ಯಾವುದೇ ಒಂದು ಪ್ರದೇಶದ ಸಂಸ್ಕೃತಿ, ಚರಿತ್ರೆ ಹಾಗೂ ಭಾಷೆ ಇನ್ನೊಂದು ಪ್ರದೇಶದಿಂದ ಪ್ರಭಾವಿತವಾಗಿರದೆ ಇರಲು ಸಾಧ್ಯವಿಲ್ಲ. ಇದು ಸಹಜ ಬೆಳವಣಿಗೆ. ಆದರೆ ತುಳುನಾಡಿನ ಸಂದರ್ಭದಲ್ಲಿ ಹೊರ ನಾಡಿನ ಸಂಸ್ಕೃತಿ, ಚರಿತ್ರೆ ಹಾಗೂ ಭಾಷೆ ಹೇರಿಕೆಯ ರೂಪದಲ್ಲಿ ಪ್ರವೇಶಿಸಿ ಸ್ಥಳೀಯತೆಯನ್ನು ನಿರ್ದೇಶಿಸುವ ಹಾಗೂ ಹಿಡಿತದಲ್ಲಿರಿಸಿಕೊಳ್ಳುವ ಪ್ರಯತ್ನವನ್ನು ಮಾಡಿ ಯಶಸ್ವಿಯಾಯಿತು. ತುಳುನಾಡಿನ ಧಾರ್ಮಿಕ ಆಚರಣೆಗಳೊಳಗಿನ ಆಂತರಿಕ ಬಿರುಕುಗಳು ಒಂದು ಬಗೆಯಾದರೆ, ದೈವಾರಾಧನೆಯನ್ನೇ ಹೈಜಾಕ್‌ ಮಾಡುವ ಬಾಹ್ಯ ಪ್ರಯತ್ನಗಳು ಇನ್ನೊಂದು ಬಗೆಯದ್ದು. ಆಂತರಿಕ ಬಿರುಕುಗಳನ್ನು ಸ್ಥಳೀಯ ಊಳಿಗಮಾನ್ಯ ವ್ಯವಸ್ಥೆ ಹುಟ್ಟು ಹಾಕಿದರೆ, ಬಾಹ್ಯ ಒತ್ತಡಗಳು ವೈದಿಕ ದೇವತೆಗಳ ಪ್ರವೇಶ ಹಾಗೂ ಹೊರಗಿನ ಅರಸುಮನೆತನಗಳ ಪ್ರವೇಶದಿಂದಾಗಿ ಉಂಟಾಗಿರುವಂತದ್ದು. ದೈವಾರಾಧನೆಯನ್ನು ಹೈಜಾಕ್‌ ಮಾಡುವುದೆಂದರೆ ವೈದಿಕ ನೆಲೆಯ ಸಂಸ್ಕೃತೀಕರಣ ಚೌಕಟ್ಟಿಗೆ ತರುವುದು ಎಂದರ್ಥ. ಇದು ವೈದಿಕ ಸಾಹಿತ್ಯ ಹಾಗೂ ಆಚರಣೆಗಳ ಅಧೀನಕ್ಕೆ ಸ್ಥಳೀಯ ಮೌಖಿಕ ಸಾಹಿತ್ಯ ಹಾಗೂ ಆಚರಣೆಗಳನ್ನು ತಂದು ಅವುಗಳ ಸ್ವತಂತ್ರ ಅಸ್ತಿತ್ವವನ್ನು ಇಲ್ಲವಾಗಿಸುವ ಪ್ರಕ್ರಿಯೆ. ತುಳುನಾಡಿನ ಭೂತಗಳನ್ನು ವೈದಿಕ ಮುಸುಕಿನೊಳಗೆ ಸೇರಿಸಿಕೊಳ್ಳಲಾಯಿತು. ಆ ಮೂಲಕ ಅವುಗಳನ್ನು ವೈಧಿಕ ದೇವತೆಗಳ ಅಧೀನ ದೈವಗಳಾಗಿ ಗುರುತಿಸಲಾಯಿತು. ಇದೇ ಪರಿಸ್ಥಿತಿಯನ್ನು ಗ್ರಾಮದೇವತೆಗಳ ಅಧ್ಯಯನದ ಸಂದರ್ಭದಲ್ಲೂ ಗಮನಿಸಿಬಹುದಾಗಿದೆ. ಆದರೆ ಧಾರ್ಮಿಕ ಪ್ರಭುತ್ವ ಕೆಳವರ್ಗಗಳ ಸಾಹಿತ್ಯ ಹಾಗೂ ಆಚರಣೆಗಳನ್ನು ತನ್ನ ಲಾಭಕ್ಕೆ ಬಳಸಿಕೊಂಡಿತು. ನಂಬಿಕೆ ಹಾಗೂ ಆಚರಣೆಗಳನ್ನು ತನ್ನ ಚೌಕಟ್ಟಿನಲ್ಲಿಟ್ಟು ವ್ಯಾಖ್ಯಾನಿಸಿ ಅಧೀನತೆಗೆ ತಳ್ಳಿತು. ತುಳುನಾಡಿನ ಸಾಂಸ್ಕೃತಿಕ ಚೌಕಟ್ಟಿಗೆ ದೈವಾರಾಧನೆ ಪ್ರಧಾನವಾಗಿದ್ದರೂ, ಅದು ತನ್ನ ನೆಲದಲ್ಲಿಯೇ ಪರಾಧೀನತೆಯನ್ನು ಅನುಭವಿಸುವ ಹಾಗೂ ಒಂದು ಖಾಸಗಿ ಚಟುವಟಿಕೆಯ ರೂಪದಲ್ಲಿ ನಡೆಯುತ್ತಿರುವುದು ಕಂಡುಬರುತ್ತದೆ. ಇದಕ್ಕೆ ಕಾರಣ ತುಳುನಾಡಿನಲ್ಲಿ ದೇವತಾರಾಧನೆ ಪಡೆದುಕೊಂಡಿರುವ ಮಹತ್ವ.

ಶೈವ ಹಾಗೂ ವೈಷ್ಣವ ದೇವರುಗಳ ಆರಾಧನೆ ತುಳುನಾಡನ್ನು ಇಡಿಯಾಗಿ ಆವರಿಸಿ ಪ್ರಭಾವಿಸತೊಡಗಿದಾಗ ಸಹಜವಾಗಿಯೇ ಇಲ್ಲಿನ ಸ್ಥಳೀಯ ದೈವಾರಾಧನೆ ಅತಂತ್ರತೆಯನ್ನು ಅನುಭವಿಸಬೇಕಾಗಿ ಬಂತು. ಶೈವ ಧರ್ಮದ ಹಿನ್ನೆಲೆಯಿಂದ ನೋಡುವಾಗ ತುಳುನಾಡಿನ ಬಹುತೇಕ ಆರಾಧನಾ ಸಂಪ್ರದಾಯಗಳು ಶೈವ ಧರ್ಮದ ಚೌಕಟ್ಟಿನೊಳಗೆ ವ್ಯವಹರಿಸುತ್ತಿರುವುದನ್ನು ಕಾಣಬಹುದಾಗಿದೆ. ತುಳುನಾಡಿನ ಭೂತಗಳನ್ನು ಶಿವ ಗಣಗಳೆನ್ನುವ ಸಿದ್ಧಾಂತದಡಿಯಲ್ಲಿ ತಂದು ಅವುಗಳ ಸ್ಥಳೀಯ ಬೇರುಗಳನ್ನು ಕತ್ತರಿಸಲಾಯಿತು. ಶೈವ ಹಾಗೂ ವೈಷ್ಣವ ಧರ್ಮಗಳು ಸಾಮರಸ್ಯದ ನೆಲೆಯಲ್ಲಿ ಇಲ್ಲದೇ ಇದ್ದುದರಿಂದಾಗಿ ಅವು ಸ್ಪರ್ಧಾತ್ಮಕ ನೆಲೆಯಲ್ಲಿ ತಮ್ಮ ಅಸ್ತಿತ್ವವನ್ನು ಗಟ್ಟಿಗೊಳಿಸಿಕೊಳ್ಳುವ ಪ್ರಯತ್ನಗಳನ್ನು ಮಾಡಿರುವುದು ಚರಿತರೆಯಿಂದ ತಿಳಿದುಬರುತ್ತದೆ. ಭೂತಾರಾಧನೆಯನ್ನು ತನ್ನ ತೆಕ್ಕೆಯೊಳಗೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾದ ಶೈವಧರ್ಮ ತುಳುನಾಡಿನಲ್ಲಿ ಪ್ರಧಾನವಾಗಿ ಕಂಡುಬರಲಾರಂಭಿಸಿತು. ಪಂಚಲಿಂಗೇಶ್ವರ, ಮಹಾಲಿಂಗೇಶ್ವರ, ಮಂಜುನಾಥೇಶ್ವರ, ಸಹಸ್ರಲಿಂಗೇಶ್ವರ ಮುಂತಾದ ಹೆಸರುಗಳಲ್ಲಿ ತುಳುನಾಡಿನಾದ್ಯಂತ ವ್ಯಾಪಿಸಿರುವ ಶೈವ ಧರ್ಮ ಸ್ಥಳೀಯ ಭೂತಗಳನ್ನು ತನ್ನ ಸೇವಕರನ್ನಾಗಿ ಪರಿವರ್ತಿಸಿತು. ಆರಂಭದಲ್ಲಿ ಶಿವನನ್ನು ಜನಪದ ದೇವತೆಯೆಂದು ಗುರುತಿಸಲಾಗಿದ್ದರೂ ನಂತರ ಅದು ಆರಾಧನೆಗೆ ಒಳಗಾಗಿರುವುದು ವೈದಿಕ ದೇವತೆತಯಾಗಿಯೆ. ಈ ಬಗೆಯ ಪ್ರಕ್ರಿಯೆಗಳು ಭೂತಾರಾದನೆಯನ್ನು ವೈದಿಕ ಹಾಗೂ ಅವೈದಿಕ ಅಥವಾ ಶಿಷ್ಟ ಹಾಗೂ ಪರಿಶಿಷ್ಟ ಎನ್ನುವ ಎರಡೂ ಬಗೆಯ ಧಾರ್ಮಿಕ ಲಕ್ಷಣಗಳುಳ್ಳ ಸಂಮಿಶ್ರ ನೆಲೆಯ ಆರಾಧನಾ ಸಂಪ್ರದಾಯದತ್ತ ಕೊಂಡೊಯ್ಯಿತು. ಇದಕ್ಕೆ ಶೈವ ಧರ್ಮವಷ್ಟೇ ಅಲ್ಲದೆ ವೈಷ್ಣವ, ಜೈನ, ದೇವಿ ಮುಂತಾದ ಆರಾಧನಾ ಸಂಪ್ರದಾಯಗಳೂ ಬೇರೆಬೇರೆ ರೀತಿಯಲ್ಲಿ ಕಾರಣವಾಗಿವೆ.

