ತುಳುನಾಡಿನ ರಾಜಕೀಯ ಹಾಗೂ ಸಾಮಾಜಿಕ ಬದುಕು ಅಲ್ಲಿನ ಮೌಖಿಕ ಸಂಪ್ರದಾಯಗಳಲ್ಲಿ ಸಮರ್ಥವಾಗಿ ಪ್ರತಿನಿಧಿತವಾಗಿದೆ. ತುಳುನಾಡಿನ ರಾಜ್ಯ ವ್ಯವಸ್ಥೆ, ಸಾಮಾಜಿಕ ಸಂಬಂಧಗಳು, ಊಳಿಗಮಾನ್ಯ ಸ್ವರೂಪದ ಸಾಮಾಜಿಕ ರಚನೆ, ಬಂಧುತ್ವ ವ್ಯವಸ್ಥೆ ಮುಂತಾದ ವಿಚಾರಗಳು ಪಾಡ್ದನಗಳಲ್ಲಿ ತುಂಬಿಕೊಂಡಿವೆ. ತುಳುನಾಡಿನ ಮೌಖಿಕ ಸಂಪ್ರದಾಯಗಳು ಹಾಗೂ ಆರಾಧನಾ ವಿಧಾನಗಳು, ಅವುಗಳ ಕುರಿತಾದ ಮೌಖಿಕ ಸಾಹಿತ್ಯ ಹಾಗೂ ಅವು ಒಳಗೊಂಡಿರುವ ವಿಚಾರಗಳು ಇಂದು ಆಕಡೆಮಿಕ್‌ ವಲಯಗಳಲ್ಲಿ ವಿಸ್ತೃತವಾದ ಅಧ್ಯಯನಕ್ಕೆ ಒಳಗಾಗಿವೆ. ತುಳು ಜನಪದ ಸಾಹಿತ್ಯವನ್ನು ಮಹಾಕಾವ್ಯಗಳಾಗಿ ನೋಡುವ ಪ್ರಯತ್ನಗಳೂ ನಡೆದಿವೆ. ಅವು ಹೊಂದಿರುವ ಆಶಯಗಳು, ತುಳುನಾಡಿನ ಸಮುದಾಯಗಳ ಬದುಕನ್ನು ಚಿತ್ರಿಸುವ ಬಗೆ, ಆಚರಣೆಗಳ ವಿಶಿಷ್ಟತೆ, ಅವುಗಳಲ್ಲಿ ಕಂಡುಬರುವ ಲೋಕದೃಷ್ಟಿ ಹಾಗೂ ಅಲೌಕಿಕ ಜಗತ್ತನ್ನು ಸೃಷ್ಟಿಸಿ ಅದರ ಮೂಲಕ ಲೌಕಿಕ ಜಗತ್ತಿನ ಅನಿಷ್ಟಗಳನ್ನು ಟೀಕಿಸುವ ವಿಧಾನ ಮಹಾಕಾವ್ಯವೆನ್ನುವ ಪರಿಕಲ್ಪನೆಯೊಳಗೆ ಜನಪದ ಸಾಹಿತ್ಯ ವಿಶ್ಲೇಷಣೆಗೊಳ್ಳುವುದಕ್ಕೆ ಕಾರಣವಾಯಿತು. ಆದರೆ ಭಾರತದ ಸಂದರ್ಭದಲ್ಲಿ ಮಹಾಕಾವ್ಯ ಎನ್ನುವ ಪರಿಕಲ್ಪನೆ ವೈದಿಕ ನೆಲೆಯಿಂದ, ಅದರಲ್ಲೂ ಧಾರ್ಮಿಕ ಏಕಸ್ವಾಮ್ಯತೆಯ ಹಿನ್ನೆಲೆಯಿಂದ ರೂಪುಗೊಂಡಿರುವಂತದ್ದು. ಜನಪದ ಸಾಹಿತ್ಯವನ್ನು ಮಹಾಕಾವ್ಯಗಳೆಂದು ಕರೆಯುವಾಗ ಈ ಬಗೆಯ ಉದ್ದೇಶಗಳು ಇರುವುದಿಲ್ಲ. ಆದರೆ ಮಹಾಕಾವ್ಯ ಎನ್ನುವ ಪರಿಕಲ್ಪನೆಯೊಳಗಿನ ಸಾಂಸ್ಕೃತಿಕ ರಾಜಕೀಯವನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಮಹಾಕಾವ್ಯ ಪರಿಕಲ್ಪನೆ ರೂಪುಗೊಂಡಿರುವುದೇ ವೈಭವೀಕರಣದ ಹಿನ್ನೆಲೆಯಲ್ಲಿ. ಹಾಗಾಘಿ ಎರಡೂ ಬಗೆಯ ಸಾಹಿತ್ಯವನ್ನು ಒಂದೇ ತಕ್ಕಡಿಯಲ್ಲಿಟ್ಟು ನೋಡಲು ಸಾಧ್ಯವಾಗುವುದಿಲ್ಲ. ಏಕೆಂದರೆ ಉದ್ದೇಶ, ಗ್ರಹಿಕೆ ಹಾಗೂ ಧೋರಣೇಗಳು ಬೇರೆಬೇರೆಯಾಗಿರುತ್ತವೆ.

