ತುರುವೇಕೆರೆ ತಾಲ್ಲೂಕಿನ ಇತಿಹಾಸ

ಕ್ರಿ.ಶ. ೧೩ನೇ ಶತಮಾನದಲ್ಲಿ ಸೋಮನಾಥಪುರದ ದೇಗುಲ ನಿರ್ಮಾತೃವೆನಿಸಿದ ಸೋಮಣ್ಣ ದಣ್ಣಾಯಕ ನೆಂಬುವನು ತನ್ನ ದೊರೆ ಮೂರನೇ ನರಸಿಂಹನ ಹೆಸರಿನಲ್ಲಿ ನಿರ್ಮಿಸಲಾದ ಸರ್ವ‌ಜ್ಞ ಶ್ರೀವಿಜಯನರಸಿಂಹಪುರ ವೆಂಬ ಅಗ್ರಹಾರವೇ ಇಂದಿನ ತುರುವೇಕೆರೆ ೧೬ನೇ ಶತಮಾನದಲ್ಲಿ ಹಾಗಲ್ವಾಡಿ ಪಾಳೆಗಾರರ ಆಳ್ವಿಕೆಗೆ ಒಳಪಟ್ಟಿತ್ತು, ಕ್ರಿ.ಶ.೧೬೭೬ ರಲ್ಲಿ ಮೈಸೂರಿನ ಚಿಕ್ಕದೇವರಾಜ ಒಡೆಯರ ಆಡಳಿತಕ್ಕೆ ಒಳಪಟ್ಟಿತು. ಹೊಯ್ಸಳಶೈಲಿಯ ದೇವಾಲಯಗಳು, ತಾಳಕೆರೆ ಸುಬ್ರಹ್ಮಣ್ಯಂ, ಬಾಣಸಂದ್ರ ಹುಚ್ಚೇಗೌಡರಂತಹ ರಾಜಕೀಯ ಮುತ್ಸದ್ದಿಗಳು ಕಣತೂರು ಹಿರಣ್ಣಯ್ಯ ಹಾಗೂ ಅವರ ಪುತ್ರ ಮಾ|| ಹಿರಣಯ್ಯ ನವರಂತಹ ಕಲಾ ತಪಸ್ವಿಗಳೂ, ವಿ.ಎಂ.ಶ್ರೀಯವರಂತಹ ಮೇರು ಕವಿಗಳು, ಸಿಮೆಂಟ್ ಡೈಮೆಂಡ್ ಎಂದು ಹೆಸರು ಪಡೆದ ಅಮ್ಮಸಂದ್ರದ ’ಮೈಸೆಂಕೋ’ ಕಾರ್ಖಾನೆ ಜಗದ್ವಿಖ್ಯಾತಿಯ ಬೇಲೂರು – ಹಳೇಬೀಡು ದೇವಾಲಯಗಳೀಗೆ ಶಿಲೆಯೊದಗಿಸಿದ ಕಲ್ಲಿನ ಗಣಿ ಕಡೆಹಳ್ಳಿಗುಡ್ಡ,ಹಾಗೂ ಜಾನಪದ ಪ್ರಕಾರಗಳ ವಿಶ್ವವಿಖ್ಯಾತ ಕಲಾವಿದರ ನೆಲೆ ತುರುವೇಕೆರೆ.

೨೦೦೧ ರ ಜನಸಂಖ್ಯೆಯ ಪ್ರಕಾರ ೧,೬೪,೦೦೦ ಜನಸಂಖ್ಯೆ ಹೊಂದಿದೆ. ತುರುವೇ ಎಂಬ ಆಕಳುಗಳ ಹಾಲು ಹೆಚ್ಚಿಸುವ ಸೊಪ್ಪು ವಿಶೇಷವಾಗಿ ಇಲ್ಲಿಯ ಕೆರೆಯಲ್ಲಿ ಬೆಳೆಯುತ್ತಿದ್ದುದರಿಂದ ತುರುವೇಕೆರೆ ಎಂಬ ಹೆಸರು ಪಡೆಯಿತೆಂಬುದು ಐತಿಹ್ಯ.

