ಕೃಷಿಯನ್ನು ಪ್ರಧಾನ ವೃತ್ತಿಯನ್ನಾಗಿ ಹೊಂದಿರುವ ಬಂಟರು ತುಳುನಾಡಿನ ಸಾಮಾಜಿಕ ರಚನೆಯಲ್ಲಿ ಎತ್ತದ ಸ್ಥಾನವನ್ನು ಪಡೆದಂಥವರು. ಬಂಟರ ಗುತ್ತು ಮನೆಗಳು ಸ್ಥಳೀಯ ಆಡಳಿತ ಘಟಕವೂ ಆಗಿದ್ದರಿಂದಾಗಿ ತುಳುನಾಡಿನ ಇತರ ಸಮುದಾಯಗಳಿಗಿಂತ ಭಿನ್ನವಾಗಿ ಗುರುತಿಸಿಕೊಳ್ಳುವುದಕ್ಕೂ ಸಾಧ್ಯವಾಯಿತು. ಭೂಮಿಯ ಮೂಲಕ ಅಧಿಕಾರ ಹಾಗೂ ಸವಲತ್ತುಗಳನ್ನು ಪಡೆದುಕೊಂಡ ಬಂಠರು ಸ್ಥಳೀಯ ದೈವಾರಾಧನೆಯ ಮೇಲೂ ತಮ್ಮ ಹಿಡಿತವನ್ನು ಸಾಧಿಸಿದರು. ತುಳುನಾಡಿನ ಹೆಚ್ಚಿನ ಭೂತಸ್ಥಾನಗಳು ಬಂಟರ ಗುತ್ತು ಮನೆಗಳಿಗೆ ಸಂಬಂಧಪಟ್ಟವೇ ಆಗಿವೆ. ಭೂತಾರಾಧನೆಯು ಬಂಟರ ಪ್ರಮುಖ ಧಾರ್ಮಿಕ ಆಚರಣೆಯಾಗಿದ್ದು, ಅದರ ಮೂಲಕ ಈ ಸಮುದಾಯ ತನ್ನ ಅಧಿಕಾರ ಹಾಗೂ ಸವಲತ್ತುಗಳನ್ನು ಇನ್ನಷ್ಟು ಗಟ್ಟಿಗೊಳಿಸಿಕೊಂಡಿತು. ಭೂಮಾಲೀಕರಾದ ಬಂಟರು ತುಳುನಾಡಿನ ಕೆಳಸಮುದಾಯಗಳನ್ನು ಜಮೀನ್ದಾರಿ ವ್ಯವಸ್ಥೆಯ ಮೂಲಕ ತಮ್ಮ ಅಧೀನದಲ್ಲಿಟ್ಟುಕೊಂಡಿದ್ದರು. ಬಂಟರ ಗುತ್ತು ಮನೆಗಳು ಆಡಳಿತದ ಕೇಂದ್ರವಾಗಿದ್ದಂತೆ ಕೆಳಸಮುದಾಯಗಳ ಶೋಷಣೆಯ ಕೇಂದ್ರಗಳೂ ಆಗಿದ್ದವು ಎನ್ನುವುದನ್ನು ಮರೆಯುವಂತಿಲ್ಲ. ಅವು ಅರಮನೆಯ ಸ್ವರೂಪದಲ್ಲಿಲ್ಲವಾದರೂ ಅರಮನೆಯ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದವು. ಆದರೆ ಇಂದು ಅವು ತಮ್ಮ ಹಿಂದಿನ ವರ್ಚಸ್ಸನ್ನು ಕಳೆದುಕೊಂಡು ಸ್ಮಾರಕಗಳಾಗುವತ್ತ ಹೆಜ್ಜೆ ಹಾಕಿವೆ.. ಆರ್ಥಿಕತೆ ಭೂಮಿಯಿಂಧ ಬಂಡವಾಳಕ್ಕೆ ಪರಿವರ್ತನೆ ಹೊಂದುವ ಪ್ರಕ್ರಿಯೆ ಸಾಮಾಜಿಕ ಹಾಗೂ ಆರ್ಥಿಕ ಸಂಬಂಧಗಳ ಮೇಲೆ ಪರಿಣಾಮ ಬೀರಿ ಹಳೆಯ ಊಳಿಗಮಾನ್ಯ ಸಂಬಂಧಗಳನ್ನು ಅಸ್ಪಷ್ಟಗೊಳಿಸಿ, ಅದರ ಹಿಡಿತವನ್ನು ಸಡಿಲ ಗೊಳಿಸಿತು.

