ನಮ್ಮ ಶಿವನನ್ನು ಧ್ಯಾನವ ಮಾಡಿ|

ನಿಮ್ಮ ಪಾಪಕ್ಕೆ ಹೆದರಲೆಬೇಡಿ ||ಪ||

ಒಮ್ಮೆ ಮನಸಾರ ನುಡಿಯದ ಖೋಡಿ|

ಸುಮ್ಮನೇ ಪೋಪ ನರಕಕ್ಕೆ ನೋಡಿ ||ಅಪ||

ನೀಲಕಂಠನ ಗುಡಿಯೊಳಗಿರುವಾ|

ನಾಲಗೆಯೆಯಿಲ್ಲದಾ ಘಂಟೆ ನುಡಿವಾ||

ಮೂಲನಾದವ ಕೇಳಿ ಮೈಮರೆವಾ|

ಲೀಲೆಯಿಂದಿರ್ಪಶರಣಗೆ ಮಣಿವಾ ||1||

ಮೂಲಕುಂಡಲಿಯನ್ನೀಗ ತಡೆದು|

ಕಾಲಕರ್ಮದ ಸಂಯೋಗ ತೊಡೆದು ||

ಹೇಳಲಾಗದಾನಂದವ ಪಡೆದು|

ಮೂಲಮಂತ್ರವ ತಾನಾಗಿ ನುಡಿದು ||2||

ಗಂಗೆ ಗೌರಿಯರೊಡಗೂಡಿ ಬಂದು|

ಮಂಗಳಾತ್ಮಕತಾನಾಗಿ ನಿಂದು||

ಕಂಗಳಿರೆ ಮೂರವಸ್ಥೆಯ ತಂದು|

ಲಿಂಗವಾದನು ನರಹರಿಯಿಂದು ||3||

ಸುಲಭ ಪೂಜೆಯ ಮಾಡೆಲೈ ಮನವೇ| ನಿನ್ನೊಳಗೆ ಪರಶಿವ|

ಕಳೆಯ ಕೂಡುತಲಹುದು ನಿರ್ಗುಣವೇ ||ಪ||

ಕಳೆದು ಕಾಯವ ತಿಳಿದುಪಾಯವ|

ಹೊಳೆವ ಮಂತ್ರವತಳೆದು ತಂತ್ರವ||

ನಿಲಲು ವೈಭವ| ಉಳಿಯಧೀ ಭವ|

ಸಲುವುದಾ ಶಿವನೊಲುಮೆಯನುಭವ ||ಅಪ||

ನಿನ್ನ ಮೈಯನು ನೀನೆ ತೊಳೆವಾಗ| ಅಭಿಷೇಕ ಶಿವನಿಗೆ|

ಎನ್ನುತಾ ಚರಿಸುವುದೆ ಸುವಿರಾಗ||

ನಿನ್ನ ಮುಖ ಕೈಕಾಲ ತೊಳೆದರೆ|

ಇನ್ನು ಶಿವನಿಗೆ ಪೂಜೆಯೆಂದರೆ||

ಮುನ್ನ ಮಾಡಿದ ಕರ್ಮವೆಲ್ಲವು|

ನಿನ್ನ ಪಾಲಿಗೆ ನಿಲ್ಲಲಿಲ್ಲವು ||1||

ಆವಗಂಧವ ಮೂಸಿಸಲು ನೀನು| ಶಿವನಿಗೆ ಸಮರ್ಪಿಸು ||

ಜೀವ ಭಾವವೆ ನೀಗಿತಿನ್ನೇನು ||

ಆವ ರಸ ರುಚಿ ರೂಪ ಸ್ಪರ್ಶವ|

ಆವ ಶಬ್ದದೊಳಾದ ಹರ್ಷವ||

ದೇವದೇವನಿಗರ್ಪಿಸಲು ಶಿವ|

ನೀವ ನಿತ್ಯಾನಂದ ಪದವ ||2||

ಏನು ಮಾಡುವುದೆಲ್ಲ ಶಿವಗೆಂದು | ಮಾಡುತ್ತಲಿದ್ದರೆ |

ಹೀನ ಕರ್ಮದ ಬಾಧೆ ನಿನಗಿರದು||

ಧ್ಯಾನ ಮೌನವು ಜ್ಞಾನ ಸರ್ವವು|

ತಾನೆ ಶಿವನೆಂದೆಲ್ಲ ಕಾಲವು||

ಮೌನಿ ನರಹರಿ ಪಾದಕಮಲವ |

ನೀನು ನಂಬಲು ಪಡೆವೆ ಮೋಕ್ಷವ ||3||

ಜ್ಞಾನಗಂಗೆಯ ಸೇರಿ| ಸ್ನಾನ ಮಾಡೆಲೆ ನಾರಿ|

ಮಾನಸವೆನ್ನುವ ವೈಯಾರಿ ||ಪ||

ಹೀನ ಗುಣ ಮೈಲಿಗೆಯ| ನೀನಳಿದು ನಿಜ ಮಡಿಯ|

ಸ್ವಾನುಭಾವದಿ ಹೊಂದಿ ಸನ್ಮತಿಯ ||ಅಪ||

ತಾಯಿ ತಂದೆಯ ಸೇವೆ| ಗೈಯಲಾಯಿತು ಸ್ನಾನ|

ಮಾಯಗುಣವಳಿದಿರಲೊಂದು ಸ್ನಾನ |

ಬಾಯಲ್ಲಿ ಶಿವಮಂತ್ರ ಧ್ಯಾನವೆಂಬುದು ಸ್ನಾನ|

ಕಾಯ ಕರ್ಮವ ಮೀರಲೊಂದು ಸ್ನಾನ ||1||

ನಿತ್ಯ ಶ್ರವಣವಗೈದು| ಸತ್ಯಾರ್ಥವಂ ತಿಳಿದು|

ಚಿತ್ತಶುದ್ಧಿಯಗೈವುದೊಂದು ಸ್ನಾನ||

ಶೃತ್ಯರ್ಥ ಮನನದೊ| ಳುತ್ತಮ ಸುಜ್ಞಾನ|

ವೇತ್ತನಾಗಿರುವುದೆ ನಿಜ ಸ್ನಾನ ||2||

ವಿನಯ ಸೌಶೀಲ್ಯಸಾ | ಧನ ನೀತಿ ಸ್ನಾನವು||

ಧನಮದವಳಿದಿರ್ಪುದದು ಸ್ನಾನ||

ಜನನ ಮರಣಂಗಳ | ನೆನಹಿಲ್ಲದುದೆ ಸ್ನಾನ|

ನೆನೆಯೆ ನರಹರಿಯನ್ನು ನಿಜಸ್ನಾನ ||3||

ಕಂಡೆನೆನ್ನೊಳಗೆ ವುದ್ಧಂಡ ಮುನೀಂದ್ರರ|

ಖಂಡಿಸಿದರೆನ್ನ ದುರ್ವ್ಯವಹಾರ ||ಪ||

ಕಂಡಕೂಡಲೆ ಜ್ಞಾನ | ಮಂಡಿಸಲು ಶಿವಧ್ಯಾನ|

ಮಂಡಲತ್ರಯ ಮಧ್ಯ ಸಂಧಾನ ||ಅ|ಪ||

ತನುಗುಣಗಳೆನಿಸುತ್ತ | ಮನದಲ್ಲಿ ಜನಿಸುತ್ತ |

ಶುನಕನಾಯಿತು ನುಡಿಯ ಬೊಗಳುತ್ತ ||

ಶುನಕ ಗರ್ಭದಿ ಜನಿಪ| ಅನುಭಾವ ನುಡಿಮುನಿಪ||

ಪ್ರಣವ ಶೌನಕನಿದ್ದ ಸುಖ ರೂಪ ||1||

ಕತ್ತೆಯಂತೀ ತನುವ | ಹೊತ್ತು ತಿರುಗುವ ಮನವ |

ಸತ್ತು ಹುಟ್ಟುವ ತನುವ ಬಿಡಿಸಿರುವಾ||

ಕತ್ತೆ ಗರ್ಭದಿ ಜನಿಸಿ| ಮತ್ತೆ ಗಾರ್ಗ್ಯನುಯೆನಿಸಿ||

ಉತ್ತಮ ಜ್ಞಾನಿಯಾದನು ಸೊಗಸೀ ||2||

ಸುಖರೂಪ ಸನ್ನುಡಿಯ | ಶುಕ ಗರ್ಭದೊಳು ಪುಟ್ಟಿ||

ಅಕಳಂಕ ಮಂತ್ರಕೋಟಿಯ ನುಡಿದು ||

ಶುಕಮುನಿಯು ಭಾಗವತ | ಪ್ರಕಟ ಕಾವ್ಯವ ಬರೆದ |

ಸಖನಾದ ನರಹರಿಗೆ ಸುಖಬೋಧಾ ||3||

ದೇವರೇ ಮಾಡಿಟ್ಟ ದೇವಾಲಯ ||

ನೀವಿಲ್ಲಿ ಪೂಜೆಯ ಮಾಡಿರಯ್ಯ ||ಪ||

ಪಾವನಕ್ಕೆ ಪಾವನವು ದೇಹಾಲಯ |

ಕೈವಲ ಸಾಧನಕ್ಕೆ ಸದಾಶ್ರಯ ||ಅಪ||

ದೇವರಿಲ್ಲಿ ಠಾವು ಮಾಡಿ ನಿಂತನಯ್ಯಾ |

ಜೀವನನ್ನೆ ಕಾವಲಿಟ್ಟು ಕುಂತನಯ್ಯ ||

ಸಾವು ಹುಟ್ಟು ಇಲ್ಲದಾತ್ಮ ನೋಡಿರಯ್ಯ |

ಸಾವು ಹುಟ್ಟು ಲೀಲೆಯಾಡುತಿರ್ಪನಯ್ಯ || 1||

ಮುನಿಗಳೆಲ್ಲ ಮೌನವಾಗಿ ಜಪಧ್ಯಾನವ |

ಮನುಗಳೆಲ್ಲ ಮಂತ್ರಾನುಸಂಧಾನವ ||

ವಿನಯಶೀಲರಾಗಿಗೈವ ಸುವಿಧಾನವ |

ಮನವು ಕಂಡು ಕಲಿಯಲಾಗಿ ನಿಧಾನವ ||2||

ಅಮರರಿಲ್ಲಿ ಅಮರಗಾನ ಮಾಡುತ್ತಿರೆ |

ರಮಿಸಿ ಬೋಧ ಸುಧೆಯ ಪಾನ ಮಾಡುತ್ತಿರೆ ||

ಪ್ರಮಥರೆಲ್ಲ ಶಿವನ ಧ್ಯಾನ ಗೈಯುತ್ತಿರೆ |

ಸಮತೆಯನ್ನು ಸಾರಿ ಶರಣರಾಗುತ್ತಿರೆ ||3||

ನಾದವಾದ್ಯ ತಾನೆ ತಾನೆ ನುಡಿಯುತ್ತಿದೆ |

ವೇದ ಘೋಷ ನಿತ್ಯವಾಗಿ ನಡೆಯುತ್ತಿದೆ ||

ಸಾಧುಸಂತರಿಂದ ಪೂಜೆಯಾಗುತ್ತಿದೆ |

ಬೋಧೆ ಎಂಬ ಗಂಗೆಯಿಲ್ಲೆ ಹರಿಯುತ್ತಿದೆ ||4||

ಒಂಭತ್ತು ಬಾಗಿಲುಳ್ಳ ದೇವಾಲಯ |

ಇಂಬಾಗಿ ಲೋಕಕೆಲ್ಲ ಮಹಾಪ್ರಿಯ ||

ನಂಬಿಕೊಂಬ ಹುಂಬರಿಂಗೆ ಮಹಾಭಯ |

ಡಾಂಭಿಕರ್ಗೆ ಶಿಕ್ಷೆಯೀವ ಯಮಾಲಯ ||5||

ಎಂಟು ಗೇಣು ಉದ್ದವಾದ ದೇವಾಲಯ |

ಉಂಟು ಇಲ್ಲಿ ಎಲ್ಲ ಸೃಷ್ಟಿ ಸ್ಥಿತಿಲಯ ||

ಬಂಟರಾದ ಸುರರಿಗಾಯ್ತು ಮಹಾಲಯ|

ಅಂಟಿ ಅಂಟದಿರುವ ಆತ್ಮನಿರಾಮಯ ||6||

ಪಂಚಪ್ರಾಣವೆನ್ನುವಂಥ ಪರಿಚಾರರು |

ಕೊಂಚ ಬಿಡುವು ಇಲ್ಲ ನಿತ್ಯ ಸಂಚಾರರು||

ಮಿಂಚಿನಂತೆ ಹೊಳೆವ ಬುದ್ಧಿ ಮನವೆಂಬರು|

ಸಂಚು ತಿಳಿದುಕೊಂಡು ಸೇವೆ ಮಾಡುವರು ||7||

ಎಲ್ಲ ಪುಣ್ಯ ತೀರ್ಥಕ್ಷೇತ್ರ ಉಂಟಿಲ್ಲಿಯೆ |

ಎಲ್ಲ ಭಕ್ತಿ ಜ್ಞಾನ ಯೋಗ ಗಂಟಿಲ್ಲಿಯೆ ||

ಎಲ್ಲಿ ನೋಡಲಿಲ್ಲ ಇಂಥ ಗುಡಿಯಲ್ಲವೆ ||

ಎಲ್ಲ ಲೋಕ ಇಲ್ಲೆ ಉಂಟು ಕಂಡಿಲ್ಲವೆ ||8||

ದುಷ್ಟರೇನು ಬಲ್ಲರಿದರ ಮಹತ್ವವ |

ಇಷ್ಟ ಬಂದ ಹಾಗೆ ಕುಣಿದು ದಿವ್ಯತ್ವವ ||

ನಷ್ಟ ಮಾಡಿಕೊಂಡರಲ್ಲ ನಿಜ ತತ್ವವ |

ಸ್ಪಷ್ಟ ತಿಳಿಯುವಾತ ಪಡೆವ ಪರ ತತ್ವವ ||9||

ಸಪ್ತ ಕೋಟಿ ಮಂತ್ರಪಾಠಕ್ಕಿದೇ ಸ್ಥಲ |

ಗುಪ್ತವಾಗಿ ದೇವರೊಲಿಸಲಿದೇ ಬಲ ||

ಕ್ಲುಪ್ತವಾಗಿ ಸರ್ವಭೂತಕ್ಕಿದೆ ಫಲ |

ಜ್ಞಪ್ತಿ ಮಾತ್ರ ನರಹರೀಂದ್ರ ನಿರಾಕುಲ ||10||

ಯಾರಿಗಂತೆ| ಮೋಕ್ಷ | ಯಾರಿಗಂತೆ ||ಪ||

ತೋರ ತನುವಿಗೊ| ಜೀವ ನಿಂಗೋ|

ಜಾರಿಕೊಳ್ಳುವ ಮನಸಿಗಾಯ್ತೊ ||ಅ|ಪ||

ಪಂಚ ಪ್ರಾಣಕೊ| ಪಂಚ ವಿಷಯಕೊ |

ಪಂಚ ಜ್ಞಾನೇಂದ್ರಿಯಕೆ ಮುಕ್ತಿಯೊ ||

ಪಂಚ ಕರ್ಮೇಂದ್ರಿಯಕೊ ಬುದ್ಧಿಗೊ |

ಪಂಚ ಕೋಶಕೆ ಮುಕ್ತಿಯಾಯ್ತೊ ||1||

ಭೂತಗಳಿಗೋ ತ್ರಿಗುಣಗಳಿಗೋ |

ಜಾತಿ ಕರ್ಮಕೋ ಭಕ್ತಿ ಭಾವಕೊ ||

ನೀತಿ ನಿಯಮಕೊ ಚಿತ್ತವೃತ್ತಿಗೋ |

ಕೀರ್ತಿ ಗೌರವಗಳಿಗೆ ಮುಕ್ತಿಯೋ ||2||

ಮನೆಗೊ ಹೊಲಕೋ| ಧನಕೋ ಧಾನ್ಯಕೋ||

ವನಿತೆಪುತ್ರರಿಗಾಯ್ತೋ ಮುಕ್ತಿ ||

ಜನನಿ ಜನಕರಿಗಾಗುತಿಹುದೋ|

ಜನಿಸಿದಾಹಂಕಾರಕಾಯ್ತೋ ||3||

ಎಲವು ತೊಗಲು ರಕ್ತಮಾಂಸಂ |

ಗಳಿಗೆ ಮುಕ್ತಿಯಾಗುತಿಹುದೇ ||

ಕಳಚಿಕೊಳ್ಳುವ ಸ್ಥೂಲ ತನುವಿಗೊ |

ತಿಳಿಯದಿದ್ದ ಮಲಿನ ಮನಕೊ ||4||

ಯಾರಿಗಿಲ್ಲವು ಮುಕ್ತಿ ದೇಹವ |

ಸೇರಿಕೊಂಡ ಜೀವ ತಾನೇ ||

ಬೇರೆ ದೇಹ ಬೇರೆಯೆಂದು |

ಮೀರಿ ನರಹರಿಯಲ್ಲಿ ಸೇರಲು ||5||

ಬಲು ಸುಖಸಾರ | ಆತ್ಮವಿಚಾರ ||ಪ||

ಸುಲಲಿತ ಪೂರ| ಮೂಲಾಧಾರ ||ಅಪ||

ಜಗವಿದು ಮಿಥ್ಯ | ಬ್ರಹ್ಮವೇ ಸತ್ಯ ||

ಅಗಣಿತ ಬ್ರಹ್ಮ| ಜಗದಾಧಾರ ||1||

ಶಿವನ ವಿಯೋಗ | ಭವಭಯ ರೋಗ ||

ಶಿವನೊಳಗೈಕ್ಯ| ಜೀವಗೆ ಸೌಖ್ಯ ||2||

ವ್ಯಷ್ಟಿಯೆ ಜೀವ ಸ| ಮಷ್ಟಿಯೆ ಶಿವನು ||

ದೃಷ್ಟಿಗೆ ಕಾಣನು| ಶ್ರೇಷ್ಠನು ಶಿವನು ||3||

ಕಲ್ಪಿತ ಜೀವನು | ಅಲ್ಪನ ನಿತ್ಯನು ||

ಕಲ್ಪನಾತೀತನು | ಶಿವನೇ ನಿತ್ಯನು ||4||

ಭ್ರಾಂತಿಯ ಜೀವ| ವಿ| ಶ್ರಾಂತಿಯಕಾಣನು ||

ಶಾಂತಿಯೆ ಶಿವನೀ| ಚಿಂತಾಹರಣನು ||5||

ವಿಶ್ವವಿರಾಟ | ನಶ್ವರಮಾಟ |

ಶಾಶ್ವತನೀಶ್ವರ | ತಾನೆ ಸ್ವರಾಟ ||6||

ದೇಹವ ದಹಿಸುವ | ಮೋಹ ನಿಗ್ರಹವ ||

ವಹಿಸಿ ನಿಂತಿರುವ | ಸೋಹಂಭಾವ ||7||

ದುರ್ಗುಣ ನರಕ | ಸದ್ಗುಣ ನಾಕ ||

ನಿಗ್ರಹ ಶೋಕ | ನಿರ್ಗುಣ ಮೋಕ್ಷ ||8||

ನಿರ್ಮಲ ನೀತಿ | ಧರ್ಮದ ಜ್ಯೋತಿ ||

ಕರ್ಮದ ಭೀತಿ ಇಲ್ಲದ ಮೂರ್ತಿ ||9||

ನರಹರಿಬೋಧಾ | ಪರಮಾಹ್ಲಾದ ||

ಶರಣರ ವೇದಾ | ದೊರೆತರೆ ಸ್ವಾದ ||10

ಉಪವಾಸವನು ಮಾಡಿರಿಂತು| ಗುರು|

ಉಪದೇಶವನ್ನಾಂತು ನಿಜದಲ್ಲಿ ನಿಂತು ||ಪ||

ಕಪಟ ನಾಟಕ ಸೂತ್ರಧಾರಿ | ಗುರು |

ಕೃಪೆಯಿಂದಲಾಗುವುದು ಮುಕ್ತಿಗೆ ದಾರಿ ||ಅಪ||

ಅನ್ನ ಬಿಡುವುದೆ ಉಪವಾಸ| ಎನ|

ಲನ್ಯಾಯವಿದು ಎಂದ ಗುರು ಪರಮೇಶಾ ||

ಅನ್ಯ ವಿಷಯಗಳಾಸೆ ಬಿಟ್ಟು| ತನ|

ಗನ್ಯವಿಲ್ಲೆನ್ನುವುದುಪವಾಸ ಗುಟ್ಟು ||1||

ತನು ಭೋಗ ತನಗೆಂಬುದೂಟ| ಸರ್ವ|

ತನು ಭೋಗ ತನಗಿಲ್ಲವೆನಲುಪವಾಸ||

ಮನ ವೃತ್ತಿ ತನಗೆಂಬುದೂಟ | ಸರ್ವ|

ಮನ ವೃತ್ತಿರಹಿತ ತಾನೆನಲುಪವಾಸ ||2||

ಬೋಧಾಮೃತದ ಹಾಲ ಕುಡಿದು| ಪಕ್ವ|

ವಾದನುಭವವೆಂಬ ಪಣ್ಗಳ ತಿಂದು||

ಸಾಧುತ್ವ ತೀರ್ಥವ ಕೊಂಡು| ತತ್ವ|

ಸಾಧನೆಯೆಂಬ ಪ್ರಸಾದವ ಪಡೆದು ||3||

ವಿಷಯ ಸಂಗ್ರಹದೂಟ ದೋಷ| ನಿ|

ರ್ವಿಷಯಾನುಭವ ಜ್ಞಾನವದು ಉಪವಾಸ||

ಸಸಿನ ಸುಜ್ಞಾನ ವಿಲಾಸ| ಪರ|

ವಶನಾಗಿ ತಾನಿರ್ಪುದದು ಉಪವಾಸ ||4||

ಧ್ಯಾನದಲ್ಲಿಹುದುಪವಾಸ| ಪರ|

ಮಾನಂದ ಮಯನಾದರದು ಉಪವಾಸ||

ಮೌನವೆನ್ನುವುದುಪವಾಸ| ಸು|

ಜ್ಞಾನಿ ಶ್ರೀನರಹರಿ ಗೈದುಪದೇಶ ||5||

ಹಿಂದಕೆ ಮುಂದಕೆ ತೂಗಿ ಸಾಗಿ|

ಬಂದನವ್ವ| ಅಲ್ಲೆ| ನಿಂದನವ್ವ ||ಪ||

ಅಂದಿಗೆ ಇಂದಿಗೆ ಎಂದಿಗೆ ಒಂದೇ

ಎಂದನವ್ವ| ನಿತ್ಯಾನಂದನವ್ವ ||ಅಪ||

ಹುಚ್ಚರಿಗಚ್ಚರಿಯಾದ ಲೋಕ |

ನೆಚ್ಚನವ್ವ | ಕಂಡು| ಮೆಚ್ಚನವ್ವ||

ಎಚ್ಚರಕೆಚ್ಚರ ಹೆಚ್ಚಿರುವಾತ

ಸ್ವಚ್ಛನವ್ವ| ಮುಂದೆ| ಸ್ವೇಚ್ಛನವ್ವ ||1||

ಸುತ್ತಲು ಕತ್ತಲು ಮುತ್ತಲು ಬೆಳಕು|

ಇತ್ತಾನವ್ವ| ಎಲ್ಲ| ಹೊತ್ತಾನವ್ವ ||

ಎತ್ತಲು ಬೆತ್ತಲೆಯಾಗಿ| ನಿಂತು|

ಸುತ್ತ್ಯಾನವ್ವ| ನಿತ್ಯ| ಸತ್ಯಾನವ್ವ ||2||

ನೂತನ ಚೇತನದಾತನ ಕಂಡು|

ಸೋತೆನವ್ವ | ಭೂತ| ನಾಥನವ್ವ||

ಜಾತಕ ಸೂತಕ ಪಾತಕ

ಹರಿಸುವಾತನವ್ವ| ಮುಕ್ತಿ| ದಾತನವ್ವ ||3||

ಮಂತ್ರವ ತಂತ್ರವ ಯಂತ್ರವ ಬಲ್ಲ|

ಸಂತನವ್ವ| ಪುಣ್ಯ| ವಂತನವ್ವ||

ಶಾಂತಿಯ ಕಾಂತಿಯ ನಾಂತಿರುವಾತ|

ನಿಂತನವ್ವ| ಇಲ್ಲೆ| ಕುಂತನವ್ವ ||4||

ಎಂಜಲು ಮುಂಜಲಿಗಂಜದೆ ಉಂಡು|

ಬೆಳದೇನವ್ವ| ಪಾಪ| ಕಳೆದೇನವ್ವ ||

ಸಂಜೆಗೆ ಮುಂಜೆಗೆ ರಂಜಿಪನೀತ|

ಕಂಡೇನವ್ವ| ನಂಬಿ| ಕೊಂಡೇನವ್ವ ||5||

ನರಹರಿ ತಾತನು | ಕರುಣಿಸಿದಾತನ|

ಬೆರೆದೆನವ್ವ| ಬೋಧೆಯರಿದೆನವ್ವ ||

ಮರಣಕೆ ಸಿಕ್ಕದೆ| ದುರುತಕೆ ದಕ್ಕದೆ |

ಸರಿದೆನವ್ವ| ಮೈಯ ಮರೆದೆನವ್ವ ||6||

ತ್ರಿಗುಣಗಳಿಂದಲೆ| ಜಗವಿದು ನಡೆವುದು|

ತ್ರಿಗುಣಗಳೇ ತ್ರೈಮೂರ್ತಿಗಳು ||ಪ||

ತ್ರಿಗುಣಾತೀತನೆ| ಜಗದಾತ್ಮಕನು||

ಸಗುಣಾಶ್ರಯನಾ ಪರವಸ್ತು ||ಅ|ಪ||

ಸತ್ಯವು ಶಾಂತಿಯು| ಭಕ್ತಿ ವಿರಕ್ತಿಯು|

ಸತ್ವಗುಣದ ನಿಜವೃತ್ತಿಗಳು||

ನಿತ್ಯವು ಕರ್ಮಾ| ಸಕ್ತಿರ ಜೋಗುಣ|

ವೃತ್ತಿಯೊಳಿರುವುದು ತಾಮಸವು ||1||

ನಿರ್ಮಲವಾಗಿಹ| ಧರ್ಮವೆ ಸತ್ವವು|

ಉಮ್ಮಳಿಸುವುದೆ ರಜೋಗುಣವು ||

ಕರ್ಮದಿ ಮುಳುಗುತ| ಧರ್ಮವನರಿಯದ|

ಹಮ್ಮೆನಿಸಿಹುದೆ ತಮೋಗುಣವು ||2||

ಅರಿವು ಸತ್ವಗುಣ| ಮರೆವು ತಮೋಗುಣ|

ಅರಿವು ಮರೆವುಗಳ ಹರಿದಾಟ||

ಅರಿಯೆ ರಜೋಗುಣ| ಮೆರೆವ ಮೂರು ಗುಣ|

ಬೆರೆಯದೆ ಇರುವುದೆ ಪರಮಾತ್ಮ ||3||

ಸಾತ್ವಿಕ ರಾಜಸ | ತಾಮಸ ಗುಣಗಳ|

ವೃತ್ತಿಯೊಳಿಲ್ಲವು ಪರಮಾತ್ಮ||

ವೃತ್ತಿಗಳೆಲ್ಲ ನಿ| ವೃತ್ತಿಯ ಮಾಡುವ|

ನಿತ್ಯ ಸಾಕ್ಷಿಕನು ಪರಮಾತ್ಮ ||4||

ಸೃಷ್ಟಿ ರಜೋಗುಣ| ಲಯವೆ ತಮೋಗುಣ|

ಸೃಷ್ಟಿಲಯಂಗಳ ನಡುವಿರುವ||

ಶ್ರೇಷ್ಠ ಸ್ಥಿತಿಯೇ| ಸತ್ವಗುಣವುನಿ|

ರ್ದಿಷ್ಟವು ತಮರಜಕಾಶ್ರಯವು ||5|

ತನುವೇ ತಾಮಸ| ಮನವೇ ರಾಜಸ|

ಅನಘಾತ್ಮನು ತಾಂ ಸಾತ್ವಿಕನು ||

ಘನತರ ಮಹಿಮನು| ಮನುಮುನಿ ವಂದ್ಯನು||

ವಿನುತನು ನರಹರಿ ಗುರುವರನು ||6||

ಗಗನದರ್ಧವು ಜ್ಞಾತೃವಾಯಿತು|

ಗಗನದುಳಿದರ್ಧದಲಿ ನಾಲ್ಕಾ|

ಗೊಗೆದು ವಾಯುವು ಅಗ್ನಿಯಾಪೋ ಪೃಥ್ವಿಗಳ ಸೇರಿ ||

ಸೊಗಸಿ ಮಾನಸ ಬುದ್ಧಿ ಚಿತ್ತವು|

ಮಿಗಿಲಹಂಕಾರಗಳು ಕ್ರಮದಲಿ|

ಗಗನ ಪಂಚಕವೆನಿಸಿದುವು ತಾನಂತರಿಂದ್ರಿಯವು ||1||

ಮಾರುತ ದರ್ಧವು ದಾನವಾಯಿತು|

ಮರುತದೊಳಗುಳಿದರ್ಧ ನಾಲ್ಕಾ|

ಗಿರುತ ಲಂಬರವಗ್ನಿಯಾಪೋ ಪೃಥ್ವಿಗಳ ಸೇರಿ||

ಮೆರೆವ ವ್ಯಾನಸಮಾನ ಪ್ರಾಣವು|

ನೆರೆಯ ಪಾನವು ಕ್ರಮದೊಳಾದುವು|

ಮರುತ ಪಂಚಕವೆಂದೆನಿಸಿದವು ಪಂಚಪ್ರಾಣಗಳು ||2||

ಅನಲದರ್ಧವೆ ನೇತ್ರವಾಯಿತು|

ಅನಲದುಳಿದರ್ಧವದು ನಾಲ್ಕೆಂ|

ದೆನಿಸಿಯಂಬರವಾಯುವಾಪೋ ಪೃಥ್ವಿಗಳ ಸೇರಿ|

ವಿನುತ ಶ್ರೋತ್ರವು ತ್ವಕ್ಕು ಜಿಹ್ವಾ|

ಘನದ ಘ್ರಾಣವು ಕ್ರಮದೊಳಾದುವು

ಅನಲ ಪಂಚಕವಿವುಗಳೇ ಜ್ಞಾನೇಂದ್ರಿಯಗಳೆನಿಸಿ ||3||

ಜಲದೊಳರ್ಧವೆ ರಸವು ಎನಿಸಿತು|

ಜಲದೊಳುಳಿದರ್ಧದಲಿ ನಾಲ್ಕಾ|

ಗುಳಿದ ವ್ಯೋಮವು ವಾಯುವಗ್ನಿಯು ಧರೆಗಳಂಸೇರಿ||

ಪೊಳೆವ ಶಬ್ದವು ಸ್ಪರ್ಶ ರೂಪವು |

ಸುಳಿವ ಗಂಧವು ಕ್ರಮದೊಳಾದುವು |

ತಿಳಿಯಲಿವು ಜಲಪಂಚಕವು ವಿಷಯಂಗಳೆನಿಸಿದುವು ||4||

ಧರಣಿಯರ್ಧವೆ ಗುದವು ಎನಿಸಿತು | ಧರಣಿಯುಳಿದರ್ಧವದು ನಾಲ್ಕಾ|

ಗಿರುತಲಂಬರ ವಾಯುವಗ್ನಿಯು ಜಲಗಳಂ ಸೇರಿ||

ಮೆರೆವ ವಾಕ್ಕುವುಪಾಣಿ ಪಾದವು|

ಸುರಿವ ಗುಹ್ಯವು ಕ್ರಮದೊಳಾದುವು|

ಧರೆಯ ಪಂಚ ಕವಿವುಗಳೆ ಕರ್ಮೇಂದ್ರಿಯಗಳಹವು ||5||

ಪಾರಮಾರ್ಥವ ಪಡೆದೇ | ಭವಸಾಗರವ|

ಪಾರುಗಾಣಿಸಿ ನಡೆದೇ ||ಪ||

ಮೂರು ಲೋಕದ ಸ್ವಾಮಿ| ತೋರದಂತರ್ಯಾಮಿ||

ಸೇರಿರ್ಪಮರ್ಮವ| ತೋರಿಸಿದ ಗುರುದೇವ ||ಅಪ||

ಶಿವನು ಯನ್ನೊಳಗಿದ್ದನು| ನಾನರಿಯದೆ|

ಭವಬಂಧದೊಳು ಬಿದ್ದೆನು ||

ಶಿವನೆ ಗುರುರೂಪಾಗಿ| ಭುವಿಗವತರಿಸುತ್ತ||

ಶಿವನ ಸ್ವರೂಪಾನು| ಭವವ ಪೇಳಲ್ಕೆನಗೆ ||1||

ಶರಿರೇಂದ್ರಿಯಗಳೆನ್ನವು| ಎನ್ನುತ ನಾನು|

ಬರಿದೇ ದುಃಖದೊಳಿರಲು||

ಶರಿರೇಂದ್ರಿಯಕೆ ಸಾಕ್ಷಿ| ಯಿರುವೆನೀ

ನೆಂದೆನಗೆ||ಅರಿವಿತ್ತು ಅಜ್ಞಾನ|

ಹರಿಸಿದ ಗುರುದೇವ ||2||

ಜಗವೆ ನಿಜವೆಂದೆನ್ನುತೆ| ಭ್ರಮೆಯೊಳಗಿದ್ದೆ|

ಜಗದೀಶ್ವರನ ಮರೆತೇ||

ಜಗವುನಶ್ವರವೆಂದು| ಜಗದಾತ್ಮ ನೀನೆಂ

ದು|| ನಿಗಮಾರ್ಥದನುಭವ|

ಬಗೆಗೊಳಿಸೆ ನರಹರಿ

ಮಾಯಾಮಯ ಕಾಯ| ಮಾಯಾ ನಿರ್ಮಿತ ಮನಛಾಯಾ ||ಪ||

ಮಾಯೆಯ ನಂಬಲಿಬೇಡ|

ಮಾಯಾ ಹಂಬಲ ಬಿಡುಗಾಡ ||1||

ಕಣ್ಣನು ಸೇರಿತು ಮಾಯಾ|

ಬಣ್ಣವ ತೋರಿತು ಬಲು ಛಾಯಾ ||2||

ಅನ್ಯವನರಿವುದೆಮಾಯಾ|

ತನ್ನನು ತಿಳಿದರೆ ನಿರ್ಮಾಯಾ ||3||

ಬಹಿರಂಗವೆ ಸಾಕಾರ|

ಮಹಿ| ಮಾ ರೂಪ ನಿರಾಕಾರ ||4||

ಮಾಯಾಮಯ ಸಾಕಾರ|

ಮಾಯೋಪಾಧಿ ನಿರಾಕಾರ ||5||

ಸಗುಣಗಳೆಲ್ಲವು ಮಾಯಾ||

ಸಗುಣವನಳಿದುದೆ ನಿರ್ಮಾಯಾ ||6||

ಮೋಹಿಸುತಿರ್ಪುದು ಮಾಯಾ||

ಮೋಹವಳಿದು ನೆನೆ ನರಹರಿಯಾ

ಪಂಚವಿಂಶತಿ ಲೀಲೆಯ| ತೋರುವ ಕಾಯ|

ಪಂಚಮುಖ ಶಿವನಾಲಯ ||ಪ||

ಪಂಚವಿಂಶತಿ ತತ್ವ| ಪಂಚವಿಂಶತಿ ಲೀಲೆ||

ಪಂಚಭೂತಂಗಳೇ| ಪಂಚಮುಖ ಶಿವನಿಗೆ ||ಅಪ||

ಧರೆಯ ಮುಖದೊಳಗೀತನು| ಗಂಧವ ಧರಿಸೀ |

ಉರಗ ಭೂಷಣನಾದನು|

ಹರಿವ ಜಲ ಮುಖಗಂಗಾ| ಧರನೀತ ಗುರುಲಿಂಗ|

ಧರಿಸುತ್ತ ಸುರಸವ| ಪೊರೆವ ನೀಲೋಕ ||1||

ಅಗ್ನಿಮುಖವನ್ನಾಂತನು| ಅಂಧಕಹರಣ |

ಪ್ರಜ್ಞಾನ ಸುಖವಂತನು ||

ಅಜ್ಞಾನವಳಿದುಸ| ರ್ವಜ್ಞನೆಂದೆನಿಪನು||

ಅಜ್ಞಾಚಕ್ರದಿರೂಪ| ಮಗ್ನ ನಟರಾಜನು ||2||

ಮರುತ ಮುಖವನು ತಾಳಿದಾ| ಯೋಗವ ಕೂಡಿ| ಬೆರೆತ

ಸ್ಪರ್ಶದೊಳಾಳಿದಾ||

ವರನೀಲಕಂಠ | ಸುಂದರ ಡಮರುಗ ಧರಿಸಿ |

ಚರಿಪ ನಂದಿಯನೇರಿ| ಮರವೆಮಾಯೆಯ ತೂರಿ ||3||

ವ್ಯೋಮಕೇಶನು ಯೆನ್ನಿಸೀ| ಶಬ್ದವ ಕೂಡಿ|

ವ್ಯೋಮ ಮುಖದೊಳು ರಾಜಿಸೀ|

ಸೋಮಶೇಖರನಾಗಿ| ಕಾಮಸಂಹರ ಯೋಗಿ|

ತಾಮಸಂಗಳ ನೀಗಿ| ಸಾಮರಸ್ಯಕೆ ಭಾಗಿ ||4||

ಪಂಚಭೂತವು ಕೂಡುತಾ | ಅದರೊಳು ಜ್ಞಾತೃ |

ಪಂಚಕಂಗಳು ಮೂಡುತಾ||

ಪಂಚವಾಯುಗಳಲ್ಲಿ | ಪಂಚ ಜ್ಞಾನೇಂದ್ರಿಯ|

ಪಂಚವಿಷಯವ ಪೊಂದಿ| ಪಂಚ ಕರ್ಮೇಂದ್ರಿಯ ||5||

ಪಂಚಮುಖ ಪರಶಿವನು| ಸದ್ಗುರುವರನು

ಪಂಚೀಕರಣವೊರೆದನು ||

ಪಂಚಭೂತಗಳ ಪ್ರ| ಪಂಚವಂ ಲಯಿಸಿದ|

ಸಂಚಿತಾರ್ಥದ ಪಾಪ| ಮಿಂಚಿ ನರಹರಿಯಾದ ||6||

ಗಂಧದ ಬಾಗಿಲ ಸುಂದರದೇವರ|

ಮಂದಿರವೆಲ್ಲಿದೆ ನೋಡಣ್ಣ ||ಪ||

ಎಂದಿಗು ಮುಚ್ಚದು ಬಂಧುರ ಬಾಗಿಲು|

ಇಂದಿಗು ಬೀಗವೆ ಇಲ್ಲಣ್ಣ ||ಅಪ||

ಒಳಗೆ ಪ್ರವೇಶಿಸಿ ನೋಡಿದರಲ್ಲಿಯೆ |

ಬೆಳಗಿವೆ ರವಿಶಶಿ ಕೋಟಿಗಳು ||

ಇಳೆಯೇಳಲ್ಲಿಯೆ ಕಳಕಳಿಸುತ್ತಿವೆ|

ನೆಲಸಿಹರಲ್ಲಿಯೆ ದೇವರ್ಕಳು ||1||

ಹೊರ ಬರಲಾಕ್ಷಣ ಬರಿ ಬಯಲಾಗಿದೆ|

ಪರಮಾದ್ವೈತದ ನಿಜಸುಖವು||

ಪರಿಪರಿ ತೋರ್ಕೆಗಳಿರದಂತಾದುವು|

ಮರೆದೆನು ಶರೀರವ ಚಿನ್ಮುಖವು ||2||

ಪಾವನ ಗರ್ಭದ ಗುಡಿಯೊಳು ಬೆಳಗುವ|

ದೇವನು ನರಹರಿ ನೋಡಣ್ಣ ||

ದೇವರ ಕಂಡರೆ ಸಾವಿಲ್ಲವು ನಮ|

ಗಾವುದು ದುಃಖವು ಇಲ್ಲಣ್ಣ ||3||

ಅರ್ಥವಿಲ್ಲದ ಓದು ವ್ಯರ್ಥಾ| ಗುರು|

ಸೂತ್ರವಿಲ್ಲದ ಬೋಧೆಯಿಂದಲಪಾರ್ಥ ||ಪ||

ಕರ್ತೃವಿಲ್ಲದ ಕಾರ್ಯ ವ್ಯರ್ಥ| ಸ|

ತ್ಪಾತ್ರವರಿಯದ ದಾನದಿಂದಲನರ್ಥಾ ||ಅಪ||

ಭೋಗವಿಲ್ಲದ ಭಾಗ್ಯವೇಕೆ | ಸುವಿ|

ರಾಗವಿಲ್ಲದ ಯೋಗ ತರವಲ್ಲ ಜೋಕೆ ||

ತ್ಯಾಗವಿಲ್ಲದ ಸಿರಿಯೇಕೆ| ಭವ|

ರೋಗವಿಲ್ಲದೆ ಬ್ರಹ್ಮವಿದ್ಯೆಯು ಬೇಕೆ ||1||

ಭಾವವಿಲ್ಲದ ಭಕ್ತಿ ಬೇಡಾ| ಸಮ|

ಭಾವವಿಲ್ಲದ ಜ್ಞಾನ ನಿಜವಲ್ಲ| ನೋಡಾ||

ಹೇವವಿಲ್ಲದ ಹೆಣ್ಣು ಬೇಡಾ| ನಿಜ|

ಸೇವೆಯರಿಯದ ಧಣಿಯ ನಂಬಿದವ ಮೂಢಾ ||2||

ಧ್ಯಾನವಿಲ್ಲದ ಪೂಜೆ ಮರುಳು| ಸುವಿ|

ಧಾನವಿಲ್ಲದ ಬೋಧೆಯೊಳಗಿಲ್ಲ ಹುರುಳು||

ನಾನತ್ವವನು ಬಿಟ್ಟು ತೆರಳು| ಮತಿ|

ಹೀನ ತಿಳಿವನೆ ನರಹರಿ ಬೋಧೆ ತಿರುಳು |3||

ರೂಪಾಂತರದೊಳಿತ್ತು ಹಿರಿಯ ಮಾಯೆ ||

ಪಾಪಾಂತರದೊಳಾಯ್ತು ಕಿರಿಯ ಮಾಯೆ ||ಪ||

ರೂಪಾಂತರದೊಳೀಶ್ವರನ ಮಾಯೆ|

ಪಾಪಾಂತರದೊಳಾಯ್ತು ಜೀವ ಛಾಯೆ ||ಅಪ||

ದೃಶ್ಯಕ್ಕೆ ಮೂಲವೀಶ್ವರನ ಮಾಯೆ||

ವಿಶ್ವಕ್ಕಧೀನವೀ ಜೀವ ಛಾಯೆ||

ನಶ್ವರವೆನಿಸಿದೀ ಕಾಯ ಮಾಯೆ||

ಶಾಶ್ವತ ಬ್ರಹ್ಮದೊಳಿಲ್ಲ ಮಾಯೆ ||1||

ಲೇಪವಿಲ್ಲದೆಯಿತ್ತು ಹಿರಿಯ ಮಾಯೆ|

ಲೇಪವಾಗುತಲಿತ್ತು ಕಿರಿಯ ಮಾಯೆ||

ತಾಪದೂರದೊಳಿತ್ತು ಶಿವನ ಮಾಯೆ|

ತಾಪದಿಂದಳುತಿತ್ತು ಜೀವ ಛಾಯೆ ||2||

ಸಗುಣ ಸಾಕಾರವೀಶ್ವರನ ಮಾಯೆ|

ಜಗರೂಪ ತಾಳಿತ್ತು ಬರಿಯ ಛಾಯೆ||

ಸಗುಣ ನಿರ್ಗುಣವನ್ನು ಬ್ರಹ್ಮಗೈಯೆ |

ಜಗದಾತ್ಮ ನರಹರಿ ಮಂತ್ರಕಾಯೆ ||3||

ಜಗವೆ ನಾಟಕ ಶಾಲೆಯಾಯ್ತು| ಯುಗ|

ಯುಗದಿಂದ ನಿಲ್ಲದೆ ನಡೆಯುತ್ತ ಹೋಯ್ತು ||ಪ||

ಹಗಲೆ ನಾಟಕ ನಡೆದಿತ್ತು| ರಾ|

ತ್ರಿಗೆ ಮಾತ್ರ ಬಿಡುವಾಗಿ ವಿಶ್ರಾಂತಿಯಿತ್ತು ||ಅಪ||

ನೀಲ ಗಗನವೆ ದೊಡ್ಡ ಢೇರಾ| ಸುವಿ|

ಶಾಲ ಪೃಥ್ವಿಯೆ ಹಾಸಿಗೆಯಾಗಿ ಪೂರಾ||

ಮೇಲೆ ಹೊಳೆಯುವ ದೀಪಸೂರ್ಯ| ನಟ|

ಜಾಲ ಜೀವಿಗಳು ತಾಳಿದ ವೇಷ ತೂರ್ಯ | |1||

ಶಿವನೆ ನಾಟಕ ಸೂತ್ರಧಾರಿ| ವೈ|

ಭವ ಪೂರ್ಣವಾಯ್ತು ನಾಟಕ ಕಳೆಯೇರಿ||

ಅವಸಾನ ಕಾಲಕ್ಕೆ ಜಾರಿ| ನಾ|

ಟ್ಯವೆ ನಿಂತುಹೋಯ್ತು ಜೀವನೆ ಪಾತ್ರಧಾರಿ ||2||

ಜಾಗ್ರದಲ್ಲಿಯೆ ಬಲು ದೃಶ್ಯ| ನಟ|

ವರ್ಗ ದಣಿದಿರಲು ವಿಶ್ರಾಂತಿಯವಶ್ಯ||

ಶೀಘ್ರ ಪರದೆಯು ಬೀಳೆ ಹಾಸ್ಯ ಲಘು

ದೀರ್ಘ ಸ್ವಪ್ನವ ಕಂಡು ಸುಪ್ತಿಗೆವಶ್ಯ ||3||

ಅಂಕವೈದುಳ್ಳು ನಾಟಕವು| ಮೊದ|

ಲಂಕ ಜನನವು ಬಾಲ್ಯ ಯೌವನ ಮುಖವು||

ಸಂಕಟಾತ್ಮಕ ವಾರ್ಧಿಕವು | ಕೊನೆ|

ಯಂಕವಾಯಿತು ಮರಣ ನಿಂತು ನಾಟಕವು ||4||

ಎಲ್ಲರಾಡುವರು ನೋಡುವರು| ಇದ|

ರಲ್ಲಿ ಭೇದವೆಯಿಲ್ಲ ಹುಟ್ಟಿ ಸಾಯುವರು||

ಬಲ್ಲವರು ಕಡೆಗಾಗುತಿಹರು| ಶಿವ|

ನಲ್ಲಿ ಸೇರಲು ನರಹರಿಯ ಬೇಡುವರು ||5||

ಪಂಚೀಕರಣದೊಳು ಪ್ರಪಂಚವಾಗಿಹುದ | ನಿ |

ರ್ವಂಚನೆಯೊಳರುಹಿದ ಗುರುವರನು ||ಪ||

ಪಂಚಭೂತವು ಹಂಚಿ ಹಂಚಿ ಬೆರಸಲಿವು|

ಪಂಚವಿಂಶತಿ ತತ್ವವೆನಿಸಿದುವು ||ಅಪ||

ಜ್ಞಾತೃಮನ ಬುದ್ಧಿಚಿತ್ತಾಹಂ ಕೃತಿಗಳೈದು |

ಜ್ಞಾತೃಪಂಚಕವಾಗಸಾಂಶಂಗಳು ||

ಜ್ಞಾತೃವಂತಃಕರಣ | ವೃತ್ತಿಯೊಳುಮೈದೋರಿ|

ನಿತ್ಯ ಪ್ರವೃತ್ತಿ ಮುಖವಾದವುಗಳು ||1||

ವ್ಯಾನವು ದಾನ ಸಮಾನ ಪ್ರಾಣಾಪಾನ|

ಪ್ರಾಣಪಂಚಕ ವಾಯು ವಂಶಂಗಳು||

ತ್ರಾಣದಿಂದೀ ಸ್ಥೂಲನಾನಕರ್ಮಂಗಳ|

ತಾನೆ ನಡೆಸುತಲಿ ಬಾಳಿದುದೀಗಲು ||2||

ಶ್ರೋತ್ರತ್ವಗಿಂದ್ರಿಯ ನೇತ್ರ ಜಿಹ್ವಾಘ್ರಾಣ|

ಮಾತ್ರ ಜ್ಞಾನೇಂದ್ರಿಯವಗ್ನಿಯಂಶ||

ಸೂತ್ರವಾಗಿಹವರಿವಿತ್ತು ಜಾಗ್ರದಿ ದೇಹ|

ವೃತ್ತಿಗಾಶ್ರಯವಾಗಿ ಬೆಳಗುವುವು ||3||

ಶಬ್ದ ಸ್ಪರ್ಶವು ರೂಪ ರಸಗಂಧ ವಿಷಯವು|

ಲಬ್ಧವಾಗಲು ಜಲದಂಶಂಗಳು||

ಹಬ್ಬಿ ಜನ್ಮಗಳ ಪ್ರಾರಬ್ಧರೆನ್ನಿಸಿ ಬಂದು|

ಉಬ್ಬಿದಂಬುಧಿಯಂತೆ ಮುಳುಗಿಪವು ||4||

ವಾಕ್ಕುಪಾಣಿಯು ಪಾದಗುದಗುಹ್ಯವೆಂಬಿವು|

ಅಕ್ಕು ಕರ್ಮೇಂದ್ರಿಯ ಧರೆಯಂಶವು||

ಸೊಕ್ಕಿ ಕರ್ಮದಿ ಜನ್ಮ ಮರಣ ಕಾರಣವಿವು|

ಸಿಕ್ಕಿ ನರಹರಿಗೆ ಪಾವನವಾದುವು ||5||

ಜ್ಞಾತೃವ್ಯಾನವ ಸೇರಿ| ಶ್ರೋತ್ರದಲ್ಲಿಯೇ ಸಾರಿ|

ಅರ್ಥವಾಯಿತು ಶಬ್ದವದು ತೋರಿ ||ಪ||

ಮತ್ತೆ ಶಬ್ದಕೆ ದಾರಿ| ಯಿತ್ತ ವಾಕ್ಕಿದು ಜಾರಿ|

ಸೂತ್ರದಾಕಾಶ ಸೇರಿತು ಹಾರಿ ||ಅ|ಪ||

ಮನವ ಸೇರುತ ಜ್ಞಾತೃ | ಘನವುದಾನದಿ ನಿಂತು|

ಗುಣಿಸಿ ತ್ವಗೀಂದ್ರಿಯವನ್ನಾಂತು||

ನೆನೆದು ಸ್ಪರ್ಶವ ಪೊಂದಿ| ವಿನುತ ಪಾಣಿಯೊಳಾ

ಕ್ಷಣದಿ ವಾಯುವನೈದಿ ಲಯವಾಯ್ತು ||1||

ಬುದ್ಧಿಯೊಡನೆ ಜ್ಞಾತೃ| ವಿದ್ದುಸಮಾನ ಪ್ರ |

ಸಿದ್ಧವಾಯುವ ಸೇರಿ ನೇತ್ರವನು||

ಹೊದ್ದಿ ರೂಪವನರಿದಿದ್ದ ಪಾದದಿ ನಡೆದು|

ಶುದ್ಧವಾಗುತ ಸೇರಿತಗ್ನಿಯನು ||2||

ಚಿತ್ತದೊಡನೆ ಸೇರಿ ಜ್ಞಾತೃ ಪ್ರಾಣವ ಕೂಡಿ|

ಮತ್ತೆ ಜಿಹ್ವೆಯ ತೂರಿ ರಸವನಾಂತು||

ಅತ್ತಗುಹ್ಯದಿರಸ ನಿವೃತ್ತಿಯಗೈದು |

ಮತ್ತೆಯಪ್ಪುವಿನಲ್ಲೆ ಲಯವಾಯಿತು ||3||

ಹಮ್ಮು ಸೇರುತ ಜ್ಞಾತೃ| ನಿರ್ಮಲಾ ಪಾನದೊಳು|

ರಮ್ಯ ಘ್ರಾಣದಿ ಗಂಧವನ್ನರಿತು||

ದುರ್ಮಲವಂ ಗುದದಿಂದ ವಿಸರ್ಜಿಸಿ |

ಸೌಮ್ಯದಿಂಧರೆಯಲ್ಲೆ ಲಯವಾಯಿತು ||4||

ಪಂಚಭೂತಗಳಿಂದ| ಹಂಚಿಬಂದೀಕರಣ|

ಮುಂಚಿನಂದದಿ ಭೂತದೊಳು ಲಯವು||

ಪಂಚಭೂತಂಗಳು | ಮಿಂಚಿ ಪರಬ್ರಹ್ಮದಿ|

ಹೊಂಚಿ ನರಹರಿಯಲ್ಲೆ ಲಯವಾದವು ||5||

ಪಂಚತನ್ಮಾತ್ರೆಗಳಿಂದಾ| ಈ|

ಪಂಚಭೂತಂಗಳಾದುದು ಬಲು ಚೆಂದಾ ||ಪ||

ಪಂಚವಿಂಶತಿ ತತ್ವದಿಂದಾ| ಶಿವ|

ಪಂಚವಿಂಶತಿ ಲೀಲೆಗಳು ಸಮವೆಂದಾ ||ಅ|ಪ||

ಭೂತ ಪಂಚಕದಿಂದ ಜಗವು| ಸಂ|

ಭೂತವಾಗಿಹುದು ಜೀವಿಗಳಿಂಗೆ ಸೊಗವು||

ಚೇತನಾ ಚೇತನಗಳಿರವು| ಸಂ|

ಜಾತವಾದುದು ನಾನಾ ದೇಹ ವಿಸ್ತರವು ||1||

ಐದು ಜ್ಞಾನೇಂದ್ರಿಯಗಳಿಗೆ| ಬಲ|

ವಾದ ಭೂತಂಗಳೈದಿರುತಿರಲೊಳಗೆ||

ಐದು ವಿಷಯಂಗಳರಿವಿಗೆ| ಬಲ|

ವೈದಿತನ್ಮಾತ್ರೆಗಳು ಕಾರಣವಾಗೆ ||2||

ಪಂಚಮುಖಗಳು ಪರಶಿವಂಗೆ | ಈ|

ಪಂಚಭೂತಗಳೆಂಬುದುನು ತಿಳಿದವನು ||

ಮಿಂಚಿ ಬಾರನು ಜನ್ಮಗಳಿಗೆ | ನಿ|

ಶ್ಚಂಚಲ ಜ್ಞಾನ ನರಹರಿಯೀಯೆ ತನಗೆ

ಗುಣವಂತನೇ ಗುರುಭಕ್ತ| ದು|

ರ್ಗುಣ ನೀಗಿ ಸದ್ಗುಣ ಪಡೆದಾತ ಶಕ್ತ ||ಪ||

ಹಣವಂತ ಸದ್ಗುಣಯುಕ್ತ | ಎಂ|

ದೆನಿಸಿಕೊಂಡರೆ ಸಾಕು ಅವನೀಗ ಮುಕ್ತ ||ಅ|ಪ||

ಭಾಗ್ಯವಂತರ ಕಂಡು ಮರುಗೀ| ನಿ|

ರ್ಭಾಗ್ಯ ತಾನೆಂದುಕೊಳ್ಳದೆ ಮನ ಕರಗಿ||

ಯೋಗ್ಯರಾದವರ ಕಂಡೆರಗಿ| ವೈ|

ರಾಗ್ಯಶೀಲರ ಸೇವೆ ಮಾಡುತಿರಲಾಗಿ ||1||

ಕಾಮ ಕ್ರೋಧಂಗಳನಳಿಸೀ| ನಿ|

ಷ್ಕಾಮ ಶಾಂತಿಗಳನ್ನು ಮನದಲ್ಲಿ ಗಳಿಸೀ||

ಸೌಮ್ಯ ಭಾವದೊಳು ಕಂಗೊಳಿಸೀ| ದು|

ರ್ದಮ್ಯ ಲೋಭವ ಬಿಟ್ಟು ತ್ಯಾಗಿಯೆಂದೆನಿಸೀ ||2||

ಮದ ಮತ್ಸರಂಗಳ ನೀಗಿ| ನಿ|

ರ್ಮದ ನಿರ್ಮಾತ್ಸರ್ಯ ಭಾವವು ನೆಲೆಯಾಗಿ||

ಸದಯನಾದವ ರಾಜಯೋಗಿ| ಸದು

ಹೃದಯವುಳ್ಳವ ನರಹರಿ ಕೃಪೆಯಾಗಿ ||3||

ಶರೀರವೆನ್ನುವ ಸೆರೆಮನೆಯೊಳಗೆ |

ಸೆರೆಯು ತಪ್ಪದು ಸಾಯುವವರೆಗೆ ||ಪ||

ನಿರುತ ದುಃಖವು ಸೆರೆಯಾಳುಗಳಿಗೆ|

ತೆರಪು ಇಲ್ಲದ ಶಿಕ್ಷೆ ಜೀವರಿಗೆ ||ಅಪ||

ಚಿತ್ರಹಿಂಸೆಯ ಸೆರೆಮನೆ ದೇಹ|

ಚಿತ್ರಗುಪ್ತರ ಕಾವಲು ಗೇಹ||

ಚಿತ್ತಪಲ್ಲಟವಾಗಲು ಮೋಹ|

ಮತ್ತೆ ಮತ್ತೆ ವಿಚಿತ್ರದ ದಾಹ ||1||

ರೋಗರುಜಿನಂಗಳೆನ್ನುವ ಶಿಕ್ಷೆ|

ರಾಗದ್ವೇಷಂಗಳುಪಟಳ ಶಿಕ್ಷೆ||

ನೀಗಲಾಗದು ನಷ್ಟದ ಶಿಕ್ಷೆ|

ಸಾಗಲಾರದು ಕಷ್ಟದ ಶಿಕ್ಷೆ ||2||

ಮೊದಲ ಶಿಕ್ಷೆಯು ಜೀವರ ಜನನಾ|

ತುದಿಯ ಶಿಕ್ಷೆಯು ಜೀವ ರಮರಣಾ||

ತುದಿಗೆ ಮೊದಲಿಗೆ ಶಿಕ್ಷೆಯ ಸದನಾ|

ಬದುಕು ಬಾಳುವೆ ದುಃಖದ ಕಥನಾ ||3||

ಸತಿಯ ಮೋಹದ ಬೆಂಕಿಗೆ ಬಿದ್ದು|

ಸುತರ ಹಂಬಲ ಬಲೆಗೆ ಸಿಕ್ಕಿದ್ದು|

ಹಿತರ ಕಾಣದೆ ಎಲ್ಲವನೊದ್ದು |

ಗತಿಯು ನರಹರಿ ಎಂಬುದೆ ಮದ್ದು ||4||

ಶ್ರೀಗುರುಬೋಧೆ ಸ| ರಾಗದಿ ಕೇಳ್ದವ|

ಈಗಲೆ ಮುಕ್ತಿಯಪಡೆಯುವನು ||ಪ||

ಆಗಮ ನಿಗಮ ಸ| ಮಾಗಮ ಪಡೆದವ|

ಯೋಗಿಗಳರಸನೆ ಆಗುವನು ||ಅಪ||

ಅಂತಃಕರಣವು ಶಿವ ಚೈತನ್ಯವ|

ನಾಂತರೆ ಸ್ವಪ್ನವು ತೋರುವುದು ||

ಅಂತರ್ಬಾಹ್ಯದಿ ಶಿವ ಚೈತನ್ಯವು |

ನಿಂತಿರೆ ಜಾಗ್ರವದೆನಿಸುವುದು ||1||

ಅಂತರಂಗದೊಳು ಅಂತರಾತ್ಮನೊಳು|

ಅಂತರ್ಬಾಹ್ಯದ ಕರಣಗಳು||

ಶಾಂತಿಯಾಂತುವಿಶ್ರಾಂತಿಯ ಪೊಂದಲು|

ಸ್ವಾಂತದಿಸುಪ್ತಿಯುತೋರುವುದು ||2||

ಮೂರವಸ್ಥೆಗಳ ಸೇರುತ ಏಕಾ|

ಕಾರದೊಳಿರುವ ಪರಮಹಂಸಾ||

ತೋರಿಯು ತೋರದೆ ಧಾರಿಣಿ ಪಥದೊಳು |

ಸಾರುವ ನರಹರಿ ಮಂತ್ರವಶಾ ||3||

ಪಂಚ ಸ್ಥಾನದಿ ಪಂಚ ಭೂತಗಳ|

ಹಂಚಿಟ್ಟನು ಸದ್ಗುರು ದೇವಾ ||ಪ||

ಪಂಚೇಂದ್ರಿಯಗಳೆ ಪಂಚ ತತ್ವಗಳ |

ಹೊಂಚಿರುವಂದವನರುಹಿಸುವಾ ||ಅಪ||

ಘ್ರಾಣದೊಳಗೆ ಆಘ್ರಾಣಿಸಿ ಗಂಧವ|

ಸ್ಥಾನವು ಪೃಥ್ವಿಗಿ ದೇ ಎಂದಾ||

ತಾನೆ ನಿರಂತರ ಮೌನದಿಚರಿಸುವ| ಜ್ಞಾನಿಗಳಿಗೆ ಹಂಸನೆ ಎಂದಾ ||1||

ರಸನೆಯೊಳಗೆ ಷ| ಡ್ರಸಗಳನುಣ್ಣುತ|

ಒಸೆದೀ ಸ್ಥಲವೇ ಜಲವೆಂದಾ||

ಸಸಿನಸುಮಂತ್ರವನು ಸುರುತ ಕೊನೆಯೊಳು|

ಎಸೆದನು ಸೋಹಂಫಲವೆಂದಾ ||2||

ಚಕ್ಷುವಿನೊಳು ತಾನೀಕ್ಷಿಸಿ ರೂಪವ

ರಕ್ಷಿಸುವಗ್ನಿಗೆ ಸ್ಥಲವೆಂದಾ||

ಲಕ್ಷಿಸಿ ಜಾಗ್ರವ| ಅಕ್ಷಿಯು ಮುಗಿಯಲು|

ತಕ್ಷಣ ಸುಪ್ತಿಯು ಬಹುದೆಂದಾ ||3||

ತ್ವಗಿಂದ್ರಿಯದಿತಾಂ| ತಗಲಿದ ಸ್ಪರ್ಶವ|

ಸೊಗಸುತ ವಾಯುಸ್ಥಲವೆಂದಾ||

ಅಗಣಿತ ಬ್ರಹ್ಮವ| ನಗಲದೆ ಯೋಗದಿ|

ಬಿಗಿದಿರಲೈಕ್ಯವೆ ಫಲವೆಂದಾ 4||

ಶ್ರೋತ್ರದಿ ಶಬ್ದವ | ನರ್ಥಿಯೊಳರಿಯುತ|

ಸೂತ್ರವು ಗಗನ ಸ್ಥಲವೆಂದಾ||

ಪಾತ್ರವು ಶ್ರವಣ ಪ| ವಿತ್ರ ಸುಬೋಧೆಗೆ|

ಸತ್ಯವು ನರಹರಿ ತಾನೆಂದಾ ||5||

ಮೂವರು ಮೂರ್ತಿಗಳೀ ಪುರವಾ|

ಕಾವಲು ಮಾಳ್ಪುದುನರಿತಿರುವಾ ||ಪ||

ಭಾವದಿ ಸಂಶಯ ಹರಿದಿರುವಾ|

ಕೇವಲ ಜ್ಞಾನಿಯೆ ಪರದೈವಾ ||ಪ||

ಕಾಮನ ಪಿತನಿಹ ಜಾಗ್ರದೊಳು|

ಕಾಮನ ವೈರಿಸು ಷುಪ್ತಿಯೊಳು|

ತಾಮರಸೋದ್ಭವ ಸ್ವಪ್ನದೊಳು|

ನೇಮದಿ ಕಾಯ್ವರುಪಗಲಿರುಳು ||1||

ಮಂತ್ರದ ಸೃಷ್ಟಿಯು ಬ್ರಹ್ಮನಿಗೆ|

ಮಂತ್ರದ ರಕ್ಷಣೆ ವಿಷ್ಣುವಿಗೆ||

ಮಂತ್ರದ ಲಯವಾರುದ್ರನಿಗೆ|

ಸಂತತ ಕಾರ್ಯವು ಮೂವರಿಗೆ ||2||

ಕರಣ ಪ್ರವೃತ್ತಿಯೆ ಬ್ರಹ್ಮಗುಣ|

ಕರಣದರಕ್ಷಕವಿಷ್ಣು ಕಣಾ||

ಕರಣದ ಲಯವೇ ರುದ್ರ ಗುಣಾ|

ನರಹರಿಯೊಳು ಮೂವರ ಕಾಣಾ ||3||

ಶಿವ ಧರ್ಮವರಿಯಲು| ಗುರು ಧರ್ಮ ಮೊದಲು||

ಶಿವ ಮಂತ್ರವದು ತಾನೆ ಗುರು ವಶವಲ್ಲವೆ ||ಪ||

ಗುರು ಲಿಂಗ ಜಂಗಮ| ತೀರ್ಥ ಪ್ರಸಾದವು|

ವರವೀಭೂತಿ ರುದ್ರಾಕ್ಷ ಮಂತ್ರಗಳು ||1||

ಅಷ್ಟಾವರಣಗಳ | ನಿಷ್ಠೆಯೊಳಿರುವವ|

ಶ್ರೇಷ್ಠ ಶಿವಭಕ್ತನು| ಸೃಷ್ಟಿಯೊಳೆಲ್ಲಾ ||2||

ಗುರುವಿಂದಲಷ್ಟಾ| ವರಣಂಗಳಾದವು||

ಸರಸ ಸುಬೋಧೆಯೇ | ಮೆರೆವಷ್ಟಾವರಣ ||3||

ನುಡಿಬ್ರಹ್ಮ ಗುರುವು| ನಡೆಬ್ರಹ್ಮ ಲಿಂಗವು|

ನಡೆನುಡಿಯೆರಡರ| ನಡುವೆ ಜಂಗಮವು ||4||

ನಡೆಸು ಪ್ರಸಾದವು| ನುಡಿಪಾದ ತೀರ್ಥವು||

ನಡೆನುಡಿಯೊಂದಾದ| ಕಡೆ ಜ್ಞಾನ ರುದ್ರಾಕ್ಷಿ ||5||

ಶ್ರವಣ ವೀಭೂತಿಯು| ಮನನವೆ ಮಂತ್ರವು||

ಶಿವನಿಧಿ ಧ್ಯಾಸವೇ| ಶಿವಪೂಜೆಯಲ್ಲವೆ ||6||

ಅಷ್ಟಾವರಣಗಳ ಸ್ಪಷ್ಟವಾಗಿಯೆತಿಳಿದು||

ನಿಷ್ಠೆಯ ನರಹರಿಯೊ| ಳಿಟ್ಟವರೆ ಮುಕ್ತರು ||7||

ಅಭಯವ ಕೊಡು ಯೆನಗೆ| ಲೋಕಕೆ|

ಪ್ರಭು ನೀನೇ ಕೊನೆಗೆ ||ಪ||

ಉಭಯವನಳಿಯುವ| ಶುಭ ಸುಜ್ಞಾನವ|

ಅಭವನೆ ಕೊಡು| ಚಿ| ತ್ಪ್ರಭೆಯೊಳು ಸುಳಿಯುವ ||ಅಪ||

ಯಮ ಯೋಗದ ಬಲದೀ | ಯಮ ಭಯ| ಕ್ರಮಿಸುವ ನಿಶ್ಚಯದೀ||

ಸಮತೆಯ ಸಾಧಿಸಿ| ಸುಮನಸನೆನ್ನಿಸಿ||

ಭ್ರಮೆಯನು ಭೇದಿಸಿ| ರಮಿಸುವೆ ಸುಖಿಸೀ ||1||

ಸುಸಮಾಧಿಯನಾಂತು| ನಿನ್ನನು| ಬೆಸೆಯುತ ನಾ ನಿಂತು||

ವಿಷಯಗಳೆನ್ನುವ| ಹೆಸರನ್ನಳಿಸುವ|

ಅಸಮಾನತೆ ಸಾ| ಧಿಸಿ ಸಂಭ್ರಮಿಸುವ 2||

ಹೊರಗಿನ ವ್ಯಾಪಾರ| ಏನೆಂ|ದರಿಯದವೊಲು ಪೂರಾ||

ಬೆರೆಯುತ ನಿನ್ನೊಳು| ಮರೆಯುತಲನ್ಯವ|

ಅರಿದೇಕತ್ವವ| ನರಹರಿಯೆನ್ನುವ ||3||

ಅಷ್ಟಾಂಗ ಯೋಗದ| ನಿಷ್ಠಾ ಗರಿಷ್ಠರು|

ಸ್ಪಷ್ಟ ಮಾಡಿರುವರ್ಥ ತಿಳಿಯಣ್ಣಾ |ಪ||

ದುಷ್ಟ ಗುಣಗಳನೆಲ್ಲ| ನಷ್ಟ ಮಾಡುತ ಸರ್ವ|

ಶ್ರೇಷ್ಠ ಸದ್ಗುಣಗಳ ಪಡೆಯಣ್ಣಾ ||ಅಪ||

ಮಂತ್ರವೆ ಯಮಯೋಗ| ಮಂತ್ರ ನಿಯಮ ಯೋಗ|

ಮಂತ್ರ ಆಸನ ಯೋಗ ಕಾಣಣ್ಣಾ||

ಮಂತ್ರ ಪ್ರಾಣಾಯಾಮ| ಮಂತ್ರ ಪ್ರತ್ಯಾಹಾರ||

ಮಂತ್ರ ಧ್ಯಾನದ ಯೋಗ ಕೇಳಣ್ಣಾ ||1||

ಮಂತ್ರ ಧಾರಣ ಯೋಗ| ಮಂತ್ರ ಸಮಾಧಿಯು |

ತಂತ್ರವ ಗುರುವಿಂದ ತಿಳಿಯಣ್ಣಾ||

ಮಂತ್ರಾರ್ಥವಷ್ಟಾಂಗ| ವೆಂತೆನ್ನುವರ್ಥವ|

ಚಿಂತನದೊಳು ನೀನೆ ತಿಳಿಯಣ್ಣಾ ||2||

ಅಷ್ಟಾಂಗ ಯೋಗಸ| ಮಷ್ಟಿಯಾಗಲು ಮಂತ್ರ|

ಸೃಷ್ಟಿಯಾಗುವದೆಂದು ತಿಳಿಯಣ್ಣಾ||

ಕಷ್ಟವಿಲ್ಲದೆ ನುಡಿದು | ಶ್ರೇಷ್ಠ ಮಂತ್ರದ ಯೋಗ|

ದೃಷ್ಟಿಯಿಂ ನರಹರಿಯಸೇರಣ್ಣಾ ||3||

ತೂಗು ಬಾರಮ್ಮ| ಈ ತೊಟ್ಟಿಲು| ತೂಗು ಬಾರಮ್ಮ ||ಪ||

ತೂಗಿದವರಿಗೆ ಮುಕ್ತಿ| ಯಾಗಿ ಬಿಡುತಿಹುದಮ್ಮ ||ಅಪ||

ಎಲ್ಲರಿಗೆ ನಡುವಿದ್ದು| ಎಲ್ಲರರಿಯದ ಬಾಲ||

ಬಲ್ಲವರೊಳಾಡುತ್ತ| ಸೊಲ್ಲೆನಿಸಿದ ಬಾಲ ||1||

ಇರವೆನ್ನಿಸಿದ ಬಾಲ| ಅರಿವೆನ್ನಿಸಿದ ಬಾಲ||

ಮರವೆಯಿಲ್ಲದ ಬಾಲ| ಪರಬ್ರಹ್ಮ ನೀ ಬಾಲ ||2||

ಶ್ರವಣವೆನ್ನುವ ಪಾಲ| ಸವಿದು ಬೆಳೆದಿಹ ಬಾಲ||

ಸುವಿರಾಗ ಸದ್ಭಾವ| ಸುವಿವೇಕವೀ ಬಾಲ ||3||

ಹುಟ್ಟಿದಾಕ್ಷಣ ನುಡಿಯ| ಥಟ್ಟನಾಡುವ ಬಾಲ||

ಕಟ್ಟಕಡೆಯಲಿ ಮೋಕ್ಷ| ಕೊಟ್ಟು ಬಿಡುವ ಬಾಲ ||4||

ಎಲ್ಲ ಲೋಕದ ಸುದ್ದಿ| ಯಿಲ್ಲೆ ತಿಳಿಯುವ ಬಾಲ||

ಬಲ್ಲವರ ಒಡನಾಟ| ದಲ್ಲೆ ಬೆಳೆಯುವ ಬಾಲ ||5||

ಗುರುಪಾದ ಕೃಪೆಯಿಂದ| ದೊರಕಿದಂಥಾ ಬಾಲ|

ಗುರು ಬೋಧಾಮೃತದಿಂದ| ಭರಿತನಾಗಿಹ ಬಾಲ ||6||

ಕಾಲಕರ್ಮವ ಮೀರಿ| ಲೀಲೆಯಾಡುವ ಬಾಲ||

ಏಳುಕೋಟಿಯ ಮಂತ್ರ| ಮೂಲವಾಗಿಹ ಬಾಲ ||7||

ಈರೇಳು ಲೋಕಕ್ಕಾ| ಧಾರವಾಗಿಹ ಬಾಲ||

ಮೂರವಸ್ಥೆಗೆ ಮೂಲ| ಕಾರಣನು ಈಬಾಲ ||8||

ಎತ್ತಿಕೊಂಡವರೆಲ್ಲ| ಮತ್ತೆ ಇಳಿಸದ ಬಾಲ||

ಕರ್ತ ನರಹರಿರೂಪ| ವೆತ್ತಿ ಬಂದಿಹಬಾಲ ||9||

ಜೋಜೋ ಜೋಜೋ ಜೋಜೋ ಎಂದು|

ಜೋಗುಳವನು ಹಾಡಿ ತೂಗುವೆ| ಬೇಗನೆ ಮಲಗಮ್ಮ ||ಪ||

ಶರೀರವೆಂಬ ಅರಮನೆಯಲ್ಲಿ|

ಚರಿಸುವ ವರ ಹಂಸ| ನಿನಗೆ| ವರತೂಲಿಕಾತಲ್ಪ ||1||

ಬೆಳಕನು ನೋಡು| ನಲಿನಲಿದಾಡು|

ಅಳುವುದು ಯಾಕಮ್ಮ | ಸುಮ್ಮನೆ ಮಲಗಿರಬೇಕಮ್ಮಾ ||2||

ಚಿನುಮಯವಾದ| ಪ್ರಣವ ಸುನಾದದ|

ಘನ ಜೋಗುಳ ನಿನಗೆ| ಕೇಳುತ ತನ್ಮಯಳಾಗಮ್ಮ ||3||

ಮುತ್ತಿನಹಾರ| ಕತ್ತಿನೊಳಿಹುದು|

ಕಸ್ತೂರಿಯ ತಿಲಕ| ಹಣೆಯಲಿ| ಬಿತ್ತರಿಸುವುದಮ್ಮಾ ||4||

ಅಘಹರ ನರಹರಿ| ಮಗಳಾಗಿರುವೆ|

ಬಗಳಾಂಬೆಯು ನೀನೆ| ನಿಗಮ| ಆಗಮ ಪೂಜಿತಳೆ || 5||

ಸಪ್ತ ಚಕ್ರಗಳನ್ನು ಶೋಧಿಸು| ನಿ |

ರ್ಲಿಪ್ತ ಬ್ರಹ್ಮವನಲ್ಲಿ ಸಾಧಿಸು|

ಗುಪ್ತನಾದವನು ಸಂಪಾದಿಸು| ಸಂ|

ತೃಪ್ತಿಯನಲ್ಲಿಯೆ ಸಂಧಿಸು ಅಪ||

ಗುದದಲ್ಲಿ ಮೂಲಾಧಾರವು| ಧರೆ|

ಗಧಿಕ ಗಣೇಶ್ವರನಿರುತವು|

ಪಡೆದಾರು ನೂರರ ಜಪವನು| ಸಂ|

ಮುದದಿಂದ ಸ್ವೀಕರಿಸಿರ್ಪನು ||1||

ಸ್ವಾಧಿಷ್ಠಾನವು ಗುಹ್ಯವೆಂಬುದು | ಜಗ|

ದಾದಿ ಬ್ರಹ್ಮನ ಸೃಷ್ಟಿಗಾದುದು||

ಹೋದುವಾರ್ಸಾವಿರ ಜಪಗಳು| ಜಲ|

ವಾದಂಥ ತತ್ವವಿದಾಗಲು 2||

ಮಣಿಪೂರಕವು ನಾಭಿಯಲ್ಲಿದೆ| ರ

ಕ್ಷಣಗೈವ ವಿಷ್ಣುವಿಗಾಗಿದೆ|

ನೆನೆವಾರು ಸಾವಿರ ಜಪವನು |ಅ|

ರ್ಪಣ ಮಾಡಲಗ್ನಿತತ್ವೇಶನು ||3||

ಹೃದಯವನಾ ಹತಚಕ್ರವು| ಲಯ|

ಸದನರುದ್ರನಿ| ಗಿದು ಯುಕ್ತವು||

ಪಡೆದಾರು ಸಾವಿರ ಜಪಗಳು| ಮರು|

ತದ ತತ್ವವೆಂಬುರು ಮುನಿಗಳು ||4||

ಕಂಠವಿ ಶುದ್ಧಿಯ ಚಕ್ರವು |ಶಿವ|

ಭಂಟ ಜೀವನಿಗಿದು ಸ್ಥಾನವು||

ಉಂಟಿಲ್ಲಿ ಸಾವಿರ ಜಪಗಳು|

ಅಂಟಿತ್ತು ಗಗನದೊಳೀಗಲು ||5||

ಭ್ರೂಮಧ್ಯವಾಜ್ಞಾ ಚಕ್ರವು| ಗುರು|

ಸ್ವಾಮಿ ನಿಂತನು ನಿತ್ಯ ಸೌಖ್ಯವು||

ನೇಮಸಾವಿರ ಜಪ ಸಲ್ಲಲು| ಮನ|

ಧಾಮ| ಚಂದ್ರನ ತತ್ವ ನಿಲ್ಲಲು ||6||

ಬ್ರಹ್ಮರಂಧ್ರದಿ ಸಹಸ್ರಾರವು| ಗುರು|

ಬ್ರಹ್ಮ ನರಹರಿ ಸಂಪೂರ್ಣವು||

ಧರ್ಮ ಸಾಸಿರ ಜಪವಿಚಾರವು| ಮತಿ|

ರಮ್ಯಸೂರ್ಯ ಸತತ್ವಸಾರವು ||7||

ಏನು ಸೋಜಿಗವಯ್ಯ| ನೀನು ಪೇಳಿದುಪಾಯ|

ಸ್ವಾನುಭಾವ ಪ್ರಿಯ ಮಹನೀಯಾ ||ಪ||

ಮೌನವನು ಮಾಡೆಂದೆ| ಧ್ಯಾನದೊಳು ಕೂಡೆಂದೆ|

ಆನಂದಮಯ ಜ್ಞಾನ ಪಡೆಯೆಂದೇ ||ಅ|ಪ||

ದುರ್ಗುಣವ ಬಿಡು ಎಂದೆ| ಸದ್ಗುಣವ ಪಡೆಯೆಂದೆ|

ನಿರ್ಗುಣವೆ ಸದ್ಗುಣದ ಕೊನೆಯೆಂದೆ||

ಉಗ್ರವನು ನೀಗೆಂದೆ| ಶೀಘ್ರದೊಳು ಸಾಗೆಂದೆ|

ನಿಗ್ರಹದೊಳಿಂದ್ರಿಯವ| ನಿಲಿಸೆಂದೆ ||1||

ತನುವೆ ಸಾಕಾರವು| ತನುವಿಗಾಶ್ರಯವಾದ|

ಮನನಿರಾಕಾರವು ತಿಳಿಯೆಂದೆ||

ಮನಸ ಗುಣವಾಗಿತ್ತು| ಜನನ ಮರಣಕೆ ಬಿತ್ತು|

ಅನಘಾತ್ಮ ನಿರ್ಗುಣನು ನೋಡೆಂದ ||2||

ತೋರುವಿಂದ್ರಿಯ ಜಾಲ| ದ್ವಾರಮಾನಸ ಮೂಲ||

ಬೇರೆ ಬೇರೆನೆ ಸಗುಣಗಣ ಶೀಲ||

ಭೂರಿ ಬ್ರಹ್ಮವು ಸಗುಣ| ಹಾರಿತಾ ನಿರ್ಗುಣ|

ತೋರಿತೋರದ ನರಹರಿ ಜ್ಞಾನ ||3||

ತಾನೇ ಕಟ್ಟಿದ ಗುಡಿಯೊಳಗಿಟ್ಟನು |

ತಾನೇ ಮಾಡಿದ ದೇವರನು ||ಪ||

ತಾನೇ ಪೂಜಿಸಿ ನಮಿಸುತ ವರವನು|

ಮಾನವ ಪಡೆವುದು ನಿಜವೇನು ||ಅಪ||

ದೇವರು ತಾನಾಗಿರುವುದರಿಂದಲೆ|

ದೇವರ ಮಾಡುವ ಹಂಬಲವು||

ಸೇವೆಯ ಮಾಳ್ಪನು ದೇವರಿಗಾಗಿಯೆ|

ದೇವರ ಕಾಣುವುದೇ ನಿಜವು ||1||

ಕಾಣದ ದೈವಕೆ ಕಲ್ಪಿಸುತಿರ್ಪನು|

ಕಾಣುವ ವಿಗ್ರಹ ರೂಪವನು ||

ಕಾಣುವುದೆಲ್ಲವು ದೇವರೆಯೆಂದರೆ |

ಕಾಣುವನಲ್ಲಿಯೆ ದೇವರನು ||2||

ಮೂರ್ತಿಯ ಪೂಜೆಯ ಮಾಡುತ| ದೇವರ|

ಸ್ಫೂರ್ತಿಯ ತನ್ನೊಳು ತುಂಬುವನು||

ಮೂರ್ತಿಯ ಧ್ಯಾನವ ಮಾಡುತ

ನರಹರಿ | ಮೂರ್ತಿಯ ಕಾಣಲು ನಂಬುವನು ||3||

ವಿಗ್ರಹ ಪೂಜೆಯ ಮಾಡಿದರೇ ಮನ|

ನಿಗ್ರಹ ಮಾಡಲುಬಹುದಿನ್ನು||

ಹಗ್ಗದಿ ಕಟ್ಟಿದ ಪಶುವಿನವೊಲು ಮನ|

ಶೀಘ್ರದಿ ವಶವಾಗುವುದೆನ್ನು ||4||

ಹೊರಗಿನ ಮೂರ್ತಿಯು ಕರಗುತ ಮನದೊಳು|

ಸ್ಫುರಿಸಲು ತೇಜೋ ಮೂರುತಿಯು||

ಹೊರಗೊಳಗೆನ್ನದೆ ನರಹರಿ ಕಾಣಲು

ಬರಿದಾಗಲು ಮನ ಸದ್ಗತಿಯು ||5||

ಏನು ಮಾಡಲಯ್ಯ ಯನ್ನ ಭ್ರಾಂತಿ ನೀಗದು| ಸತ್ಯ|

ಜ್ಞಾನಸಿದ್ಧಿಯಾಗಿ ಮನವು ಶಾಂತಿಯಾಗದು ||ಪ||

ಮೌನಧ್ಯಾನವೊಂದೆಯಾಗಿ ಕರ್ಮ ಪೋಗದು| ನಿರ್ಮ|

ಲಾನುಭಾವವಾಗಿ ಶಿವನ ಧರ್ಮವಾಗದು ||ಅಪ||

ಆಸೆಯೇ ಪಿಶಾಚಿಯಾಗಿ ಬೆನ್ನು ಹತ್ತಿದೆ| ಕರ್ಮ|

ಪಾಶದಿಂದ ಕಟ್ಟಿಯನ್ನ ಕೊಲ್ಲ ಹತ್ತಿದೆ||

ದೋಷವೆಂಬ ರಕ್ಕಸಂಗೆ ಕರುಣವಿಲ್ಲದೆ| ರಾಗ|

ದ್ವೇಷವೆಂಬ ಕಿಚ್ಚಿನಲ್ಲಿ ಎಸೆದನಿಲ್ಲದೆ ||1||

ಕ್ರಾಮ ಕ್ರೋಧ ಲೋಭ ಮೋಹ ಮದವು ಮತ್ಸರ| ಯನ್ನ|

ನೇಮ ನಿಷ್ಠೆ ಕೆಡಿಸಿ ಬೆಳೆದ ವೈರ ವಿಸ್ತರ||

ನಾಮ ಧ್ಯಾನ ಮಾಡಲೀಯದಂತೆ ದುಸ್ತರ| ಹಂಸ|

ಗಾಮಿ ನಿನ್ನ ಕರುಣೆದೊರೆಯದಿದೆ ನಿರಂತರ ||2||

ನಡೆಯ ಶುದ್ಧಿಗಿಂತ ಬೇರೆ ತಪವೆಯಿಲ್ಲವು| ಯನ್ನ|

ನುಡಿಯು ಶುದ್ಧವಾಗಲಿನ್ನು ಜಪವೆಯಿಲ್ಲವು||

ನಡೆಯು ನುಡಿಯು ಶುದ್ಧವಾಗೆ ಜನ್ಮವಿಲ್ಲವು| ಯನ್ನ|

ಒಡೆಯ ನರಹರೀಂದ್ರ ನೀನೆ ಶುದ್ಧ ಬ್ರಹ್ಮವು ||3||

ದೇವಾ ಕೊಡು ನಿನ್ನ ಸೇವಾ| ಭಕ್ತ ಜೀವಾ|

ಯುಕ್ತ ದಿವ್ಯ ಪ್ರಭಾವಾ ||ಪ||

ಗಗನದೊಳಿದ್ದೆಲ್ಲ| ಜಗವ ಪಾಲಿಸುವಂಥ||

ನಿಗಮಾಗಮಾರ್ಥವ| ಸೊಗಸಿ ಬೋಧಿಸುವಂಥ ||1||

ವಾಯು ತತ್ವದೊಳಿದ್ದು| ಕಾಯ ಕರ್ಮವನಳಿದು||

ಮಾಯೆಯ ಗೆಲಿದು ನಿ| ರ್ಮಾಯನೆಂದೆನಿಸಿರ್ಪ ||2||

ಅಗ್ನಿಯಲ್ಲಿಯೆ ಸರ್ವ| ಪ್ರಜ್ಞೆಯಂ ನೀಯುತ್ತ||

ಅಜ್ಞಾನ ತಮವಳಿದ| ಸುಜ್ಞಾನ ಜ್ಯೋತಿಯೆ ||3||

ಜಲತತ್ವದೊಳು ಮಂತ್ರ| ಬಲದಿಂದ ಲೋಕವ||

ಸಲಹುತ್ತಲಿರುವಂಥ| ಜಲದುರ್ಗಿಯರಸನೆ ||4||

ಪೃಥ್ವಿ ತತ್ವದೊಳಿದ್ದು| ಹೊತ್ತು ಮೂಜಗಗಳ|

ನಿತ್ಯ ಪಾಲಿಸುತಿರ್ಪ| ಕರ್ತ ನರಹರಿ ಮೂರ್ತಿ ||5||

ತಿಳಿದುಕೊಳ್ಳಿರಿ ಇಂಥ ಲೆಕ್ಕ| ನೀವು|

ಕಳೆದುಕೊಳ್ಳಿರಿ ಜನ್ಮದುಃಖ ||ಪ||

ತಿಳಿದು ಕೂಡುವ ಲೆಕ್ಕ| ಕಲಿತು ಕಳೆಯುವ ಲೆಕ್ಕ||

ಅಳಿದು ಗುಣಾಕಾರ| ತಳೆದು ಭಾಗಾಕಾರ ||ಅಪ||

ಕೂಡೆ ಕರ್ಮದೊಳು ಸಂಸಾರ| ಬಂಧ|

ರೂಢಿಯಾಯ್ತೆಂಬ ವಿಚಾರ||

ಬೇಡುತ್ತ ಶ್ರವಣವ| ಮಾಡುತ್ತ ಮನನವ|

ಗಾಢ ನಿಧಿಧ್ಯಾಸ | ಕೂಡಿ ಪರಮೋಲ್ಲಾಸ ||1||

ಕಳೆದು ಕರ್ಮವನಿಂತ ಲೆಕ್ಕ | ನೀವು|

ತಿಳಿದು ನೋಡಿರಿ ಬ್ರಹ್ಮಪಕ್ಕ||

ಬೆಳೆದ ಜನ್ಮದ ದುಃಖ| ಕಳೆದುಕೊಳ್ಳುವ ಲೆಕ್ಕ||

ತಿಳಿಸೆ ಸದ್ಗುರುರಾಯ| ಸುಲಲಿತ ಸದುಪಾಯ ||2||

ಗುಣ ಹೆಚ್ಚಿಸುವ ಗುಣಾಕಾರ| ಬಿಟ್ಟು|

ಗುಣವ ಭಾಗಿಸಿ ಶೇಷ ಪೂರ||

ಗುಣರಹಿತ ಬ್ರಹ್ಮವಹು| ದೆನುತ ನಿಶ್ಚಯ ಮಾಡಿ|

ಪ್ರಣವಾಂತ್ಯದೊಳು ತೋರ್ಪ| ಅನಘ ನರಹರಿಯಿಂದ ||3||

ಲೆಕ್ಕವೆಯಿಲ್ಲದ ದುಃಖವನೀಯುತ |

ಶಿಕ್ಷೆಯಗೈವುದು ಯಮಬಾಧೆ ||ಪ||

ದುಃಖವೆ ಇಲ್ಲದ ಸೌಖ್ಯವನೀಯುತ|

ರಕ್ಷಿಸುತಿರುವುದು ಗುರು ಬೋಧೆ |ಅಪ||

ಸಾಯುವ ಹುಟ್ಟುವ ನೋಯುವ ಬೇಯುವ|

ಕಾಯವೆ ನಂಬಲು ಯಮಬಾಧೆ||

ಕಾಯಕೆ ಸಾಕ್ಷಿಯು ತಾನೆಂದೆಂಬ ಉ|

ಪಾಯವ ಪೇಳ್ವುದೆ ಗುರುಬೋಧೆ ||1||

ಆಶಾಪಾಶದಿ ಬಂಧಿಸಿ ತನ್ನನು|

ಕ್ಲೇಶಪಡಿಸುವುದೆ ಯಮಬಾಧೆ||

ಆಶಾಪಾಶವ ಛೇದಿಸಿ ಬ್ರಹ್ಮವಿ|

ಲಾಸವನೀವುದೆ ಗುರುಬೋಧೆ ||2||

ಕರ್ಮವ ಹೆಚ್ಚಿಸಿ ಕಾಲದಿ ವಂಚಿಸಿ|

ಜನ್ಮವ ತರುವುದೆ ಯಮಬಾಧೆ||

ಕರ್ಮವ ಕಾಲವ ಜನ್ಮದ ಮೂಲವ|

ನಿರ್ಮೂಲಿಸುವುದೆ ಗುರುಬೋಧೆ ||3||

ಇಂದ್ರಿಯ ವಿಷಯಾ| ನಂದದಿ ತನ್ನನು|

ಬಂಧಿಸುತಿರುವುದೆ ಯಮಬಾಧೆ||

ಇಂದ್ರಿಯ ಸುಖಗಳ ಮೀರಿದ ಬ್ರಹ್ಮಾ |

ನಂದವ ನೀವುದೆ ಗುರುಬೋಧೆ ||4||

ಮಾಂಸಪಿಂಡದೊಳು ಸೇರಿಸಿ ತನ್ನನು|

ಹಿಂಸಿಸುತಿರುವುದೆ ಯಮಬಾಧೆ||

ಹಂಸರೂಪ ಸನ್ಮಂತ್ರಪಿಂಡ | ಸೋ|

ಹಂಸಾಧನೆ ನರಹರಿ ಬೋಧೆ ||5||

ಧಾತ್ರಿಯೊಳು ಭಿಕ್ಷಕ್ಕೆ ತಿರುಗುತ್ತಲಿರುವಾತ ಜಂಗಮಯ್ಯ ||ಪ||

ತೀರ್ಥದಿ ಮುಳುಗೆದ್ದು ಮಂತ್ರವುಚ್ಛರಿಸುವ ಹಾರವಯ್ಯ ||ಅಪ||

ಉರಿವಗ್ನಿಯೊಳು ಯಜ್ಞನಿರತನಾಗಿರುವಾತ ಹಾರವಯ್ಯ||

ಮರುತನೊಳಗೆ ಯೋಗಭರಿತನಾಗಿರುವಾತ ಜಂಗಮಯ್ಯ ||1||

ಗಗನತತ್ವದಿ ಸೇರಿ ಜಗವ ತುಂಬಿರುವಾತ ಜಂಗಮಯ್ಯ|

ನಿಗಮಾಗಮಾರ್ಥವ ಬಗೆದು ಬೋಧಿಸುವಾತ ಹಾರವಯ್ಯ ||2||

ಸತ್ತು ಚಿತ್ತಾನಂದ ನಿತ್ಯಪರಿಪೂರ್ಣನು ಜಂಗಮಯ್ಯ|

ಮರ್ತ್ಯಕ್ಕೆ ಪಾವನಮೂರ್ತಿ ಶ್ರೀನರಹರಿ ಹಾರವಯ್ಯ ||3||

ಮಂತ್ರಾ ಸರ್ವಸ್ವತಂತ್ರ| ಬ್ರಹ್ಮತಂತ್ರ||

ದೇಹಯಂತ್ರ ಪರತಂತ್ರಾ ||ಪ||

ಒಂದಕ್ಷರದ ಮಂತ್ರ| ಒಂದೇ ಬ್ರಹ್ಮದ ತಂತ್ರ||

ಸಂದ ಎರಡಕ್ಷರಗ| ಳಿಂದ ಶಿವ ಜೀವೈಕ್ಯ ||1||

ಮೂರಕ್ಷರದ ಮಂತ್ರ| ಮೂರು ಮೂರ್ತಿಯ ತಂತ್ರ||

ಸೇರಲಾಗುವುದೊಂದೆ| ಸಾರಪ್ರಣವದ ಮಂತ್ರ ||2||

ಚತುರಕ್ಷರೀ ಮಂತ್ರ| ಗತಿಯ ತೋರುವ ತಂತ್ರ||

ಶೃತಿ ಸಾರಸಮ್ಮತ| ಪಥವ ಪೇಳುವ ಮಂತ್ರ ||3||

ಪಂಚಾಕ್ಷರೀ ಮಂತ್ರ| ಪಂಚಭೂತದ ತಂತ್ರ||

ಪಂಚಮುಖ ಶಿವನಿರ್ಪ| ಸಂಚು ಪೇಳುತಲಿರ್ಪ ||4||

ಹಂಸಜೀವನು ಪರಮ | ಹಂಸ ಶಿವನೊಳು ಕೂಡಿ ||

ಹಂಸ ಸೋಹಂ ಭಾವ | ಸಂಸರ್ಗವೆನಿಸುವ ||5||

ದೇಹದೊಳ್ಜನಿಸಿ ಸಂ | ದೇಹವ ತಾ ಬಿಡಿಸಿ||

ಕೋಹಂ ಭಾವವನಳಿಸಿ | ಸೋಹಂ ಭಾವವನೀವ ||6||

ನಾದದಿ ಮೊದಲಾದ | ವೇದದಿ ಬಲವಾದ ಮಂತ್ರ ||

ಬೋಧೆಯೆ ತುದಿಯಾದ | ಆದಿಬ್ರಹ್ಮವೆ ಮಂತ್ರ ||7||

ಶಿವನ ಪೂಜಿಸಲೆಂದು | ದಿವಿಜ ಕೋಟಿಯು ಬಂದು ||

ಸುವಿನೋದದಿಂದಿರ್ಪ | ವಿವರಮಾಳ್ಪುದೆ ಮಂತ್ರ ||8||

ಬ್ರಹ್ಮತಾ ಬಯಲಾಗಿ | ಹೊಮ್ಮಿ ಬಂದುದೆ ಮಂತ್ರ ||

ಕರ್ಮಕಾಲವ ನೀಗಿ | ರಮ್ಯವಾದುದೆ ಮಂತ್ರ ||9||

ಶಿವಜೀವರೈಕ್ಯದ| ವಿವರಪೇಳುವ ಮಂತ್ರ||

ಜವದಿ ನರಹರಿ ಬೋಧ| ಶ್ರವಣವೀಯುವ ಮಂತ್ರ | |10||

ತನುವನ್ನು ತೊಳೆಯಲಾರೋಗ್ಯಾ| ತನ್ನ|

ಮನವನ್ನು ತೊಳೆವುದೆ ಪರಮ ವೈರಾಗ್ಯ ||ಪ||

ಅನುಪಮಾತ್ಮಜ್ಞಾನ ಯೋಗ್ಯ| ಕೆಟ್ಟ|

ಅನುಮಾನ ಬಿಡಲುಂಟು ಮುಕ್ತಿಸೌಭಾಗ್ಯ ||ಅಪ||

ಶುದ್ಧಿಯಿಂದಲೆ ಸರ್ವಸಿದ್ಧಿ| ಮಂತ್ರ|

ವೃದ್ಧಿಯಾದರೆ ಯಿಲ್ಲ ಪಾಪದ ಸುದ್ಧಿ||

ಶುದ್ಧಿಯಾಚಾರಾಭಿವೃದ್ಧಿ| ಶುದ್ಧ|

ಬುದ್ಧಿಯೀಶ್ವರನೊಲುಮೆಗಾಯ್ತು ಸಮೃದ್ಧಿ ||1||

ಪಾಪರೂಪದ ಮಲವ ತೊಳೆಯೆ| ಪುಣ್ಯ||

ರೂಪವಾಗಿಹ ಸ್ವಸ್ವರೂಪವು ಹೊಳೆಯೆ||

ತಾಪತ್ರಯಗಳೆಲ್ಲ ಕಳೆಯೆ| ಲೋಕ|

ವ್ಯಾಪಾರ ತನಗಿಲ್ಲ ವೆನ್ನುತ ತಿಳಿಯೇ ||2||

ಶೀಲವಂತನು ಯೋಗಿವರ್ಯಾ| ಪೃಥ್ವಿ| ಮೇಳೈಸಿ

ಸಂಚಾರವೀತನ ಕಾರ್ಯ||

ಏಳು ಕೋಟಿಯ ಮಂತ್ರಾಚಾರ್ಯ| ಲೋಕ|

ಪಾಲ ನರಹರಿಬ್ರಹ್ಮ ನಿರುವದೆ ತೂರ್ಯ |3||

ಭೂತ ವಿಕಾರ ಸಂಭೂತವಾಗಿರುತ್ತಿತ್ತು ಮಾಂಸಪಿಂಡಾ ||ಪ||

ಭೂತ ವಿಕಾರಕ್ಕತೀತವೆಂದೆನಿಸಿತ್ತು ಮಂತ್ರಪಿಂಡಾ ||ಅಪ||

ಹುಟ್ಟು ಸಾವುಗಳಿಂದ ಕೆಟ್ಟುಹೋಗುತಲಿತ್ತು ಮಾಂಸಪಿಂಡಾ||

ಹುಟ್ಟು ಸಾವನು ಮೀರಿ ಗಟ್ಟಿಯಾಗಿರುತಿತ್ತು ಮಂತ್ರಪಿಂಡಾ ||1||

ನಶ್ವರವಾಗಿತ್ತು ದೃಶ್ಯವೆಂದೆನಿಸಿತ್ತು ಮಾಂಸಪಿಂಡಾ |

ಶಾಶ್ವತವಾಗಿತ್ತು ಈಶ್ವರನೊಳಗಿತ್ತು ಮಂತ್ರಪಿಂಡಾ ||2||

ಹಿಂಸೆಯ ಕೂಡಿತ್ತು ಧ್ವಂಸವಾಗುತಲಿತ್ತು ಮಾಂಸಪಿಂಡಾ||

ಹಂಸ ತಾನಾಗಿ ಸೋಹಂ ಸೂತ್ರವಾಗಿತ್ತು ಮಂತ್ರಪಿಂಡಾ ||3||

ನಾದ ಬಿಂದುವು ಕಳೆಯನೈದದೆ ಸತ್ತಿತು ಮಾಂಸಪಿಂಡಾ |

ನಾದಬಿಂದುವು ಕಳೆಗಳಾದಿ ಸತ್ತಾಗಿತ್ತು ಮಂತ್ರಪಿಂಡಾ ||4||

ಜಗರೂಪವಾದ ಮಾಯೆಗೆ ವಶವಾಗಿತ್ತು ಮಾಂಸಪಿಂಡಾ||

ಜಗವೆಲ್ಲ ತುಂಬಿ ನರಹರಿ ಪಾದ ಸೇರಿತ್ತು ಮಂತ್ರಪಿಂಡಾ ||5||

ವೇದವನೋದಿದರೇನು ಫಲಾ| ಸ |

ದ್ಬೋಧೆಯೊಳರಿಯದೆ ಗುರುಕೀಲ ||ಪ||

ಬೋಧೆಯ ಕೇಳಿದರೇನು ಫಲ| ವಿ|

ಚ್ಛೇದನವಾಗದೆ ಭವಮೂಲ ||ಅ|ಪ||

ಜಪಗಳ ಮಾಡಲು ಫಲವೇನು| ಪರಿ|

ತಪಿಸುವುದನು ಬಿಡದಂಥವನು||

ತಪವನು ಮಾಡಲು ಫಲವೇನು| ಗುಣ|

ಚಪಲವ ನೀಗದ ಮಾನವನು ||1||

ದಾನವ ಮಾಡಿದರೇನು ಫಲ| ಸಂ|

ಧಾನವ ತಿಳಿಯದೆ ಶಿವಲೀಲ||

ಮೌನದೊಳಿದ್ದರೆ ಏನು ಫಲ| ಸು|

ಜ್ಞಾನವ ಪಡೆದಿರಲನುಕೂಲ ||2||

ಯೋಗವ ಮಾಡಿದರೇನು ಫಲ| ಸುವಿ|

ರಾಗವ ಕೂಡದೆ ಅನುಗಾಲ|

ತ್ಯಾಗವ ಮಾಡಲು ವಿಷಯಗಳ| ಶಿವ|

ಯೋಗಿ ನರಹರಿಯ ಬೋಧಬಲ ||3||

ಯಾರಯ್ಯ ದಾನವನು| ಯಾರಯ್ಯ ಮಾನವನು ||ಪ||

ಯಾರಯ್ಯ ದೇವನು | ವಿ| ಚಾರಿಸಿ ನೋಡಯ್ಯ ||ಅಪ||

ದುಷ್ಟತ್ವ ದಾನವನು| ಶಿಷ್ಟತ್ವ ದೇವತೆಯು||

ದುಷ್ಟ ಶಿಷ್ಟತೆ ಗೆಡೆ| ಕೊಟ್ಟವನೆ ಮಾನವನು ||1||

ಆಸೆಯಿಂ ಮನುಜ| ದು| ರಾಸೆಯೊಳಿರೆ ಧನುಜ||

ಆಸೆಯಂ ನೀಗಲ ವ| ನೈಸೆ ತಾದಿವಿಜ ||2||

ಧರ್ಮದೊಳಿರೆ ದಿವಿಜ| ಧರ್ಮ ಬಿಟ್ಟರೆ ಧನುಜ||

ಧರ್ಮಾಧರ್ಮದ ಮಿಶ್ರ| ನಿರ್ಮಾಣವೇ ಮನುಜ 3||

ಸತ್ಯಾತ್ಮ ದಿವಿಜನು| ಸತ್ಯದೂರನು ಧನುಜ||

ಸತ್ಯವರಿಯದೆ ತೊಳ| ಲುತ್ತಿಹ ಮನುಜ ||4||

ಸಮತೆ ತಾಳಲು ದಿವಿಜ| ಸಮತೆ ಬಿಟ್ಟರೆ ಧನುಜ||

ಸಮತೆಯ ಮರ್ಮವ| ಸಮನಿಸದವನೆ ಮನುಜ ||5||

ಕರುಣೆ ತಾಳ್ದವ ದಿವಿಜ| ಕರುಣೆ ಬಿಟ್ಟವ ಧನುಜ||

ಕರುಣೆ ನಿಷ್ಕರುಣೆಗೆ| ಹರಿವವ ಮನುಜ ||6||

ಗುರುವರನ ದಯೆಯಿಂದ| ಪರಮ ಜ್ಞಾನವ ಪೊಂದಿ||

ಪರಮನಂ ತಿಳಿದವನೆ| ಧರೆಯೊಳು ದಿವಿಜನು ||7||

ಸುಜ್ಞಾನಿಯೇ ಸುರನು| ಅಜ್ಞಾನಿಯ ಸುರನು||

