ದಕ್ಷಿಣ ಕನ್ನಡ ಜಿಲ್ಲೆಯ ವೇಣೂರಿನಲ್ಲಿ ಮಂದಸ್ಮಿತ ಬಾಹುಬಲಿ ಮೂರ್ತಿ ಪ್ರವಾಸಿಗರ ಆಕರ್ಷಣೆ ಕೇಂದ್ರ. ಅಜಿಲ ಮನೆತನದ ತಿಮ್ಮರಾಜನು ಚಾರುಕೀರ್ತಿಗಳ ಉಪದೇಶದಿಂದ 1603ರಲ್ಲಿ ಸ್ಥಾಪಿಸಿದ ಎಂದು ಶಾಸನ ಹೇಳುತ್ತದೆ. 35 ಅಡಿ ಎತ್ತರ. ಮೂರ್ತಿ ಹಿಂದೆ ಪಾದ ಮೊಳಕಾಲಿನವರೆಗೆ ಶಿಲಾಫಲಕ ವಿಗ್ರಹಕ್ಕೆ ಆಧಾರ. ಎರಡೂ ಕಡೆ ಹುತ್ತ. ಹಾವಿನ ಹೆಡೆಯುಳ್ಳ ಕೋಳಿ (ಕುಕ್ಕುಟ) ಸರ್ಪ ಕೆತ್ತಲಾಗಿದೆ. ಪಾದಗಳ ನಡುವಿನಿಂದ ಬಳಸಿಕೊಂಡು ಬಳ್ಳಿಗಳು (ಮಾಧವೀಲತೆ) ತೊಡೆಗಳನ್ನು ಸುತ್ತುವರಿದು ಮೇಲಕ್ಕೆ ಹಬ್ಬಿದೆ. ಎರಡೂ ಕೈಗಳನ್ನು ಸುತ್ತುವರಿದು ಭುಜದವರೆಗೆ ಹರಡಿದೆ.

ಗುಂಗುರುಕೂದಲು. ಜೋಲುಕಿವಿ, ಕೊಕ್ಕಿನಂಥಗಿಳಿಮೂಗು, ಮಂದಹಾಸ ಮುಖಮುದ್ರೆ. ಈ ವಿಗ್ರಹದ ವೈಶಿಷ್ಟ್ಯ. ವಿಗ್ರಹ ಅಕ್ಕಪಕ್ಕ ಎರಡು ಶಿಲಾಶಾಸನಗಳಿವೆ. ಶ್ರವಣಬೆಳಗೊಳ, ಕಾರ್ಕಳಕ್ಕಿಂತ ಈ ಗೊಮ್ಮಟ ಗಾತ್ರದಲ್ಲಿ ಕಿರಿದು. ಪಲ್ಗುಣಿ ನದಿ ದಂಡೆಯ ಮೇಲೆ, ಗದ್ದೆ ಮೇಲಿನ ದಿನ್ನೆಯಲ್ಲಿ ಉತ್ತರ ಅಭಿಮುಖವಾಗಿ ಕಲ್ಲಪದ್ಮಪೀಠದ ಮೇಲೆ ಗೊಮ್ಮಟ ವಿಗ್ರಹ ನಿಂತಿದೆ. ಬ್ರಹ್ಮ ದೇವ ಸ್ಥಂಭ ಇದೆ. ಇದರ ತುದಿಯಲ್ಲಿ ದಕ್ಷಿಣಾಭಿಮುಖವಾಗಿ ಕುಳಿತ ಬ್ರಹ್ಮದೇವನ ಮೂರ್ತಿ ಇದೆ.

ಅಜಿಲ ಅರಸರ ರಾಜಧಾನಿ ವೇಣೂರು ಈಗ ಸಣ್ಣ ಊರು. ಏಳು ಊರು ಮಾಗಣೆಯ ಊರು “ಏನೂರು ಪತ್ತನ” ಪಟ್ಟಣವಾಗಿದ್ದು, ಕ್ರಮೇಣ ವೇಣೂರು ಪಟ್ಟಣ ಆಗಿದೆ ಎನ್ನುವ ವಾದ ಇದೆ.

