ಸಿರಿ ಸಂಧಿಯಲ್ಲಿ ತುಳುನಾಡಿನ ಕುಟುಂಬ ಮೂಲದ ರಾಜಕಾರಣ ಸೊಗಸಾಗಿ ಚಿತ್ರಿತವಾಗಿದೆ. ಈ ಸಂಧಿ ತಲೆಮಾರಿನಿಂದ ತಲೆಮಾರಿಗೆ ಮೌಖಿಕವಾಗಿ ನೆನಪಿನ ಮೂಲಕ ಹರಿದು ಬರುವಾಗ ಹಲವಾರು ಮಾರ್ಪಾಡುಗಳಿಗೆ ಒಳಗಾಗಿದ್ದರೂ ಮೂಲ ತಿರುಳನ್ನು ಹಾಗೆ ಉಳಿಸಿಕೊಂಡು ಬಂದಿದೆ. ತುಳುನಾಡಿನ ಕುಟುಂಬ ರಚನೆ, ಬಂಧುತ್ವದ ನೆಲೆಗಳು ಹಾಗೂ ಆಡಳಿತದ ವಿವಿಧ ಸ್ವರೂಪಗಳ ಅಧ್ಯಯನಕ್ಕೆ ಸಿರಿ ಸಂಧಿ ಮಹತ್ವದ ಆಕರವಾಗಿದೆ. ಸಿರಿ ಪಠ್ಯದಲ್ಲಿ ಬಹುಚರ್ಚಿತವಾಗಿರುವ ವಿಷಯವೆಂದರೆ ಮಾತೃವಂಶೀಯತೆ. ಇದು ಮೇಲ್ನೋಟಕ್ಕೆ ಮಾತೃಪ್ರಧಾನ ಕುಟುಂಬ ರೂಪುಗೊಳ್ಳುವ ಹಾಗೂ ವ್ಯವಹರಿಸುವ ಒಂದು ವಿಧಾನವಾಗಿ ಕಂಡುಬಂದರೂ, ಅದರೊಳಗೆ ನಿಜವಾಗಲೂ ಅಡಕವಾಗಿರುವುದು ಭೂಮಿಯ ಪ್ರಶ್ನೆ. ಭೂಮಿಯ ಮೇಲೆ ನಿಯಂತ್ರಣ ಸಾಧಿಸುವುದು ಹಾಗೂ ಆಡಳಿತ ನಡೆಸುವುದು ಜಮೀನ್ದಾರಿ ಕುಟುಂಬದ ಪ್ರಮುಖ ಆದ್ಯತೆಯಾಗಿತ್ತು. ಚರಿತ್ರೆಯಲ್ಲಿ ಕಂಡುಬರುವ ಊಳಿಗಮಾನ್ಯ ಮಾದರಿಯ ಸರ್ಕಾರದ ರಚನೆಯಲ್ಲಿ ಜಮೀನ್ದಾರಿ ಕುಟುಂಬಗಳ ಪಾತ್ರ ಮಹತ್ವದ್ದು. ಸಿರಿ ಪಾಡ್ದನವು ಕೃಷಿಯನ್ನು ಅವಲಂಬಿಸಿದ್ದ, ಭೂಮಿಯ ಮೇಲೆ ನಿಯಂತ್ರಣ ಸಾಧೀಸಿದ್ದ ಹಾಗೂ ಸ್ಥಳೀಯ ಆಡಳಿತದಲ್ಲಿ ಬಹುಮುಖ್ಯ ಪಾತ್ರವಹಿಸುತ್ತಿದ್ದ ಬಂಟ ಸಮುದಾಯದ ಕೌಟುಂಬಿಕ ನೆಲೆಗಳನ್ನು ಬಿಚ್ಚಿಡುತ್ತಾ ಹೋಗುತ್ತದೆ. ಅದೇ ರೀತಿ ಮಾತೃವಂಶೀಯ ಬಂಟ ಕುಟುಂಬದೊಳಗಿನ ಆಂತರಿಕ ಬಿಕ್ಕಟ್ಟುಗಳನ್ನೂ ಪರಿಚಯಿಸುತ್ತದೆ. ಅಧಿಕಾರ ಹಾಗೂ ಸವಲತ್ತುಗಳ ಪ್ರಶ್ನೆಯೇ ಭೂಮಾಲೀಕ ಸಮಾಜದಲ್ಲಿ ಮುಖ್ಯವಾಗಿರುತ್ತದೆಯೇ ಹೊರತು ಭಾವನಾತ್ಮಕ ವಿಚಾರಗಳಲ್ಲ. ಸಿರಿ ಪಾಡ್ದನವು ಇದನ್ನು ಸ್ಪಷ್ಟಪಡಿಸುತ್ತದೆ. ಇದರಲ್ಲಿ ಗುತ್ತು ಮನೆಯ ಅಧಿಕಾರವನ್ನು ಪಡೆಯುವುದು ಪ್ರಮುಖ ಅಜೆಂಡಾವಾಗಿರುತ್ತದೆ.

