ತಂದೆ ಮಾಧವರಾಯರು ರಂಗಭೂಮಿಯ ಪ್ರಸಿದ್ಧ ಕಲಾವಿದರು. ತಾಯಿ ರುಕ್ಮಿಣಿಯಮ ಸಂಗೀತ ವಿದುಷಿ, ಅಕ್ಕ ಡಾ. ಚೂಡಾಮಣಿ ನಂದಗೋಪಾಲ್ ನೃತ್ಯ ಕಲಾವಿದೆ ಮತ್ತು ಶಿಲ್ಪಶಾಸ್ತ್ರ ಪರಿಣಿತೆ, ಪತಿ ಕೃಷ್ಣಗಿರಿ ರಾಮಚಂದ್ರ ಗಮಕಿ, ಹೀಗಾಗಿ ಡಾ. ತುಳಸಿ ರಾಮಚಂದ್ರ ಬೆಳೆದದ್ದು, ಬದುಕು ಕಟ್ಟಿಕೊಂಡದ್ದು ಎರಡೂ ಕಲಾವಿದರ ಕುಟುಂಬಗಳಲ್ಲೇ. ಆರಂಬದಲ್ಲಿ ತುಳಸಿ ಅವರಿಗೆ ನೃತ್ಯ ಶಿಕ್ಷಣವಾದದ್ದು ಅಕ್ಕ ಚೂಡಾಮಣಿ ಅವರಿಂದಲೇ. ನಂತರ ಶಿಕ್ಷಣ ಮುಂದುವರೆದದ್ದು ಗುರು ಶ್ರೀಮತಿ ಲಲಿತಾ ದೊರೈ ಅವರಲ್ಲಿ. ಜೊತೆಗೆ ಶ್ರೀ ತೀರ್ಥರಾವ್ ಆಜಾದ್ ಅವರಿಂದ ಕಥಕ್ ಮತ್ತು ಶ್ರೀ ಸಿ.ಆರ್. ಆಚಾರ್ಯಲು ಅವರಿಂದ ಕೂಚಿಪುಡಿ ಅಭ್ಯಾಸ ಮಾಡಿದ್ದಾರೆ. ಪ್ರಸಿದ್ಧ ವಿದ್ವಾಂಸರಾದ ಡಾ. ಟಿ.ವಿ. ವೆಂಕಟಾಚಲಶಾಸ್ತ್ರಿ ಅವರ ಮಾರ್ಗದರ್ಶನದಲ್ಲಿ ತುಳಸಿ ರಾಮಚಂದ್ರ ಸಿದ್ಧಪಡಿಸಿದ ’ಕನ್ನಡ ಸಾಹಿತ್ಯದಲ್ಲಿ ನೃತ್ಯ ಕಲೆಯ ಉಗಮ ಮತ್ತು ವಿಚಾರದ ಅಧ್ಯಯನ’ ಎಂಬ ಮಹಾಪ್ರಬಂಧಕ್ಕೆ ಪಿ.ಹೆಚ್.ಡಿ ಪದವಿ ದೊರೆತಿದೆ. ಈ ಮಹಾಪ್ರಬಂಧವನ್ನು ಹಂಪಿಯ ಕನ್ನಡ ವಿಶ್ವವಿದ್ಯಾನಿಲಯ ’ಪದಗತಿ ಪಾದಗತಿ’ ಶೀರ್ಷಿಕೆಯಲ್ಲಿ ಪ್ರಕಟಿಸಿದೆ. ಭರತನಾಟ್ಯ ವಿದ್ವತ್ ಪರೀಕ್ಷೆಯನ್ನು ಮೊದಲ ರ‍್ಯಾಂಕಿನೊಂದಿಗೆ ಮುಗಿಸಿರುವ ಶ್ರೀಮತಿ ತುಳಸಿ, ೧೯೭೯ರಲ್ಲಿ ಮೈಸೂರಿನಲ್ಲಿ ತಮ್ಮದೇ ’ನೃತ್ಯಾಲಯ’ ಸಂಸ್ಥೆ ಸ್ಥಾಪಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ್ದಾರೆ.

ಕರ್ನಾಟಕದ ವಿಶಿಷ್ಠ ನೃತ್ಯಪ್ರಕಾರಗಳಾದ ’ಗೌಂಡಲಿ’ ಹಾಗೂ ’ಪೇರಣಿ’ ಗಳನ್ನು ಮೊದಲ ಬಾರಿಗೆ ಪುನರ‍್ರರಚಿಸಿ ಪ್ರದರ್ಶಿಸಿದ ಕೀರ್ತಿಯನ್ನು ಹೊಂದಿರುವ ಡಾ. ತುಳಸಿ, ಕನ್ನಡ ಕವಿಗಳ ಕಾವ್ಯಗಳಲ್ಲಿನ ರಸಘಟ್ಟಗಳನ್ನೂ ಆಧರಿಸಿ ಹಲವು ನೃತ್ಯರೂಪಕಗಳನ್ನು ಸಂಯೋಜಿಸಿದ್ದಾರೆ. ಜೊತೆಗೆ ನೃತ್ಯಕ್ಕೆ ಪೂರಕವಾದ ಕೆಲವು ತಿಲ್ಲಾನಾಗಳನ್ನೂ ರಚಿಸಿದ್ದಾರೆ. ದೇಶದ ಹಲವು ಪ್ರತಿಷ್ಠಿತ ನೃತ್ಯೋತ್ಸವಗಳಲ್ಲದೆ, ಶ್ರೀಲಂಕಾ, ಅಮೆರಿಕಾಗಳಲ್ಲೂ ಇವರ ನೃತ್ಯಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆಗಳು ನಡೆದಿವೆ.

ಹಲವಾರು ಸಂಘ ಸಂಸ್ಥೆಗಳಿಂದ ಕಲಾಶಾರದೆ, ನೃತ್ಯ ವಿದ್ವಾನಿಧಿ, ಆದರ್ಶ ಸೇವಾರತ್ನ ಮುಂತಾದ ಬಿರುದುಗಳೊಂದಿಗೆ ಗೌರವಿಸಲ್ಪಟ್ಟಿರುವ ಈ ಪ್ರತಿಭಾವಂತ ಕಲಾವಿದೆಯನ್ನು ಕರ್ನಾಟಕ ಸರ್ಕಾರ ೨೦೦೪ರಲ್ಲಿ ತನ್ನ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಸತ್ಕರಿಸಿದೆ. ಡಾ. ತುಳಸಿ ರಾಮಚಂದ್ರ ಅವರಿಗೆ ೨೦೦೭-೦೮ರ ಸಾಲಿನ ಗೌರವ ಪ್ರಶಸ್ತಿಯನ್ನು ನೀಡಿ ಸಂಗೀತ ನೃತ್ಯ ಅಕಾಡೆಮಿ ಗೌರವಿಸಿದೆ.