ವಿಗ್ರಹ ಬಲ ಬದಿಯಲ್ಲಿರುವ ಸಂಸ್ಕೃತ ಶಾಸನದಲ್ಲಿ “ಚಾಮುಂಡವಂಶದ ತಿಮ್ಮರಾಜನು ಶ್ರವಣ ಬೆಳಗೊಳದ ತನ್ನ ಗುರುಗಳಾದ ಚಾರುಕೀರ್ತಿಯವರ ಅಪ್ಪಣೆ ಪ್ರಕಾರ ಭುಜಬಲಿಯ ಪ್ರತಿಮೆಯನ್ನು ಶಾಲಿವಾಹನಶಕ 1525ನೇ ಶೋಭಕೃತ್ಸಂವತ್ಸರ ಪಾಲ್ಗುಣಮಾಸ, ಶುಕ್ಲಪಕ್ಷ, ದಶಮೀತಿಥಿ, ಗುರುವಾಸರ, ಪುಷ್ಯಾನಕ್ಷತ್ರ, ಮಿಥುನಲಗ್ನ (ಬೆಳಗ್ಗೆ 11.30ರಿಂದ ಮಧ್ಯಾಹ್ನ 1.40ರಒಳಗೆ)’ (ಕ್ರಿ.ಶ. 1604ನೇ ಮಾರ್ಚ್ 1ನೇ ತಾರೀಕು ಗುರುವಾರ) ಪ್ರತಿಷ್ಠಾಪಿಸಿದ. ಎಡಭಾಗದ ಶಿಲಾ ಶಾಸನದಲ್ಲಿ ಇದೇ ವಿಚಾರ ಕನ್ನಡ ಪದ್ಯರೂಪದಲ್ಲಿದೆ.

ಗೋಮಟೇಶ್ವರಪ್ರತಿಮೆಸ್ಥಾಪನೆಹಿನ್ನೆಲೆ:

4ನೇ ವೀರತಿಮ್ಮಣಾಜಿಲ (ಕ್ರಿ.ಶ.1550-1610) ಶ್ರವಣಬೆಳಗೊಳದಲ್ಲಿರುವ ತನ್ನ ಹಿರಿಯ ವಂಶದ ಚಾಮುಂಡರಾಯ ಕಟ್ಟಿಸಿದ ಗೋಮಟೇಶ್ವರನ ಹಾಗೆಯೇ ತನ್ನ ರಾಜಧಾನಿಯಲ್ಲಿಯೂ ಒಂದು ಪ್ರತಿಮೆಸ್ಥಾಪಿಸಬೇಕು ಎಂದ ತಿಮ್ಮಣಾಜಿಲನಿಗೆ ಇಚ್ಛೆಯಾಯಿತು. ಕಾರ್ಕಳದಲ್ಲಿ ಗೋಮಟ ವಿಗ್ರಹಮಾಡಿದ ಕಲ್ಕುಡ ಕುಟುಂಬದವರನ್ನು ಕರೆಯಿಸಿ ವೇಣೂರಿನ ಸಮೀಪದಕಲ್ಯಾಣಿ ಎಂಬ ಸ್ಥಳದಲ್ಲಿ ಶಿಲೆಯಿಂದ ಗೋಮಟೇಶ್ವರ ಮೂರ್ತಿ ಸ್ಥಾಪಿಸಲು ಉದ್ಯುಕ್ತನಾದನು.

ಈ ವಿಚಾರ ಕಾರ್ಕಳ ಪಾಂಡ್ಯ ನಗರ ಆಳುತ್ತಿದ್ದ ದಾವಣಿ ಇಮ್ಮಡಿ ಭೈರರಸನಿಗೆ ಮುಟ್ಟಿತು. ತನ್ನ ಹಿರಿಯ ವೀರಪಾಂಡ್ಯ ಮಾಡಿಸಿದ ಕಾರ್ಕಳಗೋಮಟೇಶ್ವರಮೂರ್ತಿ ನಿರ್ಮಾಣ ಕೀರ್ತಿಗೆ ಕುಂದುಂಟಾಗಬಹುದು ಎಂದು ಭಾವಿಸಿದ. ವೇಣೂರಿನಲ್ಲಿ ಮೂರ್ತಿ ಪ್ರತಿಷ್ಠಾಪಿಸದೆ ಕಾರ್ಕಳಕ್ಕೆ ಕಳುಹಿಸುವಂತೆ ಆಜ್ಞಾಪಿಸಿದ. ತಿಮ್ಮಣ್ಣಾಜಿಲ ಇದಕ್ಕೆ ಒಪ್ಪಲಿಲ್ಲ.