ಮಾತೃವಂಶೀಯತೆಯನ್ನು ಕೌಟುಂಬಿಕ ವಿವರಗಳಿಗೆ ಅಥವಾ ಜಾತಿಗೆ ಸೀಮಿತಗೊಳಿಸಿ ಹಲವಾರು ಚರ್ಚೆಗಳು ನಡೆದಿವೆ. ಇದರಾಚೆಗೂ ಮಾತೃವಂಶೀಯತೆಯನ್ನು ನೋಡುವ ಪ್ರಯತ್ನಗಳು ಆಗಬೇಕಾಗಿದೆ. ಆಗ ಮಾತ್ರ ಕುಟುಂಬದ ಮೂಲಕ ನಿರ್ವಹಿಸುವ ಆಡಳಿತ, ಆಳ್ವಿಕೆ, ಅಧಿಕಾರ ಹಾಗೂ ಆಸ್ತಿ ಗಳಿಕೆ ಮುಂತಾದ ಕುಟುಂಬ ಮೂಲದ ರಾಜಕೀಯ ಅಥವಾ ರಾಜ್ಯ ವ್ಯವಸ್ಥೆ ಪರಿಚಯವಾಗಲು ಸಾಧ್ಯ. ಮಾತೃವಂಶೀಯತೆಯ ಮೂಲಕ ರೂಪುಗೊಳ್ಳುವ ರಾಜಕೀಯ ವ್ಯವಸ್ಥೆ ಕುಟುಂಬದ ಚೌಕಟ್ಟನ್ನು ಮೀರಿರುವಂತದ್ದು. ಬಂಟರ ಗುತ್ತು ಮನೆಗಳು ತಮ್ಮ ವ್ಯಾಪ್ತಿಗೆ ಬರುವ ಪ್ರದೇಶಗಳ ಆಳ್ವಿಕೆಯನ್ನು ನೋಡಿಕೊಳ್ಳುತ್ತಿದ್ದವು. ಬಂಟರು ಭೂಮಾಲೀಕರಾಗಿದ್ದ ಕಾರಣ ಸಹಜವಾಗಿಯೆ ಆಳುವರ್ಗದೊಂದಿಗೆ ನೇರ ಸಂಬಂಧವನ್ನು ಹೊಂದಿದ್ದರು. ಮಾತೃವಂಶೀಯತೆಯ ಮೂಲಕ ಗುರುತಿಸಿಕೊಂಡ ಬಂಟರು ಒಂದು ಪ್ರದೇಶದ ಆಳ್ವಿಕೆಯನ್ನು ನಿರ್ವಹಿಸುವಾಗ ಅವರು ಕುಟುಂಬದ ಚೌಕಟ್ಟನ್ನು ಮೀರಿ ವಿಕೇಂದ್ರೀಕೃತ ಸರ್ಕಾರ ಮಾದರಿಯ ಚೌಕಟ್ಟಿನೊಳಗೆ ಕಾಣಿಸಿಕೊಂಡರು. ಹೀಗೆ ಪ್ರಬಲ ಸಮುದಾಯಗಳು ತಮ್ಮ ಕುಟುಂಬದ ನೆಲೆಯನ್ನು ಭದ್ರಪಡಿಸಿಕೊಂಡು ಅನಂತರ ತಮ್ಮ ಅಧಿಕಾರವನ್ನು ಇನ್ನಿತರರ ಮೇಲೆ ಚಲಾಯಿಸುವ ಹಂತಕ್ಕೆ ಬೆಳೆದವು. ಇದು ಮಾತೃವಂಶೀಯತೆಯನ್ನು ಆಡಳಿತ ಹಾಗೂ ಅಧಿಕಾರದ ನೆಲೆಯಿಂದ ನೋಡುವ ವಿಧಾನವಾದರೆ, ಪುರುಷ ಪ್ರಭುತ್ವದ ವಿರೋಧಿ ನೆಲೆಯಿಂದ ನೋಡುವ ಮತ್ತೊಂದು ವಿಧಾನ.

