ರಿಯೆಗಳಿಗಾಧಾರವಾವುದು ||

ಸಾಮರಸ್ಯ ಮುಕ್ತಿ ರೂಪ ಮಂತ್ರವಾವುದು|

ನಾಮರಹಿತ ನರಹರೀಂದ್ರನಾದುದಾವುದು ||3||

ಯಾರು ಈ ಕಂದ| ತೊಟ್ಟಿಲಿನಲ್ಲಿ| ಸೇರಿತಾ ನಿಂದ ||ಪ||

ಭೂರಿ ಬ್ರಹ್ಮಾನಂದ| ಸಾರಿ ನಿಂದರೆ ಚಂದ ||ಅಪ||

ದೃಷ್ಟಿತಾಕದ ಕಂದ| ಕಷ್ಟ ಸೋಕದೆ ನಿಂದ||

ಶಿಷ್ಟರಾಗಲಿ ಎಂದ| ದುಷ್ಟರೆಲ್ಲರ ಕೊಂದ ||1||

ಆಧಾರದಲ್ಲಿ ಪ್ರ| ಸಾದವೀಯತ ಬಂದ||

ಬೋಧಾ ಸ್ವರೂಪವಿ| ನೋದವಾಯಿತು ಎಂದ ||2||

ಭೂಕಾಂತೆ ಮನಸಾರ| ಸಾಕಿದಂತಹ ಕಂದ||

ಬೇಕಾಗಿ ಆಕಾಶ| ಸೋಕಿ ನಿಂತಿಹ ಕಂದ ||3||

ಜಲಧಿಯೊಳೀಜಾಡಿ| ನೆಲೆಯ ಸೇರುವ ಕಂದ||

ಬಲವಂತ ಗುರವಿನೆಂ| ಜಲು ತಿಂದ ನೀಕಂದ ||4||

ಅಗ್ನಿಯಲ್ಲಿಯೆ ನಿಂತು| ಯಜ್ಞ ಮಾಡಿದ ಕಂದ||

ಸುಜ್ಞಾನವೆನಿಸಿ ಸ| ರ್ವಜ್ಞನಾಗಿಹ ಕಂದ ||5||

ವಾಯುವ ನುಂಗುತ್ತ ಆಯಾಸ ನೀಗುತ್ತ ||

ಮಾಯಾ ವಿಲಾಸ ವಿ | ಧಾಯಕ ನೀಕಂದ ||6||

ಬಯಲೆಲ್ಲ ತುಂಬುತ್ತ | ಬಯಲನ್ನೆ ನಂಬುತ್ತ||

ಬಯಲಾದ ನರಹರಿ ದಯದೊಳಿರುವ ಕಂದ ||7||

ಅಷ್ಟ ಮೂರ್ತಿ ಶಿವನೊಳಿರ್ಪ | ಅಷ್ಟಸಿದ್ಧಿ ಮಹಿಮೆಯನ್ನು ||ಪ||

ನಿಷ್ಠೆಯಿಂದ ತಿಳಿಯುವವರು| ಇಷ್ಟ ಸಿದ್ಧಿ ಹೊಂದುತಿಹರು ||ಅಪ||

ಧರೆ ಜಲಾಗ್ನಿ ಮರುತ ಗಗನ| ತರಣಿ ಚಂದ್ರ ಆತ್ಮರೆಂಬ ||

ಪರಮ ಶಿವನ ಅಷ್ಟ ಮೂರ್ತಿ | ಅರಿತವರ್ಗೆ ಉಂಟು ಮುಕ್ತಿ ||1||

ಅರಿಯ ಲಣಿಮ ಮಹಿಮಲಘಿಮ| ಗರಿಮ ಪ್ರಾಪ್ತಿ ಪ್ರಾಕಾಮ್ಯಗಳು||

ಮೆರೆಯುವೀ ಶತ್ವವು ವಶಿತ್ವ | ಮೆರೆಯುವಷ್ಟ ಸಿದ್ಧಿಯಹವು ||2||

ಧರೆಯಿದಣುಗಳನ್ನು ಧರಿಸಿ| ಮೆರೆವುದಣಿಮ ಸಿದ್ಧಿಯೆನಿಸೀ||

ಹರಿವ ಜಲದ ಮಹಿಮೆಯಿಂದ| ಧರೆಯು ಬೆಳೆಯೆ ಮಹಿಮ ಸಿದ್ಧಿ ||3||

ಅನಲನಿಂದ ಸರ್ವಲಘುವು| ಎನಲು ಲಘಿಮ ಸಿದ್ದಿಯಹುದು||

ಅನಿಲ ತತ್ವದಿಂ ಗುರುತ್ವ | ಮಿನುಗಿ ಗರಿಮ ಸಿದ್ಧಿ ಬಹುದು ||4||

ಗಗನದಿಂದ ಸ್ಥಲವು ಪ್ರಾಪ್ತಿ| ಬಗೆಯಲಿದುವೇ ಪ್ರಾಪ್ತಿ ಸಿದ್ಧಿ||

ಜಗದಿ ಶಶಿ ಪ್ರಾಕಾಮ್ಯವೀವ| ಸೊಗಸಿದೇ ಪ್ರಕಾಮ್ಯ ಸಿದ್ದಿ ||5||

ರವಿಯೆ ಸರ್ವ ಗ್ರಹದಧೀಶ| ಭುವಿಗಿದೇ ಈಶತ್ವ ಸಿದ್ಧಿ ||

ಭುವನ ಭವನಾದೀಶನಾತ್ಮ | ಇವನೊಳುಂಟು ವಶಿತ್ವ ಸಿದ್ಧಿ ||6||

ಸರ್ವ ಸಿದ್ಧಿ ಶಿವನೊಳುಂಟು | ಸರ್ವ ಶುದ್ಧಿ ಶಿವನ ನಂಟು ||

ನಿರ್ವಿಕಾರ ನರಹರೀಂದ್ರ| ಸರ್ವಸಾಕ್ಷಿ ಜ್ಞಾನಸಾಂದ್ರ ||7||

ಆನಂದವಾಯಿತಮ್ಮ | ಸದ್ಗುರು ಬೋಧಾ | ಏನೆಂದು ಪೇಳಲಮ್ಮಾ ||ಪ||

ತಾನಾಗಿ ಶ್ರೀಗುರು | ಧ್ಯಾನಕ್ಕೆ ನಿಲ್ಲಲು|

ಏನೇನು ತೋರದೆ | ತಾನೇ ತಾನಾಗಲು ||ಅಪ||

ಪರಮಾರ್ಥ ತಿಳಿಯಿತಮ್ಮ | ಸಂಶಯವೆಲ್ಲಾ | ಪರಿಹಾರವಾಯಿತಮ್ಮ ||

ದುರಿತಂಗಳಡಗಲು | ಕರಣಂಗಳುಡುಗಲು ||

ಚಿರಶಾಂತಿಯುದಿಸಲು | ಪರಿಪೂರ್ಣವಾಗಲು ||1||

ನಡೆಯಲ್ಲಿ ಮೌನಿಯಮ್ಮ | ಸದ್ಗುರುನಾಥ | ನುಡಿಯಲ್ಲಿ ಜ್ಞಾನಿಯಮ್ಮ ||

ನಡೆಯುತ್ತಲೆಡವಿದ| ನುಡಿಯುತ್ತ ಕೊಡವಿದ ||

ಕಡೆಯಲ್ಲಿ ಬೆಳಗಿದ| ಜಡವೆಲ್ಲ ನೀಗಿದ ||2||

ಜಗವೆಲ್ಲ ತುಂಬಿನಿಂದ | ಜಗದೀಶ್ವರನ | ಸೊಗಸಾಗಿ ನಂಬಿರೆಂದ||

ಯುಗ ನಾಲ್ಕು ಸೇರಿದ | ಜಗದಲ್ಲಿ ತೋರಿದ ||

ನಿಗಮಾರ್ಥ ಸಾರಿದ | ಭಗವಂತ ನರಹರಿ ||3||

ಯೋಗಂಗಳೊಳು ಸುಜ್ಞಾನ| ಯೋಗಾರ್ಥ ಮುಕ್ತಿ ವಿಧಾನ ||ಪ||

ಯೋಗಂಗಳೊಳಗೆ ಕರ್ಮ| ಯೋಗಕ್ಕೆ ಫಲವೇ ಜನ್ಮ ||ಅಪ||

ಯೋಗಂಗಳೆಲ್ಲವ ಜ್ಞಾನ | ಯೋಗಕ್ಕೆ ತಂದವ ಜಾಣ|

ಭೋಗಂಗಳಾಸೆಗೆ ಕರ್ಮ | ಯೋಗಕ್ಕೆ ಬಿದ್ದವ ಹೀನ ||1||

ಹಠದಿಂದ ಸರ್ವೇಂದ್ರಿಯವ| ದಿಟವಾಗಿ ಗೆಲ್ಲುತಲಿರುವ ||

ಹಠಯೋಗಿ ಮಹಿಮೆಯ ಬಿಡಲು| ಘಟಸಾಕ್ಷಿ | ಜ್ಞಾನವ ಪಡೆವ ||2||

ಲಯಮೂರ್ತಿ ಶಿವನೊಳಗೆಲ್ಲಾ| ಲಯವಾಗುತಿರುವುದ ಬಲ್ಲಾ ||

ಲಯಯೋಗಿ ಜ್ಞಾನದೊಳೆಲ್ಲಾ | ಲಯ ಮಾಡಿ ಸಗುಣದಿ ನಿಲ್ಲ ||3||

ಮಂತ್ರಾರ್ಥವರಿಯುವ ಯೋಗಿ | ಮಂತ್ರಕ್ಕೆ ಕಾರಣನಾಗಿ ||

ಮಂತ್ರಾಧಿದೈವವ ಬೆರೆವ | ತಂತ್ರಾರ್ಥ ಜ್ಞಾನವ ಪಡೆವ ||4||

ರಾಜಂಗೆ ಸರ್ವ ಸ್ವತಂತ್ರ | ತೇಜೋ ವಿಶೇಷದ ತಂತ್ರ||

ರಾಜಿಸುತಲಿರುವಂದದೊಳು| ನೈಜಾಂಶ ರಾಜಯೋಗಿ ||5||

ಕ್ರಮದಿಂದ ಮನವನು ಗೆದ್ದ | ಸುಮನೋ ವಿಲಾಸವ ತಾಳ್ದ ||

ಅಮನಸ್ಕ ರಾಜಯೋಗಿ | ಸಮಭಾವ ಉಳ್ಳವಿರಾಗಿ ||6||

ಶಿವಸರ್ವ ಕರ್ತೃವೆಂದು | ಶಿವಸರ್ವ ಭೋಕ್ತ ೃವೆಂದು||

ಶಿವಜೀವರೈಕ್ಯದಿ ನಿಂದ | ಶಿವಯೋಗಿ ನರಹರಿಯಾದ ||7||

ಸಂತತ ಸದ್ಗುರು ಚಿಂತನದೊಳು ನಿ| ಶ್ಚಿಂತೆಯನಾಂತೆನು ಮನದಲ್ಲಿ ||ಪ||

ಅಂತರಂಗದೊಳು| ಶಾಂತಿಯ ತಪವ ನಿ| ರಂತರ ಗೈದೆನು ನಿಜದಲ್ಲಿ ||ಅಪ||

ಯಂತ್ರದೇಹ ಶಿವ| ಮಂತ್ರದಿಂದ ನಿ| ಯಂತ್ರಣವೆನ್ನುತ ಚಿಂತಿಸಿದೆ||

ತಂತ್ರಗಾರ ಗುರು ಬೋಧಿಸಿದಂತೆ ಸ್ವ| ತಂತ್ರನಾಗಿ ಸುಖ ಸಾಧಿಸಿದೆ ||1||

ವ್ಯಾಧನ ಬಲೆಯೊಳು ಬಿದ್ದ ಹರಿಣ ದಂ| ತಾದಯನ್ನ ಭವ ಬಲೆಯಿಂದ ||

ಹಾದಿಯ ತೋರಿಸಿ ಪಾರುಗೈದ ಗುರು| ನಾದೋಪಾಸನ ಬಲದಿಂದ ||2||

ಕಾಡಿನ ಮಧ್ಯದಿ ಕಾಳ್ಕಿಚ್ಚೆದ್ದಿರ | ಲೋಡುತಿದ್ದೆನಾ ಭಯದಿಂದ||

ಬೇಡಬೇಡ ಭಯ ಬಾರೆನ್ನುತ ಕಾ| ಪಾಡಿದ ನರಹರಿ ದಯದಿಂದ ||3||

ನಾದವನರಿಯದೆ | ವೇದವನೋದಲು | ಹಾದಿಯು ಸಿಕ್ಕದು ಸಾಧಿಸದೆ ||

ವಾದಭೇದಗಳು | ಹೋದರೆ ಶ್ರೀಗುರು | ಬೋಧೆಯೊಳಗೆ ಸು | ಸ್ವಾದವಿದೆ ||4||

ನರಹರಿ ಸದ್ಗುರು | ಚರಣವ ನಂಬದೆ | ಹರಿಯದು ಭವಭಯವೆಂದರಿದೆ ||

ಅರಿವು ಮರವೆಯೆರ| ಡಿರದೊಂದಾಗಿಹ | ಪರಿಯನರಿತು ನಾ ಸುಖಿಯಾದೆ ||5||

ಎಂತಿರುವನು ಯೋಗಿಯು | ಬ್ರಹ್ಮದ|

ಚಿಂತನ ಸುಖ ಭೋಗಿಯು ||ಪ||

ಸ್ವಾಂತದೊಳಾನಂದ| ನಿಂತಿರಲೇ ನೊಂದ | ಚಿಂತಿಸದಿರುವಾತನು ||ಅಪ||

ತನುವಿದ್ದು ಇಲ್ಲೆಂಬನು| ತನ್ನಯ|

ಮನದಿಚ್ಛೆಗಳ ನಂಬನು ||

ಘನವೈರಾಗ್ಯವು | ಅನುಪಮ ಭಾಗ್ಯವು | ಎನುತಿರ್ಪ ತಾನೀತನು ||1||

ಕಂಡದ್ದು ಸುಳ್ಳೆಂಬನು| ಕಾಣದ|

ಖಂಡತ್ವ ತಾನೆಂಬನು ||

ಪಿಂಡದೊಳಗೆ ಬ್ರ| ಹ್ಮಾಂಡವ ಕಾಂಬನು | ಖಂಡಿತ ನಿಜ ವಾಚ್ಯನು ||2||

ನಾದವೆ ತಾನಾದನು | ಬಿಂದುವಿ |

ಗಾದಿಯೆ ತಾನೆಂದನು ||

ನಾದಾಂತದಿ ಚಿ| ನ್ನಾದದಿ ನಿಂದನು | ಬೋಧಾಂತ ಕಳೆಯಾದನು ||3||

ಇರವೆನ್ನಿಸುತ ಬಂದನು| ತನ್ನೊಳ|

ಗರಿವೆನ್ನಿಸುತ ನಿಂದನು ||

ಇರವರಿವುಗಳನು | ಬೆರೆದಾನಂದದಿ| ಪರವಸ್ತು ತಾನಾದನು ||4||

ನಿರ್ಗುಣ ತಾನಾದನು | ಇಂದ್ರಿಯ

ನಿಗ್ರಹ ಪಡೆದಾತನು||

ಸ್ವರ್ಗವ ಬಿಟ್ಟ ಪ| ವರ್ಗವ ಹೊಂದಿಪ| ಭರ್ಗ ನರಹರಿಯೀತನು ||5||

ಅಖಂಡ ಬ್ರಹ್ಮದ | ಸುಖ ಸ್ವರೂಪದ|

ಪ್ರಕಾಶ ಪ್ರಣವಕೆ ನಮೋ ನಮೋ ||ಪ||

ಸ್ವಕಾಂತಿಯೊಳು ನಖ| ಶಿಖಾಂತ ಹೊಳೆಯುವ |

ವಿಕಾಸ ಪ್ರಣವಕೆ ನಮೋ ನಮೋ ||ಅಪ||

ಹಕಾರ ರೇಚಕ ಸಕಾರ ಪೂರಕ|

ಹಕಾರ ಸಕಾರ ಮಧ್ಯದೊಳು||

ಸುಕಾಂತಿ ಬೀರುವ ಬಿಂದುವೆ ಏಕೋ|

ಪ್ರಕಾರ ಕುಂಭಕವಾಗಿರಲು ||1||

ಹಕಾರ ಸಕಾರ ಮಧ್ಯದೊಳಾನಿ |

ರ್ವಿಕಾರ ಬಿಂದುವೆ ಬ್ರಹ್ಮವದು||

ಪ್ರಕಾಶಿಸುವುದಾ ಸೋಹಂ ಕೊನೆಯೊಳು |

ಸುಖ ಸ್ವರೂಪದ ಧರ್ಮವದು ||2||

ಹಕಾರವೇ ಶಿವರೂಪವಾಗಿರುತಿದೆ|

ಸಕಾರ ಶಕ್ತಿಯ ರೂಪವಿದೆ||

ಹಕಾರ ನಿರ್ಗಮವಾಗುತಲಿರುತಿದೆ|

ಸಕಾರ ಪ್ರವೇಶವಾಗುತಿದೆ ||3||

ಹಕಾರ ಸಮಷ್ಟಿ ಈಶ್ವರನೆನಿಸಿದೆ |

ಸಕಾರ ವ್ಯಷ್ಟಿಯು ಜೀವವಿದೆ ||

ಹಕಾರ ಸಕಾರವೆರಡೂ ಕೂಡಲು|

ಅಖಂಡ ಬಿಂದುವೆ ಐಕ್ಯವಿದೆ ||4||

ಹಂಸನ ಮಧ್ಯದಿ ಸೋಹಂ ಕೊನೆಯೊಳು |

ಸಂಶಯವಿಲ್ಲದೆ ತೋರುತಿದೆ||

ಸ್ವಾಂಶದಿ ಬೆಳಗುತ ನರಹರಿ ಪರಮ|

ಹಂಸನೊಳಗೆ ಗೋಚರಿಸುತಿದೆ | |5||

ನಡೆಯೊಳು ಹಂಸ ಸ್ವರೂಪದೊಳಿರುವುದು |

ನುಡಿಯೊಳು ಸೋಹಂ ತಾನಹುದು||

ನಡೆನುಡಿ ನಡುವೇ ನಿರಂಜನತ್ವವ |

ಪಡೆದಡಗಿತು ಪರತತ್ವವಿದು ||6||

ಸಕಾರ ವಿರಾಟ ರೂಪಾಗಿರುವುದು |

ಹಕಾರ ಸ್ವರಾಟ ರೂಪವದು ||

ವಿಕಾರವಿಲ್ಲದ ಬಿಂದುವೆ ಏಕೋ |

ಪ್ರಕಾರರಾಜಿಪ ಬ್ರಹ್ಮವದು ||7||

ಹಕಾರ ಬ್ರಹ್ಮನು ಸಕಾರ ಜೀವನು |

ಹಕಾರ ಸಕಾರ ಮಧ್ಯದೊಳು |

ಪ್ರಕಾಶಿಸುತ್ತಿಹ ಬಿಂದುವಿನಲ್ಲಿಯೆ |

ವಿಕಾರವಿಲ್ಲದೆ ಕೂಡುವರು ||8||

ನಡೆನುಡಿಗಳ ನಿಲುಕಡೆಯೊಳು ನಿಲ್ವುದು |

ಜಡ ದೃಶ್ಯಕೆ ಬೇರಾಗಿಹುದು||

ಬೆಡಗಿನ ಬ್ರಹ್ಮವು ಕಡು ಸುಖ ರೂಪವು |

ಒಡೆಯನು ನರಹರಿ ತಾನಹುದು ||9||

ಬ್ರಹ್ಮವ ತಿಳಿದವ | ಬ್ರಹ್ಮವೆ ಆಗುವ|

ಸಮ್ಮತ ಶೃತಿಮತ ಕೇಳಯ್ಯ ||ಪ||

ನಿರ್ಮಮಕಾರದಿ | ನಿರ್ಮಲ ಭಾವದಿ|

ಕರ್ಮವ ಕಳೆಯುತ ಬಾಳಯ್ಯ ||ಅ ಪ||

ನಡೆಯೊಳು ಹಂಸನ ರೂಪದೊಳಿರುವುದು|

ನುಡಿಯೊಳು ಸೋಹಂ ತಾನಹುದು||

ನಡೆನುಡಿ ನಡುವೇ ನಿರಂಜನತ್ವವ|

ಪಡೆದಡಗಿಹುದು ಬ್ರಹ್ಮವದು ||1||

ಸಕಾರ ವಿರಾಟ ರೂಪಾಗಿರುವುದು |

ಹಕಾರ ಸ್ವರಾಟ ರೂಪಹುದು||

ವಿಕಾರವಿಲ್ಲದ ಬಿಂದುವೆ ನಾನಾ|

ಪ್ರಕಾರ ಜಗದಾಶ್ರಯವಿಹುದು ||2||

ಹಕಾರ ಬ್ರಹ್ಮವು| ಸಕಾರ ಜೀವನು|

ಹಕಾರ ಸಕಾರ ಮಧ್ಯದೊಳು||

ಪ್ರಕಾಶವಾಗಿಹ ಬಿಂದುವಿನಲ್ಲಿಯೆ|

ಸುಖ ಸ್ವರೂಪದಿ ಬೆರೆತಿರಲು ||3||

ಅಕಾರ ಬ್ರಹ್ಮನು ಉಕಾರ ವಿಷ್ಣುವು|

ಮಕಾರ ರುದ್ರನು ಕೂಡುವರು||

ಪ್ರಕಾಶದಿಂದೋಂಕಾರದ ತುದಿಯೊಳು |

ಶಿಖಾ ಸ್ವರೂಪದಿ ಬೆಳಗುವರು ||4||

ನಡೆನುಡಿಗಳ ನಿಲು ಕಡೆಯೊಳು ನಿಲ್ವುದು |

ಜಡ ದೃಶ್ಯಕೆ ಬೇರೆನಿಸಿಹುದು||

ಬೆಡಗಿನ ಬ್ರಹ್ಮವು ಕಡು ಸುಖ ರೂಪವು |

ಒಡೆಯನು ನರಹರಿ ಸದ್ಗುರುವು ||5||

ಮಲಿನ ದೇಹದಿ ಹುಟ್ಟಿದರು ನಿ |

ರ್ಮಲವದಾವುದು ಪೇಳಿರಣ್ಣ ||ಪ||

ಅಳಿಯದಂದದಿ ಹೊಳೆಯುತಿಪುದು |

ತಿಳಿದು ಪೇಳಿರಿದಾವುದಣ್ಣ ||ಅಪ||

ಹುಟ್ಟಿದಾಕ್ಷಣ ಬ್ರಹ್ಮದೊಳಗೆ|

ನೆಟ್ಟಗೇ ತಾ ಬೆರೆದು ಹೋಗೆ||

ದಿಟ್ಟ ಗುರು ಪುತ್ರರಿಗೆ ಮಾತ್ರ|

ಥಟ್ಟನೇ ವಶವಾದ ಸೂತ್ರ ||1||

ಎಲ್ಲವನು ತಾನೆಣಿಸಿ ತೋರ್ಪುದು |

ಎಲ್ಲಿ ಕಾಣದೆ ಹೋಗುತಿರ್ಪುದು||

ಬಲ್ಲವಗೆ ತನ್ನಲ್ಲೆ ಇರುವುದು|

ಬಲ್ಲವರು ನಿಜ ಹೇಳಬಹುದು ||2||

ಮೈಗೆ ಸೋಕದು ಕಣ್ಗೆ ಕಾಣದು|

ಕೈಗೆ ಸಿಕ್ಕದು ನೋಡಿರಣ್ಣಾ ||

ಹಾಗೆ ಹೀಗಿದೆ ಎಂದು ವರ್ಣಿಸ|

ಲಾಗದಂತಹ ವಸ್ತುವಣ್ಣಾ ||3||

ಎಂಜಲಲ್ಲಿಯೆ ಹುಟ್ಟಿದರು ಭವ|

ಭಂಜಿಸುತ್ತಿದೆ ಮಾಡಲನು ಭವ||

ರಂಜಿಸುತ್ತ ಪವಿತ್ರವೆನಿಸಿ ನಿ|

ರಂಜನದಿ ಬೆರೆದಿರ್ಪುದಣ್ಣಾ ||4||

ಸತ್ತು ಚಿತ್ತಾನಂದ ರೂಪವು |

ನಿತ್ಯವಿದು ಪರಿಪೂರ್ಣ ಪ್ರಣವವು ||

ಮಿಥ್ಯ ಮಾಯಾ ದೂರವಾದುದು |

ಸತ್ಯ ನರಹರಿ ಮಂತ್ರ ತಾನಿದು ||5||

ಅಂಬರವನಿದು ತುಂಬಿರುವುದು |

ನಂಬಿದವರಿಗೆ ಇಂಬಿರುವುದು ||

ಶಂಭು ರೂಪವ ತಾಳಿರುವುದು |

ಅಂಬುಧಿಯಲಿ ವಿಜೃಂಭಿಸುವುದು ||6||

ಶುದ್ಧ ಬುದ್ಧವು ಸಿದ್ಧವಾದುದು |

ವಿದ್ಯೆ ಎನಿಸಿ ಪ್ರಸಿದ್ಧವಾದುದು||

ವೇದ್ಯವಾಯಿತು ನರಹರಿಯೊಳು |

ಸಾಧ್ಯವಾಯಿತು ಭಕ್ತಜನಕೆ ||7||

ನಂಬಿರಿ ನಂಬಿರಿ ಶಿವನನ್ನು |

ತುಂಬುತ ಮನದೊಳು ಭಕ್ತಿಯನು ||ಪ||

ಹಂಬಲವಿಲ್ಲದ ಮುಕ್ತಿಯನು |

ಸಂಭ್ರಮದೊಳು ಶಿವ ನೀಯುವನು ||ಅಪ||

ನಡೆಯೊಳು ಗೌರೀವರನಾಗಿ | ಸ|

ನ್ನುಡಿಯೊಳು ಗಂಗಾಧರನಾಗಿ||

ನಡೆನುಡಿಗಳು ನಿಲು ಕಡೆಯಾಗಿ| ನಿಂ|

ದೊಡನೇ ತೋರಿದ ಮೃಢನಾಗಿ ||1||

ನಾದದ ಮೂಲದಿ ಬೆಳಗುವನು | ಪರ |

ನಾದ ವಿಲಾಸದಿ ತೋರುವನು||

ಸಾಧಿಸಿ ಬಿಂದುವ ಸೇರುವನು | ನಿಜ|

ಬೋಧದಿ ಚಿತ್ಕಳೆ ಬೀರುವನು ||2||

ಮೂಲಾಧಾರದಿ ನಡೆಯುವನು | ಭವ|

ಮೂಲವ ಛೇದಿಸಿ ಬಿಡುವವನು ||

ಕಾಲನ ಭಯವನು ನೀಗುವನು | ಚಿ|

ನ್ಮೂಲದಿ ನರಹರಿ ಯಾಗುವನು ||3||

ಆರತಿ ಎತ್ತುವೆ ರೇವಣಸಿದ್ಧಗೆ |

ಧಾರಿಣಿ ತತ್ವ ಪ್ರಸಿದ್ಧನಿಗೆ ||ಪ||

ಮೂರು ನೇತ್ರಗಳ ಧರಿಸಿದ ಮಂಗಳ |

ಮೂರುತಿಯಹ ಪರಿಶುದ್ಧನಿಗೆ ||ಅಪ||

ವರಮುನಿ ಕುಂಭಜನಿಗೆ ಪರ ತತ್ವವ|

ಹರುಷದಿ ಪೇಳಿದ ಗುರುವರಗೆ ||

ಹರಿಹರ ಭೇದವು ಹರಿಯಲಿಯೆನ್ನುತ |

ಹರಿ ವಿಗ್ರಹವನು ನಿಲಿಸಿದಗೆ ||1||

ನರರನು ಕೊಲ್ಲುವ ದುರುಳ ತಗುಣಿಗಳ|

ಉರಿಗಣ್ಣೊಳು ಸುಟ್ಟಾತನಿಗೆ ||

ಧರೆ ಮೂರನು ಗೆಲುವಂಥ ಕಠಾರವ|

ಸುರಗಿಯ ಮಾಡಿಟ್ಟಾತನಿಗೆ ||2||

ಮಾಯಾ ದೇವಿಯ ಮನೆಯೊಳು ನೀರನು |

ಕಾಯಕವೆಂದೇ ಹೊತ್ತವಗೆ||

ರಾಯ ಬಿಜ್ಜಳನ ಮನೆಯನು ಸುಟ್ಟು ನಿ|

ರಾಯಾಸದಿ ನಿಲ್ಲಿಸಿದವಗೆ ||3||

ಮೂರು ಕೋಟಿ ಲಿಂಗಗಳ ನಿಲಿಸಿದ|

ಧೀರ ವಿಭೀಷಣ ವರದನಿಗೆ||

ಗೋರಕ್ಷಕನ ವಿಷ ಶಸ್ತ್ರವ ನುಂಗುತ|

ಕ್ರೂರನ ಗರ್ವವ ಹರಿದವಗೆ ||4||

ಸುರಗಿಗೆ ಬಲಿಯಾಗುವ ಕನ್ಯೆಯರನು |

ಸೆರೆ ಬಿಡಿಸಿದ ಪುಣ್ಯಾತ್ಮನಿಗೆ ||

ಧರೆಯನು ಪಾವನ ಮಾಡುವೆನೆನ್ನುತ|

ನರಹರಿ ರೂಪದಿ ಬಂದವಗೇ ||5||

ಸಾಕಬಾರದೇ | ಗಿಣಿಯ| ಸಾಕಬಾರದೇ ||ಪ||

ಸಾಕಿದರೆ ವಿವೇಕವಿತ್ತು| ಶೋಕ ದೂರ ಮಾಡುತಿತ್ತು ||ಅಪ||

ದೇಹ ಪಂಜರವನ್ನು ಸೇರಿ|

ಮೋಹ ದಾಹವನ್ನು ಮೀರಿ||

ಕೋಹಂ ಕೋಹಂ ಎನ್ನದಂತೆ |

ಸೋಹಂ ಭಾವ ತಾಳಿತಂತೆ ||1||

ರಾಮ ರಾಮ ಎನ್ನುತಿಹುದು |

ಪ್ರೇಮ ಭಾವ ತಾಳಿರುವುದು ||

ಕಾಮಿತಾರ್ಥ ಕೆಳಸದಿರುವಾ |

ರಾಮ ಗಿಳಿಯ ನುಡಿಯ ಕೇಳ್ವಾ ||2||

ಕಾಲನೆಂಬ ಬೆಕ್ಕಿಗಿನ್ನು |

ತಾಳದನಿತು ಭಯವ ತಾನು ||

ಲೀಲೆಯಿಂದ ಕಾಲನೊಡನೆ |

ಕಾಳಗಕ್ಕೆ ನಿಂತ ಗಿಣಿಯ ||3||

ಸಪ್ತ ಚಕ್ರ ಸುತ್ತಿ ಬಂತು |

ಗುಪ್ತ ಮಾರ್ಗದಲ್ಲಿ ನಿಂತು ||

ಸಪ್ತ ಕೋಟಿ ಮಂತ್ರ ನುಡಿವ|

ತೃಪ್ತಮಾದ ಜ್ಞಾನ ಗಿಣಿಯ ||4||

ನಡೆಯ ಮೀರಿ | ನುಡಿಯ ಸೇರಿ|

ನಡುವೆ ನಿಂತು ಬೆಡಗು ತೋರಿ||

ಸಿಡಿದು ಜಾರಿ ಮೃಢನ ಭೇರಿ|

ಹೊಡೆದು ಸಾರಿದಂಥ ಗಿಣಿಯ ||5||

ಶರೀರ ಮಾವಿನ ಮರದೊಳಿದ್ದು|

ದೊರೆತ ಫಲವ ತಾನೆ ಮೆದ್ದು||

ಬರಿದು ಮಾಡಿಯೆಲ್ಲ ಗೆದ್ದು |

ಬರುವ ಗಿಣಿಯೆ ಜ್ಞಾನವಿದ್ದು ||6||

ಜಾಣ ನುಡಿಗಳೆಲ್ಲ ಕಲಿತು|

ಮೌನದಲ್ಲಿ ಧ್ಯಾನ ಬಲಿತು ||

ಜ್ಞಾನಿ ನರಹರೀಂದ್ರ ನಡಿಯ|

ಧ್ಯಾನ ಮಾಳ್ಪ ಜ್ಞಾನ ಗಿಣಿಯ ||7||

 

ಈ ದೇಹದೊಳಗೆ ಸಂದೇಹವಿಲ್ಲದೆ ದಿವ್ಯ|

ಮಾದ ಪರ ತತ್ವವು ಬೆಳಗುತಿದೆ ||ಪ||

ಭೂದೇವ ಶ್ರೀಗುರು| ಪಾದವಂ ಸೇರಲು|

ಬೋಧೆಯಿಂದಲೆ ಮುಕ್ತಿಯಾಗುತಿದೆ ||ಅಪ||

ಭೂ ಚಕ್ರದೊಳಗೆ ಸರ್ವಾಚಾರ ಕಾರಣ|

ದಾಚಾರ ಲಿಂಗವೆ ಗಣಪತಿಯು||

ಗೋಚರಿಸುವ ಗಂ| ಧಾರ್ಚನೆಯೊಳು ಭಕ್ತ|

ನಾಚರಿಸುವ ನಿತ್ಯ ಪೂಜೆಯನು ||1||

ಜಲಚಕ್ರದೊಳಗೆ ನಿ| ರ್ಮಲ ಗುರುಲಿಂಗವೆ |

ಜಲಜ ಸಂಭವನೆನ್ನಿಸಿರುತಿರಲು ||

ಒಲಿದು ಮಾಹೇಶ್ವರ| ಸುಲಲಿತ ರಸಪೂಜೆ|

ಯೊಳು ತೃಪ್ತಿಗೊಳಿಸುವ ನಂದದೊಳು ||2||

ಅಗ್ನಿ ಚಕ್ರದಿ ಸರ್ವಯಜ್ಞ ಕಾರಣ ಸ|

ರ್ವಜ್ಞ ಶಿವಲಿಂಗವೆ ವಿಷ್ಣುವೆನಿಸಿ ||

ಸಂಜ್ಞೆ ರೂಪದ ಪೂಜಾ | ಮಗ್ನ ಪ್ರಸಾದಿ| ಶಿ|

ವಾಜ್ಞೆಯಿಂದಲಿ ಪೂಜಿಸುತಲಿರುವಾ ||3||

ವಾಯು ಚಕ್ರದೊಳು ನಿ| ರ್ಮಾಯ ಜಂಗಮಲಿಂಗ|

ಸ್ವಾಯಂಭು ರುದ್ರನೆಂದೆನಿಸಿರಲು||

ಪ್ರೀಯದಿಂ ಸ್ಪರ್ಶವಿ | ಧಾಯಕ ಪೂಜೆಯ|

ಕಾಯದಲ್ಲಿಯೆ ಪ್ರಾಣಲಿಂಗಿಗೈವ ||4||

ಗಗನ ಚಕ್ರದೊಳು ಕ| ರ್ಮಗಳೆಲ್ಲವನು ನೀಗಿ|

ನಿಗಮ ಪ್ರಸಾದ ಲಿಂಗವು ಬೆಳಗೆ ||

ಸೊಗಸಿ ಜೀವಾತ್ಮನ| ಜಗವಂದ್ಯ ಶರಣ ಶ|

ಬ್ದಗಳಿಂದ ಪೂಜಿಪನೆಂದರಿಯೆ ||5||

ಆತ್ಮ ಚಕ್ರದೊಳು ಸ| ರ್ವಾತ್ಮ ಮಹಲಿಂಗವೆ|

ಸೂತ್ರಾತ್ಮ ಶ್ರೀಗುರು ಮೂರ್ತಿಯಿರಲು ||

ಕ್ಷೇತ್ರಜ್ಞನೈಕ್ಯನು | ಆತ್ಮಾನಂದದ ಪೂಜೆ|

ಯಿತ್ತು ದಾಜ್ಞಾ ಚಕ್ರವೆನಿಸಿರಲು ||6||

ಸಾವಿರ ದಳ ಚಕ್ರ | ಪಾವನ ಪರನಾದ|

ಕೈವಲ್ಯ| ವೇ ಪರಮ ಗುರುಮೂರ್ತಿ ಯು|

ಸಾವಿರ ವರ್ಣ ಸಂ| ಜೀವನೆನಿಸಿ ನಿ|

ರಾವರಣ ನರಹರಿ ಮೆರೆದಿರಲು ||7||

ಪರಬೋಧಾ ಸಂಜೀವನವು |

ಗುರು ಪಾದಾಶ್ರಯ ಪಾವನವು ||ಪ||

ಆನೆಯನೇರಿರುವವನು | ಬಡ|

ಶ್ವಾನನಿಗಂಜುವನೇನು |

ಜ್ಞಾನ ಪಡೆದಿರುವವನು| ಅನು |

ಮಾನಕೆ ಹೆದರುವನೇನು ||1||

ಹಾಲೊಳು ಬೆಣ್ಣೆಯು ಇರುವ | ಪರಿ|

ಯೀಲೋಕದಿ ಹರಿಯಿರುವ ||

ಲೀಲೆಯನರಿತವ ಮುಕ್ತ | ಭವ|

ಮಾಲೆಯ ಹರಿಯಲು ಶಕ್ತ ||2||

ವೇದವನೋದಿದರೇನು | ಪರ|

ನಾದವ ಸಾಧಿಸದವನು ||

ಬೋಧೆಯ ಕೇಳಿದರೇನು | ಗುರು|

ಪಾದವ ಸೇರದ ನರನು ||3||

ಮಂತ್ರವ ಜಪಿಸಿದರೇನು | ಶಿವ |

ತಂತ್ರವ ತಿಳಿಯದ ನರನು||

ಚಿಂತನ ಮಾಡಿದರೇನು | ಗುರು|

ಪಂಥವ ನೈದದ ನರನು ||4||

ಧ್ವನಿಸುವ ಪರನಾದವನು | ಸಂ|

ಜನಿಸುವ ವರ ವೇದವನು ||

ಮನು ಜಪ ಸಂಧಾನವನು | ಪಾ|

ವನ ನರಹರಿ ಪೇಳುವನು ||5||

ಯಾಕೆ ತಿಳಿಯದೆ ಹೋದೆ ಮನುಜ |

ಸಾಕು ಬಿಡು ಸಂಶಯವನೀಗ ||ಪ||

ಲೋಕದಾಟವು ನಿಜವೇನಲ್ಲ |

ಲೋಕನಾಥನ ತಿಳಿಯೋ ಬೇಗ ||ಅಪ||

ಭೇದ ಪೇಳ್ವುದು | ವೇದಕೆ ಸಲ್ಲದು |

ವಾದವೆಂಬುದು ಜ್ಞಾನಿಯೊಳಿರದು ||

ಸಾಧುವಾಗದೆ ಮೌನಿಯೆ ಅಲ್ಲ |

ಬೋಧೆಯಿಲ್ಲದ ಶಿಷ್ಯನೆಯಿಲ್ಲಾ ||1||

ನಾದ ಕೇಳದ ಯೋಗಿಯೆ ಇಲ್ಲ|

ಭೇದವಿದ್ದರೆ ಮುಕ್ತನೆ ಅಲ್ಲ||

ಕ್ರೋಧವಳಿಯದೆ ಭಕ್ತನೆ ಅಲ್ಲ |

ಕಾದದಿದ್ದರೆ ವೀರನೆ ಅಲ್ಲ ||2||

ಸತ್ಯ ಬಿಟ್ಟರೆ ತಪವಿನ್ನೇಕೆ|

ಮಥ್ಯವಿದ್ದರೆ ಜಪವಿನ್ನೇಕೆ ||

ಮೃತ್ಯು ಗೆಲ್ಲದ ಮಂತ್ರವು ಏಕೆ |

ಪಥ್ಯವಿಲ್ಲದ ವೈದ್ಯವು ಏಕೆ ||3||

ಮರವೆಗಿಂತಲು ಶತೃವು ಉಂಟೆ |

ಅರಿವಿಗಿಂತಲು ಮಿತ್ರರು ಉಂಟೆ ||

ಗುರುವಿಗಿಂತಲೂ ಹಿರಿಯರುಂಟೆ|

ಶರಣಗಿಂತಲು ಪೂಜ್ಯರುಂಟೆ ||4||

]ನುಡಿಯ ಬಿಟ್ಟರೆ ಧ್ಯಾನವುಂಟೆ |

ನಡೆಯ ಬಿಟ್ಟರೆ ಮೌನವುಂಟೆ ||

ಒಡಲ ಮೋಹದಿ ಮುಕ್ತಿಯುಂಟೆ |

ಒಡೆಯ ನರಹರಿಗಧಿಕರುಂಟೆ ||5||

ಕಾಮಕ್ಕಿಂತಲು ವೈರಿಯುಂಟೆ |

ಪ್ರೇಮಕ್ಕಿಂತಲು ಸೌಖ್ಯವುಂಟೆ ||

ನಾಮ ಬಿಟ್ಟರೆ ಧ್ಯಾನವುಂಟೆ |

ತಾಮಸ ಬಿಡಲಜ್ಞಾನವುಂಟೆ ||6||

ನಿಂದನೆಗಿಂತಲು ಪಾಪವುಂಟೆ |

ವಂದನೆಗಿಂತಲು ಪುಣ್ಯವುಂಟೆ ||

ಬಂಧಕ್ಕಿಂತಲು ನರಕವುಂಟೆ |

ತಂದೆ ನರಹರಿಗಧಿಕರುಂಟೆ ||7||

ತಿಳಿಯಬೇಕು | ತಾನೆ | ಉಳಿಯಬೇಕು ||ಪ||

ತನ್ನ ತಾನೆ ತಿಳಿಯಬೇಕು | ಭಿನ್ನ ಭಾವ ಕಳೆಯಬೇಕು||

ಶೂನ್ಯದಲ್ಲೇ ಹೊಳೆಯ ಬೇಕು | ಧನ್ಯನಾಗಿ ನಿಲ್ಲಬೇಕು ||ಅಪ||

ನಾದ ಬಿಂದು ಕಳೆಗತೀತ | ನಾದ ಶಿವನೆ ಸಕಲ ಭೂತ ||

ಆದಿಕಾರಣಾತ್ಮನೆಂದು | ವೇದ ಧರ್ಮ ಸಾರಿತೆಂದು ||1||

ನೇತ್ರಮಧ್ಯ ತೇಜೋಲಿಂಗ | ಸೂತ್ರಧಾರಿ ಯಾಗಲಂಗ ||

ಪಾತ್ರ ಧಾರಿಗಳದೆ ಕುಣಿತ| ಸೂತ್ರಧಾರಿಗಿಲ್ಲವೆನುತ ||2||

ಇಳೆಯ ತೂರಿ ಒಳಗೆ ನಿಂತು| ಜಲದ ದಾರಿ ಬಲವನಾಂತು|

ಚಲಿಸಿ ಹಾರಿ ಗಗನ ಸೇರಿ| ಕಳೆಯ ತೋರ್ಪ ದೇವ ಭೇರಿ ||3||

ಭೂಮಿ ಹೊತ್ತ ಆದಿಶೇಷ | ನೇಮದಿಂದ ಚಿದ್ವಿಲಾಸ ||

ಸಾಮಗಾನದಲ್ಲಿ ನಿಂದು | ಪ್ರೇಮ ಬೋಧಗೈದನೆಂದು ||4||

ಆದಿಮೂಲ ವೇದವೆಂದು | ವೇದಮೂಲ ನಾದವೆಂದು||

ನಾದಮೂಲ ಬೋಧೆಯೆಂದು| ಆದಿ ನರಹರೀಂದ್ರ ನೆಂದು ||5||

ಏನು ಪುಣ್ಯವಕ್ಕ| ಸು| ಜ್ಞಾನ ಗುರುವೆ ಸಿಕ್ಕ ||ಪ||

ನಾನು ನೀನೆಂಬ ಲೆಕ್ಕ | ತಾನೆ ಕಳೆದು ನಕ್ಕ ||ಅಪ||

ಎಲ್ಲಿ ಯಾರಿಗು ಸಿಕ್ಕ | ತಾ| ನಿಲ್ಲದೆಡೆ ಯಿಲ್ಲಕ್ಕ ||

ಬಲ್ಲ ಶರಣರ ಹೊಕ್ಕ | ಅಲ್ಲೆ ಕಳೆದ ದುಃಖ ||1||

ನತ್ತು ಮೂಗಿಗಿಟ್ಟು | ಸಂ| ಪತ್ತಿನ ತಾಳಿ ಕಟ್ಟಿ ||

ಮುತ್ತೈದೆ ಮಾಡಿಟ್ಟ | ಸತ್ಯ ಹೇಳಿಕೊಟ್ಟ ||2||

ಮೂರು ನದಿಯ ಮಧ್ಯ | ಸಂ | ಚಾರವಿಲ್ಲದಿದ್ದ |

ಜಾರಿ ನೀರಿಗೆ ಬಿದ್ದ | ಮೀರಿ ಪಾಪಗೆದ್ದ ||3||

ಹರಿವ ಹಾವು ಹಿಡಿದ| ಕೈ | ಸೆರೆಯ ಮಾಡಿ ನಡೆದ||

ಪರಮಾರ್ಥ ಕೂಡಿದ| ಪರಮ ಯೋಗ ಪಡೆದ ||4||

ಆಶಾಪಾಶ ಸುಟ್ಟ | ಬಹು| ಲೇಸು ಮಾಡಿಬಿಟ್ಟ ||

ದೋಷಗಳ ಕಳೆದಿಟ್ಟ | ಸೋಸಿ ಕೈಗೆ ಕೊಟ್ಟ ||5||

ಗುಪ್ತಗಾಮಿ ಗಂಗಾ | ನಿರ್ಲಿಪ್ತದಂತರಂಗಾ ||

ಸಪ್ತ ವರ್ಣದ ಲಿಂಗ| ಪ್ರಾಪ್ತಿ ಪಾಪಭಂಗ ||6||

ಆರು ಮೆಟ್ಟಿಲೇರಿ | ಸುರ| ಭೇರಿ ನಾದ ತೋರಿ||

ಧೀರ ನರಹರಿ ಸೂರಿ| ತೋರಿಬಿಟ್ಟ ದಾರಿ ||7||

ಬ್ರಹ್ಮವೆಂತು ಇರ್ಪುದೆಂದು | ನಿಮ್ಮೊಳಿಂತು ನೀವೆ ತಿಳಿದು ||

ನೆಮ್ಮದಿಯನು ತಾಳಬಹುದು ನಿರ್ಮಲಾತ್ಮರು ||ಪ||

ಆದಿಮಧ್ಯ ಅಂತ್ಯವಿಲ್ಲ| ನಾದ ಬಿಂದು ಕಳೆಗತೀತ|

ವೇದವಾಗಿ ಬಂದು ತೋರಿ ಬೋಧೆ ಎನಿಸಿತು ||1||

ಪಾಪ ಪುಣ್ಯ ಲೇಪವಿಲ್ಲ| ಕೋಪ ತಾಪ ರೂಪವಿಲ್ಲ|

ಶಾಪ ವರಗಳೆಂಬುದಿಲ್ಲ| ಲೋಪವಾಗದು ||2||

ದೇಶ ಕಾಲ ಭೇದವಿಲ್ಲ| ಆಸೆ ದೋಷ ಲೇಶವಿಲ್ಲ||

ನಾಶರಹಿತ ವಸ್ತುವಾಗಿ | ಶೇಷವೆನಿಸಿದೆ ||3||

ನಾನು ನೀನು ಎಂಬುದಿಲ್ಲ| ಹಾನಿ ವೃದ್ಧಿ ತನ್ನೊಳಿಲ್ಲ ||

ತಾನೆತಾನೆ ಸರ್ವರಲ್ಲಿ | ಜ್ಞಾನವೆನಿಸಿದೆ ||4||

ಅಲ್ಲಿ ಇಲ್ಲಿ ಎಂಬುದಿಲ್ಲ | ಎಲ್ಲಿ ತಾನೆ ಇರುವುದಲ್ಲ||

ಬಲ್ಲ ಮಹಿಮರೆಲ್ಲರಲ್ಲಿ| ಬೆಳಗುತಿರ್ಪುದು ||5||

ಶರೀರವಿಲ್ಲ ಕರಣವಿಲ್ಲ| ದುರಿತವಿಲ್ಲ ದುಃಖವಿಲ್ಲ ||

ಹರುಷ ದುಃಖ ದೂರವಾಗಿ| ಮರೆಯುತಿರ್ಪುದು ||6||

ವಿಧಿ ನಿಷೇಧವೆಂಬುದಿಲ್ಲ | ಬಧಿರ ಮೂಕ ಅಂಥವಲ್ಲ ||

ಮಧುರ ಕಹಿಗಳದಕೆಯಿಲ್ಲ | ಅಧಿಕವೆನಿಸಿದೆ ||7||

ಸರ್ವಸಾಕ್ಷಿ ತಾನೆಯಾಗಿ | ಸರ್ವದೊಳಗೆ ತಾನೆಯಿದ್ದು |

ನಿರ್ವಿಕಾರಮಾಗಿಯಿಹುದು | ಸರ್ವ ಕಾಲದಿ ||8||

ಕಾಲ ಕರ್ಮ ಸಾಕ್ಷಿಯಾಗಿ| ಲೀಲೆಯಿಂದ ತಾನೆ ಬೆಳಗಿ ||

ಮೂಲ ನರಹರೀಂದ್ರನೆನಿಸಿ | ಹೊಳೆಯುತಿರ್ಪುದು ||9||

ಜ್ಞಾನಿಗೆ ತಾನೇ ಕಾಣುವ ಶಿವನ | ಜ್ಞಾನಿಗೆ ಕಾಣುವನೇ ||ಪ||

ಸ್ವಾನುಭಾವ ಸಂಪನ್ನರಿಗಾದರೆ| ಕಾಣಿಸುವನು ತಾನೇ ||ಅಪ||

ಒಂದೆಡೆ ಶಬ್ದವ| ನೊಂದೆಡೆ ಸ್ಪರ್ಶವ| ನೊಂದೆಡೆ ರೂಪವನು ||

ಒಂದೆಡೆ ರಸವನು | ಒಂದೆಡೆ ಗಂಧವ | ಹೊಂದುತ ಶಿವನಿಹನು ||1||

ನಾಸಾಗ್ರದಿಸ | ರ್ವೇಶನಿರುವನು | ವಾಸುದೇವನೆನಿಸೀ ||

ವಾಸನ ಹರಸ | ನ್ಯಾಸಿಗೆ ಗೋಚರ | ಈಶನು ನಿರ್ದೋಷಿ ||2||

ರಸನೆಯ ಕೂಡುತ | ರಸಗಳನುಣ್ಣುತ | ಎಸೆವುದು ಪರಬ್ರಹ್ಮ ||

ಉಸುರುತು ವೇದವ| ಸಸಿನ ಸುಬೋಧವ | ನೊಸೆದುದು ನಿಜಧರ್ಮ ||3||

ಕಂಗಳ ಸೇರುತ | ಕಂಗೊಳಿಸುತಲಿದೆ | ಮಂಗಳ ಶಿವಲಿಂಗ||

ಸಂಗರಹಿತ ಸ| ರ್ವಾಂಗವ ತುಂಬಿದ| ಜಂಗಮ ಧವಳಾಂಗ ||4||

ಬಿಚ್ಚಲು ಜಾಗ್ರವು | ಮುಚ್ಚಲು ಸುಪ್ತಿಯು | ಚಿಚ್ಛಕ್ತಿಯ ಸಂಗ|

ಎಚ್ಚರ ದೊಳಗತಿ| ಎಚ್ಚರ ನರಹರಿ | ಅಚ್ಚ ಅರಿವು ಲಿಂಗ ||5||

ಹೊರಗಡೆ ಬಂದರೆ ವಿಶ್ವವ ನುಂಗುವ | ಇರಲೊಳಗೀ ಶರೀರವ ನುಂಗಿ ||

ಮೆರೆಯುವ ಶಿವನನು | ಬೆರೆದಿರುವಾತನು | ಪರಮ ಜ್ಞಾನಿಯಹನು ||6||

ಸರ್ವೇಶ್ವರ ನೀ ಸರ್ವಾಂಗಗಳೊಳು | ಸರ್ವಾತ್ಮಕನಾಗಿ ||

ನಿರ್ವಹಿಸುತ ಸುಖ | ಸರ್ವವ ಪೊಂದುತ | ಲಿರ್ವನು ನರಹರಿಯು ||7||

ಯಾಕೆ ತಿಳಿಯದೆ ಹೋದೆ | ಏಕಾಂತ ಬ್ರಹ್ಮವ |

ಸಾಕಾರದೊಳಗೆ ನಿ| ರಾಕಾರವಿರಲು ||ಪ||

ಸಾಕಾರದೊಳಗೆ ನಿರಾಕಾರ ಸಗುಣವ | ಸ್ವೀಕಾರ ಮಾಡುತ್ತ|

ಸೋಕಿ ಸೋಕದೆ ನಿರ್ಗುಣಾ ಖಂಡವಿರಲು ||ಅಪ||

ಪಂಚಚನ್ಮಾತ್ರೆಗಳೆ | ಪಂಚ ಭೂತಗಳಾಗಿ|

ಪಂಚೇಂದ್ರಿಯಗಳಲ್ಲಿ ಹೊಂಚು ಹಾಕಿಹವು||

ಪಂಚ ಬ್ರಹ್ಮರು ಬಂದು| ಪಂಚೇಂದ್ರಿಯದಿ ನಿಂದು |

ಪಂಚವಿಷಯದ ಪೂಜೆಯಿಂ ತೃಪ್ತಿಗೊಳಲು ||1||

ವೇದ ಶಾಸ್ತ್ರಗಳೆಲ್ಲ | ನಾದ ಬ್ರಹ್ಮವ ಕೂಡಿ|

ಬೋಧಾ ಸ್ವರೂಪಾಗಿ ಬೆಳಗುತ್ತಲಿರಲು ||

ಆದ್ಯಂತ್ಯವಿಲ್ಲದ| ನಾದಿ ಬ್ರಹ್ಮವು ತಾನೆ|

ವಾದ ಭೇದಕೆ ಸಿಗದೆ ನಿರ್ಗುಣವಿರಲು ||2||

ನಡುನಾಡಿ ಮಧ್ಯದಿ ಘುಡು ಘುಡಿಸುತಲಿದೆ |

ನುಡಿ ಮೂಲ ಬ್ರಹ್ಮವು ಒಡಲನ್ನೆ ಮೀರಿ||

ಹುಡುಕಾಡಲೇತಕೆ| ಪಡುವಲ ಗುಡಿಯಲ್ಲಿ |

ಒಡೆದು ಮೂಡಿರುವಂಥ ನರಹರಿಯಿರಲು ||3||

ಪಿಂಡಾಂಡ ಬ್ರಹ್ಮಾಂಡ | ತಂಡಂಗಳೈಕ್ಯದಿ |

ಚಂಡ ಪ್ರಕಾಶದಿಂ ಬೆಳಗುತ್ತಲಿಹುದು ||

ಖಂಡಿಸಲಾಗದ ಖಂಡ ಸ್ವರೂಪಾಗಿ |

ಮಂಡಲತ್ರಯ ಮಧ್ಯೆ ಮೂರ್ತಿಗೊಂಡಿಹುದು ||4||

ಎಲ್ಲಿ ಯಾರಿಗು ಕಾಣ | ಲೊಲ್ಲದ ಬ್ರಹ್ಮವು |

ಇಲ್ಲೆ ಪವನ ಯೋಗದಲ್ಲೆ ಕಾಣುವುದು||

ಅಲ್ಲಿಯೆ ಹಿಡಿದವನು | ಬಲ್ಲಿದನೆನಿಸುವನು |

ಚೆಲ್ವ ನರಹರಿಯಿರ್ಪನುಲ್ಲಾಸಮಯನು ||5||

ನಾನಾರು ಎಂದೆಂಬ| ಸ್ವಾನುಭಾವವನೀಗ |

ನೀನೇ ನಿನ್ನೊಳು ತಿಳಿಯೆಲೆ ಜೀವನೆ ||ಪ||

ಮಾನಾಭಿಮಾನಂಗಳೆನೊಂದು ತೋರದ |

ಆನಂದ ಘನ ನೀನೇ ತಿಳಿ ಜೀವನೆ ||ಅಪ||

ನಡೆಯಲ್ಲಿ ಇರವಾಗಿ | ನುಡಿಯಲ್ಲಿ ಅರಿವಾಗಿ |

ನಡೆನುಡಿಗಳೊಂದಾದ ಕಡೆಯಲ್ಲಿಯೆ ||

ತಡೆಯಿಲ್ಲದಾ ನಂದ ಕಡಲಾಗಿ ಮೆರೆವಂಥ |

ನಡುನಾಡಿ ಬ್ರಹ್ಮವು ನೀನಲ್ಲವೆ ||1||

ನೀನಿಲ್ಲದಿರಲಾಗಿ| ತಾನಿರ್ಪುದೇ ದೇಹ|

ನೀನಾಡಿಸಲು ಸೂತ್ರ ತಾನಾಡಿತು ||

ನೀನಾಡಿಸಿದ ದೇಹ| ನೀನಲ್ಲವೆನ್ನುತ |

ನೀನೇ ನಿಶ್ಚಯ ಮಾಡು ಎಲೆ ಜೀವನೆ ||2||

ತನುವಲ್ಲ ನೀನು ಈ | ತನು ನಿನ್ನದಲ್ಲವು |

ಮನವಲ್ಲ ನೀನು ಮನ ನಿನ್ನದಲ್ಲ ||

ಧನಧಾನ್ಯ ವಸ್ತು ವಾ| ಹನ ನಿನ್ನದಲ್ಲವು|

ತನು ಮನ ಸಾಕ್ಷಿಕ ನೀನಲ್ಲವೇ ||3||

ನಿದ್ರೆಯೊಳಿವು ಇಲ್ಲ | ಇದ್ದು ತೋರುವುದಿಲ್ಲ|

ನಿದ್ದೆಯಲ್ಲಿಯು ನೀನು ಇದ್ದೆಯಲ್ಲ ||

ನಿದ್ರೆಯಲ್ಲಿಯೆ ಇಲ್ಲ | ದಿದ್ದರಿವು ನಿಜವೆಂತು |

ಶುದ್ಧಾತ್ಮ ನೀನಿವಕೆ ಬದ್ಧನಲ್ಲ ||4||

ಗುರು ಪಾದಗಳ ನಂಬಿ| ಗುರಿಯನ್ನು ಮನ ತುಂಬಿ |

ಶರೀರಾದಿಗಳ ಸಾಕ್ಷಿ ಇರುವೆನೆಂದು||

ಅರಿತಾಗ ಭವರೋಗ| ಹರಿಯುತ್ತ ಶಿವಯೋಗ |

ಪರನಾಗಿ ನರಹರಿಯೊಳು ಸೇರುತ ||5||

ಆರೂಢನಿವ ನಮ್ಮ | ಸದ್ಗುರು ರಾಯ | ಈ ರೂಢಿಯೊಳು ಬ್ರಹ್ಮಾ ||ಪ||

ಮೂರೇಳು ಸಾವಿರ || ದಾರುನೂರರ ಜಪ ||

ಧಾರಾಳವಾಗಿ ಸಂ| ಚಾರ ಮಾಡುತಲಿರ್ಪ ||ಅಪ||

ತನುವೆಂಬ ರಥವೇರಿ | ಆರೂಢನು | ಮನವೆಂಬ ಹಯವೇರಿ ||

ಅನುವಿಂದ ಹಂಕಾರ| ವೆನುವಂಥ ಗಜವೇರಿ ||

ತನು ಕರ್ಮ ತುಳಿದು ನಿ| ರ್ಗುಣ ನಾದದೊಳು ನಿಂತ ||1||

ನಡೆಗೆ ಹಂಸಾರೂಢ | ಸದ್ಗುರು ದೇವ| ನುಡಿಗೆ ಸೋಹಂ ರೂಢ||

ನಡುವೆ ಗರುಡಾರೂಢ| ಕಡೆಗೆ ವೃಷಭಾರೂಢ ||

ಪೊಡವಿ ವಿಶ್ವಾರೂಢ| ಒಡಲ ಸಾಕ್ಷಿಕ ಗೂಢ ||2||

ಆಧಾರ ಕಮಲದೊಳು | ಸರ್ವೇಂದ್ರಿಯ | ಆಧಾರನಾಗಿರಲು ||

ವೇದಾಂತ ವೇದ್ಯ ಸು| ಬೋಧಾ ಸ್ವರೂಪನು ||

ಆದ್ಯಂತ ರಹಿತನು | ಆದಿ ನರಹರಿ ತಾನು ||3||

ರೇವಣಸಿದ್ಧಾ| ದೇವ ಪ್ರಸಿದ್ಧ ||ಪ||

ನೀ| ಶಿವಯೋಗಿ| ಸುವಿರಾಗಿ|

ಭವರೋಗ ನೀಗಿ | ಪಾಲಿಸಲಾಗಿ ||ಅಪ||

ಹರಿಮೂರ್ತಿ ಶಿರವನ್ನು | ಸರಿ ಮಾಡಿದೆ| ವಿ|

ಸ್ತರ ಮಾದ ಹರಿದ್ವೇಷ ಹೊರ ದೂಡಿದೆ |

ತೋರಿ| ಪರಮಾರ್ಥವ | ಸಾರಿ|

ಚಿರ ಸತ್ಯವ | ಧರೆಯೆಲ್ಲ ಚರಿಸುತ್ತ|

ಮೆರೆದಂಥ ದೇವಾ | ಗುರುವೆನಿಸಿರುವಾ ||1||

ಮುನಿಗಳ್ಗೆ ಪರತತ್ವ | ವನು ಪೇಳಿದೆ | ಸ|

ಜ್ಜನರಿಂಗೆ ಸದ್ಬೋಧೆಯನು ನೀಡಿದೆ||

ನಿನ್ನ | ನೆನೆವಾತನು| ಧನ್ಯನೆನಿ| ಸಿರ್ಪನು| ಅನುಗಾಲ

ಜನಜಾಲ| ಕನುಕೂಲ ಲೀಲಾ| ಧ್ಯಾನದ ಮೂಲಾ ||2||

ಹಣೆಗಣ್ಣಿನೊಳು ಯಕ್ಷ | ರನು ನೋಡಿದೆ| ನೀ|

ನನುವಿಂದ ಕರವಾಲಗಳ ಮಾಡಿದೆ||

ಜ್ಞಾನ| ಧನ ದಾತನೆ | ದೀನ| ಜನ ಪ್ರೀತನೆ ||

ಗುಣವಂತ ಘನ ಶಾಂತ | ಮುನಿನಾಥನೆಂತಾ | ನೆನೆವೆ ಮಹಂತಾ ||3||

ಧರಿಣೀಶ್ವರರಿಗೆಲ್ಲ ಗುರುವೆನ್ನಿಸಿ| ನಿಜ |

ಧರಣೀಂದ್ರ ಸುತೆಯರ್ಗೆ ಪತಿಯೆನ್ನಿಸಿ ||

ದುರುಳ | ಗೋರಕ್ಷನು | ಶರಣು | ಹೊಕ್ಕಿದ್ದನು |

ಕರುಣಾಳು ಮೊರೆ ಬೀಳು | ತಿರುವವರ ಕಾಯ್ದೆ | ಪರ ಸುಖಗೈದೆ ||4||

ಶಿವಲಿಂಗ ಮೂರ್ಕೋಟಿಗಳ ನಿಲ್ಲಿಸೀ | ದಾ|

ನವರಾಯ ಲಂಕೇಶ್ವರನ ಮನ್ನಿಸಿ ||

ಜವದಿ ಪೊರೆದಾತನೆ | ಶಿವನ| ನರಿದಾತನೆ | ನವನೀತಿ ಶಿವಜ್ಯೋತಿ |

ಧವ ನರಹರಿಯೇ| ಪಾವನ ಸಿರಿಯೇ ||5||

ತನ್ನ ಬಿಟ್ಟು ದೇವರಿಲ್ಲ| ಮಣ್ಣು ಬಿಟ್ಟು ಮಡಕೆಯಿಲ್ಲ |

ತನ್ನ ತಾನು ತಿಳಿದು ನೋಡೆ| ತಾನೆ ದೇವರು ||ಪ||

ಅನ್ಯ ತನಗೆ ದೇಹವೆಂಬು| ದನ್ನು ತಾನೆ ತಿಳಿದು ನೋಡೆ |

ತನ್ನದಲ್ಲ ದೇಹವೆನಲು ತಾನೆ ದೇವರು ||ಅಪ||

ಶಿಲೆಯೊಳಗ್ನಿ ತಿಲದಿ ತೈಲ| ಕಲೆತ ರೀತಿ ತನ್ನ ದೇಹ|

ದೊಳಗೆ ದೇವರಿರ್ಪ ತಾನೆ ತಿಳಿದು ನೋಡಲು ||

ಒಳಗೆ ಹೊರಗೆ ಒಂದೆಯಾಗಿ| ಬೆಳಗುತಿರ್ಪ ಆತ್ಮನನ್ನು |

ಸುಲಭವಾಗಿ ತಿಳಿಯಬಹುದು ಗುರುವಿನಿಂದಲೆ ||1||

ತನ್ನ ಪಾದ ಶಿರವ ಕಮಠ| ತನ್ನೊಳಿರಿಸಿಕೊಂಡು ಪುನಃ |

ಮುನ್ನಿನಂತೆ ಹೊರಗೆ ನೀಡಿ ತೋರುವಂದದಿ ||

ತನ್ನೊಳಾತ್ಮ ಇಂದ್ರಿಯಂಗ| ಳನ್ನು ಸೆಳೆಯಲದು ಸುಷುಪ್ತಿ |

ಯಿನ್ನು ಹೊರಗೆ ತೋರಲಾಗಲದುವೆ ಜಾಗ್ರವು ||2||

ಭಾನು ವುದಯವಾಗಲಾಗ | ತಾನೆ ಕಮಲವರಳಿ ಮತ್ತೆ |

ಭಾನು ಮುಳುಗಿದಾಗ ತಾನೆ ಮುಗಿಯುವಂದದೀ ||

ಜ್ಞಾನ ಕರ್ಮ ಇಂದ್ರಿಯವಿ | ತಾನವೆಲ್ಲವಾತ್ಮನಿಂದ |

ತಾನೆ ಬೆಳಗುತಾತ್ಮ ನಿಲ್ಲದಿರಲು ತೋರವು ||3||

ಕತ್ತಲೊಳಗೆ ಮೋಟು ಮರವ | ಮತ್ತೆ ಕಂಡು ಚೋರನೆಂದು |

ಚಿತ್ತ ಭ್ರಾಂತಿಯಿಂದ ಹೆದರಿ ನಿಲ್ಲುವಂದದಿ||

ಹತ್ತಿದಜ್ಞ ಭಾವದಿಂದ | ಸುತ್ತಲಿರ್ಪ ಜಗವ ಕಂಡು|

ಸತ್ಯವೆಂದು ನಂಬಿರುವುದೆ ಜೀವ ಭಾವವು ||4||

ದೂರದಲ್ಲಿ ಶುಕ್ತಿ ಮಿಂಚಿ | ತೋರಲಾಗ ಬೆಳ್ಳಿಯೆಂದು |

ಸಾರಿ ನೋಡಿದವ ನಿರಾಶನಾಗುವಂದದಿ ||

ಮೀರು ತಜ್ಞ ಭಾವವನು ವಿಚಾರ ಶೀಲನಾಗಿ ತಿಳಿಯೆ |

ಸೇರಿ ನರಹರೀಂದ್ರನನ್ನು ದೇವರಾಗುವ ||5||

ಬ್ರಹ್ಮ ಧರ್ಮವು ಎಂಥದು |

ನೈಷ್ಕರ್ಮ ಸಿದ್ಧಿಯ ನಾಂತುದು ||ಪ||

ಬ್ರಹ್ಮ ಮರ್ಮವು ಯಾವುದು | ಸ|

ದ್ಧರ್ಮ ಬೋಧೆಯ ನೀವುದು ||ಅಪ||

ಮಾಯೆಯೊಂದಿಗೆ ಕಾಂಬುದು |

ನಿರ್ಮಾಯ ವೆನ್ನಿಸಿ ಕೊಂಬುದು ||

ಕಾಯದಲ್ಲಿಯೆ ಇರ್ಪುದು| ಈ |

ಕಾಯ ಗುಣ ಕಳೆದಿರ್ಪುದು ||1||

ನಾದ ಬಿಂದುವು ಕಳೆಗತೀತವು|

ವೇದ ಬೋಧಾ ಪ್ರೀತವು ||

ಆದಿ ಯಂತ್ಯದೊಳೊಂದೆ ಸೂತ್ರವು|

ನಾದ ನಿರ್ಗುಣ ಮಾತ್ರವು ||2||

ಸಗುಣವೆಲ್ಲವ ನಳಿವುದು ತಾಂ|

ಸೊಗಸಿ ನಿರ್ಗುಣಗೈವುದು ||

ಅಗಣಿತಾನಂದಾತ್ಮವೆನಿಸುತ|

ಬಗೆಯೆ ನರಹರಿಯಾದುದು ||3||

ನಾದ ಸ್ಫೂರ್ತಿಯೊಳಿರುವುದು | ವರ |

ವೇದಮೂರ್ತಿಯೆ ತಾನಿದು ||

ಬೋಧವೃತ್ತಿಯ ತಾಳ್ವುದು | ನಿ |

ರ್ವಾದ ಭಾವದಿ ಮೆರೆವುದು ||4||

ಪಾಪವಿಲ್ಲದೆ ಇರುವುದು | ನಿ |

ರ್ಲೇಪವೆನ್ನಿಸಿ ಮೆರೆವುದು ||

ರೂಪು ಕಾಣಿಸದಿರುವುದು |

ಚಿದ್ರೂಪವೇ ತಾನಾದುದು ||5||

ದೇಹದೊಳು ಪುಟ್ಟಿರುವುದು | ಈ |

ದೇಹಗುಣ ಬಿಟ್ಟಿರುವುದು ||

ಮೋಹವನು ಸುಟ್ಟಿರುವುದು |

ಸಂದೇಹಗಳ ಮೆಟ್ಟಿರುವುದು ||6||

ತಾನೆ ತಾನಾಗಿರುವುದು | ಸು |

ಜ್ಞಾನ ಮಾತ್ರದಿ ಮೆರೆವುದು ||

ಮೌನಿ ನರಹರಿ ಪಾದ ಕಮಲದ |

ಧ್ಯಾನದಲ್ಲಿಯೆ ದೊರೆವುದು ||7||

ಯನಗೆ ತಪ್ಪದು ಬಡತನವು | ದೇವ|

ನಿನಗೆ ತಪ್ಪದು ಸವೆಯದ ಸಿರಿತನವು ||ಪ||

ದಿನವು ಬೇಡುವ ದೀನ ನಾನು | ನಿತ್ಯ|

ಯನಗೆ ಬೇಡದುದೀವ ದಾನಿಯು ನೀನು ||ಅಪ||

ನೀನಿತ್ತುದುಂಬುವ ನಾನು | ದೇವ |

ನೀನೀಯದಿದ್ದರೆ ಗತಿಯಿಲ್ಲ ಏನು ||

ಏನು ತಂದವನಲ್ಲ ನಾನು| ಎಲ್ಲಾ |

ನೀನಿತ್ತೆಯೆನ್ನದ ಪಾಪಿಯು ನಾನು ||1||

ಎಷ್ಟು ಕೊಟ್ಟರು ಸಾಲದೆÀನೆಗೆ | ಸರ್ವ |

ಸೃಷ್ಟಿಯ ನೆನಗಾಗಿ ಕೊಟ್ಟೆ ನೀ ಕೊನೆಗೆ ||

ಎಷ್ಟು ಕಾರುಣ್ಯವು ನಿನಗೆ | ನಿನ್ನ|

ಎಷ್ಟು ಹೊಗಳಲು ತೀರದಾಯಿತು ಯನಗೆ ||2||

ತನು ಮನ ಧನವ ನೀನಿತ್ತೆ | ನಾನು|

ತನು ಮನ ಧನ ನನ್ನದೆನ್ನುತ್ತ ಹೊತ್ತೆ ||

ಎನಿತು ಉದಾರತ್ವ ನಿನಗೆ | ನಿನ್ನ|

ನೆನೆಯದೆ ಋಣಗೇಡಿ ನಾನಾದೆ ಕೊನೆಗೆ ||3||

ಅಜ್ಞಾನಿ ಜೀವನು ನಾನು | ಪೂರ್ಣ |

ಸುಜ್ಞಾನಿಯೆನಿಸಿರ್ಪ ದೇವನು ನೀನು|

ಆಜ್ಞೆ ಪಾಲಿಸದಾದೆ ನಾನು | ನಿನಗೆ |

ವಿಜ್ಞಾಪಿಸಲು ಬಾಯಿಯಿಲ್ಲವಾದವನು ||4||

ನಾನು ದುರಹಂಕಾರ ವಶನು | ನೋಡೆ |

ನೀನು ನಿರಹಂಕಾರದಿಂದ ಸಂತಸನು ||

ನೀನು ಕೈ ಬಿಡಬೇಡ ತಂದೇ | ನಿನ್ನ |

ಧ್ಯಾನ ಮಾಡುವೆ ನಾನು ನರಹರಿಯೆಂದೇ ||5||

ನಿಮ್ಮ ಪಾದವ ನಂಬಿದೇ| ಸದ್ಗುರು ದೇವ|

ನೆಮ್ಮದಿಯನು ಹೊಂದಿದೆ ||ಪ||

ದುರ್ಮತಿ ನೀಗಿದೆ | ನಿರ್ಮಲಾತ್ಮಕನಾದೆ |

ಕರ್ಮ ಬಂಧವ ಹರಿದೆ | ಬ್ರಹ್ಮಾನುಭವ ಪಡೆದೆ ||ಅಪ||

ಯಮನಿಗಂಜದೆ ಹೋದೆನು | ಸದ್ಗುರು ದೇವ |

ನಿಮಗಂಜಿ ನಾ ನಿಂದೆನು ||

ಯಮ ಯೋಗದಿಂದನು | ಪಮ ಜಿತೇಂದ್ರಿಯನಾಗಿ |

ಯಮ ಬಾಧೆ ನೀಗೆಂದು | ರಮಿಸಿ ಬೋಧಿಸಿದಂದು ||1||

ನಿಯಮ ಯೋಗವ ಪೇಳಿದೆ | ಸರ್ವೇಂದ್ರಿಯದ|

ನಿಯಮವಂ ನಾಂ ತಾಳಿದೆ ||

ಪ್ರಿಯವಿದ ಪ್ರಿಯವೆಂಬ | ಕ್ರಿಯೆಯನ್ನೆ ಬಿಡಿಸಿದೆ||

ಕ್ರಿಯೆಯೆಲ್ಲ ಬ್ರಹ್ಮದಾ| ಶ್ರಯವು ಚಿನ್ಮಯವೆಂದೆ ||2||

ಮನವ ನಾಸನ ಮಾಡಿಸಿ| ಆಸನ ಯೋಗ|

ದನುವ ಮಂತ್ರದಿ ಕೂಡಿಸಿ ||

ಮನನದಿಂದ ಮನಸ್ಕ| ವನು ಸಾಧಿಸುತ್ತಲಿ ||

ಅನುಭಾವ ನಿಶ್ಚಲಾ| ಸನ ದೊಳಿರೆಂದಂಥ ||3||

ನಡೆವ ಹಂಸನ ತೋರಿದೆ | ಪ್ರಾಣಾಯಾಮ |

ದೊಡಲಿದೆನ್ನುತ ಸಾರಿದೆ ||

ಪಡೆವ ಪೂರಕವನ್ನು | ಬಿಡುವ ರೇಚಕವನ್ನು ||

ತಡೆದು ಕುಂಭಕದಿಂದ | ಮೃಢನೊಡನಾಡೆಂದ ||4||

ನಡೆಯೆ ಪ್ರತ್ಯಾಹಾರವು | ನುಡಿಗಹುದೆಂಬ |

ದೃಢವೆ ಸತ್ಯದ ಸಾರವು||

ನಡೆಯೊಳಾಹಾರವ | ನುಡಿಯುಂಡು ಸಾರುವ||

ಬೆಡಗನ್ನು ಪೇಳಿದೆ | ನುಡಿಬ್ರಹ್ಮ ನೀನೆಂದೆ ||5||

ಧ್ಯಾನ ಯೋಗವ ಮಾಡಿದೆ| ನುಡಿಯೊಳು ಶಿವನ |

ಧ್ಯಾನದಲ್ಲಿಯೆ ಕೂಡಿದೆ ||

ಧ್ಯಾನದಿಂ ಶಿವನ ಸಂ| ಧಾನವಾದುದ ಕಂಡೆ||

ತಾನಾಯ್ತು ಶಿವಯೋಗ | ಸ್ವಾನುಭಾವದೊಳೀಗ ||6||

ಯೋಗ ಧಾರಣವಾಗಲು | ನಡೆನುಡಿಯ ಸಂ|

ಯೋಗ ನಿಲುಕಡೆಯಾಗಲು ||

ನೀಗಿ ಸರ್ವಾಕ್ಷರವ | ಸಾಗಿ ನಿರ್ಗುಣ ಬ್ರಹ್ಮ ||

ಯೋಗಿ ಯರ್ಧಾಕ್ಷರ | ವಿ | ರಾಗಿ ಗೋಚರಿಸಲು ||7||

ಸುಸಮಾಧಿ ಯೋಗವನ್ನು | ಸಾಧಿಸಿದಾತ |

ಅಸಮಾನನಾಗುವನು ||

ಎಸೆವ ಶಬ್ದ ಬ್ರಹ್ಮ | ವೊಸೆದು ವಿರಮಿಸಲಾಗಿ||

ಹೆಸರಿಸಲಾಗದಾ | ದಸಮ ಶ್ರೀಗುರುದೇವ ||8||

ಜ್ಞಾನ ಯೋಗವ ಬೋಧಿಸಿ | ಅಷ್ಟಾಂಗ ಸಂ|

ಧಾನ ಮಾರ್ಗವ ಶೋಧಿಸಿ||

ಏನೊಂದು ಸಂಶಯ| ಕಾಣದಂತತಿಶಯ ||

ಆನಂದವೆನಗೀವ| ಶ್ರೀನರಹರಿ ದೇವಾ ||9||

ಯಾರು ಕಾಣದ ಮೂಗುತೀ| ಇದು ತೋರಿ ತೋರದ ಮೂಗುತೀ ||ಪ||

ಮೂರು ಲೋಕಾಧಾರ ಸದ್ಗತಿ| ಕಾರಣಾತ್ಮಕ ಮೂಗುತೀ ||ಅಪ||

ಸಾರ ಪ್ರಣವಾಕಾರವು | ವಿ| ಸ್ತಾರ ವಿಶ್ವಾಧಾರವು ||

ಮೀರದಿಪ್ಪತ್ತೊಂದು ಸಾವಿರ| ದಾರುನೂರರ ಮೂಗುತೀ ||1||

ಮಂತ್ರ ಮೂಲದ ಮೂಗುತೀ | ಸ್ವಾ| ತಂತ್ರ ಲೀಲೆಯ ಮೂಗುತೀ ||

ಯಂತ್ರ ದೇಹಾಧಾರವಾಗಿದೆ| ಅಂತರಂಗದ ಮೂಗುತೀ ||2||

ಹರನು ಕೊಟ್ಟಾ ಮೂಗುತೀ | ಶ್ರೀ| ಹರಿಯು ಇಟ್ಟಾ ಮೂಗುತೀ ||

ಕರುಣಿ ನರಹರಿ ಬ್ರಹ್ಮನೇ ಗತಿ| ಹರಸಿ ಬಿಟ್ಟಾ ಮೂಗುತೀ ||3||

ಅಮನಸ್ಕ ಯೋಗಿಗೆ ಮನದ ಹಂಗೇಕೆ |

ಸಮಭಾವ ವುಳ್ಳಂಗೆ ಯಮನ ಹಂಗೇಕೆ ||ಪ||

ಭ್ರಮೆಯಿಲ್ಲದಾತಂಗೆ ತಮದ ಹಂಗೇಕೆ ||

ಸುಮತಿಯುಳ್ಳವರಿಗೆ ಅಮರತ್ವ ಬೇಕೆ ||ಅಪ||

ಭಕ್ತಿಯಿಲ್ಲದೆ ಬಾಹ್ಯ ಪೂಜೆಯಿನ್ನೇಕೆ |

ಯುಕ್ತಿಯಿಲ್ಲದೆ ಬೋಧಾಸಕ್ತಿ ತಾನೇಕೆ ||

ಮುಕ್ತಾತ್ಮನಿಗೆ ಲೋಕ ಭ್ರಮೆಗಳಿನ್ನೇಕೆ ||

ಶಕ್ತಿಯಿಲ್ಲದವಂಗೆ ಸಮರವಿನ್ನೇಕೆ ||1||

ಜ್ಞಾನವಿಲ್ಲದೆ ಮಂತ್ರ ಧ್ಯಾನದಿಂದೇನು |

ಮೌನವಿಲ್ಲದೆ ತಂತ್ರ ಜ್ಞಾನದಿಂದೇನು ||

ಏನಿಲ್ಲದವನಿಗೆ ಏನಾದರೇನು |

ತಾನೆ ತಾನಾದಾತ ನಾನೆಂಬನೇನು ||2||

ಲಕ್ಷ್ಯಾರ್ಥವರಿಯದೆ ವಾಚ್ಯಾರ್ಥವೇಕೆ |

ಅಕ್ಷರವನರಿಯದೆ | ಶಿಕ್ಷಣವ್ಯಾಕೆ ||

ಸಾಕ್ಷಿ ತಾನಾಗದೆ| ಪರಮಾರ್ಥವ್ಯಾಕೆ |

ಅಕ್ಷಯ ನರಹರಿಯೊಳನುಮಾನವ್ಯಾಕೆ ||3||

ನಿಮ್ಮೊಳಗಿರುವುದು ಬ್ರಹ್ಮ | ದೇಹ| ಧರ್ಮವ ಶೋಧಿಸಿರಮ್ಮಾ ||ಪ||

ಕರ್ಮ ಕೋಟಿಗಳ ನಿ| ಷ್ಕರ್ಮವ ಮಾಡುತ್ತ ||

ನಿರ್ಮಲವಾಗುವ | ಧರ್ಮವೇ ಬ್ರಹ್ಮ ||ಅಪ||

ಗಂಧವನ್ನರಿವುದು ಬ್ರಹ್ಮ | ದಿವ್ಯ| ಗಂಧದೊಳಾನಂದ ರಮ್ಯ ||

ಗಂಧವನೆಲ್ಲ ನಿ| ರ್ಗಂಧವೆಂದೆನಿಸುತ್ತ ||

ಹೊಂದಿ ನಿರ್ಗುಣವ | ತಾ | ನಿಂದಿರುತಿಹುದಮ್ಮ ||1||

ರಸವನ್ನು ತಿಳಿವುದು ಬ್ರಹ್ಮ | ಮಧುರ| ರಸನದೊಳಾನಂದಿಪುದಮ್ಮಾ ||

ರಸರುಚಿಗಳ ಸೆಳೆ| ದಸಮ ನಿರ್ಗುಣ ಕೂಡಿ||

ವಿಷಯ ರಹಿತವಾಯಿ| ತಸಮಾನ ಬ್ರಹ್ಮ ||2||

ರೂಪವನ್ನರಿವುದಾ ಬ್ರಹ್ಮ | ಚೆಲ್ವ | ರೂಪದಿಂ ಸುಖಿಸುವುದಮ್ಮಾ ||

ರೂಪವನ್ನಳಿದು ನಿ| ರೂಪವ ಮಾಡುತ್ತ ||

ಆ ಪರಮ ನಿರ್ಗುಣ| ರೂಪವಾಂತಿಹುದಮ್ಮ ||3||

ಸ್ಪರ್ಶವನ್ನರಿವುದು ಬ್ರಹ್ಮ | ಮೃದು| ಸ್ಪರ್ಶಾನಂದವ ಪಡೆದುದಮ್ಮ ||

ಸ್ಪರ್ಶವನ್ನಳಿದು ಅ| ಸ್ಪೃಶ್ಯವೆಂದೆನಿಸುತ್ತ | ಹರ್ಷದೊಳಿರ್ಪುದು |

ದೃಶ್ಯವಲ್ಲದ ಬ್ರಹ್ಮ ||4||

ಶಬ್ದವನ್ನರಿವುದು ಬ್ರಹ್ಮ | ತಾನೆ | ಶಬ್ದಾನಂದದೊಳಿರ್ಪುದಮ್ಮಾ ||

ಶಬ್ದವೆಲ್ಲವನು ನಿ | ಶ್ಯಬ್ದವ ಮಾಡುತ್ತ| ಶಬ್ದ ಸೂತಕವಳಿ|

ದಬ್ಬರಿಸುವುದಮ್ಮಾ ||5||

ತನುವ ಹೊಂದಿರ್ಪುದು ಬ್ರಹ್ಮ| ಸರ್ವ| ತನುಗಳಲ್ಲಿಯೆ ಸುಖಿಪುದಮ್ಮಾ ||

ತನುವನ್ನು ಸೃಷ್ಟಿಸಿ | ತನುವನ್ನು ರಕ್ಷಿಸಿ| ತನುವನ್ನು ಲಯಗೈದು |

ದನುಪಮ ಬ್ರಹ್ಮ ||6||

ನಡೆಯುತ್ತಲಿರುವುದು ಬ್ರಹ್ಮ | ಸರ್ವ| ನುಡಿಯಾಡುತಿರುವುದು ಬ್ರಹ್ಮ ||

ನಡೆ ನುಡಿಗಳ ನಿಲು | ಕಡೆಯಲ್ಲಿ ನಿರ್ಗುಣ | ಒಡಲ ಸಾಕ್ಷಿಕವಾಯ್ತು |

ಒಡೆಯ ನರಹರಿ ಬ್ರಹ್ಮ ||7||

ಲೋಕದೊಳು ಎಲ್ಲರಾ ಧರ್ಮವೊಂದೇ |

ಯಾಕಿನ್ನು ಭೇದವು ನಿಮ್ಮ ಮುಂದೆ ||ಪ||

ಸಾಕು ಬಿಡ ನ್ಯಾಯ ನೀಗಲಿಂದೇ |

ಕಾಕು ತನ ಬಿಟ್ಟರೆ ನಿಮಗೆ ಕುಂದೇ ||ಅಪ||

ಮನ ಧರ್ಮವೆಲ್ಲರೊಳಿರ್ಪುದೊಂದೆ |

ತನು ಕರ್ಮವೆಲ್ಲರಿಗಾಯಿತೊಂದೇ ||

ಜನನ ಮರಣಂಗಳು ಎಲ್ಲವೊಂದೇ

ಜನ ಜಾಲಕೆಲ್ಲವು ರೂಪವೊಂದೇ ||1||

ಬೆಳಗುತ್ತಲಿಹ ಸೂರ್ಯವೊಂದೆ |

ಕಳೆಯೇರಿ ಕಾಣುವ ಚಂದ್ರವೊಂದೆ||

ಬೆಳೆಯುತ್ತಲಿರುತಿಹ ಪೃಥ್ವಿಯೊಂದೆ |

ತಿಳಿಯಲ್ಕೆ ಕುಡಿಯುವ ನೀರುವೊಂದೆ ||2||

ಎಲ್ಲರನ್ನು ಸಲಹುವ ದೈವ ವೊಂದೇ |

ಎಲ್ಲರೂ ಬಳಸುವ ಅಗ್ನಿ ಒಂದೇ ||

ಎಲ್ಲರೂ ಸೇವಿಪ ವಾಯುವೊಂದೇ |

ಎಲ್ಲರೂ ಸೇರಿದಾಕಾಶವೊಂದೆ ||3||

ಸರ್ವರಿಗೆ ಚೇತನಾ ಆತ್ಮವೊಂದೇ |

ಸರ್ವರಿಗೆ ಪ್ರಾಣದ ಧರ್ಮವೊಂದೇ ||

ಸರ್ವರಿಗೆ ಜಾಗರ ಸುಪ್ತಿಯೊಂದೇ |

ಸರ್ವರಿಗೆ ಇಂದ್ರಿಯ ಧರ್ಮವೊಂದೇ ||4||

ಭೇದವೇ ನರಕದ ದಾರಿಯಾಯ್ತು |

ಭೇದವನ್ನಳಿದರೇ ಸ್ವರ್ಗವಾಯ್ತು ||

ವೇದಾಂತ ಭೇದವ ಖಂಡಿಸಿತ್ತು |

ಆದ್ಯಂತ ನರಹರಿಯ ಭೇದವಸ್ತು ||5||

ಎಂಥ ಮಹಿಮನೆನ್ನ ಗುರುವು ಎಂಥ ಮಹಿಮನು ||ಪ||

ನಿಂತ ಕಡೆಯೆ ಮುಕ್ತಿಯಿತ್ತ ಮಹಾ ಮಹಿಮನು ||ಅಪ||

ಖೇದ ಮೋದವೊಂದೆ ಮಾಡಿ ಸಾಧುವಾದನು |

ಸ್ವಾದ ಕಹಿಯವೊಂದೆ ಮಾಡಿ ಸ್ವಾದಗೈದನು ||

ಕ್ರೋಧ ಶಾಂತಿವೊಂದೆಯಾಗಿ ಸಾಧಿಸಿದ್ದನು |

ಆದಿಯಂತ್ಯ ತಾನೆಯಾದನಾದ ಶುದ್ಧನು ||1||

ವಂದನೆಯನು ನಿಂದನೆಯನು | ಒಂದೆ ಮಾಡಿದ |

ಬಂಧವನ್ನು ಮುಕ್ತಿಯನ್ನು ಸಂಧಿ ಕೂಡಿದ||

ಅಂದಿಗಿಂದಿಗೆಂದಿಗಳಿಯದಂದ ತೋರಿದ|

ಕಂದಿ ಕುಂದದಂದವಾದ ವಸ್ತು ತೋರಿದ ||2||

ಆರು ಮಂದಿ ವೈರಿಗಳನು ಸಾರಿ ಕೊಂದನು |

ಮೀರಿದೆಂಟು ಆನೆಯನ್ನು ಸೀಳಿ ನಿಂದನು ||

ಏರಿ ಬರುವ ಸರ್ಪವನ್ನು ಧರಿಸಿಕೊಂಡನು|

ಪಾರು ಮಾಡಿಬಿಟ್ಟನೆನ್ನ ನರಹರೀಂದ್ರನು ||3||

ಸರಸವಿರಸವಿಲ್ಲದಂಥ ಪರಮ ಪುರುಷನು |

ನರಕ ನಾಕ ಭೇದವಿಲ್ಲದಮರಗೀತನು ||

ದುರಿತ ಪುಣ್ಯವೆರಡುಯಿಲ್ಲದಾದಿ ರೂಪನು |

ಮರಣ ಜನನವಿಲ್ಲದಂಥ ಪಾವನಾತ್ಮನು ||4||

ಮೂರು ಮಾತ್ರೆ ಸೇರಿದೊಂದು ದಾರಿ ತೋರಿದ |

ಮೂರು ಮಾತ್ರೆಯಂತ್ಯದಲ್ಲಿ ಸಾರಿ ಪೇಳಿದ ||

ನಾರಸಿಂಹ ಮಂತ್ರದಲ್ಲಿ ತಾನೆ ಸೇರಿದ |

ಪಾರು ಮಾಡಿ ನರಹರೀಂದ್ರನಾಗಿ ತೋರಿದ ||5||

ಹರನೆ ಸದ್ಗುರುನಾಥ | ಕರುಣಿ ಸದ್ಗತಿ ದಾತ |

ಹರಣ ಮಾಡಿದ ಪೂರ್ವದ ಸಂಚಿತ ||ಪ||

ಹರ ಬೇರೆಯಲ್ಲ ಸ| ದ್ಗುರು ಬೇರೆಯಲ್ಲವು |

ಧರೆಯ ಪಾವನಗೈಯಲವತರಿಸಿದಾ ||ಅಪ||

ಪಂಚ ಭೂತಗಳೆಂಬ | ಪಂಚಮುಖ ಶಿವಗುಂಟು |

ಪಂಚಭೂತ ವಿಚಾರ ಮುಖನು ಗುರುವು||

ಪಂಚ ವಿಂಶತಿ ಲೀಲೆ ಹರನಿಗಿರ್ಪಂತೆಯೇ |

ಪಂಚ ವಿಂಶತಿ ತತ್ವ ಗುರುವಿಗುಂಟು ||1||

ಹರನು ಭಿಕ್ಷಾಟನ ಪರನಾಗಿ ಚರಿಪಂತೆ |

ಗುರು ಜ್ಞಾನ ಭಿಕ್ಷೆಗಾಗಿಯೆ ಚರಿಪಾ||

ಹರತ್ರಿಪುರವ ಸುಟ್ಟ | ಗುರು ತ್ರಿಪುಟಿಯ ಬಿಟ್ಟ|

ಹರನಿಗೆ ಗುರುವಿಗಂತರವಿಲ್ಲಾ ||2||

ಹರನಂಧಕನ ಕೊಂದ| ಗುರುವ ಜ್ಞಾನಾಂಧಕನ |

ಹರಿಸಿ ಪಾವನಗೈದ ಧರೆಯನೆಲ್ಲಾ ||

ಹರನು ರಜತಾದ್ರಿಯೊ| ಳಿರುವಂತೆ ಸುಜ್ಞಾನ |

ಗಿರಿಯೇರಿ ಮೆರೆಯುವ ನರಹರೀಂದ್ರ ||3||

ಬಯಲೆ ಬ್ರಹ್ಮಾಂಡದಾಶ್ರಯವು | ಚಿ|

ನ್ಮಯವಾದ ಬ್ರಹ್ಮ ನಿರ್ವಯಲೆ ನಿಶ್ಚಯವು ||ಪ||

ಬಯಲೆಂಬುದೇ ಶಬ್ದಮಯವು | ತ |

ನ್ಮಯವಾದ| ಬ್ರಹ್ಮ ತಾನಿಹುದು ನಿಷ್ಕ್ರಿಯವು ||ಅಪ||

ಏನಿಲ್ಲದಿರುವುದಾಕಾಶ | ತನ|

ಗೇನೊಂದು ಕೊರತೆ ಕಾಣದ ಸುವಿಲಾಸ ||

ಕಾಣದೆಂದಿಗುಯಿದು ವಿನಾಶ| ಇದು|

ಸ್ಥಾನ ಗ್ರಹ ನಕ್ಷತ್ರಗಳಿಗೆ ಪ್ರವಾಸ ||1||

ಹಳೆಯದಾಗದೆ ಗಗನವುಳಿದು | ಹೊಸ|

ಕಳೆಯಿಂದ ಕೂಡಿತ್ತು ಯುಗ ಕೋಟಿ ಕಳೆದು ||

ಅಳತೆಯಿಲ್ಲದೆ ತಾನೆ ಬೆಳೆದು| ಅ|

ಚ್ಚಳಿಯದಂತಿರುತ್ತಿತ್ತು ಜಗವೆಲ್ಲ ತಳೆದು ||2||

ಎಲ್ಲ ಭೂತಗಳ ಕೂಡಿಹುದು | ತಾ|

ನೆಲ್ಲೆಲ್ಲಿ ಯಾವುದನಂಟದಂತಿಹುದು ||

ಇಲ್ಲೆ ಶಿವ ಜೀವರಿರಬಹುದು | ಜಗ|

ವಲ್ಲಭ ನರಹರಿಯ ಬೋಧೆ ತಾನಹುದು ||3||

ಸುಖವಿಲ್ಲ ಸಂಸಾರ ಸುಖವಿಲ್ಲ| ಮೃತ್ಯು|

ಮುಖದಲ್ಲಿ ಬಾಳ್ವೆಸಾರ್ಥಕವಿಲ್ಲವಲ್ಲಾ ||ಪ||

ಸಕಲ ದುಃಖದ ಮೂಲ| ವಿಕಟ ಶೋಕದ ಜಾಲ|

ಪ್ರಕಟವಾಗಲು ಕಾಲ| ಚಕಿತನಾಗುವೆಯಲ್ಲಾ ||ಅಪ||

ನೀರಲ್ಲಿ ಲಿಪಿ ಸಿದ್ಧ ಲಿಪಿಯಂತೆ | ಸಂ|

ಸಾರದ ಸುಖ ದಕ್ಕದಿಹುದಂತೇ||

ತೋರಿ ತೋರದೆ ಹಾರಿ| ದೂರದಾಸೆಗೆ ದಾರಿ||

ಪಾರುಗಾಣದೆ ಮೀರಿ| ಹೋರಾಟದೊಳು ಸೇರಿ ||1||

ವಿಷಯಂಗಳೈದು ಸಂಧಿಸಲಾಗಿ| ದು|

ವ್ರ್ಯಸನ ಲಂಪಟವು ಬಂಧಿಸಲಾಗಿ||

ವಿಷಮ ಸಂಸೃತಿ ಘೋರ| ವಿಷದ ದುವ್ರ್ಯಾಪಾರ||

ಪಸರಿಸಿ ಭವಭಾರ| ದೆಸೆಗೆಡಿಸಿತು ಪೂರಾ ||2||

ಮಕ್ಕಳಿಂದತಿ ಸುಖವುಂಟೆಂದು| ಬಲು |

ಅಕ್ಕರೆಯಿಂದ ಸಾಕುತ ಬಂದು||

ದುಕ್ಕಂಗಳೆಲ್ಲವನು | ಲೆಕ್ಕಿಸದೆಯೆ ಮಣ್ಣು ||

ಮುಕ್ಕುತ್ತ ಸಲಹಲಾ | ಮಕ್ಕಳೊದೆಯುವರಲ್ಲಾ ||3||

ನಾರಿ ಸಂಸಾರಕ್ಕೆ ದಾರಿಯು| ಮದ|

ನಾರಿ ಯರಿವಿಗೆ ವಿಘ್ನಕಾರಿಯು||

ಏರಿ ಜನ್ಮದ ಸಾಲು| ಕ್ರೂರ ಕರ್ಮದ ಗೀಳು ||

ತೋರದಾಯಿತು ಮೇಲು| ಜಾರಿಬಿಟ್ಟಿತು ಕಾಲು ||4||

ಹಗಲಿರುಳು ವೊಂದಾಗಿ ದುಡಿಯುತ್ತ| ನೀ|

ತಿಗೆ ತಪ್ಪಿ ರೊಕ್ಕವ ಪಡೆಯುತ್ತ ||

ಮಿಗಿಲಾಸೆ ಹೊಂದುತ್ತ | ಜಗ ನಿಜ ವೆನ್ನುತ್ತ ||

ಅಘದೂರ ನರಹರಿಯ| ಸೊಗಸಿ ಸೇರದೆ ಇರಲು ||5||

ಶರಣೆನ್ನಿ ಗುರುವಿಗೆ | ಶರಣೆನ್ನಿ ಶಿವನಿಗೆ ||

ಶರಣೆನ್ನಿ ಶಿವನ ಶರಣರಿಗೆ ಶೋಭಾನವೆ ||ಪ||

ಶರಣು ಎನ್ನಿ ಶಿವನ | ಶರಣ ಸಂತರಿಗೆಲ್ಲ ||

ಶರಣಾರ್ತಿ ಮಾಡಿ ನೆನೆಯಿರೆ ಶೋಭಾನವೇ ||ಅಪ||

ಶ್ರೀಗಂಧ ಮಂಚವನು | ಯೋಗೀಂದ್ರನೇರಿದನು |

ನಾಗೇಂದ್ರ ಹಾರ ಕೊರಳಿಗೆ || ಶೋ||

ನಾಗೇಂದ್ರ ಹಾರವನು | ಸೌಗಂಧಿಕ ಮುಡಿದವನು |

ತೂಗಿ ಉಯ್ಯಾಲೆಯಾಡುವನು || ಶೋ ||1||

ಅಜಪಾ ಮಂತ್ರವ ಪಠಿಸಿ | ನಿಜ ವೈರಾಗ್ಯವ ಘಟಿಸಿ|

ತ್ರಿಜಗಂಗಳೆಲ್ಲ ತಾನಟಿಸಿ || ಶೋ||

ತ್ರಿಜಗದೊಳಗೆಲ್ಲ ತಾ| ಭಜಿಪ ಭಕ್ತರನಿರುತ |

ನಿಜರೂಪನಾಗಿ ಪೊರೆವಾತ || ಶೋ ||2||

ಗಂಗೆಯೊಳು ತಾ ಮಿಂದು | ಶೃಂಗಾರದೊಳು ಬಂದು|

ಗಂಗೆಯೊಳು ಸುರಸ ನೈವೇದ್ಯಾ || ಶೋ||

ಗಂಗೆಯೊಳು ಸುರಸಗಳ | ಸಂಗೀತ ಸರಸಗಳ |

ರಂಗ ಮಂಟಪದಿ ಪಡೆದನೆ || ಶೋ ||3||

ಅಷ್ಟದಳ ಕಮಲದಲಿ| ಶ್ರೇಷ್ಠ ಪರ್ಯಂಕದಲಿ |

ನಿಷ್ಠೆಯಿಂ ಕುಳಿತು ನಿಜ ಕೇಳಿ || ಶೋ||

ನಿಷ್ಠೆಯಿಂದಲಿ ಕುಳಿತು | ಸ್ಪಷ್ಟವಾಗಿಯೆ ಪೇಳ್ದ |

ನಷ್ಟವಾಗುವುದೀ ಭವವೆಂದ || ಶೋ ||4||

ಚಿತ್ರ ನವಿಲಾಸನವ| ಹತ್ತಿದನು ಗುರುದೇವ|

ಭಕ್ತರಿಗೆ ಕೊಡುವ ದರುಶನವ|| ಶೋ||

ಭಕ್ತರಿಗೆ ದರುಶನವ | ನಿತ್ತು ಕಾಪಾಡುವ |

ಸತ್ಯದ ಬೆಳಕು ತೋರುವ|| ಶೋ ||5||

ಬೆಳಕಿಗೆ ಬೆಳಕಾದ | ಹೊಳೆಯುತ್ತ ಶಿವನಾದ |

ಬೆಳಕೆಲ್ಲ ನುಂಗಿ ಬೆಳಗಿದ || ಶೋ||

ಬೆಳಕೆಲ್ಲ ನುಂಗಿದ್ದ | ಕಳೆದುಳಿಮೆಯಾಗಿದ್ದ |

ಸುಲಭನಾಗಿದ್ದ ಪರಿಶುದ್ಧ || ಶೋ ||6||

ಮುಟ್ಟಲಾಗದ ಶಿವನ| ಮುಟ್ಟಿ ತೋರಿದನವ್ವ |

ಮುಟ್ಟಂಟು ಇಲ್ಲದಿರುವವನ || ಶೋ||

ಮುಟ್ಟಂಟು ಇಲ್ಲದ | ಹುಟ್ಟು ಸಾವಿಲ್ಲದ |

ಗುಟ್ಟು ತಿಳಿಸುತ್ತ ಬಯಲಾದ || ಶೋ ||7||

ಪವನ ಯೋಗವ ಕೂಡಿ| ಶಿವನ ಪೂಜೆಯ ಮಾಡಿ|

ಶಿವನೊಡಗೂಡಿ ನಲಿದಾಡಿ || ಶೋ||

ಶಿವನ ತಾನೊಡಗೂಡಿ | ಭವವನ್ನು ಕಡೆ ಮಾಡಿ |

ಶಿವಲೀಲೆಯಾಡಿ ಮೆರೆದಾನೆ || ಶೋ ||8||

ಗಾಳಿ ಮಂಟಪದಲ್ಲಿ | ಮೇಳವಿಸಿ ಜಪದಲ್ಲಿ |

ಏಳು ಚಕ್ರಗಳ ಕೀಲಲ್ಲಿ || ಶೋ||

ಏಳು ಚಕ್ರದ ಕಾಯ | ಕೀಲಿಸುತ ಗುರುರಾಯ|

ಮೂಲ ಕಳೆಯಾಗಿ ಬೆಳಗಿದ || ಶೋ ||9||

ಆರು ಬೆಟ್ಟದ ಶಿಖರ | ಏರಿ ನಿಂತಿಹ ಧೀರ |

ಮೂರು ನದಿಗಳ ಸಂಗಮದೀ || ಶೋ||

ಮೂರು ನದಿಗಳ ಮೂಲ | ಸೇರಿ ಮೀಯುವ ಲೀಲ|

ತೋರಿದನವ್ವ ನಿಜರೂಪ || ಶೋ ||10||

ಆಕಾಶ ಮಾರ್ಗದಲಿ | ಏಕಾಂಗಿ ಹಾರುತಲಿ |

ಲೋಕವೆಲ್ಲವ ಪೊರೆಯುವನೇ || ಶೋ||

ಲೋಕವೆಲ್ಲವ ಪೊರೆವ| ಏಕಾಂತವಾಗಿರುವ|

ಶೋಕ ಹರನವ್ವ ಗುರುದೇವಾ || ಶೋ ||11||

ನವರತ್ನಮಯವಿರುವ | ನವಿಲು ಸಿಂಹಾಸನವ |

ಶಿವಯೋಗಿ ಏರಿ ಕುಳಿತಿರುವ || ಶೋ||

ಶಿವಯೋಗಿ ಏರುತ್ತ | ಶಿವಲಿಂಗ ಪೂಜಿಸುತ |

ನವ ಜ್ಯೋತಿಯಾಗಿ ಬೆಳಗಿರುವ || ಶೋ ||12||

ಅಲ್ಲಿ ಇಲ್ಲೆನ್ನುವ | ಸೊಲ್ಲು ಸಲ್ಲದು ದೈವ|

ಎಲ್ಲೆಲ್ಲಿ ತಾನೆ ನೆಲಸಿರುವ || ಶೋ||

ಎಲ್ಲೆಲ್ಲಿಯು ತಾನಾಗಿ | ಉಲ್ಲಾಸ ಮಯನಾಗಿ |

ನಿಲ್ಲುವ ನರಹರಿಯೋಗಿ || ಶೋ ||13||

ಮಾಯೆಗೇ ದೂರವಾದುದಾದಿ ಬ್ರಹ್ಮ |

ಮಾಯೆ ಗಾಧಾರವಾದುದಾದಿ ಬ್ರಹ್ಮ ||ಪ||

ಸಾಯದೆ ನಿಲ್ಲುತಿರ್ಪುದಾದಿ ಬ್ರಹ್ಮ |

ನೋಯದೆ ನಲಿಯುತಿರ್ಪುದಾದಿ ಬ್ರಹ್ಮ ||ಅಪ||

ಬಯೆಲೆಲ್ಲ ತುಂಬಿಕೊಂಡುದಾದಿ ಬ್ರಹ್ಮ |

ಬಯಲಾಚೆ ಲಂಬಿಸಿರ್ಪುದಾದಿ ಬ್ರಹ್ಮ ||

ಕ್ರಿಯೆಗೆಲ್ಲ ಮೂಲವಾದುದಾದಿ ಬ್ರಹ್ಮ |

ಕ್ರಿಯೆಯೆಲ್ಲ ಮೀರಿ ನಿಂತುದಾದಿ ಬ್ರಹ್ಮ ||1||

ವಾಯುವಂ ಚಲಿಸುತಿರ್ಪುದಾದಿ ಬ್ರಹ್ಮ |

ವಾಯುವಂ ಲಯಗೊಂಬುದಾದಿ ಬ್ರಹ್ಮ ||

ಕಾಯವಂ ನಡೆಸುತಿರ್ಪುದಾದಿ ಬ್ರಹ್ಮ |

ಕಾಯವಂ ಲಯಗೈವುದಾದಿ ಬ್ರಹ್ಮ ||2||

ಅಗ್ನಿಗೇ ತೇಜವಿತ್ತುದಾದಿ ಬ್ರಹ್ಮ |

ಅಗ್ನಿಯಂ ಲಯಗೈವುದಾದಿ ಬ್ರಹ್ಮ ||

ಯಜ್ಞಕಾಧಾರವಾದುದಾದಿ ಬ್ರಹ್ಮ |

ಯಜ್ಞ ಸಂತೃಪ್ತವಾದುದಾದಿ ಬ್ರಹ್ಮ ||3||

ಪೃಥ್ವಿಯಂ ಸೃಷ್ಟಿಗೈದುದಾದಿ ಬ್ರಹ್ಮ |

ಪೃಥ್ವಿಯಂ ಲಯಗೈವುದಾದಿ ಬ್ರಹ್ಮ ||

ತೀರ್ಥವಂ ರಕ್ಷಿಸುವುದು ಆದಿಬ್ರಹ್ಮ |

ತೀರ್ಥವಂ ಲಯಗೊಂಬುದಾದಿ ಬ್ರಹ್ಮ ||4||

ಆಧಾರ ಸರ್ವ ಲೋಕಕಾದಿ ಬ್ರಹ್ಮ |

ಬೋಧಾ ಸ್ವರೂಪವಾದುದಾದಿ ಬ್ರಹ್ಮ ||

ವೇದಾಂತದಲ್ಲಿ ಮೆರೆವುದಾದಿ ಬ್ರಹ್ಮ |

ನಾದಾಂತ ನರಹರೀಂದ್ರನಾದಿಬ್ರಹ್ಮ ||5||

ಏನು ವಿನೋದ ವಿಚಾರ | ಪರ| ಮಾನಂದ ಬೋಧೆ ಸುಸಾರ ||ಪ||

ತಾನೆ ತಾನಾದಂಥ| ಜ್ಞಾನವನ್ನೀವಂಥ||

ಸ್ವಾನುಭಾವದ ಸುಖ| ಕಾಣಲಳಿಯೆ ದುಃಖ ||ಅಪ||

ಹಂಸ ತಲ್ಪವನು ತಾನೇರಿ | ಶಿವ |

ನಂಶ ತಾನೆಂಬುದ ತೋರಿ||

ಸಂಶಯಂಗಳ ಕೆಡಿಸಿ | ಹಿಂಸೆಯೆಲ್ಲವ ಬಿಡಿಸಿ ||

ಮಾಂಸ ಪಿಂಡವ ಸೋಸಿ| ಮಂತ್ರ ಪಿಂಡವು ಸೂಸಿ ||1||

ತಾನೆ ದೇಹವು ಎಂಬುದಳಿದು | ನಿಜ|

ಜ್ಞಾನಾತ್ಮ ತಾನೆಂದು ತಿಳಿದು||

ಮೌನ ಧ್ಯಾನಗಳೊಂದು| ಸ್ಥಾನದಲ್ಲಿಯೆ ನಿಂದು||

ಆನಂದವೆಂಬುದು | ತಾನೆಂದು ತಿಳಿವುದು ||2||

ತನ್ನ ತಾ ಮರೆತವ ಜೀವ| ತಾ|

ತನ್ನ ನರಿದಾತನೆ ದೇವಾ||

ಅನ್ಯ ಭಾವವ ಬಿಟ್ಟು| ಶೂನ್ಯವಾಗುವ ಗುಟ್ಟು ||

ಚೆನ್ನ ನರಹರಿ ಪೇಳೆ| ಧನ್ಯನೆನ್ನಿಸಿ ಕೇಳೆ ||3||

ಸಂತೋಷ ನೆಲೆಗೊಂಡಿತು | ಪರಿಭವ| ಸಂತಾಪ ಕೊನೆಗೊಂಡಿತು ||ಪ||

ಅಂತಿಂತು ಎನಲಾಗ| ದಂತಾಗ ಲನುರಾಗ|

ಶಾಂತಿ ಸಾಧನವಾಗಿ| ಚಿಂತೆಯೆಲ್ಲವು ನೀಗಿ ||ಅಪ||

ಆನಂದ ತಲೆದೋರಿತು| ನಿಜ| ವೇನೆಂದು ತಿಳಿವಾಯಿತು||

ತಾನಾರು ಎನುವಂಥ| ದೀನತ್ವ ತಿಳಿದಂಥ | ಧ್ಯಾನ

ಪ್ರಬಲವಾಯ್ತು| ನಾನತ್ವ ಬಿಡಲಾಯ್ತು ||1||

ಪುಣ್ಯಾತ್ಮ ಗುರುನಾಥನು | ನೀನೆ| ಧ್ವನ್ಯಾತ್ಮ ತಿಳಿಯೆಂದನು ||

ಚಿನ್ನಾದ ನೀನಾದೆ| ಇನ್ಯಾಕೆ ಭವ ಬಾಧೆ|

ಸನ್ಯಾಸಿ ನೀನೆಂದ| ಅನ್ಯವೇನಿಲ್ಲೆಂದ ||2||

ಸದ್ರೂಪವಿರವೆಂದನು | ಸುಖಮಯ| ಚಿದ್ರೂಪವರಿವೆಂದನು||

ಮುದ್ರಾಸನಗಳಿಂದ | ಒದ್ದಾಡಲೇಕೆಂದ|

ಶುದ್ಧಾತ್ಮ ನೀನೆಂದ| ಬುದ್ಧ ನರಹರಿಯಿಂದ ||3||

ಹಂಸಾ ಬಾ ಕಳ ಹಂಸಾ ||ಪ||

ಬ್ರ| ಹ್ಮಾಂಶ ವೆನ್ನಿಸಿದಂಥ ಸುಜನೋತ್ತಂಸಾ ||ಅಪ||

ಆಧಾರದಲ್ಲಿ ಲಂ| ಬೋದರ ನೆನಿಸಿರ್ಪೆ ||

ಸ್ವಾದಿಷ್ಠಾ ನದಿ ಬ್ರಹ್ಮ | ನಾದೆ ನೆನ್ನುತಲಿರ್ಪೆ ||1||

ಮಣಿಪೂರಕದಿ ವಿಷ್ಣು| ವೆನಿಸುತ್ತ ನೀನಿರ್ಪೆ ||

ಘನದ ನಾಹತದಲ್ಲಿ | ಮುನಿರುದ್ರನಾಗಿರ್ಪೆ ||2||

ತೀವಿ ವಿಶುದ್ಧಿಯೊಳ್| ಜೀವನೆನ್ನಿಸುತಿರುವೆ ||

ಓವಿಯಾಜ್ಞಾ ಚಕ್ರ | ದೇವಗುರು ನೀನಿರುವೆ ||3||

ವರ ಸಹಸ್ರಾರದೊ | ಳಿರವಾಗಿ ಮೆರೆವೇ||

ಪರಮ ಗುರು ದೇವ ನೀ | ನರಿವೆನ್ನಿಸಿರುವೇ ||4||

ಹರಿಹರ ಬ್ರಹ್ಮಾದಿ| ಸುರರಾಗಿ ಮೆರೆವೆ |

ಗುರುದೇವ ನರಹರಿಯ| ಚರಣದೊಳಿರುವೇ ||5||

ಭೂತಲದೊಳು ಸುಖದಾತನಿರಲು ನೀ|

ನೇತಕೆ ಬಳಲುವೆ ಎಲೆ ಜೀವಾ ||ಪ||

ಪಾತಕವನು ಕಳೆವಾತನ ನಂಬದೆ|

ಏತಕೆ ಸಾಯುವೆ ಎಲೆ ಜೀವಾ ||ಅಪ||

ನೀರಿನೊಳಗೆ ಸುಖ| ಸಾರನು ಸದ್ಗುರು |

ಸೇರಿರುವನು ತಿಳಿ ಎಲೆ ಜೀವಾ ||

ಮೂರು ಮಾತ್ರೆಗಳ| ಮೀರಿ ನಿಂತಿರುವನು |

ಧೀರನ ಮೊರೆ ಬೀಳೆಲೆ ಜೀವಾ ||1||

ಅಗ್ನಿಯನೇ ತನ್ನಾಜ್ಞೆಯಿಂದ ಸು|

ಪ್ರಜ್ಞೆಗೆ ತಂದನು ಎಲೆ ಜೀವಾ ||

ಯಜ್ಞ ಮುಖದಿ ನಿರ್ವಿಘ್ನ ಪೂಜೆಯೊಳು |

ಮಗ್ನನಾದವನ ತಿಳಿ ಜೀವಾ ||2||

ಮರುತವು ಚಲನೆಯ ಮರತೇ ನಿಂತಿದೆ|

ಗುರುವಿನ ಮಹಿಮೆಗೆ ಎಲೆ ಜೀವಾ||

ಅರಿವನು ಬೆರೆತೇ ಇರವೆನ್ನಿಸುತೇ |

ನಿರುತವು ಬೆಳಗುವ ನೆಲೆ ಜೀವಾ ||3||

ಅಗಣಿತ ಮಹಿಮನು ಗಗನವನೆಲ್ಲವ |

ಸೊಗಸಿ ತುಂಬಿರುವ ನೆಲೆ ಜೀವಾ ||

ಝಗಝಗಿಸುತಲೀ ಜಗವನು ವ್ಯಾಪಿಸಿ|

ಮಿಗಿಲಾದಾತನ ತಿಳಿ ಜೀವಾ ||4||

ಗುರುವಿನ ಚರಣಕೆ | ಶಿರ ಬಾಗಿದರೇ |

ದೊರೆವುದು ನಿಜಸುಖ ಎಲೆ ಜೀವಾ||

ಪರಿಪರಿ ಶಾಸ್ತ್ರವ ಪರಿಕಿಸಿ ನೋಡಲು|

ನರಹರಿ ಕಾಣಿಸ ನೆಲೆ ಜೀವಾ ||5||

ಏನೇನು ಯನಗಿಲ್ಲ ಭಯವು| ತಾನೆ |

ತಾನಾಯ್ತು ಶ್ರೀಗುರು ದಯವು ||ಪ||

ಹಾನಿ ವೃದ್ಧಿಗಳಿಂದ | ಏನಿಲ್ಲ ನಿರ್ಬಂಧ ||

ಮೌನದಿಂದಿರುತಿದ್ದೆ | ಧ್ಯಾನ ಮಾಡುತ ಗೆದ್ದೆ ||ಅಪ||

ಹೃದಯ ಸಿಂಹಾಸನ ಮಾಡಿ| ತಾನೆ|

ಮುದವಾಂತು ಕುಳಿತನು ನೋಡಿ||

ಹೆದರಿಕೆಯೆನ್ನುವುದೆ| ಬೆದರಿ ಓಡುತಲಿದೆ||

ಹದವಾದ ಬೋಧೆಯ | ಸುಧೆಯಿತ್ತ ಮಹನೀಯ ||1||

ಯಮನ ಹಂಗಿಲ್ಲದಂತಿದ್ದೆ | ಮಾಯಾ|

ಭ್ರಮೆಯೆಂಬ ಕತ್ತಲೆಯ ಗೆದ್ದೆ ||

ಸುಮನಸರು ಬಂದು ಸಂ| ಭ್ರಮದಿ ಕೂಡಿರಲೆನ್ನ |

ಅಮರ ಭೇರಿಯ ನಾದ| ರಮಿಸಿ ಕೇಳುತ ನಿಂದೆ ||2||

ಶತಕೋಟಿ ಶಶಿ ಸೂರ್ಯ ಪ್ರಭೆಯ | ಕೂಡಿ|

ಪತಿತ ಪಾವನನೆನ್ನ ಒಡೆಯ||

ಅತಿ ಕರುಣದಿಂದೆನ್ನ | ಪತಿ ಕರಿಸುತ ಲನ್ಯ ||

ಮತಿಯ ನೀಗುತ ಪುಣ್ಯ| ಗತಿಯಿತ್ತ ನರಹರಿ ||3||

ಏನು ತಂದೆ ಹುಟ್ಟಿದಾಗ |

ಏನು ಒಯ್ದೆ ಸಾಯುವಾಗ ಓ ಮಾನವಾ ಹೇಳು ||ಪ||

ನೀನು ನಡುವೆ | ನಾಲ್ಕು ದಿವಸ |

ಏನು ಮಾಡೆ ಸರ್ವನಾಶ ಓ ಮಾನವಾ ಹೇಳು ||ಅಪ||

ಮಾಯೆಯನ್ನೆ ನಂಬಿಕೊಂಡೆ |

ಮಾಯ ಮೋಹ ತುಂಬಿಕೊಂಡೆ ||

ಸಾಯಬಾರದೆಂದುಕೊಂಡೆ |

ಕಾಯ ಬಿಟ್ಟರೇನು ಕಂಡೆ ಓ ಮಾನವಾ ಹೇಳು ||1||

ಧನವಿದೆಲ್ಲ ನನ್ನದೆಂದೆ |

ತನುವೆ ನಿತ್ಯವೆಂದು ನಿಂದೆ||

ಧನವು ಬರದು ನಿನ್ನ ಹಿಂದೆ |

ತನುವು ಬಿದ್ದರೇನು ಮುಂದೆ ಓ ಮಾನವ ಹೇಳು ||2||

ದುಡಿದು ದುಡಿದು ಕಷ್ಟಪಟ್ಟೆ |

ದುಡಿದುದೆಲ್ಲ ಇಲ್ಲೆ ಬಿಟ್ಟೆ ||

ಪಡೆದುದುಂಡು ಹೋಗಿಬಿಟ್ಟೆ |

ಕಡೆಗೆ ಯಮನ ಬಾಧೆಪಟ್ಟೆ ಓ ಮಾನವಾ ಹೇಳು ||3||

ದಾನ ಧರ್ಮ ಮಾಡದಂತೆ|

ಹೀನ ಕರ್ಮದಲ್ಲಿ ನಿಂತೆ||

ಏನೋ ಮಾಡಿ ಗಳಿಸಿ ಕುಂತೆ|

ನೀನು ಬಿಡಲಿಲ್ಲದರ ಚಿಂತೆ ಓ ಮಾನವಾ ಹೇಳು ||4||

ಕರಣ ಶಾಂತಿ ಹೊಂದಲಿಲ್ಲ |

ಹರಿಯ ನಾಮ ನುಡಿಯಲಿಲ್ಲ ||

ನರಹರಿಯನು ಸೇರಲಿಲ್ಲ|

ನರಕದೆಡೆಗೆ ಹೊರಟೆಯಲ್ಲ ಓ ಮಾನವಾ ಹೇಳು ||5||

ಜ್ಯೋತಿ ಲಿಂಗವ ನೋಡಿರೋ| ನಿಮ್ಮೊಳು ಆತ್ಮ |

ಜ್ಯೋತಿ ಲಿಂಗವ ನೋಡಿರೋ ||ಪ||

ಮಾತು ಮನಗಳ ಮೀರಿ| ರೀತಿ ನೀತಿಯ ತೋರಿ||

ಭೂತ ಪಂಚಕಧಾರಿ| ಭೂತಲದ ಸಂಚಾರಿ ||ಅಪ||

ನಯನ ಮಧ್ಯದೊಳಿಹುದು | ಸರ್ವೇಂದ್ರಿಯದ |

ಕ್ರಿಯೆಗೆ ಕಾರಣವಹುದು||

ಲಯ ಮೂರ್ತಿ ತಾನೆ ಉ| ಭಯವಳಿದು ಸುಪ್ತಿಯೊಳು ||

ಕ್ರಿಯೆಯಿಂದ ಬೆಳಗಿತ್ತು | ಸ್ವಯಮಾಗಿ ಜಾಗ್ರದೊಳು ||1||

ಪ್ರಾಣವೆಂದೆನಿಸಿಹುದು ದೇಹಾದ್ಯಂತ|

ತ್ರಾಣವಾಗಿರುತಿಹುದು||

ತಾನೆ ಪೃಥ್ವಿಯೊಳು ಪ್ರ| ಯಾಣ ಮಾಡುತಲಿಹುದು ||

ಪ್ರಾಣ ಲಿಂಗಾನು ಸಂ| ಧಾನ ದೊಳು ಕಾಣುವುದು ||2||

ನಾದವಾಗಿರುತಿಹುದು | ಸನ್ಮಂತ್ರಗಳ|

ವೇದ ಸೃಷ್ಟಿಯಗೈವುದು ||

ಬೋಧಾ ಪ್ರಸಾದ ಸಂ| ಪಾದನೆಯ ಮಾಳ್ಪುದು ||

ಆದಿ ನರಹರಿ ಜ್ಯೋತಿ | ಗಾಧಾರವೆನಿಸಿಹುದು ||3||

ಸುಷುಮ್ನ ವಾಸನು | ಪ್ರಸನ್ನ ನೀಶನು ||

ಪ್ರಸಾದಿಸುವನು ಸುನಾದವನು ||ಪ||

ಪ್ರಶಾಂತ ರೂಪನು ವಿಶೇಷ ಪ್ರಜ್ಞನು | ಪ್ರಸಾದಿಸಿದ ಸದ್ವೇದವನು ||ಅಪ||

ಮೂಲಾಧಾರದಿ ಲೋಲ ಗಣೇಶನು |

ನಾಲುಕು ದಳಗಳ ಕೀಲಿಪನು ||

ಮೇಲೆ ವಿಧಾತನು ಸ್ವಾಧಿಷ್ಠಾನದಿ |

ಕೀಲಿಸಲಾರು ದಳಂಗಳನು ||1||

ಮಣಿ ಪೂರಕದೊಳು ವನಜಾಕ್ಷನು ಹರಿ|

ಗುಣಿಸಲು ಹತ್ತು ದಳಂಗಳನು ||

ಅನಾಹತದೊಳಾ ರುದ್ರನು ದ್ವಾದಶ |

ವೆನಿಪ ದಳವ ಸಂಧಾನಿಪನು ||2||

ವಿಶುದ್ಧ ಚಕ್ರದಿ ಜೀವನು ಷೋಡಶ |

ವಿಶೇಷ ದಳಗಳ ನಾಡಿಸಲು||

ಪ್ರಸಿದ್ಧದಾಜ್ಞಾ ಚಕ್ರದಿ ದ್ವಿದಳವ |

ಬೆಸೆಯುತ ಶ್ರೀಗುರು ಕೂಡಿಸಲು ||3||

ಸಹಸ್ರ ದಳಗಳ ಸಹಸ್ರಾರದೊಳು |

ಮಹಾತ್ಮ ಸದ್ಗುರು ಮಿಸುಗಿಸಲು||

ಮಹಾ ಮಹಿಮೆಯೊಳು ವಿಹಾರಗೈವನು |

ಮಹಂತ ನರಹರಿ ಮಂತ್ರದೊಳು ||4||

ಬೋಧಾಮೃತವ ಹೀರಿದೆ| ಶ್ರೀ ಗುರು |

ಪಾದಾಂಬುಜವ ಸೇರಿದೇ ||ಪ||

ನಾದಾಂತದೊಳು ಸೇರಿ| ವೇದಾಂತ ಜಯಭೇರಿ |

ಆದ್ಯಂತವನು ಸಾರಿ| ಸಾಧಿಸಲು ನಿಜತೋರಿ ||ಅಪ||

ಸಪ್ತ ಚಕ್ರವನೇರಿದಾ | ಬ್ರಹ್ಮವು |

ಗುಪ್ತನಾದವ ತೋರಿದಾ||

ತೃಪ್ತಿಯಿಂದಲೆ ಸರ್ವ| ವ್ಯಾಪ್ತವಾಗುತಲಿರುವ|

ಆಪ್ತ ಸದ್ಗುರುವೇ ನಿ| ರ್ಲಿಪ್ತ ಭಾವವನೀವ ||1||

ತ್ರೈಮೂರ್ತಿಗಳು ಸೇರುತಾ | ತಮ್ಮಯ|

ಸಾಮಥ್ರ್ಯವನು ತೋರುತಾ |

ಕಾಮಿತಾರ್ಥಗಳನಿತ್ತು| ಸಾಮಗಾನದಿ ನಿಂತು||

ರಾಮಣೀಯಕ ಬ್ರಹ್ಮ | ಸಾಮರಸ್ಯವನಾಂತು ||2||

ವರ್ಣ ಮೂರರ ಮೂಲವು | ಒಂದೇ|

ವರ್ಣದೊಳನುಕೂಲವು ||

ವರ್ಣಂಗಳೆಲ್ಲ | ನಿರ್ವರ್ಣದಾಶ್ರಯದಲ್ಲಿ |

ಪೂರ್ಣವಾಗಲು ಪರಿ| ಪೂರ್ಣ ನರಹರಿಯಲ್ಲಿ ||3||

ಬ್ರಹ್ಮ ಜ್ಞಾನ ಸುಧಾರಸ ಪಾನ |

ನಿರ್ಮಲ ಧ್ಯಾನದ ಸಂಧಾನ ||ಪ||

ಕರ್ಮವ ಕಳೆಯುವುದೀ ಸುವಿಧಾನ|

ಸಮ್ಮತ ಮಂತ್ರದ ಉಚ್ಚರಣಾ ||ಅಪ||

ಸ್ರಕ್ಚಂದನ ವನಿತಾದಿಗಳೊಳಗೆ |

ಸಿಕ್ಕಿದರಾಯಿತು ಬಲು ಬೇಗೆ ||

ವಾಕ್ಚಾತುರ್ಯಕೆ ಮರುಳಾದವನಿಗೆ |

ಸಿಕ್ಕದು ಮಂತ್ರದ ಫಲ ಕೈಗೆ ||1||

ಹೊರಗಿನ ಜಗವನು ನಂಬಿರುವವನು |

ಮರೆಯುವನಾತ್ಮನ ಘನತೆಯನು ||

ಶರೀರದಿ ಶಿವನನು ಕಂಡಿರುವವನು |

ಹೊರಗಿನ ವಿಷಯಕೆ ಬೆಲೆ ಕೊಡನು ||2||

ಜಗಗಳನಂತವು ತನ್ನೊಳಗಿರುವುವು |

ಯುಗ ಕೋಟಿಯು ತನ್ನೊಳಗಿಹವು ||

ಜಗದೀಶ್ವರ ತಾನೆನ್ನುವ ಭಾವವು |

ಸೊಗಸಿತು ನರಹರಿಯನುಭವವು ||3||

ಭಿಕ್ಷಕೆ ಬಂದವರಾರಮ್ಮ | ಜಗ|

ರಕ್ಷಕ ಶಿವನೇ ಕಾಣಮ್ಮ ||ಪ||

ತಕ್ಷಣ ಭಿಕ್ಷವ ನೀಡಮ್ಮಾ | ನೀ|

ನಕ್ಷಯ ಪುಣ್ಯವ ಪಡೆಯಮ್ಮಾ ||ಅಪ||

ಅಕ್ಷರ ರೂಪನ ನೋಡಮ್ಮಾ | ಸ|

ರ್ವಾಕ್ಷರ ವ್ಯಾಪಕ ತಾನಮ್ಮಾ ||

ಸಾಕ್ಷೀ ಚೇತನ ತಾನಮ್ಮಾ| ಅ|

ರ್ಧಾಕ್ಷರದಲ್ಲಿಯೆ ಕಾಣಮ್ಮಾ ||1||

ನಾನಾ ರೂಪವ ತಾಳಿಹನು | ತಾ|

ನಾನಂದದೊಳೇ ನಿಲ್ಲುವನು ||

ನೀನೇ ಕೊಡುತಿಹ ಭಿಕ್ಷವನು | ತಾ|

ನೇನೇನುಳಿಸದೆ ತಿನ್ನುವನು ||2||

ತನುಮನಧನಗಳ ಬೇಡುವನು | ನಿ|

ನ್ನನು ಮಾನವನೀಡಾಡುವನು ||

ತನುಮನದಭಿಮಾನವನು | ಬಿಡ|

ಲನುಪಮ ಮುಕ್ತಿಯನೀಯುವನು ||3||

ಕೊಡಬಲ್ಲವರನು ರಕ್ಷಿಪನು | ವರ|

ಕೊಡುತಲೆ ನಿನ್ನ ಪರೀಕ್ಷಿಪನು ||

ಕೊಡಲಾರದವರ ಶಿಕ್ಷಿಪನು| ಮನ|

ಕೊಡಿರಮ್ಮಾ ನರಹರಿಗಿನ್ನು ||4||

ಆತ್ಮಾನಾತ್ಮ ವಿಚಾರದೊಳಗೆ ಪರ|

ಮಾತ್ಮನ ತಿಳಿವನು ಸುಜ್ಞಾನಿ ||ಪ||

ನಿತ್ಯಸತ್ಯ ಪರವಸ್ತುವ ನರಿಯದೆ |

ಸತ್ತು ಹೋಗುವನು ಅಜ್ಞಾನಿ ||ಅಪ||

ಮೋಹವೆ ಕಾರಣ ದೇಹಕೆಂದು ನಿ |

ರ್ಮೋಹವ ಪಡೆವನು ಸುಜ್ಞಾನಿ ||

ಮೋಹದಿ ವಿಷಯ ಸಮೂಹವ ಹೊಂದುವ|

ದಾಹದಿ ದಣಿವನು ಅಜ್ಞಾನಿ ||1||

ನಾದವ ಶಿವನ ಪ್ರಸಾದವನುಣ್ಣುತ |

ಮೋದವ ಪಡೆವನು ಸುಜ್ಞಾನಿ ||

ಹಾದಿಯನರಿಯದೆ ವಾದಿಸಿ ಕ್ರೋಧದಿ |

ಬಾಧೆಯಪಡುವನು ಅಜ್ಞಾನಿ ||2||

ಭೂಧನವೆಲ್ಲವ ಶೋಧನ ಮಾಡುತ |

ಸಾಧಿಸಿಕೊಂಡನು ಸುಜ್ಞಾನಿ ||

ಶ್ರೀಧವ ನರಹರಿ ಪಾದವ ಕಾಣದೆ |

ಹೋದನು ನರಕಕೆ ಅಜ್ಞಾನಿ ||3||

ಚಕ್ರಗಳೇಳನು ತಿಳಿಯಮ್ಮಾ | ಭೂ

ಚಕ್ರವನಾಳುವನ್ಯಾರಮ್ಮಾ ||ಪ||

ಸಕ್ರಮ ಮಂತ್ರವ ಜಪಿಸಮ್ಮಾ | ಜಲ|

ಚಕ್ರದಿ ಶಿವನೊಳಗಾಡಮ್ಮಾ ||ಅಪ||

ಅನಲನ ಚಕ್ರವ ಸೇರಮ್ಮಾ | ಶಿವ|

ಮಿನುಗುತಲಿರುವನು ನೋಡಮ್ಮಾ ||

ಅನಿಲ ಚಕ್ರದೊಳಗಾಡಮ್ಮ | ಶಿವ|

ನನು ಸೆರೆ ಹಿಡಿದರೆ ಪಾಡಮ್ಮಾ ||1||

ಅಂಬರ ಚಕ್ರವನೇರಮ್ಮಾ | ಜಗ|

ದಂಬೆಯ ಸೇವಿಸು ಬಾರಮ್ಮಾ ||

ತುಂಬಿದ ಭಕ್ತಿಯ ಮಾಡಮ್ಮಾ| ಅ|

ಡಂಬರ ಬಿಟ್ಟಿರಬೇಕಮ್ಮಾ ||2||

ಆತ್ಮನ ಚಕ್ರವ ಕೂಡಮ್ಮಾ | ಪರ|

ಮಾತ್ಮ ವಿಚಾರವ ಮಾಡಮ್ಮಾ ||

ಸೂತ್ರ ಸುಷುಮ್ನೆಯೊಳಾಡಮ್ಮಾ | ಗುರು|

ಮೂರ್ತಿಯೆ ನರಹರಿ ನೋಡಮ್ಮಾ ||3||

ಆಗದಯ್ಯಾ | ಮುಕ್ತಿ | ಆಗದಯ್ಯಾ ||ಪ||

ಭೋಗದಾಸೆ ನೀಗಿ ಶಿವನ | ಯೋಗ ನಿತ್ಯವಾಗುವ ತನಕ ||ಅಪ||

ನುಡಿಯೆ ಮಂತ್ರವಾಗಿ ಶಿವನ| ನಡೆಯೆ ತಂತ್ರವಾಗಿ ತನ್ನ ||

ಜಡದ ಯಂತ್ರವಾದ ತನುವ | ಹಿಡಿದುಕೊಂಡ ಮೋಹ ಬಿಡದೆ ||1||

ತನು ವಿಕಾರವೆಲ್ಲ ಪೋಗಿ| ಮನ ವಿಕಾರವಿಲ್ಲವಾಗಿ ||

ಧನದೊಳಾಸೆಯಿಲ್ಲವಾಗಿ | ಅನಘನಾಗಿ ನಿಲ್ಲುವ ತನಕ ||2||

ನಾದ ಬಿಂದು ಕಳೆಗೆ ಮೂಲ| ವಾದ ಬ್ರಹ್ಮ ತಾನೆಯಾಗಿ ||

ಆದಿಯಂತ್ಯವಿಲ್ಲದಿರುವ| ನಾದಿ ವಸ್ತು ತಾನೆಂದೆನದೆ ||3||

ನೇತಿ ನೇತಿಗಳೆದು ಸರ್ವ | ಭೂತದಂತರಾತ್ಮನಾಗಿ ||

ಸಾತಿಶಯ ದಾನಂದದಲ್ಲಿ | ಭೀತಿಯಳಿದು ನಿಲ್ಲುವತನಕ ||4||

ನಿಂದಿಸಿದರೆ ತಗ್ಗದಿದ್ದು | ವಂದಿಸಿದರೆ ಹಿಗ್ಗದಿದ್ದು ||

ಬಂಧಿಸಿದರೆ ಬಗ್ಗದಿದ್ದು| ದ್ವಂದ್ವವಳಿದು ನಿಲ್ಲುವತನಕ ||5||

ಶರೀರವಿಲ್ಲ ಕರಣವಿಲ್ಲ| ಹೊರಗೆ ತೋರ್ಪ ಜಗವಿದಿಲ್ಲ ||

ಅರಿವು ಮರವೆರಡು ಇಲ್ಲ| ದಿರುವ ನಿಶ್ಚಯವಾಗುವ ತನಕ ||6||

ದೇಶ ಕಾಲ ವಸ್ತು ಭೇದ| ಸೂಸದಿರಲು ನಿತ್ಯವಾದ||

ಈಶ ನರಹರಿ ದಿವ್ಯ ಪಾದ| ದಾಸನಾಗಿ ನಿಲ್ಲುವತನಕ ||7||

ಲಿಂಗಮಯಾ | ಜಗ| ಲಿಂಗಮಯಾ ||ಪ||

ಕಂಗಳೊಳಗೆ ಶಿವ| ಲಿಂಗ ಕ್ರಿಯಾ ||ಅಪ||

ಲೀನವು ಗಮ್ಯವು | ಲಿಂಗವು ರಮ್ಯರು||

ಮೌನವು ಧ್ಯಾನವು| ಜ್ಞಾನ ವಿಧಾನವು ||

ತಾನಿದು ಧರಣೀ| ಸ್ಥಾನದ ಸರಣೀ ||1||

ಪಂಚೇಂದ್ರಿಯದೊಳು| ಪಂಚಲಿಂಗಗಳು ||

ಮಿಂಚಿದ ಪೂಜೆಯು | ಪಂಚ ವಿಧಗಳು||

ಮುಂಚಿತದರಿವು | ಹೊಂಚಿದ ಗುರುವು ||2||

ಅಂಗವೆ ಜೀವನು | ಲಿಂಗವೆ ಶಿವನು ||

ಅಂಗವು ಲಿಂಗದಿ| ಸಮರಸವಾಗಿ||

ಸಂಗಮವಾಗಿ| ನರಹರಿ ಯೋಗಿ ||3||

ವಿಶ್ವವಿದೆಲ್ಲವು ಓಂಕಾರ| ಶ್ರೀ| ವಿಶ್ವೇಶ್ವರನೂ ಓಂಕಾರ ||ಪ||

ದೃಶ್ಯಾದೃಶ್ಯವು ಓಂಕಾರ| ನಿಜ| ಭಾಸ್ವರ ಸುನಾದ ಓಂಕಾರ ||ಅಪ||

ಸ್ಥಾವರವಾದುದು ಓಂಕಾರ| ಜಗ| ಜೀವ ಜಂಗಮವು ಓಂಕಾರ ||

ದೇವ ಕೋಟಿಗಳು ಓಂಕಾರ| ಜಗ| ಪಾವನ ಪರತರ ಓಂಕಾರ ||1||

ಸಗುಣವು ನಿರ್ಗುಣ ಓಂಕಾರ| ತ್ರೈ| ಜಗ ಯುಗವೆಲ್ಲವು ಓಂಕಾರ|

ನಿಗಮಾಗಮಗಳು ಓಂಕಾರ | ಬಗೆ | ಬಗೆ ರೂಪಗಳಿವು ಓಂಕಾರ ||2||

ಧ್ಯಾನವು ಮೌನವು ಓಂಕಾರ| ಸು| ಜ್ಞಾನ ವಿಧಾನವು ಓಂಕಾರ ||

ಆನಂದಾಮೃತ ಓಂಕಾರ| ಗುರು| ಶ್ರೀನರಹರಿ ಪದ ಓಂಕಾರ ||3||

ಇವನಮ್ಮ ರಾಜಯೋಗಿ| ಶಿವ ಧರ್ಮ ನಿತ್ಯ ಭೋಗಿ ||ಪ||

ಭವ ಕರ್ಮವೆಲ್ಲ ನೀಗಿ | ಸುವಿರಾಗಿಯಾದನಾಗಿ ||ಅಪ||

ಭವ ಬೀಜವನ್ನು ಹುರಿದ | ಶಿವತೇಜದಲ್ಲಿ ಮೆರೆದಾ ||

ಅವಿವೇಕವನ್ನು ಮುರಿದ | ಸುವಿವೇಕ ಬೋಧೆವೊರೆದ ||1||

ಸುಖ ದುಃಖವೆಂಬುದಿಲ್ಲ| ಸಖವೈರ ಭಾವವಿಲ್ಲ||

ಅಕಳಂಕ ಭಾವ ತಳೆದ | ಅಖಿಳಾತ್ಮನಾಗಿ ಹೊಳೆದ ||2||

ದುಷ್ಕರ್ಮವೆಲ್ಲ ಸುಟ್ಟ | ನಿಷ್ಕರ್ಮಿಯಾಗಿಬಿಟ್ಟ ||

ನಿಷ್ಕಾಮಿಯಾದ ಗುಟ್ಟ | ನಿಷ್ಕರ್ಷೆ ಮಾಡಿ ಕೊಟ್ಟ ||3||

ನಡೆಯಲ್ಲಿ ಶಿವನ ಧರ್ಮ | ನುಡಿಯಲ್ಲಿ ಶಿವನ ಮರ್ಮ||

ನಡೆನುಡಿಯ ಕೂಡಿ ಕರ್ಮ | ಕಡೆ ಮಾಡಿಬಿಟ್ಟನಮ್ಮ ||4||

ನರನೆನ್ನ ಲಾಗದಿವನ | ಸುರರನ್ನು ಮೀರಿದವನ ||

ಹರ ರೂಪ ತಾಳಿದವನ | ನರಹರಿಯ ಸೇರಿದವನ ||5||

ಪರಸುಖ ಸಂಪದ | ಗುರುಪಾದ ||ಪ||

ಶರಣರ ವೇದಾ | ಪರ ನಾದ ||ಅಪ||

ನಡೆಯುವ ಹಂಸನ | ನಡುವಿಹ ಪಾದ|

ನುಡಿಯುವ ಸೋಹಂ| ಕಡೆಗಿಹ ಪಾದ ||1||

ಪ್ರಣವದ ಕೊನೆಯೊಳು | ಮಿನುಗುವ ಪಾದ||

ಮನು ಮುನಿ ಹೃದಯದಿ | ನೆನೆಯುವ ಪಾದ ||2||

ಧರೆಯೊಳು ಗಂಧವ | ಧರಿಸಿದ ಪಾದ||

ಚರಿಸುತ ಪಾಪವ | ಹರಿಸಿದ ಪಾದ ||3||

ಜಲದೊಳು ಸುರಸವ | ಸಲಿಸುವ ಪಾದ||

ನಲಿದು ಸುಮಂತ್ರದಿ| ಬೆಳಗುವ ಪಾದ ||4||

ಅಗ್ನಿಯ ರೂಪದ| ಪ್ರಜ್ಞೆಯ ಪಾದ||

ಜಾಗ್ರ ಸುಷುಪ್ತಿಗೆ | ಸಂಜ್ಞೆಯ ಪಾದ ||5||

ಮರುತದಿ ಸ್ಪರ್ಶವ | ನರಿಯುವ ಪಾದ||

ಪರಮಾತ್ಮನ ಕೂ| ಡಿರುತಿಹ ಪಾದ ||6||

ಗಗನದಿ ಶಬ್ದವ | ಸೊಗಸಿದ ಪಾದ||

ನಿಗಮಾರ್ಥಂಗಳ | ಬಗೆಯುವ ಪಾದ ||7||

ಎಲ್ಲವ ನುಂಗುತ| ನಿಲ್ಲುವ ಪಾದ||

ಸೊಲ್ಲಿನ ಕೊನೆಯೊಳು| ಸಲ್ಲುವ ಪಾದ ||8||

ನಾದವ ಕೂಡಿದ | ವೇದದ ಪಾದ ||

ಬೋಧನಗೈಯಲು | ಸಾಧನ ಪಾದ ||9||

ಬಿಂದುವ ಸೇರಿ| ದಾ| ನಂದದ ಪಾದ||

ಬಂಧವನಳಿಸುತ | ನಿಂದಿಹ ಪಾದ ||10||

ಕಳೆಯನು ಬೀರುತ| ಬೆಳೆಯುವ ಪಾದ||

ಒಲುಮೆಯ ತೋರುವ | ಉಳುಮೆಯ ಪಾದ ||11||

ಭ್ರಾಂತಿಯನಳಿಸುವ | ಏ| ಕಾಂತದ ಪಾದ||

ಶಾಂತಿಯ ನಿಲಿಸುವ | ಕಾಂತಿಯ ಪಾದ ||12||

ನರರಿಗೆ ಬೋಧೆಯ| ನರುಹುವ ಪಾದ||

ಪರಮ ಸುಜ್ಞಾನದ| ನರಹರಿ ಪಾದ ||13||

ಇಲ್ಲೇ ತಿಳಿಯಿರಿ ಬ್ರಹ್ಮವನು | ನೀ|

ವಿಲ್ಲೇ ಕಳೆಯಿರಿ ಜನ್ಮವನು ||ಪ||

ಇಲ್ಲೆ ಸಾಧಿಸಿ ಧರ್ಮವನು | ನಿಜ|

ದಲ್ಲೇ ತಿಳಿಯಿರಿ ಮರ್ಮವನು ||ಅಪ||

ತನುವಿನೊಳೇ ಶಿವನಿರುತಿಹನು | ಸ|

ನ್ಮನ ದೊಳಗೇ ಮನೆ ಮಾಡಿಹನು ||

ಘನತರ ಮಂತ್ರದಿ ಸಿಕ್ಕುವನು | ನಿ|

ರ್ಗುಣ ಸಾಧಿಸಿದರೆ ದಕ್ಕುವನು ||1||

ರವಿಯೆದುರಿಗೆ ತಮ ನಿಲ್ಲುವುದೇ | ಪರ|

ಶಿವ ಧ್ಯಾನವ ಮನ ಗೆಲ್ಲುವುದೇ||

ಸುವಿರಕ್ತಿಗೆ ಭವ ಭಯವುಂಟೇ| ವಾ|

ದವ ಮಾಳ್ಪಗೆ ಗುರು ದಯವುಂಟೇ ||2||

ಚಿತ್ತವ ಶುದ್ಧಿಯ ಮಾಡದಲೇ | ಪರ|

ಮಾರ್ಥವ ಸಾಧಿಸಿ ನೋಡದಲೇ||

ವ್ಯರ್ಥಾಲಾಪದಿ ಸುಖವಿಲ್ಲಾ | ಗುರು|

ಮೂರ್ತಿಯು ನರಹರಿ ನಿಜ ಬಲ್ಲಾ ||3||

ಕ್ಷಮಿಸೆನ್ನ ಗುರುವೇ| ನಿನ್ನಯ ಪಾದ| ಕಮಲ ನಂಬಿರುವೇ ||ಪ||

ಕುಮತಿಯೆನ್ನಿಸಿ ನಾನು| ಭ್ರಮಿಸಿ ದುರ್ವಿಷಯಗಳ |

ನಿಮಿಷಾರ್ಧ ಬಿಡದಂತೆ| ರಮಿಸಿಗೈದಪರಾಧ ||ಅಪ||

ಮನದಲ್ಲಿ ನಾನು | ದುರ್ವಿಷಯಗಳ | ನೆನೆದಾಗ ನೀನು ||

ಎನಗೆಚ್ಚರವನಿತ್ತು | ಘನ ಶಾಂತಿ ಬಲವಿತ್ತು ||

ಅನುಗಾಲ ರಕ್ಷಿಪು| ದೆನುತ ಬೇಡುವೆನೀಗ ||1||

ಮಾತಾಡುವಾಗ | ಆಡುವ ತಪ್ಪು | ನೀ ತಡೆದು ಬೇಗ||

ರೀತಿ ನೀತಿಯ ನರಿದು| ಪ್ರೀತಿ ವಿಶ್ವಾಸದೊಳು ||

ಮಾತಾಡುವೆಂತೆನಗೆ | ನೀ ತೋರು ನಿಜವನ್ನು ||2||

ಕಾಯದೊಳು ನಾನು | ಅಪರಾಧವನು | ಗೈಯುತಿರೆ ನೀನು ||

ಹೇಯ ಕರ್ಮವ ಬಿಡಿಸಿ | ಮಾಯ ಮಾರ್ಗವ ಕೆಡಿಸಿ ||

ನ್ಯಾಯದೊಳು ನಡೆವಂತೆ| ಜೀಯ ನರಹರಿ ಕಾಯೊ ||3||

ಎತ್ತ ನೋಡಲು ತಾನಿದೆ | ಕಾರಣ ಬ್ರಹ್ಮ |

ವಸ್ತು ಕಣ್ಣಿಗೆ ಕಾಣದೆ ||ಪ||

ಪೃಥ್ವಿ ಜಲವಗ್ನಿಮ| ರುತ್ತು ವಾಗಸಗಳ|

ಮೊತ್ತವೆಲ್ಲವ ಬೆಳಗಿ | ಸುತ್ತ ತೋರುತಲಿದೆ ||ಅಪ||

ಎಲ್ಲಿ ನೋಡಲು ಕಾಣದು| ನೋಡುವ ಕಣ್ಣಿ|

ನಲ್ಲಿ ತಾನಡಗಿರ್ಪುದು ||

ಎಲ್ಲ ತನ್ನೊಳು ನುಂಗಿ| ನಿಲ್ಲುವುದು ಸುಪ್ತಿಯೊಳು||

ಎಲ್ಲ ಬಾಹ್ಯಕೆ ತಂದು | ಸಲ್ಲುವುದ ಜಾಗ್ರದೊಳು ||1||

ಜಡವ ಚೇತನ ಮಾಳ್ಪುದು | ಮೂಲಾಧಾರ|

ದೆಡೆಯಲ್ಲೆ ನಡೆಯುವುದು ||

ಒಡಗೂಡಿ ದೇಹವ | ನುಡಿಯುತ್ತಲಿರ್ಪುದು ||

ಕಡೆಗೆ ನಿರ್ಗುಣವನ್ನು | ಪಡೆದಾನಂದಿಸುವುದು ||2||

ಶಿವ ಜೀವರೆನಿಸಿರ್ಪುದು | ಐಕ್ಯವ ಮಾಡಿ|

ಭವವ ನಿರ್ಮೂಲಿಪುದು||

ಶಿವ ಜಾಗ್ರದೊಳಗನು | ಭವವೀಯೆ ನರಹರಿ ||

ಶ್ರವಣ ದಿಂದಲೆ ಬ್ರಹ್ಮ | ತ್ವವನು ಕಾಣುವ ಪರಿ ||3||

ಯೋಗಿ ಈತನ ಕಂಡೆ| ಯೀಗ ಚೇತನಗೊಂಡೆ |

ನಾಗಭೂಷಣನೆಂದು ಬಲಗೊಂಡೆ ||ಪ||

ರಾಗಾಂತದೊಳಗೆ ವಿ| ರಾಗಿಯೆಂದೆನಿಸಿದ್ದ|

ಸಾಗರೋಪಮ ಶಾಂತ ಪರಿಶುದ್ಧ ||ಅಪ||

ಚಳಿಗಾಳಿಯೆನ್ನದೆ | ಮಳೆ ಬಿಸಿಲಿಗಂಜದೆ |

ಛಲದಿಂದ ತಪಗೈವನೊಲವಿಂದೆ ||

ಒಳಗೆ ಹೊರಗೊಂದಾಗಿ| ಬಲಿದ ನಿದ್ರೆಯ ನೀಗಿ|

ಬಲು ಘೋರ ತಪವಾಂತ ನಿಜವಾಗಿ ||1||

ಜಗವಿಲ್ಲ ಯುಗವಿಲ್ಲ| ಹಗಲು ರಾತ್ರಿಗಳಿಲ್ಲ|

ದಿಗಿಲಿಲ್ಲದಂತೆ ತಾನಿರಬಲ್ಲ||

ಸೊಗಸಾಗಿಯಾನಂದ| ಮಿಗಿಲಾಗಿ ತಾನಿಂದ |

ನಗುನಗುತ ಗೆದ್ದನು ಭವ ಬಂಧ ||2||

ಹಂಸನೀತನೆ ಪರಮ| ಹಂಸನಾದನು ಈಶ್ವ|

ರಾಂಶದಲ್ಲಿಯೆ ಬೆರೆದು ನಿತ್ಯದೊಳು ||

ಧ್ವಂಸವಾಗಲು ಪಾಪ| ಹಿಂಸೆಯೆಲ್ಲವು ಲೋಪ||

ಸಂಶಯವ ಹರಿದ ನರಹರಿ ರೂಪಾ ||3||

ನುಡಿಯೆಲ್ಲವು ಮಂತ್ರ| ಜ್ಞಾನಿಯ| ನಡೆಯೇ ಶಿವತಂತ್ರ ||ಪ||

ನಡೆನುಡಿ ಮಧ್ಯದಿ| ಪಡೆಯೆ ಸ್ವತಂತ್ರ|| ಒಡಲಾಯ್ತೀತಗೆ| ಮೃಡನ ಸುಮಂತ್ರ ||ಅಪ||

ಮೂಲಾಧಾರದೊಳು | ತಾನೇ |

ಲೀಲಾ ಜಾಲದೊಳು ||

ಆಲಯ ಮಾಡುತ | ಏಳನೆ ನೆಲೆಯೊಳು||

ಮೂಲ ಬ್ರಹ್ಮ ಪದ| ತಾಳುತ ನಿಲ್ಲಲು ||1||

ಪ್ರಣವಾಂತ್ಯದಿ ನಿಂತು | ತಾನೇ|

ಘನ ಶಾಂತಿಯನಾಂತು||

ತನಗಿದಿರಿಲ್ಲದ | ಅನುಪಮ ಬ್ರಹ್ಮವ ||

ನೆನೆಯುತ ಬೆರೆದಾ| ಮನು ಮುನಿವಂದ್ಯನ ||2||

ಆಪೋ ಸ್ಥಾನದೊಳು| ಬೋಧಾ |

ರೂಪದ ಮಂತ್ರಗಳು ||

ಸ್ಥಾಪನೆಯಾಗಲು | ತಾಪಗಳಡಗಲು||

ಶ್ರೀಪತಿ ನರಹರಿ | ವ್ಯಾಪಿಸಿ ನಿಲ್ಲಲು ||3||

ಆತ್ಮ ವಿಚಾರವ ಮಾಡಮ್ಮಾ | ಪರ|

ಮಾತ್ಮನ ನಿನ್ನೊಳು ನೋಡಮ್ಮಾ ||ಪ||

ಸತ್ಯ ಸ್ವರೂಪವ ಕೂಡಮ್ಮಾ| ಗುರು|

ಸೂತ್ರವ ಬಿಟ್ಟಿರಬೇಡಮ್ಮಾ ||ಅಪ||

ಹಂಸನ ಸೆರೆಯನು ಹಿಡಿಯಮ್ಮಾ | ನಿ|

ಸ್ಸಂಶಯದರಿವನು ಪಡೆಯಮ್ಮಾ ||

ಹಂಸನ ತಿರುಗಿಸಿ ನೋಡಮ್ಮಾ | ಸೋ|

ಹಂಸುಧೆಯೊಳಗೀಜಾಡಮ್ಮಾ ||1||

ಸೋಹಂ ಭಾವವ ತಾಳಮ್ಮಾ | ದಾ|

ಸೋಹಂ ಸಿದ್ಧಿಸಿ ಬಾಳಮ್ಮಾ||

ಮೋಹದ ಬೇರನು ಕೀಳಮ್ಮಾ | ಸ|

ನ್ಮೋಹನ ಮಂತ್ರವ ಪೇಳಮ್ಮಾ ||2||

ಮಂತ್ರದೊಳಗೆ ಶಿವನುಂಟಮ್ಮಾ | ಸ|

ನ್ಮಂತ್ರವೆ ಶಿವನಿಗೆ ನಂಟಮ್ಮಾ ||

ಮಂತ್ರವೆ ನರಹರಿ ಗಂಟಮ್ಮಾ | ಸ್ವಾ|

ತಂತ್ರದ ಸುಖ ನಿನಗುಂಟಮ್ಮಾ ||3||

ಜ್ಞಾನ ಯೋಗವೆ ಸಹಜ ಯೋಗ| ಸು|

ಜ್ಞಾನದಿಂದಲೆ ನಿತ್ಯ ಮುಕ್ತಿ ಸಂಯೋಗ ||ಪ||

ಆನಂದ ಸಾಮ್ರಾಜ್ಯ ಭೋಗ| ತನ|

ಗೇ ನೊಂದು ಬೇಕಾಗದಿರುವ ವಿರಾಗ ||ಅಪ||

ವೀರ ವೈರಾಗ್ಯವಿರಬೇಕು| ಸಂ|

ಸಾರವಿದ್ದರೆ ಏನು ಮನ ಶುದ್ಧಿ ಸಾಕು||

ಯಾರಿಗೀ ಸನ್ಯಾಸ ಬೇಕು | ಸುವಿ|

ಚಾರ ಪರನಿಗೆ ವೇಷಭೂಷಣವೆ ತೊಡಕು ||1||

ಜ್ಞಾನವೆಂಬುದೆ ಸಹಜ ಯಜ್ಞ | ಅ|

ಜ್ಞಾನ ರೂಪದ ಪಶುವ ಕೊಲ್ಲುವ ಸೌಜ್ಞಾ||

ಧ್ಯಾನ ಮೌನದಿ ಪಾಪ ಭಗ್ನ | ಮಂ|

ತ್ರಾನು ಸಂಧಾನವೆ ಪರಶಿವ ನಾಜ್ಞಾ ||2||

ಎಲ್ಲರಿಗೆ ಸುಲಭ ವೀಯೋಗ| ತ|

ನ್ನಲ್ಲಿಯೆ ಶಿವನನ್ನು ತಿಳಿವ ಸುಯೋಗ||

ನಿಲ್ಲಲಾರದು ಭವ ರೋಗ| ಪರ|

ಮೋಲ್ಲಾಸ ನರಹರಿಯ ಬೋಧ ಸರಾಗ ||3||

ಈತ ನೋಡಿರಿ ರಾಜಯೋಗಿ | ನಿ|

ರ್ಭೀತನಾಗಿರುತಿರ್ಪ ಬ್ರಹ್ಮ ತಾನಾಗಿ ||ಪ||

ಜ್ಯೋತಿಯಂದದಿ ಬೆಳಕಾಗಿ| ಪರಿ|

ಪೂತನಾಗಿರುತಿರ್ಪ ಸುಜ್ಞಾನಿಯಾಗಿ ||ಅಪ||

ಮುಂದೇನು ಎಂದು ಚಿಂತಿಸನು | ಏ|

ನೊಂದು ಬಯಕೆಯ ಮಾಡದಂತಿರುತಿಹನು ||

ಬಂದದ್ದು ಉಂಡು ತೀರಿಪನು| ಭವ|

ಬಂಧತನಗಿಲ್ಲವೆಂದಳುಕದಂತಿಹನು ||1||

ಮಾನಾಭಿಮಾನಂಗಳಿಲ್ಲಾ| ಅಪ|

ಮಾನವೆಂಬುದು ಮನದೊಳು ಸುಳಿದಿಲ್ಲಾ ||

ಹಾನಿ ವೃದ್ಧಿಯನೆಣಿಸಲಿಲ್ಲಾ | ಪರ|

ಮಾನಂದ ಭಾವವ ಹೊಂದಿರಬಲ್ಲಾ ||2||

ಫಲ ಸಿದ್ಧಿ ಬಯಕೆಗಳಿಲ್ಲಾ | ನಿ|

ರ್ಮಲ ಬುದ್ಧಿಯೊಂದೆ ಈತನ ಸಿದ್ಧಿಯೆಲ್ಲಾ||

ಕುಲಜಾತಿ ಭೇದಂಗಳಿಲ್ಲಾ| ನಿ|

ಶ್ಚಲನಾಗಿ ನರಹರಿಯೊಳಿರುತಿರ್ಪನಲ್ಲಾ ||3||

ಲಿಂಗಾಂಗ ಸಮರಸದ | ಇಂಗಿತವ ಬಲ್ಲಂಥ |

ಜಂಗಮರು ನೀವ್ ಪೇಳಿರಣ್ಣಾ ||ಪ||

ಲಿಂಗವೆಲ್ಲಿರುತಿಹುದು| ಅಂಗವೆಲ್ಲಿರುತಿಹುದು |

ಜಂಗಮವದೆಲ್ಲಿರುವುದಣ್ಣಾ ||ಅಪ||

ಎಲ್ಲಿ ಬ್ರಹ್ಮನ ಪೀಠ| ಎಲ್ಲಿ ವಿಷ್ಣುವಿನಾಟ|

ಎಲ್ಲಿ ರುದ್ರನ ಪಾಠವಣ್ಣಾ ||

ಎಲ್ಲಿ ಪ್ರಣವದ ಕೂಟ| ಎಲ್ಲಿ ನಿರ್ಗುಣದೂಟ|

ಅಲ್ಲೆ ಜಂಗಮನಿರ್ಪನಣ್ಣಾ ||1||

ಗುರು ಕೊಟ್ಟ ಲಿಂಗವನು | ಧರಿಸಿಕೊಂಡಿಹುದೆಲ್ಲಿ|

ನಿರುತ ಪೂಜಿಸುವುದೆಂತಣ್ಣಾ ||

ಪರಶಿವನೊಳಗೆ ಜೀವ| ಬೆರೆದೈಕ್ಯವನು ಪಡೆವ|

ವರಮಂತ್ರವೆಲ್ಲಿರುವುದಣ್ಣಾ ||2||

ಪಂಚಲಿಂಗಗಳಲ್ಲಿ | ಪಂಚ ವಿಧ ಪೂಜೆಗಳ |

ಹಂಚಿ ಮಾಡುವುದ ಪೇಳಣ್ಣಾ ||

ಪಂಚಲಿಂಗವು ಕೂಡಿ| ಮಿಂಚಿ ಮಹಲಿಂಗದೊಳು |

ಹೊಂಚಿ ನರಹರಿಯ ಕೇಳಣ್ಣಾ ||3||

ನಿನ್ನ ನುಡಿ ವೇದವು ಪರಾನಾದವು||

ನಿನ್ನ ನಡೆಯಂದವು ನಿಜಾನಂದವು ||ಪ||

ನಿನ್ನ ನಿಜ ಬೋಧನೆ | ಯನ್ನ ಸುಖ ಸಾಧನೆ||

ನಿನ್ನ ಪದಾರಾಧನೆ| ಧನ್ಯತೆಯ ಶೋಧನೆ ||ಅಪ||

ನಾದಮಯವಾಗಿದೆ ನಿನ್ನ ಪಾದವು||

ವೇದ ಪ್ರಿಯವಾಗಿದೆ ನಿನ್ನ ಪಾದವು ||

ಭೇದಗುಣ ದೂರನೆ| ಬೋಧ ಸುಖ ಸಾರನೆ|

ಸಾಧು ಜನಾಧಾರನೆ| ನಾದದವತಾರನೆ ||1||

ಸಂಧಿಯಲಿ ನಿಂತಿದೆ ನಿನ್ನ ಪಾದವು ||

ಬಂಧನವ ಮೀರಿದೆ ನಿನ್ನ ಪಾದವು||

ಸುಂದರಕೆ ಸುಂದರ| ಎಂದಿ ಗತಿ ಬಂಧುರ||

ಹೊಂದಿದವ ಕಿಂಕರ| ಸಂಧಿಸುವ ಶಂಕರ ||2||

ಮಂತ್ರದೊಳಗಾಡಿತು| ನಿನ್ನ ಪಾದವು|

ಯಂತ್ರದೊಳು ಕೂಡಿತು|

ನಿನ್ನ ಪಾದವು || ತಂತ್ರಪರನಾಗಿಯೆ |

ನಿಂತ ಶಿವ ಯೋಗಿಯೆ||

ಸಂತರನುರಾಗಿಯೆ| ಸ್ವಾಂತ ಸುಖ ಭೋಗಿಯೆ ||3||

ಧ್ಯಾನ ಪ್ರಿಯವಾಗಿದೆ ನಿನ್ನ ಪಾದವು|

ಜ್ಞಾನಮಯವಾಗಿದೆ ನಿನ್ನ ಪಾದವು||

ಮೌನಿಗಳಿಗಾಶ್ರಯ| ದೀನ ಜನರಾಶಯ|

ವೇನಿರಲು ಈ ಯುವೆ | ಜ್ಞಾನಿಗಳ ಕಾಯುವೆ ||4||

ನಿನ್ನ ಪದ ಸೇವನ| ಸುಧಾ ಜೀವನ|

ಉನ್ನತದ ಭಾವನ | ಸದಾ ಪಾವನ||

ಪುಣ್ಯ ಯಶೋವಲ್ಲರೀ| ಉನ್ನತದೊಳೀ ಪರಿ|

ಇನ್ನು ಹರಡಲೈಸೀರೀ | ಚೆನ್ನ ಗುರು ನರಹರಿ ||5||

ನಾನೆಂಬುದಿಲ್ಲಾ | ನಿರ್ಗುಣದಲ್ಲಿ| ನೀನೆಂಬುದಿಲ್ಲಾ ||ಪ||

ಜ್ಞಾನ ಸ್ವರೂಪವೇ| ತಾನೇ ತಾನಾಯ್ತಲ್ಲ |

ಆನಂದ ಮಾತ್ರದ| ಧ್ಯಾನವಾಯ್ತಲ್ಲಾ ||ಅಪ||

ಗಂಡು ಹೆಣ್ಣಲ್ಲಾ | ನಿರ್ಗುಣ ಬ್ರಹ್ಮ| ಖಂಡತ್ವವಿಲ್ಲಾ |

ಗಂಡು ಹೆಣ್ಣುಗಳಲ್ಲಿ | ಕಂಡು ಬರುತಿಹುದಲ್ಲ|

ಅಂಡ ಕೋಟಿಗಳಲ್ಲಿ | ತಾಂಡವಗೊಳಬಲ್ಲ ||1||

ಕರಣಂಗಳಿಲ್ಲಾ| ನಿರ್ಗುಣದಲ್ಲಿ| ಸ್ಮರಣ ಮುನ್ನಿಲ್ಲಾ||

ಮರಣ ಜನನಗಳಿಲ್ಲ| ದುರಿತ ದುಃಖಗಳಿಲ್ಲ||

ಸುರ ನರಾದಿಗಳಿಲ್ಲ| ಶರೀರವೆನ್ನುವುದಿಲ್ಲ ||2||

ಸಗುಣಂಗಳಿಲ್ಲಾ | ನಿರ್ಗುಣದಲ್ಲಿ | ಜಗದಾಟವಿಲ್ಲಾ ||

ಮಿಗಿಲು ಸುಷುಪ್ತಿಯೊ| ಳಗಣಿತ ಬ್ರಹ್ಮವು |

ಜಗವೆಲ್ಲ ನುಂಗಿತ್ತು| ಸೊಗದಿ ನರಹರಿಯಾಗಿ ||3||

ನೋಡು ನಿನ್ನೊಳಗಾಡುತಿರುವಾ ಗೂಢ ಬ್ರಹ್ಮವಾ ||

ಅನುಭವ ಮಾಡು ಮರ್ಮವಾ ||ಪ||

ಲೋಕವೆಲ್ಲವನ್ನು ತುಂಬೀ | ಲೋಕ ಜೀವಿಗಳ ಕುಟುಂಬೀ||

ಏಕರೂಪನಾದನೆಂಬೀ| ವಾಕ್ಯ ಸತ್ಯವೆಂದು ನಂಬೀ ||1||

ಒಂದೆಯಾಗಿ ಹೊರಗೆ ಒಳಗೆ| ತಂದೆಯಾಗಿ ಜೀವಿಗಳಿಗೆ ||

ಬಂದು ಹಂಸನೆನಿಸಿ ಒಳಗೆ | ನಿಂದು ಸೋಹಮ್ಮೆನಿಸಿ ಹೊರಗೆ ||2||

ದೇವನಾಗಿ ಕಾಯ್ವನಾಗಿ| ಜೀವನಾಗಿ ಬೇಯ್ವನಾಗಿ||

ಭಾವವಾಗಿ ಕಾಯವಾಗಿ| ಸೇವೆಗೊಲಿವ ನರಹರಿಯಾಗಿ ||3||

ಸತ್ಯ ಸಾಧನೆ ಮಾಡಬೇಕಣ್ಣಾ| ನಿನ್ನೊಳಗೆ ಬ್ರಹ್ಮವ|

ನಿತ್ಯ ಶೋಧನೆ ಮಾಡಿ ನೋಡಣ್ಣಾ ||ಪ||

ಸತ್ಯವೇ ನಡೆ ಸತ್ಯವೇ ನುಡಿ| ಸತ್ಯ ಸಾಕ್ಷಾತ್ಕಾರವನೆ ಹಿಡಿ||

ನಿತ್ಯ ಬೋಧಾಮೃತವನೇ ಕುಡಿ| ಪ್ರತ್ಯಗಾತ್ಮನೊಳೈಕ್ಯವನು ಪಡಿ ||ಅಪ||

ನಾದ ಬಿಂದುವು ಕಳೆಯು ಮೂರಣ್ಣಾ| ಇವು ಕೂಡಿದಾಗಲೆ |

ವೇದ ಮಂತ್ರವು ಬೋಧೆಯಾಯ್ತಣ್ಣಾ ||

ಆದಿ ಮೂಲದ ಬ್ರಹ್ಮವೇ ಪರ|

ನಾದದಲ್ಲಿಯೇ ಗೋಚರಿಸಿ ವರ||

ವೇದ ಮಂತ್ರಗಳಾಗಿ ವಿಸ್ತರ| ವಾದ ಕಳೆಯಾಯ್ತೆಂಬ ನಿರ್ಧಾರ ||1||

ಅರ್ಧ ಮಾತ್ರೆಯ ಕೂಡಬೇಕಣ್ಣಾ| ಅದರಲ್ಲೆ ನಿರ್ಗುಣ|

ಶುದ್ಧ ಬ್ರಹ್ಮವ ನೋಡಬೇಕಣ್ಣಾ||

ಇದ್ದ ಮಾತ್ರೆಗಳೆಲ್ಲವಿದರೊಳ|

ಗಿದ್ದು ತೋರುತ ಲಯಿಸಿ ಕೊನೆಯೊಳ||

ಗಿದ್ದು ಬೆಳಗುತ್ತಿಹುದು ನಿರ್ಮಲ| ಶುದ್ಧ ಚೇತನಯಲ್ಲಕಿದು ಬಲ ||2||

ಬಿಡದೆ ಓಂಕಾರವನು ಜಪಿಸಣ್ಣಾ| ಕೊನೆಯನ್ನು ಸೇರುತ|

ದೃಢದಿ ಝೇಂಕಾರದೊಳು ಮುಳುಗಣ್ಣಾ||

ಪಡೆದ ಕರ್ಮಗಳೆಲ್ಲ ಪೋಪವು|

ತಡೆಯಲಾರದು ನಿನ್ನ ಪಾಪವು||

ಒಡಲ ಭ್ರಾಂತಿಗಳೆಲ್ಲ ಲೋಪವು| ಒಡೆಯ ನರಹರಿ ಬ್ರಹ್ಮ ರೂಪವು ||3||

ಬೋಧಾಮೃತ ಸಾರ|

ಬಾಧಿಸಲಾರದು ಸಂಸಾರ ||ಪ||

ಪೊಡವಿಯೆ ಮೂಲಾಧಾರ|

ನಡೆವುದು ಹಂಸನ ಸಂಚಾರ ||1||

ಜಲವೇ ಸ್ವಾಧಿಷ್ಠಾನ|

ನೆಲಸಿದೆ ಮಂತ್ರಾನುಷ್ಠಾನ ||2||

ಅಗ್ನಿಯೆ ಮಣಿ ಪೂರಕವು|

ಯೆಜ್ಞಾಹುತಿಗಳ ಸ್ಮಾರಕವು ||3||

ವಾಯುವನಾಹತ ಕಮಲ|

ಮಾಯೆಯ ಗೆಲ್ಲಲು ಪಾಯಬಲ ||4||

ಅಂಬರದಲ್ಲಿ ವಿಶುದ್ಧಿ|

ಶಂಭುವನರಿಯಲು ಸಂಸಿದ್ಧಿ ||5||

ಚಂದ್ರನೊಳಾಜ್ಞಾ ಚಕ್ರ|

ಇಂದ್ರಿಯ ರಹಿತಾತ್ಮನೊಳೈಕ್ಯ ||6||

ತರಣಿ ಸಹಸ್ರಾರದೊಳು|

ಪರತರ ನರಹರಿ ಕಿರಣಗಳು ||7||

ಸಪ್ತ ಚಕ್ರ ಸಂಚಾರಿ|

ಗುಪ್ತದೊಳಿಹ ನರಹರಿ ಶೌರಿ ||8||

ಜಯ ಭಾರತೀ| ವಾ| ಙ್ಮಯ ಮೂರುತೀ ||ಪ||

ದಯದಿಂದ ಹೃದಯಾಬ್ಜವನು ಸೇರುತೀ|

ಚಿ| ನ್ಮಯಳಾಗಿ ಶೃತಿ ಸಾರವನು ಸಾರುತೀ ||ಅಪ||

ನವಿಲೇರುವೆ| ನಯ| ನವ ಸೇರುವೇ|

ನವರಸ ಶೃಂಗಾರವನು ತಾಳುವೇ|

ಸ| ತ್ಕವಿ ವಾಕ್ಯದೊಳು ಬಂದು ಮೈದೋರುವೇ ||1||

ವರ ಹಂಸನಾ | ಬಂ| ಧುರ ವಾಹನಾ|

ವಿರಮಿಸುತ್ತೇರಿದೆ ಜಿಹ್ವಾಸನಾ |

ವಿ| ಸ್ತರ| ಮಂತ್ರಕೋಟಿಗೆ ಸಂಜೀವನಾ ||2||

ವಚನಾಮೃತ | ಘನ| ರಚನಾಯುತ|

ಪ್ರಚುರಳೆಂದೆನಿಸುತ್ತ ಶೃತಿ ಸಮ್ಮತಾ |

ಬಲು| ರುಚಿಗೈವೆ ನರಹರಿಯ ಬೋಧಾಮೃತಾ ||3||

ಹರಿಪಾದದೊಳು ಪುಟ್ಟಿದಾಕಾಶಗಂಗಾ |

ಹರಿದೇರಿಬಿಟ್ಟಳು ಹರನುತ್ತಮಾಂಗ ||ಪ||

ಹರಿದಿಳಿಯುತಿರ್ದಳು ಪಾತಾಳ ಗಂಗಾ |

ಧರಣಿ ಜೀವರಿಗಾಗಿ ಜೀವನ ಗಂಗಾ ||ಅ|ಪ||

ಗುಪ್ತಗಾಮಿನಿ ಲೋಕ ಪಾವನಗಂಗಾ |

ಸಪ್ತ ಚಕ್ರಗಳಂತರಂಗದ ಗಂಗಾ ||

ಆಪ್ತ ಭಕ್ತರಿಗಾಗಿ ಸುಜ್ಞಾನ ಗಂಗಾ |

ಲಿಪ್ತಳಾಗದೆ ಹರಿವಳಂತರಗಂಗಾ ||1||

ತ್ರಿಪಥ ಗಾಮಿನಿಯಾದ ಗಂಗಾ ವಿಲಾಸ |

ಸುಪಥವು ಶ್ರವಣ ಮನನ ನಿಧಿಧ್ಯಾಸ ||

ಅಪರೋಕ್ಷ ಜ್ಞಾನಕ್ಕೆ ತಾನೇ ಪ್ರಕಾಶ |

ವಿಪುಲಾರ್ಥ ಪ್ರಣವ ರಹಸ್ಯ ನಿರ್ದೇಶ ||2||

ತಾನೆ ತಾನಾದಂಥ ಸುಜ್ಞಾನ ಲಹರೀ |

ಆನಂದವೀಯುವ ಪ್ರಜ್ಞಾ ವಿಹಾರೀ ||

ಶ್ರೀನರಹರೀಂದ್ರನ ಆಜ್ಞಾಧಾರಿ |

ಧ್ಯಾನ ಮೌನವ ಸೇರಿ ಹರಿಯೆ ಮೈದೋರಿ ||3||

ಜಗಜೀವನ ಪಾವನ ದೇವನ ಪರಶಿವನಾ |

ನೆನೆವೆನಾ ||ಪ||

ಸುಗಮ ಮಂತ್ರಾ ನಿಗಮ ತಂತ್ರಾ | ಅಗಣಿತ ಬ್ರಹ್ಮವೆ

ಸೊಗಸಿದ ಸ್ವಾತಂತ್ರಾ | ನಿಶ್ಚಿತಾ ||1||

ಭಕ್ತಿ ಭಾವಾಯುಕ್ತ ಸೇವಾ | ಮುಕ್ತಿಗೆ ಕಾರಣ

ಶಕ್ತಿ ನಿಜಾನುಭವಾ | ವೈಭವಾ ||2||

ಧ್ಯಾನ ಬಲಿಯೇ ಜ್ಞಾನ ಸುಳಿಯೇ |

ಆನಂದಾಮೃತ ಮಳೆಯೇ ಧರೆಗಿಳಿಯೇ | ತಾಳಿಯೇ ||3||

ತನುವ ಮರೆತು ಮನವು ಬೆರೆತು |

ಘನಸುಖ ಶಾಂತಿಯು ಯನ್ನೊಳು ನೆಲೆ ನಿಂತು ಬೆಳಗಿತು ||4||

ಒಂದು ವರ್ಣದಿಂದ ಪೂರ್ಣಾ |

ಚಂದದಿ ನರಹರಿ ನಿಂದನು ಪರಿಪೂರ್ಣ | ನಿರ್ಗುಣಾ ||5||

ಮನಸಿಜನೈಯನ | ಮನದೊಳು ಧ್ಯಾನಿಸೆ |

ಮನಸಿಜ ದೇವತೆಯೆನಿಸುವನು ||ಪ||

ಮನದೊಳು ಸದ್ಗುಣ | ಜನಿಸುತಲಿರ್ಪವು |

ಮನಸತ್ಕಾಮನೆಗೆಳಸುವುದು ||ಅ|ಪ||

ಮನಸಿಜನೈಯನ | ನೆನೆಯದೆಯಿದ್ದರೆ |

ಮನಸಿಜ ಕೋಪವ ತಾಳುವನು ||

ಮನದೊಳು ದುರ್ಗುಣ | ಗಣಜನಿಸಿರ್ಪವು |

ಮನದುಷ್ಕಾಮನೆಗೆಳಸುವುದು ||1||

ಮನಸಿಜ ವೈರಿಯ ಮನದೊಳು ಧ್ಯಾನಿಸೆ |

ಮನ ವೈರಾಗ್ಯವ ತಾಳುವುದು ||

ಮನಸಿಜ ದೇವನು | ಮನನ ವಿಚಾರದಿ|

ಅನುಭಾವದೊಳನುವಾಗುವನು ||2||

ಮನಸಿಜ ವೈರಿಯ ನೆನೆಯದೆ ಇದ್ದರೆ |

ಮನಸಿಜ ಮತ್ಸರಗೊಳ್ಳುವನು ||

ಮನದೊಳು ಮೋಹವು ಜನಿಸುತಲಿರ್ಪುದು |

ಮುನಿ ನರಹರಿಯೇ ಮುನಿಸುವನು ||3||

ಅತಿಥಿಯೆ ದೇವರು ನೋಡಮ್ಮ | ಬಂ |

ದತಿಥಿಯ ಪೂಜೆಯ ಮಾಡಮ್ಮ ||ಪ||

ಶೃತಿಮತ ತಾನಿದು ಕೇಳಮ್ಮ | ನಿ |

ಶ್ಚಿತ ಸದ್ಭಾವವ ತಾಳಮ್ಮ ||ಅ|ಪ||

ಹರಿಹರ ಬ್ರಹ್ಮೇಂದ್ರಾದಿಗಳು | ನಿಂ |

ದಿರುತಿಹರತಿಥಿಯ ರೂಪದೊಳು||

ಸುರರನು ಪೂಜಿಪ ರೀತಿಯೊಳು | ಕಿಂ |

ಕರಭಾವದೊಳಿರು ಪ್ರೀತಿಯೊಳು ||1||

ಹಸಿದವರಿಗೆ ನೀಡನ್ನವನು | ಸಂ |

ತಸದಿಂ ಶಿವನದನುಣ್ಣುವನು||

ತೃಷೆಗೊಂಡವರಿಗೆ ನೀರನ್ನು | ಕೊಡು |

ಪಶುಪತಿ ಸುಖ ನಿನಗೀಯುವನು ||2||

ಕುರುಡರು ಕುಂಟರು ಮೂಕರಿಗೆ | ಉಪ |

ಚರಿಸಿದರೊಲಿವನು ಶಿವ ನಿನಗೆ ||

ಕರುಣಾಮಯರಾಗಿರ್ಪರಿಗೆ | ನರ |

ಹರಿಯೀವನು ಮುಕ್ತಿಯ ಕೊನೆಗೆ ||3||

ಮಳೆರಾಯನೆ ಬಾರೈ | ಲೋಕಕೆ | ಕಳೆಯನು ನೀ ತಾರೈ ||ಪ||

ನಲಿಯುತ ಬಾರೈ| ವೊಲುಮೆಯ ತೋರೈ||

ಇಳೆಯನು ಸಾರೈ| ಬಲು ಸುಖ ಬೀರೈ ||ಅ|ಪ||

ಹಗಲಿರುಳನು ತಾಪ | ಜೀವರು | ದಿಗಿಲಾದರು ಪಾಪ||

ಜಗವಿದು ಲೋಪವು | ಜಗಕಿದು ಶಾಪವು |

ಭಗವದ್ರೂಪನೆ | ಸೊಗಸು ಪ್ರತಾಪವ ||1||

ಗುಡುಗಿನ ಗರ್ಜನೆಯ | ಕೇಳ್ವೆವು | ಸಿಡಿಲಿನ ಆರ್ಭಟವ||

ಸಡಗರದೊಳು ಬಾ| ಜಡಿಮಳೆ ಸುರಿ ಬಾ |

ಕಡುಬರವೆಲ್ಲವ | ನಡಗಿಸಿ ನಿಲ್ಲುವ ||2||

ಮೇಘದ ಸೈನ್ಯವನು | ಕೂಡುತ | ನೀಗಿಸು ದೈನ್ಯವನು ||

ಈಗಲೆ ಬಾರೈ| ಬೇಗನೆ ತೋರೈ ||

ಶ್ರೀಗುರು ನರಹರಿ | ಯಾಗಿಯೆ ಸಾರೈ ||3||

ಕೇಳು ಪಂಚೀಕರಣವಾ | ನೀ | ತಾಳು ನಿರ್ಮಲ ಜ್ಞಾನವಾ ||ಪ||

ಸ್ಥೂಲ ದೇಹವಪೊಂದು ತಾ ಶಿವ | ಲೀಲೆಗೈಯುವ ಮರ್ಮವಾ ||ಅ|ಪ||

ಶುದ್ಧ ಬ್ರಹ್ಮದಿ ಶಬಲ ಪುಟ್ಟಿತು | ಶಬಲದಿಂದ ವ್ಯಕ್ತವು||

ವೃದ್ಧಿಸಿದುದವ್ಯಕ್ತದಲ್ಲಿಯೆ | ಮಹತ್ತತ್ವವು ಯುಕ್ತವು ||1||

ಹೊದ್ದಿದಾ ಮಹತತ್ವದಿಂದಲೆ | ಬದ್ಧ ತಾಹಂಕಾರವು ||

ಉದ್ಧರಿಸಿತದರಲ್ಲಿ ತ್ರಿಗುಣವು ಎದ್ದು ತೋರುತಲಿರ್ಪವು ||2||

ಸತ್ವರಾಜಸ ತಾಮಸಂಗಳು | ತ್ರಿಗುಣಮಾಗಿರುತಿರ್ಪವು||

ಮತ್ತೆ ಮೂರಿವು ಪಂಚಕನ್ಮಾತ್ರೆಗಳ ಸೃಷ್ಟಿಯಗೈದವು ||3||

ಶಬ್ದ ಸ್ಪರ್ಶವು ರೂಪರಸ ಗಂಧಗಳೆ ಈ ತನ್ಮಾತ್ರೆಯು||

ಲಬ್ಧವಾದುವು ಗಗನ ಮಾರುತವಗ್ನಿ ಜಲಧರೆ ಭೂತವು ||4||

ಗಗನದರ್ಧವೆ ಜ್ಞಾತೃವಾಯಿತು ಗಗನದುಳಿದರ್ಧಾಂಶವು ||

ಮಿಗೆ ಚತುರ್ಭಾಗಂಗಳಾಗುತ ಬೇರೆ ಭೂತವ ಸೇರಲು ||5||

ಸೊಗಸಿ ಮನ ಬುದ್ಧಿಗಳು ಚಿತ್ತಾಹಂ ಕೃತಿಗಳೆಂದೆನಿಪವು ||

ಗಗನ ಪಂಚಕವೆನಿಸಿ ಮೆರೆದುವು ಜ್ಞಾತೃಪಂಚಕ ತಾನಿವು ||6||

ಮಾರುತಾರ್ಧವು ದಾನವಾಯಿತು ಮಾರುತದೊಳುಳಿದರ್ಧವು

ತೋರಿ ನಾಲ್ಕು ವಿಭಾಗವಾಗುತ ಬೇರೆ ಭೂತವ ಸೇರಲು ||7||

ಚಾರುವ್ಯಾನ ಸಮಾನ ಪ್ರಾಣಾಪಾನವೆನ್ನಿಸಿಕೊಂಡವು |

ಮಾರುತದ ಪಂಚಕವು ಪ್ರಾಣ ಪಂಚಕವು ಎಂದೆನಿಪವು ||8||

ಅಗ್ನಿಯರ್ಧವೆ ಚಕ್ಷುವಾಯಿತು ಅಗ್ನಿಯೊಳಗುಳಿದರ್ಧವು

ವಿಘ್ನವಿಲ್ಲದೆ ನಾಲ್ಕು ಭಾಗಗಳಾಗಿ ಬೇರೆಯ ಭೂತವ ||9||

ಲಗ್ನವಾಗುತ ಶ್ರೋತ್ರ ಚರ್ಮವು ಜಿಹ್ವೆ ಘ್ರಾಣಗಳಾದುವು

ಅಗ್ನಿ ಪಂಚಕವಿವುಗಳೇ ಜ್ಞಾನೇಂದ್ರಿಯಂಗಳು ನೋಡಲು ||10||

ಜಲದೊಳರ್ಧವೆರಸವು ಎನಿಸಿತು ಜಲದೊಳುಳಿದರ್ಧಾಂಶವು

ತಿಳಿ ಚತುರ್ಭಾಂಗಗಳಾಗುತ ಉಳಿದ ಭೂತವ ಸೇರಲು ||11||

ಬಲಿದು ಶಬ್ದವು ಸ್ಪರ್ಶರೂಪವು ಗಂಧವೆನಿಸುತ ಮೆರೆದುವು ||

ಜಲದ ಪಂಚಕವಿವುಗಳೇ ತಾಂ ವಿಷಯ ಪಂಚಕವಾದುವು ||12||

ಪೃಥ್ವಿಯರ್ಧವೆ ಗುದವು ಎನಿಸಿತು ಪೃಥ್ವಿಯಲ್ಲುಳಿದರ್ಧವು ||

ಮತ್ತೆ ನಾಲ್ಕು ವಿಭಾಗವಾಗುತ ಬೇರೆ ಭೂತವ ಬೆರೆದುದು ||13||

ನಿತ್ಯ ವಾಕ್ಕುವು ಪಾಣಿಪಾದವು ಗುಹ್ಯವೆನ್ನಿಸಿತೋರ್ದುದು ||

ಪೃಥ್ವಿ ಪಂಚಕವಿವುಗಳೇ ಕರ್ಮೇಂದ್ರಿಯಂಗಳು ಎನಿಸುತ ||14||

ಸೃಷ್ಟಿಯಾಧೀಶ್ವರನ ಜಗವಿದು | ಸ್ಪಷ್ಟವಾಗಿಯೆ ವೃದ್ಧಿ ಹೊಂದಿ ||

ಶ್ರೇಷ್ಠ ಶಿವನೊಳಗೈಕ್ಯ ಹೊಂದುವುದೆಂದು ನರಹರಿ ತೋರಿದ ||15||

ಹಬ್ಬವು ಬಂದರೆ ಸಾಕಮ್ಮ | ಬಲು |

ನಿಬ್ಬರ ನಿನಗಿರಬೇಕಮ್ಮ ||ಪ||

ಒಬ್ಬರ ಗೊಡವೆಯು ಯಾಕಮ್ಮ | ನಿ |

ನ್ನೊಬ್ಬಳ ಅಡಿಗೆಯೆ ಝೋಕಮ್ಮಾ ||ಅ|ಪ||

ತನುವೇ ಹೊರ ಮನೆ ಕಾಣಮ್ಮ | ಈ |

ಮನವೇ ಒಳ ಮನೆ ತಾನಮ್ಮ ||

ಮನೆ ಹೊರಗೊಳಗೆನಬೇಡಮ್ಮಾ | ನೀ |

ನನುಮಾನದ ಕಸ ನೂಕಮ್ಮ ||1||

ಕರಣದ ಪಾತ್ರೆಯ ತೊಳೆಯಮ್ಮ | ದು |

ಸ್ತರ ವಿಷಯದ ಕೊಳೆ ಕಳೆಯಮ್ಮ ||

ನಿರುತ ಶ್ರವಣ ಸಾಹಿತ್ಯಮ್ಮಾ | ಹೊಂ|

ದಿರುವನುಭವ ಪಾಕವೆರಮ್ಯಾ ||2||

ವಿಷಯದ ಗೋಧಿಯ ಬೀಸಮ್ಮ | ನಿ |

ರ್ವಿಷಯ ವಿಧಾನದಿ ಸೋಸಮ್ಮ ||

ವ್ಯಸನದ ಬೇಳೆಯ ಬೇಸಮ್ಮ | ಮಾ|

ಡಸಿಪದ ಹೋಳಿಗೆ ಲೇಸಮ್ಮಾ ||3||

ಧ್ಯಾನದ ಹಾಲನು ಹಾಕಮ್ಮಾ | ಸು|

ಜ್ಞಾನದ ತುಪ್ಪವು ಬೇಕಮ್ಮಾ ||

ಮೌನದ ಮೊಸರನು ನೀಡಮ್ಮ | ಸು|

ಮ್ಮಾನದೊಳೂಟವ ಮಾಡಮ್ಮಾ ||4||

ಶರಣರ ನೀ ಕರೆದುಣಿಸಮ್ಮ | ನಿ |

ರ್ಧರದನುಭವದೊಳು ದಣಿಸಮ್ಮ ||

ನರಹರಿ ನಾಮವ ನುಡಿಯಮ್ಮ | ದು |

ಸ್ತರ ಸಂಸಾರವೆ ಕಡೆಯಮ್ಮಾ ||5||

ತಂಗಿ ನೋಡೀ ಶಿವಯೋಗಿ | ಭವ |

ಭಂಗವ ಮಾಡಿದ ನಿಜವಾಗೀ ||ಪ||

ಜಂಗಮ ರೂಪನು ತಾನಾಗೀ | ನಿ |

ಸ್ಸಂಗದ ಕಾವಿಯ ತೊಡಲಾಗೀ ||ಅ|ಪ||

ಕೇಳಿದುದಿರಿಸಿದ ಜೋಳಿಗೆಗೆ | ತಾ |

ಕೇಳುವುದನು ಬಿಡನರಘಳಿಗೆ ||

ಕೇಳುವುದೇ ತನ್ನೇಳಿಗೆಗೆ | ನಿಜ |

ಕೇಳಿಯೊಳಾನಂದಿಪನೊಳಗೆ ||1||

ನಡೆಯೆನ್ನುವ ಬೆತ್ತವ ಪಿಡಿದಾ | ಸ |

ನ್ನಡೆಯಲ್ಲಿಯೆ ನಿತ್ಯವು ನಡೆದಾ ||

ನುಡಿಯ ಕಮಂಡಲವನು ಪಡೆದಾ | ಸ |

ನ್ನುಡಿಯೊಳು ಶಿವನನು ಸೆರೆ ಹಿಡಿದಾ ||2||

ಜ್ಞಾನದ ರುದ್ರಾಕ್ಷಿಯ ಮಾಲೆ | ಸಂ |

ಧಾನದಿ ಧರಿಸಿದ ಕಂಠದೊಳೇ ||

ಧ್ಯಾನದ ಜಪಸರ ಧರಿಸುತಲೇ | ನಿಜ |

ಮೌನದಿ ನರಹರಿಯೆನಿಸುತಲೇ ||3||

ತನುವೆಂಬ ತಿಪ್ಪೆಯ | ತನಗಾಗಿ ಕೂಡಿದ ತಿಪ್ಪೇರುದ್ರ ||ಪ||

ತನುಮಿಥ್ಯವೆಂದು ತ | ನ್ನನು ತಾನೆ ತಿಳಿದಾತ ತಿಪ್ಪೇರುದ್ರ ||ಅ|ಪ||

ಒಡಲೆಂಬ ಮಾರಿಯ | ಗುಡಿಯೊಳಗಿರುವಾತ ತಿಪ್ಪೇರುದ್ರ ||

ಒಡಲಲ್ಲೆ ಮೃಢನ ಸಂ | ಗಡ ಮೆರೆದಾತನೆ ತಿಪ್ಪೇರುದ್ರ ||1||

ಶರೀರವೆನ್ನುವ ಮಾದಿ | ಗರ ಮನೆಯೊಳಗುಂಡ ತಿಪ್ಪೇರುದ್ರ ||

ಶರೀರದಿ ಪರಮೇ | ಶ್ವರನನ್ನು ಕಂಡಾತ ತಿಪ್ಪೇರುದ್ರ ||2||

ಚಿತ್ತವೆನ್ನುವ ಎಮ್ಮೆ | ಸತ್ತರೂ ಪಾಲ್ಗರೆದ ತಿಪ್ಪೇರುದ್ರ ||

ಚಿತ್ತ ನಷ್ಟವ ತುಂಬಿ | ಸುತ್ತ ಜ್ಞಾನವನಿತ್ತ ತಿಪ್ಪೇರುದ್ರ ||3||

ಐದಿಂದ್ರಿಯಗಳೆಂಬ | ಐದು ಕೆರೆ ಕಟ್ಟಿಸಿದ ತಿಪ್ಪೇರುದ್ರ ||

ಐದು ಕೆರೆ ತುಂಬಿ ಬರಿ | ದಾದುದ ತಾ ಕಂಡ ತಿಪ್ಪೇರುದ್ರ ||4||

ನಾಯಕನಹಟ್ಟಿಗೆ | ನಾಯಕನು ತಾನಾದ ತಿಪ್ಪೇರುದ್ರ ||

ಮಾಯಾರಹಿತ ಜಗ | ನ್ನಾಯಕ ನರಹರಿಯೆ ತಿಪ್ಪೇರುದ್ರ ||5||

ಶ್ರೀ ಗುರು ಮುಷ್ಟೂರೇಶ್ವರ ಸ್ವಾಮಿ|

ಯೋಗಿವರೇಣ್ಯನೆ ನಿಷ್ಕಾಮಿ ||ಪ||

ನಾಗಲಿಂಗ ಶಿವಯೋಗಿ ಮಹಾತ್ಮನೆ |

ಬೇಗನೆ ಕರುಣಿಸು ಮುಕ್ತಿಯನೆ ||ಅ|ಪ||

ಬ್ರಹ್ಮಜ್ಞಾನ ಸುಧಾ ರಸಪಾನವ |

ನೆಮ್ಮದಿಯಾಗಿಯೆ ಕೊಡುತಿರುವ ||

ನಿರ್ಮಲ ಮೌನವ ನಿಮ್ಮಯ ಧ್ಯಾನವ|

ನೆಮ್ಮೊಳು ಕೃಪೆ ಮಾಡೈ ದೇವಾ ||1||

ವಾದಗಳಿಲ್ಲದ ಬೋಧೆಯ ಮಾಡುತ |

ಛೇದಿಸು ದುಷ್ಕರ್ಮವನಿರುತ ||

ಮೇದಿನಿಯೊಳು ಸುವಿನೋದದಿ ಚರಿಸುತ |

ನಾದಾನಂದದೊಳಗೆ ಬೆರೆತ ||2||

ಯೋಗ ಕುಂಭಕದಲ್ಲಿ ಮೆರೆವೇ ಸರ್ವ |

ಯೋಗಿಗಳ ದಾತಾರ ನೀನೆನ್ನಿಸಿರುವೆ ||

ಭೋಗ ಯೋಗವ ಕೂಡಿ ಬರುವೆ | ನೀನೆ |

ರಾಗವಿರಾಗ ಪ್ರಯೋಗಗಳ ತರುವೆ ||3||

ನಡೆನುಡಿಗಳ ನಡುವೆಡೆಯೊಳು ನಿನ್ನನು |

ಹಿಡಿದವರಿಗೆ ಸಿಕ್ಕುವೆ ನೀನು ||

ಕಡು ಸುಖಿ ನರಹರಿಯೆನ್ನಿಸಿ ಜಗವನು | ಬಿಡದೇ

ಸಲಹುವ ಗುರು ನೀನು ||4||

ಬಡಿವಾರವ್ಯಾತಕೋ ಬಡ ಜೀವವೇ ||ಪ||

ಸುಡುಗಾಡು ಹತ್ತಿರ ಬರಲೋಡುವೇ ||ಅಪ||

ನಿತ್ಯವು ಮೃತ್ಯುವು ಹತ್ತಿರುವುದು ಬೆನ್ನು |

ಮೃತ್ಯುಂಜಯನ ನೆನೆ ನೀನಿನ್ನು ||1||

ಕಾಲ ಬಂದಾಕ್ಷಣ | ನಿಲ್ಲದರೆಕ್ಷಣ |

ಕಾಲಕಾಲನ ನೆನೆದರೆ ರಕ್ಷಣ ||2||

ದೇಹವ ನಂಬಿದೆ | ಮೋಹವ ತುಂಬಿದೆ |

ಸಾಹಸ ಮಾಡಲು ಉಳಿದುಕೊಂಬುದೆ ||3||

ರೋಗರುಜಿನ ಯಾ | ವಾಗಲು ಕಾದಿವೆ |

ಭೋಗದಾಸೆಗೆ ಬಡಿದಾಡುವೆ ||4||

ದುಃಖ ದಾರಿದ್ರ್ಯವು ಲೆಕ್ಕವೆ ಇಲ್ಲದೆ |

ತೆಕ್ಕೆ ಬಿದ್ದಿಹುದರಿವಿಲ್ಲದೆ ||5||

ಹುಟ್ಟಿದೆ ಕಾಲನ | ಬಿಟ್ಟಿಯ ತೀರಿಸೆ |

ಅಟ್ಟಿ ಕೊಲ್ಲುವ ನರಿಯೆಲೊ ಕೂಸೆ ||6||

ಮದನನ ಪಾಶವು | ವಿಧಿಯ ವಿಲಾಸವು |

ಒದಗಿ ಬಂದಿತು ಬಲು ದೋಷವು ||7||

ಯಾರು ನಿನಗೆ ಗತಿ | ತೋರುವರಿಲ್ಲವು |

ಸೇರು ನರಹರಿ ಪದ ಭಯವಿಲ್ಲವು ||8||

ಬಂದುದೆಲ್ಲ ಉಣ್ಣದೇ ತೀರಲಾರದು ||ಪ||

ತಂದುದೆಲ್ಲ ತೀರದೇ ಸಾವು ಬಾರದು ||ಅಪ||

ಎಂದು ಸಾವು ತಪ್ಪದು | ಮುಂದೆ ಜನ್ಮ ಬರ್ಪುದು ||

ಬಂಧದಲ್ಲಿ ಇರ್ಪುದು | ತಂದೆಗುರುವಿಗೊಪ್ಪದು ||

ದೇಹ ತಾನೆಯೆಂಬುದೇ ಬಂಧವಾಗಿದೆ||

ದೇಹ ಮೋಹ ಬಿಟ್ಟುದೇ ಮೋಕ್ಷವಾಗಿದೆ ||

ದೇಹ ತನ್ನದೆನ್ನದೇ | ಮೋಹಗೊಂಡು ಸಾಯದೆ ||

ಸೋಹಮೆಂಬ ಭಾವದೇ | ದೇಹ ನೀಗಲಾಗದೇ ||1||

ಮನ ಸೇರಿನಿಂದರೇ ಬಂಧವಾಗಿದೆ ||

ಮನ ಮೀರಿ ಹೋದರೇ ಮೋಕ್ಷ ತಾನಿದೆ ||

ಮನದ ಚೇಷ್ಟೆ ತನ್ನನು | ಕುಣಿಸಿದಾಗ ಬಂಧವು ||

ಜನನ ಮರಣ ತಪ್ಪಲು | ಮನದಿ ಮಂತ್ರವೊಪ್ಪಲು ||2||

ಕರ್ಮ ಕೋಟಿಯಿಂದಲೂ ಮುಕ್ತಿಯಾಗದು ||

ಧರ್ಮ ದಾನ ತಪಗಳಿಂ ಜನ್ಮ ನೀಗದು||

ನಿರ್ಮಲಾತ್ಮಜ್ಞಾನವೇ | ಜನ್ಮ ದುಃಖಹಾರಿಯು||

ನಮ್ಮ ನರಹರೀಂದ್ರನೇ | ಕರ್ಮ ದೂರಮಾಳ್ಪನು ||3||

ಹುಚ್ಚನಾಗಬೇಡೋ | ದೇಹವ |

ನೆಚ್ಚಿ ನೀಗಬೇಡೊ ||ಪ||

ಮುಚ್ಚಿ ಮಾಯ ಮೋಹ | ಹೆಚ್ಚಿ ಬಂದ ದಾಹ |

ಹಚ್ಚಿಕೊಂಡು ಬಡಿದಾಡಬೇಡೋ ||ಅಪ||

ಮಕ್ಕಳು ನಿಜವೇನೊ | ನಿನ್ನಯ |

ರೊಕ್ಕವು ಸ್ಥಿರವೇನೊ ||

ಸೊಕ್ಕಿನಿಂದ ಕುಣಿದು | ದುಃಖದಿಂದ ದಣಿದು ||

ಸಿಕ್ಕಿ ನೊಂದು ಮಿಡುಕಾಡಬೇಡೊ ||1||

ಸತಿಯ ನಂಬಬೇಡೊ | ಮಕ್ಕಳೆ |

ಗತಿಯು ಎನ್ನಬೇಡೊ ||

ಅತಿಥಿ ಯಮನು ಕಾಲ | ಗತಿಯ ಕಾಯುತಿಹನು |

ಮತಿಯೊಳೀಗ ಶಿವ ಧ್ಯಾನವ ಮಾಡೊ ||2||

ಮಾಡಿದಡಿಗೆಯುಂಬೆ | ನೆನ್ನುತ |

ಬೇಡಿಕೊಳಲು ಯಮನು||

ಗಾಡ ಎಳೆದು ಒಯ್ವ | ಪಾಡು ಕಂಡು ಬೈವ |

ನೋಡು ನೋಡು ನರಹರಿಯೇ ಕಾಯ್ವ ||3||

ಬಾರಮ್ಮ ಈ ಜಾತ್ರೆ | ಸೇರಿ ಕೋಮಲಗಾತ್ರೆ ||ಪ||

ಮೂರೇ ದಿನ ನಡೆದ ಜಾತ್ರೆ | ಸೇರದು ಮತ್ತೆ ||ಅಪ||

ಒಂದು ದಿನ ಬಾಲ್ಯದಲಿ | ಒಂದು ದಿನ ಪ್ರಾಯದಲಿ ||

ಒಂದು ದಿನ ಮುಪ್ಪಿನಲಿ | ಸಂದಿತ್ತು ಜಾತ್ರೆ ||1||

ವ್ಯಾಪಾರ ಬಹಳುಂಟು | ಕಾಪಟ್ಯವಿಹುದುಂಟು ||

ಜೋಪಾನ ನಿನ್ನ ಗಂಟು | ಕಾಪಾಡು ತಂಗಿ ||2||

ಕಳ್ಳರಲ್ಲಲ್ಲಿದ್ದು | ಉಳ್ಳ ಒಡವೆಯ ಕದ್ದು ||

ಎಲ್ಲಿ ಹುಡುಕಲು ಸಿಕ್ಕ | ರಲ್ಲಮ್ಮ ತಂಗಿ ||3||

ಹಗಲುಗಳ್ಳರ ಕಾಟ | ಮಿಗಿಲಾದ ಪುಂಡಾಟ ||

ದಿಗಿಲು ಬೀಳದೆ ಜತೆ | ಯಗಲದಿರಮ್ಮ ||4||

ಬಲು ಎಚ್ಚರಿರಬೇಕು | ತಿಳಿವು ಹೆಚ್ಚಿರಬೇಕು |

ತಿಳಿದಂಥ ಮಾನ್ಯರ | ಕಲೆತಿರಬೇಕು ||5||

ಎಷ್ಟೋ ದಿನಗಳು ಕೂಡಿ | ಸಿಟ್ಟದ್ದು ವ್ಯಯ ಮಾಡಿ ||