ಅಜ್ಞಾನ ಜ್ಞಾನದಿ| ಮಗ್ನನೇ ಮನುಜ ||8||

ಅರಿತವನೆ ದೇವತೆ| ಮರೆತವನೇ ರಾಕ್ಷಸ||

ಮರೆವರಿವೆಯ ಕೂಡಿ| ಇರುವವನು ಮನುಜಾ ||9||

ಗುರುಪುತ್ರ ದಿವಿಜನು| ಗುರುವಿಲ್ಲದವ ಧನುಜ||

ನರಹರಿ ಗುರುವರನು| ದುರಿತಗಳ ಹರಿಸುವವನು ||10||

ಕಾಲಕ್ಕೆ ತುದಿಯಿಲ್ಲ ಕಾಲಕ್ಕೆ ಮೊದಲಿಲ್ಲ||

ಕಾಲತುದಿ ಮೊದಲಾಯ್ತು ಜಗಕೆಲ್ಲಾ ||ಪ||

ಕಾಲವು ಹೊಸದಲ್ಲ ಕಾಲ ಹಳೆಯದು ಅಲ್ಲ||

ಕಾಲ ಗರ್ಭದಿ ಹಳತು ಹೊಸದೆಲ್ಲ ||ಅಪ||

ಸಾವಿಲ್ಲ ಕಾಲಕ್ಕೆ ನೋವಿಲ್ಲ ಕಾಲಕ್ಕೆ||

ಸಾವು ನೋವುಗಳುಂಟು ಲೋಕಕ್ಕೆ||

ಜೀವ ಕಾಲಕೆ ಸಿಕ್ಕಿ| ಸಾವು ನೋವುಗಳಾಯ್ತು |

ಕೈವಲ್ಯ ಪಡೆದಾಗ ಸುಖವಾಯ್ತು ||1||

ಲೆಕ್ಕಕ್ಕೆ ಕಾಲವು ಸಿಕ್ಕಿಲ್ಲ ಲೋಕವು|

ಸಿಕ್ಕಿತ್ತು ಕಾಲಕ್ಕೆ ಇದು ನಿಜವು||

ದುಃಖ ಕಾಲದೊಳಿಲ್ಲ| ಸೌಖ್ಯ ಕಾಲದೊಳಿಲ್ಲ|

ದುಃಖ ಸುಖವೆರಡುಂಟು ಜಗಕೆಲ್ಲಾ ||2||

ಕಾಲ ಮೂಲಾಧಾರ ಕಾಲ ಹಂಸಾಚಾರ|

ಕಾಲ ಯೋಗದ ದ್ವಾರ ಸುವಿಚಾರ||

ಕಾಲ ಹರನಧಿಕಾರಿ ಕಾಲ ಚಕ್ರಾಕಾರ|

ಕಾಲ ನರಹರಿ ಪಾದಕನು ಸಾರ ||3||

ಇವರೆ ನೋಡಮ್ಮ ಸಾಧುಗಳು| ನಮ್ಮ|

ಶಿವನನ್ನು ಮನದಲ್ಲಿ ಸೆರೆ ಹಾಕಿದವರು ಪ||

ದಿವಿಜರೆಲ್ಲರ ಕೂಡಿದವರು| ನೆಚ್ಚಿ|

ದವರನ್ನು ಭವದಿಂದ ಪಾರು ಮಾಡುವರು ||ಅಪ||

ನುಡಿಯೆಲ್ಲ ಮಂತ್ರವಾದವರು| ತಮ್ಮ|

ನಡೆಯೆಲ್ಲ ಶಿವತಂತ್ರವೆಂದರಿತವರು||

ಒಡಲಲ್ಲೆ ಮೃಢನ ಕಂಡವರು| ನಿತ್ಯ|

ಬಿಡದಂತೆ ಪೂಜಿಸಿ ಮೌನಗೊಂಡವರು ||1||

ಜಗದಾಟನಂಬದಿರುವವರು| ಎಲ್ಲ|

ನಿಗಮಾಗಮಗಳರ್ಥ ಪೇಳಬಲ್ಲವರು||

ಜಗಕೆಲ್ಲ ಪೂಜ್ಯರಾದವರು| ಸರ್ವ|

ಬಗೆಯಿಂದ ಲೋಕೋಪಕಾರ ಮಾಳ್ಪವರು ||2||

ಕರುಣಾದ್ರ್ರ ಹೃದಯರಾದವರು| ಶಾಂತಿ

ಪರರಾಗಿ ಸದ್ಬೋಧೆ ಮಾಡುವಂಥವರು||

ನರಹರಿಯ ನಂಬಿಕೊಂಡವರು| ಸತ್ಯ|

ಚರಿತರೆನ್ನಿಸಿ ಜಗಕೆ ಗುರುವೆನಿಸಿದವರು ||3||

ನೋಡಲಿಲ್ಲವೆ ನಮ್ಮ ಶಿವನಾ| ನಿಮ್ಮ|

ಕೂಡಿಯಾಡುತಲಿರ್ಪ ಲೋಕಪಾವನನಾ ||ಪ||

ಬೇಡಿದಿಷ್ಟಾರ್ಥವೀವವನಾ| ತಾನೆ|

ರೂಢಿ ಎಲ್ಲವನು ಕಾಪಾಡ ಬಲ್ಲವನಾ ||ಅಪ||

ಪೃಥ್ವಿ ತತ್ವದಿ ನಡೆಯುವವನಾ| ಅಪ್ಪು|

ತತ್ವದೊಳಗೆ ಮಂತ್ರ ಜಪ ಮಾಡುವವನಾ||

ತತ್ವಾಗ್ನಿಯೊಳು ಸೇರಿದವನಾ | ಮೂರ |

ವಸ್ಥೆಯೊಳು ಮೂರವತಾರ ತೋರ್ಪವನಾ ||1||

ಮರುತ ತತ್ವದೊಳು ನಿಂತವನಾ| ತಾನೆ|

ನಿರುತ ಯೋಗದಿ ಪರಮಹಂಸನಾದವನಾ||

ಪರ ನಾದದೊಳಗೆ ತೋರ್ಪವನಾ| ಸರ್ವ|

ಭರಿತನಾಗಿಯೆ ಪ್ರಣವಾಂತ್ಯದೊಳಿಹನಾ ||2||

ಗಗನ ತತ್ವವ ಕೂಡಿದವನಾ| ಸರ್ವ|

ಸಗುಣವೆಲ್ಲವನು ನಿರ್ಗುಣ ಮಾಡುವವನಾ ||

ಜಗವೆಲ್ಲಾ ತುಂಬಿಕೊಂಡವನಾ| ಎಲ್ಲ|

ರಿಗೆ ಕಾಣದಂತಿರ್ಪ ನರಹರಿ ಶಿವನಾ ||3||

ಎಂಥ ಮೂಗುತಿ ಕೊಟ್ಟನವ್ವ| ಗುರುವು|

ಭ್ರಾಂತಿ ತೀರಿಸಿಬಿಟ್ಟನವ್ವ ||ಪ||

ಚಿಂತೆಯಿಲ್ಲದ ದಿಟ್ಟ| ಶಾಂತಿ ಸಾಧಿಸಿಬಿಟ್ಟ||

ಪಂಥ ಪೌರುಷ ಮುಟ್ಟ| ಅಂತರಂಗದೊಳಿಟ್ಟ ||ಅಪ||

ಮೂಗಿನಲ್ಲಿರುವ ಮೂಗುತಿಯ| ಕಂಡು|

ಬೇಗ ಓಡುವ ಯಮರಾಯ||

ಮೂಗುತಿಯ ಮಹಿಮೆಯು| ಯೋಗಕ್ಕೆ ಹಿರಿಮೆಯು||

ಭೋಗಕ್ಕೆ ಬಲುಮೆಯು| ನಾಗೇಂದ್ರನೊಲುಮೆಯು ||1||

ಎಲ್ಲ ಒಡವೆಯ ಹಂಗು ಏಕೆ| ಇದ|

ರಲ್ಲೆ ಎಲ್ಲವು ಇರಲಿಕ್ಕೆ||

ಚಲ್ವೆ ನಿನಗಿರಲೆಂದ| ಒಳ್ಳೆ ಮುತ್ತನು ತಂದ||

ಎಲ್ಲಿ ಕಾಣದ ಚೆಂದ| ಇಲ್ಲೆ ತೋರಿಸಿ ನಿಂದ ||2||

ಮೃತ್ಯುಂಜಯನು ಕೊಟ್ಟ ನತ್ತು| ನಿತ್ಯ|

ಮುತ್ತೈದೆಯರಿಗೆಲ್ಲ ಗೊತ್ತು||

ಸತ್ತುವೆಂದೆನಿಸಿತ್ತು| ಚಿತ್ತು ತಾನಾಗಿತ್ತು||

ನಿತ್ಯಾನಂದದೊಳಿತ್ತು| ಸತ್ಯ ನರಹರಿವಸ್ತು ||3||

ಗುರುವೇ ಭಕ್ತರ ಸಂಸಾರಿ| ಸ|

ದ್ಗುರುವರ ಲೋಕಕೆ ಉಪಕಾರಿ ||ಪ||

ಗುರುವೇ ಶಿವನಿಗೆ ಸಹಕಾರಿ| ಶ್ರೀ|

ಗುರುವರ ಸದ್ಧರ್ಮೋದ್ಧಾರಿ ||ಅಪ||

ಗುರು ಪರಿಹರಿಸುವ ಭವ ತಾಪ| ನಿ|

ರ್ಧರಿಸುತ ತೋರುವ ಶಿವರೂಪ||

ಗುರುರಾಯನು ತಾನಿರ್ಲೇಪ| ಈ|

ಧರೆಯೊಳು ತಾಳ್ದನು ನರರೂಪ ||1||

ಗುರುವರ ದುರ್ಗುಣ ಸಂಹಾರಿ| ಶಿವ|

ನರಿವನ್ನೀಯುವ ಸುವಿಚಾರಿ||

ಮರವನ್ನರಿಯದ ಸುಖಕಾರಿ| ಮ|

ತ್ಸರವಿಲ್ಲದ ಶಿವನವ ತಾರೀ ||2||

ನರನೇ ಹರಿಯಾಗಿಹನೆಂದು| ಶ್ರೀ|

ಹರಿಯೇ ನರನಾಗಿಹನೆಂದು||

ಪರ ತತ್ವವ ಪೇಳಿದ ನಿಂದು| ಗುರು|

ನರಹರಿ ಭಕ್ತರ ನಿಜಬಂಧು ||3||

ಮಾಯಾ ನಾಟಕ ಹೂಡಿದ ಶಿವನು |

ಛಾಯಾ ನೋಟಕೆ ತೋರಿದ ಶಿವನು ||ಪ||

ಕಾಯವ ಕರ್ಮವ ಜೋಡಿಸಿ | ನಡೆಸಿ |

ಸಾಯುವ ಕಾಲಕೆ ನಾಟಕ ಮುಗಿಸಿ ||ಅ|ಪ||

ಕರಣೇಂದ್ರಿಯಗಳ ನರ್ತನ ತೋರಿ |

ಶರೀರದ ನಾಟಕ ಶಾಲೆಯ ಸೇರಿ ||

ಪರಿಪರಿ ಭಾವದ ಭಂಗಿ ವಿಹಾರಿ |

ಸರಸದೊಳಾಡಿಸಿ ತೋರಿದ ದಾರಿ ||1||

ನಾನಾ ವೇಷದ ಭಾಷೆಯ ಪಾತ್ರ |

ತಾನೇ ಆಡಿಸಿ ಹಿಡಿದನು ಸೂತ್ರ ||

ನಾನಾಕರ್ಮದ ನಟನೆ ವಿಚಿತ್ರ |

ಗಾನಾನಂದಾಸ್ವಾದ ಪವಿತ್ರ ||2||

ಕಲಿತುದನೆಲ್ಲವ ಆಡಿಸಿಬಿಟ್ಟ |

ಸುಲಭದ ಮಂತ್ರವ ಕೂಡಿಸಿ ಕೊಟ್ಟ ||

ಹಳೆಯದು ನೂತನ ಮಾಡಿಸಿಯಿಟ್ಟ |

ಬೆಳೆಯುವ ಕರ್ಮವ ನರಹರಿ ಸುಟ್ಟ ||3||

ಅಂಬುಜಾನನೆ | ನಂಬು ನೀನೆ | ಶಂಭುಪಾದವನೇ ||ಪ||

ಮನದೊಳು ತುಂಬಿ ಭಕ್ತಿಯನೇ ||ಅ|ಪ||

ದೇವಕೋಟಿ ಸೇವೆಗೈವ | ಪಾವನಾತ್ಮ ಪರಮಶಿವನ ||

ಭಾವ ಶುದ್ಧಿಯಿಂದ ಭಜಿಸು | ಕೇವಲಾನಂದವನು ಪಡೆವೇ ||1||

ನಾದಬಿಂದು ಕಳೆಗತೀತ | ನಾದಶಿವನ ತಿಳಿದು ನೀನು ||

ಸಾಧುಜನರ ಪಾದ ನಂಬಿ | ಬಾಧೆಯಳಿದು ನಿರ್ಮಲಳಾಗು ||2||

ಮನವ ತೊಳೆದು ತನುವ ಕಳೆದು | ನೆನಹಿನಲ್ಲಿ ಶಿವನ ಹಿಡಿದು ||

ಧನದ ಮದವ ದೂರ ಮಾಡಿ | ಮನನ ಮಾಡಿ ಮಂತ್ರವನ್ನು ||3||

ಆರು ಗುಣವ ದೂರ ಮಾಡು | ಮೂರು ಗುಣವ ತಿಳಿದುನೋಡು ||

ಸೇರಿ ಶಿವನ ಪಾದಪದ್ಮ | ಸಾರಸುಖವ ಸೂರೆಗೊಂಡು ||4||

ಮಂತ್ರ ಪಿಂಡದಲ್ಲಿ ನಿಂದು | ಯಂತ್ರ ಮಾಂಸಪಿಂಡವೆಂದು ||

ಸಂತ ನರಹರೀಂದ್ರ ಬಂದು | ಶಾಂತಿಯೀವ ನಿನಗೆಯಿಂದು ||5||

ಮೂರೇಳ್‍ಸಾವಿರದಾರ್ನೂರು| ಸಂ|

ಚಾರವು ಪ್ರತಿದಿನ ಬಲು ಜೋರು ||ಪ||

ಮೂರವಸ್ಥೆಗಳ ತಾಯ್‍ಬೇರು| ಗಡಿ|

ಯಾರ ಸಜೀವವು ಗುಣ ಮೂರು ||ಅಪ||

ನಯನದ ಜ್ಯೋತಿಗಿದಾಶ್ರಯವು| ತನು|

ಕ್ರಿಯೆಗಳಿಗೆಲ್ಲಕೆ ಚೇತನವು||

ಬಯಲ ಬ್ರಹ್ಮವೆ ತನ್ಮಯವು| ನಿ|

ಶ್ಚಯದೊಳು ತಾನೇ ಚಿನ್ಮಯವು ||1||

ಭೋಗಿಗೆ ಬೇಕೀ ಗಡಿಯಾರ| ಶಿವ|

ಯೋಗಿಗೆ ಬೇಡಿದು ನಿರ್ಧಾರ||

ತ್ಯಾಗವ ಮಾಡದೆ ಬಡಿವಾರ| ಭವ|

ರೋಗಿಗೆ ಸಿಕ್ಕದು ಗಡಿಯಾರ ||2||

ಹಗಲಿರುಳೊಂದೇ ಸಮನಾಗಿ| ಯುಗ|

ಯುಗದೊಳಗೊಂದೇ ಕ್ರಮವಾಗಿ||

ಝಗಝಗ ಹೊಳೆವುದು ಸೊಗಸಾಗಿ| ತ್ರೈ|

ಜಗದೊಳು ನರಹರಿ ಮಿಗಿಲಾಗಿ ||3|

ಗುರುವೇ| ಪಾಲಿಸೋ| ಗುರಿಯನ್ನು ಮುಟ್ಟಿಸೋ ||ಪ||

ಕರುಣಾಳು ನಿನ್ನನು| ಮೊರೆ ಬೀಳುವೆನ್ನನು ||ಅಪ||

ನಡೆಯುತಾ ನಿಲ್ಲಲು| ನುಡಿಯು ತಾನಾಗಲು||

ನುಡಿನಿಲ್ಲುವಾಗಲು| ಕುಡಿಮಿಂಚು ಪೊಳೆಯಲು ||1||

ಕಡಲಿನ ಮಧ್ಯದಿ| ಸೊಡರುರಿದಂದದಿ|

ಕುಡಿಯೊಳು ಮಿಂಚುತ| ಗುಡುಗಿದೆ ಮುಂಚಿತ ||

ನಾದವ ಶೋಧಿಸಿ| ಭೇದವ ಸಾಧಿಸಿ|

ಬೋಧೆಯನಾಲಿಸಿ| ಆದಿಯ ನಿಲ್ಲಿಸಿ ||3||

ಮಂತ್ರದಿ ಸೇರಿದ| ತಂತ್ರವ ಮೀರಿದ||

ಚಿಂತನ ಮಾಡಲು| ಸಂತಸ ಮೂಡಲು ||4||

ಭೂತಗಳೆಲ್ಲವ| ಚೇತನಗೊಳಿಸುವ||

ಆತ್ಮನೊಳಾಡುವ| ಸೂತ್ರವತಿಳಿಸುವ ||5||

ಜಡತನು ತಾಗಿದೆ| ಜಡತೆಯ ನೀಗಿದೆ|

ಪೊಡವಿಯೆಗುಡುಗುವ| ಬೆಡಗನು ತೋರಿದೆ ||6||

ಆನಂದ ಮೂರ್ತಿಯೆ| ಜ್ಞಾನದ ಜ್ಯೋತಿಯೆ||

ಧ್ಯಾನದಿ ಸೇರಿಯೆ| ಶ್ರೀ ನರಹರಿಯೇ |7||

ಮಾಡೋ ವಿಚಾರ| ವೇದದ ಸಾರ||

ಕೂಡೋ ಶರಣರ ||ಪ||

ಎರಡಕ್ಷರಂಗಳ ಮಧ್ಯೆ| ದೊರಕಿತ್ತು ಬ್ರಹ್ಮವಿದ್ಯೆ||

ಪರಬಿಂದುವಿರುವನು| ವರಿತಿರಲವನು| ಪರಮಾಹಂಸನು ||1||

ಎರಡಕ್ಕೆ ನಡುವೇ ಬಿಂದು| ಬರಲಾಯ್ತು ಹಂಸನೆಂದು||

ಪರಮಾತ್ಮ ಶಕ್ತಿಯ| ಬೆರೆತಿಹ ಯುಕ್ತಿಯ|

ನರಿತವನೇ ಮುಕ್ತನು ||2||

ಎರಡನ್ನು ತಿರುಗಿಸಿ ಕೂಡಿ| ಪರಬಿಂದುವನೆ ಕೊನೇ

ಮಾಡಿ| ಬರಲಾಯ್ತು ಸೋಹಂ| ಎರಡಳಿದೊಂದೇ|

ಮೆರೆದುದೋಂಕಾರವು ||3||

ಈ ಹಂಸಬಂಧವೆನಿಸಿ| ಸೋಹವ್ಮ್ಮೆ ಮೋಕ್ಷವೆನಿಸಿ||

ಸೋಹಮ್ಮಿನೊಳಗೋಂ| ಕಾರವು ಜನಿಸಿ|

ಮೋಹವಳಿಪುದು ||4||

ತ್ರೈಮೂರ್ತಿಗಳು ಓಂಕಾರ| ಸಾಮಥ್ರ್ಯದಿಂದಿಹ ಸಾರ||

ಸಾಮಾನ್ಯವಲ್ಲಾ ಶ್ರೀಗುರು ಬಲ್ಲಾ| ಸ್ವಾಮಿ ಶ್ರೀ ನರಹರಿ ||5||

ನಂಬಿದೆ ನಾನೀ ಮಹಾತ್ಮನಾ|

ಡಿಂಭವ ಸೇರಿದ ಮಹಂತನಾ ||ಪ||

ತುಂಬಿದ ಜ್ಞಾನವ| ವಿನೂತನಾ|

ಕುಂಭಕ ಸೇರಿದ ವಿಧಾನಾ ||ಅ|ಪ||

ಧರೆಯಾ ಶಿರಿಗಾಶ್ರಯಾತ್ಮನಾ|

ಮರೆಯಾಗಿರುವಾ ದಯಾಘನಾ||

ಶರಣಾದರಣಾ ಪರಾಯಣ|

ಕರುಣಾ ಭರಣಾ ನಿರಂಜನಾ ||1||

ಬೋಧಾಸ್ವಾದಾ ಸುಖಾಸ್ಪದಾ|

ನಾದಾನಂದಾ| ಸುಸಂಪದಾ||

ವಾದಾತೀತಾ| ನಿನಾದದಾ |

ಸಾಧನೆಗೈದಾ| ಜಯಪ್ರದಾ ||2||

ನಯನಾಶ್ರಯ ನೀತ್ರಿಯಾತ್ಮನು|

ಶಯನಾಪ್ರಿಯ ನೀ ಲಯಾತ್ಮನು||

ಭಯ ಸಂಹರನೀ ಮಹಾತ್ಮನು|

ನಯವಿದನೀ ಚಿನ್ಮಯಾತ್ಮನು ||3||

ಶ್ರವಣಾ ಮನನಾ ಸುಸಾಧನಾ|

ಭವಸಂಹರಣಾ ಪ್ರಯೋಜನಾ||

ನವಲೀಲಾ ನರಹರೀಂದ್ರನಾ|

ಶಿವಯೋಗಾಮೃತವಿದೇ ಘನಾ ||4||

ಕೇಳಿರಿ ಮಹ ವಾಕ್ಯದರ್ಥ | ಇದನು|

ಪೇಳುವ ಗುರುವೆ ಸಮರ್ಥ ||ಪ||

ಮೂಲ ಬ್ರಹ್ಮವದೆಂತು | ಲೀಲೆಯಿಂದಿರುವು

ದು | ಪೇಳಿರೆಂದೆನೆ ಶಿಷ್ಯ | ಪೇಳಿದ ಗುರುನಾಥ ||ಅ|ಪ||

ಪ್ರಜ್ಞಾನಮಾನಂದ ಬ್ರಹ್ಮ | ಎಂಬ |

ಸಂಜ್ಞೆಋಗ್ವೇದದ ಮರ್ಮ ||

ಪ್ರಜ್ಞೆಯಾನಂದದಿ | ಮಗ್ನವಾಗಿಹುದೆಂದು |

ಸುಜ್ಞಾನಿ ಗುರುಪೇಳ್ದ | ಆಜ್ಞೆ| ಯಿದೆನ್ನುತ ||1||

ಅಯಮಾತ್ಮ ಬ್ರಹ್ಮವು ಎಂದು | ಶಿಷ್ಯ |

ನಯದಿ ನಿಶ್ಚಯಗೈದನೆಂದು ||

ಪ್ರಿಯದಿ ಯಜುರ್ವೇದ | ನಿಯಮಿತ ವಾಕ್ಯವು |

ದಯದಿ ಗುರುದೇವನು |

ಸ್ವಯಮರ್ಥವರಿಯೆಂದ ||2||

ತತ್ವಮಸೀ ಮಹಾವಾಕ್ಯ | ಗುರುವಿ |

ನುತ್ತರವೆನಿಸಿದ ವಾಕ್ಯ||

ತತ್ಪದವೇ ಬ್ರಹ್ಮ | ತ್ವಂಪದವೇ ಜೀವ |

ಮತ್ತಸಿ ಪದವೈಕ್ಯ | ದರ್ಥವೆ ಸಾಮವು ||3||

ಕಡೆಗಹಂ ಬ್ರಹ್ಮಾಸ್ಮಿ ಎಂದು | ಶಿಷ್ಯ |

ನುಡಿಯಲು ನಿಶ್ಚಯಗೈದು ||

ದೃಢಮಾಡಿ ಗುರುವಾಕ್ಯ | ಪಡೆದ ಪ

ರೋಕ್ಷದ | ನುಡಿಯಥರ್ವಣರ್ವೇದ

ದೊಡಲಹುದೆನ್ನುತ ||4||

ಒಂದೊಂದು ವೇದದೊಳೊಂದು | ವಾಕ್ಯ |

ದಿಂದ ನಿಶ್ಚಯ ಮಾಡಿರೆಂದು ||

ಸಂದೇಹವಿಲ್ಲದೆ | ತಂದೆ ಶ್ರೀ ನರಹರಿ |

ಬಂಧುರದಲಿ ಪೇಳ್ದ | ಸುಂದರ ಬೋಧೆಯ |5||

ಎಂಥ ಪುಂಡ ಯನ್ನ ಗಂಡ|

ನೋಡಿರವ್ವ| ಹೇಗೆ| ಮಾಡಲವ್ವ ||ಪ||

ಚಿಂತೆಯೆಂದರೆಂಥಾದೆಂದು|

ಕೇಳ್ವನವ್ವ| ಹೇಗೆ| ಬಾಳ್ವೆನವ್ವ ||ಅಪ||

ಮೂಗನು ಕಡಿದು| ಕೂಗಲು ಬಡಿದು|

ಹೋದನವ್ವ| ಮಾಯ| ವಾದನವ್ವ||

ನಾಗರಹೆಡೆಯ| ಬಾಗಿಸಿ ಮುಡಿಯ|

ತುಳಿದನವ್ವ| ಸಾಯ| ದುಳಿದನವ್ವ ||1||

ನಾಲಗೆ ಹಿರಿದು| ತಾಳಿಯ ಹರಿದು|

ಕುಂತನವ್ವ| ಶೌರ್ಯ| ವಂತನವ್ವ||

ಕಾಲನು ಮುರಿದು| ಮೂಲೆಗೆ ಸರಿದು

ಒದ್ದಾನವ್ವ| ಮೇಲೆ| ಗುದ್ಯಾನವ್ವ ||2||

ಕಣ್ಣನು ಕಿತ್ತು| ಬಣ್ಣ ಕೆಮೃತ್ಯು|

ವಾದನವ್ವ| ಎತ್ತ| ಹೋದನವ್ವ||

ಉಣ್ಣುವುದೆಲ್ಲಾ | ನಿನ್ನದು ಅಲ್ಲ|

ಎಂದಾನವ್ವ| ಒಲ್ಲೆ| ಎಂದನವ್ವ || 3||

ಚರ್ಮವ ಸುಲಿದು| ಮರ್ಮವ ತಿಳಿದು||

ಬಿಟ್ಟನವ್ವ| ಯನ್ನ| ಮುಟ್ಟನವ್ವ||

ಕರ್ಮವ ಸುಟ್ಟು| ಧರ್ಮದ ಗುಟ್ಟು|

ತಿಳಿದನವ್ವ| ತಾನೆ| ಹೊಳೆದನವ್ವ ||4||

ಕಿವಿಯನು ಹಿಂಡಿ| ಶ್ರವಣದ ತಿಂಡಿ|

ಕೊಟ್ಟನವ್ವ| ಬಾಯಿ| ಬಿಟ್ಟನವ್ವ|

ಸವಿಸವಿಯೂಟ| ಸವಿಯುತ ಕೂಟ|

ಬೇಡ್ಯಾನವ್ವ| ಯನ್ನ| ಕೂಡ್ಯನವ್ವ ||5||

ನರಹರಿ ಸಿದ್ಧ| ನರಕವ ಗೆದ್ದ|

ಕಾಣಿರವ್ವ| ಬಂದು| ಕಾಣಿರವ್ವ||

ಪರಿಹರಿಸಿದ್ದ| ಪರಮನು ಶುದ್ಧ|

ಈತನವ್ವ| ಮುಕ್ತಿ| ದಾತನವ್ವ ||6||

ಕೈಯಾರ ಗುರುಸೇವೆ ಮಾಡಬೇಕಮ್ಮ||

ಮೈಯೆಲ್ಲ ಕಣ್ಣಾಗಿ ನಡೆಯಬೇಕಮ್ಮ ||ಪ||

ಬಾಯಲ್ಲಿ ಶಿವಮಂತ್ರ ನುಡಿಯಬೇಕಮ್ಮ||

ಮಾಯಾ ಪ್ರಪಂಚವ ನಂಬಬೇಡಮ್ಮ ||ಅಪ||

ಜಡದೇಹ ನೀನೆಂದು ತಿಳಿಯಬೇಡಮ್ಮ|

ಕಡು ಮೋಹಗೊಂಡು ಮೈ ಮರೆಯದಿರಮ್ಮ ||

ಒಡಲ ಸಾಕ್ಷಿಕ ವಸ್ತು ನೀನು ಕಾಣಮ್ಮ|

ದೃಢವಾಗಿ ಗುರುಪಾದ ನಂಬಬೇಕಮ್ಮ ||1||

ಸತ್ಯವಂತರ ಸಂಗ ಮಾಡಬೇಕಮ್ಮ|

ನಿತ್ಯ ಸದ್ಗುರು ಪಾದ ನೆನೆಯಬೇಕಮ್ಮ ||

ಮಿಥ್ಯನುಡಿಗಳ ನೀನಾಡಬೇಡಮ್ಮ|

ಅರ್ಥಿಯಿಂ ಶರಣರ ಪೂಜೆ ಮಾಡಮ್ಮ ||2||

ಕರಣೇಂದ್ರಿಯದ ಧರ್ಮ ನಿನಿಗಿಲ್ಲವಮ್ಮ|

ಮರಣವಿಲ್ಲದ ಬ್ರಹ್ಮ ನೀನೇ ಕಾಣಮ್ಮ||

ಮರವೆಯಿಲ್ಲದ ಅರಿವೆ ನೀನಮ್ಮ|

ನರಹರಿಯ ಪಾದಕ್ಕೆ ಶರಣು ಮಾಡಮ್ಮ ||3||

ಮನವೆಂಬ ಮೋಸಗಾತಿ|

ಯನ್ನನ್ನು ಕೋತಿ| ಯೆನಿಸಿ ಕುಣಿಸುತ್ತ ನಗುತೀ ||ಪ||

ನಿನಗೆ ಬೇಕಾಗಿ ಕುಣಿಸಿ| ಅನವರತ ಯನ್ನ ದಣಿಸಿ||

ಯನಗೆ ಕಾಣಿಸದೆ ಹೋದೆ| ಜನಿಸಿ ಸಾಯ್ವಂತೆ ಗೈದೆ ||ಅಪ||

ನಿನ್ನ ನಂಬಿದ್ದೆ ನಾನು| ನೀನಿಲ್ಲದೇನು |

ಚೆನ್ನಾಗದೆಂದೆ ನಾನು |

ಅನ್ಯಾಯವೆಲ್ಲ ತಂದೆ| ಎನ್ನ ಮುಂದಿಟ್ಟು ನಿಂದೆ|

ನನ್ನನ್ನೆ ಭಾಗಿ ಎಂದೆ | ನಿನ್ನಾಟ ಕಂಡು ನೊಂದೆ ||1||

ಏನೇನೊ ರಗಳೆ ಮಾಡಿ| ಜಗವೆಲ್ಲಾ ನೋಡಿ

ನೀನೇ ಹೆಚ್ಚೆಂಬೆ ಖೋಡಿ||

ಆನಂದವೆಂದಿಗಿಲ್ಲ| ನೀನಿಟ್ಟ ಜಗಳವೆಲ್ಲ|

ನಾನೀಗ ಕಂಡುಕೊಂಡೆ| ಮಾನಗೇಡಾಯ್ತು ರಂಡೆ ||2||

ಕೇಡುಮಾರಿಯೆ ನಾ ನಿನ್ನ| ಕೂಡಿದ ವೇಳೆ|

ಜಾಡು ತಪ್ಪಿಸಿದೆ ಮುನ್ನ||

ನೋಡು ನೋಡುತ್ತಯನ್ನ|

ಕಾಡು ಸೇರಿಸಿದೆ ನಿನ್ನ|| ಬೇಡಿಕೊಂಡಾಗ್ಯೂ ಕಾಣ|

ದೋಡಿ ಹೋದಲ್ಲೆ ಹೆಣ್ಣೆ ||3||

ಗೈಯಾಳಿ ಹೆಣ್ಣು ನೀನು| ನಿನ್ನನ್ನು ಕೂಡಿ|

ದಾಯ ತಪ್ಪಿದೆ ನಾನು||

ಮಾಯ ರೂಪಗಳ ತಾಳಿ| ವೈಯಾರ

ಮಾಡಿ ಹೇಳಿ|| ಹೇಯಮಾರ್ಗಕ್ಕೆ ತಳ್ಳಿ|

ಗಾಯ ಮಾಡಿಟ್ಟೆ ಸುಳ್ಳಿ ||4||

ಇನ್ನೆಂದು ನಂಬಲಾರೆ| ನಿನ್ನಲ್ಲಿ ಮೋಹ|

ವನ್ನು ನಾ ತುಂಬಲಾರೆ|| ಅನ್ಯಕ್ಕೆ ಆಸೆ ಮಾಡಿ|

ಯನ್ನನ್ನು ಜೋಡಿ ಕೂಡಿ||

ಮುನ್ನ ನರಕಕ್ಕೆ ದಾರಿ| ಯನ್ನು ತೋರುವೆ ಮಾರಿ ||5||

ಬೆಡಗು ಬಿನ್ನಾಣ ತೋರಿ| ಕಡೆಗೆನ್ನ ಮೀರಿ|

ಬಡಿವಾರ ಮಾಡಿ ಜಾರಿ||

ಒಡೆಯ ನರಹರಿಯಪಾದ| ಕೊಡಲಾದ ನೈಜಬೋಧ|

ಪಡೆದು ನಿರ್ಮಲಿನವಾದ| ದೃಢಮುಕ್ತಿಗಡ್ಡವಾದ ||6||

ಶಿವ ಕೊಟ್ಟ ಸುಪ್ರಸಾ| ದವ ನಿತ್ಯ ನಿತ್ಯವೂ |

ಸವಿದುಂಡು ಕೊಬ್ಬಿದ ನಾಲಗೆಯು ||ಪ||

ಸವೆದು ಹೋಗುವ ತನಕ | ಶಿವನಾಮ

ನುಡಿಯದೆ| ಸವೆಯಲಾರದು ಪಾಪ ಪೀಳಿಗೆಯು ||ಅಪ||

ಶಿವ ಕೊಟ್ಟ ಕಣ್ಣಿಂದ| ಶಿವನ ಸ್ವರೂಪಾದ|

ಭುವನವ ಕಂಡತಿ ಭಕ್ತಿಯಿಂದ||

ಶಿವನ ವೈಭವದನು| ಭವದಿಂದಮೈ

ಮರೆತು|| ಭವವನ್ನು ದಾಟುವುದೆ ಚೆಂದ ||1||

ಶಿವನಿತ್ತ ಕಿವಿಯಲ್ಲಿ| ಶಿವಕಥೆಗಳ ಕೇಳಿ|

ಸವೆಯದಾನಂದದಿ ಮುಳುಗುತ್ತ||

ಕವಿದಿರ್ಪ ಮಾಯೆಯ| ಶ್ರವಣದಿಂಜ

ಯಿಸುತ್ತ|| ಶಿವನೊಳೈಕ್ಯವ ಪಡೆದವ ಮುಕ್ತ ||2||

ಶಿವ ಕೊಟ್ಟ ಕಣ್ಣಿಂದ| ಶಿವ ರೂಪಗಳ ಚಂದ|

ವಿವಿಧ ರೂಪವನಳಿದಾನಂದ||

ನವ ದೃಶ್ಯವೆಲ್ಲವ| ಶಿವ ರೂಪವೆನ್ನುವ|

ಸುವಿಲಾಸವುಳ್ಳಾತ ಮುಕ್ತನವ ||3||

ಆಧಾರ ಚಕ್ರದೊಳು| ಮೇದಿನೀ ಸ್ಥಲದಲ್ಲಿ|

ಆದಿತ್ಯ ಚಂದ್ರಾಗ್ನಿ ಪ್ರಭೆಯಲ್ಲಿ||

ವೇದಾಂತ ವೇದ್ಯನು| ದೇದೀಪ್ಯ ಮಾನನು|

ಆದಿ ನರಹರಿಯಿರ್ಪ ಶಿವನಲ್ಲಿ ||4||

ಪರುಷವು ಶಿಲೆಯಲ್ಲ| ಸುರತರು ಮರವಲ್ಲ|

ಸುರಧೇನುವೆಂಬುದು ಪಶುವಲ್ಲಾ ||ಪ||

ವರಮಂತ್ರ ನುಡಿಯಲ್ಲ| ಶರಣ ಲೌಕಿಕನಲ್ಲ |

ಗುರುದೇವನೆಂದಿ ಗುನರನಲ್ಲ ||ಅಪ||

ಆಡಿದ್ದೆ ಶಿವಮಂತ್ರ| ನೋಡಿದ್ದೆ ಶಿವರೂಪ||

ಕೂಡಿದ್ದೆ ಶಿವ ಸುಪ್ರಸಾದವದು||

ಮಾಡಿದ್ದೆ ಶಿವಕಾರ್ಯ| ಬೇಡಿದ್ದೆ ಶಿವಸ್ತುತಿ ||

ರೂಢಿಯಾದಾತನೆ ಗುರುದೇವೆ ||1||

ಹಿಗ್ಗದೆ ಸ್ತುತಿಯಿಂದ| ತಗ್ಗದೆ ನಿಂದೆಯಿಂ |

ಬಗ್ಗದೆ ದುಃಖ ದಾರಿದ್ರ್ಯಕ್ಕೆ||

ನೆಗ್ಗಿ ನುಚ್ಚಾಗದೆ| ಅಗ್ಗದ ವಿಷಯಕ್ಕೆ|

ನಿಗ್ರಹಿಸಿರ್ಪಾತ ಗುರುದೇವನು ||2||

ಮರಣಕ್ಕೆ ಅಂಜದೆ| ಕರಣಕ್ಕೆ ದಕ್ಕದೆ|

ಸ್ಮರಣಕ್ಕೆ ನಿಲುಕಿರ್ಪ ಗುರುದೇವನು||

ಚರಣವ ನಂಬಿದ| ಶರಣರೊಳ್ತುಂಬಿದ |

ಪರಮ ಸುಜ್ಞಾನವ ನರಹರಿಯು ||3||

ಚಕ್ರವ್ಯೂಹವ ಹೊಕ್ಕು ಕಾದಿದಾ| ಸಮ|

ರಕ್ಕೆ ನಿಂತವರನ್ನು ಸೀಳಿದಾ ||ಪ||

ಮಿಕ್ಕು ಮಲೆತವರ ನೀಡಾಡಿದಾ| ತಾ|

ದಿಕ್ಕಿಲ್ಲದಭಿಮನ್ಯು ತೀರಿದಾ ಅಪ||

ಚಕ್ರವ್ಯೂಹವ ಸೇರಬಲ್ಲನು | ಘಟ|

ಚಕ್ರ| ಭೇದಿಸಿ ಬರಲಾರನು||

ವಿಕ್ರಮದೊಳು ಕಾದಬಲ್ಲನು | ಪರ|

ರಾಕ್ರಮಣಕೆ ಸಿಕ್ಕಿ ನಿಲ್ಲನು ||1||

ಚಕ್ರವ್ಯೂಹವೆ ತನ್ನ ದೇಹವು| ಒಳ|

ಹೊಕ್ಕ ಜೀವನೆ ಅಭಿಮನ್ಯುವು||

ಸಿಕ್ಕಿಕೊಂಡಿರೆ ತನು ಮೋಹವು| ಜಗ|

ಳಕ್ಕೆ ನಿಂತಿದೆ ಕುರುಸೈನ್ಯವು ||2||

ಹದಿನಾರು ವರ್ಷದ ಬಾಲನು| ತಾಂ|

ಹದಿನಾರು ಇಂದ್ರಿಯ| ಮೂಲನು||

ಕದನ ಕರ್ಕಶನಾಗಿ ನಿಂತನು| ಜೀ|

ವದ ಭಾವವಳಿದಾಗ ಶಾಂತನು||3||

ಅಭಿಮಾನವೆಂಬಭಿಮನ್ಯುವು | ಸ್ವ|

ಪ್ರಭೆಯಿಂದ ಗೆಲುವು ಸಾಮಾನ್ಯವು||

ಅಭಿಮಾನವಾಗಲು ಶೂನ್ಯವು| ದು

ರ್ಲಭವಾದ ಮುಕ್ತಿ ನಿರ್ಮಾಣವು ||4||

ಗುರು ಕಟ್ಟಿದೀ ಚಕ್ರವ್ಯೂಹವು | ದು|

ರ್ಧರ ದುರ್ಗುಣಗಳ ಸಮೂಹವು|

ಹರಿದಾಗ ತನ್ನಭಿಮಾನವು| ಕ|

ತ್ತರಿಸುವುದು ನರಹರಿ ಜ್ಞಾನವು

ಶ್ರವಣಗೈದವನೆ ಶ್ರೋತ್ರಿಯನು| ಶೃತಿ|

ಶ್ರವಣದಿಂದಲೆ ಬ್ರಹ್ಮನಿಷ್ಠನೆನಿಸುವನು ||ಪ||

ಶ್ರವಣ ಮುಕ್ತಿಗೆ ಸಾಧನವು| ಸುಖ|

ಶ್ರವಣವೆ ಸುಜ್ಞಾನ ಸುಖ ಸಂಪಾದನವು ||ಅಪ||

ಅಜ್ಞಾನ ಕಾರಣ ಶ್ರೋತ್ರ| ನಿಜ|

ಸುಜ್ಞಾನ ಸಾಧನವಾದುದು ಶ್ರೋತ್ರ||

ಯಜ್ಞವೆಂಬುದು ಜ್ಞಾನ ಮಾತ್ರ| ನಿಜ|

ಪ್ರಜ್ಞೆಯುಂಟಾಗಲು ಶ್ರವಣವೆ ಸೂತ್ರ ||1||

ಶ್ರವಣವಿಲ್ಲದೆ ಮುಕ್ತಿಯಿಲ್ಲಾ| ಬಲು|

ಭವಬಂಧವಳಿಯಲು ಶ್ರವಣ ಬೇಕಲ್ಲಾ||

ಸುವಿವೇಕ ಶ್ರವಣಗೈದವರು| ಘನ|

ಶ್ರವಣರೆಂಬುದು ಜೈನ ಧರ್ಮಕ್ಕೆ ಪೆಸರು ||2||

ಕಿವಿಯಿಂದ ಶಬ್ದ ಸೂತಕವು| ಬಂದು|

ಅವಿವೇಕ ಪ್ರಾಪ್ತಿಯಿಂದಾಯ್ತು ಪಾತಕವು||

ಕಿವಿಗೊಟ್ಟು ಕೇಳ್ದ ಬೋಧನೆಯು| ಸದಾ

ಶಿವನೊಲುಮೆಯ ನು ಪಡೆವಂಥ ಸಾಧನೆಯು ||3||

ಶ್ರವಣ ಮಾಡಿರುವಾತ ಶರಣ| ಅನು|

ಭವ ಹೊಂದಿದಾಗಲೆ ತನಗಿಲ್ಲ ಮರಣ||

ಶಿವಮಂತ್ರ ಲಯಗೊಂಬ ಸ್ಮರಣ| ಸಿರಿ|

ಭವನ ನರಹರಿಗಿದು ಮಂತ್ರದಾಚರಣ ||4||

ತೂಗು ಮಂಚವನೇರಿ ಕುಳಿತಿಹರು| ಶಿವ ಪಾರ್ವತಿಯರು|

ರಾಗವನುಯಿಂಪಾಗಿ ಹಾಡುವರು ||ಪ||

ಯೋಗಿಯಾದವ ಕೇಳಬಲ್ಲನು|

ಭೋಗಿ ಯಾದವ ಕೇಳಲೊಲ್ಲನು||

ತೂಗು ಮಂಚವ ಯೋಗಿ ನಿಲಿಪನು|

ಯೋಗದೊಳು ಶಿವನೊಲವ ಪಡೆವನು ||ಅಪ||

ಹಂಸತಲ್ಪದ ಮೇಲೆ ಮಲಗುವರು| ನೋಡಿದರೆ ಪರಮಾ|

ಹಂಸನಿಗೆ ದರ್ಶನವನೀಯುವರು||

ಸಂಶಯಂಗಳ ಧ್ವಂಸಗೈವರು|

ಹಿಂಸೆಯೆಲ್ಲವನಳಿದು ಕಾಯ್ವರು||

ಹಂಸಮಯ ಸೋಹಂ ಸ್ವರೂಪರು|

ಸಂಸೃತಿಯನೇ ದೂರಮಾಳ್ಪರು ||1||

ತೂಗುತಿರುವುದು ತಾನೆ ತಾನಾಗಿ| ತೂಗುವುದು ನಿಂತರೆ|

ಹೋಗಿಬಿಟ್ಟಿತು ಜಗವೆ ಹಾಳಾಗಿ||

ತೂಗುತಿರುವುದೆ ಯೋಗವಾಯಿತು|

ಆಗ ಭೋಗಕೆ ಸಾಗಿ ಹೋಯಿತು||

ಭೋಗ ಕರ್ಮಕೆ ಹಾದಿಯಾಯಿತು|

ಬೇಗ ತಾನೇ ಹುಟ್ಟಿ ಸತ್ತಿತ್ತು ||2||

ಹಾಡುತಿರುವರು ಇಬ್ಬರೂ ಕೂಡಿ| ಹಾಡುವುದ ಕೇಳ್ದವ|

ರೂಢಿಯೊಳು ಶಿವಯೋಗಿಯೇ ನೋಡಿ||

ಹಾಡುತಿರುವುದೆ ವೇದ ಮಂತ್ರವು|

ಹಾಡಿದಾಕ್ಷಣ ಭವದ ಯಂತ್ರವು|

ಕೂಡಲಾರದೆ ಮುರಿದು ಪೋಪುದು|

ನೋಡಿ ನರಹರಿ ಬೋಧೆ ತಾನಿದು ||3||

ಬಾಯಿ ತುಂಬಾ ಹೊಗಳೆಲೋ ನೀನು| ಶಿವನೀಗ ನಿನ್ನಯ

ಕಾಯದೊಳು ಪ್ರತ್ಯಕ್ಷನಾಗುವನು ||ಪ||

ಮಾಯೆಯನ್ನೇ ಮೀರಿ ಬರುವನು|

ಕೈಯೊಳಾಶೀರ್ವಾದಗೈವನು||

ಈಯಜಾಂಡವ ತುಂಬಿಯಿರ್ಪನು|

ಕಾಯ ಕರ್ಮವನಳಿದು ತೋರ್ಪನು ||ಅಪ||

ಪ್ರಣವ ಶಿರದೊಳು ಗೋಚರಿಸುತಿಹನು|

ಸರ್ವಾಕ್ಷರಂಗಳ| ಗುಣಿಸಿ ಮಂತ್ರಗಳುಚ್ಛರಿಸುತಿಹನು||

ಜನನ ಮರಣಂಗಳನು ಗೆದ್ದನು|

ಮಾನವ ಬುದ್ಧಿಯ ಮೀರುತಿದ್ದನು||

ತನಗೆ ತಾನೇ ತೋರ್ಪ ಶುದ್ಧನು|

ಕೊನೆಗೆ ಝಾಡಿಸಿ ಎಲ್ಲ ಒದ್ದನು ||1||

ಬಡ್ಡಿಯಿಲ್ಲದೆ ಸಾಲ ಕೊಟ್ಟವನು| ಅಸಲೊಯ್ವದಿಟ್ಟನು|

ಅಡ್ಡಿಯಿಲ್ಲದೆ ಪಾಪ ಸುಟ್ಟವನು||

ಮಡ್ಡಿ ಮುಠ್ಠಾಳರನು ಸೇರನು|

ದೊಡ್ಡವರಿಗೆಂದೆಂದು ತೋರನು||

ಜಡ್ಡು ದೇಹದ ಜಿಡ್ಡು ಮುಟ್ಟನು|

ಗೊಡ್ಡು ನುಡಿಗಳಿಗಡ್ಡಿಯಿಟ್ಟನು ||2||

ಬ್ರಹ್ಮನಾಡಿಯ ತುಂಬಿ ನಿಂತವನು| ಪ್ರಣವಾಂತ್ಯದಲ್ಲಿಯೆ|

ರಮ್ಯ ನಾದದಿ ತೋರುವಂಥವನು||

ಕರ್ಮ ಮಾರ್ಗವ ಸೇರದಾತನು|

ಧರ್ಮ ಮಾರ್ಗ ವಿಚಾರ ಪ್ರೀತನು||

ಸಮ್ಯಜ್ಞಾನ ಸುಬೋಧದಾತನು|

ನಮ್ಮ ನರಹರಿ ತಾತ ನೀತನು ||3||

ನಮ್ಮ ಊರಿಗೊಬ್ಬ ಮಂತ್ರವಾದಿ ಬಂದಾ||

ನಮ್ಮ ಕರ್ಮ ಕಳೆವೆನೆಂದ ಮಂತ್ರದಿಂದಾ ||ಪ||

ನಿಮ್ಮ ಕಾಟ ಪೀಕಲಾಟ ನಿಲ್ಲದೆಂದಾ|

ನೆಮ್ಮದಿಯನು ಮಾಡಿಬಿಡುವೆ ನಿಲ್ಲಿರೆಂದಾ ||ಅಪ||

ಮಣ್ಣು ತಂದು ತೋರಿಸುತ್ತ ನೋಡಿರೆಂದಾ|

ಚಿನ್ನವನ್ನು ಮಾಡಿಬಿಟ್ಟ ಮಂತ್ರದಿಂದಾ||

ಕಣ್ಣಿನಲ್ಲಿ ಕಂಡುದೆಲ್ಲ ಸುಳ್ಳು ಎಂದಾ|

ಕಣ್ಣು ಕಾಣದಿರ್ಪುದೆಲ್ಲ ಸತ್ಯವೆಂದಾ ||1||

ಕಸವ ಕೂಡಿಸುತ್ತ ದಿವ್ಯರಸವ ಮಾಡಿದಾ|

ರಸವಿದೆಂದು ತೋರಿಸಿದರೆ ವಿಷವ ಮಾಡಿದಾ||

ವ್ಯಸನವಿಲ್ಲದಂಥ ದ್ರವ್ಯವನ್ನು ತೋರಿದಾ|

ಪಶುಗಳನ್ನು ಕಾಮಧೇನುವಾಗಿ ಮಾಡಿದಾ ||2||

ಆರು ಹುಲಿಗಳನ್ನು ಹತ್ತಿಸಾಗಿಬಿಟ್ಟಾ |

ಮೀರಿದೆಂಟು ಕೋಣಗಳನು ಬಡಿದುಬಿಟ್ಟಾ||

ಹಾರುತಿದ್ದ ಹಂಸನನ್ನು ತಡೆದುಬಿಟ್ಟಾ|

ಧೀರ ನರಹರೀಂದ್ರನೇರಿ ನಡೆದುಬಿಟ್ಟಾ ||3||

ಬಿಡದೀ ಸಂಸಾರ| ವಿಕಾರ| ಹಿಡಿದಾಯಿತು ಶರೀರಾ ||ಪ||

ಜಡತೆಯ ಭಾರ| ಪಡೆದ ಶರೀರಾ||

ಕಡೆಗಿದು ಪೂರ| ಹುಡುಕಲ ಸಾರ ||ಅಪ||

ಸೇರದೆ ಚಿನ್ನಾದ| ವಿನೋದ| ತೋರದು ಸದ್ಬೋಧಾ||

ಹಾರದೆ ವಾದಾ| ಬಾರದು ವೇದಾ||

ಸಾರದು ಸ್ವಾದಾ| ತೀರದು ಬಾಧಾ ||1||

ಎಲ್ಲಿದೆ ಸುಖಸಾರ| ವಿಚಾರ| ದಲ್ಲಿದೆ ನಿರ್ಧಾರ||

ಎಲ್ಲವಸೇರೀ| ಎಲ್ಲವ ಮೀರಿ||

ನಿಲ್ಲುವ ಬ್ರಹ್ಮ| ದಲ್ಲಿದೆ ಮರ್ಮ ||2||

ಕುಂಭಕ ಸೇರಿರುವಾ| ಪ್ರಭಾವ|

ತುಂಬಿಯೆ ಸಾರಿರುವಾ||

ಅಂಬುಧಿ ಸೇರಿ| ಅಂಬರವೇರಿ||

ಶಂಭುವೆ ನರಹರಿ| ಯೆಂಬುದೆ ನಿಜ ಸಿರಿ||

ತ್ರೈಮೂರ್ತಿಗಳ ಮಹಿಮೆ| ಸಾಮಾನ್ಯವಲ್ಲವು|

ಬಾ ಮಗನೆ ಕೇಳೆಂದಗುರುರಾಯನು || ಪ||

ಧೀಮಂತನಾಗಿ ನಿ| ಷ್ಕಾಮಿಯಾದಾತಂಗೆ|

ತ್ರೈಮೂರ್ತಿಗಳು ವಶವಹರೆಂದನು ||ಅಪ||

ಹರಿಯು ಜಾಗ್ರಕೆ ಕರ್ತ| ಹರಿಪುತ್ರ ಮನಸಿಜ|

ಹರಿವ ಮನದೋಳ್ಜನಿಸಿ ಹರಿದಾಡುವ||

ತೆರಪಿಲ್ಲದಂತೆ ವಿಸ್ತರ ವಿಷಯ ರತಿಯಲ್ಲಿ|

ಬೆರೆದಾನಂದಿಸುತಿರ್ಪ ಜಾಗ್ರದೊಳು ||1||

ಆಡುತ್ತ ಪಾಡುತ್ತ ನೋಡುತ್ತ ಕೂಡುತ್ತ|

ಕಾಡುತ್ತ ಬೇಡುತ್ತ ಕಾಮನೆಗಳ||

ನೀಡುತ್ತಲಾಡಿಸುವ ಜೀವಜಾಲವನೆಲ್ಲ|

ಈಡಿಲ್ಲ ಕಾಮಂಗೆ ಜಗದಲ್ಲಿ ||2||

ಹರನು ನಿದ್ರೆಗೆ ಕರ್ತ| ಹರವೈರಿ ಮನ್ಮಥ|

ಬರಲಾರ ಬಂದರಾಗಲೆ ಸುಡುವ||

ಹರನು ಲಯಕರ್ತನಾ| ಗಿರುವ ಕಾರಣದಿಂದ|

ವರ ಸುಷುಪ್ತಿಯೊಳಿಲ್ಲ ಕಾಮ್ಯಗಳು ||3||

ಜಗವಿಲ್ಲ ಯುಗವಿಲ್ಲ ತನುವಿಲ್ಲ ಮನೆಯಿಲ್ಲ|

ಸೊಗಸಿರ್ದ ಇಂದ್ರಿಯಾದಿಗಳೆಲ್ಲವು||

ಜಗದಾತ್ಮ ರುದ್ರದೇವನು ಸರ್ವವನು ನುಂಗಿ|

ಮಿಗಿಲಾದ ಸುಖವೀವ ಸುಪ್ತಿಯೊಳು ||4||

ವಾರಿಜೋದ್ಭವ ಸ್ವಪ್ನ ಕಾರಣನು| ಸೃಷ್ಟಿಯನು|

ತೋರುವನು ಸ್ವಪ್ನದೊಳು ಸರ್ವವನು||

ಮೇರೆಯಿಲ್ಲದ ಜಗವಿ| ಸ್ತಾರ ಪುಸಿಯೆನ್ನುತ್ತ|

ಸಾರುವನು ನರಹರಿಯ ರೂಪದೊಳು ||5||

ಕಲ್ಪನೆಗಳಿಗೆ ಮೂಲಾಧಾರವಾದುದು ಕಲ್ಪವೃಕ್ಷಾ ||ಪ||

ಸ್ವಲ್ಪವಾದರು ಕೊರತೆಯಿಲ್ಲದೆ ಕೊಡುವುದು ಕಲ್ಪವೃಕ್ಷಾ ||ಅಪ||

ಈರೇಳು ಲೋಕ ವಿಸ್ತಾರವಾಗಿರುವಂಥ ಕಲ್ಪವೃಕ್ಷಾ||

ಮೂರೇಳು ಸಾಸಿರದ ಆರ್ನೂರು ಬೇರುಳ್ಳ ಕಲ್ಪವೃಕ್ಷ ||1||

ಧಾರಿಣಿ ಸ್ಥಲದಲ್ಲಿ ತೋರುತ್ತಲಿರುವಂಥ ಕಲ್ಪವೃಕ್ಷಾ||

ಯಾರೇನು ಬೇಡಿದರು ಸೂರೆ ಮಾಡುತಲಿರ್ಪ ಕಲ್ಪವೃಕ್ಷ ||2||

ತರು ಸಸ್ಯ ಲತೆ ಗುಲ್ಮ ಪೈರುಪಚ್ಚೆಗಳಾದ ಕಲ್ಪವೃಕ್ಷಾ ||

ಧರೆಯ ಜೀವಿಗಳನ್ನು ಪೊರೆಯುತ್ತಲಿರುವಂಥ ಕಲ್ಪವೃಕ್ಷಾ ||3||

ವೇದ ಶಾಸ್ತ್ರಗಳೆನ್ನಲಾದ ಶಾಖೆಗಳುಳ್ಳಕಲ್ಪವೃಕ್ಷಾ ||

ವೇದಾಂತವೆಂಬ ಸುಸ್ವಾದ ಫಲಗಳನೀವ ಕಲ್ಪವೃಕ್ಷಾ ||4||

ವರ್ಣಂಗಳೆನ್ನುವ ಪರ್ಣಂಗಳಿಂ ಮೆರೆವ ಕಲ್ಪವೃಕ್ಷಾ||

ಉನ್ನತೋನ್ನತ ಗಂಧ| ಪೂರ್ಣಪುಷ್ಪಗಳುಳ್ಳ ಕಲ್ಪವೃಕ್ಷಾ ||5||

ಏನು ಬೇಡಿದೊಡೀವ| ಜ್ಞಾನವೆಂದೆನಿಸುವ ಕಲ್ಪವೃಕ್ಷಾ||

ಧ್ಯಾನಧ್ಯಾತೃವು ಧ್ಯೇಯ| ತಾನೆಯಾಗಿರುವಂಥ ಕಲ್ಪವೃಕ್ಷಾ ||6||

ಹಂಸನೆನ್ನಿಸುತ ಸೋಹಂ ಸ್ವರೂಪವನಾಂತ ಕಲ್ಪವೃಕ್ಷಾ||

ಸಂಶಯವನಳೀದೀಶ್ವ|ರಾಂಶ ನರಹರಿಯಾದ ಕಲ್ಪವೃಕ್ಷಾ ||7||

ಕರ್ಮಗತಿಯನು ವರ್ಣಿಸಲರಿದು|

ಕರ್ಮ ತೀರಿದರೆಲ್ಲವು ಬರಿದು||

ಕರ್ಮದಿಂದಲೆ ಕಾಯವಾಗಿಹುದು|

ಕರ್ಮ ಶುದ್ಧಿಯೆ ಜ್ಞಾನವು ಬಹುದು ||ಅಪ||

ದುಡಿಯದೇ ಸುಖಪಡುವವನೊಬ್ಬ|

ದುಡಿದು ದುಃಖದೊಳಿರುವವನೊಬ್ಬ |

ದುಡಿದು ಯಾರಿಗೊ ಕೊಡುವವನೊಬ್ಬ|

ದುಡಿಮೆಯಾಗದೆ ಮಡಿದವನೊಬ್ಬ ||1||

ಭೋಗಭಾಗ್ಯದಿ ನಲಿವವನೊಬ್ಬ|

ರೋಗರುಜಿನದಿ ಬಳಲುವನೊಬ್ಬ||

ತ್ಯಾಗ ಜೀವನ ಮಾಳ್ಪವನೊಬ್ಬ|

ಆಗದುದಕಾಸೆಪಡುವವನೊಬ್ಬ ||2||

ಇದ್ದು ಉಣ್ಣದೆ ಸಾಯ್ವವನೊಬ್ಬ|

ಇದ್ದುದಾರದೊ ತಿಂಬವನೊಬ್ಬ||

ಕದ್ದು ಕಾಣದೆ ಬಾಳ್ವವನೊಬ್ಬ|

ಶುದ್ಧ ನರಹರಿಯ ಸೇರ್ವವನೊಬ್ಬ |3||

ಯೋಗಿಯೆಂಬೆನೆ ಭೋಗದೊಳಿರುವೆ|

ಭೋಗಿಯೆಂಬೆನೆ ಯೋಗದೊಳಿರುವೆ ||ಪ||

ಯೋಗ ಭೋಗ ಸಂಯೋಗದಿ ಬರುವೆ|

ಯೋಗ ಕುಂಭಕವಾಗಿಯೆ ಮೆರೆವೇ ||ಅಪ||

ಸುರನು ಎಂಬೆನೆ ನರರೊಳಗಿರುವೆ|

ನರನು ಎಂಬೆನೆ ಸುರನಾಗಿರುವೆ||

ಸುರರು ನರರೊಳು ಬೆರೆದು ನೀನಿರುವೆ|

ಧರಣಿ ಸ್ಥಲದೊಳು ಹಂಸನಾಗಿರುವೆ ||1||

ಸಗುಣವೆಂಬೆನೆ ನಿರ್ಗುಣನಿರುವೆ|

ನಿರ್ಗುಣನು ಎನೆ ಸಗುಣದೊಳಿರುವೆ ||

ಸಗುಣ ನಿರ್ಗುಣ ಸಮರಸಗೈವೆ|

ಸೊಗಸಿ ಭ್ರೂಮಧ್ಯಚಕ್ರದೊಳಿರುವೆ ||2||

ನಾದ ನೀನೆನೆ ವೇದ ದೊಳಿರುವೆ|

ವೇದ ನೀನೆನೆ ನಾದವಾಗಿರುವೆ||

ನಾದವೇದಗಳಾದಿಯಾಗಿರುವೆ|

ಬೋಧೆಯೊಳು ನರಹರಿಯಾಗಿರುವೆ ||3||

ನಿಷ್ಕಾಮ ಕರ್ಮಯೋಗ| ನಿಷ್ಕರ್ಷೆಯಾಯಿತೀಗ ||ಪ||

ದುಷ್ಕರ್ಮ ತೀರಿದಾಗ| ನಿಷ್ಕಲ್ಮಷ ಪ್ರಯೋಗ ||ಅಪ||

ಭೋಗಾರ್ಥವಲ್ಲ ತನುವು| ಯೋಗಾರ್ಥವೆಂದು ಮನವು||

ತ್ಯಾಗಕ್ಕೆ ನಿಲ್ಲಲಾಗಿ ಶ್ರೀಗುರುವಿನಲ್ಲಿ ಹೋಗಿ ||1||

ತಾನಲ್ಲ ಕರ್ತೃಭೋಕ್ತೃ| ತಾನಲ್ಲ ಮಿತ್ರ ಶತೃ||

ತಾನಲ್ಲ ಕಾಯಕರಣ| ಏನಿಲ್ಲವೆಂಬ ಸ್ಮರಣ ||2||

ಒಡಲಾಸೆಯೆಲ್ಲ ನೀಗಿ| ಜಡಭಾವವಿಲ್ಲವಾಗಿ||

ಕಡುಸೌಖ್ಯದಲ್ಲಿಸಾಗಿ| ಬಿಡಲಾಗಿ ತಾನೆಯಾಗಿ ||3||

ತಾನಂಟಿ ಅಂಟದಂತೆ| ಏನೊಂದು ಕುಂಟದಂತೆ||

ಆನಂದಭಾವವಿರಲು| ದೀನತ್ವವೆಲ್ಲ ಬಿಡಲು ||4||

ತನು ಭಾವವೆಲ್ಲ ಹೋಗಿ| ಅನುಭಾವ ಸತ್ಯವಾಗಿ||

ಮನದಲ್ಲಿ ನರಹರೀಂದ್ರ| ಮನೆಮಾಡಿ ನಿಲ್ಲಲಾಗಿ ||5||

ಮನೆಯಿಲ್ಲದೆ ಶಿವನು| ಸುಡುಗಾ| ಡನು ಸೇರಿರುತಿಹನು ||ಪ||

ತನುವಿಲ್ಲೆನ್ನುತ| ತನುಗಳ ಸೇರಿದ||

ಮನವಿಲ್ಲದೆ | ತಾಂ | ಮನಗಳ ಸೇರಿದ ||ಅಪ||

ನಾಶಿಕವಿಲ್ಲದವ| ಸರ್ವರ| ನಾಸಿಕ ಸೇರಿರುವಾ||

ಮೂಸಿಸಿ ಗಂಧವಿ| ಲಾಸದಿ ಮೆರೆವನು||

ಈಶನು ಹಂಸೋ| ಲ್ಲಾಸದೊಳಿರುವನು ||1||

ನಾಲಗೆಯಿಲ್ಲದವ| ಸರ್ವರ| ನಾಲಗೆ ಸೇರಿರುವಾ||

ಮೇಲಾಗಿಹ ರುಚಿ| ಜಾಲದಿ ಸುಖಿಸುವ||

ಮೂಲಸುಮಂತ್ರದ| ಲೀಲೆಯೊಳಾಡುವ ||2||

ಕಣ್ಣಿಲ್ಲದೆಶಿವನು| ಸರ್ವರ| ಕಣ್ಣನುಸೇರಿದನು||

ಬಣ್ಣದರೂಪವ| ವರ್ಣಿಸಿ ಸುಖಿಸುವ||

ಕಣ್ಣೊಳೆಜಾಗ್ರವ| ಮನ್ನಿಪಸುಪ್ತಿಯ ||3||

ಚರ್ಮವುಶಿವಗಿಲ್ಲಾ| ಸರ್ವರ| ಚರ್ಮದೊಳಿಹನಲ್ಲಾ||

ಸಮ್ಮತಸ್ಪರ್ಶವ| ನಿರ್ಮಿಸಿ ಸುಖಿಸುವ||

ಬ್ರಹ್ಮೈಕ್ಯದಪದ| ಧರ್ಮವ ಸಲಿಸುವ 4||

ಕಿವಿಯಿಲ್ಲದಶಿವನು| ಸರ್ವರ| ಕಿವಿಗಳ ಸೇರಿದನು||

ಸವಿನುಡಿವೇದವ| ಶ್ರವಣಾನಂದವ||

ಸವಿಯುತ ನರಹರಿ|| ವಿವರಿಸೆ ಕೇಳುವ ||5||

ನೀನಾಗಿ ಕೊಟ್ಟದ್ದು ಈ ಭಾಗ್ಯವೆಲ್ಲಾ|

ನಾನಾಗಿ ತಂದದ್ದು ಏನೇನು ಯಿಲ್ಲಾ ||ಪ||

ಜ್ಞಾನಕ್ಕೆ ಸಮನಾದ ಸೌಭಾಗ್ಯವಿಲ್ಲಾ|

ಆನಂದ ಸಾಮ್ರಾಜ್ಯ ನಿನ್ನದೆಯೆಲ್ಲಾ ||ಅಪ||

ಎಲ್ಲೆಲ್ಲಿ ಕಾಣುವುದು ನಿನ್ನ ಐಸಿರಿಯು|

ಇಲ್ಲಿ ನನ್ನದು ಎಂಬುದೆಲ್ಲವೂ ಹುಸಿಯು||

ಇಲ್ಲೆ ನಿನ್ನನು ಕಾಣಲಿದುವೆ ಸಾಧನೆಯು|

ಅಲ್ಲಾಡುತಿರುವಹಂಕಾರವೆ ಮರೆಯು ||1||

ತನು ನಿನ್ನದಾಗಿದ್ದು ನನ್ನದೆನ್ನುತ್ತ|

ಮನ ನಿನ್ನದಾಗಿದ್ದು ನನ್ನದೆನ್ನುತ್ತ||

ಧನ ನಿನ್ನದಾಗಿದ್ದು ನನ್ನದೆನ್ನುತ್ತ|

ಜನುಮ ಕೋಟಿಯ ಹೊತ್ತೆ ಹುಟ್ಟಿಸಾಯುತ್ತ ||2||

ನಾನು ನಾನೆಂಬಹಂಕಾರ ಹುಟ್ಟಿ|

ಹೀನಕರ್ಮವ ನಾನೆ ಮಾಡಿದ್ದು ಬಿಟ್ಟಿ||

ಜ್ಞಾನ ಮೂರುತಿ ನಿನ್ನ ಪಾದವ ಮುಟ್ಟಿ|

ನೀನೆ ಪೊರೆಯೆಂದಾಗ ನರಹರಿ ಗಟ್ಟಿ ||3||

ಜಗಕೆಲ್ಲ ಕೊಡಬಲ್ಲ ಶಿವನು| ತ್ರೈ|

ಜಗವೆಲ್ಲ ಬೇಡಿ ಉಣ್ಣುತಲಿರ್ಪುದೇನು ||ಪ||

ಬಗೆದು ನೀವಿದರ ಮರ್ಮವನು |ಜ್ಞಾ|

ನಿಗಳಾದರಾಗ ನಾನಿ ಮಗೆರಗುವೆನು ||ಅಪ||

ಶಿವ ಕೊಟ್ಟ ಸರ್ವರಿಗರಿವು| ಅನು|

ಭವ ಮಾಡಿದರಲ್ಲೆ ಪಡೆದ ನಿಜದರಿವು||

ಶಿವನು ಬೇಡುವ ಭಿಕ್ಷಾ ಶುದ್ಧ | ಜ್ಞಾ |

ನವೆಯೆಂದು ತಿಳಿದಾತ ಭವವನ್ನು ಗೆದ್ದಾ ||1||

ಕೊಡುತಿರ್ಪ ನನ್ನ ಪ್ರಸಾದ | ಶಿವ|

ಪಡೆದುಕೊಳ್ಳುತಲಿರ್ಪ ಜ್ಞಾನಪ್ರಸಾದ||

ಒಡಲನ್ನು ಶಿವನೆ ಕೊಟ್ಟಿರುವಾ| ಈ|

ವೊಡಲಲ್ಲೆ ಪಡೆದ ಜ್ಞಾನವ ಬೇಡುತಿರುವಾ ||2||

ನಾನುಂಡೆನೆಂಬಾತ ಭೋಗಿ| ಅ|

ಜ್ಞಾನ ವಶದಿಂದಾದ ತಾ ಜನ್ಮರೋಗೀ||

ತಾನುಂಡ ಶಿವನೆಂಬ ಯೋಗಿ| ಸು|

ಜ್ಞಾನಿ ನರಹರಿಯ ಸೇರುವ ನಿತ್ಯನಾಗಿ ||3||

ಬ್ರಹ್ಮನ ಕಪಾಲದೊಳು ಭಿಕ್ಷಾ| ಸ|

ದ್ಧರ್ಮ ಸುಜ್ಞಾನ ಸುಶ್ರವಣ ನಿರೀಕ್ಷಾ||

ನಿರ್ಮಲಾತ್ಮ ಜ್ಞಾನರಕ್ಷಾ| ನಿ|

ಷ್ಕರ್ಮ ಸಾಧನ ನರಹರಿಯ ಸಮಕ್ಷಾ ||4||

ಶಿವನೆಂಥವನು ನೋಡೆ ತಂಗೀ| ಪರ|

ಶಿವನನ್ನು ತಿಳಿಯದಾತನೆ ಹುಚ್ಚು ಭಂಗಿ ||ಪ||

ಶಿವಜ್ಞಾನವೆಂಬ ವಜ್ರಾಂಗಿ| ಅನು|

ಭವದಿಂದ ಪಡೆದಾತ ತಾನೆ ನಿಸ್ಸಂಗೀ ||ಅಪ||

ವಿಷವನ್ನೇ ಕುಡಿದು ಜೀವಿಸಿದಾ| ರ|

ಕ್ಕಸರನೆಲ್ಲರ ಕೊಂದು ಲೋಕಮೆಚ್ಚಿಸಿದಾ||

ಬಸಿರಲ್ಲೆ ಲೋಕಗಳ ತಾಳ್ದಾ ||ಪೂ|

ಜಿಸಿದ ಭಕ್ತರಿಗೆಲ್ಲ ಸುಖವಿತ್ತು ಪೊರೆದಾ ||1||

ಹೊಟ್ಟೆಗಿಲ್ಲದೆ ಭಿಕ್ಷೆಗೈದಾ| ಬಲು|

ಸಿಟ್ಟಿನಿಂದಲೆ ಕಾಮನನು ಸುಟ್ಟು ನಡೆದಾ||

ಕೆಟ್ಟ ಕಾಲಗೆ ಶಿಕ್ಷೆಗೈದಾ | ಜಗ|

ಜಟ್ಟಿ ದುಷ್ಟರ ಕುಟ್ಟಿಕುಟ್ಟಿತಾ ನುಳಿದಾ ||2||

ಸತಿಯರಿಬ್ಬರ ಕಟ್ಟಿಕೊಂಡಾ| ಪಶು|

ಪತಿಯಿಬ್ಬರೊಳು ನಿತ್ಯ ಸುಖವನ್ನು ಕಂಡಾ||

ಶೃತಿ ಮಾರ್ಗದೊಳು ನೆಲೆಗೊಂಡಾ| ನಿ|

ಶ್ಚಿತವಾಗಿ ನರಹರಿಯೆನ್ನಿಸಿಕೊಂಡಾ ||3||

ಶಿವನಾಮವ ನುಡಿಯೋ| ನಿನ್ನಯ|

ಭವಕರ್ಮವ ಕಡಿಯೋ ||ಪ||

ಶಿವನಾಮಾಮೃತ | ಸವಿಯೆಂದೆನ್ನುತ||

ಸವಿಯುವುದೇ ಹಿತ| ಶ್ರವಣವೆ ಸುಕೃತ ||ಅ ಪ||

ದೇಹವು ಸ್ಥಿರವಲ್ಲಾ| ದೇಹದ|

ಮೋಹವು ತರವಲ್ಲಾ||

ದೇಹದೊಳಗೆ ಶಿವ| ಸ್ನೇಹವ ಪಡೆಯುವ|

ಸಾಹಸವಿದುಸಂ| ದೇಹವ ಬಿಡುಬಿಡು ||1||

ಸತಿಸುತರೊಳು ಮೋಹ| ಪಡುವುದು|

ಪತಿ ಶಿವನಿಗೆ ದ್ರೋಹ||

ಪತಿತರಪಾವನ| ಶೃತಿ ಸಂಜೀವನ||

ಸತತಂ ನೆನೆವುದೆ| ಗತಿ ಸಾಧನವಿದೆ ||2||

ಲೋಕವ ನಂಬದಿರು| ನೀನವಿ| ವೇಕವ ಹೊಂದದಿರು||

ಶೋಕರಹಿತ ಸುವಿ| ವೇಕವ ಹೊಂದುತ||

ಶ್ರೀಕರ ನರಹರಿ| ವಾಕ್ಯವ ನಂಬುತ ||3||

ಶಿವ ಜೀವರನೈ| ಜವನರಿಯದೆ ಸಂ| ಭವಿಸಿತು ಅಜ್ಞಾನ ||ಪ||

ಶಿವ ಜೀವರಿಗೈಕ್ಯವ ಸಾಧಿಸಿದನು| ಭವವೇ ಸುಜ್ಞಾನ |ಅ ಪ||

ಮೂರವಸ್ಥೆಗಳು | ಸೇರಿ ದುಃಖಗಳು |

ತೋರಿದವನೆ ಜೀವಾ||

ಮೂರವಸ್ಥೆಗಳ| ಮೀರಿದ ಕಾರಣ|

ಮೂರುತಿಯೇಶಿವನು ||1||

ತನ್ನನೆ ಮರೆಯುತ| ಅನ್ಯವನರಿಯುತ|

ಬನ್ನಬಡುವ ಜೀವಾ||

ತನ್ನನೆ ಅರಿಯುತ| ಅನ್ಯವನರಿಯದ |

ಉನ್ನತನೇಶಿವನು ||2||

ಫಟದೊಡನಾಟವ| ಚಟಗಳ ಕಾಟವ |

ದಿಟವೆಂದವ ಜೀವಾ||

ಘಟಚಕ್ರದ ಸಂ| ಘಟನೆಗೆ ಮೀರಿದ

ನಟನಾತ್ಮಕಶಿವನು ||3||

ವಿಷಯಗಳೆನ್ನುವ| ವಿಷವನ್ನುಣ್ಣುವ|

ವ್ಯಸನದೊಳಿಹ ಜೀವಾ||

ವಿಷಯಕೆ ದೂರನು| ವಿಶ್ವಾಧಾರನು|

ಅಸಮಾನನುಶಿವನು ||4||

ಗುರುವಿನ ಬೋಧೆಯ| ಅರಿಯದೆ ಬಾಧೆಯ|

ಬೆರೆತಿರುವವ ಜೀವಾ||

ಪರತರ ಬೋಧೆಯ| ಪರಿಕಿಸಿ ಬಾಧೆಯ|

ಪರಿಹರಿಸುವಶಿವನು ||5||

ಶರೀರವೆ ಶಾಶ್ವತ| ವಿರುವುದು ಎನ್ನುತ|

ಮೆರೆವವನೇ ಜೀವಾ||

ಶರೀರವು ನಶ್ವರ| ವಿರುವುದು |

ಎನ್ನುವ ಗುರುವರ ಪರಶಿವನು ||6||

ಕಾಲ ಕರ್ಮಗಳ| ಜಾಲದಿ ದುಃಖವ|

ತಾಳಿದವನೆ ಜೀವಾ||

ಕಾಲಕರ್ಮಗಳ| ಲೀಲೆಯಿಂದ ತಾ|

ನಾಳುವವನೆ ಶಿವನು ||7||

ಜನನ ಮರಣಗಳು| ತನಗಿಹುದೆನ್ನುತ|

ಎಣಿಸುವವನೆ ಜೀವಾ||

ಜನನ ಮರಣಗಳು| ತನಗಿಲ್ಲೆನ್ನುವ|

ಘನ ನರಹರಿ ಶಿವನು ||8||

ನೋಡು ಗುರುವಿನ ಗಾರುಡಿ ವಿದ್ಯ|

ಪ್ರೌಢರಾದವರಿಗೆ ಬ್ರಹ್ಮವಿದ್ಯ

||ಪ||

ಗೂಢವರಿಯಲು ಬ್ರಹ್ಮಗಸಾಧ್ಯ|

ಗಾಢ ಭಕ್ತಗೆ ಗುರುವಿಂದ ವೇದ್ಯ

||ಅ ಪ||

ಹುತ್ತದೊಳಗಿದ್ದ ಸರ್ಪನು ಹೆಡೆಯ|

ಎತ್ತಿ ಕೂಗುತ್ತಲಿರುತಿಹ ಕಡೆಯ||

ಗೊತ್ತು ತಿಳಿದಲ್ಲಿ ಶ್ರೀಗುರುವಿನಡಿಯ|

ನಿತ್ಯ ಪೂಜಿಪ ಶರಣರಿಗೊಡೆಯ

||1||

ಏಳು ಹೆಡೆಗಳ ಬಿಚ್ಚಿ ಆಡುವುದು|

ನೀಲರತ್ನದ ಕಾಂತಿ ಕೂಡುವುದು||

ಬಾಲ ತಲೆಗಳನೊಂದು ಮಾಡುವುದು|

ಹೇಳಲಸದಳ ಭೋರ್ಗರೆಯುವುದು

||2||

ಎಲ್ಲ ನುಂಗಿಯೆ ತಾನೊಂದೆಯಿತ್ತು|

ಬಲ್ಲವರಿಗೆ ಸುಷುಪ್ತಿಯಾಗಿತ್ತು ||

ಎಲ್ಲವನು ಹೊರಗಿಟ್ಟು ತೋ |

ರಿತ್ತು | ಸೊಲ್ಲಿಸಿದರದು ಜಾಗ್ರವಾಗಿತ್ತು

||3||

ಏನು ಇಲ್ಲದೆ ಎಲ್ಲ ಕಾಣುವುದು|

ತಾನೆ ತನ್ನೊಳಗಾಟವಾಡುವುದು||

ಕಾಣುತಿರುವುದು ಸ್ವಪ್ನವೆನಿಸುವುದು||

ತಾನೆ ತನ್ನೊಳು ಲಯವಾಗುತಿಹುದು

||4||

ದೃಶ್ಯವೆಲ್ಲವನಳಿದರೆ ಸಾಕು|

ಸ್ವಸ್ವರೂಪವ ತಿಳಿಯಲು ಬೇಕು||

ಶಾಶ್ವತಾತ್ಮನೆ ತಾನೆನಬೇಕು|

ವಿಶ್ವವೇ ನರಹರಿಯೆನಬೇಕು

||5||

ಶಿವನ ಕ್ರೀಡಾ| ಭವನ ನೋಡಾ|

ಭುವನ ಮೋಹಕ ತನುವೆ ಗೂಢ

||ಪ||

ಶಿವನ ನೋಡ| ದವನೆ ಮೂಢಾ|

ದಿವಿಜವರನಾ ಸೇರುಗಾಡಾ

||ಅ ಪ||

ಮೂರು ಲೋಕಾ| ಸೇರಿ ಏಕಾ|

ಕಾರವಾಗಿಯೆ ತೋರುವವನಾ||

ಸೂರೆಗೈವನು| ಸಾರ ಸುಖನು|

ಬೇರೆಯಾಗುತ | ತೋರುವವನಾ

||1||

ನಯನದೊಳಗಾ| ಶ್ರಯವ ಮಾಡಿ|

ಪ್ರಿಯದಿ ಜಾಗ್ರದಿ ಕ್ರಿಯೆಯೊಳಾಡಿ||

ಶಯನಸುಖಸು| ಪ್ತಿಯನು ಕೂಡಿ|

ಲಯವಗೊಳಿಸುವ| ಬಯಲು ಮಾಡಿ

||2||

ಇಲ್ಲದುದತಂ| ದೆಲ್ಲ ತೋರಿ|

ಎಲ್ಲಿ ಸಿಕ್ಕದೆ ಮೆಲ್ಲನೆ ಜಾರಿ||

ಎಲ್ಲ ತೋರ್ಕೆಯ| ಸುಳ್ಳು ಮಾಡಿ|

ನಿಲ್ವ ನರಹರಿ| ಸ್ವಪ್ನವ ಕೂಡಿ

|3||

ನಾರಿಯನು ಬಿಡು ಮದ|

ನಾರಿಯನು ಸೇರೆಂದು|

ಸಾರಿ ಪೇಳಿದ ಗುರು ಮಹದೇವನು ||ಪ||

ನಾರಿಯರ ಮರೆಗೊಂಡು| ಸೇರಿರ್ಪ| ಮಾರನಿಗೆ|

ಮಾರುಹೋಗಲು ಬೇಡ ನೀನೆಂದನು ||ಅಪ||

ಪರರ ಹೆಣ್ಣನು ನೋಡಿ| ಬರಿದೆ ಮೋಹದಿ ಕೂಡಿ|

ದುರಿತಗಳ ಪಾಲಾಗಬೇಡೆಂದನು||

ಪರನಾರಿ ಹೆಮ್ಮಾರಿ| ನರಕಕ್ಕಾಯಿತು ದಾರಿ|

ಪರನಾರಿ ಸೋದರನಾಗೆಂದನು ||1||

ಹೆಣ್ಣಿಂದ ರಾವಣನು| ಹೆಣ್ಣಿಂದ ಕೀಚಕನು |

ಹೆಣ್ಣಿಂದ ವಾಲಿ ಕೆಟ್ಟಿಹರೆಂದನು||

ಹೆಣ್ಣಿನಿಂದಲೆ ಕೆಡದೆ| ಪುಣ್ಯ ಸಾಧಿಸು ಬಿಡದೆ|

ನಿನ್ನ ಸ್ತ್ರೀಯೊಳು ನೀನು ಸುಖಿಸೆಂದನು ||2||

ಹೆಣ್ಣು ತಾಯಿಯು ಅಕ್ಕ| ಹೆಣ್ಣು ತಂಗಿಯು ಮಗಳು||

ಹೆಣ್ಣಿನಿಂದಲೆ ಬಂಧು ಬಳಗಂಗಳು||

ಹೆಣ್ಣು ಪರದೇವಿಯು| ಹೆಣ್ಣು ಜ್ಞಾನದ ಶಕ್ತಿ|

ಹೆಣ್ಣು ನರಹರಿ ಪೇಳ್ವ ಬೋಧ ಶಕ್ತಿ ||3||

ಎಲ್ಲವು ಜೂಜಾಟ| ಈ ಜಗ| ವೆಲ್ಲವು ಜೂಜಾಟ ||ಪ||

ಗೆಲ್ಲುವ ಸೋಲುವ| ನಿಲ್ಲದ ಆಟವ| ಬಲ್ಲವರಾಡುವರೇ ||ಅ ಪ||

ಸುಖ ದುಃಖಗಳಾಟ| ಲೌಕಿಕ|

ಮುಖ ದ್ವಂದ್ವದ ನೋಟ||

ಅಖಿಲ ವಿಷಯಗಳು|

ಸುಖವೆಂದೆನ್ನುತ| ಪ್ರಕಟ ಜನ್ಮಮಾಟ ||1||

ಲಾಭ ನಷ್ಟವೆನಿಸೀ| ತನ್ನೊಳು|

ಲೋಭವು ಸಂಜನಿಸೀ||

ಈ ಭವ ದಾಟಿ ಪ| ರಾಭವಗೊಳಿಪುದು| ವೈಭವದಾಸೆಯೊಳು ||2||

ಏರುಪೇರು ಮಾಡಿ| ದುರ್ಗುಣ| ಸೇರಿ ಜಾರಿ ಓಡಿ||

ತೀರದ ನಷ್ಟ| ಸೇರುತ ಕಷ್ಟ| ತೋರಲಾದ ಭ್ರಷ್ಟ ||3||

ಬಿರುಗಾಳಿಗೆ ಸಿಕ್ಕಿ| ಹಾರುವ| ತರಗೆಲೆಯಂದದಲೀ||

ಕರಣಗಳುಕ್ಕಿ| ದುರಿತಕೆ ಸಿಕ್ಕಿ | ಜರುಗುವವನೆ ದುಃಖಿ ||4||

ಗೆಲ್ಲುವವನು ಒಬ್ಬ| ಆಗಲೆ| ಸೋಲುವ ಮತ್ತೊಬ್ಬ||

ಎಲ್ಲರು ಗೆಲ್ಲುವ| ದಿಲ್ಲವು ಜಗದೊಳು|| ನಿಲ್ಲದು ಜೂಜಾಟ ||5||

ಕಷ್ಟವ ಮಾಡುವನು| ಬೇಕಾ| ದಿಷ್ಟವ ಬೇಡುವನು|

ನಷ್ಟವು ಬರಲ| ದೃಷ್ಟವಿದೆಂಬನು| ಸೃಷ್ಟಿಯ ಜರಿಯುವನು ||6||

ಪೂರ್ವ ಜನ್ಮ ಫಲವು| ಲೋಕದಿ| ಸರ್ವರಿಗಿದು ಬಲವು |

ತೋರ್ವಕಷ್ಟಸುಖ | ತೀರ್ಪವು ಜನ್ಮದ ಪರ್ವತ ಬೆಳೆದಿಹುದು ||7||

ಸುಖದುಃಖದ ದ್ವಂದ್ವ| ಜನ್ಮಾ| ಧಿಕವಾಗುವ ಬಂಧ | ಸುಖದುಃಖದಿ ಸಮ|

ಮುಖವಾಗಿರುವ| ಸುಖಮಯನಾಗಿರುವ ||8||

ಜೂಜಾಟವಿದೆಂದು| ಮಾಯಾ| ಮೋಜಿದು ಸಾಕೆಂದು||

ಸಾಜದಿ ನರಹರಿ| ತೇಜಸು ಬೋಧದಿ| ರಾಜಿಸಿದವ ಗೆಲುವಾ ||9||

ಮೈಲಿಗೆಯಾಗದ ಮಡಿ ಮಾಡಯ್ಯಾ|

ಮೂಲವರಿತು ಭವ ಕಡೆ ಮಾಡಯ್ಯಾ ||ಪ||

ಶೀಲ ಸಜ್ಜನತನ ಮಡಿ ಕಾಣಯ್ಯ|

ಮೈಲಿಗೆಯೆಂಬುದೆ ದುರ್ಗುಣವಯ್ಯಾ ||ಅಪ||

ಮೈಲಿಗೆ ತನುವಿಗೆ ಮಡಿಯಿನ್ಯಾಕೆ|

ಮೈಲಿಗೆಯಾಗದಾತ್ಮಗೆ ಮಡಿ ಬೇಕೆ|

ಮೈಲಿಗೆ ಮನವನು ತೊಳೆದಿಡು ಜೋಕೆ|

ಮೈಲಿಗೆ ತನುವನು ತೊಳೆದರೆ ಸಾಕೆ ||1||

ಮಲಭಾಂಡವನು ತೊಳೆದರೆ ಏನು||

ಬಳಸಲು ನಿರ್ಮಲವೆನಿಪುದೆ ತಾನು||

ಕೊಳಕಿನದೇಹವ ತೊಳೆದರೆ ಏನು||

ಸುಲಲಿತ ಮಡಿಯೆಂದೆನಿಪುದೆ ತಾನು ||2||

ತನುವನು ತೊಳೆವುದು ಆರೋಗ್ಯಕ್ಕೆ||

ಮನವನು ತೊಳೆವುದು ವೈರಾಗ್ಯಕ್ಕೆ||

ಅನುದಿನಶ್ರವಣವೆ ನಿರ್ಮಲ ಮಡಿಯು||

ಮನನವ ಮಾಳ್ಪುದೆ ಪಾವನ ಮಡಿಯು ||3||

ನಿರ್ಮಲ ಚಿತ್ತವೆ ಮಡಿ ಕಾಣಯ್ಯ|

ದುರ್ಮಲ ಚಿತ್ತವೆ ಮೈಲಿಗೆಯಯ್ಯ||

ಧರ್ಮದ ನಡತೆಯೆ ಮಡಿ ನೋಡಯ್ಯ||

ನಿರ್ಮಲ ಭಾವದ ಮಡಿ ಮಾಡಯ್ಯಾ ||4||

ಸನ್ನುಡಿಯೇ ಮಡಿದುರ್ನುಡಿ ಮೈಲಿಗೆ|

ಸನ್ನಡತೆಯೆ ಮಡಿ ದುರ್ನಡೆ ಮಲಿನಾ||

ಮನ್ನಣೆ ಮಡಿಯಪಮಾನವೆ ಮೈಲಿಗೆ|

ವಂದನೆ ಮಡಿಯು ನಿಂದನೆ ಮೈಲಿಗೆ ||5||

ಕಾಮವೆ ಮೈಲಿಗೆ ನಿಷ್ಕಾಮವೆ ಮಡಿ|

ತಾಮಸ ಮೈಲಿಗೆ ಸಾತ್ವಿಕವೇ ಮಡಿ||

ವ್ಯಾಮೋಹ ಮೈಲಿಗೆ ನಿರ್ಮೋಹವೆ ಮಡಿ|

ಸೋಮೇಶ ಗುರುವರ ಬೋಧೆಯೆ ಮಡಿ ||6||

ಮೈಲಿಗೆಯಿಲ್ಲದ ಮಡಿ ಹರಿಧ್ಯಾನ|

ಮೂಲದ ಬ್ರಹ್ಮಕೆ ನುಡಿ ಸಂಧಾನ||

ಮೂಲಾಧಾರದ ಬ್ರಹ್ಮದ ಜ್ಞಾನ|

ಪೇಳಿದ ನರಹರಿನುಡಿಮಡಿ ಜಾಣ ||7||

ಅನುಮಾನವ್ಯಾಕೆ ತನುವಿನೊಳಗೆ ಶಿವನೆ ಕಾಣುವಾ ||ಪ||

ಮನದಲ್ಲಿ ಜಗದ ಭ್ರಾಂತಿಕಳೆಯೊ ಮಾನವಾ ||ಅಪ||

ತನುವನ್ನು ನಿತ್ಯವೆಂದು ನಂಬಿ ಕೆಡಲು ಬೇಡೆಲೋ|

ಮನದಲ್ಲಿ ಶಿವನ ಧ್ಯಾನ ಬಿಡಲು ಬೇಡೆಲೋ ||1||

ಮಣ್ಣಿಂದ ಬಂದ ಕಾಯ ನೋಡೆ ಮಣ್ಣುಪಾಲಿದು||

ಪುಣ್ಯಾತ್ಮ ಗುರುವಿನಡಿಯ ಸೇರಿ ಬಾಳ್ವುದು ||2||

ರವಿಯನ್ನು ಗೂಗೆ ಎಂದೂ ಕಾಣದಿರುವ ರೀತಿಯು ||

ಶಿವನನ್ನು ಕರ್ಮಿ ಎಂದೂ ಕಾಣಲಾರನು ||3||

ಗುರು ಪಾದದಲ್ಲಿ ಪುಣ್ಯತೀರ್ಥವೆಲ್ಲ ಇರುವವು||

ಸುರರೆಲ್ಲ ಗುರುವಿನಡಿಯ ಸೇವೆಗೈವರು ||4||

ಆಧಾರ ಕಮಲದಲ್ಲಿ ನಡೆವ ಹಂಸ ಪಾದವು||

ವೇದಾಂತ ವೇದ್ಯ ನರಹರೀಂದ್ರ ಪಾದವು ||5||

ಗುರು ಪುತ್ರರಿವರಂತೆ ನೋಡಿ| ದುಷ್ಟ|

ಚರಿತದಲ್ಲಿವರಿಗಾರಿಲ್ಲ ಜೋಡಿ ||ಪ||

ನರ ಪುತ್ರರಿವರನ್ನು ನೋಡಿ| ಎಷ್ಟೂ|

ಪರಿಹಾಸ್ಯ ಮಾಡಿದರು ಸಾಲದಾಯ್ತಾಡಿ ||ಅಪ||

ದುರಿತಕ್ಕೆ ಹೆದರದಂಥವರು| ಘೋರ|

ನರಕಕ್ಕೆ ಗುರಿಯಾಗಿ ಹೋಗುವಂಥವರು||

ಪರರ ಸ್ತ್ರೀಯರ ಕೂಡಿದವರು | ಮುಂದೆ|

ಪರ ಧನವನಪಹರಿಸಿ ಮೋಸ ಮಾಳ್ಪವರು ||1||

ಗುರುನಿಂದೆ ಮಾಡಬಲ್ಲವರು| ನಿತ್ಯ|

ಪರನಿಂದೆಯನು ಮಾಡಿ ಕಾಲ ತಳ್ಳುವರು||

ಕರಣಗಳ ಹರಿಯಬಿಟ್ಟವರು| ಭಕ್ತಿ|

ಪರರಂತೆ ಬಾಹ್ಯಕ್ಕೆ ನಟಿಸುತಿರ್ಪವರು ||2||

ಆಡಬಾರದುದನ್ನೆ ಆಡಿ| ತಾವು|

ಮಾಡಬಾರದ ದುಷ್ಟ ಕರ್ಮಗಳ ಮಾಡಿ||

ಕೂಡಬಾರದ ಜನರ ಕೂಡಿ| ಕೆಟ್ಟ|

ರೂಢಿಯೆಲ್ಲವ ಸತ್ಯವೆಂಬರು ನೋಡಿ ||3||

ತಿನ್ನಬಾರದುದನ್ನೆ ತಿಂದು| ಕೆಟ್ಟ

ದೆನ್ನುವಂಥದನೆಲ್ಲ ಮನಸಾರ ಕುಡಿದು||

ಅನ್ಯಾಯಗಳ ಮಾಡಿ ಮೆರೆದು| ತಾನು|

ತನ್ನನ್ನೆ ಹೊಗಳಿಕೊಳ್ಳುವುದೊಂದು ಬಿರುದು ||4||

ಬಾಯ ಬ್ರಹ್ಮವ ಪೇಳಿತಿಹರು| ತಾವು|

ಮಾಯಮೋಹಕೆ ಸಿಕ್ಕಿ ಬಾಯಿ ಬಿಡುತಿಹರು||

ಕಾಯ ಕರ್ಮವ ಮೆಚ್ಚಿದವರು| ಮುಕ್ತಿ |

ದಾಯಕ ನರಹರಿಯ ನಂಬದಿರ್ಪವರು ||5||

ಕೋಪ ಭಸ್ಮಾಸುರ ರೂಪಾ |ಪರಿ|

ತಾಪ ಕಾರಣವಿದು ಧರ್ಮಕ್ಕೆ ಲೋಪಾ ||ಪ||

ಕೋಪದಿಂದಲೆ ಬಂತು ಪಾಪಾ| ಆ|

ಟೋಪ ಉರಿಹಸ್ತ ಪ್ರತಾಪ ಸ್ವರೂಪಾ ||ಅಪ||

ಹರನಿಂದ ಉರಿಹಸ್ತ ಪಡೆದಾ| ಪುರ|

ಹರನ ಕೊಲ್ಲಲು ಭಸ್ಮ ಕೈಯೆತ್ತಿ ನಡೆದಾ||

ಹರನು ಓಡುತ ಮುಂದೆ ಬಂದಾ|

ಶ್ರೀ ಹರಿಯಿಬ್ಬರಿಗೆ ಮಧ್ಯೆ ತಾ ಬಂದು ನಿಂದಾ ||1||

ಹರಿಜಗನ್ಮೋಹಿನಿಯಾದಾ| ಸುಂ|

ದರಿಯ ನಾಟ್ಯವ ನೋಡಿ ಭಸ್ಮ ಮರುಳಾದಾ||

ತರುಣಿಯನ್ನನು ವರಿಸೆನಲು| ಗೆ|

ದ್ದರೆ ನಾಟ್ಯದೊಳು ನೀನೆ ಪತಿಯೆಂದಳವಳು ||2||

ಭರತ ನಾಟ್ಯಾನಂದ ಮೀರಿ | ಮೈ|

ಮರೆತ ಭಸ್ಮನ ತಲೆಯ ಉರಿಹಸ್ತ ಸೇರಿ||

ದುರುಳ ರಕ್ಕಸ ಭಸ್ಮವಾದಾ| ನರ|

ಹರಿಯಿತ್ತ ಉರಿಹಸ್ತಹರಗಾಯ್ತಾನಂದಾ ||3||

ಏನು ಮಾಡಲೀ ಕರ್ಮವು ಬಿಡದು|

ಜ್ಞಾನಸಿದ್ಧಿಗೆ ದಾರಿಯ ಕೊಡದು ||ಪ||

ತಾನು ಮಾಡಿದ್ದು ತನಗೆಂದು ಬಿಡದು|

ಧ್ಯಾನ ಮಾಡಲು ಮನ ನಿಲ್ಲಗೊಡದು ||ಅಪ||

ಹಿಂದೆ ನಡೆದುದು ಮರವೆ ನುಂಗಿತ್ತು|

ಮುಂದೆ ಬರುವುದು ಅರಿವಾಗದಿತ್ತು||

ಇಂದು ಬಂದದ್ದು ಪ್ರಾರಬ್ಧವಾಯ್ತು|

ಬಂದುದನನುಭವಿಸದೆ ಬಿಡದಾಯ್ತು ||1||

ಮಿಥ್ಯೆಯೆಂಬುದು ತಿಳಿಯದಾಗಿತ್ತು|

ಸತ್ಯವಾದುದು ಹೊಳೆಯದಾಗಿತ್ತು||

ವ್ಯರ್ಥ ಕಾಲವು ಕಳೆದುಹೋಗಿತ್ತು|

ಸತ್ತ ಕೂಡಲೆ ಯಮನ ಸೇರಿತ್ತು ||2||

ಸಂಚಿತಾಗಾಮಿ ಪ್ರಾರಬ್ಧವೆಂದು|

ಹೊಂಚು ಹಾಕುತ್ತ ಸಂಧಿಸಿ ಬಂದು||

ಮಿಂಚಿನಂದದಿ ತೋರಿಯಡಗುವುದು|

ಕೊಂಚವಾದರು ನರಹರಿಯೊಳಿರದು ||3||

ದಯವಿಲ್ಲದಿಹ ಧರ್ಮವೇಕೆ| ನಿ|

ಶ್ಚಯವಿಲ್ಲದಿಹ ಬ್ರಹ್ಮಜ್ಞಾನವಿನ್ಯಾಕೆ ||ಪ||

ನಯವಿಲ್ಲದಿಹ ನೀತಿ ಏಕೆ| ತ|

ನ್ಮಯತೆಯಿಲ್ಲದ ಭಕ್ತಿ ಪೂಜಗಳೇಕೆ ||ಅಪ||

ವಿನಯವಿಲ್ಲದ ವಿದ್ಯೆ ಯಾಕೆ| ನಿ|

ರ್ಗುಣನಾಗದಿರುವಂಥ ವೈರಾಗ್ಯವೇಕೆ||

ತನಯರಿಲ್ಲದ ಬಾಳ್ವೆ ಯಾಕೆ| ಸ|

ದ್ಗುಣವಿಲ್ಲದಿರುವಂಥ ಪತ್ನಿಯಿನ್ನೇಕೆ ||1||

ಮಂತ್ರವಿಲ್ಲದ ಧ್ಯಾನವೇಕೆ| ಸ್ವಾ|

ತಂರ್ತ್ಯವಿಲ್ಲದ ಮನೆಯೊಳಗಿರಲೇಕೆ||

ಶಾಂತಿಯಿಲ್ಲದ ತಪವು ಯಾಕೆ| ನಿ|

ಶ್ಚಿಂತನಾಗದೆ ಗೈವ ಜಪಗಳಿನ್ನೇಕೆ ||2||

ಮರುಗಿ ಮಾಡುವ ದಾನವೇಕೆ| ತಲೆ|

ತಿರುಗಿದಾತಗೆ ಜ್ಞಾನ ಬೋಧೆಯಿನ್ಯಾಕೆ||

ಮರುಳಂಗೆ ಉಪದೇಶವೇಕೆ| ಗುರು|

ನರಹರಿಯ ಸೇರದೆ ಜನ್ಮವಿನ್ನೇಕೆ ||3||

ಸಂಸ್ಕಾರದಿಂದಲೆ ಶಿಲೆ ಲಿಂಗವಹುದು| ಸಂ

ಸ್ಕಾರದೊಳು ನುಡಿ ಮಂತ್ರವಾಗುವುದು ||ಪ||

ಸಂಸ್ಕಾರದಿಂದಲೆ ಜಲ ತೀರ್ಥವಹುದು|

ಸಂಸ್ಕಾರದಿಂದನ್ನ ಸುಪ್ರಸಾದವದು ||ಅಪ||

ನರನು ಸಂಸ್ಕಾರದಿ ಶರಣನಾಗುವನು|

ದುರುಳ ಸಂಸ್ಕಾರದೊಳು ಸಜ್ಜನನಹನು||

ಮರುಳ ಸಂಸ್ಕಾರದಿ ಜಾಣನಾಗುವನು|

ನರಕಿ ಸಂಸ್ಕಾರದಿಂ ಮುಕ್ತನಾಗುವನು ||1||

ವಿಷವಮೃತವಪ್ಪುದು ಸಂಸ್ಕಾರದಿಂದ|

ಕಸವು ರಸವಪ್ಪುದು ಸಂಸ್ಕಾರದಿಂದ||

ಮಸಿ ಚಿತ್ರವಪ್ಪುದು ಸಂಸ್ಕಾರದಿಂದ|

ಪಶು ಪೂಜ್ಯವಪ್ಪುದು ಸಂಸ್ಕಾರದಿಂದ ||2||

ಸಂಸ್ಕಾರದಿಂದ ಜೀವನು ಶಿವನಹನು|

ಸಂಸ್ಕಾರದಿಂದ ಶಿಷ್ಯನು ಗುರುವಹನು||

ಸಂಸ್ಕಾರದಿಂದ ಬದ್ಧನು ಮುಕ್ತನಹನು|

ಸಂಸ್ಕಾರದೊಳು ನರಹರಿಯೊಲಿಯುವನು ||3||

ದೇವರೆ ಕಟ್ಟಿದ ದೇವಾಲಯದೊಳು|

ದೇವರೆಯಿರ್ಪನು ನೋಡಿಲ್ಲಿ ||ಪ||

ದೇವರಿಗಾಗಿಯೆ ಸೇವೆಯ ಸಲ್ಲಿಸಿ| ಜೀವನ ಪಾವನ ಮಾಡಿಲ್ಲಿ ||ಅಪ||

ಸುಂದರವಾದೀ ಮಂದಿರ ದೇಹವು| ಎಂದಿಗು ಶಾಶ್ವತವಲ್ಲಣ್ಣ||

ಸಂಧಿಸಿ ದೇವರ| ವಂದಿಸಿ ದರ್ಶನ| ಹೊಂದದೆ ಸಾರ್ಥಕವಿಲ್ಲಣ್ಣ ||1||

ವಿಶ್ವವ ರಕ್ಷಿಪ| ಈಶ್ವರನಿಲ್ಲಿಯೆ| ಭಾಸ್ವರನಾಗಿಯೆ ಬೆಳಗುವನು||

