ಆಟಗಾರರು “ಚಕ್ರ ಪಡಿ” ಹೊಯ್ದು ವರ್ತುಳಕಾರವಾಗಿ ಕುಳಿತುಕೊಳ್ಳುವರು. ಅವರಲ್ಲೊಬ್ಬರು ಬೇಕಾದ ಒಂದು ದಿಕ್ಕಿನಿಂದ ಪ್ರತಿಯೊಬ್ಬರ ತೊಡೆಯ ಮೇಲೆಯೂ ಅಂಗೈಯಿಂದ ಬಡಿಯುತ್ತ “ಕಾನಾ – ಜೀರ್ಗೆ (ದೀಗೆ) – ಎಪ್ಪತ್ತೇಳು – ಮೂವೆ – ಗಂಡಾ – ಆನೆ – ಮೇಲೆ  – ಚವರಾ – ಹಾಸಿ – ಹನ್ಮಂತ್ – ದೇವ್ರಾ – ಊಟ್ಕೆ – ಕರ್ದಿ – ಚಂಯ್ಕಾ – ಪಂಯ್ಯಾ – ದೋಸೆ – ಚುರ್ಕಾ – ಗಂಡನ – ಹೆಸರು – ಹೇಳಕ್ಕಾ – ಒಂದೇ – ಕಾಲು – ನೀಡಕ್ಕಾ” ಎನ್ನುವರು. “ನೀಡಕ್ಕಾ” ಎಂದಾಗ ಬಡಿದ ಕಾಲನ್ನು ಅವರು ನೀಡಿಕೊಳ್ಳಬೇಕು. ನೀಡದ ಕಾಲಿಗೆ ಮತ್ತೆ ಬಡಿಯಬಾರದು. ಎಲ್ಲ ಕಾಲುಗಳನ್ನೂ ನೀಡಿ ಒಂದೇ ಕಾಲು ಉಳಿದಾಗ ಹಾಡನ್ನು ಹಾಡುತ್ತ ಒಂದೇ ಕಾಲಮೇಲೆಯೇ ಬಡಿಯಬೇಕು. “ನೀಡಕ್ಕಾ” ಎಂದಾಗ ಆ ಕಾಲನ್ನೂ ನೀಡಿಕೊಳ್ಳಬೇಕು.

ಈಗ ಎಲ್ಲರ ಪಾದಗಳೂ ಎದುರು ಬದುರಾಗಿ ಒಂದೇ ಸ್ಥಳದಲ್ಲಿ ಕೂಡಿರುತ್ತವೆ. ಆಗ ಒಬ್ಬರಿಗೊಬ್ಬರು ಕುಳಿತಲ್ಲಿಯೇ ತುಳಿದುಕೊಳ್ಳುವರು. ಆಟಗಾರರು ನಗುನಗುತ್ತ ತುಳಿದುಕೊಳ್ಳುವಾಗ ನೆರೆದವರು ಚಪ್ಪಾಳೆತಟ್ಟಿ ನಗುವರು. ಸಂತೋಷದ ಜೊತೆ ಆಟಗಾರರ ಕಾಲುಗಳಿಗೆ ಒಳ್ಳೆಯ ವ್ಯಾಯಾಮ ದೊರೆಯುತ್ತದೆ,

ಈ ಆಟಕ್ಕೆ ಬಳಸುವ ಹಾಡು ಹಲವು ಪಾಠಾಂತರಗಳೊಂದಿಗೆ ದೊರೆಯುತ್ತದೆ. ಆಟಕ್ಕೆ ಹೆಸರುಗಳೂ ಅನೇಕ. ಕೇಲವು ಹೀಗಿವೆ:

ಚಟ್ಕೇ ಮುಟ್ಕೇ

ಚಟ್ಕೇ-ಮುಟ್ಕೇ-ತಾಲಂ-ದೀವ್ಗೆ-ಅಕ್ನ್-ಗಂಡಾ-ಬಿತ್ತಾ-ಲೋಮ್ದಾ-ಭತ್ತದ್-ಮುಡಿಯಾ-ಕಾವಾ-ಲೊದಾ-ಹೊನ್ನಂ-ಗುಳಿಗೆ-ತಲೆಯೂರ್-ಬಿದ್ದಾ-ಒಂದ್-ಕಾಲ್-ನೀಡೋ-ಭದ್ರ್-ಸಾಲಿ 

.ಅಪ್ಪಪ್ ಮುಳ್ಳೇ

ಅಪ್ಪಪ್ – ಮುಳ್ಳೇ – ಮುಳ್ಳೇ – ಗಂಡಾ – ಎಲ್ಲೀಗೋದಾ – ಸುಣ್ಣಕ್ಕೋದಾ – ಸುಣ್ಣದ – ಕುಳಿಲ್ – ಜಾರ್ – ಬಿದ್ದಾ – ಬಿಟ್ದ್ – ಕರ್ವಾ – ಕಟ್ವೋ – ರಿಲ್ಲೆ – ಕಟ್ದ್ – ಕವ್ರಾ – ಬಿಡ್ವ – ರಿಲ್ಲೆ – ಒಂದ್ – ಕಾಲ್ – ನೀಡೋ – ಭದ್ರ್ – ಸಾಲಿ 

. ಚಟ್ಕೇ ಮಟ್ಕೇ

ಚಟ್ಕೇ – ಮುಟ್ಕೇ – ತಾವಾ – ದೀವ್ಗೆ – ಅಪ್ಪಪ್ಪ – ಮಾಳೆ – ನಿನ್ನಾ – ಗಂಡಾ – ಎಲ್ಲೀ – ಗೋದಾ – ಸುಣ್ಣ – ಕ್ಕೋದಾ – ಸುಳಿ – ಯಲ್ – ಜಾರ್ – ಬಿದ್ದಾ – ಕಟ್ದ್ – ಕರ್ವಾ – ಬಿಡ್ವ – ರಿಲ್ಲೆ – ಬಿಟ್ – ಕರ್ವಾ – ಕಟ್ವರಿಲ್ಲೆ – ಒಂದ್ – ಕಾಲ್ – ನೀಡೋ – ಮಣ್ಯಾ – ನಾಶಿ. 

. ಅಪ್ಪಳೇ ಮಾವಳೇ

ಚಟ್ಕಾ ಮುಟ್ಕಾ ಆಟದಂತೆಯೇ ಆಡುವರು. ಆದರೆ ತುಳಿದುಕೊಳ್ಳುವಾಗ ಎಲ್ಲರೂ “ಗಜ್ಜಿ ಬಿಜ್ಜಿ ತಾಂಬಳ” ಎನ್ನುತ್ತ ತುಳಿದುಕೊಳ್ಳುವರು. ಹಾಡು ಕೆಳಗಿನಂತಿದೆ.

“ಅಪ್ಪಳೇ – ಮಾವಳೇ – ದೇವಿ – ದೇವಿ – ನಿನ್ನಾ – ಗಂಡಾ – ಎಲ್ಲೀ – ಗೊದಾ – ಸುಣ್ಣಕೋಃದಾ – ಸುಣ್ಣದ – ಮೇಲೆ – ಜಾರಿ – ಬಿದ್ದಾ – ಏಳ್ಸ್ವೋ – ರಿಲ್ಲಾ – ಕೂರ್ಸ್ವ್ – ರಿಲ್ಲಾ – ಒಂದ್ – ಲಾಲ್ – ಫೌಂಟ್.”