ಬೇಟೆರಾಯಸ್ವಾಮಿ ದೇವಾಲಯ:

ದೂರ ಎಷ್ಟು?
ತಾಲ್ಲೂಕು : ತುರುವೇಕೆರೆ
ತಾಲ್ಲೂಕು ಕೇಂದ್ರದಿಂದ: ೦ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೬೩ ಕಿ.ಮೀ

ತಾಲ್ಲೂಕು ಕೇಂದ್ರವಾದ: ಮಾರ್ಕಾಂಡೇಯ ಚರಿತೆ” ಕೃತಿಯ ಕರ್ತೃ ಬೇಟೆರಾಯನ ಆರಾಧ್ಯದೈವ “ಬೇಟೆರಾಯಸ್ವಾಮಿ” ದೇಗುಲ ಪಟ್ಟಣದ ಹೃದಯಭಾಗದಲ್ಲಿದೆ. ಮೃಖಂಡ ಹಾಗೂ ಚಂದ್ರಚೂಡರೆಂಬ ಮುನಿಗಳ ತಪೋಭಂಗ ಮಾಡುತ್ತಿದ್ದ ರಾಕ್ಷಸರ ದಮನಕ್ಕೆ ಮಹಾವಿಷ್ಣು ಮೃಗ ರೂಪದಲ್ಲಿ ಬಂದು ಬೇಟೆಯಾಡಿ ಕೊಂದದ್ದರಿಂದ ’ಬೇಟೆರಾಯ’ ಎಂಬ ಹೆಸರು ಬಂದಿದೆ. ವಿಶಾಲವಾದ ದೇವಾಲಯವಾಗಿದ್ದು, ’ವೈಭೋಗದ ಬೇಟೆರಾಯ’ ಎಂಬ ಖ್ಯಾತಿ ಪಡೆದಿದೆ.

 

ಮಲ್ಲಾಘಟ್ಟ

ದೂರ ಎಷ್ಟು?
ತಾಲ್ಲೂಕು : ತುರುವೇಕೆರೆ
ತಾಲ್ಲೂಕು ಕೇಂದ್ರದಿಂದ: ೪ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೭೨ ಕಿ.ಮೀ

ತಾಲ್ಲೂಕಿನ ದೊಡ್ಡ ಕೆರೆ ಇಲ್ಲಿದೆ. ಆಳವಾದ ಹಾಗೂ ವಿಶಾಲವಾದ ಸಹಸ್ರಾರು ಎಕರೆಗಳಿಗೆ ನೀರುಣಿಸುವ ಹಾಗೂ ತುರುವೇಕೆರೆ ಪಟ್ಟಣದ ಜನತೆಯ ದಾಹ ಇಂಗಿಸುವ, ಕುಡಿಯುವ ನೀರು ಯೋಜನೆಯ ಹಿರಿಮೆ ಇದಕ್ಕಿದೆ. ಮೀನುಗಾರಿಕೆ ಹಾಗೂ ದೋಣಿ ವಿಹಾರಕ್ಕೆ ಹೆಸರಾದ ಈ ಕೆರೆಯ ಏರಿಯ ಮೇಲೆ ಓಡಾಡುವುದೇ ಒಂದು ವಿಸ್ಮಯ. ಪಶ್ಚಿಮಕ್ಕೆ ನೋಡಿದರೆ ಭೂಮಿಯೇ ಕಾಣದಷ್ಟು ಅಗಾಧ ಜಲರಾಶಿ, ಪೂರ್ವಕ್ಕೆ ಕಣ್ಣು ಹರಿಯುವಷ್ಟು ದೂರವು ತೆಂಗಿನ ತೋಟಗಳು ಹಾಗೂ ಹಸಿರಿನಿಂದ ಕಂಗೊಳಿಸುವ ಗದ್ದೆ ಬಯಲು. ಗ್ರಾಮ ದೇವತೆಗಳ ಶುದ್ಧಿ/ಜಲಧಿ/ಪುಣ್ಯಸ್ನಾನವನ್ನು ಈ ಕೆರೆಯಲ್ಲಿಯೇ ಮಾಡಿಸುತ್ತಾರೆ. ಕೆರೆಯ ಬಲಭಾಗದಲ್ಲಿ ಸುಮಾರು ೧೭-೧೮ನೇ ಶತಮಾನದಲ್ಲಿ ನಿರ್ಮಾಣಗೊಂಡಿರಬಹುದಾದ ಗಂಗಾಧರೇಶ್ವರ ದೇವಾಲಯವು ಇತ್ತೀಚೆಗೆ ಕೆರೆಯ ಎಡಭಾಗದಲ್ಲಿಯೂ ಒಂದು ಶಿವ ದೇವಾಲಯ ನಿರ್ಮಿಸಿದ್ದಾರೆ. ಚಲನ ಚಿತ್ರಗಳ ಚಿತ್ರೀಕರಣ ಇಲ್ಲಿ ನಡೆಯುತ್ತಿರುತ್ತದೆ. ಕೆರೆಯ ನೀರಿನ ಮಟ್ಟದ ಏರಿಳಿಗಳಿಗನುಸಾರವಾಗಿ ನೀರು ಹೊರಹೋಗಲು ನಿರ್ಮಿಸಿರುವ ತೂಬು ಹಂತ ಹಂತವಾಗಿದ್ದು, ಆ ಕಾಲದ ಜನರ ತಾಂತ್ರಿಕತೆಗೆ ನಿದರ್ಶನವಾಗಿದೆ. ತುರುವೇಕೆರೆ ಪಟ್ಟಣಕ್ಕೆ ಕುಡಿಯುವ ನೀರೊದಗಿಸುವ ಪಂಪ್ ಹೌಸ್ ಸಹ ಇಲ್ಲಿದೆ.

