ಇದು ಅಪ್ಪಳೆ ಮಾವಳೇ, ಚಟ್ಕಾ ಮುಟ್ಕಾಗಳನ್ನು ಹೆಚ್ಚಿಗೆ ಹೋಲುತ್ತದೆಯಾದರು ಹಾಡಿನಲ್ಲಿ, ಆಡುವ ರೀತಿಯಲ್ಲಿ ತುಸು ಭಿನ್ನತೆ ಕಾಣುತ್ತದೆ.

ಈ ಆಟದಲ್ಲಿ ಆಟಗಾರರೆಲ್ಲ ನಿಂತುಕೊಂಡಿರುತ್ತಾರೆಯೇ ಹೊರತು ಕುಳಿತು ಕೊಂಡಿರುವದಿಲ್ಲ. ಹಾಡುವಾಗ ಕಾಲು ಮುಟ್ಟದೆ ಆಟಗಾರನ ಎದೆ, ಕೈ, ತಲೆಗಳಲ್ಲೊಂದನ್ನು ಮುಟ್ಟುತ್ತಾನೆ. “ಆತ್ – ರಂಬೆ – ಗಾಣ – ರಂಬೆ – ನೀರಿ – ಗೊಃದೆ – ಎಪ್ಪತ್ – ನಾಕು – ಚವರಾ – ಬೀಸಿ – ಪ್ರಾಣ – ಫಿಟ್ – ಪೋಗ್ಡೆ” ಎನ್ನುತ್ತಾ ಪ್ರತಿಯೊಬ್ಬ ಆಟಗಾರನನ್ನು ಮುಟ್ಟುವಾಗ “ಪೋಗ್ಡೆ” ಬಂದವನು ತನ್ನ ಒಂದು ಕಾಲನ್ನು ಮುಂದೆ ಮಾಡಬೇಕು. ಹಾಡುವಾಗ ಯಾರನ್ನೂ ಬಿಡಬಾರದು. ಕಾಲನ್ನು ಮುಂದೆ ಮಾಡಿದವನಿಗೇ ಮತ್ತೆ “ಪೋಗ್ಡೆ” ಬಂದರೆ ಅವನು ಈ ಸಾರೆ “ಸೋರ್” ಕಾಲಲ್ಲಿ (ತುದಿಗಾಲಿನಲ್ಲಿ) ಕುಳಿತುಕೊಳ್ಳಬೇಕು. ಮತ್ತೊಮ್ಮೆ ಸೋರ್ ಕಾಲಲ್ಲಿ ಕುಳಿತವನಿಗೇ ಪೋಗ್ಡೆ ಬಂದರೆ ಆತನು ಜಗ್ಗರಿಸಿ (ಚಕ್ರಪಡಿಹೊಯ್ದು) ಕುಳಿತುಕೊಳ್ಳಬೇಕು. ಜಗ್ಗರಿಸಿ ಕುಳಿತುಕೊಂಡವನನ್ನು ಹಾಡುವಾಗ ಎಣಿಸಬಾರದು. ಎಲ್ಲರೂ ಎಣಿಸುವವನನ್ನೊಳಗೊಂಡು ಜಗ್ಗರಿಸಿ ಕುಳಿತುಕೊಂಡ ಮೇಲೆ ಎಲ್ಲರೂ ಕಾಲು ನೀಡಿ “ಗಜಿಬಿಜಿ ತಾಂಬಳ” ಎಂದುಕೊಳ್ಳುತ್ತ ತುಳಿದುಕೊಳ್ಳುವರು.