ನಶ್ವರ ದೇಹವು| ಶಾಶ್ವತವಲ್ಲವು| ನಿಸ್ವಾರ್ಥಿಗೆ ಶಿವ ಕಾಣುವನು ||2||

ಎಲ್ಲೆಲ್ಲಿಯು ಶಿವ| ನಿಲ್ಲದ ಸ್ಥಲವೇ| ಇಲ್ಲವು ಜಗದೊಳು ತಿಳಿಯಣ್ಣಾ||

ಉಲ್ಲಾಸದಿ| ಜಗ| ವಲ್ಲಭ ನರಹರಿ| ಯಿಲ್ಲಿಹ ಪೂಜಿಸಿ ನಲಿಯಣ್ಣಾ ||3||

ವಿದ್ಯೆ ಲೋಕಕೆ ನಿಜವಾದಾಸ್ತಿ|

ವಿದ್ಯೆಯಿಲ್ಲದಿರಲು ಸುಖ ನಾಸ್ತಿ ||ಪ||

ವಿದ್ಯೆಯೊಳು ಪರವಿದ್ಯೆಯೆ ಜಾಸ್ತಿ|

ವಿದ್ಯೆಯಿಂದಲೆನರಗೆ ಪ್ರಶಸ್ತಿ ||ಅಪ||

ವೇದಶಾಸ್ತ್ರ ಪುರಾಣಗಳೆನಿಸೀ|

ನಾದಬಿಂದುವು ಕಳೆಯೊಳು ಜನಿಸೀ||

ಬೋಧೆಯೆನ್ನಿಸಿ ತಾನೆ ಕಂಗೊಳಿಸೀ|

ಹಾದಿಯಾಯಿತುಪರಸುಖವೊಲಿಸೀ ||1||

ಬಂಧು ಬಳಗವು ನರರಿಗೆ ವಿದ್ಯ|

ತಂದೆತಾಯ್ಗಳು ನರರಿಗೆ ವಿದ್ಯ||

ಬಂಧಹರವಿದು ಮಂತ್ರಕೆ ಸಾಧ್ಯ|

ಎಂದಿಗಾದರು ಸುಜನಕೆ ವೇದ್ಯ ||2||

ಜ್ಞಾನವೆನ್ನಿಸಿ ಬೆಳಗುತ್ತಲಿಹುದು|

ಧ್ಯಾನ ಮಾತ್ರದಿ ಹೊಳೆಯುತ್ತಬಹುದು||

ಜ್ಞಾನ ಕರ್ಮ ಸಮುಚ್ಚಯವಹುದು|

ಮೌನಿ ನರಹರಿ ಮೆಚ್ಚಲಾಗುವುದು ||3||

ಭದ್ರಕಾಳಿಯ ಶುದ್ಧಯೋಗದ|

ಮುದ್ರೆಯೆಂಬುದೆ ನಿದ್ರೆಯು ||ಪ||

ಇದ್ದ ಲೋಕವನಿದ್ದ ತನು ವನು|

ಭದ್ರಪಡಿಸುವಳೀಕೆಯು ||ಅಪ||

ಕ್ಷುದ್ರವಾಗಿಹ ಬುದ್ಧಿ ಮನಗಳು |

ಸುದ್ದಿಯಿಲ್ಲದೆ ಯಿದ್ದುವು||

ರುದ್ರಲೀಲೆಯಿಂದಿದ್ದು ಇಲ್ಲದೊ|

ಲಿದ್ದು ಲಯವಾಗಿದ್ದುವು ||1||

ನಿದ್ರೆಯೊಳು ಸುಳ್ಳಾದ ತನುವನು|

ಭದ್ರವೆಂದೆನ ಬೇಡಿರೀ||

ಶುದ್ಧ ಜ್ಞಾನಾನಂದ ಮಾತ್ರದೊ|

ಳಿದ್ದನಾತ್ಮನು ನೋಡಿರಿ ||2||

ಭದ್ರಕಾಳಿಯ ಬದ್ಧ ತನುವನು|

ಇದ್ದು ಇಲ್ಲೆನಿಸಿದ್ದಳು||

ಸಿದ್ಧಿಪುರುಷನ ಬಾಧ್ಯ ನರಹರಿ|

ರುದ್ರನಹುದೆನಿಸಿದ್ದಳು ||3||

ಅಂಗಡಿಯಿಲ್ಲಿದೆ ನೋಡಣ್ಣಾ| ಶಿವ|

ನಂಗಡಿಯಲ್ಲಿಯೆ ಕೂಡಣ್ಣಾ ||ಪ||

ಅಂಗವೆ ಅಂಗಡಿಯಹುದಣ್ಣಾ| ಭವ|

ಭಂಗವ ಮಾಡಲು ಬಹುದಣ್ಣಾ ||ಅಪ||

ಇಲ್ಲಿಯೆ ಮಾಡಿರಿ ವ್ಯಾಪಾರ| ನೀ|

ವಿಲ್ಲಿಯೆ ಹೂಡಿರಿ ವ್ಯವಹಾರ||

ಸುಳ್ಳೇಯೆನ್ನಿರಿ ಸಂಸಾರ| ಶಿವ|

ನಲ್ಲಿದೆ ಮುಕ್ತಿಯ ಸುಖಸಾರ ||1||

ಎಲ್ಲಾ ಲಾಭವು ತನಗೆಂದಾ| ತ|

ನ್ನಲ್ಲೇ ಯೆಲ್ಲವು ಇಹುದೆಂದಾ||

ಸುಳ್ಳೇ ಲೋಭವು ಯಾಕೆಂದಾ| ತ|

ನ್ನಲ್ಲೇ ಕೊಳ್ಳಲು ಬೇಕೆಂದಾ ||2||

ಪಂಚೇಂದ್ರಿಯಗಳ ವ್ಯಾಪಾರ| ಕೈ|

ಮಿಂಚಲು ನಷ್ಟವು ನಿಜ ಪೂರಾ||

ಸಂಚಿತ ವಿಷಯಂಗಳ ಸರಕು| ನಿ|

ರ್ವಂಚನೆ ವ್ಯಾಪಾರವು ಚುರುಕು ||3||

ನಷ್ಟವೆಯಿಲ್ಲದ ವ್ಯಾಪಾರ| ಬಲು|

ಕಷ್ಟವೆಯಿಲ್ಲದ ವ್ಯವಹಾರ||

ಶಿಷ್ಟಗೆ ಲಾಭವು ವಿಸ್ತಾರ| ಬಲು|

ದುಷ್ಟಗೆ ನಷ್ಟವು ಬಲು ಭಾರ ||4||

ಬಿಚ್ಚುವುದಂಗಡಿ ಜಾಗ್ರದೊಳು| ತಾ|

ಮುಚ್ಚುವುದಂಗಡಿ ಸುಪ್ತಿಯೊಳು||

ಹೆಚ್ಚಿನ ಲೆಕ್ಕವು ಸ್ವಪ್ನದೊಳು| ಶಿವ|

ಮೆಚ್ಚುವ ನರಹರಿ ಮಂತ್ರದೊಳು ||5||

ಎಲ್ಲರು ಜಾಗ್ರದಿ ಸಂಸಾರಿಗಳು|

ಎಲ್ಲರು ನಿದ್ರಿಸೆ ಸನ್ಯಾಸಿಗಳು

||ಪ||

ಎಲ್ಲರು ಸ್ವಪ್ನದಿ ಸೆರೆಯಾಳುಗಳು|

ಬಲ್ಲವರಾದರು ಜ್ಞಾನಿಗಳು

||ಅಪ||

ಮೂರವಸ್ಥೆಯೊಳು ಮೂವರು ಜೀವರು|

ತೋರಿಯಡಗುವುದ ತಿಳಿದವರು||

ಮೂರವಸ್ಥೆಗಳ ಸಾಕ್ಷಿಯೆನಿಸುವರು|

ತಾರಕ ಮಂತ್ರದಿ ನಿಂತವರು

||1||

ಮೂರೇಳ್‍ಸಾವಿರದಾರು ನೂರು ಜಪ|

ಕಾರಣ ಬ್ರಹ್ಮದ ಅರಿವೆನಿಪ||

ತಾರಕ ಮಂತ್ರ ವಿಚಾರವಿದೇ ತಪ|

ಧಾರಣ ಯೋಗಿಯೆ ನಿಜ ಮುನಿಪಾ

||2||

ನಿದ್ರೆಯೊಳೆಚ್ಚರವಿದ್ದು ಜಪಿಸುವವ|

ಶುದ್ಧಮುದ್ರೆಯೊಳು ತಾನಿರುವಾ||

ಬದ್ಧ ವಿಷಯಸುಖ ಹೊದ್ದದೆ ಸತ್ಯವ|

ಸಿದ್ಧಿಸಿನರಹರಿಯೊಳು ಬೆರೆವಾ

||3||

ಸ್ವಾರ್ಥವಳಿದರೇ ಪರಮಾರ್ಥವಾಗುವುದೆಂದು ತಿಳಿಯೋ ಜೀವಾತ್ಮಾ ||ಪ||

ವ್ಯರ್ಥ ಮಾಡದೆ ಕಾಲ ಸತ್ಯದರ್ಥವ ನೀನು ತಿಳಿಯೋ ಜೀವಾತ್ಮ ||ಅಪ||

ಜನ್ಮಂಗಳೊಳು ನರಜನ್ಮ ಶ್ರೇಷ್ಠವು ಎಂದು ತಿಳಿಯೋ ಜೀವಾತ್ಮ||

ಕರ್ಮವಂ ಬಿಡದೆ ನಿಷ್ಕರ್ಮಿಯಾಗುವ ಭಾವ ತಿಳಿಯೋ ಜೀವಾತ್ಮ ||1||

ಇದ್ದುದು ಇದ್ದಂತೆ ಸಿದ್ಧಾಂತದನುಭಾವ ತಿಳಿಯೋ ಜೀವಾತ್ಮ||

ಬದ್ಧತ್ವವಳಿದಾಗ ಶುದ್ಧನಾಗುವೆನೆಂದು ತಿಳಿಯೋ ಜೀವಾತ್ಮ ||2||

ಶರಣರಲ್ಲಿಯೆ ಸೇರಿ ಪರತತ್ವ ಪರಮಾರ್ಥ ತಿಳಿಯೋ ಜೀವಾತ್ಮ||

ಕರಣ ಶುದ್ಧಿಯೆ ನರಹರಿ ಪಾದಸೇವೆಯು ತಿಳಿಯೋ ಜೀವಾತ್ಮ ||3||

ಮೂಗುತಿಯಿಲ್ಲದ ರಂಡೇ|

ನೀ ಗತಿಯೆಂದರೆ ಸೆಟಕೊಂಡೆ ||ಪ||

ಬೀಗಿತಿಯೆನ್ನಿಸಿ ಬಂದಿಹಮುಂಡೇ||

ಹೋಗುತ ಸುಡುಗಾಡನ್ನೆ ಕಂಡೆ ||ಅಪ||

ನಿನ್ನನು ಕಂಡವರೆಲ್ಲಾ|

ನಿನ್ನನೆ ಮೋಹಿಸುತಿಹರಲ್ಲಾ||

ನಿನ್ನನು ನಂಬಿದ ಮಾನವರೆಲ್ಲಾ||

ಮಣ್ಣನು ಮುಕ್ಕಿಯೆ ಹೋಗುವರಲ್ಲಾ ||1||

ನೋಡಲು ಸುಂದರಿ ನೀನು|

ಕೂಡಲು ತೊಂದರೆ ಬಿಡದಿನ್ನು||

ಆಡುತ ಆಡುತ ಓಡುವೆ ನೀನು|

ಮಾಡಿದ ಮೋಸವನರಿತೆನು ನಾನು ||2||

ಕಾಲಾಧೀನಳು ನೀನು|

ಕಾಲಾತೀತನು ನಾ ನಿನ್ನ||

ಮೇಳನವಾಗದು ನಿನಗೆನಗೇನು||

ಲೀಲೆಯು ನರಹರಿಗೀ ಜಗ ತಾನು ||3||

ಕಾಯಕವೆ ಯನಗೆ ಕೈಲಾಸಯನ್ನ |

ಕಾಯಕವು ಶಿವ ನಿನ್ನ ಲೀಲಾವಿಲಾಸ ||ಪ||

ಕಾಯ ಕರ್ಮಗಳೆಂಬ ದೋಷಾ| ನಿತ್ಯ|

ಕಾಯಕದೊಳಳಿದೆನಗಾಯ್ತು ಸಂತೋಷ ||ಅಪ||

ಪರಿಚರ್ಯವಿರಬೇಕು ಯನಗೇ| ನಿನ್ನ|

ಪರಿಚರ್ಯದಿಂದ ಪಾವನನಪ್ಪೆ ಕೊನೆಗೆ||

ಪರಿಭವ ಭಯ ನಿವಾರಣೆಗೆ| ಯನ್ನ|

ಶರೀರ ಕರ್ಮವನೆಲ್ಲ ವೊಪ್ಪಿಸಿದೆ ನಿನಗೆ ||1||

ಯನ್ನ ಕಾಯಕ ನಿನ್ನ ಸೇವಾ| ಎಂದು|

ನನ್ನಿಯಿಂದಲೆ ನಂಬಿ ಮಾಳ್ಪ ಸದ್ಭಾವಾ||

ಎನ್ನೊಳುದಿಸಲು ಜೀವ ಭಾವಾ| ತಾನೆ|

ಶೂನ್ಯವಪ್ಪುದು ಧನ್ಯ ನಾನಪ್ಪೆ ದೇವಾ ||2||

ನಾನು ಮಾಡುವುದೆಲ್ಲ ನಿನಗೆ| ಎಂಬ

ಜ್ಞಾನ ಬಂದರೆ ಕರ್ಮ ಬಾಧೆಯಿಲ್ಲೆನಗೇ ||

ನಾನು ಸೇರುವೆನು ನಿನ್ನೊಳಗೆ| ಮುಂದೆ|

ನಾನಿಲ್ಲ ನೀನೊಬ್ಬ ನರಹರಿಯಿಳೆಗೆ ||3||

ಮೌನವೇ ಶಿವಜ್ಞಾನ ಕೇಶವ|

ಧ್ಯಾನ ಬ್ರಹ್ಮನು ಎನಿಸುವಾ ||ಪ||

ಮೌನ ಜ್ಞಾನವು ಧ್ಯಾನವೆಲ್ಲವು|

ತಾನೆ ನಿರ್ಗುಣ ಬ್ರಹ್ಮವು ||ಅಪ||

ಬೋಧೆ ಪುರಹರ| ವೇದ ಮುರಹರ| ನಾದಬ್ರಹ್ಮನು ಸುರುಚಿರ||

ಬೋಧೆ ವೇದವು| ನಾದವಾದವು| ಆದಿ ಪರತರ ಬ್ರಹ್ಮವು ||1||

ನಾದಬ್ರಹ್ಮನು| ಬಿಂದುವಿಷ್ಣುವು| ಆದಿ ಕಳೆ ಮಹರುದ್ರನು||

ನಾದ ಬಿಂದುವು ಕಳೆಗಳೆಲ್ಲವು| ಆದಿ ನಿಷ್ಕಳ ಬ್ರಹ್ಮವು ||2||

ಸತ್ತು ಬ್ರಹ್ಮನು ಚಿತ್ತು ವಿಷ್ಣುವು| ಮತ್ತೆ ಸುಖವೇ ರುದ್ರನು||

ಸತ್ತು ಚಿತ್ತಾನಂದವೆಂಬಿವು| ನಿತ್ಯ ನರಹರಿ ಪೂರ್ಣವು ||3||

ಸಖನೇ ಪೇಳುವೆನು| ಸುಖದ ಮಾರ್ಗವನು||

ಗೆಳೆಯಾ| ಮುಕುತಿಯ ಸುಖವನು ಪಡೆ ನೀನು

||ಪ||

ಆವ ಕಾಲದೊ| ಳಾವ ತಾಣದೊ|

ಳಾವ ರೂಪವ ತಾಳುತ|

ಸಾವು ಬರುವುದೊ| ಕಾಣಬಾರದು|

ದೇವರನು ನೆನೆಯೀಗಲೆ

||1||

ಕಳೆದವೆಷ್ಟೋ| ಹಳೆಯ ಜನ್ಮದ|

ಕೊಳೆಯ ಹೊತ್ತಿದೆ ಮನವಿದು||

ತಿಳಿಯಲಾರದ| ತನ್ನ ಹಿತವನು|

ಬೆಳಸುತಿರುವುದು| ಮಲಿನವ

||2||

ಕಾಲವೆಂಬುದ| ಮೂಲ್ಯವಾದುದು|

ಕಳೆದ ಮೇಲದು| ಸಿಕ್ಕದು||

ಬಾಳು ಹಸನು| ಮಾಡಿಕೊಳ್ಳದೆ|

ಬಾಳುವುದು ತರವಲ್ಲವು

||3||

ಹಿತವರಾರೀ ಜಗದೊಳಿಲ್ಲವು|

ಮತಿಯ ಕೆಡಿಸುವರಲ್ಲದೆ||

ಪತಿತ ಪಾವನ ಗುರುವಿನಂಘ್ರಿಯ|

ಸತತ ನಂಬಿದರಾಗದೆ

||4||

ಗುರುವೆ ಆಪದ್ಭಂಧುವೆನ್ನುತ|

ಲರಿತು ಮೃತ್ಯುವ ಗೆಲ್ಲುತ||

ಪರಮ ಗುರುನರ| ಹರಿಯ ಸೇರುತ

ಪರಮ ಪದವಿಯ ಪೊಂದುತ

||5||

ಕಳೆದುಹೋಯಿತು ಕಾಲ| ತಿಳಿಯದಾಯಿತು ಮೂಲ|

ಉಳಿಯಲಾರದು ಸ್ಥೂಲ ತನುವ ಬಲಾ

||ಪ||

ಬಳಲಿ ಯಿಂದ್ರಿಯಜಾಲ| ನಿಲಲಾರೆ ಶಿರಿಲೋಲ|

ಒಲಿದು ನೀ ಬರಲೀಗ ಅನುಕೂಲ

||ಅಪ||

ಅತಿ ಮೋಹ ತುಂಬಿದ್ದೆ| ಹಿತರೆಂದು ನಂಬಿದ್ದೆ|

ಸತಿಪುತ್ರರೆನಗೆ ಗತಿಯೆಂದಿದ್ದೆ||

ಗತಿಹೀನ ನಾನಾದೆ| ವ್ರತಗೇಡಿಯೆನಿಸಿದೆ|

ಪತಿತನಾದೆನಗೆ ನೀ ಗತಿಯಾದೆ

||1||

ನಿಲ್ಲಲಾರದು ಕಾಯ| ಗೆಲ್ಲಲಾರೆನು ಮಾಯ|

ಬಲ್ಲಿದನು ನೀನೆಂದೆನೆಲೆ ಜೀಯಾ||

ಕೊಲ್ಲು ಕಾಪಾಡು ನಿ| ನ್ನಲ್ಲೆ ಮೊರೆ ಹೊಕ್ಕಿರುವೆ|

ಒಲ್ಲೆನೆಂದೆನದೆ ಕಾಪಾಡಯ್ಯಾ

||2||

ಮರವೆ ಬಾರದ ಮುನ್ನ| ಶರೀರ ಬೀಳದ ಮುನ್ನ|

ಕರಣಂಗಳಡಗಿ ಹೋಗದ ಮುನ್ನ||

ಪರಮ ಪಾವನ ನಿನ್ನ| ಸ್ಮರಣೆ ನಾಲಗೆಯಲ್ಲಿ|

ಬರುವಂತೆ ನರಹರಿಯೆ ಪೊರೆಯೆನ್ನ

||3||

ಇಂದು ನಾಳೆಯೆಂದು ಕಾಲ ಸಂದೀತವ್ವಾ| ಸಾವು| ಬಂದೀತವ್ವಾ ||ಪ||

ಮುಂದೆ ಕಾಲನಿಂದ ಜೀವ ನೋಂದೀತವ್ವಾ| ಹುಟ್ಟಿ| ನಿಂದೀತವ್ವಾ ||ಅಪ||

ಹೊಟ್ಟೆ ಬಟ್ಟೆ ಬೆಟ್ಟವಾಗಿ ಬಿಟ್ಟೀತವ್ವ| ದುಃಖ ಹುಟ್ಟೀತವ್ವಾ||

ಕೆಟ್ಟ ಆಸೆ ಮುಟ್ಟಿ ಕರ್ಮ ತಟ್ಟೀತವ್ವಾ| ಧರ್ಮಾ| ಕೆಟ್ಟೀತವ್ವಾ ||1||

ಮಾಡಿಬೇಡಿ ಕಾಡಿ ಮಣ್ಣು ಕೂಡೀತವ್ವಾ| ಮುಂದೆ| ಓಡಿತವ್ವಾ|

ಜಾಡು ಬಿಟ್ಟು ಓಡಿ ಪಾಪಮಾಡೀತವ್ವಾ| ಯಮನ ನೋಡಿತವ್ವಾ ||2||

ಭೋಗ ಮಾಡಿ ರೋಗ ಕೂಡಿ ಸಾಗಿತವ್ವಾ| ಶಿವಗೆ| ಬಾಗಿತವ್ವಾ||

ಯೋಗಿ ನರಹರೀಂದ್ರ ಪಾದ| ತಾಗಿತವ್ವಾ| ಮುಕ್ತಿ| ಯಾಯಿತವ್ವಾ ||3||

ಜ್ಞಾನಿಯ ಗುಣ ಬೇರೆ| ಲೋಕದೊಳು ಅ|

ಜ್ಞಾನಿಯ ಗುಣ ಬೇರೆ ||ಪ||

ಜ್ಞಾನಿ ಮೋಹವ ಪಡನ| ಜ್ಞಾನಿ ಮೋಹವ ಬಿಡನು||

ಜ್ಞಾನಿ ಕರುಣಾಮಯನ| ಜ್ಞಾನಿ ಹಿಂಸಾಪ್ರಿಯನು ||1||

ಮರುಳು ಮಾತುಗಳಾಡಿ| ಕೊರಳ ಕೊಯ್ವನಜ್ಞ||

ಪರಮ ಸತ್ಯವನಾಡಿ| ದುರಿತ ಕಳೆವ ಸುಜ್ಞ ||2||

ವಾದ ಭೇದಗಳಿಲ್ಲ| ಖೇದ ಮೋದಗಳಿಲ್ಲ||

ಸಾಧುವಾದವ ಜ್ಞಾನಿ| ಭೇದ ಪರನಜ್ಞಾನಿ ||3||

ಗೋಮುಖದ ವ್ಯಾಘ್ರನು| ತಾಮಸನ ಜ್ಞಾನಿಯು||

ರಾಮಣೀಯಕ ಸತ್ಯ| ಪ್ರೇಮಿ ಸುಜ್ಞಾನಿಯು ||4||

ದ್ವೇಷವುಳ್ಳವನಜ್ಞ| ಮೋಸ ಮಾಳ್ಪವನಜ್ಞ ||

ಈಶಭಕ್ತನು ಜ್ಞಾನಿ| ಶ್ರೀಶ ನರಹರಿ ಜ್ಞಾನಿ ||5||

ನಾದಾನು ಸಂಧಾನ ಮಾಡಿ| ವರ್ಣ|

ಭೇದವೆಲ್ಲವ ದೂರಮಾಡಿ ||ಪ||

ಆದಿಯಂತ್ಯದಿ ಶೂನ್ಯ| ವಾದ ಬ್ರಹ್ಮವ ಕೂಡಿ||

ವೇದಾಂತದೊಳಗೆ ಚಿ| ನ್ನಾದದಲ್ಲಿಯೆ ಮೂಡಿ ||ಅಪ||

ವರ್ಣವೆಲ್ಲಕೆ ಮೂಲವಾಗಿ| ಸರ್ವ|

ವರ್ಣಂಗಳನುಕೂಲವಾಗಿ||

ವರ್ಣಾಂತ್ಯದೊಳು ತೋರಿ| ಪೂರ್ಣವೆನ್ನಿಸಿ ಸಾರಿ||

ವರ್ಣನೆಗೆ ಮೀರಿ ನಿ| ರ್ವರ್ಣ ಸರ್ವಾಧಾರಿ ||1||

ಸರ್ವ ಕಾರಣವಾದ ಬಿಂದು| ವರ್ಣ|

ಸರ್ವ ವ್ಯಾಪಕವಾಗಿ ಬಂದು||

ನಿರ್ವಹಿಸಿ ಪ್ರಣವಾಗ್ರ| ನಿರ್ವರ್ಣಚಿದ್ಬಿಂದು||

ಉರ್ವಿಯೊಳು ಪ್ರತಿಧ್ವನಿಸಿ | ಸಾರ್ವುದನರಿತಿಂದು ||2||

ಸಾಕ್ಷಿ ಚೇತನವೆ ಚಿತ್ಕಳೆಯು| ಸರ್ವ||

ಸಾಕ್ಷಿಬ್ರಹ್ಮದೊಳಿದರ ನೆಲೆಯು||

ಅಕ್ಷರಾತ್ಮಕವಾಗಿ| ಲಕ್ಷ್ಯ ಸಾಧಕ ಯೋಗಿ||

ತಕ್ಷಣವೆ ನರಹರಿಯ| ನೀಕ್ಷಿಸುವ ನಿಜವಾಗಿ ||3||

ಸತ್ಯ ಶೋಧನೆ ಮಾಡಿರೋ| ಶ್ರೀಗುರುನಿಂದ

ನಿತ್ಯ ಬೋಧನೆ ಕೇಳಿರೋ ||ಪ||

ಪ್ರತ್ಯಕ್ಷವಾಗಿರ್ಪ| ಪ್ರತ್ಯಗಾತ್ಮನ ಕೂಡಿ||

ಸತ್ಯಾನುಭವ ಮಾಡಿ| ನಿತ್ಯಾನಂದದೊಳಾಡಿ ||ಅಪ||

ಕಳೆದುಹೋಗುವ ಕಾಯವಾ | ನಂಬದೆ ಕೊನೆಗೆ|

ಕಳೆದುಳಿಮೆಯಾಗಿರುವಾ||

ಇಳೆಯಲ್ಲಿ ಚರಿಸುತ್ತ| ಕಳಹಸಂನೆನಿಸುತ್ತ |

ಬೆಳಗುವ ಬ್ರಹ್ಮವ | ತಿಳಿದು ತನ್ಮಯರಾಗಿ ||1||

ಮಂತ್ರರೂಪದೊಳಿರ್ಪುದು| ನಿರ್ಗುಣ ಬ್ರಹ್ಮ|

ತಂತ್ರ ತೋರುತ ಬರ್ಪುದು||

ಯಂತ್ರ ದೇಹದೊಳು ಸ್ವ| ತಂತ್ರವಾಗಿರುವುದು|

ಚಿಂತನದಿ ತೋರುವುದು | ಷಾಂತ ಸಾಂತವೆಯಿದು ||2||

ಶೂನ್ಯವಾಗಿರುತಿರ್ಪುದು| ತನಗೇ ನೊಂದು|

ಅನ್ಯವಾಗದೆ ತೋರ್ಪುದು||

ಶೂನ್ಯ ನರಹರಿ ಪಾದ| ವನ್ನು ಮುಟ್ಟಿರುವಂಥ||

ಪುಣ್ಯವಂತರು ಎಲ್ಲ| ಧನ್ಯರೆಂದೆನಿಸುವರು ||3||

ಬಡವನೆ ಲೋಕಕೆ ಉಪಕಾರಿ| ಕಡು| ಬಡವನೆ ಎಲ್ಲರ ಸಹಕಾರೀ ||ಪ||

ಬಡವನ ದುಡಿಮೆಯೆ ಸುಖಕಾರಿ| ಜಗ|

ದೊಡೆಯನಿಗೀತನೆ ಪೂಜಾರಿ ||ಅಪ||

ಕಷ್ಟವಿದೆನ್ನದೆ ದುಡಿಯುವನು| ಅತಿ|

ನಷ್ಟವು ಬಂದರು ಸಹಿಸುವನು||

ಇಷ್ಟಾನಿಷ್ಟಗಳೆಲ್ಲವನು ಶಿವ|

ನಿಷ್ಠೆಯೊಳೀತನು ವಹಿಸುವನು ||1||

ತ್ಯಾಗಿಯೆ ಬಡವನು ಯೋಗಿಯು ಬಡವನು|

ಭೋಗ ವಿರಾಗಿಯು ತಾನಹನು||

ಆಗುಹೋಗುಗಳ ನೀಗಿರುವವನು|

ಬಾಗದೆ ದುಃಖಕೆ ತಾನಿಹನು ||2||

ಬಡವರು ಮುನಿಗಳು ಜ್ಞಾನಿಗಳೆಲ್ಲರು|

ಬಡವರು ಭಕ್ತರು ಯತಿವರರು|

ಬಡತನವೇ ವೈರಾಗ್ಯದ ಭಾಗ್ಯವು|

ಬಡತನ ನರಹರಿಗತಿ ಪ್ರಿಯವು ||3||

ದರಿದ್ರ ನಾರಾಯಣ| ನೇ ಲೋಕದ|

ದರಿದ್ರ ಹಿಂ| ಗಿಸಬಲ್ಲವನು|

ಪರಾರ್ಥವೀತನ ಪ್ರಯತ್ನವಾಗಿದೆ|

ಶರೀರ ಶ್ರಮವನು ಲಕ್ಷಿಸನು ||4||

ಸಿರಿವಂತಗೆ ಸುಖ ಸೌಭಾಗ್ಯಂಗಳು|

ದೊರೆವವು ಬಡವನ ದುಡಿಮೆಯೊಳು||

ನಿರಹಂಕಾರವೆ ಬಡವನ ಸಂಪದ|

ನರಹರಿ ಪೇಳಿದ ಸದ್ಬೋಧಾ ||5||

ಶಿವಾ ಯೆನ್ನಬಾರದೇ| ಓನ್ನಮ ಶಿವಾಯೆನ್ನಬಾರದೇ|

ಶಿವಮಂತ್ರವ ನುಡಿ| ದ ವಿವೇಕವಕಡಿ

||ಪ||

ಶಿವ ಶಿವಯೆನ್ನಲು | ಭವಹರವಾಗಲು

||ಅಪ||

ಪಾವನ ಮಾಡುವದು| ಮನವನು|

ದೇವನೊಳಿರಿಸುವುದು|| ಜೀವನ ದುಃಖ ಗ|

ಳಾವುವು ನಿಲ್ಲವು|| ಕೇವಲ ಸೌಖ್ಯವ| ನೀವುದು ನಿತ್ಯವು

||1||

ಏನಾದರೆ ಏನು| ಮಂತ್ರದ|

ಧ್ಯಾನದೊಳಿರು ನೀನು || ಆನಂದವು ಶಿವ|

ಧ್ಯಾನದೊಳಿರ್ಪುದು || ಸ್ವಾನುಭವದ ನೆಲೆ| ತಾನೇ ಬರ್ಪುದು

||2||

ನೀನೇ ಶಿವನಾಗಿ| ಪರ ಶಿವ|

ಜ್ಞಾನವು ಸ್ಥಿರವಾಗಿ|| ಹೀನ ಕರ್ಮಫಲ|

ತಾನೇ ಪೋಗಲು ಶ್ರೀನರಹರಿ ಪದ| ನೀನೇ ಸೇರಲು

||3||

ದೇಹ ವಿಚಾರವ ಮಾಡಮ್ಮಾ| ಸಂ|

ದೇಹವ ಬಿಟ್ಟರೆ ಪಾಡಮ್ಮಾ

||ಪ||

ದೇಹವೆ ಮೋಹದ ಗೂಡಮ್ಮಾ| ನಿ|

ರ್ಮೋಹವೆ ಮುಕ್ತಿಗೆ ಜಾಡಮ್ಮಾ

||ಅಪ||

ಗುರುವಿನ ಗುಟ್ಟನು ತಿಳಿಯಮ್ಮಾ| ನೀ|

ನರಿವಿನ ಮೆಟ್ಟಲು ಏರಮ್ಮಾ||

ಮರವೆಯನೆಲ್ಲವ ಕಳೆಯಮ್ಮ| ಶಿವ|

ನಿರವಿನೊಳಗೆ ಸುಖ ತಳೆಯಮ್ಮಾ

||1||

ಹಂಸನ ಶೋಧಿಸಿ ನೋಡಮ್ಮಾ| ಸೋ|

ಹಂ ಸಂಪಾದನೆ ಮಾಡಮ್ಮಾ||

ಹಿಂಸಾ ಮಾರ್ಗವು ಕೇಡಮ್ಮಾ| ದೈ|

ವಾಂಶದಿ ನೀನೇ ಕೂಡಮ್ಮಾ

||2||

ತ್ವಂತದಸಿಯೆ ನರಹರಿಯಮ್ಮಾ| ಸೋ|

ಹಂ ತತ್ವಾರ್ಥಕೆಸರಿಯಮ್ಮಾ||

ಸಂತರ ಸಂಗದಿ ಮೆರೆಯಮ್ಮಾ|

ಪ್ರಣವಾಂತದಿ ಶಿವನೊಳು ಬೆರೆಯಮ್ಮಾ

||3||

ಮಂತ್ರವೆ ತಾರಕವಾಗಿಹುದು | ಶಿವ|

ಮಂತ್ರವಿ ಚಾರಕೆಸಾಗಿಹುದು ||ಪ||

ಮಂತ್ರವೆ ವೇದಗಳೆನಿಸಿಹುದು| ಸ|

ನ್ಮಂತ್ರದಿ ಶಾಸ್ತ್ರವು ಜನಿಸಿಹುದು ||ಅಪ||

ಮಂತ್ರದೊಳಗೆ ಶಿವನಿರುತಿಹನು| ಈ|

ಮಂತ್ರದಿ ಜೀವನು ಬೆರೆತಿಹನು||

ಮಂತ್ರದಿ ಶಿವ ಜೀವೈಕ್ಯವನು|

ಪಡೆದಂಥ ಮಹಾತ್ಮನೆ ಗುರುವರನು ||1||

ದೇಹದೊಳಗೆ ಸಂಜನಿಸುವುದು| ಸಂ|

ದೇಹವನೇ ಕೊನೆಗೊಳಿಸುವುದು||

ಕೋಹಂ ಭಾವವನಳಿಸುವುದು| ನಿಜ|

ಸೋಹಂ ಭಾವವ ನಿಲಿಸುವುದು ||2||

ಬ್ರಹ್ಮವೆ ತಾ ಬಯಲಾಗುವುದು |ನಿ|

ಷ್ಕರ್ಮವನ್ನು ಸಾಧಿಸಿ ಸಾಗುವುದು||

ಸಮ್ಯಜ್ಞಾನದ ಮಂತ್ರವಿದು| ಗುರು|

ಬ್ರಹ್ಮನು ನರಹರಿ ಪೇಳಿದುದು ||3||

ಬೇಡಬೇಡ ಕಾಮ್ಯಫಲವ | ಮಾಡಬೇಡ ಕಾಮ್ಯಜಪವ ||ಪ||

ಕೂಡಬೇಡ ಕ್ಯಾಮ್ಯಯೋಗ| ಕೇಡು ನೋಡಾ ಜನ್ಮ ಭೋಗ ||ಅಪ||

ಆಸೆಯಿಂದ ಮಾಡಿದುದೆಲ್ಲ| ಈಶ ತೃಪ್ತಿಗಾಗಲಿಲ್ಲ||

ಈಶಗೆಂದು ಮಾಡಿದುದೆಲ್ಲ| ಲೇಸು ಮುಕ್ತಿಗಾಯಿತಲ್ಲ ||1||

ನಾನು ಮಾಳ್ಪೆನೆಂಬಭಿಮಾನ| ನಾನಾ ಜನ್ಮಕಿದು ಸೋಪಾನ||

ತಾನೆ ಶಿವನು ಕರ್ತನೆಂಬ| ಜ್ಞಾನಮುಕ್ತಿ ಮಾರ್ಗ ನಂಬ ||2||

ಫಲದೊಳಾಸೆ ಜನ್ಮಕ್ಕಾಯ್ತು| ಫಲದ ತ್ಯಾಗ ಮುಕ್ತಿಗಾಯ್ತು||

ಸುಲಭ ಜ್ಞಾನ ಯೋಗ ತಿಳಿಯೆ| ಒಲಿವ ನರಹರಿವಾದವಳಿಯೆ ||3||

ಜ್ಞಾನೇಂದ್ರಿಯ ಕರ್ಮೇಂದ್ರಿಯ ಕೂಡಿ|

ಸ್ಥಾನವು ಜಿಹ್ವಾವಾಕ್ಕಿನ ಜೋಡಿ ||ಪ||

ತಾನಾಯ್ತಿಲ್ಲಿಯೆ ಮಂತ್ರವು ನೋಡಿ|

ಜ್ಞಾನಕರ್ಮ ಸಂಯೋಗವ ಮಾಡಿ ||ಅಪ||

ಕರ್ಮಜ್ಞಾನಗಳೈಕ್ಯವೆ ಮಂತ್ರ|

ಮರ್ಮವನರಿತರೆ ಸ್ವಾತಂತ್ರ‍್ಯ|

ನಿರ್ಮಲ ಶಿವಜೀವರಿಗಹುದೈಕ್ಯ|

ಬ್ರಹ್ಮದ ತೇಜವೆ ಶೃತಿ ವಾಕ್ಯ ||1||

ಸಗುಣ ಬ್ರಹ್ಮವೆ ಮಂತ್ರದ ನುಡಿಯು|

ಸೊಗಸಿನ ನಿರ್ಗುಣದೊಳು ಕೊನೆಯು||

ಅಗಣಿತ ಬ್ರಹ್ಮಾಂಡಂಗಳನೆಲ್ಲಾ|

ಝಗಝಗಿಸುತ ಬೆಳಗಿಹುದಲ್ಲಾ ||2||

ಬ್ರಹ್ಮದಿ ಹುಟ್ಟಿತು ಬ್ರಹ್ಮವ ಮುಟ್ಟಿತು|

ನಿರ್ಮಲವೆನಿಸಿದ ಮಂತ್ರವಿದು||

ಕರ್ಮವ ಹರಿಯಿತು ಧರ್ಮವ ಬೆರೆಯಿತು|

ಸಮ್ಮತ ನರಹರಿ ತಂತ್ರವಿದು ||3||

ಹಂಸನ ಮಂತ್ರವೆ ತತ್ವಮಸಿ ಸೋ

ಹಂ ಸನ್ಮಂತ್ರವೆ ತ್ವಂತದಸೀ

||ಪ||

ಹಿಂಸೆಯನಳಿವುದೆ ತತ್ವಮಸೀ| ನಿ|

ಸ್ಸಂಶಯ ಭಾವವೆ ತ್ವಂತದಸೀ

||ಅಪ||

ಬ್ರಹ್ಮವನರಿವುದೆ ತತ್ವಮಸೀ| ಪರ|

ಬ್ರಹ್ಮದಿ ಬೆರೆವುದೆ ತ್ವಂತದಸೀ||

ಬ್ರಹ್ಮವು ನೀನೆನೆ ತತ್ವಮಸೀ| ನೀ|

ಬ್ರಹ್ಮವೆಯೆಂಬುದೆ ತ್ವಂತದಸೀ

||1||

ವೇದದ ವಾಕ್ಯವೆ ತತ್ವಮಸೀ| ಗುರು|

ಬೋಧಾ ಸೌಖ್ಯವೆ ತ್ವಂತದಸೀ||

ಸಾಧನ ಮಾರ್ಗವೆ ತತ್ವಮಸಿ| ಪರ|

ನಾದದಿ ನಿಲ್ವುದೆ ತ್ವಂತದಸೀ

||2||

ಭಾವದ ಶುದ್ಧಿಯೆ ತತ್ವಮಸೀ| ಅನು|

ಭಾವದ ಸಿದ್ಧಿಯೆ ತ್ವಂತದಸೀ||

ಸೇವಾ ಭಾವವೆ ತತ್ವಮಸೀ| ನಿಜ|

ಕೈವಲ್ಯವೆಯೀತ್ವಂತದಸೀ

||3||

ದ್ವೈತವನಳಿವುದೆ ತತ್ವಮಸೀ| ಅ|

ದ್ವೈತವ ಬಲಿವುದೆ ತ್ವಂತದಸೀ||

ದ್ವೈತಾದ್ವೈತದ ಭೇದವೆಯಿಲ್ಲ | ಸ|

ನಾತನ ನರಹರಿ ಬೋಧಶೃತಿ

||4||

ಬೇಡಿದ ಭಿಕ್ಷವ ನೀಡಮ್ಮಾ| ಶಿವ|

ನಾಡುವ ಆಟವ ನೋಡಮ್ಮಾ ||ಪ||

ರೂಢಿಸಿ ಭಕ್ತಿಯ ನಡೆಯಮ್ಮ| ಶಿವ|

ನೀಡುವ ವರಗಳ ಪಡೆಯಮ್ಮಾ ||ಅಪ||

ಸುಡುಗಾಡನು ಸೇರಿದನಮ್ಮಾ| ಜಗ|

ದೊಡನಾಟವ ಮೀರಿದನಮ್ಮಾ||

ಒಡಲೆಂಬುದೆ ಸುಡುಗಾಡಮ್ಮ| ಜಗ|

ದೊಡೆಯನ ಲೀಲೆಯ ನೋಡಮ್ಮಾ ||1||

ಜ್ಞಾನದ ಭಿಕ್ಷವ ಬೇಡುವನು| ಅ| ಜ್ಞಾ

ನವ ತಾ ನೀಡಾಡುವನು|

ಮೌನದ ಲಕ್ಷ್ಯವ ಕೂಡುವನು| ನಿಜ|

ಧ್ಯಾನದೊಳಗೆ ತಾನಾಡುವನು ||2||

ಈತನು ನರಹರಿ ನೋಡಮ್ಮಾ| ಸುಖ|

ದಾತನ ನಿನ್ನೊಳು ಕೂಡಮ್ಮಾ||

ಆತನ ಬೋಧೆಯ ಕೇಳಮ್ಮಾ| ಗುರು|

ನಾಥನ ಸೇವಿಸಿ ಬಾಳಮ್ಮ ||3||

ಬೈದವರೆನ್ನಯ ಬಂಧುಗಳು| ಸ್ತುತಿ|

ಗೈದವರೆನ್ನಯ ಶತೃಗಳು ||ಪ||

ಬೈದವರೊಯ್ದರು ಪಾಪವನು | ಸ್ತುತಿ|

ಗೈದವರೊಯ್ದರುಪುಣ್ಯವನು ||ಅಪ||

ಎನ್ನನು ಕೊಂಡಾಡಿದ ಜನರು| ಘನ|

ಪುಣ್ಯವ ಕೊಂಡೊಯ್ಯುತಲಿಹರು||

ಎನ್ನನು ಬರಿಗೈ ಮಾಡಿದರು| ಸುಖ|

ದುನ್ನತಿಯನು ತಾವ್ ಪಡೆದಿಹರು ||1||

ಅವಗುಣ ವಿರುತಿರಲೆನ್ನೊಳಗೆ | ಹಳಿ|

ಯುವರೈ ನಿಂದಕರಿಳೆಯೊಳಗೆ||

ಇವರೇ ಯನಗುಪಕಾರಿಗಳು| ಪಾ|

ಪವ ಕೊಂಡೊಯ್ಯುವ ಬಂಧುಗಳು ||2||

ವಂದಿಸುವವರಿಗೆ ಪುಣ್ಯಗಳು| ಅತಿ

ನಿಂದಿಸುವವರಿಗೆ ಪಾಪಗಳು||

ಒಂದೆನಗುಳಿಯದೆ ಪೋಗಿರಲು| ನಾ|

ನಿಂದೆನು ನರಹರಿ ಪಾದದೊಳು ||3||

ಅರಿವೇ| ಇದು| ಅರಿವೇ ||ಪ||

ಇದು| ಅರಿವಲ್ಲ ವಿಷಯದಿ| ಬೆರೆದು ಮೈಮರೆವುದು ||ಅಪ||

ದೇಹದೊಳಗಿದ್ದರು| ದೇಹ ತಾನಲ್ಲೆಂದು||

ಊಹಿಸಿ ತಿಳಿಯದೆ| ಮೋಹಪಡುತಿರುವುದು ||1||

ತನಗೆ ತೋರುವುದೆಲ್ಲ| ತನಗನ್ಯವೆನ್ನುತ||

ತನಗೆ ಗೋಚರಿಸದ| ತನ್ನ ತಾನೆನ್ನದೆ ||2||

ಪೊರಗಣಿಂದ್ರಿಯಗಳಿಂ| ದರಿತ ವಿಷಯಗಳೆಲ್ಲ||

ನೆರೆ ಸತ್ಯವಲ್ಲೆಂದು| ಅರಿಯದೀ ಬುದ್ಧಿಯು ||3||

ತೋರುವೀ ಜಗವೆಲ್ಲ| ಸ್ಥಿರವಾದುದೆನ್ನುತ||

ಧಾರಾಳವಾಗಿ ಸಂ| ಸಾರದೊಳಿರುವುದು ||4||

ಶರೀರವು ಸ್ಥಿರವೆಂದು| ಕರಣಗಳೆ ನಿಜವೆಂದು||

ನಿರುತವು ನಂಬಿ ತಾ| ನಿರುವಂಥ ಅರಿವಿದು ||5||

ಮನಬುದ್ಧಿಗಳಲಿ ಸಂ| ಜನಿಸಿ ತೋರುವ ತೋರ್ಕೆ||

ತನಗಾಗು ತಿರುವುದೆಂ| ದೆಣಿಸುವ ತಿಳಿವಿದು ||6||

ಇದಿರಲ್ಲಿ ಕಾಣುವು| ದಿದು ತನ್ನದೆನ್ನುತ||

ಮದದಲ್ಲಿ ಬೆರೆತು| ಬಂಧದಿ ಕೂಡುತಿರುವುದು ||7||

ಸಾರವಾಗಿಹುದು ಸಂ| ಸಾರವೆಂದೆನ್ನುತ||

ಪಾರಮಾರ್ಥಕೆ ದೂರ| ಸಾರಿ ತಾನಿರುವುದು ||8||

ತನ್ನ ತಾನೆ ಮರೆದು| ಅನ್ಯವೆಲ್ಲವನರಿದು||

ಅನ್ಯಾಯದಲಿ ಬೆರೆದು| ಕುನ್ನಿಯಂತಿರುವುದು ||9||

ಗುರುವನ್ನು ನರನೆಂದು| ಪರಮಾತ್ಮನಿಲ್ಲೆಂದು||

ನರಹರಿಯ ಪಾದಕ್ಕೆ| ಶರಣೆನ್ನದಿರಲಿಕ್ಕೆ ||10||

ಗುರುನಾಥ ಪಾಲಿಸೋ| ಮೊರೆಯನ್ನು ಲಾಲಿಸೋ ||ಪ||

ಶರಣರಿಗಾಪ್ತ ಬಂಧುವು| ಕರುಣ ಸಿಂಧುವು||

ಭವದ ಬಂಧವು|| ಪರಿಹಾರವಾಯಿತೀಗ ಕರಣ ಸಂಬಂಧವು ||ಅ|ಪ||

ಪೃಥ್ವಿಯ ತತ್ವದಲ್ಲಿಯೆ| ಸತ್ತುವೆನಿಸಿಯೇ|

ನಿತ್ಯನೆಲೆಸಿಯೆ || ತತ್ವಾರ್ಥವನ್ನು ತೋರಿ| ಮುಕ್ತಾತ್ಮನೆನ್ನಿಸಿ ||1||

ಜಲದಲಿ ನೀನೆ ಸೇರಿದೆ| ಸುಲಭನೆನಿಸಿದೆ|

ಒಲುಮೆ ತೋರಿದೆ|| ತಿಳಿವಾಗಿ ಚಿತ್ತುವಾಗಿ|

ನೆಲಸಿದ್ದೆ ನುಡಿಯಲಿ ||2||

ಅಗ್ನಿಯ ಸೇರಿ ನಿಲ್ಲುತ| ಪ್ರಜ್ಞೆಯೀಯುತ|

ಮಗ್ನವಾಗುತ| ಸುಜ್ಞಾನಾನಂದ ರೂಪ|

ಸೌಜ್ಞೆಯಲಿ ಮೆರೆಯುವೆ ||3||

ಮಾರುತ ಸ್ಥಾನ ಹೊಂದುತ| ತೋರಿ ನಿಲ್ಲುತ|

ಸಾರಿ ಚೆಲ್ಲುತ|| ಮೀರಿ ನಿತ್ಯಾತ್ಮನಾಗಿ|

ತೋರಿದೆ ಸೌಖ್ಯವ ||4||

ಗಗನವ ತುಂಬಿಕೊಳ್ಳಲು | ಬಿಗಿದು ನಿಲ್ಲಲು|

ಸೊಗಸು ಹೊಂದಲು|| ನಿಗಮ ಪರಿಪೂರ್ಣ

ನಾಗಿ| ಬಗೆಗೊಂಡು ತೋರುವೇ ||5||

ಆರನೆ ನೆಲೆಯ ಸೇರುವೆ | ಆರು ಮೀರುವೆ |

ಮೂರು ತೋರುವೆ|| ಧೀರ ಶ್ರೀಗುರುವರೇಣ್ಯ |

ನರಹರಿಯೆಂದೆನಿಸುವೆ ||6||

ಓಂಕಾರಮಾತೆ| ಝೇಂಕಾರ ಗೀತೆ ||ಪ||

ಶಂಕರಿ ವರ್ಣಾ| ಲಂಕಾರಿ ಬಾರಮ್ಮ ||ಅಪ||

ಮೂರು ವರ್ಣಗಳ| ಸೇರಿ ವೇದಗಳ||

ತೋರುತ್ತ ಬರುವೇ| ಸಾರುತ್ತಲಿರುವೇ ||1||

ವರ್ಣಗಳ ಸೇರಿ| ವರ್ಣನೆಗೆ ಮೀರಿ||

ಪೂರ್ಣತ್ವ ತೋರಿ| ನಿರ್ಣಯ ಧಾರಿ ||2||

ನಾದಾಂತ್ಯದೊಳಗೆ| ವೇದಾಂತ ಬೆಳಗೆ||

ಆದ್ಯಂತ ಕಳೆಗೆ | ಆಧಾರ ಇಳೆಗೆ ||3||

ಪ್ರಣವವೆಂದೆನಿಸಿ| ಗುಣ ಮೂರು ಜನಿಸಿ||

ಧ್ವನಿ ಪೂರ್ಣವೆರಸಿ| ನೆನಹನುತ್ತರಿಸೀ ||4||

ಪರತತ್ವ ಧ್ವನಿಸಿ| ಪರನಾದ ವೆನಿಸೀ||

ವರವರ್ಣಜನಿಸೀ| ನರಹರಿಯೆನಿಸೀ ||5||

ಯಾವ ಕಣ್ಣಲಿ ನೋಡಿದೆ ಬ್ರಹ್ಮ| ಬಿಡೆ ನಿನ್ನ ಜೀವದ ಹಮ್ ||ಪ||

ದುರ್ಗಮ ವಾದಾ| ವರ್ಗತ್ರಯವ||

ನಿಗ್ರಹ ಮಾಡಿದ | ಭರ್ಗನು ತಾನು ||ಅಪ||

ಕಣ್ಣಿಗೆ ಕಾಣನು ಶಿವನು|

ಕಣ್ಣೊಳು ನಿಂತೇ ನೋಡುತಲಿಹನು||

ಕಣ್ಣಿಗೆ ಕಂಡುದ ಭ್ರಮಿಸಿದ ಜೀವ| ಅ

ನ್ಯವಿದೆನ್ನುತಲರಿತನು ಶಿವನು ||1||

ಸಗುಣವು ಶಿವನೊಳಗಿಲ್ಲ|

ಸಗುಣವನೆಲ್ಲವನಾಡಿಸಬಲ್ಲಾ ||

ಸಗುಣದ ಹಂಗಿನೊಳಿದ್ದವ ಜೀವ|

ಸಗುಣಕೆ ಸಾಕ್ಷಿಯು ಶಿವನು ||2||

ಸಾಕಾರವು ಶಿವಗಿಲ್ಲಾ|

ಸಾಕಾರವ ತಾ ಕೂಡಿರಬಲ್ಲಾ||

ಸಾಕಾರವ ಮೋಹಿಸುವನು ಜೀವ|

ಸಾಕೆನ್ನುತ ಕಡೆ ಮಾಡಿದನು ||3||

ವಿಷಯವು ಶಿವನಲ್ಲಿಲ್ಲ|

ವಿಷಯಾನಂದವ ಹೊಂದಿರಬಲ್ಲಾ ||

ವಿಷಯದ ವಾಸನೆ ಜೀವನಿಗಾಯ್ತು|

ವಿಷಯಾತೀತನು ನಿರ್ಗುಣ ಶಿವನು ||4||

ಭೂತವ ಭೂತಕೆ ಬೆರೆಸಿ|

ಭೌತಿಕ ಕಾಯವ ಶಿವನೇ ರಚಿಸಿ||

ಭೌತಿಕ ಕಾಯವ ನಂಬಿದ ಜೀವಾ|

ಭೂತಾಂತರ್ಗತ ನರಹರಿ ಶಿವನು ||5||

ಜಯಭೇರೀ ನಾದವ ಕೇಳಿ|

ಭವಭಯಕೇ ಬಂದಿದೆ ದಾಳಿ ||ಪ||

ಮಾಯಾ ಸಂಶಯ ಸೀಳಿ|

ತನಗಾಯಿತು ಬ್ರಹ್ಮದ ಕೇಳಿ ||ಅಪ||

ತನುವಿದು ಕ್ಷಣ ಭಂಗುರವು| ಈ|

ಮನ ಮಾಯಾಸಿಂಗರವು|

ಧನವಿದು ಆಶಾಗರವು| ಗುರು|

ವಿನ ಬೋಧಾ ಡಂಗುರವು ||1||

ನುಡಿಯೇ ನಿಗಮಾಗಮವು|

ಸ| ನ್ನುಡಿಯೇ ಶಿವಸಂಗಮವು||

ನುಡಿಯೇ ಮುಕ್ತಿಯ ಕ್ರಮವು| ಸ|

ನ್ನಡೆಯೇ ನಿಜ ಸಂಭ್ರಮವು ||2||

ಸಗುಣವೆ ಜಗ ರೂಪಾಗಿ| ಯುಗ|

ಯುಗದಿಂದಿರುವುದು ಸಾಗಿ ||

ಸಗುಣವು ನಿರ್ಗುಣವಾಗಿ| ತಾ|

ನೊಗೆವುದು ಬ್ರಹ್ಮದಿ ಪೋಗಿ ||3||

ತೋರುವುದೆಂದಿಗು ಇರದು| ಈ|

ತೋರುವುದೆಲ್ಲಾ ಬರಿದು||

ಕಾರಣ ಬ್ರಹ್ಮವನರಿದು|ನೀ|

ಸೇರುವುದದರೋಳ್ಬೆರೆದು ||4||

ತಾನೆಂಬುದು ಬೇರಿಲ್ಲಾ|

ಜ್ಞಾನಕೆ ಶಿವ ದೂರಿಲ್ಲ||

ಆನಂದಾತ್ಮವೆಯೆಲ್ಲಾ| ಸುವಿ|

ಧಾನವ ನರಹರಿ ಬಲ್ಲಾ ||5||

ನಡೆಯೊಳಗಿಹುದಾಚಾರ| ಸ|

ನ್ನುಡಿಯಲ್ಲಿದೆ ಸುವಿಚಾರ||

ನಡುವಿಹುದನು ಭವಸಾರ| ಈ|

ಬೆಡಗೇ ಶೃತಿ ವಿಸ್ತಾರ ||6||

ಮೂಲಾಧಾರದ ಬ್ರಹ್ಮ| ಶಿವ|

ಲೀಲಾಪಾರದ ಧರ್ಮ||

ಕಾಲಾತೀತದ ಮರ್ಮ| ಮತಿ|

ತಾಳಲು ಜಾರಿತು ಕರ್ಮ ||7||

ಉಬ್ಬಿದ ಗಂಗಾನದಿಯ| ತಡೆ|

ದಬ್ಬರಿಸುತ ಶರನಿಧಿಯ||

ನಿಬ್ಬರ ನಿಲ್ಲಿಸಿ ತಡಿಯ| ತಾ|

ನೊಬ್ಬನೆ ಸೇರಿದ ಒಡೆಯ | |8||

ನರಹರಿಯೆನ್ನಲು ಪಾಪ| ಪರಿ|

ಹರಿಸುವ ನಿಜ ಸಲ್ಲಾಪ

ಹರಹರಯೆನೆ ನಿರ್ಲೇಪ| ನಿ|

ರ್ಧರವಾಯಿತು ನಿಜ ರೂಪ

ಜಯಭೇರೀ ನಾದವ ಕೇಳಿ|

ಭವಭಯಕೇ ಬಂದಿದೆ ದಾಳಿ

||ಪ||

ಮಾಯಾ ಸಂಶಯ ಸೀಳಿ|

ತನಗಾಯಿತು ಬ್ರಹ್ಮದ ಕೇಳಿ

||ಅಪ||

ತನುವಿದು ಕ್ಷಣ ಭಂಗುರವು| ಈ|

ಮನ ಮಾಯಾಸಿಂಗರವು|

ಧನವಿದು ಆಶಾಗರವು| ಗುರು|

ವಿನ ಬೋಧಾ ಡಂಗುರವು

||1||

ನುಡಿಯೇ ನಿಗಮಾಗಮವು|

ಸ| ನ್ನುಡಿಯೇ ಶಿವಸಂಗಮವು||

ನುಡಿಯೇ ಮುಕ್ತಿಯ ಕ್ರಮವು| ಸ|

ನ್ನಡೆಯೇ ನಿಜ ಸಂಭ್ರಮವು

||2||

ಸಗುಣವೆ ಜಗ ರೂಪಾಗಿ| ಯುಗ|

ಯುಗದಿಂದಿರುವುದು ಸಾಗಿ ||

ಸಗುಣವು ನಿರ್ಗುಣವಾಗಿ| ತಾ|

ನೊಗೆವುದು ಬ್ರಹ್ಮದಿ ಪೋಗಿ

||3||

ತೋರುವುದೆಂದಿಗು ಇರದು| ಈ|

ತೋರುವುದೆಲ್ಲಾ ಬರಿದು||

ಕಾರಣ ಬ್ರಹ್ಮವನರಿದು|ನೀ|

ಸೇರುವುದದರೋಳ್ಬೆರೆದು

||4||

ತಾನೆಂಬುದು ಬೇರಿಲ್ಲಾ| ಸು|

ಜ್ಞಾನಕೆ ಶಿವ ದೂರಿಲ್ಲ||

ಆನಂದಾತ್ಮವೆಯೆಲ್ಲಾ| ಸುವಿ|

ಧಾನವ ನರಹರಿ ಬಲ್ಲಾ

||5||

ನಡೆಯೊಳಗಿಹುದಾಚಾರ| ಸ|

ನ್ನುಡಿಯಲ್ಲಿದೆ ಸುವಿಚಾರ||

ನಡುವಿಹುದನು ಭವಸಾರ| ಈ|

ಬೆಡಗೇ ಶೃತಿ ವಿಸ್ತಾರ

||6||

ಮೂಲಾಧಾರದ ಬ್ರಹ್ಮ| ಶಿವ|

ಲೀಲಾಪಾರದ ಧರ್ಮ||

ಕಾಲಾತೀತದ ಮರ್ಮ| ಮತಿ|

ತಾಳಲು ಜಾರಿತು ಕರ್ಮ

||7||

ಉಬ್ಬಿದ ಗಂಗಾನದಿಯ| ತಡೆ|

ದಬ್ಬರಿಸುತ ಶರನಿಧಿಯ||

ನಿಬ್ಬರ ನಿಲ್ಲಿಸಿ ತಡಿಯ| ತಾ|

ನೊಬ್ಬನೆ ಸೇರಿದ ಒಡೆಯ |

|8||

ನರಹರಿಯೆನ್ನಲು ಪಾಪ| ಪರಿ|

ಹರಿಸುವ ನಿಜ ಸಲ್ಲಾಪ

ಹರಹರಯೆನೆ ನಿರ್ಲೇಪ| ನಿ|

ರ್ಧರವಾಯಿತುನಿಜರೂಪ

||9||

ಮೂವರು ಮೂರ್ತಿಗ| ಳೀಯುವ ಸ್ಫೂರ್ತಿಯ |

ಭಾವವ ತಿಳಿದರೆ ತಾನೇ ಶಿವಾ

||ಪ||

ಪಾವನನಾತನು| ಶ್ರೀಗುರುನಾಥನು|

ಮೂವರ ತಿಳಿದವ ತಾನೆ ಶಿವಾ

||ಅಪ||

ನಾದವೆ ಬ್ರಹ್ಮನು| ಬಿಂದುವೆ ವಿಷ್ಣುವು|

ಆದಿಯ ಕಳೆಯಲಿ ತಾನೇ ಶಿವ||

ಬೋಧೆಯೊಳಗೆ ಸಂ| ಪಾದಿಸಿ ಮೂಲವ|

ಸಾಧಿಸಿದಾತನು ತಾನೆ ಶಿವಾ

||1||

ನಾದ ಸರಸ್ವತಿ| ವೇದವೆ ಶ್ರೀಸತಿ|

ಬೋಧಾ ಸ್ವರೂಪಿಣಿ ಪಾರ್ವತಿಯು||

ನಾದದೊಳಗೆ ಪರ| ನಾದದಿ ಮೂವರು|

ಭೇದವೆ ಇಲ್ಲದೆ ಕೂಡುವರು |

|2||

ಅಕಾರ ಬ್ರಹ್ಮನು| ಉಕಾರ ವಿಷ್ಣುವು|

ಮಕಾರ ರುದ್ರನು ಕೂಡುತಲಿ||

ವಿಕಾರವಿಲ್ಲದ ಪ್ರಕಾರ ಬೆಳಗುವ|

ಸ್ವಕಾಂತಿಯರ್ಧದ ಮಾತ್ರೆಯಲಿ

||3||

ನರಹರಿ ಬ್ರಹ್ಮನು| ನರಹರಿ ವಿಷ್ಣುವು|

ನರಹರಿ ರುದ್ರನುಯೆನ್ನುತಲೀ||

ನಿರುತವು ನಂಬಿದ| ಶರಣರು ಮುಕ್ತಿಯ |

ಪರಮಾನಂದವ ಪೊಂದುವರು

||4||

ಹಿಡಿಯಬಾರದೆ ಶ್ರೀಗುರು ಪಾದ|

ಪಡೆಯಬಾರದೆ ನಿರ್ಮಲ ಬೋಧ

||ಪ||

ದೃಢದ ಮುಕ್ತಿಗೆ ಸಾಧನ ವಾದ|

ಕಡು ಸುಖಾಮೃತವಾ ಪರನಾದ

||ಅಪ||

ಹರನ ಶಿರದೊಳು ಪಾವನಗಂಗೆ|

ಹರಿಯ ಪದದೊಳು ಜೀವನಗಂಗೆ||

ಹರಿವುದಾತ್ಮನೊಳಂತರಗಂಗೆ|

ಹರಿವುದೈ ಕರ್ಮವಾಕಾಶ ಗಂಗೆ

||1||

ಈಡೆ ಪಿಂಗಳೆ ನಡುವೆ ಸುಷುಮ್ನ|

ನಾಡಿ ಮೂರರೊಳಾಡುವ ಬ್ರಹ್ಮ||

ಕೂಡಲಾದುದು ತನುವಿನ ಧರ್ಮ||

ಜಾಡು ತಿಳಿದವಗಿಲ್ಲವು ಕರ್ಮ

||2||

ಗಂಗೆಯಮುನೆ ಸರಸ್ವತಿ ನದಿಯ|

ಸಂಗಮದೊಳಿರ್ಪ ಗುರುಸನ್ನಿಧಿಯ||

ತುಂಗ ಪ್ರಣವದ ನಾದದ ತುದಿಯ|

ಇಂಗಿತವೆ ಕೊಡುವುದು ನೆಮ್ಮದಿಯ

||3||

ಏಳುಕೋಟಿ ಸುಮಂತ್ರದ ಪಠಣೆ|

ಕೀಲಿನಲ್ಲಿದೆ ಬ್ರಹ್ಮದ ಘಟನೆ||

ಮೂಲವೇ ಶಿವಜೀವ ಸಂಘಟನೆ|

ತಾಳಿದರೆ ಮುರಿವುದು ಭವನಟನೆ

||4||

ಸಾಧು ಸಂತರ ಪಾದಕ್ಕೆ ನಮಿಸು|

ವೇದಸಾರವ ಕೇಳಿ ಸಂಭ್ರಮಿಸು||

ನಾದಲೀನದೊಳಾತ್ಮನ ರಮಿಸು|

ಭೇದ ರಹಿತ ನರಹರಿಯ ಸಂಗಮಿಸು

||5||

ಎಲ್ಲರನು ಮುಟ್ಟಿ ಬಂದಿಹನೀತ|

ಇಲ್ಲ ಈತಗೆ ಮೈಲಿಗೆ ನಾತ||

ಎಲ್ಲರೊಳಗಾಡಿ ಬಂದನು ಈತ|

ಸಲ್ಲವೈ ಸಂಗ ದೋಷಕತೀತ

||6||

ಅಮರ ದುಂದುಭಿ ನಾದವ ಮಾಡು|

ಅಮೃತ ಬಿಂದುವ ಸವಿ ಸವಿದಾಡು||

ಅಮಿತ ಕಳೆಯುಳ್ಳ ಬ್ರಹ್ಮವ ನೋಡು|

ರಮಿಸು ವಾ ನರಹರಿಯನ್ನು ಕೂಡು

||7||

ದೇಹವಾತ್ಮರಿಗೆ ಸಂವಾದ| ತನು|

ಮೋಹಿತರಿಗೆ ಸತ್ಯಬೋಧಾ ವಿನೋದಾ ||ಪ||

ಸೋಹಂ ಸ್ವರೂಪ ನಿರ್ವಾದಾ| ಸಂ|

ದೇಹವಿಲ್ಲದೆ ಮುಕ್ತಿಯಹುದಿದು ಸ್ವಾದಾ ||ಅಪ||

ಯನ್ನ ಕೈಬಿಡಬೇಡ ಪತಿಯೇ| ನಾ |

ನಿನ್ನಾರ ಸೇರಲಿ ಯನಗಿಲ್ಲ ಗತಿಯೇ ||

ಅನ್ಯಾಯ ನಿನಗೆ ಸಮ್ಮತಿಯೇ | ನಾ |

ನಿನ್ನ ನಂಬಿದುದಕ್ಕೆ ಯನಗೆ ದುರ್ಗತಿಯೇ ||1||

ನಶ್ವರಳಾಗಿರ್ಪೆ ನೀನು| ನೋಡು|

ಶಾಶ್ವತ ವಸ್ತುವಾಗಿರ್ಪೆನು ನಾನು||

ವಿಶ್ವ ನಶ್ವರವೆಂಬೇನೀನು ಪರ |

ಮೇಶ್ವರ ನಿರ್ಮಾಣದಿಂ ಬಂದೆ ನಾನು ||2||

ನಿನ್ನ ಕೂಡಿದರೇನು ಬೆಲೆಯು| ನಾನು|

ನಿನ್ನ ಕೂಡಿದ ಮೇಲೆ ಉಂಟಾಯ್ತು ಹೊಲೆಯು||

ನನ್ನ ಕೂಡಿದರುಂಟು ಸುಖವು| ನೀನು |

ನನ್ನ ಬಿಟ್ಟರೆ ಲೋಕ ಸುಖವೆ ವಿಮುಖವು ||3||

ನಿನ್ನ ಕೂಡಿಯೆ ನಾನು ಕೆಟ್ಟೆ | ಶಿವ |

ನೆನ್ನದೆ ನಿನ್ನ ಮೋಹದಿ ಮತಿಗೆಟ್ಟೆ ||

ನನ್ನ ಕೂಡಿಯೆ ಧ್ಯಾನ ಮಾಡು| ಶಿವನೆ|

ಎನ್ನಿಸಿ ಸುಜ್ಞಾನ ಸಂಪತ್ತು ಕೂಡು ||4||

ಬೇರೆ ಇದ್ದರೆ ನಾನು ಶುದ್ಧ| ನಿನ್ನ

ಸೇರಿದ ಕೂಡಲೆ ನಾನಾದೆ ಬದ್ಧ||

ಮೇರೆಯಿಲ್ಲದ ದುಃಖದಿಂದ| ನಾನು|

ದೂರವಾಗಲು ನಿನ್ನ ಬಿಡುವುದೆ ಚಂದ ||5||

ಯಾರ ಕಲಿಸಿದರಿಂಥ ಬುದ್ಧಿ| ನನ್ನ|

ಸೇರಿ ನೀ ಪಡೆದಿರ್ಪೆ ಸುಖದ ಸಮೃದ್ಧಿ||

ಬೇರೆ ನೀನಿರಲೇನು ವೃದ್ಧಿ| ಪಡೆಯ|

ಲಾರೆ ಬಿಡು ಬಿಡು ಬೇಗ ನಿನ್ನ ದುರ್ಬುದ್ಧಿ ||6||

ನಲ್ಲೆ ನಿನ್ನಯ ಸಂಗವೊಲ್ಲೆ| ನಿ|

ನ್ನಲ್ಲೆ ಕೂಡಲು ದುಃಖವೆಂದು ನಾ ಬಲ್ಲೆ||

ಚಲ್ವೆಯೆನ್ನುವ ಮೋಹದಲ್ಲೆ| ನಾ|

ನಿಲ್ಲೆ ನರಕದ ದುಃಖವಾಂತಿರ್ಪೆನಲ್ಲೆ ||7||

ಬಿಂದು ಮಾತ್ರದ ಸುಖವ ತೋರಿ| ನೀ|

ತಂದೆ ಪರ್ವತದಂಥ ದುಃಖ ವೈಯಾರಿ ||

ಮುಂದೆ ಮುಪ್ಪಿನೊಳು ವಿಕಾರಿ| ನಿ|

ರ್ಬಂಧ ರೋಗವನಿತ್ತು ಕಾಡುವೆ ಮಾರಿ ||8||

ನಿನ್ನ ಕೂಡಿರೆ ಬಂತು ಸಾವು| ನಿ|

ನ್ನನ್ನು ಕೂಡಲು ಬಂತು ತಾಪಗಳ ನೋವು||

ನಿನ್ನಾಸೆ ನರಕಕ್ಕೆ | ಠಾವು| ನಾ|

ನಿನ್ನು ನರಹರಿ ಪಾದ ಸೇರುವುದೆ ನಿಜವು ||9||

ಸಗುಣ ಸಾಕಾರ| ಬ್ರಹ್ಮಾಂ| ಡಂಗ| ಳ ಗಣಿತಾಪಾರ

||ಪ||

ಸಗುಣ ಸಾಕಾರವು| ವೊಗೆದುದೀ ದೇಹವು|

ಜಗದ ತೋರಿಕೆಯುಂಟು| ಮಿಗಿಲು ಮಾಯಾಗಂಟು

||ಅಪ||

ಜಗದಿ ತುಂಬಿಹವು| ಗುಣಧರ್ಮಗಳು| ಸಗುಣವೆನಿಸುವುವು||

ಸಗುಣ ನಿರಾಕಾರ| ಸೊಗಸಿ ಸೂಕ್ಷ್ಮದ ದೇಹ||

ಬಗೆಬಗೆಯ ತೋರ್ಕೆಯಿಂ| ದುಗಮವಾಗಿರುವುದು

||1||

ಸಗುಣ ನಿರ್ಗುಣಕೇ| ಆಶ್ರಯನಾಗಿ| ಜಗದೀಶ ಬೆಳಗೇ||

ಸಗುಣವು ಸಾಕಾರ| ಹೊಗುತ ನಿರ್ಗಮವಾಗಿ||

ಮುಗಿದು ನಿರ್ಗುಣದಲ್ಲಿ | ಸಗುಣ ಲಯವಪ್ಪುದು

||2||

ಗಮನ ನಿರ್ಗಮನಾ| ಮೂಲಾಧಾರ| ರಮಣೀಯ ಸದನಾ||

ಸಮನಿಸಿ ಶಿವಜೀವ| ರಮಳೈಕ್ಯವಾಗುವ|| ಕ್ರಮದಿಂದ

ಸಗುಣ | ವಿ| ರಮಿಸಿ ನಿರ್ಗುಣವಹುದು

||3||

ಎಲ್ಲ ಧರಿಸಿಹುದು| ನಿರ್ಗುಣ ಬ್ರಹ್ಮ| ಎಲ್ಲಿ ಕಾಣಿಸದು||

ಎಲ್ಲವನರಿಯುತ್ತ | ಎಲ್ಲವ ಸೇರುತ್ತ| ಎಲ್ಲ

ನಿರ್ಗುಣಗೈದು| ಉಲ್ಲಾಸವಾಂತಿಹುದು

||4||

ಸುಪ್ತಿಯೊಳಗೆಲ್ಲಾ| ಸಾಕಾರಗಳು| ಲುಪ್ತವಿಹವಲ್ಲಾ|

ಸುಪ್ತವಾಗಿದೆ ಸಗುಣ| ಲಿಪ್ತವಾಗದೆ ಆತ್ಮ|

ತೃಪ್ತಿಯಾ ನಿರ್ಗುಣದಿ | ಜ್ಞಪ್ತಿ ಮಾತ್ರದೊಳಿರ್ಪ

||5||

ಸಾಕಾರ ಸಗುಣ| ಜಾಗ್ರವ ಸೇರ| ಬೇಕಾದ ತಾಣ||

ಸೋಕಿ ನಿರಾಕಾರ| ದೈಕ್ಯ ಸಗುಣ ಬೀರ| ಲೇ

ಕಾಂತ ಸ್ವಪ್ನವಿ| ದಾಕಾರ ಮಾತ್ರವು

||6||

ಕಾಯವಿಲ್ಲದುದು| ನಿರ್ಗುಣ ಬ್ರಹ್ಮ| ಮಾಯೆಯಲ್ಲವಿದು |

ಕಾಯ ನಿರ್ಮಿತ ಮಾಡಿ| ಕಾಯವನೊಡಗೂಡಿ|

ಕಾಯ ಲಯಗೈದುನಿ| ರ್ಮಾಯ ನರಹರಿಯಾಯ್ತು

||7||

ಯೋಗವಾಹವೇ| ಪವನ| ಯೋಗವಲ್ಲವೇ ||ಪ||

ಯೋಗ ಕುಂಭಕದೊಳು ಶಿವನ ಸೇರಿತಲ್ಲವೇ ||ಅಪ||

ಬಿಂದು ರೂಪದಾ| ಸೊನ್ನೆ| ಯೊಂದು ಇರ್ಪುದಾ|

ನಿಂದು ನೋಡೆ ಪೂಜ್ಯವೆನಿಸಿ ಸಂಧಿಯಪ್ಪುದಾ ||1||

ಎಲ್ಲ ವರ್ಣದಾ| ಮಧ್ಯ| ದಲ್ಲಿ ಸರ್ವದಾ||

ನಿಲ್ಲುತಿಹುದು ಸ್ವಸ್ವರೂಪದಲ್ಲಿಯೇ ಸದಾ ||2||

ಸ್ವರವುವ್ಯಂಜನಾ | ಸೇರಿ| ಬರಲು ರಂಜನಾ||

ಬೆರೆತು ಬೇರೆಯಾಗಿ ನಿಲ್ಲಲಿದು ನಿರಂಜನಾ ||3||

ಶೂನ್ಯವೆನಿಸಿದೆ| ಸರ್ವ| ವರ್ಣ ಜನಿಸಿದೆ||

ಅನ್ಯವರ್ಣಕೆಲ್ಲ ತಾನೆ ಭಿನ್ನವಾಗಿದೆ ||4||

ಸ್ವರವ ಕೂಡುತಾ | ಬಂದು | ದರಿವು ಮೂಡುತಾ ||

ನರಹರೀಂದ್ರ ಪಾದವನುಸ್ವಾರ ನಿಶ್ಚಿತ ||5||

ಎರಡು ಸೊನ್ನೆಯು ಜೀವ| ಪರಮ ಸನ್ನೆಯು|

ವರವಿಸರ್ಗ ತತ್ವಮಸಿ ಪದಾರ್ಥ ಬೋಧೆಯು ||6||

ಹೆಸರು ಇಲ್ಲದಾ| ಪೇಳ| ಲಸದಳಾತ್ಮದ||

ಬೆಸೆದು ವರ್ಣದೊಡನೆ ಬಿಂದುವೆಸೆದುತೋರ್ಪುದು ||7||

ವರ್ಣವಲ್ಲದೆ| ಸರ್ವ ವರ್ಣದಲ್ಲಿದೆ|

ಪೂರ್ಣವೆನಿಸಿ ವರ್ಣದಂತ್ಯ ಸೇರಿ ತೋರಿದೆ ||8||

ಪ್ರಣವದಂತ್ಯದಿ| ನಿಂತು| ಧ್ವನಿಸಿ ನಿತ್ಯದಿ||

ಮನು ಮುನೀಂದ್ರ ವಂದ್ಯವಾಗಿ ತೋರಿ ಸತ್ಯದಿ ||9||

ಮಂತ್ರ ಮೂಲವು| ಅಜಪ | ಮಂತ್ರಜಾಲವು |

ತಂತ್ರಮೂರ್ತಿ ನರಹರೀಂದ್ರ ನಿರ್ಪಕೀಲವು ||10||

ಮಾಡು ಮಾನಸ ಪೂಜೆಯಾ| ಪ್ರಣವಾರ್ಥವನು|

ಕೂಡಿ ಮಂತ್ರದ ಮೂರ್ತಿಯಾ ||ಪ||

ಬೇಡ ಪತ್ರೆಯು ಪುಷ್ಪ| ಬೇಡ ದೀಪವು ಧೂಪ ||

ಬೇಡ ನೈವೇದ್ಯಗಳು| ಬೇಡ ಪರಿಕರಗಳು ||ಅಪ||

ಮನವ ನಾಸನ ಮಾಡುತ| ನಿರ್ಮಲ ಭಾವ |

ವೆನುವ ಮಜ್ಜನಗೈಯುತಾ||

ವಿನಯ ಪುಷ್ಪವ ಮುಡಿಸಿ| ಪ್ರಣವ ಪತ್ರೆಯನಿರಿಸಿ||

ನೆನಹು ದೀಪವನಿಟ್ಟು| ಜನನ ಧೂಪವ ಸುಟ್ಟು ||1||

ಅಜಪ ಮಂತ್ರವನಾರ್ಜಿಸಿ| ಭವ ದುಃಖವನು|

ಸೃಜಿಪ ತಂತ್ರವ ವರ್ಜಿಸೀ||

ಅಜಹರಿ ರುದ್ರರಂ| ಭಜಿಸಲೊಂದೇ ಮಂತ್ರ||

ಧ್ವಜವೇರಿ ಕೊನೆ ಸೇರಿ| ವಿಜಯಭೇರಿಯ ಸಾರಿ ||2||

ನಾದಬ್ರಹ್ಮವ ಕೂಡುತಾ| ಶಿವ ಜೀವೈಕ್ಯ

ನಾದ ನಿರ್ಗುಣ ಮಾಡುತಾ||

ಆದಿಯಂತ್ಯದೊಳೊಂದೆ| ಯಾದ ಬ್ರಹ್ಮದಿ ನಿಂದು|

ವೇದಾನುಸಂಧಾನ| ವಾದ ಮನಸ್ಕದಿ ||3||

ವರ್ಣವೆಲ್ಲವ ಕೂಡಿಸೀ| ಕೊನೆಯೊಳು ನಿಂತು|

ವರ್ಣವೆಲ್ಲವ ಝಾಡಿಸೀ || ಶೂನ್ಯ ರೂಪಾಂತಿರ್ಪ|

ಪೂರ್ಣಬ್ರಹ್ಮವ ಕಂಡು||

ನಿರ್ಣಯಗೊಂಡೈಕ್ಯ| ವನ್ನು ನರಹರಿಯೆಂದು ||4||

ಸಂಧ್ಯಾ ವಂದನೆಯಾ| ಮಾಡಿದೆ| ಸಂಧಿಸಿ ಜಲನಿಧಿಯಾ

|ಪ||

ಹಿಂದಿನಜನ್ಮದ| ಬಂಧನ ಹರಿದೆನು||

ಮುಂದಿನ ಕರ್ಮ| ವ| ಹೊಂದದೆ ನಡೆದೆನು

||ಅಪ||

ಗಂಗಾ ಯಮುನೆಗಳು| ನಿಲ್ಲುವ| ಸಂಗಮ ತೀರ್ಥದೊಳು|

ಮಂಗಳಕರಮಂ| ತ್ರಂಗಳ ಜಪಿಸುತ||

ಹಂಗಿಡದೆಲ್ಲವ| ಭಂಗಿಸಿ ನಿಲ್ಲುವ

||1||

ಲೋಕೋತ್ತರವಾದ| ಬ್ರಹ್ಮದ | ಏಕಾಕ್ಷರ ನಾದ||

ಸೋರುತ ನಿಂದೆನು| ಬೇಕೆನುತಿದ್ದೆನು||

ನಾಕದ ಸುಖವನು| ಸಾಕೆನಿಸಿದ್ದೆನು

||2||

ಚರಣಾಂಬುಜಪಿಡಿದೇ| ನರಹರಿ| ಕರುಣಾಮೃತ ಪಡೆದೇ||

ಮರಣದ ಭಯವನು| ಮರೆದೇ ನಿಂತೆನು||

ಕರಣಗಳೆಲ್ಲವು| ಕರಗಿರಬಲ್ಲವು

||3||

ರೇಚಕ ಪೂರಕವು| ಸಂಧಿಸಿ| ವಾಚಕ ತಾರಕವು||

ಸೂಚಿಸಿಯಮೃತದ| ಸೇಚನಗೈಯುವ||

ಯಾಚನೆಯಿಲ್ಲದೆ| ಗೋಚರವಾಗುವ

||4||

ಪ್ರಣವವೆ ಜನಿವಾರ| ಮಂತ್ರದ| ಕೊನೆಯೆ ಶಿಖಾಕಾರ||

ಜನನ ಮರಣಹರ | ಮನು ಮುನಿಜನಸುರ||

ಗಣವೊಲಿಸಲು ನಿ| ರ್ಗುಣ ಸಾಧನ ಪರ

||5||

ಶಿವಜೀವರಿಗೈಕ್ಯ| ಸಂಧ್ಯಾ| ನವಚೇತನ ಸೌಖ್ಯಾ||

ಅವಿರಳ ಬ್ರಹ್ಮವು | ಭವಹರ ನರಹರಿ|

ಶ್ರವಣಾನಂದವು| ನವ ಸಂಧ್ಯಾಸಿರಿ

||6||

ತೂಗುವ ತೊಟ್ಟಿಲ ನೋಡಮ್ಮಾ| ಶಿವ|

ಯೋಗಕೆ ಮೆಟ್ಟಿಲು ಕಾಣಮ್ಮ ||ಪ||

ಭೋಗಕೆ ಯೋಗಕೆ ಪಾಡಮ್ಮಾ| ಭವ|

ರೋಗವ ನೀಗಲು ಜೋಡಮ್ಮ ||ಅಪ||

ಹಾಯಲು ಹೊರಗಿದು ರೇಚಕವು| ಇದು|

ಹಾಯಲು ಒಳಗಡೆ ಪೂರಕವು||

ಹಾಯದೆ ನಿಂದರೆ ಕುಂಭಕವು| ಸದು

ಪಾಯದ ಮಂತ್ರವು ತಾರಕವು ||1||

ಗಂಗಾ ಯಮುನೆಯ ಸಂಗಮದಿ| ಮಹ|

ಲಿಂಗನ ಗುಡಿಯಾ ಅಂಗಳದಿ||

ಮಂಗಳನಾದದ ಇಂಗಿತದಿ| ಯೋ|

ಗಾಂಗದಿ ನಿಂತಿದೆ ನಿರ್ಗುಣದಿ ||2||

ಯಾರೂ ತೂಗಲು ಬೇಕಿಲ್ಲಾ| ಇದ|

ನಾರೂ ನಿಲ್ಲಿಸೆ ನಿಂತಿಲ್ಲಾ||

ಹಾರುವ ಹಂಸನ | ಕಂಡಿಲ್ಲಾ| ಗುರು|

ವೀರನು ನರಹರಿ ತಾ ಬಲ್ಲಾ ||3||

ಭೋಗಿಯೊಳು ಕೂಡಿ| ಯೋಗದೊಳಿರ್ಪ||

ಯೋಗಿ ಯಿವ ನೋಡಿ ||ಪ||

ನಾಗಭೂಷಣನಂತೆ| ಈಗ ನಿರ್ಗುಣವಾಂತೆ||

ಭೋಗವೆಲ್ಲವ ನೀಗಿ| ಯೋಗಿಯಾಗಿಹನಂತೆ ||ಅಪ||

ದೇದೀಪ್ಯಮಾನಾ| ಸದ್ಗುರು ಜ್ಞಾನ| ಬೋಧ ಪ್ರಧಾನಾ||

ನಾದಾನು ಸಂಧಾನ| ವೇದಾಂತ ಸುವಿಧಾನ||

ವಾದವಿಲ್ಲದೆ ಮೌನ| ಸಾಧಿಸಿದ ಸುಜ್ಞಾನ ||1||

ನಡೆಯಲ್ಲಿ ಭೋಗಿ| ನುಡಿಯೊಳು ತ್ಯಾಗಿ| ನಡುವೇ ವಿರಾಗೀ||

ಒಡಲ ಸಾಕ್ಷಿಕನಾಗಿ| ಜಡತೆಯೆಲ್ಲವ ನೀಗಿ|

ಕಡೆಗೆ ನಿರ್ಗುಣ ಯೋಗಿ| ಪಡೆದ ಬ್ರಹ್ಮವ ಸಾಗಿ ||2||

ಆನಂದ ರೂಪಾ| ಪರಮಾರ್ಥಸು| ಜ್ಞಾನ |

ಪ್ರತಾಪಾ || ಹೀನಕರ್ಮ ಕಲಾಪ| ವೇನಿಲ್ಲ ಪರಿತಾಪ|

ಶ್ರೀನರಹರಿ ರೂಪ| ತಾನಳಿದ ಜಗಪಾಪ ||3||

ಕಾಲಕೂಟ ಮಹಾವಿಷವ ಕುಡಿದಾ| ಶಿವ ನಿತ್ಯನಾದಾ|

ಕಾಲಕರ್ಮದ ಮೂಲವನೆ ಕಡಿದಾ ||ಪ||

ಕಾಲಕೂಟವೆ ಕರ್ಮಜಾಲವು |

ಕಾಲಕೂಟವೆ ವಿಷಯ ಮೂಲವು||

ಕಾಲಕೂಟವ ಕುಡಿದ ಲೀಲೆಯು|

ನೀಲಕಂಠನ ಯೋಗಮಾಲೆಯು ||ಅ|ಪ||

ವಿಷವ ಕುಡಿದುಳಿದಾತನೇ ಶಿವನು|

ಲೋಕದೊಳು ನಾನಾ|

ವಿಷಯದನುಭವ ಮಾತ್ರನಾದವನು||

ವಿಷಯ ವಿಷವನ್ನುಂಡು ಜ್ಞಾನದ |

ಅಸಮ ಪರಮಾಮೃತವ ಭಕ್ತರಿ||

ಗೊಸೆದು ನೀಡುವ ಗುರುವೆ ಶಿವ |ನಿ|

ರ್ವಿಷಯ ಜ್ಞಾನಾನಂದದಾತನು ||1||

ಕಾಮ ದಹನವ ಮಾಡಿದವ ಶಿವನು|

ಸುಜ್ಞಾನ ರೂಪನು| ಕಾಮಿತಾರ್ಥವ ಸುಟ್ಟು ಬೆಳಗುವನು||

ಕಾಮಕ್ರೋಧವು ಲೋಭ ಮೋಹವಿ|

ರಾಮಗೈವನು ಮದವು ಮತ್ಸರ||

ಸ್ತೋಮ ನಿರ್ಮೂಲಾತ್ಮ ಜ್ಞಾನದಿ|

ನಾಮರೂಪ ಕ್ರಿಯೆಯನಳಿದನು ||2||

ತ್ರಿಪುಟಿಯಳಿವುದೆ ತ್ರಿಪುರ ಸಂಹಾರಾ|

ಮಾಡಿದನು ಪೂರಾ| ಕಪಟ ನಾಟಕ ಮಾಯೆ ಪರಿಹಾರಾ||

ಕೃಪೆಯೊಳೀ ಲೋಕವನು ರಕ್ಷಿಸಿ|

ವಿಪುಲ ಜ್ಞಾನಾಕ್ಷಿಯೊಳು ವೀಕ್ಷಿಸಿ||

ಜಪತಪಂಗಳನೇ ಪರೀಕ್ಷಿಸಿ|

ಸಫಲಗೊಳಿಸಿದ ನರಹರೀ ಋಷಿ ||3||

ದಾಸೋಹಂ ಭಾವ ಪಡೆಯೋ| ಶಿವನ|

ದಾಸನೆನ್ನಿಸಿ ನಿತ್ಯ ನಡೆಯೋ ||ಪ||

ಆಸೆಯನ್ನಳಿದು ಸಂ| ತೋಷದಿ ಜಗವೆಲ್ಲ|

ಈಶನ ರೂಪೆಂದು| ಸೂಸಿ ಸೇವಾಭಾವ ||ಅಪ||

ನೀನಾರ್ಜಿಸಿದ ಧನದಿಂದ| ಅನ್ನ|

ದಾನ ಮಾಡೈ ವಿನಯದಿಂದ||

ದೀನ ಜನರಿಗೆ ಅನ್ನ| ಪಾನಂಗಳನ್ನಿತ್ತು||

ದೀನನಂತಿರು ಅಭಿ| ಮಾನ ದೂರವ ಮಾಡು ||1||

ಸಾಧು ಸಜ್ಜನರನ್ನು ನೋಡಿ| ನಮ್ರ|

ವಾದ ಭಾವದಿ ಸೇವೆ ಮಾಡಿ||

ಭೇದವಿಲ್ಲದೆ ಅವರ| ನಾದರಿಸಿ ಉಣ್ಣಿಸಲು|

ಮೋದವಪ್ಪುದು ಶಿವಗೆ| ಹಾದಿಯಿದು ಮುಕ್ತಿಗೆ ||2||

ತನುಮನಧನವನರ್ಪಿಸುತಾ | ಗುರುವಿ|

ಗನುನಯದಿ ಸೇವೆಗೈಯುತ್ತಾ||

ವಿನಯ ಭಕ್ತಿಯ ಮಾಡೆ ನಿನಗೆ ಸೋಹಂಭಾವ||

ಜನಿಸಿ ನರಹರಿ ಪಾದ| ವನಜ ಕೃಪೆಯಪ್ಪುದು ||3||

ಶಿವಧರ್ಮ ತಿಳಿಯಮ್ಮ ತಂಗೀ| ನಿನ್ನ|

ಭವಕರ್ಮ ಕಳೆ ಕೋಮಲಾಂಗಿ ||ಪ||

ಶಿವ ತನ್ನ ತಂತ್ರದಿ| ಶಿವನಿರ್ಪ ಮಂತ್ರದಿ||

ಶಿವನ ಕಂಡವರೆಲ್ಲ| ಶಿವನ ಬಿಟ್ಟಿರಲಿಲ್ಲ ||ಅಪ||

ನಡೆಶುದ್ಧಿ ಶಿವನ ಸದ್ಧರ್ಮಾ| ನೋಡಿ| ನಡೆದಾತಗೇನಿಲ್ಲ ಕರ್ಮಾ||

ಪೊಡವಿ ಪಾವನಧರ್ಮ| ನಡೆಯೆನ್ನಿಸಿದ ಮರ್ಮ||

ಹಿಡಿದುಕೊಂಡರೆ ಜನ್ಮ| ಕಡೆಯಾಯ್ತು ನೋಡಮ್ಮ ||1||

ನುಡಿ ಶುದ್ಧಿ ಶಿವಮಂತ್ರವಮ್ಮಾ| ಸತ್ಯ| ನುಡಿಯಿದ್ದರಿನ್ನಿಲ್ಲ ಜನ್ಮಾ||

ನುಡಿಯೆಪಾವನವೇದ| ನುಡಿಯೆಸದ್ಗುರು ಬೋಧ|

ನುಡಿಗಂಗೆಯೊಳು ಮಿಂದು| ಮಡಿಯಾಗಿನೀನಿಂದು ||2||

ನಡೆನುಡಿಯ ನಡುವೆ ಸೇರಮ್ಮಾ| ಅಲ್ಲಿ| ಅಡಗಿರ್ಪ ಶಿವ ಪರಬ್ರಹ್ಮಾ||

ಒಡಲಮೋಹವನಳಿದು| ದೃಢವಾಗಿ ನೀನುಳಿದು||

ಬಿಡದೆ ನರಹರಿಯಡಿಯ ಹಿಡಿದರ್ಧ ಮಾತ್ರೆಯ ||3||

ಅಡ್ಡಿಯಿಲ್ಲದೆ ಬರುವ ಅಡ್ಡಪಲ್ಲಕ್ಕಿಯ ನೋಡಿರಣ್ಣಾ ||ಪ||

ಅಡ್ಡವಾಗಿದೆ ಸರ್ವ ಪಾಪಕರ್ಮಕ್ಕೆಲ್ಲಾ ಕೇಳಿರಣ್ಣಾ ||ಅಪ||

ಗುರುದೇವ ಸೇರಿದ ಅರಿವಿನ ಪಲ್ಲಕ್ಕಿ ನೋಡಿರಣ್ಣಾ||

ಗುರಿಯಿಟ್ಟವರಿಗೆಲ್ಲ ಪರಮಾರ್ಥ ಬೇರಿಲ್ಲ ಕೇಳಿರಣ್ಣಾ ||1||

ವರ್ಣರಂಜಿತವಾಗಿ ಮೆರೆವುದೀಗಲೆ ಹೋಗಿ ನೋಡಿರಣ್ಣ||

ಕರ್ಣಕ್ಕೆ ಯಿಂಪಾದ ವಾದ್ಯ ಭೋರ್ಗರೆವವು ಕೇಳಿರಣ್ಣಾ ||2||

ನಾದವೇಗಳಾದಿಯಾದುದೀ ಪಲ್ಲಕ್ಕಿ ನೋಡಿರಣ್ಣ||

ಬೋಧ ಪ್ರಸಾದ ಸಂಪಾದನೆಯೀವುದು ಕೇಳಿರಣ್ಣ ||3||

ಪಂಚಕಲಶಗಳನ್ನು ತಾಳಿ ಬಂದಿಹುದನ್ನು ನೋಡಿರಣ್ಣಾ||

ಮಿಂಚಿ ಹೋಗಲು ಕಾಲ ಕಾಣಲಾರದು ಮೂಲ ಕೇಳಿರಣ್ಣ ||4||

ಬಿರುದು ಬಾವಲಿಯನ್ನು ಸಾರಿ ಹೋಗುವುದನ್ನು ನೋಡಿರಣ್ಣ||

ಧರೆಗೆ ಪಾವನ ಜಗದ್ಗುರು ನರಹರಿ ಬೋಧ ಕೇಳಿರಣ್ಣಾ ||5||

ಹಂಸಪಾದಂಗಳೀ ಪಲ್ಲಕ್ಕಿಗಾಧಾರ ನೋಡಿರಣ್ಣಾ||

ಹಿಂಸಾರಹಿತ ಪರಮಹಂಸ ನರಹರಿಯಿರ್ಪ ನೋಡಿರಣ್ಣಾ ||6||

ಯೋಗ ಮಾಯೆಯ ಗೆದ್ದ ಯೋಗಿ| ಶಿವ|

ಯೋಗಿಯೆಂದೆನಿಪನು ಸುಜ್ಞಾನಿಯಾಗಿ

||ಪ||

ಯೋಗ ಕಾಮ್ಯಕೆ ಮಾಳ್ಪ ಯೋಗಿ| ಭವ|

ರೋಗದಲ್ಲಿಯೆ ಬಿದ್ದಿರುವ ನಿಜವಾಗಿ

||ಅಪ||

ಕಾಮ್ಯವೆಂಬುದೆ ಯೋಗ ಮಾಯ| ನಿ|

ಷ್ಕಾಮ್ಯವಾದರೆ ಜ್ಞಾನಯೋಗದಧ್ಯೇಯ||

ರಮ್ಯವಾದುದು ಯೋಗ ಮಾಯ| ಸ|

ತ್ಕರ್ಮ ವಾಸನೆಯಿಂದ ಜನ್ಮಕ್ಕುಪಾಯ

||1||

ಮಹಿಮೆಯೆಂಬುದು ಯೋಗ ಮಾಯ| ಶಿವ|

ಮಹಿಮೆಯೀ ಜಗವೆಂಬ ಜ್ಞಾನ ನಿರ್ಮಾಯ||

ಮಹಿಮೆಯಾಸಕ್ತಿಗೆ ಪ್ರಾಯ| ಈ|

ಮಹಿಯಲ್ಲಿ ಜನ್ಮಾದಿಗಾಯ್ತಿದು ಪ್ರಿಯ

||2||

ಸಹಜ ಯೋಗವನರಿಯದವರು| ಬಲು|

ಮಹಿಮೆಯಂ ತೋರುತ್ತ ಜಗವ ಮೆಚ್ಚಿಪರು||

ಬಹು ಪುಣ್ಯಜನ್ಮ ಪೊಂದುವರು| ಈ|

ಮಹಿಮೆಯಳಿಯಲು ನರಹರಿಯ ಬೇಡುವರು

||3||

ನಿನ್ನ ಪಾದವು ದೊರೆತರೆ ಸಾಕು|

ಯನ್ನ ಪಾಪುವು ಹರಿಯಲೆಬೇಕು ||ಪ||

ಇನ್ನು ಪದವಿಗಳಾರಿಗೆ ಬೇಕು|

ನಿನ್ನ ಪಾದದಿ ಬೆರೆತರೆ ಸಾಕು ||ಅಪ||

ಶಿರದಿ ಚಂದ್ರನ ಯೇತಕೆ ಮುಡಿದೆ|

ಕರದಿ ಬ್ರಹ್ಮಕಪಾಲವ ಹಿಡಿದೆ||

ಕೊರಳ ತಲೆ ಮಾಲೆ ಬುರುಡೆ |

ಧರಿಸಿದರ್ಥವ ತಿಳಿದೆನು ನಾನು ||1||

ಬೆಳ್ಳಿ ಬೆಟ್ಟವನೇರಿದೆ ಏಕೆ|

ಚೆಲ್ವೆ ಪಾರ್ವತಿ ನಿನಗಿರಬೇಕೆ||

ತಳ್ಳಿಯಿಲ್ಲ ತ್ರಿಶೂಲವಿರಲ್ಕೆ |

ಒಳ್ಳೆ ಢಮರುಗವಿದ್ದರೆ ಸಾಕೆ ||2||

ನಂದಿಯೇರುತ ಜಗವ ಸುತ್ತಿರುವೆ|

ಮಂದಿಯೆಲ್ಲವ ಕಾಪಾಡುತಿರುವೆ||

ತೊಂದರೆಗಳನ್ನು ಹರಿಸುತ್ತ ಬರುವೆ|

ಎಂದಿಗಳಿಯದ ಪರವಸ್ತುವಾಗಿರುವೆ ||3||

ನಾಗಭೂಷಣನೆನ್ನಿಸಿ ಮೆರೆವೆ|

ಬೇಗ ನಂದಿಯನೇರುತ ಬರುವೆ||

ಈಗ ಜಗವನ್ನು ಪಾಲಿಸುತಿರುವೆ|

ಶ್ರೀ ಗುರೂತ್ತಮ ನರಹರಿ ಗುರುವೆ ||4||

ತಿಳಿವೇ ಬಲು ಚೆಂದಾ| ತಿಳಿದರೆ| ಅಳಿವುದು ಭವಬಂಧಾ ||ಪ||

ಕಳೆದೆಲ್ಲವನಿಂದಾ| ಉಳಿಮೆಯ| ಕಳೆ ಬ್ರಹ್ಮಾನಂದಾ ||ಅಪ||

ಕನಕದಿ ವೊಡವೆಗಳು| ಬಹುವಿಧ| ವೆನಿಸಿದ ರೀತಿಯೊಳು||

ಜನಿಸಿವೆ ಬ್ರಹ್ಮದೊಳು| ಅಗಣಿತ| ವೆನಿಸಿದ ಲೋಕಗಳು ||1||

ಕಣ್ಣಿಗೆ ಕಾಣುವುದು| ನಶ್ವರ| ವೆನ್ನಿಸಿಕೊಂಡಿಹುದು||

ಕಣ್ಣಿಗೆ ಕಾಣಿಸದು| ಶಾಶ್ವತ| ವೆನ್ನಿಸಿ ಬ್ರಹ್ಮವದು ||2||

ತೋರುವುದೇನಿರದು| ಬ್ರಹ್ಮವು| ತೋರದೆ ನಿಂತಿಹುದು||

ಕಾರಣ ತಾನಹುದು| ಲೋಕವ| ಧಾರಣ ಮಾಡಿಹುದು ||3||

ಶಿವಜೀವರ ಭೇದ| ಇಲ್ಲವು| ಶಿವನೊಬ್ಬನೆ ಆದ||

ಅವಿರಳ ಬ್ರಹ್ಮವಿದ | ತನ್ನೊಳು| ಶಿವನನುಭವಗೈದ ||4||

ಜ್ಞಾತೃ ಜ್ಞಾನಜ್ಞೇಯ| ಮಧ್ಯದ| ಸೂತ್ರವೆ ನಿರ್ಮಾಯ||

ಧ್ಯಾತೃ ಧ್ಯಾನಧ್ಯೇಯ| ನರಹರಿ| ಮಾತ್ರೆ ಯೇಕವಯ್ಯ ||5||

ಶಿವಶಕ್ತಿಯರ ಲೀಲೆ ಜಗವು| ಶರೀ|

ರವ ಸೇರಿ ನಡೆಯುತ್ತಲಿಹ ಲೀಲೆ ನಿಜವು ||ಪ||

ಶಿವನು ನಿರ್ಗುಣ ಬ್ರಹ್ಮದಿರವು| ಮೆರೆ|

ಯುವ ಶಕ್ತಿ ಸಗುಣ ಸಾಕಾರ ವಿಸ್ತರವು ||ಅಪ||

ಹೊರಗೊಳಗೆಡೆಯಾಡುತಿಹರು| ಸಂ|

ಚರಿಸುತ್ತ ಲೋಕವ ಪರಿಪಾಲಿಸುವರು||

ಬೆರೆದಿದ್ದು ಬೇರೆಯಾಗುವರು| ಕಂ|

ಡರಿಯದವರಿಗೆ ಗೋಚರವಿಲ್ಲದಿಹರು ||1||

ಒಳಹೋಗುತಲಿಪುದು ಶಕ್ತಿ| ತನು|

ಗಳ ಬಿಟ್ಟು ಹೊರಗೆ ಬರುವುದು ಶಿವನ ಯುಕ್ತಿ||

ಒಳಹೊರಗೊಂದಾದ ಸೂಕ್ತಿ| ನಿ|

ಷ್ಕಳೆಯಲ್ಲಿ ನಿಂದದ್ದೆ ನಿಜವಾದ ಮುಕ್ತಿ ||2||

ಶಿವನೇ ಹಕಾರ ಸ್ವರೂಪ| ಕಾ|

ಯವ ಬಿಟ್ಟು ಹೊರಗಾಗುತಿಹನು ನಿರ್ಲೇಪಾ||

ಶಿವಶಕ್ತಿಯಾದ ಸಕಾರ| ಕಾ|

ಯವ ಹೊಕ್ಕು ನರಹರಿಯೊಳಡಗಿತ್ತು ಪೂರಾ ||3||

ಕರುಣಾ| ಮಯನೇ| ಮಂಗಳ ಗುರುರಾಯ ||ಪ||

ಪರಮಾ ನಂದದ| ಶರಧಿಗೆ ಮಂಗಳ||

ದುರಿತವ ಹರಿಸಿ| ಪೊರೆವಗೆ ಮಂಗಳ ||ಅಪ||

ನಡೆಯಲಿ ಬಂದೇ| ನುಡಿಯುತ ನಿಂದೇ|

ನಡೆ ನುಡಿಯರಡು| ತಡೆಯುತಲೊಂದೇ||

