‘ತುಳಸೀ ರಾಮಾಯಣ’

– ಉತ್ತರ ಭಾರತದಲ್ಲಿ ಇದು ಬಹು ಪ್ರಸಿದ್ಧವಾದ ಒಂದು ಶ್ರೇಷ್ಠ ಕಾವ್ಯ, ಶ್ರೀರಾಮನ ಕಥೆಯನ್ನು ಹೇಳುವ ಕಾವ್ಯ.

ಗೋಸ್ವಾಮಿ ತುಳಸೀದಾಸರೆಂಬವರು ಇದನ್ನು ಬರೆದರು. (ಗೋಸ್ವಾಮಿ ಎಂದರೆ ಸಂಸಾರ ಬಿಟ್ಟು ಸನ್ಯಾಸಿಯಾದವರು.) ಆದುದರಿಂದ ‘ತುಳಸೀ ರಾಮಾಯಣ’ ಎಂದೇ ಜನರಲ್ಲಿ ಹೆಸರು ಬಂದಿತು. ತುಳಸೀದಾಸರು ಕೊಟ್ಟ ಹೆಸರು ‘ಶ್ರೀರಾಮಚರಿತಮಾನಸ’.

ಭಾರತದಲ್ಲಿ ಆದಿಕವಿ ವಾಲ್ಮೀಕಿ ಶ್ರೀರಾಮನ ಕಥೆಯನ್ನು ‘ರಾಮಾಯಣ’ದಲ್ಲಿ ಹೇಳಿದ ಮೇಲೆ, ನೂರಾರು ಕವಿಗಳು ಆ ಕಥೆಯನ್ನು ತಮ್ಮ ತಮ್ಮ ರೀತಿಗಳಲ್ಲಿ ಮತ್ತೆ ಹೇಳಿದ್ದಾರೆ. ಜನರ ಪ್ರೀತಿ ಗೌರವಗಳನ್ನು ಬಹುವಾಗಿ ಸಂಪಾದಿಸಿರುವ ರಾಮಾಯಣಗಳಲ್ಲಿ ‘ತುಳಸೀ ರಾಮಾಯಣ’ವೂ ಒಂದು.

ನಮ್ಮ ದೇಶದ ಹೆಚ್ಚಿನ ಕವಿಗಳು ಸಂತರು. ಮಹಾಪಂಡಿತರು. ಪರಮ ಭಕ್ತರು. ಋಷಿಗಳಂತೆ ಬದುಕಿದವರು. ಗೋಸ್ವಾಮಿ ತುಳಸೀದಾಸರೂ ವೇದ, ಶಾಸ್ತ್ರ, ಪುರಾಣಗಳನ್ನು ಅಧ್ಯಯನ ಮಾಡಿ ಆಳವಾದ ಪಾಂಡಿತ್ಯ ಸಂಪಾದಿಸಿದವರು. ಜೀವನದ ಮಧ್ಯಭಾಗದಲ್ಲಿ ಸನ್ಯಾಸಿಯಾಗಿ ವೈರಾಗ್ಯ ದೀಕ್ಷೆಯಿಂದ ಸಂತರೆನ್ನಿಸಿ ಕೊಂಡವರು. ತುಳಸೀದಾಸರು ತಮ್ಮ ನಿರ್ಮಲ ಭಕ್ತಿಯಿಂದ ಶ್ರೀರಾಮನ ಬಂಟ ಆಂಜನೇಯನನ್ನು ಕಂಡು ಆತನ ಸಹಾಯದಿಂದ ಶ್ರೀರಾಮ ಲಕ್ಷ್ಮಣರನ್ನು ಕಣ್ಣಾರೆ ನೋಡಿದ ಪುಣ್ಯಾತ್ಮರು ಎಂದು ಹೇಳುತ್ತಾರೆ.

ತುಳಸೀದಾಸರು ಜನರಿಗೆ ‘ಭಕ್ತಿಯೇ ದೇವರ ದಯೆಯನ್ನು ಸಂಪಾದಿಸಲು ಇರುವ ದಾರಿ. ಶ್ರೀರಾಮನೇ ಪರ ಬ್ರಹ್ಮ. ಅವನೇ ಆದರ್ಶ ಪುರುಷ. ಆತನೇ ಲೋಕ ನಾಯಕ. ಆತನ ನಡೆನುಡಿಗಳೇ ಲೋಕರೀತಿಗಳು’ ಎಂದು ಸಾರಿದರು. ಅವರು ಶ್ರೀರಾಮನ ಕಥೆಯ ಜೊತೆಗೆ ರಾಮಾಯಣದ ವಿವಿಧ ಪಾತ್ರಗಳ ಮೂಲಕ ಹೇಳಿದ ಲೋಕಧರ್ಮದ ಸೂತ್ರಗಳನ್ನು ಕಾಣಬಹುದು. ಅಲ್ಲಿ ಹೇಳಿರುವ ಹಲವು ನೀತಿಗಳು ಯಾವುದೇ ಒಂದು ಜನಾಂಗ, ಜಾತಿ, ದೇಶ, ಕಾಲವನ್ನು ಕುರಿತಾಗಿ ಹೇಳಿದವುಗಳಲ್ಲ. ಇಂದಿನ ಕಾಲದಲ್ಲೂ ನಾವು ಅನುಸರಿಸಬೇಕಾದವು.

ತಂದೆಮಕ್ಕಳ ಸಂಬಂಧ , ಅಣ್ಣತಮ್ಮಂದಿರ ಪ್ರೀತಿ ಇವನ್ನು ರಾಮಚರಿತಮಾನಸ ಸುಂದರವಾಗಿ ವರ್ಣಿಸುತ್ತದೆ. ಗಂಡಹೆಂಡತಿ ಹೇಗೆ ನಡೆದುಕೊಳ್ಳಬೇಕು, ಅತ್ತಸೊಸೆ ಹೇಗೆ ನಡೆದುಕೊಳ್ಳಬೇಕು ಇವುಗಳ ಚಿತ್ರಗಳು ಇಲ್ಲಿವೆ. ಗುರುಗಳಲ್ಲಿ ಭಕ್ತಿ, ಶಿಷ್ಯರಲ್ಲಿ ಪ್ರೀತಿ ಇವನ್ನು ತುಳಸೀದಾಸರು ವರ್ಣಿಸಿದ್ದಾರೆ. ಆದರೆ ಈ ಕಾವ್ಯ ನೀತಿಯನ್ನು ಮಾತ್ರ ಹೇಳುವುದಿಲ್ಲ. ಶ್ರೀರಾಮನ ಕಥೆಯನ್ನು ತುಳಸೀದಾಸರು  ಬಹು ಸುಂದರವಾಗಿ ಹೇಳಿದ್ದಾರೆ. ಇಲ್ಲಿ ರಾಮ, ಸೀತೆ, ಲಕ್ಷ್ಮಕಣ, ಆಂಜನೇಯ ಎಲ್ಲರನ್ನೂ ನಾವೇ ಕಾಣುತ್ತಿದ್ದೇವೆಯೋ ಎನ್ನಿಸುತ್ತದೆ.

ತುಳಸೀದಾಸರ ಕಾಲಸ್ಥಿತಿ

ಗೋಸ್ವಾಮಿ ತುಳಸೀದಾಸರು ಹದಿನೈದನೆಯ ಶತಮಾನದ ಕಡೆಯ ಭಾಗದಲ್ಲಿ ಹುಟ್ಟಿದರು. ಹದಿನೇಳನೆಯ ಶತಮಾನದ ಪ್ರಾರಂಭದವರೆಗೆ ಬದುಕಿದ್ದರು .

ಇದು ಹಿಂದೂಗಳಿಗೆ ಕಷ್ಟದ ಕಾಲವಾಗಿತ್ತು. ಅವರು ಸ್ವಾತಂತ್ಯ್ರ ಕಳೆದುಕೊಂಡಿದ್ದರು. ಅವರು ಕಷ್ಟದಿಂದ ತಮ್ಮ ಒಗ್ಗಟ್ಟನ್ನು ಕಾಪಾಡಿಕೊಳ್ಳಬೇಕಾಗಿತ್ತು. ಅವರ ಧರ್ಮ ಗ್ರಂಥಗಳು ಸಂಸ್ಕೃತದಲ್ಲಿದ್ದು ಅನೇಕರಿಗೆ ಅವನ್ನು ತಿಳಿಯುವುದು ಕಷ್ಟವಾಗಿತ್ತು. ಸ್ವಾತಂತ್ಯ್ರ ಇಲ್ಲದ ಹಿಂದೂಗಳಿಗೆ, ತಮ್ಮ ಧರ್ಮದ ವಿಷಯವನ್ನು ಎಲ್ಲಿರಿಗೆ ತಿಳಿಸುವಂತೆ ಪ್ರಯತ್ನಿಸುವುದೂ ಕಷ್ಟವಾಗಿತ್ತು. ಹಿಂದೂಗಳಲ್ಲಿ ಕೆಲವು ಜಾತಿಗಳವರಿಗೆ ಮತ್ತು ಹೆಂಗಸರಿಗೆ ಸಮಾನತೆ ದೊರೆತಿರಲಿಲ್ಲ.

ಇದು ಉದಾರ ಬುದ್ಧಿಯ ಪ್ರತಿಭಾಶಾಲಿ ಕವಿಗಳಿಗೆ ಸರಿಬೀಳಲಿಲ್ಲ.

ವೈಷ್ಣವ ಮತಸ್ಥಾಪಕರಾದ ಶ್ರೀರಾಮಾನುಜಾಚಾರ್ಯರ ಶಿಷ್ಯ ಶ್ರೀರಾಮಾನಂದರು ಮತ್ತು ಅವರ ಶಿಷ್ಯರು ಆಗ ಉತ್ತರ ಭಾರತದಲ್ಲಿದ್ದರು. ಅವರು ಭಕ್ತಿಯ ಬಾಗಿಲನ್ನು ಎಲ್ಲರಿಗೂ ತೆರೆದಿಟ್ಟು ಜನತೆಗೆ ಭರವಸೆ ನೀಡಿದರು.

ಆಗಲೇ ಶ್ರೀರಾಮಾನಂದರು ಶ್ರೀರಾಮನು ಎಲ್ಲರನ್ನು ಕಾಪಾಡುತ್ತಾನೆ ಎಂದು ಬೋಧಿಸಿ ರಾಮಭಕ್ತಿಯನ್ನು ಹರಡಿದರು. ಸಂತ ಕಬೀರದಾಸರು ‘ನಿರಾಕಾರ ರಾಮ’ನ ಮಹಿಮೆಯನ್ನು ಬೋಧಿಸಿ ರಾಮ ರಹೀಮರಲ್ಲಿ ಭೇದವಿಲ್ಲವೆಂದು ಸಾರಿ ಹಿಂದೂ ಮುಸಲ್ಮಾನರಲ್ಲಿ ಐಕ್ಯ ಉಂಟು ಮಾಡಲು ಪ್ರಯತ್ನಿಸಿದರು.

ಶ್ರೀ ತುಳಸೀದಾಸರು ಸಕಲಗುಣಸಂಪನ್ನ, ಸರ್ವಶಕ್ತ , ಲೋಕನಾಯಕ, ಪರಬ್ರಹ್ಮ ಸ್ವರೂಪ ಶ್ರೀರಾಮನ ರೂಪವನ್ನು ಜನರೆದುರು ನಿಲ್ಲಿಸಿ ಅಭಯ ನೀಡಿದರು. ಭಕ್ತಿಯ ಬೆಳಕಿನಿಂದ ಜನರ ಮನಸ್ಸಿನಲ್ಲಿ ಮೂಡಿದ್ದ ಭಯದ ಕತ್ತಲೆಯನ್ನು ದೂರ ಮಾಡಿದರು. ರಕ್ಷಕ, ಆದರ್ಶ ಪುರುಷನಾಗಿ ಶ್ರೀರಾಮ ಶೋಭಿಸಿದ. ಭಕ್ತಿಯ ಕವಚ ಧರಿಸಿದ ಹಿಂದೂ ಧರ್ಮ ಧೈರ್ಯವಾಗಿ ಎಲ್ಲವನ್ನು ಇದಿರಿಸಿತು. ಶ್ರೀತುಳಸೀದಾಸರು ಭಕ್ತಶಿರೋಮಣಿ ಎಂದು ಗೌರವಿಸಲ್ಪಟ್ಟರು.

ಶ್ರೀತುಳಸೀದಾಸರು ಹುಟ್ಟಿದ ಊರು, ದಿನಗಳ ವಿಷಯದಲ್ಲಿ ಅಭಿಪ್ರಾಯ ಭೇದವಿದೆ. ಬಹುಜನ ವಿದ್ವಾಂಸರ ಅಭಿಪ್ರಾಯ ಇದು: ವಿಕ್ರಮ ಶಕ ೧೫೪೪ ರಲ್ಲಿ ಅಂದರೆ ಕ್ರಿ.ಶ. ೧೪೮೮ ರಲ್ಲಿ ಉತ್ತರ ಪ್ರದೇಶದ ರಾಜಾಪುರ ಎಂಬಲ್ಲಿ ಶ್ರೀತುಳಸೀದಾಸರು ಜನಿಸಿದರು. (ಇವರು ೧೫೩೨ರಲ್ಲಿ ಹುಟ್ಟಿದರು ಎಂದೂ ಕೆಲವರು ಹೇಳುತ್ತಾರೆ.) ಇತರ ವರ್ಷಗಳನ್ನೂ ಕೆಲವರು ಸೂಚಿಸಿದ್ದಾರೆ.

ತಂದೆಯೇ ದೂರವಾದರು

ರಾಜಾಪುರದ ಆತ್ಮಾರಾಮ ದುಬೆಯವರು ವೇದಾಂತ, ಜ್ಯೋತಿಷ್ಯ ಶಾಸ್ತ್ರಗಳ ಪಂಡಿತರು. ಅವರ ಧರ್ಮಪತ್ನಿ ಹುಲಸೀಬಾಯಿ. ಎಲ್ಲ ರೀತಿಯ ಸುಖವೂ ಇವರಿಗೆ ಇತ್ತು. ಆದರೆ ಮಕ್ಕಳಿರಲಿಲ್ಲ. ಬಹಳ ಕಾಲ ಮಕ್ಕಳಿಲ್ಲದೆ ದುಃಖಿಸುತ್ತಿದ್ದ ಈ ದಂಪತಿಗಳು ಆಂಜನೇಯನನ್ನು ಭಕ್ತಿಯಿಂದ ಆರಾಧಿಸಿ ಪುತ್ರ ಸಂತಾನ ಬೇಡುತ್ತಿದ್ದರು . ಕೆಲವು ವರ್ಷಗಳ ನಂತರ ಇವರ ಪ್ರಾರ್ಥನೆ ಫಲಿಸಿತು. ಹುಲಸೀಬಾಯಿಯವರು ಶುಭದಿನವೊಂದರಂದು ಸುಂದರವಾದ ಗಂಡು ಮಗುವಿಗೆ ಜನ್ಮವಿತ್ತರು.

ಮಗು ತಾಯಿಯ ಹೊಟ್ಟೆಯಿಂದ ಹೊರಬರುತ್ತಲೇ ಅಳುವ ಬದಲು ‘ರಾಮ ರಾಂ’ ಎಂದು ಹೇಳಿತು ಎಂದು ಕೆಲವರು ಹೇಳುತ್ತಾರೆ. ನೆರೆದ ಜನ ಮಗುವಿಗೆ ‘ರಾಂ ಬೋಲಾ’ ಎಂದು ಹೆಸರಿಟ್ಟರಂತೆ.

ಕೆಲವೇ ದಿನಗಳ ಮಗುವಾಗಿದ್ದಾಗಲೇ ತುಲಾರಾಮ ತಾಯಿಯನ್ನು ಕಳೆದುಕೊಂಡ. ತಂದೆಯೂ ಅವನನ್ನು  ದೂರ ಮಾಡಿದರು.ಇದಕ್ಕೆ ಹಲವು ಕಾರಣಗಳನ್ನು ಜನ ಹೇಳುತ್ತಾಎ. ಒಂದು ಕಥೆ ಹೀಗಿದೆ. ಪಂಡಿತ ದುಬೆಯವರು ಮಗನಿಗೆ ಹನ್ನೆರಡನೆಯ ದಿನ ‘ತುಲಾ ರಾಮ’ ಎಂದು ನಾಮಕರಣ ಮಾಡಿದರು.

ಅದೇ ದಿನ ತಂದೆ ಮಗನ ಜನ್ಮಕುಂಡಲಿಯನ್ನು ಬರೆದು ನೋಡಿದರು.

ಎಲ್ಲ ಗ್ರಹಗಳೂ ಉತ್ತಮಸ್ಥಾನದಲ್ಲಿಯೇ ಇದ್ದವು; ಆದರೆ ನಕ್ಷತ್ರ? ‘ನಕ್ಷತ್ರ ಮಾತ್ರ ಮೂಲ! ಈ ನಕ್ಷತ್ರ ಬಹಳ ಕೆಟ್ಟದು. ಈ ಮಗನಿಂದ ನನಗೆ ಏಳಿಗೆಯಿಲ್ಲ. ಇವನು ಕುಲವನ್ನು ಉದ್ಧರಿಸಲಾರ. ಈತನನ್ನು ತ್ಯಜಿಸುವುದೇ ಸರಿ. ಇಲ್ಲದಿದ್ದರೆ ನನಗೆ ಉಳಿಗಾಲವಿಲ್ಲ’ ಎಂದು ನಿರ್ಧರಿಸಿದರು.

ಆ ಊರನ್ನೇ ಬಿಟ್ಟು ಹೊರಟುಹೋದರು. ಮುದುಕಿ ಅಜ್ಜಿ ದುರ್ದೈವಿ ತುಲಾರಾಮನನ್ನು ಸಾಕತೊಡಗಿದಳು. ತುಲಾರಾಮ ತಂದೆ ತಾಯಿಗಳಿಂದ ದೂರವಾದ.

ನೆರೆಹೊರೆಯವರಿಗೆ ಮಗುವಿನ ಮೇಲೆ ತುಂಬಾ ಪ್ರೀತಿ, ಎಲ್ಲರೂ ಎತ್ತಿ, ಆಡಿಸಿ, ಹರಸಿ, ತಿನಿಸು ನೀಡುವವರೇ.

ತನ್ನ ಕಾಲಲ್ಲಿ ಎದ್ದು ನಿಂತ ತುಲಾರಾಮ ಊರಲ್ಲಿ ಭಿಕ್ಷೆ ಬೇಡುತ್ತ ಅವರಿವರು ಕೊಟ್ಟ ಹಾಲು ಹಣ್ಣು ತಿನ್ನುತ್ತ ಬದುಕುತ್ತಿದ್ದ.

‘ನಾಲ್ಕು ಕಡಲೆಕಾಳುಗಳು ನಾಲ್ಕು ಪುರುಷಾರ್ಥಗಳಂತೆ ಬಹಳ ದುರ್ಲಭವಾಗಿದ್ದುವು’ – ಎಂದು ಗೀತೆಯೊಂದರಲ್ಲಿ ತುಳಸೀದಾಸರು ತಮ್ಮ ಬಾಲ್ಯವನ್ನು ನೆನೆದಿದ್ದಾರೆ.

ಕೆಲವು ವರ್ಷಗಳ ನಂತರ ಮುದುಕಿ ತೀರಿಕೊಂಡಿತು. ಈಗ ತುಲಾರಾಮನಿಗೆ ಊರಿನ ಜನರೇ ತಂದೆತಾಯಿಗಳು. ಶ್ರೀರಾಮನೇ ಯಜಮಾನ. ಭಕ್ತಾದಿಗಳು ನೀಡುವ ಪ್ರಸಾದವೇ ಊಟ. ‘ದೇವಾಲಯವೇ ಮನೆ. ದೇವರೇ ತಾಯಿತಂದೆ’ ಎಂದಿದ್ದಾರೆ ತುಳಸೀದಾಸರು. ‘ಆಂಜನೇಯನು ನನಗೆ ಅನ್ನವಿತ್ತು ಸಲಹಿದ ತಂದೆ’ ಎಂದು ತುಳಸೀದಾಸರು ತಾವು ಬಾಲ್ಯದಲ್ಲಿ ಆಂಜನೇಯ ದೇವಾಲಯದಲ್ಲಿ ಪ್ರಸಾದ ತಿಂದು ಬದುಕಿದುದನ್ನು ನೆನೆಯುತ್ತಾರೆ.

ಗುರು ದೊರೆತರು

ಒಮ್ಮೆ ರಾಜಾಪುರಕ್ಕೆ ಪ್ರಸಿದ್ಧ ಪಂಡಿತರೂ, ತತ್ವಜ್ಞಾನಿಗಳೂ, ಕಥಾವಾಚಕರೂ ಆದ ನರಹರಿದಾಸರು ಬಂದರು. ಅವರು ಆಂಜನೇಯ ಗುಡಿಯಲ್ಲೇ ತಂಗಿದರು. ಊರಿನ ಜನರ ಕೋರಿಕೆಯಂತೆ ಶ್ರೀ ನರಹರಿದಾಸರಿಂದ ರಾಮಾಯಣ ಪ್ರವಚನ ಪ್ರಾರಂಭವಾಯಿತು.

ತುಲಾರಾಮನಿಗೆ ಹಬ್ಬದಂತಹ ಸಂಭ್ರಮ. ಸಂಗೀತ, ಸಾಹಿತ್ಯಗಳ ಆ ಪ್ರವಚನ ಬಾಲಕನಿಗೆ ಸಿಹಿ ತಿಂಡಿಯಷ್ಟು ಆನಂದದಾಯಕ. ದಿನವೂ ತಪ್ಪದೆ ಹಾಜರಾಗುತ್ತಿದ್ದ. ಜನ್ಮದಿಂದಲೂ ತುಲಾರಾಮನಲ್ಲಿ ಮೊಳಕೆಯಂತಿದ್ದ ರಾಮಭಕ್ತಿ ಪ್ರವಚನ ಕೇಳುತ್ತ ಕೇಳುತ್ತ ಚಿಗುರು ಒಡೆಯಿತು.

ತನ್ನ ಇದಿರಿಗೇ ಕುಳಿತು ಭಜನೆ ಹಾಡುವಾಗ ಸುಸ್ವರದಲ್ಲಿ ಹಾಡಿ ಆಸಕ್ತಿಯಿಂದ ಪ್ರವಚನ ಕೇಳುತ್ತಿದ್ದ ಬಾಲಕನನ್ನು ನರಹರಿದಾಸರು ಕುತೂಹಲದಿಂದ ಗಮನಿಸುತ್ತಿದ್ದರು. ಬಾಲಕನ ಸುಂದರ ವದನ, ಕೋಮಲ ಶರೀರ, ವಿಶಾಲವಾದ ಕಣ್ಣುಗಳು, ಎತ್ತರವಾದ ಹಣೆ, ಮುಖದಲ್ಲಿ ಮಿನುಗುವ ತೇಜಸ್ಸುಗಳನ್ನು ಕಂಡು ನರಹರಿದಾಸರು ಬಾಲಕನಲ್ಲಿ ಇರುವ ಅದ್ಭುತ ಶಕ್ತಿಯನ್ನು ಗುರುತಿಸಿದರು. ಆತನ ತಂದೆತಾಯಿಗಳ ಬಗೆಗೆ ತಿಳಿದುಕೊಂಡು ಕನಿಕರ ಪಟ್ಟರು. ಒಂದು ದಿನ ತುಲಾರಾಮನನ್ನು ಹತ್ತಿರ ಕರೆದು, ‘ನೀನು ನನ್ನ ಶಿಷ್ಯನಾಗುತ್ತೀಯಾ?’ ಎಂದು ಕೇಳಿದರು. ತುಲಾರಾಮ ಗುರುಗಳ ಕಾಲಿಗೆ ಸಾಷ್ಟಾಂಗ ನಮಸ್ಕರಿಸ ಅತ್ತುಬಿಟ್ಟ.

ತಲೆ ನೇವರಿಸಿ ಮೈದಡವಿ ನರಹರಿದಾಸರು ತುಲಾ ರಾಮನನ್ನು ಎತ್ತಿದರು.

ಅಂದಿನಿಂದ ತುಲಾರಾಮ ಪಂಡಿತ ನರಹರಿದಾಸರ ಶಿಷ್ಯನಾದ. ‘ಪರಮೇಶ್ವರನೇ ನರ ರೂಪದಲ್ಲಿ ನನಗೆ ಗುರುವಾಗಿ ದೊರೆತ’ ಎಂದು ತುಲಸೀದಾಸರು ಈ ಘಟನೆಯನ್ನು ನೆನೆದು ಹಾಡಿದ್ದಾರೆ. ರಾಜಾಪುರದಲ್ಲಿ ಪ್ರವಚನದ ಕೆಲಸ ಮುಗಿಸಿ ನರಹರಿದಾಸರು ಬೇರೆ ಊರಿಗೆ ಹೊರಟರು. ಮಾರುತಿಗೆ ವಂದಿಸಿ ತುಲಾರಾಮ ಹಿಂಬಾಲಿಸಿದ.

ನರಹರಿದಾಸರು ಹೋದಲ್ಲೆಲ್ಲಾ ಶಿಷ್ಯ ತುಲಾ ರಾಮನೂ ಇದ್ದ. ಪ್ರವಚನಕ್ಕೆ ಮೊದಲು ಸುಶ್ರಾವ್ಯವಾಗಿ ರಾಮಭಜನೆ ಹಾಡುವುದು ಇವನ ಕೆಲಸ. ಹಗಲೆಲ್ಲ ಗುರುಗಳಿಂದ ವೇದ, ಶಾಸ್ತ್ರ, ಪುರಾಣ, ಉಪನಿಷತ್ತುಗಳ ಪಾಠ; ಸಂಸ್ಕೃತ, ಪ್ರಾಕೃತ ಭಾಷೆಗಳ ಅಧ್ಯಯನ. ರಾತ್ರಿ ರಾಮಭಜನೆ. ದೇಶ ಸಂಚಾರ ಮುಗಿಸಿ ಉತ್ತರ ಪ್ರದೇಶದ ಸೋರೊ ಎಂಬ ಜಾಗಕ್ಕೆ ಬಂದಾಗ ಹದಿನಾಲ್ಕು ವರ್ಷಗಳು ಕಳೆದಿದ್ದವು. ಅಷ್ಟರಲ್ಲಿ ತುಲಾರಾಮ ಸಕಲ ಶಾಸ್ತ್ರ ಪಂಡಿತನಾಗಿದ್ದ. ಜನಜೀವನದ ಪರಿಚಯ ಪಡೆದಿದ್ದ. ಗುರುಗಳಿಗಿಂತಲೂ ಚೆನ್ನಾಗಿ ಹಾಡಬಲ್ಲ, ರಾಮಾಯಣದ ವ್ಯಾಖ್ಯಾನ ಮಾಡಬಲ್ಲ. ಮಾತ್ರವಲ್ಲ, ತುಲಾರಾಮ ಕವಿತೆಗಳನ್ನೂ ರಚಿಸುತ್ತಿದ್ದ. ಗುರು ನರಹರಿದಾಸರು ಶಿಷ್ಯನ ಪರಿಪೂರ್ಣತೆಯನ್ನು ಕಂಡು ಆನಂದಪಡುತ್ತಿದ್ದರು.

ಸಂಸಾರವೈರಾಗ್ಯ

ಸಕಲ ವಿದ್ಯಾಪಾರಂಗತನಾದ ತುಲಾರಾಮನಿಗೆ ಗುರು ನರಹರಿದಾಸರೇ ಮದುವೆಯನ್ನು ಮಾಡಿಸಿದರು.

ದೀನಬಂಧು ಪಾಠಕನೆಂಬ ಬ್ರಾಹ್ಮಣನ ಮಗಳು ರತ್ನಾವಳಿ ಎಂಬ ಸುಶಿಕ್ಷಿತ ಸುಂದರಿ ಹುಡುಗಿಯೊಡನೆ ತುಲಾರಾಮನ ವಿವಾಹವಾಯಿತು. ‘ನೀನಿನ್ನು ಸುಖವಾಗಿರು’ ಎಂದು ಗುರುಗಳು ಆಶೀರ್ವದಿಸಿದರು. ತಂದೆಗಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದ ಗುರುಗಳನ್ನು ಆಗಲಿ ಇರಲು ತುಲಾರಾಮ ದುಃಖಪಟ್ಟರೂ ಗುರುವಿನ ಅಪ್ಪಣೆ ಹಾಗೂ ಧರ್ಮಕ್ಕೆ ಕಟ್ಟುಬಿದ್ದು ಸಂಸಾರಿಯಾದ.

ರೂಪ, ಯೌವನ, ವಿದ್ಯೆ, ಗೌರವ, ಸಂಪಾದನೆ ಯಾವುದಕ್ಕೂ ತುಲಾರಾಮನಿಗೆ ಕೊರತೆ ಇರಲಿಲ್ಲ. ಹಲೊವರು ಶ್ರೀಮಂತರು ಆಗಾಗ ಅವನನ್ನು ಮನೆಗೆ ಕರೆದು ಸನ್ಮಾನ ಮಾಡುವರು, ಹಣ ಕೊಡುವರು.

ಹೆಂಡತಿ ರತ್ನಾವಳಿ ಸುಂದರಿ, ಬಹಳ ಒಳ್ಳೆಯ ಗುಣಗಳಿದ್ದ ಹುಡುಗಿ. ತುಲಾರಾಮನಿಗೆ ಆಕೆಯಲ್ಲಿ ತುಂಬ ಪ್ರೀತಿ. ಗಂಡ ಹೆಂಡತಿ ಬಹಳ ಸಂತೋಷದಿಂದ ಸಂಸಾರ ಮಾಡಿಕೊಂಡಿದ್ದರು. ಈ ನೆಮ್ಮದಿ, ಸಂತೋಷಗಳಲ್ಲಿ ತುಲಾರಾಮನಿಗೆ ದೇವರ ಸ್ಮ ರಣೆ ಕಡಮೆಯಾದದ್ದು ಆಶ್ಚರ್ಯವಲ್ಲ.

ತುಲಾರಾಮನಿಗೆ ಹೆಂಡತಿಯಲ್ಲಿ ಎಷ್ಟು ಪ್ರೀತಿ ಎಂದರೆ, ಆಕೆಯನ್ನು ತವರುಮನೆಗೆ ಕಳುಹಿಸಿಯೇ ಇರಲಿಲ್ಲ.

ಒಂದು ದಿನ ಪಂಡಿತ ತುಲಾರಾಮ ಪಕ್ಕದ ಗ್ರಾಮಕ್ಕೆ ಪ್ರವಚನಕ್ಕಾಗಿ ಹೋಗಿದ್ದ.

ಅದೇ ದಿನ ರತ್ನಾವಳಿಯ ಅಣ್ಣ ತಂಗಿಯ ಮನೆಗೆ ಬಂದ. ಮದುವೆಯಾದಂದಿನಿಂದಲೂ ತವರುಮನೆಯ ಬಾಗಿಲನ್ನು ನೋಡದ ರತ್ನಾವಳಿ ಅಣ್ಣನನ್ನು ನೋಡಿ, ತವರುಮನೆಯ ನೆನಪಾಗಿ ಅಳತೊಡಗಿದಳು.

ಅಣ್ಣನೂ ಅವಳನ್ನು ಕರೆದುಕೊಂಡು ಹೋಗಲೆಂದೇ ಬಂದಿದ್ದ. ತಂಗಿಯ ದುಃಖವನ್ನು ಸಂತೈಸಿದ ಅಣ್ಣ, “ನಡೆ, ಮನೆಗೆ ಹೋಗುವ, ಒಂದು ವಾರ ಇದ್ದು ಬರುವಿಯಂತೆ. ಅಮ್ಮ ನಿನ್ನನ್ನು ನೋಡಲು ಹಂಬಲಿಸುತ್ತಿದ್ದಾಳೆ” ಎಂದ. ತವರುಮನೆಯ ಮೋಹದಿಂದ ಒಮ್ಮೆ ಹೊರಡುವ ನಿರ್ಧಾರ ಮಾಡಿದರೂ ರತ್ನಾವಳಿ ಹಿಂಜರಿದಳು. “ಅವರು ಮನೆಯಲ್ಲಿ ಇಲ್ಲ. ಒಂದು ಮಾತು ಕೇಳದೆ, ಅವರ ಅನುಮತಿ ಪಡೆಯದೆ ಹೇಗೆ ಬರಲಿ? ಅಲ್ಲದೆ ಅವರು ನಾನಿಲ್ಲದೆ ಒಂದು ಗಳಿಗೆಯೂ ಇರಲಾರರು. ಅವರು ಬಂದನಂತರ ನೀನೂ ಹೇಳು, ನಾನೂ ಕೇಳುತ್ತೇನೆ, ಅನಂತರ ಹೊರಡುವ” ಎಂದಳು.

“ಹದಿನೈದು ವರ್ಷಗಳಲ್ಲಿ ಒಮ್ಮೆಯೂ ಕಳಿಸಿ ಕೊಡದವರು ಈಗ ಬಿಡುತ್ತಾರೆಯೆ? ನೀನು ಹೊರಡು. ಅವರಿಗೆ ಸಿಟ್ಟು ಬಂದರೆ ನಾನು ಉತ್ತರ ಕೊಡುತ್ತೇನೆ. ಬೇಕಾದರೆ ಎರಡೇ ದಿನದಲ್ಲಿ ಬಂದುಬಿಡು” ಎಂದು ಒತ್ತಾಯಿಸಿದ ಅಣ್ಣ. ರತ್ನಾವಳಿಗೆ ಅಣ್ಣನ ಮಾತು ಸರಿ ಅನ್ನಿಸಿತು. ಮನೆಗೆ ಬೀಗ ಹಾಕಿದಳು. ನೆರೆಮನೆಯವರ ಕೈಗೆ ಬೀಗದ ಕೈ ಕೊಟ್ಟು, “ಅವರು ಬಂದರೆ ಹೇಳಿಬಿಡಿ. ನಾಡಿದ್ದು ಬಂದುಬಿಡುತ್ತೇನೆ” ಎಂದು ಹೊರಟಳು.

ಕತ್ತಲಾದನಂತರ ಪಂಡಿತ ತುಲಾರಾಮ ಮನೆಗೆ ಬಂದ. ಬೀಗ ಹಾಕಿರುವುದನ್ನು ಕಂಡು ಗಾಬರಿಯಾದ. ಪಕ್ಕದ ಮನೆಯವರು ಬೀಗದ ಕೈ ಕೊಟ್ಟು ವಿಷಯ ತಿಳಿಸಿದಾಗ ಕೋಪ ಕಿಡಿಕಿಡಿಯಾಯಿತು. ಬಾಗಿಲು ತೆಗೆದು ದೀಪ ಹಚ್ಚಿದ . ಮಡದಿ ಇಲ್ಲದ ಮನೆ ಗವಿಯಂತೆ ಕಾಣಿಸಿತು. ಗಂಟೆ ಗಂಟೆ ಕಳೆದಷ್ಟೂ ಬೇಸರ ಹೆಚ್ಚಿತು. ಮಲಗಿಕೊಂಡ. ನಿದ್ರೆ ಬರಲಿಲ್ಲ. ಬೇಸರ ತಡೆಯಲು ಆಗಲಿಲ್ಲ. ಮಧ್ಯರಾತ್ರಿಯಾಯಿತು. ಹೆಂಡತಿಯ ತವರಿಗೇ ತಾನೂ ಹೋಗುವುದು ಎಂದು ನಿಶ್ಚಯಮಾಡಿ ತುಲಾ ರಾಮ ಹೊರಟೇಬಿಟ್ಟ.

ಶ್ರಾವಣ ಮಾಸ. ಆಕಾಶದಲ್ಲಿ ಮೋಡಗಳು ದಟ್ಟವಾಗಿ ಕವಿದಿದ್ದುವು. ಸುತ್ತಲೂ ಕತ್ತಲು. ಮನೆಯಿಂದ ಹೊರಗೆ ಕಾಲಿಡುತ್ತಲೇ ಗುಡುಗು ಮಿಮಚುಗಳ ಜೊತೆಗೆ ಧಾರಾಕಾರ ಮಳೆ ಪ್ರಾರಂಭವಾಯಿತು.

ಆದರೆ ನಿರ್ಧಾರ ಬದಲಾಯಿಸದ ಪಂಡಿತ ತುಲಾರಾಮ ಮಳೆಯಲ್ಲಿ ನೆನೆಯುತ್ತ ಗಾವುದ ದೂರದ ಗಂಗಾನದಿಯ ಬಳಿಗೆ ಬಂದ. ನದಿಯಲ್ಲಿ ಮಹಾಪೂರ ಬಂದಿತ್ತು. ಆ ಕಡೆ ದಾಟಿಸುವಂತೆ ದೋಣಿಯವನನ್ನು ಕೇಳಿದ.

ಆತ “ಇಂತಹ ಪ್ರವಾಹ, ಮಳೆ, ಗಾಳಿಗಳಲ್ಲಿ ನದಿ ದಾಟುವುದೇ? ಉಹುಂ” ಎಂದುಬಿಟ್ಟ.

ಉಕ್ಕಿಹರಿಯುತ್ತಿದ್ದ ಗಂಗೆಯನ್ನು ನೋಡಿದ ತುಲಾ ರಾಮನಿಗೆ ಎದೆ ಝಲ್ಲೆಂದಿತು. ಆದರೂ ಹೆಂಡತಿಯ ಮೇಲಿನ ಪ್ರೀತಿ ಬಲವಾಗಿ ಮುಂದೆ ದೂಡಿತು. ಧೈರ್ಯ ಮಾಡಿ , ಧೋತರ ಬಿಗಿದುಕಟ್ಟಿ ನೀರಿಗೆ ಧುಮುಕಿದ ತುಲಾರಾಮ ಪ್ರವಾಹದ ವಿರುದ್ಧ ಈಜುತ್ತ ಆಚೆ ದಡ ಸೇರಿಯೇಬಿಟ್ಟ.

ನನ್ನಲ್ಲಿ ಇರಿಸಿದಷ್ಟು ಪ್ರೀತಿ ಶ್ರೀರಾಜಮನಲ್ಲಿ ಇಟ್ಟಿದ್ದರೆ ನಿಮಗೆ ಶ್ರೀರಾಮನೇ ಕಾಣಿಸುತ್ತಿದ್ದ.’

ಬಟ್ಟೆ ಹಿಂಡುವಷ್ಟೂ ಬಿಡುವು ಇಲ್ಲ.

ಹಾಗೇ ಧಾವಿಸುತ್ತ ಹೆಂಡತಿಯ ಮನೆಯ ಬಾಗಿಲಿಗೆ ಬಂದ ‘ರತ್ನಾವಳೀ, ರತ್ನಾವಳೀ’ ಎಂದು ಕುಗಿ ಕರೆದ.

ಇಂತಹ ಧಾರಾಕಾರದ ಮಳೆಯಲ್ಲಿ ಯಾರು ಬಂದಿರಬಹುದು ಎಂದು ರತ್ನಾವಳಿಗೆ ಆಶ್ಚರ್ಯ’ ಬಾಗಿಲು ತೆರೆದರೆ-ತುಲಾರಾಮ! ಮಳೆಯಿಂದ ತೊಯ್ದು, ಬಟ್ಟೆಯಿಂದ ನೀರು ಉದುರುತ್ತಿದೆ; ಚಳಿಗೆ ನಡುಗುತ್ತಿದ್ದಾನೆ.

ರತ್ನಾವಳಿಗೆ ಆಶ್ಚರ್ಯವಾಯಿತು, ತನ್ನಲ್ಲಿ ಅವನ ಪ್ರೀತಿಯನ್ನು ಕಂಡು ಸಂತೋಷವಾಯಿತು, ಅವನ ಸ್ಥಿತಿಯನ್ನು ಕಂಡು ‘ಅಯ್ಯೋ ಪಾಪ’ ಅನ್ನಿಸಿತು. ಜೊತೆಗೆ ಒಂದು ದಿನ ಬಿಟ್ಟಿರಲಾರದೆ ಪ್ರವಾಹ ಬಂದ ನೀರಿನಲ್ಲಿ ಈಜಿ ಬಂದನಲ್ಲ ಎಂದು ಸಿಟ್ಟು ಬಂತು.

“ಸ್ವಾಮೀ, ಏನು ಹೇಳಲಿ ನಿಮ್ಮ ಬುದ್ಧಿಗೆ? ನಾಚಿಕೆ ಆಗುವುದಿಲ್ಲವೆ? ನನ್ನ ಹಿಂದೇ ಓಡಿಬಂದಿರಲ್ಲ?  ನನ್ನಲ್ಲಿ ಇರಿಸಿದಷ್ಟು ಪ್ರೀತಿ ಶ್ರೀರಾಮನಲ್ಲಿರಿಸುತ್ತಿದ್ದರೆ ನಿಮಗೆ ಶ್ರೀರಾಮನೇ ಕಾಣಿಸುತ್ತಿದ್ದ. ಜನ್ಮಾಂತರಗಳ ಹೆದರಿಕೆ ಇರುತ್ತಿದ್ದಲ್ಲ” ಎಂದಳು.

ಹೆಂಡತಿಯ ಮಾತುಗಳು ಸಿಡಿಲಿನಂತೆ ತುಲಾರಾಮನ ಮೇಲೆ ಎರಗಿದುವು. ಮಳೆಯಲ್ಲಿ ತೊಯ್ದು ನಡುಗುತ್ತಿದ್ದ ಮೈ ಬೆವರಿತು. ಮೆದುಳು ತತ್ತರಿಸಿತು. ಹೃದಯ ಕಲಕಿದಂತಾಯ್ತು. ಗುರು ನರಹರಿದಾಸರು ಹೃದಯದಲ್ಲಿ ಬಿತ್ತಿದ್ದ ಉಪದೇಶದ ಬೀಜವು ಒಮ್ಮೆಲೇ ಚಿಗಿತು ಮರವಾಯಿತು. ಹೃದಯದ ಭಕ್ತಿಭಾವನೆಗಳ ಮೇಲೆ ಬಿದ್ದದ್ದ ಮೋಹದ ಪರದೆ ಸ್ರರನೆ ಹರಿಯಿತು.

ಹಿಂದಿರುಗಿಯೂ ನೋಡದೆ ಸರಸರನೆ ಹೊರಟು ಹೋದ.

ತುಳಸೀದಾಸರು

“ನನ್ನಂಥ ದಡ್ಡರು ಯಾರಿದ್ದಾರೆ? ಶ್ರೀರಾಮನನ್ನು ಮರೆತು ಹೆಂಡತಿಯ ಪ್ರೀತಿಯಲ್ಲಿ ಸಿಲುಕಿ, ವ್ಯರ್ಥವಾಗಿ ಕಾಲ ಕಳೆದೆನಲ್ಲಾ! ಇನ್ನೆಂದೂ ಶ್ರೀರಾಮನನ್ನು ಮರೆಯುವುದಿಲ್ಲ ಹೆಂಗಸನ್ನು ನೆನೆಯುವುದಿಲ್ಲ. ಶ್ರೀರಾಮನೇ ನನ್ನ ಸರ್ವಸ್ವ!” ಎಂದು ಸಂಕಲ್ಪ ಮಾಡಿದ ತುಲಾರಾಮ ಅಂದಿನಿಂದ ತುಳಸೀದಾಸರಾದರು.

ಗುರುಗಳು ಹೇಳಿದ ಪ್ರವಚನದ ಮಾತುಗಳು ನೆನಪಾದುವು. “ಶ್ರೀರಾಮನು ಕರುಣಾಮಯ. ಸರ್ವಶಕ್ತ. ಭಕ್ತರನ್ನು ಎಂದೂ ಕೈಬಿಡದ ಉದಾರಿ.”

ಸರಿ,  ಹಾಗಾದರೆ ನನ್ನನ್ನು ಬಿಡುವನೇ ಶ್ರೀರಾಮ? ದೃಢ ನಿರ್ಧಾರ ಮಾಡಿದ ತುಳಸೀದಾಸರು ಚಿತ್ರ ಕೂಟದ ಕಡೆಗೆ ಹೊರಟರು.

ಶ್ರೀರಾಮ, ಸೀತೆ ಮತ್ತು ಲಕ್ಷ್ಮಣರು ಚಿತ್ರಕೂಟಕ್ಕೆ ಕಾಲಿಡುವಾಗ ತರುಣ ತಾಪಸಿಯೊಬ್ಬ ಅವರ ಕಾಲಿಗೆರಗುತ್ತಾನೆ.

ದಾರಿಯಲ್ಲಿ ಅನೇಕ ಪುಣ್ಯಕ್ಷೇತ್ರಗಳ ದರ್ಶನ. ಭಖ್ತರ ಒಡನಾಟ. ಸಂತರ ಸಹವಾಸ!

ಸನ್ಯಾಸಿಗೇತರ ಚಿಂತೆ? ನಿಂತಲ್ಲೇ ಊರು, ಕುಳಿತಲ್ಲೇ ಕುಟೀರ. ರಾಮಭಕ್ತರೇ ಬಾಂಧವರು. ಭೂಮಿಯೇ ಹಾಸಿಗೆ. ಆಕಾಶವೇ ಸೂರು. ರಾಮಭಕ್ತರ ಬಳಗ ಕಟ್ಟಿದರು. ಹಾಡಿದರು. ಗೀತೆಗಳನ್ನು ರಚಿಸಿದರು. ಗ್ರಂಥಗಳನ್ನು ಬರೆದರು. ಜನತೆಗೆ ಬೋಧಿಸಿದರು.

ತುಳಸೀದಾಸರು ಸಂಸ್ಕೃತದ ಪಂಡಿತರಾದರೂ ಅವರು ತಮ್ಮ ಕಾವ್ಯಗಳನ್ನು ಜನಸಾಮಾನ್ಯರು ಬಳಸುತ್ತಿದ್ದ ಭಾಷೆಗಳಲ್ಲೇ ರಚಿಸಿದರು. ಅವು ಉತ್ತರ ಭಾರತದಲ್ಲಿ ಪ್ರಚಲಿತವಿರುವ ಹಿಂದೀ ಭಾಷೆಯ ರೂಪಗಳು. ಕಾರಣವೇನೆಂದರೆ ಅವರು ಗೀತೆಗಳನ್ನು ರಚಿಸಿದುದು ಪಂಡಿತರಿಗಾಗಿ ಅಲ್ಲ, ಜನಸಾಮಾನ್ಯರಿಗಾಗಿ , ಭಕ್ತಿಯ ಮಹಿಮೆ ಬೋಧಿಸಿ, ಉಪನ್ಯಾಸ ಮಾಡಿದುದೂ ಜನರ ಭಾಷೆಯಲ್ಲಿ ಮತ್ತು ಜನರಿಗಾಗಿಯೇ.

ಭಕ್ತಿಯ ಮಾರ್ಗ

“ಶ್ರೀರಾಮನೇ ಪರಬ್ರಹ್ಮ.  ಆತನೇ ಸರ್ವಶಕ್ತ. ಆತನೇ ಪುರುಷೋತ್ತಮ. ಆತನ ನಡೆ-ನುಡಿ, ಆಚಾರ-ವ್ಯವಹಾರಗಳೇ ದರ್ಶ. ಆತನ ಸೇವಕರಾಗಿ ಭಜಿಸುವುದೇ ಮೋಕ್ಷ ಸಂಪಾದಿಸಲು ರಾಮನ ಕೃಪೆಗೆ ಪಾತ್ರರಾಗಲು ಇರುವ ದಾರಿ. ಶ್ರೀರಾಮನನ್ನು ಒಡೆಯನೆಂದು ತಿಳಿದು ಆತನ ಸೇವಕರಾಗಿ ಸೇವಿಸುವುದೇ ಮಾನವನ ಧರ್ಮ.” ಇದು ತುಳಸೀದಾಸರ ಭಕ್ತಿಪಂಥದ ಸಾರಾಂಶ.

ತುಳಸೀದಾಸರು ಹೊರಟುಹೋದ ಮೇಲೆ ರತ್ನಾವಳಿ ಏನಾದಳು? ಗೊತ್ತಿಲ್ಲ. ತುಳಸೀದಾಸರು ಅವಳ ಹೆಸರನ್ನು ತಮ್ಮ ಗ್ರಂಥಗಳಲ್ಲಿ ಎತ್ತಿಲ್ಲ.

ಇತ್ತ ತುಳಸೀದಾಸರಿಗೆ ಚಿತ್ರಕೂಟ ಬಹಳ ಕಾಲ ಹಿಡಿಸಲಿಲ್ಲ. ಅಲ್ಲಿ ತಮಗೆ ಶ್ರೀರಾಮನ ದರ್ಶನವಾಗುವುದಿಲ್ಲವೆಂದು ಅನ್ನಿಸಿತು. ರಾಮನ ಜನ್ಮ ಸ್ಥಾನವಾದ ಅಯೋಧ್ಯೆಗೆ ತೆರಳಿ ಬಹಳ ಕಾಲ ತಪಸ್ಸು ಮಾಡಿದರು. ಅಲ್ಲಿಯೂ ಶ್ರೀರಾಮನ ದರ್ಶನವಾಗಲಿಲ್ಲ. ಮನಸ್ಸಿಗೆ ಸಮಾಧಾನವಿಲ್ಲ. ಶ್ರೀರಾಮನನ್ನು ನೋಡುವ ಹಂಬಲ ದಿನದಿನವೂ ಹೆಚ್ಚಿತು.

ಶ್ರೀರಾಮನನ್ನು ಕಾಣಲು ಆಂಜನೇಯನ ಕೃಪೆ ಬೇಕೆಂಬ ವಿಷಯ ಒಂದು ದಿನ ಫಕ್ಕನೆ ಹೊಳೆಯಿತು. ಹೌದು. ಆಂಜನೇಯ ಶ್ರೀರಾಮನ ಭಕ್ತ. ಆತನೇ ರಾಮದರ್ಶನ ಮಾಡಿಸಲು ಶಕ್ತ. ಮೊದಲು ಆಂಜನೇಯನನ್ನು ನೋಡಬೇಕು.

ಆಂಜನೇಯನ ದರ್ಶನ

ತುಳಸೀದಾಸರಿಗೆ ಬ್ರಹ್ಮರಾಕ್ಷಸನೊಬ್ಬನ ಸಹಾಯದಿಂದ ಆಂಜನೇಯನ ದರ್ಶನ ಆಯಿತು ಎನ್ನುತ್ತಾರೆ.