ಸಿರಿ ಪಠ್ಯದಲ್ಲಿ ಬರುವ ವಿವರಗಳು ಬಂಟ ಸಮುದಾಯಕ್ಕೆ ಹೆಚ್ಚಾಗಿ ಸಂಬಂಧಿಸಿವೆ. ಸಿರಿಪಾಡ್ದನವನ್ನು ಬಂಟರಿಗೆ ಸೀಮಿತಗೊಳಿಸಿ ನೋಡುವ ವಿಧಾನವೂ ಇದೆ. ಭೂಮಿಯ ಅಧಿಕಾರವನ್ನು ಪಡೆಯುವುದು, ಗ್ರಾಮದ ಮೇಲೆ ಹಿಡಿತ ಸಾಧಿಸುವುದು ಮುಂತಾದವು ಪಾಡ್ದನದಲ್ಲಿ ಈ ಸಮುದಾಯಕ್ಕೆ ಸಂಬಂಧಪಟ್ಟಂತೆ ಸಿಗುವ ವಿವರಗಳು. ಸಿರಿ ಪಠ್ಯದಲ್ಲಿ ಬರುವ ಎಲ್ಲ ಗುತ್ತು ಮನೆಗಳೂ ಒಂದಷ್ಟು ಪ್ರದೇಶದ ಆಳ್ವಿಕೆಯನ್ನು ನಡೆಸುತ್ತಿದ್ದವು. ಸಿರಿ ತಾನು ಅಧಿಕಾರ ಪಡೆಯಬೇಕೆಂದು ಬಂಡಾಯವೆದ್ದಾಗ ಗುತ್ತು ಮನೆಗಳು ಅದನ್ನು ಮಾನ್ಯ ಮಾಡದೆ ವಿರೋಧಿಸಿದವು. ಸಿರಿಯ ಸ್ವಾಭಿಮಾನ ಹಾಗೂ ಧೋರಣೆಗಳು ಗುತ್ತು ಮನೆಯವರಿಗೆ ಇಷ್ಟವಾಗಲಿಲ್ಲ. ಪಿತೃಪ್ರಧಾನ ವ್ಯವಸ್ಥೆಯನ್ನು ಧಿಕ್ಕರಿಸಿ ಮಾತೃಪ್ರಧಾನ ವ್ಯವಸ್ಥೆಗೆ ಕೌಟುಂಬಿಕ ನೆಲೆಯಲ್ಲಿ ಪರಿವರ್ತನೆ ತಂದ ಸಿರಿ ಮತ್ತೊಮ್ಮೆ ವಿರೋಧಿ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ. ಮಾತೃವಂಶೀಯತೆಗೆ ಸಿರಿಯೇ ಮೂಲವಲ್ಲದಿದ್ದರೂ ಬಂಟ ಸಮುದಾಯದ ಕುಟುಂಬ ರಾಜಕೀಯದ ವಿಚಾರ ಬಂದಾಗ ಸಿರಿಯ ನಿರ್ಧಾರ ಒಂದು ಪ್ರಮುಖ ತಿರುವು. ಅದೇ ರೀತಿ ಮಾತೃವಂಶೀಯತೆಯೂ ಬಂಧುತ್ವ ನೆಲೆಗಿಂತ ಹೆಚ್ಚು ಅಧಿಕಾರದ ನೆಲೆಗೇ ಅಂಟಿಕೊಂಡಿತು. ಸಿರಿಯನ್ನು ಬಂಟರ ಮೂಲಸ್ತ್ರಿ ಎಂಬುದಾಗಿ ಕರೆಯುವುದು ವಾಡಿಕೆ. ಆದರೆ ಬಂಟರು ಸಿರಿಯನ್ನು ತಮ್ಮ ಪ್ರತಿನಿಧಿಯಾಗಿ ಅಥವಾ ಕುಲದೈವವಾಗಿ ಪೂಜಿಸಿಕೊಂಡು ಬರುತ್ತಿರುವುದು ತುಳುನಾಡಿನಲ್ಲಿ ಅಷ್ಟಾಗಿ ಕಂಡು ಬರುವುದಿಲ್ಲ. ಗು‌ತ್ತು ಮನೆಗಳು ಭೂತಾರಾಧನೆಗೆ ಹೆಚ್ಚಿನ ಮಹತ್ವವನ್ನು ನೀಡಿವೆಯೇ ಹೊರತು ಸಿರಿ ಆರಾಧನೆಗಲ್ಲ. ಎಲ್ಲ ಸಮುದಾಯಗಳೂ ತಮ್ಮ ತಮ್ಮ ಅಸ್ತಿತ್ವಕ್ಕಾಗಿ ಮಠ ಹಾಗೂ ಗುರುವಿಗಾಗಿ ಹುಡುಕಾಡುತ್ತಿರುವ ಇಂದಿನ ಸಂದರ್ಭದಲ್ಲಿ ಸಿರಿಯ ವಿಚಾರ ಬಂದಾಗ ಬಂಟರೇಕೆ ಹಿಂದೇಟು ಹಾಕಿದರು ಎನ್ನುವ ಪ್ರಶ್ನೆಯೂ ಇಲ್ಲಿ ಹುಟ್ಟಿಕೊಳ್ಳುತ್ತದೆ. ಅದೇ ರೀತಿ ಸಿರಿ ಆಚರಣೆಯ ಸಂದರ್ಭದಲ್ಲಿ ಪ್ರತಿಷ್ಠಿತ ಗುತ್ತು ಮನೆಯವರು ಸಿರಿ ಆವೇಶಕ್ಕೆ ಅಥವಾ ಸೂಕೆಗೆ ಒಳಗಾಗದೆ ದೂರವೇ ಉಳಿಯುತ್ತಾರೆ. ಆರ್ಥಿಕವಾಗಿ ಹಿಂದುಳಿದ ಬಂಟ ಮಹಿಳೆಯರಿಗೆ ಹಾಗೂ ಕೆಳಜಾತಿಯ ಮಹಿಳೆಯರಿಗೆ ಸಿರಿ ಬರುವುದು ಸಾಮಾನ್ಯ. ಇಲ್ಲಿರುವ ಪ್ರಶ್ನೆಯೆಂದರೆ ಸಿರಿಯ ಸೂಕೆ ಬರದಂತೆ ಗುತ್ತು ಮನೆಯವರು ಎಚ್ಚರಿಕೆ ವಹಿಸುವುದು ಯಾಕೆ ಎನ್ನುವುದು. ಇನ್ನು ಆಚರಣೇಯ ಸಂದರ್ಭದಲ್ಲಿ ಮಹಿಳೆಯರು ಜಾತಿಗನುಗುಣವಾಗಿ ಬೇರೆಬೇರೆ ಜಾಗಗಳಲ್ಲಿಯೇ ಸೇರುತ್ತಾರೆ. ಸಿರಿ ಬಂಟ ಜಾತಿಗೆ ಸೇರಿದ್ದರೂ ಅವಳ ಆಚರಣೆ ಸಂದರ್ಭದಲ್ಲಿ ಎಲ್ಲ ಜಾತಿಯವರೂ ಸೇರುತ್ತಾರೆ. ಹೀಗಾಗಿ ಸಿರಿಯನ್ನು ಒಂದು ಜಾತಿಗೆ ಸೀಮಿತಗೊಳಿಸಿ ನೋಡಲು ಸಾಧ್ಯವಾಗುವುದಿಲ್ಲ. ಸಿರಿಯ ಹೋರಾಟದ ಲಾಭವನ್ನು ಬಂಟ ಜನಾಂಗ ಪಡೆದುಕೊಂಡಿದ್ದಂತೂ ನಿಜ. ಮಾತೃವಂಶೀಯತೆಯಿಂದಾಗಿ ಭೂ ಸಂಬಂಧಗಳಲ್ಲಿ ವ್ಯಾಪಕ ಬದಲಾವಣೆಗಳಾದವು.

