ಆಟಗಾರರಲ್ಲಿ ಹಿರಿಯಳಾದ ಆಟದ ಅಜ್ಜಿ ತನ್ನ ಕಾಲನ್ನು ತುಸು ಮುಂದಕ್ಕೆ ಚಾಚಿ (ಪಾದ ಉರಿ) ಕುಳಿತುಕೊಳ್ಳಬೇಕು. ಉಳಿದವರು ಒಬ್ಬರ ನಂತರ ಇನ್ನೊಬ್ಬರು ಪಾದಗಳ ಮೇಲೆ ಪಾದ ಇಡುತ್ತಾ ಹೋಗುವರು. ಹೆಚ್ಚು ಜನ ಆಟಗಾರರಿದ್ದರೆ ಬುಡದ ಕಾಲಿಗೆ ಹೆಚ್ಚು ಭಾರ ಬೀಳುವುದರಿಂದಲೂ, ಕುಳಿತಲ್ಲಿಂದಲೇ ಕಾಲನ್ನು ಬಹಳ ಮೇಲೆ ಎತ್ತರಿಸಬೆಕಾಗುವುದರಿಂದಲೂ ಕೆಲವೆ ಜನರಿದ್ದರೆ ಒಳಿತು. ಕಾಲುಗಳನ್ನಿಟ್ಟಾದ ಮೇಲೆ ಎಲ್ಲರೂ ತಮ್ಮ ಕೈ ಹಸ್ತಗಳನ್ನು ಬೆನ್ನು ಮೇಲೆ ಮಾಡಿ ಒಂದರ ಮೇಲೊಂದರಂತೆ ಇಡುವರು.

ಎಲ್ಲರ ನಂತರ ಅಜ್ಜಿಯೂ ತನ್ನ ಎಡಗೈ ಹಸ್ತವನ್ನು ಬೆನ್ನ ಮೇಲೆ ಮಾಡಿ, ಇಟ್ಟು ಬಲಗೈಯಿಂದ ತಟ್ಟುತ್ತಾ “ಅಪ್ಪಡ – ದಪ್ಪಡ – ತಾಂಬಳ – ಜಾಯ್ ಕಾಯ್ – ತಾಂಬಳ=ಬಿನ್ ಗೋಡ್ – ಬಟ್ಟಕ್ಕೋ – ತಟ್ಟಿಕಟ್ಟು – ಬಟ್ಟಕ್ಕ್ – ಸುಜ್ಯೋ – ದಬ್ಬಣ್ವೊ?” ಬೆಂಗೈ ಚರ್ಮ ಚಿವುಟಿ ಹಿಡಿದು ಕೇಳುವಳು. ಯಾರ “ಬೆಂಗೈ ಮೇಲೆ ಬಡಿಯಲಾಗುತ್ತಿತ್ತೋ ಅವರು “ಸೂಜಿ” ಎಂದಾಗಲೀ “ದಬ್ಬಣ” ಎಂದಾಗಲಿ ಹೇಳುವರು. “ಸೂಜಿ” ಎಂದರೆ ಸಾವಕಾಶ ಚಿವುಟಿ ಬೆಂಗೈ ಚರ್ಮವನ್ನು ಎತ್ತಿ ಕೈ ಆ ಕಡೆಗೆ ಇಡುವಳು. ದಬ್ಬಣ” ಎಂದು ಹೇಳಿದರೆ ಗಟ್ಟಿಯಾಗಿ ಚಿವುಟಿ ಈ ಕಡೆಗೆ ಇಡುವಳು. ಹೀಗೆಯೇ ಪ್ರತಿಯೊಬ್ಬರ ಬೆಂಗೈ ಮೇಲೆ ಅಪ್ಪಡ ದಪ್ಪಡ ಹೇಳುತ್ತಾ ಬಡಿದು “ಸೂಜ್ಯೊ” “ದಬ್ಬಣ್ವೊ” ಕೇಳಿ ಕೈ ಎತ್ತಿ ಇಡುವಳು. ಎತ್ತಿದ ಕೈಗಳನ್ನು ಆಯಾಯ ಆಟಗಾರರು ತಮ್ಮ ಬೆನ್ನ ಹಿಂದೆ ಅಡಗಿಸಿಕೊಳ್ಳುವರು. ಕೈಗಳನ್ನೆಲ್ಲ ಎತ್ತಿದ ಮೇಲೆ ಕಾಲುಗಳನ್ನು ಮೇಲಿನ ವಿಧಾನದಂತೆಯೇ ಹೇಳಿ ಕಾಲುಗಳನ್ನು ಎತ್ತಿ ಇಡುವಳು. ಎತ್ತಿದ ಕಾಲುಗಳನ್ನು ಪ್ರತಿಯೊಬ್ಬರೂ ಸರಿಯಾಗಿ (ನೀಳವಾಗಿ) ನೀಡುವರು. ಅಜ್ಜಿಯೂ ಕೂಡ ಮೇಲಿನ ವಿಧಾನದಂತೆಯೇ ಕೈ ಅಡಗಿಸಬೇಕು, ಕಾಲು ನೀಡಬೇಕು. ಎಲ್ಲರೂ ಕಾಲೂ ನೀಡಿದ ಮೇಲೆ ಒಬ್ಬರಿಗೊಬ್ಬರು ಕುಳಿತಲ್ಲಿಯೇ ತುಳಿದುಕೊಳ್ಳುವರು. ಆಶಕ್ತರು ನೋವು ತಡೆಯಲಾರದೆ ಎದ್ದು ಹೋದರೆ ಸಶಕ್ತರು ಬಹು ಹೊತ್ತು ಸೆಣಸುವರು.