ಭೈರರಸ ಯುದ್ಧಕ್ಕೆ ಧಾವಿಸಿ ನಾರಾವಿ ಬಳಿ ಬಸದಿ, ದೇವಸ್ಥಾನ ಹಾಳುಗೆಡವಿದ. ಈ ಸುದ್ದಿ ತಿಳಿದ ತಿಮ್ಮಣ್ಣಾಜಿಲ ಯುದ್ಧಕ್ಕೆ ಸಿದ್ಧನಾಗಿ ಮೂರ್ತಿಯನ್ನು ಹೊಳೆತಳದ ಮರಳರಾಶಿಯಲ್ಲಿ ಅಡಗಿಸಿದ. ತಿಮ್ಮಣ್ಣಾಜಿಲ ತನ್ನ ಸಾಮಂತ ಕಾಂತುಸಾಂಬಣಿ ಜತೆ ಸೈನ್ಯವನ್ನು ಕಳುಹಿಸಿದ. ಆತ ಭೈರರಸನನ್ನು ಯುದ್ಧದಲ್ಲಿ ಸೋಲಿಸಿದ. ಬಳಿಕ ಮೂರ್ತಿ ಪ್ರತಿಷ್ಠಾಪಿಸಿದ.

—-

  • ಗುಮ್ಮಡ, ಗುಂಮಟಂ, ಗುಮ್ಮಟ, ಗೋಮಟ ಈ ಶಬ್ದಗಳು ಮರಾಠಿ, ಕೊಂಕಣಿ ಮನಮೋಹಕ ಎಂಬ ಅರ್ಥವನ್ನು ಸೂಚಿಸುತ್ತದೆ. ಗುಮ್ಮಡ ಶಬ್ದ ಮನ್ಮಥ ಎಂಬ ಅರ್ಥವನ್ನು ಸೂಚಿಸುತ್ತದೆ
  • ಗೋಮಟೇಶ್ವರವಿಗ್ರಹಗಳು: ಶ್ರವಣಬೆಳಗೊಳದಲ್ಲಿ 57 ಅಡಿ ಎತ್ತರ, ಪ್ರತಿಷ್ಠೆ ಕ್ರಿ.ಶ.981,  ಕಾರ್ಕಳ 41.5 ಅಡಿಎತ್ತರ, ಪ್ರತಿಷ್ಠೆ ಕ್ರಿ.ಶ.1432, ವೇಣೂರು 35 ಅಡಿಎತ್ತರ, ಪ್ರತಿಷ್ಠೆ ಕ್ರಿ.ಶ.1604. ಧರ್ಮಸ್ಥಳ 52 ಅಡಿ, 1982ರಲ್ಲಿ ಪ್ರತಿಷ್ಠೆ.
  • ಮಂಗಳೂರಿಂದ 35  ಮೈಲುದೂರ. ಮೂಡುಬಿದರೆಯಿಂದ 20 ಕಿ.ಮೀ. ದೂರ

—-
ಆಕರ ಗ್ರಂಥಗಳು
(ದಕ್ಷಿಣ ಕನ್ನಡ ಜಿಲ್ಲೆ ಪ್ರಾಚೀನ ಇತಿಹಾಸ, ರಚನೆ: ಮಂಜೇಶ್ವರ ಗಣಪತಿ ರಾವ್ ಐಗಳ )
(ಗೋವಿಂದ ಪೈ ಸಂಶೋಧನೆ ಸಂಪುಟ)
ಶಿಲಾಶಾಸನಗಳು
ಮಹಾಮಸ್ತಕಾಭಿಷೇಕ:
(ಕ್ರಿ.ಶ.2000ದಲ್ಲಿ ವೇಣೂರು ಗೋಮಟೇಶ್ವರ ಮಹಾಮಸ್ತಕಾಭಿಷೇಕ ನಡೆದಿದ್ದು, ಈಗ 2012 ಜ.28ರಿಂದ ಫ್ರಬ್ರವರಿ 5ರ ವರೆಗೆ ನಡೆಯಲಿದೆ.)