ಚರಿತ್ರೆಯ ಲಿಖಿತ ಹಾಗೂ ಮೌಖಿಕ ಕಥನಗಳಲ್ಲಿ ಹೆಣ್ಣು ನಿರೂಪಿತಗೊಂಡಿರುವುದು ಎರಡು ಬಗೆಗಳಲ್ಲಿ. ಅವುಗಳೆಂದರೆ ಹೆಣ್ಣನ್ನು ಅಸಹಾಯಕ ಹಾಗೂ ಅಸಾಮಾನ್ಯ ಎಂಬುದಾಗಿ ಚಿತ್ರಿಸಿರುವುದು. ಲೌಕಿಕ ಬದುಕಿನಲ್ಲಿ ಹೆಣ್ಣು ಅಸಹಾಯಕಳಾಗಿದ್ದರೆ, ಅಲೌಕಿಕ ಪ್ರಪಂಚದಲ್ಲಿ ಅವಳು ಅಸಾಮಾನ್ಯಳಾಗಿರುತ್ತಾಳೆ. ಇದು ಬಹುತೇಕ ಸಾಹಿತ್ಯ ಹಾಗೂ ಚರಿತ್ರೆ ಬರವಣಿಗೆಗಳಲ್ಲಿ ಕಂಡುಬರುವ ವಿಚಾರ. ವೈದಿಕ ಸಾಹಿತ್ಯದಲ್ಲಿ ಬರುವ ‘ದೇವಿ’ಯ ಕಲ್ಪನೆ ಸೃಷ್ಟಿಯ ಮೂಲಕ್ಕೆ ಹೋಗುವಂತದ್ದು. ಅದು ಎಲ್ಲ ದೇವಾನುದೇವತೆಗಳನ್ನೂ ಆವರಿಸಿಕೊಂಡು ಬಿಡುತ್ತದೆ. ಆದರೆ ವಾಸ್ತವದಲ್ಲಿ ಅದರ ಸಾಮಾರ್ಥ್ಯ ಅಡಕವಾಗಿರುವುದು ಸೀಮಿತ ನೆಲೆಯಲ್ಲಿ ಮಾತ್ರ. ಪುರೋಹಿತಶಾಹಿ ವ್ಯವಸ್ಥೆ ವೈದಿಕ ದೇವರುಗಳ ಮೂಲಕ ತನ್ನ ಅಸ್ತಿತ್ವವನ್ನು ಗಟ್ಟಿಗೊಳಿಸಿಕೊಂಡು, ವಿಶಾಲ ಭಾರತದ ಜನಸಮುದಾಯಗಳ ಧಾರ್ಮಿಕ ನಂಬಿಕೆಗಳನ್ನು ಪ್ರಭಾವಿಸಿ ಆವರಿಸಿಕೊಂಡಿತು. ಅಲೌಕಿಕ ದೇವತೆಗಳ ಲೌಕಿಕ ರೂಪವೇ ಪುರೋಹಿತಶಾಹಿ ವ್ಯವಸ್ಥೆ ಎನ್ನುವಂತೆ ಬಿಂಬಿಸಲಾಯಿತು. ಈ ವ್ಯವಸ್ಥೆಯೊಳಗಡೆ ದೇವತೆಯ ರೂಪದಲ್ಲಿ ಹೆಣ್ಣು ಅಸಾಮಾನ್ಯಳಾಗಿ ಕಂಡುಬಂಧರೂ, ವಾಸ್ತವ ನೆಲೆಯಲ್ಲಿ ಹೆಣ್ಣು ಅಸಹಾಯಕಳಾಗಿಯೇ ಜೀವನ ನಡೆಸುವ ಒತ್ತಾಯಕ್ಕೆ ಒಳಗಾದಳು. ಮೌಖಿಕ ಕಥನಗಳಲ್ಲಿ ಹೆಣ್ಣು ಅನ್ಯಾಯವನ್ನು ಪ್ರತಿಭಟಿಸುವ ಸಾಮಾರ್ಥ್ಯವನ್ನು ಪಡೆಯುವುದು