 

ಅಮ್ಮಸಂದ್ರ:

ದೂರ ಎಷ್ಟು?
ತಾಲ್ಲೂಕು : ತುರುವೇಕೆರೆ
ತಾಲ್ಲೂಕು ಕೇಂದ್ರದಿಂದ: ೧೨ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೬೦ ಕಿ.ಮೀ

ಸುಣ್ಣಕಲ್ಲು ವಿಶೇಷವಾಗಿ ದೊರೆಯುವ ಕೊಂಡ್ಲಿ ಸುತ್ತಮುತ್ತಣ ಪ್ರದೇಶದಿಂದ ಅದಿರನ್ನು ತಂದು ಸೀಮೆಂಟನ್ನಾಗಿಸಿ, ಡೈಮಂಡ್ ಪ್ಯಾಕ್ಟರಿ ಎಂಬ ಖ್ಯಾತಿ ಪಡೆದ ಉದ್ದಿಮೆ ತುರುವೇಕೆರೆ ತಾಲ್ಲೂಕಿನ ದೊಡ್ಡ ಕೈಗಾರಿಕೆ. ೧೯೬೦ ರಲ್ಲಿ ಸ್ಥಾಪನೆಗೊಂಡ ಈ ಕಾರ್ಖಾನೆ “ಬಿರ್ಲಾಗ್ರೂಪ್ಸ್” ಗೆ ಒಳಪಟ್ಟದ್ದಾಗಿದ್ದು, ಕೈಗಾರಿಕಾ ಪ್ರದೇಶದಲ್ಲಿ “ಅಮ್ಮಸಂದ್ರ” ವೆಂಬ ಸಕಲ ಸೌಕರ್ಯಗಳನ್ನೊಳಗೊಂಡ ಒಂದು ಗ್ರಾಮವನ್ನೇ ನಿರ್ಮಿಸಲಾಗಿದೆ. ಸಾವಿರಾರು ಜನರಿಗೆ ಉದ್ಯೋಗ ನೀಡಿದ ಖ್ಯಾತಿಯು ಈ ಕೈಗಾರಿಕೆ ಈಗ ಕಬ್ಬಿಣದ ಅದಿರನ್ನು ಸಂಸ್ಕರಿಸುವ ಘಟಕವನ್ನು ಹೊಂದಿದ್ದು, ಬಿರ್ಲಾ ಒಡೆತನದಿಂದ ಈಗ ಬೇರ್ಪಟ್ಟಿದೆ. ಈ ಕಾರ್ಖಾನೆಯ ಮಾಲೀಕರು ಬಿರ್ಲಾರವರಾಗಿದ್ದು, ಇದೀಗ ಜರ್ಮನಿಯ ಹೆಡನ್ ಬರ್ಗ್ ಎಂಬುದವರ ಒಡೆತನಕ್ಕೆ ಒಳಪಟ್ಟಿದೆ. ಪ್ರತಿನಿತ್ಯ೧೫೦೦ ಟನ್ ಸಿಮೆಂಟ್ ಉತ್ಪಾದಿಸುತ್ತಿದ್ದ ಕಾರ್ಖಾನೆ ಈಗ ೨೫೦೦ ಟನ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ. ಪ್ರಾರಂಭದಲ್ಲಿ ೩೦೦೦ ಕಾರ್ಮಿಕರನ್ನು ಹೊಂದಿದ್ದ ಕಾರ್ಖಾನೆ ಈಗ ೦೦ ಜನ ಕಾರ್ಮಿಕರನ್ನು ಹೊಂದಿದೆ. ಕಾರ್ಖಾನೆ ಮತ್ತು ಗಣಿ ಪ್ರದೇಶ ಒಳಗೊಂಡಂತೆ ೧೫೦೦ ಎಕರೆ ಗಳಷ್ಟು ಪ್ರದೇಶದಲ್ಲಿ ಇದರ ಕಾರ್ಯ ನಡೆಯುತ್ತಿದೆ.