ಕಟ್ಟಕಡೆಗೆ ಜಾತ್ರೆ | ಬಟ್ಟಬಯಲಮ್ಮ ||6||

ತೇರು ಬಂದಿತು ಸಾಗಿ | ತೀರ ವೇಗದಿ ಹೋಗಿ||

ದೂರ ಪಾದದ ಕಟ್ಟೆ | ಸೇರಿತು ಮತ್ತೆ ||7||

ದೇವರನು ನೀ ನೋಡಿ | ಭಾವ ಭಕ್ತಿಯ ಕೂಡಿ |

ಸೇವೆ ಸಲ್ಲಿಸು ಹೋಗು | ಪಾವನಳಾಗು ||8||

ಗುರು ಪಾದ ಹಿಡಿಯಮ್ಮ | ಪರಮಾರ್ಥ ಪಡೆಯಮ್ಮ |

ಕರುಣಾಳು ನರಹರಿಯ | ಮೊರೆ ಬೀಳಮ್ಮ ||9||

ಬಿಡಬೇಡ ಸಂಸಾರ | ಮೋಹ | ಇಡಬೇಡ ನಿಸ್ಸಾರ ||ಪ||

ಕಡು ಲೋಭದೊಳು ಕೂಡಿ | ಕೆಡಲೇಕೆ ಮತಿಗೇಡಿ ||

ಒಡಲಾಸೆಗಳ ರೂಢಿ | ಯಿಡಲಾತ ಕುಲಗೇಡಿ ||ಅ|ಪ||

ತನುವೊಂದೆ ಸಂಸಾರವು | ಬೇರೆ | ನಿನಗಿಲ್ಲ ಸಂಸಾರವು ||

ಮನವೆಂಬ ಸತಿಯಲ್ಲಿ | ಘನ ವಿಷಯ ರತಿಯಲ್ಲಿ |

ತನಯರಾದರು ಮೋಹ | ಗುಣಗಣದ ಸಂದೋಹ ||1||

ಇಂದ್ರಿಯಂಗಳುಯೆಂಬ | ನಿನ್ನ | ಬಂಧುಬಳಗವು ತುಂಬ ||

ತಂದು ಹಾಕಿದುದೆಲ್ಲ | ತಿಂದು ಕೂತಿಹರಲ್ಲ ||

ಮುಂದೇನು ಗತಿಯೆಂಬ | ಸಂದೇಹವೇಯಿಲ್ಲ ||2||

ಕಿಕ್ಕಿರಿದ ಸಂಸಾರವು | ಇಲ್ಲಿ | ಸಿಕ್ಕಿದ್ದೆ ಬಲು ಭಾರವು ||

ಲೆಕ್ಕವಿಲ್ಲದೆ ತಿಂದು | ಸೊಕ್ಕಿರುವರಿವರಿಂದು ||

ಲೆಕ್ಕ ಮಾಡಿಯೆ ನೂಕು | ದಿಕ್ಕು ನರಹರಿಯೆಂದು ||3||

ಅಪ್ಪಣೆಗಳ ಮೀರುತ | ತನಗೆ | ಸೊಪ್ಪು ಹಾಕದೆ ಜಾರುತ ||

ಉಪ್ಪುಂಡ ಮನೆಯನ್ನು | ಮುಪ್ಪು ಮಾಡುವರಿನ್ನು ||

ದರ್ಪದಿಂ ನಡೆಯುತ್ತ | ಲಿರ್ಪವರನು ನೋಡಿ ||4||

ಎಲ್ಲ ಬಿಟ್ಟವನಾಗಿ | ಅಡವಿ | ಯಲ್ಲಿ ಸೇರಿದ ಯೋಗಿ ||

ಎಲ್ಲ ತನ್ನಯ ದೇಹ | ದಲ್ಲೆ ಇರುತಿರಲಾಗಿ ||

ಎಲ್ಲಾ ಬಿಟ್ಟೆನು ಎಂಬು | ದೆಲ್ಲಾ ತಾ ಸುಳ್ಳಾಗಿ ||5||

ಸಂಸಾರದೊಳಗಿದ್ದು | ತಾನೆ | ಸಂಶಯಂಗಳ ಗೆದ್ದು ||

ಹಂಸ ಸ್ವರೂಪಾಗಿ | ಹಿಂಸೆಯೆಂಬುದ ನೀಗಿ ||

ಸಂಸೃತಿ ಬಿಡಲಾಗಿ | ಸಂಸಾರಿ ನಿಜಯೋಗಿ ||6||

ಅಂಟಿ ಅಂಟಿದ ರೀತಿ | ಯೊಳಿರುತ | ಜಂಟಿಯಾಗಿಯೆ ಸೇರುತ ||

ತುಂಟರೆಲ್ಲರನಳಿದು | ಕಂಟಕಂಗಳ ಕಳೆದು |

ಒಂಟಿ ನರಹರಿ ಪಾದ | ಕ್ಕಂಟಿ ನಿರ್ಮಲನಾಗಿ ||7||

ಮರುಳಾಗಬೇಡಾ | ಸಂಸಾರದೊಳು |

ಹುರುಳಿಲ್ಲ ಮೂಢಾ ||ಪ||

ಹರಣ ಸುಸ್ಥಿರವಲ್ಲ | ಮರಣವು ಬಿಡಲಿಲ್ಲ |

ಬರಿದೆ ನಂಬಿದೆಯಲ್ಲ | ಮರವೆ ಮುಚ್ಚಿದೆಯಲ್ಲ ||ಅಪ||

ನಾರಿಯರ ಮೋಹ | ಸಂಸಾರದು | ಸ್ಸಾರ ಪ್ರವಾಹ ||

ಮೇರೆ ಮೀರಿದ ದಾಹ | ತೀರದಾತ್ಮದ್ರೋಹ ||

ದಾರಿಯಿದು ಸನ್ನಾಹ | ದೂರವಿಡು ಸಂದೇಹ ||1||

ತನು ನಿತ್ಯವಲ್ಲಾ | ನೀ ನಂಬಿರುವ |

ಮನ ಸತ್ಯ | ವಲ್ಲಾ || ಧನ ನಿನ್ನದೆನ್ನಲಾ | ಧನ ನಿನಗಿರಲಿಲ್ಲಾ ||

ಕೊನೆಗೆ ಬರಿ ಬತ್ತಲೆ | ನಿನಗಾಯಿತಲ್ಲಾ ||2||

ಸುತರ ನಂಬಿರುವೇ | ಕೊನೆಗಾಲಕ್ಕೆ |

ಗತಿಯೆನ್ನುತಿರುವೇ ||ಸುತರಿಗಾಗಿಯೆ ನಾನಾ | ವ್ಯಥೆಪಟ್ಟು ದುಡಿಯುವೆ |

ಸುತರಿಂದ ಬರುವದು | ರ್ಗತಿಯ ನೀನರಿಯೆ ||3||

ಬಂಧು ಬಳಗಗಳು | ನಿನ್ನವಸರಕೆ |

ಬಂದವರೆ ಪೇಳು|| ಬಂಧಿಸಿರ್ಪರು ನಿನ್ನ | ಮುಂದೆ ಜನ್ಮಾಂತರಕೆ |

ತಂದು ಹಾಕುತಲಿರ್ಪ | ರೆಂದು ತಿಳಿಯದೆ ವ್ಯರ್ಥ ||4||

ಗುರು ತಾಯಿತಂದೆ | ಬಂಧುವು ಬಳಗ |

ಗುರು ಮಿತ್ರನೆಂದೇ || ಗುರುವನ್ನು ನೆರೆ ನಂಬಿ | ಪರಮಾರ್ಥವನು ಪಡೆದು ||

ಪರಮ ಸುಖಿಯಾಗು ಶ್ರೀ | ನರಹರಿಯನು ಬೆರೆದು ||5||

ಏನೇನಾಗುವುದಾಗುತಲಿರಲೀ |

ಮೌನದಿ ಧ್ಯಾನವು ಸಾಗಿರಲೀ ||ಪ||

ಆನಂದಕೆ ಚ್ಯುತಿಯಿಲ್ಲದೆಯಿರಲೀ |

ಜ್ಞಾನವು ವೃದ್ಧಿಯನೈದಿರಲೀ ||ಅ|ಪ||

ಬಂದದ್ದೆಲ್ಲವು ಬರುತಿರಲೀ | ಗೋ |

ವಿಂದನ ದಯ ನಮಗಿರುತಿರಲೀ ||

ಎಂದಿಗು ಸಮತಾ ಭಾವನೆಯಿರಲೀ |

ದ್ವಂದ್ವವ ಮೀರುತ ಬೆಳಗಿರಲೀ ||1||

ಮಾನವು ಹೋಗಲಿ ಪ್ರಾಣವೆ ಹೋಗಲಿ ||

ಬೇನೆ ಬೇಸರಿಕೆ ಬಂದಿರಲೀ ||

ಹೀನನೆಂದು ಜನ ಬೈಯುತಲಿರಲೀ||

ಜ್ಞಾನವು ನಿಶ್ಚಲವಾಗಿರಲೀ ||2||

ಹೆಂಡತಿ ಸಾಯಲಿ ಮಕ್ಕಳು ಬೈಯಲಿ ||

ಕಂಡವರೆಲ್ಲರು ನಿಂದಿಸಲೀ ||

ಗೊಂಡಾರಣ್ಯದಿ ಹುಲಿ ತರುಬಿರಲೀ ||

ಖಂಡಿತ ಜ್ಞಾನದಿ ಮನವಿರಲೀ ||3||

ಜಾರಿಣಿ ಪತಿಯೊಳು ಸೇರುತ ವಿಟನ ವಿ|

ಚಾರವ ಮನದೊಳು ನೆನೆವಂತೆ ||

ಸೇರಿದ ಈ ಸಂಸಾರದೊಳಿದ್ದರು |

ಮೀರುತನೆನೆ ಈಶನ ನಿಂತು ||4||

ನಾನಾ ರೋಗವು ದುಃಖ ವ್ಯಸನಗಳು |

ದೀನ ದರಿದ್ರವು ಮೇಲ್ಬರಲಿ ||

ಶ್ರೀ ನರಹರಿ ಗುರು ಧ್ಯಾನವ ಮಾಡುವ

ಸ್ವಾನುಭವದ ಸುಖ ತನಗಿರಲಿ ||5||

ಇಂಥ ಗಂಡನ ಸೇರಿ | ಎಂತು ಬಾಳಲಿ ನಾರಿ ||ಪ||

ನಡೆಯ ತಪ್ಪಿದ ರಾಗ | ಹಿಡಿದು ಕೊಯ್ದನು ಮೂಗ ||

ನುಡಿ ತಪ್ಪಿದರೆ ಬೇಗ | ಜಡಿದ ಬಾಯಿಗೆ ಬೀಗ ||1||

ನಡೆನುಡಿ ತಪ್ಪಲಿನ್ನು | ಹಿಡಿದ ಕುತ್ತಿಗೆಯನ್ನು ||

ಒಡಲಿನಾಸೆಗಳೆಲ್ಲ | ಬಿಡಿಸಿ ಕೂತಿಹನಲ್ಲ ||2||

ಯೋಗಿಯಾಗಿಹನಂತೆ | ಭೋಗವ ಬಿಡದಂತೆ ||

ರಾಗರಹಿತನಂತೆ | ರಾಗದಿ ಬಹನಂತೆ ||3||

ಏನು ಮಾಡಲು ತಪ್ಪು | ಹೀನ ಜನ್ಮವು ಮುಪ್ಪು ||

ಮಾನಾಭಿಮಾನವ | ಹಾನಿ ಮಾಡಿದನವ್ವ ||4||

ಈತಗೆ ಮನ ಸೋತೆ | ಮಾತಿಗೆ ಮರುಳಾಂತೆ ||

ಪ್ರೀತಿಗೆ ವಶಳಾದೆ | ಭೀತಿಗೆ ಹೊರಗಾದೆ ||5||

ಹಗಲು ರಾತ್ರಿಯು ಯನ್ನ | ಅಗಲದಿರ್ಪನು ಚೆನ್ನ |

ಸೊಗಸುಗಾರನ ಕಂಡು | ಬೆಗಡುಗೊಂಡೆನು ಇಂದು ||6||

ಕಂಡು ಕಾಣಿಸದಿದ್ದು | ಗಂಡುಗಲಿಗಳ ಗೆದ್ದು ||

ಪುಂಡನೆನ್ನಿಸುತ್ತಿದ್ದ | ಗಂಡ ನರಹರಿ ಶುದ್ಧ ||7||

ಕುರಿಯ ಹಿಕ್ಕೆಯ ಲಿಂಗವಾ | ತಾ |

ನಿರಿಸಿ ಪೂಜೆಯ ಮಾಡುವಾ ||ಪ||

ಶರಣ ಗೊಲ್ಲಾಳಯ್ಯಗೈವಾ |

ಕುರಿಯ ಪಾಲಭಿಷೇಕವಾ ||ಅ|ಪ||

ಇವನ ತಂದೆಯು ಕಂಡನು | ಕೋ |

ಪವನು ತಾಳುತ ಬೈದನು ||

ಜವದಿ ಲಿಂಗವ ಕಾಲಲೊದೆದನು |

ಶಿವನ ಪೂಜೆಯ ತಡೆದನು ||1||

ವೀರ ಗೊಲ್ಲಾಳಯ್ಯನು | ಸಂ |

ಹಾರಗೈದನು ಪಿತನನು ||

ವೀರ ಭಕ್ತಿಗೆ ಮೆಚ್ಚಿದೀಶನು |

ಸಾರಿ ಮುಕ್ತಿಯನಿತ್ತನು ||2||

ಕರಣ ಕುರಿಗಳ ಹಿಂಡನು | ಸಾ|

ಕಿರುವ ಜೀವನೆ ಗೊಲ್ಲನು ||

ಕರಣ ಕುರಿಗಳ ವಿಷಯ ಮೇವನು |

ನಿರುತ ಮೇಯಿಸಬಲ್ಲನು ||3||

ಕರಣ ಕುರಿ ಮೇಯುತ್ತ ಹಾಕುವ |

ಮೆರೆವ ಹಿಕ್ಕೆಯಿದನುಭವಾ||

ಸ್ಮರಣ ಮಾತ್ರದಿ ಮುಕ್ತಿಯೀಯುವ |

ಹರನ ಲಿಂಗವಿದೇ ಶಿವಾ ||4||

ಕರಣ ಕುರಿಗಳು ಮೇಯುತ ಕರೆ |

ದಿರುವುದೇ ಬೋಧಾಮೃತಾ||

ಕುರಿಯ ಹಿಕ್ಕೆಗೆ ಕುರಿಯ ಪಾಲ |

ನ್ನೆರೆವುದೇ ಪೂಜಾವ್ರತಾ ||5||

ಗುರುವು ಕೊಟ್ಟಿರುವನುಭವಾ | ಸುಂ |

ದರ ಪರಾತ್ಪರ ಲಿಂಗವಾ ||

ಗುರುವು ಮಾಡಿದ ಬೋಧೆಯಾ | ಪಾ |

ಲೆರೆದು ಮಾಡಿರಿ ಪೂಜೆಯಾ ||6||

ಅನುಭವದ ಶಿವಲಿಂಗದಾ | ಅ |

ರ್ಚನೆಗೆ ಅಡ್ಡಿಯ ಮಾಡಿದಾ ||

ಘನ ಪುರಾಕೃತ ಕರ್ಮದಾ | ಬಂ|

ಧನದ ಪಿತನನು ಕೊಲ್ಲಿದಾ ||7||

ಕುರಿಯ ಹಿಕ್ಕೆಯ ಪೂಜೆಯಾ | ನಿ |

ರ್ಧರಿಸಿ ಮುಕ್ತಿಯ ದಾರಿಯಾ||

ನರ ಹರೀಂದ್ರನು ಪೇಳಿದಾಶಯ |

ವರಿಯುವಾತ ನಿರಾಮಯಾ ||8||

ಶಿವ ಕೊಟ್ಟ ಕಣ್ಣನ್ನು | ಶಿವನಿಗೆ ಕೊಟ್ಟವನು |

ಶಿವಭಕ್ತ ಶ್ರೇಷ್ಠನು ಕಣ್ಣಪ್ಪನು ||ಪ||

ಸವಿಯ ಮಾಂಸವ ತಂದು | ಶಿವನಿಗರ್ಪಿಸಿ ನಿಂದು |

ಶಿವನೆ ಸಲ್ಲಿಸು ಎಂದು ಬೇಡಿದನು ||ಅಪ||

ತನ್ನ ತಲೆಯೊಳಗಿದ್ದ | ಪರ್ಣಪೂಗಳೆ ಶುದ್ಧ |

ವೆನ್ನುತಾ ಶಿವಲಿಂಗಕರ್ಪಿಸಿದಾ ||

ತನ್ನ ಬಾಯಿಯ ಜಲವು | ಪುಣ್ಯಾಭಿಷೇಕವು |

ಎನ್ನುತಾ ಶಿವನ ಮೇಲುಗುಳಿದಾ ||1||

ಅಡವಿ ಲಿಂಗವ ಕಂಡ | ದೃಢಭಕ್ತಿ ಕೈಕೊಂಡ |

ಮಡಿ ಮೈಲಿಗೆಯ ಭೇದ ಕಳಕೊಂಡ ||

ಮೃಢನೆ ಮೂಲೋಕದ | ಒಡೆಯ ಪಾಲಿಸು ಎಂದ|

ಬಡಿವಾರವಿಲ್ಲದ ಭಕ್ತಿಯಿಂದಾ ||2||

ಹರನ ಕಣ್ಣೊಳು ನೀರು | ಸುರಿಯುತಿಪುದ ಕಂಡು |

ಹರ ನಿನಗಾಯಿತೆ ಕಣ್ಣು ನೋವು ||

ಸರಿಯಾದ ಕಣ್ಣೆನ | ಗಿರುವುದು ಕೊಳ್ಳೆಂದು |

ಹರನಿಗಿತ್ತನು ತನ್ನ ಕಣ್ಣು ಕಿತ್ತು ||3||

ಕಣ್ಣಪ್ಪ ತನಗಿದ್ದ | ಕಣ್ಣು ಶಿವನಿಗೆ ಕೊಟ್ಟು |

ಧನ್ಯನಾದನು ನೋಡಿ ಜಗದಲ್ಲಿ ||

ಕಣ್ಣಪ್ಪ ಶಿವಲೋಕ | ವನ್ನು ಪೊಂದಿದನಲ್ಲ |

ಕಣ್ಣು ಶಿವಗೀಯಬಲ್ಲವ ಮುಕ್ತನು ||4||

ಕಣ್ಣಿಂದ ಕಂಡುದ | ತನ್ನದೆಂದೆನ್ನದೆ |

ಕಣ್ಣು ಕಾಂಬುದೆ ಶಿವನ ಪುಣ್ಯ ರೂಪ ||

ಎನ್ನುತ್ತಾ ನಿಷ್ಕಾಮ | ವನ್ನು ಹೊಂದಿರಬೇಕು |

ಪುಣ್ಯ ನರಹರಿ ಪಾದವನು ಸೇರಿ ||5||

ವ್ಯವಸಾಯ ಮಾಡುವೆವಲ್ಲಾ | ನಮ್ಮ |

ವ್ಯವಸಾಯವಾಧಾರ ಭೂಚಕ್ರಕೆಲ್ಲಾ ||ಪ||

ವ್ಯವಹಾರ ದೂರರು ನಾವು | ನಮ್ಮ |

ವ್ಯವಸಾಯ ವ್ಯವಹಾರಕೆಲ್ಲ ಕಾರಣವು ||ಅಪ||

ಎಲ್ಲ ವಿದ್ಯೆಗೆ ಮೂಲ ವಿದ್ಯೆ | ದುಡಿಯ |

ಬಲ್ಲಂಥ ಜನರಿಗೆ ತಾನಿದು ಸಾಧ್ಯ ||

ಬಲ್ಲ ಜಾಣರಿಗಿದು ವೇದ್ಯ | ಕೊರತೆ |

ಯಿಲ್ಲದ ಸಂಪತ್ತು ಶ್ರಮದಿಂದ ಸಾಧ್ಯ ||1||

ಮನ ಬುದ್ಧಿ ಎರಡೆತ್ತು ಹೂಡಿ | ಸ್ಥೂಲ |

ತನುವೆಂಬ ಹೊಲದಲ್ಲಿ ವ್ಯವಸಾಯ ಮಾಡಿ ||

ಪ್ರಣವ ಕೂರಿಗೆಯನ್ನು ಕೂಡಿ | ವರ್ಣ |

ವೆನಿಪ ಬೀಜಗಳನ್ನು ಬಿತ್ತನೆ ಮಾಡಿ ||2||

ಇಳೆಯಮ್ಮನಣುಗರು ನಾವು | ನಮ್ಮ |

ಕುಲದೈವ ಮಳೆರಾಯ ವರವಿತ್ತ ಬಲವು ||

ಚಲಿಸುವ ಮಾರುತನೊಲವು | ಸೂರ್ಯ |

ಕಳೆಯಿಂದ ನಮಗುಂಟು ಸಕಲ ಸಂಪದವು ||3||

ಗುರುಭಕ್ತಿ ಬೇಲಿಯ ಕಟ್ಟಿ | ನುಗ್ಗಿ |

ಬರುವ ದುರ್ಗುಣ ಪಶುಗಳ ತಡೆಗಟ್ಟಿ ||

ಕರಣ ವೃತ್ತಿಯ ಖಗವನಟ್ಟಿ | ಹುಟ್ಟಿ |

ಬರುವ ಸಂಶಯ ಕಳೆಗಳ ಕಿತ್ತು ಒಟ್ಟಿ ||4||

ಬಲರಾಮದೇವನಾಯುಧವು | ನಮ್ಮ |

ಬಲವು ಹೆಚ್ಚುವುದಕ್ಕೆ ನೇಗಿಲಾಸ್ಪದವು ||

ಇಳೆಯಲ್ಲಿ ನಡೆವ ನೇಗಿಲವು | ಕೊಟ್ಟ |

ಫಲದಿಂದ ಜೀವನ ನುಡಿಗಸದಳವು ||5||

ಗೋಪಾಲಕರು ಕೃಷ್ಣನಂತೆ | ನಾವು |

ಭೂಪಾಲಕರು ರಾಮಚಂದಿರನಂತೆ ||

ಕಾಪಟ್ಯರಹಿತರು ಚಿಂತೆ | ಎಂಬ |

ಆಪತ್ತು ನಮಗಿಲ್ಲ ಯೋಗಿಗಳಂತೆ ||6||

ಶ್ರವಣವೆನ್ನುವುದೆ ಗೊಬ್ಬರವು | ಮನನ |

ಹವಣು ಮಾಡಿದ ವ್ಯವಸಾಯ ನಿಬ್ಬರವು ||

ಶಿವನಿಧಿ ಧ್ಯಾಸಾನುಭವವು | ನಮ್ಮ |

ಭವದೂರ ನರಹರಿ ಕೊಟ್ಟ ಸತ್ಫಲವು ||7||

ಗೊಬ್ಬರ ಇದರ ನಿಬ್ಬರ ||ಪ||

ಕಂಡು | ಅಬ್ಬರಿಸುತ ಬಂದ | ಹೆಬ್ಬರವೋಡಿತು ||ಅ|ಪ||

ತಿಪ್ಪೆ ಎಂಬುದು ಕಸದ | ಕುಪ್ಪೆ ಎಂಬುದು ವಿಶದ ||

ತಿಪ್ಪೆಯೀಜಗಕನ್ನ | ತಪ್ಪದೀಯುವುದಣ್ಣ ||1||

ಬೇಕಿಲ್ಲದುದ ಕೂಡಿ |ಹಾಕಿರಾಶಿಯ ಮಾಡಿ||

ಹಾಕಲೀ ಭೂಮಿಗೆ | ಬೇಕಾದ ಫಲ ನಮಗೆ ||2||

ಕಸವರಸ | ಗೈಯುವ | ಹಸನಾದ ಬೆಳೆಯೀವ ||

ಹೆಸರಾದ ಗೊಬ್ಬರವು | ವಸುಧೆಗೆ ಪಾವನವು ||3||

ಮನವೆಂಬುದೇ ಹೊಲವು |ಮನನ ಬೇಸಾಯವು ||

ಅನುಭವ ಗೊಬ್ಬರವು | ಘನನಿಧಿ ಧ್ಯಾಸವು ||4||

ವಿಷಯಂಗಳೆನ್ನುವ | ಕಸವನ್ನು ಕೂಡಿಸುವ ||

ಹೊಸ ಜ್ಞಾನ ಬೆಳೆಯೀವ | ಹಸನುಗೊಬ್ಬರಗೈವ ||5||

ಗುರುಕರುಣೆ ಮಳೆಯಾಯ್ತು | ದುರಿತ ಕಳೆಗಳು ಹೋಯ್ತು ||

ಪರಮಾರ್ಥ ಬೆಳೆಯಾಯ್ತು | ನರಹರಿಗರ್ಪಿತವಾಯ್ತು ||6||

ಎತ್ತಿನ ಹಬ್ಬವ ಮಾಡು | ಎತ್ತಿಗೆ ಪೂಜೆಯ ಮಾಡು ||ಪ||

ಪೃಥ್ವಿಯ ಹೊತ್ತು | ನಡೆಯುವ ಎತ್ತು |

ನಿತ್ಯದ ಸಂಪತ್ತು ||ಅ|ಪ||

ಶಿವನದು ಎತ್ತು | ಶಿವನೆಮಗಿತ್ತು |

ಭವವನೆ ಕಿತ್ತು | ವಿವರಿಸುತಿತ್ತು ||

ಶಿವ ಸಂಪತ್ತು | ಸವೆಯದೆ ಹೊತ್ತು | ಅವಿರಳ ತಾನಾಯ್ತು ||1||

ನೇಗಿಲು ಹೊತ್ತು | ಸಾಗುತಲಿತ್ತು |

ನೇಗಿಲು ಹೊಡೆದ | ಯೋಗಿಗೆ ಗೊತ್ತು ||

ಈಗಲೆ ಬಂದು | ಹೋಗುವುದೆಂದು | ಬೇಗನೆ ತಿಳಿವಾಯ್ತು ||2||

ಜಗವನು ಹೆತ್ತು | ಯುಗಯುಗವಿತ್ತು |

ಹಗಲಿರುಳೊಂದೆ | ಬಗೆಯಲಿ ಬಂದೇ ||

ಸೊಗವನು ತಾಳಿ | ಜಗದಲಿ ಬಾಳಿ | ಮುಗಿಸಿತು ನಿಜ ಕೇಳಿ ||3||

ಬಲು ಮುದಿ ಎತ್ತು | ಬಲವಾಗಿತ್ತು |

ಅಳುಕದೆ ಹೊತ್ತು | ಎಳೆಯುತಲಿತ್ತು ||

ಬಳಲಿಕೆಯಿಲ್ಲ | ಕಳೆಯಿತು ಎಲ್ಲ | ಉಳುಮೆಯೆ ತಾನಾಯ್ತು ||4||

ವೇದದ ಮಂತ್ರ | ಸಾಧನ ತಂತ್ರ |

ಆದಿಯ ಸೂತ್ರ | ವಾದುದು ಮಾತ್ರ ||

ನಾದದೊಳಿಹುದು | ಶೋಧಿಸಬಹುದು | ಬೋಧೆಯೆ ತಾನಹುದು ||5||

ಮೂಲಾಧಾರ | ಲೀಲಾಪಾರ |

ಕಾಲಕೆ ದೂರ | ಶೂಲಿಯ ಸೇರಿ ||

ಬಾಳುವ ಎತ್ತು | ತಾಳಿ ಮಹತ್ತು | ಏಳನೆ ನೆಲೆಯಿತ್ತು ||6||

ಸತ್ತಾ ಮಾತ್ರ | ಪೃಥ್ವೀ ಸೂತ್ರ |

ಹೊತ್ತು ನಡೆಯುವ | ಎತ್ತಿನ ಮಹಿಮೆ ||

ತತ್ವಜ್ಞರಿಗೆ | ಗೊತ್ತಾಗಿಹುದು | ಮೃತ್ಯುಂಜಯನೊಲುಮೆ ||7||

ಧರ್ಮದ ರೂಪ | ನಿರ್ಮಿತವಪ್ಪ |

ಕರ್ಮ ಕಲಾಪ | ದುರ್ಮದ ಲೋಪ ||

ನಿರ್ಮಲ ಜ್ಞಾನ | ಮರ್ಮದ ಧ್ಯಾನ | ನಿರ್ಮಲ ಸಂಧಾನ ||8||

ಬಸವನ ನಾಮ | ವಸುಧೆಗೆ ಪ್ರೇಮ |

ಉಸುರಿದ ಬೋಧಾ | ಹೊಸದೀ ವೇದ ||

ಅಸಮಲ ಹರಿಯು | ವೃಷಭನ ಪರಿಯು |

ಋಷಿವರ ನರಹರಿಯು ||9||

ಕುಣಿಯುತ ಬಂದನು ನಟರಾಜ | ದಿನ |

ಮಣಿಯೊಲು ತೋರ್ಪನು ನವತೇಜಾ ||ಪ||

ದಣಿವಿಲ್ಲದೆ ಕುಣಿದನು ಸಹಜಾ | ಕಣ್ |

ಮಣಿಭಕ್ತರಿಗಿವ ಸುರಭೂಜಾ ||ಅಪ||

ಕುಣಿಯುತಲಿರ್ಪನು ಜಾಗ್ರದೊಳು | ತಾ |

ಕುಣಿಯದೆ ನಿಂತನು ನಿದ್ರೆಯೊಳು ||

ಕುಣಿವುದೆ ತಿಳಿಯದು ಸ್ವಪ್ನದೊಳು | ತನು |

ಗುಣಗಣಿಯೀತನು ನೇತ್ರದೊಳು ||1||

ನಿಲ್ಲದೆ ಕುಣಿವನು ಹಗಲಿರುಳು | ತಾ |

ನೆಲ್ಲವ ಕುಣಿಸುತ ಹೃದಯದೊಳು ||

ಎಲ್ಲರಿಗೊಬ್ಬನೆ ಲೋಕದೊಳು | ಶಿವ |

ನಿಲ್ಲವೆ ಸರ್ವರ ದೇಹದೊಳು ||2||

ಈತನು ಕುಣಿವುದ ಕಂಡವರು | ಯಮ |

ಯಾತನೆಯಿಲ್ಲದೆ ನಿಲ್ಲುವರು ||

ಈ ತನುವೇ ತಾನೆಂದವರು | ಭವ |

ಭೀತರು ನರಹರಿಯೆನದವರು ||3||

ಲಯಮೂರ್ತಿ ರುದ್ರನೇ ನಮ್ಮ ದೈವಾ ||

ದಯವುಳ್ಳ ದೇವನೂ ನಮ್ಮ ಕಾಯ್ವ ||ಪ||

ಕ್ರಿಯೆಗೆಲ್ಲ ಕಾರಣನಾದ ದೇವಾ |

ಭಯವಿಲ್ಲವೀತನ ಸೇವೆಗೈವಾ ||ಅ|ಪ||

ನಟರಾಜ ಕುಣಿಯುತ್ತ ಜಾಗ್ರವಾಯ್ತು |

ಘಟಕರ್ಮ ಮಾಡುತ್ತ ಶೀಘ್ರವಾಯ್ತು ||

ಕುಟಿಲಂಗಳಳಿಯಲ್ಕೆ ಮಾರ್ಗವಾಯ್ತು |

ನಟನೆಯಂ ನಿಲ್ಲಿಸಲು ಸುಪ್ತಿಯಾಯ್ತು ||1||

ಅಗ್ನಿಯೊಳು ತೇಜಿಸಿದ ದೇಹವನ್ನು |

ಪ್ರಜ್ಞೆಯೊಳು ರಾಜಿಸಿದ ಕರಣವನ್ನು ||

ಯಜ್ಞಾಹುತಿಗಳ ಕೈಕೊಂಡು ತಾನು |

ಸುಜ್ಞಾನ ವರವನ್ನು ಕೊಡುತಿರ್ಪನು ||2||

ಏನೊಂದು ತೋರದಂ | ತೆಲ್ಲ ಸುಟ್ಟ |

ಜ್ಞಾನ ಸ್ವರೂಪವಂ ತೋರಿಕೊಟ್ಟ ||

ಆನಂದ ಭಾವವಂ ಸೇರಿಬಿಟ್ಟ |

ತಾನಾಗಿ ನರಹರಿಯೇನು ಮುಟ್ಟ ||3||

ಹಸಿವುಯಿಲ್ಲದೆ ಊಟವು ಏಕೆ |

ತೃಷೆಯುಯಿಲ್ಲದೆ ಪಾನವು ಏಕೆ ||ಪ||

ಬಸಿರುಯಿಲ್ಲದೆ ಮಕ್ಕಳ ಬಯಕೆ ||

ವಸುಧೆಯೊಳು ಸುಖವಾಗದು ||ಅ|ಪ||

ಮೌನವಿಲ್ಲದೆ ಧ್ಯಾನವು ಇಹುದೇ |

ಧ್ಯಾನವಿಲ್ಲದೆ ಜ್ಞಾನವು ಬಹುದೇ ||

ಜ್ಞಾನವಿಲ್ಲದೆ ಮುಕ್ತಿಯಾಗುವುದೇ |

ದೀನನಾಗದೆ ಭಕ್ತಿ ಕೂಡುವುದೇ ||1||

ಪ್ರಸವ ದುಃಖವು ಬಂಜೆಗರಿವುದೇ |

ವ್ಯಸನದನುಭವ ಸನ್ಯಾಸಿಗಿಹುದೇ ||

ಪಶುವಿನಾರ್ತತೆ ಕಟುಕಗರಿವುದೇ |

ರಸಿಕನಾಶಯ ಮೂಢಗರಿವುದೇ ||2||

ಬಡವನನುಭವ ಬಲ್ಲಿದಗಿಹುದೇ |

ಕೆಡುಕರಾಟವು ಸುಜನರಿಗಹುದೇ ||

ಹುಡುಗರಾಟವ ಹಿರಿಯಗೊಪ್ಪುವುದೇ |

ಜಡರ ಬುದ್ಧಿಯು ನರಹರಿಗಹುದೇ ||3||

ಎಲ್ಲಿದೆ ಸ್ವರ್ಗವು | ಎಲ್ಲಿದೆ ನರಕವು ||ಪ||

ಎಲ್ಲವು ತನ್ನೊಳು | ಸಲ್ಲುವುವೆನ್ನಲು ||ಅ|ಪ||

ನೀತಿಯೆ ಸ್ವರ್ಗದು | ರ್ನೀತಿಯೆ ನರಕವು |

ಕೀರ್ತಿಯೆ ಸ್ವರ್ಗವಪ | ಕೀರ್ತಿಯೆ ನರಕವು ||1||

ಕಾಮವೆ ನರಕ ನಿ| ಷ್ಕಾಮವೆ ಸ್ವರ್ಗವು ||

ಕ್ಷಾಮವೆ ನರಕವು | ಕ್ಷೇಮವೆ ಸ್ವರ್ಗವು ||2||

ಜ್ಞಾನವೆ ಸ್ವರ್ಗವ | ಜ್ಞಾನವೆ ನರಕವು |

ಮಾನವೆ ಸ್ವರ್ಗಾಪ | ಮಾನವೆ ನರಕವು ||3||

ಸತ್ಯವೆ ಸ್ವರ್ಗವು | ಮಿಥ್ಯವೆ ನರಕವು |

ಪ್ರೀತಿಯೆ ಸ್ವರ್ಗವು | ಭೀತಿಯೆ ನರಕವು ||4||

ಸನ್ನಡೆ ಸ್ವರ್ಗವು | ದುರ್ನಡೆ ನರಕವು |

ಸನ್ನುಡಿ ಸ್ವರ್ಗವು | ದುರ್ನುಡಿ ನರಕವು ||5||

ಆಚಾರ ಸ್ವರ್ಗವ | ನಾಚಾರ ನರಕಾ |

ಗೋಚರಪಡಿಸುವ | ನರಹರಿದೇವಾ ||6||

ಪತಿತನು ನಾನಯ್ಯ | ಪತಿಕರಿಸೆನ್ನಯ್ಯ ||

ಹಿತರ ಕಾಣೆನು ಜೀಯ ಗತಿ ನೀನಯ್ಯ ||ಪ||

ಸತತ ನಿನ್ನಯ ಧ್ಯಾನ | ಮತಿಯೊಳು ಸಂಧಾನ |

ಕೃತಿಯೊಳಗಭಿಮಾನ ತ್ಯಾಗವೆ ಜ್ಞಾನ ||ಅ|ಪ||

ಬೆಳೆಯಿತು ಸಂಸಾರ | ಬಲವಾಯಿತು ಭಾರ ||

ಬಳಲಿದೆನೈಪೂರ | ಒಲವನು ತೋರಾ ||

ತಿಳಿದರೆ ನಿಸ್ಸಾರ | ತಿಳಿಯದು ಪರಿಹಾರ ||

ಕಳೆದವನೇ ಧೀರ | ಸುಲಭ ವಿಚಾರ ||1||

ರೋಗರುಜಿನದ ದುಃಖ | ಸಾಗರದೊಳು ಸಿಕ್ಕು |

ನೀಗಲಾರದ ಲೆಕ್ಕವಾಗಿದೆ ಪಕ್ಕಾ ||

ಭೋಗ ಭಾಗ್ಯಗಳಾಸೆ | ಹೋಗದೆ ಹೊರ ಸೂಸೆ |

ಆಗ ದುರ್ಗುಣ ದೋಷವಾಗಿಹುದೈಸೆ ||2||

ಮರೆತೆನು ನಿನ್ನನ್ನು | ಮರಣದ ಕಡೆ ನಾನು ||

ಹೊರಟೆನು ಯಮನೇನು ಕರುಣಿಸನಿನ್ನು ||

ನರಕವು ದೊರೆತಾಗ | ಮೊರೆಯಿಟ್ಟೆ ವಿರಾಗ |

ಕರುಣಿಸು ನೀನೀಗ | ನರಹರಿ ಬೇಗ ||3||

ಶರೀರ ಬಿಟ್ಟಿನ್ನು ನರಕ ಬೇರಿಹುದೇ |

ನರಕ ದುಃಖಕ್ಕೆ ಶರಿರ ಮೂಲವಿದೇ ||ಪ||

ನರರು ಹೊಂದಿದ್ದೆ ನರಕ ದುಃಖವಿದೇ |

ನರರ ಕಾಯಕ್ಕೆ ಮರಣ ಕಾದಿಹುದೇ ||ಅ|ಪ||

ರೋಗರುಜಿನಂಗಳಡಸಿಹುದೆ ನರಕಾ |

ಭೋಗವ್ಯಸನಗಳ ಹಿಡಿದಿಹುದೆ ನರಕಾ ||

ರಾಗದನುತಾಪ ಪಡುತಿಹುದೆ ನರಕಾ |

ಸಾಗಿ ಮರಣಕ್ಕೆ ಹೋಗುವುದೆ ನರಕಾ ||1||

ದುಡಿದು ದುಃಖಗಳ ಪಡೆದದ್ದು ನರಕಾ |

ಪಡೆದುದನು ಕೈಯ ಬಿಡಲೊಂದು ನರಕಾ ||

ಮಡದಿ ಮಕ್ಕಳಿಗೆ ಬೇಕೆಂಬ ನರಕಾ |

ಜಡತೆ ದೇಹಕ್ಕೆ ಹಿಡಿದದ್ದೆ ನರಕಾ ||2||

ಸಾಲ ಸೋಲುಗಳ ಚಿಂತೆಗಳೆ ನರಕಾ |

ಮೇಲುಕೀಳುಗಳ ಭ್ರಾಂತಿಗಳೆ ನರಕಾ ||

ಬಾಳು ಬದುಕುಗಳ ಕಂತೆಗಳೆ ನರಕಾ |

ಮೇಲೆ ನರಹರಿಯ ಮರೆತದ್ದೆ ನರಕಾ ||3||

ಭೋಗ ಹೆಚ್ಚಾದರೆ ರೋಗವಾಗುವುದೆಂದು ಹೊಡಿಯೊ ಡಂಗೂರ ||ಪ||

ರಾಗದಿಂದಲೆ ಜನ್ಮರೋಗ ಬಂದಿಹುದೆಂದು ಹೊಡಿಯೊ ಡಂಗೂರ ||ಅ.ಪ||

ಯೋಗದಿಂದೀ ಜನ್ಮರೋಗ ನೀಗುವುದೆಂದು ಹೊಡಿಯೊ ಡಂಗೂರ ||

ತ್ಯಾಗವೆನ್ನುವುದೆ ವೈರಾಗ್ಯ ಕಾರಣವೆಂದು ಹೊಡಿಯೊ ಡಂಗೂರ ||1||

ಜನಸೇವೆಯೇ ಜನಾರ್ಧನ ಪೂಜೆಯೆನ್ನುತ ಹೊಡೆಯೋ ಡಂಗೂರ ||

ಮನ ಶುದ್ಧಿಯಿಲ್ಲದೆ ಘನ ಮುಕ್ತಿಯಿಲ್ಲೆಂದು ಹೊಡಿಯೊ ಡಂಗೂರ ||2||

ಸತ್ಯವಿದ್ದವರಿಗೆತ್ತೆತ್ತಲು ಭಯವಿಲ್ಲ ಹೊಡಿಯೊ ಡಂಗೂರ ||

ನಿತ್ಯ ನೆನೆಯಲು ಶಿವನ ಮೃತ್ಯು ಭಯವಿಲ್ಲೆಂದು ಹೊಡಿಯೊ ಡಂಗೂರ ||3||

ಪರಹಿಂಸೆಯಿಂದಿಹಪರಸೌಖ್ಯವಿಲ್ಲೆಂದು ಹೊಡಿಯೊ ಡಂಗೂರ ||

ಪರರಿಗುಪಕಾರವೆ ನರಹರಿಗೆ ಪ್ರಿಯವೆಂದು ಹೊಡಿಯೊ ಡಂಗೂರ ||4||

ನೀತಿಯಿಂದಲೆ ನಡೆಯಿರಣ್ಣ | ಸ |

ನ್ನೀತಿಯೆಂಬುದೆ ಲೋಕ ಜ್ಯೋತಿ ಕಾಣಣ್ಣಾ ||ಪ||

ನೀತಿಲೋಕವನಾಳುತಿಹುದು | ದು |

ರ್ನೀತಿಯಿಂದಲೆ ಲೋಕ ನಾಶವಾಗುವುದು ||ಅ.ಪ||

ನೀತಿ ಸದ್ಗತಿಗೆ ಕಾರಣವು | ದು |

ರ್ನೀತಿ ದುರ್ಗತಿಯುಕ್ತಮಾದ ದುರ್ಗುಣವು ||

ನೀತಿ ಸತ್ಯಾಚಾರ ಮಾರ್ಗ | ಸ |

ನ್ನೀತಿಯೆಂಬುದೆ ನಿತ್ಯ ಸೌಖ್ಯದ ಸ್ವರ್ಗ ||1||

ನೀತಿಯಿದ್ದರೆ ಭೀತಿಯಿಲ್ಲಾ | ದು |

ರ್ನೀತಿಯಿದ್ದರೆ ಭೀತಿ ತಪ್ಪಿದುದಲ್ಲಾ ||

ನೀತಿಯಲ್ಲಿದೆ ಭಕ್ತಿಜ್ಞಾನ | ಸ |

ನ್ನೀತಿಯಲ್ಲಿದೆ ಸುವಿರಕ್ತಿ ಸಂಧಾನ ||2||

ನೀತಿ ಪರಮಾತ್ಮನಿಗೆ ಪ್ರೀತಿ | ಚಿ |

ಜ್ಯೋತಿ ಸಾಕ್ಷಾತ್ಕಾರ ಪಡೆಯೆ ನಿರ್ಭೀತಿ ||

ಖ್ಯಾತಿ ಕಾರಣವು ಸನ್ನೀತಿ | ಪರಿ |

ಪೂತ ನರಹರಿಮೂರ್ತಿಯೀ ಜಗಜ್ಯೋತಿ ||3||

ಮನವ ಗೆದ್ದರೆ ನೀನೆ ಜಾಣ | ನಿನ್ನ |

ಮನವನ್ನು ಗೆಲ್ಲದಿದ್ದರೆ ನೀನೆ ಕೋಣ ||ಪ||

ಮನ ಸೂಕ್ಷ್ಮದೇಹಕ್ಕೆ ಪ್ರಾಣ | ಶುದ್ಧ |

ಮನ ಭಕ್ತಿ ಜ್ಞಾನ ವೈರಾಗ್ಯಕ್ಕೆ ತ್ರಾಣ ||ಅ.ಪ||

ತತ್ವವಿಪ್ಪತ್ತೈದು ಸ್ಥೂಲ | ಆತ್ಮ (ಬ್ರಹ್ಮ) |

ಸತ್ವದಿಂದಲೆ ನಡೆಯುತಿಹುದನುಗಾಲ ||

ತತ್ವ ಹದಿನೇಳಾದ ತನುವು | ಕರ್ಮ |

ಸೂತ್ರವಾಗಿಹ ಮನವೆ ಸೂಕ್ಷ್ಮದ ತನುವು ||1||

ಅಜ್ಞಾನ ಕಾರಣದ ತನುವು | ಸತ್ಯ |

ಸುಜ್ಞಾನದಿಂದ ನಾಶವು ಮುಕ್ತಿ | ಘನವು |

ಪ್ರಜ್ಞೆ ಮಹಕಾರಣವಹುದು | ಹಂಸ |

ಸಂಜ್ಞೆ ಸೋಹಂಭಾವ ಕೈವಲ್ಯವಿಹುದು ||2||

ಇದು ವಿದೇಹದ ಮುಕ್ತಿ ಪಥವು | ಮಂತ್ರ |

ದುದಯಕ್ಕೆ ಸ್ಥಿತಿ ಲಯ ಪರಿಪೂರ್ಣ ಶೃತವು ||

ಸದನ ಸುಷುಮ್ನಾ ಸಮ್ಮತವು | ನಿರ್ಮ |

ಲದೊಳರ್ಧ ಮಾತ್ರೆ ನರಹರಿ ಪಾದ ಸ್ಥಿತವು ||3||

ಆರತಿ ಮಾಡುವೆ ಗುರುವರಗೆ | ತ್ರೈ |

ಮೂರುತಿ ರೂಪದ ನರಹರಿಗೇ ||ಪ||

ತಾರಕ ಯೋಗದೊಳಿರುವವಗೆ | ಭವ |

ತಾರಕನೆನಿಸಿದ ಪರಶಿವಗೇ ||ಅ|ಪ||

ಕಣ್ಣನು ಬಿಚ್ಚುತ ಜಾಗ್ರವನು | ಒಳ |

ಗಣ್ಣನು ಮುಚ್ಚುತ ಸುಪ್ತಿಯನು ||

ಕಣ್ಣನು ಮುಚ್ಚಿಯೆ ಸ್ವಪ್ನವನು | ಬಿಡು |

ಗಣ್ಣರ ನೆಚ್ಚಿಯೆ ತೋರಿದನು ||1||

ಹೊರಗಡೆ ಬಂದು ಹಕಾರವನು | ತಾ |

ಸರಿದೊಳಗಡೆಗೆ ಸಕಾರವನು ||

ಹೊರಗೊಳಗೆನ್ನುವ ಭೇದವನು | ಕಳೆ |

ದಿರುವನು ಸೊನ್ನೆಯೆನ್ನಿಸಿ ತಾನು ||2||

ಬಳ್ಳಾರಿಯ ಪುರ ಸೇರಿದನು | ತಾ |

ಬಳ್ಳದಳತೆಯನು ಮೀರಿದನು ||

ಸುಳ್ಳನು ಖಂಡಿಸಿ ನರಹರಿಯು | ಭವ |

ಬಳ್ಳಿಯ ಕಿತ್ತೀಡಾಡಿದನು ||3||

ಯಾಕೆ ದುಃಖವಪಡುವೆ ನೀನು |

ಲೋಕನಾಥನಿಲ್ಲವೇನು |

ಓ ಜೀವನೇ | ಬರಿದೇ ||ಪ||

ಶೋಕ ಮಾಡಲೇನು ಲಾಭ |

ಸಾಕು ಬಿಡೆಲೋ ನಿನ್ನ ಲೋಭ |

ಓ ಜೀವನೇ ಬರಿದೇ ||ಅ|ಪ||

ಲೋಕವನ್ನೆ ಸಲಹುವಾತ |

ಸಾಕದಿಹನೆ ನಿನ್ನನಾತ ||

ಮೂಕನಾಗದಂತೆ ಶಿವನ |

ಜೋಕೆಯಿಂದ ಮಾಡು ಧ್ಯಾನ ಓ ಜೀವನೇ ಬರಿದೇ ||1||

ತಾಯಿ ಗರ್ಭದೊಳು ನೀನಿರಲು |

ಕಾಯಿದಂಥ ಶಿವ ದಯಾಳು ||

ತಾಯಿ ಮೊಲೆಗೆ ಹಾಲು ತುಂಬಿ |

ತಾಯಿಯಾದ ನೆನೆಯೊ ನಂಬಿ ಓ ಜೀವನೇ ಬರಿದೇ ||2||

ದೇಹವನ್ನು ಕೊಟ್ಟ ಶಿವನು |

ದೇಹವನ್ನು ಸಲಹನೇನು ||

ಮೋಹವನ್ನು ಶಿವನೊಳಿಡದೆ |

ದ್ರೋಹಿಯಾಗಿ ದುಃಖಪಡದೇ ಓ ಜೀವನೇ ಬರಿದೇ ||3||

ಕಾಯಬಲ್ಲ ಕೊಲ್ಲಬಲ್ಲ |

ಮಾಯೆಯೆಲ್ಲ ಗೆಲ್ಲಬಲ್ಲ ||

ಕಾಯದಲ್ಲೆ ನಿಂತನಿಲ್ಲೆ |

ಕಾಯೊ ಎಂದು ಬೇಡಲೊಲ್ಲೆ ಓ ಜೀವನೇ ಬರಿದೇ ||4||

ಸಕಲ ಜೀವ ಜಾಲವನ್ನು |

ಸುಖದಿ ಪೊರೆವ ಈಶನನ್ನು ||

ಭಕುತಿಯಿಂದ ಭಜಿಸು ನೀನು |

ಮುಕುತಿಯೀವ ನರಹರಿ ತಾನು ಓ ಜೀವನೇ ಬರಿದೇ ||5||

ನೀತಿ ಮಾರ್ಗ ಬಿಡಲು ಬೇಡ | ಪಾತಕವನು ಗಳಿಸಬೇಡ |

ಪ್ರೀತಿಯಿಂದ ಗುರುವಿನಡಿಯ ಪಿಡಿದು ಬಾಳೆಲೋ ||ಪ||

ಕೋತಿಯಂತೆ ಕುಣಿಯಬೇಡ | ಆತುರವನು ತಾಳಬೇಡ ||

ಖ್ಯಾತಮಾದ ಸದ್ಗುಣಂಗಳನ್ನು ತಾಳೆಲೋ ||ಅ|ಪ||

ದುಷ್ಟರನ್ನು ಭಜಿಸಬೇಡ | ಶಿಷ್ಟರನ್ನು ತ್ಯಜಿಸಬೇಡ ||

ನಿಷ್ಠೆಯನ್ನು ಬಿಡಲುಬೇಡ | ಕಷ್ಟ ಬಂದರೂ ||

ನಷ್ಟ ಲಾಭವೆಣಿಸಬೇಡ | ಕಷ್ಟ ಸುಖಕೆ ಮಣಿಯಬೇಡ ||

ಸೃಷ್ಟಿಗೊಡೆಯನಾಜ್ಞೆಯೆಂದು | ಸ್ಪಷ್ಟವಾಗಿರು ||1||

ಸತ್ಯವನ್ನು ಬಿಡಲು ಬೇಡ | ಮಿಥ್ಯವನ್ನು ಆಡಬೇಡ ||

ಸತ್ವೆಂದು ಗುರುವಿನಡಿಯ | ನಿತ್ಯ ನಂಬಿರು ||

ಹೊತ್ತು ವ್ಯರ್ಥ ಕಳೆಯಬೇಡ | ಮೃತ್ಯು ಭೀತಿ ಕಳೆಯಬೇಡ ||

ಅರ್ಥಿಯಿಂದ ಶಿವನ ನಂಬಿ | ಪ್ರಾರ್ಥಿಸುತ್ತಿರು ||2||

ಎಲ್ಲ ಮಾತು ನಂಬಬೇಡ | ಎಲ್ಲ ಜನರ ಸೇರಬೇಡ ||

ಬಲ್ಲ ಸಜ್ಜನರಿಗೆ ಸೇವೆ | ಸಲ್ಲಿಸುತ್ತಿರು ||

ಕಳ್ಳಜನರ ಕೂಡಬೇಡ | ಸುಳ್ಳರನ್ನು ಸೇರಬೇಡ ||

ಚೆಲ್ವ ನರಹರೀಂದ್ರ ಪಾದ | ದಲ್ಲಿ ನಿಂದಿರು ||3||

ತನುವ ತೊಳೆದೆಯಲ್ಲ | ಮನಸಿನ ದಿನಸು ತೊಳೆಯಲಿಲ್ಲಾ ||ಪ||

ಘನವ ತಿಳಿಯಲಿಲ್ಲಾ | ಮನವ ನಿಲಿಸಲಿಲ್ಲಾ ||

ವಿನಯವು ಬರಲಿಲ್ಲ | ದುರ್ಗುಣ ಕೊನೆಗೂ ಬಿಡಲಿಲ್ಲ ||ಅ|ಪ||

ಭ್ರಾಂತಿಯ ಬಿಡಲಿಲ್ಲ | ಮನಸಿಗೆ ಶಾಂತಿ ದೊರೆಯಲಿಲ್ಲಾ ||

ಚಿಂತೆ ಸುಡುವುದಲ್ಲಾ | ಸಂತರ ಸಂಗವಿಲ್ಲ ||

ಶಾಂತನಾಗಲಿಲ್ಲ ಗುರುವಿನ ಕರುಣೆಯಾಗಲಿಲ್ಲ ||1||

ಅರಿವು ಹೊಂದಲಿಲ್ಲಾ | ಅರಿವಿನ ಗುರಿಯ ಮುಟ್ಟಲಿಲ್ಲಾ ||

ದುರುಳನಾದೆಯಲ್ಲಾ | ನರಕವು ತಪ್ಪಲಿಲ್ಲಾ ||

ಬರಿದೆ ಕೆಟ್ಟೆಯಲ್ಲಾ | ಸದ್ಗುರು ಕರುಣವ ಪಡೆಯಲಿಲ್ಲಾ ||2||

ಏಸು ಜನ್ಮ ದಾಂಟಿ | ಬಂದರು | ರೋಸಿಗೆ ಬರಲಿಲ್ಲಾ ||

ಆಸೆ ತೀರಲಿಲ್ಲಾ | ಘಾಸಿಯಾದೆಯಲ್ಲಾ ||

ದೋಷಿಯಾದೆಯಲ್ಲಾ | ನರಹರೀಶನು ಕಾಯಲಿಲ್ಲಾ ||3||

ಎಂಥಾ ಮನೆ | ತನು | ವೆಂಥಾ ಮನೆ ||ಪ||

ಚಿಂತೆಗೆ ತವರಾದಂಥಾ ಮನೆ ||ಅ|ಪ||

ಮಣ್ಣೊಳು ಪುಟ್ಟಿತು | ಮಣ್ಣೊಳು ಬೆಳೆಯಿತು |

ಮಣ್ಣನು ಸೇರಿತು ಮಣ್ಣಾಯಿತು ||

ಬಣ್ಣಬಣ್ಣಗಳ ತನ್ನೊಳು ತೋರುತ |

ಕಣ್ಣಿಗೆ ಸುಂದರ ಚೆನ್ನಾಯಿತು ||1||

ಹೊರ ಮನೆ ಸ್ಥೂಲವು | ಒಳ ಮನೆ ಸೂಕ್ಷ್ಮವು |

ಅರಮನೆ ಕಾರಣ ತಾನಾದವು ||

ಸೆರೆಮನೆ ಜೀವಗೆ | ನೆರೆಮನೆ ದೇವಗೆ |

ಬರಿ ಮನೆಯಾಗಿದೆ ಮುಕ್ತಾತ್ಮಗೆ ||2||

ಹುಚ್ಚು ಮನುಜರಿದ | ನೆಚ್ಚಿಕೊಳುತ ಮದ |

ಹೆಚ್ಚಿದರಾಯಿತು ನರಕಾಸ್ಪದ ||

ಉಚ್ಚೆಯ ಬಚ್ಚಲು | ರೊಚ್ಚು ಮಲಂಗಳು|

ಮುಚ್ಚಿರೆ ಸುಂದರ ಯಾವಾಗಲೂ ||3||

ಯೋಗಿಗೆ ಗುರುಮಠ | ರೋಗಿಗೆ ಸಂಕಟ ||

ಭೋಗಿಗೆ ಲಂಪಟ ತಾನೀ ಘಟ ||

ರಾಗಿಗೆ ಶಿಕ್ಷೆಯು | ತ್ಯಾಗಿಗೆ ರಕ್ಷೆಯು |

ಯೋಗಿಗೆ ನಿಶ್ಚಯ ಪರೀಕ್ಷೆಯು ||4||

ತೊಳೆಯದೆ ಇರಲಿದು ಹೊಲಸು ನಾರುವುದು |