ಕಾಶಿ ಗಂಗಾನದಿಯ ಪವಿತ್ರ ಸಾನ್ನಿಧ್ಯವಿರುವ ಪುಣ್ಯ ಪ್ರದೇಶ. ವಿಶ್ವೇಶ್ವರನ ದೇವಾಲಯ ಇಲ್ಲೇ ಇರುವುದು. ಹಿಂದೂ ಸಂಸ್ಕೃತಿಯ ಮಾತೃಕೇಂದ್ರವೂ ಕಾಶಿಯೇ. ಅಲ್ಲಿ ಒಂದು ಕಡೆ ಆಂಜನೇಯನ ದೇವಾಲಯ. ತುಳಸೀದಾಸರು ಅಲ್ಲೇ ನೆಲೆಸಿದರು. ದಿನವೂ ಗಂಗಾಸ್ನಾನ, ವಿಶ್ವೇಶ್ವರನ ದರ್ಶನ, ಅನಂತರ ಆಂಜನೇಯನನ್ನು ಧ್ಯಾನಿಸುತ್ತ ಕುಳಿತುಬಿಡುತ್ತಿದ್ದರು. ಸಾಯಂಕಾಲ ಪ್ರವಚನ. ಕೆಲವು ವರ್ಷಗಳು ಇದೇ ರೀತಿ ಕಳೆದವು.

ಒಂದು ದಿನ ಎಂದಿನಂತೆ, ತುಳಸೀದಾಸರು ತಂಬಿಗೆಯ ನೀರನ್ನು ಮರವೊಂದರ ಬುಡಕ್ಕೆ ಚೆಲ್ಲಿದರು. ಆ ಕೆಲಸ ದಿನದಂತೆ ಅಂದೂ ಯಾಂತ್ರಿಕವಾಗಿ ನಡೆಯಿತು.

ನೀರು ಚೆಲ್ಲಿ ತಲೆ ತಗ್ಗಿಸಿಕೊಂಡು ಮುಂದೆ ಬಂದ ತುಳಸೀದಾಸರ ಇದಿರಿಗೆ ಫಕ್ಕನೆ ಬ್ರಹ್ಮರಾಕ್ಷಸನೊಬ್ಬ ನಿಂತು ವಂದಿಸಿದ.

ತುಳಸೀದಾಸರ ಕೈಯ ನೀರು ಬಿದದು ಬ್ರಹ್ಮರಾಕ್ಷಸನಿಗೆ ಶಾಪದಿಂದ ಬಿಡುಗಡೆಯಾಗಿತ್ತು. ಅವನು ಕೃತಜ್ಞತೆಯಿಂದ “ನಿಮಗೆ ಏನು ಬೇಕು ಕೇಳಿ” ಎಂದು ಕೇಳಿದ.

ತುಳಸೀದಾಸರಿಗೆ ಹಗಲು ರಾತ್ರಿ ಇದ್ದ ಹಂಬಲ ಒಂದೇ – ಆಂಜನೇಯನನ್ನು ಕಾಣಬೇಕು, ಅವನ ಕೃಪೆಯಿಂದ ಶ್ರೀರಾಮನನ್ನು ಕಾಣಬೇಕು.

ಬ್ರಹ್ಮ ರಾಕ್ಷಸನಿಗೆ ಹೇಳಿದರು; “ನನಗೆ ಆಂಜನೇಯನ ದರ್ಶನ ಮಾಡಿಸು.”

ಅವನು ಹೇಳಿದ: “ದಿನವೂ ಈ ದೇವಾಲಯದಲ್ಲಿ ನಿಮ್ಮ ಪ್ರವಚನ ನಡೆಯುತ್ತದಲ್ಲಾ, ಅಲ್ಲಿಗೆ ಒಬ್ಬ ಕುರೂಪಿ ಮುದುಕ ಬರುತ್ತಿರುವುದನ್ನು ನೀವು ಗಮನಿಸಿರಲಿಕ್ಕಿಲ್ಲ. ಆತ ಎಲ್ಲರಿಗಿಮತ ಮೊದಲು ಬಂದು ಕೊನೆಗೆ ಹೋಗುತ್ತಾನೆ. ಆತನನ್ನು ನೋಡಲು ಅಸಹ್ಯ ಬರುತ್ತದೆ. ಆದರೂ ಆತನೇ ಆಂಜನೇಯ. ನೋಡಿಕೊಳ್ಳಿ.”

ತುಳಸೀದಾಸರು ತಮ್ಮ ಪ್ರವಚನ ಕೇಳಲು ಆಂಜನೇಯನೇ ಬರುತ್ತಿರುವುದನ್ನು ತಿಳಿದು ಆನಂದದಿಂದ ಕುಣಿದಾಡಿದರು. ಆಂ ಜನೇಯನನ್ನು ನೋಡುವ ಭಾಗ್ಯ ಬಂದುದಕ್ಕಾಗಿ ಬಹಳ ಸಂತಸದಿಂದ ಹಾಡಿದರು.

ಸಂಜೆಯಾಯಿತು. ತುಳಸೀದಾಸರು ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಪ್ರವಚನ ಮಂಟಪಕ್ಕೆ ಬಂದರು. ಕುರೂಪಿ ಮುದುಕ ಆಗಲೇ ಬಂದು ದೂರದಲ್ಲಿ ಕುಳಿತಿದ್ದ.

ಒಡನೆಯೇ ಹೋಗಿ  ಆತನ ಕಾಲು ಹಿಡಿದು “ಶ್ರೀ ರಾಮನನ್ನು ತೋರಿಸು” ಎಂದು ಕೇಳಿಬಿಡಲೇ ಎಂದೆನಿಸಿತು. ಆದರೆ ಹಾಗೆ ಮಾಡಲಿಲ್ಲ. ಪ್ರವಚನ ಪ್ರಾರಂಭವಾಯಿತು.

ಅಂದಿನ ಪ್ರವಚನವೆಲ್ಲವೂ ಮೂಲೆಯಲ್ಲಿ ಕುಳಿತ ಮುದುಕನಿಗಾಗಿಯೇ ಹೇಳಿದಂತೆ ಇತ್ತು. ಕಣ್ಣುಮಿಟುಕಿಸದೆ ತುಳಸೀದಾಸರು ಆತನನ್ನೇ ನೋಡುತ್ತಿದ್ದರು.

ರಾಮಭಜನೆಯೊಂದಿಗೆ ಪ್ರವಚನ ಮುಗಿಯಿತು. ಜನ ಎದ್ದುಹೋದರು. ಮುದುಕನೂ ನಿಧಾನವಾಗಿ ಎದ್ದು ಹೊರಟ. ತುಳಸೀದಾಸರು ಹಿಂಬಾಲಿಸಿದರು. ಮುದುಕ ಊರಿನ ದಾರಿ ಬಿಟ್ಟು ಕಾಡಿನ ದಾರಿ ಹಿಡಿದ. ತುಳಸೀ ದಾಸರೂ ಸದ್ದಿಲ್ಲದೆ ನಡೆದರು. ದಾರಿ ಊರ ಹೊರಗೆ ಬಹು ದೂರ ದಟ್ಟ ಕಡಿನ ನಡುವೆ ಸಾಗಿತ್ತು. ದೃಢ ಮನಸ್ಸಿನಿಂದ ಆಂಜನೇಯನನ್ನು ಧ್ಯಾನಿಸುತ್ತ ಮುದುಕನನ್ನು ಅನುಸರಿಸಿದರು.

ನಡುಕಾಡು. ಫಕ್ಕನೆ ಓಡಿಹೋಗಿ ತುಳಸೀದಾಸರು ಮುದುಕನ ಕಾಲು ಹಿಡಿದರು. “ಸ್ವಾಮೀ, ನನಗೆ ಶ್ರೀರಾಮನ ದರ್ಶನ ಮಾಡಿಸು.  ಆಂಜನೇಯಾ,ನನ್ನ ಮೇಲೆ ಕೃಪೆದೋರು” ಎಂದು ಪ್ರಾರ್ಥಿಸಿದರು.

ಮುದುಕ ಏನೂ ತಿಳಿದಯವನಂತೆ “ಇದೇನಿದು, ನಾನು ಆಂಜನೇಯನಲ್ಲ. ನನ್ನ ಕಾಲು ಬಿಡು” ಎಂದು ಕಾಲು ಕೊಡವಿದ.

ತುಳಸೀದಾಸರು ಕಾಲು ಬಿಡಲಿಲ್ಲ.

“ನನಗೆಲ್ಲ ಗೊತ್ತಾಗಿದೆ. ನೀನೇ ಶ್ರೀರಾಮನ ಬಂಟ ಹನುಮಂತ. ನನಗೆ ನಿನ್ನ ನಿಜರೂಪ ತೋರಿಸಿ ನನ್ನ ಮನಸ್ಸಿನ ಬೇಡಿಕೆಯನ್ನು ಸಲ್ಲಿಸುವ ತನಕ ನಿನ್ನ ಕಾಲು ಬಿಡುವುದಿಲ್ಲ. ಸತ್ತರೂ ಸರಿ” ಎಂದು ತುಳಸೀದಾಸರು ಪರಿಪರಿಯಾಗಿ ಪ್ರಾರ್ಥಿಸಿ, ಹಾಡಿ, ಬೇಡಿದರು.

ಆಗ ಮುದುಕನ ರೂಪದಲ್ಲಿದ್ದ ಆಂಜನೇಯ ನಿಜ ರೂಪದಲ್ಲಿ ಕಾಣಿಸಿಕೊಂಡು ಹೇಳಿದ, “ನೋಡು, ಆ ಪೊದರಿನ ಮರೆಯಲ್ಲಿ ಅವಿತುಕೊಂಡಿರು. ಸ್ವಲ್ಪ ಹೊತ್ತಿನಲ್ಲಿ ಶ್ರೀರಾಮಲಕ್ಷ್ಮಣರು ಈ ಕಡೆಗೇ ಬರುತ್ತಾರೆ. ಆಗ ಅವರನ್ನು ನೋಡು.

ತುಳಸೀದಾಸರಿಗೆ ರಾಮಲಕ್ಷ್ಮಣರ ದರ್ಶನ ಹೇಗಾಯಿತು ಎಂಬುದನ್ನು ವಿವರಿಸಿ ಬೇರೆ ಬೇರೆ ರೀತಿ ಕಥೆಗಳನ್ನು ಭಕ್ತರು ಹೇಳುತ್ತಾರೆ. ಒಂದು ಕಥೆ ಹೀಗಿದೆ.

ಶ್ರೀರಾಮಲಕ್ಷ್ಮಣರು

ತುಳಸೀದಾಸರು ಅತ್ಯಂತ ಸಂತೋಷದಿಂದ ಮತ್ತೆ ಆಂಜನೇಯನ ಕಾಲು ಹಿಡಿದು ನಮಸ್ಕರಿಸಿದರು. ಆನಂದದಿಂದ ಕುಣಿದಾಡಿದರು. ಶ್ರೀರಾಮನ ದಿವ್ಯನಾಮವನ್ನು ಜಪಿಸುತ್ತ ಆಂಜನೇಯನು ತೋರಿಸಿದ ಪೊದರಿನ ಹಿಂದೆ ಕುಳಿತರು. ಮೈಯೆಲ್ಲಾ ಕಣ್ಣಾಗಿ ಕುಳಿತರು.

ತುಳಸೀದಾಸರು ಕಾದೇ ಕಾದರು. ರಾಜಕುಮಾರರಿಬ್ಬರು ಕುದುರೆಗಳ ಮೇಲೆ ಕುಳಿತು ಅತ್ತ ದಾಟಿದರು. ತುಳಸೀದಾಸರು ರಾಮಧ್ಯಾನ ಮಾಡುತ್ತ ಕುಳಿತಿದ್ದರು. ಎಷ್ಟು ಕಾಲ ಕಳೆದರೂ ಶ್ರೀರಾಮಲಕ್ಷ್ಮಣರು ಬರಲೇ ಇಲ್ಲ. ಬಹಳ ಹೊತ್ತು ಕಳೆದ ಮೇಲೆ ಮೊದಲಿನ ಮುದುಕನ ವೇಷದಲ್ಲೇ ಆಂಜನೇಯ ಕಾಣಿಸಿದ. ತುಳಸೀದಾಸರು ಪುನಃ ಆತನ ಕಾಲುಗಳನ್ನು ಹಿಡಿದುಕೊಂಡು, “ಆಂಜನೇಯ, ಇಷ್ಟು ಹೊತ್ತು ಕಾದರೂ ಶ್ರೀರಾಮ ಲಕ್ಷ್ಮಣರು ಬರಲಿಲ್ಲ. ನನ್ನಲ್ಲಿ ಇನ್ನೂ ನಿನಗೆ ಕರುಣೆ ಬರಲಿಲ್ಲವೆ? ಇನ್ನಾದರೂ ಶ್ರೀರಾಮಲಕ್ಷ್ಮಣರನ್ನು ತೋರಿಸಬಾರದೆ?” ಎಂದು ಬೇಡಿಕೊಂಡರು.