ವಿಜಯನಗರದ ಅರಸರು, ಇಕ್ಕೇರಿ ನಾಯಕರು, ಮೈಸೂರು ಸುಲ್ತಾನರು ಹಾಗೂ ಬ್ರಿಟಿಷ್‌ ಆಡಳಿತ ಇವೆಲ್ಲವೂ ತುಳುನಾಡಿನ ಮೌಖಿಕ ಸಂಪ್ರದಾಯಗಳನ್ನು ಬೆಳೆಸುವ ಪ್ರಯತ್ನವನ್ನು ಮಾಡಲಿಲ್ಲ. ಹೀಗಾಗಿ ಈ ಸಂಪ್ರದಾಯಗಳಿಗೆ ರಾಜಾಶ್ರಯವೂ ದೊರೆಯಲಿಲ್ಲ. ವಿಜಯನಗರೋತ್ತರ ಸಂದರ್ಭದ ಜೈನ ಅರಸು ಮನೆತನಗಳು ಸ್ಥಳೀಯ ಮೌಖಿಕ ಸಂಪ್ರದಾಯಗಳಿಗಿಂತ ಭಿನ್ನವಾದ ಸಂಪ್ರದಾಯಗಳನ್ನು ಹೊಂದಿದ್ದವು. ಭೂತಾರಾಧನೆಯನ್ನು ಜೈನರ ಬೀಡು ಮನೆಗಳು ಆಚರಿಸುತ್ತವೆಯಾದರೂ ಅದು ಮೂಲ ತುಳುನಾಡಿನ ಆಚರಣೆಗಿಂತ ಭಿನ್ನವಾಗಿರುವುದು ಕಂಡುಬರುತ್ತದೆ. ಹೀಗಾಗಿ ತುಳುನಾಡಿನ ಮೌಖಿಕ ಸಂಪ್ರದಾಯಗಳು ಸ್ಥಳೀಯ ಭೂಹಿಡುವಳಿದಾರರ ಮರ್ಜಿಗೆ ಒಳಗಾಗಿತ್ತು. ಅವು ತಮ್ಮ ಆಡಳಿತ, ಅಧಿಕಾರ ಹಾಗೂ ಸವಲತ್ತುಗಳ ಹಿನ್ನೆಲೆಯಲ್ಲಿ ಭೂತಾರಾಧನೆ ಎಂಬ ಶಕ್ತಿಯುತವಾದ ಆರಾಧನೆಯನ್ನು ಒಂದು ಅಸ್ತ್ರವಾಗಿ ಬಳಸಿಕೊಂಡವು. ಹೀಗಾಗಿ ಜಮೀನ್ದಾರಿಕೆಯ ಹಿನ್ನೆಲೆಯಲ್ಲಿಯೇ ಮೌಖಿಕ ಸಂಪ್ರದಾಯಗಳು ಪ್ರಕಟಗೊಳ್ಳುವಂತಾಯಿತು. ಮೌಖಿಕ ಸಂಪ್ರದಾಯಗಳಲ್ಲಿ ಅಡಕವಾಗಿರುವ ಕಾಡು, ಬೆಟ್ಟ-ಗುಡ್ಡ, ಗ್ರಾಮ-ನಾಡು ಕಲ್ಪನೆಗಳು, ಭೂಮಿಯ ಪ್ರಶ್ನೆಗಳು, ಕೆಳವರ್ಗದ ಜನರ ಐಡೆಂಟಿಟಿಯ ಪ್ರಶ್ನೆಗಳು ಮುಂತಾದವು ಹೆಚ್ಚಿನ ಮಹತ್ವವನ್ನು ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಮೌಖಿಕ ಸಂಪ್ರದಾಯಗಳು ಬಾಹ್ಯ ಶಕ್ತಿಗಳ ಮಧ್ಯಪ್ರವೇಶದಿಂದಾಗಿ ಸೊರಗಿರುವುದು ಒಂದು ಕಡೆಯಾದರೆ, ಆಂತರಿಕವಾಗಿಯೂ ಅವುಗಳಿಗೆ ಪೂರಕ ವಾತಾವರಣ ನಿರ್ಮಾಣಗೊಳ್ಳಲಿಲ್ಲ. ಏಕೆಂದರೆ ಸ್ಥಳೀಯ ಶ್ರೀಮಂತ ವರ್ಗಗಳು ತಮ್ಮ ಪ್ರತಿಷ್ಠೆಯ ನೆಲೆಯಲ್ಲಿ ಈ ಸಂಪ್ರದಾಯಗಳನ್ನು ನೋಡಿದವೇ ಹೊರತು ಮೌಖಿಕ ಸಂಪ್ರದಾಯಗಳನ್ನು ಅವುಗಳ ಆಶಯಗಳ ಹಿನ್ನೆಲೆಯಲ್ಲಿ ನೋಡುವ ಪ್ರಯತ್ನವನ್ನು ಮಾಡಲಿಲ್ಲ.