ಕಡು ಸುಖ ರೂಪದೊ| ಳಡಗುವೆನೆಂದೇ|

ಜಡತೆಯ ಹರಿದೆ| ಪೊಡವಿಗೆ ಮೆರೆದೆ ||1||

ನೀನಾಗಮಿಸಲು| ತಾನೆ ಸಕಾರ| ನೀ ನಿರ್ಗಮಿಸಲು|

ತಾನೆ ಹಕಾರ| ನೀನಾಗಮ ನಿರ್ಗಮಗಳ ಮಧ್ಯೆ|

ನೀನೇ ನಿಲ್ಲುವೆ ಬಿಂದು ಸ್ವರೂಪದಿ ||2||

ತಾರಕ ಯೋಗವೆಯನ್ನೀ ಭವಕೆ|

ತಾರಕವೆಂಬುದನೆನ್ನನುಭವಕೆ||

ತೋರಿದೆ ನಿನ್ನೀ ಉಪಕಾರವನು|

ತೀರಿಸಲಾರೆನು ನರಹರಿ ತಂದೆ ||3|

ಮರವೇ| ನೀನೆಲ್ಲಿ| ಯಿರುವೇ||

ನೀನು| ಮರೆಯಲ್ಲಿ ಬಂದೆನ್ನ ಮೈಮರೆಸುತಿರುವೇ ||ಪ||

ಕೋಟಿ ಜನ್ಮಗಳನ್ನು | ದಾಟಿ ಬಂದಿರುವೇ||

ಬೂಟಾಟಿಕೆಯ ನಂಬಿ| ಪಾಠ ಮಾಡಿರುವೇ ||1||

ಗುರು ಕೊಟ್ಟ ಅರಿವನ್ನು| ಮರೆಸುತ್ತ ಬರುವೇ||

ಕರಣಕ್ಕೆ ತೋರಿದ್ದು| ಸ್ಥಿರವೆನ್ನುತಿರುವೇ ||2||

ಮರವೆ ನಿನ್ನುಪಕಾರ| ಅರಿತು ನೋಡಲಪಾರ ||

ಹಿರಿದು ದುಃಖಗಳೆಲ್ಲ| ಮರೆಸಿಬಿಟ್ಟಿಹೆಯಲ್ಲ ||3||

ಶರೀರ ಕರಣೇಂದ್ರಿಯ ಮರೆಸುತ್ತ ನಿದ್ರೆಯ||

ಪರಮಾನಂದದೊಳೆನ್ನ| ಬೆರಸಿದ್ದು ಬಲು ಚೆನ್ನ ||4||

ಅರಿವು ಮರವೆಗಳೆಂದು| ಮೆರೆವೆ ಜಾಗ್ರಕೆ ಬಂದು||

ಅರಿವು ಮರೆವೆಗಳಿಲ್ಲ| ದಿರುವ ನರಹರಿ ಬಲ್ಲ ||5||

ದೇವರಿತ್ತ ದೇವದತ್ತ ಶಂಖ ವೂದಿದಾ| ನರನು|

ಸಾವು ಹುಟ್ಟು ಮೀರಿ ನಿಂತು ಸೌಖ್ಯ ಹೊಂದಿದಾ ||ಪ||

ಜೀವಭಾವವೆಲ್ಲ ನೀಗಿ ಶಿವನ ನೋಡಿದಾ| ನಿತ್ಯ|

ಪಾವನತ್ವವಾಂತು ಹರಿಯ ಪಾದ ಕೂಡಿದಾ ||ಅಪ||

ವರ್ಣಪುಂಜ ರಂಜನೆಗಳ ದೇವದತ್ತವು | ಬೋಧ|

ಪೂರ್ಣವಾಗಲಾಗಿ ನಿಂತ ದೇವಸತ್ವವು||

ಪೂರ್ಣ ಶಾಂತಿಯುಕ್ತಮಾದ ಮಂತ್ರ ಮಾತ್ರವು ಸರ್ವ |

ವರ್ಣ ಶಾಂತಿಯಾಂತು ನಿಂದ ಪ್ರಣವ ಮಂತ್ರವು ||1||

ಮೂರು ಲೋಕದರಸನಾದ ನರನ ಶಂಖವು| ವರ್ಣ|

ಮೂರರಲ್ಲಿ ಸೇರಿ ಕೊನೆಗೆ ನಿರಾತಂಕವು||

ಬೇರುಬಿಟ್ಟ ಜನ್ಮ ಜರಾಮರಣ ದುಃಖವು| ಎಲ್ಲಿ|

ತೋರದಂತೆ ಮಾಯವಾಯಿತೆಲ್ಲ ಲೆಕ್ಕವು ||2||

ನಾದ ಬಿಂದು ಕಳೆಗಳಿಂದ ಶೋಭಿಸಿರ್ಪುದು | ಏಕ|

ನಾದವಾಗಿ ಕೊನೆಗೆ ನಿಂತು ತೋರುತಿರ್ಪುದು||

ವೇದವಾಗಿ ಬೋಧೆಯಲ್ಲಿ ಕಾಣುತಿರ್ಪುದು |ನಮ್ಮ|

ನಾದ ಬ್ರಹ್ಮ ನರಹರೀಂದ್ರ ತಾನೆಯಪ್ಪುದು ||3||

ಇದು ಸನಾತನ ಧರ್ಮ ರಹಸ್ಯ|

ಇದನು ತಿಳಿದವ ಸದ್ಗುರು ಶಿಷ್ಯ ||ಪ||

ಸದರವಲ್ಲಿದು ಜ್ಞಾನಿಗೆ ವಶ್ಯ|

ಇದು ವಿನೂತನದನುಭವ ಪೋಷ್ಯ ||ಅಪ||

ನಡೆಯೊಳಿರುತಿಹುದ ಜಪಾಮಂತ್ರ|

ನುಡಿಯೊಳಿರ್ಪುದು ಜಪ ಸನ್ಮಂತ್ರ||

ನುಡಿಯ ಕೊನೆಯೊಳು ತಾರಕಮಂತ್ರ|

ಪಡೆಯೆ ಮುರಿಯುವುದೀ ಭವಯಂತ್ರ ||1||

ಕರ್ಮಜ್ಞಾನ ಸಮುಚ್ಚಯವಾಗೀ|

ಧರ್ಮವಾಚರಿ ಪಾತನೆ ಯೋಗೀ||

ನಿರ್ಮಲಾತ್ಮಜ್ಞಾನಿ ವಿರಾಗೀ|

ಮರ್ಮವರಿವನು ಗುರುವಿಗೆ ಬಾಗಿ ||2||

ವೇದಮಂತ್ರವು ನಾದದೊಳುಂಟು|

ನಾದ ತಂತ್ರವೆ ಬೋಧೆಯ ಗಂಟು||

ನಾದದಂತ್ಯದಿ ಪ್ರಣವದ ನಂಟು||

ಆದ ಮಾತ್ರಕೆ ನರಹರಿ ಒಂಟು ||3||

ಸುಲಭ ಜ್ಞಾನ ಯೋಗ| ಸರ್ವರು| ಕಲಿತುಕೊಳ್ಳಿರೀಗ

||ಪ||

ಕಲಿಯಲು ಸುಲಭ| ತಿಳಿದರೆ ಲಾಭ||

ಕಳೆಯಲು ರಾಗ| ಬಲಿವುದು ಯೋಗ

||ಅಪ||

ಕರಣಂಗಳ ಜಯಿಸಿ| ಗುರುವಿನ| ಕರುಣೆಯನೇ ಬಯಸಿ||

ಇರುವವ ಭಕ್ತಿಯ| ಪರಮ ವಿರಕ್ತಿಯ||

ಧರಿಸುತ ಜ್ಞಾನವ| ಬೆರೆಯಲು ಮೌನವ

||1||

ಶ್ರವಣವಿದರ ಮುಖವು| ತಾನಿದ| ನರಿತರೆ ಬಲು ಸುಖವು||

ಶ್ರವಣದಿ ಮನನವ| ವಿವಿಧ ವಿಧಾನವ||

ಹವಣಾಗಿರಲನು| ಭವ ನಿಧಿ ಧ್ಯಾಸವ

||2||

ರೇಚಕ ಪೂರಕದ| ಕುಂಭಕ| ದಾಚರಣೆಯ ವಿಧವ||

ಯಾಚಿಸಿ ಗುರುವರ| ಗೋಚರಪಡಿಸಲು||

ಸೂಚಿಸಿ ನರಹರಿ| ಯೋಚನೆಯೇ ಸರಿ

||3||

ನಂಬು ನಂಬೆಲೆ ಮಾನವಾ| ಸರ್ವವು| ಶಂಭುವೆನ್ನುವ ಜ್ಞಾನವಾ ||ಪ||

ತುಂಬುತ ಮೌನವ | ಕುಂಭಕ ಧ್ಯಾನವ||

ಲಂಬಿಸಿದನುಭವ| ದಿಂ ಬಿಡು ಕರ್ಮವ ||ಅಪ||

ಧರೆವಾರಿಶಿಖಿ ಮಾರುತಾ| ಅಂಬರ| ತರಣೀಂದು ವಾತ್ಮಾಶ್ರಿತಾ||

ಮೆರೆವಷ್ಟ ಮೂರ್ತಿಯೆ| ಶರೀರವೆಂದೆನಿಸಿಯೆ|

ಬೆರೆದಾಡುವಾತನ| ಪರಿಕಿಸಿ ಮನದೊಳು ||1||

ಜೀವಕೋಟಿಯ ತಾಳುವಾ| ಬಹು ವಿಧ| ದೇವ ಕೋಟಿಯನಾಳುವಾ ||

ಸ್ಥಾವರ ಜಂಗಮ| ದೈವದಿಸಂಗಮ||

ಪಾವನ ದೇವರ| ದೇವನು ಪುರಹರ ||2||

ಕಣ್ಣು ಕಾಣದು ಯೀತನ| ಕರಣಗ| ಳನ್ನು ಮೀರಿದ ಜಾತನಾ||

ಕಣ್ಣಿನ ಜ್ಯೋತಿಯೆಂ| ದೆನ್ನಿಸಿದಾತನು||

ಪುಣ್ಯಮೂರ್ತಿ ಶಿವ| ನರಹರಿಯೆನಿಸುವ ||3||

ನಿನ್ನ ಪ್ರೇರಣೆಯಿಲ್ಲದೆ| ಕರ್ಮವ ಮಾಡ|

ಲೆನ್ನಿಂದಾಗಲು ಬಲ್ಲುದೆ ||ಪ||

ನಿನ್ನದೆ ತನುವಾಗಿ| ನಿನ್ನದೆ ಮನವಾಗಿ||

ನಿನ್ನವಿಂದ್ರಿಯವೆಲ್ಲ| ನನ್ನ ತಪ್ಪೇನಿಲ್ಲ ||ಅ ಪ||

ಕರ್ತ ನೀನೇ ಲೋಕಕೆ| ಇದರೊಳು ನನಗೆ|

ಕರ್ತವ್ಯವಿನ್ನೇತಕೆ||

ಭರ್ತ ನೀನೆಲ್ಲಕೆ| ಭೋಕ್ತೃ ನೀನಿರಲಿಕ್ಕೆ||

ವ್ಯರ್ಥ ಕರ್ಮದ ಬಾಧೆ| ಹೊತ್ತು ನರಳಿದೆನಲ್ಲಾ ||1||

ಯಾರು ಮಾಡಿದ ತಪ್ಪಿದು| ಬಂಧಿಸಿಯನ್ನ|

ದೂರುವುದುನಿನಗೊಪ್ಪದು||

ಸಾರವಿಲ್ಲದ ಸಂ| ಸಾರ ಸಾಗರದಲ್ಲಿ||

ಸೇರಿ ದುಃಖಿಸುವೆನ್ನ| ಪಾರುಗಾಣಿಸು ದೇವಾ ||2||

ಬದ್ಧನಾದೆನು ಕರ್ಮಕೆ| ನನ್ನದುಯೆಂದು|

ಬಿದ್ದುಹೋದೆನು ಜನ್ಮಕೆ||

ಶುದ್ಧವಾಗಿರುವಂಥ | ಬುದ್ಧಿಯನೆನಗಿತ್ತು||

ಬುದ್ಧ ನರಹರಿಯೆನ್ನ| ಸದ್ಯ ರಕ್ಷಿಸಬೇಕು ||3||

ಮುಂದೇನು ಗತಿಯೆನ್ನಬೇಡಾ| ಬೆನ್ನ|

ಹಿಂದೆ ಸದ್ಗುರುನಾಥ ಕಾದಿರ್ಪ ನೋಡಾ ||ಪ||

ಎಂದೆಂದು ಸಂದೇಹ ಬೇಡಾ| ಭಕ್ತಿ|

ಯಿಂದ ನಂಬಿಕೆಯಿಟ್ಟು ಶರಣೆನ್ನು ಗಾಡಾ ||ಅ ಪ||

ನಿನ್ನದಲ್ಲವು ನೋಡೆ ತನುವು| ನೀನು|

ನಿನ್ನದೆಂದರೆ ದುಃಖ ನಿನಗನುದಿನವು||

ನಿನ್ನದಾಗದು ಕೆಟ್ಟ ಮನವು| ಅದನು|

ನಿನ್ನದೆನ್ನುತಲಿರಲು ಪಾಪಸಾಧನವು ||1||

ಧನಧಾನ್ಯ ವಸ್ತ್ರ ವಾಹನವಾ| ನೀನು|

ಜನಿಸಿದಾಗಲೆ ಹೊತ್ತು ತಂದಿಲ್ಲ ಜೀವಾ||

ಕೊನೆಯಲ್ಲಿ ನಿನಿಗಿಲ್ಲದಿರುವಾ| ನಿನ್ನ|

ತನುವಿನಂತಿದುಯೆಲ್ಲ ಸುಳ್ಳೆನ್ನು ಜೀವಾ ||2||

ಶಿವ ಕೊಟ್ಟುದೆಲ್ಲವ ನೀನು| ಒಪ್ಪಿಸುವ

ಭಾವವನು ಹೊಂದಿದಾಗಲೆ ಶಿವನು||

ಭವಭಾರವನ್ನಿಳಿಸುವನು| ನೆನೆಯೊ|

ಸುವಿರಕ್ತಿ ಪರನಾಗಿ ನರಹರಿಯನ್ನು ||3||

ಸ್ನಾನ ಮಾಡಿರಯ್ಯ| ನೀವು| ಸ್ನಾನ ಮಾಡಿರೋ|

ಶುದ್ಧ| ಜ್ಞಾನವೆಂಬ ಗಂಗೆಯಲ್ಲಿ ಸ್ನಾನ ಮಾಡಿರೋ ||ಪ||

ನಾನು ಎಂಬ ಮೈಲಿಗೆ ನೀಗಿಕೊಳ್ಳಿರೋ| ಬ್ರಹ್ಮ|

ಧ್ಯಾನವೆಂಬ ಮಡಿಯನುಟ್ಟು ಶುದ್ಧರಾಗಿರೋ ||ಅಪ||

ತಂದೆ ತಾಯಿ ಸೇವೆ ಮಾಳ್ಪುದೊಂದು ಸ್ನಾನ| ನೀತಿ|

ಯಿಂದ ನಿತ್ಯ ನಡೆದುಕೊಂಡರೊಂದು ಸ್ನಾನ||

ಹೊಂದಿ ಗುರುವಿನಲ್ಲಿ ತಿಳಿಯಲೊಂದು ಸ್ನಾನ| ದುಷ್ಟ|

ಮಂದಿಯಲ್ಲಿ ಸೇರದಿದ್ದರೊಂದು ಸ್ನಾನ ||1||

ನಡೆಯು ನುಡಿಗಳೊಂದೆಯಾದುದೊಂದು ಸ್ನಾನ| ಸರ್ವ|

ಕ್ಕೊಡೆಯ ಶಿವನು ಎಂದು ತಿಳಿಯಲೊಂದು ಸ್ನಾನ||

ಪಡೆದ ಘನತೆ ಕಳೆಯದಿರ್ಪುದೊಂದು ಸ್ನಾನ| ಎಲ್ಲ|

ಕಡೆಯು ಶಿವನೆ ಇರ್ಪನೆಂಬುದೊಂದು ಸ್ನಾನ ||2||

ಶಿವನೊಳ್ಯೆಕ್ಯನಾದೆನೆಂಬುದೊಂದು ಸ್ನಾನ|| ನಿತ್ಯ|

ಶ್ರವಣದಲ್ಲಿ ಮನನ ಮಾಳ್ಪುದೊಂದು ಸ್ನಾನ||

ಶಿವನ ಶರಣರಲ್ಲಿ ಸೇರಲೊಂದು ಸ್ನಾನ| ಬಂದು|

ಕವಿಯುವಂಥ ಮರವೆ ನೀಗಲೊಂದು ಸ್ನಾನ ||3||

ಸುಳ್ಳನಾಡ ಕೂಡದೆಂಬುದೊಂದು ಸ್ನಾನ| ಸತ್ಯ|

ವುಳ್ಳ ಮಾತನಾಡುತಿರ್ಪುದೊಂದು ಸ್ನಾನ||

ಕಳ್ಳತನವ ಮಾಡದಿದ್ದರೊಂದು ಸ್ನಾನ| ಜೀವ|

ಕೊಲ್ಲಿ ಹಿಂಸೆ ಮಾಡಿದಿರ್ಪುದೊಂದು ಸ್ನಾನ ||4||

ಪರರ ನಿಂದೆ ಮಾಡದಿರ್ಪುದೊಂದು ಸ್ನಾನ|

ಶಿವನ| ಶರಣರನ್ನು ವಂದಿಸುವುದು ಒಂದು ಸ್ನಾನ||

ಹರುಷದಿಂದ ನಲಿಯುತಿರ್ಪುದೊಂದು ಸ್ನಾನ| ದುಃಖ|

ಮರೆತುಕೊಂಡು ಶಾಂತಿ ತಾಳ್ದರೊಂದು ಸ್ನಾನ ||5||

ವಾದ ಭೇದವಿಲ್ಲದಿರ್ಪುದೊಂದು ಸ್ನಾನ| ಜಾತಿ|

ಭೇದವನ್ನು ದೂರ ಮಾಳ್ಪುದೊಂದು ಸ್ನಾನ||

ಸಾಧುತನವ ಸಾಧಿಸಿರ್ಪುದೊಂದು ಸ್ನಾನ| ಗುರು|

ಬೋಧೆಯನ್ನು ಮರೆಯದಿದ್ದರೊಂದು ಸ್ನಾನ ||6||

ಹರಿಯು ವಿಂದ್ರಿಯಗಳ ತಡೆದರೊಂದು ಸ್ನಾನ| ತಾನು|

ಹಿರಿಯನೆಂಬ ಗರ್ವವಳಿದರೊಂದು ಸ್ನಾನ||

ಕರಣ ಸಾಕ್ಷಿ ತಾನೆಯೆಂಬದೊಂದು ಸ್ನಾನ| ನಮ್ಮ|

ನರಹರೀಂದ್ರನಲ್ಲಿ ಸೇರಲೊಂದು ಸ್ನಾನ ||7||

ಹರಿಯ ನಿಂದಿಸಬೇಡ| ಹರನ ಹೊಗಳಲು ಬೇಡ|

ಹರನ ನಿಂದಿಸಿ| ಹರಿಯ ಹೊಗಳಬೇಡ ||ಪ||

ಹರಿಹರ ಭೇದವು| ನರಕ ಕಾರಣವೆಂದು|

ವರವೇದ ಪೇಳ್ವುದ| ನರಿತು ನೋಡು ||ಅಪ||

ಹರ ಹೆಚ್ಚು ಎಂಬರು| ಹರಿ ಹೆಚ್ಚು ಎಂಬರು

ಬರಿ ಹುಚ್ಚು ಕಲ್ಪನೆಯೊಳಗಿಹರು||

ಹರನ ಕಂಡವರುಂಟೆ| ಹರಿಯ ಕಂಡವರುಂಟೆ|

ಹರಿಹರರ ಭೇದವು ಬರಿಯ ತಂಟೆ ||1||

ಹರನುಳಿದು ಹರಿಯಿಲ್ಲ| ಹರಿಯುಳಿದು ಹರನಿಲ್ಲ||

ಹರಿಹರರ ಮರ್ಮವನರಿಯರಲ್ಲಾ||

ಹರನೆಲ್ಲಿ ಇರುವನಾ| ಹರಿಯಲ್ಲಿ ಇರುವನು|

ಹರಿಹರರಿಗೆ ಬೇರೆ ಸ್ಥಳವೇನು ||2||

ಹರಿಯ ಮರ್ಮವು ಏನು| ಹರನ ಧರ್ಮವು ಏನು

ಅರಿಯದ ನರರಾಟವಿದು ತಾನು||

ಮಾಧವನೆನಲುವು| ಮಾಧವನೆನ್ನಲು|

ಭೇದವಿಲ್ಲದೆ ದೈವ ಮೆಚ್ಚುವುದು ||3||

ಹರಿಗೆ ವೈಕುಂಠವೆ| ಹರಗೆ ಕೈಲಾಸವೆ|

ಪರಮೇಷ್ಟಿಗಾಸತ್ಯಲೋಕವೆ||

ಶಿವ ಬೇರೆಯಿಲ್ಲ ಕೇಶವ ಬೇರೆ ತಾನಿಲ್ಲ|

ಶಿವಕೇಶವರೊಳೇನು ಭೇದವಿಲ್ಲ ||4||

ಇರವೆಂಬುದೇ ಹರಿಯು | ಅರಿವೆಂಬುದೇ ಹರನು |

ಇರವರಿವುಗಳಲ್ಲಿ ಭೇದವುಂಟೆ ||

ಇರವಿಲ್ಲದರಿವುಂಟೆ | ಅರಿವಿಲ್ಲದಿರವುಂಟೆ ||

ಇರವರಿವು ಕೂಡದಾನಂದವುಂಟೇ ||5||

ಹರಿಯವ ಲೋಕವು ಬೇರೆ | ಹರನ ಲೋಕವು ಬೇರೆ ||

ಇರುವುದೆಂಬುದು ಬರಿಯ ಜ್ಞಾನ ||

ಹರ ಬೇರೆಯಲ್ಲ ಶ್ರೀ | ಹರಿ ಬೇರೆಯಿಲ್ಲೆಂದು ||

ಅರಿತುಕೊಳ್ಳುವುದೇ ಸುಜ್ಞಾನ ||6||

ಸಗುಣ ಸ್ವರೂಪವೆ | ಹರಿಯೆನಿಸಿ ಬೆಳಗಿತು |

ನಿರ್ಗುಣ ರೂಪವೆ ಹರನಾಯಿತು ||

ಸಗುಣ ನಿರ್ಗುಣದೊ | ಳಗೆರಕವಾಗಿಹ ಪರಿಯ |

ಸೊಗದಿ ತೋರಿದನು ನರಹರಿಯು ||7||

ಕ್ಷಮೆಯ ಬಿಟ್ಟಿರಬೇಡ ಮನುಜಾ| ನೀನು|

ಕ್ಷಮೆಯ ಬಿಟ್ಟಾಕ್ಷಣ ನೀನಪ್ಪೆ ಧನುಜಾ ||ಪ||

ಕ್ಷಮೆಯುಳ್ಳವನೆ ನೋಡು ದಿವಿಜಾ| ನೀನು|

ಕ್ಷಮೆಯ ಹೊಂದಿರೆ ಶಿವನು ಕ್ಷಮಿಸುವುದೆ ಸಹಜಾ ||ಅಪ||

ಕರುಣೆಯಿಂದಿರಬೇಕು ಮನುಜಾ| ನೀನು|

ಕರುಣೆ ಬಿಟ್ಟಿರುವಾಗ ನೀನಾದೆ ಧನುಜಾ||

ಕರುಣಾಂತರಂಗನೆ ದಿವಿಜಾ||

ನೀನು| ಕರುಣಿಯಾದರೆ ಶಿವನು ಕರುಣಿಪ ಸಹಜಾ ||1||

ಶಾಂತಿಯಿಂದಿರಬೇಕು ಮನುಜಾ| ದಿವ್ಯ|

ಶಾಂತಿಯಂ ಬಿಡಲಾಗಿ ನೀನೊಬ್ಬ ಧನುಜಾ||

ಶಾಂತಿತಪವುಳ್ಳಾತ ದಿವಿಜಾ| ನೀನು|

ಶಾಂತನಾದರೆ ಶಿವ ಸಂತೋಷ ಸಹಜಾ ||2||

ಸಮತೆಯಾರ್ಜಿಸು ಎಲೆ ಮನುಜಾ| ನೀನು|

ಸಮತೆ ವರ್ಜಿಸಿದಾಗ ನೀನಾದೆ ಧನುಜಾ||

ಸಮತೆಯುಳ್ಳವ ತಾನೆ ದಿವಿಜಾ| ಸರ್ವ|

ಸಮಭಾವ ನರಹರಿ ಪೇಳ್ದುದೆ ಸಹಜಾ ||3||

ಎಂಥ ಗಂಡನ ಕೂಡಿದೆಲೆ ತಾಯೆ | ಓ ಪಾರ್ವ್ವತಿಯೆ ನೀ|

ನಿಂಥ ಪುಂಡನ ನೋಡಿ ಮಹಮಾಯೆ ||ಪ||

ನಿಂತ ಬೆಟ್ಟದ ಮೇಲೆ ಬಾಳುವೆ|

ಚಿಂತೆಯಿಲ್ಲದೆ ಸರ್ಪ ಒಡವೇ||

ಎಂತ ಮೈಯೊಳು ಸುತ್ತಿವಸ್ತ್ರವೆ|

ಎಂತ ಆನೆಯ ತೊಗಲನುಟ್ಟನು ||ಅಪ||

ಜಾತೀ ರೀತಿಯ ಬಿಟ್ಟು ಬಿಟ್ಟವನು| ಸರ್ವರೊಳು ಕೂಡುತ||

ಪ್ರೀತಿಯಿಂದುಂಡುಟ್ಟುಕೆಟ್ಟವನು||

ಭೀತಿಯಿಲ್ಲದೆಯಮನಕೊಂದನು|

ನೀತಿಯಿಲ್ಲದೆ ಸುತನ ಕಡಿದನು||

ಸೋತುಹೋಗುವುದೆಂಬುದರಿಯನು|

ಶ್ವೇತ ಪಾಪಿಗೆ ಮುಕ್ತಿಕೊಟ್ಟನು ||1||

ತಿರುಪೆ ಮಾಡುತ ಹೊಟ್ಟೆ ಹೊರೆವವನಾ| ಸಿಕ್ಕಿದ್ದು ಎಲ್ಲವ|

ತುರುಕಿ ಹೊಟ್ಟೆಗೆ ಸಾಲದೆಂಬವನಾ||

ಬೆರಳಿನಿಂದಲೆ ಬರೆದ ಚಕ್ರದಿ|

ಅರಿಜಲಂಧರನನ್ನು ಕೊಂದನು||

ಮರೆಯ ಮೋಸದಿ ಭಸ್ಮನನುಸಂ|

ಹರಿಸಿದಾತನ ನಂಬಬಹುದೇ ||2||

ಜಡೆಯೊಳಗೆ ಗಂಗೆಯನು ಬಚ್ಚಿಟ್ಟಾ| ನಿನ್ನನ್ನು ಮೋಸವ|

ಪಡಿಸಲೆಂದೇ ಕಾಮನನು ಸುಟ್ಟಾ||

ಜಡಿದು ತ್ರಿಪುರಾಸುರರ ಕೊಂದನು|

ಹಿಡಿದು ದಕ್ಷನ ತಲೆಯ ಕಡಿಸಿದ||

ಹುಡುಗ ಚೀಲಾಳನನು ಕೊಲ್ಲಿಸಿ|

ತಡವ ಮಾಡದೆ ತಿಂದ ನರಹರಿ ||3||

ಕೋಪ ಮಾಡಬೇಡ ಮನುಜ| ಕೋಪವಿರಲು ನೀನೆ ಧನುಜ||

ಕೋಪ ಬಿಡಲು ನೀನೇ ದಿವಿಜ ರೂಪನೇ ನಿಜಾ ||ಪ||

ಪಾಪಕಾರ್ಯ ಮಾಡಬೇಡ| ತಾಪವನ್ನು ಕೂಡಬೇಡ||

ರೂಪದಲ್ಲಿ ಭ್ರಾಂತಿಯಿಡಲು ಪಾಪಿಯಾಗುವೆ ||ಅಪ||

ವೇದವನ್ನು ಹಳಿಯಬೇಡ| ವಾದವನ್ನು ಹೂಡಬೇಡ||

ಬೋಧೆಯನ್ನು ನಂಬಿದಾಗ ಸಾಧುವೆನಿಸುವೆ||

ಭೇದ ಬುದ್ಧಿ ಮಾಡಬೇಡ| ಖೇದ ಮೋದ ಕೂಡಬೇಡ||

ಹಾದಿಯರಿತು ನಡೆದರಾಗ ಮುಕ್ತನೆನಿಸುವೆ ||1||

ಪರರ ಮಾತು ನಂಬಬೇಡ| ಗುರುವಿನಾಜ್ಞೆ ಮೀರಬೇಡ||

ಗುರುವು ಪೇಳ್ದ ಗುಟ್ಟು ಮಾತ್ರ ಪರರಿಗರುಹದೇ||

ಶರಣರನ್ನು ಬೇಡಿಕೊಂಡು| ಹರುಷದಿಂದ ಕೂಡಿಕೊಂಡು|

ಪರಮ ಜ್ಞಾನಿಯಾಗಿ ಬಾಳು ವಿರಸವಿಲ್ಲದೇ ||2||

ಕಾಲವ್ಯರ್ಥ ಕಳೆಯಬೇಡ| ಹಾಳು ಹರಟೆ ಮಾಡಬೇಡ||

ಬಾಳು ಹಸನು ಮಾಡಿಕೊಂಡು ಸೀಳು ಸಂಶಯ||

ಮೂಲಬ್ರಹ್ಮ ತತ್ವವಿರುವ| ಕೀಲನರಿತು ನಿತ್ಯ ಸುಖವ|

ತಾಳು ನರಹರೀಂದ್ರನಿಂದ ಕೇಳಿ ನಿಶ್ಚಯ ||3||

ಅತಿಥಿಯೆ ಪರದೈವಾ| ತಾಸ| ದ್ಗತಿಯನು ನಮಗೀ |ಪ||

ಅತಿಥಿಯೆ ಶಿವನೆ| ನ್ನುತ ಶೃತಿ ಪೇಳ್ವುದು||

ಪ್ರತಿಯಾಡದೆ ಕೊಡ| ಲತಿಸುಖವಪ್ಪುದು ||ಅಪ||

ತಾನೇ ಕೊಡುವವನು| ಸರ್ವವ| ತಾನೇ ಬೇಡುವನು||

ತಾನೇ ಕೊಟ್ಟುದ| ತನಗೇ ಕೊಟ್ಟರೆ||

ಆನಂದದಿ ಶಿವ| ಜ್ಞಾನವ ನೀಡುವ ||1||

ಎಲ್ಲಾ ನಿನಗೆಂದ| ಭಕ್ತರ| ಸೊಲ್ಲಿನೊಳಗೆ ನಿಂದಾ||

ಎಲ್ಲೆಲ್ಲಿಯು ತಾ| ನಿಲ್ಲುತ ತೋರುವ||

ಎಲ್ಲಾ ರೂಪಗ| ಳಲ್ಲಿಯೆ ಸಾರುವ ||2||

ದಾನದೊಳಗೆ ಅನ್ನ | ಉತ್ತಮ| ದಾನವು ನೋಡಣ್ಣಾ||

ಜ್ಞಾನದಾನ ನಿಜ| ದಾನವುಯೆಂಬುದ|

ಜ್ಞಾನದಾನಿ ನರ| ಹರಿಯೇ ನಂಬಿದ ||3||

ಮೂರು ಅಂಗಗಳಲ್ಲಿ| ಮೂರು ಲಿಂಗವನುಳ್ಳ

ವೀರಶೈವನ ನೋಡು ತಂಗೀ ||ಪ||

ಮೂರು ವರ್ಣದ ಜ್ಯೋತಿ| ತೋರಿ ಚಿತ್ಕಳೆಯಾಗಿ||

ಮೀರಿ ಬೆಳಗುವ ಮಂಗಳಾಂಗಿ ||ಅ ಪ||

ಇಷ್ಟಲಿಂಗವೆ ತನ್ನ| ಇಷ್ಟದಂತೀ ತನುವ|

ಕಟ್ಟಿಕೊಂಡಿರುತಿದೆ ತಂಗೀ||

ನಷ್ಟವಾಗುವ ದೇಹ| ಸೃಷ್ಟಿ ಕಾರಣವಾಗಿ|

ತುಷ್ಟಿ ಹೊಂದಿತು ಮಂಗಳಾಂಗಿ ||1||

ಪ್ರಾಣ ಲಿಂಗವೆ ಸರ್ವ| ಪ್ರಾಣಧರ್ಮವ ಹಿಂಗಿ|

ಕಾಣದಂತಾಡುವುದು ತಂಗೀ||

ತಾನೆ ಸರ್ವೇಂದ್ರಿಯ| ಶ್ರೇಣಿಗಾಧಾರವಾ |

ಮೌನ ಮಂತ್ರವು ಮಂಗಳಾಂಗಿ ||2||

ಭಾವಲಿಂಗವು ಸರ್ವ| ಭಾವಗಳ ತಾನುಂಗಿ |

ಜೀವ ಭಾವವ ಹಿಂಗಿ ತಂಗೀ||

ಕೇವಲತ್ವವ ಹೊಂದಿ| ಭಾವಲಿಂಗೈಕ್ಯ ಗುರು|

ದೇವ ನರಹರಿ ಮಂಗಳಾಂಗಿ ||3||

ಲಿಂಗ ಪೂಜಿಸಿ| ಹಿಂಗಿಕೊಳ್ಳಿರಿ| ಅಂಗ ಭಾವವನು ||ಪ||

ಲಿಂಗ ಶಿವನೊಳು| ಅಂಗಜೀವನು||

ಸಂಗವಾಗಲು| ಜಂಗಮನಹನು ||ಅಪ||

ತನುವನರ್ಪಿಸಿ ಇಷ್ಟಲಿಂಗಕೆ| ತನುವಿನಾಚರಣೆ||

ತನಗೆಯಿಲ್ಲೆಂದೆಲ್ಲ ಕರ್ಮವ|

ನನುವಿನಿಂದಾಚರಣೆಗೈಯುತ ||1||

ಪ್ರಾಣಲಿಂಗಕೆ ವಚನದರ್ಪಣ | ತಾನೆಯಾಗಿರಲು ||

ಹೀನ ನುಡಿಗಳನೇನು ನುಡಿಯದೆ|

ಧ್ಯಾನ ಮಾಡುತ ಮಂತ್ರಮಯವಹ ||2||

ಮನವನರ್ಪಿಸೆ ಭಾವಲಿಂಗಕೆ|

ಮನದಿ ಶಿವಮಯದ||

ನೆನಹು ನಿಂತಿರೆ ಸರ್ವಕಾಲವು|

ಜನಿಸೆ ನರಹರಿ ಗುರುಸಂಧಾನವು ||3||

ಎಂಥ ಮೂಗುತಿಯಿಟ್ಟನು| ಗುರು|

ವೆಂಥ ಮೂಗುತಿ ಕೊಟ್ಟನು ||ಪ||

ಅಂತರಂಗದ| ಚಿಂತೆಯೆಲ್ಲವ|

ಸಂತವಿಸಿದಾ| ದಿಟ್ಟನು ||ಅಪ||

ಗಂಡನುಳ್ಳಾ ಗರತಿಗೆ| ತಾ||

ಮುಂಡೆಯಾಗದ ಗುರತಿಗೆ|

ಕಂಡವರು ಮುತ್ತೈದೆ ಎನ್ನುತ|

ಕಂಡು ಕರೆವರು ಪ್ರೀತಿಗೆ ||1||

ಬೆಲೆಗೆ ಸಿಕ್ಕದ ಮೂಗುತೀ| ತಾ|

ನಳತೆಯಿಲ್ಲದ ಮೂಗುತೀ||

ಕಳೆದುಕೊಂಡರೆ ಸಿಕ್ಕದು| ನಿಜ|

ತಿಳಿದುಕೊಳ್ಳದೆ ದಕ್ಕದು ||2||

ಧರೆಯ ಧರಿಸಿದ ಮೂಗುತೀ| ಇದು

ಪರಮ ಪಾವನ ಮೂಗುತೀ||

ಕರುಣಿ ನರಹರಿ ಪಾದವೇ| ಗತಿ|

ಕಾರಣಾತ್ಮಕ ಮೂಗುತೀ ||3||

ಗುರು ಕೃಪೆಯೆನಗಾಯಿತು| ಶ್ರೀ ಗುರುವಿಂದ|

ಪರಿಭವ ಕೊನೆಯಾಯಿತು ||ಪ||

ಕುರುಹನು ತಿಳಿಯದೆ| ಕುರುಡನಂತಿದ್ದೆನಗೆ||

ವರ ಮಂತ್ರ ಬೋಧಿಸಿ| ಹರಸಿ ಮುಕ್ತಿಯ ನೀಡಿದ ||ಅಪ||

ತಾಪದಿ ಬಳಲುತಿದ್ದೆ| ಮೈ ಮರೆಯುತ|

ಪಾಪದಿ ಮುಳುಗುತಿದ್ದೆ|| ತಾಪಸೋತ್ತಮಾದಿ ದಿವ್ಯ|

ರೂಪು ತೋರಿ ಕರುಣೆ ಬೀರಿ||

ಪಾಪತಾಪವೆಲ್ಲ ಕಳೆದು | ಪಾಪಿಯನ್ನು ಪಾಲಿಸಿದನು ||1||

ಕಾಮಕ್ರೋಧವ ಬಿಡಿಸಿದ| ನಿರ್ಮಲವಾದ|

ನೇಮನಿಷ್ಠೆಯ ಹಿಡಿಸಿದ|

ಹೇಮ ಕಾಮಿನಿ ಭೂಮಿ| ಪ್ರೇಮವನಳಿಸಿ| ನಿ|

ರಾಮಯ ಬ್ರಹ್ಮದಿ| ಸಾಮರಸ್ಯವಗೈದ ||2||

ಯನ್ನನುದ್ಧರಿಸಲೆಂದು| ಮಾನವನಾಗ

ಯನ್ನಂತೆ ಜನಿಸಿ ಬಂದು||

ತನ್ನ ನಿಜ ರೂಪವ| ಯನ್ನಲ್ಲಿ ತೋರಿಸಿ|

ಧನ್ಯವ ಮಾಡಿದ| ಮಾನ್ಯ ಶ್ರೀ ನರಹರಿ ||3||

ಎಂಥಾ ಗಾರುಡಿಗಾರನು| ಸದ್ಗುರುರಾಯ| ಮಾತಿನ ಮಂತ್ರಗಾರ ||ಪ||

ಅಂತರಂಗದೊಳಿದ್ದ| ಚಿಂತೆಯ ಭೂತವ|

ಮಂತ್ರದಿಂದೋಡಿಸಿ| ದಂಥ ಮಾಂತ್ರಿಕನೀತ ||ಅಪ||

ಹರಿದಾಡುತಿಹ ಸರ್ಪವ| ಬುಟ್ಟಿಯೊಳಿಟ್ಟು| ಸರಸದಿಂದಾಡಿಸಿದ||

ನರರಿಗೆ ಭಯಂ| ಕರವಾದ ಸರ್ಪನ|

ಹರಿತಮಾಗಿಹದಂತ| ವಿರದೆ ಕಿತ್ತಿಟ್ಟನು ||1||

ತೋರುವ ಜಗವೆಲ್ಲವು| ಕಾಣದ ಹಾಗೆ| ಮೀರಿದಿಂದ್ರ ಜಾಲವ||

ತೋರಿ ಮರೆಸಿದನು| ತೋರದಾತ್ಮನ ಕಾಣ|

ಲರಿದು ಜ್ಞಾನಾಂಜನ| ತೋರಿದ ಕರದೊಳು ||2||

ನರರ ಪಾವನಕಾಗಿಯೇ | ಅವತರಿಸಿದ | ನರಹರಿ ತಾನಾಗಿಯೇ ||

ಅರುಹಿಯನ್ನೊಳು ಜ್ಞಾನ | ಕರವಿಟ್ಟು ಶಿರದೊಳು |

ಮರುಜನ್ಮವಿಲ್ಲೆಂದು | ಹರಸಿ ಮುಕ್ತಿಯನಿತ್ತನು ||3||

ಮೂರವಸ್ಥೆಗೆ ಸಾಕ್ಷಿ ಲಿಂಗಯ್ಯ| ನೀನೆ|

ಮೂರು ಮಾತ್ರೆಯ ಪ್ರಣವ ಲಿಂಗಯ್ಯ ||ಪ||

ಮೂರು ಮಾತ್ರೆಗೆ ಮೂಲ ಲಿಂಗಯ್ಯ| ನೀನೆ|

ಮೂರು ದೇಹಾತೀತ ಲಿಂಗಯ್ಯ ||ಅಪ||

ಉಭಯವಾದುದೆ ಭಕ್ತಿ ಲಿಂಗಯ್ಯ| ನಿನ್ನ|

ಅಭಯವಾಗಲು ಮುಕ್ತಿ ಲಿಂಗಯ್ಯ||

ಶುಭಕರವು ಸುಜ್ಞಾನ ಲಿಂಗಯ್ಯ| ನೀನೆ|

ಪ್ರಭುವಾದೆ ಲೋಕಕ್ಕೆ ಲಿಂಗಯ್ಯ ||1||

ಸದ್ರೂಪ ನೀನಾದೆ ಲಿಂಗಯ್ಯ| ನಿತ್ಯ|

ಚಿದ್ರೂಪವಾಗಿರುವೆ ಲಿಂಗಯ್ಯ||

ಶುದ್ಧ ಬುದ್ಧನು ನೀನೆ ಲಿಂಗಯ್ಯ| ಮಂತ್ರಾ|

ಸಿದ್ಧ ಶಿವಯೋಗಿಯು ನೀನೆ ಲಿಂಗಯ್ಯ ||2||

ದೂರವಿಲ್ಲವು ಮುಕ್ತಿ ಲಿಂಗಯ್ಯ | ನಿನ್ನ |

ಸೇರಲಾಕ್ಷಣವಾಯ್ತು ಲಿಂಗಯ್ಯ ||

ಕಾರಣಾತ್ಮಕ ನೀನೆ ಲಿಂಗಯ್ಯ | ಜ್ಞಾನ |

ಮೂರುತಿ ನರಹರಿಯೆ ಲಿಂಗಯ್ಯ ||3||

ಜೋ ಜೋ ಕಂದ | ಜೋ ಜೋ ಮುಕುಂದ||

ಜೋ ಜೋ ರಾಮ| ಜೋ ಜೋ ಕೃಷ್ಣ ಜೋಜೋ ||ಪ||

ಶುದ್ಧನೆ ಬುದ್ಧನೆ ಆಧ್ಯಾತ್ಮ ರೂಪ||

ಅರ್ಧಮಾತೃಕೆಯಲಿ ಪ್ರಸಿದ್ಧ ಚಿದ್ರೂಪ|| ಜೋಜೋ ||1||

ನಾದ ಸ್ವರೂಪನೆ ಬಿಂದು ಪ್ರದೀಪನೇ||

ನಾದ ಬಿಂದುಗಳೇಕಮಾದ ಸ್ವರೂಪನೇ|| ಜೋಜೋ ||2||

ಸದ್ರೂಪ ಚಿದ್ರೂಪ ಆನಂದ ರೂಪ ||

ಮುದ್ರಾತ್ಮ ಕರುಣಾ ಸಮುದ್ರ ಸುಖರೂಪ ||ಜೋಜೋ ||3||

ಸಕಲ ಚರಾಚರಾತ್ಮಕ ದಿವ್ಯ ಸ್ವರೂಪ||

ಪ್ರಕಟಿಸಿ ವೀಲೀನ ಮಾಡುವ ಚಿತ್ಸ್ವರೂಪ|| ಜೋಜೋ ||4||

ಸರ್ವರೊಳಗಾಡುತ್ತ ಬೆರೆದಿರುವ ದೇವ||

ಸರ್ವೇಶ್ವರನೆ ಸರ್ವ ಸಾಕ್ಷಿ ನರಹರಿಯೇ|| ಜೋಜೋ ||5||

ದೇಹ ಕೈಲಾಸ ಕಾಣಿರೋ| ಸುಜ್ಞಾನಿಯ|

ದೇಹ ವೈಕುಂಠ ಕಾಣಿರೋ ||ಪ||

ದೇಹ ಮೋಹವೆಲ್ಲ ಕಳೆದು| ಸೋಹಮೆಂಬ ಭಾವ ತಳೆದು||

ದೇಹದಲ್ಲೆ ಶಿವನ ಕಾಣಿರೋ| ಗುರುಪಾದವ|

ಮೋಹದಿಂದ ಪೂಜೆ ಮಾಡಿರೋ ||ಅಪ||

ಸುಳ್ಳೇ ಸಂಸಾರ ಕಾಣಿರೋ| ಈ ಬಾಳುವೆ|

ಎಳ್ಳಷ್ಟು ಸಾರವಿಲ್ಲವೋ||

ಜಳ್ಳುದೇಹ ನಿತ್ಯವಲ್ಲ| ಪೊಳ್ಳು ಲೋಕ ಸತ್ಯವಲ್ಲ||

ಎಲ್ಲ ನಿನ್ನದೆಂದು ಕೊಂಡೆಯೋ| ಕಡೆಗೆಲ್ಲವ|

ಇಲ್ಲೆ ಬಿಟ್ಟು ಹೋಗಿ ಬಿಟ್ಟೆಯೋ ||1||

ಮೋಸ ಹೋಗಿ ಕೆಡಲು ಬೇಡಿರೋ| ಈ ಲೋಕದ|

ಆಸೆಯಿಟ್ಟು ಸಾಯಬೇಡಿರೋ||

ಆಸೆಯೇ ಪಿಶಾಚಿಯಾಗಿ| ಏಸು ಜನ್ಮವನ್ನು ನೀಗಿ|

ನಾಶವಾಗಿ ಲೋಕ ಕೆಟ್ಟಿತೊ| ನರಹರಿಯೊಳು|

ದಾಸನೆನಲು ಪಾಪ ಬಿಟ್ಟಿತೋ ||2||

ದೇವದುಂದುಭೀ ಸುನಾದವ| ಕೇಳ್ದವ|

ದೇವನಲ್ಲಿ ಐಕ್ಯನಾಗುವ||

ಭಾವದಲ್ಲಿ ಶುದ್ಧವಿರುವ| ಸಾವು ಗೆದ್ದು ನಿತ್ಯ ಸುಖವ|

ನೀವ ನರಹರೀಂದ್ರ ಪಾದವ| ಸೇರುವ|

ಪಾವನಾತ್ಮನಾಗಿ ಬಾಳುವ

||3||

ಸೂತ್ರಧಾರಿ ಈತನೆಂದು ತಿಳಿಯಿರಮ್ಮ| ನಿತ್ಯನೆನ್ನಿರಮ್ಮಾ ||ಪ||

ಪಾತ್ರಧಾರಿಯಂತೆ ನಟಿಸಿ ನಿಂದಾನಮ್ಮ| ನಿತ್ಯ ಮುಕ್ತನಮ್ಮ ||ಅಪ||

ಮನಸು ಕೂಡಿ ನೆನಹು ಮೂಡಿ| ಇದ್ದನಮ್ಮ| ಮನೋಕಾಂತನಮ್ಮ||

ಕನಸು ಕಂಡು ಜನಿಪ| ಸುಖವನಾಂತಾನಮ್ಮ| ಚಿನ್ಮಯಾತ್ಮಾನಮ್ಮ | |1||

ಬುದ್ಧಿಯಲ್ಲಿ ಬದ್ಧನಾಗಿ| ತಿಳಿದನಮ್ಮ| ಜ್ಞಾನವಂತನಮ್ಮ||

ಇದ್ದು ಇಲ್ಲದಂತೆ ಸುಖವ| ತಳೆದನಮ್ಮ| ಪರಿಶುದ್ಧನಮ್ಮ ||2||

ಎಲ್ಲ ಕರಣದಲ್ಲಿ ತಾನೆ| ಇದ್ದನಮ್ಮ| ಕಾಣಲೊಲ್ಲನಮ್ಮ||

ಎಲ್ಲ ಇಂದ್ರಿಯಕ್ಕೆ| ಸಾಕ್ಷಿಯಾದಾನಮ್ಮ| ನಿತ್ಯ ಮುಕ್ತನಮ್ಮ ||3||

ನಡೆಯ ತಿದ್ದಿ ನುಡಿಯ ಶುದ್ಧಿ| ಮಾಡ್ಯಾನಮ್ಮ| ಗೂಢ ಬ್ರಹ್ಮನಮ್ಮ||

ಒಡಲ ಬುದ್ಧಿ ಬಿಡಿಸಿ| ಮುಕ್ತಿ ಕೊಟ್ಟನಮ್ಮ| ಶುದ್ಧಶಾಂತಾನಮ್ಮ ||4||

ಸುಖವನೆಲ್ಲ ಮುಖದಿ| ಪಡೆಯುತಿರ್ಪ ನಮ್ಮ| ಸುಖವಂತನಮ್ಮ||

ಸುಖಿಯು ನಮ್ಮ ನರಹರೀಂದ್ರ| ನೋಡಿರಮ್ಮ| ಶಂಕೆಯಿಲ್ಲವಮ್ಮ ||3||

ಮೇಘ ಸೈನ್ಯವ ಕೂಡಿ ಬಾ| ಬಲ|

ವಾಗಿ ಮಳೆಯನು ಕರೆದು ಬಾ ||ಪ||

ಬೇಗ ಹರುಷವ ಮಿಂಚಿ ಬಾ| ನಮ|

ಗಾಗಿ ಬಾ ಮಳೆರಾಯ ಬಾ ||ಅಪ||

ಹಗಲಿರುಳು ಅನುತಾಪವು| ಜೀ|

ವಿಗಳಿಗಾಯ್ತಿದು ಶಾಪವು||

ಜಗವ ಹಬ್ಬಿತು ಪಾಪವು| ಸೋ|

ಜಿಗದ ಜೀವನ ಲೋಪವು ||1||

ಹಬ್ಬಿ ಆಹಾಕಾರವು| ಬಲು|

ನಿಬ್ಬರದ ಬರ ಘೋರವು||

ಉಬ್ಬಿ ಹಿಂಸಾಸ್ವೈರವು| ಬಡಿ|

ದಬ್ಬಿರಿಸಿತ ವಿಚಾರವು ||2||

ಕಲ್ಪಿಸಿದ ಸೌಖ್ಯಂಗಳೀಯುವ|

ಕಲ್ಪವೃಕ್ಷವು ನೀನೆಲಾ||

ಕಲ್ಪನಾರಾಹಿತ್ಯ ಮಾಡುವ |

ಶಿಲ್ಪಿ ನೀನೇ ನಿಜವಲಾ ||3||

ದೇವಕೋಟಿಯನಾಳುವೇ| ನೀ|

ಜೀವಕೋಟಿಯ ಬಾಳುವೇ||

ಕಾವ ಧರ್ಮವ ತಾಳುವೇ| ಸಂ|

ಜೀವನಾಮೃತ ವೀಯುವೇ ||4||

ಜಗಕೆ ಪಾವನ ನೀನಲಾ| ಮೂ|

ಜಗದ ಜೀವನ ನೀನಲಾ||

ಜಗಕೆ ದೇವನು ನೀನಲಾ| ಝಗ|

ಝಗಿಪ ನರಹರಿ ನೀನಲಾ ||5||

ತನುವು ಎಂಬ ಹರಿವ ತೇರು ಏನು ಸುಂದರ|

ಘನದ ಪಂಚ ಕಲಶವುಳ್ಳ ತೇರು ಬಂಧುರ ||ಪ||

ಮಿನುಗುವೇಳು ನೆಲೆಗಳನ್ನು ಪಡೆದುಕೊಂಡಿದೆ|

ಕಾಲಕರ್ಮದಿಂದ ತಾನೆ ಹುಟ್ಟಿಕೊಂಡಿದೆ ||ಅಪ||

ತೇರು ಬಹಳ ಚಿತ್ರ ಪಠಗಳಿಂದ ತುಂಬಿದೆ|

ಭಾರೀ ಒಡವೆ ವಸ್ತ್ರದಿಂದ ಶೋಭಿಸುತ್ತಿದೆ||

ತೇರಿನೊಳಗೆ ಇಪ್ಪತ್ತೈದು ಮಂದಿ ಕೂಡಿದೆ|

ಮೂರು ಮೂರ್ತಿಗಳಿಗೆ ಪೂಜೆಯಾಗುತ್ತಲಿದೆ ||1||

ಹತ್ತು ವಿಧದ ನಾದವಾದ್ಯ ನುಡಿಯುತಿರ್ಪುವು|

ಆತ್ಮ ಜ್ಞಾನ ನಂದಿ ಧ್ವಜವು ಕುಣಿಯುತಿರ್ಪುದು||

ಸುತ್ತಮುತ್ತ ಸುರರು ಬಂದು ನೋಡುತಿರ್ಪರು|

ಮತ್ತೆ ಮತ್ತೆ ಮುನಿಗಳೆಲ್ಲ ಕೂಡುತಿರ್ಪರು ||2||

ಎಲ್ಲ ತೇರುಗಳನು ತಾನೆ ಕಟ್ಟುತಿರ್ಪುದು|

ಎಲ್ಲ ತೇರುಗಳನು ತಾನೆ ಎಳೆಯುತಿರ್ಪುದು||

ಎಲ್ಲಿ ಹೋದರಿಂಥ ತೇರು ಸಿಕ್ಕಲಾರದು|

ಇಲ್ಲೆ ಇರುವ ತೇರನೇಕೆ ನೋಡಬಾರದು ||3||

ಪೂರ್ವ ಪುಣ್ಯದಿಂದ ತೇರು ಬಂತು ಕಾಣಿರೇ|

ತೀರ್ವ ಕಾಲ ಬಂದರಲ್ಲೇ ಬಿತ್ತು ಕಾಣಿರೇ||

ಪರ್ವ ಕಾಲದಲ್ಲಿ ತೇರು ಮುಂದೆ ಸಾಗಿತು|

ಸರ್ವ ಕಾಲ ಶಿವನ ಸೇವೆ ಮಾಡಲಾಯಿತು ||4||

ಹೂವು ಪತ್ರೆ ಕಾಯಿ ಹಣ್ಣು ಎಲ್ಲಾ ತನ್ನಿರೆ|

ಭಾವ ಭಕ್ತಿಯಿಂದ ಇಲ್ಲೆ ಪೂಜೆ ಮಾಡಿರೆ||

ನಾವು ನೀವು ಎಂಬ ಭೇದವಳಿದು ಕೊಳ್ಳಿರೆ|

ಕಾವ ದೇವ ನರಹರಿಯನು ಕೂಡಿಕೊಳ್ಳಿರೆ ||5||

ಶರೀರ ನಾನೆಂಬುದೆ| ದುರಿತ ಮೈಲಿಗೆಯು ||ಪ||

ಶರೀರ ಸಾಕ್ಷಿಯು ತಾ| ನೆಂ| ದರಿವುದೆ ಮಡಿಯು ||ಅಪ||

ಶರೀರ ಕರಣೇಂದ್ರಿಯ ಬೆರೆತುದೆ ಮೈಲಿಗೆ|

ಶರೀರೇಂದ್ರಿಯ ತನ್ನದಲ್ಲವೆನೆ ಮಡಿಯು ||1||

ಪರಮ ವೈರಾಗ್ಯವೆ ಪಾವನ ಮಡಿಯು|

ದುರಿತ ದುಃಖ ತಾನೆಂಬುದೆ ಮೈಲಿಗೆಯು ||2||

ಆತ್ಮ ತಾನೆಂಬುದೆ ನಿರ್ಮಲ ಮಡಿಯು|

ಆತ್ಮ ತಾನಲ್ಲವೆಂಬುದೆ ಮೈಲಿಗೆಯು ||3||

ಜೀವ ಭ್ರಮೆಗಳಿಂದ ಬಳಲ್ವುದೆ ಮೈಲಿಗೆಯು|

ಜೀವ ಭ್ರಾಂತಿಯನಳಿದ ಶಾಂತಿಯೆ ಮಡಿಯು ||4||

ಸಾವು ಹುಟ್ಟುಂಟೆಂಬ ಭಾವವೆ ಮೈಲಿಗೆಯು||

ಸಾವು ಹುಟ್ಟು ನಿನಗಿಲ್ಲವೆಂದ ನರಹರಿಯು ||5||

ಒಂಭತ್ತು ಕೋವಿಯ ಹುತ್ತವು| ತಾ|

ನಿಂಬುಗೊಂಡಿದೆ ಘಟಸರ್ಪವು ||ಪ||

ಕುಂಭಕದೊಳಗಿದು ಗುಪ್ತವು| ವಿ|

ಜೃಂಭಿಸಿ ಮತ್ತೆ ಸಂಚಾರವು ||ಅಪ||

ಘಟ ಸರ್ಪದಿಂದಲೆ ಯೋಗವು| ಸಂ|

ಘಟಿಸುತ್ತಲಿದೆ ನಿಜ ಭೋಗವು||

ಘಟಚಕ್ರದೊಳಗತಿ ವೇಗವು| ಪ|

ರ್ಯಟರನದಿಂದಲೆ ಮಂತ್ರ ಯೋಗವು ||1||

ಹೊರಗೆ ಬಂದಾಗಲೆ ರೇಚಕ| ಒಳ|

ಸರಿಯುತ್ತಲಿರ್ಪುದೆ ಪೂರಕ||

ಧರೆಯಲ್ಲಿ ತಾ ಸರ್ವವ್ಯಾಪಕ| ನಿಂ|

ತಿರುವಾಗ ತಾನಿದು ಕುಂಭಕ ||2||

ಪರಮೇಷ್ಟಿ ವಾಹನ ಹಂಸನು| ಶ್ರೀ|

ಹರಿಯೇರಲೀತನು ಗರುಡನು||

ಹರನೇರಿದಾಗಲೆ ವೃಷಭನು| ನರ|

ಹರಿಯೋಗಿಯೊಳು ಸುಖವಂತನು ||3||

ಶಿವನೇ ಮಾಡುವ ಯೋಗವ ತಿಳಿದವ| ಶಿವ ತಾನಾಗಿರುವ ||ಪ||

ಶಿವಯೋಗದೊಳನುಭವವನು ಪಡೆದವ| ಭವವನು ನೀಗಿರುವಾ | |ಅಪ||

ರೇಚಕ ಪೂರಕ ಕುಂಭಕ ಬಿಟ್ಟರೆ| ಯೋಗವು ಬೇರಿಲ್ಲ||

ರೇಚಕ ಪೂರಕ ಕುಂಭಕ ಮಾಡದ ಜೀವಿಯು ಮೊದಲಿಲ್ಲ ||1||

ತಿಳಿಯದೆ ಮಾಡಿದ ಯೋಗದೊಳೇನೂ| ಫಲವಾಗುವುದಿಲ್ಲ||

ತಿಳಿದು ಮಾಡಿದರೆ ಜ್ಞಾನದ ಸತ್ಫಲ| ಫಲಿಸದೆ ಬಿಡಲಿಲ್ಲ ||2||

ಮಹೀತತ್ವಗತ ಮಹಾ ಮಹಿಮಯುತ| ಮಹಾದೇವನಿರುತ||

ವಿಹಾರಗೈಯುತಲಿಹುದನು ತಿಳಿಯಲು ಸಹಜ ಯೋಗವಿಹಿತ ||3||

ಹಕಾರ ರೇಚಕ ಸಕಾರಪೂರಕ| ಅಖಂಡ ಬಿಂದುಮುಖಾ||

ಸುಖಾಂತ ಕುಂಭಕ ಪ್ರಕಾರಬ್ರಹ್ಮದ| ಪ್ರಕಾಶ ನಿತ್ಯಸುಖ ||4||

ಯೋಗವೆ ಕಾರಣ ಮಹಿಮೆಗಳೆಲ್ಲಕೆ| ಭೋಗ ಮೋಕ್ಷ ಸುಖಕೆ||

ಯೋಗವ ನರಹರಿ ಯೋಗಿಯೊಳರಿತರೆ| ಯೋಗಿಯೆಂಬೆ ಜಗಕೆ | |5||

ಮನೆಯ ಸೇರಿದೆ ದೊಡ್ಡ ಹಾವು| ಇಂಥ|

ಮನೆಯಲ್ಲಿ ವಾಸ ಮಾಡುವುದೆಂತು ನಾವು ||ಪ||

ಮನೆಯೊಳಿದ್ದರೆ ಬಿಡದು ಸಾವು| ಬೇರೆ|

ಮನೆಯೇನು ನಮಗಿಲ್ಲ ಶಿವ ಕೊಟ್ಟ ಠಾವು ||ಅಪ||

ಶಿವನ ಭೂಷಣವಾದ ಹಾವು| ನಮ್ಮ|

ಭವನದಲ್ಲಿದ್ದರೆ ಶುಭವೆಂದು ನಾವು||

ದಿವರಾತ್ರಿ ನಂಬಿ ಪೂಜಿಪೆವು|

ಮುಂದೆ ಭವಬಂಧದಿಂದ ಪಾರಾಗಿ ರಾಜಿಪೆವು ||1||

ಹರಿಯ ಹಾಸಿಗೆಯಾದ ಹಾವು| ತಾನೆ|

ಹರಿದಾಡದಿರೆ ಬಂತು ಲೋಕಕ್ಕೆ ಸಾವು||

ಧರೆಯ ಹೊತ್ತಿರುವಂಥ ಹಾವು| ಒಂದೆ|

ಎರಡಾಗಿ ಹೊರಗೊಳಗೆ ಹರಿಯುವುದೇ ಪ್ರಿಯವು ||2||

ಕಚ್ಚಿಕೊಲ್ಲದೆಯಿರ್ಪ ಹಾವು| ತಾನೆ|

ಮೆಚ್ಚಿ ಬೋಧಾಮೃತವ ಕುಡಿವಂಥ ಹಾವು||

ಅಚ್ಚ ಅರಿವಾದಂಥ ಹಾವು| ತನ್ನ|

ಇಚ್ಛೆ ಬಂದಂತೆ ಸುಖಪಡುವಂಥ ಹಾವು ||3||

ಮಂತ್ರ ಬಲ್ಲವಗಿಲ್ಲ ಭಯವು| ಸರ್ವ|

ತಂತ್ರ ಸ್ವತಂತ್ರದೊಳು ಮೆರೆವಂಥ ಹಾವು||

ನಿಂತರಿಲ್ಲವು ಶಿವನ ದಯವು| ಯೋಗ|

ತಂತ್ರದೊಳು ನರಹರಿಗೆ ತಾನಿದಾಶ್ರಯವು ||4||

ಕೂಗುತ್ತಲಿದೆ ನಮ್ಮ ಕೋಳಿ| ಕಾಲ|

ಸಾಗುತ್ತಲಿದೆಯೆಂಬ ಎಚ್ಚರಿಕೆ ಪೇಳಿ ||ಪ||

ಭೋಗ ನಿದ್ರೆಯ ಬಿಟ್ಟುಏಳೀ| ಬ್ರಹ್ಮ|

ಯೋಗಮುದ್ರೆಯ ಗುಟ್ಟು ಗುರುವಿಂದ ಕೇಳೀ ||ಅಪ||

ಆರು ವರ್ಣಗಳುಳ್ಳ ಕೋಳೀ| ತಾನೆ|

ಮೂರು ನದಿಗಳ ಮೂಲದೊಳು ನಿಂತು ಬಾಳೀ||

ಏರಿಳಿತ ಧ್ವನಿಯನ್ನು ತಾಳಿ| ನಿರ್ವಿ| ಕಾರ

ಪ್ರಣವಾಂತದೊಳು ಕೂಗುವುದ ಕೇಳೀ ||1||

ಕರ್ಮವೆನ್ನುವ ತಿಪ್ಪೆ ಕೆದರಿ| ವೇದ|

ಧರ್ಮವೆನ್ನುವ ಕಾಳನಾಯ್ದುಂಡು ಕುದುರೀ|

ಮರ್ಮವೆಲ್ಲವ ಬಿಚ್ಚಿ ಸಾರಿ| ತಾನೆ|

ಬ್ರಹ್ಮವೆನ್ನುವ ಬೋಧೆ ನಿಶ್ಚಯಿಸಿ ತೋರಿ ||2||

ತನುಮಿಥ್ಯ ಶಿವಸತ್ಯವೆಂದು | ಬ್ರಹ್ಮ|

ವನು ತಿಳಿದ ಸುಜ್ಞಾನಿ ಭವ ಗೆದ್ದನೆಂದು||

ಮನಮಾಯೆ ನಂಬಬೇಡೆಂದು| ನಮ್ಮ|

ಮುನಿಮಾನ್ಯ ನರಹರಿಯ ಕೂಡಿ ನೋಡೆಂದು ||3||

ನಿನ್ನೊಳಗೆ ಸುಳಿವ ಸದ್ಭಾವಂಗಳೇ ಸುರರು|

ಎನ್ನುತ್ತ ತಿಳಿಯೋ ನೀ ನೆಲೆ ಜೀವಾ

||ಪ||

ನಿನ್ನಂತರಂಗದಿ ಸುಳಿವದುರ್ಭಾವನೆಗ |

ಳನ್ನೆ ರಾಕ್ಷಸರೆಂದು ತಿಳಿ ಜೀವಾ

||ಅಪ||

ಎಲ್ಲ ದೇವತೆಗಳುಂಟಲ್ಲಿ ಈಶ್ವರನಿರ್ಪ|

ನುಲ್ಲಾಸಮಯನಾಗಿ ತಿಳಿ ಜೀವಾ||

ಎಲ್ಲಿ ರಕ್ಕಸರುಂಟು ಅಲ್ಲಿ ಶಿವ| ನಿಲ್ಲನು|

ಕೊಲ್ಲಲೆಂದ ಸುರರನು ಕಾದಿರುವಾ

||1||

ಸುರರೊಡನಾಡುತ್ತ ಹರನ ಕೂಡಲಿ ಬೇಕು|

ಬೆರೆಯದೆ ರಕ್ಕಸರ ನೆಲೆ ಜೀವಾ||

ದುರುಳ ರಕ್ಕಸರೊಡನೆ| ಬೆರೆದು ನೀನಿದ್ದರೆ|

ನರಕಕ್ಕೆ ಕರೆದೊಯ್ವರೆಲೆ ಜೀವಾ

||2||

ದುರ್ಗುಣ ರಕ್ಕಸರು| ಸದ್ಗುಣವೆ ದಿವಿಜರು||

ನಿರ್ಗುಣವೆ ಶಿವನೆಂದು ತಿಳಿಜೀವಾ||

ದುರ್ಗುಣವ ನಿಗ್ರಹಿಸಿ| ಸದ್ಗುಣಂಗಳ ಗ್ರಹಿಸಿ|

ನಿರ್ಗುಣ ನರಹರಿಯೊಳಿರು ಜೀವಾ

||3||

ಪಂಚಪ್ರಾಣಗಳು| ಪಾಂಡವರಿರ್ಪ | ಪಂಚ ತಾಣಗಳು ||ಪ||

ಪಂಚ ಪ್ರಾಣಗಳನಿ| ರ್ವಂಚನೆಯೊಳು ಸೇರೀ||

ಮಿಂಚಿ ಪರಮಾತ್ಮತಾ| ಹೊಂಚಿ ಜಗದಾಧಾರಿ ||ಅಪ||

ವ್ಯಾನ ಧರ್ಮಜನು| ಶರೀರದೊಳೆಲ್ಲಾ| ತಾನೆ ಸೇರಿಹನು||

ಸ್ಥಾನ ಶ್ರೋತ್ರವು ವಾಗ್ವಿ| ಧಾನ ಶ್ರವಣಾದರನು|

ನಾನಾ ಶಬ್ದಗಳ ಸಂ| ಧಾನ ಧರ್ಮದಿಪರನು ||1||

ಭೀಮನುದಾನ| ಕಂಠದೊಳಿರಲು| ಪ್ರೇಮಾನ್ನ ಪಾನ||

ಆ ಮರುತಯೋಗ ವಿ| ರಾಮಕುಂಭಕ ಯೋಗಿ||

ನೇಮದಿಂತಪಗೈವ| ಈ ಮಹಿಯ ಸುಖಕಾಗಿ ||2||

ನರನೇ ಸಮಾನ| ನಾಭಿಯೊಳಿರುವ| ವರನೇತ್ರ ಸ್ಥಾನ||

ಮೆರೆವ ಬುದ್ಧಿಯ ರೂಪ| ದರೀವೀಯು ತನ್ನವನು|

ಅರಗಿಸಿ ಧನಂಜಯನು| ಪೊರೆವ ಮೂಜಗವನು ||3||

ಪ್ರಾಣವೆನಕುಲಾ| ಹೃದಯದೊಳಿದ್ದು| ತ್ರಾಣವಹಸಕಲಾ||

ಸ್ಥಾನ ಚಿಹ್ವಾರಸವ| ತಾನೆ ಸ್ವೀಕರಿಸುವನು||

ಆನಂದ ನುಡಿರೂಪ| ಧ್ಯಾನಪರನಾದನು ||4||

ಸಹದೇವ ತಾಣ| ಗುದ ಸೇರಿರ್ಪ| ವಹಿಸುತ್ತ ಪಾನ||

ಸಹಕಾರನಾಶಿಕದೊ|ಳಿಹಗಂಧಧರ ಧರೆಯ||

ಮಹಿಯಲ್ಲಿ ನರಹರಿಯ| ಸಹಿತ ಚರಿಸಿದ ಕಿರಿಯ ||5||

ಒಡಲೆಂಬ ಸುಡುಗಾಡು ಸೇರಿ| ನಮ್ಮ|

ಮೃಢನಿರ್ಪ ನಿಲ್ಲಿಯೆ ಹುಡುಕಿರಿ ದಾರಿ ||ಪ||

ಪೊಡವಿ ತತ್ವದೊಳು ಸಂಚಾರಿ| ನಿತ್ಯ|

ದೃಢಯೋಗ ಪರನಾಗಿಹನು ಮಾರವೈರಿ ||ಅಪ||

ಸುಡುಗಾಡಿನೊಳಗೆ ಸೇರಿದನು| ನಮ್ಮ ||

ಮೃಡನೆಂಥ ಜಾಣನು ಲಯ ಮಾಡುವವನು||

ಸುಡುಗಾಡು ಒಡಲಲ್ಲವೇನು| ನಿತ್ಯ|

ಬಿಡುವಿಲ್ಲದಂದದಿ ಸುಡಲಿಲ್ಲವೇನು ||1||

ಬಡತನವು ರೋಗರುಜಿನಗಳು| ತಾಪ|

ಪಡಿಸುತ್ತಲಿವೆ ನಾನಾ ವ್ಯಸನ ದುಃಖಗಳು||

ತಡೆಯಲಾರದ ಸಂಕಟಗಳು| ಬಂದು|

ಒಡಲು ಬೇಯುತಲಿತ್ತು ಕಡೆಗಾಲ ಬರಲು ||2||

ಬಲು ಕಾಮಕ್ರೋಧದೊಳು ಬೆಂದು| ಮುಂದೆ|

ನಿಲಲು ವೃದ್ಧಾಪ್ಯ ದುಃಖವು ತಾನೆ ಬಂದು||

ಬಲಹೀನವಾದೊಡಲು ನೊಂದು| ಕೊನೆಯ|

ಘಳಿಗೆ ಕಾಯ್ದಿದೆ ಮರಣ ದುಃಖವೈ ತಂದು ||3||

ಸತತ ಬೇಯುವ ಸುಡುಗಾಡು| ಇಂಥ|

ವ್ಯಥೆಯುಳ್ಳ ಸುಡುಗಾಡು ಎಲ್ಲಿಲ್ಲ ನೋಡು||

ಗತಿಯೆಂದು ಶಿವಧ್ಯಾನ ಮಾಡು | ನಮ್ಮ |

ಪತಿತ ಪಾವನ ನರಹರಿಯಲ್ಲಿ ಕೂಡು ||4||

ನುಡಿಯಮೃತದ ಸಾರಾ| ನಿನ್ನಯ| ನಡೆ ಜಗದಾಧಾರಾ ||ಪ||

ನಡೆ ನುಡಿ ಸಂಗಮ| ಪಡೆದಿಹ ಜಂಗಮ||

ಒಡೆಯನೆ ನಿನ್ನಯ| ಒಡಲೇನಿಗಮಾ ||ಅಪ||

ಕರ್ಣಾನಂತವನು| ನೀನೇ| ವರ್ಣಿಸಿ ನಿಂತವನು||

ಪೂರ್ಣವ ಮಾಡಿದೆ | ಕರ್ಣವ ಕೂಡಿದೆ||

ನಿರ್ಣಯ| ದೊಳುನಿ| ರ್ವರ್ಣವೆನಿಸಿದೇ ||1||

ಮಾಂಸದಪಿಂಡವನು| ವರ್ಜಿಸಿ| ಸಂಶಯವಳಿದವನು

ಹಂಸನ ಹಿಡಿದು ಪ್ರ| ಶಂಸೆಯ ಮಾಡಿದೆ||

ಹಿಂಸೆಯನಳಿದು| ಶಿ| ವಾಂಶವ ಕೂಡಿದೆ ||2||

ಮಂತ್ರದ ಪಿಂಡವನು| ಸೇರಿಸ್ವ| ತಂತ್ರದೊಳಿರ್ಪವನು||

ತಂತ್ರದೊಳೀಭವ| ಯಂತ್ರವಕಳಚುವ||

ಚಿಂತನ ಲಹರಿಯೆ| ಶಾಂತ ನರಹರಿಯೆ ||3||

ಅರಿವೆ ಹೆಚ್ಚೋ ಮರವೆ ಹೆಚ್ಚೋ ಅರಿತು ನೋಡಿರಿ ||ಪ||

ಅರಿವೆ ಮೊದಲೋ ಮರವೆ ಮೊದಲೋ ಗುರುತು ಮಾಡಿರಿ ||ಅಪ||

ಅರಿತ ಮೇಲೆ ಮರತೆನೆಂಬುದು ಲೋಕದನುಭವ||

ಅರಿಯದಿದ್ದುದ ಮರತೆನೆಂಬುದಿಲ್ಲ ಸಂಭವ ||1||

ಅರಿವು ಪಡೆವುದಸಮ ಸಾಹಸ ಸುಲಭವಲ್ಲವು||

ಮರವು ಬರುವುದಕ್ಕೆ ಏನು ಕಷ್ಟವಿಲ್ಲವು ||2||

ಕಷ್ಟಪಟ್ಟು ಬಂದ ಅರಿವು ಶ್ರೇಷ್ಠವಾದುದು|

ಕಷ್ಟಪಡದೆ ಬಂದ ಮರವು ನಷ್ಟವಾದುದು ||3||

ಮೊದಲೆ ಅರಿವು ತುದಿಗೆ ಮರವು ತಪ್ಪದಿರುವುದು||

ಒದಗಿ ಬಂದ ಮರವೆಯನ್ನು ಅರಿವು ತಿಳಿವುದು ||4||

ಅರಿವೆ ಮೊದಲು ಅರಿವೆ ತುದಿಯುಮರವೆಯೆಂಬುದು||

ಅರಿವಿನಲ್ಲೇ ಬೆರೆದುಸರಿದು ಮಾಯೆಯೆನಿಪುದು ||5||

ಮರವೆಯಿಲ್ಲದಚ್ಚಅರಿವೆ ಬ್ರಹ್ಮವೆಂಬುದು||

ಅರಿವು ಮರವೆ ಜನನ ಮರಣ ರೂಪವಾದುದು ||6||

ತನ್ನ ತಾನೆ ಅರಿಯುತಿಹುದೆ ಬ್ರಹ್ಮ ಜ್ಞಾನವು||

ಅನ್ಯವರಿತು ತನ್ನ ಮರೆವುದೆ ಕರ್ಮ ಜಾಲವು ||7||

ಅರಿತು ತನ್ನ ಮರೆತು ಜಗವ ನರಹರೀಂದ್ರನು||

ಮರವೆಮಾಯೆದೂರನೆನಿಪ ನಿರ್ಗುಣಾತ್ಮನು ||8||

ನಿನ್ನ ಮರೆತವನೆ ಪಾಮರನು| ದೇವ|

ನಿನ್ನನರಿತವ ಯೋಗಿವರನು ||ಪ||

ತನ್ನ ತಾನರಿತವನು| ನಿನ್ನೊಳಗೆ ಬೆರೆಯುವನು||

ತನ್ನ ತಾನರಿಯದೆ| ನಿನ್ನನೆಂತರಿವನು ||ಅಪ||

ವಿಶ್ವವೆಲ್ಲವು ನಿನ್ನ ರೂಪ| ನೀನೆ|

ವಿಶ್ವ ರೂಪದೊಳು ಚಿದ್ರೂಪ||

ವಿಶ್ವ ಜನಕನುನೀನೆ| ವಿಶ್ವ ರಕ್ಷಕ ನೀನೆ|

ವಿಶ್ವ ಲಯಕರ್ತನು| ವಿಶ್ವ ಸಾಕ್ಷಿಯು ನೀನೆ ||1||

ಎಲ್ಲಿ ನೋಡಲು ನೀನೆಯಿರುವೆ| ನಿನ್ನ|

ನೆಲ್ಲಿ ಕಾಣದುಯನ್ನ ಮರವೇ||

ಅಲ್ಲಿ ಇಲ್ಲೆನ್ನದೆ| ನ್ನಲ್ಲೆ ನೀ ತುಂಬಿರುವೆ||

ಅಲ್ಲಾಡದಂತಿರ್ಪೆ| ಸೊಲ್ಲು ಸೊಲ್ಲೊಳು ಬೆರೆವೆ ||2||

ಲೋಕೋಪಕಾರಿ ನೀನಾಗಿ| ಭಕ್ತ|

ಶೋಕಾಪಹಾರಿ ನೀನಾಗಿ||

ಸಾಕುತ್ತ ಲೋಕವ| ಬೇಕಾದುದೀಯುವೆ||

ಏಕಾಂತದೊಳು ಸದ್ವಿ|ವೇಕವ ನೀಯುವೆ ||3||

ಮೈದುಂಬಿ ನಲಿದಾಡುತಿರುವೆ| ನೀನೆ|

ಮೈದೋರಿ ನುಡಿಯಾಗಿ ಬರುವೆ||

ಆಧಾರದಲ್ಲೆ ಚಿ| ನ್ನಾದವೆನ್ನಿಸಿ ತೋರಿ||

ವೇದಂಗಳರ್ಥವ| ಬೋಧಿಸಿದೆ ನರಹರಿ ||4||

ಭಿಕ್ಷಾ ಸತ್ವಪರೀಕ್ಷಾ| ಭಿಕ್ಷಾ ಸಮತಾ ಗುಣರಕ್ಷಾ ||ಪ||

ಭಿಕ್ಷಾ ಕೊಡುವವನೇ ಕಮಲಾಕ್ಷ|

ಭಿಕ್ಷಾ ಪಡೆವವನೆ ವಿರೂಪಾಕ್ಷ||

ಭಿಕ್ಷಾ ಸಾಧನೆ ಬ್ರಹ್ಮ| ನ ದೀಕ್ಷಾ|

ಭಿಕ್ಷೆಯೊಳಪ್ಪುದು ಮೋಕ್ಷಾ ||1||

ಭಿಕ್ಷಾ ತ್ಯಾಗದ ಮೂಲವೆನಿಸಿತು|

ಭಿಕ್ಷಾ ವಿರಾಗದ ಶೀಲವೆನಿಸಿತು||

ಭಿಕ್ಷಾ ಪಡೆದವ ಶಿವನೇ ಹೊರತು|

ಭಿಕ್ಷಾ ಕೊಡು ನೀನರಿತು ||2||

ಎಲ್ಲರು ಸುಖದಿಂದರಬೇಕೆನುತ|

ಸಲ್ಲಿಸು ಭಿಕ್ಷವ ನೀನೇನಿರುತ||

ಎಲ್ಲರೊಳಗೆ ಶಿವ ತಾನೆ ಇರುತ|

ಅಲ್ಲಿಯೆ ನರಹರಿ ನಿಂತ ||3||

ಎಚ್ಚರವಿದ್ದರೆ ಭಯವಿಲ್ಲಾ| ನೀ|

ನೆಚ್ಚರ ತಪ್ಪಿದರುಳಿವಿಲ್ಲಾ ||ಪ||

ಎಚ್ಚರದೊಳು ಬಲು ಎಚ್ಚರ ಜ್ಞಾನವ||

ನೆಚ್ಚಿರುವಾತನಿಗಿದಿರಿಲ್ಲಾ ||ಅಪ||

ಕರಣೇಂದ್ರಿಯ ವ್ಯಾಪಾರಂಗಳೊಳು|

ಅರಿವಿನೊಳಿರುನೀಪಗಲಿರುಳು||

ಬರಿದೇ ಬಾಹ್ಯದ ಭ್ರಾಂತಿಯೊಳು ಮೈ|

ಮರೆದರೆ ತಪ್ಪವು ದುಃಖಗಳು ||1||

ಯಾರನು ಬೈಯದಿರೆಚ್ಚರಿಕೆ| ನಿ|

ಷ್ಠೂರವ ಮಾಡದಿರೆಚ್ಚರಿಕೆ||

ಕ್ರೂರತ್ವದೊಳಿರಲೇತಕ್ಕೆ | ಯಮ|

ನೂರನು ಸೇರುವೆ ದುಃಖಕ್ಕೆ ||2||

ಎಚ್ಚರ ಕಾಮಿನಿ ಕಾಂಚನದಿ | ಬಲು|

ಎಚ್ಚರ ದುಷ್ಟರ ಸಂಗದಲೀ||

ಎಚ್ಚರ ಗುರುಸನ್ನಿಧಿಯಲ್ಲಿ| ಮನ|

ಮೆಚ್ಚಿರು ನರಹರಿ ಪದದಲ್ಲಿ ||3||

ಮನವೆಂಬ ಜಗಳಗಂಟಿ|

ತನುವಿಂಗೆ ಇವಳು ಜಂಟಿ ||ಪ||

ತಾನಿವಳು ಇರಲು ಒಂಟಿ|

ಏನಿಲ್ಲ ಶುದ್ಧ ಶುಂಠಿ ||ಅಪ||

ವಿಷಯಕ್ಕೆ ಹರಿಯುತಿಹಳು|

ವಿಷಭರಿತಳಾಗುತಿಹಳು||

ವಿಷಕಂಠನ ನೆನಹಳಿವಳು|

ವಿಷದಂತೆ ಕಾಣುತಿಹಳು ||1||

ವಿನಯವನೆ ಕಾಣದಿಹಳು|

ಅನುಮಾನಪಡುತಲಿಹಳು||

ಘನತತ್ವ ವರಿಯಲಿವಳು|

ಮುನಿಸಿಂದ ಕೂಡ್ರುತಿಹಳು ||2||

ನರಹರಿಯ ಬೋಧೆ ಪಾಶ|

ದುರುಲಿಂದ ಕಟ್ಟಿ ಮೋಸ|

ಬರದಂತೆ ಬಂಧಿಸಿಡಲು|

ಪರಮುಕ್ತಿ ಕಾಂತೆ ಬಿಡಳು ||3||

ಮನ ಮಂದಿರ| ಶಿವನ| ಘನ ಮಂದಿರ ||ಪ||

ಭಕ್ತಿ ಜ್ಞಾನ ವೈರಾಗ್ಯವನು| ಸತ್ಯಶಾಂತಿ ಸೌಭಾಗ್ಯವನು|

ನಿತ್ಯವಾಗಿಯೆ ಪಡೆವ | ಆತ್ಮಾನುಸಂಧಾನ ||1||

ನೀತಿ ನಿಷ್ಠೆ ನಿರ್ಮೋಹವು| ಪ್ರೀತಿ ಸಮತೆ ಸೌಹಾರ್ದವು||

ಖ್ಯಾತಿಗೊಂಡಿಹ| ಸುಗುಣ| ಜಾತ ಸೇರಿದ ||2||

ದಾನಧರ್ಮದೀನೋದ್ಧರಣ| ಮೌನ ತೃಪ್ತಿ ಸತ್ಯಾಚರಣ||

ಸ್ವಾನುಭಾವವ| ಪಡೆದ| ಧ್ಯಾನ ರೂಪದ ||3||

ಶೃತಿಯ ನಂಬಿ| ಹೃದಯ ತುಂಬಿ| ಸತತ ಗುರುವಿನಂಘ್ರಿಯಲ್ಲಿ||

ರತಿಯನಾಂತಿಹ ಸಹಜ | ಗತಿಯ ಹೊಂದಿದ ||4||

ಮೇಲು ಕೀಳು ಏನಿಲ್ಲದ| ಸೋಲು | ಗೆಲುವಿಗೆಡೆಯಿಲ್ಲದ||

ಕಾಲಕರ್ಮಕೆ ಸಿಗದ| ಮೂಲವರಿತಿಹ ||5||

ಶ್ರವಣ ಮನನ ನಿಧಿ ಧ್ಯಾಸವು| ಅವಿರಳಾತ್ಮ

ಸುವಿಲಾಸವು|| ಕವಲು ಇಲ್ಲದೆ ಕೈದು ಭವವ ನೀಗಿದ ||6||

ಪರಮ ಗುರು ಪದಾಂಬುಜವನು| ಶರಣು ಹೊಕ್ಕು

ನರಹರೀಂದ್ರ|| ಕರುಣೆ ಮಾಡಲು ಶಾಂತಿ| ನಿರುತ ಮೂಡಲು ||7|

ಸತಿಯೇ ದೇಹವು ಪತಿಯೇ ಆತ್ಮನು|

ಸತತವು ಮಾಳ್ಪರು ಸಂವಾದ| ಸ|

ಮ್ಮತದಿಂ ಕೇಳಿರಿ ನಿಜಬೋಧ| ದು|

ರ್ಗತಿಯನ್ನಳಿವುದು ನಿರ್ವಾದ||

ಅತಿಶಯವಾಗಿದೆ ಶೃತಿಮತವೆನಿಸಿದೆ|

ಮತಿವಂತರಿಗಿದು ಸುಸ್ವಾದ

||1||

ದೇಹದ ಮೋಹವನಳಿಸುವುದಿಂದ್ರಿಯ|

ದಾಹವ ದೂರವ ಮಾಡುವುದು| ಸಂ|

ದೇಹವ ಕಿತ್ತೀಡಾಡುವುದು| ಶಿವ|

ಸ್ನೇಹವ ಸಾಧಿಸಿ ಕೂಡುವುದು||

ಊಹೆಗೆ ಮೀರಿದ ಪರಮಾನಂದದ|

ಸೋಹಂ ಭಾವವು ಮೂಡುವುದು

||2||

ಯನ್ನಯ ಪತಿಯೇ ನಿನ್ನನು ನಂಬಿದ|

ಯನ್ನನು ಕೈಬಿಡಬಹುದೇನು| ನೀ|

ನೆನ್ನೊಳು ಸುಖಪಡಲಿಲ್ಲೇನು|ನಾ|

ನಿನ್ನಾಜ್ಞೆಯೊಳಿರಲಿಲ್ಲೇನು||

ಉನ್ನತ ಮತಿಯೆಂದೆನ್ನುತ ಕೂಡಲು|

ಗನ್ನ ಘಾತುಕವು ತರವೇನು

||3||

ಎಲೆ ಸತಿನೀನತಿ ನಶ್ವರಳೆಂಬುದ|

ತಿಳಿಯದೆ ಮಾಡಿದೆ ವ್ಯಭಿಚಾರ| ಯ|

ನ್ನೊಲುಮೆಗೆ ತೋರಿದೆ ವೈಯಾರ| ನೀ|

ನುಳಿವವಳಲ್ಲವು ನಿರ್ಧಾರ||

ಅಳಿಯದ ನಾನೇ ಉಳಿಯದ ನಿನ್ನನು|

ಕಲೆತು ಹೂಡಿದೆನು ಸಂಸಾರ

||4||

ಕೇಳೈ ಪತಿಯೇ ಲೀಲೆಯಿಂದ ರತಿ|

ಕೇಳಿಯೊಳೆನ್ನೊಳು ಸುಖಪಟ್ಟೆ| ಕೊನೆ|

ಗಾಲಕೆ ಯನ್ನನು ಕೈ ಬಿಟ್ಟೆ| ಅನು|

ಗಾಲವು ಸೇವಿಸಿ ನಾ ಕೆಟ್ಟ||

ಹೇಳದೆ ಕೇಳದೆ ಪೋಪುದು ನ್ಯಾಯವೆ|

ತಾಳಿಯ ನಂಬುತ ಮತಿಗೆಟ್ಟೆ

||5||

ಹೊಲತಿಯೆ ನಿನ್ನನು ಗೆಳತಿಯೆಂದು ತಿಳಿ|

ದಳತೆ ಮೀರಿ ದುಃಖದಿ ಬೆಂದೆ| ಬಲು|

ಕೊಳಕಳಾದ ನಿನ್ನೊಳು ನಿಂದೆ| ನೀ|

ಥಳಕು ಬೆಳಕುಗಳ ಬೆಡಗಿಂದೆ||

ಗಳಿಗೆಗಳಿಗೆಗೂ ರೋಗರುಜಿನದೊಳು|

ತೊಳಲುವ ನಿನ್ನೊಳು ನಾನೊಂದೆ

||6||

ಸೇರುತ ಯನ್ನೊಳು ಸುಖ ಸಂತೋಷವ|

ಸೂರೆ ಮಾಡಿ ಯನ್ನನು ಜರಿವೆ| ನಿ|

ಷ್ಠೂರ ಮಾಡಿ ಬೈಯುತಲಿರುವೆ| ನಾ|

ಸೇರದಿರಲು ನೀನೆಲ್ಲಿರುವೆ||

ಬಾರಿಬಾರಿಗೂ ನೀಚಳೆಂದು ನೀ|

ದೂರುತಲಪಕೀರ್ತಿಯ ಹೊರುವೆ

||7||

ಚಪಲಾಕ್ಷಿಯೆ ಕೇಳ್ ಜಪತಪ ಯೋಗಕೆ|

ವಿಪುವಿರಾಗಕೆ ನೀವೈರಿ| ಗುರು|

ಉಪದೇಶಕೆ ನೀ ಹೆಮ್ಮಾರಿ| ಬಲು|

ವಿಪರೀತಕೆ ನೀ ಹೆದ್ದಾರಿ||

ಕಪಟದೊಳೆನ್ನನು ಮರುಳು ಮಾಡಿಯ| ನ|

ಗಪಕೃತಿಯೆಸಗಿದೆ ವೈಯಾರಿ

||8||

ಭೋಗಿಸುತೆನ್ನನು ಯೋಗವ ಮಾಡೈ |

ಈಗಲೆ ಪಡೆ ಸುಜ್ಞಾನವನು| ಸುವಿ|

ರಾಗದ ನಿಜಸಂಧಾನವನು| ಭವ|

ರೋಗವನಳಿವ ವಿಧಾನವನು||

ತ್ಯಾಗವ ಮಾಡದಿರೆನ್ನನು ನಿಶ್ಚಯ|

ವಾಗಿಯೆ ಪಡೆಯುವೆ ಮೋಕ್ಷವನು

||9||

ಸುಖರೂಪನು ನೀನೆನ್ನೊಡನಿದ್ದರು|

ಸುಖಿಯಾಗಿರುತಿಹೆ ನಿತ್ಯದಲಿ| ನೀ|

ಸಕಲೇಂದ್ರಿಯ ಮುಖ ಕೃತ್ಯದಲಿ| ಪರ|

ಸುಖವೇ ನಿನ್ನದು ಸತ್ಯದಲಿ||

ಮುಕುತಿಯ ಸಾಧಿಸುಯುಕುತಿಯ ನರಹರಿ|

ಭಕುತಿಯೊಳಾರ್ಜಿಸು ಮರ್ತ್ಯದಲಿ

||10||

ನೆರೆ ನಂಬಿದೆ ನಿನ್ನಾ| ಗುರುವರ| ಪರಿಪಾಲಿಸು ಯನ್ನಾ ||ಪ||

ದುರಿತವ ಹಾರಿಸು| ಗುರಿಯನು ತೋರಿಸು||

ಮೊರೆಯನು ಲಾಲಿಸು| ತರಳನ ಪಾಲಿಸು ||ಅಪ||

ಮಂತ್ರದೊಳಗೆ ಶಿವನು| ಸೇರಿದ| ತಂತ್ರವರುಹಿ ನೀನು||

ಚಿಂತನ ಬಲಿತು ನಿ| ರಂತರವೆನ್ನಿಸು||

ಅಂತರಂಗದೊಳು| ಚಿಂತೆಯನಳಿಸು ||1||

ವರ್ಣಂಗಳನೆಲ್ಲಾ | ಸೇರುತ| ವರ್ಣಿಸಿ ನಿಲಬಲ್ಲಾ||

ಪೂರ್ಣವೆನಿಸಿ ನಿ| ರ್ವರ್ಣದಿ ನಿಲ್ಲಿಸು||

ಪೂರ್ಣಾನಂದ ಸು| ಧಾರ್ಣವ ಸೇರಿಸು ||2||

ವೇದದ ಹಂಗೇಕೆ| ನಿನ್ನಯ| ಬೋಧೆಗಳಿರಲಿಕ್ಕೆ|

ನಾದದಿ ನಿನ್ನಯ| ಪಾದವ ಕಂಡೆನು|

ಬೋಧಕ ನರಹರಿ| ಬಾಧೆಗಳನು ಹರಿ ||3||

ನೀನು ಕೊಟ್ಟರೆ ಎಲ್ಲವು ಸಫಲಾ|

ನೀನು ಕೊಡದಿರಲೆಲ್ಲವು ವಿಫಲಾ ||ಪ||

ನೀನು ಕೊಡುತಿದ್ದರಾಯಿತು ವಿಪುಲಾ|

ನೀನು ಕೊಡದಿರಲೆನಗಾಯ್ತು ಚಪಲಾ ||ಅಪ||

ನಾನು ನನ್ನದು ಎಂದೆಂಬ ಮೋಹ|

ಹಾನಿಕರವೆಂದು ತಿಳಿಯದೆ ದ್ರೋಹ||

ನಾನು ಕೂಡಿದೆನಭಿಮಾನದೊಡನೆ|

ನೀನು ಮನ್ನಿಸಬೇಕೆನ್ನ ಮೃಡನೆ ||1||

ಯಾರು ಕೊಟ್ಟರು ಈ ದೇಹವನ್ನು|

ಯಾರು ಕೊಟ್ಟರು ಅನ್ನಪಾನವನು||

ಯಾರು ರಕ್ಷಿಸುತಿರ್ಪರೆನ್ನನ್ನು|

ಮಾರಹರ ನಿನ್ನ ಮರತೆನು ನಾನು ||2||

ಹುಟ್ಟುವಾಗೇನು ತಂದಿರಲಿಲ್ಲ|

ಕಟ್ಟಕಡೆಗೇನು ಒಯ್ಯಲುಯಿಲ್ಲ||

ನಟ್ಟ ನಡುವಿದ್ದ ನಾಲ್ಕು ದಿನವೆಲ್ಲಾ|

ದಿಟ್ಟ ನರಹರಿಯ ಮರತಿದ್ದೆನಲ್ಲಾ

||3||

ನಮಸ್ತೆ ಜ್ಞಾನದಿ ಸಮರ್ಥರೆನಿಸಿದ|

ಸಮಸ್ತ ಸದ್ಗುರು ಪುತ್ರರಿಗೆ ||ಪ||

ಪ್ರಮಾದವಿಲ್ಲದ ಸಮಾಧಿ ಯೋಗದಿ|

ನಿಮಗ್ನರಾದ ವಿರಕ್ತರಿಗೆ ||ಅಪ||

ಕಾಮ್ಯವಳಿದು ನಿಷ್ಕಾಮ್ಯದಿ ನಿರ್ಗುಣ|

ಸಮ್ಯ ಜ್ಞಾನದೊಳಿರ್ಪರಿಗೆ||

ಕರ್ಮಗಳೆಲ್ಲ ಸುಕರ್ಮಗಳಾಗುವ|

ಮರ್ಮವ ತಿಳಿದ ಮಹಾತ್ಮರಿಗೆ ||1||

ಪ್ರಣವದ ಕೊನೆಯೊಳು| ಮಿನುಗುವ ನಿರ್ಗುಣ|

ವೆನಿಸುವ ಬ್ರಹ್ಮದೊಳಿರ್ಪರಿಗೆ||

ಮನ ಲಯವಾಗುವ| ಅನುಭಾವವ ಪಡೆ|

ದನುಪಮರೆನಿಸಿದ ಮಹಿಮರಿಗೆ ||2||

ಸಂಸಾರದೊಳೇ ಸನ್ಯಾಸಿಯ ಪರಿ|

ಹಿಂಸೆಯಿಲ್ಲದಿಹ ಶಾಂತರಿಗೆ||

ಹಂಸನೆ ಸೋಹಂ ಭಾವದಿ ಪರಮಾ||

ಹಂಸ ನರಹರಿಯ ಭಕ್ತರಿಗೆ ||3||

ಕೃಪೆ ಮಾಡು ಯನ್ನೊಳು ಗುರುವೇ| ಭಕ್ತ|

ರುಪಕಾರಿ ನೀನಾಗಿರುವೇ ||ಪ||

ಚಪಲಾತ್ಮ ನಾದೆನ್ನ| ಅಪರಾಧ ಮನ್ನಿಸಿ||

ಸಫಲ ಸುಜ್ಞಾನವ| ಉಪದೇಶ ವೀಯುತ್ತ ||ಅಪ||

ಮೂಲಮಂತ್ರದ ಮನೆಯೊಳಗೆ | ಹಂಸ|

ಲೀಲೆಯಿಂ ಬ್ರಹ್ಮವು ಬೆಳಗೇ||

ಕಾಲಕರ್ಮಗಳು ನಿ| ರ್ಮೂಲವಾಗಲು ಕಾಲ|

ಕಾಲನೊಳ್ಬೆರೆಯೆಂದು| ಪೇಳಿಯುದ್ಧರಿಸುತ್ತ ||1||

ಬ್ರಹ್ಮನಾಡಿಯ ಸೇರಿಕೊಂಡು| ಕರ್ಮ|

ಧರ್ಮಂಗಳೈಕ್ಯವ ಕಂಡು||

ನಿರ್ಮೋಹ ನಿಶ್ಚಲ| ಬ್ರಹ್ಮೈಕ್ಯನಾಗುತ|

ಕರ್ಮ ಪಾಶವನಳಿದು| ನಿರ್ಮಲನಾಗೆಂದು ||2||

ದೇವದುಂದುಭಿನಾದ ಕೇಳಿ| ದೇವ|

ದೇವನೊಳೈಕ್ಯವ ತಾಳಿ||

ಕೇವಲಾನಂದದಿ| ದೇವ ನರಹರಿ ನಿನ್ನ|

ಸೇವಿಸಿ ನಾನೀಗ| ಕೈವಲ್ಯ ಪಡೆವಂತೆ ||3||

ಕಂಡೆ ಶ್ರೀಗುರು ದೇವನಾ| ಚಿದ|

ಖಂಡ ನಿರ್ಮಲ ಭಾವನಾ ||ಪ||

ಗಂಡುಗಲಿಗಳ ಗಂಡನಾ| ಭೂ|

ಮಂಡಲಕ್ಕೆ ಪ್ರಚಂಡನಾ ||ಅಪ||

ಹೃದಯ ಸದನವ ಮಾಡಿದ ಸ|

ಮ್ಮುದದಿ ವೇದವ ಕೂಡಿದಾ||

ವದನ ಕಮಲ ದೊಳಾಡಿದಾ| ಸೊಂ|

ಪೊದಗಿ ಬೋಧೆಯ ಮ ||1||

ಪಾಪಗಳ ನೀಡಾಡಿದಾ ಪರಿ|

ತಾಪವೆಲ್ಲವ ದೂಡಿದಾ||

ಆಪರಾತ್ಪರ ವಸ್ತುವಾ ತಾ|

ನೇ ಪರೀಕ್ಷಿಸಿ ತೋರುವಾ ||2||

ವಾಯುವೇಗವ ಮೀರಿದಾ| ನಿಜ|

ಮಾಯೆ ಯಂತ್ಯವ ತೋರಿದಾ||

ಕಾಯ ಗುಣಗಳ ಕೆಡಿಸಿದಾ ನಿ|

ರ್ಮಾಯ ನರಹರಿ ಯೆನಿಸಿದಾ ||3||

ಕೂಡಿದೆ ನೀ ಶಿವನಾ| ಸರ್ವರೋ| ಳಾಡುತಲಿರುವವನಾ ||ಪ||

ಬೇಡಿದೆ ಮುಕ್ತಿಯನಾ| ಪಾಪವ| ಝಾಡಿಸಿ ಒದ್ದವನಾ ||ಅಪ||

ಮಂಗಳಮಯನಿರುವಾ| ಸರ್ವರ| ಕಂಗಳೊಳಗೆ ಮೆರೆವಾ||

ಶೃಂಗಾರವಗೈವಾ| ಲೋಕವ| ಭಂಗವ ನೀಗಿರುವಾ ||1||

ಮಂತ್ರಕೆ ವಶನಾದ| ದೇಹದ| ಯಂತ್ರವನಾಡಿಸಿದಾ||

ಚಿಂತನದೊಳು ಬೆರೆದಾ | ಭಕ್ತರ| ಚಿಂತೆಗಳನು ಹರಿದಾ ||3||

ಅಂಬರ ಸೇರಿರುವಾ| ಬಾಹ್ಯಾ| ಡಂಬರ ಮೀರಿದವಾ||

ಕುಂಭಕದೊಳು ಮೆರೆವಾ| ಭಕ್ತರು| ನಂಬಲು ತೋರಿರುವಾ ||4||

ಧರೆಯೊಳು ಸಂಚರಿಸೀ| ಜಲದೊಳು| ವರವೇದವ ರಚಿಸೀ||

ನರಹರಿಯೆಂದೆನಿಸಿ| ಬಂದನು| ಧರೆಪಾವನಗೊಳಿಸಿ ||5||

ನುಡಿಮಾತೆ ನಿನ್ನ ಪಾದ| ಹಿಡಿದಾತ ಧನ್ಯನಾದ ||ಪ||

ಪಡೆದಾಗ ಸತ್ಯಬೋಧಾ| ದೃಢವಾಗಿ ಮುಕ್ತನಾದ ||ಅಪ||

ಹಂಸವನು ಏರಿ ಬಂದೆ| ಸಂಶಯವ ತೂರಿ ನಿಂದೇ||

ಹಿಂಸೆಗಳ ನೀಗಲೆಂದೇ| ಸಂಸೇವ್ಯಳಾಗಿ ನಿಂದೇ ||1||

ವರ್ಣಗಳ ಸೃಷ್ಟಿ ಮಾಡಿ| ವರ್ಣನೆಗೆ ಪುಷ್ಟಿ ನೀಡಿ||

ವರ್ಣಾಂತ್ಯದಲ್ಲಿ| ಕೂಡಿ | ನಿರ್ಣಯಿಸಿ ನಿಲ್ಲಲಾಡಿ ||2||

ಕರಣಂಗಳೆಲ್ಲ ಕರಗಿ| ಸ್ಮರಣಕ್ಕೆ ಮನವುಯೆರಗಿ||

ಮರೆಯುತ್ತ ಮೈಯ ಬಾಗಿ| ಇರುವಾತ ಗಾನಯೋಗಿ ||3||

ಸೋಹಂ ಸ್ವರೂಪಳಾದೆ| ಮೋಹಕ್ಕೆ ದೂರಳಾದೆ||

ದೇಹಕ್ಕತೀತ ಬೋಧೆ| ಸಾಹಸದಿ ನೀನೆಗೈದೆ ||4||

ವೀಣೆಯನು ಹಿಡಿದು ನುಡಿಸಿ| ವಾಣಿಯನು ವ್ಯಕ್ತಪಡಿಸಿ|

ಆನಂದಗಾನವೆನಿಸಿ| ಶ್ರೀನರಹರಿಯೊಳು ಜನಿಸಿ ||5||

ಲೋಕ ರಕ್ಷಕ ಓ ಮಳೆರಾಯಾ|

ಯಾಕೆ ಮುನಿಸಿದೆ ಯಮ್ಮೊಳು ಜೀಯಾ ||ಪ||