ರಾಜಕೀಯ ಸಂಘರ್ಷದ ನೆಲೆಗಳನ್ನು ಸ್ತ್ರೀ ಸಂಘರ್ಷದ ಪ್ರಶ್ನೆಗಳ ಮೂಲಕವೂ ನೋಡಬಹುದಾಗಿದೆ. ಸಿರಿ ಮುಖಾಮುಖಿಯಾಗುವುದು ಪುರುಷಪ್ರಧಾನ ವ್ಯವಸ್ಥೆಗೆ. ಪಿತೃಪ್ರಧಾನ ವ್ಯವಸ್ಥೆಯ ಪಾತಿವ್ರತ್ಯ, ಮಾತೃತ್ವ, ಪುರುಷ ಪ್ರಭುತ್ವ ಮುಂತಾದ ಲಕ್ಷಣಗಳನ್ನು ಸಿರಿ ಪಠ್ಯ ಒಡೆಯುತ್ತಾ ಸಾಗುತ್ತದೆ. ಮಾತೃವಂಶೀಯತೆಯ ಪ್ರಮುಖ ಲಕ್ಷಣಗಳೆಂದರೆ ತಾಯಿಯ ಮೂಲಕ ಮನೆತನವನ್ನು ನಿರ್ಧರಿಸುವುದು, ಆಸ್ತಿಯ ಹಕ್ಕನ್ನು ಪಡೆಯುವುದು, ಮಹಿಳೆಯರ ಹಕ್ಕುಗಳನ್ನು ಎತ್ತಿ ಹಿಡಿಯುವುದು ಹಾಗೂ ತನ್ನವರಿಂಧ ತೊಂದರೆಗೊಳಗಾದಾಗ ಹೆಣ್ಣು ಯಾವ ರೀತಿ ಸಮಸ್ಯೆಗಳನ್ನು ಎದುರಿಸಬೇಕೆನ್ನುವುದನ್ನು ತೋರಿಸಿಕೊಡುವುದು. ಮಾತೃವಂಶೀಯ ಕುಟುಂಬ ವ್ಯವಸ್ಥೆಯಲ್ಲಿ ಒಂದು ವೇಳೆ ಗಂಡ ತಿರಸ್ಕರಿಸಿದರೂ ಹೆಣ್ಣು ತವರಿನಲ್ಲಿ ಆಶ್ರಯ ಪಡೆಯಬಹುದು. ಗಂಡನಿಗಿಂತ ಹೆಚ್ಚಿನ ಅಧಿಕಾರವನ್ನು ರಕ್ತಸಂಬಂಧಿಗಳು ಹೊಂದಿರುತ್ತಾರೆ. ಅದರಲ್ಲೂ ಮಗುವಿನ ಮೇಲೆ ತವರು ಮನೆಯವರಿಗೆ (ಮಾವಂದಿರಿಗೆ) ಹೆಚ್ಚಿನ ಅಧಿಕಾರವಿರುತ್ತದೆ. ಇದನ್ನು ‘ಅಳಿಯ ಸಂತಾನ’ ಅಥವಾ ‘ಅಳಿಯ ಕಟ್ಟು’ ಎಂಬುದಾಗಿಯೂ ಕರೆಯಲಾಗಿದೆ. ಪಿತೃಪ್ರಧಾನ ವ್ಯವಸ್ಥೆಯಲ್ಲಿ ಗಂಡ ತನ್ನ ಹೆಂಡತಿ ಹಾಗೂ ಮಕ್ಕಳ ಮೇಲೆ ಸಂಪೂರ್ಣ ಹಿಡಿತ ಸಾಧಿಸಿರುತ್ತಾನೆ.

ತಂದೆಯ ಅಧಿಕಾರ ಮಕ್ಕಳಿಗೆ ಹೋಗುವ ಸಂಪ್ರದಾಯವನ್ನು ‘ಮಕ್ಕಳ ಕಟ್ಟು’ ಎಂಬುದಾಗಿ ಕರೆಯಲಾಗಿದೆ. ಅಳಿಯ ಕಟ್ಟು ಹಾಗೂ ಮಕ್ಕಳ ಕಟ್ಟು ಭೂಮಿಯ ಅಧಿಕಾರಕ್ಕೆ ಸಂಬಂಧಪಟ್ಟ ವಿಷಯವಾಗಿದ್ದರಿಂದಾಗಿ ತುಳುನಾಡಿನಲ್ಲಿ ಅವು ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದ್ದವು. ಸೋದರ ಮಾವ ಅಳಿಯ ಕಟ್ಟಿನಲ್ಲಿ ವಿಶೇಷವಾದ ಸ್ಥಾನವನ್ನು ಪಡೆಯುತ್ತಾನೆ. ತಾಯಿಯಿಂದ ಬರುವ ಅಧಿಕಾರ ಸಹೋದರಿಯ ಮಕ್ಕಳಿಗೆ ಹೋಗುತ್ತದೆ. ಈ ವ್ಯವಸ್ಥೆಯಲ್ಲಿ ತಾಯಿಯಿಂದ ಪಡೆಯುವ ಅಧಿಕಾರ ಮುಖ್ಯವಾಗಿರುತ್ತದೆ. ಇದು ಹೆಣ್ಣಿನ ಮೂಲಕ ಗಂಡು ಅಧಿಕಾರ ಪಡೆಯುವ ಹಾಗೂ ಭೂಮಾಲೀಕನಾಗುವ ಪ್ರಕ್ರಿಯೆಯನ್ನು ಸೂಚಿಸುತ್ತದೆ. ಮಾತೃವಂಶೀಯತೆಯಲ್ಲಿ ಕುಟುಂಬವನ್ನು ಗುರುತಿಸುವುದು ಹೆಣ್ಣಿನ ಮೂಲಕ. ಯಾವುದೇ ಕುಟುಂಬದಲ್ಲಿ ಹೆಣ್ಣು ಸಂತಾನ ಇರದಿದ್ದರೆ ಆ ಕುಟುಂಬ ಅವನತಿ ಹೊಂದುತ್ತಿತ್ತು. ಮಾತೃವಂಶೀಯ ಆಡಳಿತ ವ್ಯವಸ್ಥೆಯಲ್ಲಿ ಗುತ್ತಿನ ಒಡೆಯನ ಸಹೋದರಿಯ ಮಕ್ಕಳು ಅಧಿಕಾರವನ್ನು ಪಡೆಯುತ್ತಾರೆ. ಇಲ್ಲಿ ಹೆಣ್ಣಿಗೆ ಆಸ್ತಿಯ ಹಕ್ಕು ಇದ್ದರೂ, ಅದನ್ನು ಅಧಿಕಾರದ ನೆಲೆಯಲ್ಲಿ ಅನುಭವಿಸುವುದು ಮಾತ್ರ ಗಂಡು..ಮಾತೃಪ್ರಧಾನ ಸಮಾಜದಲ್ಲಿ ಹೆಣ್ಣಿಗೆ ಗಂಡನ ಮನೆಗಿಂತ ಹೆಚ್ಚು ವ್ಯಾಮೋಹ ಇರುವುದು ತನ್ನ ತವರು ಮನೆಯ ಬಗ್ಗೆ. ಮಕ್ಕಳು ಸಹಾ ಹೆಚ್ಚು ಬೆರೆಯುವುದು ಹಾಗೂ ಆತ್ಮೀಯವಾಗಿರುವುದು ತಾಯಿಯ ಸಂಬಂಧಿಕರ ಜೊತೆಗೆ.