ತೊಳೆದರು ಸ್ವಚ್ಛವು ತಾನಾಗದು ||

ಗಳಿಗೆ ಗಳಿಗೆಗಿದು ಹಳೆಯದಾಗುವುದು |

ಸುಲಭವು ನರಹರಿ ಸೇವೆಗಿದು ||5||

ಅಂಗಡಿ ಯನ್ನ ಅಂಗಡಿ | ನಮ್ಮ |

ಸಂಗಡಿಗರಿಗೆಲ್ಲ ಮುಂಗಡ ಕೊಡುವಂಥ ||ಪ||

ಸಾಲವು ಬಹಳ ವಿ | ಶಾಲವಾದಂಗಡಿ ||

ಕೇಳದೆ ಹೆಚ್ಚಿತು | ಸಾಲಕ್ಕೆ ಚುಂಗಡಿ ||1||

ಅಂಗದೊಳಗೆ ಸರ್ವ | ಸಂಗಮದಂಗಡಿ ||

ಭಂಗವಾದರೆ ಏನು | ಹಂಗಿಲ್ಲದಂಗಡಿ ||2||

ಮೂರು ಲೋಕಂಗಳು | ಸೇರಿರುವಂಗಡಿ ||

ತೀರದ ಬಹಳ ವ್ಯಾ | ಪಾರದ ಅಂಗಡಿ ||3||

ಎಲ್ಲ ಸಾಮಗ್ರಿಯ | ನುಳ್ಳಂಥ ಅಂಗಡಿ ||

ಬಲ್ಲವರೆದುರಿಗೆ | ಸುಳ್ಳಾದ ಅಂಗಡಿ ||4||

ತೂಕ ತುಂಡಿಗಳಿರ | ಬೇಕಾದ ಅಂಗಡಿ ||

ತೂಕ ತಪ್ಪಿದರವಿ | ವೇಕದ ಅಂಗಡಿ ||5||

ಉದ್ದರೆ ಬಿದ್ದರೆ | ಎದ್ದು ಹೋಯ್ತಂಗಡಿ ||

ಉದ್ದರೆ ಬಿಟ್ಟರೆ | ಉದ್ದವಾಯ್ತಂಗಡಿ ||6||

ಅಳತೆಯಿಲ್ಲದೆ ಬಲು | ಬೆಳೆದುದೀಯಂಗಡಿ ||

ಅಳತೆ ಸೇರಿಗೆ ಎಲ್ಲ | ಒಳಗಾದ ಅಂಗಡಿ ||7||

ದುಷ್ಟರಿಗಿದು ಬಲು | ಕೆಟ್ಟದಾದಂಗಡಿ ||

ಶಿಷ್ಟರಿಗಿದು ಬಲು | ನೆಟ್ಟಗಾದಂಗಡಿ ||8||

ಸರಕಿನ ವ್ಯಾಪಾರ | ಭರದಿಂದ ಸಾಗಿದೆ ||

ಬರುವ ಲಾಭವು ಮಿತಿ | ಯಿರದಂತಾಗಿದೆ ||9||

ಹೊರಗಿಂದ ಬರುತಿದೆ | ಹೊರೆ ಹೊರೆ ಸರಕು ||

ಹೊರಗೆ ಹೋಗುವು ದಾರಿ | ಗರಿಯದ ಬದುಕು ||10||

ಬಂಡಿ ಬಂಡಿಯ ತುಂಬಿ | ಕೊಂಡು ತಂದದ್ದು ||

ತುಂಡು ಚಿಲ್ಲರೆಯಾಗಿ | ಕಂಡುಹೋದದ್ದು ||11||

ನರಹರಿಯಂಗಡಿ | ಬರಿದಾಗದಂಗಡಿ ||

ಬರುವವರಿಗೆ ಒಳ್ಳೆ | ಸರಕುಳ್ಳ ಅಂಗಡಿ ||12||

ಹೊಟ್ಟೆ ನಿನ್ನಿಂದ ನಾನು ಕೆಟ್ಟೆ | ನಿನ್ನ |

ಗುಟ್ಟೆ ತಿಳಿಯದು ಮೊಟ್ಟೆ |

ಮೊಟ್ಟೆ ನುಂಗಿಬಿಟ್ಟೆ ||ಪ||

ಎಲ್ಲಾ ನಿನಗಾಗಿ ಕಟ್ಟಿಕೊಂಡೆ | ಬಂದ |

ದ್ದೆಲ್ಲಾ ನಿನ್ನಲ್ಲೆ ತುಂಬಿ ಬರಿದು ಮಾಡಿಕೊಂಡೆ ||

ಉಲ್ಲಾಸವಿಲ್ಲದುದ ಕಂಡೆ | ನಿನ್ನ |

ಚೆಲ್ಲಾಟಕೆಡೆಯಿಲ್ಲ ತೃಪ್ತಿಯಿಲ್ಲದುಂಡೆ ||1||

ರಾಶಿರಾಶಿಯು ಬಯಲಾಯ್ತು | ಉಪ |

ವಾಸದ ಭಯವೆಂಬುದು ತಪ್ಪದಾಯ್ತು ||

ಲೇಸೆಂದಿಗಿಲ್ಲದೆ ಹೋಯ್ತು ಪರ |

ದೇಶಿಯಂದದಿ ಬೇಡಿಬೇಡಿ ಸಾಕಾಯ್ತು ||2||

ಆನಂದವೆಂದಿ | ಗಾಗಲಿಲ್ಲ | ಪರಮ

ಜ್ಞಾನಾಮೃತವ ನೀನೆಂದು ಬೇಡಲಿಲ್ಲ ||

ಶ್ವಾನನಂದದಿ ಸಾಯ್ವೆಯಲ್ಲ | ನಮ್ಮ |

ಮೌನೀಂದ್ರ ನರಹರಿ ಬೋಧೆ ಕೇಳಲಿಲ್ಲ ||3||

ಮರವೆಯಿರುವುದು ಏಕೆ | ಅರಿವನ್ನು ಪಡೆಯಲ್ಕೆ

ಶರೀರವಿರುವುದು ಏಕೆ | ಕರಣ ವಿಜಯಕ್ಕೆ ||ಪ||

ಹರಣವಿರುವುದು ಏಕೆ | ಹರನನ್ನು ಬೆರೆಯಲ್ಕೆ ||

ಕರಣವಿರುವುದು ಏಕೆ | ಹರನರ್ಚನಕ್ಕೆ ||ಅ|ಪ||

ನಶ್ವರವಿಹುದೇಕೆ | ಶಾಶ್ವತವರಿಯಲ್ಕೆ ||

ವಿಶ್ವವಿರುವುದು ಏಕೆ | ಈಶ್ವರ ಜ್ಞಾನಕ್ಕೆ ||

ದೃಶ್ಯವಿರುವುದು ಏಕೆ | ವಿಶ್ವೇಶನರುವಿಗೆ ||

ಶಿಷ್ಯರಿರುವುದು ಏಕೆ | ವಶ್ಯಗುರುವಂಬುದಕೆ ||1||

ದುಃಖವಿರುವುದು ಏಕೆ | ಸೌಖ್ಯ ಸಾಧಿಸಲಿಕ್ಕೆ |

ಮಕ್ಕಳಿರುವುದು ಏಕೆ | ದುಃಖಪಡಲಿಕ್ಕೆ ||

ಸೊಕ್ಕಿ ನಡೆಯುವುದೇಕೆ | ಸಿಕ್ಕಿ ಬೀಳುವುದಕ್ಕೆ ||

ಲೆಕ್ಕ ಕಲಿಯುವುದೇಕೆ | ಸಿಕ್ಕು ಬಿಡಿಸಲಿಕೆ ||2||

ಧ್ಯಾನ ಮಾಡುವುದೇಕೆ | ಜ್ಞಾನ ಸಿದ್ಧಿಸಲಿಕ್ಕೆ ||

ಮೌನವಾಗಿಹುದೇಕೆ | ಆನಂದಪದಕೆ ||

ನಾನೆಂಬುದಿಹುದೇಕೆ | ಹಾನಿಯ ಪಡೆಯಲ್ಕೆ |

ದೀನತ್ವ ಬರಲೇಕೆ | ಹಾನಿಯಳಿವುದಕೆ ||3||

ಕೋಪ ಬರುವುದು ಏಕೆ | ತಾಪವ ಪಡೆಯಲ್ಕೆ |

ಶಾಪ ಮಾಡುವುದೇಕೆ | ಲೋಪವಾಗಲ್ಕೆ ||

ದೀಪವಿರುವುದು ಏಕೆ | ಕತ್ತಲನಳಿಸಲ್ಕೆ ||

ರೂಪುಗೊಂಡಿಹುದೇಕೆ | ಶಿವನನರಿಯಲ್ಕೆ ||4||

ನರರೂಪ ಬರಲೇಕೆ | ಹರನ ಕಾಣುವುದಕ್ಕೆ ||

ಗುರು ಬೋಧೆ ಯಾತಕ್ಕೆ | ವರಮೋಕ್ಷ ಪದಕೆ ||

ನಿರುತ ಶ್ರವಣವು ಯಾಕೆ | ಮರವೆಯಳಿಸುವುದಕ್ಕೆ||

ನರಹರಿ ಗುರುವೇಕೆ | ದುರಿತ ಹರಿಯಲ್ಕೆ ||5||

ಕಾಯಬೇಕು ಗುರುವೆ | ಕಾಯಬೇಕು ||ಪ||

ಕಾಯಬೇಕು ನೀನು ಯನ್ನ |

ಮಾಯೆಯನ್ನು ಜಯಿಸುವ ಮುನ್ನ ||ಅ|ಪ||

ಕಾಯವಿದ್ದರೆ ನಿನ್ನಯ ಧ್ಯಾನ |

ಕಾಯವಿದ್ದರೆ ನಿನ್ನಲಿ ಜ್ಞಾನ ||

ಕಾಯವಿಲ್ಲದೆ ಅನುಸಂಧಾನ |

ಧ್ಯೇಯವೆಲ್ಲಿದೆ ಅನುಭವ ತ್ರಾಣ ||1||

ಕಾಯದಿಂದಲೆ ಜಪತಪ ಯೋಗ |

ಕಾಯದಿಂದಲೇ ಸಫಲ ವಿರಾಗ ||

ಕಾಯದಿಂದಲೆ ಪೂಜೆ ಸರಾಗ |

ಶ್ರೇಯ ಹೊಂದಲೀ ಕಾಯ ಭೋಗ ||2||

ಶಿವನ ಮಂದಿರವೆನಿಸಿದ ಕಾಯ |

ಭವದ ಬಂಧನ ಹರಿಯಲುಪಾಯ ||

ಶಿವನ ಕಾಣಲು ಸಾಧನವಯ್ಯ

ಶ್ರವಣವೆಂಬುದು ನರಹರಿಜೀಯ ||3||

ನಮ್ಮ ದೇವರ ಗುಡಿ | ರಮ್ಯವಾಗಿದೆ ನೋಡಿ |

ನಿರ್ಮಲಾತ್ಮರು ಕೂಡಿ ಪೂಜೆ ಮಾಡಿ ||ಪ||

ನೆಮ್ಮದಿಯನು ಬೇಡಿ | ಸಮ್ಮತವನು ಕೂಡಿ |

ನಿಮ್ಮ ಪಾಪವ ಝಾಡಿಸುತ ಲಾಡಿ ||ಅ|ಪ||

ಏಳು ಸುತ್ತಿನ ಪಾಳಿ | ಏಳು ಚಕ್ರಗಳೋಳಿ |

ಮೇಲೆ ಗೋಪುರದಲ್ಲಿ ಚಿತ್ರಾವಳಿ ||

ಸಾಲು ಮಂಟಪದಿಂದ | ಹೇಳಲಾಗದ ಚಂದ |

ಕಾಲಕಾಲಕೆ ಪೂಜೆಯಾನಂದ ||1||

ವೇದಮಂತ್ರದ ಘೋಷ | ನಾದತಂತ್ರ ವಿಲಾಸ |

ಬೋಧ ಸ್ವತಂತ್ರದ ಪರಿತೋಷ ||

ಆದಿತ್ಯ ಚಂದ್ರಾಗ್ನಿ | ದೇದೀಪ್ಯ ಕಳೆಯಿಂದ |

ನಾದ ಶುದ್ಧದ ಪೂಜೆ ನಿರ್ದೋಷ ||2||

ಸಾಲು ಘಂಟಾನಾದ | ಮೂಲ ಘಂಟೆಯೊಳಾದ |

ಕೇಳಲಿಕಿಂಪಾದ ಸುವಿನೋದಾ ||

ಮೇಲುಪ್ಪರಿಗೆಯೊಳು | ಏಳು ಕಲಶವ ತಾಳಿ |

ಕೇಳಿಯಿಂದಿರ್ಪ ದೇವತೆಗಳಲಿ ||3||

ಗರ್ಭಗುಡಿಯೊಳಗತಿ | ನಿಬ್ಬರದ ಬೆಳಕಾಗಿ |

ಶುಭ್ರವಾಗಿಯೆ ಬೆಳಗುವ ದೇವರು ||

ಅಭ್ರದಿಂದ ಪರಿ | ಶುಭ್ರವಾಗಿರುವಾತ್ಮ |

ಹೆಬ್ಬಾಗಿಲೆದುರಿಗೆ ತೋರುತಿದೆ ||4||

ತೆರಪಿಲ್ಲ ಸಂಚಾರ | ಭರಿತ ಮಹಾದ್ವಾರ |

ಹೊರಗೊಳಗೆಂಬ ಭೇದವೆ ದೂರ ||

ಇರುಳು ಹಗಲೊಳು ಪೂರ | ತೆರೆದ ಮುಕ್ತ ದ್ವಾರ |

ನರಹರಿಯಿರುವ ಗುಡಿ ನಿರ್ಧಾರ ||5||

ಮರವೆಯಿಂದಲೆ ಹುಟ್ಟಿ | ಮರವೆಯಿಂದಲೆ ಬೆಳೆದುದೆಂಥ ಮರವು ||ಪ||

ಮರವೆಯಿಂದಲೆ ಹೋಗಿ | ಮರವೆಯಿಂದಲೆ ಬಂದುದೆಂಥ ಮರವು ||ಅ|ಪ||

ಬುಡಮೇಲು ಕೊಂಬೆ ಕೆಳ | ಗಡೆಗೆ ಹಬ್ಬಿರುವುದು ಎಂಥ ಮರವು||

ಬುಡದಲ್ಲಿ ಈಶ್ವರನ | ಗುಡಿಯಿರುತಿರ್ಪುದು ಎಂಥ ಮರವು ||1||

ಮರವೆಯಿಂದಲೆ ತಾನು | ಮರವೆಂದೆನ್ನಿಸುವುದು ಎಂಥ ಮರವು ||

ಅರಿವಾದ ವಸ್ತುವ | ನರಿಯದಂತಿರ್ಪುದು ಎಂಥ ಮರವು ||2||

ಅರಳುತ್ತ ಜಾಗ್ರದೊ | ಳರಳಿ ಎಂದೆನ್ನಿಸಿದಂಥ ಮರವು||

ನೆರೆ ಸುಪ್ತಿಯೊಳಗೆ ಅಶ್ವತ್ಥವೆಂದೆನ್ನಿಸಿದಂಥ ಮರವು ||3||

ಹರಿಹರ ಬ್ರಹ್ಮಾಮರೇಂದ್ರರು ವಾಸಿಸುವಂಥಾ ಮರವು||

ಸುರರಸುರರು ಕೂಡಿ ನಲಿದಾಡುತಿಪುದು ಎಂಥಾ ಮರವು ||4||

ಮರುಳು ಮಾನವರಿಂಗೆ | ಶರೀರವೆಂದೆನಿಸಿಹುದೆಂಥ ಮರವು||

ನರಹರಿಯ ಭಕ್ತರ್ಗೆ | ಗುರುಮಠವಾಗಿರ್ಪುದೆಂಥ ಮರವು ||5||

ನಂಬಿಕೊಂಡಿರಬೇಡ ದೇಹವನ್ನು ||

ತುಂಬಿನೀ ಕೆಡಬೇಡ ಮೋಹವನ್ನು ||ಪ||

ಇಂಬೀಯ ಬೇಡ ಸಂದೇಹಕಿನ್ನು ||

ಶಂಭುವಿನೊಳು ಮಾಡು ಸ್ನೇಹವನ್ನು ||ಅ|ಪ||

ಯಾವ ದೇವರ ಬೇಡಿಕೊಂಡರಿಲ್ಲಾ ||

ಸಾವು ತಪ್ಪಿಸಬಲ್ಲದೇವರಿಲ್ಲಾ ||

ನೋವು ಸಾವನು ಮೀರಲಾಗದಲ್ಲಾ ||

ಕೇವಲಾತ್ಮನು ನೀನು ಸಾವು ಯಿಲ್ಲಾ ||1||

ಹಿಂದೆ ಮಾಡಿದ ಕರ್ಮ ದೇಹವಾಯ್ತು |

ಮುಂದೆ ಕರ್ಮಕೆ ದಾರಿ ಮೋಹವಾಯ್ತು ||

ಬಂದಿದ್ದ ಪ್ರಾರಬ್ಧ ತಪ್ಪಲಿಲ್ಲಾ |

ಸಂದೇಹವಳಿದಾಗ ಜನ್ಮವಿಲ್ಲಾ ||2||

ತನುವೊಂದು ಮಲಭಾಂಡವಲ್ಲವೇನು|

ಅನುಗಾಲ ಹೊತ್ತುಕೊಂಡಿಲ್ಲವೇನು ||

ಅನುಮಾನದೊಳು ಸತ್ತುಹೋದೆ ನೀನು |

ನೆನೆಯದೇ ನರಹರಿಯ ಪಾದವನ್ನು ||3||

ನಂಬಿ ಕೆಟ್ಟೆನು ತನುವ | ನಂಬಿ ಕೆಟ್ಟೆನು ||ಪ||

ಜಂಭಗೊಂಡೆನು | ಮೋಹ | ತುಂಬಿಕೊಂಡೆನು ||ಅ|ಪ||

ನಷ್ಟವಾಗುವ | ತನುವೆ ಶ್ರೇಷ್ಠವೆನ್ನುವ |

ದುಷ್ಟ ಭಾವದಿಂದ ಪಡೆದೆ ಕಷ್ಟ ಜನ್ಮವಾ ||1||

ಜಡವು ತಾನಿದು | ಶಿವನ | ನುಡಿಯನೊಪ್ಪದು ||

ಮಡಿದು ಪೋಪುದಿನ್ನು ಮುಂದೆ ಜನ್ಮ ತಪ್ಪದು ||2||

ರೋಗವೆಲ್ಲಕೆ | ತಾನೆ | ಯಾಗಿ ಹೊಂದಿಕೆ ||

ತ್ಯಾಗ ಮಾಡಲಾಗದಿಹುದು ಕರ್ಮಬಂಧಕೆ ||3||

ಬಾಲ್ಯ ಯವ್ವನ | ಮುಪ್ಪು | ಮೂಲ ಸಾಧನ ||

ಕಾಲವಶ ವಿಕಾರಮಾದ ದುಃಖ ಬಂಧನಾ ||4||

ತಾಪ ಮೂಲವು | ಕರ್ಮ | ರೂಪಜಾಲವು ||

ಲೋಪಗೈದ ನರಹರೀಂದ್ರ ಜನ್ಮ ದುಃಖವಾ ||5||

ಮುಟ್ಟು ಎಂಬುದಾರಿಗೆ | ಮುಟ್ಟು ದೇಹಧಾರಿಗೆ |

ಮುಟ್ಟು ಹುಟ್ಟು ಸಾವಿಗೆ | ಮುಟ್ಟೆ ತಾನೆ ಮೈಲಿಗೆ ||ಪ||

ಮುಟ್ಟಿನಿಂದ ಹುಟ್ಟಿದೆ | ಮುಟ್ಟಿ ದೇಹ ಕೆಟ್ಟಿದೆ |

ಮುಟ್ಟು ಇಲ್ಲದಾತ್ಮಗೆ | ತಟ್ಟಲುಂಟೆ ಮೈಲಿಗೆ ||1||

ದೇಹ ಮುಟ್ಟಿದಾತ್ಮನು | ಮೋಹಪಟ್ಟು ನಿಂದನು ||

ಮೋಹದಿಂದಲೇತನು | ದಾಹದಲ್ಲಿ ಬಿದ್ದನು ||2||

ಸತಿಯ ಪತಿಯು ಮುಟ್ಟಲು | ಸುತರು ಹುಟ್ಟಿಕೊಳ್ಳಲು||

ಕಥನವಾಯ್ತು ಲೋಕವು | ಗತಿವಿಹೀನ ದುಃಖವು ||3||

ಭೂತಭೂತ ಮುಟ್ಟಲು | ಜಾತವಾಯ್ತು ತನುಗಳು |

ಸೂತಕಕ್ಕೆ ಕಾರಣ | ಭೂತ ಜನ್ಮಧಾರಣಾ ||4||

ಗುರುವರೇಣ್ಯ ಮುಟ್ಟಲು | ದುರಿತ ನಾಶವಾಗಲು ||

ನರಹರೀಂದ್ರನೆನ್ನಲು | ಪರಮ ಮುಕ್ತಿ ಸಿಕ್ಕಲು ||5||

ನಾಶವಾಗುವ ದೇಹವ | ನಂಬುತ |

ಮೋಸ ಹೋಗುವೆ ಮಾನವಾ ||ಪ||

ಹೇಸಿ ಗುಣಂಗಳ | ವಾಸನೆಯಳಿಯದೆ ||

ಈಶನವೊಲುಮೆಯ | ಲೇಸೆಂದರಿಯದೆ ||ಅ.ಪ||

ಸಿರಿವಂತರನು ನೋಡು ತಾ | ಅವರೈ |

ಸಿರಿಯನ್ನು ನೀ ಬೇಡುತಾ||

ಮರುಗುವ ಬುದ್ಧಿಯ | ಮರಳಿಸಿ ಶುದ್ಧಿಯ ||

ಬೆರೆಯುತ ಪಾಪವ | ಹರಿವ ಸ್ವರೂಪವ ||1||

ಕಾಲ ವ್ಯರ್ಥವ ಮಾಡದೇ | ದುರ್ಜನ |

ಜಾಲದೊಂದಿಗೆ ಕೂಡದೆ ||

ಲೀಲೆಯೊಳಾ ಶಶಿ | ಮೌಳಿಯ ನೆನೆಯುತ |

ಬಾಳುತ ಸೌಖ್ಯವ | ತಾಳುವುದೇ ಹಿತ ||2||

ಶರಣ ಸಂಗವ ಸೇರುತಾ | ನಿನ್ನಯ |

ಕರಣ ಪಾವನ ಮಾಡುತಾ ||

ನರಹರಿ ಭಕ್ತಿಯ | ಪರಮ ವಿರಕ್ತಿಯ ||

ಪರತರ ಜ್ಞಾನವ | ಬೆರೆದಿರು ಮೌನವ ||3||

ಇದೇ ತನುವೆ ಅರಮನೆ | ಇದೇ ದೇಹ ಸೆರೆಮನೆ ||ಪ||

ಇದೇ ಶರೀರ ಗುರುಮನೆ | ಇದೇ ಕಾಯ ಬರಿಮನೆ ||ಅ.ಪ||

ಮೆರೆವ ಸುಖದೊಳರಮನೆ | ಬರಲು ದುಃಖ ಸೆರೆಮನೆ |

ಅರಿವು ಬರಲು ಗುರುಮನೆ | ಮರಣ ಬರಲು ಬರಿಮನೆ ||1||

ಭೋಗಿಗಿದೇ ಅರಮನೆ | ರೋಗಿಗಿದೇ ಸೆರೆಮನೆ ||

ಯೋಗಿಗಿದೇ ಗುರುಮನೆ | ತ್ಯಾಗಿಗಿದೇ ಬರಿ ಮನೆ ||2||

ಇದೇ ದೇವಮಂದಿರ | ಸದಾ ಪೂಜೆ ಮಾಳ್ಪಗೆ ||

ಇದೇ ಪರ್ಣಶಾಲೆಯು | ಸದಾ ತಪದೊಳಿರ್ಪಗೆ ||3||

ದುಷ್ಟಗಿದೇ ನರಕವು | ಶಿಷ್ಟಗಿದೇ ಸ್ವರ್ಗವು ||

ಸೃಷ್ಟಿಗಿದೇ ಸ್ಥಾನವು | ಕಷ್ಟಕಿದೇ ಮಾರ್ಗವು ||4||

ಮಾಯೆಯಿಂದ ಕಾಯವು | ಕಾಯದಿಂದ ಪಾಯವು ||

ಜೀಯ ನರಹರೀಂದ್ರನ | ನ್ಯಾಯಬೋಧೆ ಶ್ರೇಯವು ||5||

ಕೈಲಾಸವಾಸ ಈಶಾ | ಪಾಲಿಪುದು ಶೇಷ ಭೂಷಾ ||ಪ||

ತ್ರೈಲೋಕದಾದಿಪುರುಷಾ | ಫಾಲಾಕ್ಷ ನೀಡು ಹರುಷ ||ಅ|ಪ||

ನನ್ನೊಳಗೆ ನೀನು ಇದ್ದೆ |

ನಿನ್ನೊಳಗೆ ನಾನು ಇದ್ದೆ

ನಿನ್ನನ್ನು ಅರಿಯದಿದ್ದೆ |

ಜನ್ಮಾಂತರಕ್ಕೆ ಬಿದ್ದೆ ||1||

ಉತ್ತರದ ಬಾಗಿಲೊಳಗೆ |

ಪ್ರತ್ಯಕ್ಷವಾಗಿ ಬೆಳಗೆ ||

ತೀರ್ಥ ಪ್ರಸಾದಯನಗೆ ಕೊಟ್ಟೆ

ಸತ್ಯಾತ್ಮನಾಗಿಬಿಟ್ಟೆ ||2||

ಓಂಕಾರದಲ್ಲಿ ಬಂದೆ |

ಝೇಂಕಾರದಲ್ಲಿ ನಿಂದೆ ||

ಸಂಕೋಲೆ ಹರಿದುಬಿಟ್ಟೆ

ಶಂಕೆಗಳನೆಲ್ಲ ಸುಟ್ಟೆ ||3||

ನಿನ್ನನ್ನು ಹೊಂದಿದವನು |

ಇನ್ನೇಕೆ ಜನ್ಮಿಸುವನು ||

ನಿನ್ನನ್ನು ಕಾಣದವನು |

ಸನ್ಯಾಸಿಯಾದನೇನು ||4||

ನೀನಂತೆ ನಾದಬ್ರಹ್ಮ |

ನೀನರುಹು ವೇದ ಧರ್ಮ ||

ಶ್ರೀ ನರಹರೀಂದ್ರ ಗುರುವೇ |

ಆನತರ ಕಲ್ಪತರುವೇ ||5||

ಏನೆಂದು ಹೇಳಲವ್ವ | ಗೆಳತಿ ಕೇಳವ್ವ |

ಮಾನಕ್ಕೆ ಹಾನಿಯವ್ವ ||ಪ||

ತಾನಾಗಿ ಕೂಡಿ ಗಂಡ | ತಾನೆ ಕೈ ಬಿಟ್ಟುಕೊಂಡ ||ಅ|ಪ||

ಮನಸಾರ ಯನ್ನ ಕೂಡಿ | ಯನ್ನಲ್ಲೆ ಇದ್ದು |

ದಿನಸೆಲ್ಲ ತಾನೆ ನೋಡಿ||

ಕನಸೆಂದು ಬೇರೆಯಾದ | ಮುನಿಸುತ್ತ ನಿದ್ರೆ ಹೋದ||

ನೆನಸುತ್ತ ಜಾಗ್ರನಾದ | ತನಗಾಯ್ತು ವಿಷಯಾನಂದ ||1||

ತೊಡೆಯಲ್ಲಿಯನ್ನನಿರಿಸಿ | ಮುದ್ದಾಡಿ ಬೆರೆಸಿ |

ಕಡು ಮೋಹದಿಂದ ವರಿಸಿ ||

ನಡೆ ತಪ್ಪಿ ಹೋಗುವಾಗ | ಹಿಡಿದಲ್ಲೆ ಕೊಯ್ದ ಮೂಗ||

ನುಡಿ ತಪ್ಪಿದಾಗ ಬಾಯ | ಬಡಿದಿದ್ದ ಯನ್ನ ರಾಯ ||2||

ಯನ್ನಾತ್ಮ ಪ್ರಾಣಕಾಂತ | ಯನ್ನಲ್ಲೆ ನಿಂತ |

ಯನ್ನಲ್ಲಿ ಪ್ರೇಮವಾಂತ ||

ಯನ್ನೊಡನೆ ಹುಟ್ಟಿ ಬೆಳೆದ | ಯನ್ನೊಡೆಯ ಸೌಖ್ಯ ಪಡೆದ||

ಯನ್ನೊಡವೆಯಾಗಿ ಇದ್ದ | ಯನ್ನನ್ನೆ ಬಿಟ್ಟು ಎದ್ದ ||3||

ಯಾರೇನೊ ಹೇಳಿಕೊಟ್ಟು | ಯನ್ನಯ ಗುಟ್ಟು ಸೇರದಂತಾಗಿಬಿಟ್ಟ ||

ದೂರ ಮಾಡಿಟ್ಟ ಯನ್ನ | ತೋರದಂತಾದ ಚೆನ್ನ ||

ಮೋರೆ ತಿರುವುತ್ತ ಕಣ್ಣ | ಬೇರೆ ತಾನಾದ ಬಣ್ಣ ||4||

ಮನೆಹಾಳು ಮಾಡಿಬಿಟ್ಟ | ಶ್ರೀಗುರುವೆಂಬ |

ಮನೆಹಾಳ ಸೇರಿಬಿಟ್ಟ ||

ಯನಗೆನ್ನ ಪ್ರಾಣಕಾಂತ | ಅನುಮಾನಪಟ್ಟು ಕುಂತ |

ನೆನಸಿತಾ ಬ್ರಹ್ಮವೆಂತ | ಅನವರತ ಧ್ಯಾನವಾಂತ ||5||

ಯನ್ನಲ್ಲೆ ಸೇರಿ ಸುಖಿಸಿ | ಯನ್ನನ್ನೆ ದೂರಿ | ಅನ್ಯತ್ರ ಸೇರಲೆಳಸೀ ||

ಸನ್ಯಾಸಿಯಾಗಿಬಿಟ್ಟ | ಯನ್ನನ್ನು ಕೈಯ ಬಿಟ್ಟ |

ಧನ್ಯ ತಾನಾದೆನೆಂದ | ಯನ್ನ ತಾನೀಗ ಕೊಂದ ||6||

ನಶ್ವರಳು ನಾನೆಯಂತೆ | ತಾನಾತ್ಮನಂತೆ ||

ಶಾಶ್ವತನು ತಾನೆಯಂತೆ ||

ವಿಶ್ವಕ್ಕೆ ತಾಕದಂತೆ | ಈಶ್ವರನು ಇರ್ಪನಂತೆ ||

ದೃಶ್ಯ ತಾನಲ್ಲವಂತೆ | ವಿಶ್ವಾತ್ಮ ನರಹರಿಯಂತೆ ||7||

ಯನ್ನನ್ನೆ ಸೇರಿಕೊಂಡ | ಸುಖವೆಲ್ಲ ಉಂಡ | ಉನ್ನತೈಶ್ವರ್ಯ ಕಂಡ ||

ಹೆಣ್ಣೆಂದು ಮೋಹಗೊಂಡ | ಚೆನ್ನಿಗನು ಯನ್ನ ಗಂಡ ||

ಕಣ್ಣಲ್ಲಿ ಕಾಣದಾದ | ಯನ್ನ ಕೈಬಿಟ್ಟು ಹೋದ ||8||

ಗುರುವೆಂಬ ಮಂತ್ರವಾದಿ | ಏನೇನೊ ಓದಿ | ವಿರಸಕ್ಕಾಯಿತು ಹಾದಿ ||

ಇರುಳು ಹಗಲೆಲ್ಲ ಕಾದಿ | ಜರಿದು ಮಾಡಿದನು ವಾದಿ ||

ದುರಿತವ ಹರಿದೆ | ನರಹರಿ ದಯದಿಂದೆ ||9||

ದೆವ್ವ ಹಿಡಿದಿತ್ತವ್ವ ಯನಗೆ |

ದೆವ್ವ ಹಿಡಿದಿತ್ತು ||ಪ||

ದಿವ್ಯ ಮಂತ್ರದಿಂದ ಯನ್ನ|

ದೆವ್ವ ಬಿಟ್ಟಿತು ||ಅ|ಪ||

ಧನವೆ ಸತ್ಯವೆಂಬ ದೆವ್ವ | ಯನಗೆ ಹಿಡಿದಿತ್ತು ||

ಮನಸಿನಲ್ಲೆ ಮನೆಯ ಮಾಡಿ ಕೂತುಬಿಟ್ಟಿತ್ತು ||

ವಿನುತ ಬೋಧಾ ಮಂತ್ರದಿಂದ ದೂರವಾಯಿತು |

ಕನಕ ಮಣ್ಣುವೊಂದೆಯೆಂಬ ನೆನಹು ಮೂಡಿತ್ತು ||1||

ತನುವೆ ತಾನು ಎಂಬ ದೊಡ್ಡ ದೆವ್ವ ಹಿಡಿದಿತ್ತು ||

ಅನುಪಮಾತ್ಮ ತಾನೆಂದರಿಯೆ ದೆವ್ವ ಬಿಟ್ಟಿತು ||

ಜನನ ಮರಣ ತನಗಿಲ್ಲೆಂಬ ಶಾಂತಿ ದೊರೆಯಿತು ||

ತನುವಿಗಾನು ಸಾಕ್ಷಿಯೆಂಬ ಮರ್ಮ ತಿಳಿಯಿತು ||2||

ಮನ ವಿಕಾರವೆಂಬ ಕೆಟ್ಟ ದೆವ್ವ ಹಿಡಿದಿತ್ತು ||

ಮನಕೆ ಸಾಕ್ಷಿ ತಾನೆಯೆನಲು | ದೆವ್ವ ಬಿಟ್ಟಿತು ||

ಇಣಿಕಿನೋಳ್ಪ ಅರಿಷಡ್ವರ್ಗ ದೂರವಾಯಿತು ||

ಮನವೆ ಬಟ್ಟಬಯಲಾಗುತ್ತ ಮಾಯವಾಯಿತು ||3||

ಗುರುವು ಎಂಬ ಮಂತ್ರಗಾರ ದೆವ್ವ ಬಿಡಿಸಿದ |

ನರನೆ ನೀನು ಅಲ್ಲವೆಂದು ಅರಿವು ಹಿಡಿಸಿದ ||

ನರರ ಮರುಳು ನುಡಿಗೆ ಬೆದರದಂತೆ ಮಾಡಿದ |

ನರಹರೀಂದ್ರ ನೀನೆ ದೈವವೆಂದು ಪೇಳಿದ ||4||

ಶಿವನ ಮಂತ್ರ ಭವನ ನಿನ್ನ ಕಾಯವೆಂದನು |

ಶ್ರವಣ ತಂತ್ರ ಭವವ ನೀಗಿ ಕಾಯ್ವುದೆಂದನು ||

ದಿವಿಜನಾಗಿ ಭುವಿಗೆ ಬೆಳಕು ಈವೆನೆಂದನು |

ಅವಿರಳಾತ್ಮ ಜ್ಯೋತಿ ನಮ್ಮ ನರ ಹರೀಂದ್ರನು ||5||

ಅಂಬಿಗನಿವನಮ್ಮಾ | ನಂಬಿಗೆ ದೋಣಿಯೊಳಿಹನಮ್ಮಾ ||

ಇವನೇ ಗುರುಬ್ರಹ್ಮಾ ||ಪ||

ತುಂಬಿದ ಹೊಳೆ ಬರುತಿರಲು |

ಹಂಬಲಿಸುತ ನಾ ಮರೆಯಿಡಲು ||1||

ಕರುಣ ಕಟಾಕ್ಷದೊಳೆನ್ನ |

ಮೊರೆಗೇಳುತ ಕಾಯ್ದನು ಮುನ್ನ ||2||

ದೋಣಿಯೊಳೇರಿಸಿ ಒಯ್ದ |

ಜಾಣತನದೊಳೆನ್ನನು ಕಾಯ್ದ ||3||

ಮಂತ್ರದ ದೋಣಿಯ ಮಾಡಿ |

ತಂತ್ರದೊಳೊಯ್ದನು ದಯಗೂಡಿ ||4||

ಮರಣದ ಭೀತಿಯ ತಡೆದಾ |

ನರಹರಿದಡವನು ಸೇರಿಸಿದಾ ||5||

ಬೆಪ್ಪಾ ಬೇಡಪ್ಪ ಈ ದರ್ಪ | ನೀನೆ |

ಅಪ್ಪಿಕೊಂಡಿರ್ಪತನು | ಮುಪ್ಪು ಕಾಣಪ್ಪ |

ಸಾ | ವ್ತಪ್ಪಿತೇನಪ್ಪ ||ಪ||

ಅಪ್ಪಾ ನೀನುಂಡೆ ಹೋಳಿಗೆ ತುಪ್ಪಾ | ನಿನ್ನ |

ಅಪ್ಪಾ ಶಿವ ಕೊಟ್ಟನೆಂ || ದೊಪ್ಪಿ ಉಣ್ಣಪ್ಪ |

ಜಾ | ಣಪ್ಪ ನಾಗಪ್ಪ ||1||

ಅಣ್ಣಾ ನೀ ಕಂಡೆ ಕಣ್ಣಿಲಿ ಬಣ್ಣ | ಶಿವನ |

ಪುಣ್ಯ ಸ್ವರೂಪವೆಂ || ದಿನ್ನು ನೋಡಣ್ಣ |

ನೀ | ಧನ್ಯ ಕಾಣಣ್ಣ ||2||

ಮಗುವೇ ನೀನೇಕೆ ಕೊಬ್ಬಿ ನಗುವೇ | ನೀನು |

ಹೋಗುವೇ ಯಮಲೋಕವ || ದಿಗಿಲಾಗಿ ಬಿಡುವೆ |

ನೀ | ಸೊಗವೇನುಪಡುವೆ ||3||

ತಮ್ಮಾ ನೀ ಮುಟ್ಟಿಗೈದ ಕರ್ಮ | ನಿನ್ನ |

ಚರ್ಮಕ್ಕೆ ಶಿವ ಕೊಟ್ಟ | ನಿರ್ಮಾಣ ಧರ್ಮ |

ಈ | ಮರ್ಮದೊಳು ಬ್ರಹ್ಮ ||4||

ಸವಿಯಾಗಿ ಕೇಳಿದಿಂಪು ಗೀತ | ನಿನ್ನ |

ಕಿವಿಯಲ್ಲಿ ಶಿವ ನಿಂತ | ಶ್ರವಣಾರ್ಥವೆಂತ |

ಅನು | ಭವ ಸೌಖ್ಯವಂತ ||5||

ಪೋರಾ ಬಿಡು ನಿನ್ನ ದುರ್ವಿಚಾರ | ಮುಂದೆ |

ಹೋರಾಟ ಸಂಸಾರ || ಭಾರ ಬಲು ಪೂರಾ |

ನಿ | ರ್ಧಾರ ಸುಖ ಸಾರ ||6||

ಹುಡುಗಾ ನೀನಾಗದಿರು ತುಡುಗ | ನಿನ್ನ |

ಹುಡುಗಾಟ ಬಿಡು ಬೇಗ || ಹುಡುಕಿ ನೋ

ಡೀಗ | ಶಿವ | ನೊಡನಾಡುವಾಗ ||7||

ಮೂಗಾ ನೀನಾಗಬೇಡೀಗ | ನೀನು |

ಬೇಗದಿಂ ಧ್ಯಾನಪರ | ನಾಗಲಿದು ಯೋಗ |

ಶಿವ | ನಾಗಬಹುದೀಗ ||8||

ತುಂಟಾ ನೀನಾಗು ಶಿವಭಂಟ | ಬೆನ್ನಿ |

ಗಂಟಿರ್ಪ ಎಂಟು ಮದ | ಗಂಟು ಹರಿ

ನೀನು | ಶಿವ | ನುಂಟು ನಿನಗಿನ್ನು ||9||

ಹುಚ್ಚಾ ನಿನ್ನನ್ನು ಶಿವ ಮೆಚ್ಚ | ಗುರುವೆ |

ಹೆಚ್ಚೆಂದು ನರಹರಿಯ|| ಇಚ್ಛೆಯೊಳು

ಬಾಳು | ನೀ | ಸ್ವಚ್ಛನಾಗೇಳು ||10||

ಕೋಲು ಕೋಲೆನ್ನಿರಣ್ಣ | ಗುರುವಿನ ಕೀಲು ಮೇಲೆನ್ನಿರಣ್ಣಾ ||ಪ||

ಕೋಲು ಮೇಳವೆ | ಶಿವನ | ಲೀಲೆಯಾಗಿಹುದೆಂದು ||

ಕೈಲಾಸ ಸೇರಲು | ಮೂಲವಾಗಿಹುದೆಂದು ||ಅ|ಪ||

ತಾಳ ಮಾತ್ರನು ಶಿವನು | ರಾಗದ | ಲೀಲೆ ಗಿರಿಜೆ ತಾನು ||

ಮೂಲ ಮಂತ್ರದಿ ಸೇರಿ | ಕೇಳಿಯಾಯಿತು ಭಾರಿ ||

ಕಾಲತಂತ್ರವ ಮೀರಿ | ತಾಳಲಯದ ದಾರಿ ||1||

ತಾಳ ಮೇಳನವಾಗಿ | ಸಂತಸ | ತಾಳಿನಾಟ್ಯವು ಸಾಗಿ ||

ಬಾಲೇಂದು ಮೌಳಿಯ | ಲೀಲೆ ಗಾನಂದವ ||

ತಾಳಿ ರಾಗವ ಹಾಡು | ತಾಳೆ ಪಾರ್ವತಿದೇವಿ ||2||

ಗೆಜ್ಜೆ ಕಟ್ಟಿದ ಕಾಲು | ಕುಣಿಯುತ | ಹೆಜ್ಜೆಯಿಟ್ಟರೆ ಮೇಲು ||

ಹೆಜ್ಜೆಪಾಡಿನ ತಾಳ | ಸಜ್ಜು ಕೋಲಿನ ಮೇಳ ||

ಅಜ್ಜಯ್ಯ ಶಿವ ಸಾ | ಯುಜ್ಯಕ್ಕೆ ಮೂಲವು ||3||

ನಂದಿಮದ್ದಳೆ ಹಿಡಿದು | ನುಡಿಸುತ | ಮುಂದೆ ನಿಂದಿರೆ ನಡೆದು ||

ಚಂದದೊಳು ಗಣಪತಿ | ಬಂದು ತಾಳವ ಹಿಡಿಯೆ ||

ಅಂದು ಷಣ್ಮುಖ ನೋಡ | ಬಂದ ವೀರಣ್ಣಗಾಡ ||4||

ವೀಣೆ ನುಡಿಸುತಲಿರಲು | ಶಾರದೆ | ಗಾನ ಮೋಹಕವಿರಲು ||

ತಾನವೇರಿಸಿ ಗೌರಿ | ಯಾನಂದದೊಳು ಪಾಡೆ ||

ಜ್ಞಾನಗಂಗೆಯು ಗಗನ | ಸ್ಥಾನದಿ ಕೇಳಲು ||5||

ಕಂಡ ನರಹರಿ ಗುರುವು | ಶಿವನಾ | ಖಂಡನಾಟ್ಯದ ಇರವು ||

ಪಿಂಡಾಂಡ ಬ್ರಹ್ಮಾಂಡ | ತಾಂಡವಗೈದ ಪ್ರ ||

ಚಂಡ ದೈವವ ತೋರಿ | ಕೊಂಡಾಡುತಿರ್ಪನು ||6||

ರೂಢೀ ಮನದಲ್ಲಿ ಕೂಡಿ | ಕರ್ಮ ಮಾಡಿ |

ಜನ್ಮ ತಾಳಿತ್ತು ನೋಡಿ ||ಪ||

ರೂಢಿ ಕರ್ಮಕೆ ದಾರಿ | ರೂಢಿ ಧರ್ಮಕೆ ದಾರಿ ||

ರೂಢಿ ಪಾಪಕೆ ದಾರಿ | ರೂಢಿ ಪುಣ್ಯಕೆ ದಾರಿ ||1||

ದುಷ್ಟ ಕರ್ಮದ ರೂಢಿ | ದುಷ್ಟ ಜನ್ಮಕೆ ಹೇತು ||

ಶಿಷ್ಟ ಧರ್ಮದ ರೂಢಿ | ಶ್ರೇಷ್ಠ ಜನ್ಮಕೆ ಬಂತು ||2||

ಭಕ್ತಿ ಭಾವವು ಸುವಿ | ರಕ್ತಿ ಯೋಗದ ರೂಢಿ ||

ಮುಕ್ತಿ ಯೀವುದು ಜ್ಞಾನ ಶಕ್ತಿ ಸಾಧನೆ ಮಾಡಿ ||3||

ರೂಢಿ ಮನವಾಗಿತ್ತು | ರೂಢಿ ತನುವಾಗಿತ್ತು ||

ರೂಢಿಯಿಂದ್ರಿಯ ಧರ್ಮ | ಕೂಡಲಾಯಿತು ಕರ್ಮ ||4||

ಕೆಟ್ಟ ರೂಢಿಗಳೆಲ್ಲ | ಬಿಟ್ಟು ಒಳ್ಳೆಯ ರೂಢಿ |

ಇಟ್ಟು ನರಹರಿ ಪಾದ | ಮುಟ್ಟಿದರೆ ಸುಖವುಂಟು ||5||

ಕುರುಡಂಗೆ ಕನ್ನಡಿ ಯಾಕೆ | ಬುದ್ಧಿ |

ಬರಡಂಗೆ ಸುಜ್ಞಾನ ಬೋಧೆಗಳೇಕೆ ||ಪ||

ಮರುಳಂಗೆ ವೈರಾಗ್ಯವೇಕೆ | ನೋಡೆ |

ದುರುಳಂಗೆ ಸನ್ನೀತಿ ನಿಯಮಂಗಳೇಕೆ ||ಅ|ಪ||

ಕಳ್ಳ ನಿಸ್ಪ ೃಹನೆನ್ನಿಸುವನೆ | ನಿತ್ಯ |

ಸುಳ್ಳು ಪೇಳ್ವವ ಸತ್ಯನಿಷ್ಠನಾಗುವನೇ

ಮುಳ್ಳು ತುಳಿದವ ಕುಂಟದಿಹನೇ | ಮೋಹ |

ವುಳ್ಳಾತ ಜಗವನ್ನು ಅಂಟದಂತಿಹನೇ ||1||

ಮಾಯ ಮೋಹಿತ ಜ್ಞಾನಿಯಹನೆ | ಯೋಗ |

ಮಾಯೆಗೆಲ್ಲದೆ ಬ್ರಹ್ಮ ಸಾಧಕನಹನೇ ||

ಕಾಯ ತಾನೆನೆ ಮುಕ್ತನಹನೇ | ತನ್ನ |

ಜಾಯಾಸುತರ ನಂಬಿದವ ಗುರುಸುತನೇ ||2||

ಚೌಳುಭೂಮಿಯು ಬೆಳೆಯುವುದೇ | ದುಷ್ಟ |

ಚಾಳಿ ಮನದೊಳಗಿರೆ ಜ್ಞಾನವುಳಿಯುವದೇ ||

ನಾಳೆ ನಾಡಿದ್ದೆನ್ನಬಹುದೇ | ಜ್ಞಾನ |

ಶೀಲನರಹರಿ ಪಾದ ಸೇರದಿರಬಹುದೇ ||3||

ದಯೆಯಿಲ್ಲದವನಿಗೆ ಧರ್ಮವೇಕೆ ||

ನಯವಿಲ್ಲದವನಿಗೆ ವಿದ್ಯೆಯೇಕೆ ||ಪ||

ಭಯವಿಲ್ಲದವನಿಗೆ ಭಕ್ತಿಯುಂಟೆ |

ಕ್ರಿಯೆಯಿಲ್ಲದವನಿಗೆ ಸತ್ಯವುಂಟೆ ||ಅ|ಪ||

ಕಳ್ಳನಾದವನಿಗೆ ನೀತಿಯಿಲ್ಲಾ |

ಸುಳ್ಳಾಡುವವನಿಗೆ ಸತ್ಯವಿಲ್ಲಾ ||

ಕೊಲ್ಲುತಿರ್ಪಾತಗೆ ಕರುಣವಿಲ್ಲಾ |

ಚೆಲ್ಲಾಡುವವನಿಗೆ ದ್ರವ್ಯವಿಲ್ಲ ||1||

ಮನ ಶುದ್ಧಿಯಿಲ್ಲದೇ ಜಪವು ಯಾಕೆ |

ತನು ಮೋಹವಳಿಯದೇ ತಪವು ಯಾಕೆ||

ಧನ ಲೋಭವಿದ್ದರೇ ದಾನವೇಕೆ |

ಅನುಮಾನವಿದ್ದರೇ ಜ್ಞಾನವೇಕೆ ||2||

ಶಿವ ತಾನೆಯೆಂಬುವ ಭಕ್ತನಲ್ಲ |

ಶಿವ ಬೇರೆಯೆಂಬವ ಜ್ಞಾನಿಯಲ್ಲ ||

ಭವಬಂಧವೆಂಬುದು ಮುಕ್ತಗಿಲ್ಲ |

ಶಿವ ಜೀವರೈಕ್ಯ ನರಹರಿಯು ಬಲ್ಲಾ ||3||

ವೈದಿಕರೆನ್ನುವ ನಾವೆಲ್ಲಾ | ನಿಜ |

ವೇದಗಳರ್ಥವನರಿತಿಲ್ಲಾ ||ಪ||

ವಾದದೊಳಗೆ ಕುಳಿತಿಹೆವಲ್ಲಾ | ಬಲು |

ಭೇದದ ಭಾವವೆ ಹೋಗಿಲ್ಲಾ ||ಅ|ಪ||

ಶಿವನ ವಿಚಾರವ ತಿಳಿದಿಲ್ಲಾ | ಅನು |

ಭವಿಗಳ ನುಡಿಗಳು ಹೊಳೆದಿಲ್ಲಾ ||

ಭವಮಾಲೆಯನೇ ಕಡಿದಿಲ್ಲ | ವೈ |

ಭವ ಸುಜ್ಞಾನವ ಪಡೆದಿಲ್ಲಾ ||1||

ಜಾತಿಯ ಭೇದವು ಹೋಗಿಲ್ಲಾ | ಸ |

ನ್ನೀತಿಯ ಸ್ವಾದವು | ತಾಗಿಲ್ಲಾ |

ಮಾತೇ ಮಂತ್ರಗಳಾಗಿಲ್ಲಾ | ಸಂ |

ಪ್ರೀತಿಯ ತಂತ್ರವು ಸಾಗಿಲ್ಲಾ ||2||

ನಾನೀನೆಂಬುದು ಬಿಟ್ಟಿಲ್ಲಾ | ಅ |

ಜ್ಞಾನದ ಭಾವವ ಸುಟ್ಟಿಲ್ಲಾ ||

ಧ್ಯಾನವು ಮನವನು ಮುಟ್ಟಿಲ್ಲಾ | ಸು |

ಜ್ಞಾನವ ನರಹರಿ ಕೊಟ್ಟಿಲ್ಲಾ ||3||

ಕಲಿತ ವಿದ್ಯೆಯ ದಾನವ ಮಾಡು ||

ಕಲಿಸದಿದ್ದರೆ ಬರುವುದು ಕೇಡು ||

ಕಲಿಸಿಕೊಟ್ಟರೆ ಲೋಕಕ್ಕೆ ಪಾಡು |

ಫಲವನೀಶ್ವರ ಕೊಡುವನು ನೋಡು ||ಅ|ಪ||

ಜ್ಞಾನ ದಾನಕ್ಕೆ ಸಮವಾದುದಿಲ್ಲ |

ಏನು ಕೊಟ್ಟರು ನಿಲ್ಲುವದಲ್ಲ ||

ದಾನ ಮಾಡಿದ ಧನ ಧಾನ್ಯವೆಲ್ಲಾ |

ಹಾನಿಯಪ್ಪುದು ಶಾಶ್ವತವಲ್ಲ ||1||

ಅನ್ನದಾನವು ಸದ್ಯಕ್ಕೆ ಫಲವು |

ಉನ್ನತದ ವಿದ್ಯೆ ಶಾಶ್ವತ ಫಲವು ||

ಇನ್ನು ವಿದ್ಯೆಯೆ ಲೋಕಕ್ಕೆ ಬಲವು |

ಮುನ್ನ ಈಶ್ವರ ಕೊಟ್ಟಂಥ ವರವು ||2||

ಶಿವನನುಗ್ರಹದಿಂದಾದ ಜ್ಞಾನ |

ಶಿವನ ಸೃಷ್ಟಿಗೆ ನೀ ಮಾಡು ದಾನ ||

ಶಿವನ ಕರುಣವ ಪಡೆವ ವಿಧಾನ |

ವಿವರವಾದರೆ ನರಹರಿ ಕರುಣ ||3||

ಪರರ ನಿಂದಿಸುವಾತನು ಮೂರ್ಖ |

ಪರರ ಹಿಂಸಿಸುವಾತನು ಮೂರ್ಖ ||ಪ||

ದುರಿತ ಮಾರ್ಗದೊಳಿರುವವ ಮೂರ್ಖ |

ಕರುಣೆಯಿಲ್ಲದ ನರನತಿ ಮೂರ್ಖ ||ಅ|ಪ||

ಮಾಡಿದುಪಕಾರ ಮರೆದವ ಮೂರ್ಖ |

ಕೂಡಿದವಳನ್ನು ಬಿಡುವವ ಮೂರ್ಖ ||

ಕೇಡು ಪರರಿಗೆ ಮಾಳ್ಪವ ಮೂರ್ಖ|

ಚಾಡಿ ಕ್ಷುದ್ರವ ನುಡಿವವ ಮೂರ್ಖ ||1||

ಹಿಡಿದ ಧರ್ಮವ ಬಿಡುವವ ಮೂರ್ಖ |

ಬಿಡದೆ ಹಠವನು ಮಾಳ್ಪವ ಮೂರ್ಖ ||

ಒಡೆಯನಪ್ಪಣೆ ಮೀರ್ವವ ಮೂರ್ಖ |

ನುಡಿದ ಭಾಷೆಗೆ ತಪ್ಪುವವ ಮೂರ್ಖ ||2||

ಮಾನ ಮರ್ಯಾದೆ ಬಿಟ್ಟವ ಮೂರ್ಖ |

ಹೀನ ಮಾರ್ಗದಿ ನಡೆವವ ಮೂರ್ಖ ||

ತಾನೆ ಹಿರಿಯನೆಂದೆಂಬವ ಮೂರ್ಖ |

ಜ್ಞಾನಿ ನರಹರಿಗೆರಗದವ ಮೂರ್ಖ ||3||

ಸಂತೆ ಕೂಡಿದೆ ನೋಡು ಸಂತೇ || ಬಲ |

ವಂತರೆಲ್ಲರು ಕೊಂಡು ಮಾರಬಹುದಂತೇ ||ಪ||

ಸಂತೆಯೊಳು ರೊಕ್ಕದ ಚಿಂತೆ | ತಂ |

ದಂಥದೆಲ್ಲವ ಮಾರಿಕೊಂಡೊಯ್ವರಂತೆ ||ಅ|ಪ||

ಮೊದಲ ಜನ್ಮದ ಪುಣ್ಯ ರೊಕ್ಕ | ತಂ |

ದುದು ಲಾಭವಗಣಿತ ವ್ಯಾಪಾರ ಪಕ್ಕಾ ||

ಒದಗಿದೈಶ್ವರ್ಯದ ಲೆಕ್ಕ | ಜಯ |

ಮದವಹಂಕಾರಕ್ಕೆ ವಶನಾಗಿ ಸಿಕ್ಕ ||1||

ಹಿಂದೆ ಮಾಡಿದ ಪಾಪದಿಂದ | ತಾ |

ನೆಂದು ಲಾಭವೆಯಿಲ್ಲ ನಷ್ಟ ಬಲು ಬಂಧ ||

ತೊಂದರೆಗಳಾಗಲ್ಕೆ ನೊಂದ | ಬಲು |

ಮಂದಿ ಧಾರಣೆ ವ್ಯಾಪಾರವು ಕಷ್ಟವೆಂದಾ ||2||

ಈಶ್ವರಾರ್ಪಿತ ಪುಣ್ಯದಿಂದಾ | ಜ್ಞಾ |

ನೈಶ್ವರ್ಯ ಸಿದ್ಧಿಸೆ ದುಃಖವಿಲ್ಲೆಂದಾ ||

ಶಾಶ್ವತಾನಂದದೊಳು ನಿಂದಾ | ಜಗ |

ನಶ್ವರಮಾಗಿಹುದೆಂಬ ನಿಶ್ಚಯದಿಂದಾ ||3||

ನಷ್ಟವಿಲ್ಲದ ವ್ಯಾಪಾರ | ಸಮ |

ದೃಷ್ಟಿಯಿಂದಲೆ ಬಂದ ಬ್ರಹ್ಮ ವಿಚಾರ ||

ಸೃಷ್ಟಿ ಸ್ಥಿತಿ ಲಯಕೆಲ್ಲ ದೂರ | ಸಂ|

ತುಷ್ಟನಾಗಿರಲಿಲ್ಲ ಲಾಭ ವಿಕಾರ ||4||

ಜಗವೆಂಬ ಸಂತೆ ಕೂಡಿರಲು | ಯುಗ |

ಯುಗದಿಂದ ವ್ಯಾಪಾರ ನಡೆದು ಬಂದಿರಲು ||

ಹೆಗಲೇರಿ ಪಾಪ ಪುಣ್ಯಗಳು | ತೆಗೆ |

ದೊಗೆದು ನರಹರಿಯೆನ್ನಲಿರವು ಜನ್ಮಗಳು ||5||