ಸಾಕಲಾರದೆ ಬಿಡುವರೆಕೈಯಾ|

ವ್ಯಾಕುಲವನೀಗಿ ಕಾಯಬೇಕೈಯ್ಯಾ ||ಅಪ||

ಮೃತ್ಯು ತಾಂಡವವಾಡುತ್ತಲಿಹುದು|

ಒತ್ತಿ ಹಸಿವಿನ ಭೂತ ಬಂದಿಹುದು||

ಎತ್ತ ನೋಡೆ ನಿರಾಸೆ ತುಂಬಿಹುದು|

ತತ್ತರಿಸುವುದು ಜೀವ ಜಾಲವಿದು ||1||

ನೀನು ಬರುವಾಗ ನೆನೆಯರು ಯಾರು|

ನೀನು ಬರದಿರಲಾಗ ಬೇಡುವರು||

ಜ್ಞಾನಹೀನರೊಳಗೆ ದಯೆ ತೋರು|

ಆನಂತರ ಬಂಧು ನೀನೆಂದು ಸಾರು ||2||

ಪ್ರಳಯ ಕಾಲವೆ ಬಂದಿಹುದೆಂದು|

ಇಳೆಯಜೀವ ಚಿಂತಿಸಿ ನೊಂದು||

ಮಳೆಯ ದೇವರೆ ಕಾಪಾಡೆಂದು||

ಒಲಿದು ಬೇಡುವೆವು ನರಹರಿಯೆಂದು ||3||

ಈತ ಶರಣನು ಈತನೆ ಯೋಗಿ||

ಭೀತಿಯಿಲ್ಲದ ನಿತ್ಯವಿರಾಗಿ

||ಪ||

ಜಾತಿ ಮತ್ಸರವೆಲ್ಲವ ನೀಗೀ|

ನೀತಿ ಮಾರ್ಗವ ಬಿಡದವನಾಗಿ

||ಅಪ||

ರಾಗದ್ವೇಷಂಗಳೀತನೊಳಿಲ್ಲ|

ಭೋಗಭಾಗ್ಯಂಗಳಾಸಿಸಲೊಲ್ಲ||

ಆಗುಹೋಗುಗಳೆಣಿಸುವನಲ್ಲ|

ಶ್ರೀಗುರೂತ್ತಮ ಗಡಿಯೆನಬಲ್ಲ

||1||

ಸತ್ಯವೆಂಬುದ ಬಿಟ್ಟವನಲ್ಲ|

ಮಿಥ್ಯವಾಡುವ ರೂಢಿಯೆಯಿಲ್ಲ||

ವ್ಯರ್ಥ ಕಾಲವ ಕಳೆದವನಲ್ಲ|

ನಿತ್ಯಧ್ಯಾನದೊಳಿರುತಿರಬಲ್ಲ

||2||

ಗುರುವಿನಾಜ್ಞೆಯ ಮೀರದೆ ನಡೆವ|

ಪರರ ನಿಂದೆಯ ಮಾಡದೆ ನುಡಿವ||

ಬರುವ ಪ್ರಾರಬ್ಧ ಬರಲೆಂದು ಬಿಡುವ|

ನರಹರೀಂದ್ರನ ಬೋಧೆಯ ಪಡೆವ

||3||

ಗುರುವೆ ರೇವಣಸಿದ್ಧ ಯೋಗೀಂದ್ರ|

ಕರುಣಿಸೆನ್ನನು ಸದ್ಗುಣಸಾಂದ್ರ

||ಪ||

ಶರಣಜನ ಹೃದಯಾಬ್ಧಿಯ ಚಂದ್ರ|

ಪರಮ ಸುಜ್ಞಾನಾಮೃತ ಕೇಂದ್ರ

||ಅಪ||

ವರದರಾಜನ ಶಿರದ ಕಂಪನವಾ|

ವರದಹಸ್ತದಿ ನಿಲಿಸಿದೆ ದೇವಾ||

ಗುರುವಿನಾಶೀರ್ವಾದವು ಮನವಾ|

ಸ್ಥಿರವ ಮಾಳ್ಪುದ ತೋರಿದೆ ನಿಜವಾ

||1||

ಜಗವ ಕೊಲ್ಲುವತಗುಣಿಯ ಸುಟ್ಟೇ|

ಜಗವಗೆಲ್ಲುವಾಯುಧವಮಾಡಿಟ್ಟೆ||

ಬಗೆದು ಕಾಮ ಮೋಹಗಳನ್ನು ಸುಡುವೆ|

ಮಿಗಿಲು ಜ್ಞಾನಾಯುಧವ ಮಾಡುವೆ

||2||

ಮಾಯೆಗೆನ್ನುತ ನೀರನ್ನು ಹೊತ್ತೆ|

ಕಾಯಕರ್ಮದ ಬೇರನ್ನೆ ಕಿತ್ತೆ||

ಪ್ರಿಯದಿಂ ಬೋಧಾಮೃತವೀವೆ |

ಮಾಯೆಯೆನಿಸಿದ ಮನಶುದ್ಧಿಗೈವೆ

||3||

ದುರುಳ ಗೋರಕ್ಷನಿಂದಲೆ ಪಡೆದ |

ಗರಳ ಖಡ್ಗವ ಕರಗಿಸಿ ಕುಡಿದೆ ||

ಪರಮ ಸಿದ್ಧನೆ ಮಾಯೆಯಿಂದಾದ |

ದುರಿತ ಖಡ್ಗವ ಕರಗಿಸಿ ಕುಡಿದೆ

||4||

ಮಾಸನೂರಿನ ಮಡುವಿನೊಳಿಟ್ಟೆ|

ಲೇಸು ಸುರಗಿಯ ತೋರಿಸಿ ಬಿಟ್ಟೆ||

ಈ ಶರೀರದಿ ನೀನಿರಿಸಿರುವೆ|

ಈಶ ಜ್ಞಾನದ ಸುರಗಿಯ ಗುರುವೆ

||5||

ಸುರಗಿ ಪಡೆಯಲು ಬಲಿ ಕೊಡಲೆಳಸಿ|

ಸೆರೆಯೊಳಿಟ್ಟ ಬಾಲೆಯರನ್ನುವುಳಿಸಿ||

ಕರಣ ವೃತ್ತಿಯೆ ಶಿವಪೂಜೆಯೆಂದೆ|

ಕರಣ ಪ್ರತಿಬಂಧ ಬೇಡೆಂದೆ ತಂದೆ

||6||

ಮೂರು ಕೋಟಿಯ ಲಿಂಗಗಳೊಂದೆ|

ಬಾರಿ ಸ್ಥಾಪನೆ ಮಾಡಿದ ತಂದೆ||

ಮೂರು ಅಕ್ಷರ ಪ್ರಣವದಿ ವರ್ಣ|

ಮೂರು ಕೋಟಿಯ ಲಿಂಗವು ಪೂರ್ಣ

||7||

ಸತ್ಯಮೂರ್ತಿಯೆ ಸಾಕ್ಷಾತ್ ಗುರುವೆ|

ನಿತ್ಯಪೂಜೆಯ ಹೊಂದುವ ಅರಿವೇ||

ಮರ್ತ್ಯರುದ್ಧಾರಕಾಗಿಯೆ ಬರುವೆ|

ಮೃತ್ಯು ಹರ ನರಹರಿಯಾಗಿರುವೆ

||8||

ಗುರುದೇವನೆ ತಿಪ್ಪೇರುದ್ರಾ|

ಪರಿಪಾಲಿಸು ಕರುಣಸಮುದ್ರಾ

||ಪ||

ಅರಿವೇ ಯೋಗದ ಮುದ್ರಾದು|

ಶ್ಚರಿತ ಮಾಡಿದೆ ಛಿದ್ರಾ

||ಅಪ||

ನಡೆಯಾಚಾರದ ಲಿಂಗಾ| ಸ|

ನ್ನುಡಿಯೇ ಶ್ರೀಗುರು ಲಿಂಗಾ|

ನಡುವಿದೆ ಜಂಗಮ ಲಿಂಗಾ| ನಿ|

ನ್ನೊಡಲಾಗಿದೆ ಮಹಲಿಂಗಾ

||1||

ಕಂಗಳ ಮಧ್ಯದೊಳಿರುವೇ| ಸ|

ರ್ವಾಂಗವ ತುಂಬುತ ಮೆರೆವೇ||

ಮಂಗಳ ರೂಪದಿ ಬರುವೇ| ಶಿವ|

ಲಿಂಗವ ಪೂಜಿಸಿ ಬೆರೆವೇ

||2||

ನಾದವೆ ನಿಜ ಯೋಗಾಂಗಾ| ಸ|

ದ್ವೇದ ಪ್ರಸಾದದ ಲಿಂಗಾ||

ಬೋಧಾಂತದಿ ಮಹಲಿಂಗಾ| ಸೊಂ|

ಪಾದುದು ನರಹರಿ ಸಂಗಾ||

ಜಯವಾಗಲಿ ಗುರುದೇವನಿಗೇ| ಭವ|

ಭಯ ನೀಗಲಿ ಶರಣರಿಗೆ ||ಪ||

ನಾಗರ ಹೆಡೆ ನೆರಳೊಳಗೆ| ಸುಖ|

ವಾಗಿಯೆ ಕುಳಿತಿಹನೊಳಗೆ||

ನಾಗರ ಹೆಡೆ ಮಣಿ ಬೆಳಗೆ| ಶಿವ|

ಯೋಗದಿ ತಾನಿಹ ನೊಳಗೆ ||1||

ನೋಡಿರಿ ಬ್ರಹ್ಮದ ಸೊಬಗು| ನಡು|

ನಾಡಿಯ ಸೇರಿದ ಬೆಡಗು||

ಹಾಡುತ ಬಯಲಿಗೆ ಬಂದು| ನಲಿ|

ದಾಡುತಲಿರುವುದು ಎಂದ ||2||

ಶರಧಿಯೊಳಬ್ಬರ ವಾಗಿ| ಅಂ|

ಬರದೊಳು ನಿಬ್ಬರವಾಗಿ||

ಸುರಭಿಯ ಸುಧೆಯನು ಕುಡಿದು| ಸಂ|

ಚರಿಸುತ ಜಪಿಸುವ ನಡೆದು ||3||

ರವಿ ಶತಕೋಟಿಯ ತೇಜ| ವೈ|

ಭವದಲಿ ಬೆಳಗುವ ನೈಜ||

ಭವತಮ ವಳಿವುದೆ ಸಹಜಾ| ಅನು|

ಭವ ಜ್ಞಾನವು ನಿರ್ವ್ಯಾಜ ||4||

ಜಯ ಜಯ ನರಹರಿ ಗುರುವೇ| ಚಿ|

ನ್ಮಯ ಮೂರುತಿ ನಿಜದರಿದೇ|

ಭಯವೆಲ್ಲವ ನೀಗಿರುವೇ| ತ|

ನ್ಮಯತೆಯನೀಯುತ ಪೊರೆವೇ ||5||

ಇರವಾಗಿರುವಾ| ಅರಿವಾಗಿ ಮೆರೆವಾ

||ಪ||

ಪರಮಾನಂದವ | ಧರಿಸುತ ಪೊರೆವಾ

||ಅಪ||

ಸಗುಣದಿ ರಮ್ಯ| ನಿರ್ಗುಣ ಬ್ರಹ್ಮಾ||

ಜಗವಾದ ಮರ್ಮ| ಬಗೆಯುವ ಧರ್ಮ

||1||

ಅಸ್ಥಿರ ದೇಹವ| ಸುಸ್ಥಿರವೆನ್ನುವ||

ಅರ್ಥವ ನಳಿಸುವ| ಸ್ವಸ್ಥತೆಗೈವ

||2||

ಗಂಗಾ ಯಮುನಾ| ಸಂಗಮ ಗಮನಾ||

ಭೃಂಗದ ಗಾನಾ| ಇಂಗಿತ ಜ್ಞಾನ

||3||

ಪರನಾದ ತಾನೆ| ಪರಬಿಂದು ತಾನೆ||

ಪರಮ ಚಿತ್ಕಳೆಯೇ| ಪರವೆಂದು ಹೊಳೆಯೇ

||4||

ನಡೆಯಾಚಾರ| ನುಡಿಯೆ ವಿಚಾರ||

ನಡೆನುಡಿಯೊಂದಾ| ದೆಡೆ ಸುಖಸಾರ

||5||

ನಿಗಮಾಗಮಗಳ| ಸುಗಮಾರ್ಥಂಗಳ||

ಬಗೆಯನು ತಿಳಿಯೆ| ಹರುಷವು ತಳೆಯೆ

||6||

ನಾದವ ಕೂಡು| ಶೋಧಿಸಿ ನೋಡು||

ಸಾಧನೆ ಮಾಡು| ವಾದವೀಡಾಡು

||7||

ಗುರುವನ್ನು ಕೂಡಿ| ನರನೆನ್ನ ಬೇಡಿ|

ಪರಶಿವ ಜೋಡಿ| ಪರಿಕಿಸಿ ನೋಡಿ

||8||

ನುಡಿಗಳವಾಗದು | ಜಡಮನ ತಾಗದು||

ಮೃಢನೀ ನರಹರಿ| ನುಡಿಸಿದ ನೀಪರಿ

||9||

ಅರಿವಾಯಿತು| ಗುರುದೇವನಿಂದ

||ಪ||

ಪರಿಶುದ್ಧನಾದೆ | ಪರಿಣಾಮವಾಯ್ತು

||ಅ|ಪ||

ದೇವ ತಾನೆಗೈದ| ದೇವಸ್ಥಾನ ದೇಹ|

ದೇವನಿಲ್ಲಿ ಬಂದ| ಜೀವನೆನಿಸಿನಿಂದ

||1||

ಮನವು ತಾನೆ ನಿತ್ಯಾ| ರ್ಚನೆಯ ಮಾಳ್ಪ ಭೃತ್ಯ ||

ನೆನುತ ತಿಳಿಸಿದರ್ಥ| ವಿನುತ ಪಾರಮಾರ್ಥ

||3||

ವಿಷಯ ಭೋಗವೆಂಬ| ಅಸಮ ಪೂಜೆಗೊಂಬ|

ದೆಸೆಯ ತಿಳಿಸುಷುಮ್ನಾ| ವಾಸ ತೃಪ್ತನೆಂಬ

||2||

ಬುದ್ಧಿ ಮೇಲ್ವಿಚಾರ| ಬದ್ಧನಾದ ಪಾರ|

ಶ್ರದ್ಧೆಯುಳ್ಳ ವೀರ| ಸಿದ್ಧನಿರುವ ಸಾರ

||4||

ಇಂದ್ರಿಯಗಳೆ ಚರರು| ನಿಂದು ಸೇವಿಸುವರು||

ಸಂದುಗೊಡದೆ ನಿಷ್ಠೆ| ಯಿಂದ ಮೆಚ್ಚಿಸುವರು

||5||

ಕಾಲಕಾಲವರಿತು| ಲೀಲೆಯಿಂದ ಬೆರೆತು||

ಪಾಲಿಸುತಲಿ ಆಜ್ಞೆ | ಮೇಲುಸೇವೆಗೈವ

||6||

ದೇವದೇವನಿಲ್ಲೆ| ಠಾವು ಮಾಡಿ ನಿಲ್ಲೆ|

ದೇವತೆಗಳು ಬಂದು| ಸೇವೆಗೈವರೆಂದು

||7||

ಸಕಲ ಮುನಿಗಳೆಲ್ಲ| ಭಕುತಿ ಮಾಳ್ಪರಲ್ಲ||

ಮುಕುತಿಗಾಗಿ ತಪವ| ಪ್ರಕಟಗೈದರಲ್ಲಾ

||8||

ಜೀವ ಭಾವವಳಿದು| ದೇವನಾಗಿ ಉಳಿದು||

ಸಾವು ಗೆದ್ದು ನರಹ| ರೀಂದ್ರನಾಗಿ ನಿಂತ

||9||

ಏನೋ ಆನಂದವಾಗಿಹುದು| ಗುರುಪಾದ ಸೇರಿ|

ನಾನೀಗ ಧನ್ಯನಾದೆನು| ಮೈಮರೆತು ನಿಂದೆ ||ಪ||

ಎಲ್ಲೆಲ್ಲಿ ತುಂಬಿಕೊಂಡಿಹನು| ಎಲ್ಲರಲಿ ಸೇರಿ||

ಎಲ್ಲೆಲ್ಲಿ ನೋಡೆ ಕಾಣಿಸನು| ಉಲ್ಲಾಸಮೂರ್ತಿ ||1||

ಸಾಕಾರವಾಗಿ ತೋರುವನು| ಲೋಕೇಶನಿವನು||

ಏಕೋ ಸ್ವರೂಪವಾಗಿಹನು| ಏಕಾಂತ ಶಿವನು ||2||

ಪರನಾದ ರೂಪನಾಗಿಹನು | ಪರಿಪೂರ್ಣ ತಾನು||

ಕರುಣಾಳುವಾಗಿ ಸಲಹುವನು| ಪರಮಾತ್ಮ ಶಿವನು ||3||

ಹೊರಗೊಳಗೆ ಒಂದೆಯಾಗಿಹನು| ಶರಣರ್ಗೆ ಮಾತ್ರ||

ದರುಶನವ ನೀಡಿ ಪೊರೆಯುವನು| ಪರಮಾರ್ಥ ಸೂತ್ರ ||4||

ನಡೆ ನುಡಿಗಳೊಂದೆಯಾದಲ್ಲಿ| ಕಡು ವೈಭವದಲಿ||

ಮಡಿಯಾಗಿ ನಿಂತೆ ನಾನಲ್ಲಿ| ಮೃಢ ನರಹರಿಯಲ್ಲಿ ||5||

ನೋಡು ತಂಗೆಮ್ಮ| ಈ ಕಂದನ| ನಾಡಿಸಿ ನಲಿಯಮ್ಮ ||ಪ||

ನೋಡಿಕೊಂಡವರೆಲ್ಲ| ಆಡಿಸುತಿಹರಮ್ಮ ||ಅಪ||

ಹುಟ್ಟಿದಾಕ್ಷಣ ನಡೆದು| ಬಿಟ್ಟನೀ ಬಾಲನು|

ಥಟ್ಟನೆ ನುಡಿಯುತ್ತ| ನೆಟ್ಟನಾಡುವ ತಾನು ||1||

ನಕ್ಕುನಗಿಸುವ ಕಂದ| ಮಿಕ್ಕು ಕೂಗುವ ಕಂದ||

ಸಿಕ್ಕಿ ಸಿಕ್ಕದ ಕಂದ| ಸೊಕ್ಕು ಮುರಿಯುವ ಕಂದ ||2||

ದೃಷ್ಟಿ ತಾಕದ| ಕಂದ| ಕಷ್ಟ ಸೋಕದ ಕಂದ||

ನಿಷ್ಠೆಗೊಲಿಯುವ ಕಂದ| ಪುಷ್ಟಿಯಾಗಿಹ ಕಂದ ||3||

ಸಾಧು ಸತ್ಪುರುಷರು| ಆದರಿಸುತಿಹ ಕಂದ||

ಆಧಾರದಲ್ಲಿ ಪ್ರ| ಸಾದಿಸುತ್ತಿಹ ಕಂದ ||4||

ಭೂಕಾಂತೆ ಮನಸಾರ| ಸಾಕಿಕೊಂಡಿಹ ಕಂದ||

ಬೇಕೆಂದು ಆಕಾಶ| ಸೋಕಿನಿಂದಿಹ ಕಂದ ||5||

ಜಲದಲ್ಲಿ ಮುಳುಗಾಡಿ| ಕೊಳೆಯ ನೀಗಿದ ಕಂದ||

ಬಲವಾಗಿ ಗುರುವಿನೆಂ| ಜಲು ತಿಂದುದೀ ಕಂದ ||6||

ಅಗ್ನಿಯಲ್ಲಿಯೆ ನಿಂತು| ಯಜ್ಞ ಮಾಡಿದ ಕಂದ||

ವಿಘ್ನವಿಲ್ಲದ ಮಹಾ| ಪ್ರಜ್ಞೆಯಾಗಿಹ ಕಂದ ||7||

ವಾಯುವನೆ ನುಂಗುತ್ತ| ಆಯಾಸವಿಲ್ಲದೆ||

ಮಾಯಾ ವಿಲಾಸ ವಿ| ಧಾಯಕವೀ ಕಂದ ||8||

ಬಯಲಲ್ಲಿ ತುಂಬುತ್ತ| ಬಯಲಾಗಿ ಹೋಗುತ್ತ||

ಭಯವನ್ನು ನೀಗುತ್ತ| ಬಯಲು ಬ್ರಹ್ಮದ ಕಂದ ||9||

ಪತಿತ ಪಾವನ ಸುಜನ| ಹಿತ ಸುಜ್ಞಾನದ ಕಂದ||

ಶತಕೋಟಿ ರವಿತೇಜ| ಯುತ ನರಹರಿ ಕಂದ ||10||

ಶಿವಯೋಗ ಮಾಡಿದವಗೆ| ಭವರೋಗ ಪೋಪುದರಿದೆ ||ಪ||

ಸುವಿರಾಗ ಮೂಡಿದವಗೆ | ಸುವಿವೇಕ ಬಾರದಿಹುದೆ ||ಅಪ||

ಹಠದಿಂದ ಸರ್ವೇಂದ್ರಿಯವ| ದಿಟವಾಗಿ ನಿರ್ಬಂಧಿಸುವ||

ಕುಟಿಲಂಗಳೆಲ್ಲವ ಬಿಡುವ| ಹಠಯೋಗಿ ಧನ್ಯನೆನಿಸುವ ||1||

ಲಯಮೂರ್ತಿ ಶಿವನೊಳಗೆಲ್ಲಾ| ಲಯವಾಗುತಿರುವುದ ಬಲ್ಲಾ||

ಲಯಯೋಗಿ ತನ್ನೊಳಗೆಲ್ಲಾ| ಲಯಿಸುತ್ತಾ ತಾನೆಗೆಲ್ವ ||2||

ಮಂತ್ರಾರ್ಥವರಿಯುತ ಸರ್ವ| ಮಂತ್ರಕ್ಕೆ ಮೂಲವಿರುವ||

ಮಂತ್ರವನೇ ಸೇರಿ ಮೆರೆವ| ಮಂತ್ರಾಧಿ ದೇವನ ಬೆರೆವ ||3||

ರಾಜಂಗೆ ಸರ್ವ ಸ್ವತಂತ್ರ| ತೇಜೋ ವಿಶೇಷ ತಂತ್ರ||

ರಾಜಿಸುವ ರೀತಿಯೊಳಾತ್ಮ| ನೈಜಾಂಶ ರಾಜಯೋಗಿ ||4||

ಮನಬಂಧ ಕಾರಣವಹುದು| ಮನಮೋಕ್ಷ ಕಾರಣವಿಹುದು|

ಮನ ನಿರ್ವಿಕಾರ ಮನಸ್ಕ| ವೆನುವಂಥ ಯೋಗವಹುದು ||5||

ಶಿವತಾನೆ ಸರ್ವಕೆ ಕರ್ತ| ಶಿವತಾನೆ ಸರ್ವಕೆ ಭರ್ತ||

ಶಿವನಲ್ಲಿ ಸೇರಿದವನೆ| ಶಿವಯೋಗಿಯಾದ ತಾನೆ ||6||

ಯೋಗಂಗಳೆಲ್ಲವನರಿತು| ಯೋಗಾಂಗದಲ್ಲಿಯೆ ಬೆರೆತು||

ಯೋಗೀಶ ನರಹರಿ ಎಂದು| ಯೋಗೀಂದ್ರ ಶಿವನಹನಿಂದು ||7||

ನಿಜಬೋಧಾ ಸಂಜೀವನವು | ಗುರು | ಪಾದಾಶ್ರಯ ಪಾವನವು ||ಪ||

ಆನೆಯನೇರಿರುವವನು| ಬಡ|

ಶ್ವಾನನಿಗಂಜುವನೇನು| ಜ್ಞಾನವ ಪಡೆದಿರುವವನು|

ಅನು| ಮಾನಕೆ ಬೀಳದೆ ಇಹನು ||1||

ಹಾಲಲಿ ಬೆಣ್ಣೆಯು ಇರುವ| ಪರಿ|

ಈ ಲೋಕದಿ ಶಿವನಿರುವ||

ಲೀಲೆಯ ನರಿದವ ಮುಕ್ತ| ಭವ|

ಮಾಲೆಯ ಹರಿಯಲು ಶಕ್ತ ||2||

ವೇದವನೋದಿದರೇನು| ಪರ|

ನಾದವ ಸಾಧಿಸದವನು||

ಬೋಧೆಯ ಕೇಳಿದರೇನು| ಗುರು|

ಪಾದವ ನಂಬದ ನರನು ||3||

ಮಂತ್ರವ ಜಪಿಸಿದರೇನು| ಭವ|

ಯಂತ್ರವ ಮುರಿಯದ ನರನು||

ಚಿಂತನ ಮಾಡಿದರೇನು| ಶಿವ|

ನೆಂತಿಹನರಿಯದ ನರನು ||4||

ಧ್ವನಿಸುತಲಿದೆ ಪರನಾದ| ಸಂ

ಜನಿಸಿ ಬರುತಲಿದೆ ವೇದ||

ಮನುಗಳ ಜಪದ ವಿನೋದ| ಪಾ|

ವನ ಶ್ರೀ ನರಹರಿ ಬೋಧಾ ||5||

ನೋಡಿರಿ ಬ್ರಹ್ಮವನು| ದೇಹದೊ|

ಳಾಡುವ ಮರ್ಮವನು| ತಿಳಿಯಿರಿ|

ಕೂಡುವ ಧರ್ಮವನು

||ಪ||

ಕಾಡದೆ ಬೇಡದೆ| ನೋಡದೆ ಕೂಡದೆ|

ರೂಢಿಯೊಳಾಡುವ| ಗೂಢ ಮಹಾತ್ಮನ

||ಅಪ||

ನಾಸಾಗ್ರದಿ ಮೆರೆವ| ಬ್ರಹ್ಮವಿ|

ಲಾಸದಿ ಜಗವಿರುವ| ಮರ್ಮವಿ|

ಶೇಷವನರಿದಿರುವ||

ದೋಷರಹಿತ ಜಗ| ದೀಶ ಗುರೂತ್ತಮ|

ದಾಸರ ಸಂಗದೊ| ಳೀಶನನರಿಯಿರಿ

||1||

ಕಂಗಳ ನಡುವಿರುವ| ತೇಜೋ|

ಲಿಂಗದೊಳಡಗಿರುವ| ಈಸ|

ರ್ವಾಂಗದಿ ತುಂಬಿರುವ||

ಸಂಗರಹಿತ ಮಹ| ಲಿಂಗದಿ ಬೆರೆದಿಹ

ಮಂಗಳ ಮಯ| ಲಿಂ| ಗಾಂಗಿಯನರಿದು

||2||

ಮಂತ್ರದ ಮೂರುತಿಯ| ದೇಹದ|

ಯಂತ್ರದ ಸಾರಥಿಯ| ಸರ್ವಸ್ವ|

ತಂತ್ರ ಜಗತ್ಪತಿಯ||

ಯಂತ್ರವ ಕೂಡಿಸಿ| ಮಂತ್ರದೊಳಾಡಿಸಿ|

ತಂತ್ರದಿ ನಿಲಿಸುವ| ಸಂತನೆಯರಿದು

||3||

ನಟರಾಜನು ಕುಣಿಯೆ| ಕಾಯವು|

ನಟಿಸುತ ಬಲು ದಣಿಯೆ| ಹಂಸನ|

ನಟನೆಗಳಲಿ ತಣಿಯೆ||

ಘಟವಿದನಳಿಯೇ| ದಿಟವನು ತಿಳಿಯೆ|

ಘಟನೆಯು ಹೊಳೆಯೆ| ಸಟೆಯನು ಕಳೆಯೆ

||4||

ಒಳ ಹೊರಗೊಂದಾಗಿ| ತಾನೇ|

ಥಳಥಳಿಸುತ ಯೋಗಿ| ಜಗದೊಳು|

ಬೆಳಗುತ ಸುಖಿಯಾಗಿ||

ಕಲುಷವ ನೀಗಿ| ಕುಲಛಲ ಹೋಗಿ|

ತಿಳಿದವನಾಗಿ| ಬಲು ಸೊಗಸಾಗಿ

||5||

ಇರವೆನಿಸುತ ಬಂದು| ತಾನೇ|

ಅರಿವಾಗಿಯೆ ನಿಂದು| ಪರಸುಖ|

ಭರಿತನು ತಾನೆಂದು||

ಪರತರ ನಿತ್ಯ ಪರಿಪೂರ್ಣತ್ವ|

ನರಹರಿಯಿತ್ತ| ಅರಿವೇ ಸತ್ಯ

||6||

ಇರವೇ ಹಂಸನಾಗಿರುವೆ| ಸತ್ಯ||

ದರಿವಾಗಿ ದೇಹದಿ ಹರಿದಾಡಿ ಮೆರೆವೇ

||ಪ||

ಪರತರವಾಗಿರುವೆ| ಪರಮನಾಗಿರುವೆ||

ಪರಮಹಂಸನಾಗಿ| ಚಿರಕಾಲವಿರುವೇ

||ಅಪ||

ಆಧಾರ ಚಕ್ರದಿ ಗಣಪನಾಗಿರುವೆ|

ಸ್ವಾಧಿಷ್ಠಾನದಿ ಬ್ರಹ್ಮನಾಗಿರುವೇ||

ಮೋದದಿ ಮಣಿಪೂರ ಹರಿಯಾಗಿರುವೇ|

ಆದಿ ಅನಾಹತದೊಳು ಹರನಿರುವೇ

||1||

ತುಂಬಿವಿಶುದ್ಧಿಯೊಳಿಂಬಾಗಿರುವೆ|

ಅಂಬರದೊಳಗೆಲ್ಲ ತುಂಬಿಕೊಂಡಿರುವೆ||

ಚುಂಬಿಸಿ ಯಾಜ್ಞಾ ಚಕ್ರಕೇರಿರುವೆ|

ನಂಬುಗೆಯಲಿ ಸಹಸ್ರಾರದೊಳಿರುವೇ

||2||

ನರಹರಿ ಗುರುವಿನ ಪಾದದೊಳಿರುವೆ|

ಸುರಮುನಿಗಳಿಗೆಲ್ಲ ಸ್ಮರಣೆಯೊಳಿರುವೆ||

ಹರಿಹರ ಬ್ರಹ್ಮಾದಿ ರೂಪ ತಾಳಿರುವೇ|

ಸ್ಮರಿಸುವ ಭಕ್ತರ ಕಾಪಾಡುತಿರುವೇ

||3||

ಓಂಕಾರ ಧ್ವಜವೆ ಹಾರು| ಝೇಂಕಾರ ಧ್ವನಿಯ ತೋರು ||ಪ||

ಆಕಾಶ ಪಥವ ಸೇರು| ಶ್ರೀಕಾರ ಮುಕುತಿ ತೋರು ||ಅಪ||

ಭೂಕಾಂತೆಯನ್ನು ಪಿಡಿದೆ| ಬೇಕೆಂದು ಜಲದಿ ನಡೆದೆ||

ಆಕಾಶದಲ್ಲಿ ಸುಳಿದೆ| ಏಕೋ ಸ್ವರೂಪ ತಾಳ್ದೆ ||1||

ನಡೆಗೂಡಿ ಚಲಿಸುತಿರುವೆ| ನುಡಿಗೂಡಿ ಧ್ವನಿಸಿ ಬರುವೇ||

ನಡೆ ನುಡಿಯು ನಿಂತ ಕಡೆಯೆ | ವಡಲಳಿದ ಯೋಗದರಿವೆ ||2||

ವರ್ಣಗಳಿಗೆಲ್ಲ ಮೂಲ| ವರ್ಣನೆಗೆ ಸಿಲುಕಲಿಲ್ಲ||

ಧ್ವನ್ಯಾತ್ಮ ವರ್ಣಜಾಲ| ನಿರ್ಮಾಣಗೈದ ಲೀಲ ||3||

ಹಂಸನನು ಏರಿ ಬರುವೆ| ಸಂಶಯವ ಸೀಳುತಿರುವೆ|

ಹಿಂಸಾರ್ಥ ಹಾರಿಸಿರುವೆ| ಸಂಸಿದ್ಧಿಯಿತ್ತು ಮೆರೆವೆ ||4||

ಗುರುಪಾದ ಸೇರಿ ನಿಂತೆ| ಪರಬೋಧೆಯಾಗಿ ಕುಂತೆ||

ನರಹರಿಯ ಸೇವೆಯಾಂತೆ|| ಪರಮಾ ಪ್ರಕಾಶವಂತೆ ||5||

ಏಳು ಚಕ್ರದ ಕೀಲ | ಮೂಲಬ್ರಹ್ಮದ ಲೀಲ |

ಲೋಲಹಂಸನೆ ನೋಡು ಬಾ ಬಾ ಬಾ

||ಪ||

ಆಧಾರ ಚಕ್ರದಲ್ಲಿ| ಮೇದಿನಿಯ ತತ್ವದಲ್ಲಿ|

ಆದಿ ಗಣಪತಿಯಾದೆ ಬಾ ಬಾ ಬಾ

||1||

ಸ್ವಾಧಿಷ್ಠಾನದ ಚಕ್ರ| ವಾದ ಜಲ ತತ್ವದಲ್ಲಿ|

ವೇದಾತ್ಮ ಬ್ರಹ್ಮನಾದೆ ನೀನೀನೀ

||2||

ಮಣಿಪೂರ ಚಕ್ರದಲ್ಲಿ| ಅನಲನತತ್ವದಲ್ಲಿ |

ವನಜಾಕ್ಷ ವಿಷ್ಣುವಾದೆ ಬಾಬಾಬಾ

||3||

ಅನಾಹತ ಚಕ್ರದಲ್ಲಿ| ಅನಿಲ ತತ್ವದಲ್ಲಿಯೆ |

ಘನರುದ್ರ ನೆನಿಸಿದೆ ಬಾಬಾಬಾ

||4||

ವಿಶುದ್ಧ ಚಕ್ರದೊಳಾಕಾಶ ತತ್ವದಲ್ಲಿ|

ಪ್ರಸಿದ್ಧ ಜೀವನಾದೆ ಬಾಬಾಬಾ

||5||

ಆಜ್ಞಾಚಕ್ರದಿ ಶಿವ | ನಾಜ್ಞೆಯೊಳಿರುತಿಹ |

ಪ್ರಜ್ಞಾನ ಗುರುವರ ಬಾ ಬಾ ಬಾ

||6||

ಸಹಸ್ರಾರದಿ ಬಹು | ಮಹತ್ವದೊಳು ನಿಂತ |

ಮಹಾತ್ಮ ನರಹರಿಯೆ ಬಾ ಬಾ ಬಾ

||7||

ಪರಬ್ರಹ್ಮವೆಂಬುದು ಎಲ್ಲಿದೆ| ನಿಮ್ಮ

ಶಿರದಲ್ಲಿಯೇ ಮನೆ ಮಾಡಿದೆ||

ಪರನಾದ ಶೋಧನೆಯಿಲ್ಲದೆ| ಗೋ|

ಚರವಾಗಲಾರದು ಯಾರಿಗೆ ||ಪ||

ಗುರುವೀವ ಬೋಧಾ| ಕರುಣಾ ಪ್ರಸಾದ|

ಪರನಾದ ವಿದ್ಯಾಸುಧಾ| ಭವ| ಹರಮಾದ| ಪರಮೌಷಧಾ ||ಅಪ||

ಓಂಕಾರದಲ್ಲಿದೆ ನೋಡಿರಿ| ನಿರ|

ಹಂಕಾರ ಭಾವವ ಕೂಡಿರಿ|

ಝೇಂಕಾರ ನಾದವ ಮಾಡಿರಿ ಸಾ|

ಲಂಕಾರ ವರ್ಣವೀಡಾಡಿರಿ||

ಅಂಕುರಕ್ಕೆ ಸೋಕಿದೆ| ಶಂಕೆಯನ್ನು ನೂಕಿದೆ |

ಅಂಕೆಯಿಲ್ಲದಂತಾಗಿದೆ| ನವ|

ಶಂಖದಂತೆ ಮೊರೆಯುತ್ತಿದೆ ||1||

ಮಹಿಯಲ್ಲಿ ಓಡಾಡಿಕೊಂಡಿದೆ| ದಿನ|

ವಹಿಯಲ್ಲಿ ಕೂಡಾಡಿಕೊಂಡಿದೆ||

ಗುಹೆಯಲ್ಲಿ ತಪ ಮಾಡಿ ಕೂತಿದೆ| ಗಹ|

ಗಹಿಸುತ್ತ ನುಡಿಯಾಗಿ ನಿಂತಿದೆ||

ಬಹಿರಂಗವಾಗುವ | ಮಹಿಮಾ ಸ್ವರೂಪವ|

ವಹಿಸುತ್ತಲನುಭಾವವ | ಹೊಂ|

ದಿಹುದು ಸೋಹಂಭಾವವ ||2||

ನಡೆಯುತ್ತ ಪೃಥ್ವಿಯ ಕೂಡಿತು| ಬಲು|

ನುಡಿಯುತ್ತ | ಜಲದೊಳಗಾಡಿತು|

ದುಡಿಯುತ್ತ ಲಗ್ನಿಯ ಹೂಡಿತು| ತಡೆ

ಹಿಡಿಯುತ್ತ ಮರುತದಿ ಮೂಡಿತು||

ಗುಡುಗುತ್ತ ಲಾಗಸ| ದೆಡೆಯಲ್ಲಿ ಸಾಗಿತು|

ಜಡಭೂತಗಳತಾಮೀರಿತು| ಸುಖ

ಪಡೆಯುತ್ತ| ನರಹರಿಯಾಯಿತು ||3||

ತಂದುದುಣ್ಣದೆ ತೀರದು| ಬೇಡೆಂದರಿದು ಬಿಡಲಾರದು ||ಪ||

ಹಿಂದೆ ಮಾಡಿದರಕ್ಮವು ತನು| ಹೊಂದಿಕೊಂಡಿದೆ ಮರ್ಮವು ||ಅಪ||

ಪುತ್ರ ಕೆಟ್ಟವ ನೆನ್ನಲೇತಕೆ| ಶತೃ ಪೂರ್ವದ ಜನ್ಮಕೇ||

ಪುತ್ರ ರೂಪದಿ ಕಾಡುತಿಹನೆನ್ನುತ್ತ ತಿಳಿವುದೆ ಹೊಂದಿಕೆ ||1||

ಪುತ್ರ ಸಜ್ಜನನಾದ ನೇತಕೆ| ಮಿತ್ರನಾದವ ಹಿಂದಕೆ||

ಪುತ್ರ ರೂಪವನಾಂತು ಸಲಹುವ| ಪಿತೃ ಸ್ನೇಹವ ತಾಳುವಾ ||2||

ಪತ್ನಿ ದುಷ್ಟಳು ಪೂರ್ವ ಜನ್ಮದಿ| ಶತೃ ಪಾಪದ ಶೇಷದಿ||

ಪತ್ನಿ ಸಜ್ಜನಳಾದಳೇತಕೆ| ಮಿತ್ರಳಿವಳೇ ಹಿಂದಕೇ ||3||

ಬಂಧು ಕೆಡಿಸಿದನೆನ್ನಬಾರದು| ಹಿಂದೆಗೈದುದು ತಾನಿದು||

ಬಂಧುವೆನ್ನಿಸಿ ಬಂದು ಕಾಡಿತು| ಎಂದರೇ ನಿಜ ಕಂಡಿತು ||4||

ಪುತ್ರಮಿತ್ರ ಕಳತ್ರ ಬಾಂಧವ| ರರ್ಥ ಸಂಪದವೆಲ್ಲವು||

ಹೊತ್ತ ಪೂರ್ವದ ಸಂಚಿತಾರ್ಥವು| ಮತ್ತೆ ನರಹರಿಗಿಲ್ಲವು ||5||

ಬನ್ನಿರಯ್ಯ ಭಕ್ತರೇ| ಜನ್ಮದುಃಖ ಮುಕ್ತರೇ ||ಪ||

ಬನ್ನಿರೈ ವಿರಕ್ತರೇ| ಪೂರ್ಣ ಜ್ಞಾನ ಯುಕ್ತರೇ ||ಅಪ||

ಕಾಣುತಿರ್ಪುದೊಮ್ಮೆಯು| ಕಾಣದಾಯ್ತು ಮತ್ತೆಯು||

ತಾನಿದೆಲ್ಲ ಮಾಯೆಯು| ತಾನೆ ಬ್ರಹ್ಮ ಛಾಯೆಯು ||1||

ಇಂದ್ರಿಯಕ್ಕೆ ಗೋಚರ| ವೆಂದುದೆಲ್ಲ ನಶ್ವರ||

ಸಂಧಿಸಿರುವ ಈಶ್ವರ| ನಿಂದಲೀ ಚರಾಚರ ||2||

ಕಾಯಕಾರಣ ವೆನ್ನಿಸಿ| ಮಾಯೆಯಿಂದ ಜನ್ಮಿಸಿ||

ಸಾಯುವಾಗ ಶೂನ್ಯವು| ಕಾಯ ಕರಣ ವನ್ಯವು ||3||

ಜ್ಞಾನವಿಲ್ಲದಾಗದು| ಹೀನಕರ್ಮ ನೀಗದು||

ಜ್ಞಾನದಿಂದ ಕರ್ಮವು| ಹಾನಿಯಾಗುತಿರ್ಪವು ||4||

ಕರ್ಮದಲ್ಲೇ ಜ್ಞಾನವಾ| ನಿರ್ಮಿಸುತ್ತಲನುಭವ||

ಸಮ್ಯಜ್ಞಾನ ವೀವನು| ನಮ್ಮ ನರಹರೀಂದ್ರನು ||5||

ಸತಿಯ ಬಿಡಲು ಮುಕ್ತಿಯೇ| ಸುತರ ಬಿಡಲು ಮುಕ್ತಿಯೇ||

ವ್ರತವ ಮಾಡೆ ಮುಕ್ತಿಯೇ| ಪಥವ ಪೇಳಿ ಮುಕ್ತಿಗೆ ||6||

ಜಪವ ಮಾಡೆ ಮುಕ್ತಿಯೇ| ತಪವ ಮಾಡೆ ಮುಕ್ತಿಯೇ||

ಜಪತಪಾದಿ ಯುಕ್ತಿಗೆ| ಸುಪಥ ಜ್ಞಾನ ಶಕ್ತಿಯೇ ||7||

ಗುರುವೆ ಬ್ರಹ್ಮದೇವನು| ಗುರುವೆ ವಿಷ್ಣು ದೇವನು||

ಗುರುವೆ ರುದ್ರದೇವನು| ಗುರುವೆ ನರಹರೀಂದ್ರನು ||8||

ನಮೋ ವಿಶ್ವರೂಪಕಾ| ನಮೋ ಸರ್ವ ವ್ಯಾಪಕಾ ||ಪ||

ನಮೋಜ್ಞಾನ ದೀಪಕಾ| ಸಮಾಧಿ ಸ್ವರೂಪಕ ||ಅಪ||

ಸುಷುಮ್ನಾ ನಿವಾಸಿಯೇ| ದಿಶಾಂತ ಪ್ರವಾಸಿಯೇ||

ಪ್ರಶಾಂತಾ ವಿಲಾಸಿಯೇ| ಪ್ರಸಾದಾಭಿಲಾಷಿಯೇ ||1||

ಮನಾನಂದ ಸುಂದರಾ| ವಿನೋದಾ ವಸುಂಧರಾ||

ಸುನಾದಾತ್ಮ ಬಂಧುರಾ|| ಮುನೀಂದ್ರಾತ್ಮ ಮಂದಿರಾ ||2||

ಪರಾನಾದ ಬೋಧಕಾ| ಪರಾನಂದ ಸಾಧಕಾ||

ಸುರಾನಂತ ಶೋಧಕಾ| ಧರಾದ್ಯಂತ ಪಾದುಕಾ ||3||

ನರ ರೂಪಧಾರಿಯೇ | ಪರಮೋಪಕಾರಿಯೇ ||

ಪರಿತಾಪ ಹಾರಿಯೆ | ಶೌರಿ ಧನುಜಾರಿಯೇ ||4||

ದಯಾಧರ್ಮ ಸಾಗರಾ | ಕ್ರಿಯಾದರ್ಥ ಸಾಗರಾ ||

ಶ್ರೇಯಕಾಮ್ಯ ಶ್ರೀವರಾ | ಜೀಯ ಮುಕ್ತಿಮಂದಿರಾ ||5||

ಭಕ್ತ ಸಂಸಾರಿಯೇ | ವ್ಯಕ್ತ ಸುವಿಚಾರಿಯೆ ||

ಯುಕ್ತ ಜ್ಞಾನಧಾರಿಯೆ | ಮುಕ್ತಿಗಾಧಾರಿಯೆ ||6||

ವಿಪ್ರ ಶುದ್ಧನೀತನೆ | ಸುಪ್ರಸಿದ್ಧನೀತನೆ ||

ಸ್ವಪ್ರಯತ್ನಶೀಲನೆ | ಸುಪ್ರಬೋಧ ಮೂಲನೆ ||7||

ಶರಣರುದ್ಧಾರಿಯೇ | ಚಿರಸೌಖ್ಯಕಾರಿಯೇ ||

ಶರಿರದಾಧಾರಿಯೆ | ನರಹರಿ ಯೋಗಿಯೇ ||8||

ಅಕ್ಕಾ ಯೀ ಲೆಕ್ಕ ತಿಳಿಯಕ್ಕ| ಇಂಥ|

ಲೆಕ್ಕತಿಳಿದ ಮೇಲೆ ಏನು ದುಃಖವಿಲ್ಲವಕ್ಕ|

ನೀ| ಚೊಕ್ಕ ಬ್ರಹ್ಮವಕ್ಕ ||ಪ|

ಒಂದೆಂಬ ಲೆಕ್ಕ ಬ್ರಹ್ಮವಕ್ಕ| ಬ್ರಹ್ಮ|

ದಿಂದ ಬಂದ ಮಾಯೆ ಜನ್ಮ| ಬಂಧಮೂಲವಕ್ಕ ||

ಅದು| ಬಂದು ಹೋದ ಲೆಕ್ಕ ||1||

ಸಗುಣ ನಿರ್ಗುಣವೆರಡು ಲೆಕ್ಕ| ಎಲ್ಲ|

ಬಗೆಯಾದ ಸಗುಣ ನುಂಗಿ| ಮುಗಿಸಿಬಿಟ್ಟ

ಲೆಕ್ಕ| ಅದು | ನಿರ್ಗುಣವಾಯಿತಕ್ಕ ||2||

ಗುಣ ಮೂರು ಎಂಬುದೊಂದು ಲೆಕ್ಕ| ಇಂಥ|

ಗುಣ ಮೂರು ಸೃಷ್ಟಿ ಸ್ಥಿತಿ| ಲಯವೆಂ

ಬವಕ್ಕ| ಇದರೆಣಿಕೆ ತೋರ್ಕೆಯಕ್ಕ ||3||

ವೇದ ನಾಲ್ಕೆಂಬುದೊಂದು ಲೆಕ್ಕ| ಸರ್ವ|

ವೇದಂಗಳಾಯ್ತು ಪರಾ| ನಾದದಿಂದ ಲಕ್ಕ |

ಗುರು| ಬೋಧೆ ಸತ್ಯವಕ್ಕ ||4||

ಭೂತಂಗಳೈದು ಎಂಬ ಲೆಕ್ಕ| ಜೀವ|

ಜಾತಂಗಳಾದುದೈದು| ಭೂತ ಗುಣಿಸಿ ಲೆಕ್ಕ |

ಕಳೆ| ದಾತ ಬ್ರಹ್ಮವಕ್ಕ ||5||

ಆರು ಗುಣಂಗಳೆಂಬ ಲೆಕ್ಕ| ತನ್ನ|

ಸೇರಿದ್ದ ರಾಗಜನ್ಮ| ಕಾರಣಕೇಳಕ್ಕ|

ಇವು| ದೂರ ಮಾಡು ಲೆಕ್ಕ ||6||

ಏಳೆಂಬ ಲೆಕ್ಕ ಏಳು ಚಕ್ರ| ಅಲ್ಲಿ|

ಮೂಲ ಬ್ರಹ್ಮವು ಸೇರಿ| ಲೀಲಗೈವುದ

ಕ್ಕ| ಇದು| ಕೇಳಿದಾತ ಮುಕ್ತ ||7||

ಅಷ್ಟಾಂಗ ಯೋಗವೆಂಬ ಲೆಕ್ಕ| ಬ್ರಹ್ಮ|

ನಿಷ್ಠ ಯೋಗೀಶ್ವರಂಗೆ ಕಷ್ಟವಿಲ್ಲ

ವಕ್ಕ| ಭವ| ನಷ್ಟವಾಯಿತಕ್ಕ ||8||

ಒಂಭತ್ತು ಬಾಗಿಲೆಂಬಲೆಕ್ಕ| ದೇಹ|

ವೆಂಬ ಗುಡಿಯಲ್ಲಿ ಬ್ರಹ್ಮ| ತುಂಬಿ

ಯಿದ್ದಾನಕ್ಕ| ಗುರು | ವೆಂಬ ಮಾತು ಚೊಕ್ಕ ||9||

ಹತ್ತು ಯಿಂದ್ರಿಯವೆಂಬ ಲೆಕ್ಕ| ಬ್ರಹ್ಮ|

ವಸ್ತು ಸೇರಿರುವುದು ಸತ್ಯವಾದಲೆ

ಕ್ಕ| ನೀ| ಮಿಥ್ಯ ಕಳೆದ ಲೆಕ್ಕ ||10||

ಸೊನ್ನೆಯೆಂಬುದೆ ಪೂಜ್ಯವಕ್ಕ| ಸರ್ವ|

ಶೂನ್ಯವಾಗಿರ್ಪ ಬ್ರಹ್ಮ| ಸನ್ನೆಗೈವ ಲೆಕ್ಕ

ಸಂ| ಪನ್ನ ನರಹರಿಯಕ್ಕ ||11||

ನಿನ್ನ ನಡೆಯನರಿತಮೇಲೆ|

ಯನ್ನ ನಡೆಬೇರಿಲ್ಲವಾಯ್ತು

||ಪ||

ನಿನ್ನ ನುಡಿಯ ಕಲಿತ ಮೇಲೆ|

ಯನ್ನ ನುಡಿಯೇ ನಿಲ್ಲವಾಯ್ತು

||ಅಪ||

ನಿನ್ನ ಗುಣವಾ ತಿಳಿದ ಮೇಲೆ|

ಯನ್ನ ಗುಣವೇ ಉಳಿಯದಾಯ್ತು||

ನಿನ್ನ ಸ್ಥಿತಿಯ ಕಂಡ ಮೇಲೆ| ಯನ್ನ ಮತಿ

ಯೇ ಬೆರೆತು ಹೋಯ್ತು

||1||

ನಿನ್ನ ಮಹಿಮೆ ಕೇಳಲಾಗಿ|

ಯನ್ನ ಹಿರಿಮೆ ಬಾಳದಾಯ್ತು||

ನಿನ್ನ ಕೃತಿಯ ಕಾಣಲಾಗಿ|

ಯನ್ನ ಕಥೆಯೆ ಬೇರೆಯಾಯ್ತು

||2||

ನಿನ್ನ ಬಿಟ್ಟು ಬೇರೆ ಇರುವು|

ದೆನ್ನ ಕೈಯಲಾಗದಾಯ್ತು||

ನಿನ್ನೊಳಾನು ಬೆರೆತ ಮೇಲೆ|

ಧನ್ಯ ನರಹರೀಂದ್ರನಾಯ್ತು

||3||

ಗುರುವೆ ನಿನ್ನಯ ಪಾದವ ಕಂಡೆ|

ದುರಿತ ದುಃಖವ ನಾ ಕಳಕೊಂಡೆ ||ಪ||

ಶರೀರ ಸಾಕ್ಷಿಕನನು ತಿಳಕೊಂಡೆ|

ಮರಣ ಭಯವನು ತಪ್ಪಿಸಿಕೊಂಡೆ ||ಅಪ||

ಮೂಲ ಮಂತ್ರದ ಮಹಿಮೆಯ ಪಡೆದು|

ಸ್ಥೂಲಯಂತ್ರದ ದೇಹವು ನಡೆದು ||

ಕಾಲತಂತ್ರಕೆ ಸಿಕ್ಕದೆ| ಬಿಡದು |

ಲೀಲೆಯಾಯಿತು ಬ್ರಹ್ಮವೆ ಹಿಡಿದು ||1||

ಎಂಟು ಅಕ್ಷರ ಮಂತ್ರದ ಮಹಿಮೆ|

ಉಂಟು ಇಲ್ಲಿಯೇ ಬ್ರಹ್ಮದ ಹಿರಿಮೆ||

ಎಂಟು ಪ್ರಕೃತಿಯು ಸೇರಿದ ಬಲುಮೆ|

ಯಾದರೆ ಬ್ರಹ್ಮದ ಒಲುಮೆ ||2||

ಸತ್ವರಾಜಸ ತಾಮಸ ಮೂರು|

ವೃತ್ತಿಗುಣಗಳೆಸ ಗುಣದ ಬೇರು||

ಕಿತ್ತು ಹಾಕಿದ ನಿರ್ಗುಣನಾರು|

ಚಿತ್ತ ಸಾಕ್ಷಿಯ ನರಹರಿಯೆ ತೋರು ||3||

ಜಾಗ್ರ ಸ್ವಪ್ನವು ಸುಪ್ತಿಗಳಲ್ಲಿ|

ಜಾಗ್ರನಾಗಿರುವಾತ್ಮನು ಇಲ್ಲಿ||

ಉಗ್ರನಾಗದೆ ಹೊಂದಿರುವಲ್ಲಿ|

ಶೀಘ್ರ ಸಾಧನೆ ಮಾಡಿದೆ ನಿಲ್ಲಿ ||4||

ವಿಶ್ವ ತೈಜಸ ಪ್ರಾಜ್ಞರು ಕೂಡಿ|

ನಶ್ವರದ ತನು ಮೂರರೊಳಾಡಿ||

ದೃಶ್ಯವೆ ನಿಜವೆಂಬುದೆ ರೂಢಿ|

ಸ್ವಸ್ವರೂಪವ ಮರೆತರು ನೋಡಿ ||5||

ಸ್ಥೂಲ ಸೂಕ್ಷ್ಮವು ಕಾರಣ ದೇಹ||

ಮೂಲವೇ ಮಹಕಾರಣ ದೇಹ||

ಹೇಳಲಸದಳವಾಗಿದೆ ಮೋಹ|

ಕೇಳಲಳಿವುದು ಬಲು ಸಂದೇಹ ||6||

ಮೂರವಸ್ಥೆಗೆ ಸಾಕ್ಷಿಕ | ಮೂರ್ತಿ

ಮೂರು ದೇಹವ ಮೀರಿದ ಕೀರ್ತಿ||

ಮೂರು ಮಾತ್ರೆಗೆ ಸೇರದೆ ಸ್ಫೂರ್ತಿ |

ತೋರಿದಾ ನರಹರಿ ದೇವ ಪೂರ್ತ ||7||

ಪರತತ್ವ ಪೂರ್ಣ ರಹಸ್ಯ| ಜ್ಞಾನ|

ಗುರುನಾಥನಿಂದ ತೀರುವುದು ಸಮಸ್ಯ

||ಪ||

ಹೊರಗೆ ಕಾಣುತಲಿರ್ಪ ದೃಶ್ಯ| ವೆಲ್ಲ|

ಹರಿದರೆ ಜೀವರಿಗೆ ಸಾಮರಸ್ಯ

||ಅಪ||

ಒಡಲೆನ್ನುವಶ್ವತ್ಥವೃಕ್ಷ| ತಾನೆ|

ಬುಡಮೇಲು ಕೊನೆ ಕೆಳಗಿಹುದು ಪ್ರತ್ಯಕ್ಷ||

ಬುಡದೊಳಗಿಹ ಜಲಜಾಕ್ಷ| ಜ್ಞಾನ|

ಪಡೆದು ನೋಡಲಿ ಬೇಕಿದರಂತರ್ಲಕ್ಷ್ಯ

||1||

ಸ್ಥೂಲ ತನುವಿದು ವಟವೃಕ್ಷ| ಇದರ|

ಮೂಲದಿ ಶಿವನಿರ್ಪ ಲೋಕದಧ್ಯಕ್ಷ|

ಕಾಲ ಕರ್ಮಗಳ ಪರೀಕ್ಷೆಗೈವ |

ಲೀಲೆಯನರಿಯಿಲ್ಕೆ ತನಗಾಯ್ತು ಮೋಕ್ಷ

||2||

ಮಂತ್ರಮೂಲದಿ ಬ್ರಹ್ಮವುಂಟು| ಬ್ರಹ್ಮ|

ತಂತ್ರದಿಂದೀದೇಹಕ್ಕಾಯಿತು ನಂಟು||

ಯಂತ್ರದಲ್ಲೇನಿದೆ ಗಂಟು| ಸರ್ವ|

ತಂತ್ರ ಸ್ವತಂತ್ರಶ್ರೀ| ನರಹರಿಗುಂಟು

||3||

ನಿನ್ನ ನಾಮವೆ ನಾದವು| ಶಿವ|

ನಿನ್ನರೂಪವಬಿಂದುವು |ಪ||

ನಿನ್ನ ಕ್ರಿಯೆಯೇ ಕಳೆಯು ಎನಿಸಿತು|

ನಿನ್ನನಿಜದಾನಂದವು ||ಅಪ||

ನಾದದಲ್ಲಿದೆ ನಾಮವು| ಪರ|

ನಾದದಲ್ಲಿದೆ ರೂಪವು|

ಬೋಧೆಯಲ್ಲಿದೆ ಸತ್ಕ್ರಿಯೆ| ಗುರು|

ಪಾದದಲ್ಲಿದೆ ನಿಷ್ಕ್ರಿಯೆ ||1||

ಆದಿಯಾಯಿತು ನಾದವು| ಪರ|

ನಾದವಾಯಿತು ಬಿಂದುವು||

ಬೋಧೆಯಾಯಿತು ಚಿತ್ಕಳೆ| ಗುರು|

ಪಾದವಾಯಿತು ನಿಷ್ಕಳೆ ||2||

ನುಡಿಯೆ ನಾದವು ನಡೆಯೆ ಬಿಂದುವು|

ನಡುವೆ ಕಳೆಯಾನಂದವು||

ನಡೆನುಡಿಯನಿಲು ಕಡೆಯೊಳನುಭವ|

ಪಡೆದ ಪರಮಾನಂದವು ||3||

ಚಿತ್ತು ನಾದವು ಸತ್ತು ಬಿಂದವು|

ಮತ್ತೆ ಕಳೆಯಾನಂದವು||

ನಿತ್ಯ ನಿರ್ಮಲ ಪರಮ

ಪರಿಪೂ|ರ್ಣತ್ವಪರಮಾನಂದವು ||4||

ಅರಿವು ನಾದವು ಇರವೆ ಬಿಂದುವು|

ಪರಮ ಸುಖ ಕಳೆಯಾದುದು||

ಪರಮ ಗುರು ನರಹರಿಯ ಪಾದವ|

ಬೆರೆತರೇ ನಿಷ್ಕಳೆಯದು |5||

ಏನು ಧೀರ ಏನು ಶೂರಯನ್ನ ಗಂಡನು|

ನಾನೆ ಮೆಚ್ಚಿ ಆತನನ್ನು ಕೂಡಿಕೊಂಡೆನು ||ಪ||

ನಾನು ನೀನು ಎಂಬ ಭೇದ ಬಿಟ್ಟುಕೊಂಡೆನು ||ಅಪ||

ಪೃಥ್ವಿಯ ತಾನೆ| ಹೊತ್ತಿಹನಂತೆ ಕೇಳಿರಕ್ಕಯ್ಯ||

ಎತ್ತಲು ತಾನೆ ತುಂಬಿಹನಂತೆ ನೋಡಿರಮ್ಮಯ್ಯ||

ಹುತ್ತದ ಸರ್ಪದ ಹೆಡೆಯ ರತ್ನ ತಾನೆ ಅಕ್ಕಯ್ಯ||

ಹತ್ತಿದಪಾಪ ಎತ್ತಿಹಾಕಿದ ನೋಡಿರಮ್ಮಯ್ಯ ||1||

ಸಾಗರದಲ್ಲೆ ಹೋಗುವನಿಲ್ಲೆ ಹಿಡಿಯಿರಕ್ಕಯ್ಯ|

ಹಾಗೇ ಬಂದು ಹೀಗೇ ಹೋದ ಕಾಣಿರಮ್ಮಯ್ಯ||

ಕೂಗಿ ಕೊಂಡರೆ ಬೇಗ ಮುಕ್ತಿ ಕೊಡುವನಕ್ಕಯ್ಯ||

ಹಾಗೆ ಹೀಗೆ ಎಂಬುದ| ಬಿಟ್ಟುಹೋಗಿರಮ್ಮ ||2||

ಬೆಂಕಿಯ ಕೂಡಿ ಅಂಕೆಯ ಮೀರಿ ಹೋದನಕ್ಕಯ್ಯ||

ಮಂಕಿನ ಬೂದಿ ಸೋಂಕದೆ ಊದಿಬಿಟ್ಟನಮ್ಮಯ್ಯ||

ಶಂಕೆಯ ಕಳೆದು ಸಂಕಲೆ ಮುರಿದು ನಿಂತನಕ್ಕಯ್ಯ||

ಬೆಂಕಿಯನಿಟ್ಟು ಲಂಕೆಯ ಸುಟ್ಟು ಬಿಟ್ಟ ನಮ್ಮಯ್ಯ ||3||

ಮಾರುತನಾಟ ಮೀರಿದ ಓಟ| ಓಡುವನಕ್ಕಯ್ಯ |

ಕಾರಣ ಮೂರ್ತಿ ಸಾರಿದ ಕೀರ್ತಿ ಕೇಳಿರಮ್ಮಯ್ಯ|

ಮಾರಣ ಹೋಮ ಕಾರಣ ನೇಮ ಮುರಿದನಕ್ಕಯ್ಯ||

ಯಾರಿಗೆ ಸಿಗದ ದಾರಿಯ ಹಿಡಿದು ನಡೆದನಮ್ಮಯ್ಯ ||4||

ಅಂಬರವೇರಿ ನಂಬಿಕೆ ತೋರಿ ಹೋದನಕ್ಕಯ್ಯ||

ತುಂಬಿದ ಭಕ್ತಿಯಿಂಬಿನ ಶಕ್ತಿ ಕೊಟ್ಟನಮ್ಮಯ್ಯ||

ಹಂಬಲದಲ್ಲೆ| ಸಂಭ್ರಮದಲ್ಲೆ ಬಂದನಕ್ಕಯ್ಯ||

ತುಂಬುರನಾರದರೆಂಬರ ನಿಲ್ಲೆ ಕಂಡೆ ನಮ್ಮಯ್ಯ ||5||

ಮಾತಿನ ಮಲ್ಲ | ಸೋತವನಲ್ಲ| ಕೇಳಿರಕ್ಕಯ್ಯ||

ಈತನ ಮಾತು| ಜಾತಿಯ ಮುತ್ತು| ಕೇಳಿರಮ್ಮಯ್ಯ||

ಚೇತನ ತುಂಬಿದಾತನ ನಂಬಿ ಕೊಳ್ಳಿರಕ್ಕಯ್ಯ||

ಪಾತಕಹಾರಿ ಈತ ನರಹರಿ| ತಾತ ನಮ್ಮಯ್ಯ ||6||

ಉದಾಸೀನನಾಗುವೆ| ಅಧೋಗತಿಗೆ ಹೋಗುವೇ ||ಪ||

ಸದಾಶಿವನ ಧ್ಯಾನವಾ| ಸದಾ ಮಾಡು ಮಾನವಾ ||ಅಪ||

ಮೂಲ ಮಂತ್ರ ತಿಳಿಯದೇ| ಕಾಲತಂತ್ರವಳಿವುದೇ||

ಸ್ಥೂಲಯಂತ್ರ ದೇಹವು ಲೀಲೆಗೇಕೆ ಮೋಹವು ||1||

ನಿನಗೆ ಯಾರು ದಿಕ್ಕಲಾ| ನಿನಗೆ ಯಾಕೆ ಸೊಕ್ಕೆಲಾ||

ನಿನಗೆ ಏನು ಹಕ್ಕಿದೆ| ಮನದ ಕೈಗೆ ಸಿಕ್ಕಿದೆ ||2||

ತನುವು ನಿನ್ನದೇನೆಲಾ| ಮನವು ನಿನ್ನದೇನೆಲಾ||

ಧನವು ನಿನ್ನದೇನೆಲಾ| ಕೊನೆಗೆ ಬರುವವೇನೆಲಾ ||3||

ತಂದೆ ತಾಯಿ ಯಾರಿಗೆ| ಬಂಧು ಬಳಗವಾರಿಗೆ||

ಹಿಂದೆ ಬರರು ಎಂದಿಗೆ| ಮುಂದೆ ಗುರುವೆ ಸುಗುತಿಗೆ ||4||

ಗುರುವು ನರನು ಎನ್ನುವೇ| ನರಕದಲ್ಲಿ ಬೀಳುವೇ||

ನರಹರೀಂದ್ರ ಚರಣವು| ದುರಿತ ಕಳೆವ ಮಾರ್ಗವು ||5||

ತಿಳಿಯಬೇಕೈ ಶ್ರೀಗುರುವಿನಿಂದ|

ಕಳೆಯಬೇಕೈ ಸಂಶಯ ಬಂಧ ||ಪ||

ತೊಳೆಯಬೇಕೈ ಕರ್ಮ ಸಂಬಂಧ|

ತಳೆಯಬೇಕೈ ಬ್ರಹ್ಮಾನಂದ ||ಅಪ||

ಇಳೆಯ ಶ್ರೀಗಂಧಾಸನದಲ್ಲಿ|

ನೆಲಸಿ ನಡೆವುದು ಕಳಹಂಸನಿಲ್ಲಿ||

ತಿಳಿಯೆ ಮೂಲಾಧಾರವಿದಿಲ್ಲಿ|

ಒಳಗೆ ಹೊರಗೇಕ ವಾಗಿಹುದಿಲ್ಲಿ ||1|

ಜಲದ ರಸನಾಸನವನ್ನು ಸೇರಿ |

ಒಲಿದು ಸುರಸಾಮೃತವನು ಹೀರಿ||

ನಲಿದು ಬೋಧಾಮೃತವೀಯಲಾಗಿ|

ತಿಳಿದೊಡಾತನೆ ನಿಶ್ಚಲ ಯೋಗಿ ||2||

ಚಿತ್ರತರ ರೂಪಾಸನದಲ್ಲಿ| ನಿತ್ಯ ದರ್ಶನವೀಯುವನಿಲ್ಲಿ||

ಕೃತ್ಯಗೈವನು ಜಾಗ್ರವ ಮಾಡಿ|

ಸುಪ್ತಿಯೊಳಗಿಹ ನಿರ್ಗುಣ ಕೂಡಿ ||3||

ಮೆರೆವ ಸುಸ್ಪರ್ಶಾಸನದಲ್ಲಿ|

ಹರಿವ ಸರ್ಪನ ಹಿಡಿದಿಹನಿಲ್ಲಿ||

ಪರತರಾನಂದ ಚಿದ್ಘನನಾಗಿ|

ಪರಮ ಜೀವರಿಗೇ ಕತ್ವವಾಗಿ ||4||

ಮಂಜುಳದ ನಾದಾಸನ ಮಾಡಿ|

ರಂಜಿಸುವ ಶಬ್ದ ಜಾಲವ ಕೂಡಿ||

ಭಂಜಿಸುವ ಜನ್ಮ ಮರಣವ ದೂಡಿ|

ಅಂಜನವ ಹಾಕಿ ಬ್ರಹ್ಮವ ನೋಡಿ ||5||

ಮನವೆ ಸರ್ವಾಸನವಾಗಿಹುದು|

ಮನನದಲಿ ನಿರ್ವಾಸನೆಯಹುದು||

ಘನನಿಧಿ ಧ್ಯಾಸನ ಬಲಿದಿಹುದು|

ಅನುಪಮಾದ್ವಯ ನರಹರಿಯಹುದು ||6||

ಗುರುವೆ ನಿನ್ನಯ ಕರುಣವ ಪಡೆದ|

ಶರಣ ಲೋಕಕೆ ಹೆದರದೆ ನಡೆದ ||ಪ||

ಮರವೆ ಸಂಶಯ ಬಳ್ಳಿಯ ಹರಿದ|

ಪರಮನಾಗುತ ಭವಬೀಜ ಹುರಿದ ||ಅಪ||

ಆರು ಹುಲಿಗಳ ನಟ್ಟುತ ನಡೆದ|

ಮೂರು ಸಿಂಹವ ಮೆಟ್ಟುತ ಹಿಡಿದ||

ಮೀರಿದಾನೆಗಳೆಂಟನು ಬಡಿದ|

ಕ್ರೂರಸರ್ಪನ ಗಂಟಲು ಹಿಡಿದ ||1||

ಧರೆಯನೊಬ್ಬನೆ ಎತ್ತಿಡಬಲ್ಲ|

ಶರಧಿಯೊಳಗೀಜಿ ಬಂದಿಹನಲ್ಲ||

ಉರಿವ ಕಿಚ್ಚಿನೊಳಂಜದೆ ನಡೆವ|

ಬರುವ ಚಂಡ ಮಾರುತನನು ಹಿಡಿವ ||2||

ಗಗನವೇರುತ್ತ ಚರಿಸುವನೀತ|

ನಿಗಮಗಳನೆಲ್ಲ ಓದಿವಿನೀತ||

ಜಗದ ಸುಖಗಳ ತೃಣವೆನ್ನುತಿರುವ|

ಅಗಣಿತಾನಂದ ಘನನಾಗಿರುವ ||3||

ಚಂದ್ರಸೂರ್ಯರು ಮುಳುಗುವ ಸ್ಥಾನ |

ಹೊಂದಿ ಮಾಡುವ ನಿತ್ಯವು ಸ್ನಾನ ||

ಚಂದ ಚಂದದ ಬೆಳಕನು ನೋಡಿ |

ಸಂಧಿಸಿದನಿಲ್ಲಿ ಪರಮನ ಕೂಡಿ ||4||

ನಾನು ನೀನೆಂಬ ಭೇದವ ಬಿಟ್ಟ |

ಸ್ನಾನ ಸಂಧ್ಯಾವಂದನೆಗಳ ಗುಟ್ಟ ||

ತಾನೆ ತಿಳಿದವನೇನನ್ನು ಮುಟ್ಟ |

ಜ್ಞಾನಿ ನರಹರಿ ಪಾಪವ ಸುಟ್ಟ ||5||

ಲಿಂಗಪೂಜೆಯ ಮಾಡಿರಿ ಇಂತು |

ಅಂಗ ಲಿಂಗದಿ ಸಮರಸವಾಂತು ||ಪ||

ಸಂಗ ವಿರಹಿತ ಶಿವನನ್ನು ತಿಳಿದು |

ಅಂಗ ಭಾವವ ನೀವೆಲ್ಲ ಕಳೆದು ||ಅ|ಪ||

ಪೊಡವಿಯಲ್ಲಿದೆ ಭಕ್ತನ ಅಂಗ |

ನಡೆಯುತಿಹುದಲ್ಲಿ ಆಚಾರ ಲಿಂಗ ||

ಹಿಡಿದ ಗಂಧದ ಪೂಜೆಯು ಸಾಂಗ |

ಕಡೆಗೆ ನಿರ್ಗುಣವದು ನಿಸ್ಸಂಗ ||1||

ಜಲದ ತತ್ವ ಮಾಹೇಶ್ವರನಂಗ |

ಒಲಿದು ನುಡಿವುದು ಶ್ರೀಗುರು ಲಿಂಗ ||

ಸಲುವಸುರಸದ ಪೂಜೆಯ ರಂಗ |

ಸುಲಭ ಮುಕ್ತಿಗೆ ಪ್ರಣವದ ಶೃಂಗ ||2||

ಅನಲ ತತ್ವಪ್ರಸಾದಿಗೆ ಅಂಗ |

ಘನದ ಎಚ್ಚರವಾ ಶಿವಲಿಂಗ ||

ಜನಿಪ ರೂಪದ ಪೂಜೆ ಪ್ರಸಂಗ |

ಜನನ ಮರಣ ಪ್ರವಾಹವೆ ಭಂಗ ||3||

ಪ್ರಾಣ ಲಿಂಗಿಗೆ ವಾಯುವೆ ಅಂಗ |

ಜ್ಞಾನ ಮೂರುತಿ ಜಂಗಮಲಿಂಗ ||

ತಾನೆ ಸ್ಪರ್ಶದ ಪೂಜಾಂತ ರಂಗ |

ತಾನೆ ತಾನಾದ ಧ್ಯಾನ ಸುರಂಗ ||4||

ಶರಣನಿಗೆ ಆಕಾಶವೆ ಅಂಗ |

ಮೆರೆವುದಲ್ಲಿ ಪ್ರಸಾದದ ಲಿಂಗ ||

ದೊರೆತ ಪೂಜೆಯು ಶಬ್ಧ ತರಂಗ |

ಅರಿತರಾಗಲೆ ಶಿವನೊಳು ಸಂಗ ||5||

ಐದು ತತ್ವವು ಸೇರಿದ ಅಂಗ |

ಆದುದೈಕ್ಯನ ಆತ್ಮ ನಿಜಾಂಗ ||

ನಾದದಂತ್ಯದೊಳಾ ಮಹಲಿಂಗ |

ಬೋಧ ಪೂಜೆಯೆ ನರಹರಿ ಸಂಗ ||6||

ಗುರು ರೇವಣ ಜೀವನ ಪಾವನ ಮಾಡೆನ್ನ ಧನ್ಯನಾ ||ಪ||

ನಿನ್ನ ಮಾಯಾ | ತಿಳಿಯದಯ್ಯಾ ||ನೀ |

ಯನ್ನನು ಕಾಯೋ | ಮನ್ನಿಸಿ ಜಗದಾರ್ಯ ಚಿನ್ಮಯಾ ||1||

ಪರಮ ತತ್ವ | ವರುಹಿಸುತ್ತ ನೀ | ಪೊರೆದೈ ಕುಂಭಜ |

ಪರಮ ಮುನೀಶ್ವರನಾ ರೇವಣಾ ||2||

ಚರಿಸುತಿರುವಾ | ಹರಿಯ ಶಿರವಾ ||ನೀ |

ಸ್ಥಿರವಾಗಿರಿಸಿದೆ | ಗುರುವೇ ನಿಜದರಿವೇ | ತೋರುವೇ ||3||

ನರರ ಜೀವಾ | ಹರಣಗೈವಾ ||ಬಲು

ದುರುಳತ ಗುಣಿಗಳ | ನುರುಹಿ ಸುರಗಿಗೈದೆ ಸಾರಿದೆ ||4||

ಮಾಯೆಗೆಂದು | ನೀರು ತಂದು || ನೀ |

ಕಾಯಕವನು ನಿ | ರ್ಮಾಯನೆನಿಸಿಗೈದೆ | ತೋರಿದೆ ||5||

ದುಷ್ಟಸಿದ್ಧ ಸೃಷ್ಟಿಸಿದ್ದ | ಬಹು ಕಷ್ಟ ವಿಷಾಸ್ತ್ರವ |

ನಷ್ಟವ ನೀಗೈದೆ | ನುಂಗಿದೆ ||6||

ದುರುಳ ಜೋಗಿ | ಸುರರಿಗಾಗಿ | ತಾಂ |

ತರಳೆಯರನುಸಂ | ಹರಿಸುವೆನೆನಲಾಗಿ | ಕಾಯ್ದೆಯೈ ||7||

ಕೊಲುವೆನೆಂದು | ಎಳೆದು ತಂದು | ತಾಂ |

ನಿಲಿಸಿದ ಕನ್ಯೆಯ | ರಲಿ ದಯ ತೋರಿಸಿದೆ ಸಲಹಿದೆ ||8||

ಖರ್ಪರನಿಗೆ | ದರ್ಪನೀಗೆ || ನೀ |

ಕ್ಷಿಪ್ರದಿ ಸುರಗಿಯ | ನಿರ್ಪುದ ಬಿಜ್ಜಳಗೆ ತೋರಿದೆ ||9||

ಕುಟಿಲಸಿದ್ಧ | ಪಟುವ ಗೆದ್ದ || ಬಾ |

ನಿಟಿಲಾಕ್ಷನೆ ಸಂ | ಕಟಹರ ಗುರುದೇವಾ ನೀ ಶಿವ ||10||

ವೇದದರಿವಾ | ಸಾಧಿಸಿರುವಾ || ಭವ |

ಛೇದನ ಸಾಧನ | ಬೋಧನ ಸಂಧಾನಗೈವನೇ ||11||

ಏರಿನಭವಾ | ತೋರಿ ವಿಭವಾ || ನೀ |

ಸಾರಿಗೆ ಭಕ್ತರ | ಸೇರಿದೆ ನರಹರಿಯೇ ಕರುಣಿಯೇ ||12||

ಏನು ಸೋಜಿಗವಾಯಿತಯ್ಯಾ | ನಿಜ |

ಜ್ಞಾನಾನುಭವ ಗುರುರಾಯಾ ||ಪ||

ತಾನೇ ಹೋದುದು ಮಾಯ |

ಕಾಣದಾಯಿತು ಛಾಯಾ | ಆನಂದ ಪದವಿಯ |

ನೀನು ತೋರಿದೆ ಜೀಯ ||ಅ|ಪ||

ಕಾಣುವುದೆ ನಿಜವೆನ್ನುತಿದ್ದೆ | ಕಣ್ |

ಕಾಣದ್ದೆ ಸುಳ್ಳೆನ್ನುತಿದ್ದೆ || ಕಾಣುವುದೇ ಸುಳ್ಳು |

ಕಾಣದಿರುವುದೆ ನಿಜವು | ನೀನರಿಯೆಂದೆನ್ನ |

ಜ್ಞಾನವ ಕಳೆದಿಟ್ಟೆ ||1||

ತನುವನ್ನೆ ನಾನೆಂದು ನಂಬಿ | ನಾ |

ಮನದಲ್ಲಿ ಸಂಶಯ ತುಂಬಿ ||

ಅನುಮಾನದಲಿ ಬಿದ್ದ | ಎನಗೆ ನಿಸ್ಸಂಶಯ |

ಜನಿತ ಸುಜ್ಞಾನವ | ನನುವಿಂದ ಪೇಳಿದೆ ||2||

ಎಲ್ಲಿರುವನು ಶಿವನೆಂದು | ಮನ |ದಲ್ಲಿ ಚಿಂತಿಸುತಿದ್ದೆನಿಂದು ||

ಎಲ್ಲೆಲ್ಲಿ ಶಿವನಿರ್ಪ | ಉಲ್ಲಾಸರೂಪವೆ |

ನ್ನಲ್ಲೆ ತೋರಿಸಿ ಕೊಡ | ಲಿಲ್ಲವೆ ಗುರುನಾಥ ||3||

ದುಃಖದಿ ನಾ ಮುಳುಗಿರಲು | ನಿಜ |

ಸೌಖ್ಯವ ತೋರಿಸಿಕೊಡಲು ||

ಅಕ್ಕರೆಯೊಳು ಬಂದೆ | ತಕ್ಕ ಮಾರ್ಗವ ಪೇಳ್ದೆ |

ಲೆಕ್ಕವಿಲ್ಲದ ಪಾಪ | ಚೊಕ್ಕಟ ಮಾಡಿದೆ ||4||

ನಶ್ವರ ನಂಬಿದ್ದೆ ನಾನು | ನಿಜ |

ಶಾಶ್ವತ ತೋರಿದೆ ನೀನು ||

ವಿಶ್ವದೊಳಗೆ ಶಿವನ | ವಿಶ್ವ ರೂಪವ ತೋರ್ದ |

ಈಶ್ವರ ರೂಪ ಶ್ರೀ ನರಹರಿ ಗುರುವರ ||5||

ಶಿವಶಿವ ಎಂದೆನ್ನಿರೋ | ನಾಮಾಮೃತವ |

ಸವಿಸವಿಯುತವುಣ್ಣಿರೋ ||ಪ||

ಭವದ ಮಾಲೆಯ ಹರಿದು ನಿರ್ಮಲ

ಶಿವನ ಲೀಲೆಯನರಿದು ನಿಶ್ಚಲ |

ಪವನ ಯೋಗದಿ ಪಾಪ ಸಂಕುಲ |

ಸವೆದು ಹೋಗಲು ಮುಕ್ತಿಯೇ ಫಲ ||ಅ|ಪ||

ಮೂರು ಲೋಕಗಳೆಲ್ಲವ | ಕಾಪಾಡಿ ಸಂ |

ಚಾರ ಮಾಡುತಲಿರುವ ||

ತೋರುವಿಪ್ಪತ್ತೊಂದು ಸಾವಿರ |

ದಾರುನೂರರ ಮಂತ್ರಜಪ ವಿ ||

ಸ್ತಾರಗೈಯುತ ಶಿವನ ಸೇರುವ |

ದಾರಿಯನು ತಿಳಿದಮರರಾಗುತ ||1||

ಆಪ್ತನಾಗಿಹ ಶಿವನು | ಸುಜ್ಞಾನ ಸಂ |

ಪ್ರಾಪ್ತನಾಗಿರುತಿಹನು ||

ಸಪ್ತ ಚಕ್ರದಿ ಗುಪ್ತನಾಗಿಯೆ |

ವ್ಯಾಪ್ತನಾಗಿಯುಲಿಪ್ತನಾಗದೆ ||

ಸಪ್ತಕೋಟಿಯ ಮಂತ್ರಮೂಲನು |

ತೃಪ್ತನಾಗಿರುವರ್ಥವರಿತು ||2||

ಸಾಕಾರ ಸಗುಣಂಗಳ | ಕಳೆದೆಲ್ಲ ನಿ |

ರಾಕಾರ ನಿರ್ಗುಣದೀ ||

ಏಕ ರೂಪದಿ ಲೋಕದೊಳಹೊರ |

ಗಾಕೆವಾಳನು ಶೋಕ | ಹರನಿರ ||

ಲೇಕೆ ಭಯತಾಂ ಸಾಕುತಿರುವನು |

ನೂಕುವನು ಭವಬಂಧ ನರಹರಿ ||3||

ತೀರಿತಣ್ಣಾ ಸಾಲ | ತೀರಿತಣ್ಣಾ

||ಪ||

ತೀರಿತಣ್ಣಾ ಶಿವನ ಸಾಲ |

ಜಾರಿಹೋಯ್ತು ಯಮನ ಜಾಲ

||ಅ|ಪ||

ಶಿವನು ಕೊಟ್ಟ ದೇಹವನ್ನು |

ಶಿವನ ಮಂದಿರ ಮಾಡಿಬಿಟ್ಟೆ ||

ಶಿವನು ಕೊಟ್ಟ ಕರಣಗಳಿಂದ |

ಶಿವನ ಪೂಜೆ ಮಾಡಲಾಗಿ

||1||

ಕಂಡುದೆಲ್ಲ ಶಿವನ ರೂಪ |

ಉಂಡುದೆಲ್ಲ ಶಿವ ನೈವೇದ್ಯ ||

ಕೊಂಡುದೆಲ್ಲ ಶಿವನು ಪೂಜೆ |

ಗೊಂಡನೆಂದು ನೆನೆಯಲಾಗಿ

||2||

ಕಿವಿಗಳಲ್ಲಿ ಕೇಳ್ದ ಶಬ್ದ |

ಶಿವನಿಗಾದ ವಾದ್ಯ ಪೂಜೆ ||

ಶಿವನ ನಾಮಧ್ಯಾನವೆಲ್ಲ |

ಶಿವಗೆ ಮಂತ್ರಪೂಜೆಯಾಗಿ

||3||

ಘ್ರಾಣದಲ್ಲಿ ಪಡೆದ ಗಂಧ |

ತಾನೆ ಶಿವಗೆ ಗಂಧಪೂಜೆ ||

ಏನು ಮುಟ್ಟಿ ತಿಳಿದ ಸ್ಪರ್ಶ |

ತಾನೆ ಶಿವನಿಗರ್ಪಣವೆನಲು

||4||

ತನುವಿನಾಸೆಯನ್ನು ನೀಗಿ |

ಮನದ ಕಲ್ಪನೆಗಳು ಹೋಗಿ ||

ಧನವು ಯನ್ನದಲ್ಲವಾಗಿ |

ತನಗೆ ನಿಶ್ಚಯವಾಗಲಾಗಿ

||5||

ನೀರಿನಲ್ಲೆ ಹುಟ್ಟಿದ ಗುಳ್ಳೆ |

ನೀರೊಳಡಗಿ ಹೋದ ತೆರದಿ ||

ಬೇರೆಯಾದ ಜೀವಭಾವ |

ಸೇರಿ ಬ್ರಹ್ಮದಿ ನಿಲ್ಲಲಾಗಿ

||6||

ಆದಿಯಂತ್ಯದಲ್ಲಿ ವೊಂದೆ |

ಯಾದ ದಿವ್ಯಮಂತ್ರದಲ್ಲೆ ||

ಭೇದವಿಲ್ಲದಂತೆ ಕೂಡಿ |

ನಾದಬ್ರಹ್ಮ ನರಹರಿಯಲ್ಲಿ

||7||

ನಾಮಾಮೃತ ಪಾನ ||ಪ||

ನೇಮವು ಮುಕ್ತಿಗೆ ಸೋಪಾನ ||ಅ|ಪ||

ಆನಂದಾಮೃತ ಕಡಲು ||

ತಾನಾಯಿತು ಮಂತ್ರಗಳೊಡಲು ||1||

ಎಲ್ಲೆಲ್ಲಿಯು ತಾನಿಹುದು |

ಬಲ್ಲವರಿಗೆ ಕಾಣಿಸಬಹುದು ||2||

ಕುಂಭಕದೊಳು ನೆಲೆಸಿರುವ |

ಕುಂಭಜ ಮುನಿ ಜಪಿಸುತಲಿರುವ ||3||

ಬ್ರಹ್ಮವೆ ತಾನಾಗಿಹುದು |

ಸಿಂಹದವೊಲು ಗರ್ಜಿಸಿಬಹುದು ||4||

ನಡುವಿದೆ ಹಂಸನೊಳಾಡಿ |

ಕಡೆಗಾಯಿತು ಸೋಹಂ ಕೂಡಿ ||5||

ನಡೆಯೊಳು ಹಂಸ ಗಮನವು |

ನುಡಿಯೊಳು ಸೋಹಂ ಸಂಗಮವು ||6||

ನರಹರಿಯೆನ್ನುವ ನಾಮಾ |

ಪರತರ ಸೋಹಂ ಪರಿಣಾಮ ||7||

ಈಜಲಾರೆನು ಗುರುವೆ ನಾನೀ | ಭವ ಸಮುದ್ರವಾ ||ಪ||

ನೈಜವಾಗಿಯೆ ಮರೆಯ ಹೊಕ್ಕೆನು | ನಿಮ್ಮ ಪಾದವಾ ||ಅ|ಪ||

ಶರಧಿಯಬ್ಬರ | ತೆರೆಯನಿಬ್ಬರ |ಭರಿಸಲಾರೆನು ||

ಹರುಷವಳಿದೆನು | ಪೊರೆವರಾರನು |ಅರಿಯದಾದೆನು ||1||

ಮುಳುಗಿ ತೇಲುತ | ಬಲವು ಸೋಲುತ |

ಮುಳುಗುತಿರ್ಪೆನು || ಚಲಿಸಲಾರದೆ |

ಉಳಿವು ತೋರದೆ | ಬಳಲುತಿರ್ಪೆನು ||2||

ಕಡಲಿನಲ್ಲಿಯೆ | ನಡೆವುದಿಲ್ಲಿಯೆ |

ಹಡಗು ನಿನ್ನದು || ಹಡಗು ಏರಿಸು |

ತಡಿಯ ಸೇರಿಸು | ಮಿಡುಕು ನಿಲ್ಲಿಸು ||3||

ಬಳಲಿ ಬೆಂಡಾಗಿರುವೆ ನಾನು |

ಉಳಿಯಲಾರೆನು || ಬಳಿಯ ಸಾರುತ |

ಒಲುಮೆ ತೋರುತ | ಸಲಹುಯನ್ನನು ||4||

ಸೋತು ಹೋದೆನು | ಭೀತನಾದೆನು |

ಪ್ರೇತವಾದೆನು || ನಾಥ ನರಹರಿ |

ಪ್ರೀತಿಸಲು ಪರಿ | ಪೂತನೇ ಸರಿ ||5||

ಆವ ಜನ್ಮದ ಪುಣ್ಯದ ಫಲವೋ ||

ದೇವ ನಿನ್ನಯ ಕಾರುಣ್ಯದೊಲವೋ ||ಪ||

ಭಾವನಿರ್ಮಲವಾದಂಥ ನಿಲವೋ|

ಸೇವೆ ಬಲಿದ ಸುಜ್ಞಾನದ ಬಲವೊ ||ಅ|ಪ||

ಮನವು ಮನುಗಳ ಜಪದಲ್ಲಿ ತೊಡಗಿ |

ತನುವು ತನಗೆಂಬ ಭಾವನೆಯುಡುಗಿ ||

ಜನನ ಮರಣದ ಭಯವೆಂಬುದಡಗಿ |

ನೆನಹು ಮಾತ್ರದಿ ನಿಶ್ಚಲವಾಗಿ ||1||

ನಡೆಯು ಹಂಸದ ನಟನೆಗಳಾಯ್ತು |

ನುಡಿಯೆ ಸೋಹಂಭಾವದೊಳಿತ್ತು ||

ನಡೆಯು ನುಡಿಗಳು ಕೂಡಿ ಒಂದಾಯ್ತು |

ನಡುವೆ ನಿಶ್ಚಲ ಬ್ರಹ್ಮವೆಯಿತ್ತು ||2||

ನಾಮರೂಪವು ಕ್ರಿಯೆಗಳ ಮೀರಿ |

ಕಾಮಿತಾರ್ಥಗಳೆಲ್ಲವು ತೀರಿ ||

ನೇಮ ನಿತ್ಯ ಜಂಜಡವೆಲ್ಲ ಜಾರಿ |

ಸಾಮರಸ್ಯಕೆ ಆಯಿತು ದಾರಿ ||3||

ನಡೆಯೊಳಿರುವುದು ನಿಮ್ಮಯ ಪಾದ |

ನುಡಿಯೆ ನಿಮ್ಮಯ ಪಾವನವೇದ ||

ನಡೆಯು ನುಡಿಕೂಡಿಯಾಗುವ ಬೋಧ |

ಪಡೆದ ಯೋಗಿಯು ಮುಕ್ತನೆ ಆದ ||4||

ನೋಡಲಾಗಿದೆ ಸಾಲೋಕ್ಯ ಪದವಿ |

ಬೇಡಲಾಗಿದೆ ಸಾಮೀಪ್ಯ ಪದವಿ ||

ಜೋಡಿ ಇರ್ಪುದೆ ಸಾರೂಪ್ಯ ಪದವಿ |

ಕೂಡಿಸಿರ್ಪುದೆ ಸಾಯುಜ್ಯ ಪದವಿ ||5||

ನಡೆಯೊಳಿರುವುದು ಬ್ರಹ್ಮದ ಧರ್ಮ |

ನುಡಿಯೊಳಡಗಿದೆ ವೇದದ ಅರ್ಥ ||

ನಡೆಯು ನುಡಿಗಳ ನಡುವಿದೆ ಕಾಮ |

ನುಡಿಯ ಕೊನೆಯಲಿ ನಿಂತುದೆ ಮೋಕ್ಷ ||6||

ಇದ್ದು ಕಾಣಿಸದಿರುವುದು ಬ್ರಹ್ಮ |

ಸದ್ದು ಮಾಡುತ್ತ ಬರುವುದು ಧರ್ಮ ||

ನಿದ್ದೆಯೊಳಗಿಲ್ಲವೇನೊಂದು ಕರ್ಮ |

ಎದ್ದು ಕಾಯುವ ನರಹರಿ ಬ್ರಹ್ಮ ||7||

ಆನಂದಪುರವಿದು | ಏನು ಸಂಶಯವಿಲ್ಲ ಬನ್ನಿರಣ್ಣ ||ಪ||

ಜ್ಞಾನಕ್ಕೆ ತವರೂರು | ನ್ಯೂನವಿಲ್ಲದಲೂರು ಬನ್ನಿರಣ್ಣ ||ಅ|ಪ||

ಎಲ್ಲಿ ಹುಡುಕಿದರಿಂಥ | ಒಳ್ಳೆ ಊರಿಲ್ಲವು ಬನ್ನಿರಣ್ಣ ||

ಇಲ್ಲೆ ಇರುವುದು ದಾರಿ | ಬಲ್ಲವರಾದರೆ ಬನ್ನಿರಣ್ಣ ||1||

ನಾಶಿಕ ಕ್ಷೇತ್ರ ಪ್ರ| ವಾಸಗೈವವರೆಲ್ಲ ಬನ್ನಿರಣ್ಣ ||

ನಾಶಕ್ಕೆ ದೂರ ಪ್ರ | ಕಾಶವಾಗಿದೆ ಊರು ಬನ್ನಿರಣ್ಣ ||2||

ಮಧುರೆ ಯಾತ್ರೆಯ ಮಾಳ್ಪ | ಅಧಿಕ ಪುನೀತರು ಬನ್ನಿರಣ್ಣ ||

ಬದುಕಿ ಬಾಳುವ ಊರು | ಬುಧ ಜನರೆಲ್ಲರು ಬನ್ನಿರಣ್ಣ ||3||

ದ್ವಾರಕಿಗೆ ಹೋಗುವ | ದಾರಿಯೊಳಿಹ ಊರು ಬನ್ನಿರಣ್ಣ ||

ನೀರು ಸಮೀಪವಿ | ಸ್ತಾರವಾಗಿರುವುದು ಬನ್ನಿರಣ್ಣ ||4||

ಗೋಕರ್ಣ ಯಾತ್ರೆಯ | ಸೌಕರ್ಯವಿಲ್ಲಿದೆ ಬನ್ನಿರಣ್ಣ ||

ಆಕಾಶವಾಣಿಯೆ | ಬೇಕಾದ ಜಾಣರು ಬನ್ನಿರಣ್ಣ ||5||

ಕಾಶಿಗಿಂತಲು ಪ್ರ | ಕಾಶಿಸುತಿಹುದಿದು ಬನ್ನಿರಣ್ಣ ||

ಸೂಸಿ ಹರಿಯುವ ಗಂಗೆ | ಗಾಶ್ರಯವಾಗಿದೆ ಬನ್ನಿರಣ್ಣ ||6||

ಬ್ರಹ್ಮಜ್ಞಾನಿಗಳಿರ್ಪ | ಬ್ರಹ್ಮಪುರ ತಾನಿದು ಬನ್ನಿರಣ್ಣ ||

ನಮ್ಮ ನರಹರಿ ಗುರು | ಬ್ರಹ್ಮ ನೆಲಸಿಹನಿಲ್ಲಿ ಬನ್ನಿರಣ್ಣ ||7||

ಈ ಜಗದೊಳಗೆಲ್ಲ | ಸೋಜಿಗವಾಗಿದೆ ನಮ್ಮ ಊರು ||ಪ||

ತೇಜೋ ವಿಶೇಷದಿ | ರಾಜಿಸುತಿರುವುದು ನಮ್ಮ ಊರು ||ಅ|ಪ||

ದುಃಖ ದಾರಿದ್ರ್ಯಕ್ಕೆ | ಸಿಕ್ಕದೆ ಇರುವುದು ನಮ್ಮ ಊರು ||

ಲೆಕ್ಕವಿಲ್ಲದಂಥ | ಸೌಖ್ಯದ ತವರೂರು ನಮ್ಮ ಊರು ||1||

ಈರೇಳು ಲೋಕವಿ | ಸ್ತಾರವಾಗಿರುವುದು ನಮ್ಮ ಊರು ||

ದಾರಿ ಮೂರುಂಟು ಸಂ | ಚಾರಕ್ಕೆ ತೆರಪಿಲ್ಲ ನಮ್ಮ ಊರು ||2||

ಮೂರು ನದಿಗಳ ಮೂಲ | ಕಾರಣವಾಗಿದೆ ನಮ್ಮ ಊರು ||

ನೂರೆಂಟು ಕುಲವುಂಟು | ಹೋರಾಟವೇನಿಲ್ಲ ನಮ್ಮ ಊರು ||3||

ಹರಿಹರ ಬ್ರಹ್ಮರು | ಸರದಿ ಕಾವಲಿಗುಂಟು ನಮ್ಮ ಊರು ||

ಮರಣವಿಲ್ಲದ ಊರು | ನರಕಕ್ಕೆ ದೂರವು ನಮ್ಮ ಊರು ||4||

ಬೇನೆ ಬೇಸರಿಕೆಗ | ಳೇನೊಂದು ತೋರದ್ದು ನಮ್ಮ ಊರು ||

ಆನಂದ ಸೌಭಾಗ್ಯ | ತಾನೇ ತಾನಾದುದು ನಮ್ಮ ಊರು ||5||

ಸಪ್ತಚಕ್ರದ ಕೋಟೆ | ಗುಪ್ತವಾಗಿರುವುದು ನಮ್ಮ ಊರು ||

ತೃಪ್ತಿಯ ನೆಲೆಯಾಗಿ | ಒಪ್ಪುತ್ತಲಿರುವುದು ನಮ್ಮ ಊರು ||6||

ಹುಟ್ಟು ಸಾವುಗಳಿಲ್ಲ | ಮುಟ್ಟಂಟು ಮೊದಲಿಲ್ಲ ನಮ್ಮ ಊರು ||

ಬಿಟ್ಟಿ ಚಾಕರಿಯೆಲ್ಲ | ಬಿಟ್ಟು ದೂರಿರುವುದು ನಮ್ಮ ಊರು ||7||

ಕೊಳಕಿಲ್ಲದಂತೆ ನಿ | ರ್ಮಲವಾಗಿ ಇರುವುದು ನಮ್ಮ ಊರು ||

ಬೆಳಕಾಗಿ ಹೊಳೆಯುತ್ತ | ಕಳಕಳಿಸುತಲಿದೆ ನಮ್ಮ ಊರು ||8||

ಯಾರು ಕಾಣದ ಊರು | ದೂರವಿಲ್ಲದ ಊರು ನಮ್ಮ ಊರು ||

ಧೀರ ನರಹರಿಮೂರ್ತಿ | ಸೇರಿಕೊಂಡಿರುವುದು ನಮ್ಮ ಊರು ||9||

ಮೂರು ಲಿಂಗಗಳರಿಯೋ | ನಿನ್ನೊಳು ಸರ್ವಾ |

ಧಾರ ಲಿಂಗವ ಬೆರೆಯೋ ||ಪ||

ಮೂರು ಅಕ್ಷರ ಮೂರು ಲಿಂಗವು |

ಬೇರೆಯಾಗದೆ | ಸೇರಿದಂಗವು ||

ಸಾರ ಪ್ರಣವಾ | ಕಾರ ಸಂಗವು ||

ಮೀರಿ ಬೆಳಗುವುದಿದರ ಶೃಂಗವು ||ಅ|ಪ||

ಇಷ್ಟಲಿಂಗವು ದೇಹವ | ತಾನೇ ತನ್ನ

ಇಷ್ಟದಂತಾಡಿಸುವ || ಇಷ್ಟಲಿಂಗದ |

ನಿಷ್ಠೆ ಬಲಿಯುತ | ದುಷ್ಟಗುಣಗಳ |

ನಷ್ಟಮಾಡುತ || ಸೃಷ್ಟಿಕರ್ಮವ |

ಭ್ರಷ್ಟಗೈಯುತ || ಕಷ್ಟವಿಲ್ಲದೆ ಶಿವನ ಸೇರುತ ||1||

ಪ್ರಾಣಲಿಂಗವು ಪೃಥ್ವಿಯ | ಸೇರುತ ತಾನೆ |

ತ್ರಾಣವೀಯುವ ವೃತ್ತಿಯ ||

ತಾನೆಯಿಪ್ಪತ್ತೊಂದು ಸಾವಿರ |

ಮಾಣದಾರ್ನೂರೆನಿಪ ಜಪಗಳ ||

ಶ್ರೇಣಿಯೆನ್ನಿಸಿ ರಾಜಿಸುತ್ತಿಹ |

ಮೌನಮಂತ್ರ ವಿಧಾನವೆನಿಸಿದ ||2||

ಭಾವಲಿಂಗವು ನಿರ್ಮಲ | ಮಾನಸದ ಸ|

ದ್ಭಾವ ಸಂಗವು ನಿಶ್ಚಲ ||

ಭಾವಶುದ್ಧಿಯೆ | ಭಾವಲಿಂಗವು |

ಕೇವಲಾತ್ಮ ಜ್ಞಾನದೈಕ್ಯವು ||

ಪಾವನಾತ್ಮಕ ನರಹರಿಯ ಸು |

ಶ್ರಾವ್ಯ ಬೋಧಾಕಳೆಯ ಬೆಳಗುವ ||3||

ತನುಗುಣಗಳೆಲ್ಲವೂ | ತನಗಿಲ್ಲವೆನ್ನುವುದೆ |

ಘನದಿಷ್ಟ ಪೂಜೆಯೆಲೆ ತಂಗೀ

||ಪ||

ಅನುಮಾನವಿಲ್ಲದೇ | ನೆನೆಯುತ್ತಲಿರೆ |

ಶಿವನ | ಪ್ರಣವ ಪೂಜೆಯು ಮಂಗಳಾಂಗಿ

||ಅ|ಪ||

ಪ್ರಾಣಧರ್ಮಗಳೆಂಬು | ದೇನು ತನಗಿಲ್ಲೆನಲು |

ಪ್ರಾಣಲಿಂಗದ ಪೂಜೆ ತಂಗಿ ||

ಕಾಣದಾ ಪರವಸ್ತು | ಜ್ಞಾನ ರೂಪವನಾಂತು|

ತಾನಿಹುದು ತಿಳಿ ಮಂಗಳಾಂಗಿ

||1||

ಭಾವ ಶುದ್ಧಿಯೆ ನೋಡು | ಭಾವ ಲಿಂಗದ |

ಪೂಜೆ | ಕೈವಲ್ಯ ಸಾಧನೆಯು ತಂಗೀ ||

ಸಾವು ಹುಟ್ಟುಗಳಳಿದು | ದೇವ ನರಹರಿ

ಯಲ್ಲಿ | ಭಾವೈಕ್ಯ ಪಡೆ ಮಂಗಳಾಂಗೀ

||2||

ತ್ಯಾಗಾಂಗವಿಷ್ಟಕ್ಕೆ | ಭೋಗಾಂಗ ಪ್ರಾಣಕ್ಕೆ

ಯೋಗಾಂಗ ಭಾವಕ್ಕೆ ತಂಗೀ ||

ರಾಗದಿಂದಿತ್ತು ವಿ | ರಾಗ ಪಡೆದಾತ ಶಿವ |

ಯೋಗಿ ನರಹರಿ ಮಂಗಳಾಂಗಿ

||3||

ಗುರುವೆ ಲೋಕಕ್ಕೆ ಪರಮೋಪಕಾರಿ |

ಗುರುವಿನಿಂದಲೆ ಸೌಖ್ಯಕ್ಕೆ ದಾರಿ ||ಪ||

ಗುರುವೆ ತಾನಾಗಿ ಬ್ರಹ್ಮವ ತೋರಿ|

ಪರಮಶಿಷ್ಯರ ಪೊರೆವವು ದಾರಿ ||ಅ|ಪ||

ಅಂಗ ಭಂಗವ ಮಾಡುತ್ತ | ಬರುವ |