ಎರಡೂ ವ್ಯವಸ್ಥೆಗಳಲ್ಲೂ ಹೆಣ್ಣು ನೆಮ್ಮದಿಯ ಬದುಕನ್ನು ಸಾಗಿಸಲು ಸಾಧ್ಯವಾಗುವುದು ಕುಟುಂಬದ ಸದಸ್ಯರ ಸಂಬಂಧಗಳು ಅನ್ಯೋನ್ಯವಾಗಿದ್ದಾಗ ಮಾತ್ರ. ಇಡಿ ಕುಟುಂಬ ವ್ಯವಸ್ಥೆಯ ತಳಹದಿಯೇ ಕುಟುಂಬದ ಸದಸ್ಯರ ಪರಸ್ಪರ ಗೌರವ, ವಿಶ್ವಾಸ ಹಾಗೂ ನಂಬಿಕೆ. ಇದರಲ್ಲಿ ಬಿರುಕು ಕಾಣಿಸಿಕೊಂಡರೆ ಅದು ಯಾವ ಸ್ವರೂಪದ ವ್ಯವಸ್ಥೆಯಾದರೂ ಅವನತಿಯತ್ತ ಸಾಗಲೇಬೇಕಾಗುತ್ತದೆ. ಸಿರಿ ಪಠ್ಯದಲ್ಲಿ ಈ ಎಲ್ಲ ವಿಚಾರಗಳು ಹಾಸು ಹೊಕ್ಕಾಗಿವೆ. ಒಬ್ಬ ಮಹಿಳೆ ಸಮಾಜದಲ್ಲಿ ಅತಂತ್ರ ಸ್ಥಿತಿಯನ್ನು ಎದುರಿಸುವಾಗ ಯಾವ ಬಗೆಯ ಹೋರಾಟವನ್ನು ಮಾಡಲು ಸಾಧ್ಯ ಎನ್ನುವುದಕ್ಕೆ ಸಿರಿ ಪಾಡ್ದನ ಒಂದು ಮಾದರಿ. ಸಿರಿ ತನ್ನ ಗಂಡನಿಗೆ ವಿಚ್ಛೇದನ (ಬರ) ನೀಡುವುದು, ಕನ್ಯಾಶುಲ್ಕ(ತೆರ)ವನ್ನು ಗಂಡನಿಗೆ ವಾಪಾಸು ಮಾಡುವುದು, ಪಂಚಾಯಿತಿ ಕೂಟದ ನ್ಯಾಯಬಾಹಿರ ತೀರ್ಮಾನವನ್ನು ತಿರಸ್ಕರಿಸುವುದು, ಮೂಗಿನ ಮೂಗುತಿಯನ್ನು ಕಿತ್ತು ಅರಮನೆಯ ಕಂಬಕ್ಕೆ ಕಟ್ಟುವುದು, ಕತ್ತಿನ ಕರಿಮಣಿಯನ್ನು ಕಡಿಯುವುದು, ಕೈಬಳೆಗಳನ್ನು ಒಡೆಯುವುದು ಇವೆಲ್ಲಾ ಹೆಣ್ಣು ತನ್ನ ಸ್ವಾತಂತ್ರ್ಯಕ್ಕಾಗಿ ನಡೆಸುವ ಹೋರಾಟವಷ್ಟೇ ಅಲ್ಲದೆ, ಸಾಮಾಜಿಕ ಬದಲಾವಣೆಯತ್ತ ಮುಖ ಮಾಡುವ ಪ್ರಯತ್ನವಾಗಿಯೂ ಕಂಡುಬರುತ್ತದೆ. ಸಿರಿ ಬದಲಾವಣೆಯನ್ನು ಬಯಸಿ ಸಮಾಜದ ವಿರುದ್ಧ ಬಂಡಾಯವೆದ್ದರೂ ತನ್ನ ಗಂಡನೇ ಅದಕ್ಕೆ ವಿರುದ್ಧವಾಗಿ ನಿಂತಾಗ ಅಸಹಾಯಕಳಾಗಿ ಮನೆಯನ್ನೇ ತ್ಯಜಿಸಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಇಲ್ಲಿ ಮನೆಯನ್ನು ತ್ಯಜಿಸುವುದೆಂದರೆ ಗಂಡ, ಭೂಮಿ ಹಾಗೂ ಅಧಿಕಾರ ಇವುಗಳೆಲ್ಲವನ್ನೂ ತ್ಯಜಿಸುವುದು ಎಂದರ್ಥ. ಪಂಚಾಯಿತಿ ಕಟ್ಟೆಯಲ್ಲಾಗುವ ಅವಮಾನ ಸಿರಿಯ ಸ್ವಾಭಿಮಾನಕ್ಕೆ ಧಕ್ಕೆ ತರುವ ವಿಚಾರವಾಗಿತ್ತು. ಹೆಣ್ಣಿನ ಮೂಲಕವೇ ಗುರುತಿಸಿಕೊಳ್ಳಲುವ ಸಮುದಾಯವೊಂದು ಅದೇ ಹೆಣ್ಣನ್ನು ಸಾರ್ವಜನಿಕವಾಗಿ ಅಪಹಾಸ್ಯ ಮಾಡುವುದು ಹಾಗೂ ಮನೆ ಬಿಟ್ಟು ಹೋಗುವಂತೆ ಮಾಡುವುದು ಪುರುಷ ಪ್ರಾಧಾನ್ಯತೆಯ ಕಠೋರತೆಯನ್ನು ಸೂಚಿಸುತ್ತದೆ. ಹೆಣ್ಣಿಗೆ ಭೂಮಿಯ ಮೇಲೆ ಹಕ್ಕು ಇದ್ದರೂ ಅದನ್ನು ಆಡಳಿತ ನಡೆಸಬೇಕಾದದ್ದು ಗಂಡು, ಹೆಣ್ಣಿಗೆ ಆಡಳಿತ ನಡೆಸುವ ಹಕ್ಕು ಅಥವಾ ಸಾಮಾರ್ಥ್ಯ ಇಲ್ಲ ಎನ್ನುವ ಪುರುಷಪ್ರಧಾನ ಸಮಾಜದ ಧೋರಣೆಯನ್ನು ಧಿಕ್ಕರಿಸುವ ಸಿರಿ ತನ್ನ ಪ್ರತಿಭಟನೆಯನ್ನು ವ್ಯಕ್ತಪಡಿಸುವುದು ಹೆಣ್ಣಿನ ಐಡೆಂಟಿಟಿಯ ಪ್ರಶ್ನೆಯಾಗಿಯೂ ಕಂಡುಬರುತ್ತದೆ.