ನೀತಿ ಮಾರ್ಗದೊಳಿರುವಾತ ಜಾಣ |

ಜಾತಿಭೇದವನಳಿದಾತ ಜಾಣ ||ಪ||

ರೀತಿನೀತಿಯ ತಿಳಿದಾತ ಜಾಣ |

ಖ್ಯಾತಿ ಧರ್ಮದೊಳಿರುವಾತ ಜಾಣ ||ಅ|ಪ||

ವಿನಯ ವಾಕ್ಯವ ನುಡಿವಾತ ಜಾಣ |

ಮನದಿ ಶಾಂತಿಯ ಪಡೆದಾತ ಜಾಣ |

ತನುವ ನಂಬದೆ ನಡೆದಾತ ಜಾಣ |

ಧನದ ಹಂಬಲ ಬಿಡುವಾತ ಜಾಣ ||1||

ದಾನ ಧರ್ಮವ ಮಾಳ್ಪಾತ ಜಾಣ |

ಜ್ಞಾನ ಬೋಧೆಯ ಕೇಳ್ವಾತ ಜಾಣ ||

ನಾನು ಎನ್ನದೆ ಬಾಳ್ವಾತ ಜಾಣ |

ದೀನಜನರನು ಪೊರೆವಾತ ಜಾಣ ||2||

ಆಸೆಯೆಂಬುದ ಬಿಡುವಾತ ಜಾಣ |

ದೋಷ ಗುಣಗಳ ತಡೆದಾತ ಜಾಣ ||

ಮೋಸ ಮಾಡದೆ ನಡೆವಾತ ಜಾಣ |

ಈಶ ನರಹರಿಯ ನೆನೆವಾತ ಜಾಣ ||3||

ನೀತಿಯ ತಿಳಿಯಣ್ಣಾ | ಲೋಕದ | ಭೀತಿಯ ಕಳೆಯಣ್ಣಾ ||ಪ||

ನೀತಿಯೊಳಿದ್ದರೆ | ಪಾತಕವಿಲ್ಲವು||

ನೀತಿಯೊಳಿರ್ಪವ | ಗೇತಕೆ ಭಯವು ||ಅ|ಪ||

ನಿಂದೆಯ ಮಾಡದಿರು | ಯಾರನು | ಬಂಧಿಸಿ ಕಾಡದಿರು ||

ನಿಂದಿಸಿದವರಿಗೆ | ವಂದನೆಗೈವಗೆ |

ತೊಂದರೆಯಾಗದು | ಎಂದಿಗುಯೆನ್ನುವ ||1||

ಕಳ್ಳನೆನಿಸಬೇಡಾ | ಯಾರೊಳು | ಸುಳ್ಳು ನುಡಿಯಬೇಡಾ ||

ಒಳ್ಳೆಯ ನಡೆನುಡಿ | ಉಳ್ಳವರನು ಹಿಡಿ |

ಕೊಲ್ಲದೆ ಪ್ರಾಣಿಗ | ಳಲ್ಲಿ ಕರುಣೆಯಿಡು ||2||

ಕುಡುಕನಾಗಬೇಡಾ | ಯಾರಿಗು | ಕೆಡುಕು ಮಾಡಬೇಡಾ |

ದುಡುಕದೆ ಕಾರ್ಯವ | ಕೆಡಿಸದೆ ಗೌರವ ||

ಪಡೆದರೆ ಸುಖ ಸಿರಿ ಕೊಡುವನು ನರಹರಿ ||3||

ಜಾತಿಭೇದವೆನ್ನುವಂಥ ದೊಡ್ಡ ಮಾರೀ | ಧರ್ಮ |

ನೀತಿಯೆಲ್ಲ ನುಂಗಿಬಿಟ್ಟೆ ಮಾಯಕಾರೀ ||ಪ||

ಪಾತಕಕ್ಕೆ ನೀನೆ ತೋರಿ ಕೆಟ್ಟ ದಾರಿ | ಜನರ |

ಕೋತಿಯಂತೆ ಕುಣಿಸಿಬಿಟ್ಟೆ ಬೆಡಗು ತೋರಿ ||ಅ|ಪ||

ಧರ್ಮವೆಂಬ ಹೆಸರು ತಾಳಿ ನಿಂತುಬಿಟ್ಟೆ | ವೇದ |

ಧರ್ಮವನ್ನು ಹಾಳುಮಾಡಿ ಕುಂತುಬಿಟ್ಟೆ ||

ಮರ್ಮವನ್ನು ಮುಚ್ಚಿಯಿಟ್ಟು ಜಂಭಪಟ್ಟೆ | ಪಾಪ |

ಕರ್ಮದಲ್ಲಿ ಜನರ ನೂಕಿ ನಕ್ಕುಬಿಟ್ಟೆ ||1||

ಎಲ್ಲಿ ನೋಡಲಲ್ಲಿ ನೀನೆ ಕಾಣುತಿರ್ಪೆ | ಲೋಕ |

ವೆಲ್ಲವನ್ನು ಕೆಡಿಸಿ ವೈರವೆನಿಸಿ ತೋರ್ಪೆ ||

ಖುಲ್ಲ ಜನಗಳಲ್ಲಿ ವೇಷ ತಾಳಿ ಬರ್ಪೆ | ಶರಣ|

ರಲ್ಲಿ ಮಾತ್ರ ನಿಲ್ಲಲಾರದೋಡಿ ಪೋಪೆ ||2||

ಆಸೆ ದ್ವೇಷ ಮೋಸವೆಂಬ ಪಾಶ ಹಾಕಿ | ಸರ್ವ |

ನಾಶ ಮಾಡಿ ನರಕದಲ್ಲಿ ಜಗವ ನೂಕಿ ||

ವೇಷಭೂಷಣಕ್ಕೆ ತಕ್ಕ ತಾಳ ಹಾಕಿ | ಕುಣಿವ |

ದೋಷಿ ನಿನ್ನ ಸುಡುವ ನರಹರೀಂದ್ರ ಸೋಕಿ ||3||

ಅಂಗಹೀನರ ನೋಡಿ ನಗಬೇಡಾ | ಅವರಲ್ಲಿ ಯಿರ್ಪನು |

ಮಂಗಳಾತ್ಮಕ ಶಿವನು ಎಲೆ ಮೂಢಾ ||ಪ||

ಅಂಗಹೀನರ ಕಂಡು ನಗುವವ |

ಅಂಗಹೀನನು ತಾನೆಯಾಗುವ ||

ಅಂಗ ಭಂಗದಿ ಮುಂದೆ ಜನ್ಮವ |

ಮಂಗನಂದದಿ ಹೊಂದಿ ಪುಟ್ಟುವ ||ಅ.ಪ||

ಕರುಣೆಯಿಂದಲಿ ಅಂಗವಿಕಲರನು | ಕಾಪಾಡುವಾತನು |

ಧರಣಿಗೀಶ್ವರನಾಗಿ ಸುಖಿಸುವನು ||

ಕರಣ ನಿರ್ಮಲನಾಗಿ ಪಾಪವ |

ಹರಿದು ಕಾಂಬನು ಸ್ವಸ್ವರೂಪವ ||

ಕರುಣೆಯಿಂದಲಿ ಶಿವನು ಸಲಹುವ |

ನಿರುತ ನಿತ್ಯಾನಂದವೀಯುವ | |1||

ಕೋಪ ತಾಪದಿ ಅಂಗಹೀನರನು | ದಂಡಿಸಿದ ಮಾನವ |

ತಾ ಪಡೆವನವರಂತೆ ರೂಪವನು |

ಆಪದಂಗಳ ತಂದುಕೊಂಬನು ||

ಪಾಪವೆಲ್ಲವ ತುಂಬಿಕೊಂಬನು |

ಈ ಪರಿಯೊಳಾ ಅಂಗಹೀನನು |

ಪಾಪ ಶೇಷವನಳಿದುಕೊಂಬನು ||2||

ಅಂಗಹೀನರ ಸೇವೆಗೈದವನು | ತಾ ಪಡೆವನೈ ಸ |

ರ್ವಾಂಗ ಸುಂದರವಾದ ದೇಹವನು ||

ಭಂಗವಿಲ್ಲದ ಸೌಖ್ಯ ಸಂಪದ |

ಹಿಂಗದಿರ್ಪುದು ನರಹರೀ ಪದ ||

ಸಂಗವಪ್ಪುದು ಮುಕ್ತಿ ಸಂಪದ |

ಮಂಗಳಾಂಗನಾಗಿ ಸುಖಿಸಿದ ||3||

ಹಣವಂತರೆಲ್ಲ ಸದ್ಗುಣವಂತರಾದರೆ ಲೇಸು ಲೇಸು ||ಪ||

ಘನ ವಿದ್ಯಾವಂತರು ವಿನಯವುಳ್ಳವರಾಗೆ ಲೇಸು ಲೇಸು|

ಶ್ರದ್ಧೆಯುಳ್ಳವರೆಲ್ಲ ಶುದ್ಧಾತ್ಮರಾದರೆ ಲೇಸು ಲೇಸು ||ಅ.ಪ||

ಬುದ್ಧಿವಂತರು ಆತ್ಮಶುದ್ಧಿಯಿಂದಿದ್ದರೆ ಲೇಸು ಲೇಸು ||1||

ವೇದವೇದ್ಯರುಯೆಲ್ಲ ಭೇದವಳಿದಿದ್ದರೆ ಲೇಸು ಲೇಸು |

ವೇದಾಂತಿಗಳು ದುರ್ವಿವಾದವಳಿದಿದ್ದರೆ ಲೇಸು ಲೇಸು ||2||

ಮಾತು ಬಲ್ಲವರು ಸನ್ನೀತಿ ಪರರಾದರೆ ಲೇಸು ಲೇಸು ||

ಸ್ವಾರ್ಥಿಗಳೆಲ್ಲ ಪರಾರ್ಥ ಪರರಾದರೆ ಲೇಸುಲೇಸು ||3||

ಶೂರರಾದವರೆಲ್ಲ ಕ್ರೂರತ್ವವಳಿದರೆ ಲೇಸು ಲೇಸು |

ದಾರಿದ್ರ್ಯವುಳ್ಳವರು ಗೌರವ ಪಡೆದರೆ ಲೇಸು ಲೇಸು ||4||

ಅಧಿಕಾರವುಳ್ಳವರು ವಿನಯ ಪರರಾದರೆ ಲೇಸು ಲೇಸು |

ಬುಧರೆಲ್ಲ ನರಹರಿಪದವ ನಂಬಿದ್ದರೆ ಲೇಸು ಲೇಸು ||5||

ಬಡವಾ ಲೋಕಕ್ಕೆ ದುಡಿವಾ | ದುಃಖಪಡುವಾ |

ಬಾಯಿ | ಬಿಡುವ ಕಂಗೆಡುವಾ ||ಪ||

ನಿರಹಂಕಾರವ ಕೂಡಿ | ಪರರ ಸೇವೆಯ ಮಾಡಿ ||

ಅರೆಹೊಟ್ಟೆಗಿಲ್ಲದೆ | ಬರಿಯ ಮೈಯೊಳಗಿರ್ಪ ||1||

ಮನೆಯಿಲ್ಲ ಮಠವಿಲ್ಲ | ಧನಧಾನ್ಯ ತನಗಿಲ್ಲ ||

ಅನುಗಾಲ ಶ್ರಮಪಟ್ಟರಿನಿತು ಸೌಖ್ಯವು ಇಲ್ಲ ||2||

ಬೆವರನ್ನು ಸುರಿಸುತ್ತ | ಶಿವನನ್ನು ನೆನೆಯುತ್ತ ||

ಸವೆದ ದೇಹವ ಹೊತ್ತ | ಇವ ಕರ್ಮಯೋಗಿಯು ||3||

ಯಾರು ನೋಡಿದರಿವನ | ಸೇರಲಾರರು ಭೂಮಿ ||

ಭಾರವಾಗಿಹನೆಂದು | ದೂರುತ್ತಲಿರುವರು ||4||

ಬಡವಂಗೆ ಗುರು ಬೋಧೆ | ಹಿಡಿಸಿ ವೈರಾಗ್ಯವು ||

ದೃಢವಾಗಿ ನರಹರಿಯ | ಬಿಡದಂತೆ ಹಿಡಿದಿರ್ಪ ||5||

ದೀನಂಗೆ ಪರಮಸು | ಜ್ಞಾನ ಬೋಧಿಸಲಾಗಿ |

ಆನಂದವಾಗಿರ್ಪು | ದೇನು ಸಂಶಯವಿಲ್ಲ ||6||

ಬಡವನೆ ಸನ್ಯಾಸಿ | ಬಡವ ತಾ ನಿರ್ದೋಷಿ |

ಬಡವಂಗೆ ನರಹರಿ | ಕಡುಮಿತ್ರನಾಗಿರ್ಪ ||7||

ಬಡತನವ ಕೊಟ್ಟೆ ಯಾತಕ್ಕೆ ಶಿವನೆ |

ಬಿಡದು ಮುಂದಕ್ಕೆ ಯನಗೆ ಮಾರ್ಗವನೆ ||ಪ||

ಒಡಲ ಕರ್ಮಕ್ಕೆ ಶಿಕ್ಷೆಯೆಂದಿದನೆ |

ಕೊಡುವೆ ನೀನೆಂದು ನಂಬಿರುವೆ ನಾನೆ ||ಅ|ಪ||

ಬರುವ ದುಃಖಕ್ಕೆ ಕಡೆಯೆಂಬುದಿಲ್ಲ |

ತೆರುವ ಲೆಕ್ಕಕ್ಕೆ ತಡೆಯೆಂಬುದಿಲ್ಲ ||

ಸುರಿವ ಕಣ್ಣೀರ ಮಳೆ ನಿಲ್ಲಲಿಲ್ಲ |

ಹರನೆ ನಿನಗೇಕೆ ಕಾರುಣ್ಯವಿಲ್ಲ ||1||

ದಟ್ಟ ದಾರಿದ್ರ್ಯ ಬೆಟ್ಟವಾಗಿಹುದು |

ಕುಟ್ಟಿಕೊಂಡಳಲು ಬಿಟ್ಟು ಹೋಗದಿದು ||

ತುಟ್ಟ ತುದಿತನಕ ಗಟ್ಟಿಯಾಗಿಹುದು |

ಅಟ್ಟಿ ಬಂದೆನ್ನ ಸುಟ್ಟು ಹಾಕುವುದು ||2||

ಪರರ ಚಾಕರಿಗೆ ತನುವನ್ನು ತೆತ್ತೆ |

ಕರುಳು ಸುಡುವಂಥ ದುಃಖವ ಹೊತ್ತೆ ||

ನರಳಿ ರೋಗರುಜಿನದಿಂದ ಸತ್ತೆ |

ನರಹರಿಯೆ ಸಾಕು ಜನ್ಮವೆನ್ನುತ್ತೆ ||3||

ಕುಡುಕಾ ಮನೆಗೆಲ್ಲ ಕೆಡುಕಾ |

ಬಾಯಿಬಡುಕಾ | ತಪ್ಪಿ | ದರೆ ಕೊಲೆಗಡುಕಾ ||ಪ||

ಬಾಯಿಗೆ ಬಂದಂತೆ | ನಾಯಿಯಂದದಿ ಬೊಗಳಿ ||

ತಾಯಿ ತಂದೆಗಳನ್ನು | ನೋಯಿಸುತ್ತಿರುವಂಥ ||1||

ಹೆಂಡಿರು ಮಕ್ಕಳಿಗೆ | ತಿಂಡಿತೀರ್ಥಗಳಿಲ್ಲ ||

ಕಂಡದ್ದು ಕೊಂಡೊಯ್ದು | ಹೆಂಡ ಕುಡಿಯುತಲಿರ್ಪ ||2||

ಮಾನಾಭಿಮಾನಗ | ಳೇನೊಂದನೆಣಿಸದೆ ||

ತಾನೆ ಮೈಮರೆದಿರ್ಪ | ತ್ರಾಣವಿಲ್ಲದೆ ಸಾಯ್ವ ||3||

ಹಿತ ವಾಕ್ಯಗಳ ಪೇಳೆ | ಮತಿಗೆಟ್ಟು ನುಡಿಯುವ ||

ಸತಿಸುತರನು ಬಡಿದು | ಗತಿಗೇಡಿಯೆನಿಸುವ ||4||

ಕುಡಿತದಿಂದಲೆ ಇವನ | ದುಡಿಮೆಯೆಲ್ಲವು ಹೋಗಿ ||

ಒಡೆಯ ನರಹರಿ ಪಾದ | ಹಿಡಿಯಲಾರನು ಪಾಪಿ ||5||

ಸೋಮಾರಿ ಮನೆಗೆ ಹೆಮ್ಮಾರಿ | ಎಷ್ಟು |

ಛೀಮಾರಿ ಮಾಡಿದರು ಬಿಡಲಿಲ್ಲ ದಾರಿ ||ಪ||

ಕಾಮಾರಿಗಿವನೊಬ್ಬ ವೈರಿ | ಕೆಟ್ಟ |

ಸೋಮಾರಿ ನರಕಕ್ಕೆ ತಾ ಬಿದ್ದ ಜಾರಿ ||ಅಪ||

ಹುಟ್ಟಿ ಸಾರ್ಥಕವಾಗಲಿಲ್ಲ | ತಾನು |

ಕೆಟ್ಟುದಲ್ಲದೆ ಪರರ ಕೆಡಿಸಲು ಬಲ್ಲ ||

ಹೊಟ್ಟೆಬಟ್ಟೆಗೆ ಗತಿಯಿಲ್ಲಾ | ಮಾನ |

ಬಿಟ್ಟು ವೇಷವ ತೊಟ್ಟು ಬೇಡುತಿಹನಲ್ಲಾ ||1||

ಸತಿ ಪುತ್ರರನು ದೂರವಿಟ್ಟು | ತಾನು |

ಮತಿವಂತನೆಂದು ಕಾವಿಯ ವಸ್ತ್ರವುಟ್ಟು |

ಅತಿ ಶ್ರೇಷ್ಠ ಯತಿಯೆನಿಸಿಬಿಟ್ಟು | ಸತ್ಯ |

ವ್ರತ ಬಿಟ್ಟು ಮತಿಗೆಟ್ಟು ತಿರುಗುವುದೆ ಪಟ್ಟು ||2||

ಮರುಳು ಮಾತುಗಳ ತಾನಾಡಿ | ಜನರ |

ಬೆರಗು ಮಾಡುತಲಿರ್ಪುದಿವನಿಗೆ ರೂಢಿ ||

ಅರಿತು ನೋಡಿದರಿವನು ಕೇಡಿ | ನಮ್ಮ |

ನರಹರಿಯ ಸದ್ಬೋಧೆಯನು ಕೇಳಿ ನೋಡಿ ||3||

ಆಸೆಯೆ ದುಃಖ ನಿ | ರಾಸೆಯೆ ಸುಖವು ||ಪ||

ಆಸೆಯನಳಿದರೆ | ಮೋಕ್ಷವು ನಿಜವು ||ಅ|ಪ||

ಆಸೆಯೆ ಪಾಶವು | ಆಸೆಯೆ ದೋಷವು ||

ಆಸೆಯೆ ಬಂಧ ನಿ | ರಾಸೆಯೆ ಮೋಕ್ಷ ||1||

ಆಸೆಯೆ ಸರ್ವವಿ | ನಾಶ ಕಾರಣವು ||

ಆಸೆಯ ವಿಷಯಕೆ | ದಾಸನ ಮಾಳ್ಪುದು ||2||

ಆಸೆಯ ನೀತಿಗೆ | ಆಸನವಾಗಿದೆ ||

ಆಸೆಯ ಬಿಡಲು ಸ | ನ್ಯಾಸವೆ ನಿಜವು ||3||

ವಾಸನ ತ್ರಯಗಳಿ | ಗಾಸೆಯೆ ಕಾರಣ ||

ಮೋಸವಗೊಳಿಸುವು | ದಾಶಾಕಿರಣ ||4||

ಆಸೆಯೆ ಲೋಕ | ವಿ | ಲಾಸವೆಂದೆನಿಪುದು ||

ಆಸೆಯ ಬಿಡಲು ಕೈ | ಲಾಸವೆ ದೊರೆವುದು ||5||

ಐಹಿಕದಾಸೆಯ | ದಾಹವ ತ್ಯಜಿಸಲು ||

ಮೋಹ ವಿಷಯ ಸಂ | ದೇಹವಳಿಯುವುದು ||6||

ನರರನು ಆಸೆಯೆ | ನರಕಕೆ ಒಯ್ವುದು ||

ಹರಿಯಲು ಆಸೆಯ | ನರಹರಿಯಾಗುವ ||7||

ಬಡವರ ನೋಯಿಸಬೇಡಾ ||ಪ||

ಬಡವರ ಬಂಧುವೆ ಪರಶಿವ ನೋಡಾ ||ಅ|ಪ||

ಬಡವರೊಳಗೆ ಕಡು ಬಡವನು ಶಿವನು |

ಪಡೆಯಲು ಭಿಕ್ಷವ ಕಾದಿರುತಿಹನು ||

ಹುಡುಕಿದರೆಲ್ಲಿಯು ಸಿಕ್ಕದ ಶಿವನು |

ಬಡವರವೊಡಲೊಳಗಿಹನು ||1||

ಬಡವರು ನೋಯಲು ಶಿವ ಶಾಪವನು |

ಕೊಡುವನು ಎಂಬುದ ಮರೆತಿರುವವನು ||

ಬಡವರ ಹಿಂಸಿಸಿ ಯಮ ಲೋಕದೊಳು |

ಪಡೆವನು ಶಿಕ್ಷೆಯ ಕೇಳು ||2||

ದೀನರ ಬಾಂಧವನಾಗಿಹ ಶಿವನು |

ದೀನತೆಗಾದರೆ ವಶವಾಗುವನು ||

ದೀನರ ಕಂಡರೆ ಕರುಣಿಸು ನೀನು |

ಶ್ರೀನರಹರಿ ಕಾಯುವನು ||3||

ಜಗವೇ ಪರಾರ್ಥವಾಗಿ ನಿಂತಿರುವ |

ಬಗೆಯನು ನೀ ತಿಳಿ ಎಲೆ ಮನವೇ ||ಪ||

ಜಗದೀಶ್ವರನಿಗೆ ಪೂಜೆ ಪರಾರ್ಥವು |

ಸೊಗಸಾಗಿಯೆ ನೀ ತಿಳಿ ಮನವೇ ||ಅ.ಪ||

ಸ್ವಾರ್ಥವೆ ಪಾಪ ಪರಾರ್ಥವೆ ಪುಣ್ಯವು |

ಸಾರ್ಥಕ ಪರಾರ್ಥವೆಲೆ ಮನವೇ ||

ಧೂರ್ತರು ಸ್ವಾರ್ಥವ ಸಾಧಿಸಿ ಪಾಪಕೆ |

ಪಾತ್ರರಾಗುವರು ಎಲೆ ಮನವೇ ||1||

ಪ್ರತಿಫಲ ಬಯಸದೆ ತರುಲತೆ ಗುಲ್ಮವು |

ಹಿತಕರ ಫಲಗಳನೀಯುವುವು ||

ಸತತವು ಪಶುಗಳು ದುಡಿಯುತ ಪಾಲ್ಗರೆ |

ಯುತಲಿವೆ ಪರರುಪಕಾರಕ್ಕೆ ||2||

ಇಳೆ ಬೆಳೆಯುತಲಿದೆ ಪರಾರ್ಥಕಾಗಿಯೆ |

ಮಳೆ ಸುರಿಯುತಲಿದೆ ಎಲೆ ಮನವೇ ||

ಬೆಳಗುವರಾರವಿ ಶಶಿಗಳು ಪರಾರ್ಥ |

ಚಲಿಪುದು ವಾಯುವು ಎಲೆ ಮನವೇ ||3||

ದುಷ್ಟ ಮೃಗಂಗಳು ದುಷ್ಟಮಾನವರು |

ಭ್ರಷ್ಟ ಸ್ವಾರ್ಥದೊಳು ಸಾಯುವರು ||

ಶಿಷ್ಟರು ಸಾಧುಮೃಗಂಗಳು ನಿರುತವು |

ಸ್ಪಷ್ಟದಿ ಪರಾರ್ಥಗೈಯುವರು ||4||

ವಿಶ್ವವೆ ಪರೋಪಕಾರಕೆ ನಿಂತಿದೆ |

ನಿಸ್ವಾರ್ಥದಿ ಕೇಳೆಲೆ ಮನವೇ ||

ಈಶ್ವರ ನರಹರಿಯೊಲುಮೆಯ ಪಡೆಯಲು |

ವಿಶ್ವಾಸದಿ ನಡೆಯೆಲೆ ಮನರೇ ||5||

ಪರಹಿತವನ್ನಾಚರಿಸದೆಯಿರುವವ |

ನರನೊಬ್ಬನೆ ಕೇಳೆಲೆ ಮನವೇ ||

ಪರ ಹಿಂಸೆಯ ಬಿಟ್ಟಾತಗೆ ಗುರುವರ |

ನರಹರಿಯೊಲಿಯುವ ನೆಲೆ ಮನವೇ ||6||

ಒಬ್ಬರೊಬ್ಬರ ಸೇರದಿಹರು | ಜಗ |

ಕೊಬ್ಬ ದೇವರು ಕರ್ತನೆಂದರಿಯದವರು ||ಪ||

ಕೊಬ್ಬಿ ಲೋಕದಿ ನಡೆಯುತಿಹರು | ಮಾಯ |

ಮಬ್ಬಿನಿಂದಲೆ ಯಮನ ಪಾಲಾಗುತಿಹರು ||ಅ|ಪ||

ಟಗರ ಕಾಳಗದಂತೆ ಲೋಕ | ಜೀ |

ವಿಗಳೆಲ್ಲ ಬಡಿದಾಡುತಿಹುದವಿವೇಕ ||

ಜಗವೆಲ್ಲ ತುಂಬಿಹುದೇಕ | ಸೊಂ |

ಪೊಗೆದ ಬ್ರಹ್ಮವು ಎನ್ನುವುದೆ ಸದ್ವಿವೇಕ ||1||

ಜಗವೆಲ್ಲ ಒಂದೆ ಕುಟುಂಬ | ಈ |

ಜಗಕೆಲ್ಲ ಶಿವನೊಬ್ಬನೇ ತಂದೆಯೆಂಬ ||

ಸೊಗಸಾದ ಸದ್ಭಾವ | ತುಂಬಿ ತಾ |

ನಿಗದಿ ಮಾಡಿರುವಾತ ವಿಶ್ವ ಕುಟುಂಬಿ ||2||

ಸ್ವಾರ್ಥ ಬಿಟ್ಟರೆ ಜಗಳವಿಲ್ಲಾ | ನಿ |

ಸ್ವಾರ್ಥ ಸೇವೆಗೆ ಮಿಕ್ಕ ಜಪತಪವಿಲ್ಲಾ ||

ವ್ಯರ್ಥಾಲಾಪದಿ ಸೌಖ್ಯವಿಲ್ಲಾ | ಜಗ |

ಕರ್ತ ನರಹರಿ ಬೋಧೆ ನಿಜವಾಯಿತಲ್ಲಾ ||3||

ಬಿಡಲೊಲ್ಲದೀ ಸಂಸಾರ |

ವೊಡಲಲ್ಲೆ ತುಂಬಿತು ಪೂರ ||ಪ||

ಕಡಲಂತೆ ಬಲು ವಿಸ್ತಾರ |

ಕಡೆ ಹಾಯಿಸೋ ಗುರುವೀರಾ ||ಅ|ಪ||

ಮಾಯಾ ವಿಕಾರವು ಸೇರಿ |

ಕಾಯಾಕೃತಿಯೊಳಿದು ತೋರಿ |

ಛಾಯಕ್ಕೆ ಮೋಹಿಸಿ ಜಾರಿ |

ಹೋಯಿತು ನರಕಕೆ ಸೇರಿ ||1||

ಶಿವನಾಮ ಧ್ಯಾನಿಸಗೊಡದು |

ಸುವಿಚಾರ ಮಾಡಲು ಬಿಡದು |

ಅವಿವೇಕಕೆಳೆದಾಡುವುದು |

ಭವಬಾಧೆಗೀಡಾಗಿಹುದು ||2||

ಮರುಭೂಮಿಯೊಳು ಬಾಯಾರಿ |

ಅರಚುತ್ತ ಪ್ರಾಣವು ಜಾರಿ |

ಇರುವಂತೆಯೀ ಸಂಸಾರಿ |

ನರಳುತ್ತಲಿಹನ ವಿಚಾರಿ ||3||

ಬಲೆಯಲ್ಲಿ ಬಿದ್ದಿಹ ಮೃಗವು |

ಕೊಲುವಾತನಿಗೆ ಕೈವಶವು ||

ತಿಳಿಯಲ್ಕೆ ಸಂಸೃತಿ ಬಲವು |

ಸುಲಭದೊಳು ಯಮನಿಗೆ ವಶವು ||4||

ಪರಮಾರ್ಥ ಬೇಕೆನ್ನುವುದು |

ದುರಿತಕ್ಕೆ ಕೂಡಿಸುತಿಹುದು |

ನರಹರಿಯ ಪಾದವ ಹಿಡಿದು |

ಶರಣಾಗಲಿದು ಪೋಗುವುದು ||5||

ಶನಿಮಹಾತ್ಮೆಯ ಕೇಳಿದವ ಧನ್ಯ | ಅದರಂತರಾರ್ಥದ|

ಅನುಭವಾಮೃತ ಕುಡಿದವನೆ ಮಾನ್ಯ ||ಪ||

ಮನ ಮಹತ್ವಾಕಾಂಕ್ಷೆ ತುರಗವ |

ಜನಪ ವಿಕ್ರಮನೇರಿ ಹೋಗುವ ||

ಜನಿಪ ಸಂಸೃತಿಯಡವಿ ಸೇರುವ |

ಕೊನೆಗೆ ಸೇರುವ ತಾಮಲಿಂದವ ||ಅ.ಪ||

ಮೋಹವೆಂಬಾಲೋಲಿಕೆಯ ಗೆದ್ದಾ | ಲೋಕ ಪ್ರಸಿದ್ಧ |

ದ್ರೋಹವಿಲ್ಲದೆ ಎಚ್ಚರದೊಳಿದ್ದ ||

ಈ ಹದನವನು ಕಂಡು ಶನಿ ನಿ

ರ್ವಾಹ ಕಾಣದೆ ಹಂಸ ರೂಪದಿ ||

ಸಾಹಸದಿ ಮುತ್ತುಗಳ ಹಾರವ |

ಸೋಹಮೆನ್ನುತ ನುಂಗಿಯಡಗಿದ ||1||

ಸತ್ಯಹಂಸನ ಕೌತುಕವ ಕಂಡಾ | ಜನ್ಮಾಂತರಂಗಳು|

ಮಿಥ್ಯವೆನಲುಪಾಯ ತಿಳುಕೊಂಡಾ ||

ನಿತ್ಯವಿಪ್ಪತ್ತೊಂದು ಸಾವಿರ |

ದತ್ತಲಾರ್ನೂರಾದ ಹಾರದ ||

ಮುತ್ತು ನುಂಗುವ ಹಂಸನೆಂಬುದ |

ತತ್ವ ದರ್ಶನವಾಗಿ ನಂಬಿದ ||2||

ಕಳ್ಳನೆನೆಸಿದ ಕದಿಯದವನಾಗಿ | ಆ ರಾಜಯೋಗಿ |

ಸುಳ್ಳನೆನಿಸಿದ ಸತ್ಯ ಪರನಾಗಿ ||

ಇಲ್ಲಸಲ್ಲದ ದೂರುಹೊತ್ತನು |

ಒಲ್ಲೆನೆನ್ನದೆ ಶಿಕ್ಷೆ ಪಡೆದನು ||

ಇಲ್ಲದಿರುವೀ ಮಾಯೆ ಬ್ರಹ್ಮದಿ |

ಉಳ್ಳುದೆನ್ನಿಸಿ ತೋರುವಂದದಿ ||3||

ಕಾಲು ಕೈಗಳ ಕಡಿದು ಹಾಕಿದರು | ಊರಾಚೆಗೊಯ್ದರು |

ಕೂಳು ಹಾಕದೆ ಹಿಂಸೆಪಡಿಸಿದರು ||

ಬಾಲೆಯೊಬ್ಬಳ ಕರುಣ ಪಡೆಯುತ |

ಬಾಳುತಿದ್ದನು ಗಾಣ ನಡೆಸುತ |

ಲೀಲೆಯಿಂ ಸುಜ್ಞಾನ ದೀಪಕ |

ಮಾಲೆ ರಾಗವ ಪಾಡುತಿದ್ದನು ||4||

ನಡೆಯ ಹಂಸನ ಕಂಡು ವಿಕ್ರಮನು | ಅನುಭಾವ ಪೂರ್ಣನು|

ನುಡಿದ ದೀಪಕಮಾಲ ರಾಗವನು ||

ಅಡಗಿ ತಾಮಸ ಬೆಳಗುತಿರ್ದುದು |

ನುಡಿಯ ದೀಪದ ಮಾಲೆ ತಾನದು ||

ನಡೆಯು ನುಡಿಯೊಳಗೈಕ್ಯವಾದುದು |

ಒಡೆಯ ನರಹರಿ ಕರುಣವೇಯಿದು ||5||

ಇರವೇ ನೀನೆಲ್ಲಿ ಇರುವೆ | ನಿನ್ನ |

ಅರಿಯದ ನರರಿಗೆ ಕಾಣದಂತಿರುವೆ ||ಪ||

ಧರೆಯೊಳಗಾಡುವೆ | ಶರಧಿಯ ಮೀರುವೆ |

ಅಂಬರವೇರುವೆ | ಅರಿವಾಗಿ ಮೆರೆವೆ ||ಅ|ಪ||

ನೆಲದಿ ಗೂಡನು ಮಾಡಿ | ಹರಿದಾಡುತಿರುವೇ |

ಜಲದಿ ನಿರ್ಭಯವಾಗಿ ಕೂಗಾಡುತಿರುವೇ ||

ಥಳಥಳ ಹೊಳೆಯುತ್ತ ಅಗ್ನಿಯೊಳಿರುವೇ |

ಚಲಿಸುತ್ತ ಮರುತನ ಬಳಸಿಕೊಂಡಿರುವೇ ||1||

ಅರಿವೆನ್ನಿಸುತ ಅಂಬರವನೆ ತುಂಬಿರುವೇ |

ಪರಮ ಸುಖವೆನ್ನಿಸಿ ಜಗವ ನುಂಗಿರುವೇ ||

ಮರವರಿವೆಗೆ ನೀನೆ ಮೂಲವಾಗಿರುವೇ |

ಪರಬೊಮ್ಮವೆನ್ನಿಸಿ ಮೆರೆಯುತ್ತಲಿರುವೆ ||2||

ನಿನ್ನ ಕಂಡವರಿಲ್ಲ ನೀನಿಲ್ಲದೆಡೆಯಿಲ್ಲ |

ನಿನ್ನ ಕಂಡವರಿಗೆ ಏನೇನು ಭಯವಿಲ್ಲ ||

ನಿನ್ನೊಡನಾಟವ ಯೋಗಿ ತಾನೇ ಬಲ್ಲ |

ನಿನ್ನನ್ನೆ ನರಹರಿಯೆಂದರಿತೆನಲ್ಲಾ ||3||

ಕೂಡಲಿಲ್ಲವೆ ನಮ್ಮ ಶಿವನಾ | ನಿಮ್ಮ |

ಒಡನಾಡಿಯಾದರೂ ಕಾಣದಿರ್ಪವನಾ ||ಪ||

ಬೇಡಿದಿಷ್ಟಾರ್ಥವೀವವನಾ | ಲೋಕ |

ರೂಢಿಯೆಲ್ಲವ ಮೀರಿ ತೋರುತಿರ್ಪವನಾ ||ಅ|ಪ||

ಸ್ವರವರ್ಣ ಮೂಲನಾದವನಾ | ಭಾ|

ಸ್ವರಪೂರ್ಣ ನಿರ್ವರ್ಣನಾಗಿ ನಿಂತವನಾ ||

ಪರಿಪೂರ್ಣನೆಂದೆನಿಸಿದವನಾ | ವಿ|

ಸ್ತರ ಸಪ್ತಕೋಟಿ ಮಂತ್ರಾಶ್ರಯ ಶಿವನಾ ||1||

ಅರ್ಧಮಾತೃಕೆಯೆನ್ನಿಸಿರುವಾ | ವ |

ರ್ಣಾರ್ಧವೆಂದೆನಿಸುತ್ತ ವರ್ಣಗಳ ಬೆರೆವಾ ||

ಶುದ್ಧನಾಗಿಯೆ ಕೊನೆಗೆ ತೋರ್ವ | ತಾ |

ನಿದ್ದು ಇಲ್ಲದ ಹಾಗೆ ಬೆಳಗುತ್ತಲಿರುವಾ ||2||

ಮನದಲ್ಲೆ ಮನೆ ಮಾಡಿ ನಿಂತ | ಈ |

ತನುವಿನಲ್ಲಿಯೆ ಕೂಡಿ ಕೂಡದಿರುವಂಥಾ ||

ಅನಘನೀತನು ಪೂರ್ಣಶಾಂತಾ | ಪಾ |

ವನಮೂರ್ತಿ ನರಹರಿ ಗುರು ಪುಣ್ಯವಂತಾ ||3||

ನೇತ್ರ ಇಂದ್ರಿಯ ಮುಖ್ಯವು | ಸರ್ವೇಂದ್ರಿಯದ |

ಸೂತ್ರ ನೇತ್ರದೊಳೈಕ್ಯವು ||ಪ||

ನೇತ್ರಾನಂದದ ಸಖ್ಯ | ನೇತ್ರದಿಂದಲೆ ಸೌಖ್ಯ||

ನೇತ್ರಸಾಕ್ಷಿಯೆ ವಾಕ್ಯ | ನೇತ್ರವಂತರ್ಲಕ್ಷ್ಯ ||ಅ|ಪ||

ಕಣ್ಣೊಳಾತ್ಮನ ಜ್ಯೋತಿಯು | ಹೊರ ಹೊಮ್ಮುವ |

ಸನ್ನೆ ಜಾಗ್ರದ ರೀತಿಯು ||

ಕಣ್ಣೊಳಗೆ ನಿವೃತ್ತಿ | ಯನ್ನು ಗೈವುದೆ ಸುಪ್ತಿ |

ಮುನ್ನ ಜಾಗ್ರದ ವೃತ್ತಿ | ಜನ್ಯ ಸ್ವಪ್ನಾಕೃತಿ ||1||

ಚಕ್ಷು ಇಂದ್ರನ ಮಂದಿರಾ | ಬಿಡುಗಣ್ಣರ |

ರಕ್ಷಕನತಿ ಸುಂದರಾ ||

ಈ ಕ್ಷಣಮಾತ್ರ ಸ | ಹಸ್ರಾಕ್ಷನಾಗಿ ಪ |

ರೀಕ್ಷಿಸಿ ಸುಖ ಭೋಗ | ತಕ್ಷಣ ಕೊಡುತಿರ್ಪ ||2||

ಅಕ್ಷಿಯಲ್ಲಿದೆ ಅರಿವು | ಲೋಕಕ್ಕೆಲ್ಲಾ |

ಅಕ್ಷಿಯಲ್ಲಿದೆ ಮರೆವು ||

ಅಕ್ಷಿ ಪಾಪದ ರೂಪ | ಅಕ್ಷಿ ಪುಣ್ಯ ಕಲಾಪ |

ಅಕ್ಷಿ ನರಹರಿಪಾದ | ಸಾಕ್ಷಿಯಾಗಿಹ ಬೋಧ ||3||

ನಿಂತು ಕಾಯುತಲಿರ್ಪರು | ಕಾಯದ ಪುರವ |

ಅಂತ್ಯಗೊಳಿಸಿಯೆ ಪೋಪರು ||ಪ||

ಸಂತತವು ಶಿವ | ಜೀವ ರಾಗಿಯೆ ನಿಂತರೈ | ಮ |

ನ್ವಂತರಗಳೆ ಸವೆದು ಹೋದವು ||ಅ|ಪ||

ದ್ವಾರಪಾಲಕರಿಬ್ಬರು | ಮಹಕಾರಣ |

ದ್ವಾರ ಕಾಯುತಲಿರ್ಪರು ||

ದ್ವಾರ ಮುಕ್ತದ್ವಾರ ಮೂಲಾ |

ಧಾರವಿದು ತಾಂ ಮೂರು ಲೋಕಾ |

ಧಾರವಾಗಿದೆ ಪಾರಮಾರ್ಥಕೆ ದಾರಿಯಾಗಿದೆ | ತೋರಿ ತೋರದು ||1||

ಒಬ್ಬ ತಾನೊಳಗಿರ್ಪನು | ತಕ್ಷಣವೆ ಮ |

ತ್ತೊಬ್ಬ ಹೊರಗೈತಿರ್ಪನು ||

ಇಬ್ಬರೊಂದಾಗಿದ್ದು ಕಾಯ್ವರು |

ಮಬ್ಬು ಇಲ್ಲದೆ ಮೂರು ಕಾಲವು ||

ಒಬ್ಬ ತಪ್ಪಿದರೊಬ್ಬನಿರುವನು | ತಬ್ಬಿಕೊಂಡತಿ ನಿಬ್ಬರವು ಬಲು ||2||

ತೆರೆದ ಹೆಬ್ಬಾಗಿಲೊಳು | ವ್ಯಾಪಾರಗಳು |

ತೆರಪಿಲ್ಲ ಹಗಲಿರುಳು ||

ಭರದ ನಿದ್ರೆಯ ತೊರೆದು ಕಾವಲು |

ಸರದಿ ಮೇರೆಗೆ ಕಾಯುತಿರ್ಪರು ||

ಹರಿಹರ ಬ್ರಹ್ಮಾದಿಗಳನೇ | ಸರಕುಗೊಳ್ಳದೆ ಜೀವೇಶ ನರಹರಿ ||3||

ನಾಗರಪಂಚಮಿ ಹಬ್ಬವ ಮಾಡುವ |

ನಾಗರೀಕರೇ ನಿಜ ಕೇಳಿದಿರಾ ||ಪ||

ನಾಗರಹಾವನು ಪೂಜಿಸಿ ದುಃಖವ |

ನೀಗುವ ಧರ್ಮವ ತಾಳಿದಿರಾ ||ಅ|ಪ||

ಪಂಚೇಂದ್ರಿಯಗಳೆ | ಪಂಚಮಿಯೆಂಬುದ |

ವಂಚಿಸದೇ ನೀವರಿತಿಹಿರಾ ||

ಪಂಚೇಂದ್ರಿಯಗತ | ಪಂಚ ವಿಷಯಕೃತ |

ಮಿಂಚಿರುವಮೃತವ ನೆರೆದಿಹಿರಾ ||1||

ಘಟಸರ್ಪವು ಈ | ಘಟದೊಳಗಾಡುವ |

ನಟನೆಯ ಕಂಡೊಡನಾಡಿದಿರಾ ||

ಘಟಪುಸಿಯೆನ್ನುವ ದಿಟವನು ಸಾರುವ |

ಪಟುತರದನುಭವ ಮಾಡಿದಿರಾ ||2||

ನಡೆಯುವ ನಾಗರ | ನುಡಿ ಗರುಡನ ಕಂ |

ಡಡಗಿ ನಿಲ್ಲುವುದ ನೋಡಿದಿರಾ ||

ನುಡಿಗರುಡನು | ತಂದಮೃತವ ಕುಡಿಯುವ |

ಬೆಡಗಿನ ಹಾವನು ಕೂಡಿದಿರಾ ||3||

ಏಳು ಹೆಡೆಗಳಿವೆ | ಮೇಲು ಮಹಡಿಯೊಳು |

ಕಾಲತ್ರಯದೊಳು ಹರಿಯುವುದು ||

ತಾಳಿದೆ ಹೆಡೆಯೊಳು | ಬಾಳುವ ರತ್ನವ |

ಮೂಲದಿ ನರಹರಿಯಾಗಿಹುದು ||4||

ಹರಿಗೆ ಹಾಸಿಗೆಯು | ಹರಗೆ ಭೂಷಣವು |

ಹರಿಯುವ ಹಾವನು ತಿಳಿದವರು ||

ಮರಣವ ಗೆಲ್ವರು | ದುರಿತವ ಸೀಳ್ವರು |

ಗುರುವಿನ ಪಾದವ ಹೊಂದುವರು ||5||

ಎಲ್ಲರೊಳಿರುವುದು | ಎಲ್ಲವನರಿವುದು |

ಬಲ್ಲ ಮಹಾತ್ಮಗೆ ತೋರುವುದು ||

ಕೊಲ್ಲದು ಕಚ್ಚದು | ಎಲ್ಲರ ಮೆಚ್ಚದು |

ನಿಲ್ಲದೆ ಹರಿಯುವ ಸರ್ಪವಿದು ||6||

ಮಂತ್ರಕೆ ವಶವಿದು | ಚಿಂತೆಯನಳಿವುದು |

ಯಂತ್ರದೇಹವನ್ನಾಡಿಪುದು ||

ಸ್ವಾಂತದಿ ನರಹರಿ | ತಂತ್ರದೊಳಾಡುವ |

ಶಾಂತಿಯ ನಾಗರಹಾವುಯಿದು ||7||

ಮನ ಮಂದಿರಾ ತನು ಘನ ಸುಂದರಾ

ಮನ ಮಂದಿರಾ | ತನು | ಘನ ಸುಂದರಾ ||ಪ||

ಆನಂದಾತ್ಮಾನುಭವ ಮಂದಿರಾ ||ಅ|ಪ||

ನಶ್ವರವಾದರು ಶಾಶ್ವತ ಬ್ರಹ್ಮಕೆ |

ಆಶ್ರಯವೆನಿಸಿದ ದೊಡ್ಡಗುಡಿ ||

ವಿಶ್ವವನೆಲ್ಲವ ತನ್ನೊಳು ಸೇರುವ |

ವಿಸ್ಮಯಕಾರಕವಾದ ಗುಡಿ ||1||

ತನುವೇ ಹೊರಗುಡಿ | ಮನಗರ್ಭದ ಗುಡಿ |

ಅನುದಿನ ಪೂಜೆಯು ನಡೆವಾ ಗುಡಿ ||

ಅನುಭಾವವೆ ನಿ | ರ್ಗುಣ ಪೂಜೆಗೆ ಸರಿ |

ಮನ ನಿರ್ಮಲವೇ ಪೂಜಾಪರಿ ||2||

ಶಿವ ಕಟ್ಟಿದ ಗುಡಿ | ಶಿವಮುಟ್ಟಿದ ಗುಡಿ |

ಶಿವ ಗುಟ್ಟಾಗಿರುವಂಥಾ ಗುಡಿ ||

ಶಿವ ಕೊಟ್ಟೀಗುಡಿ | ಶಿವನಿದ್ದರೆ ಮಡಿ |

ಶಿವ ಬಿಟ್ಟಾಗಲೆ ಹಾಳುಗುಡಿ ||3||

ಮಂತ್ರ ಘೋಷಗಳು | ಸಂತತ ನಡೆಸಲು |

ಶಾಂತಿಗೆ ಆಶ್ರಯವಾದ ಗುಡಿ ||

ಸಂತಸವೀಯುತ | ಚಿಂತೆಯ ನೀಗುತ |

ಚಿಂತನ ಸಾಗುತಲಿರ್ಪ ಗುಡಿ ||4||

ಗಂಧದ ಬಾಗಿಲ | ಅಂದದ ದೇಗುಲ|

ಎಂದಿಗು ತೆರೆದಿದೆ ತಲೆ ಬಾಗಿಲು ||

ಚಂದದಿ ನರಹರಿ | ನಿಂದಿರುವುದೆ ಸರಿ |

ಸುಂದರ ಪೂಜೆಯುವೊಂದೇ ಪರಿ ||5||

ನಾ ನಿನ್ನ ಋಣದ ಕೂಸು | ನೀನೆನ್ನದುರಿತ ಹರಿಸು ||ಪ||

ನೀನಿತ್ತ ಭಾರೀ ಸಾಲ | ನಾನೆಂತು ಭರಿಸಲಯ್ಯ ||ಅ.ಪ||

ನೀ ಕೊಟ್ಟುದನ್ನು ನಿನಗೆ | ನಾ ಕೊಟ್ಟುಬಿಡದೆ ಕೊನೆಗೆ ||

ನಾ ಕಷ್ಟದಲ್ಲಿ ನೊಂದೆ | ನೀ ಕಾಯಬೇಕು ತಂದೆ ||1||

ಎಲ್ಲವನು ಕೊಟ್ಟೆ ನೀನು | ಸುಳ್ಳೆಂದು ಬಿಟ್ಟೆ ನಾನು |

ಎಲ್ಲವನು ನನ್ನದೆಂದೆ | ಕಳ್ಳರಲಿ ಕಳ್ಳನಾದೆ ||2||

ಬರುವಾಗ ತಾರಲಿಲ್ಲ | ಹೊರಟಾಗ ಒಯ್ಯಲಿಲ್ಲ ||

ದೊರೆ ನಿನ್ನ ನಂಬಲಿಲ್ಲ | ಅರಿವನ್ನು ಹೊಂದಲಿಲ್ಲ ||3||

ನಿನಗಿಂತ ಹಿರಿಯರಿಲ್ಲ | ನನಗಿಂತ ಕಿರಿಯರಿಲ್ಲ ||

ಅನುಮಾನ ಹೋಯಿತಲ್ಲ | ಅನುಭಾವವಾಯಿತಲ್ಲ ||4||

ತೀರಿಸಲು ಕಾಣೆ ದಾರಿ | ಏರಿದುದು ಸಾಲ ಭಾರಿ ||

ಧಾರಾಳ ನೀನೆ ತೋರಿ | ತೀರಿಸು ಮಹೋಪಕಾರಿ ||5||

ಉಪಕಾರಿಯಾದ ನಿನಗೆ | ಅಪಚಾರಗೈದ ಯನಗೆ |

ಕೃಪೆಯನ್ನು ತೋರಿ ಕೊನೆಗೆ | ಉಪದೇಶಗೈವುದೆನಗೆ ||6||

ಋಣಮುಕ್ತನಾಗಲೆಂದು | ನಿನಗೆರಗಿ ನಿಂದೆ ನಿಂದು ||

ಗುಣವಂತ ನರಹರೀಶ | ಯನಗೊಲಿದು ಮಾಡು ಲೇಸ ||7||

ಕಂಡುಕೊಳ್ಳಿರಿ ಕುಂಡಲೀಧರ ಖಂಡಪರಶುವನು ||ಪ||

ಕಂಡಕಂಡವರೆಡೆಯನುಣ್ಣುವ | ರುಂಡಮಾಲಾಧಾರಿ ಶಿವನ ||ಅ|ಪ||

ಶರ್ವನೆನಿಪನು ಸರ್ವಕಾಲವು | ಸರ್ವರೊಡನಿಹನು |

ಸರ್ವಗ್ರಹ ನಕ್ಷತ್ರ ಭೂತವ | ನಿರ್ವಹಿಸುವ ಪಾರ್ವತೀಶನು ||1||

ರುದ್ರನೆನಿಸುತ ಕ್ಷುದ್ರಗುಣಗಳ | ಶುದ್ಧಿಗೊಳಿಸುವನು ||

ನಿದ್ರೆಯಲ್ಲಿಯೆ ಭದ್ರಕಾಳಿಯ | ಹೊದ್ದಿ ಶಾಂತಿಯೊಳಿದ್ದ ದೇವನ ||2||

ಅಭವನೆನ್ನಿಸಿ ಭವದೊಳನುಭವ | ಲಭಿಸುವಂಥವನು ||

ಉಭಯವಳಿಯುತ ನರಹರೀಂದ್ರನ | ಪ್ರಭೆಯ ತೋರುವನು ||3||

ಹ್ಯಾಗಿರುವಾ ಶಿವ | ಹ್ಯಾಗಿರುವಾ |

ಯೋಗದಿ ತನ್ಮಯ | ನಾಗಿರುವಾ ||ಪ||

ರೇಚಕ ಪೂರಕ | ಕುಂಭಕ ಧಾರಕ |

ಈಚರಾಚರದೊಳು | ಗೋಚರಿಸುತ ಸುಖ |

ಸೂಚಿಸುತಿರ್ಪನು | ಆಚರಿಸುವನು ||1||

ಯಾರಿಗು ಕಾಣದೆ | ಬೇರೆನಲಾಗದೆ |

ತೋರಿಯು ತೋರದೆ | ಸೇರಿಹನೆನಿಸದೆ |

ಧಾರಿಣಿಯೊಳು | ಸಂ | ಚಾರವ ಮಾಡುವ ||2||

ಮೃಣ್ಮಯ ಕಾಯವ | ನಿರ್ಮಿಸಿ ಕಾಯುವ |

ಚಿನ್ಮಯನೆನ್ನಿಸಿ | ನಿರ್ಮಲ ಸಾಧಿಸಿ |

ತನ್ಮಯ ನರಹರಿ | ಮರ್ಮವ ಸಾರಿ ||3||

ನೀನು ಶಂಕರ | ನಾನು ಕಿಂಕರ |

ಧ್ಯಾನ ಮಾತ್ರವ ಶಂಕರಾ ||ಪ||

ನೀನು ಸಾರುವ | ಜ್ಞಾನ ವೈಭವ |

ನೀನು ಕೊಡುಯೆನಗೆಲೆ ಶಿವಾ ||ಪ||

ಮಾಯೆ ಸತ್ಯವೆ | ಕಾಯ ನಿತ್ಯವೆ |

ಹೇಯ ದುರ್ಗುಣ ಪಥ್ಯವೇ ||

ಬಾಯಿಯೊಳು ಶಿವ | ಕಾಯೊಯೆನ್ನುವ |

ನ್ಯಾಯ ಬುದ್ಧಿಯ ಕೊಡು ಶಿವಾ ||1||

ನೀನು ದೇವನು | ನಾನು ಜೀವನು |

ಹೀನ ಕರ್ಮದಿ ಸಾಯ್ವೆನು ||

ಹಾನಿಯಿಲ್ಲದ | ಸ್ವಾನುಭಾವದ |

ಜ್ಞಾನವನು ಕೊಡು ಸರ್ವದಾ ||2||

ನಾದವಿಲ್ಲದೆ | ವೇದವೆಲ್ಲಿದೆ |

ನಾದ ವೇದವು ನಿನ್ನದೇ ||

ವೇದಲಹರೀ | ಬೋಧೆಯೇ ಸರಿ |

ಸಾಧಿಸೆನ್ನೊಳು ನರಹರೀ ||3||

ಕೂಗಿತು ಕೋಳಿಯು ಕೇಳಮ್ಮಾ | ಬೆಳ

ಗಾಗುತ ಬಂದಿದೆ ಏಳಮ್ಮಾ ||ಪ||

ತೂಗಡಿಸುತಲಿರಬೇಡಮ್ಮಾ | ಅತಿ |

ಬೇಗನೆ ಬದುಕನು ಮಾಡಮ್ಮಾ ||ಅ|ಪ||

ಇಂದೇ ಕೆಲಸವ ಮುಗಿಸಮ್ಮಾ | ಇದು |

ಹಿಂದಾದರೆ ಬಲು ಸೊಗಸಮ್ಮಾ ||

ಮುಂದಿನ ಕಾರ್ಯವ ನೆನಸೆಂದು | ಪರ |

ಮಂದಿಯ ಸಂಗವ ತೊರೆಯೆಂದು ||1||

ಮೂರು ನದಿಯ ಸಂಗಮದಲ್ಲಿ | ಸಿಹಿ |

ನೀರನು ತಂದಿಡು ಕೊಡದಲ್ಲಿ ||

ಸಾರನು ಮಾಡತಿ ಭರದಲ್ಲಿ | ಸುಖ |

ಸಾರವ ಸವಿಯೆನುತಿಹುದಿಲ್ಲಿ ||2||

ಅನ್ನವ ಮಾಡಲು ಬೇಕಮ್ಮಾ | ಪರ |

ಮಾನ್ನವನುಂಡರೆ ಸಾಕಮ್ಮಾ ||

ಅನ್ನವ ದಾನವ ಮಾಡೆಂದು | ಪರಿ |

ಪೂರ್ಣನು ನರಹರಿ ನೋಡೆಂದು ||3||

ಫಲದಾಸೆ ಬಿಡುಗಡೆಯಾಗದೇ | ದು |

ರ್ಮಲಚಿತ್ತ ದೋಷವು ಹೋಗದೇ ||ಪ||

ಬಲವಾದ ಸದ್ಭಕ್ತಿ ಹುಟ್ಟದೇ | ನಿ |

ಶ್ಚಲ ಜ್ಞಾನತನಗಳವಟ್ಟುದೇ ||ಅ|ಪ||

ಶಿವಜ್ಞಾನವಿರೆ ಸಂಸಾರಿಯೇ | ಅನು |

ಭವವಿಲ್ಲದವ ಸುವಿಚಾರಿಯೇ ||

ಅವಿವೇಕವಿರೆ ಸನ್ಯಾಸಿಯೇ | ಮೌ |

ನವ ಸಾಧಿಸದೆ ನಿರ್ದೋಷಿಯೇ ||1||

ದ್ವೈತವುಳ್ಳಾತನು ಯೋಗಿಯೇ | ಅ |

ದ್ವೈತ ಸಿದ್ಧಿಸಿದಾತರಾಗಿಯೇ ||

ನೀತಿ ಬಿಟ್ಟಾತ ವಿರಾಗಿಯೇ | ನಿ |

ರ್ಭೀತನಾದವ ಭವರೋಗಿಯೇ ||2||

ಪರಮಾರ್ಥವರಿಯದೆ ಮುಕ್ತನೇ | ಸು |

ಸ್ಥಿರ ಬುದ್ಧಿಯಿಲ್ಲದೆ ಭಕ್ತನೇ ||

ಗುರುಪಾದ ಹಿಡಿಯದೆ ಶಿಷ್ಯನೇ ಶ್ರೀ |

ನರಹರಿಯ ಕಾಣದೆ ಶ್ರೇಷ್ಠನೇ ||3||

ಹಡೆಯದ ಮಕ್ಕಳು ಗುರುಪುತ್ರರೆನ್ನುತ ತಿಳಿದುಕೊಳ್ಳಿ ||ಪ||

ದುಡಿಯದ ಬಂಗಾರ ಸುಜ್ಞಾನವೆಂಬುದ ತಿಳಿದುಕೊಳ್ಳಿ ||ಅ|ಪ||

ಉರಿಯಿಲ್ಲದಾ ಬೆಂಕಿ ಕಾಮಾಗ್ನಿ ಕೋಪಾಗ್ನಿ ತಿಳಿದುಕೊಳ್ಳಿ ||

ತೆರಪಿಲ್ಲದಾ ಬದುಕು ಸಂಸಾರವೆನ್ನುತ ತಿಳಿದುಕೊಳ್ಳಿ ||1||

ಹಗ್ಗವಿಲ್ಲದ ಕಟ್ಟು ಮೋಹಪಾಶದ ಪಟ್ಟು ತಿಳಿದುಕೊಳ್ಳಿ ||

ಅಗ್ಗವಲ್ಲದ ಮುಟ್ಟು ಅನುಭವ ಜ್ಞಾನವೆ ತಿಳಿದುಕೊಳ್ಳಿ ||2||

ಕಳ್ಳರಿಗೆ ಸಿಕ್ಕದ ಧನವಿದ್ಯೆಯೆನ್ನುತ ತಿಳಿದುಕೊಳ್ಳಿ ||

ಸುಳ್ಳರಿಗೆ ದಕ್ಕದ ಸಂಪತ್ತು ಸುಜ್ಞಾನ ತಿಳಿದುಕೊಳ್ಳಿ ||3||

ದಾನ ಮಾಡಲು ಸವೆಯದ ಭಾಗ್ಯ ಬೋಧೆಯು ತಿಳಿದುಕೊಳ್ಳಿ ||

ಹಾನಿಯಿಲ್ಲದ ಪುಣ್ಯ ಗುರುಪಾದ ಸೇವೆಯು ತಿಳಿದುಕೊಳ್ಳಿ ||4||

ಪಾಪ ಪುಣ್ಯಗಳ ನಿರ್ಲೇಪ ಸಾಧನ ವಿರತಿ ತಿಳಿದುಕೊಳ್ಳಿ ||

ಆಪತ್ತುಯಿಲ್ಲದ ಸಿರಿ ನರಹರಿನಾಮ ತಿಳಿದುಕೊಳ್ಳಿ ||5||

ತನಗಾಗಿ ಸುರಿದಿತ್ತೆ ಮೇಘವು ಮಳೆಯಾ ||

ತನಗಾಗಿ ಬೆಳೆದಿತ್ತೆ ಭೂಮಿಯು ಬೆಳೆಯಾ ||ಪ||

ತನಗೆಂದು ಬೆಳಗುತ್ತಲಿರ್ಪನೆ ರವಿಯು |

ತನಗೆಂದು ಬರೆಯುತ್ತಲಿರ್ಪನೆ ಕವಿಯು ||ಅ|ಪ||

ಯಾರಿಗೋಸ್ಕರ ಹರಿಯುತಿರ್ಪುದು ನದಿಯು |

ಯಾರಿಗೋಸ್ಕರ ತುಂಬಿ ನಿಂತುದಂಬುಧಿಯು ||

ಯಾರಿಗೆನ್ನುತ ಬೆಳಗುತಿರ್ಪನು ಶಶಿಯು |

ಯಾರಿಗೆನ್ನುತ ತೆನೆಯ ಬಿಟ್ಟಿತು ಸಸಿಯು ||1||

ಪರರುಪಕಾರಕ್ಕೆ ಫಲವನ್ನು ತರುವು |

ಪರರಿಗಾಗಿಯೆ ಪಾಲನೀವುದು ಗೋವು ||

ಪರಹಿತಕೆ ಬೀಸುತ್ತಲಿಹುದು ಮಾರುತವು |

ಪರಹಿತಾರ್ಥಕೆ ಬಯಲಾಗಿತ್ತು ನಭವು ||2||

ಸ್ವಾರ್ಥದಿಂದಲೆ ಪಾಪ ನಿಸ್ವಾರ್ಥ ಪುಣ್ಯ |

ಸ್ವಾರ್ಥ ಬಿಟ್ಟಿರುವಾತ ಜಗದಲ್ಲೆ ಗಣ್ಯ ||

ಸ್ವಾರ್ಥ ವಾಸುರಿಯು ನಿಸ್ವಾರ್ಥವೆ ದೈವೀ |

ಅರ್ಥವಪ್ಪುದು ನರಹರಿ ಬೋಧೆ ತೀವಿ ||3||

ಸ್ವಾರ್ಥವೆಂಬುದೆ ಜನ್ಮಸೂತ್ರವಾಗಿಹುದು |

ಸ್ವಾರ್ಥ ಬಿಟ್ಟರೆ ಪರಮಾರ್ಥವಾಗುವುದು ||

ಸ್ವಾರ್ಥಿಯಾಗದೆ ನರಹರಿ ಪಾದ ಹಿಡಿದು |

ಕರ್ತಾರನ ನಂಬು ಮುಕ್ತಿ ನಿನಗಿಹುದು ||4||

ನಿನ್ನದನ್ನೆ ಉಂಡೆನು | ನನ್ನದೆಂದು ಕೊಂಡೆನು ||ಪ||

ನಿನ್ನದನ್ನೆ ಉಟ್ಟೆನು | ನನ್ನದೆಂದು ಬಿಟ್ಟೆನು ||

ಕಣ್ಣಿನಲ್ಲಿ ಕಾಂಬುದೇ | ನನ್ನದೆಂದು ನಂಬಿದೆ ||

ಕಣ್ಣು ನಿನ್ನದೆಂಬುದೇ | ಯನ್ನೊಳರಿವು ತೋರದೇ ||1||

ತನುವು ನಿನ್ನದೆನ್ನದೇ | ತನುವಿನಲ್ಲಿ ಕೂಡಿದೇ |

ತನುವಿಗಾದ ಕರ್ಮವೇ | ಯನಗೆ ತೊಡರಿಕೊಂಡಿವೆ ||2||

ಮನವು ನನ್ನದೆಂದೆನು | ಮನದೊಳಾಡಿ ನಿಂದೆನು ||

ಜನುಮ ಹೊಂದಿ ನೊಂದೆನು | ನಿನಗೆ ದೂರವಾದೆನು ||3||

ಧನದೊಳಾಸೆ ಹೊಂದುತಾ | ಎನಿತೊ ದುಃಖ ಕೂಡುತಾ |

ಕೊನೆಗೆ ನರಕ ಸೇರುತಾ | ನೆನೆವೆ ನಿನ್ನ ಬೇಡುತಾ ||4||

ಇಂದ್ರಿಯಾರ್ಥದಲ್ಲಿಯೇ | ನಿಂದುಬಿಟ್ಟೆನಿಲ್ಲಿಯೇ ||

ಬಂದು ಕಾಯೋ ನರಹರಿ | ಎಂದು ಬೇಡುವುದೆ ಸರಿ ||5||

ನಡೆ ಶುದ್ಧವಿಲ್ಲದವನ ನುಡಿ ನಂಬಬೇಡಾ |

ನುಡಿ ಶುದ್ಧವಿಲ್ಲದವನ ನಡೆ ನಂಬಬೇಡಾ ||ಪ||

ದೃಢವಿಲ್ಲದಾತನಲ್ಲಿ ನಡೆಯುಂಟೆ | ಜಾಣಾ |

ದಡವಿಲ್ಲದಂಥ ನದಿಯು ಹರಿವಂತೆ ಕಾಣಾ ||ಅ|ಪ||

ಹರಿದಾಡುತಿರ್ಪ ಮನದಿ ಹರಿದೀತೆ ಕರ್ಮ |

ಕರಣಾರ್ಪಣವ ಮಾಡದಿರಲುಂಟೆ ಧರ್ಮ |

ಗುರುಸೇವೆ ಮಾಡದಿರಲು ತಿಳಿದೀತೆ ಮರ್ಮ |

ಪರಮಾರ್ಥವಿಲ್ಲದವಗೆ ಅರಿಯುವುದೆ ಬ್ರಹ್ಮಾ ||1||

ನಡೆ ಶುದ್ಧವಿದ್ದರಿನ್ನು ತಪವೇನು ಬೇಡಾ |

ನುಡಿ ಶುದ್ಧವಾದ ಮೇಲೆ ಜಪವೇಕೆ ಮೂಢಾ ||

ನಡೆನುಡಿಯ | ಮಧ್ಯದಲ್ಲಿ ಪರಬ್ರಹ್ಮ ಗೂಢ |

ಜಡ ಬುದ್ಧಿ ಕಾಣದಿರ್ಪ ನಿಜಲಿಂಗ ನೋಡಾ ||2||

ನಡೆಯುತ್ತಲಿರುವುದೆಲ್ಲ ಶಿವತಂತ್ರವೆಂದು |

ನುಡಿಯುತ್ತಲಿರುವುದೆಲ್ಲ ಶಿವಮಂತ್ರವೆಂದು ||

ಪಡೆಯುತ್ತ ಜ್ಞಾನವನ್ನು ನರಹರಿಯೊಳಿಂದು |

ದೃಢ ಮುಕ್ತಿ ಮಾರ್ಗದಲ್ಲಿ ನಿಲ್ಲು ನೀ ಬಂದು ||3||

ವಾದವ ಮಾಡುವದೇಕಮ್ಮ | ಗುರು |

ಪಾದವ ನಂಬಿರಬೇಕಮ್ಮಾ ||ಪ||

ನಾದದ ನಿಲುಕಡೆ ಸೋಕಮ್ಮಾ | ಗುಣ |

ಭೇದವನೆಲ್ಲವ ನೂಕಮ್ಮಾ ||ಅ|ಪ||

ಕಾದುವುದಿಂದಿಗೆ ಸಾಕಮ್ಮಾ | ಸ |

ದ್ಬೋಧೆಯಿದೊಂದೇ ಬೇಕಮ್ಮಾ

ಸಾಧು ಜನಕೆ ಶಿರಬಾಗಮ್ಮಾ | ಭವ |

ಬಾಧೆಯನೀಗಲೆ ನೀಗಮ್ಮಾ ||1||

ಧರ್ಮವ ಬಿಟ್ಟಿರಬೇಡಮ್ಮಾ | ದು |

ಷ್ಕರ್ಮವ ಸೋಕಲು ಕೇಡಮ್ಮ ||

ಮರ್ಮವ ಗುರುವನು ಬೇಡಮ್ಮಾ | ಪರ |

ಬ್ರಹ್ಮವೆ ಸದ್ಗುರು ನೋಡಮ್ಮಾ ||2||

ಭಯವನು ನೀ ಪಡಲೇಕಮ್ಮಾ | ಗುರು |

ದಯವೊಂದಿದ್ದರೆ ಸಾಕಮ್ಮಾ ||

ನಯ ವಿನಯದಿ ನೀ ನಡೆಯಮ್ಮ | ಚಿ |

ನ್ಮಯ ನರಹರಿ ಕೃಪೆ ಪಡೆಯಮ್ಮಾ ||3||

ಎಂಥ ಪುಣ್ಯವಂತನಮ್ಮ ಎನ್ನ ಗಂಡನು |

ಚಿಂತೆಯಿಲ್ಲದಂತೆ ಮಾಡಿ ಕೂಡಿಕೊಂಡನು ||ಪ||

ಅಂತ್ಯವಿಲ್ಲದಂಥ ಭಾಗ್ಯ ತಂದುಕೊಟ್ಟನು |

ಅಂತು ಇಂತು ಯೆನ್ನಲಾಗದಂಥ ದಿಟ್ಟನು ||ಅ|ಪ||

ವಿಧವೆಯಾಗದಂಥ ಮದುವೆ ಮಾಡಿಕೊಂಡನು |

ಅಧಮ ನುಡಿಗೆ ಬೆದರದಂತೆ ಕುದುರಿಸಿದ್ದನು ||

ಕದನವಿಲ್ಲದಂತೆ ಇರ್ಪ ವಿಧವ ಪೇಳ್ದನು |

ಮದನ ತಾಪವೊದಗದಂತೆ ಯನ್ನನಾಳ್ದನು ||1||

ಅಲ್ಲಿ ಇಲ್ಲಿ ತಿರುಗಿ ಕೆಟ್ಟುಹೋಗುತ್ತಿದ್ದೆನು |

ಎಲ್ಲಿ ಹೋಗದಂತೆ ಗೈದ ಮಂತ್ರಸಿದ್ಧನು ||

ಎಲ್ಲಾ ಇಲ್ಲೆ ತೋರಿ ಭ್ರಾಂತಿ ಕಳೆದು ನಿಂತನು |

ಸುಳ್ಳು ಮೋಸ ಡಂಭವನ್ನು ಬಿಡಿಸಿ ಕುಂತನು ||2||

ಬಂಧುಬಳಗ ನಂಬಬೇಡ ಕೇಳು ಎಂದನು |

ತಂದೆ ತಾಯಿಯಿಂದ ಮುಕ್ತಿಯಿಲ್ಲವೆಂದನು ||

ಮುಂದೆ ಒಡವೆ ವಸ್ತ್ರದಾಸೆ ಬಿಡಿಸಿ ನಿಂದನು |

ಮಂದಿ ಮಾತು ನಂಬದಂತೆ ಜ್ಞಾನ ತಂದನು ||3||

ಲೋಕದಾಟ ಪೀಕಲಾಟ ಯಾಕೆ ಎಂದನು |

ಸೋಕದಂತೆ ಜೋಕೆಯಿರಲು ಬೇಕು ಎಂದನು ||

ಏಕ ಸೌಖ್ಯವಾದ ವೇದ ವಾಕ್ಯ ಪೇಳ್ದನು |

ಬೇಕು ಬೇಡ ದ್ವಂದ್ವ ಸಾಕು ಮಾಡು ಎಂದನು ||4||

ನಡೆಯ ಶುದ್ಧಿ ಮಾಡಿಯನ್ನ ನುಡಿಗೆ ಒಯ್ದನು |

ನುಡಿಯ ವೃದ್ಧಿ ಮಾಡಿ ಮುಗಿಸಿ ಕಡೆಗೆ ಒಯ್ದನು ||

ನಡುವೆಯಿದ್ದ ಕೋಣೆಯಲ್ಲಿ ಕೂಡಿಕೊಂಡನು |

ಒಡನೆ ಜ್ಞಾನ ಪುತ್ರನನ್ನು ಪಡೆದುಕೊಂಡೆನು ||5||

ಅತ್ತ ಇತ್ತ ವ್ಯರ್ಥ ಸುತ್ತಬೇಡವೆಂದನು |

ಮತ್ರ್ಯ ನಿತ್ಯ ಸತ್ಯವಲ್ಲ ನೋಡು ಎಂದನು ||

ಸತ್ಯದರ್ಥ ಚಿತ್ತದಲ್ಲಿ ಕೂಡು ಎಂದನು |

ಕರ್ತ ಸತ್ಯಮೂರ್ತಿ ನಮ್ಮ ನರಹರೀಂದ್ರನು ||6||

ಶರಣರ ಸೇವಾ | ಮಾಡೆಲೋ ಜೀವಾ ||

ಶರಣರ ಹೃದಯದಿ | ಪರಶಿವನಿರುವಾ ||ಪ||

ಕಾವಿಯನುಡದೇ | ಕಪನಿಯ ತೊಡದೇ ||

ಭಾವದಿ ಪರಶಿವ | ಧ್ಯಾನದೊಳಿರುವ ||1||

ಲಾಭವೆ ಬರಲಿ | ನಷ್ಟವೆ ಬರಲಿ ||

ಲೋಭಕೆ ಬೀಳದೆ | ಶೋಭಿಸುತಿರುವ ||2||

ಗಡ್ಡವ ಬಿಡದೆ | ಜಟೆಯ ಬೆಳೆಸದೆ ||

ದೊಡ್ಡವರೆನಿಸುವ | ಚಪಲಕೆ ಬೀಳದ ||3||

ಪರಶಿವ ತಾನೇ | ಧರೆಗವತರಿಸಿ ||

ಶರಣರ ರೂಪದಿ | ಮರೆಯುವ ನೋಡೈ ||4||

ಎಲ್ಲರ ನಡುವೆ | ಮನುಜರಾಗಿಹರು |

ಬಲ್ಲವರೊಳಗೆ | ಗುರುವಾಗಿಹರು ||5||

ಶರಣರ ಜಾತಿಯ | ನೆಣಿಸಲಿ ಬೇಡ |

ಶರಣರ ರೀತಿಯ | ಜರಿಯಲಿ ಬೇಡ ||6||

ಕಾಮಕ್ರೋಧಂಗಳ | ಸುಟ್ಟುಬಿಟ್ಟಿಹರು |

ಕಾಮಿನಿ ಕಾಂಚನ | ಕಾಸಿಸದಿಹರು ||7||

ಗುರುವಿನ ಪುತ್ರರು | ಪರಮ ಪವಿತ್ರರು |

ಶರಣರ ಲೋಕೋ| ದ್ಧಾರಕ ನರಹರಿ ||8||

ನಿಧಿ ಸಿಕ್ಕಿತು ಯೆನಗೆ | ಗುರು ಸ| ನ್ನಿಧಿ ಸಂಪದ ಕೊನೆಗೆ ||ಪ||

ಹೃದಯೋಲ್ಲಾಸವು | ಅಧಿಕ ವಿಲಾಸವು |

ಸುಧೆಯಂದದಿ ಸುರಿ | ವುದು ಬೋಧಾಮೃತ ||ಅ|ಪ||

ಕಣ್ಣಿಗೆ ಕಾಣಿಸದು | ಕಂಡರು | ಅನ್ಯರಿಗಾಗದಿದು ||

ಹೊನ್ನು ಮಣ್ಣು | ಬೆಲೆ | ಯನ್ನು ಮೀರಿದುದು ||

ಧನ್ಯರಾದವರಿ | ಗನ್ಯವಲ್ಲವಿದು ||1||

ಎಣಿಸಲು ಬಾರದುದು | ಎಲ್ಲವ |

ನೆಣಿಸುತ ತೋರುವುದು ||

ಪ್ರಣವದ ಕೊನೆಯೊಳು | ಘನತರ ಜ್ಯೋತಿಯು ||

ಅನಿಮಿಷವಾಗಿಯೆ | ಮಿನುಗುತಲಿಹುದು ||2||

ಕಳ್ಳರ ಭಯವಿಲ್ಲಾ | ಎಂದಿಗು | ಸುಳ್ಳರ ಸುಳಿವಿಲ್ಲಾ ||

ಎಲ್ಲಾ ಸುಖವು ಇದ | ರಲ್ಲಿಯೆ ದೊರೆವುದು ||

ಬಲ್ಲ ನರಹರಿಯ | ಸೊಲ್ಲೊಳು ಸೇರಿದೆ ||3||

ಭಜನೆ ಮಾಡಿರಣ್ಣಾ | ಗುರುವಿನ | ಭಜನೆ ಮಾಡಿರಣ್ಣಾ |

ಭಜನೆಯೆನ್ನುವುದು | ನಿಜವ | ತೋರುವುದು ||ಪ||

ಸುಜನರಾಗಿ ಭವ | ವಿಜಯವ ಹೊಂದಲು ||ಅ|ಪ||

ನಾಳೆಯೆನ್ನಬೇಡಿ | ಮುಂದಿದೆ ಕಾಲವೆನ್ನಬೇಡಿ |

ಸ್ಥೂಲ ದೇಹವಿದು | ಕಾಲವಶವು ನಿಜ |

ಏಳಿರಿ ಬೇಗನೆ | ಕೇಳಿರಿ ನಿಜವನೆ ||1||

ಬೇಗ ಬನ್ನಿರಣ್ಣಾ | ಇದು ಶಿವ | ಯೋಗವೆನ್ನಿರಣ್ಣಾ |

ಆಗಮ ನಿಗಮಕೆ | ಪ್ರ | ಯೋಗದೊಳಿರುತಿಹ |

ನಾಗಭೂಷಣನ | ಈಗಲೆ ಕಾಣಲು ||2||

ನಾದವನ್ನು ಕೂಡಿ | ಬಿಂದುವ | ಸಾಧಿಸುತ್ತ ನೋಡಿ ||

ಆದಿಕಳೆಯ ಸಂಪಾದಿಸಿ ನರಹರಿ | ಬೋಧೆಯಿಂದ ಭವ |

ಬಾಧೆಯ ನೀಗಲು ||3||

ಏಕ ದಾರಿ ಹಿಡಿದು | ಸರ್ವರು | ಏಕವೆಂದು ನುಡಿದು ||

ಲೋಕದಲ್ಲಿ ಜಗ | ದೇಕ ಬ್ರಹ್ಮವನು |

ವ್ಯಾಕುಲವಿಲ್ಲದೆ | ತಾಕುವಂದದೊಳು ||4||

ತಾಳಮೇಳದಿಂದ | ಕುಣಿಯಿರಿ | ತಾಳುತ ಆನಂದ ||

ಮೇಳೈಸುತ ಭವ | ಜಾಲವ ಹರಿಸುವ ||

ಲೀಲಾಮಯ ಶ್ರೀ | ಲೋಲನು ನರಹರಿ ||5||

ಮಂಗಳಾರತಿಯನ್ನು ಮಾಡಿ | ಸರ್ವ |

ಮಂಗಳಾಪತಿಗೆ ಸದ್ಭಾವವಂ ಕೂಡಿ ||ಪ||

ಕಂಗಳೆರಡರ ಮಧ್ಯೆ ನೋಡಿ | ಪಾಪ |

ಭಂಗ ಮಾಡೆಂದು ಪರಶಿವನನ್ನು ಬೇಡಿ ||ಅ|ಪ||

ಸಪ್ತ ಚಕ್ರಗಳಲ್ಲಿ ಸೇರಿ | ಮಂತ್ರ |

ವ್ಯಾಪ್ತ ಮಾಡುತ ಮೀರಿ ಪ್ರಣವ ಸಂಚಾರಿ |

ತೃಪ್ತಿಯಿಂದಾನಂದ ತೋರಿ | ತಾನೆ |

ಗುಪ್ತ ಮಾರ್ಗದಿ ಬರುವ ಭವಬಂಧಹಾರೀ ||1||

ನಾದವೇದವು ಬೋಧೆಯಾಗಿ | ದುಷ್ಟ |

ವಾದ ಭೇದಗಳೆಲ್ಲ ನಿರ್ಮೂಲವಾಗಿ ||

ಆದಿಯಂತ್ಯಗಳೊಂದೆಯಾಗಿ | ನಿರ್ವಿ |

ವಾದ ಭಾವಕೆ ಗೋಚರಿಸಿದ ತಾನಾಗಿ ||2||

ಲೋಕವೆಲ್ಲವ ತನ್ನೊಳಿಟ್ಟ | ಸದ್ವಿ |

ವೇಕ ಭಾವವ ತನ್ನ ಭಕ್ತರಿಗೆ ಕೊಟ್ಟ |

ಏಕಾಂತದೊಳು ನಿಂತುಬಿಟ್ಟ | ಸರ್ವ |

ಶೋಕಹರ ನರಹರಿಯಾನಂದಪಟ್ಟ ||3||

ಗುರುವಿಗೆ ಸಮರಾರು ಇಲ್ಲ ||ಶ್ರೀ||

ಗುರುವಿನಲ್ಲಿರುವರು ದೇವರ್ಕಳೆಲ್ಲಾ ||ಪ||

ಗುರು ಸರ್ವಧರ್ಮದ ಮೂಲ| ಸ|

ದ್ಗುರು ದೇವ ಪೇಳ್ದುದೆ ಶಾಸ್ತ್ರ ವಿಶಾಲ ||ಅ|ಪ||

ಸಕಲ ವಿದ್ಯೆಗೆ ಮೂಲ ಗುರುವು | ಚಿ|

ತ್ಸುಖರೂಪ ಬ್ರಹ್ಮವ ತೋರುವ ಅರಿವು||

ಪ್ರಕಟಿಸಿ ಭಕ್ತರ ಪೊರೆವ| ಸ|

ಮ್ಮುಖ ಬೋಧೆಯಿಂದಲೆ ಧನ್ಯರಗೈವಾ ||1||

ಗುರುವಿನಾಲಯವೆ ಕೈಲಾಸ| ಶ್ರೀ|

ಗುರುವೆ ಪ್ರತ್ಯಕ್ಷ ಕಾಣುವ ಪರಮೇಶಾ||

ಗುರುವಿನಂಗಳವೆ ವೈಕುಂಠ | ಸ |

ದ್ಗುರುವೆ ನಾರಾಯಣಭಕ್ತರ ಭಂಟ ||2||

ಗುರುವಾಕ್ಯ ವೇದದವಾಕ್ಯ | ಶ್ರೀ|

ಗುರು ವಿಂದಲಾಯಿತು ಜಗಕೆಲ್ಲ ಸೌಖ್ಯ||

ಗುರುಸನ್ನಿಧಿಯೆ ಸಾಯುಜ್ಯ| ಸ|

ದ್ಗುರು ನರಹರಿಮೂರ್ತಿ ಲೋಕಕ್ಕೆ ಪೂಜ್ಯ ||3||

ನೋಡುವ ಬಾರಮ್ಮ | ಗುರುವನು | ಬೇಡುವ ಬಾರಮ್ಮ ||ಪ||

ರೂಢಿಯೊಳಾಡುವ | ಗೂಢ ಬ್ರಹ್ಮದ| ಜಾಡರಿದವನಮ್ಮ |

ಪಾಪವ| ಝಾಢಿಸಿದವನಮ್ಮಾ ||ಅ|ಪ||

ಒಳಗಿರುವುದು ಬ್ರಹ್ಮ | ಹೊರಗದು| ಬಳಸಿಕೊಂಡಿಹುದುಮ್ಮ ||

ಒಳಗೂ ಹೊರಗೂ | ಸುಳಿಯುತ ತಾನದು| ಬೆಳಗುತಲಿಹುದಮ್ಮ |

ಬೆಳಕಿನ| ಕಳೆ ತೋರುವುದಮ್ಮ ||1||

ಎಡಬಲದೊಳಗೊಂದೆ | ಅನುದಿನ| ಎಡೆಮಾಡುವುದೆಂದು||

ಎಡಬಲವಳಿದ| ಬೆಡಗಿದನರಿಯಲು||

ಕಡೆಯಾಯಿತು ಮರಣ| ಆ ಕ್ಷಣ ಪಡೆಯುವ ಗುರುಕರುಣ ||2||

ನಾದವೆನಿಸಿ ತಮ್ಮ | ಮುಂದದು| ವೇದಸಂಗತಿಯಮ್ಮ ||

ನಾದ ಬಿಂದು ಕಳೆ| ಬೋಧೆಯ ನಿಜ ಕಳೆ||

ಆದಿಯೊಳಿದು ನಿಂತು | ಆಪರ| ನಾದವೆನಿಸಿ ಬಂತು ||3||

ಸೂಕ್ಷ್ಮವು ತಾನಹುದು| ತನುಮನ| ಸಾಕ್ಷಿಯಾಗಿರುತಿಹುದು||

ಈಕ್ಷಿಸೆ ಹೊಳೆವುದು| ತಕ್ಷಣ ತಿಳಿವುದು| ಕುಕ್ಷಿಯೊಳಿರು

ತಿಹುದು| ಊಹಿಸೆ| ಲಕ್ಷ್ಯಕೆ ಬರುತಿಹುದು ||4||

ಜೀವವು ತಾನಂತೆ| ಪರತರ | ದೈವವಿದಾಯ್ತಂತೆ |

ಪಾವನ ನರಹರಿ| ದೇವನೊಳೀ ಪರಿ| ಕೇವಲವಾಯ್ತಂತೆ |

ನಿರ್ಮಲ| ಭಾವದೊಳಿತ್ತಂತೆ ||5||

ಅನ್ನದಾನ ಮಹಿಮೆ
ಅಬ್ಬಬ್ಬಾಯಿದು ಘಟಸರ್ಪ
ಅಷ್ಟ ಮೂರ್ತಿ ಶಿವನೊಳಿರ್ಪ
ಅಷ್ಟಸಿದ್ಧಿಯ ಹೊಂದಿದಾತನು
ಅಷ್ಟಾಂಗ ಯೋಗ ಜ್ಞಾನದ ಮಾರ್ಗ
ಅಂಬಿಗನಿವನಮ್ಮಾ
ಅಮನಸ್ಕ ರಾಜಯೋಗಿ
ಅಂಗಹೀನರ ನೋಡಿ ನಗಬೇಡಾ
ಅಂಗಡಿ ಎನ್ನ ಅಂಗಡಿ
ಅಜಪಾಮಂತ್ರವ ಜಪಿಸುವ ಯೋಗಿ
ಅಕ್ಷರ ಪರಬ್ರಹ್ಮ ಯೋಗ
ಅಕ್ಷರ ಪರಬ್ರಹ್ಮ ಯೋಗ
ಅತಿಯೆಂಬುದು ತ್ಯಾಜ್ಯ
ಅತಿಥಿಯೆ ದೇವರು ನೋಡಮ್ಮ
ಅರ್ಧ ನಾರೀಶ್ವರನಿರುವ

ಆಸೆಯೆ ದುಃಖ
ಆಶ್ರಮಗಳು ಇಲ್ಲಾ
ಆನಂದವಾಯಿತಮ್ಮ
ಆನಂದವೆನಗಾಯಿತು
ಆರು ಲಿಂಗಗಳ ನೆಲೆ
ಆರು ಲಕ್ಷಣವಿರ್ಪವು
ಆರೂಢನಿವನಮ್ಮ ಸದ್ಗುರುರಾಯ
ಆರತಿ ಎತ್ತುವೆ ರೇವಣಸಿದ್ಧಗೆ
ಆಗದಯ್ಯಾ ಮುಕ್ತಿ ಆಗದಯ್ಯಾ
ಆತ್ಮ ವಿಚಾರವ ಮಾಡಮ್ಮಾ
ಆತ್ಮಾನಾತ್ಮ ವಿಚಾರದೊಳಗೆ

ಇಲ್ಲೇ ತಿಳಿಯಿರಿ ಬ್ರಹ್ಮವನು
ಇನ್ನುಂಟೆ ಭವ ಬಾಧೆಯು
ಇನ್ನಿಲ್ಲ ಯಮ ಬಾಧೆಯು
ಇವನಮ್ಮ ರಾಜಯೋಗಿ
ಇಂಥ ಗಂಡನ ಸೇರಿ ಎಂತು ಬಾಳಲಿ ನಾರಿ
ಇಂದೇ ಬಂದೇ ಶ್ರೀಗುರು ತಂದೆ
ಇರವೇ ಜಗವ ತುಂಬಿರುವೆ
ಇರವೇ ಹಂಸನಾಗಿರುವೆ
ಇದು ಸತ್ಯ ಸಾರ
ಇದು ನಿಜವಾದರೆ ಕೇಳಿ
ಇದು ಏನು ಸೋಜಿಗ
ಇದೇ ತನುವೆ ಅರಮನೆ

ಈ ಜಗತ್ತೇ ಒಂದು ಸಂತೆ
ಈ ದೇಹದೊಳಗೆ ಸಂದೇಹವಿಲ್ಲದೆ
ಈಜು ಕಲಿಸಿದಾ
ಈತ ನೋಡಿರಿ ರಾಜಯೋಗಿ
ಈತ ಜಂಗಮ ಕಾಣಿರೋ
ಈತ ಗಾರುಡಿಗಾರನು
ಈತನಾರು ಈತನಾರು ನೋಡಿರಮ್ಮಾ|

ಉಂಡುಪವಾಸಿಯ ತಿಳಿಯಮ್ಮ

ಎಲ್ಲವು ನಿನ್ನೊಳಗಿರುವಲ್ಲಿ
ಎಲ್ಲವು ಶಿವನಾಟ|
ಎಲ್ಲವು ತಾನೆ ತಾನಾಯ್ತು
ಎಲ್ಲವೂ ಶಿವನದೇ
ಎಲ್ಲಿ ಸಿಕ್ಕದು ಇಂಥ ಮುತ್ತಿನ ಮಾಲ
ಎಲ್ಲಿ ಸಿಕ್ಕದು ಇಂಥ ಮುತ್ತಿನ ಮಾಲೆ
ಎಲ್ಲಿರುವಾ ಶಿವ
ಎಲ್ಲಿದೆ ಸ್ವರ್ಗವು ಎಲ್ಲಿದೆ ನರಕವು
ಎಂತಿರುವನು ಯೋಗಿ
ಎಂಥ ಪುಣ್ಯವಂತನಮ್ಮ ಎನ್ನ ಗಂಡನು
ಎಂಥಾ ಮಹಿಮನು ಸದ್ಗುರು
ಎಂಥಾ ಮನೆ
ಎಂಥಾ ಕೂಸಮ್ಮ ಈ ಕೂಸಿಂದ ಬಂತು ಲೇಸಮ್ಮಾ
ಎತ್ತುವೆ ನಾರತಿಯಾ
ಎತ್ತ ನೋಡಲು ತಾನಿದೆ
ಎತ್ತಿನ ಹಬ್ಬವ ಮಾಡು
ಎಚ್ಚರವೀರಬೇಕು

ಏನು ಬೇಡ ಕಾಮ್ಯ ಯೋಗವು
ಏನು ವಿನೋದ ವಿಚಾರ
ಏನು ವಿನೋದ ವಿಚಾರ
ಏನು ಪುಣ್ಯವಕ್ಕ
ಏನು ತಂದೆ ಹುಟ್ಟಿದಾಗ
ಏನು ಗಾರುಡಿಗಾರನಮ್ಮ ಯನ್ನ ಸ್ವಾಮಿಯು
ಏನೇನು ಯನಗಿಲ್ಲ ಭಯವು
ಏನೇನಾಗುವುದಾಗುತಲಿರಲೀ
ಏನೆಂದು ಹೇಳಲವ್ವ ಗೆಳತಿ
ಏಳು ಕೋಟಿ ಮೈಲಾರಲಿಂಗ
ಏಳು ಕೋಟಿ ಮೈಲಾರಲಿಂಗ
ಏಳು ಚಕ್ರದಿ ಮೂಲಹಂಸನು
ಏಳಿರೋ ಬೇಗ ಏಳಿರೊ
ಏಕ ದಾರಿ ಸಿಕ್ಕಿತೆನಗೆ ಏಕ ದಾರಿ
ಏತಕೆ ಬಡಿದಾಡುವೆ

ಐದು ಸಮಾಸಂಗಳರ್ಥ

ಒಂದೆ ಧರ್ಮದ ಸೂತ್ರ ಜಗಕೇ
ಒಬ್ಬರೊಬ್ಬರ ಸೇರದಿಹರು

ಕಾಲ ಕಳೆಯಲೇಕೋ
ಕೂಡಲಿಲ್ಲವೆ ನಮ್ಮ ಶಿವನಾ
ಕೂಗು ಕೂಗಲೆ ಕೋಗಿಲೆ
ಕೂಗಿತು ಕೋಳಿಯು ಕೇಳಮ್ಮಾ
ಕುರುಡಂಗೆ ಕನ್ನಡಿ ಯಾಕೆ
ಕಾಯಬೇಕು ಗುರುವೆ
ಕುರಿಯ ಹಿಕ್ಕೆಯ ಲಿಂಗ
ಕಂಠಪಾಠವ ಮಾಡಿರೋ
ಕುಡುಕಾ ಮನೆಗೆಲ್ಲ ಕೆಡುಕಾ
ಕಂಡುಕೊಳ್ಳಿರಿ ಕುಂಡಲೀಧರ
ಕಂಡೆ ಶಿವಯೋಗಿಯ
ಕುಣಿಯುತ ಬಂದನು ನಟರಾಜ
ಕುಣಿಯುತಾಳೆ ಕುಣಿಯುತಾಳೆ ಯಲ್ಲಮ್ಮದೇವಿ
ಕುಣಿಯುತ್ತಲಿರುವಂಥ ನವಿಲೇ
ಕುಣಿಯುತ್ತಲಿರುವಂಥ ನವಿಲೇ
ಕ್ಷಮಿಸೆನ್ನ ಗುರುವೇ
ಕಣ್ಣು ಗೆದ್ದವ ಯೋಗಿಯು
ಕೇಳಲಾರದೆ ಕೆಟ್ಟು ಹೋದೆನಲ್ಲಾ
ಕೇಳಿ ಗುರುವಿನ ಮಠದೊಳು ಸಮಾರಾಧನೆಯು
ಕೇಳಿರಣ್ಣ ಕೇಳಿರಣ್ಣ
ಕೊಳಲನೂದುವ ಕೃಷ್ಣನ ಕಂಡೆ
ಕೋಶಪಂಚಕ ಸೇರಿ
ಕೋಲು ಕೋಲೆನ್ನಿರಣ್ಣ
ಕೈಲಾಸವಾಸ ಈಶಾ
ಕೈವಲ್ಯ ಪಡೆದಾತನು

ಗುರು ದೊರಕುವುದೆ ದುರ್ಲಭವು
ಗುರುವಿನ ಬೋಧಾ
ಗುರುವಿನ ಯಕ್ಷಿಣಿ
ಗುರುವಿನ ಪಾದ ಯನಗೆ ದೊರೆಯಿತವ್ವ
ಗುರುನಾಥನ ಮಹಿಮೆ
ಗುರು ಪುತ್ರನ ಸ್ವರೂಪ
ಗುರು ಪುತ್ರರಾದವರು ಗುರುತನ್ನು ಬಲ್ಲವರು
ಗುರು ಪಾದವನು ಕೂಡಿ
ಗುರುವೆಂಥಾ ಕರುಣಾವಂತಾ
ಗುರು ಕೊಟ್ಟ ಮಂತ್ರ ಪಿಂಡವನು
ಗುರಿಯ ಪೇಳಿರಯ್ಯ ಗುರು ಪುತ್ರರಾದರೇ
ಗಂಡ ಎಂಥವನಾದರೇನಕ್ಕ
ಗಣಿತವೆಂಬುದು ನಿಜಶಾಸ್ತ್ರ
ಗಣಿತಕ್ಕೆ ಮೀರಿದ ಶಾಸ್ತ್ರವಿನ್ನಿಲ್ಲಾ
ಗೊಂಬೆಯಾಟಗಾರನೀತ ಬಂದನಲ್ಲಾ

ಚಕ್ರಗಳೇಳನು ತಿಳಿಯಮ್ಮಾ

ಛಂದಸ್ಸು ಶಾಸ್ತ್ರದ ಸಾರ

ಜೂಜಿನ ಕೇಡು
ಜಯ ಮಂಗಳ | ಜಯ| ಜಯ
ಜಗವೇ ಪರಾರ್ಥವಾಗಿ ನಿಂತಿರುವ
ಜಗಜೀವನ ಪಾವನ ದೇವನ ಪರಶಿವನಾ
ಜ್ಞಾನ ಯೋಗವೆ ಸಹಜ ಯೋಗ
ಜ್ಞಾನನಂದಾದೀಪವು
ಜ್ಞಾನ ಯೋಗವ ತಿಳಿಯೊ
ಜ್ಞಾನ ಗಂಗಾ ಸ್ವರೂಪ
ಜ್ಞಾನಿಗೆ ತಾನೇ ಕಾಣುವ
ಜಾತಿಭೇದವೆನ್ನುವಂಥ ದೊಡ್ಡ ಮಾರಿ
ಜ್ಯೋತಿ ಲಿಂಗವ ನೋಡಿರೋ
ಜ್ಯೋತಿ ಲಿಂಗವನು ಪೂಜಿಸಿ
ಜ್ಯೋತಿಯ ಬೆಳಗುವ ಬಾರೆ ಸಖೀ
ಜೀವನಿಗೆ ನಿರ್ಮೋಹ ಬೋಧೆ
ಜೀವಬ್ರಹ್ಮರ ಏಕತ್ವ

ತನುವ ತೊಳೆದೆಯಲ್ಲ
ತನುವೆಂಬ ಗಾಳೀಪಟ
ತನುವೆಂಬ ತಿಪ್ಪೆಯ
ತನ್ನ ಬಿಟ್ಟು ದೇವರಿಲ್ಲ
ತನಗಾಗಿ ಸುರಿದಿತ್ತೆ ಮೇಘವು
ತಾನೆ ತಾನಾಗಬೇಕು
ತಾನೆ ಲಿಂಗ ತಾನೆ ಲಿಂಗ
ತೂಗುತ್ತಲಿರುವುದುಯ್ಯಾಲೆ
ತಂಗಿ ನೋಡೀ ಶಿವಯೋಗಿ
ತೇಜೋ ತತ್ವದರ್ಶನ
ತೊಗಲುಗೊಂಬೆ ಮಾಡಿ ಕೂಡಿದಾ
ತೊಗಲುಗೊಂಬೆ ಮಾಡಿ ಕೂಡಿದಾ
ತಿಳಿಸುವ ಮಾತಲ್ಲ
ತಿಳಿಯಬೇಕು ತಾನೆ ಉಳಿಯಬೇಕು
ತ್ರಿಪುರ ದಹನವ ಮಾಡಿದಾ

ದೀಪಾವಳೀ
ದಾನವರು ಮಾಡಿದ ವ್ಯಾಪಾರ
ದಯೆಯಿಲ್ಲದವನಿಗೆ ಧರ್ಮವೇಕೆ
ದೇವಿಮಹಾತ್ಮೆಯನೋದಿರಿ
ದೆವ್ವ ಹಿಡಿದಿತ್ತವ್ವ ಯನಗೆ
ದೇಹವ ಜರಿಯುವೆ ಯಾಕಪ್ಪ
ದೇಹವೆ ದೇವಾಲಯ
ದೇಹವೆಂಬ ಅಶ್ವತ್ಥವೃಕ್ಷ
ದೇಹವೆಂಬ ತೇರು

ಧ್ಯಾನವೆಂಬ ಗಿಣಿ

ನಾ ನಿನಗೆ ಋಣದ ಕೂಸು
ನಸ್ಯದ ಮಹಿಮೆ
ನಾಶವಾಗುವ ದೇಹವ ನಂಬುತ
ನಶ್ವರ ತನುವೆನಬೇಡಮ್ಮಾ
ನಾನಾರು ಎಂದೆಂಬ ಸ್ವಾನುಭಾವವನೀಗ
ನನ್ನ ನಾನೆ ಅರಿತುಕೊಂಡೆ
ನನ್ನದು ಏನೂ ತಪ್ಪಿಲ್ಲಾ
ನಾನೆಂಬುದಿಲ್ಲಾ ನಿರ್ಗುಣದಲ್ಲಿ
ನಂಬಿ ಕೆಟ್ಟೆನು ತನುವ
ನಂಬಿರಿ ನಂಬಿರಿ ಶಿವನನ್ನು
ನಂಬಿ ಕೆಟ್ಟವರಿಲ್ಲವೋ | ಸದ್ಗುರುವನ್ನು
ನಂಬಿದೆ ಗುರುಪಾದವ ಮನದೊಳು
ನಮ್ಮ ಕೋಳಿಯ ಕಂಡಿರೇನಮ್ಮಾ
ನುಡಿಬ್ರಹ್ಮ
ನುಡಿಯೆಲ್ಲವು ಮಂತ್ರ
ನುಡಿಯೇ ಪರಶಿವನೊಡಲಮ್ಮ
ನರನಲ್ಲೇ ಹರನಿರುವನು
ನಡೆ ನುಡಿಗಳೆ ಧರ್ಮಾ
ನಡೆಶುದ್ಧವಿಲ್ಲದವನ ನುಡಿ ನಂಬಬೇಕಾ
ನಡೆವುದೆ ಬ್ರಹ್ಮ
ನಾಗರಪಂಚಮಿ ಹಬ್ಬವ ಮಾಡುವ
ನಾಗರಹಾವನು ನೋಡಮ್ಮಾ
ನಾದ ಬಿಂದು ಕಳೆಗಳಂ ಪ್ರಸಾದಿಸುವುದು
ನಾ ನಿನಗೆ ಋಣದ ಕೂಸು
ನಾದ ರೂಪನಾದ ಶಿವನ
ನಾದೋಪಾಸನ
ನೋಡಲಿಲ್ಲವೆ ನಮ್ಮ ಶಿವನಾ
ನೋಡು ನಿನ್ನೊಳಗಾಡುತಿರುವಾ ಗೂಢ ಬ್ರಹ್ಮವಾ
ನೋಡು ಹಂಸನ
ನೋಡು ನಿನ್ನೊಳು ಬ್ರಹ್ಮವಾ
ನೋಡುವ ಬಾರಮ್ಮ ಗುರುವನು
ನೋಡೈ ಶಿವನಾ
ನೋಡೀ ಮನೆ
ನೋಡಿರಿ ಪರಶಿವನಾ
ನೋಡಿರಿ ಕಳಹಂಸನಾ
ನೇತ್ರ ಇಂದ್ರಿಯ ಮುಖ್ಯವು
ನಿಧಿ ಸಿಕ್ಕಿತು ಯೆನಗೆ
ನಿನ್ನ ನುಡಿ ವೇದವು ಪರಾನಾದವು
ನಿನ್ನ ಪಾಲಿನ ದೈವ ನಿನ್ನೊಳಗಿರಲಿಕ್ಕೆ
ನಿನ್ನದೆ ಜಗವೆಲ್ಲಾ
ನೀನು ಶಂಕರ ನಾನು ಕಿಂಕರ
ನಿಮ್ಮ ಪಾದವ ನಂಬಿದೇ
ನಿಮ್ಮೊಳಗಿರುವುದು ಬ್ರಹ್ಮ
ನಿಂತು ಕಾಯುತಲಿರ್ಪರು
ನೀತಿಯಿಂದಲೆ ನಡೆಯಿರಣ್ಣ
ನೀತಿಮಾರ್ಗ ಬಿಡಲು ಬೇಡ
ನೀತಿಮಾರ್ಗದೊಳಿರುವಾತ ಜಾಣ
ನೀತಿಯ ಸ್ವರೂಪ
ನೀತಿಯ ಮಹಿಮೆ
ನೀತಿಯ ತಿಳಿಯಣ್ಣಾ
ನಿಜ ವೈರಾಗ್ಯ
ನಿರ್ಗುಣನಾ ಪರಶಿವನು
ನಿದ್ರೆಯ ಮಾಡಿದ ಶಿವಯೋಗಿ

ಪತಿತನು ನಾನಯ್ಯ
ಪರಬೋಧಾ ಸಂಜೀವನವು
ಪರಮಾರ್ಥ ತಾನಿದು
ಪ್ರಸಾದ ಸಿಕ್ಕಿತೆನಗೆ
ಪಂಚ ಮುದ್ರೆಯ ತಿಳಿಯೋ
ಪರಸುಖ ಸಂಪದ ಗುರು ಪಾದ
ಪರನಾದವನೇ ಕೇಳಿದವ
ಪರನಿಂದೆ ಪಾಪ
ಪರ ಬ್ರಹ್ಮವೆಂಬ ಕೂಸು
ಪರ ವಸ್ತುವೆಲ್ಲಿದೆ ನೋಡಿರಿ
ಪರಿಹಾಸ್ಯ ಮಾಡಬಾರದು
ಪಡೆದುದುಣ್ಣಲು ಬರುವುದಲ್ಲದೆ
ಪರರ ನಿಂದಿಸುವಾತನು ಮೂರ್ಖ

ಫಲದಾಸೆ ಬಿಡುಗಡೆಯಾಗದೇ

ಬಾಳು ದುಃಖಮಯ
ಬಾಳೆ ಹಣ್ಣಾಗಬೇಕು ಶಿವಪೂಜೆಗೆ
ಬಾರಮ್ಮ ಈ ಜಾತ್ರೆ
ಬಾರೆ ಈಗಲೆ ನಾರಿ
ಬಾರೈಯ ಕಳಹಂಸನೆ
ಬಾಹ್ಯ ಭಕ್ತಿ
ಬೆಪ್ಪಾ ಬೇಡಪ್ಪ ಈ ದರ್ಪ
ಬೆಳಗುತ್ತಲಿದೆ ಜ್ಯೋತಿ
ಬೇಸಾಯವೇ ಶ್ರೇಷ್ಠ
ಬೋಧಾಮೃತ ಸಾರ
ಬೋಧಾಮೃತವ ಹೀರಿದೆ
ಬೇಗ ಬಾರಮ್ಮ ಈ ತೊಟ್ಟಿಲು ತೂಗು ಬಾರಮ್ಮ
ಬಲವಿಲ್ಲದ ಬಡವರು ನಾವು
ಬ್ರಹ್ಮ ಜ್ಞಾನ ಸುಧಾರಸ ಪಾನ
ಬ್ರಹ್ಮ ಧರ್ಮವು ಎಂಥದು
ಬ್ರಹ್ಮವ ತಿಳಿದವ
ಬ್ರಹ್ಮವನು ತಿಳಿದವನು
ಬ್ರಹ್ಮವೆಂತು ಇರ್ಪುದೆಂದು
ಬ್ರಹ್ಮಾಂಡಾನಂತವ ಧರಿಸಿರುವಾ
ಬಯಲೆ ಬ್ರಹ್ಮಾಂಡದಾಶ್ರಯವು
ಬಂದುದೆಲ್ಲ ಉಣ್ಣದೇ ತೀರಲಾರದು
ಬರಬಾರದೆಂದೆಂದೀಗೀವೂರಿಗೆ
ಬಡವಾ ಲೋಕಕ್ಕೆ ದುಡಿವಾ
ಬಡವರ ನೋಯಿಸಬೇಡಾ
ಬಡತನವ ಕೊಟ್ಟೆ ಯಾತಕ್ಕೆ ಶಿವನೆ
ಬಡಿವಾರವ್ಯಾತಕೋ ಬಡಜೀವವೇ
ಬಿಡಬೇಡ ಸಂಸಾರ

ಭವ ರೋಗ ವೈದ್ಯಾ
ಭ್ರಾಂತಿ ನಿರಸನ
ಭೂತಲದೊಳು ಸುಖದಾತನಿರಲು
ಭಂಗಿ ಯಾವುದು
ಭಜನೆ ಮಾಡಿರಣ್ಣಾ
ಭಕ್ತನೆಂತಿಹನೆನ್ನುವುದೇಕೆ
ಭಗವಂತನು ನಿರ್ಮಿಸಿದೀ ಬಂದೀಖಾನೆ
ಭೋಗ ಹೆಚ್ಚಾದರೆ
ಭಿಕ್ಷಕೆ ಬಂದವರಾರಮ್ಮ

ಮನಸ್ಸು ಎಂಬ ಕುದುರೆ
ಮನಸ್ಸು ಹುಚ್ಚುನಾಯಿ
ಮನವಿದು ಮಾಯಾ
ಮನಸಿಜನೈಯನ ಮನದೊಳು ಧ್ಯಾನಿಸೆ
ಮನವ ಗೆದ್ದರೆ ನೀನೆ ಜಾಣ
ಮನ ಮಂದಿರಾ ತನು ಘನಸುಂದರಾ
ಮನವೇ ಸಾಧನವು ಮುಕ್ತಿಗೆ
ಮಲಿನ ದೇಹದಿ ಹುಟ್ಟಿದರು
ಮಳೆರಾಯನೆ ಬಾರೈ
ಮಳೆದೇವರ ಪ್ರಾರ್ಥನೆ
ಮೂಲ ಕಾಲಜ್ಞಾನ ಹೇಳುವೆನೆಲ್ಲರು ಕೇಳಿರಣ್ಣಾ
ಮೂರು ಗುಣವಂ ಕಳೆದು
ಮುಟ್ಟು ಎಂಬು ದಾರಿಗೆ
ಮುಕ್ತ ದ್ವಾರವ ಸೇರೆಲೆ ನಾರಿ
ಮುಕ್ತ ದ್ವಾರವ ಸೇರೆಲೆ ನಾರಿ
ಮಂಗಳಾರತಿ
ಮಂಗಳಾರತಿ ಮಾಡುವೆ
ಮಂಗಳಾರತಿ ಮಾಡಿ|
ಮಂಗಳಾರತಿಯನ್ನು ಮಾಡಿ
ಮಂತ್ರಾರ್ಥ ವರಿದಾತ ಯೋಗಿ
ಮೃಣ್ಮಯ ಕಾಯ
ಮರುಳಾಗಬೇಡಾ ಸಂಸಾರದೊಳು
ಮರುಳಾಗಲೇಕೆ ಈ ಜಗಕೇ
ಮರವೆಯಿರುವುದು ಏಕೆ
ಮಹಾ ಮಂಗಳಂ
ಮಗಳೆ ಯಾತಕ್ಕೆ ಈ ರಗಳೇ
ಮಾಯೆಗೇ ದೂರವಾದುದಾದಿ ಬ್ರಹ್ಮ
ಮಾಡು ಮಾನವ| ಶಿವನ ಧ್ಯಾನವ|
ಮಾಡಿದೆ ಸಾಧನೆಯ
ಮೊದಲು ನಾ ಮಾಡಿದ ಪೂಜಾ ಫಲವು

ಯನಗೆ ತಪ್ಪದು ಬಡತನವು
ಯುಗನಾಲ್ಕಿವೆ ನೋಡಿ
ಯಾರು ಈ ಕಂದ ತೊಟ್ಟಿಲಿನಲ್ಲಿ ಸೇರಿತಾ ನಿಂದ
ಯಾರು ಕಾಣದ ಮೂಗುತೀ
ಯಾರಿಗಾಯ್ತು ಮುಕ್ತಿ
ಯಾಕೆ ತಿಳಿಯದೆ ಹೋದೆ
ಯಾಕೆ ತಿಳಿಯದೆ ಹೋದೆ ಮನುಜ
ಯೋಗ ಮಾಯೆಯ ಗೆಲ್ಲದೆ
ಯೋಗಂಗಳೊಳು ಸುಜ್ಞಾನ
ಯೋಗಿ ಬಂದನು ನೋಡೆ ಅಕ್ಕಾ
ಯೋಗಿ ಈತನ ಕಂಡೆಯೀಗ
ಯೋಗಿವರನ ವಿರಾಗಪರನ

ರಂಗಯ್ಯ-ಲಿಂಗಯ್ಯ
ರಕ್ತಬೀಜನ ಕೊಂದಳಲ್ಲಾ
ರೇವಣಸಿದ್ಧಾ ದೇವ ಪ್ರಸಿದ್ಧ
ರೂಢೀ ಮನದಲ್ಲಿ ಕೂಡಿ

ಲಾಲಿ ಲಾಲಮ್ಮ
ಲೋಕವು ಅಸತ್ಯಮಯ
ಲೋಕದೊಳು ಎಲ್ಲರಾ ಧರ್ಮವೊಂದೇ
ಲೆಕ್ಕಾಚಾರವೆ ಮೂಲಾಧಾರ
ಲಿಂಗಪೂಜೆಯ ಮಾಡಬೇಕಣ್ಣಾ
ಲಿಂಗಮಯಾ ಜಗ ಲಿಂಗಮಯಾ
ಲಿಂಗಾಂಗ ಸಮರಸದ ಇಂಗಿತವ ಬಲ್ಲಂಥ ಜಂಗಮರು

ವಿಶ್ವವಿದೆಲ್ಲವು ಓಂಕಾರ
ವಿದ್ಯಾ ದಾನದ ಶ್ರೇಷ್ಠತ್ವ
ವ್ಯವಸಾಯ ಮಾಡುವೆವಲ್ಲಾ
ವ್ಯಾಕರಣದಲ್ಲಿ ವೇದಾಂತ
ವಾದವ ಮಾಡುವದೇಕಮ್ಮ
ವೇದಾಸುನಾದ ಸುಬೋಧಾ ಪ್ರಸಾದಾತ್ಮ
ವೇದವನೋದಿದರೇನು
ವೈದಿಕರೆನ್ನುವ ನಾವೆಲ್ಲಾ

ಶನಿಮಹಾತ್ಮೆಯ ಕೇಳಿದವ ಧನ್ಯ
ಶೂನ್ಯ ಸಂಪಾದನೆಯ ಮಾಡಲಿಬೇಕು
ಶೂನ್ಯವೆ ನಿರ್ಗುಣ ಪರಬ್ರಹ್ಮ
ಶುದ್ಧ ಜೀವನಿಗೆ ಮುಕ್ತಿ
ಶರಣು ಶರಣು ಗುರುವರಗೇ ಶರಣು
ಶರಣರ ಸೇವಾ ಮಾಡೆಲೋ ಜೀವಾ
ಶರಣೆನ್ನಿ ಗುರುವಿಗೆ (ಶೋಭಾನ ಪದ)
ಶರೀರ ಬಿಟ್ಟಿನ್ನು ನರಕ ಬೇರಿಹುದೇ
ಶರೀರವೇ ಸಂಸಾರ
ಶಿವ ಸಾಕ್ಷಾತ್ಕಾರ
ಶಿವನ ನಿಜಸ್ವರೂಪ
ಶಿವಯೋಗಿಯ ನಾ ನೋಡಿದೆನು
ಶಿವ ಕೊಟ್ಟ ಕಣ್ಣನ್ನು
ಶ್ರೀ ಸರ್ಪಭೂಷಣ ಶಿವಯೋಗಿ
ಶ್ರೀ ನಾಗಲಿಂಗಸ್ವಾಮಿ
ಶ್ರೀ ನಿಜಗುಣ ಶಿವಯೋಗಿ
ಶ್ರೀ ಅಲ್ಲಮಪ್ರಭು
ಶ್ರೀ ಕನಕದಾಸರು
ಶ್ರೀ ಗುರು ಸ್ತುತಿ
ಶ್ರೀ ಗುರು ಮುಷ್ಟೂರೇಶ್ವರಸ್ವಾಮಿ
ಶ್ರೀ ಗುರುಸ್ತುತಿ
ಶ್ರೀ ಗುರುನಾಥನ ಯೋಗ ಪುನೀತನ
ಶ್ರೀ ಗುರುವೆಂಬಪತಿ
ಶ್ರೀ ತಿಪ್ಪೇರುದ್ರಸ್ವಾಮಿ
ಶ್ರೀ ಚೆನ್ನಬಸವಣ್ಣ
ಶ್ರೀಗುರು ಕಾರುಣ್ಯ
ಶ್ರೀಗುರು ಬೋಧೆ ಪಾವನ

ಸಾಧಿಸು ಸುಖ ಶಾಂತಿಯಾ
ಸಂಸಾರ ಮಿಥ್ಯ
ಸಂಸಾರ ಬಿಟ್ಟಾತ
ಸಂಸಾರ ದುಃಖಕಾರಿ
ಸಂಶಯ ಪಡಬೇಡೋ
ಸುಷುಮ್ನ ವಾಸನು ಪ್ರಸನ್ನನೀಶನು
ಸುಳ್ಳೇ ಸಂಸಾರವೆಲ್ಲವು
ಸುಜ್ಞಾನವೇ ಮುಕ್ತಿ ಸಾಧನ
ಸುಖವಿಲ್ಲ ಸಂಸಾರ ಸುಖವಿಲ್ಲ
ಸಂತತ ಸದ್ಗುರು ಚಿಂತನದೊಳು
ಸಂತೋಷ ನೆಲೆಗೊಂಡಿತು
ಸಾಕ ಬಾರದೇ ಗಿಣಿಯ
ಸಾಕಿಕೊಳ್ಳಿರವ್ವ ತಂಗಿ ಈ ಕೂಸು
ಸಗುಣವೆನ್ನಬಹುದೇ
ಸತ್ಯ ಸಾಧನೆ ಮಾಡಬೇಕಣ್ಣಾ
ಸತ್ಯ ಸಾಧನೆ ಮಾಡಿರೋ
ಸತ್ಸಹವಾಸ
ಸೋಮಾರಿ ಮನೆಗೆ ಹೆಮ್ಮಾರಿ

ಹಾವಿನ ಹೆಡೆಯೊಳು ನಾಟ್ಯವನಾಡುವ
ಹಬ್ಬವು ಬಂದರೆ ಸಾಕಮ್ಮ
ಹಸಿವುಯಿಲ್ಲದೆ ಊಟವು ಏಕೆ
ಹಂಸಾ ಬಾ ಕಳಹಂಸಾ
ಹಂಸ ಸ್ವರೂಪ ದರ್ಶನ
ಹಂಸನ ದರ್ಶನವಾದವನು
ಹಂಸನನ್ನು ನೋಡೋ
ಹಾವಾಡಿಗ ಬಂದಾ
ಹ್ಯಾಗಿರುವಾ ಶಿವ
ಹ್ಯಾಗಿರುವನು ಗುರುಪುತ್ರ
ಹುಚ್ಚುನಾಯಿ ಮನವೇ
ಹುಚ್ಚನಾಗಬೇಡೋ
ಹರನೆ ಸದ್ಗುರುನಾಥ
ಹರುಷದಿ ಕೇಳಿದೆ| ವೀಣಾನಾದವ
ಹರಿಹರರ ಐಕ್ಯ
ಹಣವಂತರೆಲ್ಲ ಸದ್ಗುಣವಂತರಾದರೆ
ಹೊಲೆಯನು ಯಾರು
ಹೋಯಿತೇನು ಭ್ರಾಂತಿ|
ಹೊರಗೆ ತೋರುತಿಹ ವಿಶ್ವವನೆಲ್ಲವ
ಹೊರಗೆ ತೋರುತಿಹ ವಿಶ್ವವನೆಲ್ಲವ
ಹೊಟ್ಟೆ ನಿನ್ನಿಂದ ನಾನು ಕೆಟ್ಟೆ
ಹೊಡೆವೆನಾ ಡಂಗೂರವಾ
ಹೇಗೆ ಪೂಜಿಸಲೀ ದೇವರ ನಾನು