ಲಿಂಗ ಸಂಗವ ತೋರುತ್ತಲಿರುವ ||

ಭಂಗವಿಲ್ಲದ ಭಾಗ್ಯವನಿತ್ತ |

ಮಂಗಳಾಂಗದಿ ತಾಂ ಬೆಳಗುತ್ತ ||1||

ಸಾವು ಇಲ್ಲದ ಮಾರ್ಗವ ಪೇಳ್ದ |

ನೋವು ಕಾಣದ ರೀತಿಯ ತೋರ್ದ ||

ಭಾವ ಬಲಿಸುತ ಭವವನ್ನು ಕಳೆದ |

ಸೇವೆಯಿಂದಲೆ ತಾನಾಗಿ ಒಲಿದ ||2||

ಪಾದತೀರ್ಥವೆಂಬುದೆ ಪುಣ್ಯತೀರ್ಥ |

ಪಾದ ಸೋಂಕಿದ ಧರೆಪುಣ್ಯ ಕ್ಷೇತ್ರ ||

ಪಾದದಾಶ್ರಯ ಸರ್ವ ವೇದಾರ್ಥ |

ಬೋಧಮೂರ್ತಿ ನರಹರಿಯೆ ಸಮರ್ಥ ||3||

ಬಳಸಿದ ಬ್ರಹ್ಮಚಾರಿಯನು | ಸುಪ್ತಿ |

ಯೊಳು ಕಂಡು ಸುಖಿಸುವ ನಿಜಮುಕ್ತನಹನು ||ಪ||

ತಿಳಿಯಲಾತ್ಮನು ನಿರ್ಗುಣನು | ತಾನು |

ಬಳಸಿ ಸಗುಣವ ನಿರ್ಗುಣವಗೈಯುವನು ||ಅ|ಪ||

ಬಳಸಿ ಸರ್ವೇಂದ್ರಿಯಂಗಳನು | ಜಾಗ್ರ |

ದೊಳಗಾತ್ಮನಿರ್ಪನು ಸಗುಣ ತಾನಹನು |

ಕಳೆದು ಸರ್ವೇಂದ್ರಿಯಂಗಳನು | ಸುಪ್ತಿ |

ಯೊಳಗಿರ್ಪನಾತ್ಮನು ನಿರ್ಗುಣ ಪರನು ||1||

ಸರ್ವ ದೇಹಗಳನ್ನು ಬಳಸಿ | ತಾನೇ |

ಸರ್ವ ದೇಹಗಳ ವಾಸನೆಯೆಲ್ಲ ತ್ಯಜಿಸಿ ||

ಸರ್ವಾಂತರಾತ್ಮನೆಂದೆನಿಸಿ | ಆತ್ಮ |

ಸರ್ವದಾ ಬ್ರಹ್ಮಚಾರಿಯು ನೋಡಿ ನೆನಸಿ ||2||

ಇಂದ್ರಿಯಾರ್ಥಗಳೇನೇ ಬರಲು | ತೃಪ್ತಿ |

ಹೊಂದಿಯಾನಂದದೊಳಾತ್ಮ ತಾನಿರಲು ||

ಕುಂದಿಲ್ಲದೆಲ್ಲವನಳಿದು | ಸತ್ಯ |

ಸಂಧ ನರಹರಿಪಾದದೊಳಗಿರ್ಪನುಳಿದು ||3||

ಉಂಡುಪವಾಸಿಯ | ಕಂಡ

ವರಿಗೆ ಭವ | ದಂಡಲೆಯೆಂದಿಗು ಬರದಲ್ಲ

||ಪ||

ಉಂಡು ತಕ್ಷಣವೆ | ಕಂಡುದೆಲ್ಲವನು |

ಉಂಡು ಮುಗಿಸಿ ತಾನಿರಬಲ್ಲ

||ಅ|ಪ||

ಇಂದ್ರಿಯ ಮುಖದೊಳು | ಬಂದುದನೆಲ್ಲವ |

ಹೊಂದಿ ಸುಖಿಸಿ ಐಕ್ಯವಗೊಂಡು||

ಮುಂದೆ ಸುಖವಪಡ | ಲೆಂದಾತುರಗೈ |

ವಂದುಪವಾಸಿಯ ನೀವ್ ಕಂಡು

||1||

ಸರ್ವೇಂದ್ರಿಯಗಳು | ಸರ್ವವಿಷಯಗಳ |

ಸರ್ವ ಕಾಲದೊಳಗೆಡೆಬಿಡದೆ ||

ನಿರ್ವಾಹವೆಯಿಲ್ಲದೆ ತರುತಿರಲಾ |

ಸರ್ವವಸಲಿಸುವ ಕೈಬಿಡದೆ

||2||

ಸಗುಣಮುಖದೊಳೀ | ಜಗಸಂಬಂಧದಿ |

ಸೊಗಸಿ ಉಂಡುತೀರದುಹಸಿವು||

ಸಗುಣವತಕ್ಷಣ ನಿರ್ಗುಣಗೈಯುವ |

ಜಗದಾತ್ಮನು ನರಹರಿಗುರುವು

||3||

ಗುರು ಕೊಟ್ಟ ಜೋಳಿಗೆ ಸಿಕ್ಕಿತಲ್ಲಾ |

ಕರುಣಪ್ರಸಾದವು ದಕ್ಕಿತಲ್ಲಾ ||ಪ||

ಹರುಷಗೊಂಡೆಲ್ಲವನುಂಡುಬಿಟ್ಟೆ

ಪರಮಾರ್ಥ ವೈಭವ ಕಂಡುಬಿಟ್ಟೆ ||ಅ|ಪ||

ತಿರಿದು ತಂದುಂಡೆನು ಶರಣರಲ್ಲಿ |

ತಿರುಗುತ್ತಲಿದ್ದೆನು ನಿತ್ಯದಲ್ಲಿ ||

ಹರನಂತೆ ಭಿಕ್ಷವ ಮಾಡುತಿಲ್ಲಿ |

ಪರಮಾರ್ಥದನುಭವಗೈದೆನಿಲ್ಲಿ ||1||

ಒಂದೊಂದು ತುತ್ತನು ಕೂಡಿಸಿದ್ದೆ |

ಬಂದದ್ದು ಉಣ್ಣುತ ತೆಪ್ಪಗಿದ್ದೆ |

ಮುಂದೆ ಹುಟ್ಟಳಿಯುತ ನಾನು ಗೆದ್ದೆ ||

ಸಂದೇಹವಿಲ್ಲದೆ ಬಾಳುತಿದ್ದೆ ||2||

ಪ್ರಣವ ಪ್ರಸಾದವನುಂಡುಬಿಟ್ಟೆ |

ಎನಗಾದ ಹಸಿವೆಯ ನೀಗಿಬಿಟ್ಟೆ ||

ಮನಚೇಷ್ಟೆಯೆಲ್ಲವನೀಗ ಸುಟ್ಟೆ |

ಮನಸಾರ ನರಹರಿ ಎಂದುಬಿಟ್ಟೆ ||3||

ಮಾನಾಭಿಮಾನವ ತೊರೆದು ನಿಂದೆ |

ಜ್ಞಾನಪ್ರಸಾದವ ತಿರಿದು ತಂದೆ ||

ಏನೇನು ಭೇದವೇ ಇಲ್ಲದಂತೆ |

ಆನಂದ ಭಾವದಿ ಸವಿದು ಕುಂತೆ ||4||

ನಾನಾ ಪ್ರಸಾದವನೊಂದು ಮಾಡಿ |

ನಾನತ್ವವಿಲ್ಲದೆ ತಂದು ಕೂಡಿ ||

ಮೌನದಿಂದುಂಡೆನು ತೃಪ್ತನಾಗಿ |

ಶ್ರೀನರಹರೀಂದ್ರನ ಪದಕೆ ಬಾಗಿ ||5||

ಗುರುತೋರಿದ ದಾರಿಯ ಹಿಡಿದೇ |

ಗುರುತಾಗಿಯೆ ನಾ ನಡೆದೇ ||ಪ||

ನಡೆಯನು ಮೀರಿದ | ನುಡಿಯೊಳು ಸೇರಿದ |

ನಡುವೆ ಮೈದೋರಿದ | ಕಡುಸುಖ ಬೀರಿದ ||1||

ಅಮರ ನಾದದೊಳು | ವಿಮಲ ವೇದಗಳು |

ಕ್ರಮದಿಂದಿರುವುದ | ರಮಿಸುತ ಪೇಳಿದ ||2||

ವಿಷಯಗಳೆಲ್ಲವ | ಹಸನೆಂದೆನಿಸುವ |

ಅಸಮಸು ಬೋಧವ | ನರಹರಿಗೈವಾ ||3||

ಸುಷುಮ್ನಾಸುಷಿರವಾಸಿ | ಪ್ರಸನ್ನಾತ್ಮ

ಜ್ಞಾನೋಲ್ಲಾಸಿ | ಓಂಕಾರಿ ಬಾ ||ಪ||

ಅಮರನಾದಾ | ಕ್ರಮಣವಾದಾ |

ವಿಮಲ ವೇದದಾ | ಕ್ರಮ ಸುಬೋಧಾ | ರಮಿಸಿಗೈದಾ |

ಭ್ರಮೆಯ ನೀಗಿದಾ ||1||

ಆದಿಶಕ್ತಿ | ನಾದಯುಕ್ತಿ | ಶೋಧಿಸಿದ ಭಕ್ತಿ||

ಸಾಧಿಸಿದ ನಿಜ | ವಾದ ಸೂಕ್ತಿಗೈದೆನೀ ಮುಕ್ತಿ ||2||

ಸುಗಮವಾದ | ನಿಗಮ ಬೋಧಾ |

ಬಗೆದು ತೋರಿದಾ || ಅಗಣಿತಾನಂದಾತ್ಮನಾದ |

ಸೊಗಸಿ ಬೀರಿದಾ ||3||

ಸಕಲಮಂತ್ರ | ಮುಖವನಾಂತ

ಸುಖದ ಸ್ವಾತಂರ್ತ್ಯ || ಪ್ರಕಟಿಸುತ್ತ | ನರಹರಿಯಿತ್ತ |

ಮುಕುತಿ ದ್ವಾರದ ||4||

ಗುರು ಪಾದವನು ನಂಬಿ | ಗುರು ಬೋಧೆ ಮನತುಂ

ಬಿ | ಇರುವಾತ ಗುರು ಮಾರ್ಗಾವಲಂಬಿ ||ಪ||

ಪರಿಣಾಮ ಫಲದಾಸೆ | ತೊರೆದು ನಿರ್ಗುಣ

ಸೂಸೆ | ಚರಿಸುತ್ತಲಿರುವಾತ ಶರಣನೈಸೆ ||ಅ|ಪ||

ದೃಷ್ಟಿಯೊಳಗೆ ರೂಪ | ಸೃಷ್ಟಿಗೈದನು ಕಾಮ ||

ಸೃಷ್ಟಿಸಿದನದರಂತೆ ತನುವ ಬ್ರಹ್ಮ ||

ದೃಷ್ಟಿಸೃಷ್ಟಿಗಳ ಸ| ಮಷ್ಟಿಯಾಗಿಯೆ ಲಯ |

ದೃಷ್ಟಿಯೊಳಡಗಿಸಿದ ಶಿವಬ್ರಹ್ಮ ||1||

ಏಳು ಕೋಟಿಯ ಮಂತ್ರ | ಮೂಲ ಈಶ್ವರ

ತಂತ್ರ|| ಕಾಲ ಕರ್ಮವನಾಂತ | ಕಾಯ ಯಂತ್ರ ||

ಕಾಲವಶವಾಗಲು | ಮೂಲ ಮಂತ್ರವ ಸೇರಿ |

ಲೀಲೆಯಿಂ ಶಿವನೊಳೈಕ್ಯವ ಪೊಂದಿ ||2||

ನರದೇಹ ನಾನೆಂಬ | ಮರವೆಯು ಮರೆಯಾಗಿ |

ಪರನಾದ ತಾನೆಂಬುದರಿವಾಗಿ ||

ನರಹರಿಯ ಪಾದವೆ | ಸ್ಥಿರವೆಂದು ನೆನೆ

ಯುತ್ತ | ಲಿರುವಾತ ಮುಕ್ತನು ನಿಜಯೋಗಿ ||3||

ನಿನ್ನ ಪಾದವ ಕಂಡೆ | ಧನ್ಯನೆನ್ನಿಸಿಕೊಂಡೆ |

ಯನ್ನ ಪಾಪಗಳೆಲ್ಲ ಕಳೆದುಕೊಂಡೆ ||ಪ||

ಯನ್ನ ಪಾವನಗೈವಾ | ಚೆನ್ನಶ್ರೀ ಗುರುದೇವಾ

ನಿನ್ನೊಳಾಯಿತು ನಿಜದನುಭಾವಾ ||ಅ|ಪ||

ಮೂರೇಳು ಸಾಸಿರ | ದಾರು ಶತಮಂತ್ರದ |

ಕಾರಣ ಮೂರುತಿ ನೀನಾಗಿ ||

ಈರೇಳು ಜಗದಾ | ಧಾರನೆಂದೆನಿಸಿದೆ |

ಮೂರು ಕಾಲದಿ ಮಂತ್ರ ಜಪವಾಗಿ ||1||

ನಿದ್ದೆಯೊಳೆಚ್ಚರ | ವಿದ್ದು ಜಪಗಳ ಮಾಡಿ |

ಇದ್ದ ಪಾಪವನೆಲ್ಲ ಶುದ್ಧಿಗೈದೆ ||

ಮುದ್ರಾಸನಾದಿಗಳು | ಕ್ಷುದ್ರವೆಂದೆನಿಸುತ |

ಭದ್ರ ಮಾಡುತ ಜ್ಞಾನ ರುದ್ರನಾದೆ ||2||

ಕರಣ ಧರ್ಮಂಗಳಾ | ಚರಣೆ ನಿನಗಿಲ್ಲೆಂದು |

ಪರವಸ್ತು ನೀನೆಂದು ಬೋಧಿಸುತ ||

ಪರಿಶುದ್ಧ ಜ್ಞಾನದ | ಇರವೆ ನೀನೆಂದೆನ್ನ |

ಹರಸುತ್ತ ಸಲಹಿದೆ ನರಹರಿಯೇ ||3||

ಶರಣನಾದರೆ ಹೇಗಿರಬೇಕು |

ಕರಣ ಪಾಶವ ನೀಗಿರಬೇಕು ||ಪ||

ಸ್ಮರಣೆಯೊಳು ಶಿವನಾಗಿರಬೇಕು ||

ಗುರುವಿನಂಘ್ರಿಗೆ ಬಾಗಿರಬೇಕು ||ಅ|ಪ||

ಆಶಪಾಶವ ಹರಿದಿರಬೇಕು |

ದೋಷ ಗುಣಗಳ ಮರೆದಿರಬೇಕು ||

ದೂಷಣೆಗಳನು ತೊರೆದಿರಬೇಕು |

ಈಶಭಕ್ತರ ಬೆರೆದಿರಬೇಕು ||1||

ಕೋಪ ತಾಪವನಳಿದಿರಬೇಕು |

ಚಾಪಲತ್ವವ ಕಳೆದಿರಬೇಕು ||

ರೂಪ ಭ್ರಮೆಯನು ತುಳಿದಿರಬೇಕು |

ಪಾಪ ಪುಣ್ಯವ ತಿಳಿದಿರಬೇಕು ||2||

ದ್ವೈತಭಾವವ ಬಿಟ್ಟಿರಬೇಕು |

ಮಾತು ಮನಗಳ ಕಟ್ಟಿರಬೇಕು ||

ನೀತಿ ಕವಚವ ತೊಟ್ಟಿರಬೇಕು | ||3||

ನಾದ ಮೂಲವ ಹಿಡಿದಿರಬೇಕು |

ವೇದ ಧರ್ಮವ ಪಡೆದಿರಬೇಕು ||

ಭೇದಭಾವವ ಕಡಿದಿರಬೇಕು |

ಸಾಧುಮಾರ್ಗದಿ ನಡೆದಿರಬೇಕು ||4||

ಅನುಭವಾಮೃತ ಕುಡಿದಿರಬೇಕು |

ಜನನ ಮರಣವ ತಡೆದಿರಬೇಕು ||

ವಿನಯ ವಾಕ್ಯವ ನುಡಿದಿರಬೇಕು |

ಅನಿಮಿಷತ್ವವ ಪಡೆದಿರಬೇಕು ||5||

ಶಿವನ ತನ್ನೊಳು ನೋಡಿರಬೇಕು |

ಪವನ ಯೋಗವ ಮಾಡಿರಬೇಕು ||

ಶ್ರವಣಮನನವ ಮಾಡಿರಬೇಕು |

ಜವದಿ ನರಹರಿಯೊಳಾಡಿರಬೇಕು ||6||

ಪಂಚಾಕ್ಷರೀ ಶಿವ ಪಂಚಾಕ್ಷರೀ ||ಪ||

ಸಂಚಿತ ಹರಿಸುವ ಪಂಚಾಕ್ಷರೀ ||ಅ|ಪ||

ಪಂಚ ಪಾತಕವ ವಂಚಿಸಿ ಕಳೆಯುವ |

ಪಂಚಮುಖದ ಶಿವನೊಳಗೈಕ್ಯವ ||

ವಂಚನೆಯಿಲ್ಲದೆ ಕೊಟ್ಟು ಕಾಪಾಡುವ |

ಮಿಂಚಿದ ಮಹಿಮೆಯ ಪಂಚಾಕ್ಷರೀ ||1||

ಬೇಡಿದಿಷ್ಟಾರ್ಥವ | ನೀಡಿ ಕಾಪಾಡುವ |

ಗೂಢಾರ್ಥವನುಳ್ಳ ಪಂಚಾಕ್ಷರೀ ||

ಆಡಿದ ತಕ್ಷಣ | ಗಾಢ ಸುಜ್ಞಾನವ |

ರೂಢಿಸಿ ಕಾಯುವ ಪಂಚಾಕ್ಷರೀ ||2||

ಇಳೆಯೆ ನಕಾರವು | ಜಲವೆ ಮಕಾರವು |

ಹೊಳೆಯುವ ಅಗ್ನಿಶಿಕಾರವದು ||

ಚಲಿಸುವ ಮಾರುತದೊಳುವಾಕಾರವು |

ಸಲುವುದಾಕಾಶದಿಯಕಾರವು ||3||

ಪ್ರಣವವ ಕೂಡುತ | ಮನದೊಳಗಾಡುತ |

ಘನತರ ಚಿಜ್ಯೋತಿ ತಾನಾಗುತ ||

ನೆನೆವರಘಂಗಳ | ಕಳೆಯುವ ಮಂಗಳ |

ವೆನಿಸುತ ಬೆಳಗುವ ಪಂಚಾಕ್ಷರೀ ||4||

ನಾದದ ಮೂಲವು | ವೇದ ವಿಶಾಲವು |

ಬೋಧಾಶೀಲರಿಗನುಕೂಲವು ||

ಶೋಧಿಸಿದರೆ ಗುರು | ಪಾದದಿ ದೊರೆವುದು |

ಆದಿನರಹರಿ ಪೇಳ್ದ ಪಂಚಾಕ್ಷರಿ ||5||

ನಿನ್ನಂಥ ಕರುಣಾಳು ಇನ್ನುಂಟೆ ಜಗ

ದೊಳು | ಯನ್ನಪರಾಧಗಳ ಮನ್ನಿಸಲು ||ಪ||

ಮುನ್ನ ಮಾಡಿದ ಕರ್ಮ | ವನ್ನೆ ನಾಶವಗೈದೆ |

ಯನ್ನ ಧನ್ಯನಗೈದೆ ಗುರುದೇವಾ ||ಅ|ಪ||

ಮಾಡಬಾರದ ಪಾಪ | ಮಾಡಿದೆನ್ನೊಳು ಕೋಪ|

ಮಾಡದೆ ಕಾರುಣ್ಯವನು ತಾಳ್ದೆ ||

ನೋಡಲಾಗದ ಬ್ರಹ್ಮ | ನೋಡಿಸಿ ಪಾಪಗಳ |

ಓಡಿಸಿ ಸಲಹಿದೆ ಗುರುದೇವಾ ||1||

ಗುರುಹಿರಿಯರನ್ನು ಧಿ | ಕ್ಕರಿಸಿ ಮಾತಾಡುತ್ತ |

ಪರಮ ಪಾತಕಿ ನಾನು ತಿರುಗುತಿದ್ದೆ ||

ದುರಿತ ಕೋಟಿಗಳನ್ನು | ವುರುಹಿಬೂದಿ

ಯ ಮಾಡಿ|| ಪೊರೆದು ಪಾಪವಗೈದೆ ಗುರುದೇವಾ ||2||

ಒಂದೇ ಮಂತ್ರದಿ ಭವ | ದಂದುಗವ ಕಳೆವೆನು |

ಎಂದೆನ್ನ ಸಾವಧಾನದಿ ಕರೆದು ||

ಎಂದೂ ಪಾಪವ ಮಾಡ | ದಂದವ ಕರುಣಿಸಿ |

ಸಂದೇಹವಳಿಸಿದೆ ಗುರುದೇವಾ ||3||

ಸ್ಥಲವೆ ಮೂಲಾಧಾರ | ಜಲವೆ ಸ್ವಾಧಿಷ್ಠಾನ |

ಜ್ವಲಿಸುವಗ್ನಿಯೆ ಮಣಿಪೂರಕವು ||

ಚಲಿಸುವ ಮಾರುತ | ತಿಳಿಯಲನಾಹತ |

ಬೆಳಗುವ ಗಗನ ವಿಶುದ್ಧದೊಳು ||4||

ಜೀವವರ್ಣಗಳೆಲ್ಲ | ದೇವವರ್ಣವ ಸೇರಿ |

ಸಾವಿಲ್ಲದಂತಿರ್ದು ಕಳೆಗೂಡಿ ||

ಕೈವಲ್ಯ ಹೊಂದಿದ | ಭಾವವ ತಿಳಿದಾತ |

ಜೀವಭಾವವ ಬಿಟ್ಟು ಮುಕ್ತನಹ ||5||

ಐದು ಚಕ್ರಗಳೈಕ್ಯ | ವಾದ ಆಜ್ಞಾಚಕ್ರ |

ವೈದಿಪ್ರಜ್ವಲಿಸುತ್ತಲಾತ್ಮ ಜ್ಯೋತಿ ||

ಬೋಧಪ್ರಸಾದ ಚಿ | ನ್ನಾದ ಸಹಸ್ರಾರ |

ಭೇದಿಸಿನಿಂದ ಶ್ರೀನರಹರಿಯೆ ||6||

ನಿನ್ನಲ್ಲೆ ನೋಡಿಕೋ ಬ್ರಹ್ಮವಾ | ನಿನ |

ಗನ್ಯವಲ್ಲದು ಕೇಳ್ ಮಾನವಾ ||ಪ||

ಚೆನ್ನಾಗಿ ತಿಳಿಗುರು ಮರ್ಮವಾ | ನೀ |

ಧನ್ಯನಾಗಲು ಪಡೆ ಜ್ಞಾನವಾ ||ಅ|ಪ||

ಕಾಲಸರ್ಪನ ಕಡೆಗೈವುದು | ಸ್ವರ |

ಜಾಲಪ್ರಕಾಶವನೀವುದು ||

ಮೂಲ ಪ್ರಣವ ಮೈದೋರಿತು | ನವ |

ಲೀಲೆಯಿಂದಾ ಬ್ರಹ್ಮ ಸೇರಿತು ||1||

ಏರುತ್ತ ಸುಷುಮ್ನ ದ್ವಾರವಾ | ಮೈ|

ದೋರುತ್ತ ದಿವ್ಯಾವತಾರವಾ ||

ಪೂರಿಸುತ್ತಿದೆ ಸಹಸ್ರಾರವಾ | ವಿ |

ಸ್ತಾರಗೈವುದು ಸುವಿಚಾರವಾ ||2||

ಕಾಲಾರಿಯೇ ಶೇಷಭೂಷಣಾ | ಕೇಳ್ |

ಫಾಲಾಕ್ಷ ಜ್ಞಾನಪ್ರಕಾಶನಾ ||

ನೀಲಕಂಠನೆ ಸರ್ವಪೋಷಣಾ | ನುಡಿ |

ಜಾಲಗಂಗಾಧರ ಶಾಸನಾ ||3||

ನಡೆವಾಗ ಹಂಸನ ವಾಹನಾ | ಸ |

ನ್ನುಡಿಯಾಗಿ ಸೋಹಂ ಮೋಹನಾ ||

ನಡುವಿರ್ಪಬ್ರಹ್ಮವೆ ಪಾವನಾ | ಕೊನೆ |

ವಿಡಿದರ್ಧ ಮಾತ್ರೆ ಸಂಜೀವನಾ ||4||

ಮಹಕಾರಣದೊಳಾರಂಭಿಸೀ | ಮುಂ |

ದಿಹ ತೂರ್ಯದೊಳಗದು ಕುಂಭಿಸಿ ||

ಬಹುದು ಸುಷುಮ್ನ ವಿಜೃಂಭಿಸಿ | ತಾ|

ನಿಹುದು ಸ್ಥೂಲದಿ ನುಡಿ ತುಂಬಿಸೀ ||5||

ಕಾರಣಾಂಗವನವಲಂಬಿಸೀ | ತಾಂ|

ಸೇರಿ ಸೂಕ್ಷ್ಮಾಂಗವ ತುಂಬಿಸೀ ||

ಮೀರಿಯರ್ಧಾಕ್ಷರವೆನ್ನಿಸಿ | ಭವ |

ದೂರ ಮಾಡಿದೆ ಎಲ್ಲ ವರ್ಣಿಸೀ ||6||

ನಾದಪ್ರಸಾದವನೀವುದು | ನಿಜ |

ವೇದ ಪ್ರಚಾರವಗೈವುದು ||

ಆಧಾರದೊಳಗಾಡುತಿರ್ಪುದು | ಸುಖ |

ಬೋಧಾತ್ಮ ನರಹರಿಯಪ್ಪುದು ||7||

ಕಂಡೆನಿಲ್ಲಿಯೆ ಶಿವನಾ | ದೇಹದೊಳೈಕ್ಯ|

ಗೊಂಡಾಡುತಿರುವವನಾ ||ಪ||

ಕಂಡಮಾತ್ರಕೆ ಕರ್ಮಪಾಶವ |

ಖಂಡಿಸುತ ಕೈವಲ್ಯವೀಯುವ |

ರುಂಡಮಾಲಾಧಾರಿಯೆನಿಸುವ |

ಕೆಂಡಗಣ್ಣಿನ ಖಂಡಪರಶುವ ||ಅ|ಪ||

ಕಾಲಕಾಲನು ಎನಿಸುತಾ | ಧರೆಯೊಳು ಹಂಸ|

ಲೀಲೆಯಿಂ ಸಂಚರಿಸುತಾ ||

ಲೋಲಗಂಗಾಧರನು | ಸುರಸವ |

ತಾಳಿ ಜಲದೊಳು ಮಂತ್ರ ಜಪಿಸುವ ||

ಫಾಲನೇತ್ರನು ಎನಿಸಿ ಅಗ್ನಿಯ |

ಮೇಳವಿಸಿದನು ದಿವ್ಯ ಪ್ರಜ್ಞೆಯ ||1||

ನೀಲಕಂಠನು ಬಂದನು | ಕುಂಭಕ ಸೇರಿ|

ಕೇಳಿಗೈಯುತ ನಿಂದನು ||

ಕಾಲಕೂಟವ ಕುಡಿದುಬಿಟ್ಟನು |

ಮೇಲೆ ಸುರರಿಗೆ ಸುಧೆಯನಿತ್ತನು ||

ಬಾಲಚಂದ್ರನ ಧರಿಸಿಕೊಂಡನು|

ಮೂಲಮಂತ್ರವ ಕೀಲಿಸಿರ್ಪನು ||2||

ಹಾದಿಮೂರರ ಮಧ್ಯವ | ಸೇರಿದ ದಿವ್ಯ

ವಾದ ನಿರ್ಗುಣ ವಸ್ತುವಾ ||

ಆದಿಪ್ರಣವದ ವರ ತ್ರಿಶೂಲವ|

ವೇದ ಶ್ರವಣದ ವಿಧಿ ಕಪಾಲವ ||

ನಾದ ಡಮರುಗ ಪಿಡಿದ ದೈವವ |

ಸಾಧಿಸಿದೆ ನರಹರಿಯ ಮೂಲವ ||3||

ಪರಬೋಧವಾ ತಾ | ನೀಯುವಾ | ಶ್ರೀ |

ಗುರು ಪರದೈವಾ ||ಪ||

ಕರಣದ ಮುಖದೊಳು | ದೊರೆವ ಸುಖಂಗಳು |

ಪರಮಾತ್ಮನ ಬೆರೆ | ದರಿವೆನಿಸುವ ||1||

ನಾದದೊಳಗೆ ಸಂ | ಪಾದನೆ ಬೆಳಗೇ |

ಹಾದಿಯನರಿತು ವಿ | ನೋದಿಸೆನುತ ||2||

ಧಾರಿಣಿಯೊಳು ಸಂ| ಚಾರದ ಪಥದೊಳು |

ಪಾರಮಾರ್ಥಸುವಿ | ಚಾರವಿರುವ ||3||

ಅಗ್ನಿಯೊಳಗೆ ಸ| ರ್ವಜ್ಞನ ತಿಳಿಯುತ|

ಪ್ರಜ್ಞೆಯೊಳಾತ್ಮನ | ಆಜ್ಞೆಯೊಳಿಹ ||4||

ಪವನ ಸುಯೋಗದಿ | ಶಿವಸುಖ ಭೋಗದಿ ||

ಅವಿರಳ ನರಹರಿ | ಭವವನು ಹರಿವಾ ||5||

ಮರಣವಾಗುವ ವೇಳೆಯೊಳಗೆ | ತನ್ನ |

ಕರಣವೆಲ್ಲವು ಕರಗಿ ಬ್ರಹ್ಮದಿ ಬೆಳಗೆ ||ಪ||

ಗುರುಮಂತ್ರವನು ಜಿಹ್ವೆಯೊಳಗೆ | ಜ್ಯೋತಿ|

ಬೆರೆದ ಕರ್ಪುರದಂತೆ ಜೀವತ್ವಕರಗೆ ||ಅ|ಪ||

ನಾದ ಬ್ರಹ್ಮಾರಾಧನೆಯನು | ಸರ್ವ |

ವೇದ ಧರ್ಮಂಗಳ ಪರಿಶೋಧನೆಯನು ||

ಬೋಧ ಮರ್ಮದ ಸಾಧನೆಯನು | ಮಾಡಿ |

ಆದ್ಯಂತವೊಂದಾಗಿ ಬ್ರಹ್ಮೈಕ್ಯವಹನು ||1||

ಪೊರಗಣಿಂದ್ರಿಯಗಳು ಸರಿದು | ಅಂತಃ|

ಕರಣಂಗಳಲ್ಲಿಯೆ ಲೀನತ್ವ ಪಡೆದು ||

ಹರಣಧರ್ಮಂಗಳು ಕಡಿದು | ಬಾಹ್ಯ |

ದರಿವಿಲ್ಲದಂತಾಗಿ ಶಿವಮಂತ್ರ ನುಡಿದು ||2||

ಮಂತ್ರಾರ್ಥದೊಳು ಮನವು ನಿಂತು | ದೇಹ ||

ಯಂತ್ರ ತನಗಿಲ್ಲೆಂದು ನಿಶ್ಚಯವಾಂತು

ಚಿಂತಾ ತರಂಗವ ಮರೆತು | ಸರ್ವ |

ತಂತ್ರಾತ್ಮ ನರಹರಿಯ ಪಾದವ ಬೆರೆತ ||3||

ಕಂಡೆವೆಂಬವರಿಲ್ಲ ಶಿವನಾ | ತುಂಬಿ |

ಕೊಂಡು ಜಗದೊಳಗೆಲ್ಲ ಬೆಳಗುತಿರ್ಪವನಾ ||ಪ||

ಹಿಂಡು ದೈವವನಾಳುವವನಾ | ಶಾಸ್ತ್ರ |

ಪಾಂಡಿತ್ಯಕೆಂದಿಗು ವಶವಾಗದವನಾ ||ಅ|ಪ||

ಸರ್ವರೊಳಗೆ ಸೇರಿದವನಾ | ತಾನೆ |

ಸರ್ವತ್ರ ತುಂಬಿದ್ದು ತೋರದಿರ್ಪವನಾ ||

ನಿರ್ವಾಚ್ಯನೆನಿಸಿಕೊಂಡವನಾ | ಪಾಪ|

ಪರ್ವತಂಗಳ ಧೂಳಿ ಮಾಡಬಲ್ಲವನಾ ||1||

ಮಂತ್ರಮೂಲದೊಳಿರುವವನಾ | ಸರ್ವ |

ಮಂತ್ರಂಗಳೊಡಲಾಗಿ ಗೋಚರಿಸುವವನಾ ||

ಯಂತ್ರದೇಹವನಾಡಿಸುವನಾ | ಸರ್ವ |

ತಂತ್ರ ಸ್ವತಂತ್ರದಿ ಜಗವ ಪಾಲಿಪನಾ ||2||

ಹಿಡಿಯಲಾರಿಗೆ ಸಿಕ್ಕದವನಾ | ತನ್ನ |

ನುಡಿವ ಭಕ್ತರಿಗೆಲ್ಲ ವಶನಾಗುವವನಾ ||

ಮಡಿಯಾಚಾರಕೆ ದಕ್ಕದವನಾ | ಲೋಕ |

ದೊಡೆಯ ಗುರು ನರಹರಿಯ ರೂಪನಾದವನಾ ||3||

ಗುಣವಾರನು | ಸ | ದ್ಗುಣಿ ಸೇರನು ||ಪ||

ಮನವೆಲ್ಲ ಮಡಿ ಮಾಡಿಕೊಂಡಾತನು | ನಿ |

ರ್ಗುಣನಾಗಿ ಶಿವನಲ್ಲಿ ಬೆರೆದಾತನು ||ಅ|ಪ||

ಅತಿ ಕಾಮ್ಯವು | ದು | ರ್ಗತಿಗಮ್ಯವು ||

ಶೃತಿ ಮಾರ್ಗ ತಿಳಿದರೆ ನಿಷ್ಕಾಮ್ಯವು | ಸ |

ದ್ಗತಿಯನ್ನು ಹೊಂದುವ ಮಡಿರಮ್ಯವು ||1||

ಬಲು ಕೋಪವು | ದು | ರ್ಮಲ ಕೂಪವು ||

ಛಲ ವೈರಹಿಂಸಾ ಸಂತಾಪವು | ನೀ |

ಕಳೆದಾಗ ಸ್ನಾನವು ಮಡಿ ರೂಪವು ||2||

ಕಡು ಲೋಭವು | ಕಳೆ | ದೊಡೆ ಲಾಭವು ||

ಮೃಢನನ್ನು ಕೂಡುವ ನಿಜ ವೈಭವಾ | ನೀ |

ಪಡೆದಾಗಲಾಗುವೆ ನೀನೆ ಶಿವಾ ||3||

ಬಿಡು ಮೋಹವಾ | ಕ | ಟ್ಟಿಡು ದಾಹವಾ ||

ಮಡಿಯಾಯಿತಾಗಲೆ ಶಿವ ಸ್ನೇಹವಾ | ನೀ |

ಪಡೆದಾಗ ಮೋಕ್ಷವು ಕಡೆಯೀ ಭವಾ ||4||

ಮದ ಮೈಲಿಗೆ | ಕಳೆ | ವುದೆ ಬಾಳಿಗೆ |

ಸುಧೆಯಾಗಿ ನಿಲ್ವುದು ಗುಣಶಾಲಿಗೆ | ಸಂ |

ಪದವಾಗಿ ಸಲ್ವುದು ಸುಗುಣಾಳಿಗೆ ||5||

ಬಿಡು ಮತ್ಸರಾ | ನೀ | ಪಡೆ ಸುಸ್ಥಿರಾ ||

ಮೃಢನನ್ನು ಮೆಚ್ಚಿಸುವುದು ದುಸ್ತರ ||

ಕೊಡುವಂಥ ಬೋಧೆಯು ಶ್ರೇಯಸ್ಕರಾ ||6||

ವರ ಮಂತ್ರವಾ | ನರ | ಹರಿ ನೀಡುವಾ |

ಅರಿವರ್ಗವಾರನು ಕಡೆ ಮಾಡುವಾ | ಸು |

ಸ್ಥಿರ ಮುಕ್ತಿ ಕರುಣಿಸಿ ಕಾಪಾಡುವಾ ||7||

ಗುರು ಕೊಟ್ಟ ಮಂತ್ರವ | ತೊರೆದಾತನೇ ಪಾಪಿ |

ಗುರುನಿಂದೆಗೈವಾತ ಕಡುಪಾಪಿ ||ಪ||

ಗುರುವಾಜ್ಞೆ ಮೀರಿಯಾ | ಚರಿಸುವಾತನೆ ಪಾಪಿ |

ಗುರು ಬೋಧೆ ನಂಬದಾತನೆ ಪಾಪಿ ||ಅ|ಪ||

ಗುರುಪಾದ ತೀರ್ಥ ಸ್ವೀ | ಕರಿಸದಾತನೆ ಪಾಪಿ |

ಗುರು ಪ್ರಸಾದವ ಪೊಂದದವ ಪಾಪಿ ||

ಗುರುಪಾದದೊಳು ಭಕ್ತಿ | ಪರನಾಗದವ ಪಾಪಿ |

ಗುರುಸೇವೆಗೈಯದಾತನೆ ಪಾಪಿ ||1||

ಗುರುಪುತ್ರನಾಗಿದ್ದು | ಗುರುವಿಗಿದಿರು ಬಿದ್ದು |

ಪರುಷವಾಕ್ಯಗಳಾಡುವವ ಪಾಪಿ ||

ಗುರುಪುತ್ರರನು ಕಂಡಾ | ದರಿಸದಾತನೆ ಪಾಪಿ |

ಗುರುವನ್ನು ಬಿಟ್ಟೆನೆಂಬವ ಪಾಪಿ ||2||

ಗುರುವಿಂದ ಪರವಸ್ತು | ವರಿಯದಾತನೆ ಪಾಪಿ ||

ಗುರುವನ್ನು ಪೂಜಿಸದವನೆ ಪಾಪಿ ||

ಗುರುದೇವ ನರಹರಿಯೆ | ಹರಿಹರ ಬ್ರಹ್ಮರೆಂ |

ದರಿಯದಿರ್ಪಾತನೆ ಬಲು ಪಾಪಿ ||3||

ವೈದಿಕರೆನ್ನುವ ನಾವೆಲ್ಲ | ವೇದದ ಧರ್ಮವ ತಿಳಿದಿಲ್ಲ ||ಪ||

ವಾದ ವಿವಾದವ ಬಿಟ್ಟಿಲ್ಲ | ಭೇದ ಭಾವಗಳ ತೊರೆದಿಲ್ಲ ||ಅ|ಪ||

ಮಂತ್ರದ ಅರ್ಥವ ತಿಳಿದಿಲ್ಲ | ತಂತ್ರದ ಸೂತ್ರವನರಿತಿಲ್ಲ ||

ಚಿಂತನವೆಂಬುದು ಬಲಿತಿಲ್ಲ | ಸಂತರ ಸೇವೆಯ ಕಲಿತಿಲ್ಲ ||1||

ಸಾಧನೆಗಳು ಸ್ಥಿರಪಡಲಿಲ್ಲ | ಸಾಧುಗಳೆಂಬುದು ಬಿಡಲಿಲ್ಲ ||

ಬೋಧನೆಯರ್ಥವು ಹಿಡಿದಿಲ್ಲ | ನಾದದಿ ಲೀನತೆ ಪಡೆದಿಲ್ಲ ||2||

ಹರಿಹರ ಬ್ರಹ್ಮರ ತಿಳಿದಿಲ್ಲ | ಪರಿಪರಿ ಭೇದವನಳಿದಿಲ್ಲ ||

ನರಹರಿ ಗುರುವನು ಕೂಡಿಲ್ಲ || ಪರತರ ಸಾಧನೆ ಮಾಡಿಲ್ಲ ||3||

ಮಡಿ ಮಾಡೆಲೋ | ಮನ | ಮಡಿ ಮಾಡೆಲೋ ||ಪ||

ಮಡಿವಂಥ ದೇಹಕೆ | ಮಡಿ ಯಾತಕೆ | ನಿ |

ನ್ನೊಡಲೇನು ಪೋಪುದೆ | ಕೈಲಾಸಕೆ ||ಅ|ಪ||

ಜನಿಸುತ್ತಲೇ | ಈ | ತನು ಬೆತ್ತಲೆ |

ಕೊನೆಯಲ್ಲಿ ಬೆತ್ತಲೆ ಹೋಗುತ್ತಲೇ | ಈ |

ಮನದಲ್ಲಿಹುದು ಪಾಪದ ಕತ್ತಲೆ ||1||

ಮನದಲ್ಲಿಯೇ | ದು | ರ್ಗುಣ ಬಳ್ಳಿಯೇ |

ಜನಿಸುತ್ತ ಬೆಳೆದಿದೆ ಕ್ಷಣದಲ್ಲಿಯೇ | ನಿ |

ರ್ಗುಣ ಖಡ್ಗದೊಳು ಛೇದಿಸುತಲ್ಲಿಯೇ ||2||

ಮಡಿಯೆಂಬುದೇ | ಸ | ನ್ನಡೆಯಾಗಿದೆ |

ನುಡಿ ಶುದ್ಧವಾದರೆ ಮಾಡಿಯಾಗದೇ | ನಿ |

ನ್ನೊಡಲನ್ನು ತೊಳೆದರೆ ಮಡಿಯಾದುದೇ ||3||

ಮನ ಶುದ್ಧಿಯು | ಸ | ದ್ಗುಣ ವೃದ್ಧಿಯು |

ಅನುಮಾನವಿಲ್ಲದ ಸಮ ಬುದ್ಧಿಯು | ನಿ |

ರ್ಗುಣ ಬ್ರಹ್ಮಜ್ಞಾನದ ಸಮೃದ್ಧಿಯು ||4||

ಭವ ಮೈಲಿಗೆ | ಕಳೆ | ಯುವುದೇಳಿಗೆ |

ಸುವಿವೇಕವೆಂಬುದೆ ಮಡಿ ಬಾಳಿಗೆ || ಪರ |

ಶಿವಯೋಗಿ ನರಹರಿ ಭಕ್ತಾಳಿಗೆ ||5||

ತಿಪ್ಪೆಯೊಳಗೆ ಇದ್ದನಂತೆ | ನಮ್ಮ |

ತಿಪ್ಪೇರುದ್ರನು ಲೋಕ ಗುರುವಾದನಂತೆ ||ಪ||

ತಿಪ್ಪೆಯೆಂಬುದೆ ದೇಹವಂತೆ | ಇಲ್ಲೆ |

ಒಪ್ಪವಾಗಿರುತಿರ್ದು ಶಿವನೆ ತಾನಂತೆ ||ಅ|ಪ||

ತಿಪ್ಪೆ ತಾತ್ಸಾರವೇನಣ್ಣ | ಈ |

ತಿಪ್ಪೆಯಲ್ಲಿರುವುದು ಲೋಕಕೆ ಅನ್ನ ||

ತಿಪ್ಪೆಯೆಂಬುದೆ ಕಸದ ಕುಪ್ಪೆ | ನೋಡಿ |

ತಿಪ್ಪೆಯಲ್ಲಿದೆ ನಾನಾರಸ ಮನವೊಪ್ಪೆ ||1||

ಬೆತ್ತಜೋಳಿಗೆ ತಂದು ಇಟ್ಟ | ಮಾರಿ |

ಗೊತ್ತಾಗಿ ನೋಡೆಂದು ಮರೆಯಾಗಿ ಬಿಟ್ಟ |

ಬೆತ್ತ ಜೋಳಿಗೆ ಗುಡಿಯ ಸೇರಿ | ತುಂಬಿ |

ಮೊತ್ತವಾಗಿರೆ ಗುಡಿಯ ಬಿಟ್ಟಳು ಮಾರಿ ||2||

ಮಾರಿಯ ಗುಡಿಯೆ ಮಾನಸವು | ಅಲ್ಲಿ |

ಸೇರಿರುವ ಮಾರಿಯಜ್ಞಾನ ತಾಮಸವು ||

ಸಾರಬೋಧಾಮಂತ್ರ ಬಲವು | ಅಲ್ಲಿ |

ಸೇರಿಸಲು ಗುರುನಾಥ ಮಾರಿಗೆಂತುಳಿವು ||3||

ಸತ್ತ ಎಮ್ಮೆಗೆ ಜೀವವಿತ್ತು | ತಾನೆ|

ಮತ್ತೆ ಪಾಲ್ಗರೆದುಂಡ ಮಹಿಮೆ ಸಂಪತ್ತು ||

ಚಿತ್ತ ಮೊದಲಿದ್ದುದು ಸತ್ತು | ಗುರುವೆ |

ಚಿತ್ಸ್ವರೂಪವ ತುಂಬಿಬಿಟ್ಟ ಮಹತ್ತು ||4||

ಸಾಲು ಓಡೆಗೆ ತುಂಬಿ ಧಾನ್ಯ | ಬಾಯ |

ಮೇಲೆ ಮುಚ್ಚಳ ಮುದ್ರೆಯಿಟ್ಟನು ಮಾನ್ಯ ||

ಸಾಲದಾಗದೆಯಿತ್ತು ಧಾನ್ಯ | ಎಷ್ಟು |

ಕಾಲವಾದರು ಸುರಿಯಲಕ್ಷಯ ಪುಣ್ಯ ||5||

ಮೇಲು ಮುಚ್ಚಳ ಮುದ್ರೆ ತೆಗೆದು | ಮತ್ತೆ |

ಮಾಳಮ್ಮ ನೋಡಲು ಬರಿದಾಯ್ತು ಮುಗಿದು ||

ಸಾಲು ಓಡೆಯೆ ಚಕ್ರಸಪ್ತ | ಗುರುವು |

ಕೀಲುಮುದ್ರೆಯ ಕಳಚೆ ಬರಿ ಶೂನ್ಯ ಗುಪ್ತ ||6||

ಮಾದಿಗರ ಮನೆಯೊಳಗುಂಡ | ಜಾತಿ |

ಭೇದ ಶಿವಗಿಲ್ಲೆಂದು ತೋರಿಸಿಕೊಂಡ ||

ಮಾದಿಗರ ಮನೆಯೀ ತನುವೂ | ಸುಪ್ರ |

ಸಾದಾನುಭವವಾಯ್ತು ನರಹರಿಯ ಘನವು ||7||

ತಿಪ್ಪೆಯೊಳಗೆ ಇದ್ದನಂತೆ | ನಮ್ಮ |

ತಿಪ್ಪೇರುದ್ರನು ಲೋಕ ಗುರುವಾದನಂತೆ ||ಪ||

ತಿಪ್ಪೆಯೆಂಬುದೆ ದೇಹವಂತೆ | ಇಲ್ಲೆ |

ಒಪ್ಪವಾಗಿರುತಿರ್ದು ಶಿವನೆ ತಾನಂತೆ ||ಅ|ಪ||

ತಿಪ್ಪೆ ತಾತ್ಸಾರವೇನಣ್ಣ | ಈ |

ತಿಪ್ಪೆಯಲ್ಲಿರುವುದು ಲೋಕಕೆ ಅನ್ನ ||

ತಿಪ್ಪೆಯೆಂಬುದೆ ಕಸದ ಕುಪ್ಪೆ | ನೋಡಿ |

ತಿಪ್ಪೆಯಲ್ಲಿದೆ ನಾನಾರಸ ಮನವೊಪ್ಪೆ ||1||

ಬೆತ್ತಜೋಳಿಗೆ ತಂದು ಇಟ್ಟ | ಮಾರಿ |

ಗೊತ್ತಾಗಿ ನೋಡೆಂದು ಮರೆಯಾಗಿ ಬಿಟ್ಟ |

ಬೆತ್ತ ಜೋಳಿಗೆ ಗುಡಿಯ ಸೇರಿ | ತುಂಬಿ |

ಮೊತ್ತವಾಗಿರೆ ಗುಡಿಯ ಬಿಟ್ಟಳು ಮಾರಿ ||2||

ಮಾರಿಯ ಗುಡಿಯೆ ಮಾನಸವು | ಅಲ್ಲಿ |

ಸೇರಿರುವ ಮಾರಿಯಜ್ಞಾನ ತಾಮಸವು ||

ಸಾರಬೋಧಾಮಂತ್ರ ಬಲವು | ಅಲ್ಲಿ |

ಸೇರಿಸಲು ಗುರುನಾಥ ಮಾರಿಗೆಂತುಳಿವು ||3||

ಸತ್ತ ಎಮ್ಮೆಗೆ ಜೀವವಿತ್ತು | ತಾನೆ|

ಮತ್ತೆ ಪಾಲ್ಗರೆದುಂಡ ಮಹಿಮೆ ಸಂಪತ್ತು ||

ಚಿತ್ತ ಮೊದಲಿದ್ದುದು ಸತ್ತು | ಗುರುವೆ |

ಚಿತ್ಸ್ವರೂಪವ ತುಂಬಿಬಿಟ್ಟ ಮಹತ್ತು ||4||

ಸಾಲು ಓಡೆಗೆ ತುಂಬಿ ಧಾನ್ಯ | ಬಾಯ |

ಮೇಲೆ ಮುಚ್ಚಳ ಮುದ್ರೆಯಿಟ್ಟನು ಮಾನ್ಯ ||

ಸಾಲದಾಗದೆಯಿತ್ತು ಧಾನ್ಯ | ಎಷ್ಟು |

ಕಾಲವಾದರು ಸುರಿಯಲಕ್ಷಯ ಪುಣ್ಯ ||5||

ಮೇಲು ಮುಚ್ಚಳ ಮುದ್ರೆ ತೆಗೆದು | ಮತ್ತೆ |

ಮಾಳಮ್ಮ ನೋಡಲು ಬರಿದಾಯ್ತು ಮುಗಿದು ||

ಸಾಲು ಓಡೆಯೆ ಚಕ್ರಸಪ್ತ | ಗುರುವು |

ಕೀಲುಮುದ್ರೆಯ ಕಳಚೆ ಬರಿ ಶೂನ್ಯ ಗುಪ್ತ ||6||

ಮಾದಿಗರ ಮನೆಯೊಳಗುಂಡ | ಜಾತಿ |

ಭೇದ ಶಿವಗಿಲ್ಲೆಂದು ತೋರಿಸಿಕೊಂಡ ||

ಮಾದಿಗರ ಮನೆಯೀ ತನುವೂ | ಸುಪ್ರ |

ಸಾದಾನುಭವವಾಯ್ತು ನರಹರಿಯ ಘನವು ||7||

ರಾಧಾ ರಮಣಾ | ನಾದಾ ಕ್ರಮಣಾ |

ವೇದ ವಿನೋದನು ಶ್ರೀಕೃಷ್ಣಾ ||ಪ||

ರಾಧಾಕೃಷ್ಣ | ಬೋಧಾಚರಣಾ |

ಸಾಧನ ರಾಧಾ ಬಲುವರ್ಣಾ ||ಅ|ಪ||

ಬೆಡಗಿನ ನಾರೀ | ಕಡು ವೈಯಾರಿ |

ಜಡಜಾಕ್ಷನೆ ಮೋಹವ ಬೀರಿ ||

ನಡೆಯುತ ಜಾರಿ | ನುಡಿಯೊಳು ಸೇರಿ|

ಬಿಡುವಳು ರಾಧಾ ಸುವಿಚಾರಿ ||1||

ವರ್ಣಿಸಲಾದಾ | ಕರ್ಣವಿನೋದ |

ವರ್ಣಾತ್ಮ ಕಳೇಯೀ ರಾಧಾ ||

ವರ್ಣಾತೀತಾ | ಪೂರ್ಣ ಸುನಾದಾ |

ಧ್ವನ್ಯಾತ್ಮಕನೇ ಶ್ರೀಕೃಷ್ಣಾ ||2||

ಯೋಗದ ಸಿರಿಯೇ | ವಾಗೀಶ್ವರಿಯೇ |

ರಾಗಾನಂದವೆ ಈ ರಾಧಾ ||

ಯೋಗೀಶ್ವರನೇ | ತ್ಯಾಗ ಸುಸ್ವರನೇ |

ಭೋಗಿ ಶಯನನೇ ಈ ಕೃಷ್ಣಾ ||3||

ನುಡಿಗಣ ಶ್ರೇಣಿ | ಬೆಡಗಿನ ರಮಣೀ |

ಮಡದೀ ಮಣಿಯೆ ಈ ರಾಧಾ ||

ನುಡಿಗಾಧಾರಿ | ನಡೆಯೊಳು ಸೇರಿ |

ನಡುವೇ ನಿಂತಿಹನೀ ಶೌರಿ ||4||

ಪರತರ ನಾದಾ | ನರಹರಿ ಬೋಧಾ |

ಸರಣಿಯೊಳಿರುವಳು ಈ ರಾಧಾ ||

ಮುರಳೀ ನಾದಾ | ಪರವಶಳಾದ |

ಸುರುಚಿರ ಪ್ರಣವಾ | ಈ ರಾಧಾ ||5||

ಈಶ್ವರಾಜ್ಞಾ ಚಕ್ರಬಲವು | ಸರ್ವ |

ವಿಶ್ವ ಸಂರಕ್ಷಣೆಗೈಯುವವೊಲವು ||ಪ||

ಶಾಶ್ವತವೀಶ್ವರನ ನಿಲವು | ವಿಶ್ವ |

ನಶ್ವರವಾದುದು ಮಾಯೆಯ ಫಲವು ||ಅ|ಪ||

ದೇವ ಕೋಟಿಯ ಪರಿವಾರ | ಕೂಡಿ |

ಜೀವ ಕೋಟಿಗಳ ಸಂರಕ್ಷಣೆ ಭಾರ ||

ಸೇವೆ ಮಾಡುವ ಅಧಿಕಾರ | ಸರ್ವ |

ದೇವ ಸಮೂಹಕ್ಕೆ ಹಂಚಿಟ್ಟ ಪೂರ ||1||

ಅಂತರಿಕ್ಷದೊಳಿದೆ ಪೃಥ್ವಿ | ತಾನಿ |

ರಂತರ ಚಲಿಸುತ್ತ ಸೂರ್ಯನ ಸುತ್ತಿ ||

ನಿಂತ ಜಲಧಿಯ ಚಲ್ಲದೊತ್ತಿ | ಭೂ |

ಮಾತೆ ರಕ್ಷಿಸುವಳು ಜೀವರನೆತ್ತಿ ||2||

ಭೂತಪಂಚಕ ದಾಟವೆಲ್ಲ | ತಾನಿ |

ಯಂತ್ರಣ ಮಾಡುವ ಈಶನು ಬಲ್ಲಾ ||

ಸುತ್ತುವ ಗ್ರಹತಾರೆಯೆಲ್ಲಾ | ಕಾಲ |

ಚಕ್ರದಿ ಕೀಲಿಸಿದ ನರಹರಿ ಬಲ್ಲಾ ||3||

ನಾದಯೋಗಿಯೆ ವರ್ಣ | ಭೇದವೆಲ್ಲವ ನೀಗಿ |

ಆದಿಯಂತ್ಯದೊಳೆಲ್ಲ ತಾನೆಯಾಗಿ ||ಪ||

ವೇದಕ್ಕೆ ತಲೆವಾಗಿ | ವಾದವೆಲ್ಲವು ಪೋಗಿ |

ಬೋಧ ಚಿನ್ಮಯ ನಾದಸುಖ ಭೋಗಿ ||ಅ|ಪ||

ಅಮರನಾದದಿ ನಿಂದು | ರಮಿಸಿ ಕೂಡಲು ಬಿಂದು |

ವಿಮಲಾತ್ಮ ಸಂಧಾನಸುಖ ಸಂದು ||

ಭ್ರಮೆಯೆನ್ನುವುದು ಬಿಂದು | ಸಮತೆ ಚಿತ್ತಕೆ ತಂದು ||

ಸುಮನಸನಾದನು ದಯಸಿಂಧು ||1||

ವರ್ಣಂಗಳೆಲ್ಲವ | ನಿರ್ಣಯಿಸಿ ನಿಲ್ಲುವ |

ಪೂರ್ಣ ಬಿಂದುವಿನಲ್ಲಿ ತಾ ಸಲ್ಲುವ ||

ವರ್ಣನಾತೀತ ನಿ | ರ್ಗುಣ ಪರಬ್ರಹ್ಮನು |

ತನ್ನೊಳೆಲ್ಲವ ತಾನು ಲಯಗೈವನು ||2||

ಇರವಿನಲ್ಲಿಯೆ ನಡೆದು | ಅರಿವಿನಿಂದಲೆ ನುಡಿದು |

ಪರಸುಖ ರೂಪವ ತಾಂ ಪಡೆದು ||

ಹೊರಗೊಳಗೊಂದಾದ | ಪರಬ್ರಹ್ಮ ತಾನಾದ |

ಮರವರಿವುಗಳನ್ನು ಲಯಗೈದ ||3||

ಜೀವಭಾವವನಳಿದ | ದೇವನಾಗಿಯೆ ಉಳಿದ |

ಸಾವು ನೋವುಗಳೆಲ್ಲ ತಾಂ ಕಳೆದ ||

ಪಾವನಾತ್ಮಕನಾದ | ಭಾವ ನಿರ್ಮಲ ಬೋಧ |

ವೀವ ನರಹರಿಯಲ್ಲೆ ಐಕ್ಯನಾದ ||4||

ಪರಮಾರ್ಥ ವಿಹಾರಿ | ಪರಮಾಮೃತ ಲಹರೀ ಶ್ರೀಹರೀ ||ಪ||

ಗೋಪಿಜಾರ | ಪಾಪ ದೂರಾ |ತಾಪವ ಹರಿಸುವ |

ಶ್ರೀಪತಿ ಜಗಜೀವಾ | ಮಾಧವಾ ||1||

ದುಷ್ಟ ಶಿಕ್ಷಾ | ಶಿಷ್ಟ ರಕ್ಷಾ | ಕಷ್ಟವ ಸಹಿಸುವ |

ನಿಷ್ಠೆಯ ಕೊಡು ದೇವಾ | ಭೂಧವಾ ||2||

ನಾದಬ್ರಹ್ಮಾ | ವೇದ ಧರ್ಮಾ | ಶೋಧಿಸಿದವರಿಗೆ |

ಬೋಧೆಯೊಳಗೆ ಎಸೆವಾ | ಕೇಶವಾ ||3||

ಮುರಳಿ ಗಾನಾ | ಸುಧೆಯ ಪಾನಾ | ಮರೆಯದ ಧ್ಯಾನಾ |

ಪರಮಾರ್ಥದ ಜ್ಞಾನ | ಸಾಧನಾ ||4||

ನರ ಹರೀಂದ್ರ | ಸುಗುಣ ಸಾಂದ್ರ | ಸುರನರ ವಂದಿತ |

ಪರಮಾದರ ಭರಿತಾ ಮಾನಿತಾ ||5||

ಈಷಣತ್ರಯದಾಸೆ ನೀಗಿ | ಜಗ |

ದೀಶನಾದನು ರಾಜಯೋಗೀ ||ಪ||

ಈ ಸತಿಯೀ ಧನ | ಈ ಸುತರೆಲ್ಲರ |

ಆಸೆಯ ಬಿಟ್ಟು ನಿ | ರಾಸೆಯ ಸಾಧಿಸಿ ||ಅ|ಪ||

ಸತಿಯಲ್ಲಿ ಮೋಹವನಳಿದು | ಜಗ |

ತ್ಪತಿಯನ್ನು ಬೇಗನೆ ತಿಳಿದು ||

ಸತಿಯೊಡನಿದ್ದರು | ಗತಿಯಿವಳೆನ್ನದೆ |

ಶೃತಿ ಶ್ರವಣವೆ ತನ್ನ | ಸತಿಯೆಂದು ರತಿಯಿಟ್ಟು ||1||

ಸುತರಲ್ಲಿ ಮೋಹವನಿಡದೇ | ಜ್ಞಾನ |

ಯುತರಾದ ಸುಜನರ ಬಿಡದೇ ||

ಅತಿಶಯ ಮನನದಿ | ಮತಿಯ ನಿರ್ಮಲಗೈದು |

ಶೃತಿಯನುಭವವೆಂಬ | ಸುತರನ್ನು ಪಡೆಯುತ ||2||

ಧನದಾಸೆ ದೂರವ ಮಾಡಿ | ಜ್ಞಾನ |

ಧನವ ಸಂಪಾದಿಸಿ ಕೂಡಿ ||

ಅನವರತವು ಶ್ರವಣ | ಮನನ ಸಾಧನೆಯಿಂದ ||

ಘನ ನಿಧಿಧ್ಯಾಸಾನು | ಭವದಿ ನರಹರಿಯಲ್ಲಿ ||3||

ಸಾಕಾರದೊಳಗೆ ನಿ | ರಾಕಾರ ಸಗುಣವು

ಆಕಾರವಿಲ್ಲದೆ ಗುಣವೆನ್ನಿಸಿ ||ಪ||

ಬೇಕಾದ ಇಂದ್ರಿಯ | ಸೋಕಿದಾಗಲೆ ತೋರಿ |

ಏಕಾಂತ ನಿರ್ಗುಣ ಬೆರೆದೈಕ್ಯವು ||ಅ|ಪ||

ಕಾಣುವುದೆ ಸಾಕಾರ | ಕಾಣದು ನಿರಾಕಾರ ||

ಜ್ಞಾನೇಂದ್ರಿಯಗಳಿಂಗೆ ಗೋಚರವಹುದು ||

ಏನೇನು ತೋರದೆ | ತಾನೆಯೆಲ್ಲವನರಿವ ||

ಜ್ಞಾನಾನಂದಾತ್ಮ ನಿರ್ಗುಣವಿಹುದು ||1||

ತೋರುವುದು ಸಾಕಾರ | ತೋರುವುದು ಸಗುಣವು |

ತೋರದಿರ್ಪುದು ನಿರ್ಗುಣಾತ್ಮವದು ||

ತೋರಿ ಸಾಕಾರದೊಳು | ಸೇರಿಸ ಗುಣವ ತಾನೆ |

ಮೀರಿ ನಿಂತಿಹುದದು ನಿರ್ಗುಣಾತ್ಮ ||2||

ಧರೆ ಜಲಾಗ್ನಿಗಳಿವು | ಅರಿಯೆ ಸಾಕಾರವು |

ಮರುತಾಗಸಗಳು ನಿರಾಕಾರವು ||

ಧರೆ ಜಲಾಗ್ನಿಯು ಮಾರು | ತಾಗಸಂಗಳು ಸಗುಣ|

ಅರಿಯುವಾತ್ಮನು ಮಾತ್ರ ನಿರ್ಗುಣನು ||3||

ಸಗುಣ ಸಾಕಾರವೆ ದೇಹೇಂದ್ರಿಯಂಗಳು |

ಸಗುಣ ನಿರಾಕಾರವಂತಃಕರಣವು |

ಸಗುಣ ಸಾಕಾರವೆ ಜಾಗ್ರದವಸ್ಥೆಯು |

ಸಗುಣ ನಿರಾಕಾರವದು ಸ್ವಪ್ನವು ||4||

ನಿರ್ಗುಣ ನಿರಾಕಾರವಾದುದೆ ಸುಪ್ತಿಯು ||

ನಿರ್ಗುಣದೊಳಗಿಲ್ಲ ತೋರಿಕೆಯು ||

ನಿರ್ಗುಣದಲ್ಲಿ ಸಾಕಾರ ಸಗುಣವಿಲ್ಲ ||

ನಿರ್ಗುಣಾನಂದವೆ ಪರಬ್ರಹ್ಮವು ||5||

ಇದ್ದು ಇಲ್ಲದ ಹಾಗೆ | ಇದ್ದುದೆ ಬ್ರಹ್ಮವು |

ಇದ್ದು ಇಲ್ಲದ ಮಾಯೆ ಸಂಬಂಧವು ||

ಶುದ್ಧವು ಬುದ್ಧವು ಅವ್ಯಕ್ತ ವಸ್ತುವು |

ಆದ್ಯಂತವಿಲ್ಲದ ನರಹರಿಯು ||6||

ಏನು ಮಾಯವ ಮಾಡಿದಾ | ಗುರು |

ವೇನುಪಾಯವ ತೋರಿದಾ ||ಪ||

ತಾನೆ ಮಂತ್ರದಿ ಕೂಡಿದಾ | ಸಂ |

ಧಾನ ತಂತ್ರವ ಸಾರಿದಾ ||ಅ|ಪ||

ಮೂರು ಮಾತ್ರೆಯ ಕೂಡಿದಾ | ನಿ |

ರ್ಧಾರ ಸೂತ್ರವ ಪೇಳಿದಾ ||

ಮೂರು ಮಾತ್ರಗಳಿಂದಲೇ | ಓಂ |

ಕಾರವೆಂಬುದ ಸಾರಿದಾ ||1||

ಪ್ರಣವ ಬೀಜವ ತೋರಿದಾ | ಸ |

ನ್ಮನನ ತೇಜವ ಸಾರಿದಾ ||

ಜನನ ಮರಣವ ಕೆಡಿಸಿದಾ | ನಿ |

ರ್ಗುಣ ನಿರಂಜನನೆನಿಸಿದಾ ||2||

ನಾದಬ್ರಹ್ಮವ ತೋರಿದಾ | ಚಿ |

ನ್ನಾದದೊಳು ಮನೆ ಮಾಡಿದಾ ||

ವೇದ ಧರ್ಮವ ಪೇಳಿದಾ | ನಿ |

ರ್ವಾದ ಭಾವವ ತಾಳಿದಾ ||3||

ಸಪ್ತಕೋಟಿ ಸುಮಂತ್ರದ | ನಿ |

ರ್ಲಿಪ್ತ ವಸ್ತುವ ತೋರಿದಾ ||

ಸಪ್ತ ಚಕ್ರವ ಹೂಡಿದಾ | ಸಂ |

ತೃಪ್ತ ಬೋಧೆಯ ಮಾಡಿದಾ ||4||

ಅಮರನಾದವ ಕೂಡಿದಾ | ಸಂ |

ಭ್ರಮ ಸುನಾದದಿ ಮೂಡಿದಾ ||

ಸುಮನ ಸಾಧ್ಯರ ಕುಣಿಸಿದಾ | ನಿ |

ರ್ಗಮಿಸಿ ನರಹರಿ ಎನಿಸಿದಾ ||5||

ಸನ್ಯಾಸವನ್ನು ತಾಳು | ಸಂಸಾರದಲ್ಲೆ |

ಸನ್ಯಾಸಿಯಾಗಿ ಬಾಳು ||ಪ||

ಅನ್ಯ ಸತಿಯರೊಳಾಸೆ | ಯನ್ನು ಬಿಟ್ಟರೆ ಲೇಸು |

ತನ್ನ ಸತಿಯೊಳು ಕೂಡಿ | ಧನ್ಯನೆನ್ನಿಸಬೇಕು |

ಅತಿಯಾಸೆ ಬಿಡಬೇಕು | ತನಗಿದ್ದುದನ್ನು |

ಹಿತವೆಂದುಕೊಳಬೇಕು ||

ಮಿತವಾಗಿ ಭೋಗಿಸುತ | ಜತನದಿಂದಿರುವಾತ |

ವ್ರತನಿಷ್ಠೆಯುಳ್ಳಂಥ | ಚತುರ ಸನ್ಯಾಸಿಯೀತ |1||

ಪರ ದ್ರವ್ಯದಾಸೆಯಿಡದೆ | ತನಗಿದ್ದುದನ್ನು |

ಸ್ಥಿರವೆಂದು ನಂಬಿ ಕೆಡದೆ ||

ಪರರುಪಕರಕಾಗಿ | ಹರುಷದಿ ವೆಚ್ಚ ಮಾಡಿ |

ಇರುವಾತ ಸನ್ಯಾಸಿ | ಪರಮಾರ್ಥದುಲ್ಲಾಸಿ ||2||

ತನು ಮೋಹ ದೂರನಾಗಿ | ಇರ್ಪಾತ ಯೋಗಿ |

ಮನದಾಸೆಯನ್ನು ನೀಗಿ ||

ತನು ಮನ ಧನವನೆಲ್ಲ | ವಿನಯದಿ ನರಹರಿಗಿತ್ತು |

ತನಗೆ ಏನೇನಿಲ್ಲ | ವೆನುವಾತ ಸನ್ಯಾಸಿ ||3||

ನರರೇನು ಬಲ್ಲರು ಗುರುಮಂತ್ರ ಮಹಿಮೆಯ |

ಗುರುಪುತ್ರ ಬಲ್ಲನು ಮಂತ್ರಾರ್ಥವ ||ಪ||

ದುರಿತ ಕೋಟಿಗಳನ್ನು | ಹರಿಸಿ ಪಾವನಗೈದು |

ಪರಮಾರ್ಥವೀಯುವದೀ ಮಂತ್ರಾ ||ಅ|ಪ||

ಘೋರ ಸಂಸಾರ ದುಸ್ತಾರ ಪಾರಾಪಾರ |

ಪಾರುಗೈಯುತಲಿದೆ ಗುರುಮಂತ್ರ ||

ಚೋರ ವೃಶ್ಚಿಕ ಸರ್ಪ ಘೋರ ದಾವಾಗ್ನಿಯ |

ಮೀರಿದ ಭಯಹರ ಗುರುಮಂತ್ರ ||1||

ರೋಗರುಜಿನಂಗಳ | ಹೋಗಲಾಡಿಸಿ ಸೌಖ್ಯ |

ದಾಗರವೆನ್ನಿಸಿತೀ ಮಂತ್ರ ||

ಭೋಗ ಮೋಕ್ಷಗಳ ಸಂ| ಯೋಗ ಮಾಡಿಸಿ ದೈವ |

ಯೋಗದಲ್ಲಿರಿಸುವುದೀ ಮಂತ್ರ ||2||

ಅಣುರೇಣು ತೃಣಕಾಷ್ಠ | ವನು ತುಂಬಿ ತುಳುಕುತ್ತ |

ಘನಕೆ ಘನವಾಗಿಹುದೀ ಮಂತ್ರ ||

ಜನನ ಮರಣಂಗಳ | ನೆನಹಿಲ್ಲದಿರುವುದು |

ಅನುಪಮ ನರಹರಿ ಗುರುಮಂತ್ರ ||3||

ಏನೆಂದು ಹೇಳಲೀ ಬ್ರಹ್ಮದಾಟವನು |

ತಾನಾಗಿ ನುಡಿವುದು ವೇದ ಪಾಠವನು ||ಪ||

ಆನಂದ ರೂಪದ ದಿವ್ಯ ನೋಟವನು |

ತಾನಾಂತು ತೋಪುದು ವಿಶ್ವ ಕೂಟವನು ||ಅ|ಪ||

ಲೆಕ್ಕಕ್ಕೆ ಸಿಕ್ಕದ ವಸ್ತುವಾಗಿತ್ತು |

ಇಕ್ಕಟ್ಟು ಬಿಕ್ಕಟ್ಟು ದೇಹವ ಹೊತ್ತು ||

ಸಿಕ್ಕಷ್ಟು ತಕ್ಕಷ್ಟು ಉಂಡಾಡುತಿತ್ತು |

ದುಃಖಕ್ಕೆ ಸಿಕ್ಕದೆ ನಿರ್ಗುಣವಿತ್ತು ||1||

ವಾದಕ್ಕೆ ಭೇದಕ್ಕೆ ಸಿಕ್ಕದ ವಸ್ತು |

ನಾದಕ್ಕೆ ವೇದಕ್ಕೆ ಸಿಕ್ಕುತ್ತಲಿತ್ತು ||

ಬೋಧಪ್ರಸಾದ ವಿನೋದವಾಗಿತ್ತು |

ಖೇದ ಮೋದಗಳಲ್ಲಿ ಒಂದೆಯಾಗಿತ್ತು ||2||

ಹಿಂದಿಲ್ಲ ಮುಂದಿಲ್ಲ ಬಂಧಂಗಳಿಲ್ಲ |

ಕಂದಿಲ್ಲ ಕುಂದಿಲ್ಲ ಸೌಂದರ್ಯವೆಲ್ಲ ||

ಹೊಂದುತ್ತ ನಿಂದಿತ್ತು ಆನಂದ ಮೂಲ |

ತಂದದ್ದು ತಿಂದದ್ದು ತನ್ನದಾಗಿಲ್ಲ ||3||

ಸರ್ವ ಗಂಧಗಳನ್ನು ತಾನೆ ಹೊಂದಿತ್ತು |

ಸರ್ವ ರಸಗಳ ತಾನೆ ಸ್ವೀಕರಿಸಿತ್ತು ||

ಸರ್ವ ರೂಪಗಳನ್ನು ತಾನೆ ನೋಡಿತ್ತು |

ಸರ್ವ ನಿರ್ಗುಣಮಾಡಿ ತೋರದಂತಿತ್ತು ||4||

ಎಲ್ಲವ ತಾನಾಗಿ ಸ್ಪರ್ಶ ಮಾಡಿತ್ತು |

ಎಲ್ಲ ಶಬ್ದಗಳನ್ನು ಕೇಳುತ್ತಲಿತ್ತು ||

ಎಲ್ಲ ಸುಖಗಳ ತಾನೆ ಹೊಂದುತ್ತಲಿತ್ತು |

ಎಲ್ಲೆಲ್ಲಿ ಹುಡುಕಲು ಕಾಣದಾಗಿತ್ತು ||5||

ಜೀವತ್ವ ದೇವತ್ವ ತಾನೆಯಾಗಿತ್ತು |

ಸಾವು ನೋವುಗಳಿಂಗೆ ದೂರವಾಗಿತ್ತು ||

ಭಾವ ಸಂಜೀವನ ಪಾವನವಿತ್ತು |

ಕೈವಲ್ಯವೆನಿಸಿತ್ತು ನರಹರಿವಸ್ತು ||6||

ಜ್ಞಾನಿಗಳೊಡನಾಡು | ನೀನ | ಜ್ಞಾನವ ನೀಡಾಡು ||ಪ||

ಆನಂದದೊಳು ನೀನೋಲಾಡು |

ಮೌನದಿ ನಿಲ್ಲುತ | ಧ್ಯಾನವ ಮಾಡು ||ಅ|ಪ||

ದುರ್ಗುಣಗಳ ನೀಗು | ಕರಣದ | ವರ್ಗಕೆ ದೂರಾಗು ||

ನಿರ್ಗುಣದಲ್ಲಿ ನಾ | ಸಾಗ್ರಕೆ ಸಾಗು |

ಶೀಘ್ರದಿ ಮುಕ್ತಿಯ | ಮಾರ್ಗಕೆ ಹೋಗು ||1||

ನಿಗಮಾಗಮ ದಾಟಿ | ನಿಲ್ಲುವ | ಬಗೆಯಲ್ಲಿದೆ ಸೂಟಿ ||

ಜಗ ಸುಳ್ಳೆಂಬುದು | ಸೊಗಸುತ ನಾಟಿ ||

ಹಗಲಿರುಳಾಗಿದೆ | ಮಿಗೆ ಜಪಕೋಟಿ ||2||

ಅಕ್ಷರ ಮೂರಕ್ಕೆ | ಒಂದೇ | ಅಕ್ಷರ ಮೂಲಕ್ಕೆ ||

ಅಕ್ಷರ ಮೂರು ನಿ | ರಕ್ಷರವಂತ್ಯಕೆ |

ಸಾಕ್ಷಿಕ ನರಹರಿ | ಯೀಕ್ಷಿಸಲಿಕ್ಕೆ ||3||

ಜಗವೆಲ್ಲ ತುಂಬಿದೆ ಬ್ರಹ್ಮ | ಇಂಥ | ಜಗಕೋಟಿಗಿಂಬಾದ ಬ್ರಹ್ಮ ||ಪ||

ಯುಗಕೋಟಿ ಕಳೆದಿದೆ | ಮಿಗೆ ಹಳೆಯದಾಗದೆ |

ಸೊಗಸಿ ನೂತನವಾಯಿ | ತಗಣಿತ ಬ್ರಹ್ಮಾ ||ಅ|ಪ||

ಕಾಲಕ್ಕೆ ವಶವಲ್ಲ ಬ್ರಹ್ಮ | ಕರ್ಮ |

ಜಾಲಕ್ಕೆ ಸಿಲುಕಿಲ್ಲ ಬ್ರಹ್ಮ ||

ಕಾಲ ಕರ್ಮಗಳ ನಿ| ರ್ಮೂಲ ಮಾಡುತಲಿದೆ |

ಲೀಲೆಯಾಡುತಲಿದೆ | ಮೂಲ ಮಂತ್ರದ ಬ್ರಹ್ಮ ||1||

ಆನಂದ ಮಾತ್ರವೆ ಬ್ರಹ್ಮ | ದಿವ್ಯ |

ಜ್ಞಾನ ಸ್ವರೂಪವೆ ಬ್ರಹ್ಮ ||

ಸ್ವಾನುಭಾವದಿ ತಾನೆ | ತಾನೆ ಗೋಚರಿಸಿದೆ |

ಏನೊಂದು ಗುರುತಿಲ್ಲ | ಧ್ಯಾನಕ್ಕೆ ಹೊರತಲ್ಲ ||2||

ಆದಿಯನಾದಿಯಾಗಿಹುದು | ಸರ್ವ |

ವೇದಂಗಳನು ಕೂಡಿಬಹುದು ||

ಬೋಧಪ್ರಸಾದ ಸಂ | ಪಾದನೆಗೈವುದು |

ವೇದಾಂತದೊಳಗೆ ವಿ | ನೋದ ತಾನಹುದು ||3||

ನೇತ್ರ ಮಧ್ಯದ ಪರಂಜ್ಯೋತಿ | ಸರ್ವ |

ಗಾತ್ರ ಸೂತ್ರಗಳ ಸಂಗಾತಿ ||

ಚಿತ್ರ ವಿಚಿತ್ರ ಸ | ರ್ವತ್ರ ವ್ಯಾಪಕವಾಗಿ ||

ಸತ್ತು ಚಿತ್ತಾನಂದ ನಿತ್ಯ ಪರಿಪೂರ್ಣವು ||4||

ವಿಷಯಕ್ಕೆ ದೂರವು ಬ್ರಹ್ಮ | ಸರ್ವ |

ವಿಷಯ ಸ್ವೀಕಾರದ ಬ್ರಹ್ಮ ||

ವಿಷಯಂಗಳೆಲ್ಲ ನಿ | ರ್ವಿಷಯವೆನ್ನಿಸುತಿದೆ |

ಅಸಮ ನರಹರಿ ಮಂತ್ರ | ವಶವರ್ತಿ ಬ್ರಹ್ಮಾ ||5||

ಮುರಳೀಧರಗೈದಾ | ಮುರಳೀ ನಾದ ಸುಧಾ ಸಂಪದಾ ||ಪ||

ಮರೆಯೊಳಾದ | ಮುರಳೀ ನಾದ |

ಮರೆಯದೆ ಕೇಳಿದ | ನರ

ಮುಕ್ತಿಯ ತಾಳ್ದ ಬಾಳಿದಾ ||1||

ಮರಳಿ ಮರಳೀ | ಕೇಳಿಕೇಳಿ |

ಮರುಳಾದೆನು ನಾ |

ಮರಳದು ಯನ್ನ ಮನರಂಜನಾ ||2||

ಪ್ರಣವ ನಾದ | ಘನ ವಿನೋದಾ |

ಜನಿಸುವ ವರ್ಣಾತೀತ ಪರಾನಾದ ಸ್ವಚ್ಛದಾ ||3||

ನಾದವೊಂದೇ ಕೇಳಿ ನಿಂದೇ |

ವೇದ ವಿಧಾನವ |

ಸಾಧಿಸಲಾಯ್ತೆಂದೇ ದೇಹದೇ ||4||

ಅರ್ಧ ಮಾತ್ರಾ ಶುದ್ಧ ಸೂತ್ರಾ |

ಸಿದ್ಧಿಸಿ ನರಹರಿ ತೋರಿದನೀ ದಾರಿ ಶ್ರೀಹರಿ ||5||

ನೋಡಿಕೊಂಡೆನು | ಶಿವನ | ಕೂಡಿಕೊಂಡೆನು ||ಪ||

ಬೇಡಿಕೊಂಡೆನಮಲ ಮುಕ್ತಿ ಜಾಡು ಕಂಡೆನು ||ಅ|ಪ||

ನಾದಶುದ್ಧನು | ಸಕಲ | ವೇದ ಬದ್ಧನು ||

ಬೋಧೆಯಿಂದ ಒಲಿದು ಬಂದ ಮಂತ್ರ ಸಿದ್ಧನು ||1||

ವರ್ಣ ದೂರನು | ಸರ್ವ | ವರ್ಣ ಪೂರನು ||

ಕರ್ಣದ್ವಾರವೇರಿ ತೋರಿದಂಥ ಧೀರನು ||2||

ಸತ್ತುಚಿತ್ತನು | ಕೂಡಿ | ಸುತ್ತ ಬಂದನು ||

ಪ್ರತ್ಯಗಾತ್ಮ ನಿಜಾನಂದ ನಿತ್ಯಪೂರ್ಣನು ||3||

ಆದಿಯಂತ್ಯವು | ವೊಂದೆ | ಯಾದ ವಸ್ತುವು ||

ವಾದ ರಹಿತವಾದ ಬ್ರಹ್ಮನಾದಪೂರ್ಣವು ||4||

ನರಹರೀಂದ್ರನು | ಜ್ಞಾನ ಶರಧಿ ಚಂದ್ರನು |

ಕರುಣಿಸುತ್ತ ತೋರಲಾಗಿ ಶಿವನ ಕಂಡೆನು ||5||

ಕಣ್ಣು ಗೆದ್ದವ ಶಿವಯೋಗಿ | ತನ್ನ |

ಕಣ್ಣು ಗೆಲ್ಲದೆ ಇರುವವ ಭವ ರೋಗಿ ||ಪ||

ಬಣ್ಣ ಬಹಿ ರೂಪವ ನೀಗಿ | ಎಲ್ಲ |

ವನ್ನು ಶಿವರೂಪೆನ್ನುವವನೇ ವಿರಾಗಿ |ಅ|ಪ||

ನೇತ್ರ ಸರ್ವೇಂದ್ರಿಯ ರಾಜ | ನೇತ್ರ |

ಸೂತ್ರದಿಂದಲೆ ಸರ್ವೇಂದ್ರಿಯ ತೇಜ ||

ನೇತ್ರದಲ್ಲಿದೆ ಶಿವತೇಜ | ಸರ್ವ |

ಚಿತ್ರ ವಿಚಿತ್ರವನರಿವುದೆ ಸಹಜ ||1||

ಕಾಮನರಮನೆ ತನ್ನ ಕಣ್ಣು | ಪರರ |

ಕಾಮಿನಿಯ ಬಯಸಿದರೆ ಬಾಯಲ್ಲಿ ಮಣ್ಣು |

ಕಾಮ ವೈರಿಯು ಇರ್ಪ ಕಣ್ಣು | ಪೂರ್ಣ |

ಕಾಮನಾಗಿರ್ಪವಗೆ ಮುಕ್ತಿಯ ಹಣ್ಣು ||2||

ಕಣ್ಣಿಗೆಂದಿಗು ಕಾಣ ಶಿವನು | ನೋಳ್ಪ |

ಕಣ್ಣೊಳು ತಾನಿರ್ದು ನೋಡುತ್ತಿರುವನು ||

ಕಣ್ಣಿಗೆ ಕಾಂಬುದೀ ಜಗವು | ಯಾರ |

ಕಣ್ಣಿಗೆ ಗೋಚರಿಸದಾತ್ಮ ನಿರ್ಗುಣವು ||3||

ಕಣ್ಣೆಂಬ ಕಣ್ಣಿಯ ಬಿಗಿದು | ಜೀವ |

ರನ್ನಾಳುತಿರ್ಪನು ಶಿವನೆಂದು ಬಗೆದು ||

ಕಣ್ಣಲ್ಲಿ ಕಾಮನ ತೆಗೆದು | ಲೋಕ |

ವನ್ನೆ ನಶ್ವರವೆಂದು ತಾನೆ ಕಿತ್ತೊಗೆದು ||4||

ಕಣ್ಣು ಕಾಮನ ಬೀಡಾಗಿರಲು | ಕಾಂಬ |

ಹೆಣ್ಣು ಹೊನ್ನುಗಳಾಸೆ ಹೆಚ್ಚುತ ಬರಲು ||

ತನ್ನ ತಾ ಮರೆತುಕೊಂಡಿರಲು | ಮುಂದೆ |

ಜನ್ಮ ಕೋಟಿಗೆ ಕಾರಣವಾಗುತಿರಲು ||5||

ಕಣ್ಣಲ್ಲೆ ಪುಣ್ಯ ಪಾಪಗಳು | ತನ್ನ |

ಕಣ್ಣಲ್ಲೆ ಸುಖಿದುಃಖವೆಂಬ ದ್ವಂದ್ವಗಳು ||

ಕಣ್ಣಲ್ಲೆ ಜಾಗ್ರ ಸುಪ್ತಿಗಳು | ತನ್ನ |

ಕಣ್ಣಿನೆಚ್ಚರದಲ್ಲೆ ನರಹರಿಯಿರಲು ||6||

ಹಾರುವ ಹಂಸನ ನೋಡಮ್ಮಾ | ಸುವಿ |

ಚಾರವ ಮಾಡಲು ಪಾಡಮ್ಮಾ ||ಪ||

ಸಾರಾಸಾರವ ತಿಳಿಯಮ್ಮಾ | ಸಂ |

ಸಾರದ ಬಂಧವ ಕಳೆಯಮ್ಮಾ ||ಅ|ಪ||

ಬ್ರಹ್ಮನ ವಾಹನ ಕಾಣಮ್ಮಾ | ಪರ |

ಬ್ರಹ್ಮ ವಿಚಾರವೆ ತಾನಮ್ಮಾ ||

ಕರ್ಮವ ಹರಿಯಲು ಬೇಕಮ್ಮಾ | ಸ |

ದ್ಧರ್ಮವ ಬೆರೆತರೆ ಸಾಕಮ್ಮಾ ||1||

ಮಾನಸವೆಂಬ ಸರೋವರದಿ | ತಾ |

ನಾನಂದದೊಳೀಜಿತು ಭರದಿ ||

ತಾನಿದೆ ತನುಸುಖ ಹಂಬಲದಿ | ಕಡೆ |

ಗೇನೂ ಕಾಣದು ಈ ಜಗದಿ ||2||

ಜಗವೆಲ್ಲವ ತಾ ತುಂಬಿಹುದು | ಸೋ |

ಜಿಗ ಮಾಯೆಯನಿದು ನಂಬಿಹುದು ||

ಯುಗಕೋಟಿಗಳನು ಕಳೆದಿಹುದು | ತಾ |

ನಗಣಿತ ನರಹರಿಯೊಳಗಿಹುದು ||3||

ಬ್ರಹ್ಮಾಂಡ ಕೋಟಿಯ ತುಂಬಿದಾ | ಪರ |

ಬ್ರಹ್ಮ ತತ್ವಾರ್ಥವ ನಂಬಿದಾ ||ಪ||

ಧರ್ಮಾತ್ಮ ಬ್ರಾಹ್ಮಣನೆಂಬುದಾ | ಗುರು |

ಬ್ರಹ್ಮನಿಂ ತಿಳಿದವನೇ ಬುಧಾ ||ಅ|ಪ||

ಅಗ್ನಿಕಾಷ್ಠದೊಳಿರಬಲ್ಲುದು | ಮಹ |

ದಗ್ನಿಯೊಳು ಕಾಷ್ಠವು ನಿಲ್ಲದು ||

ಪ್ರಜ್ಞೆ ಕಾಯದೊಳಿರಬಲ್ಲುದು | ಮಹ |

ಪ್ರಜ್ಞೆಯೊಳು ತನು ತೋರಲೊಲ್ಲದು ||1||

ಜಗದಲ್ಲಿ ಬ್ರಹ್ಮವು ಇರ್ಪುದು | ಈ |

ಜಗ ಬ್ರಹ್ಮದೊಳು ತೋರಲಾರದು ||

ಯುಗದಲ್ಲಿ ಕಾಲವು ತೋರ್ಪುದು | ಈ |

ಯುಗ ಕಾಲಗರ್ಭದಿ ತೋರದು ||2||

ಕತ್ತಲೊಳ್ ಬೆರೆತಿರೆ ತೋರ್ಪುದು | ಈ |

ಕತ್ತಲೆ ಬೆಳಕಿನೊಳ್ ತೋರದು ||

ಚಿತ್ತದೊಳಗೆ ಶಿವ ತೋರ್ಪನು | ಈ |

ಚಿತ್ತ ಶಿವನೊಳು ತೋರದಿರ್ಪುದು ||3||

ಘಟದಲ್ಲಿ ಜಲವಿರೆ ತೋರ್ಪುದು | ಈ |

ಘಟವು ಜಲದೊಳಗಿರೆ ತೋರದು ||

ಘಟದಲ್ಲಿ ಶಿವ ತೋರುತಿರ್ಪನು | ಈ |

ಘಟವು ನರಹರಿಯಲ್ಲಿ ಕಾಣದು ||4||

ಸಗುಣದೊಳ್ ನಿರ್ಗುಣ ತೋರ್ಪುದು | ಈ |

ಸಗುಣ ನಿರ್ಗುಣದಲ್ಲಿ ತೋರದು ||

ನಗದಲ್ಲಿ ಕನಕವು ತೋರ್ಪುದು | ಈ |

ನಗವೇನು ಕನಕದಿ ಕಾಣದು ||5||

ಹಾಲಿನೊಳಗೆ ತುಪ್ಪವಿರ್ಪುದು | ಈ |

ಹಾಲು ತುಪ್ಪದಿ ತೋರಲಾರದು ||

ಸ್ಥೂಲದೊಳಾತ್ಮನು ತೋರ್ಪನು | ಈ |

ಸ್ಥೂಲವಾತ್ಮನೊಳಿರಲಾರದು ||6||

ಮಾಯೆಯೊಳಗೆ ಬ್ರಹ್ಮ ತೋರ್ಪುದು | ಈ |

ಮಾಯೆ ಬ್ರಹ್ಮದಿ ತೋರಲಾರದು ||

ಕಾಯದೊಳಗೆ ಬ್ರಹ್ಮ ತೋರ್ಪುದು | ಈ |

ಕಾಯ ನರಹರಿಯೊಳು ತೋರದು ||7||

ದಗ್ಧ ಪಟದಂತಿರ್ಪ ಯೋಗಿ | ದುರ್ವಿ |

ದಗ್ಧರ ನುಡಿಗೇಳಿ ಬೆರಗಿಲ್ಲವಾಗಿ ||ಪ||

ಮುಗ್ಧನಂತಿಹ ರಾಜಯೋಗಿ | ಸವಿಯು |

ದುಗ್ಧದಲ್ಲಿರುವಂತೆ ಕರುಣಾಳುವಾಗಿ ||ಅ|ಪ||

ಭ್ರಮೆಯಿಲ್ಲದವ ರಾಜಯೋಗಿ | ಕರ್ಮ |

ತಮವನ್ನೆ ಹರಿಸುತ್ತ ರವಿಯಂದವಾಗಿ ||

ಸಮತೆಯುಳ್ಳವ ರಾಜಯೋಗಿ | ದೈವ |

ಸಮವೆಂದು ಕಾಣುವ ಜಗತನ್ನೊಳಾಗಿ ||1||

ಹೊರಗಿರ್ಪುದೆಲ್ಲ ತನ್ನೊಳಗೆ | ಕಂಡು |

ತೆರಪಿಲ್ಲದಂತಪ್ಪ ಪ್ರಭೆಯೊಳು ಮುಳುಗೆ ||

ಕರಿಕನ್ನಡಿಯೊಳಿರುವಂತೆ | ಈ ಬ್ರಹ್ಮ |

ವಿರುವುದ ತನ್ನೊಳಗನುಭವವಾಂತೇ ||2||

ನಾದ ಬಿಂದು ಕಳೆಮೀರಿ | ಸರ್ವ |

ವೇದವೇದಾಂತಾರ್ಥ ತನ್ನೊಳು ತೋರಿ ||

ಹಾದಿ ಮೂರರ ನಡುವೆ ಸಾರಿ | ಸತ್ಯ |

ಬೋಧ ನರಹರಿ ಪಾದ ತಾನಾಗಿ ಸೇರಿ ||3||

ನಡೆಯೇ ಮೌನದ ಲಕ್ಷಣವು | ಸ |

ನ್ನುಡಿಯೇ ಧ್ಯಾನದ ರಕ್ಷಣವು ||ಪ||

ನಡೆನುಡಿ ಮಧ್ಯದಿ ಶಿಕ್ಷಣವು | ಶಿವ |

ನೊಡಲಾದಕ್ಷರ ನಿರ್ಗುಣವು ||ಅ|ಪ||

ಅಕ್ಷರವೆಂಬುದೆ ಪರಬ್ರಹ್ಮಾ | ತನು |

ಸಾಕ್ಷಿಯೆ ತಾನಿದು ನಿಷ್ಕರ್ಮಾ ||

ತಕ್ಷಣ ಪೋಪುದು ದುಷ್ಕರ್ಮಾ | ಜಗ |

ರಕ್ಷಣೆಗಿರುವುದು ಸದ್ಧರ್ಮಾ ||1||

ಮಾನವ ಜನ್ಮವು ಬಲು ಶ್ರೇಷ್ಠ | ಅಭಿ|

ಮಾನವನಳಿದವ ಸಂತುಷ್ಟಾ ||

ಜ್ಞಾನವನಾರ್ಜಿಸಿದವ ಶಿಷ್ಟಾ | ಅ |

ಜ್ಞಾನದೊಳಿರುವವ ಬಲು ದುಷ್ಟಾ ||2||

ವೇದವ ಬಲ್ಲವ ಶಿವಯೋಗಿ | ಬಲು |

ವಾದವ ಮಾಳ್ಪವ ಭವರೋಗಿ ||

ಬೋಧಿಸಬಲ್ಲವ ಗುರುವಾಗಿ |

ಪರ ನಾದವೆ ನರಹರಿ ತಾನಾಗಿ ||3||

ಪತಿತ ಪಾವನ ಜಯಶಂಕರಾ | ಸ|

ದ್ಗತಿದಾತ ಭಕ್ತವ ಶಂಕರಾ ||ಪ||

ಶೃತಿಕೋವಿದನೆ ಶಶಿಶೇಖರಾ | ಸಂ|

ಸೃತಿ ಬಂಧಹರ ಕರುಣಾಕರಾ ||ಅ|ಪ||

ಮುನಿಮಾನಸಾಂಬುಜ ಹಂಸನೇ | ನಿಜ |

ಮನುಮಂತ್ರ ಸಾಧನೋತ್ತಂಸನೇ ||

ಘನ ದುರಿತ ತಾಮಸಧ್ವಸಂನೇ | ನಿ |

ರ್ಗುಣನಾದ ರೂಪ ನಿಜಾಂಶನೇ ||1||

ವಿಷವನ್ನು ಕುಡಿದುಳಿದಾತನೇ | ನಿ |

ರ್ವಿಷಯಾಮೃತದ ಸುಖದಾತನೇ ||

ಅಸಮಾಕ್ಷ ಭಕ್ತ ಸುಪ್ರೀತನೇ | ಸಂ |

ತಸವಿತ್ತು ಪೊರೆವವಿನೀತನೇ ||2||

ಪೃಥ್ವಿ ಗೌರಿಯನೊಡಗೂಡಿದಾ | ಜಲ |

ತತ್ವಗಂಗೆಯೊಳೊಡನಾಡಿದಾ ||

ನೇತ್ರಾಗ್ನಿಯೊಳು ಲಯ ಮಾಡಿದಾ | ಪರ|

ವಸ್ತು ನರಹರಿಯಾಗಿ ಪಾಡಿದಾ ||3||

ಸತ್ತ ಮೇಲುಂಟೆ ಸಮಾಧಿ | ತಾನೆ |

ಸತ್ತಾ ಮಾತ್ರನು ಆದನಿಲವೇ ಸಮಾಧಿ ||ಪ||

ಚಿತ್ತ ನಿಶ್ಚಲವೇ ಸಮಾಧಿ | ಮುಂದೆ |

ಉತ್ತರ ಕ್ರಿಯೆಯಿಲ್ಲದಿಹುದೇ ಸಮಾಧಿ ||ಅ|ಪ||

ತನು ಮೋಹದಳಿವೆ ಸಮಾಧಿ | ತನ್ನ |

ಮನಶಾಂತಿಯಾಗಿರುತಿಹುದೆ ಸಮಾಧಿ ||

ನೆನಹಿಲ್ಲದಿಹುದೇ ಸಮಾಧಿ | ಮುಂದೆ |

ಜನನ ಮರಣಗಳಿಲ್ಲದಿರವೇ ಸಮಾಧಿ ||1||

ಸುಜ್ಞಾನದಿರವೇ ಸಮಾಧಿ | ಲೋಕ |

ದಜ್ಞಾನವಳಿದಚ್ಚ ಅರಿವೇ ಸಮಾಧಿ ||

ಪ್ರಜ್ಞಾ ಸ್ವರೂಪ ಸಮಾಧಿ | ಮಂತ್ರ |

ಮಗ್ನವಾಗಲು ಮನ ಲಯವೆ ಸಮಾಧಿ ||2||

ಅನ್ಯವಳಿದರಿವೇ ಸಮಾಧಿ | ತಾನೆ |

ತನ್ನೊಳು ಲಯವಾಗುತಿಹುದೇ ಸಮಾಧಿ ||

ಶೂನ್ಯವಾದಿರವೇ ಸಮಾಧಿ | ಸರ್ವ |

ವರ್ಣಾಂತವಾದರ್ಧ ಮಾತ್ರೆ ಸಮಾಧಿ ||3||

ಕಲ್ಪನೆಯುಳಿದ ಸಮಾಧಿ | ಸವಿ |

ಕಲ್ಪಸಮಾಧಿಯಲ್ಲಿರುವುದುಪಾಧಿ ||

ಕಲ್ಪನಾತೀತ ಸಮಾಧಿ | ನಿರ್ವಿ |

ಕಲ್ಪಸಮಾಧಿಯೆ ಮುಕ್ತಿಗೆ ಹಾದಿ ||4||

ಗುಪ್ತನಾಗಿಹುದೇ ಸಮಾಧಿ | ನಿ |

ರ್ಲಿಪ್ತ ತಾನಾಗಿಹುದಮಳ ಸಮಾಧಿ ||

ಸುಪ್ತಿಯಂತಿಹುದೇ ಸಮಾಧಿ | ಸಂ |

ತೃಪ್ತಿ ನರಹರಿಯೀಯೆ ಶಾಂತಿ ಸಮಾಧಿ ||5||

ಭಿಕ್ಷಾಟನ ಲೀಲೆ | ಜಗ ಸಂ| ರಕ್ಷಣ ಶಿವಲೀಲೆ ||ಪ||

ಭಿಕ್ಷದಿ ಭುಕ್ತಿಯ | ಭಿಕ್ಷದಿ ಮುಕ್ತಿಯ ||

ತಕ್ಷಣ ಪಡೆಯುವ | ಶಿಕ್ಷಣವೀಯುವ ||ಅ|ಪ||

ಬೇಡುವ ಸರ್ವರೊಳು | ಜ್ಞಾನವ |

ನೀಡುವ ಭಕ್ತರೊಳು ||

ಕೂಡುತಲುಣ್ಣುವ | ಮಾಡಿದ ಅನುಭವ |

ಬೇಡಿದುದೆಲ್ಲವ ನೀಡಲು ಬಲ್ಲವ ||1||

ಯಾರನು ಬಿಡದಂತೆ | ಸರ್ವರ |

ಸೇರಿ ಸುಖಿಪನಂತೇ ||

ಕಾರಣವೆಂಬ ಶ | ರೀರದಿ ನಿಂತೇ ||

ಭೂರಿ ಸುಖವ ಶಿವ | ತೋರಿದನಂತೇ ||2||

ಸಂಚರಿಸುತಲಿರುವಾ | ಭಕ್ತರ |

ಸಂಚಿತಗಳ ಹರಿವಾ ||

ಪಂಚಾನನ ಶಿವ | ಪಂಚಾಮೃತಗಳ ||

ವಂಚಿಸದುಣ್ಣಲು | ಹಂಚಿದ ನರಹರಿ ||3||

ಘಮಘಮಿಸುವ ಸೌಗಂಧಿಕ ಪುಷ್ಪವ |

ಭ್ರಮಿಸಲು ದ್ರೌಪದಿ ತಹೆನೆಂದಾ ||ಪ||

ಅಮಿತ ಪರಾಕ್ರಮಿ | ಭೀಮ ಕುಬೇರನ |

ಕಮಲ ಸರೋವರ ಕೈತಂದಾ ||ಅ|ಪ||

ಮಾರ್ಗದಿ ಕಂಡನು | ಅಗ್ರಜ ಹನುಮನ |

ಶೀಘ್ರದಿ ಪಡೆದನನುಗ್ರಹವಾ ||

ವಿಗ್ರಹದೊಳಗೆ ಧ್ವ | ಜಾಗ್ರದಿ ಪಾರ್ಥಗೆ |

ದಿಗ್ವಿಜಯವನೀಯುವ ವರವಾ ||1||

ಲಕ್ಷಗಟ್ಟಲೆಯ | ಯಕ್ಷರ ಕಾವಲು |

ಲಕ್ಷ್ಯವೆಯಿಲ್ಲದೆ ಸೋಲಿಸಿದ ||

ಸುಕ್ಷೇಮದಿ ಕಮ | ಲಾಕ್ಷಿಗೆಯಿತ್ತ | ನಿ |

ರೀಕ್ಷೆಗೆ ಮೀರಿದ ಕಮಲವಿದ ||2||

ನಡೆಯೆಂದೆನ್ನುವ | ಸೌಗಂಧಿಕವನು |

ನುಡಿರೂಪಿಣಿ ದ್ರೌಪದಿಗಿತ್ತಾ ||