ಆಗ ಆಂಜನೇಯನು ನಗುತ್ತಾ, “ಇಬ್ಬರು ರಾಜಕುಮಾರರು ಕುದುರೆಗಳ ಮೇಲೆ ಹೋದರಲ್ಲ? ಅವರೇ ರಾಮಲಕ್ಷ್ಮಣರು” ಎಂದ. ತುಳಸೀದಾಸರಿಗೆ ತಮ್ಮ ಮೂಢತನಕ್ಕೆ ಬಹಳ ದುಃಖವಾಯಿತು. “ನನ್ನ ಕಣ್ಣುಗಳೇ ನನಗೆ ಶತ್ರುಗಳಾದುವಲ್ಲಾ” ಎಂದು ಅಳುತ್ತಾ ಆಂಜನೇಯನನ್ನು ಮತ್ತೆ ಪ್ರಾರ್ಥಿಸಿದರು.

“ನೀನು ಅಯೋಧ್ಯೆಗೆ ಹೋಗು. ಅಲ್ಲಿ ಶ್ರೀಸೀತಾ ರಾಮಲಕ್ಷ್ಮಣರ ಸೌಮ್ಯರೂಪದ ದರ್ಶನ ದೊರೆಯುತ್ತದೆ” ಎಂದು ಆಕಾಶದಲ್ಲಿ ನಿಂತು ಆಂಜನೇಯ ಹೇಳಿದಂತೆ ಕೇಳಿಸಿತು.

ಶ್ರೀರಾಮಲಕ್ಷ್ಮಣರ ದರ್ಶನ ದಾಸರಿಗೆ ಆದ ರೀತಿಯನ್ನು ಕುರಿತು ಬೇರೆ ಕಥೆಗಳೂ ಉಂಟು.

ಸ್ವಲ್ಪ ಕಾಲದನಂತರ ದಾಸರಿಗೆ ಶ್ರೀರಾಮನ ದರ್ಶನ ಮತ್ತೆ ಆಯಿತು; ಶ್ರೀರಾಮನು ಅವರಿಗೆ ತನ್ನ ಹಣೆಗೆ ಚಂದವನ್ನಿಡುವಂತೆ ಹೇಳಿದ ಎಂದೂ ಹೇಳುತ್ತಾರೆ.

ರಾಮಚರಿತಮಾನಸದಲ್ಲಿ ಒಂದು ಪ್ರಸಂಗ ಬರುತ್ತದೆ. ಶ್ರೀರಾಮ, ಸೀತೆ, ಲಕ್ಷ್ಮಣ ಯಮುನೆಯನ್ನು ದಾಟಿ ಚಿತ್ರಕೂಟಕ್ಕೆ ಕಾಲಿಡುವಾಗ ಒಬ್ಬ ತರುಣ ತಾಪಸಿ ಅವರ ಕಾಲಿಗೆರಗುತ್ತಾನೆ. ಭಕ್ತಿಯಿಂದ ಅವನು ಮೈಮರೆಯುತ್ತಾನೆ. ಸೀತಾದೇವಿ ಅವನಿಗೆ ಆಶೀರ್ವಾದ ಮಾಡುತ್ತಾಳೆ.

ಈ ತಾಪಸಿಯಲ್ಲಿ ತಮ್ಮನ್ನೇ ತುಳಸೀದಾಸರು ಚಿತ್ರಿಸಿಕೊಂಡಿದ್ದಾರೆ. ತಮಗೆ ಶ್ರೀರಾಮದರ್ಶನ ಆದುದನ್ನು ಸ್ಮರಿಸಿಕೊಂಡಿದ್ದಾರೆ ಎಂದು ಹೇಳುತ್ತಾರೆ.

ರಾಮಚರಿತಮಾನಸ

ತುಳಸೀದಾಸರು ಕಾಶಿಯನ್ನು ಬಿಟ್ಟು ಮತ್ತೆ ಅಯೋಧ್ಯೆಗೆ ಬಂದರು. ಕಾಶಿಯಲ್ಲಿದ್ದಾಗ ‘ಜಾನಕೀ ಮಂಗಲ’, ‘ಪಾರ್ವತೀ ಮಂಗಲ’ಗಳೆಂಬ ಎರಡು ಕಾವ್ಯಗಳನ್ನು ರಚಿಸಿದ್ದರೆಂದು ಕಾಣುತ್ತದೆ. ಅಯೋಧ್ಯೆಗೆ ಬಂದ ನಂತರ ಸ್ವಲ್ಪ ಕಾಲ ಏಕಾಂತದಲ್ಲಿ ಕಠಿಣ ತಪಸ್ಸು ಮಾಡಿದ ತುಳಸೀದಾಸರು ರಾಮಚರಿತಮಾನಸದ ರಚನೆಯ ಸಂಕಲ್ಪ ಮಾಡಿದರು. ತುಳಸೀದಾಸರು ತಮ್ಮ ಕೃತಿಯಲ್ಲೇ ಶ್ರೀರಾಮಲಕ್ಷ್ಮಣರನ್ನು ಕಂಡರು. ಮಾತ್ರವಲ್ಲ. ತಮ್ಮ ಕೃತಿಯ ಮೂಲಕ ಜಗತ್ತಿನ ಜನತೆಗೂ ಶ್ರೀಸೀತಾರಾಮ ಲಕ್ಷ್ಮಣರ ದರ್ಶನ ಮಾಡಿಸಿದರು.

ರಾಮಚರಿತಮಾನಸದಲ್ಲಿ ತುಳಸೀಧಾಸರು ಪರಮಾತ್ಮನಾದ ಶ್ರೀರಾಮನು ಮನುಷ್ಯರಿಗೆ ಎಂತಹ ಆದರ್ಶವನ್ನು ತೋರಿಸಿದ ಎಂಬುದನ್ನು ಹೃದಯಕ್ಕೆ ಮುಟ್ಟುವಂತೆ ಚಿತ್ರಿಸುತ್ತಾರೆ. ರಾಮಚರಿತಮಾನಸದಲ್ಲಿ ಶ್ರೀರಾಮನನ್ನು ಆದರ್ಶ ಲೋಕನಾಯಕನಾಗಿ ಚಿತ್ರಿಸಿದ ತುಳಸೀದಾಸರು ಸೀತಾದೇವಿಯನ್ನು ಆದರ್ಶ ನಾರೀಕುಲ ರತ್ನವಾಗಿ ಚಿತ್ರಿಸಿದರು. ಹುಟ್ಟಿದ ಮನೆಗೂ ಹೊಕ್ಕ ಮನೆಗೂ ಜ್ಯೋತಿಯಾಗಿ ಹೊಸ್ತಿಲಿನಲ್ಲಿಟ್ಟ ದೀಪದಂತೆ ಬೆಳಗಿದ್ದಾಳೆ ಸೀತಾದೇವಿ. ಅವಳು ತಂದೆತಾಯಿಗಳಿಗೆ ಮಾತ್ರವಲ್ಲ, ಪರಿಚಾರಕ ವರ್ಗಕ್ಕೂ ಕಣ್ಮಣಿಯಾಗಿದ್ದಳು.

ಮದುವೆಯ ನಂತರ ಸೀತೆಯನ್ನು ಗಂಡನ ಮನೆಗೆ ಕಳುಹಿಸಿಕೊಡುವಾಗ ಇಡಿಯ ರಾಣೀವಾಸ ದುಃಖದಲ್ಲಿ ಮುಳುಗಿತು. ಮಾತ್ರವಲ್ಲ, ಬಂಗಾರದ ಪಂಜರದಲ್ಲಿ ಸಾಕಿದ್ದ ಗಿಳಿಗಳು ಕೂಡಾ ‘ವೈದೇಹಿ ಎಲ್ಲಿ’ ಎಂದು ಅಳತೊಡಗಿದುವು.

ಇದು ತುಳಸೀದಾಸರು ವಾಲ್ಮೀಕಿಗಿಂತ ಭಿನ್ನವಾಗಿ ಚಿತ್ರಿಸಿದ ಸೀತಾದೇವಿಯ ಸರಳ ಸಜ್ಜನಿಕೆಯ ಒಂದು ಕಿಡಿ ಮಾತ್ರ. ತುಳಸೀಧಾಸರ ರಾಮಚರಿತಮಾನಸದಲ್ಲಿ ಬೇರೆ ರಾಮಾಯಣಗಳಲ್ಲಿ ಇಲ್ಲದ ಕೆಲವು ಹೃದಯ ಸ್ಪರ್ಶಿಯಾದ ಪ್ರಸಂಗಗಳು ಇವೆ. ಅವು ಕವಿಕಕಲ್ಪನೆಯ ಕುಸುಮಗಳಾಗಿ ಭಕ್ತಿಯ ಪರಿಮಳವನ್ನು ಬೀರುತ್ತವೆ.

ಒಂದು ಗುಹನ ಭಕ್ತಿಯನ್ನು ತೋರಿಸುವ ಪ್ರಸಂಗ. ಇದು ‘ಕೇವಟ ಪ್ರಸಂಗ ಎಂಬ ಹೆಸರಿನಿಂದ ತುಳಸೀ ರಾಮಾಯಣದಲ್ಲಿ ಪ್ರಸಿದ್ಧವಾಗಿದೆ. ಕೇವಟನೆಂದರೆ ಗುಹ. ಬೇಡರ ಒಡೆಯನಾದ ಗುಹ ಶ್ರೀರಾಮನ ಪರಮಬಕ್ತ. ಕಾಡಿಗೆ ಬಂದ ಶ್ರೀಸೀತಾರಾಮಲಕ್ಷ್ಮಣರನ್ನು ಆತ ಪರಿಪರಿಯಾಗಿ ಸೇವಿಸುತ್ತಾನೆ.

ಆದರೆ ಮರುದಿನ ಗಂಗಾನದಿ ದಾಟಿಸಲು ಶ್ರೀರಾಮ ದೋಣಿಗೆ ಕಾಲಿಡುವ ಮೊದಲು ಆತ ನಡೆದುಕೊಂಡ ರೀತಿ ವಿಚಿತ್ರವಾದುದು. ದೋಣಿ ಹತ್ತುವ ಮೊದಲು ಗುಹ ಹೇಳುತ್ತಾನೆ,

“ಸ್ವಾಮಿ, ನಿಮ್ಮ ಕಾಲುಗಳನ್ನು ತೊಳೆಯದೆ ನಾವೆಯನ್ನು ಏರಲು ಬಿಡಲಾರೆ. ನಿಮ್ಮ ಕಾಲಿನ ಧೂಳು ಸೋಕಿ ಶಿಲೆಯು ಮುನಿಪತ್ನಿಯಾದಳು. ಈಗ ಏನಾದರೂ ನಿಮ್ಮ ಕಾಲಿನ ಧೂಳು ಸೋಕಿ ನನ್ನ ದೋಣಿ ಹೆಣ್ಣಾದರೆ ನನ್ನ ಪಾಡೇನು?”

ಈ ಸಂದರ್ಭವನ್ನು ತುಳಸೀದಾಸರು ಮನಮುಟ್ಟುವಂತೆ ವರ್ಣಿಸಿದ್ದಾರೆ. (ಶಾಪದಿಂದ ಕಲ್ಲಾಗಿದ್ದ ಅಹಲ್ಯೆ ರಾಮನ ಪಾದ ತಗುಲಿ ಮತ್ತೆ ಹೆಣ್ಣಾದಳು.) ಗುಹನ ಮಾತುಗಳಲ್ಲಿ ಹಾಸ್ಯವೂ, ಮುಗ್ಧ ಭಕ್ತಿಯೂ, ರಾಮನ ಮಹಿಮೆಯೂ ಒಂದೇ ಕಾಲದಲ್ಲಿ ಚಿತ್ರಿತವಾಗಿವೆ.

ಇದೇ ರೀತಿ ಭರತನ ಉತ್ಕಟವಾದ ಭ್ರಾತೃಪ್ರೇಮ, ದಶರಥನ ಪುತ್ರಪ್ರೇಮ, ಸುಮಿತ್ರೆಯ ಸರಳತೆ, ಶಬರಿ ಜಟಾಯುಗಳಿಗೆ ಶ್ರೀರಾಮನ ಉದಾರ ಬುದ್ಧಿಯ ಅನುಗ್ರಹ-ಇತ್ಯಾದಿ ಹತ್ತು ಹಲವು ಗುಣಗಳನ್ನು ವಿಶಿಷ್ಟವಾಗಿ ಚಿತ್ರಿಸಿದ್ದಾರೆ.

ತುಳಸೀದಾಸರ ಕಾಲದಲ್ಲಿ ಮಹಾಕಾವ್ಯವನ್ನು ಸಂಸ್ಕೃತದಲ್ಲಿಯೇ ಬರೆಯಬೇಕು ಎಂದು ಪಂಡಿತರು ಭಾವಿಸಿದ್ದರು. ತಮ್ಮ ಕಾವ್ಯ ಸಾಮಾನ್ಯ ಜನರ ಭಾಷೆಯಾದ ಹಿಂದಿಯಲ್ಲಿದೆ ಎಂದು ಪಂಡಿತರು ಆಕ್ಷೇಪಣೆ ಮಾಡುತ್ತಾರೆ ಎಂದು ತುಳಸೀದಾಸರಿಗೆ ತಿಳಿದಿತ್ತು. ಆದ್ರೆ ‘ಒಳ್ಳೆಯ ಕಾವ್ಯ ಗಂಗಾನದಿಯಂತೆ ಎಲ್ಲರಿಗೂ ಸೇರಬೇಕು, ಯಾರಾದರೂ ಹತ್ತಿರ ಬರುವಂತಿರಬೇಕು’ ಎಂದು ಅವರ ನಂಬಿಕೆ.