ಅಮ್ಮಸಂದ್ರ ಕಾರ್ಖಾನೆಗೆ ಗಣಿಯಿಂದ ಸುಣ್ಣಕಲ್ಲು ಸಾಗಿಸಲು ಸುಮಾರು ೩೦ ಕಿ.ಮೀ ಗಳ ಟ್ರಾಲಿಮಾರ್ಗವಿದೆ. ಅಮ್ಮಸಂದ್ರ ರೈಲ್ವೇನಿಲ್ದಾಣದಿಂದ ಬಾಣಸಂದ್ರ ರೈಲ್ವೇನಿಲ್ದಾಣದವರೆಗೆ ರೈಲ್ವೆಮಾರ್ಗ ೯೦ ನೇರವಾಗಿಯೇ ಇರುವುದು ವಿಶೇಷ ರಾತ್ರಿಯವೇಳೆ ಒಂದು ನಿಲ್ದಾಣದಲ್ಲಿ ನಿಂತರೈಲಿನ ದೀಪ ಇನ್ನೊಂದು ನಿಲ್ದಾಣದಲ್ಲಿ ಗೋಚರಿಸುತ್ತದೆ.

 

ಸಂಪಿಗೆ:

ದೂರ ಎಷ್ಟು?
ತಾಲ್ಲೂಕು : ತುರುವೇಕೆರೆ
ತಾಲ್ಲೂಕು ಕೇಂದ್ರದಿಂದ: ೨೭ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೪೭ ಕಿ.ಮೀ

ಸಂಪಿಗೆಯು ಐತಿಹಾಸಿಕವಾಗಿ ಮಹತ್ವಹೊಂದಿರುವ ಸ್ಥಳವಾಗಿದ್ದು, ಇದನ್ನು ಹಿಂದೆ ಚಂಪಕಾಪುರಿ ಪಟ್ಟಣವೆಂದು ಕರೆಯುತ್ತಿದ್ದರು, ಇಲ್ಲಿಯ ಶ್ರೀನಿವಾಸ ದೇವಾಲಯ ಪ್ರಸಿದ್ದವಾದುದು. ತಿರುಮಲದ ಶ್ರೀನಿವಾಸನಿಗೆ ನಡೆಯುವಂತಹ ಎಲ್ಲ ಕೈಂಕರ್ಯಗಳು ಈ ಸ್ವಾಮಿಗೆ ನಡೆಯುತ್ತಿದ್ದು, ಎರಡನೇ ತಿರುಪತಿ ಎನಿಸಿದೆ. ಶ್ರೀನಿವಾಸ ಹಾಗೂ ಅಮ್ಮನವರ ಸುಂದರ ವಿಗ್ರಹಗಳ ದೇವಸ್ಥಾನವು ಇದೆ, ಸಂಪಿಗೆಗೆ ಖ್ಯಾತಿ ದೊರೆತಿರುವುದು ಸುಧನ್ವನ ರಾಜಧಾನಿ ಎನಿಸಿದ್ದ ಚಂಪಕಾಪುರಿ ಎಂಬ ನಾಮದಿಂದ, ಹೆಚ್ಚಾಗಿ ಬೆಳೆಯುವ ಅಡಿಕೆ ಬೆಳೆಯಿಂದ. ಅಲ್ಲದೆ ಕನ್ನಡದ ಕಣ್ವ, ಆಚಾರ್ಯ ಬಿ.ಎಂ.ಶ್ರೀ ರವರ ಜನನದಿಂದ. ಬಿ.ಎಂ.ಶ್ರೀಯವರ ತಾಯಿಯ ತವರು ಮನೆ ಈ ಸಂಪಿಗೆ ಗ್ರಾಮ. ಶ್ರೀನಿವಾಸ ದೇಗುಲದ ಪಕ್ಕದಲ್ಲಿಯೇ ಬಿ.ಎಂ.ಶ್ರೀ ಯವರ ಹುಟ್ಟಿದ ಮನೆಯಿದ್ದು, ಪ್ರಸ್ತುತ ಆ ಜಾಗದಲ್ಲಿ ಭವ್ಯವಾದ ಬಿ.ಎಂ.ಶ್ರೀ ಸ್ಮಾರಕ ಭವನ ನಿರ್ಮಿಸಲಾಗುತ್ತಿದ್ದು, ಉದ್ಘಾಟನೆಗೊಳ್ಳುವ ಹಂತದಲ್ಲಿದೆ.