ನಡೆನುಡಿ ಮಧ್ಯದಿ | ಅಡಗಿದ ಭೀಮನು |

ನಡೆದನು ನರಹರಿಗೆರಗುತ್ತಾ ||3||

ಬ್ರಹ್ಮಾತ್ಮ ಐಕ್ಯದ ಸಾಧನೆ | ಗುರು |

ಬ್ರಹ್ಮರೇಳಿರುವಾತ್ಮ ಶೋಧನೆ ||ಪ||

ನಿರ್ಮಲ ಮುಕ್ತಿ ಸಂಪಾದನೆ | ನಿ |

ಷ್ಕರ್ಮ ಯೋಗವೆ ಜ್ಞಾನ ಬೋಧನೆ ||ಅ|ಪ||

ಆದಿತ್ಯಚಂದ್ರರು ಮುಳುಗಲು | ಸ |

ದ್ಬೋಧಾ ಪ್ರಕಾಶವು ಬೆಳಗಲು ||

ನಾದಾಂತ ಚಿದ್ಬಿಂದು ಮೊಳಗಲು | ಚಿ |

ನ್ನಾದ ಚಿತ್ಕಳೆ ಕೂಡಿಹೋಗಲು ||1||

ನಾದ ಪ್ರವೇಶವೆ ಬ್ರಹ್ಮನು | ಸ |

ದ್ವೇದ ಪ್ರಕಾಶವೆ ವಿಷ್ಣುವು ||

ಬೋಧಾ ವಿಲಾಸವೆ ರುದ್ರನು | ಜಗ |

ದಾದಿ ಬ್ರಹ್ಮವ ಕೂಡುತಿರ್ಪರು ||2||

ಈಡಪಿಂಗಳೆ ಕೂಡಿ ನಿಲ್ಲಲು | ನಡು |

ನಾಡಿ ಸುಷುಮ್ನೆಯ ಸಲ್ಲಲು ||

ಗೂಢ ಬ್ರಹ್ಮವು ಮೈದೋರಲು | ಆ |

ರೂಢ ನರಹರಿ ಮುಕ್ತಿಯೀಯಲು ||3||

ಬಯಲಾಟವಾಡುತಾನೆ | ಬಯಲೆಲ್ಲ ತುಂಬಿ ತಾನೆ ||ಪ||

ಭಯವಿಲ್ಲವೆನ್ನುತಾನೆ | ನಯನಕ್ಕತೀತ ಶಿವನೆ |

ಜಗಕೆಲ್ಲ ಸೂತ್ರಧಾರಿ | ಜಗವೆಲ್ಲ ತುಂಬಿ ತೋರಿ ||

ಯುಗವೆಲ್ಲವನ್ನು ಮೀರಿ | ಸೊಗಸಾಗಿ ನಿರ್ವಿಕಾರಿ ||1||

ತಾನಾದ ಸೂತ್ರಧಾರಿ | ನಾನಾದೆ ಪಾತ್ರಧಾರಿ ||

ತಾನಾಗಿ ದಾರಿ ತೋರಿ | ಆನಂದದಲ್ಲಿ ಸೇರಿ ||2||

ಮದ್ದಳೆಯ ಬಾರಿಸುತ್ತ | ಶಬ್ದವನು ಏರಿಸುತ್ತ |

ಎದ್ದೆದ್ದು ಕುಣಿಯುತಾನೆ | ಶುದ್ಧ ಸ್ವರೂಪ ತಾನೆ ||3||

ತಾಳಕ್ಕೆ ಕುಣಿಯಬಲ್ಲಾ | ಮೇಳಕ್ಕೆ ಮಣಿಯಲೊಲ್ಲ |

ಕಾಲಕ್ಕೆ ಸಿಕ್ಕಲಿಲ್ಲಾ | ಸೋಲಾಗದಿವನ ಲೀಲಾ ||4||

ವೇಷಗಳ ತಾಳಿ ಬಂದಾ | ಭಾಷೆಗಳ ಹೇಳಿ ನಿಂದಾ |

ಭೂಷಣಗಳೆಲ್ಲ ತಂದಾ | ಈಶ್ವರನು ನರಹರೀಂದ್ರಾ ||5||

ನಾದದೊಳಗೆ ಬ್ರಹ್ಮಾ | ಇರುತಿಹ |

ಶೋಧಿಸಿ ತಿಳಿಯಮ್ಮಾ ||ಪ||

ನಾದ ವೋಂಕಾರವು | ನಾದ ಝೇಂಕಾರವು ||

ಸಾಧಿಸಿದರೆ ಪರ | ನಾದ ನೀನಮ್ಮ ||ಅ|ಪ||

ನಡುನಾಡಿಯೊಳಿಹುದು | ವರ್ಣವ |

ಒಡಗೂಡಿಯೆಬಹುದು ||

ಒಡಲಿಗೆ ಸಾಕ್ಷಿಯು | ಕಡು ಸುಖಾಪೇಕ್ಷಿಯು

ನುಡಿ ರೂಪವ ನಾಂ | ತೊಡನೈತಹುದು ||1||

ಗಂಗಾ ಯಮುನೆಗಳು | ಸೇರಲು |

ಮಂಗಳ ನಾದಗಳು ||

ಹೊಂದುತ ನಿಲ್ಲಲು | ಶೃಂಗವನೇರಲು ||

ಶೃಂಗಾರವು ಬಲು | ಶೃಂಗಾಟಕದೊಳು ||2||

ಸಗುಣ ನಿರ್ಗುಣದೊಳಗೆ | ಕೂಡುತ |

ನಿಗಮಾಗಮಗಳಿಗೆ ||

ಸೊಗಸಿದ ಕಳೆಗೆ | ತಗಲಿಯೆ ಬೆಳಗೆ ||

ಸುಗಮದಿ ನರಹರಿ | ಜಗದಾತ್ಮನೆ ಸರಿ ||3||

ಯೋಗಿಗಳೊಳು ಬ್ರಹ್ಮ | ಜ್ಞಾನಿಯೆ

ಯೋಗಿ ಶ್ರೇಷ್ಠನಮ್ಮಾ ||ಪ||

ಭೋಗಿಪ ವಿಷಯವ ತ್ಯಾಗವ ಮಾಡುವ ||

ಯೋಗದೊಳೀಭವ | ರೋಗವನಳಿಯುವ ||ಅ|ಪ||

ಬೀಜದ ಗುಣದಂತೇ | ವೃಕ್ಷವಿ |

ರಾಜಿಸುತಿರುವಂತೇ ||

ಸೋಜಿಗವಾಗಿಹ | ಈ ಜಗ ಬ್ರಹ್ಮದ |

ತೇಜದಿ ಮೆರೆವುದ | ನೈಜದಿ ತಿಳಿದವ ||1||

ಸಹಜ ಯೋಗಿಯಾಗಿ | ಏನೂ |

ಮಹಿಮೆ ತೋರನಾಗಿ ||

ಸಹಜ ಯಜ್ಞ ಪರ | ನಹನು ನಿರಂತರ ||

ಸಹಜಾನಂದದ | ಮಹಿಮೆಯ ಪೊಂದಿದ ||2||

ತಾರಕ ಯೋಗದೊಳು | ಶಿವನೊಳು |

ಸೇರಿ ಹಗಲುಯಿರುಳು ||

ಸಾರುತ ಶಿವನ ವಿ | ಚಾರವ ತಾನಿಹ |

ಧೀರನು ನರಹರಿ | ಪಾರಮಾರ್ಥ ಸಿರಿ ||3||

ಯೋಗ ಮಾಯೆಯ ಗೆಲ್ಲಬೇಕು | ಶಿವ |

ಯೋಗಿಯೆಂದೆನಿಸಲು ಜ್ಞಾನವೆ ಸಾಕು ||ಪ||

ಭೋಗದಾಸೆಯು ಹೋಗಬೇಕು | ಸುವಿ |

ರಾಗದಿಂದಲೆ ಮುಕ್ತಿ ಸಾಧಿಸಲು ಬೇಕು ||ಅ|ಪ||

ಕರ್ಮ ಯೋಗದಿ ಮುಕ್ತಿಯಿಲ್ಲಾ | ಈ |

ಕರ್ಮ ಜನ್ಮಂಗಳಿಗೆ ಮೂಲವಾಯ್ತಲ್ಲಾ ||

ಕರ್ಮ ಜ್ಞಾನಕೆ ದೂರವಲ್ಲಾ | ದು |

ಷ್ಕರ್ಮಿಗೆಂದಿಗು ಜ್ಞಾನದನುಭವವಿಲ್ಲಾ ||1||

ಇದ್ದದ್ದು ಇದ್ದಂತೆ ತಿಳಿದು | ನಿಜ |

ವಿದ್ದುದ ತನ್ನಲ್ಲಿ ಅನುಭವ ತಳೆದು ||

ಶುದ್ಧದೊಳೆಲ್ಲವನು ಕಳೆದು | ಸಂ |

ಸಿದ್ಧ ಜ್ಞಾನವ ಪಡೆದಲ್ಲಿ ತಾನುಳಿದು ||2||

ಬಯಕೆಯೆಲ್ಲವು ಬಯಲಾಗಿ | ತ |

ನ್ಮಯತೆಯಿಂ ಬ್ರಹ್ಮವೆ ತಾನೆನಲಾಗಿ ||

ಪ್ರಿಯವಿದ ಪ್ರಿಯವೆಲ್ಲ ನೀಗಿ | ನಿ |

ಷ್ಕ್ರಿಯ ಬ್ರಹ್ಮ ನರಹರಿಯೊಳು ಲಯವಾಗಿ ||3||

ಜ್ಞಾನಯೋಗಿಗೆ ಮಹಿಮೆಯಿಲ್ಲಾ | ಶಿವ |

ಜ್ಞಾನದಲ್ಲಿರುವುದೀತನ ಮಹಿಮೆಯೆಲ್ಲಾ ||ಪ||

ತಾನೆ ಶಿವನಾಗಿರಬಲ್ಲಾ | ತನ |

ಗೇನು ಬೇಕಿಲ್ಲವೆನ್ನುವ ಮಂತ್ರಬಲ್ಲಾ ||ಅ|ಪ||

ಕೂಡಿ ಮಹಿಮೆಯ ಕಳೆಯುವರು | ಶಿವ |

ಕೂಡಿಹನು ತಮ್ಮೊಳಗೆಂದರಿಯದವರು ||

ರೂಢಿಯೊಳು ಹುಟ್ಟಿ ಸಾಯುವರು | ತಪ |

ಮಾಡಿ ಗಳಿಸಿದುದನ್ನು ವೆಚ್ಚ ಮಾಡುವರು ||1||

ರೋಗಿ ಪಥ್ಯವ ಮಾಡಿದಂತೇ | ಹಠ |

ಯೋಗಿಗಳಿಗೆಲ್ಲ ಫಲದಾಸೆಯ ಚಿಂತೇ ||

ಯೋಗಸಿದ್ಧಿಗೆ ವಿರತಿಯಾಂತೇ | ಫಲ |

ವಾಗಲಾಗಲೆ ಬಿಡದು ಕಾಮ್ಯದ ಚಿಂತೆ ||2||

ಕರ್ಮಂಗಳಿಲ್ಲದ ಯೋಗ | ಶಿವ |

ಧರ್ಮಮರ್ಮವನರಿತು ಬೆರೆವಂಥ ಯೋಗ ||

ನಿರ್ಮಲ ಜ್ಞಾನ ಪ್ರಯೋಗ | ನಿ |

ಷ್ಕರ್ಮಸಿದ್ಧಿಯೆ ನರಹರಿ ಜ್ಞಾನಯೋಗ ||3||

ಬಾಯಿಯಲ್ಲೆ ವಿಶ್ವ ರೂಪವಾ | ಮಹತ್ವವಾ |

ತಾಯಿಗಾಗಿ ಕೃಷ್ಣ ತೋರುವಾ ||ಪ||

ಬಾಯೊಳುಂಟು ಬ್ರಹ್ಮ ಕೋಟಿ |

ಬಾಯೊಳುಂಟು ವಿಷ್ಣು ಕೋಟಿ ||

ಬಾಯೊಳುಂಟು ರುದ್ರ ಕೋಟಿ |

ಮಾಯಕಾರಗಾರು ಸಾಟಿ ||ಅ|ಪ||

ಸಕಲ ದೇವತಾ ಸ್ವರೂಪವಾ | ರಮಾಧವಾ |

ಮುಖದೊಳಿರ್ಪುದನ್ನು ತೋರುವಾ ||

ಅಖಿಲ ಬ್ರಹ್ಮಸುರ ಮುನೀಶ |

ನಿಕರ ಮಾಡೆ ವೇದಘೋಷ ||

ಸುಕರವಾಗೆ ಚಿದ್ವಿಲಾಸ |

ಪ್ರಕಟಿಸಿದ್ದ ದ್ವಾರಕೀಶ ||1||

ಧರೆ ಜಲಾಗ್ನಿ ಮಾರುತಾಂಬರ | ಸುಧಾಕರ

ವರದಿ ವಾಕರಾತ್ಮ ವಿಸ್ತರ ||

ಕಿರಣ ಕೋಟಿ ಕಾಂತಿಯಿಂದ |

ಪರಮ ಪುಣ್ಯಮೂರ್ತಿ ನಿಂದ ||

ಮೆರೆವ ಕೋಟಿ ಜಗಗಳಂದ |

ಶರಿರದಲ್ಲೆ ತೋರಿನಿಂದ ||2||

ಪ್ರಣವ ರೂಪಿಯಾಗಿ ತೋರಿದಾ | ಯಶೋದೆಯ |

ಮನಕೆ ಸಂತಸವನು ಬೀರಿದಾ ||

ಅನಘ ಮಂತ್ರಜನಿಪ ತಂತ್ರ |

ದನುವ ತೋರಿ ಕಾಯ ಯಂತ್ರ ||

ಜನನ ಮರಣ ಗೆಲ್ವತಂತ್ರ |

ವೆನುವ ನರಹರೀ ಸ್ವತಂತ್ರ ||3||

ಲಯಕರ್ತ ನೀ ರುದ್ರದೇವಾ | ಸಂ |

ಶಯವಿಲ್ಲದೀತನ ಪೂಜೆಯಂಗೈವಾ ||ಪ||

ದಯದಿಂದ ಸುಜ್ಞಾನವೀವಾ | ಸ |

ತ್ಕ್ರಿಯೆಯಲ್ಲಿ ಕ್ರಿಯೆಯನ್ನು ಲಯ ಮಾಡುತಿರುವಾ ||ಅ|ಪ||

ಕಸವನ್ನು ರಸದಲ್ಲಿ ಲಯಿಸೀ | ಷ |

ಡ್ರಸ ಮಾಡಿ ದೇಹದೊಳದನೆಲ್ಲ ಲಯಿಸೀ ||

ಹೊಸದಾಗಿ ಚೈತನ್ಯಗೊಳಿಸೀ | ದು |

ರ್ವಿಷವನಮೃತವ ಮಾಳ್ಪನೆಲ್ಲವ ಲಯಿಸೀ ||1||

ತನುವನ್ನು ಮನದಲ್ಲಿ ಲಯಿಸಿ | ಈ |

ಮನವನ್ನು ತನ್ನಲ್ಲಿ ಸಂಪೂರ್ಣ ಲಯಿಸೀ ||

ತನುಭಾವವೆಲ್ಲವ ಜಯಿಸೀ | ನಿ |

ರ್ಗುಣದಲ್ಲಿ ನಿಲಿಸುವ ಸುಜ್ಞಾನವೆನಿಸೀ ||2||

ನಯನಾಶ್ರಯವ ಮಾಡಿ ನಿಂದು | ಬಹು |

ಕ್ರಿಯೆಗೆ ಕಾರಣನಾದ ಜಾಗ್ರದೊಳು ಬಂದು ||

ಲಯವ ಮಾಡಿದನಲ್ಲೆ ನಿಂದು | ನಿ |

ಷ್ಕ್ರಿಯ ಸುಷುಪ್ತಿಯೊಳಿದ್ದು ನರಹರಿಯಿಂದು ||3||

ಶರೀರವು ಯನಗಿಲ್ಲ | ಕರಣಂಗಳೆನಗಿಲ್ಲ ನಾನು ಯಾರು ||ಪ||

ಶರಿರ ಕರಣಂಗಳು ತೋರುತ್ತಲಿವೆ ಯೆನಗೆ ನಾನು ಯಾರು ||ಅ|ಪ||

ಮೂರವಸ್ಥೆಯೊಳೇಕಾಕಾರವಾಗಿರುತಿರ್ಪೆ ನಾನು ಯಾರು||

ಯಾರು ಕಾಣರು ಯನ್ನ ನಾನು ನೋಡದುದಿಲ್ಲ ನಾನು ಯಾರು ||1||

ಜಗವಿಲ್ಲ ಯುಗವಿಲ್ಲ | ಹಗಲು ರಾತ್ರಿಗಳಿಲ್ಲ | ನಾನು ಯಾರು||

ಜಗವನ್ನು ಯುಗವನ್ನು ಹಗಲು ರಾತ್ರಿಯ ಬಲ್ಲೆ ನಾನು ಯಾರು ||2||

ಯಾರು ನೀನೆಂದೆನ್ನ | ಯಾರು ಕೇಳ್ವವರಿಲ್ಲ ನಾನು ಯಾರು ||

ಯಾರೆನಗೆ ಎದುರಿಲ್ಲ | ಬೇರೆಂಬುದೇನಿಲ್ಲ ನಾನು ಯಾರು ||3||

ಆಕಾರ ಯನಗಿಲ್ಲ | ಸೋಕಿದ್ದು ಏನಿಲ್ಲ ನಾನು ಯಾರು ||

ಬೇಕು ಬೇಡೆನ್ನದೆ | ಮೂಕಾಯ್ತು ಜಗವೆಲ್ಲ ನಾನು ಯಾರು ||4||

ನಾನೆ ಪರವಸ್ತುವು ಜ್ಞಾನ ಸಮಸ್ತವು ನಾನು ಯಾರು ||

ಶ್ರೀ ನರಹರೀಂದ್ರನ ಧ್ಯಾನದಲ್ಲಿರುವಂಥ ನಾನು ಯಾರು ||5||

ಬಿಡಲುಂಟೆ ಸಂಸಾರಾ | ನಿನ್ನ |

ಒಡಲಾಯಿತಿದು ಪೂರಾ ||ಪ||

ಒಡಲಿನ ತೊಡಕನ್ನು | ಬಿಡಿಸಿಕೊಂಡಾತನು |

ಕಡೆ ಮಾಡಿ ಬಿಡುವನು | ಜಡ ತನುವಿದನು ||ಅ|ಪ||

ಸನ್ಯಾಸಿಯಾದಾತನು | ಒಡಲ |

ನಿನ್ನೇಕೆ ಹಿಡಿದಿರ್ಪನು ||

ಇನ್ನಾವ ಸಂಸಾರ | ತನ್ನ ಕೂಡದೆ ದೂರ |

ವೆನ್ನುವಾತನೆ ಧೀರ | ಅನ್ಯ ತಾನೆ ಶರೀರ ||1||

ಜಡವಾದುದೀ ಶರೀರ | ಇದರ |

ಒಡನಾಟ | ನಿಸ್ಸಾರ ||

ಬಿಡಲಾರದಾತಂಗೆ | ಬಿಡದಂಟಿತಾಮಿಗೆ |

ಕಡು ದುಃಖ ಬಾಧೆಗೆ | ಕಡೆಯಿಲ್ಲದಂತಾಗೆ ||2||

ಸಂಸಾರದೊಳಗಿದ್ದು | ಸರ್ವ |

ಸಂಶಯಂಗಳ ಗೆದ್ದು ||

ಹಂಸ ಮಧ್ಯದ ಪರಮ | ಹಂಸ ನರಹರಿ ನಾಮ |

ಹಿಂಸೆಯಳಿವ ನೇಮ | ಸಂಸಾರ ಪರಿಣಾಮ ||3||

ಗುರುವಿಗೆ ಗುಟುಕು ನೀರು | ಪರಮಾರ್ಥವಯ್ಯ ||ಪ||

ಅರಿತ ಶಿಷ್ಯನಿಗಿದು ಮುಳುಗು ನೀರಯ್ಯ ||ಅ|ಪ||

ಬರೆಯದ ಗ್ರಂಥವು ಗುರು ಬೋಧೆಯಯ್ಯಾ |

ನಿರುತ ವೋದಿದರಾತ ಗುರುವೆ ಕಾಣಯ್ಯ ||1||

ಗುರುವಾಕ್ಯ ವೇದವು ಶಾಸ್ತ್ರಪುರಾಣ |

ಪರಮಾರ್ಥವೆನಿಸಿತು ಸದ್ಬೋಧೆ ಕಾಣಾ ||2||

ಪರಶಿವನವತಾರ ದುರಿತ ವಿಕಾರ |

ಹರಿಯುವ ನರಹರಿ ಸದ್ಗುರುವೀರಾ ||3||

ಎಂತಿರುವನು ಜ್ಞಾನಿ | ಚಿಂತೆಯಿಲ್ಲದ ಮೌನಿ |

ಸಂತ ನಿರ್ಗುಣಾತ್ಮಾನು ಸಂಧಾನಿ ||ಪ||

ಪಂಥ ಪೌರುಷ ಹಾನಿ | ಎಂತ ನಿಂದವಧಾನಿ ||

ಅಂತರಂಗದೊಳಾಂತ ಶಾಂತಿ ನಿಧಾನಿ ||ಅ|ಪ||

ಜಗದ ಮೇರೆಯ ಖಾರಿ | ದಿಗಿಲೆಂಬುದನು ತೂರಿ ||

ನಿಗಮಾಗಮದ ಪಾದ ಯುಗದ ಸಂಚಾರಿ ||

ಹಗಲಿರುಳುವೊಂದಾಗಿ | ಸೊಗಸಿನಿಂದಿಹ ಯೋಗಿ |

ಭಗಳಾಂಬಿಕೆಯ ಪದಯುಗ ಪರನಾಗಿ ||1||

ಏನು ಕೋರಿಕೆಯಿಲ್ಲ | ತಾ ನೀ ಕೋರಿಕೆಯೆಲ್ಲ |

ಜ್ಞಾನಮಾರ್ಗದೊಳಿಲ್ಲ ಯೆಂಬುದ ಬಲ್ಲಾ ||

ಹಾನಿ ವೃದ್ಧಿಗಳೆಲ್ಲ | ಸ್ವಾನುಭಾವದೊಳಿಲ್ಲ ||

ಈ ನಿಧಾನದ ಸಂವಿಧಾನವ ಬಲ್ಲಾ ||2||

ಇದಿರಿಟ್ಟು ತೋರಿಸಲು ಅದು ಬೇರೆಯಿರ್ಪುದೇ |

ಸದಮಲ ಬ್ರಹ್ಮವೆ ನೀನಾಗಿರಲು ||

ಅದು ನೀನೆಯೆ | ನ್ನುತ್ತಲಿದೆ ತತ್ವಮಸಿ ವಾಕ್ಯ ||

ವಿದತಿಳಿದರೆ ನೀನೆ ಬ್ರಹ್ಮದೊಳೈಕ್ಯ ||3||

ಬಳ್ಳದಳತೆಗೆ ಮೀರಿ | ಬಳ್ಳಾರಿಯನು ಸೇರಿ ||

ಅಲ್ಲೆ ಬ್ರಹ್ಮವ ತೋರಿ ತಾನೆಲ್ಲ ತೂರಿ

ಚೆಲ್ವ ನರಹರಿ ಸೂರಿ | ಯಲ್ಲೆ ನಿಂತಿಹ ಶೌರಿ ||

ಉಲ್ಲಾಸದೊಳು ಸಾರಿ ಭಕ್ತ ಸಂಸಾರಿ ||4||

ಹಡಗು ಸಾಗಿದೆ ನೋಡು ಹಡಗು | ಭವ |

ಕಡಲು ದಾಂಟಲಿಕಿದು ತಾನೊಂದು ಬೆಡಗು ||ಪ||

ನಡೆಸುವಾತನು ಗುರುವೆ ಕಡೆಗು | ಭಯ |

ಪಡಲು ಕಾರಣವಿಲ್ಲ ದೃಢಜ್ಞಾನ ಹಡಗು ||ಅ|ಪ||

ಎಂದೆಂದು ಮುಳುಗದಂತಿಹುದು | ಬಲು |

ಮಂದಿ ಹತ್ತಿದರಿನ್ನು ಜಾಗವಿರುತಿಹುದು ||

ಇಂದೆ ಹತ್ತಿಯೆ ನೋಡಬಹುದು | ಗ |

ರ್ವಾಂಧರಿಗೆ ಜಾಗ ಎಂದೆಂದು ಸಿಗದಿಹುದು ||1||

ಬೇಕಾದುದಿಲ್ಲಿ ಸಿಕ್ಕುವುದು | ಬಲು |

ಸೌಕರ್ಯವಿಲ್ಲಿ ಪ್ರಯಾಣ ಮಾಡುವುದು ||

ಏಕಾಂತ ಸಾಧಿಸಬಹುದು | ನಿ |

ರ್ವ್ಯಾಕುಲ ಸುಜ್ಞಾನ ಸದ್ಬೋಧ ಪಡೆದು ||2||

ಕಡಲುಗಳ್ಳರಿಗೆ ದಕ್ಕದಿದು | ಬಲು |

ತುಡುಗ ವೈರಿಗಳಿಂಗೆ ಕಾಣದಂತಿಹುದು ||

ಬಡಿವಾರ ಮಡಿಗೆ ಸಿಲುಕ ದು | ಜಗ |

ದೊಡೆಯ ನರಹರಿ ಸಾರಥಿಯಾದ ಹಿಡಿದು ||3||

ಗುರುವೇ ಪರಶಿವನು | ಶ್ರೀ ಗುರುವರನೇ ಕೇಶವನು ||ಪ||

ಗುರುವೇ ಪರಬ್ರಹ್ಮಾ | ಸರ್ವರ | ಅರಿವೇ ತಾನಹನು ||ಅ|ಪ||

ಬರೆದನು ಮಡಿವಾಳ | ಯಾರಿಗು | ಅರಿಯದ ಬರಹಗಳಾ ||

ಅರಿಯದು ಗುರುಕೀಲ | ಮರ್ಮವು | ಪರಮಾತ್ಮನ ಲೀಲಾ ||1||

ಗವಿಯೊಳಗಿಹುದಲ್ಲಾ | ಕತ್ತಲು | ರವಿಯಿಂದಳಿದಿಲ್ಲಾ ||

ನವಜ್ಯೋತಿಗೆ ನಿಲ್ಲ | ದೀಪರಿ | ವಿವರವಗುರು ಬಲ್ಲಾ ||2||

ತನುವೇ ಸಂಸಾರ | ಮೋಹವು | ಜನಿಸಲು ವಿಸ್ತಾರ ||

ಘನ ಬೋಧಾಸಾರ | ನಿರ್ಗುಣ | ವೆನುವುದೆ ಸುವಿಚಾರ ||3||

ದುರ್ಗುಣವಜ್ಞಾನ | ಕೇವಲ | ನಿರ್ಗುಣ ಸುಜ್ಞಾನ |

ಆಗ್ರಹವಭಿಮಾನ | ಇಂದ್ರಿಯ | ನಿಗ್ರಹ ನಿಜ ಜ್ಞಾನ ||4||

ಕಾಮ್ಯವೆ ಭವ ಮೂಲ | ನಿಜ ನಿ| ಷ್ಕಾಮ್ಯವೆ ಶಿವಲೀಲಾ ||

ರಮ್ಯವು ಶೃತಿಜಾಲ | ನರಹರೀ ಸೌಮ್ಯ ಬೋಧಶೀಲಾ ||5||

ಜ್ಞಾನಾಸ್ತ್ರಕಿನ್ನಿದಿರಿಲ್ಲಾ | ಅ |

ಜ್ಞಾನಸೈನ್ಯವುನುಚ್ಚು ನುರಿಯಾಯಿತಲ್ಲಾ ||ಪ||

ಸ್ವಾನಂದ ಸಾಮ್ರಾಜ್ಯವೆಲ್ಲಾ | ಅನು |

ಮಾನವಿಲ್ಲದೆ ತಾನೆ ವಶವಾಯಿತಲ್ಲಾ ||ಅ|ಪ||

ಆನೆ ಸಿಂಹವಗೆಲ್ಲಲಹುದೇ | ಅ |

ಜ್ಞಾನಜ್ಞಾನದ ಮುಂದೆ ನಿಲ್ಲಲಾಗುವುದೇ ||

ಭಾನುವುದಿಸಲು ಕತ್ತಲಿಹುದೇ | ಸು |

ಜ್ಞಾನವಿರಲಜ್ಞಾನ ತಮವಿರುತಿಹುದೇ ||1||

ಮನ ಸೃಷ್ಟಿಗಿದು ಬ್ರಹ್ಮಾಸ್ತ್ರ | ದು |

ರ್ಮನ ವೃದ್ಧಿಗಾಯ್ತಿದು ಘನವೈಷ್ಣವಾಸ್ತ್ರ ||

ಮನಲಯದ ಪಾಶುಪತಾಸ್ತ್ರ | ನಿ |

ರ್ಗುಣ ಬ್ರಹ್ಮಸಾಧನೆಗೆ ಸನ್ಮೋಹನಾಸ್ತ್ರ ||2||

ಯೋಗವೆನ್ನಿಸುತಿರು ವಸ್ತ್ರ | ನಿಜ |

ಯಾಗ ಯಜ್ಞಂಗಳಿಗಾಗ್ನೇಯಾಸ್ತ್ರ ||

ತ್ಯಾಗಿ ಪಡೆದಿಹ ದಿವ್ಯಾಸ್ತ್ರ | ಸುಖಿ |

ಯಾಗಿ ನರಹರಿ ಕೊಟ್ಟ ದಿವ್ಯ ಮಂತ್ರಾಸ್ತ್ರ ||3||

ಅಮೃತ ಸಂಜೀವಿನಿ ಮಹಾವಿದ್ಯಾ ||

ಅಮರರಾರಿಗು ತಿಳಿಯಲಸಾಧ್ಯ ||ಪ||

ಕ್ರಮವ ಬಲ್ಲನು ಶುಕ್ರನೀ ವಿದ್ಯಾ |

ಶ್ರಮದಿ ಕಲಿತಂಥ ಕಚನಿಗೆ ವೇದ್ಯಾ ||ಅ|ಪ||

ಸತ್ತ ದೈತ್ಯರು ಬದುಕುವ ವಿದ್ಯಾ |

ಮೆತ್ತಗಾದವರೇಳುವ ವಿದ್ಯಾ ||

ದೈತ್ಯರಿದರ ಸಹಾಯವ ಪಡೆದು |

ಮತ್ತೆ ಯುದ್ಧವ ಮಾಳ್ಪರು ನಡೆದು ||1||

ದೇವಯಾನೆಯು ಶುಕ್ರನ ಪುತ್ರಿ |

ದೇವ ಗುರುಸುತ ಕಚನೊಳು ಮೈತ್ರಿ ||

ಭಾವದಿಂದವಗರುಹಲಾ ಮಂತ್ರ |

ಪಾವನಾತ್ಮನು ಕಚನರಿತ ತಂತ್ರ ||2||

ಸತ್ತು ಶುಕ್ರನ ಗರ್ಭವ ಸೇರಿ |

ಮತ್ತೆ ಹುಟ್ಟಿದ ಮಂತ್ರಾವತಾರಿ ||

ಸತ್ತು ಹುಟ್ಟು ಮರ್ಮವ ತೋರಿ |

ಸತ್ಯ ನರಹರಿ ಕಚನಿಗಾಧಾರಿ ||3||

ಒಡೆಯ ನಿನ್ನಡಿಯ ನಾಂ | ಪಿಡಿಯಲಾದೆನು ಧನ್ಯ ||

ಕಡೆಯಾಯಿತೆನ್ನಯ ಕಡುದೈನ್ಯ ||ಪ||

ಕಡೆಗೆಯೆಲ್ಲವು ಶೂನ್ಯ | ಒಡಲೆಂಬುದೆನಗನ್ಯ ||

ಮೃಢರೂಪ ಗುರು ನಿನ್ನದೀ ಪುಣ್ಯಾ ||ಅ|ಪ||

ಹುಟ್ಟಿ ಸಾಯುವ ದೇಹ | ಘಟ್ಟಿಯೆನ್ನುವ ಮೋಹ |

ಪುಟ್ಟಿದಾತನಿಗುಂಟೆ ನಿರ್ವಾಹ ||

ಕುಟ್ಟಿ ಯಮದೂತರು | ಕಟ್ಟಿ ಕೊಂಡೊಯ್ವರು |

ಥಟ್ಟನಾತನ ಬಿಡಿಸುವವರಾರು ||1||

ವೇದವಿದ್ಯೆಯ ನಿಧಿ | ಬೋಧಾ ಸುಧಾಂಬುಧಿ |

ಯಾದ ನಿನ್ನಿಂದಾಯ್ತು ಸುಸಮಾಧಿ ||

ಸಾಧಿಸಿದ ಭಕ್ತರ | ಶೋಧಿಸುತ ಮುಕ್ತರ |

ಆದರಿಸಿ ಸಲಹಿದೈ ಗುರುವೀರಾ ||2||

ಸತ್ಯ ಸನಾತನನೆ | ನಿತ್ಯ ವಿನೂತನನೆ |

ಭೃತ್ಯ ವರ್ಗವನು ಪಾಲಿಸುವವನೇ ||

ಮರ್ತ್ಯರೊಳು ಸತ್ಯದ | ವರ್ತನವ ನಿಲಿಸಿದ ||

ಕೀರ್ತಿ ನರಹರಿ ನಿನಗುಂಟು ಸದಾ ||3||

ಪರಮಾನುಭವವೆ ಗುರುವಿಗೆ ಗುಟುಕು ನೀರು ||

ಪರಮಾನಂದವೆ ಶಿಷ್ಯನಿಗೆ ಮುಳುಗು ನೀರು ||ಪ||

ಶರೀರವೆಂದೆಂಬುದೆ ಪರಶಿವನ ತೇರು |

ಅರಿಯದಿರ್ಪಾತಂಗೆ ಭವಕಿದು ಬೇರು ||ಅ|ಪ||

ಕನ್ನಡಿಯೊಳಗಾವ ರೂಪಿದ್ದರೇನು |

ಕನ್ನಡಿಯೊಳು ರೂಪ ಸಿಕ್ಕಿಹುದೇನು ||

ಕಣ್ಣೊಳು ಕಾಣುತಿರ್ಪೀ ರೂಪಗಳನು |

ಕಣ್ಣು ತನ್ನೊಳು ಲಯಗೊಂಡಿರ್ಪುದೇನು ||1||

ಮನದಲ್ಲಿ ನಿಂತಿತ್ತು ವಿಷಯ ವಾಸನೆಯು |

ಜನುಮಕ್ಕೆ ಕಾರಣವಿದಕಿಲ್ಲ ಕೊನೆಯು ||

ಮನಮಂತ್ರಮಯವಾದರಿಲ್ಲ ವಾಸನೆಯು |

ತನುಯಂತ್ರ ಸೃಷ್ಟಿಗೆ ಮನವಾಯ್ತು ಮನೆಯು ||2||

ನಿರ್ಗುಣಾತ್ಮನೊಳಿಲ್ಲ ತನುಕರಣ ಧರ್ಮ |

ಸ್ವರ್ಗಾದಿ ಭೋಗದಾಸೆಯು ಮನದ ಕರ್ಮ ||

ನಿರ್ಗುಣಾತ್ಮನು ಶಿವನೆಂದೆಂಬ ಮರ್ಮ |

ಶೀಘ್ರ ಪೇಳಿದ ನರಹರಿ ಗುರುಬ್ರಹ್ಮ ||3||

ಚಾಲಕನಿಲ್ಲದೆ ಯಂತ್ರ ನಡೆವುದೇ ||

ಪಾಲಕನಿಲ್ಲದೆ ಪಶುಗಣವಿಹುದೇ ||ಪ||

ಚಾಲಕ ಪರಶಿವ ತನು ಯಂತ್ರಕ್ಕೆ |

ಪಾಲಕನಾತನೆ ಜೀವಗಣಕ್ಕೆ ||ಅ|ಪ||

ಪಶುಗಳೆ ಜೀವರು ಪಶುಪತಿ ಶಿವನು ||

ಪಶುಗಳ ಕಾಯುವ ಹೊಣೆಯುಳ್ಳವನು ||

ಪಶುಪತಿಯರಿತವ ಬಂಧರಹಿತನು ||

ಪಶುತನವುಳ್ಳವ ತನ್ನನರಿಯನು ||1||

ಗೋವುಗಳಿಂದ್ರಿಯವಿವುಗಳ ಕಾಯ್ವ |

ಗೋವಿಂದನೆ ಪರಮಾತ್ಮನು ದೈವಾ ||

ಕೇವಲ ನಿರ್ಗುಣಾತ್ಮನ ನಿಜವರಿವಾ |

ಪಾವನ ಜ್ಞಾನಕೆ ತಾನೇ ವೊಲಿವಾ ||2||

ಆತ್ಮ ಸನಾತನ ನೂತನನಿರುವಾ |

ಆತ್ಮ ಸಚೇತನ ಸರ್ವವನರಿವಾ ||

ಆತ್ಮನೆ ಸಗುಣ ನಿರ್ಗುಣಗಳ ಬೆರೆವಾ |

ಆತ್ಮನೆ ಶ್ರೀಗುರು ನರಹರಿಯಿರುವಾ ||3||

ಕಣ್ಣು ಕಾರಣ ದೇಹವೆನಲಿಕ್ಕೆ |

ಕಣ್ಣು ಕಾರಣ ಪಾಪ ಪುಣ್ಯಕ್ಕೆ ||ಪ||

ಕಣ್ಣು ಕಾರಣ ಸ್ವರ್ಗ ನರಕಕ್ಕೆ |

ಕಣ್ಣು ಕಾರಣ ಬಂಧಮೋಕ್ಷಕ್ಕೆ ||ಅ|ಪ||

ಕಣ್ಣಿನಲ್ಲಿಯೆ ಜಾಗ್ರ ಸುಷುಪ್ತಿ |

ಕಣ್ಣಿನಲ್ಲಿಯೆ ಸ್ವಪ್ನದ ವ್ಯಾಪ್ತಿ ||

ಕಣ್ಣಿನಿಂದಲೆ ಮೋಹವು ಪ್ರಾಪ್ತಿ |

ಕಣ್ಣಿನಿಂದಾಯಿತಾತ್ಮಗೆ ತೃಪ್ತಿ ||1||

ನೇತ್ರಗಾತ್ರಕೆ ಸೂತ್ರ ವಿಧಾನ |

ಚಿತ್ರರೂಪದ ಪಾತ್ರ ನಿಧಾನ ||

ವೃತ್ತಿಗಳಿಗಿದು ತಾನೆ ಸಂಧಾನ |

ನೇತ್ರ ಸರ್ವೇಂದ್ರಿಯದೊಳು ಪ್ರಧಾನ ||2||

ಅಕ್ಷಿಲೋಕದ ಸಾಕ್ಷಿಯಾಗಿಹುದ

ಅಕ್ಷರಾತ್ಮನ ಲಕ್ಷ್ಯವಾಗಿಹುದು ||

ಈಕ್ಷಿಸಿದರಂತರ್ಬಾಹ್ಯವೊಂದಹುದು |

ಸಾಕ್ಷಿ ನರಹರಿಯ ತಿಳಿಯಲುಬಹುದು ||3||

ಎತ್ತು ಕೈಲಾಸದಲ್ಲಿಯಿತ್ತು ಶಿವನನ್ನು ಹೊತ್ತು |

ಹೊತ್ತು ಗೊತ್ತಾಗಿ ನಡೆಯುತಿತ್ತು ||ಪ||

ಪೃಥ್ವಿಯನೆಲ್ಲವ ತಾನೇ ಹೊತ್ತು |

ಪೃಥ್ವಿಯಲ್ಲಿಯೆ ನಡೆಯುತಲಿತ್ತು ||

ಮತ್ತೆ ಯಾರಿಗು ಕಾಣದೆಯಿತ್ತು |

ಸತ್ಯಶರಣಗೆ ಸೂತ್ರವು ಗೊತ್ತು ||ಅ|ಪ||

ಬಸವಾ ಹಂಸಾರ್ಥವನ್ನು ಬೆಸೆವಾ | ಶೂನ್ಯದಿ ಕುಂಭಿಸುವಾ |

ವಿಷಕಂಠನೊಳಗೆ ವಿಜೃಂಭಿಸುವಾ ||

ಅಸಮ ಮಂತ್ರದ ಬಸಿರಲ್ಲೆಸೆವಾ |

ಹೊಸ ವೇದಂಗಳ ತಾ ಸೃಷ್ಟಿಸುವಾ ||

ವಿಷಯವೆಲ್ಲವ ಹಸನೆನ್ನಿಸುವಾ |

ಪಶುಪತಿಯನು ಶೂನ್ಯದಿ ಲಂಬಿಸುವಾ ||1||

ಬಸವ ಇದ್ದಾಗ ತನು ಕಲ್ಯಾಣ | ಕೇಳಪ್ಪ ಜಾಣ |

ಬಸವ ಬಿಡಲಾಗ ಕಟುಕರ ತಾಣ ||

ಬಸವ ಸುಷುಪ್ತಿಯೊಳನುಸಂಧಾನ |

ಎಸೆವಗರುಡನೆ ಜಾಗ್ರ ವಿಧಾನ ||

ಅಸಮ ಹಂಸನೆ ಸ್ವಪ್ನದ ಪ್ರಾಣ |

ಉಸಿರಲಾಗದೀತನ ಗುಣಗಾನ ||2||

ವೇದವಾಕ್ಯಗಳ ತಾನೆ ಪೇಳ್ದ | ಶಾಂತಿಯನೆ ತಾಳ್ದ |

ಬೋಧ ಮಾಡುತ್ತ ಸುಖದಿ ಬಾಳ್ದ ||

ಸಾಧಿಸಿ ಭಕ್ತಿಯ ನೈಜ ವಿರಕ್ತಿಯ |

ವಾದವ ಮಾಡದೆ ಪೇಳ್ವನು ಸೂಕ್ತಿಯ ||

ನಾದ ಬಿಂದು ಕಳೆ ಮೂರರ ಶಕ್ತಿಯ |

ನೈದಿದ ನರಹರಿ ಮಂತ್ರದ ಮೂರ್ತಿಯ ||3||

ಅದು ನೀನೆನ್ನುವುದೆ ತತ್ವಮಸೀ | ನೀನೆ |

ಅದು ಎನ್ನುತಿಹುದೆ ತ್ವಂತದಸೀ ||ಪ||

ಅದು ಎನ್ನುವುದು ಬ್ರಹ್ಮ | ಪದವಾಚ್ಯವೆನಿಪುದು ||

ಅದು ಸರ್ವ ಜೀವಾತ್ಮ | ಸದನವಾಗಿರುತಿದೆ ||ಅ|ಪ||

ನೀನೆನ್ನಿಸಿಹುದೆ ಜೀವಾತ್ಮಾ | ಬೇರೆ |

ತಾನೆಂಬ ವ್ಯಷ್ಟಿ ರೂಪಾತ್ಮಾ ||

ನಾನಾ ದೇಹಗಳಲ್ಲಿ | ತಾನಿರ್ದು ಸುಖದುಃಖ||

ಭಾನದಿಂ ಜನ್ಮ ವಿ | ತಾನ ಪೊಂದಿರುತಿರ್ಪ ||1||

ಶಿವನಿಂದ ನೀನಾದೆಯೆಂದು | ಪೇಳ್ವ |

ಸುವಿವೇಕ ತತ್ವಮಸಿಯಹುದು ||

ಶಿವ ನಿನ್ನೊಳಿಹನೆಂದು | ಶಿವ ಹಂಸನಹನೆಂದು ||

ಶಿವನಂ ಪರೋಕ್ಷಾನುಭವ ತತ್ವಮಸಿ ಪೇಳ್ದು ||2||

ನೀನೆ ಬ್ರಹ್ಮವು ಎಂಬ ವಾಕ್ಯ | ಸಮ್ಯ |

ಜ್ಞಾನ ಬೋಧಕ ನಿತ್ಯ ಸೌಖ್ಯ ||

ತಾನಿದು ತ್ವಂತದಸಿ | ತಾನೆ ಸೋಹಂ ಎನಿಸಿ ||

ಶ್ರೀ ನರಹರಿ ನಿರ್ಗು | ಣಾನುಭಾವವು ಜನಿಸೀ ||3||

ವಿಷಯಂಗಳನು ದೂರ ಮಾಡಿ | ನಿ |

ರ್ವಿಷಯನಾದಾತನೆ ಶಿವಯೋಗಿ ನೋಡಿ ||ಪ||

ವ್ಯಸನಸಪ್ತಕವ ನೀಡಾಡಿ | ಬೋ |

ಧಿಸಬಲ್ಲ ಸರ್ವರ ಸಮತೆಯಿಂ ಕೂಡಿ ||ಅ|ಪ||

ಮತ ಜಾತಿಗಳ ಭೇದವಿಲ್ಲಾ | ಸ |

ಮ್ಮತ ವೇದ ಧರ್ಮವ ಬೋಧಿಸಬಲ್ಲಾ ||

ಪತಿತ ಪಾವನನಾಗಿಯೆಲ್ಲಾ | ನಿ |

ಶ್ಚಿತ ಮಾಡಿದನುಭವ ಮುಚ್ಚಿಡಲೊಲ್ಲಾ ||1||

ಸಂಸಾರಿಯಾಗಿದ್ದರೇನು | ವಿ |

ಧ್ವಂಸ ಮಾಡುತಲಿರ್ಪ ಸರ್ವ ಪಾಪವನು ||

ಹಿಂಸೆ ಯಾರಿಗು ಮಾಡದವನು | ನಿ |

ಸ್ಸಂಶಯದಿ ಶಿವನನ್ನು ಕೂಡಿಕೊಂಡವನು ||2||

ಪಂಥಪೌರುಷ ಮಾಡಲಾರ | ಜಗ |

ದಂತರಾತ್ಮನು ತಾನೆಯೆಂದೆಂಬ ಧೀರಾ ||

ಸಂತತವು ಬ್ರಹ್ಮವಿಚಾರ | ಆ |

ದ್ಯಂತ ಬೋಧಿಪ ನರಹರಿಯೆ ನಿರ್ಧಾರ ||3||

ಎಣಿಸುತ್ತ ಜಪವಗೈದವರು | ತಾವು |

ಎಣಿಸಿದ್ದ ಫಲವ ಹೊಂದುವರು ||ಪ||

ಎಣಿಸದಸಂಖ್ಯಾತ | ವೆನಿಪ ಜಪಗೈದವರು ||

ಗಣನೆ ಮೀರಿದ ಮುಕ್ತಿ | ಯನು ಪೊಂದುತಿಹರು ||ಅ|ಪ||

ಕಾಮ್ಯಸಿದ್ಧಿಗಳೆಣಿಕೆಯಿಂದ | ಸರ್ವ |

ಸ್ವಾಮ್ಯ ವೃದ್ಧಿಗಳಾಗುವಂದ ||

ರಮ್ಯ ಸ್ವರ್ಗಾನಂದ | ನಿರ್ಮಾಣ ಬಲು ಚಂದ ||

ಜನ್ಮವೃದ್ಧಿಯ ಬಂಧ | ಕಾಮ್ಯ ಮಹಿಮೆಗಳಿಂದ ||1||

ಅನವರತ ಜಪವಗೈದವರು | ಮುಕ್ತ |

ರೆನಿಸುತ್ತ ಶಿವನ ಸೇರುವರು ||

ಮನವೆಲ್ಲ ಜಪವಾಗಿ | ತನುವೊಂದು ನೆಪವಾಗಿ ||

ನೆನಹೆಲ್ಲ ತಪವಾಗಿ | ಘನಗುರು ಕೃಪೆಯಾಗಿ ||2||

ಕೋಟಿ ದೀಪಗಳಿದ್ದರೇನು | ರವಿಗೆ |

ಸಾಟಿಯಾಗಲು ಬಲ್ಲವೇನು ||

ಕೋಟಿ ಜಪಗಳು ಸಗುಣ | ದಾಟದಲ್ಲಿರಲೇನು |

ಸಾಟಿಯಾಗವು ಜ್ಞಾನ | ಪಾಠ ನರಹರಿ ಧ್ಯಾನ ||3||

ನಮ್ಮ ದೇವರು ಮೂವರಮ್ಮ | ನೀವು |

ಒಮ್ಮೆ ಕಂಡರೆ ಮುಕ್ತರಮ್ಮಾ ||ಪ||

ನಮ್ಮ ದೇವರೆ ಪರಬ್ರಹ್ಮವಾಗಿಹುದಮ್ಮ ||

ಧರ್ಮ ಮೂರನು ಕೂಡಿ | ರಮ್ಯವಾಗಿಹುದಮ್ಮಾ ||ಅ|ಪ||

ಕದ್ದುಣ್ಣುವನು ವಿಷ್ಣುದೇವಾ | ಲೋ |

ಕೋದ್ಧಾರಿ ಸ್ಥಿತಿಯನ್ನು ಗೈವಾ ||

ಎದ್ದು ಜಾಗ್ರದಿ ತಾನೆ | ಬುದ್ಧೀಂದ್ರಿಯಗಳಲ್ಲಿ

ಇದ್ದ ವಿಷಯಗಳನ್ನು | ಕದ್ದುಂಡು ಸುಖಿಸುವಾ ||1||

ರುದ್ರದೇವನು ಭಿಕ್ಷೆಗೈವಾ | ಉಂಡು |

ನಿದ್ರೆಯೊಳಾನಂದ | ಪಡುವಾ ||

ಬದ್ಧ ಕರ್ಮಗಳಿಲ್ಲ | ದಿದ್ದುಣ್ಣುತಿರಬಲ್ಲ ||

ಶುದ್ಧ ನಿರ್ಗುಣನಾಗಿ | ಸದ್ಯಕ್ಕೆ ಸುಖ ಭೋಗಿ ||2||

ಉಣ್ಣಲರಿಯನು ಬ್ರಹ್ಮದೇವಾ | ಲೋಕ |

ವನ್ನು ಸ್ವಪ್ನದಿ ಸೃಷ್ಟಿಗೈವಾ ||

ಇನ್ನು ಸ್ವಪ್ನದ ತೋರ್ಕೆ | ಶೂನ್ಯವಹುದದರಲ್ಲಿ |

ತನ್ನನುಭವ ವಿಷಯ | ವಿನ್ನಿಲ್ಲ ನರಹರಿಗೆ ||3||

ಯೋಗ ಸಾಧನೆ ಮಾಡಿ | ರೀಗ ಹಂಸನ ಕೂಡಿ |

ನಾಗಸರ್ಪನ ಹೆಡೆಯನಡಿಮಾಡಿ ||ಪ||

ಬೇಗ ಕುಂಭಕದಲ್ಲಿ | ಸಾಗಿ ನಿಂತಿರುವಲ್ಲಿ |

ಭೋಗಿ ಭೋರ್ಗರೆವುದ ಕೇಳ್ದಲ್ಲಿ ||ಅ|ಪ||

ಪೂರಕದ ತುದಿಯಲ್ಲಿ | ರೇಚಕದ ಮೊದಲಲ್ಲಿ |

ಸಾರ ಬೋಧಾಮೃತವು ಸುರಿವಲ್ಲಿ ||

ಹೀರುತ್ತ ಕೊನೆಯಲ್ಲಿ | ಸೇರುತ್ತ ಶಿವನಲ್ಲಿ |

ಜಾರಿ ಬೀಳದೆ ನಿಂತು ನಿಜದಲ್ಲಿ ||1||

ವರ್ಣವೆಲ್ಲವ ಸೇರಿ | ವರ್ಣವೆಲ್ಲವ ಮೀರಿ |

ನಿರ್ಣಯಿಸಿ ನಿಂತ ನಾದದ ಲಹರೀ ||

ಪೂರ್ಣತ್ವವನು ತೋರಿ | ಕರ್ಣದಲ್ಲಿಯೆ ತೂರಿ |

ಜೀರ್ಣಿಸಲು ಪರಮಾರ್ಥ ಮುದವೇರಿ ||2||

ದುರಿತವೆಲ್ಲವ ನೀಗಿ | ಪರತತ್ವದರಿವಾಗಿ |

ಗುರುಪೇಳಿದರ್ಥವು ನೆಲೆಯಾಗಿ ||

ಹರುಷವಿಮ್ಮಡಿಯಾಗಿ | ಪರಿಪೂರ್ಣ ತಾನಾಗಿ |

ಮೆರೆವಂಥ ನರಹರಿಗೆ ಶಿರಬಾಗಿ ||3||

ಕಂಡುಕೊಳ್ಳುವುದೆಂತು ಶಿವನಾ | ಬ್ರ |

ಹ್ಮಾಂಡಮಂಡಲದಂತರಾತ್ಮನಾದವನಾ ||ಪ||

ಖಂಡತ್ವವಿಲ್ಲದಿರ್ಪವನಾ | ಭೂ |

ಮಂಡಲಾಪೋಜ್ಯೋತಿ ರೂಪನಾದವನಾ ||ಅ|ಪ||

ಇಂದ್ರಿಯಾದಿಗಳಿಲ್ಲದವನಾ | ಸ |

ರ್ವೇಂದ್ರಿಯಂಗಳಿಗಾಧಾರನಾದವನಾ ||

ಬಂಧ ಮೋಕ್ಷಗಳಿಲ್ಲದವನಾ | ಆ |

ನಂದದಿಂ ಬ್ರಹ್ಮಾಂಡ ಕೋಟಿಯಾಳ್ವವನಾ ||1||

ಕಾಯ ಕರ್ಮಕೆ ಸಿಕ್ಕದವನಾ | ಜಡ |

ಕಾಯಂಗಳೊಳಗಿದ್ದು ಕಾಯುತಿರ್ಪವನಾ ||

ಮಾಯೆಯೆಲ್ಲವ ಮೀರಿದವನಾ | ಈ |

ಮಾಯೆಗಾಶ್ರಯನಾಗಿ ತೋರುತಿರ್ಪವನಾ ||2||

ಕಾಲ ಕರ್ಮವ ಹೊಂದದವನಾ | ಜಗ |

ಜಾಲವೆಲ್ಲವನಾಂತು ಕಾಣದಿರ್ಪವನಾ ||

ಮೂಲಮಂತ್ರದೊಳಾಡುವವನಾ | ಸುಖ |

ಲೋಲ ನರಹರಿ ದೇವನೆಂದೆನಿಸಿದವನಾ ||3||

ಕಾಮಿತಾರ್ಥವನೆಲ್ಲ ಪ್ರೇಮದಿಂದೀವುದು ಕಾಮಧೇನು ||ಪ||

ಭೂಮಿಯೆಲ್ಲವನು ಸುಕ್ಷೇಮದಿಂ ಪೊರೆವುದು ಕಾಮಧೇನು ||ಅ|ಪ||

ತಾರಕ ಮಂತ್ರಾವತಾರವಾಗಿರುವುದು ಕಾಮಧೇನು ||

ಮೂರು ಮಾತ್ರೆಗಳ ವಿಸ್ತಾರವೆಂದೆನಿಪುದು ಕಾಮಧೇನು ||1||

ಬೋಧಾಮೃತವನಿತ್ತು ವೇದವೆಂದೆನಿಸಿತ್ತು ಕಾಮಧೇನು ||

ನಾದಾಂತದೊಳು ಸುಪ್ರಸಾದವೀಯುತಲಿತ್ತು ಕಾಮಧೇನು ||2||

ಎಲ್ಲ ಸುರರನ್ನು ಮೈಯಲ್ಲಿ ಹೊತ್ತಿರುವುದು ಕಾಮಧೇನು ||

ಚೆಲ್ವ ದತ್ತಾತ್ರೇಯನಲ್ಲಿ ನಿಂತಿರುವುದು ಕಾಮಧೇನು ||3||

ಪ್ರಣವ ಸ್ವರೂಪಾಗಿ ಮಿನುಗುತ್ತಲಿರುವುದು ಕಾಮಧೇನು ||

ಜನನ ಮರಣಂಗಳ ಕೊನೆಗಾಣಿಸಿರುವುದು ಕಾಮಧೇನು ||4||

ಹಸು ಎಮ್ಮೆ ಕುರಿಮೇಕೆ ಪಶು ರೂಪ ತಾಳಿದ ಕಾಮಧೇನು ||

ವಸುಧೆಯೊಳು ನರರನ್ನು ಸಸಿನದಿಂ ಪೊರೆಯುವ ಕಾಮಧೇನು ||5||

ಸತ್ತು ಚಿತ್ತಾನಂದ ನಿತ್ಯ ಪರಿಪೂರ್ಣದ ಕಾಮಧೇನು ||

ಕರ್ತ ನರಹರಿ ಬೋಧಸೂತ್ರವಾಗಿರುವಂಥ ಕಾಮಧೇನು ||6||

ಒಡಲು ನಶ್ವರ ಒಡೆಯನೀಶ್ವರ |

ಪಿಡಿದು ನಡೆಸಲು ಭಾಸ್ವರ ||ಪ||

ನುಡಿದು ಸುಸ್ವರ | ಪಡೆದು ನಿಜವರ |

ನಡೆದವನೆ ಯೋಗೀಶ್ವರ ||ಅ|ಪ||

ಧ್ಯಾನವೇ ಸುಖ | ಧ್ಯಾನವೇ ಮುಖ |

ಧ್ಯಾನ ಜ್ಞಾನಕೆ ಸಾಧಕಾ ||

ಮೌನ ಸುಂದರ | ಮೌನ ಬಂಧುರ |

ಸ್ವಾನುಭಾವದ ಮಂದಿರಾ ||1||

ಹರಿಯ ಪದದೊಳು | ಹರನ ಶಿರದೊಳು |

ಹರಿವ ಜ್ಞಾನದ ಗಂಗೆಯಾ ||

ಮೊರೆವ ಶಬ್ದವ | ನರಿದ ಮಾನವ |

ದುರಿತ ದುಃಖವ ನೀಗುವಾ ||2||

ನಾದವಿಸ್ತರ | ವೇದ ಸುಸ್ಥಿರ |

ಬೋಧ ಸುಖ ಸಂಪತ್ಕರ ||

ಆದಿ ನರಹರಿ | ಪಾದದೈಸಿರಿ |

ಯಾದ ಜ್ಞಾನವಿದೇ ಸರಿ ||3||

ನಿನ್ನೊಳಗೆ ನಾನೋ | ಶ್ರೀರಂಗಯ್ಯ |

ನನ್ನೊಳಗೆ ನೀನೋ ||ಪ||

ನಿನ್ನೊಳಗೆ ನಾನಿದ್ದು | ನಿನ್ನನರಿವುದೆ ಭಕ್ತಿ ||

ನನ್ನೊಳಗೆ ನೀನಿರ್ಪು | ದನ್ನು ತಿಳಿವುದೆ ಜ್ಞಾನ ||ಅ|ಪ||

ನೀನೆ ಬೇರೆಂದು | ನಿನ್ನೊಡಗೂಡಿ |

ನಾನಿರ್ಪೆನೆಂದು ||

ನಾನರಿಯದೇಯಿದ್ದು | ನಾನಾ ಯೋನಿಗೆ ಬಿದ್ದು |

ನೀನೆ ಗತಿಯೆನ್ನದ | ಜ್ಞಾನದೊಳ್ಮುಳುಗಿದ್ದೆ ||1||

ಬಲು ಪುಣ್ಯಫಲದೀ | ಸದ್ಗುರು ಪಾದ |

ದೊಲುಮೆಯ ಬಲದೀ ||

ತಿಳಿದು ನಿನ್ನೊಳು ಭಕ್ತಿ | ಬಲವಾಗಿ ಸುವಿರಕ್ತಿ ||

ನಿಲಲಾಗಿ ಸುಜ್ಞಾನ | ಕಳೆಯಲಜ್ಞಾನವು ||2||

ಜೀವ ಬ್ರಹ್ಮೆ ೈಕ್ಯ | ಸೋಹಂ ಭಾವ |

ಕೈವಲ್ಯ ಸೌಖ್ಯ ||

ದೇವ ನರಹರಿ ನಿನ್ನೊ | ಳಾವ ಭೇದವು ಇಲ್ಲ ||

ಸಾವು ಹುಟ್ಟುಗಳಿಲ್ಲ | ಕೇವಲಾದ್ವಯನಾದ ||3||

ಅಪಕಾರಗೈದವರಿಗುಪಕಾರ ಗೈವನು ಬ್ರಹ್ಮಜ್ಞಾನಿ ||ಪ||

ಕಪಟಿಗಳನು ಕಂಡು ಕೃಪೆ ಮಾಡುತಿರ್ಪನು ಬ್ರಹ್ಮಜ್ಞಾನಿ ||ಅ|ಪ||

ಮೋಸ ಮಾಡಿದವರ್ಗೆ ಲೇಸಾಗಲೆಂಬನು ಬ್ರಹ್ಮಜ್ಞಾನಿ ||

ದ್ವೇಷ ಮಾಳ್ಪವರಲ್ಲಿ ದೋಷವೆಣಿಸದೆಯಿರ್ಪ ಬ್ರಹ್ಮಜ್ಞಾನಿ ||1||

ಅಜ್ಞಾನಿಗಳ ಕಂಡು ಸುಜ್ಞಾನ ಪೇಳ್ವನು ಬ್ರಹ್ಮಜ್ಞಾನಿ ||

ವಿಘ್ನಕಾರಿಗಳ ಕಂಡಾಗ್ರಹಗೊಳ್ಳನು ಬ್ರಹ್ಮಜ್ಞಾನಿ ||2||

ಪಾಪಿಗಳ ಕಂಡನು ತಾಪವಂ ಪಡುತಿರ್ಪ ಬ್ರಹ್ಮಜ್ಞಾನಿ ||

ಕೋಪವುಳ್ಳವರ ಸಂತಾಪವಂ ನೀಗುವ ಬ್ರಹ್ಮಜ್ಞಾನಿ ||3||

ಯಾರಿಗಾದರು ಕೇಡು ಬಾರದಿರಲೆಂಬನು ಬ್ರಹ್ಮಜ್ಞಾನಿ ||

ದಾರಿಕಾರರಿಗುಪಕಾರ ಮಾಡುತಲಿರ್ಪ ಬ್ರಹ್ಮಜ್ಞಾನಿ ||4||

ಅನ್ಯರು ತನ್ನವರೆನ್ನದುಪಕರಿಸುವ ಬ್ರಹ್ಮಜ್ಞಾನಿ ||

ಸನ್ಯಾಸಿಯಂದದಿ ಸಂಸಾರದೊಳಗಿರ್ಪ ಬ್ರಹ್ಮಜ್ಞಾನಿ ||5||

ನಿಂದಿಸುವ ಜನರಿಗೆ ವಂದನೆಯ ಮಾಳ್ಪನು ಬ್ರಹ್ಮಜ್ಞಾನಿ ||

ಬಂಧಿಸಿದವರಿಗೇನು ತೊಂದರೆಯ ಮಾಡನು ಬ್ರಹ್ಮಜ್ಞಾನಿ ||6||

ಬಂದದ್ದು ಸಂತೋಷದಿಂದುಣ್ಣುತಿರ್ಪನು ಬ್ರಹ್ಮಜ್ಞಾನಿ ||

ಬಂಧು ನರಹರಿದೇವನೆಂದು ನಂಬಿರ್ಪನು ಬ್ರಹ್ಮಜ್ಞಾನಿ ||7||

ಬ್ರಹ್ಮಾಂಡ ಕೋಟಿಯ ನಿರ್ಮಾಣ ಮಾಡಿತ್ತು ಬ್ರಹ್ಮಸೂತ್ರ ||ಪ||

ಕರ್ಮ ಜ್ಞಾನಗಳಲ್ಲಿ ಸಮ್ಮಿಲನವಾಗಿತ್ತು ಬ್ರಹ್ಮಸೂತ್ರ ||ಅ|ಪ||

ಯೋಗಭೋಗದೊಳೊಂದೆಯಾಗಿ ರಾಜಿಸುತಿತ್ತು ಬ್ರಹ್ಮಸೂತ್ರ ||

ಆಗಮ ನಿಗಮಂಗಳಾಗಿ ತೋರುತಲಿತ್ತು ಬ್ರಹ್ಮಸೂತ್ರ ||1||

ನಾದಬಿಂದುವು ಕಳೆಗಳಾದಿಯೆಂದೆನಿಸಿತ್ತು ಬ್ರಹ್ಮಸೂತ್ರ ||

ವೇದಬೋಧೆಗಳ ಸಂಪಾದನೆಯೊಳಗಿತ್ತು ಬ್ರಹ್ಮಸೂತ್ರ ||2||

ಹಂಸಗರುಡನು ನಂದಿಯಂಶವಾಗಿರುತಿತ್ತು ಬ್ರಹ್ಮಸೂತ್ರ ||

ಸಂಶಯಂಗಳನು ವಿಧ್ವಂಸ ಮಾಡುತಲಿತ್ತು ಬ್ರಹ್ಮಸೂತ್ರ ||3||

ನಡೆಯುತ್ತ ಪೊಡವಿಯನೊಡಗೂಡಿ ಬೆಳಗಿತ್ತು ಬ್ರಹ್ಮಸೂತ್ರ ||

ನುಡಿಯುತ್ತ ಜಡಧಿಯ ಜಡಿದು ತುಂಬಿರುತಿತ್ತು ಬ್ರಹ್ಮಸೂತ್ರ ||4||

ಸರ್ವೇಂದ್ರಿಯಗಳಲ್ಲಿ ನಿರ್ವಾಹವಾಗಿತ್ತು ಬ್ರಹ್ಮಸೂತ್ರ ||

ತೋರ್ವ ಜಗಕೆಲ್ಲ ತಾಂ ಪೂರ್ವವಾಗಿರುತಿತ್ತು ಬ್ರಹ್ಮಸೂತ್ರ ||5||

ಜೀವೇಶ್ವರರಿಗೆಲ್ಲ ಠಾವು ತಾನಾಗಿತ್ತು ಬ್ರಹ್ಮಸೂತ್ರ ||

ದೇವ ದಾನವ ಮಾನವಾವತಾರದೊಳಿತ್ತು ಬ್ರಹ್ಮಸೂತ್ರ ||6||

ಬ್ರಹ್ಮ ವಿಷ್ಣುವು ರುದ್ರ ಧರ್ಮದಿಂ ತೋರುವುದು ಬ್ರಹ್ಮಸೂತ್ರ ||

ನಿರ್ಮಾಯ ನರಹರಿಯ ಸಮ್ಯಜ್ಞಾನದೊಳಿತ್ತು ಬ್ರಹ್ಮಸೂತ್ರ ||7||

ಎಲ್ಲ ದೈವವು ನೀನೆಯೆಂದೆ | ಜಗ |

ವೆಲ್ಲ ನಿನ್ನಯ ದಿವ್ಯ ರೂಪವಾಯ್ತೆಂದೆ ||ಪ||

ಉಲ್ಲಾಸದೊಳು ನಂಬಿ ನಿಂದೇ | ನಾ |

ನೆಲ್ಲಿದ್ದರಲ್ಲಿಯೆ ನಿನ್ನೊಳಗೆ ತಂದೆ ||ಅ|ಪ||

ಜಗದ ಸೃಷ್ಟಿಗೆ ನೀನೆ ಬ್ರಹ್ಮ | ತ್ರೈ |

ಜಗದ ರಕ್ಷಣೆಗೆ ನೀ ಹರಿಯೆಂಬ ಧರ್ಮ ||

ಜಗದ ಲಯಕಾದೆ ನೀ ರುದ್ರಾ | ಮೂ |

ಜಗದಾತ್ಮ ನಿನ್ನಲ್ಲೆ ತ್ರೈಮೂರ್ತಿ ಭದ್ರಾ ||1||

ಸುರರೆಲ್ಲರಿಗೆ ನೀನೆ ಇಂದ್ರಾ | ಭಾ |

ಸುರಮಂತ್ರ ಕೋಟಿಗೆ ಪ್ರಣವ ಮಹೇಂದ್ರಾ ||

ದುರಿತ ಕರ್ಮಿಗೆ ನೀನೆ ಯಮನು | ನಿ |

ಷ್ಠುರವಾಗಿ ದಂಡಿಸುವೆ ದಂಢಧರ ನೀನು ||2||

ಮೆರೆವ ನವಗ್ರಹವೆಲ್ಲ ನೀನೆ | ವಿ |

ಸ್ತರ ಲೋಕವೆಲ್ಲಕೆ ಗ್ರಹರಾಜ ಭಾನು ||

ನರರೆಲ್ಲರನು ಪೊರೆವವನು | ಶ್ರೀ |

ಗುರುರಾಜ ನರಹರಿಯೆ ಜಗದೇಕ ನೀನು ||3||

ನಿದ್ರೆಯೋ | ಯೋಗ | ಮುದ್ರೆಯೋ ||ಪ||

ಕ್ಷುದ್ರ ದೇಹದ ಸಂಗ | ವಿದ್ದು ಮರೆತಿರುವುದು ||ಅ|ಪ||

ಜಡದೇಹ ತಾನೆಂಬ | ಕಡು ಮೋಹವಳಿಯುತ್ತ ||

ಮಡಿದ ಸರ್ಪದ ಹಾಗೆ | ಒಡಲ ಮರೆತಿರುವುದು ||1||

ಎಲ್ಲ ಕಾಣುತಲೊಂದು | ಇಲ್ಲ ನಶ್ವರವೆಂದು ||

ಎಲ್ಲ ಬ್ರಹ್ಮವೆಯೆಂದು | ಉಲ್ಲಾಸಪಡುವುದು ||2||

ಕರಣೇಂದ್ರಿಯಂಗಳಂ | ಕುರವಾದ ಮನವೆಲ್ಲ ||

ಪರಿಪೂರ್ಣ ಬ್ರಹ್ಮದೊಳೆರಕವಾಗಿರುವುದು ||3||

ಉರಿದ ಕರ್ಪುರದಂತೆ | ಬೆರೆದು ಬ್ರಹ್ಮದಿ ನಿಂತು ||

ಕರಣ ಚೇಷ್ಟೆಗಳೆಲ್ಲ | ಕರಗಿ ಹೋಗಿರುವುದು ||4||

ಅರಿವು ಮರವೆಗಳೆಂಬ | ಪರಿಭೇದ ಕಾಣದೆ ||

ಹೊರಗೊಳಗೊಂದಾಗಿ | ನರಹರಿಯೊಳಿರುವುದು ||5||

ಸನ್ಮೋಹನಾಸ್ತ್ರ | ನರನೊಳಗಿರ್ಪ | ಸನ್ಮಂತ್ರ ಸೂತ್ರಾ ||ಪ||

ಹೃನ್ಮಂದಿರದೊಳಿರ್ದು | ಚಿನ್ಮಾತ್ರವೆನಿಸಿರ್ದು ||

ತನ್ಮಯತ್ವದಿ ಬಂದು | ಉನ್ಮನಿಯೆಂದೆನಿಸಿಹುದು ||ಅ|ಪ||

ಆನಂದ ನೆಲೆಸಿ | ತನ್ನೊಳಗಾತ್ಮ | ಜ್ಞಾನವುದ್ಭವಿಸೀ ||

ಧ್ಯಾನಮೌನಗಳು ಸಂ | ಧಾನವಾಗುತಲಿರಲು ||

ಹೀನ ಸಂಸೃತಿ ಬಂಧ | ಹಾನಿಯಾಗಲು ನಿಂದ ||1||

ಅಹಿತ ಸೈನ್ಯವನು | ಮೈಮರೆಸಿ ನಿ | ಗ್ರಹಿಸಬಲ್ಲವನು ||

ವಿಹಿತ ಸನ್ಮಂತ್ರ ಸ | ನ್ನಿಹಿತನೆಂದೆನಿಸುತ್ತ ||

ಬಹು ಪರಾಕ್ರಮಿಯಾಗಿ | ಬಹನು ತಾ ನಿಜಯೋಗಿ ||2||

ಎಲ್ಲ ನಿದ್ರೆಯೊಳು | ಮೈಮರೆತಿರಲು | ಇಲ್ಲ ಸುದ್ದಿಗಳು ||

ಬಲ್ಲಿದನು ಪಾರ್ಥನು | ಎಲ್ಲರನು ಜಯಿಸಿದನು ||

ನಿಲ್ವ ತಾನೊಬ್ಬನು | ಚೆಲ್ವ ನರಹರಿ ಸಖನು ||3||

ನಗಬೇಕೋ ಇದಕೇನು | ಅಳಬೇಕೋ ||ಪ||

ಜಗವನ್ನೆ ನೆರೆ ನಂಬಿ | ಸೊಗವೆಂಬವರ ಕಂಡು ||ಅ|ಪ||

ಕಾಯ ಸುಸ್ಥಿರವೆಂದು | ಶ್ರೇಯವೆನ್ನುತ ನಿಂದು ||

ಸಾಯುವಾಗಳುವಂಥ | ಮಾಯವಾದಿಯ ಕಂಡು ||1||

ಮರುಳಾಗಿ ಮಾಯೆಗೆ | ಬರಿದೆ ಕಾಲವ ಕಳೆದು |

ಮರಣ ಬಂದರೆ ಅತ್ತು | ಕರೆವ ಮೂರ್ಖರ ಕಂಡು ||2||

ದುರ್ಗುಣದಿಂದರಿ | ವರ್ಗದಲ್ಲಿಯೆ ಸೇರಿ ||

ಮಾರ್ಗ ಕಾಣದೆ ಜನ್ಮ | ಕಾರ್ಗತ್ತಲೊಳಗಿರಲು ||3||

ಬುದ್ಧಿಯಿರಲಾ ಶಿವನ | ಸುದ್ದಿಯೆತ್ತದೆ ಕಾಯ ||

ಬಿದ್ದು ಹೋಗುತಲಿರೆ | ಒದ್ದಾಡುವುದ ಕಂಡು ||4||

ಧನಕನಕ ವಸ್ತುವಾ | ಹನ ತನ್ನದೆನ್ನುತ್ತ |

ಕೊನೆಗಾಲದೊಳು ನೆನೆವ | ಜನರನ್ನು ಕಾಣುತ್ತ ||5||

ಐಶ್ವರ್ಯವಿರುವಾಗ | ಈಶ್ವರನ ನೆನೆಯದೆ ||

ಶಾಶ್ವತವಿದೆಂಬಂಥ | ವಿಸ್ವಾಸಿಕರ ಕಂಡು ||6||

ಹರನಿತ್ತ ಅರಿವಿಂದ | ಹರನನ್ನು ಅರಿಯದೆ |

ಮರವೆಗೀಡಾಗಿರುವ | ನರರನ್ನು ಕಾಣುತ್ತ ||7||

ಗುರುಪಾದ ನಂಬದೆ | ನರನೆಂಬ ಭಾವದೆ |

ನರಹರಿಯ ಬೋಧೆಯ | ನರಿಯದವರ ಕಂಡು ||8||

ಯೋಗಿ ಶಿವಾಭವ | ನೀಗಿಸುವಾ ||

ಭೋಗಿ ಶಿವಾಸುವಿ | ರಾಗಿ ಶಿವಾ ||ಪ||

ರೇಚಕ ಪೂರಕ | ಕುಂಭಕ ಯೋಗವ |

ಆಚರಿಸುತಲೀ | ದೇಹವ

ಪೊರೆವಾ || ವಾಚಿಸಿ ವರವಾ | ಗೋಚರಿಸಿರುವಾ ||1||

ಚಕ್ರಗಳಾರನು | ಲೆಕ್ಕಕೆ ತಾರನು |

ಚಕ್ಕನೇಳನೆಯ | ಚಕ್ರದ ಮನೆಯ |

ಹೊಕ್ಕಾಡುವನು | ನಕ್ಕು ನಲಿವನೂ ||2||

ಓಂಕಾರವನು | ಝೇಂಕರಿಸುವನು |

ಶಂಕಾತಂಕವ | ಸೋಂಕದೆಯಿರುವ |

ಶಂಕರನೆನಿಪ | ನರಹರಿ ಮುನಿಪಾ ||3||

ಏನು ಮಾಡಲಯ್ಯ ಯನ್ನ | ಹೀನಕರ್ಮ ತೀರದು ||ಪ||

ನೀನು ಪೇಳ್ದ ಜ್ಞಾನಮಾರ್ಗ ಏನು ಯನಗೆ ತೋರದು ||ಅ|ಪ||

ಮೌನ ಸಾಧಿಸಲ್ಕೆ ಯನ್ನ | ಮನವು ನಿಲ್ಲಲೊಲ್ಲದು ||

ಧ್ಯಾನ ಮಾಡುವಾಗ ಬೇರೆ | ಕಾಣದೋಡಿ ಪೋಪುದು ||1||

ಬೋಧಿಸುತ್ತಲಿರಲು ನಿನ್ನ | ಬೋಧೆ ಕೇಳಲೊಲ್ಲದು ||

ಬಾಧಿಸುತ್ತ ವಿಷಯಗಳಿಗೆ | ಹಾದಿಯನ್ನು ಹಿಡಿವುದು ||2||

ಕರ್ಮದಲ್ಲೆ ಧರ್ಮವಿರ್ಪ | ಮರ್ಮವೇನು ತಿಳಿಯದು ||

ನಿರ್ಮಲಾತ್ಮ ನರಹರೀಂದ್ರ | ನಿಮ್ಮ ಕರುಣವಾಗದು ||3||

ಬ್ರಹ್ಮಾಂಡ ಕೋಟಿಯ ತುಂಬಿದಾ | ಪರ |

ಬ್ರಹ್ಮ ತತ್ವವ ನೆರೆ ನಂಬಿದಾ ||ಪ||

ನಿರ್ಮೋಹಿ ಸುಜ್ಞಾನಿಯೆಂಬುದಾ | ಗುರು |

ಧರ್ಮದಿಂದರಿತವನೇ ಬುಧಾ ||ಅ|ಪ||

ಕಾಲ ಕರ್ಮಕೆ ದೂರವಾಗಿದೇ | ಸ |

ಲ್ಲೀಲೆಯಿಂ ಸರ್ವವ ನೀಗಿದೆ ||

ಏಳು ಚಕ್ರಗಳನ್ನು ತಾಗಿದೇ | ಜಗ |

ಮೂಲವೆನ್ನಿಸಿಕೊಂಡು ಸಾಗಿದೆ ||1||

ಎಲ್ಲೆಲ್ಲಿ ನೋಡಲು ಕಾಣದು | ತ |

ನ್ನಲ್ಲೇಯಲ್ಲವ ಕಾಣಬಲ್ಲುದು ||

ಅಲ್ಲಿ ಇಲ್ಲೆನ್ನಲು ಸಲ್ಲದು | ಜಗ |

ವೆಲ್ಲ ತನ್ನೊಳಗಿಟ್ಟುಕೊಳ್ವುದು ||2||

ಮಂತ್ರಕ್ಕೆ ವಶವಾಗುತಿರ್ಪುದು | ತನು |

ಯಂತ್ರಕ್ಕೆ ಕೀಲಾಗಿ ತೋರ್ಪುದು ||

ತಂತ್ರಕ್ಕೆ ಮೇಲಾಗಿ ಬರ್ಪುದು | ಸ್ವಾ |

ತಂರ್ತ್ಯಕ್ಕೆ ನರಹರಿಯಿರ್ಪುದು ||3||

ಅಂತರಂಗದ ಗುಡಿಯೊಳಗೆ ಮೆರೆ |

ವಂಥ ದೇವರ ನೋಡಿರೋ ||ಪ||

ಭ್ರಾಂತರಾಗದೆ ಮಂತ್ರ ಪುಷ್ಪಗ |

ಳಾಂತು ಪೂಜೆಯ ಮಾಡಿರೋ ||ಅ|ಪ||

ಇಳೆಯ ಸ್ಥಲದಿ ಸುಗಂಧ ಧರಿಸುತ |

ನಲಿದು ಪೂಜೆಯ ಮಾಡಿರೋ ||

ಜಲದ ಮುಖದೊಳು ಸುರಸ ಸಲ್ಲಿಸಿ |

ಒಲಿದು ಪೂಜೆಯ ಮಾಡಿರೋ ||1||

ಅನಲ ಸ್ಥಾನದಿ ರೂಪ ದರ್ಪಣ |

ವೆನುತ ಪೂಜೆಯ ಮಾಡಿರೋ |

ಅನಿಲ ತತ್ವದಿ ಸ್ಪರ್ಶ ಮಾಡುತ |

ವಿನಯ ಪೂಜೆಯ ಮಾಡಿರೋ ||2||

ಗಗನದಲ್ಲಿಯೆ ನಿಗಮ ಶಬ್ದಗ |

ಳೊಗೆದು ಪೂಜೆಯ ಮಾಡಿರೋ |

ಸೊಗಸಿ ನರಹರಿಗೆಲ್ಲ ವರ್ಪಿಸಿ

ಸಗುಣ ನಿರ್ಗುಣ ಮಾಡಿರೋ ||3||

ಗೋಪೀ ಜಾರಾ | ಪಾಪವಿ ದೂರಾ | ಶ್ರೀಪತಿ ಮೈದೋರೈ ||

ಯನ್ನನು | ಕಾಪಾಡಲು ಬಾರೈ ||ಪ||

ಆಪದವಳಿಸೀ | ತಾಪವ ಬಿಡಿಸೀ | ಕಾಪಥವಂ ಕೆಡಿಸೀ ||

ನಿನ್ನಯ | ಶ್ರೀಪಾದದೊಳಿರಿಸೀ ||ಅ|ಪ||

ಎನ್ನಯ ಹೃದಯಾ | ನಿನ್ನದು ಸದಯಾ |

ಮನ್ನಿಪುದೆಲೆಜೀಯಾ|| ಯನ್ನನು | ಧನ್ಯನೆನಿಪುದಯ್ಯಾ ||

ಅನ್ಯವನರಿಯೇ | ನಿನ್ನನು ಮರೆಯೇ |

ಸನ್ನುಡಿಯೊಳು | ಬೆರೆಯೇ | ಕಂಡೆನು | ನಿನ್ನನು ಶ್ರೀಹರಿಯೇ ||1||

ಸತ್ಯ ಪ್ರಸಿದ್ಧಾ | ಬೆತ್ತಲೆ ಬುದ್ಧಾ |

ನಿತ್ಯನು ಎನಿಸಿದ್ದಾ | ನಿನ್ನನು | ಗುರ್ತಿಸಿದವ ಶುದ್ಧಾ ||

ಸತ್ಯಾಸಕ್ತಾ | ಉತ್ತಮ ಭಕ್ತಾ | ಸ್ತೋತ್ರದಿ ನಿಜಮುಕ್ತಾ

ಗುರುವಿನ | ಸೂತ್ರದಿ ಸಂಯುಕ್ತಾ ||2||

ಭಜಕರ ಸೇರಿ | ನಿಜವನು ತೋರೀ | ಸೃಜಿಸಿದೆ ಜ್ಞಾನಸಿರೀ |

ನಿರ್ಮಲ | ವಿಜಯನ ಸಹಕಾರೀ ||

ಸುಜನೋದ್ಧಾರಿ | ರಜಗುಣಹಾರೀ || ಕುಜನರಸಂ |

ಹಾರಿ | ನರಹರಿ | ಭಜಕರ ಸಂಸಾರೀ ||3|

ಪ್ರಜ್ಞೆ ಶಿವನಾಜ್ಞೆ | ಆಜ್ಞಾ ಚಕ್ರದಿ ಗುರುಸಂಜ್ಞೆ ||ಪ||

ಪೃಥ್ವೀಸ್ಥಾನದೊಳಿಹುದು | ಸತ್ತೆಂದೆನಿಸುತ ಬೆಳಗಿಹುದು ||1||

ಅಗ್ನಿಸ್ಥಾನದೊಳಿರುವಾ | ವಿಘ್ನಗಳಿಲ್ಲದೆ ನಿಜವರಿವಾ ||2||

ಆಪೋಸ್ಥಾನದೊಳಿರ್ಪಾ | ಆಪೋ ಜ್ಯೋತಿಯೆ ತಾನೆನಿಪಾ ||3||

ವಾಯು ಸ್ಥಾನವ ಸೇರಿ | ಕಾಯವ ಕಾಯುವ ಭವಹಾರಿ ||4||

ಆಕಾಶವ ಸೇರಿಹುದು | ಏಕಾಕ್ಷರ ನರಹರಿಯಹುದು ||5||

ನೀನು ಮುಟ್ಟಿದುದೆಲ್ಲ ಚಿನ್ನ | ನಿನ್ನ |

ಧ್ಯಾನದಲ್ಲಿರುವುದೆ ಚೆನ್ನ ||ಪ||

ಆನಂದ ನಿಧಿ ನಿನ್ನ | ಜ್ಞಾನವೆಂಬುದೆ ರತ್ನ ||

ನೀನಾಗಿ ಕೊಡಲೆನ್ನ | ದೀನತ್ವವೇ ಶೂನ್ಯ ||ಅ|ಪ||

ಕುರುಡಂಗೆ ಕಣ್ಣನ್ನು ಕೊಟ್ಟೆ | ದಿವ್ಯ |

ಪರ ವಸ್ತುವನಂತೋರಿಬಿಟ್ಟೆ ||

ಬರಡಾದ ಬುದ್ಧಿಯನು | ಕರೆವಾಕಳನುಗೈದೆ ||

ಕೊರಡಾದ ಮನ ಚಿಗುರಿ | ಮರವಾಗಿಬಿಟ್ಟಿದೆ ||1||

ಲೋಕಕ್ಕೆ ನೀ ಕಾಮಧೇನು | ಸದ್ವಿ |

ವೇಕಾಮೃತವ ಕರೆದೆ ನೀನು ||

ಏಕಾಕ್ಷರೀ ರೂಪ | ಏಕಾಂತದನುಭಾವ ||

ಸಾಕಾಗುವಂತಿತ್ತು | ಸಾಕುವೆ ಗುರುದೇವ ||2||

ಕಲ್ಪನೆಗಳೆಲ್ಲವ ಹರಿವೇ | ನಿಸ್ಸಂ |

ಕಲ್ಪವೆನ್ನುವ ಕಲ್ಪತರುವೇ ||

ಸ್ವಲ್ಪವಾದರು ಚಿಂತೆ | ಕಲ್ಪನೆಗೆ ಬರದಂತೆ |

ಒಳ್ಪಾದ ಶೇಷನ | ತಲ್ಪಶ್ರೀ ನರಹರಿಯೆ ||3||

ಅರಿವೆ ಬ್ರಹ್ಮ ಮರವೆ ಮಾಯೆ ಅರಿತುಕೊಳ್ಳಿರಿ ||ಪ||

ಮರವೆಯಿಲ್ಲದಚ್ಚ ಅರಿವ ಬೆರೆತುಕೊಳ್ಳಿರಿ ||ಅ|ಪ||

ಅರಿವು ಮರವೆ ಎರಡು ಇರಲು ಜೀವ ಭಾವವು ||

ಮರವೆಯಿಲ್ಲದರಿವುವೊಂದೆ ಬ್ರಹ್ಮ ಭಾವವು ||1||

ಅರಿವೆ ಬೆಳಕು ಮರವೆ ಕತ್ತಲೆನ್ನಿಸಿರುವುದು ||

ಅರಿವೆ ಜನನ ಮರವೆ ಮರಣ ಜೀವನಿರವಿದು ||2||

ಅರಿವೆ ಮೊದಲು ಮರವೆ ತುದಿಯೊಳಾಗುತಿರುವುದು ||

ಮರವೆ ತುದಿಯೊಳರಿವೆ ನಿಂತು ಬೆಳಗುತಿರುವುದು ||3||

ಮರವೆ ಬಂದು ಹೋದುದೆಂದು ಅರಿವೆ ಪೇಳ್ವುದು ||

ಅರಿವು ಆದಿಯಂತ್ಯವಾಗಿ ನಿಂತು ತೋರ್ಪುದು ||4||

ತನ್ನನರಿತು ಅನ್ಯ ಮರೆಯೆ ಸಮ್ಯ ಜ್ಞಾನವು ||

ತನ್ನ ಮರೆತು ಅನ್ಯವರಿಯಲದು ಅಜ್ಞಾನವು ||5||

ಅರಿವು ಮರವೆ ತೋರದಿರ್ಪ ಅರಿವೆ ಬ್ರಹ್ಮವು ||

ಅರಿವಿನಲ್ಲೆ ಮರವೆ ತೋರಿ ಮಾಯವಪ್ಪುದು ||6||

ಅರಿವೆ ಬ್ರಹ್ಮ ಅರಿವೆ ಗುರುವು ನರಹರೀಂದ್ರನು ||

ಮರವೆ ಮಾಯೆ ಮರವೆ ಜೀವ ಭಾವವೆಂದನು ||7||

ಗಂಗಾ ಸ್ನಾನವ ಮಾಡಿರೋ | ನಿತ್ಯವು |

ತುಂಗಾಪಾನವ ಬೇಡಿರೋ ||ಪ||

ಕಂಗಳೊಳಗೆ ಸ | ರ್ವಾಂಗದಿ ಹರಿಯುವ ||

ಗಂಗೆಯಲ್ಲಿಹ ಶಿವ | ಲಿಂಗವ ಕಾಣಲು ||ಅ|ಪ||

ತ್ರಿಪಥ ಗಾಮಿನಿ ಗಂಗೆಯು | ಮಾರ್ಗದಿ |

ಗುಪಿತಗಾಮಿನಿಯಾಗಿಯು ||

ತ್ರಿಪುಟಿಯ ಮೀರುತ | ಚಪಲವ ನೀಗುತ ||

ವಿಪುಲ ಪ್ರವಾಹವ | ಸಫಲವ ಮಾಡುವ ||1||

ಶಿವನ ತಲೆಯನು ಸೇರುತಾ | ನಭದಿಂ |

ಭುವನಕ್ಕಿಳಿದು ಸಾರುತಾ ||

ಭುವಿಯೊಳು ಹರಿಯುತ | ನವಸುಖವೀಯುತ ||

ಭವಿಗಳು ಮುಳುಗಲು | ಭವವನು ನೀಗುವ ||2||

ಜ್ಞಾನಗಂಗಾ ಸ್ನಾನವು | ಉತ್ತಮ |

ಧ್ಯಾನ ತುಂಗಾ ಪಾನವು ||

ಸ್ವಾನುಭವಾಮೃತ | ಆನಂದಾವೃತ |

ಶ್ರೀ ನರಹರಿಪದ | ವನಜದಿ ಪುಟ್ಟಿದ ||3||

ಯನಗಾಗಿ ಕಳೆದುಬಿಟ್ಟೆ ಕಾಲವೆಲ್ಲಾ ಶಿವನೆ ||

ನಿನಗಾಗಿ ಸ್ವಲ್ಪವಾದರುಳಿಸಲಿಲ್ಲ ||ಪ||

ಮನವೆಲ್ಲ ಲೌಕಿಕಕ್ಕೆ ಮೀಸಲಾಯ್ತು ಕೆಟ್ಟ

ಗುಣದಲ್ಲಿ ನಿಂತುಕೊಂಡೆ ಮೂರು ಹೊತ್ತು ||ಅ|ಪ||

ನೀನಿತ್ತ ದೇಹವನ್ನು ನನ್ನದೆಂದೆ | ಕೆಟ್ಟ |

ಮಾನಾಭಿಮಾನದಲ್ಲಿ ಸಿಕ್ಕಿ ನೊಂದೆ |

ಜ್ಞಾನಾರ್ಥವೆಂಬುದನ್ನು ತಿಳಿಯದಿದ್ದೆ | ನಿನ್ನ |

ಆನಂದ ರೂಪವನ್ನು ಕಾಣದಾದೆ ||1||

ಕರಣೇಂದ್ರಿಯಂಗಳೆಲ್ಲ ನನ್ನವೆಂದು | ಘೋರ |

ನರಕಕ್ಕೆ ಭಾಗಿಯಾಗಿ ಬಿಟ್ಟೆನಿಂದು ||

ಮರಣಕ್ಕೆ ಹೆದರಿಕೊಂಡು ಪಾಲಿಸೆಂದು | ನಿನ್ನ |

ಚರಣಕ್ಕೆ ಬಾಗಿ ನಿಂದೆ ಕೊನೆಗೆ ಬಂದು ||2||

ನರ ರೂಪನಾಗಿ ನೀನೆ ಬಂದೆಯಲ್ಲಾ | ಯನ್ನ |

ಪರಿತಾಪ ನೀಗಲೆಂದು ನಿಂದೆಯಲ್ಲಾ ||

ಗುರುದೇವ ನರಹರೀಂದ್ರ ನೀನೆಯೆಲ್ಲಾ | ಪಾಪ |

ಹರನಾಗಿ ಹರನುಯೆನ್ನಿಸಿರ್ಪೆಯಲ್ಲಾ ||3||

ಸಾರಾಸಾರ ವಿಚಾರ ತರಂಗ |

ಕೌರವ ಪಾಂಡವ ರಣರಂಗ ||ಪ||

ಭಾರತ ಯುದ್ಧದ ಕಥಾಪ್ರಸಂಗ |

ಸೇರಿದೆ ತನ್ನಯ ಸರ್ವಾಂಗ ||ಅ|ಪ||

ದುರ್ಗುಣಗಳೆ ಕೌರವರ ಪರಿವಾರ |

ಸದ್ಗುಣ ಪಾಂಡವ ಪರಿವಾರ ||

ನಿರ್ಗುಣ ಕೃಷ್ಣನೆ ಸಾಕ್ಷಿಕವೀರ |

ನಿಗ್ರಹ ಕೌರವ ಪರಿವಾರ ||1||

ಹನ್ನೊಂದಕ್ಷೋಹಿಣೀ ಕೌರವರ |

ಸೈನ್ಯವು ಸೇರಿತು ನಿರ್ಧಾರ ||

ಹನ್ನೊಂದಿಂದ್ರಿಯಗಳ ವ್ಯಾಪಾರ |

ತನ್ನೊಳಗಾಯಿತು ಸಂಹಾರ ||2||

ಏಳು ಚಕ್ರಗಳ ತತ್ವ ವಿಚಾರ |

ಏಳಕ್ಷೋಹಿಣಿ ಪಾಂಡವರ ||

ಮೂಲ ಬಲವಿದೇ ಮೂಲಾಧಾರ |

ಮೇಳವಿಸಿಹುದು ಸಹಸ್ರಾರ ||3||

ಮಂತ್ರದಿ ಹುಟ್ಟಿದ ಪಾಂಡವ ವೀರರು |

ಮಂತ್ರದಿ ಹುಟ್ಟಿದ ಕೌರವರು ||

ಮಂತ್ರ ವಿಚಾರದ ಯುದ್ಧಕೆ ನಿಂತರು |

ತಂತ್ರದೊಳಳಿದರು ಕೌರವರು ||4||

ಸರ್ವರಂತರಂಗದೊಳೀ ಯುದ್ಧಾ |

ಸರ್ವಕಾಲ ನಡೆವುದೆ ಸಿದ್ಧಾ ||

ಉರ್ವಿಯ ಗೆಲ್ಲಲು ತಾ ಪರಿಶುದ್ಧಾ |

ನಿರ್ವಿಕಾರಿ ನರಹರಿಯಿದ್ದಾ ||5||

ಬಾಲಾ ತಿಳಿ ನಿನ್ನ ಮೂಲಾ | ಹಂಸಲೀಲಾ |

ಮುಕ್ತಿ | ಮಾರ್ಗಾನುಕೂಲಾ ||ಪ||

ಶಿವನಿಂದ ನೀ ಬಂದೆ | ಶಿವನ ಕಾಣದೆ ನಿಂದೆ ||

ಶಿವಮಂತ್ರ ಬಲದಿಂದೆ || ಭವವಿಲ್ಲ ನಿನಗಿಂದೆ ||1||

ನಡೆಯಲ್ಲಿ ಹಂಸನ | ಹಿಡಿದುಕೊಂಡವ ಜಾಣ |

ನುಡಿಯುತ್ತ ಮಂತ್ರವ | ಪಡೆಯೊ ಸ್ವತಂತ್ರವ ||2||

ನಾದವನ್ನಾರೈದು | ವೇದಮಂತ್ರವನಾಯ್ದು ||

ಬೋಧಿಸುವ ಗುರುವಿನ | ಪಾದಪದ್ಮವ ಕಂಡು ||3||

ಏಳು ಚಕ್ರಗಳನ್ನು | ತಾಳಿ ಭೋರ್ಗರೆವಂಥ ||

ಮೂಲಮಂತ್ರದೊಳಿರ್ಪ | ನೀಲಕಂಠನ ಕೂಡಿ ||4||

ಓಂಕಾರವನು ಕೂಡಿ | ಝೇಂಕಾರ ಕೊನೆ ಮಾಡಿ ||

ಸೋಂಕಿಲ್ಲದಿಹ ನಿಷ್ಕ | ಳಂಕ ನರಹರಿಯಿಂದ ||5||

ಸುತ್ತಲು ಕತ್ತಲು ಮುತ್ತಲು ಬೆಳಕ |

ನ್ನಿತ್ತ ಮಹಾತ್ಮನು ಯಾರಮ್ಮಾ ||ಪ||

ಅತ್ತಲು ಇತ್ತಲು ಎತ್ತಲು ಕಾಯುತ |

ಸುತ್ತುತಲಿರುವನು ನೋಡಮ್ಮಾ ||ಅ|ಪ||

ನೂತನ ಚೇತನ ದಾತನ ಕಂಡರೆ |

ಯಾತರ ಭಯ ನಿನಗಿಲ್ಲಮ್ಮಾ ||

ಜಾತಕ ಸೂತಕ ಪಾತಕವೆಲ್ಲವ |

ನಾತನೆ ಪರಿಹರಿಸುವನಮ್ಮಾ ||1||

ನಾದವನೈದುವ ವೇದವನೋದುವ

ಸಾಧುವ ಕಂಡರೆ ತೋರಮ್ಮಾ ||

ಖೇದವ ಮೋದವ ಭೇದಿಸಿ ನಿಲ್ಲುವ |

ಬೋಧೆಯ ಕೇಳುತ ಸಾರಮ್ಮಾ ||2||

ಹಿಂದಕೆ ಮುಂದಕೆ ಹೊಂದಿಕೆಯಾಗಿಯೆ |

ನಿಂದು ಕಾಯುವನ ಸೇರಮ್ಮಾ ||

ಅಂದಿಗೆ ಇಂದಿಗೆ ಎಂದಿಗೆ ಒಂದೇ |

ಚಂದದಿ ನರಹರಿ ಇಹನಮ್ಮಾ ||3||

ಗುರುವೇ ಕಳೆಯೆನ್ನ ಮರವೇ | ನಿನ್ನ ಅರಿವೇ ||

ನಾನು ತಿಳಿಯದಂತಿರುವೇ ||ಪ||

ಶಿವ ನಿನ್ನೊಳಿಹನೆಂದೆ | ಶಿವನೀನೆ ಅಹುದೆಂದೆ

ಭವವಿಲ್ಲ ನಿನಗೆಂದೆ | ವಿವರವಾಗದು ತಂದೆ ||1||

ಶಿವನಾಮ ನೆನೆಯೆಂಬೆ | ಅವಿವೇಕ ಬಿಡು ಎಂಬೆ ||

ಸುವಿರಾಗ ಪಡೆಯೆಂಬೆ | ಕವಿಯುತ್ತಲಿದೆ ಮೋಹ ||2||

ಭಕ್ತಿಭಾವದೊಳಿರ್ಪ | ಯುಕ್ತಿ ತೋರದು ಯನಗೆ ||

ರಕ್ತಿ ಹೋಗದು ಸುವಿ | ರಕ್ತಿ ಸಾಧಿಸದಯ್ಯ ||3||

ಜ್ಞಾನವೆಂಬುದೆ ಅನು | ಮಾನವಾಗಿದೆ ನಿನ್ನ ||

ಧ್ಯಾನ ನಿಲ್ಲದು ನನಗೆ | ಏ | ನು ಮಾಡುವೆನಯ್ಯ ||4||

ನೀನೆ ಕೃಪೆಯಿಂದೆನ್ನ | ಜ್ಞಾನ ನಾಶವ ಮಾಡಿ ||

ಹಾನಿಯಿಲ್ಲದೆ ಕಾಯೊ | ಶ್ರೀ ನರಹರಿದೇವ ||5||

ಎಲ್ಲ ನಿನ್ನದಯ್ಯ ಶಿವನೆ | ಎಲ್ಲ ನಿನ್ನದು ||ಪ||

ಎಲ್ಲಿ ನೋಡೆ ಕಾಣಲಿಲ್ಲ ನನ್ನದೆಂಬುದು ||

ಅಲ್ಲಿ ಇಲ್ಲಿ ಎಲ್ಲಿ ಇರುವುದೆಲ್ಲ ನಿನ್ನದು |

ಕಳ್ಳಬುದ್ಧಿ ನನ್ನೊಳುಂಟು ನನ್ನದೆಂಬುದು ||ಅ|ಪ||

ನನ್ನದೆಂದುಕೊಂಡ ದೇಹ ನನ್ನದಲ್ಲವು |

ನನ್ನದಾದರೇಕೆ ಹಿಂದೆ ಬಾರಲಿಲ್ಲವು ||

ನನ್ನದೆಂದುಕೊಂಡ ಮನವು ಮಾಯವಾಯಿತು |

ನನ್ನದೆಂದುಕೊಂಡ ಧನವು ಕಾಯದಾಯಿತು ||1||

ತಂದೆ ತಾಯಿ ಬಂಧು ಬಳಗ ನನ್ನದಲ್ಲವು

ಹೊಂದಿಯನ್ನ ಹಿಂದೆ ಯಾರು ಬಾರಲಿಲ್ಲವು ||

ತಂದೆ ತಾಯಿ ಬಂಧು ಬಳಗ ನೀನೆ ಎಲ್ಲವು |

ಎಂದ ಮಾತ್ರದಿಂದ ಯನಗೆ ಬಂಧವಿಲ್ಲವು ||2||

ಸತಿಯು ಸುತರು ಹಿತರು ಯನ್ನ ಸೇರಲೊಲ್ಲರು |

ಹಿತನು ನೀನೆಯೆಂಬರು ಸತ್ಪುರುಷರೆಲ್ಲರು ||

ಪತಿತ ಪಾವನಾತ್ಮ ನಿನ್ನನವರು ಬಲ್ಲರು |

ಗತಿಯು ನೀನೆ ನರಹರೀಂದ್ರ ಎಂದು ಗೆಲ್ವರು ||3||

ಜನ್ಮವೆಂಬರಣ್ಯವನ್ನು ಸೇರಿಕೊಂಡೆನು ||

ಕರ್ಮವೆಂಬ ಕತ್ತಲಲ್ಲಿ ದಾರಿ ಕಾಣೆನು ||ಪ||

ಸಮ್ಯಜ್ಞಾನ ದೀಪವನ್ನು ಬೆಳಗಿಸಿಟ್ಟನು |