ವೈದಿಕ ಮಹಾಕಾವ್ಯಗಳಂತೆ ಜನಪದ ಸಾಹಿತ್ಯವನ್ನೂ ಅಖಂಡವಾಗಿ ಗ್ರಹಿಸುವುದಕ್ಕೆ, ಶ್ರೇಷ್ಠತೆಯ ಪ್ರತಿಪಾದನೆಗೆ ಅಥವಾ ಸ್ಥಳೀಯತೆಯನ್ನು ವಿಶ್ವಾತ್ಮಕತೆಯ ಮೂಲಕ ಗುರುತಿಸುವುದಕ್ಕೆ ಬಳಕೆ ಮಾಡಿದರೆ ಅದು ತನ್ನ ಸ್ವಂತಿಕೆ ಹಾಗೂ ವಿಶಿಷ್ಟತೆಗಳನ್ನು ಕಳೆದುಕೊಳ್ಳುತ್ತದೆ. ವೈದಿಕ ಸಾಹಿತ್ಯ ಹುಟ್ಟಿದ ಸಂದರ್ಭ ಹಾಗೂ ಅದರ ಆಶಯಗಳಿಗೂ, ಮೌಖಿಕ ಸಾಹಿತ್ಯ ಹುಟ್ಟಿದ ಸಂದರ್ಭ ಹಾಗೂ ಅದರ ಆಶಯಗಳಿಗೂ ಸಾಕಷ್ಟು ವ್ಯತ್ಯಾಸಗಳಿವೆ. ಈ ಎರಡೂ ಬಗೆಯ ಸಾಹಿತ್ಯದ ಲೋಕದೃಷ್ಟಿಯ ಸ್ವರೂಪ ಬೇರೆಬೇರೆಯದೇ ಆಗಿದೆ. ಜನಪದ ಸಾಹಿತ್ಯ ಜನಪದರಿಂದ ಹುಟ್ಟುವಾಗ ಇದ್ದಂಥ ಚಾರಿತ್ರಿಕ ಸಂದರ್ಭ ಇಂದು ವಿಶ್ಲೇಷಣೆಗೆ ಒಳಗಾಗಬೇಕಾಗಿದೆ. ವೈದಿಕ ಸಾಹಿತ್ಯ ಅಥವಾ ಲಿಖಿತ ಸಾಹಿತ್ಯ ಹುಟ್ಟಿದಾಗಿನ ಚಾರಿತ್ರಿಕ ಸಂದರ್ಭದ ಬಗ್ಗೆ ಸಾಕಷ್ಟು ಅಧ್ಯಯನಗಳು ನಡೆದಿವೆ. ರಾಜಾಶ್ರಯದಲ್ಲಿ ನಿರ್ಮಾಣಗೊಳ್ಳುವ ಸಾಹಿತ್ಯಕ್ಕೂ ಯಾವುದೇ ಸ್ವರೂಪದ ಆಶ್ರಯವಿಲ್ಲದೆ ತಮ್ಮಷ್ಟಕ್ಕೇ ತಾವೇ ಹುಟ್ಟಿಕೊಳ್ಳುವ ಸಾಹಿತ್ಯಕ್ಕೂ ಹೋಲಿಕೆ ಸಾಧ್ಯವಿಲ್ಲ. ನಾಡಿನಿಂದಾಚೆಗೆ ಜೀವಿಸಬೇಕಾದ ಒತ್ತಾಯಕ್ಕೆ ಒಳಗಾಗಿದ್ದ ಸಮುದಾಯಗಳೇ ಬಹುತೇಕ ಪಾಡ್ದನಗಳನ್ನು ಹುಟ್ಟುಹಾಕಿದವರು. ಕೃಷಿ ಸಂಬಂಧಿ ಕೆಲಸಕಾರ್ಯಗಳ ಸಂದರ್ಭಗಳಲ್ಲಿ ಹಾಗೂ ಆಚರಣೆಗಳ ಸಂದರ್ಭಗಳಲ್ಲಿ ಪಾಡ್ದನಗಳು ಕಂಠಸ್ಥವಾಗಿ ನಿರರ್ಗಳವಾಗಿ ಹರಿದುಬರುತ್ತಿದ್ದವು. ಇವು ಒಳಗೊಂಡಿರುವ ವಿಚಾರಗಳು ಮಹಾಕಾವ್ಯ ಎನ್ನುವ ಪರಿಕಲ್ಪನೆಯೊಳಗೆ ಸೇರುತ್ತವೆಯೋ ಅಥವಾ ಇಲ್ಲವೋ ಎನ್ನುವುದಕ್ಕಿಂತ ಮುಖ್ಯವಾಗಿ ಅವು ಪ್ರತಿನಿಧಿಸುವ ಸಮುದಾಯಗಳ ಬದುಕು, ಹೋರಾಟ ಹಾಗೂ ಅಸ್ತಿತ್ವದ ಪ್ರಶ್ನೆಗಳು ಪ್ರಧಾನವಾಗುತ್ತವೆ. ಜನಪದ ಸಾಹಿತ್ಯವನ್ನು ವೈದಿಕ ಹಿನ್ನೆಲೆಯ ಮಹಾಕಾವ್ಯದ ಚೌಕಟ್ಟಿಗೆ ತರುವ ಪ್ರಯತ್ನಗಳೂ ನಡೆದಿವೆ. ಜನಪದ ಆಚರಣೇಗಳು ಹಾಗೂ ಸಂಪ್ರದಾಯಗಳ ಮೇಲೆ ಪ್ರಭಾವ ಬೀರಿ ಅವುಗಳನ್ನು ತಮ್ಮ ಚೌಕಟ್ಟಿನೊಳಗೆ ತರುವ ಪ್ರಯತ್ನವನ್ನು ಮಾಡಿದ ರೀತಿಯಲ್ಲಿಯೇ ಜನಪದ ಸಾಹಿತ್ಯವನ್ನೂ ಬಳಕೆಮಾಡಿಕೊಳ್ಳಲಾಗಿದೆ. ಈ ರೀತಿಯಾಗಿ ಮಹಾಕಾವ್ಯದ ಚೌಕಟ್ಟಿಗೆ ಒಳಗಾಗುವ ಜನಪದ ಸಾಹಿತ್ಯ ಜನಪದರ ಬದುಕನ್ನು ಸರಿಯಾದ ರೀತಿಯಲ್ಲಿ ಪ್ರತಿನಿಧಿಸಲು ಸಾಧ್ಯವಿಲ್ಲ. ಏಕೆಂದರೆ ಪೂರ್ವಾ ಗ್ರಹಗಳು ಜನಪದ ಸಾಹಿತ್ಯ ಬೆಳೆದುಬಂದ ಹಾದಿಯನ್ನು ಆಕ್ರಮಿಸಿ, ಹಾದಿಯನ್ನು ತಪ್ಪಿಸುವ ಹಾಗೂ ಸಂಮಿಶ್ರ ನೆಲೆಯ ಹಾದಿಯಲ್ಲಿ ಸಾಗುವ ಒತ್ತಡವನ್ನು ಹೇರುತ್ತವೆ. ಈ ಅಂಶವನ್ನು ತುಳು ಜನಪದ ಸಾಹಿತ್ಯದಲ್ಲಿ ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ವೈದಿಕ ಸಂಸ್ಕೃತಿಯನ್ನು ಪ್ರತಿನಿಧಿಸುವ ದೇವರುಗಳು ಅಥವಾ ಬ್ರಾಹ್ಮಣರು ನಿರ್ಣಾಯಕವಾಗಿ ಕಾಣಿಸಿಕೊಂಡು ಮುಕ್ತಿಯ ಮಾರ್ಗವನ್ನು ಸೂಚಿಸುವ ಅಥವಾ ಬೆಳಕಿನೆಡೆಗೆ ಸಾಗಿಸುವ ವಿವರಗಳು ಅನೇಕ ಪಾಡ್ದನಗಳಲ್ಲಿವೆ. ಸಿರಿ ಪಾಡ್ದನದಲ್ಲಿ ಬರುವ ಬೆರ್ಮೆರ್ ಇದಕ್ಕೆ ಉತ್ತಮ ಉದಾಹರಣೆ. ಸಿರಿಯ ಹುಟ್ಟು ಹಾಗೂ ಅಬ್ಬಗ-ದಾರಗರ ಮರಣ ಬೆರ್ಮೆರ್ ನ ನಿರ್ಧಾರದಂತೆ ನಡೆಯುತ್ತದೆ. ಬೆರ್ಮೆರ್ ಕೊಟ್ಟ ಸೂಚನೆಯಂತೆ ಪಾಳುಬಿದ್ದ ಆದಿ ಆಲಡೆಯನ್ನು ಜೀರ್ಣೋದ್ಧಾರ ಮಾಡಿ ಪ್ರಸಾದ ರೂಪದಲ್ಲಿ ಪಡೆದ ಹಿಂಗಾರದ ಹಾಳೆಯಿಂದ ಸಿರಿ ಹುಟ್ಟುತ್ತಾಳೆ. ಬೆರ್ಮೆರ್ ಹೇಳಿದ ಹರಕೆ ತೀರಿಸದೆ ಇದ್ದುದರಿಂದ ಅಬ್ಬಗ-ದಾರಗರು ಮರಣ ಹೊಂದುತ್ತಾರೆ. ಈ ಎರಡೂ ಘಟನೆಗಳು ಅಲೌಕಿಕ ನೆಲೆಯಲ್ಲಿಯೇ ನಡೆಯುತ್ತವೆ.

ಪಾಡ್ದನಗಳು ಎಷ್ಟು ಸಾವಿರ ಗೆರೆಗಳನ್ನು ಹೊಂದಿವೆ ಎನ್ನುವ ಅಂಶವೇ ಇಂದು ಹೆಚ್ಚು ಚರ್ಚೆಗೆ ಗ್ರಾಸವಾಗಿರುವುದು. ಗೆರೆಗಳ ಮೂಲಕ ಪಾಡ್ದನಗಳನ್ನು ಮಹಾಕಾವ್ಯಗಳೆಂದು ಗುರುತಿಸುವ ಪ್ರಯತ್ನಗಳೂ ನಡೆದಿವೆ ಹಾಗೂ ನಡೆಯುತ್ತಿವೆ. ಇದು ತಪ್ಪು ಎನ್ನುವ ವಾದವನ್ನು ಮಾಡುವ ಉದ್ದೇಶ ಇಲ್ಲಿಲ್ಲವಾದರೂ ಪಾಡ್ದನಗಳನ್ನು ಗೆರೆಗಳ ಸಂಖ್ಯೆಯ ಆಧಾರದಲ್ಲಿ ಅಧ್ಯಯನ ನಡೆಸುವ ವಿಧಾನ ಎಲ್ಲೋ ಒಂದು ಕಡೆಗೆ ಪಾಡ್ದನಗಳ ಮೂಲ ಆಶಯಗಳಿಗೇ ಬೆನ್ನು ಮಾಡಿದಂತಾಗಬಹುದು ಎನ್ನುವ ಆತಂಕವಂತೂ ಇದ್ದೇ ಇದೆ. ಪಾಡ್ದನಗಳನ್ನು ತುಳುನಾಡಿನ ಸಾಮಾಜಿಕ ಚೌಕಟ್ಟಿನೊಳಗೇ ಅಧ್ಯಯನ ನಡೆಸಬೇಕಾಗುತ್ತದೆ. ಪಾಡ್ದನಗಳು ಜಾಗತಿಕ ಮಟ್ಟದಲ್ಲಿ ಪರಿಚಯಗೊಳ್ಳಬೇಕು ಅಥವಾ ಮುಖಾಮುಖಿಯಾಗಬೇಕು ಎನ್ನುವುದರ ಜೊತೆಜೊತೆಗೆ ಅವು ಪ್ರತಿನಿಧಿಸುವ ಭೌಗೋಳಿಕ ಹಾಗೂ ಮಾನವ ಪರಿಸರದಲ್ಲೂ ಮುಖಾಮುಖಿಯಾಗುವಂತಿರಬೇಕು. ಪಾಡ್ದನಗಳನ್ನು ಹಾಡುವ ಸಮುದಾಯಗಳು, ಭೂತಾರಾಧನೆಯಲ್ಲಿ ತೊಡಗಿಸಿಕೊಳ್ಳುವ ಸಮುದಾಯಗಳು, ಭೂತಾರಾಧನೆಯನ್ನು ವಿಜೃಂಭಣೆಯಿಂದ ನಡೆಸುವ ಸಮುದಾಯಗಳು, ಪಾಡ್ದನಗಳ ಆಚರಣಾತ್ಮಕ ಸಂದರ್ಭ ಹಾಗೂ ಆಶಯಗಳ ಅಧ್ಯಯನ ನಡೆಸುವ ವಿದ್ವಾಂಸ ವರ್ಗದ ನಿಲುವುಗಳು ಇವುಗಳೆಲ್ಲವನ್ನೂ ಮತ್ತೊಮ್ಮೆ ಸೂಕ್ಷ್ಮ ಅಧ್ಯಯನಕ್ಕೆ ಒಳಪಡಿಸುವ ಅನಿವಾರ್ಯತೆ ಇಂದಿನ ಸಂದರ್ಭದಲ್ಲಿ ಇದೆ. ಏಕೆಂದರೆ ಪೂರ್ವಾಗ್ರಹಗಳು ಪ್ರತಿಯೊಂದು ಸಂದರ್ಭದಲ್ಲೂ ಇದ್ದೇ ಇರುತ್ತವೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಸಿರಿ ಸಂಧಿ. ಇದು ಇಂದು ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಒಳಗಾಗಿರುವಂತದ್ದು. ದೇಶಿ ಹಾಗೂ ವಿದೇಶಿ ವಿದ್ವಾಂಸರು ಸಿರಿ ಪಾಡ್ದನ ಅಥವಾ ಸಂಧಿಯನ್ನು ವಿಶೇಷವಾಗಿ ಅಧ್ಯಯನ ನಡೆಸಿ ಅದು ತನ್ನ ಆಶಯ, ಆಚರಣೆ ಹಾಗೂ ಹೊಂದಿರುವ ಗೆರೆಗಳ ಹಿನ್ನೆಲೆಯಿಂದ ಮಹಾಕಾವ್ಯವಾಗಿದೆ ಎಂಬುದಾಗಿ ಘೋಷಣೆ ಮಾಡಿದ್ದಾರೆ. ಆದರೆ ನಿಜಾರ್ಥದಲ್ಲಿ ಸಿರಿ ಸಂಧಿಯಾಗಲಿ ಅಥವಾ ಭೂತಗಳಿಗೆ ಸಂಬಂಧಿಸಿದ ಪಾಡ್ದನಗಳಾಗಲಿ ಅಥವಾ ಅವುಗಳ ಆಚರಣೆಗಳಾಗಲಿ ತುಳುನಾಡಿನಲ್ಲಿ ಬೇರ್ಪಟ್ಟ ರೀತಿಯಲ್ಲಿ ಕಂಡುಬರುತ್ತವೆಯೇ ಹೊರತು ಅವುಗಳು ಹೊಂದಿರುವ ಆಶಯಗಳ ರೂಪದಲ್ಲಿ ಕಂಡುಬರುತ್ತಿಲ್ಲ. ಈ ನಿಟ್ಟಿನಲ್ಲಿ ನೋಡುವಾಗ ತುಳು ಜನಪದ ಸಾಹಿತ್ಯ ಇಂದು ಸಾಹಿತ್ಯದ ಹಿನ್ನೆಲೆಯಲ್ಲಿ ಮಾತ್ರ ಹೆಚ್ಚು ಪ್ರಚಾರ ಹಾಗೂ ವಿಸ್ತಾರವನ್ನು ಪಡೆಯುವುದರಲ್ಲಿ ಯಶಸ್ವಿಯಾಗಿರುವುದು ಮೇಲ್ನೋಟಕ್ಕೇ ಕಂಡುಬರುತ್ತದೆ. ಆದರೆ ಮೂಲ ಆಚರಣೆಗಳು, ಅಲ್ಲಿರುವ ದಾಸ್ಯರೂಪಿ ಸಂಬಂಧಗಳು ಹಾಗೂ ಕೆಳಸಮುದಾಯಗಳ ಅಸ್ತಿತ್ವದ ಪ್ರಶ್ನೆಗಳು ಅಂಚಿಗೆ ಸರಿಯುತ್ತಿವೆ.

ತುಳುನಾಡು ಇಂದು ಎಲ್ಲ ರಂಗಗಳಲ್ಲೂ ಬದಲಾಗುತ್ತಿದೆ. ಬದಲಾಗುತ್ತಿರುವ ಸಂದರ್ಭಗಳಲ್ಲೂ ಭೂತಾರಾಧನೆ ಮತ್ತೊಮ್ಮೆ ಪುನರುತ್ಥಾನದ ನೆಲೆಯಲ್ಲಿ ಮರುಜೀವ ಪಡೆಯುತ್ತಿದೆ. ತುಳುನಾಡಿನಲ್ಲಿ ಭೂಸುಧಾರಣಾ ಕಾಯ್ದೆ ಜಾರಿಗೆ ಬಂದ ಸಂದರ್ಭದಲ್ಲಿ ಅನೇಕ ಗುತ್ತು ಮನೆಗಳು ಭೂಮಿ ಕಳೆದುಕೊಂಡಾಗ ಭೂತಾಲಯಗಳೂ ಅನಾಥವಾಗಬೇಕಾಯಿತು. ಭೂಮಿ ಕಳೆದುಕೊಂಡ ಸಮುದಾಯಗಳು ವಲಸೆಯ ಮೂಲಕ ಆರ್ಥಿಕವಾಗಿ ಗಟ್ಟಿಗೊಂಡಾಗ ಭೂತಾಲಯಗಳೂ ಜೀರ್ಣೋದ್ಧಾರಗೊಂಡು, ಕುಟುಂಬದ ಒಟ್ಟುಗೂಡುವಿಕೆಯ ಹಿನ್ನೆಲೆಯಲ್ಲಿ ಆರಾಧನೆಗಳು ಹೊಸಬಗೆಯಲ್ಲಿ ಆರಂಭಗೊಂಡವು. ಈ ಬೆಳವಣಿಗೆಯನ್ನು ಸಾಮಾಜಿಕ ಹಾಗೂ ಆರ್ಥಿಕ ಬದಲಾವಣೆಗಳ ಮೂಲಕ ನೋಡಿ ಅಧ್ಯಯನ ನಡೆಸಬೇಕಾಗುತತದೆ. ಆಚರಣೆಗಳಲ್ಲಿ ಆಗುತ್ತಿರುವ ಬದಲಾವಣೆಗಳು, ಸಾಮಾಜಿಕ ಸಂಬಂಧಗಳಲ್ಲಿನ ಸಂಕೀರ್ಣತೆಗಳು, ಭೂಮಿಯ ಬದಲು ಬಂಡವಾಳ ಪ್ರಧಾನವಾಗುತ್ತಿರುವ ಆರ್ಥಿಕತೆ ರೂಪುಗೊಳ್ಳುತ್ತಿರುವ ಬಗೆ ಹಾಗೂ ಅದರಿಂದಾಗುತ್ತಿರುವ ಪರಿಣಾಮಗಳು ಮುಂತಾದ ವಿಚಾರಗಳು ಸಹಾ ಜನಪದ ಸಾಹಿತ್ಯ ಸಂಶೋಧನೆಯಲ್ಲಿ ಪ್ರಮುಖವಾದ ವಿಚಾರಗಳಾಗಿ ಕಾಣಿಸಿಕೊಂಡು, ಬದಲಾದ ಜನಪದ ಅಧ್ಯಯನ ವಿಧಾನದ ಮೂಲಕ ವಿಶ್ಲೇಷಣೆಗೆ ಒಳಗಾಗಬೇಕಾಗಿದೆ. ಮೌಖಿಕ ಪಠ್ಯಗಳು ಅವು ಪ್ರಕಟಗೊಳ್ಳುತ್ತಾ ಹೋದ ಹಾಗೆ ಬೆಳೆಯುತ್ತಾ ಹೋಗುತ್ತವೆ. ಅದೇರೀತಿ ಪಠ್ಯವನ್ನು ಮೀರುವ ಹಲವಾರು ಅಂಶಗಳನ್ನೂ ಒಳಗೊಂಡಿರುತ್ತವೆ. ಮೌಖಿಕ ಪಠ್ಯಗಳಲ್ಲಿ ಸಾಂಕೇತಿಕ ರೂಪದಲ್ಲಿ ಹಲವಾರು ವಿಚಾರಗಳು ಕಂಡುಬರುತ್ತವೆ. ಅದು ಎಲ್ಲವನ್ನೂ ಬಿಚ್ಚಿಡುತ್ತಾ ಹೋಗುವುದಿಲ್ಲ. ಪಠ್ಯವನ್ನು ಮೀರುವ ವಿಚಾರಗಳು ಪಠ್ಯದೊಳಗಡೆ ಯಾವುದಿವೆ ಎನ್ನುವುದನ್ನು ಪತ್ತೆ ಹಚ್ಚಿ ಸಂಶೋಧನೆ ನಡೆಸಿದಾಗ ಮಾತ್ರ ಲೌಖಿಕ ಸಾಹಿತ್ಯದ ಪ್ರಾಮುಖ್ಯತೆ ಹಾಗೂ ಸಾಮರ್ಥ್ಯ ಮನವರಿಕೆಯಾಗಲು ಸಾಧ್ಯ. ಆದರೆ ಈ ಬಗೆಯ ಅಧ್ಯಯನ ಬದಲಿ ಅಧ್ಯಯನ ವಿಧಾನ ಹಾಗೂ ಸೈದ್ಧಾಂತಿಕತೆಯನ್ನು ಬಯಸುತ್ತದೆ. ಶಿಷ್ಟ ಸಾಹಿತ್ಯ ಶ್ರೇಷ್ಠ ಅಥವಾ ಜನಪದ ಸಾಹಿತ್ಯ ಕನಿಷ್ಠ ಎನ್ನುವ ಹಳೆಯ ಮಾದರಿಯ ಮೂಲಕವೇ ಅಧ್ಯಯನ ನಡೆಸಬೇಕಾದ ಅನಿವಾರ್ಯತೆ ಇಂದಿನ ಸಂದರ್ಭದಲ್ಲಿ ಇಲ್ಲ. ಇದೇ ಹಳೆಯ ಮಾದರಿಗೆ ಜೋತುಬೀಳುವ ಅಧ್ಯಯನಗಳಿಂದ ಯಾವುದೇ ಹೊಸ ಫಲಿತಗಳನ್ನು ನಿರೀಕ್ಷಿಸಲೂ ಸಾಧ್ಯವಿಲ್ಲ.