ತುಳುನಾಡು ಹಲವು ಬಗೆಯ ವೈಶಿಷ್ಟ್ಯತೆಗಳಿಂದ ಕೂಡಿರುವ ಪ್ರದೇಶ. ಅಲ್ಲಿನ ಸಂಸ್ಕೃತಿ, ಭಾಷೆ, ಸಾಹಿತ್ಯ, ಚರಿತ್ರೆ ಹಾಗೂ ಭೌಗೋಳಿಕತೆ ಪ್ರತ್ಯೇಕ ಅಸ್ತಿತ್ವವನ್ನು ಹೊಂದುವ ಸಾಮರ್ಥ್ಯವನ್ನು ನೀಡಿವೆ. ತುಳುನಾಡು ಆಡಳಿತಾತ್ಮಕವಾಗಿ ಕನ್ನಡ ನಾಡಿನಲ್ಲಿದ್ದರೂ ಸಾಂಸ್ಕೃತಿಕವಾಗಿ ಕನ್ನಡ ನಾಡಿಗಿಂತ ಭಿನ್ನ. ತನ್ನದೇ ಆದ ಸ್ವತಂತ್ರ ಭಾಷೆಯನ್ನು ಹೊಂದಿರುವ ತುಳುನಾಡು ಭೌಗೋಳಿಕವಾಗಿ ಅಷ್ಟೇನೂ ವಿಸ್ತಾರವಾದ ಭೂಪ್ರದೇಶವನ್ನು ಹೊಂದಿಲ್ಲ. ಚಾರಿತ್ರಿಕವಾಗಿ ನೋಡುವುದಾದರೆ ಚರಿತ್ರೆಯುದ್ದಕ್ಕೂ ಅದು ಕನ್ನಡ ಪ್ರಭುಗಳ ಅಧೀನದಲ್ಲಿಯೇ ಇತ್ತು. ಆದರೆ ಅಲ್ಲಿನ ಜನಪದ ಪ್ರಕಾರಗಳಾದ ಭೂತಾರಾಧನೆ, ಯಕ್ಷಗಾನ, ತಾಳಮದ್ದಳೆ, ನಾಗಮಂಡಲ, ಕೋಳಿ ಅಂಕ, ಕಂಬಳ ಮುಂತಾದವು ತುಳುನಾಡಿನ ಜನತೆಯ ಬದುಕಿನಲ್ಲಿ ಜೀವಂತಿಕೆಯನ್ನು ತುಂಬಿ, ಮನಸ್ಸನ್ನು ಸೃಜನಶೀಲವನ್ನಾಗಿಸಿವೆ. ಪಾಡ್ದನಗಳೇಂಬ ಮೌಖಿಕ ರಚನೆಗಳೇ ಅಲ್ಲಿನ ಜೀವಂತ ಸಾಹಿತ್ಯ. ಪ್ರಸ್ತುತ ಅಧ್ಯಯನವು ಇದೇ ಬಗೆಯ ಪಾಡ್ದನವೊಂದಕ್ಕೆ ಸಂಬಂಧಪಟ್ಟದ್ದಾಗಿದೆ. ತುಳುನಾಡಿನಲ್ಲಿ ಇಂದು ಹೆಚ್ಚು ಚರ್ಚೆಗೊಳ್ಳುತ್ತಿರುವ ಪಾಡ್ದನಗಳಲ್ಲಿ ಸಿರಿ ಪಾಡ್ದನ(ಸಂಧಿ)ವೂ ಒಂದು. ಸಿರಿ ಕಾವ್ಯದ ವಿವಿಧ ಮಗ್ಗಲುಗಳನ್ನು ವಿಶ್ಲೇಷಿಸುವ ಹಾಗೂ ಆ ಮೂಲಕ ತುಳುನಾಡಿನ ಸಾಮಾಜಿಕ ಚರಿತ್ರೆಯನ್ನು ಕಟ್ಟುವ ಪ್ರಯತ್ನವನ್ನು ಈ ಕಿರುಪುಸ್ತಕದಲ್ಲಿ ಮಾಡಲಾಗಿದೆ. ಈ ಕೃತಿಯನ್ನು ಹೊರತರುವಲ್ಲಿ ಸಹಕಾರ ನೀಡಿದ ಮಾನ್ಯ ಕುಲಪತಿಗಳಾದ ಡಾ.ಎ. ಮುರಿಗೆಪ್ಪ ಅವರಿಗೆ ನಾನು ಕೃತಜ್ಞನಾಗಿದ್ದೇನೆ. ಈ ಕೃತಿಯನ್ನು ಅಚ್ಚುಕಟ್ಟಾಗಿ ಹೊರತಂದ ಪ್ರಸಾರಾಂಗದ ನಿರ್ದೇಶಕರಾದ ಡಾ. ಎ. ಮೋಹನ ಕುಂಟಾರ್ ಅವರಿಗೆ, ಪುಸ್ತಕವಿನ್ಯಾಸವನ್ನು ಮಾಡಿದ ಶ್ರೀ ಬಿ. ಸುಜ್ಞಾನಮೂರ್ತಿ ಅವರಿಗೆ ಹಾಗೂ ಅಕ್ಷರ ಸಂಯೋಜನೆ ಮಾಡಿದ ಶ್ರೀ ಕೆ. ವೀರೇಶ, ಪುಟವಿನ್ಯಾಸ ಮಾಡಿದ ಜೆ.ಬಸವರಾಜ ಅವರಿಗೆ ನನ್ನ ಕೃತಜ್ಞತೆಗಳು.