ಒಟ್ಟಿನಲ್ಲಿ ತುಳಸೀದಾಸರ ರಾಮಚರಿತಮಾನಸವು ನಮ್ಮ ಪರಂಪರೆಯ ಸತ್ಯ, ಧರ್ಮಗಳನ್ನೇ ಮತ್ತೆ ಪ್ರಕಾಶಮಾನವಾಗಿ ಬೆಳಗಿಸಿ ಹೊಸ ಸಂದರ್ಭದಲ್ಲಿ ಹೇಳಿದೆ. ಧೈರ್ಯ ಕುಂದುತ್ತಿದ್ದ ಜನರಿಗೆ ದಾರಿಕಾಣದೆ ಕಂಗೆಟ್ಟಿರುವಾಗ ಭಕ್ತಿಯ ಪ್ರಕಾಶದಲ್ಲಿ ಶ್ರೀರಾಮನ ದರ್ಶನ ಮಾಡಿಸಿದ ತುಳಸೀದಾಸರ ರಾಮಚರಿತಮಾನಸವು ನಮ್ಮ ಸಂಸ್ಕೃತಿಯ ದಾರಿದೀಪ.

ಗ್ರಂಥದ ಸತ್ವ ಪರೀಕ್ಷೆ

ತುಳಸೀದಾಸರಿಗೆ ಗ್ರಂಥದ ಪ್ರಕಾಶನಕ್ಕೆ ಕಾಶಿಯೇ ಸರಿಯೆಂದು ಕಂಡಿತು. ಮತ್ತೆ ಕಾಶಿಗೆ ಬಂದರು. ಅದೇ ಕುಟೀರ. ಅದೇ ರೀತಿಯ ದಿನಚರಿ, ಪ್ರವಚನ. ಆದರೆ ಈ ಸಲದ ಪ್ರವಚನದಲ್ಲಿ ತಾವೇ ರಚಿಸಿದ ರಾಮಚರಿತ ಮಾನಸದ ಗಾಯನ, ವ್ಯಾಖ್ಯಾನ.

ಗೋಸ್ವಾಮಿ ತುಳಸೀದಾಸರ ಪಾಂಡಿತ್ಯ ಪ್ರತಿಭೆಗಳಿಗೆ ಮಾರುಹೋದ ಕಾಶಿಯ ಜನ ಅವರನ್ನು ವಾಲ್ಮೀಕಿಯ ಅವತಾರವೆಂದು ನಂಬಿದರು. ಅನೇಕ ಪಂಡಿತರು ಅವರ ಶಿಷ್ಯರಾದರು. ಭಕ್ತಿಯ ಮಹತ್ವ ತಿಳಿದ ಸಾವಿರಾರು ಜನ ಶ್ರೀರಾಮಭಕ್ತರಾದರು.

ಕೆಟ್ಟ ಬುದ್ಧಿಯವರು, ಹೊಟ್ಟೆ ಕಿಚ್ಚಿನವರು ಯಾವ ಕಾಲದಲ್ಲಿ ಇರಲಿಲ್ಲ? ಇಂತಹವರು ಮಾಡಿದ ಒಂದು ಕೆಲಸದಿಂದಲೇ ರಾಮಚರಿತಮಾನಸದ ಹಿರಿಮೆ ಸ್ಪಷ್ಟವಾಯಿತು ಎಂದು ಒಂದು ಕಥೆ ಇದೆ.

ಅಂಥ ಜನರೆಲ್ಲ ಒಟ್ಟಾದರು. ತುಳಸೀದಾಸರ ರಾಮಚರಿತಮಾನಸಕ್ಕೆ ದೊರೆತ ಮನ್ನಣೆ, ಜನಪ್ರಿಯತೆಗೆ ಕಳಂಕ ತರಲು ಯೋಚಿಸಿದರು. ಒಂದು ದಿನ ಕಾಶಿಯ ವಿಶ್ವನಾಥ ದೇವಾಲಯದಲ್ಲಿ ವಿದ್ವಾಂಸರ ಮುಂದೆ ಸಕಲ ಶಾಸ್ತ್ರ ಗ್ರಂಥಗಳ ಪಠನ ನಡೆಯಿತು. ತುಳಸೀದಾಸರ ರಾಮಚರಿತಮಾನಸದ ಪಠನವೂ ನಡೆಯಿತು. ಅನಂತರ ಎಲ್ಲ ಗ್ರಂಥಗಳನ್ನು ದೇವರ ಇದಿರು ಇರಿಸಲಾಯಿತು. ಆಗ ಈ ಕುಟಿಲ ಬುದ್ಧಿಯವರು ರಾಮಚರಿತಮಾನಸವನ್ನು ಇತರ ಗ್ರಂಥಗಳ ಕೆಳಗೆ ಇರಿಸಿ ಅಪಮಾನ ಮಾಡಿದರು. ಆದರೆ, ಮರುದಿನ ಮುಂಜಾನೆ ದೇವಾಲಯದ ಬಾಗಿಲು ತೆರೆದಾಗ ರಾಮಚರಿತಮಾನಸವು ಇತರ ಎಲ್ಲ ಗ್ರಂಥಗಳ ಮೇಲೆ ರಾರಾಜಿಸುತ್ತಿತ್ತು. ಆಗ ಎಲ್ಲರಿಗೂ ರಾಮಚರಿತ ಮಾನಸದ ಶ್ರೇಷ್ಠತೆ, ತುಳಸೀದಾಸರ ಹಿರಿಮೆ ತಿಳಿಯಿತು.

ಇದೇ ರೀತಿಯ ಇನ್ನೊಂದು ಪ್ರಸಂಗ ನಡೆಯಿತು.

ತುಳಸೀದಾಸರ ವಿರೋಧಿಗಳೆಲ್ಲ ಒಟ್ಟು ಸೇರಿ ಅದ್ವೈತ ಸಿದ್ಧಾಂತದ ಮಹಾಪಂಡಿತರಾದ ಮಧುಸೂದನ ಸರಸ್ವತಿಯವರ ಬಳಿಗೆ ರಾಮಚರಿತಮಾನಸವನ್ನು ತೆಗೆದುಕೊಂಡು ಹೋಗಿ, “ಈ ಗ್ರಂಥದ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಬೇಕು” ಎಂದರು.

“ಮಧುಸೂದನ ಸರಸ್ವತಿಯವರು ಅದ್ವೈತಿಗಳು. ತುಳಸೀದಾಸರು ಆ ಪಂಥದವರಲ್ಲ. ಆದುದರಿಂದ ಮಧುಸೂದನ ಸರಸ್ವತಿ ರಾಮಚರಿತಮಾನಸವನ್ನು ಖಂಡಿಸುತ್ತಾರೆ. ಆಗ ನಾವು ಅವರ ಹೆಸರಿನಲ್ಲಿ ಈ ಗ್ರಂಥದ ಬಗ್ಗೆ ಅಪಪ್ರಚಾರ ಮಾಡಬಹುದು” ಎಂಬುದು ಅವರ ಉದ್ದೇಶವಾಗಿತ್ತು. ಆದರೆ ಅಲ್ಲಿ ಆದುದೇ ಬೇರೆ.

ಮಧುಸೂದನ ಸರಸ್ವತಿಯವರು ಇಡಿಯ ರಾಮಚರಿತಮಾನಸವನ್ನು ಓದಿದ ನಂತರ ಹೇಳಿದರು:

ಮಾರುತಿಯ ಇಚ್ಛೆ

ಗೋಸ್ವಾಮಿ ತುಳಸೀದಾಸರ ಕೀರ್ತಿ ಕಾಶಿಯಲ್ಲೇ ಸೀಮಿತವಾಗಿರಲಿಲ್ಲ. ಅದು ಇಡಿಯ ಉತ್ತರ ಭಾರತಕ್ಕೆಲ್ಲ ಹರಡಿತು. ಅನೇಕ ಜನ ಮುಸ್ಲಿಮರು ತುಳಸೀದಾಸರ ಶಿಷ್ಯರಾದರು. ರಾಮಭಕ್ತರಾದರು. ಬಾದಷಹ ಜಹಾಂಗೀರನಿಗೆ  ಸಂಬಂಧಿಸಿದಂತೆ ಒಂದು ಕಥೆ ಇದೆ. ತುಳಸೀದಾಸರ ಕೀರ್ತಿ ಬಾದಷಹ ಜಹಾಂಗೀರನ ಕಿವಿಗೂ ಮುಟ್ಟಿತ್ತು. ಜಹಾಂಗೀರ ತುಳಸೀದಾಸರನ್ನು ನೋಡಲು ಇಚ್ಛಿಸಿದ.

ಆಗ್ರಾಕ್ಕೆ ಬಂದ ತುಳಸೀದಾಸರನ್ನು ಮೊಗಲ್‌ ಚಕ್ರವರ್ತಿ ಕರೆಸಿದ. ಸತ್ಕರಿಸಿದ.

“ನೀವು ಪವಾಡ ಮಾಡುತ್ತೀರಂತೆ. ನನಗೆ ಪವಾಡ ತೋರಿಸಿ” ಎಂದ.

“ನಾನು ಪವಾಡ ಮಾಡುವುದಿಲ್ಲ. ಶ್ರೀರಾಮನೇ ಸರ್ವಶಕ್ತ” ಎಂದರು ದಾಸರು.

ಚಕ್ರವರ್ತಿ ಹಠ ಹಿಡಿದ. “ನೀವು ಪವಾಡ ತೋರಿಸುವವರೆಗೆ ಬಿಡುವುದಿಲ್ಲ” ಎಂದು ಸಲೀಮಗಡದ (ಗ್ವಾಲಿಯಾರ್) ಕೋಟೆಯಲ್ಲಿ ಸೆರೆಗೆ ಹಾಕಿದ.

“ಎಲ್ಲವೂ ಆಂಜನೇಯನ ಇಚ್ಛೆ” ಎಂದು ಕೈ ಮುಗಿದು ಕುಳಿತರು ತುಳಸೀದಾಸರು.

ಇದ್ದಕ್ಕಿದ್ದಂತೆ ಕೋತಿಗಳು ರಾಜರ ಅರಮನೆ, ರಾಣೀ ವಾಸ ಎಲ್ಲ ಕಡೆ ನುಗ್ಗಿ ಹಾವಳಿ ಮಾಡಿದವು. ಸೈನಿಕರಿಗೂ ಅವು ಹೆದರಲಿಲ್ಲ. ಬಾದಷಹ ತುಳಸೀದಾಸರನ್ನು ಬಿಡುಗಡೆ ಮಾಡಿದ ನಂತರವೇ ಕೋತಿಗಳ ಹಾವಳಿಯಿಂದ ಅವನಿಗೆ ಬಿಡುಗಡೆಯಾದದ್ದು.

ಅಂದಿನಿಂದ ತುಳಸೀದಾಸರು ಹಾಗೂ ಅವರ ಶಿಷ್ಯರಿಗೆ ಬಾದಷಹನ ಕಾಟತಪ್ಪಿತು.

ಹೀಗೆ ಒಂದು ಕಥೆಯುಂಟು.

ಈ ನಡುವೆ ತುಳಸೀದಾಸರು ‘ಸತತೀ’ ಎಂಬ ಏಳು ನೂರು ಪದ್ಯಗಳು ಗ್ರಂಥ ರಚಿಸಿದರೆಂದು ಇತಿಹಾಸಕಾರರು ಹೇಳುತ್ತಾರೆ. ‘ಗೀತಾವಳೀ’ ಎಂಬ ಇನ್ನೊಂದು ಪದ್ಯ ಸಂಗ್ರಹದಲ್ಲಿ ಸೆರೆಮನೆಯಲ್ಲಿ  ತುಳಸೀದಾಸರು ಆಂಜನೇಯನನ್ನು ಸ್ತುತಿಸಿದ ಪದ್ಯ ಇರುವುದರಿಂದ ಆ ‘ಗೀತಾವಳೀ’ ಎಂಬ ಗ್ರಂಥದ ರಚನೆ ಕೂಡಾ ಇದೆ ಸಂದರ್ಭದಲ್ಲಿ ಆಗಿರಬಹುದು.