ಧರ್ಮವೀರ ನರಹರೀಂದ್ರ ಸಲಹಿಬಿಟ್ಟನು ||ಅ|ಪ||

ಆಸೆಯೆಂಬ ಬಳ್ಳಿಯನ್ನು ತೊಡರಿ ಬಿದ್ದೆನು |

ಕ್ಲೇಶಪಟ್ಟು ಕಾಯ್ವರನ್ನು ಕಾಣದಿದ್ದೆನು ||

ಈಶಜ್ಞಾನ ಖಡ್ಗದಿಂದ ಛೇದಿಸಿದ್ದನು |

ದಾಸರನ್ನು ಕಾಯಬಲ್ಲ ನರಹರೀಂದ್ರನು ||1||

ಬಂಧುಬಳಗವೆಂಬ ಸೆರೆಯ ಮನೆಯ ಸೇರಿದೆ |

ಬಂಧನವನು ಬಿಡಿಸಿಕೊಳಲು ಮಾರ್ಗ ತೋರದೆ ||

ನೊಂದು ದೈನ್ಯದಿಂದ ಬೇಡಲಾಗನಿಲ್ಲದೆ |

ಬಂದು ಕಾಯ್ದ ನರಹರೀಂದ್ರ ತಡವೆಯಿಲ್ಲದೆ ||2||

ಮೂರು ಲೋಕದಲ್ಲಿ ಈತಗಿದಿರು ಇಲ್ಲವು

ಸಾರುತಿಹುದು ಕೀರ್ತಿಯನ್ನು ವೇದವೆಲ್ಲವು ||

ಪಾರು ಮಾಡಿ ಭಕ್ತರನ್ನು ಕಾಯಬಲ್ಲನು |

ಧೀರ ನರಹರೀಂದ್ರ ಗುರುವು ಎಂಥ ಚೆಲ್ವನು ||3||

ಸತ್ಯ ಸನಾತನ ಬ್ರಹ್ಮವನು | ವರ |

ನಿತ್ಯ ವಿನೂತನ ಧರ್ಮವನು ||ಪ||

ಪ್ರತ್ಯಗಾತ್ಮನೊಳು ಕಾಣ್ಬವನು | ನಿಜ |

ನಿತ್ಯ ಮುಕ್ತನೆಂದೆನಿಸುವನು ||ಅ|ಪ||

ಹಂಸನ ಸಂಚಾರವ ತಡೆದು | ಬ್ರ |

ಹ್ಮಾಂಶದಿ ಬೆರೆಯಲು ಮುನ್ನಡೆದು ||

ಸಂಶಯವಿಲ್ಲದೆ ಭೋರ್ಗರೆದು | ಭವ |

ಧ್ವಂಸವ ಮಾಡಲು ನಿಜವರಿದು ||1||

ಮಂತ್ರದೊಳಗೆ ಶಿವನಿರುತಿಹನು | ಸ |

ನ್ಮಂತ್ರದಿ ಜೀವನು ಬೆರೆತಿಹನು ||

ತಂತ್ರವ ಬಲ್ಲವ ಗೆಲ್ಲುವನು | ಸ್ವಾ |

ತಂತ್ರದಿ ಶಿವನೊಳು ನಿಲ್ಲುವನು ||2||

ಅರ್ಧ ಮಾತ್ರೆಯೊಳು ನಿಂತವನು | ನಿಜ |

ನಿರ್ಧರವಾಗಿರುವಂಥವನು ||

ಸಿದ್ಧಿಸಿದನು ಕೈವಲ್ಯವನು | ಸೊಗ |

ಸಿದ್ದನು ನರಹರಿ ಪಾದವನು ||3||

ಶಿವಶಿವಶಿವ ಶಂಭೋ | ಎಂಬುದೆ | ಶಿವನೊಲುಮೆಗೆ ಇಂಬ ||ಪ||

ಶಿವಕಥನಾಮೃತ | ಕಿವಿಯೊಳು ತುಂಬೋ ||

ಶಿವಪದ ದೊರೆವನು | ಭವವಿದು ನಂಬೋ ||ಅ|ಪ||

ಆನಂದದ ಲಹರೀ | ನಿನ್ನಯ | ಧ್ಯಾನದಿ ಮೈದೋರೀ ||

ನಾನೆನ್ನುವ ಅಭಿ | ಮಾನವೆಯಿಲ್ಲದೆ ||

ನೀನೇ ಮೈಮರೆ | ದೇನೊಂದರಿಯದೆ ||1||

ಮಾಯಾಮಯ ಲೋಕ | ನಂಬುತ | ಸಾಯುವುದವಿವೇಕಾ ||

ಕಾಯವ ನಂಬಿದ | ರಾಯಿತು ಶೋಕಾ ||

ಬಾಯೊಳು ಶಿವಯೆನೆ | ಕಾಯುವುದಧಿಕಾ ||2||

ನಡೆನುಡಿಯೊಂದಾಗಿ | ನಿಲ್ಲುವ | ಕಡೆಯೊಳು ನೆಲೆಯಾಗಿ ||

ಮೃಡನಡಿಯೊಳಗೆ | ಅಡಗಿದ | ಶರಣನು ||

ಪಡೆವನು ನರಹರಿ | ಕಡು ಕರುಣವನು ||3||

ಪುರುಷೋತ್ತಮಾ | ಗುರು | ಪುರುಷೋತ್ತಮಾ ||ಪ||

ಗುರುವಿಲ್ಲದವನಾದ ಪುರುಷಾಧಮಾ | ನಿಜ |

ಪುರುಷಾರ್ಥ ಗುರುನಾಥನೊಳು ಸಕ್ರಮಾ ||ಅ|ಪ||

ನರನೆನ್ನಿಸಿ ಸ| ದ್ಗುರು ಜನ್ಮಿಸೀ ||

ಸುರರೆಲ್ಲರನು ಮೀರಿದವನೆನ್ನಿಸೀ | ಶ್ರೀ |

ಹರಿಯಲ್ಲಿ ಸೇರಿರ್ಪ ನಿಜ ಸಾಧಿಸೀ ||1||

ಹರಿತೋರಿ ದಾಹ | ತ್ತವತಾರದಾ |

ಪರಿಯನ್ನು ತನ್ನಲ್ಲೆ ಸರಿ ತೋರಿದಾ | ಸುಂ

ದರ ವಿಶ್ವರೂಪವ ತಾ ತಾಳಿದಾ ||2||

ನವನೀತವಾ ಅನು | ಭವ ಜಾತವಾ ||

ಸವಿಯುತ್ತ ಸದ್ಬೋಧ ಸುಧೆಯೀಯುವಾ | ಕೇ |

ಶವ ನಮ್ಮ ನರಹರಿ ಗುರು ಮಾಧವಾ ||3||

ಇರವೇ ಕಳಹಂಸನಿರುವೇ | ಅಚ್ಚ ಅರಿವೇ |

ನಿತ್ಯ ಸುಖವಾಗಿ ಮೆರೆವೇ ||ಪ||

ಧರೆಯಲ್ಲಿ ಚರಿಸುತ್ತ | ಲಿರುವಂಥ ಇರವೇ ||

ಪರಮಾನುಭವ ಯೋಗ | ಮೆರೆವಂಥ ಇರವೇ ||1||

ಅತಿ ಸೂಕ್ಷ್ಮವಾಗಿರುವೇ | ಗತಿಯನ್ನು ತೋರುವೆ ||

ಕೃತಿಯಿಂದ ಸಾರುವೆ | ಸತತ ಸಂಚರಿಸುವೆ ||2||

ಸತ್ತು ಚಿತ್ತಾನಂದ | ನಿತ್ಯ ಪರಿಪೂರ್ಣದ |

ತತ್ವದರ್ಶನ ಜ್ಞಾನ | ಸೂತ್ರವೆನ್ನಿಸಿದಂಥ ||3||

ಮೂರವಸ್ಥೆಗಳಲ್ಲಿ | ಬೇರೆ ಬೇರೆನಿಸದೆ |

ತೋರಿ ತೋರದೆಯೇಕಾ | ಕಾರವಾಗಿರುವಂಥ ||4||

ನಿನ್ನಿಂದ ಯೋಗವು | ನಿನ್ನಂದ ಭೋಗವು ||

ನಿನ್ನಲ್ಲೆ ಶಿವನುಂಟು | ಇನ್ನು ಜೀವನು ಉಂಟು ||5||

ನೀನಾಡುತಿರೆ ದೇಹ | ತಾನಾಡುತಿರುವುದು ||

ನೀನಾಡದಿರಲಾಗಿ | ತಾನಿಲ್ಲವಾಗುವುದು ||6||

ಆನಂದ ರೂಪನು | ಜ್ಞಾನ ಸ್ವರೂಪನು |

ಶ್ರೀ ನರಹರಿಯಾಗಿ | ಸ್ವಾನುಭಾವದಿ ತೋರ್ಪ ||7||

ಜಗಜೀವನ ರಾಮಾ | ಚಿನ್ಮಯ | ಜಗಪಾವನನಾಮಾ ||ಪ||

ಜಗದಭಿರಾಮಾ | ನಿಗಮಾ ರಾಮಾ ||

ಅಗಣಿತ ಮಹಿಮಾ| ಸುಗತಿಯ ಧಾಮಾ ||ಅ|ಪ||

ಮೂಲಾಧಾರವನು | ಸೇರುತ | ಕಾಲವ ಮೀರಿದನು ||

ಲೀಲೆಯೊಳೀ ಜಗ | ಪಾಲನೆನಿಸಿದನು ||

ಭೂಲಲನಾತ್ಮಜೆ | ಲೋಲನೆನಿಸಿದನು ||1||

ಸ್ವಾಧಿಷ್ಠಾನವನು | ಸೇರುತ | ವೇದವ ಪಠಿಸುವನು ||

ಬೋಧಾನಂದಾಂ | ಬುಧಿಯೊಳು ಮಲಗಿದ ||

ನಾದಾನಂದವ | ಸಾಧಿಸಿ ಬೆಳಗಿದ ||2||

ಮಣಿಪೂರಕ ಸೇರಿ | ಅಗ್ನಿಯ | ಘನವೆನ್ನಿಸಿ ತೋರಿ ||

ದಿನವಹಿ ಯಜ್ಞಗ | ಳನು ನಿರ್ವಹಿಸುವ ||

ಅನಿಮಿಷರಿಗೆ ಪಾ | ವನಸುಧೆಯೀಯುವ ||3||

ಹೊಂದಿಯನಾಹತವಾ | ವಾಯುವ | ಸಂಧಿಸಿ ಜಗ ಹಿತವಾ ||

ಚಂದದಿ ಯೋಗಾ | ನಂದದಿ ಬೆಳಗುವ ||

ಬಂಧುರ ಯೋಗಿಯ | ಮಂದಿರನೆನಿಸುವ ||4||

ಕಲೆತು ವಿಶುದ್ಧವನು | ಗಗನದಿ | ಬೆಳಗಿ ಪ್ರಸಿದ್ಧವನು ||

ಕಳೆಯುತಯೆಲ್ಲವ | ಬೆಳಗುತ ಲೋಕವ ||

ಕಳೆಗಳಿಗೆಲ್ಲಕೆ | ನೆಲೆಯಾಗಿರುವ ||5||

ಆಜ್ಞಾ ಚಕ್ರದೊಳು | ನಿಶ್ಚಯ | ಪ್ರಜ್ಞಾ ಮಾತ್ರದೊಳು ||

ಸುಜ್ಞಾನದ ನಿಜ | ಸಂಜ್ಞೆಯ ಮಾಡುವ ||

ಅಜ್ಞಾನವ ಹರಿ | ದಾಜ್ಞೆಯ ನೀಡುವ ||6||

ತಾನೆ ಸಹಸ್ರಾರ | ಸೇರುತ | ಜ್ಞಾನಾಮೃತಸಾರ ||

ತಾನೇ ಹೀರುತ | ಧ್ಯಾನವ ಸೇರುತ ||

ಮೌನದಿ ನರಹರಿ | ಯಾನಂದಾಶ್ರಿತ ||7||

ಶಿವನಿಗೆ ಒಡಲಾದ ಮಂತ್ರಾ | ಸರ್ವ |

ಭುವನಂಗಳಿಗೆ ತಾಯಿಯಾದ ಶಿವಮಂತ್ರಾ ||ಪ||

ಭವರೋಗಹರ ದಿವ್ಯ ಮಂತ್ರಾ | ಸರ್ವ |

ದಿವಿಜ ಕೋಟಿಗಳು ಧ್ಯಾನಿಸುತಿರ್ಪ ಮಂತ್ರಾ ||ಅ|ಪ||

ಪವನಯೋಗದೊಳಿರ್ಪ ಮಂತ್ರಾ | ಮುಂದೆ |

ಜವನ ಬಾಧೆಯ ದೂರ ಮಾಡುವ ಮಂತ್ರಾ ||

ತ್ರಿವಿಧ ತಾಪವನಳಿವ ಮಂತ್ರಾ | ದಿವ್ಯ |

ಶಿವಭಕ್ತಿ ಸುವಿರಕ್ತಿದಾಯಕ ಮಂತ್ರಾ ||1||

ಜೀವಭಾವನನಳಿವ ಮಂತ್ರಾ | ನಿತ್ಯ |

ಭಾವ ಶುದ್ಧಿಯನಿತ್ತು ಪೊರೆವಂಥ ಮಂತ್ರಾ ||

ಕೈವಲ್ಯವೀವ ಸನ್ಮಂತ್ರಾ | ಶಿವ |

ಜೀವರೈಕ್ಯಾನುಸಂಧಾನದ ಮಂತ್ರಾ ||2||

ತನು ಯಂತ್ರಕ್ಕಾಶ್ರಯ ಮಂತ್ರ | ಸತ್ಯ |

ಘನಶಾಂತಿ ತಪಯೋಗದಾಲಯ ಮಂತ್ರಾ ||

ಅನಘ ನರಹರಿ ಪೇಳ್ದ ಮಂತ್ರಾ | ವಿದ್ಯೆ |

ವಿನಯ ವಿವೇಕಕ್ಕೆ ನೆಲೆಯಾದ ಮಂತ್ರಾ ||3||

ಶಿವ ನಾಮಾಮೃತವಾ | ಸವಿಯುತ ಸಂಚಿತವಾ | ನೀಗುವೇ ||ಪ||

ಓನ್ನಮಶ್ಶಿವಾಯ | ಎನುವಾ |

ಪುಣ್ಯ ಸುಮಂತ್ರವ ಜಪಿಸುತ ಸತ್ಫಲವಾ | ಪೊಂದುವೇ ||1||

ಭೂತ ಪಂಚಕವನು ತುಂಬೀ |

ಚೇತನವಿತ್ತನು ಶಿವನೆಂಬುದ ನಂಬೀ | ನೆನೆಯುವೇ ||2||

ಶಿವನೆ ಓಂಕಾ | ರಾತ್ಮನಾಗಿ |

ಭುವನಗಳೆಲ್ಲವ ಪೊರೆವನು ತಾನಾಗಿ | ಯೆನ್ನುತಾ ||3||

ಧರೆ ಜಲಾಗ್ನಿಮರುತನಭವಾ |

ಧರಿಸಿರುವಥರ್ವೆ ನಮಶ್ಶಿವಾಯ ಪದಾ | ಸಂಪದಾ ||4||

ನಮಿಸಿ ಶಿವನಾ ಕೂಡಿಕೊಳುವಾ |

ವಿಮಲಾರ್ಥವ ನರಹರಿಯೇ ತಾ ಪೇಳ್ವಾ | ಕೇಳುವೇ ||5||

ಮೂರವತಾರವ ದಿನವೂ ತಪ್ಪದೆ |

ತೋರುವ ಮಹಾತ್ಮನಾರಮ್ಮಾ ||ಪ||

ಮೂರವಸ್ಥೆಗಾಧಾರನಾದವನ |

ಸೇರಲು ಬೇಗನೆ ಬಾರಮ್ಮ ||ಅ|ಪ||

ನಿದ್ದೆಯೊಳೆಚ್ಚರವಿದ್ದೋಡಾಡುತ |

ಲಿದ್ದು ಜಪವ ಮಾಳ್ಪುದ | ನೋಡು |

ನಿದ್ದೆಯಿಲ್ಲದಿಹ ಶುದ್ಧ ಪ್ರಾಜ್ಞನನು |

ಬುದ್ಧಿಯಿಂದ ತಿಳಿಯುತ ಕೂಡು ||1||

ಬಳಸಿದ ವಿಷಯಗಳೆಲ್ಲವ ಜಾಗ್ರದಿ |

ಸಲಿಸಿದ ವಿಶ್ವನೆನಿಸುತಿವನು ||

ಬಳಿಕ ಸುಷುಪ್ತಿಯೊಳೆಲ್ಲವ ವರ್ಜಿಸಿ |

ನಿಲುವ ಬ್ರಹ್ಮಚಾರಿಯು ತಾನು ||2||

ಕಂಡ ವಿಷಯಗಳನೊಂದನು ಬಿಡದೇ |

ಉಂಡನು ಜಾಗ್ರದೊಳೀ ಭೋಗಿ ||

ಉಂಡರು ಸಾಕೆನದುಣ್ಣುವೆನೆಂಬನು |

ಉಂಡುಪವಾಸಿಯು ತಾನಾಗಿ ||3||

ಜಾಗ್ರದೊಳೆಷ್ಟೋ ಉಂಡುದು ಸಾಲದೆ |

ಆಗ್ರಹಪಡುತಿಹನುಣಲಿಕ್ಕೆ ||

ಶೀಘ್ರ ಸ್ವಪ್ನದೊಳುಂಬನು ಹಸಿವನು |

ನಿಗ್ರಹಿಸದೆ ತಾಂ ತೈಜಸನು ||4||

ಬಳಸಿದ ಬ್ರಹ್ಮಚಾರಿಯ ಕೂಡುತ |

ಒಲಿಸುತ ಉಂಡುಪವಾಸಿಯನು ||

ಸುಳಿಯುವ ವಿಶ್ವನು ತೈಜಸ ಪ್ರಾಜ್ಞರ |

ತಿಳಿಯೀ ನರಹರಿ ಬೋಧೆಯೊಳು ||5||

ಭಯವುಂಟೆ ಭಕ್ತರಿಗೆ | ಸದ್ಗುರುವಿನ |

ದಯವುಳ್ಳ ಮುಕ್ತರಿಗೆ ||ಪ||

ನಯ ನೀತಿಯಲಿ ಗುರು | ಭಯಭೀತಿಯಿಂದಲಿ |

ದಯ ದಾಕ್ಷಿಣ್ಯಗಳಿಂದ ನಡೆಯುತ್ತಲಿರಲಾಗಿ ||ಅ|ಪ||

ಗುರು ಸನ್ನಿಧಾನದಲ್ಲಿ | ನಮ್ರತೆಯಿಂದ |

ಚರಣಾರವಿಂದದಲ್ಲಿ || ಎರಗುತ್ತ ಪಾಪವ|

ಹರಿಸುತ್ತ ಶ್ರವಣವಾ | ಚರಿಸುತ್ತ ಮನನವ |

ಧರಿಸುತ್ತಲಿರಲಾಗಿ ||1||

ತಗ್ಗಿ ಬಗ್ಗಿರಬೇಕು | ಅಭಿಮಾನವು |

ನುಗ್ಗು ನುಚ್ಚಾಗಬೇಕು | ಅಗ್ಗದ ನುಡಿಗಳಿಗೆ |

ಒಗ್ಗದೆ ಅರಗಳಿಗೆ | ಸ್ವರ್ಗ ಸೌಖ್ಯಗಳಿಗೆ |

ಹಿಗ್ಗದಿರುವವರಿಗೆ ||2||

ನಷ್ಟಕ್ಕೆ ಭಯಪಡದೆ ಲೋಕದಿ ಬಂದ |

ಕಷ್ಟಕ್ಕೆ ಎದೆಗೆಡದೆ || ಎಷ್ಟು ದುಃಖವು ಬರ |

ಲಿಷ್ಟು ಹಿಂದೆಗೆಯದೆ | ದುಷ್ಟ ಗುಣಗಳ ಮೀರಿ |

ನಿಷ್ಠರಾದವರಿಗೆ ||3||

ಹಿತಮಿತವಾಗಿರುತ | ನಿರ್ಮಲವಾದ | ಶೃತಿಮತ ನಂಬಿರುತಾ ||

ಸತಿಪುತ್ರ ಧನಧಾನ್ಯ | ದತಿಯಾಸೆ ಮಾಡದೆ |

ಸತತವು ನರಹರಿ | ಗತಿಯೆಂದಿರುವವಗೆ ||4||

ಏಳು ಕೋಟಿಯ ದ್ರವ್ಯ | ಹೂಳಿಟ್ಟರೈ ನೆಲ |

ಮಾಳಿಗೆಯಲ್ಲಾರಿಗರಿಯದಂತೆ ||ಪ||

ಹೇಳಿದ ಶಾಸ್ತ್ರವ | ಕೇಳಿ ಶೋಧಿಸಬೇಕೆಂ |

ದಾಲಯವೆಲ್ಲವ | ಕೀಳಿಸದೆ ||ಅ|ಪ||

ಭೋರುಗುಟ್ಟುತಲಿರ್ಪ | ಮೀರಿದ ಮಹಸರ್ಪ |

ಮೂರು ಹೊತ್ತೆಚ್ಚತ್ತು ಕಾಯುತಿದೆ ||

ಕ್ರೂರ ರಾಕ್ಷಸರು ಕಾವಲು ಮಾಡುತಿರುವರು |

ಯಾರಾರೂ ಹತ್ತಿರ ಸೇರದಂತೆ ||1||

ಕೋಣನು ಯಾರಿಗೆ | ಕಾಣದೆ ಕಾಯ್ವುದು |

ಜ್ಞಾನಾಂಜನದಿ ಕಂಡು | ಮೌನವಾದೆ ||

ಜಾಣ ಗುರು ಮಂತ್ರದ | ತ್ರಾಣದಿಂ ವಶಗೈದು |

ದೀನತ್ವವಳಿಸಿದನೆನಗೀತ ||2||

ತಲೆತಲಾಂತರದಿಂದ | ನೆಲದಲ್ಲಿ ಮುಚ್ಚಿತ್ತು |

ಬಲು ದಾರಿದ್ರ್ಯದಿ ನಾನು ಬಳಲುತಿದ್ದೆ ||

ಸುಲಭವಾಗಿಯೆ ಯೇನು | ಬಲಿಗೊಡದೆ ಸ್ವಾಧೀನ |

ಗೊಳಿಸಿದ ನರಹರಿ ಗುರುರಾಯ ||3||

ಮೌನ ನಿಲ್ಲದೆ | ಧ್ಯಾನ ಸಲ್ಲದೆ | ಜ್ಞಾನವೆನ್ನಿಸಲಾರದು ||ಪ||

ಜ್ಞಾನ ತುಂಬದೆ | ತಾನೆ ನಂಬದೆ | ಸ್ವಾನುಭಾವವು ಬಾರದು ||ಅ|ಪ||

ನಾದವಿಲ್ಲದೆ | ವೇದ ಸಲ್ಲದೆ | ಬೋಧೆ ತಾನಿರಲಾರದು ||

ಬೋಧೆ ನಂಬದೆ | ಸ್ವಾದ ತುಂಬದೆ | ಬಾಧೆಯಳಿದಿರಲಾರದು ||1||

ರಾಗನೀಗದೆ | ತ್ಯಾಗವಾಗದೆ | ಭೋಗದಾಸೆಯು ಹೋಗದು ||

ಭೋಗವೆಂಬುದೆ | ರೋಗವೆನ್ನದೆ | ಯೋಗ ತನ್ನೊಳಗಾಗದು ||2||

ಸೂಕ್ತಿ ಕೇಳದೆ | ಶಕ್ತಿ ತಾಳದೆ | ಭಕ್ತಿಭಾವವು ನಿಲ್ಲದು ||

ಭಕ್ತಿಯಿಲ್ಲದೆ | ಮುಕ್ತಿಯೆಲ್ಲಿದೆ | ಯುಕ್ತಿ ನರಹರಿಯಲ್ಲಿದೆ ||3||

ತೂಗುವ ತೊಟ್ಟಿಲ ನೋಡಮ್ಮಾ | ನೀ |

ನೀಗಲೆ ಜೋಗುಳ ಪಾಡಮ್ಮಾ ||ಪ||

ಯೋಗಕೆ ತಾನಿದು ಜೋಡಮ್ಮಾ | ನಿಗ |

ಮಾಗಮಧರ್ಮಕೆ ಬೀಡಮ್ಮಾ ||ಅ|ಪ||

ಯಾರೂ ತೂಗದೆ ತೂಗುವುದು | ಆ |

ಧಾರವಿದೆನ್ನಿಸಿ ಸಾಗಿಹುದು ||

ಧಾರಿಣಿ ತತ್ವದಿ ಸೇರಿಹುದು | ಸಂ |

ಚಾರ ವಿಲಾಸದಿ ತೋರುವುದು ||1||

ಹಂಸನ ರೂಪದೊಳಿರುತಿಹುದು | ನಿ |

ಸ್ಸಂಶಯ ಸತ್ಯವ ಕೂಡಿಹುದು ||

ವಂಶವ ಪಾವನ ಮಾಡುವುದು | ದೈ |

ವಾಂಶದಿ ತಾನೇ ಬೆರಸುವುದು ||2||

ಮೂರವಸ್ಥೆಯೊಳು ನಿಲ್ಲದಿದು | ತ್ರೈ |

ಮೂರು ತಿರೂಪವ ತಾಳಿಹುದು ||

ಈರೇಳ್ ಜಗಗಳ ತುಂಬಿಹುದು | ಚಿ |

ನ್ಮೂರುತಿ ನರಹರಿಯೊಳಗಿಹುದು ||3||

ಶಂಕರ ದುರಿತ ಭ | ಯಂಕರ ಭಕ್ತವ |

ಶಂಕರ ಸಂಕಟ ಪರಿಹಾರ ||ಪ||

ಕಿಂಕರ ಜನಕೆ ಸು | ಖಂಕರ ಶುಭಕರ |

ಝೇಂಕರಿಸೆನ್ನೊಳು ಓಂಕಾರ ||ಅ|ಪ||

ನಾದಾಧಾರನೆ ವೇದೋದ್ಧಾರನೆ |

ಬೋಧಾ ಸಾರನೆ ಭವಹರನೇ ||

ಭೇದ ವಿದೂರನೆ ಸುಖ ವಿಸ್ತಾರನೆ |

ಬಾಧೆಯ ಹರಿಸು ಮನೋಹರನೆ ||1||

ನಾದ ಮೂಡಲು ವೇದವು ಪಡುವಲು |

ಬೋಧೆಯು ಉತ್ತರ ದಿಕ್ಕಿನೊಳು ||

ಮೋದದಿ ದಕ್ಷಿಣ ಕರ್ಣವ ಸೇರಲು |

ಸ್ವಾದವಿದಾಯಿತು ನಿತ್ಯದೊಳು ||2||

ಅಜ್ಞರನೆಲ್ಲರ | ಸುಜ್ಞರಗೈಯುವ |

ಪ್ರಜ್ಞೆಯನೀಯುವ ಮಹದೇವಾ ||

ಆಜ್ಞಾ ಚಕ್ರದಿ | ಮಗ್ನನಾಗಿರುವ |

ಪ್ರಾಜ್ಞನೆ ನರಹರಿ ಗುರುದೇವಾ ||3||

ದುಃಖವೆಲ್ಲವು ಹೋಯ್ತು ಗುರುವಿನಿಂದ | ಸರ್ವ |

ಸೌಖ್ಯ ಸಾಧನೆಯಾಯ್ತು ಗುರುವಿನಿಂದ ||ಪ||

ಲೆಕ್ಕಸಿಕ್ಕಿತು ಯೀಗ ಗುರುವಿನಿಂದ | ಎಲ್ಲ |

ಸಿಕ್ಕು ತಪ್ಪಿತು ಯೀಗ ಗುರುವಿನಿಂದ ||ಅ|ಪ||

ಕಸವು ಷಡ್ರಸವಾಯ್ತು ಗುರುವಿನಿಂದ | ಘೋರ |

ವಿಷವು ಅಮೃತವಾಯ್ತು ಗುರುವಿನಿಂದ ||

ಹುಸಿಹೋಯ್ತು ದಿಟವಾಯ್ತು ಗುರುವಿನಿಂದ | ಕೆಟ್ಟ |

ಕಸುರೆಲ್ಲ ಹಸನಾಯ್ತು ಗುರುವಿನಿಂದ ||1||

ಅರಿವು ದೊರಕಿದುದೀಗ ಗುರುವಿನಿಂದ | ಮಾಯ |

ಮರವೆ ಹೋಯಿತು ಯೀಗ ಗುರುವಿನಿಂದ ||

ದುರಿತ ದುಃಖವು ಹೋಯ್ತು ಗುರುವಿನಿಂದ | ದಿವ್ಯ |

ಪರಮಾರ್ಥ ದೊರಕಿತ್ತು ಗುರುವಿನಿಂದ ||2||

ಅಕ್ಷರವು ಸಿಕ್ಕಿತ್ತು ಗುರುವಿನಿಂದ | ಒಂದೆ |

ಅಕ್ಷರವೆ ನಿಜವಾಯ್ತು ಗುರುವಿನಿಂದ ||

ಶಿಕ್ಷೆ ರಕ್ಷಣವಾಯ್ತು ಗುರುವಿನಿಂದ | ನಮಗೆ |

ಮೋಕ್ಷವು ನರಹರಿ ಗುರುವಿನಿಂದ ||3||

ಈತನ ಕಂಡರೆ ಭೀತಿಯೆ ಯಿಲ್ಲವು |

ಪ್ರೀತಿಯೊಳೀತನ ಸೇರಮ್ಮಾ ||ಪ||

ಜಾತಕ ಸೂತಕ ಪಾತಕವೆಲ್ಲವು |

ಸೋತವು ಈತಗೆ ಕೇಳಮ್ಮಾ ||ಅ|ಪ||

ಗಂಧದ ಬಾಗಿಲ ಮಂದಿರ | ಧರಣಿಗೆ |

ಬಂದು ಹೋಗುತಿಹನ್ಯಾರಮ್ಮಾ ||

ಮಿಂದು ಗಂಗೆಯೊಳು ನಿಂದು ಮಂತ್ರಗಳ |

ಚಂದದಿ ಪಠಿಸುವನ್ಯಾರಮ್ಮಾ ||1||

ಅನಿಮಿಷರನು ಕರೆ | ದುಣಿಸಲು ಯಜ್ಞದಿ |

ಅನಲನ ಪೂಜಿಪನ್ಯಾರಮ್ಮಾ ||

ಅನಿಲನ ಬಂಧಿಸಿ ಘನ ಯೋಗದೊಳಿಹ |

ಮನು ಮುನಿ ವಂದ್ಯನ ತೋರಮ್ಮಾ ||2||

ಬಯಲಾಟದಿ ತನ್ಮಯನಾಗುತ ನಿ |

ರ್ಭಯದೊಳು ಕುಣಿದವನ್ಯಾರಮ್ಮಾ ||

ಬಯಲೊಳಗೇ ಚಿದ್ಬಯಲನು ಸೇರುವ |

ಲಯ ಮೂರುತಿ ನರಹರಿಯಮ್ಮಾ ||3||

ಯೋಗವ ತಿಳಿದವರ‍್ಯಾರಯ್ಯ | ಭವ |

ರೋಗವ ಕಳೆದವರ‍್ಯಾರಯ್ಯ ||ಪ||

ಯೋಗವ ನಗಲದೆ ಮೂರವಸ್ಥೆಯೊಳು |

ಸಾಗುವ ಯೋಗಿಯ ಸಾರಯ್ಯ ||ಅ|ಪ||

ರೇಚಕ ಪೂರಕ ಕುಂಭಕವಾ | ಸಹ |

ಜಾಚರಣೆಯೊಳಿರುವಾತ ಶಿವಾ ||

ಗೋಚರಿಸುವ ಜಗವೆಲ್ಲವ ಸಲಹುವ ||

ಭೂಚರಿ ಮುದ್ರೆಯ ತಾಳಿರುವಾ ||1||

ಭೋಗಾಂಗದೊಳೇ ತಾನಿರುವಾ | ತನು |

ಭೋಗವನೆಲ್ಲವ ನೀಗಿರುವಾ ||

ತ್ಯಾಗಾಂಗದ ಹಂಗಿಲ್ಲದೆ ಮೆರೆಯುವ |

ತಾಗುತ ಸ್ವಪ್ನವ ತೋರಿರುವಾ ||2||

ಯೋಗಾಂಗದಿ ತಾ ಬೆರೆತಿರುವಾ | ಶಿವ |

ಯೋಗಿ ಸುಷುಪ್ತಿಯ ತಾಳಿರುವಾ ||

ತ್ಯಾಗಾಂಗವ ಭೋಗಾಂಗವ ಮೀರುವ |

ಶ್ರೀಗುರು ನರಹರಿಯಾಗಿರುವಾ ||3||

ಶಿವನ ಭಕ್ತರು ಶ್ರವಣ ಯುಕ್ತರು |

ಶಿವ ಸುಮಂತ್ರಾಸಕ್ತರು ||ಪ||

ಭವವಿಮುಕ್ತರು ಭುವಿಗೆ ಶಕ್ತರು |

ವಿವಿಧ ವಿಷಯ ವಿರಕ್ತರು ||ಅ|ಪ||

ನಾದದೊಳು ಪರನಾದ ವಿರ್ಪುದ |

ಶೋಧಿಸುತ್ತಿರುತಿರ್ಪರು ||

ಭೇದವಿಲ್ಲದ ನಾದಿ ಬ್ರಹ್ಮವ |

ಸಾಧಿಸುತ್ತದ ತೋರ್ಪರು ||1||

ಜಗವ ಕಾಣರು ಶಿವನ ಕಾಣ್ಬರು |

ಸಗುಣ ನಿರ್ಗುಣ ಗೈವರು ||

ಹಗಲು ರಾತ್ರಿಯ ಬಗೆಯ ಕಾಣರು

ನಿಗಮ ಬ್ರಹ್ಮದೊಳೈಕ್ಯರು ||2||

ಜೀವ ಭಾವವ ನಳಿದು ಸೋಹಂ |

ಭಾವವಂ ಬೆರೆದಿರ್ಪರು ||

ಸಾವು ಹುಟ್ಟುಗಳಳಿದು ನರಹರಿ |

ದೇವ ಬೋಧೆಯನಾಂತರು ||3||

ಅಕ್ಷಯ ಪಾತ್ರೆಯ ಕೊಟ್ಟನು ಗುರುವು |

ಅಕ್ಷಯವಾಗಲಿ ಎಂದನು ಅರಿವು ||ಪ||

ಅಕ್ಷರ ಬ್ರಹ್ಮವ ತೋರಲು ಗುರುವು |

ತಕ್ಷಣ ಹೋಯಿತು ಯನ್ನಯ ಮರವು ||ಅ|ಪ||

ಶ್ರವಣವೆ ನಾ ಪಿಡಿದಕ್ಷಯ ಪಾತ್ರೆ |

ಶಿವನ ವಿಚಾರವೆ ಅಕ್ಷರ ಮಾತ್ರೆ ||

ಭವ ದುಃಖದ ಹಸಿವಡಗಿದುದಿಂದು |

ಅವಿರಳ ಬ್ರಹ್ಮಾನಂದವು ನಿಂದು ||1||

ನಾದ ಬಿಂದು ಕಳೆಯಕ್ಷಯ ಪಾತ್ರೆ |

ಬೋಧಾ ರೂಪದಕ್ಷಯ ಪಾತ್ರೆ ||

ವೇದಾಂತಾಮೃತದಕ್ಷಯ ಪಾತ್ರೆ

ಸಾಧಿಸಿ ಕೊಟ್ಟನು ನಿಜಾರ್ಧ ಮಾತ್ರೆ ||2||

ಮೂರು ಕಣ್ಣು ಇರುವೀ ಪಾತ್ರೆಯನು |

ತೋರಿಕೊಟ್ಟ ಗುರುವೇ ಪರಶಿವನು ||

ಸಾರವ ಹೀರುತ ಲಾನಂದವನು |

ಸೇರುತ ನರಹರಿಯನು ನೆನೆಯುವೆನು ||3||

ಅರಮನೆ ಸ್ಥೂಲವು | ನೆರೆಮನೆ ಸೂಕ್ಷ್ಮವು |

ಸೆರೆಮನೆ ಕಾರಣ ತನುವಾಯ್ತು ||ಪ||

ಗುರುಮನೆಯಾಯಿತು ಮಹಾ ಕಾರಣವು |

ಬರಿಮನೆ ತೂರ್ಯವು ಎನಲಾಯ್ತು ||ಅ|ಪ||

ಅರಮನೆ ಜಾಗ್ರವು | ನೆರೆಮನೆ ಸ್ವಪ್ನವು |

ಸೆರೆಮನೆ ಸುಷುಪ್ತಿ ತಾನಾಯ್ತು ||

ಗುರುಮನೆ ಯೋಗ ಸಮಾಧಿಯೊಳಿರ್ಪುದು |

ಬರಿಮನೆ ಅಮನಸ್ಕವೆ ಆಯ್ತು ||1||

ಅರಮನೆ ನಾದವು | ನೆರೆಮನೆ ಬಿಂದುವು |

ಸೆರೆಮನೆ ಕಳೆಯೆಂದೆನಿಸಿತ್ತು ||

ಗುರುಮನೆ ಸುಷುಮ್ನೆಯೊಳು ಪರ ನಾದವು |

ಬರಿ ಮನೆ ಶೂನ್ಯವೆ ತಾನಾಯ್ತು ||2||

ಮನವೊಪ್ಪಿದುದೇ ಮನೆಯೆಂದೆನಿಸಿತು |

ಜನನ ಮರಣಗಳಿಗನುವಾಯ್ತು ||

ಮನ ಮೀರಿದ ಉನ್ಮನಿಯೊಳಗಿರ್ಪುದು |

ಮುನಿ ನರಹರಿ ಮನೆ ನಿಜವಾಯ್ತು ||3||

ಗುರುವಿನ ಪುತ್ರರು ತಿರಿದುಣ್ಣುವವರು ||

ಹರುಷದೊಳೆಲ್ಲರ ಕರೆದುಣ್ಣುವವರು ||ಪ||

ಪರಮಸುಜ್ಞಾನ ಪ್ರಸಾದವನಿವರು |

ನಿರುತವು ಬೇಡುತ್ತ ತಿರುಗುತಿರುವರು ||ಅ|ಪ||

ನಾಚಿಕೆಯಿಲ್ಲದೆ ಭೇದವನರಿಯದೆ |

ಯಾಚಿಸುತಿರ್ಪರು ಶಿವಶರಣರನ್ನು ||

ಭೂಚರಿ ಮುದ್ರೆಯ ಶಾಂಭವಿ ಮುದ್ರೆಯ |

ಖೇಚರಿ ಮುದ್ರೆಯೊಳಾಂತವರನ್ನು ||1||

ಶ್ರವಣದ ಭಿಕ್ಷವ ನಿತ್ಯವು ಬೇಡುತ |

ಶಿವನ ವಿಚಾರವ ಮನನವ ಮಾಡುತ ||

ಭವಹರವಾಗುವ ನವನಿಧಿ ಧ್ಯಾಸವ |

ಸವಿದಾನಂದವ ಪಡೆಯುತಲಿರುವ ||2||

ನಾದವ ಕೇಳುತ ಬಿಂದುವ ನೋಡುತ |

ಸಾಧಿಸಿ ಕಳೆಯೊಳು ಬೆಳಗುತ್ತಾ ||

ಬೋಧಾ ರೂಪವ ನರಹರಿ ಪಾದವ |

ಶೋಧಿಸಿ ಕೂಡುತ ನಲಿಯುತ್ತಾ ||3||

ವರುಣ ದೇವನೆ ಇಳಿದು ಬಾ | ಜಲ | ಧಾರೆಯಾಗಿಯೆ ಸುರಿದು ಬಾ ||ಪ||

ಧರೆಗೆ ಸೊಬಗಿನ ಮಳೆಯ ತಾ | ವಿ | ಸ್ತರದ ಜೀವರ ಸಲಹು ಬಾ ||ಅ|ಪ||

ಎಲ್ಲ ಜೀವರ ಪ್ರಾಣವು | ನಿ | ನ್ನಲ್ಲೆ ಸರ್ವರ ತ್ರಾಣವು ||

ಎಲ್ಲ ಜಗ ನಿರ್ಮಾಣವು | ನಿ | ನಲ್ಲಿ ಲೋಕ ವಿರಾಮವು ||1||

ಗುಡುಗು ಸೈನ್ಯದ ಗರ್ಜನೆ | ಬರ | ಸಿಡಿಲೆ ನಿನ್ನಯ ಗರ್ಜನೆ ||

ಜಡಿವ ಮಳೆ ಶರ ವರುಷವು | ಆ | ಕುಡಿಯ ಮಿಂಚೇ ಹರುಷವು ||2||

ಬರವು ಲೋಕಕೆ ತೊಂದರೆ | ಅದು | ಬರದು ನೀನೇ ಬಂದರೆ ||

ಹರುಷ ನೀನೈ ತಂದರೆ | ನೀ | ಸುರರ ದೊರೆ ಸೈಯೆಂದರೇ ||3||

ಸೊಬಗನೀಯುವ ಸ್ವಾಮಿಯೇ | ಶುಭ | ವಿಭವವೀಯುವ ಪ್ರೇಮಿಯೇ ||

ನಭದ ಮಾರ್ಗ ವಿಹಾರಿಯೇ | ದು | ರ್ಲಭದ ಸೌಖ್ಯಾಧಾರಿಯೇ ||4||

ಕಾಮಿತಾರ್ಥಗಳೆಲ್ಲವೀಯುವ | ಕಾಮ | ಧೇನುವದೆಲ್ಲಿದೆ ||

ಕಾಮಿತಂಗಳನೆಲ್ಲವೀಯುವ | ಸ್ವಾಮಿಯೇ ನಿನ್ನಲ್ಲಿದೆ ||5||

ಮಳೆಯೆ ಹೊನ್ನಿನ ಮಳೆಯು | ಎಂ | ಬುದ ಇಳೆಗೆ ತೋರಲು ಬೇಗ ಬಾ ||

ಮಳೆಯೆ ಪೃಥ್ವಿಗೆ ಕಳೆಯು | ಎಂ | ಬುದ ತಿಳಿಸಲೀಗಲೆ ಸಾಗಿ ಬಾ ||6||

ಎಲ್ಲ ಸೌಖ್ಯವ ಲೋಕಕೆ | ಕೊಡ | ಬಲ್ಲ ದೇವನು ಯಾತಕೆ ||

ನಿಲ್ಲುತಿರುವೇ ಸುಮ್ಮಗೆ | ನಿ | ನ್ನಲ್ಲಿ ನರಹರಿ ಬಿಮ್ಮಗೆ ||7||

ಒಂಟಿಯಾಗಿ ನಾನು ಇದ್ದರೆ | ಗುರುವರ |

ಜಂಟಿಯಾಗಿ ನನ್ನ ಕೂಡುವೆ ||ಪ||

ಕಂಟಕಂಗಳೆಲ್ಲ ಹರಿಸಿ |

ತುಂಟತನವನೆಲ್ಲ ಮರೆಸಿ ||

ಅಂಟಿ ಅಂಟದಂತೆ ನಿಲ್ಲುವೆ | ಕೂಡಲೇ |

ಒಂಟಿಯಾಗಿ ನಿಂತುಕೊಳ್ಳುವೆ ||ಅ|ಪ||

ಆಧಾರದಲ್ಲಿ ನಿಲ್ಲುತ | ಮುಂದೆ ನೀ |

ವೇದಾತ್ಮನಾಗಿ ತೋರುತ || ಆದಿಮಧ್ಯ ಅಂತ್ಯವೆಂಬ |

ಭೇದವಿಲ್ಲದಂತೆ ತುಂಬ ||

ಸ್ವಾಧಿಷ್ಠಾನದಲ್ಲಿ ಮೊಳಗಿದೇ | ಸರ್ವದಾ |

ಬೋಧಾತ್ಮನಾಗಿ ಬೆಳಗಿದೆ ||1||

ಮಣಿ ಪೂರಕವನು ಸೇರಿದೆ | ರತ್ನದ |

ಮಣಿಯಂತೆ ಬೆಳಕು ತೋರಿದೆ |

ದಿನಪ ಕೋಟಿ ತೇಜದಿಂದ |

ಮಿನುಗಿ ತೋರಿ ಮುಂದೆ ಬಂದ ||

ಘನವ ನೋಡಿ | ಬೆರಗುಗೊಂಡೆನೋ | ನಿನ್ನೊಳೆ |

ಅನ್ಯವರಿಯದಡಗಿಕೊಂಡನೋ ||2||

ನಾದಮೂರ್ತಿಯಾದುದಿಲ್ಲಿಯೇ | ಪಾವನ |

ವೇದಮೂರ್ತಿಯೆನಿಸುತಿಲ್ಲಿಯೆ |

ಮೋದದಿಂದನಾಹತದ |

ಹಾದಿಯಲ್ಲಿ | ಬಂದ ನಿನದ ||

ಸ್ವಾದದಿಂದ ಬೋಧೆಯಾಯಿತೋ | ಸಂಸೃತಿ |

ಬಾಧೆಯಿನ್ನು ಹರಿದು ಹೋಯಿತೋ ||3||

ಆವಿ ಶುದ್ಧಿ ಚಕ್ರದಲ್ಲಿಯೇ | ಬೆಳಗುತ |

ತೀವಿ ಬೆಳಕು ತುಂಬುತಲ್ಲಿಯೇ |

ದೇವ ದೇವನಾಗಿ ಬೆಳಗಿ |

ಭಾವಭಕ್ತಿಯಲ್ಲಿ ಮುಳುಗಿ ||

ಸಾವು ಗೆದ್ದು ಮುಕ್ತನಾದೆನೋ | ನಿನ್ನೊಳೆ |

ಕೈವಲ್ಯ ಪಡೆದು ನಿಂತೆನೋ ||4||

ಅಜ್ಞಾನವಳಿದು ಹೋಯಿತೋ | ನಿರ್ಮಲ |

ಸುಜ್ಞಾನ ತಿಳಿದು ಹೋಯಿತೋ |

ಆಜ್ಞ ಚಕ್ರದಲ್ಲಿ ನಿನ್ನ | ಆಜ್ಞೆ ಬದ್ಧನಾದ ಯನ್ನ ||

ಪ್ರಜ್ಞೆ ನಿನ್ನದಾಗಲಾಗಲೇ | ಮುಕ್ತಿಯು |

ವಿಘ್ನವಿಲ್ಲದಾಗಿ ಬಿಟ್ಟಿತೋ ||5||

ಸಾವಿರಾರು ಕೋಟಿ ಸೂರ್ಯರ | ಚಂದ್ರರ |

ತೀವಿದಂಥ ಬೆಳಕು ನೋಡಿದೆ |

ಭಾವ ಬಲಿತು ಜ್ಞಾನವಾಗಿ | ಸೇವ್ಯ ಭಾವ ನೀಗಿ ||

ದೇವದೇವ ನಿನ್ನೊಳೈಕ್ಯವ | ಪಡೆದೆನೋ |

ದೇವ ನರಹರೀಂದ್ರನಾದೆನೋ ||6||

ಮಡಿಯುವ ದೇಹಕೆ | ಮಡಿಯಾತಕಯ್ಯಾ ||ಪ||

ಕಡು ಬೋಧ ಜಲದೊಳು | ಬುದ್ಧಿ ಮನವಿರಲು ||ಅ|ಪ||

ಹಿಂಸೆ ಮೈಲಿಗೆಯು | ಅ |

ಹಿಂಸೆಯೆ ಮಡಿಯು ||

ಸಂಶಯ ಮೈಲಿಗೆ | ನಿ |

ಸ್ಸಂಶಯ ಮಡಿಯು ||1||

ಕರುಣೆ ಮಡಿಯು ನಿ |

ಷ್ಕರುಣೆ ಮೈಲಿಗೆಯು ||

ಹರುಷವೆ ಮಡಿಯು |

ಕಿರಿಕಿರಿಯೆ ಮೈಲಿಗೆಯು ||2||

ಶಾಂತಿಯೆ ಮಡಿಯು | ಅ |

ಶಾಂತಿ ಮೈಲಿಗೆಯು ||

ಭ್ರಾಂತಿ ಮೈಲಿಗೆಯು | ವಿ |

ಶ್ರಾಂತಿಯೆ ಮಡಿಯು ||3||

ಕ್ಷಮೆಯೇ ಮಡಿಯು | ಅ |

ಕ್ಷಮೆಯೆ ಮೈಲಿಗೆಯು ||

ಸಮತೆಯೆ ಮಡಿಯು | ವಿ |

ಷಮತೆ ಮೈಲಿಗೆಯು ||4||

ಸುಮತಿಯೆ ಮಡಿಯು | ಕು |

ಮತಿಯೆ ಮೈಲಿಗೆಯು ||

ಸುಮಧುರ ನರಹರಿ |

ಸಮರಸ ಮಡಿಯು ||5||

ಗುರುವೇ ಬ್ರಹ್ಮನು | ಗುರುವೇ ವಿಷ್ಣುವು |

ಗುರುವೆ ಸದಾಶಿವನಾಗಿಹನು ||ಪ||

ಗುರುವೆ ಸಾಕ್ಷಾತ್ | ಪರಬ್ರಹ್ಮನೆಂದು |

ಒರಲುವ ಶೃತಿಮತ ಕೇಳಯ್ಯ ||ಅ|ಪ||

ಸಗುಣವ ಧರಿಸಿ | ಜಗದೊಳು ಚರಿಸಿ |

ಸುಗಮದಿ ಬೋಧಿಸಿ ನಿಶ್ಚಯಿಸಿ ||

ಅಗಣಿತ ಬ್ರಹ್ಮದ | ನಿರ್ಗುಣ ರೂಪವ |

ಸೊಗಯಿಸಲನುಭವ ಮಾಡಿಸುವ ||1||

ಅಮೃತದ ಪಾನ | ಸುಮಧುರ ಧ್ಯಾನ |

ಅಮರಾನಂದದ ಸುವಿಧಾನ ||

ಸಮನಿಸಿ ಯಜ್ಞ | ಕ್ರಮದಿಂ ಪ್ರಜ್ಞ |

ರಮಿಸುತಲಿರ್ಪನು ಸರ್ವಜ್ಞ ||2||

ಗುರುವರ ಭೂಪ | ಹರಿದನು ಪಾಪ |

ಪರಮೇಶ್ವರನಿವ ನಿರ್ಲೇಪ ||

ಕರುಣಿಸ ಬಂದ | ನರ ರೂಪಿಂದ |

ಪರಮಾರ್ಥದ ಪರಮಾನಂದ ||3||

ಹರಿಹರಿಯೆನ್ನುತ | ಹರಿಸಿದ ಪಾಪ |

ಹರಹರಯೆನೆ ಹರಣವು ತಾಪ ||

ಹರಿಹರರೊಂದಾ | ಗಿರುತಲಿ ಬಂದಾ |

ಪರಮ ಸುಬೋಧೆಯಿಂದಾನಂದ ||4||

ತಾನೆ ತಾನಾದ | ಆನಂದ ಬೋಧಾ |

ಜ್ಞಾನ ಪ್ರಸಾದ ಸುಸ್ವಾದ ||

ಏನು ವಿನೋದ | ಧ್ಯಾನದ ಮೋದಾ |

ಶ್ರೀ ನರಹರಿಯ ಶ್ರೀಪಾದ ||5||

ನಿರ್ಗುಣವಾಗಿಹ ಶಿವನು | ದುರ್ಗುಣಿಗೆಂದಿಗು ಕಾಣಿಸನು ||ಪ||

ವರ್ಗ ತ್ರಯವನು | ನಿಗ್ರಹಿಸುವನು |

ಸ್ವರ್ಗದ ಭೋಗಕೆ | ಜಗ್ಗದೆಯಿಹನು ||ಅ|ಪ||

ಬುದ್ಧಿಯು ತಿಳಿಯದು ಶಿವನ |

ಬುದ್ಧಿಯೊಳೇ ಮನೆ ಮಾಡಿರುವವನ ||

ಬುದ್ಧಿಯೊಳರಿಯುವ | ಸುದ್ದಿಗಳೆಲ್ಲವ |

ಶುದ್ಧ ಮಾಡುತ | ಲಿದ್ದಾ ಶಿವನು ||

ಬುದ್ಧಿಯ ವಿಷಯಕೆ ಬದ್ಧನು ಜೀವ |

ಬುದ್ಧಿಯ ಮೀರಲು ಶಿವನು ||1||

ಜೀವನು ಬೇರೇನಿಲ್ಲಾ | ಜೀವನು ಶಿವನೊಳು ಸೇರಿಹನಲ್ಲಾ ||

ಜೀವನು ಬದ್ಧನು | ಶಿವ ತಾ ಶುದ್ಧನು |

ಜೀವನು ಕಲ್ಪಿತ | ಭಾವವನುಳಿದು |

ಜೀವನು ಶಿವನೊಳು | ಕೇವಲನಾಗಲು |

ಜೀವನ್ಮುಕ್ತನು ಶಿವನು ||2||

ದೇಹದಿ ಶಿವನಿಹನಲ್ಲಾ | ದೇಹವು ಇಲ್ಲದೆ ಮುಕ್ತಿಯೆ ಯಿಲ್ಲಾ |

ದೇಹವ ಶಿವನೇ | ವಾಹನ ಮಾಡುತ |

ದೇಹದ ಕರ್ಮಕೆ | ಮೋಹಿಸದಿಹನು ||

ದೇಹೀ ಎನ್ನುತ | ಲಿಹ ನೀ ಜೀವ |

ಸೋಹಂ ಭಾವವೆ ಶಿವನು ||3||

ಗುರುವಿನ ರೂಪದಿ ಬಂದು | ಪರಶಿವ ತಾನೆ ಬೋಧಿಸಲೆಂದು ||

ಪರಶಿವ ನೀನೇ | ಅರಿಯೆನ್ನುವನು |

ಬರಿದೇ ಭ್ರಮೆಯೀ | ಜಗವೆನ್ನುವನು |

ಹರಸುತ ಜೀವನ | ಶಿವನನುಗೈವ |

ನರಹರಿ ಗುರುವರ ತಾನು ||4||

ಚೌಡಿಕೆಯನ್ನು ಬಾರಿಸುತಾಳೆ | ಯಲ್ಲಮ್ಮದೇವಿ |

ಹಾಡಿ ತಾನೆ ಕುಣಿಯುತಾಳೆ ||ಪ||

ವಾಡಿಕೆಯೆಲ್ಲ ಮೀರಿಸುತಾಳೆ |

ಬೇಡಿಕೆಯನ್ನು ತೀರಿಸುತಾಳೆ ||

ಕೂಡಿದ ಕರ್ಮ ಜಾರಿಸುತಾಳೆ |

ನೋಡಲು ಥೈ ಥೈ ಥೈ ಥೈ ಎಂದು ||ಅ|ಪ||

ಸತ್ತು ಮತ್ತೆ ಹುಟ್ಟಿದಾಳೆ | ಪರ ಬಿಂದು ಸೇರಿ |

ಚಿತ್ತುವನ್ನು ಮುಟ್ಟಿದಾಳೆ ||

ನಿತ್ಯಾನಂದ ಪಟ್ಟಿದಾಳೆ |

ಮಿಥ್ಯಾವೆಲ್ಲ ಬಿಟ್ಟಿದಾಳೆ |

ಮೃತ್ಯುವನ್ನು ಮೆಟ್ಟಿದಾಳೆ | ಮುಕ್ತಿ ಕೊಟ್ಟು |

ಧಿಮಿತಕ ಧಿಮಿತಕ ||1||

ಎಲ್ಲಿ ನೋಡಲು ತಾನಿದ್ದಾಳೆ | ಮೂರವಸ್ಥೆಗಳೊ |

ಳೆಲ್ಲ ತಾನೆ ತುಂಬಿದ್ದಾಳೆ ||

ಅಲ್ಲಿ ಇಲ್ಲಿ ಎಂಬ ಭೇದ |

ಇಲ್ಲದಂತೆ ನೆಲೆಸಿದ್ದಾಳೆ |

ಕಳ್ಳಸುಳ್ಳರ ಹಿಡಿಯುತ್ತಾಳೆ |

ಒಳ್ಳೆ ಭಕ್ತರ ಮಾಡಿ ಥೈ ಥೈ ||2||

ನಾದ ಮಾತ್ರಳಾಗಿದ್ದಾಳೆ | ಜಗದೊಳಗಿರ್ಪ|

ವೇದ ಸೂತ್ರ ಹಿಡಿದಿದ್ದಾಳೆ ||

ಹಾದಿ ಹಿಡಿದು ಸಾಗಿದ್ದಾಳೆ |

ಭೇದವೆಲ್ಲ ನೀಗಿದ್ದಾಳೆ ||

ಬೋಧ ರೂಪಳಾಗಿ ನರಹರಿ |

ಪಾದ ಸೇರಿ ಥೈ ಥೈ ಎಂದು ||3||

ಓಂಕಾರವೇ ನಾದ | ಓಂಕಾರವೇ ಬಿಂದು |

ಓಂಕಾರ ಚಿತ್ಕಳೆಯಿದಣ್ಣಾ ||ಪ||

ಓಂಕಾರವೇ ಬೀಜ | ಓಂಕಾರವೇ ತೇಜ |

ಓಂಕಾರವೇ ಸಾಜವಣ್ಣಾ ||ಅ|ಪ||

ಓಂಕಾರದೊಳು ವರ್ಣ | ಝೇಂಕಾರದೊಳು ಪೂರ್ಣ |

ಸೋಂಕಿಲ್ಲದುಳಿದಿರ್ಪುದಣ್ಣಾ ||

ಅಂಕೆಯಿಲ್ಲದ ಬ್ರಹ್ಮ | ಸೋಂಕಿದಾತನ ಕರ್ಮ |

ಅಂಕುರವೆ ಸುಟ್ಟಿರುವುದಣ್ಣಾ ||1||

ಇರವರಿವು ಒಂದಾಗಿ | ಪರ ಸುಖಾತ್ಮಕವಾಗಿ |

ಬರುತಿರ್ಪುದೋಂಕಾರವಾಗಿ ||

ಶರೀರದಿಂ ಹೊರಗಾಗಿ | ಹೊರಟು ನಿರ್ಮಲವಾಗಿ |

ಬೆರೆಯುತಿರ್ಪುದು ಬ್ರಹ್ಮವಾಗೀ ||2||

ಓಂಕಾರವೇ ಶಕ್ತಿ | ಓಂಕಾರವೇ ಭಕ್ತಿ |

ಓಂಕಾರ ಬ್ರಹ್ಮದಾಸಕ್ತಿ ||

ಓಂಕಾರವೇ ಮುಕ್ತಿ | ಸಂಕಾಶ ಸುವಿರಕ್ತಿ |

ಓಂಕಾರ ನರಹರಿಯ ಯುಕ್ತಿ ||3||

ಗುರು ಕೃಪೆಯಾದವರು | ಪರತತ್ವ ಬಲ್ಲವರು ||

ಕುರುಹನ್ನು ಪೇಳಿರಿ | ಗುರು ಪುತ್ರರು ||ಪ||

ನಾದವಿರುವುದು ಎಲ್ಲಿ | ಬಿಂದುವಿರ್ಪುದು ಎಲ್ಲಿ |

ನಾದ ಬಿಂದುಗಳೇಕವಾದುದೆಲ್ಲಿ ||

ಆದಿ ಕಳೆಯೆಲ್ಲಿರ್ಪು | ದಾದ್ಯಂತವಾವುದು |

ಸಾಧಕರಾದರೆ ಪೇಳಿರಿಲ್ಲ ||1||

ಎರಡಕ್ಷರಗಳಲ್ಲಿ ಸ್ಫುರಿಸಿದೊಂದಕ್

ಮೆರೆದು ಮುಂದಕೆ ಮೂರಾದುದೆಂತು ||

ಬೆರೆದ ಮೂರಕ್ಷರ | ವರವೇದ ನಾಲ್ಕಾದ |

ಪರಿಯೆಂತು ಕೊನೆಯಲ್ಲಿ ಉಳಿದುದೇನು ||2||

ಎಂಟು ಸೇರಿದ ಬ್ರಹ್ಮ | ಗಂಟಿರುವುದು ಎಲ್ಲಿ |

ನೆಂಟರಿಷ್ಟರು ಬಂದು | ನೆರೆದುದೆಲ್ಲಿ ||

ಅಂಟಿ ಅಂಟದ ವಸ್ತು | ತಂಟೆಯ ಹರಿಸುತ್ತ |

ಒಂಟಿಯಾಗಿಹುದೆಲ್ಲಿ | ಜಂಟಿಯೆಲ್ಲಿ ||3||

ಸತ್ತೆಂಬುದಾವುದು | ಚಿತ್ತೆಂಬುದಾವುದು |

ಮತ್ತೆ ಆನಂದವು ಎಲ್ಲಿರ್ಪುದು ||

ನಿತ್ಯವೆಲ್ಲಿರುವುದು | ಅತ್ಯಂತ ಪರಿಪೂರ್ಣ |

ಸತ್ಯ ನರಹರಿ ನೆಲೆಯನು ಪೇಳಿರಿ ||4||

ಇದೇ ಕ್ಷೀರಸಾಗರಾ | ಇದೇ ಮುಕ್ತಿಯಾಗರಾ ||ಪ||

ಸದಾ ವಿಷ್ಣುಮಂದಿರಾ | ಸದಾನಂದ ಸುಂದರಾ ||ಅ|ಪ||

ದೇವದೈತ್ಯರಿಲ್ಲಿಯೇ | ಪಾವನತ್ವಕಾಗಿಯೇ |

ತಾವು ಕಡಲ ಕಡೆದರು | ದೇವಸುಧೆಯ ಪಡೆದರು ||1||

ಇದೇ ಜ್ಞಾನ ವಾರಿಧಿ | ಇದೇ ತತ್ವ ಸನ್ನಿಧಿ ||

ಚಿದಾನಂದ ರೂಪವು | ಮದಾವೇಶ ಲೋಪವು ||2||

ಇಲ್ಲೆ ಕಾಮಧೇನುವು | ಇಲ್ಲೆ ಕಲ್ಪವೃಕ್ಷವು ||

ಇಲ್ಲೆ ಚಿಂತಾ ರತ್ನವು | ಎಲ್ಲ ಸೌಖ್ಯವಿತ್ತುವು ||3||

ಅನುಭವಾಮೃತಾಲಯಾ | ವಿನುತ ಬೋಧೆ ಲೀಲೆಯಾ ||

ಮನನವಾಗಿ ತೋರ್ಪುದು | ಘನ ಸುಮಂತ್ರವಿರ್ಪುದು ||4||

ಧರೆಯನೆಲ್ಲ ಚರಿಸಿದಾ | ಪರಮಹಂಸನೆನಿಸಿದಾ ||

ಉರಗ ಮಂಚವೇರಿದಾ | ನರಹರೀಂದ್ರ ಮಲಗಿದಾ ||5||

ಹರಿ ಪಾದದೊಳು ಗಂಗೆ ಹುಟ್ಟಿ | ಹರನ |

ಶಿರವನೇರಿದಳೇನು ಗಟ್ಟಿ ||ಪ||

ದುರಿತವೆಲ್ಲವ ಕುಟ್ಟಿ | ಪರಮ ಶಾಂತಿಯ ಮುಟ್ಟಿ |

ಮರಣ ದುಃಖವ ಮೆಟ್ಟಿ | ಅರಿವೆನ್ನಿಸುತ ಪುಟ್ಟಿ |ಅ|ಪ||

ಹರಿ ಪಾದವೆಂಬುದಾಕಾಶ | ಅಲ್ಲಿ |

ಹರನ ಶಿರಸ್ಸು ಪ್ರಕಾಶ ||

ಹರಿವ ಜ್ಞಾನದ ಗಂಗೆ | ಧರಿಸಿರ್ಪ ಶಿವನಿಂಗೆ ||

ಪರಮ ವೈರಾಗ್ಯಂಗೆ | ಸರಿ ಜೋಡಿಯೀ ಗಂಗೆ ||1||

ಮೂರು ಲೋಕಗಳಲ್ಲಿ ಹರಿದು | ಸರ್ವ |

ಕಾರಣಾತ್ಮಕಳಾಗಿ ಮೆರೆದು ||

ಸಾರವೇದಗಳ ವಿ | ಸ್ತಾರಗೈಯುತಲಿರ್ದು |

ಪಾರಮಾರ್ಥದ ಸುವಿ | ಚಾರವೆನ್ನಿಸಿ ಬಂದು ||2||

ಜಲದೇವಿ ಲೋಕ ಪಾವನಳು | ಜೀವಿ |

ಗಳನೆಲ್ಲ ಕಾಪಾಡುವವಳು ||

ತಿಳಿವೆ ಮಂತ್ರಗಳೆನ್ನಿ | ಸಲು ಜ್ಞಾನಗಂಗೆಯು ||

ನಲಿದು ನರಹರಿ ನುಡಿ | ಯೊಳು ಬಂದ ಬೋಧೆಯು ||3||

ಪರಮಾನುಭವದಿಂದ ನಿರ್ಗುಣನಾದಾತ ಪರಮಹಂಸಾ ||ಪ||

ಪರಿಪೂರ್ಣ ಜ್ಞಾನವ ಪಡೆದಿರುವಾತನೆ ಪರಮಹಂಸಾ | |ಅ|ಪ||

ಶತೃ ಮಿತ್ರತ್ವದ ವರ್ತನೆಯ ಬಿಟ್ಟಾತ | ಪರಮಹಂಸಾ ||

ಕರ್ತೃತ್ವ ಭಾವವ ಕಿತ್ತು ಹಾಕಿರುವಾತ ಪರಮಹಂಸಾ ||1||

ಸಪ್ತ ಚಕ್ರಗಳಲ್ಲಿ ವ್ಯಾಪ್ತನಾಗಿರುವಾತ ಪರಮಹಂಸಾ ||

ಸಪ್ತ ಕೋಟಿಯ ಮಂತ್ರಗುಪ್ತವನರಿದಾತ ಪರಮಹಂಸಾ ||2||

ಆನಂದದೊಳು ಸರ್ವ ತಾನೆ ತಾನಾದಾತ ಪರಮಹಂಸಾ ||

ಶ್ರೀ ನರಹರೀಂದ್ರ ಸಂಧಾನವ ಬಲ್ಲಾತ ಪರಮಹಂಸಾ ||3||

ಯೋಗೀ ಪರಮವಿರಾಗಿ | ಬ್ರಹ್ಮವಾಗಿ |

ನಿತ್ಯನಾದ ಸಂಯೋಗಿ ||ಪ||

ದೇಹ ತಾನೆಂದೆಂಬ | ಮೋಹವಿಲ್ಲದೆ ಹೋಗಿ ||

ಸೋಹಂ ಭಾವಸ | ನ್ನಾಹದಲ್ಲಿರಲಾಗಿ ||1||

ಮಂತ್ರ ಮೂಲದಿ ಸರ್ವ | ತಂತ್ರ ಸ್ವತಂತ್ರದಿ ||

ನಿಂತು ನಿರ್ಮಲನಾಗಿ | ಶಾಂತಿಯನ್ನಾಂತಿರ್ಪ ||2||

ರಾಜ ಯೋಗದಿ ತಾನೆ | ನೈಜನಿಷ್ಠೆಯೊಳಿರ್ದು ||

ತೇಜೋ ಮೂರುತಿಯಾಗಿ | ರಾಜಿಸುತ್ತಿರುವಂಥ ||3||

ಸಂಸಾರದೊಳಗಿದ್ದು | ಸನ್ಯಾಸಿ ತಾನಾಗಿ ||

ಹಂಸನಾಗದೆ ಪರಮ | ಹಂಸನಾಗಿರುವಂಥ ||4||

ಕರಣ ಪಾವನನಾಗಿ | ಶರಣ ಜೀವನನಾಗಿ ||

ಪರಮ ನರಹರಿಯೋಗಿ | ಚರಣಕ್ಕೆರಗಲಾಗಿ ||5||

ಕಂಡಿರೇನೇ ಮೂಗುತೀ | ನವ |

ಖಂಡ ಪೃಥ್ವಿಗಿದೇ ಗತೀ ||ಪ||

ಕಂಡು ಕಾಣದ ಮೂಗುತೀ | ಮನ |

ಗಂಡರಪ್ಪುದು ಸದ್ಗತೀ ||ಅ|ಪ||

ಮಿಕ್ಕ ಬೆಲೆಯೀ ಮೂಗುತೀ | ಕೊಂ |

ಡಿಕ್ಕಲಾರನು ಧನಪತೀ ||

ತಕ್ಕ ಬಾಡಿಗೆಗೀವನು | ದಿನ |

ಲೆಕ್ಕ ಮಾಡಿ ಕುಬೇರನು ||1||

ಮೀರದಿಪ್ಪತ್ತೊಂದು ಸಾವಿರ |

ದಾರು ನೂರರ ಪರಿಮಿತಿ ||

ಭಾರವೀದಿನ ಬಾಡಿಗೆ | ಇದು |

ತೀರಲಾರದು ಯಾರಿಗೆ ||2||

ಇಷ್ಟು ಬಾಡಿಗೆ ತರುವುದೇ ಬಲು |

ಕಷ್ಟವೆಂದು ಮಹಾತ್ಮರು ||

ಶ್ರೇಷ್ಠ ಮೂಗುತಿ ಶಿವನಿಗರ್ಪಿಸಿ |

ನಷ್ಟವಿಲ್ಲದೆ ಪೋಪರು ||3||

ತೀರಿಸಲು ಕೈಲಾಗದೇ ಮಿತಿ |

ಮೀರಿ ಬಾಕಿಗಳಾಗಿದೇ ||

ಮೇರೆಯಿಲ್ಲದ ಜನ್ಮವು | ಸೆರೆ |

ಸೂರೆಯಾಯಿತು ಕರ್ಮವು ||4||

ಆದಿಶೇಷನ ಹೆಡೆಯೊಳು | ಬೆಲೆ |

ಯಾದ ರತ್ನವು ಹೊಳೆವುದು ||

ಶೋಧಿಸಿದ ನರಹರಿಯೊಳು | ಸಂ |

ಪಾದಿಸಿದರಿದು ಕಳೆವುದು ||5||

ಇದು ಸನ್ಮುಹೂರ್ತ | ಬೋಧೆ ಯಥಾರ್ಥ ||ಪ||

ಅಧಿಕಾನಂದದ | ಪದವಿಯ ಪಡೆದ ||ಅ|ಪ||

ನಾದವ ಹಿಡಿದು | ವೇದವ ನುಡಿದು |

ಬೋಧಾನಂದದ | ಸುಧೆಯನು ಕುಡಿದು ||1||

ಮನ ಕರಗಿದುದು | ಗುಣವುಡುಗಿದುದು ||

ಅನಿಮಿಷರೆಲ್ಲರು | ನೆನಹಿನೊಳಿಹರು ||2||

ಸುರ ಮುನಿವರರು | ಸುರಸವಾಕ್ಪರರು ||

ಬರುತಲೆರಗುವರು | ನರಹರಿಗವರು ||3||

ನಾದೋಪಾಸನ ದೀಪಕ ಮಾಲೆ |

ವೇದದ ಶಾಸನ ದೀಪಕ ಮಾಲೆ ||ಪ||

ಬೋಧಪ್ರಕಾಶನ ದೀಪಕ ಮಾಲೆ |

ವೇದಾಂತಾಸನ ದೀಪಕ ಮಾಲೆ ||ಅ|ಪ||

ನಡೆಯುತ್ತಿರುವುದು ಹಂಸನ ಲೀಲೆ |

ನುಡಿಯಾಗಿರುವುದೆ ದೀಪಕ ಮಾಲೆ ||

ನಡೆನುಡಿ ಸಂಧಿಯೆ ಬ್ರಹ್ಮಜ್ವಾಲೆ |

ಕಡುಸುಖ ಸಾಕ್ಷಾತ್ಕಾರದ ಮೇಲೆ ||1||

ಜ್ಞಾನದೊಳಿರುವುದು ದೀಪಕ ಮಾಲೆ |

ಧ್ಯಾನದಿ ಬೆರೆವುದೆ ದೀಪಕ ಮಾಲೆ ||

ಮೌನದಿ ದೊರೆವುದೆ ದೀಪಕ ಮಾಲೆ |

ಆನಂದಾಮೃತ ದೀಪಕ ಮಾಲೆ ||2||

ಅಪರೋಕ್ಷವೆ ಯೀ ದೀಪಕ ಮಾಲೆ |

ಜಪತಪ ಸಾಧನ ದೀಪಕ ಮಾಲೆ ||

ತ್ರಿಪುಟಿಯ ಮೀರಿದ ದೀಪಕ ಮಾಲೆ |

ಕೃಪೆಯಲಿ ನರಹರಿ ಬೋಧಾ ಲೀಲೆ ||3||

ಅದು ನೀನೆನ್ನುವುದೆ ತತ್ವಮಸೀ

ಅರ್ಥವಿಲ್ಲದ ಓದು ವ್ಯರ್ಥಾ

ಅತಿಥಿಯೆ ಪರದೈವಾ

ಅಡ್ಡಿಯಿಲ್ಲದೆ ಬರುವ ಅಡ್ಡಪಲ್ಲಕ್ಕಿಯ ನೋಡಿರಣ್ಣಾ

ಅಕ್ಕಾ ಯೀ ಲೆಕ್ಕ ತಿಳಿಯಕ್ಕ

ಅಕ್ಷಯ ಪಾತ್ರೆಯ ಕೊಟ್ಟನು ಗುರುವು

ಅರಿವೇ ಇದು

ಅರಿವೆ ಹೆಚ್ಚೋ ಮರವೆ ಹೆಚ್ಚೋ

ಅರಿವೆ ಬ್ರಹ್ಮ ಮರವೆ ಮಾಯೆ ಅರಿತುಕೊಳ್ಳಿರಿ

ಅರಿವಾಯಿತು ಗುರುದೇವನಿಂದ

ಅರಮನೆ ಸ್ಥೂಲವು

ಅಂತರಂಗದ ಗುಡಿಯೊಳಗೆ

ಅಂತಃಕರಣ ಧರ್ಮ

ಅಂಗಡಿಯಿಲ್ಲಿದೆ ನೋಡಣ್ಣಾ

ಅಂಬುಜಾನನೆ ನಂಬು ನೀನೆ

ಅಷ್ಟಾಂಗ ಯೋಗದ

ಅಪಕಾರಗೈದವರಿಗುಪಕಾರಗೈವನು

ಅನುಮಾನವ್ಯಾಕೆ ತನುವಿನೊಳಗೆ ಶಿವನೆ ಕಾಣುವಾ

ಅನುಭವವೇ ಪರಮಾರ್ಥ

ಅಭಯವ ಕೊಡು ಯೆನಗೆ

ಆನಂದಪುರವಿದು ಏನು ಸಂಶಯವಿಲ್ಲ

ಆವ ಜನ್ಮದ ಪುಣ್ಯದ ಫಲವೋ

ಇವರೆ ನೋಡಮ್ಮ ಸಾಧುಗಳು

ಇಂದು ನಾಳೆಯೆಂದು ಕಾಲ ಸಂದೀತವ್ವಾ

ಇದು ಸನಾತನ ಧರ್ಮ ರಹಸ್ಯ

ಇರವಾಗಿರುವಾ ಅರಿವಾಗಿ ಮೆರೆವಾ

ಇರವೇ ಹಂಸನಾಗಿರುವೆ

ಇದು ಸನ್ಮುಹೂರ್ತ ಬೋಧೆ

ಇದೇ ಕ್ಷೀರಸಾಗರಾ

ಇರವೇ ಕಳಹಂಸನಿರುವೇ

ಈತನ ಕಂಡರೆ ಭೀತಿಯೆ ಯಿಲ್ಲವು

ಈತ ಶರಣನು ಈತನೆ ಯೋಗಿ

ಈಜಲಾರೆನು ಗುರುವೆ

ಈಷಣತ್ರಯದಾಸೆ ನೀಗಿ

ಈಶ್ವರಾಜ್ಞಾ ಚಕ್ರಬಲವು

ಈ ಜಗದೊಳಗೆಲ್ಲ ಸೋಜಿಗವಾಗಿದೆ

ಉದಾಸೀನನಾಗುವೆ

ಉಂಡುಪವಾಸಿಯ ಕಂಡವರಿಗೆ

ಉಪವಾಸವನು ಮಾಡಿರಿಂತು

ಎಚ್ಚರವಿದ್ದರೆ ಭಯವಿಲ್ಲಾ

ಎತ್ತು ಕೈಲಾಸದಲ್ಲಿಯಿತ್ತು

ಎಣಿಸುತ್ತ ಜಪವಗೈದವರು

ಎಂಥಾ ಗಾರುಡಿಗಾರನು

ಎಂಥ ಗಂಡನ ಕೂಡಿದೆಲೆ ತಾಯೆ

ಎಂಥ ಮೂಗುತಿ ಕೊಟ್ಟನವ್ವ ಗುರುವು

ಎಂಥ ಮೂಗುತಿಯಿಟ್ಟನು

ಎಂಥ ಪುಂಡಯನ್ನ ಗಂಡ

ಎಂತಿರುವನು ಜ್ಞಾನಿ

ಎಲ್ಲರು ಜಾಗ್ರದಿ ಸಂಸಾರಿಗಳು

ಎಲ್ಲವು ಜೂಜಾಟ

ಎಲ್ಲ ದೈವವು ನೀನೆಯೆಂದೆ

ಎನ್ನ ನಿನ್ನದಯ್ಯ ಶಿವನೆ

ಏನು ಸೋಜಿಗವಾಯಿತಯ್ಯಾ

ಏನು ಸೋಜಿಗವಯ್ಯ

ಏನು ಧೀರ ಏನು ಶೂರ ಯನ್ನ ಗಂಡನು|

ಏನು ಮಾಯವ ಮಾಡಿದಾ

ಏನು ಮಾಡಲಯ್ಯ ಯನ್ನ ಭ್ರಾಂತಿ ನೀಗದು

ಏನು ಮಾಡಲೀ ಕರ್ಮವು ಬಿಡದು

ಏನೋ ಆನಂದವಾಗಿಹುದು

ಏನೆಂದು ಹೇಳಲೀ ಬ್ರಹ್ಮದಾಟವನು

ಏಳು ಕೋಟಿಯ ದ್ರವ್ಯ

ಏಳು ಚಕ್ರದ ಕೀಲ

ಒಂಭತ್ತು ಕೋವಿಯ ಹುತ್ತವು ತಾನಿಂಬುಗೊಂಡಿದೆ

ಒಂಟಿಯಾಗಿ ನಾನು ಇದ್ದರೆ

ಒಡಲೆಂಬ ಸುಡುಗಾಡು ಸೇರಿ

ಒಡಲು ನಶ್ವರ ಒಡೆಯನೀಶ್ವರ

ಒಡೆಯ ನಿನ್ನಡಿಯ

ಓಂಕಾರವೇ ನಾದ

ಓಂಕಾರ ಮಾತೆ

ಓಂಕಾರ ಧ್ವಜವೆ ಹಾರು

ಕಾಮಿತಾರ್ಥವನೆಲ್ಲ ಪ್ರೇಮದಿ

ಕಲ್ಪವೃಕ್ಷದ ಸ್ವರೂಪ

ಕಾಲಕೂಟ ಹಾ ವಿಷವ ಕುಡಿದಾ

ಕಾಲಕ್ಕೆ ತುದಯಿಲ್ಲ ಕಾಲಕ್ಕೆ ಮೊದಲಿಲ್ಲ

ಕಳೆದುಹೋಯಿತು ಕಾಲ

ಕೂಡಿದೆ ನೀ ಶಿವನಾ

ಕೂಗುತ್ತಲಿದೆ ನಮ್ಮ ಕೋಳಿ

ಕಾಯಕವೆ ಯನಗೆ ಕೈಲಾಸ

ಕಂಡುಕೊಳ್ಳುವುದೆಂತು ಶಿವನಾ

ಕಂಡೆ ಶ್ರೀಗುರು ದೇವನಾ

ಕಂಡೆನೆನ್ನೊಳಗೆ ವುದ್ಧಂಡ ಮುನೀಂದ್ರರ

ಕಂಡೆನಿಲ್ಲಿಯೆ ಶಿವನಾ

ಕಂಡೆವೆಂಬವರಿಲ್ಲ ಶಿವನಾ

ಕಂಡಿರೇನೇ ಮೂಗುತೀ

ಕೃಪೆ ಮಾಡು ಯನ್ನೊಳು ಗುರುವೇ

ಕ್ಷಮೆಯ ಬಿಟ್ಟಿರಬೇಡ ಮನುಜಾ

ಕರುಣಾ ಮಯನೇ ಮಂಗಳ ಗುರುರಾಯ

ಕರ್ಮಗತಿಯನು ವರ್ಣಿಸಲರಿದು

ಕಣ್ಣು ಕಾರಣ ದೇಹ

ಕಣ್ಣು ಗೆದ್ದವ ಶಿವಯೋಗಿ

ಕೇಳಿರಿ ಮಹ ವಾಕ್ಯದರ್ಥ

ಕೋಪ ಮಾಡಬೇಡ ಮನುಜ

ಕೋಪ ಭಸ್ಮಾಸುರ ರೂಪಾ

ಕೈಯಾರ ಗುರುಸೇವೆ ಮಾಡಬೇಕಮ್ಮ

ಗುರು ಕೊಟ್ಟ ಮಂತ್ರವ

ಗುರುವಿನ ಪುತ್ರರು ತಿರಿದುಣ್ಣುವವರು

ಗುರುವಿಗೆ ಗುಟುಕು ನೀರು

ಗುರುನಾಥ ಪಾಲಿಸೋ

ಗುರು ಪುತ್ರರಿವರಂತೆ ನೋಡಿ

ಗುರು ಪಾದವನು ನಂಬಿ

ಗುರುವೆ ಲೋಕಕ್ಕೆ ಪರಮೋಪಕಾರಿ

ಗುರುವೆ ನಿನ್ನಯ ಪಾದವ ಕಂಡೆ

ಗುರುವೆ ರೇವಣಸಿದ್ಧ ಯೋಗೀಂದ್ರ

ಗುರುವೆ ನಿನ್ನಯ ಕರುಣವ ಪಡೆದ

ಗುರುವೇ ಭಕ್ತರ ಸಂಸಾರಿ|

ಗುರುವೇ ಪಾಲಿಸೋ ಗುರಿಯನ್ನು ಮುಟ್ಟಿಸೋ

ಗುರುವೇ ಪರಶಿವನು

ಗುರುವೇ ಬ್ರಹ್ಮನು ಗುರುವೇ ವಿಷ್ಣುವು

ಗುರುವೇ ಕಳೆಯೆನ್ನ ಮರವೇ

ಗುರು ರೇವಣ ಜೀವನ ಪಾವನ ಮಾಡೆನ್ನ ಧನ್ಯನಾ

ಗುರು ಕೃಪೆಯಾದವರು ಪರತತ್ವ ಬಲ್ಲವರು

ಗುರು ಕೃಪೆಯೆನಗಾಯಿತು

ಗುರು ಕೊಟ್ಟ ಜೋಳಿಗೆ

ಗುರು ತೋರಿದ ದಾರಿ

ಗುರು ದೇವನೆ ತಿಪ್ಪೇರುದ್ರಾ

ಗುಣವಂತನೇ ಗುರುಭಕ್ತ

ಗುಣವಾರನು ಸದ್ಗುಣಿ

ಗಂಗಾ ಸ್ನಾನವ ಮಾಡಿರೋ

ಗಂಧದ ಬಾಗಿಲ ಸುಂದರ ದೇವರ

ಗಗನದರ್ಧವು ಜ್ಞಾತೃವಾಯಿತು

ಗೋಪೀ ಜಾರಾ

ಘಮಘಮಿಸುವ ಸೌಗಂಧಿಕ ಪುಷ್ಪ

 

ಚಾಲಕನಿಲ್ಲದೆ ಯಂತ್ರ

ಚಕ್ರವ್ಯೂಹವ ಹೊಕ್ಕು

ಚೌಡಿಕೆಯನ್ನು ಬಾರಿಸುತಾಳೆ

ಜನ್ಮವೆಂಬರಣ್ಯವನ್ನು ಸೇರಿಕೊಂಡೆನು

ಜಯಭೇರೀ ನಾದವ ಕೇಳಿ

ಜಯವಾಗಲಿ ಗುರುದೇವನಿಗೇ

ಜಗವೆ ನಾಟಕ ಶಾಲೆಯಾಯ್ತು

ಜಗವೆಲ್ಲ ತುಂಬಿದೆ ಬ್ರಹ್ಮ

ಜಗಜೀವನ ರಾಮಾ ಚಿನ್ಮಯ ಜಗ ಪಾವನ ನಾಮಾ

ಜಗಕೆಲ್ಲ ಕೊಡಬಲ್ಲಶಿವನು

ಜ್ಞಾನಾಸ್ತ್ರಕಿನ್ನಿದಿರಿಲ್ಲಾ

ಜ್ಞಾನಾನುಭವ ಅಮೃತ ಸಂಜೀವಿನಿ

ಜ್ಞಾನ ಯೋಗಿಗೆ ಮಹಿಮೆಯಿಲ್ಲಾ

ಜ್ಞಾನ ಗಂಗೆಯ ಸೇರಿ

ಜ್ಞಾನೇಂದ್ರಿಯ ಕರ್ಮೇಂದ್ರಿಯ ಕೂಡಿ

ಜ್ಞಾನಿಯ ಗುಣ ಬೇರೆ ಲೋಕದೊಳು

ಜ್ಞಾನಿಗಳೊಡನಾಡು

ಜ್ಞಾತೃವ್ಯಾನವ ಸೇರಿ

ಜೋ ಜೋ ಕಂದ

ಜೋಜೋ ಜೋಜೋ

ತನುವನ್ನು ತೊಳೆಯಲಾರೋಗ್ಯಾ

ತನುವು ಎಂಬ ಹರಿವ ತೇರು

ತನುಗುಣಗಳೆಲ್ಲವೂ

ತಾನೇ ಕಟ್ಟಿದ ಗುಡಿಯೊಳಗಿಟ್ಟನು

ತೂಗು ಬಾರಮ್ಮ ಈ ತೊಟ್ಟಿಲು

ತೂಗುವ ತೊಟ್ಟಿಲ ನೋಡಮ್ಮಾ

ತೂಗುವ ತೊಟ್ಟಿಲ ನೋಡಮ್ಮಾ (ತಾರಕ)

ತೂಗು ಮಂಚನೇರಿ ಕುಳಿತಿಹರು

ತಂದುದುಣ್ಣದೆ ತೀರದು

ತಾರಕ ಯೋಗ

ತ್ರೈಮೂರ್ತಿಗಳ ಮಹಿಮೆ ಸಾಮಾನ್ಯವಲ್ಲವು

ತಿಪ್ಪೆಯೊಳಗೆ ಇದ್ದನಂತೆ

ತಿಳಿವೇ ಬಲು ಚೆಂದಾ

ತಿಳಿಯಬೇಕೈ ಶ್ರೀಗುರುವಿನಿಂದ

ತಿಳಿದುಕೊಳ್ಳಿರಿ ಇಂಥ ಲೆಕ್ಕ ನೀವು

ತ್ರಿಗುಣಗಳಿಂದಲೆ ಜಗವಿದು ನಡೆವುದು

ತೀರಿತಣ್ಣಾ ಸಾಲ

ದಾಸೋಹಂ ಭಾವ ಪಡೆಯೋ

ದಯವಿಲ್ಲದಿಹ ಧರ್ಮವೇಕೆ

ದಗ್ಧಪಟದಂತಿರ್ಪ ಯೋಗಿ

ದೇವಾ ಕೊಡು ನಿನ್ನ ಸೇವಾ

ದೇವರೆ ಕಟ್ಟಿದ ದೇವಾಲಯದೊಳು

ದೇವರೇ ಮಾಡಿಟ್ಟ ದೇವಾಲಯ

ದೇವರಿತ್ತ ದೇವದತ್ತ ಶಂಖ ವೂದಿದಾ

ದೇಹ ಕೈಲಾಸ ಕಾಣಿರೋ

ದೇಹ ವಿಚಾರವ ಮಾಡಮ್ಮಾ

ದೇಹವಾತ್ಮರಿಗೆ ಸಂವಾದ

ಧಾತ್ರಿಯೊಳು ಭಿಕ್ಷಕ್ಕೆ ತಿರುಗುತ್ತಲಿರುವಾತ ಜಂಗಮಯ್ಯ

ನಮ್ಮ ಶಿವನನ್ನು ಧ್ಯಾನವ ಮಾಡಿ

ನಂಬು ನಂಬೆಲೆ ಮಾನವಾ

ನಂಬಿದೆ ನಾನೀ ಮಹಾತ್ಮನಾ

ನಮಸ್ತೆ ಜ್ಞಾನದಿ ಸಮರ್ಥರೆನಿಸಿದ

ನಮ್ಮ ಊರಿಗೊಬ್ಬ ಮಂತ್ರವಾದಿ ಬಂದಾ

ನಮ್ಮ ದೇವರು ಮೂವರಮ್ಮ

ನಾಮ ಧ್ಯಾನದ ಮಹತ್ವ

ನಾಮಾಮೃತ ಪಾನ

ನಮೋ ವಿಶ್ವ ರೂಪಕಾ

ನುಡಿಮಾತೆ ನಿನ್ನ ಪಾದ|

ನುಡಿಯಮೃತದ ಸಾರಾ

ನರರೇನು ಬಲ್ಲರು ಗುರುಮಂತ್ರ ಮಹಿಮೆಯ

ನಾರಿಯನು ಬಿಡು

ನಡೆಯೆ ಮೌನದ ಲಕ್ಷಣವು

ನಗಬೇಕೋ ಇದಕೇನು ಅಳಬೇಕೋ

ನಾದಾನುಸಂಧಾನ ಮಾಡಿ

ನಾದಯೋಗಿಯೆ ವರ್ಣ

ನಾದದೊಳಗೆ ಬ್ರಹ್ಮಾ ಇರುತಿಹ

ನಾದೋಪಾಸನ ದೀಪಕಮಾಲೆ

ನೋಡಲಿಲ್ಲವೆ ನಮ್ಮ ಶಿವನಾ

ನೋಡು ಗುರುವಿನ ಗಾರುಡಿ ವಿದ್ಯ

ನೋಡು ತಂಗೆಮ್ಮ ಈ ಕಂದನ

ನೋಡಿರಿ ಬ್ರಹ್ಮವನು

ನೋಡಿಕೊಂಡೆನು ಶಿವನ ಕೂಡಿಕೊಂಡೆನು

ನೆರೆ ನಂಬಿದೆ ನಿನ್ನಾ ಗುರುವರ ಪರಿಪಾಲಿಸು ಯನ್ನಾ

ನಿನ್ನ ನಡೆಯನರಿತ ಮೇಲೆ

ನಿನ್ನ ಪಾದವ ಕಂಡೆ

ನಿನ್ನ ಪಾದವು ದೊರೆತರೆ ಸಾಕು

ನಿನ್ನ ಪ್ರೇರಣೆಯಿಲ್ಲದೆ

ನಿನ್ನ ಮರೆತವನೆ ಪಾಮರನು

ನಿನ್ನಲ್ಲೆ ನೋಡಿಕೋ ಬ್ರಹ್ಮವಾ

ನಿನ್ನಂಥ ಕರುಣಾಳು ಇನ್ನುಂಟೆ ಜಗದೊಳು

ನಿನ್ನೊಳಗೆ ಸುಳಿವ ಸದ್ಭಾವಂಗಳೇ ಸುರರು

ನಿಷ್ಕಾಮ ಕರ್ಮಯೋಗ

ನೀನು ಕೊಟ್ಟರೆ ಎಲ್ಲವು ಸಫಲಾ

ನೀನಾಗಿ ಕೊಟ್ಟದ್ದು ಈ ಭಾಗ್ಯವೆಲ್ಲಾ

ನಿಜ ಬೋಧಾ ಸಂಜೀವನವು

ನಿರ್ಗುಣವಾಗಿಹ ಶಿವನು

ಪಂಚೀಕರಣದೊಳು ಪ್ರಪಂಚವಾಗಿಹುದ

ಪ್ರಜ್ಞೇ ಶಿವನಾಜ್ಞೆ

ಪುರುಷೋತ್ತಮಾ ಗುರು

ಪಂಚಸ್ಥಾನದಿ ಪಂಚಭೂತಗಳ

ಪಂಚವಿಂಶತಿ ಲೀಲೆಯ

ಪಂಚ ಪ್ರಾಣಗಳು

ಪಂಚಾಕ್ಷರೀ ಶಿವ ಪಂಚಾಕ್ಷರೀ

ಪಂಚತನ್ಮಾತ್ರೆಗಳಿಂದಾ

ಪರಬೋಧವಾ ತಾನೀಯುವಾ

ಪರಬ್ರಹ್ಮವೆಂಬುದು ಎಲ್ಲಿದೆ

ಪರುಷವು ಶಿಲೆಯಲ್ಲ

ಪರಮಾನುಭವದಿಂದ

ಪರಮಾರ್ಥ ವಿಹಾರಿ

ಪಾರಮಾರ್ಥವ ಪಡೆದೇ

ಪರತತ್ವ ಪೂರ್ಣ ರಹಸ್ಯ

ಪತಿತ ಪಾವನ ಜಯಶಂಕರಾ

ಬಾಲಾ ತಿಳಿ ನಿನ್ನ ಮೂಲಾ

ಬಾಯಿ ತುಂಬಾ ಹೊಗಳೆಲೋ ನೀನು

ಬೇಡಬೇಡ ಕಾಮ್ಯಫಲವ

ಬೇಡಿದ ಭಿಕ್ಷವ ನೀಡಮ್ಮಾ

ಬೈದವರೆನ್ನಯ ಬಂಧುಗಳು

ಬನ್ನಿರಯ್ಯ ಭಕ್ತರೇ

ಬಲು ಸುಖಸಾರ ಆತ್ಮವಿಚಾರ

ಬಳಸಿದ ಬ್ರಹ್ಮಚಾರಿಯನು

ಬ್ರಹ್ಮಾಂಡ ಕೋಟಿಯ ನಿರ್ಮಾಣ ಮಾಡಿತ್ತು

ಬ್ರಹ್ಮಾಂಡ ಕೋಟಿಯ ತುಂಬಿದಾ

ಬ್ರಹ್ಮಾಂಡ ಕೋಟಿಯ ತುಂಬಿದಾ

ಬ್ರಹ್ಮಾತ್ಮ ಐಕ್ಯದ ಸಾಧನೆ

ಬಯಲಾಟವಾಡುತಾನೆ

ಬಡವನೆ ಲೋಕಕೆ ಉಪಕಾರಿ

ಬಿಡದೀ ಸಂಸಾರ ವಿಕಾರ

ಬಿಡಲುಂಟೆ ಸಂಸಾರಾ

ಭೂತ ವಿಕಾರ ಸಂಭೂತವಾಗಿರುತ್ತಿತ್ತು ಮಾಂಸಪಿಂಡಾ

ಭಯವುಂಟೆ ಭಕ್ತರಿಗೆ

ಭದ್ರಕಾಳಿಯ ಶುದ್ಧ ಯೋಗದ ಮುದ್ರೆಯೆಂಬುದೆ ನಿದ್ರೆಯು

ಭೋಗಿಯೊಳು ಕೂಡಿ

ಭಿಕ್ಷಾ ಸತ್ವಪರೀಕ್ಷಾ

ಭಿಕ್ಷಾಟನ ಲೀಲೆ

ಮನ ಮಂದಿರ

ಮನವೆಂಬ ಮೋಸಗಾತಿ

ಮನೆಯಿಲ್ಲದೆ ಶಿವನು

ಮನೆಯ ಸೇರಿದೆ ದೊಡ್ಡ ಹಾವು

ಮಳೆ ದೇವರ ಪ್ರಾರ್ಥನೆ

ಮುಂದೇನು ಗತಿಯೆನ್ನಬೇಡಾ

ಮೂವರು ಮೂರ್ತಿಗಳೀಯುವ ಸ್ಫೂರ್ತಿಯ

ಮೂರು ಅಂಗಗಳಲ್ಲಿ ಮೂರು ಲಿಂಗವನುಳ್ಳ ವೀರಶೈವ

ಮೂರು ಲಿಂಗಗಳರಿಯೋ

ಮೂರವಸ್ಥೆಗೆ ಸಾಕ್ಷಿ ಲಿಂಗಯ್ಯ

ಮೂರವತಾರವ ದಿನವೂ ತಪ್ಪದೆ

ಮೂರೇಳ್‍ಸಾವಿರದಾರ್ನೂರು ಸಂಚಾರವು

ಮೂಗುತಿಯಿಲ್ಲದ ರಂಡೇ

ಮುರಳೀಧರ ಗೈದಾ

ಮಂತ್ರಾ ಸರ್ವ ಸ್ವತಂತ್ರ ಬ್ರಹ್ಮತಂತ್ರ

ಮಂತ್ರವೆ ತಾರಕವಾಗಿಹುದು

ಮರವೇ ನೀನೆಲ್ಲಿ ಯಿರುವೇ

ಮರಣವಾಗುವ ವೇಳೆಯೊಳಗೆ

ಮಡಿಯುವ ದೇಹಕೆ

ಮಾಯಾ ನಾಟಕ ಹೂಡಿದ ಶಿವನು

ಮಾಯಾಮಯ ಕಾಯ

ಮಾಡು ಮಾನಸ ಪೂಜೆಯಾ

ಮಾಡೋ ವಿಚಾರ

ಮಾತೃಭೂಮಿ ಜನನಿ

ಮೌನ ನಿಲ್ಲದೆ ಧ್ಯಾನ ಸಲ್ಲದೆ

ಮೌನವೇ ಶಿವಜ್ಞಾನ ಕೇಶವ

ಮೇಘ ಸೈನ್ಯವ ಕೂಡಿಬಾ

ಮೈಲಿಗೆಯಾಗದ ಮಡಿ ಮಾಡಯ್ಯಾ

ಯಾರಿಗಂತೆ ಮೋಕ್ಷ

ಯಾರಯ್ಯ ದಾನವನು

ಯೋಗಿಯೆಂಬೆನೆ ಭೋಗದೊಳಿರುವೆ

ಯಾವ ಕಣ್ಣಿಲಿ ನೋಡಿದೆ

ಯೋಗವಾಹವೇ

ಯೋಗ ಮಾಯೆಯ ಗೆದ್ದ ಯೋಗಿ

ಯೋಗಿಗಳೊಳು ಬ್ರಹ್ಮಜ್ಞಾನಿಯೆ

ಯೋಗ ಮಾಯೆಯ ಗೆಲ್ಲಬೇಕು

ಯೋಗೀ ಪರಮ ವಿರಾಗಿ

ಯೋಗವ ತಿಳಿದವರ್ಯಾರಯ್ಯ

ಯನಗಾಗಿ ಕಳೆದುಬಿಟ್ಟೆ

ಯೋಗಮುದ್ರಾ ಲಕ್ಷಣ

ಯೋಗ ಸಾಧನೆ ಮಾಡಿ

ಯೋಗಿ ಶಿವಾಭವ ನೀಗಿಸುವಾ

ರಾಧಾರ ಮಣಾ

ರೂಪಾಂತರದೊಳಿತ್ತು ಹಿರಿಯ ಮಾಯೆ\

ಲಿಂಗ ಪೂಜಿಸಿ

ಲಿಂಗ ಪೂಜೆಯ ಮಾಡಿರಿ ಇಂತು

ಲೆಕ್ಕವೆಯಿಲ್ಲದ ದುಃಖವನೀಯುತ

ವರುಣ ದೇವನೆ ಇಳಿದು ಬಾ

ವೈದಿಕರೆನ್ನುವ ನಾವೆಲ್ಲ

ವೇದವನೋದಿದರೇನು ಫಲಾ

ವಿದ್ಯೆ ಲೋಕಕೆ ನಿಜವಾದಾಸ್ತಿ

ಶ್ರವಣಗೈದವನೆ ಶ್ರೋತ್ರಿಯನು

ಶಂಕರ ದುರಿತ ಭಯಂಕರ

ಶರಣನಾದರೆ ಹೇಗಿರಬೇಕು

ಶರೀರ ನಾನೆಂಬುದೆ

ಶರೀರವೆನ್ನುವ ಸೆರೆಮನೆಯೊಳಗೆ

ಶಿವಶಕ್ತಿಯರ ಲೀಲೆ ಜಗವು

ಶಿವನ ಭಕ್ತರು ಶ್ರವಣಯುಕ್ತರು

ಶಿವ ನಾಮಾಮೃತವಾ ಸವಿಯುತ

ಶಿವನಕ್ರೀಡಾ ಭವನ ನೋಡಾ

ಶಿವನೇ ಮಾಡುವ ಯೋಗವ

ಶಿವನಿಗೆ ಒಡಲಾದ ಮಂತ್ರಾ

ಶಿವಶಿವ ಎಂದೆನ್ನಿರೋ

ಶಿವಶಿವಶಿವಶಂಭೋ

ಶಿವಾ ಯೆನ್ನಬಾರದೇ (ತಾರಕ)

ಶಿವಯೋಗ ಮಾಡಿದವಗೆ

ಶಿವಯೋಗಿಯ ಸ್ವರೂಪ

ಶಿವಜೀವರ ನೈಜವನರಿಯದೆ ಸಂಭವಿಸಿತು

ಶಿವಕೊಟ್ಟ ಸುಪ್ರಸಾದವ

ಶಿವಧರ್ಮ ತಿಳಿಯಮ್ಮ ತಂಗೀ

ಶಿವಧರ್ಮವರಿಲಯಲು

ಶ್ರೀ ಗುರುಬೋಧೆ

ಸನ್ಯಾಸವನು ತಾಳು ಸಂಸಾರದಲ್ಲೆ

ಸನ್ಮೋಹನಾಸ್ತ್ರ

ಸಪ್ತ ಚಕ್ರಗಳನ್ನು ಶೋಧಿಸು

ಸಂಸ್ಕಾರದಿಂದಲೆ ಶಿಲೆ ಲಿಂಗವಹುದು

ಸುಲಭ ಪೂಜೆಯ ಮಾಡೆಲೈ ಮನವೇ

ಸುಲಭಜ್ಞಾ ಯೋಗ

ಸುಷುಮ್ನಾ ಸುಷಿರವಾಸಿ

ಸುತ್ತಲು ಕತ್ತಲು ಮುತ್ತಲು ಬೆಳಕ

ಸಂಧ್ಯಾ ವಂದನೆಯಾ ಮಾಡಿದೆ

ಸ್ವಾರ್ಥವಳಿದರೇ ಪರಮಾರ್ಥವಾಗುವುದೆಂದು

ಸಾರಾಸಾರ ವಿಚಾರ ತರಂಗ

ಸಾಕಾರದೊಳಗೆ ನಿರಾಕಾರ

ಸಖನೇ ಪೇಳುವೆನು ಸುಖದ ಮಾರ್ಗವನು

ಸ್ನಾನ ಮಾಡಿರಯ್ಯ

ಸಗುಣ ಸಾಕಾರ

ಸತ್ಯ ಸನಾತನ ಬ್ರಹ್ಮವನು

ಸತ್ಯ ಶೋಧನೆ ಮಾಡಿರೋ

ಸತ್ತ ಮೇಲುಂಟೆ ಸಮಾಧಿ

ಸತಿಯೇ ದೇಹವು ಪತಿಯೇಆತ್ಮನು

ಹಿಂದಕೆ ಮುಂದಕೆ ತೂಗಿ ಸಾಗಿ

ಹಿಡಿಯಬಾರದೆ ಶ್ರೀಗುರು ಪಾದ

ಹಂಸನ ಮಂತ್ರವೆ ತತ್ವಮಸಿ

ಹಾರುವ ಹಂಸನ ನೋಡಮ್ಮಾ

ಹರಿಪಾದದೊಳು ಗಂಗೆ ಹುಟ್ಟಿ

ಹರಿಯ ನಿಂದಿಸಬೇಡ

ಹಡಗು ಸಾಗಿದೆ ನೋಡು