ಇಹಲೋಕದ ಯಾತ್ರೆಯನ್ನು ಮುಗಿಸಿದ ಬಳಿಕ. ಉದಾಹರಣೆಗೆ ಸತಿಪದ್ಧತಿಯನ್ನು ನೋಡುವುದಾದರೆ, ಬದುಕಿದ್ದಾಗ ಗಂಡನಿಗೆ ಅಧೀನಳಾಗಿದ್ದವಳು ಸಹಗಮನವಾದ ಮೇಲೆ ಗಂಡನನ್ನೇ ಮೆಟ್ಟಿ ನಿಲ್ಲುವ ಶಕ್ತಿಶಾಲಿ ದೇವತೆಯಾಗಿ ರೂಪುಗೊಳ್ಳುತ್ತಾಳೆ. ಅದೇರೀತಿ ಮಹಾಸತಿಯಾಗಿ ಜನರಿಂದ ಆರಾಧನೆಗೊಳ್ಳುತ್ತಾಳೆ. ಇಹ ಲೋಕದಲ್ಲಿ ಹಲವಾರು ಬಗೆಯ ಕಷ್ಟನಷ್ಟಗಳಿಗೆ ಒಳಗಾಗುವ ಹೆಣ್ಣು ಪರ ಲೋಕದಲ್ಲಿ ದೈವವಾಗಿ ರೂಪುಗೊಳ್ಳುವುದು ಅಚ್ಚರಿಯ ಅಧ್ಯಯನಗಳಿಗೆ ಎಡೆಮಾಡಿಕೊಡುತ್ತದೆ.

ಸಿರಿ ಆರಾಧನೆಯ ಸಂದರ್ಭದಲ್ಲಿ ಸಿರಿ ಪಾಡ್ದನದಲ್ಲಿರುವ ಎಲ್ಲ ಮಹಿಳಾ ಸಂಬಂಧಿ ವಿಚಾರಗಳೂ ಬಂದುಹೋಗುತ್ತವೆ. ಮಹಿಳೆಯರೇ ಈ ಆರಾಧನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಸಿರಿ ಆವೇಶ ಬರುವ ಮಹಿಳೆಯರು ಅಲೌಕಿಕ ನೆಲೆಗೆ ತಲುಪಿ ಲೌಕಿಕ ಬದುಕಿನಲ್ಲಿ ಅನುಭವಿಸುವ ಸಮಸ್ಯೆಗಳನ್ನು ಪರಸ್ಪರ ಹಂಚಿಕೊಳ್ಳುತ್ತಾರೆ. ಆದರೆ ಸಿರಿ ಆರಾಧನೆಯಲ್ಲಿ ‘ಕುಮಾರ’ ಎನ್ನುವ ಪಾತ್ರ ನಿರ್ಣಾಯಕವಾಗಿ ಕಂಡುಬರುವುದು ಮತ್ತೊಮ್ಮೆ ಹೆಣ್ಣನ್ನು ಅಸಹಾಯಕಳಾಗಿ ಚಿತ್ರಿಸಿದಂತೆಯೇ ಕಂಡುಬರುತ್ತದೆ. ಸಿರಿ ಆರಾಧನೆಯಲ್ಲಿ ಹೆಣ್ಣು ಮಾನಸಿಕ ಅಸ್ವಸ್ಥತೆಗೆ ಒಳಗಾದವಳಂತೆ ಕಂಡುಬರುತ್ತಾಳೆ. ಆ ಸ್ಥಿತಿಯಲ್ಲಿ ಅವಳು ಹೆಣ್ಣಿನ ಸಮ್ಯೆಗಳನ್ನು ಪ್ರಕಟಿಸುತ್ತಾಳೆ ಹಾಗೂ ವಾಸ್ತವಕ್ಕೆ ಮರಳುವಾಗ ಏನನ್ನೋ ಸಾಧಿಸಿದಂತೆ ತೃಪ್ತಿ ಪಡುತ್ತಾಳೆ. ಇವೆಲ್ಲವೂ ಜಾತ್ರೆಯ ಅಥವಾ ಆರಾಧನೆಯ ಸಂದರ್ಭದಲ್ಲಿ ನಡೆಯುವ ವಿಧಿ ವಿಧಾನಗಳು. ಹೆಣ್ಣು ಆಚರಣೆಯ ಸಂದರ್ಭದಲ್ಲಿ ಅತಿಮಾನುಷವಾಗಿ ವರ್ತಿಸಿ ಕೊನೆಗೆ ಮಾನಸಿಕ ಸ್ಥಿರತೆಯನ್ನು ಕಂಡುಕೊಳ್ಳುತ್ತಾಳೆ ಅಥವಾ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುತ್ತಾಳೆ ಎನ್ನುವ ತೀರ್ಮಾನಕ್ಕೆ ಬರುವುದು ಸ್ವಲ್ಪ ಕಷ್ಟವಾಗುತ್ತದೆ. ಏಕೆಂದರೆ ಆರಾಧನೆಯೊಳಗೆ ಕಂಡುಕೊಳ್ಳುವ ಲೌಕಿಕ ಹಾಗೂ ಅಲೌಕಿಕ ಜಗತ್ತಿಗೂ, ವಾಸ್ತವ ನೆಲೆಯ ಲೌಕಿಕ ಹಾಗೂ ಅಲೌಕಿಕ ಜಗತ್ತಿಗೂ ಸಾಕಷ್ಟು ವ್ಯತ್ಯಾಸಗಳಿವೆ. ಹೆಣ್ಣು ಸಮಾಜದಲ್ಲಿ ಮುಖಾಮುಖಿಯಾಗುತ್ತಿರುವುದು ವಾಸ್ತವದ ನೆಲೆಯಲ್ಲಿ. ಅಲ್ಲಿ ಎದುರಾಗುವ ಸಮಸ್ಯೆಗಳು ಆರಾಧನೆಯಲ್ಲಿ ಪರಿಹಾರವನ್ನು ಕಂಡುಕೊಳ್ಳುವ ಸ್ವರೂಪದ್ದಾಗಿರುವುದಿಲ್ಲ. ಹಾಗಾಗಿ ಸಿರಿ ಆರಾಧನೆಯಲ್ಲಿ ಎತ್ತಲಾಗುವ ಪ್ರಶ್ನೆಗಳನ್ನು ಪ್ರತಿಭಟನೆ ಎಂಬುದಾಗಿ ವ್ಯಾಖ್ಯಾನಿಸಿ, ಅದರ ಮೂಲಕ ಹೆಣ್ಣು ನ್ಯಾಯವನ್ನು ಪಡೆದುಕೊಳ್ಳುತ್ತಾಳೆ ಎನ್ನುವುದು ಮತ್ತೊಮ್ಮೆ ಪರಿಶೀಲಿಸಬೇಕಾದ ತೀರ್ಮಾನವಾಗಿ ಕಂಡುಬರುತ್ತದೆ. ಇದರರ್ಥ ಸಿರಿ ಸಂಧಿಯಲ್ಲಿರುವ ಆಶಯಗಳು ಅಥವಾ ಸಿರಿ ಆರಾಧನೆಯ ಸಂದರ್ಭದಲ್ಲಿ ವ್ಯಕ್ತವಾಘುವ ನೋವು ಹಾಗೂ ಸಮಾಧಾನಗಳು ಪ್ರಸ್ತುತ ಸಮಾಜದ ಸಮಸ್ಯೆಗಳನ್ನು ಸಮರ್ಥವಾಗಿ ಧ್ವನಿಸುತ್ತಿಲ್ಲ ಎಂದಲ್ಲ. ಬದಲಾಗುತ್ತಿರುವ ಸಾಮಾಜಿಕ ಹಾಗೂ ಆರ್ಥಿಕ ಸಂದರ್ಭಗಳಲ್ಲಿ ಸಮಸ್ಯೆಗಳ ಸ್ವರೂಪವೂ ಬದಲಾಗುತ್ತಿದೆ. ಸಾಮಾಜಿಕ ಹಾಗೂ ಆರ್ಥಿಕ ಸಂಬಂಧಗಳೂ ಏರುಪೇರಾಗುತ್ತಿದೆ. ಇಂಥ ಸಂಕೀರ್ಣ ಕಾಲಘಟ್ಟದಲ್ಲಿ ಜನಪದ ಸಾಹಿತ್ಯ ಹಾಗೂ ಆಚರಣೆಗಳು ಜನರ ಬದುಕನ್ನು ಪ್ರಭಾವಿಸುವಲ್ಲಿ ಹಾಗೂ ಹೊಸ ಬದುಕನ್ನು ಕಟ್ಟುವಲ್ಲಿ ಎಷ್ಟರಮಟ್ಟಿಗೆ ವಿಶ್ವಾಸವನ್ನು ತುಂಬಬಲ್ಲವು ಎನ್ನುವ ಪ್ರಶ್ನೆಯೇ ಅದರ ಮಿತಿಯಾಗಿಯೂ ಕಂಡುಬರುತ್ತದೆ.

ತುಳುನಾಡಿನಲ್ಲಿ ಸಿರಿಯ ಆರಾಧನೆ ಒಂದು ಧಾರ್ಮಿಕ ಆಚರಣೆಯಾಗಿ ಉಳಿದಿದೆಯೇ ಹೊರತು ಸಾಮಾಜಿಕ ಸಂಬಂಧಗಳ ಪ್ರಶ್ನೆಯಾಗಿ ಉಳಿದಿಲ್ಲ. ಇದು ತುಳುನಾಡಿನ ಎಲ್ಲ ಧಾರ್ಮಿಕ ಆಚರಣೆಗಳಿಗೆ ಸಂಬಂಧಿಸಿದ ಪ್ರಶ್ನೆಯೂ ಆಗಿದೆ. ಶ್ರೀಮಂತವರ್ಗಗಳು ತಮ್ಮ ಅಂತಸ್ತಿಗೆ ಸರಿಹೊಂದುವಂತೆ ಪ್ರಶ್ನೆಯೂ ಆಗಿದೆ. ಶ್ರೀಮಂತವರ್ಗಗಳು ತಮ್ಮ ಅಂತಸ್ತಿಗೆ ಸರಿಹೊಂದುವಂತೆ ಧಾರ್ಮಿಕ ಆಚರಣೆಗಳನ್ನು ನಡೆಸುತ್ತಿದ್ದು, ಇದೊಂದು ಸಾಮಾಜಿಕ ಪ್ರತಿಷ್ಠೆ ಹಾಗೂ ಗೌರವದ ಸಂಗತಿಯಾಗಿದೆ. ಆರಾಧನೆಯ ಸಂದರ್ಭದಲ್ಲಿ ನಡೆಯುವ ನ್ಯಾಯ ತೀರ್ಮಾನಗಳು ಧಾರ್ಮಿಕ ಚೌಕಟ್ಟಿನಲ್ಲಿದ್ದು, ಅದರ ಮೂಲಕ ತಮಗೆ ಬೇಕಾದ ನ್ಯಾಯವನ್ನು ಬಲಿಷ್ಠ ಜಾತಿಗಳು ಪಡೆದುಕೊಳ್ಳುತ್ತವೆ. ಇನ್ನುಳಿದಂತೆ ಸಾಮಾಜಿಕ ಅಸಮಾನತೆ ಆರಾಧನೆಯಲ್ಲೂ ಯಥಾಪ್ರಕಾರ ಮುಂದುವರಿಯಿತು. ಆರಾಧನೆಗಳು ಉತ್ಸವದ ರೀತಿಯಲ್ಲಿ ನಡೆಯುವುದರಿಂದಾಗಿ ಅವು ಅದರಲ್ಲಿ ಪಾಲ್ಗೊಳ್ಳುವವರನ್ನು ಅಲೌಕಿಕತೆಗೆ ಕೊಂಡೊಯ್ಯುತ್ತವೆ. ಲೌಕಿಕ ಜಗತ್ತಿನ ಬದುಕಿನ ಪ್ರಶ್ನೆಗಳು ಅಲ್ಲಿ ಚರ್ಚೆಗೊಂಡು ವಾಸ್ತವ ಬದುಕನ್ನು ಅಣಕಿಸುತ್ತಿರುತ್ತವೆ. ಹೀಗೆ ಪಾಡ್ದನಗಳ ಆಶಯಗಳು ಅತಿರಂಜಿತವಾಗಿ, ಉತ್ಸವಗಳ ರೂಪದಲ್ಲಿ ಧಾರ್ಮಿಕ ಚೌಕಟ್ಟಿನೊಳಗೆ ಸಿಕ್ಕಿಹಾಕಿಕೊಂಡವು. ಈ ಕಾರಣದಿಂದಾಗಿ ಪಾಡ್ದನಗಳು ಜೀವಂತ ವಸ್ತುವನ್ನು ಒಳಗೊಂಡಿದ್ದರೂ ಅವು ಸಮಾಜಕ್ಕೆ ಮುಖಾಮುಖಿಯಾಗುವಲ್ಲಿ ಸೋಲಬೇಕಾಯಿತು ಹಾಗೂ ಆರಾಧನೆಗಷ್ಟೆ ಸೀಮಿತಗೊಳ್ಳಬೇಕಾಯಿತು.

ವಿದ್ವಾಂಸರ ವಲಯಗಳಲ್ಲಿ, ಮೌಖಿಕ ಚರಿತ್ರೆ ಹಾಗೂ ಜಾನಪದ ಅಧ್ಯಯನಗಳಲ್ಲಿ ಈ ಮೌಖಿಕ ಕಥನಗಳು ಇಂದು ಹೆಚ್ಚು ಚರ್ಚೆಗೆ ಒಳಗಾಗುತ್ತಿವೆ. ಇಲ್ಲಿ ಆಯಾ ವಿದ್ವಾಂಸರ ದೃಷ್ಟಿಕೋನಕ್ಕನುಗುಣವಾಗಿ ಇವು ಬಳಕೆಯಾಗುತ್ತಿವೆ. ಚರಿತ್ರೆಕಾರರು ಮೌಖಿಕ ಚರಿತ್ರೆಯ ನೆಲೆಯಲ್ಲಿ ನೋಡಿದರೆ, ಜಾನಪದ ವಿದ್ವಾಂಸರು ಮೌಖಿಕ ಕಾವ್ಯಗಳ ನೆಲೆಯಲ್ಲಿ ಹಾಗೂ ಅಲ್ಲಿನ ನಂಬಿಕೆ, ಆಚರಣೆ ಹಾಗೂ ಸಂಪ್ರದಾಯಗಳ ಹಿನ್ನೆಲೆಯಲ್ಲಿ ನೋಡಿ ಅಧ್ಯಯನ ನಡೆಸಿದರು. ಅದೇ ರೀತಿ ಸಿರಿಯಂಥ ಪಾಡ್ದನ ಇಂದು ಸ್ತ್ರೀವಾದಿ ಚರ್ಚೆಗೆ ಹೆಚ್ಚಾಗಿ ಬಳಕೆಯಾಗುತ್ತಿದೆ. ಹೀಗೆ ಸಿರಿ ಪಠ್ಯವು ಮುಖ್ಯವಾಗಿ ಮೂರು ನೆಲೆಗಳಲ್ಲಿ ಚರ್ಚೆಗೊಳಗಾಗಿದೆ. ಅವುಗಳೆಂದರೆ ಪ್ರಾದೇಶಿಕ ನೆಲೆ,ಜಾತಿ/ಸಮುದಾಯದ ನೆಲೆ ಹಾಗೂ ವಿದ್ವಾಂಸರ ಸೈದ್ಧಾಂತಿಕ ನೆಲೆ. ಈ ಮೂರು ನೆಲೆಗಳಲ್ಲಿ ಸಿರಿ ಪಠ್ಯವನ್ನು ನೋಡುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಸ್ವತಂತ್ರ ಬದುಕು ಹಾಗೂ ಅಧಿಕಾರಕ್ಕಾಗಿ ಹೋರಾಡಿದ ಸಿರಿಯು ಇಂದು ಅದೇ ಬಗೆಯ ಅಸ್ತಿತ್ವಕ್ಕಾಗಿ ಹೋರಾಡುತ್ತಿರುವ ಜನವರ್ಗಗಳಿಗೆ, ಅದರಲ್ಲೂ ಸಮಾಜದ ಕೆಳಸ್ತರದ ವರ್ಗಗಳಿಗೆ, ಮಾದರಿಯಾಗಿದ್ದಾಳೆ. ಇಲ್ಲಿ ಕೆಳಸ್ತರವೆಂದರೆ ಆರ್ಥಿಕವಾಗಿ ಹಿಂದುಳಿದ, ಅಧಿಕಾರದಿಂದ ವಂಚಿತವಾದ ಹಾಗೂ ರಾಜ್ಯ-ಧರ್ಮ-ಪುರುಷ ಪ್ರಭುತ್ವಗಳ ಶೋಷಣೆಗೆ ಒಳಗಾದ ಸಮುದಾಯಗಳು ಎಂದರ್ಥ. ಇಲ್ಲಿ ಕಂಡುಬರುವುದು ಸಂಘರ್ಷಗಳಾದರೆ, ಶ್ರೀಮಂತ ವರ್ಗಗಳು ಸಿರಿ ಪಠ್ಯವನ್ನು ಬಳಸುವುದರಲ್ಲಿ ಹೊಂದಾಣಿಕೆ ಹಾಗೂ ಒಪ್ಪಂದಗಳು ಕಂಡುಬರುತ್ತವೆ. ಸಿರಿ ಪಠ್ಯವನ್ನು ಸೂಕ್ಷ್ಮ ಅಧ್ಯಯನಕ್ಕೆ ಒಳಪಡಿಸುತ್ತಾ ಹೋದಂತೆಲ್ಲಾ ಅದರೊಳಗಿನ ಸಂಘರ್ಷದ, ಹೊಂದಾಣಿಕೆಯ ಹಾಗೂ ಕುಟುಂಬ ಮೂಲದ ರಾಜ್ಯವ್ಯವಸ್ಥೆಯ ವಿಚಾರಗಳು ಅನಾವರಣಗೊಳ್ಳುತ್ತಾ ಹೋಗುತ್ತವೆ. ಸಿರಿ ಪಠ್ಯ ನಮ್ಮ ಸಂದರ್ಭಕ್ಕೆ ಮುಖಾಮುಖಿಯಾಗುತ್ತಿರುವುದು ಈ ಹಿನ್ನೆಲೆಯಲ್ಲಿಯೆ. ಸಿರಿ ಪಠ್ಯ ಹುಟ್ಟಿಕೊಂಡಿರುವ ಸಾಮಾಜಿಕ ಸಂದರ್ಭ ಹಾಗೂ ನಮ್ಮ ಕಾಲದ ಸಾಮಾಜಿಕ ಸಂದರ್ಭಗಳೆರಡನ್ನೂ ವಸ್ತುನಿಷ್ಠವಾಗಿ ನೋಡಿ, ಆ ಮೂಲಕ ಪಠ್ಯಕ್ಕೆ ಮುಖಾಮುಖಿಯಾದಾಗ ಮಾತ್ರ ಪಠ್ಯದ ಬಹುತ್ವದ ನೆಲೆಗಳನ್ನು ಗುರುತಿಸಲು ಸಾಧ್ಯ.