ವಿಜಯನಗರೋತ್ತರ ಸಂದರ್ಭದ ತುಳುನಾಡು ಜೈನ ಅರಸುಮನೆತನಗಳ ಆಳ್ವಿಕೆಗೆ ಒಳಪಟ್ಟಾಗ ಬಂಟರ ಗುತ್ತು ಮನೆಗಳು ಪ್ರಮುಖ ಪಾತ್ರ ವಹಿಸುತ್ತಿದ್ದವು. ಈ ಕಾರಣದಿಂದಾಗಿ ಗುತ್ತಿನ ಆಡಳಿತಕ್ಕಾಗಿ ಸಂಘರ್ಷಗಳು ನಡೆಯುತ್ತಿದ್ದವು. ಗುತ್ತು ಕುಟುಂಬದ ನೆಲೆಯಿಂದ ರೂಪುಗೊಂಡ ಆಡಳಿತ ಘಟಕವಾದ್ದರಿಂದ ಅದರ ಮೇಲೆ ಮಾತೃವಂಶೀಯತೆಯ ಪ್ರಭಾವ ದಟ್ಟವಾಗಿತ್ತು. ಆದರೆ ಭೂಸುಧಾರಣೆ ಜಾರಿಗೆ ಬಂದು ಗುತ್ತು ಮನೆಗಳು ತಮ್ಮ ಹಿಂದಿನ ವರ್ಚಸ್ಸನ್ನು ಕಳೆದುಕೊಂಡಾಗ ಸಹಜವಾಗಿಯೇ ಗುತ್ತಿಗೆ ಸಂಬಂಧಿಸಿದ ಆಚರಣೆಗಳೂ ಮಂಕಾಗತೊಡಗಿದವು. ಭೂಮಿ ತನ್ನ ಮಹತ್ವವನ್ನು ಕಳೆದುಕೊಂಡು ಬಂಡವಾಳ ಹಾಗೂ ನಗರ ಜೀವನ ಪ್ರಧಾನವಾಗಿ ಕಾಣಿಸತೊಡಗಿದಾಗ ಹಿಂದೆ ಇದ್ದ ಆಚರಣೆ ಹಾಗೂ ನಂಬಿಕೆಗಳು ಸಾಂಕೇತಿಕವಾಗತೊಡಗಿದವು. ಆದರೆ ತುಳುನಾಡಿನಿಂದ ವಲಸೆ ಹೋಧ ಜನವರ್ಗ ಉದ್ಯೋಗ, ಉದ್ದಿಮೆಗಳಿಂದ ಶ್ರೀಮಂತರಾಗಿ ಮತ್ತೆ ಹಳೆಯ ದೇವಾಲಯ, ಭೂತಾಲಯಗಳನ್ನು ಜೀರ್ಣೋದ್ದಾರ ಮಾಡುವ ಕಾರ್ಯಕ್ಕೆ ಇಳಿದಾಗ ತುಳುನಾಡಿನ ದೈವಗಳು ಮತ್ತೊಮ್ಮೆ ಪ್ರಾಮುಖ್ಯತೆಯನ್ನು ಪಡೆದುಕೊಂಡವು. ಭೂಮಿಯನ್ನು ಕಳೆದು ಕೊಂಡರೂ ಭೂತಾರಾಧನೆಯ ಮೂಲಕ ಗುತ್ತು ತನ್ನ ಹಿಂದಿನ ವೈಭವವನ್ನು ಮರುಕಳಿಸುವ ಪ್ರಯತ್ನವನ್ನು ಮಾಡುತ್ತಿರುವುದನ್ನು ತುಳುನಾಡಿನಲ್ಲಿ ಇಂದು ಕಾಣಬಹುದಾಗಿದೆ. ಇವೆಲ್ಲವೂ ಸಾಂಸ್ಕೃತಿಕ ರಾಜಕೀಯದ ಭಾಗವಾಗಿದ್ದು ಅಧಿಕಾರ ಹಾಗೂ ಸವಲತ್ತುಗಳಿಂದ ನಿರ್ದೇಶಿಸಲ್ಪಟ್ಟಿದೆ. ಹೀಗೆ ಬಂಟ ಜನಾಂಗ ಮತ್ತೊಮ್ಮೆ ತನ್ನ ಹಿಂದಿನ ಊಳಿಗಮಾನ್ಯ ಬದುಕನ್ನು ಬಂಡವಾಳದ ಮೂಲಕ ಪುನರ್ ಅಭಿನಯಿಸುವ ಪ್ರಯತ್ನದಲ್ಲಿ ತೊಡಗಿದೆ. ಈ ಪ್ರಯತ್ನದಲ್ಲಿ ಭೂತಾರಾಧನೆಗೆ ಹೆಚ್ಚಿನ ಪ್ರಾಶಸ್ತ್ಯ ಸಿಕ್ಕಿದೆ. ಅದರಲ್ಲೂ ಕುಟುಂಬದ ದೈವಗಳು ಹೆಚ್ಚಿನ ಆರಾಧನೆಗೊಳ್ಳುತ್ತಿವೆ. ಇದು ಬಂಟ ಜನಾಂಗದ ಅಸ್ತಿತ್ವದ ಪ್ರಶ್ನೆಯಾಗಿ ಮೇಲ್ನೋಟಕ್ಕೇ ಕಂಡುಬರುತ್ತದೆ. ಭೂತಾರಾಧನೆಯ ಮೂಲಕ ಚದುರಿಹೋದ ಕುಟುಂಬಸ್ಥ ರನ್ನು ಒಂದೆಡೆಗೆ ಸೆಳೆಯುವ ಪ್ರಯತ್ನಗಳು ನಡೆಯುತ್ತಿವೆ. ಇಂಥ ಪರಿಸ್ಥಿತಿಯಲ್ಲಿ ಸಿರಿ ಬಂಟರಿಗೆ ಪ್ರಮುಖ ದೈವವಾಗಿ ಕಾಣಬೇಕಾಗಿತ್ತು. ಆದರೆ ತುಳುನಾಡಿನ ಎಷ್ಟೋ ಬಂಟರಿಗೆ ಸಿರಿಯ ಬಗೆಗೆ ಹೆಚ್ಚಿನ ಮಾಹಿತಿಯೂ ಇಲ್ಲ ಹಾಗೂ ಅವರು ಸಿರಿ ಆಚರಣೆಗಳಲ್ಲಿ ಭಾಗವಹಿಸುವುದೂ ಇಲ್ಲ. ಆದರೂ ಸಿರಿಯನ್ನು ಬಂಟರ ಮೂಲಸ್ತ್ರಿ ಎಂಬುದಾಗಿ ಕರೆಯಲಾಗುತ್ತಿದೆ. ಊಳಿಗಮಾನ್ಯತೆ ಹಾಗೂ ಮಾತೃವಂಶೀಯತೆಯ ವಿಚಾರ ಬಂದಾಗ ಸಿರಿ ತುಳುನಾಡಿನ ಹೆಣ್ಣಾಗಿ ಕಂಡು ಬರುತ್ತಾಳೆಯೇ ಹೊರತು ಯಾವುದೋ ಒಂದು ಜಾತಿಗೆ ಸೇರಿದ ಹೆಣ್ಣಾಗಿ ಅಲ್ಲ. ಸಿರಿ ಪಠ್ಯ ಸಾರುವ ಸಂದೇಶ ಸಾರ್ವತ್ರಿಕವಾದುದು. ರಾಜ್ಯವನ್ನು ಆಳುವ ಹಕ್ಕು, ಅಧಿಕಾರವನ್ನು ಪಡೆಯುವ ಹಕ್ಕು ಹಾಗೂ ಸ್ವತಂತ್ರವಾಗಿ ಜೀವಿಸುವ ಹಕ್ಕು ಹೆಣ್ಣಿಗಿದೆ ಎನ್ನುವುದೇ ಸಿರಿ ಪಠ್ಯದ ಮೂಲ ಆಶಯ. ಹೀಗಾಗಿ ಸಿರಿ ಪಠ್ಯವನ್ನು ವಿಶಾಲಾರ್ಥದಲ್ಲಿ ಅರ್ಥೈಸಿ ಅದರ ಸಂಘರ್ಷದ ನೆಲೆಗಳನ್ನು ವಿಶ್ಲೇಷಿಸಬೇಕಾಗುತ್ತದೆ.