ಕೃಷ್ಣ, ರಾಮರಲ್ಲಿ ವ್ಯತ್ಯಾಸವಿಲ್ಲ

ಕ್ರಮೇಣ ತುಳಸೀದಾಸರ ಶಿಷ್ಯವೃಂದ ಬೃಹದಾಕಾರದಲ್ಲಿ ಬೆಳೆಯಿತು. ನಾಭಾದಾಸ , ಪ್ರಾಣಚಂದ ಚೌಹಾನ, ಹೃದಯರಾಮ, ಅಗ್ರದಾಸ ಮುಂತಾದ ಕವಿಗಳೂ ತುಳಸೀದಾಸರ ಶಿಷ್ಯರಾಗಿ ಅವರ ಉಪದೇಶ, ಆದರ್ಶಗಳಿಂದ ಪ್ರೇರಿತರಾಗಿ ರಾಮಭಕ್ತಿಯ ಪ್ರಚಾರ ಕಾರ್ಯದಲ್ಲಿ ನಿರತರಾದರು.

ಒಮ್ಮೆ ತುಳಸೀದಾಸರು  ಮಥುರಾಕ್ಕೆ ಬಂದರು. ಮಥುರಾ ಕೃಷ್ಣಭಕ್ತರ ಕೇಂದ್ರ. ಗೋಸ್ವಾಮಿಯವರು ಒಂದು ಕೃಷ್ಣಾದೆವಾಲಯ ಕ್ಕೆ ಹೋದರು. ಆಗ ಅಲ್ಲಿ ನ ಸಾಧು ಸಂತರುಗಳು ತುಳಸೀದಾಸರನ್ನು ಆದರದಿಂದ ಬರಮಾಡಿಕೊಂಡು ಮಾತಾಡಿಸಿ, “ಸ್ವಾಮೀ, ತಾವು ಶ್ರೀರಾಮನ ಅನನ್ಯ ಭಕ್ತರೆಂದು ತಿಳಿದಿದ್ದೇವೆ. ಶ್ರೀರಾಮನನ್ನಲ್ಲದೆ ಬೇರೆ ದೇವರನ್ನು ಕುರಿತು ತಾವು ಹಾಡುವುದಿಲ್ಲವಂತೆ, ಹೌದೇ?” ಎಂದು ಕೇಳಿದರು.

ಆಗ ತುಳಸೀದಾಸರು, “ಹಾಗೇನೂ ಇಲ್ಲ,. ಶ್ರೀರಾಮನೇ ಶ್ರೀಕೃಷ್ಣ” ಎಂದು ಕೃಷ್ಣನ ಕುರಿತಾದ ಒಂದು ಗೀತೆಯನ್ನು ರಚಿಸಿ ಹಾಡಿದರು. ಅದು ಶ್ರೀಕೃಷ್ಣನ ಕುರಿತಾದ ಗೀತೆಯಾದರೂ ಅದರಲ್ಲಿ ಶ್ರೀರಾಮನ ಗುಣಗಳೇ ವರ್ಣಿತವಾಗಿದ್ದವು. ನೆರೆದಿದ್ದ ಸಾಧುಸಂತರು ಸಂತಸಪಟ್ಟರು. ಜೊತೆಗೆ ಒಂದು ಅದ್ಭುತವೂ ನಡೆಯಿತು ಎಂದು ಹೇಳುತ್ತರೆ. ಹಾಡು ಮುಗಿಯುತ್ತಿದ್ದಂತೆ ಗರ್ಭಗುಡಿಯಲ್ಲಿದ್ದ ಮುರಳೀಧರ ಶ್ರೀಕೃಷ್ಣ ಮೂರ್ತಿ ಕೋದಂಡಪಾಣಿಯಾದ ಶ್ರೀರಾಮನಾಗಿ ಕಾಣಿಸಿಕೊಂಡಿತಂತೆ.

ಈ ಅದ್ಭುತವನ್ನು ನೋಡಿದ ನೆರೆದ ಜನ ಬೆರಗಾದರು. ಜೊತೆಗೇ ಶ್ರೀರಾಮಕೃಷ್ಣರಲ್ಲಿ ಭೇದವಿಲ್ಲವೆಂದು ತೋರಿಸಿದ ಗೋಸ್ವಾಮಿ ತುಳಸೀದಾಸರ ಗುಣಗಾನ ಮಾಡಿದರು.

ಅನಂತರ ತುಳಸೀದಾಸರು ‘ಕೃಷ್ಣ ಗೀತಾವಳೀ’ ಎಂಬ ಗ್ರಂಥವನ್ನು ರಚಿಸಿದರು.

ಪವಿತ್ರ ತೀರ್ಥಕ್ಷೇತ್ರಗಳನ್ನೆಲ್ಲ ಸಂಚರಿಸಿದ ಗೋಸ್ವಾಮಿ ತುಳಸೀದಾಸರು  ತಮ್ಮ ಅಂತಿಮ ದಿನಗಳನ್ನು ಕಾಶಿಯಲ್ಲೇ ಕಳೆದರು. ಕೊನೆಯ ದಿನಗಳಲ್ಲಿ ಅವರಿಗೆ ರಟ್ಟೆನೋವು ಕಾಣಿಸಿಕೊಂಡಿತಂತೆ. ನೂರ ಮೂವತ್ತಾರು ವರ್ಷಗಳ ಸಫಲ ಸಂತ ಜೀವನ ನಡೆಸಿದ ಗೋಸ್ವಾಮಿ ತುಳಶೀ ದಾಸರು ವಿಕ್ರಮ ಶಕ ೧೬೮೦ ರಲ್ಲಿ ಅಂದರೆ ಕ್ರಿಸ್ತಶಕ ೧೬೨೩ ರಲ್ಲಿ ಕಾಶಿಯ ಅಸೀಘಾಟ್‌ನಲ್ಲಿ ಶರೀರ ತ್ಯಾಗ ಮಾಡಿದರು.

ಗೋಸ್ವಾಮಿ ತುಳಸೀದಾಸರು ಒಟ್ಟು ಮೂವತ್ತೇಳು ಗ್ರಂಥ ರಚಿಸಿದ್ದರೆಂದು ವಿದ್ವಾಂಸರು ಹೇಳುತ್ತಾರೆ. ಆದರೆ ಲಭ್ಯವಾಗಿರುವವು ಹನ್ನೆರಡು  ಮಾತ್ರ.

ತುಳಸೀದಾಸರು ಶ್ರೀಕೃಷ್ಣನನ್ನ ಕುರಿತು ಒಂದು ಹಾಡನ್ನು ರಚಿಸಿ ಹಾಡಿದರು.

ಹಿರಿಯ ವ್ಯಕ್ತಿ

 

ತುಳಸೀದಾಸರದು ಬಹು ಹಿರಯ ವ್ಯಕ್ತಿತ್ವ. ಎಳೆಯ ವಯಸ್ಸಿನಿಂದಲೇ ಬಹು ಕಷ್ಟವನ್ನು ಕಂಡವರು. ತಂದೆ ತಾಯಿಯ ಲಾಲನೆ ಇಲ್ಲದೆ ಅವರಿವರ ದಯೆಯಿಂದ ಬೆಳೆದ ಹುಡುಗ. ಅವರು ಸನ್ಯಾಸಿಯಾದ ಮೇಲೂ ಕಷ್ಟ ತಪ್ಪಲಿಲ್ಲ. ಅವರು ಕಾಶಿಯಲ್ಲಿ ನೆಲೆಸಿದಾಗ ಅವರನ್ನು ಬಯ್ದವರು, ಹಾಸ್ಯ ಮಾಡಿದವರು ಎಷ್ಟೋ ಮಂದಿ. ಆದರೆ ಅವರು ಸಿಟ್ಟಿಗೇಳಲಿಲ್ಲ. ಅವರೇ ಒಂದು ಕಡೆ ಹೇಳಿದ್ದಾರೆ: “ತುಳಸೀ ತುಂಬ ಕೆಟ್ಟ ಕೆಲಸಗಳನ್ನು ಮಾಡುತ್ತಾನೆ ಎಂದು ಕೆಲವರು ಹೇಳುತ್ತಾರೆ. ಕೆಲವರು ಅವನೊಬ್ಬ ಮೋಸಗಾರ ಎನ್ನುತ್ತಾರೆ. ಕೆಲವರು ಅವನೊಬ್ಬ ಮೋಸಗಾರ ಎನ್ನುತ್ತಾರೆ. ಇನ್ನು ಕೆಲವರು ನಿಜವಾಗಿಯೂ ಅವರು ರಾಮಭಕ್ತ ಎನ್ನುತ್ತಾರೆ……. ಎಲ್ಲವನ್ನೂ ನಾನು ಸಹಿಸಬಲ್ಲೆ. ನನ್ನ ಮನಸ್ಸಿಗೆ ಆತಂಕವಿಲ್ಲ. ತುಳಸಿಗೆ ಒಳ್ಳೆಯದಾಗುವುದು, ಕೆಟ್ಟದ್ದಾಗುವುದು ಎಲ್ಲ ರಾಮನ ಕೈಯಲ್ಲಿದೆ.”

ಕರುಣೆ, ಧೈರ್ಯ ಎರಡೂ ಬೆರೆತಿದ್ದವು ಅವರಲ್ಲಿ. ಬ್ರಾಹ್ಮಣನೊಬ್ಬ ಏನೋ ಕೆಟ್ಟ ಕೆಲಸ ಮಾಡಿದನಂತೆ, ಪ್ರಾಯಶ್ಚಿತ್ತ ಮಾಡಿಕೊಳ್ಳಲು ಕಾಶಿಗೆ ಬಂದ. ಆಚಾರವಂತರು ಅವನು ಜಾತಿ ಕೆಟ್ಟವನು ಎಂದು ದೂರ ಇಟ್ಟರು. ತುಳಸೀದಾಸರು  ಅವನನ್ನು ತಮ್ಮವನೆಂದು ಕಂಡರು. ಆಚಾರವಂತರಿಗೆ ಕೋಪ ಬರುತ್ತದೆ, ತಮಗೆ ಆಕ್ಷೇಪಣೆ ಬರುತ್ತದೆ ಎಂದು ತಿಳಿದೂ ಅವನು ಮಾಡಿದ ಅಡಿಗೆಯನ್ನು ಊಟಮಾಡಿದರು.

ತುಳಸೀದಾಸರು ಬಹು ದೊಡ್ಡ ವಿದ್ವಾಂಸರು. ಭಾರತೀಯ ತತ್ವಶಾಸ್ತ್ರ ಮತ್ತು ಸಾಹಿತ್ಯಗಳನ್ನು ಆಳವಾಗಿ ಅಭ್ಯಾಸ ಮಾಡಿದವರು. ಆದರೆ ತಮ್ಮ ವಿದ್ವತ್ತಿನ ವಿಷಯದಲ್ಲಿ  ಅವರಿಗೆ ಅಹಂಕಾರವಿರಲಿಲ್ಲ. ರಾಮಧ್ಯಾನವೇ ಎಲ್ಲದಕ್ಕಿಂತ ಅವರಿಗೆ ಮಹತ್ವದ್ದಾಗಿತ್ತು. ಎಷ್ಟೇ ಕಷ್ಟ ಬರಲಿ, ಜೀವನದಲ್ಲಿ ಶ್ರದ್ಧೆಯನ್ನು ಕಳೆದುಕೊಳ್ಳಬಾರದು, ಜಾತಿ ಮತ ಕುಲಗಳನ್ನು ಮರೆತು ಎಲ್ಲರೂ ದೇವರ ಮಕ್ಕಳು ಎಂದು ಇತರರಿಗೆ ಒಳ್ಳೆಯದನ್ನು ಮಾಡಬೇಕು- ಹೀಗೆ ದಾರಿ ತೋರಿಸಿದರು, ತಾವು ಬದುಕಿದರು.

ಅಮರ ಕವಿ

ತುಳಸೀದಾಸರು ಬೋಧಿಸಿದ ಭಕ್ತಿಮಾರ್ಗವು ಅಂದಿಗೂ ಇಂದಿಗೂ ಎಂದೆಂದಿಗೂ ರಾಜಮಾರ್ಗದಂತೆ ಅನುಕರಣೀಯವಾಗಿದೆ. ಅವರು ಚಿತ್ರಿಸಿದ ಶ್ರೀರಾಮ, ಲಕ್ಷ್ಮಣ, ಭರತ, ಸೀತೆ, ಆಂಜನೇಯ, ವಿಭೀಷಣ, ಜಟಾಯು, ಗುಹ, ಸುಗ್ರೀವರುಗಳು ಹಿಂದೂ ಸಂಸ್ಕೃತಿಯ ಆದರ್ಶ ವ್ಯಕ್ತಿಗಳಾಗಿದ್ದಾರೆ. ಇಂಥ ಜಗದ್ವಂದ್ಯ ಮಹಾಕವಿ  ಸಂತ ಶ್ರೇಷ್ಠ ಗೋಸ್ವಾಮಿ ತುಳಸೀದಾಸರು  ನಮ್ಮ ದೇಶದಲ್ಲಿ ಹುಟ್ಟಿ, ಬಾಳಿ,  ಬದುಕಿದ್ದರೆಂದು ನಾವು ಸಂತೋಷ ಪಡಬೇಕು.