ಯಾವುದೇ ಒಂದು ಪ್ರದೇಶದ ಅಧ್ಯಯನ ಕೈಗೊಳ್ಳುವಾಗ ಅಲ್ಲಿನ ಭೌಗೋಳಿಕತೆ, ಸಂಸ್ಕೃತಿ ಹಾಗೂ ಭಾಷೆ ಬಹುಮುಖ್ಯವಾದ ವಿಷಯಗಳಾಗಿ ಕಂಡುಬರುತ್ತವೆ. ಈ ಮೂರು ವಿಷಯಗಳು ಪರಸ್ಪರ ಅಂತರ್ ಸಂಬಂಧಗಳನ್ನು ಹೊಂದಿದ್ದು, ಒಂದು ಇನ್ನೊಂದರ ಮೇಲೆ ನಿರಂತರವಾಗಿ ಪ್ರಭಾವವನ್ನು ಬೀರುತ್ತಲೇ ಇರುತ್ತವೆ. ಬಹುತೇಕ ಅಧ್ಯಯನಗಳು ಈ ಅಂತರ್ ಸಂಬಂಧಗಳನ್ನು ಗ್ರಹಿಸುವಲ್ಲಿ ಹಾಗೂ ಆ ಮೂಲಕ ಚರಿತ್ರೆ ಕಟ್ಟುವಲ್ಲಿ ಸೋತಿವೆ. ಇದಕ್ಕೆ ಮುಖ್ಯ ಕಾರಣವೆಂದರೆ ಚರಿತ್ರೆಯನ್ನು ಲಿಖಿತ ನೆಲೆಗಷ್ಟೆ ಸೀಮಿತಗೊಳಿಸಿ, ವಿಶ್ವಾತ್ಮಕ ಮಾದರಿಗಳ ಮೂಲಕ ಅಧ್ಯಯನ ಕೈಗೊಂಡಿರುವುದು. ಈ ಅಧ್ಯಯನ ವಿಧಾನದಿಂದ ಚರಿತ್ರೆಯ ಸ್ಥಳೀಯ ಹಾಗೂ ಮೌಖಿಕ ನೆಲೆಗಳನ್ನು ಗುರುತಿಸಲು ಸಾಧ್ಯವಿಲ್ಲ. ಇದು ಚರಿತ್ರೆಯನ್ನು ಅಖಂಡವಾಗಿ ವ್ಯಾಖ್ಯಾನಿಸುವ ಹಾಗೂ ಅಧಿಕಾರದ ನೆಲೆಯಿರುವ ರಚಿಸುವ ಕಾರ್ಯವನ್ನಷ್ಟೆ ಮಾಡಲು ಸಾಧ್ಯ. ಜನಮುಖಿ ಚರಿತೆ ನಿರ್ಮಾಣ ಬದಲಾದ ಅಧ್ಯಯನ ಕ್ರಮ, ವಿಶ್ಲೇಷಣಾ ವಿಧಾನ ಹಾಗೂ ಸೈದ್ಧಾಂತಿಕತೆಯನ್ನು ಬಯಸುತ್ತದೆ. ಇದರರ್ಥ ಜನಪದ ಸಾಹಿತ್ಯವನ್ನಷ್ಟೆ ಅಧ್ಯಯನ ನಡೆಸಬೇಕೆಂದಲ್ಲ. ಲಿಖಿತ ಹಾಗೂ ಮೌಖಿಕ ಸಾಹಿತ್ಯಗಳೆರಡನ್ನೂ ಮುಖಾಮುಖಿಯನ್ನಾಗಿಸುವ ಪ್ರಯತ್ನಗಳೂ ಆಗಬೇಕಾಗಿದೆ. ಏಕೆಂದರೆ ಮೌಖಿಕ ಸಾಹಿತ್ಯಗಳೆರಡನ್ನೂ ಮುಖಾಮುಖಿಯನ್ನಾಗಿಸುವ ಪ್ರಯತ್ನಗಳೂ ಆಗಬೇಕಾಗಿದೆ. ಏಕೆಂದರೆ ಮೌಖಿಕ ಸಂಪ್ರದಾಯ, ಆಚರಣೆ ಹಾಗೂ ಸಾಹಿತ್ಯದ ಮೇಲೆ ಲಿಖಿತ ಸಂಪ್ರದಾಯ, ಆಚರಣೆ ಹಾಗೂ ಸಾಹಿತ್ಯದ ಪ್ರಭಾವ ಸಾಕಷ್ಟು ಪ್ರಮಾಣದಲ್ಲಿ ಆಗಿದೆ. ಇದಕ್ಕೆ ಉತ್ತಮ ಉದಾಹರಣೆ ತುಳುನಾಡಿನ ಚರಿತ್ರೆ. ತುಳುನಾಡಿನ ಅರಸು ಮನೆತನಗಳ ಅಧ್ಯಯನ ಹಾಗೂ ಅಲ್ಲಿನ ಜನಪದರ ಅಧ್ಯಯನ ರೈಲ್ವೆ ಹಳಿಯ ರೂಪದಲ್ಲಿ ಸಾಗುತ್ತಿದೆಯೇ ಹೊರತು ಎಲ್ಲೂ ಒಂದು ಇನ್ನೊಂದನ್ನು ಸಂಧಿಸುವುದು ಕಂಡುಬರುತ್ತಿಲ್ಲ. ಮೌಖಿಕ ಸಂಸ್ಕೃತಿ ಹಾಗೂ ಸಾಹಿತ್ಯವನ್ನು ಪ್ರತ್ಯೇಕವಾಗಿಯೇ ಅಧ್ಯಯನ ನಡೆಸುವ ಜರೂರು ಇದೆ ಎನ್ನುವುದೇನೂ ನಿಜ. ಅದೇ ರೀತಿ ಲಿಖಿತದೊಳಗಿನ ಮೌಖಿಕ ವಿಚಾರಗಳನ್ನು ಹಾಗೂ ಮೌಖಿಕದೊಳಗಿನ ಲಿಖಿತ ವಿಚಾರಗಳನ್ನು ಪತ್ತೆಹಚ್ಚಿ ವಿಶ್ಲೇಷಿಸುವುದು ಕೂಡ ಅತ್ಯಂತ ಜರೂರಿನ ಕೆಲಸವೇ ಆಗಿದೆ.

ತುಳುನಾಡು ಭೌಗೋಳಿಕವಾಗಿ ಸಾಂಸ್ಕೃತಿಕವಾಗಿ ಹಾಗೂ ಭಾಷಿಕವಾಗಿ ವಿಶಿಷ್ಟವಾಗಿ ಗುರುತಿಸಿಕೊಂಡ ಭೂಪ್ರದೇಶ, ತುಳುನಾಡಿನ ಸಂಸ್ಕೃತಿ, ಚರಿತ್ರೆ ಹಾಗೂ ಭಾಷೆ ದಕ್ಷಿಣ ಭಾರತದೊಂದಿಗೆ ಬೆಸೆದುಕೊಂಡಿದ್ದು, ಪರಸ್ಪರ ಸಂಬಂಧಗಳನ್ನು ಹೊಂದಿರುವುದರ ಜೊತೆಗೆ ತನ್ನ ಸ್ವಂತಿಕೆಯನ್ನೂ ಉಳಿಸಿಕೊಂಡಿದೆ. ಪ್ರಾಚೀನ ಸಂಗಂ ಸಾಹಿತ್ಯದಲ್ಲಿ ಉಲ್ಲೇಖವಿರುವ ಈ ಪ್ರದೇಶ ಚಾರಿತ್ರಿಕವಾಗಿ ಸ್ಥಳೀಯ ಹಾಗೂ ಹೊರಗಿನ ಅರಸುಮನೆತನಗಳ ಆಳ್ವಿಕೆಗೆ ನಿರಂತರವಾಗಿ ಒಳಗಾಗುತ್ತಲೇ ಹೋಯಿತು. ಆ ಸಂದರ್ಭಗಳಲ್ಲಿ ನಿರ್ಮಾಣಗೊಂಡ ಲಿಖಿತ ಹಾಗೂ ಮೌಖಿಕ ಸಾಹಿತ್ಯ ತುಳುನಾಡಿನ ಪ್ರಭುತ್ವ ಹಾಗೂ ಜನತೆಯ ಚರಿತ್ರೆ ನಿರ್ಮಾಣಕ್ಕೆ ಬಹುಮುಖ್ಯವಾದ ಆಕರ ಸಾಮಗ್ರಿಗಳಾಗಿವೆ. ತುಳುನಾಡಿಗೆ ಸಂಬಂಧಿಸಿದ ಬಹುತೇಕ ಆಕರಗಳು ತುಳುನಾಡನ್ನೇ ಕೇಂದ್ರವನ್ನಾಗಿ ಇಟ್ಟುಕೊಂಡು ನಿರ್ಮಾಣವಾದಂಥವಲ್ಲ. ಕರ್ನಾಟಕದ ಪ್ರಮುಖ ಅರಸು ಮನೆತನಗಳ ಹಿನ್ನೆಲೆಯಲ್ಲಿ ಹಾಗೂ ವೈದಿಕ ಸಾಹಿತ್ಯ ಹುಟ್ಟುಹಾಕಿದ ಚಿಂತನೆಗಳ ಹಿನ್ನೆಲೆಯಲ್ಲಿ ತುಳುನಾಡನ್ನು ಅಧ್ಯಯನ ನಡೆಸುವ ಪ್ರಯತ್ನಗಳೇ ಹೆಚ್ಚಾಗಿ ನಡೆದವು. ತುಳುನಾಡಿನ ಸ್ಥಳೀಯ ಚರಿತ್ರೆ ಅಧ್ಯಯನ ಈ ಮಿತಿಯನ್ನು ಎದುರಿಸುತ್ತಿದೆ. ಲಿಖಿತ ಹಾಗೂ ಮೌಖಿಕ ಆಕರಗಳನ್ನು ಮುಖಾಮುಖಿಯನ್ನಾಗಿಸುವ ಹಾಗೂ ಆ ಮೂಲಕ ತುಳುನಾಡಿನ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿಗಳನ್ನು ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಿದಾಗ ಮಾತ್ರ ತುಳುನಾಡಿನ ಜನರ ಚರಿತ್ರೆ ನಿರ್ಮಾಣ ಸಾಧ್ಯ. ತುಳುನಾಡಿನ ಹೆಚ್ಚಿನ ಅಧ್ಯಯನಗಳು ಒಂದು ಬಗೆಯಲ್ಲಿ ಹೇರಿಕೆಯ ರೂಪದಲ್ಲಿ ಆಗಿರುವಂಥವು. ಅನ್ಯ ಪ್ರಭುತ್ವ, ಭಾಷೆ ಹಾಗೂ ಧರ್ಮ ತುಳುನಾಡಿನಲ್ಲಿ ಸ್ವತಂತ್ರವಾಗಿ ವ್ಯವಹರಿಸಲು ಆರಂಭಿಸಿದಾಗಿನಿಂದ ಇಲ್ಲಿನ ಸ್ಥಳೀಯ ಪ್ರಭುತ್ವ, ಭಾಷೆ ಹಾಗೂ ಆರಾಧನಾ ಸಂಪ್ರದಾಯಗಳು ಅಧೀನ ನೆಲೆಯಲ್ಲಿ ಗುರುತಿಸಿಕೊಳ್ಳಲಾರಂಭಿಸಿದವು. ಈ ಕಾರಣದಿಂದಾಗಿಯೇ ತುಳುನಾಡಿನ ಶ್ರೀಮಂತ ಜನಪದ ಸಾಹಿತ್ಯವಾದ ಪಾಡ್ದನಗಳು ಸೀಮಿತ ನೆಲೆಯಲ್ಲಿ ವ್ಯಾಖ್ಯಾನಗೊಳ್ಳುವಂತಾಯಿತು. ಅವು ಭೂತಾರಾಧನೆಯ ತಾಂತ್ರಿಕ ವಿಚಾರಗಳಿಗಷ್ಟೆ ಸೀಮಿತಗೊಂಡು ಅವುಗಳೊಳಗಿನ ಸಾಮಾಜಿಕ ಸಂಬಂಧಗಳ ಪ್ರಶ್ನೆಗಳು ಗೌಣವಾದವು. ನಿಜಾರ್ಥದಲ್ಲಿ ಪಾಡ್ದನಗಳು ತುಳುನಾಡಿನ ರಾಜ್ಯ ನಿರ್ಮಾಣ ಪ್ರಕ್ರಿಯೆಯಿಂದ ಹಿಡಿದು ಜನೇತಿಹಾಸ ನಿರ್ಮಾಣದವರೆಗಿನ ಮಹತ್ವದ ವಿಚಾರಗಳನ್ನು ಒಳಗೊಂಡಿವೆ. ಪಾಡ್ದನಗಳಲು ದೈವಾರಾಧನೆಗಷ್ಟೆ ಸೀಮಿತಗೊಂಡ ಸಾಹಿತ್ಯವಾಗಿರದೆ, ಅವುಗಳಲ್ಲಿ ತುಳುನಾಡಿನ ಸಾಂಸ್ಕೃತಿಕ ಹಾಗೂ ಚಾರಿತ್ರಿಕ ಬದುಕು ಅಡಕವಾಗಿದೆ ಎನ್ನುವುದು ವಾಸ್ತವ ವಿಚಾರ. ಪ್ರಸ್ತುತ ಅಧ್ಯಯನದಲ್ಲಿ ಪಾಡ್ದನಗಳ ತಾತ್ವಿಕತೆ, ಸಮುದಾಯಗಳು ಮೌಖಿಕ ಸಾಹಿತ್ಯದ ಮೂಲಕ ಕಂಡುಕೊಳ್ಳುವ ಐಡೆಂಟಿಟಿ, ಅಧ್ಯಯನದ ನೆಲೆಗಳು, ಜನಪದ ಸಾಹಿತ್ಯದ ಚಾರಿತ್ರಿಕ ವಿಶ್ಲೇಷಣೆ ನಡೆಸುವ ವಿಧಾನ, ಲಿಖಿತ ಸಾಹಿತ್ಯವು ಜನಪದ ಸಾಹಿತ್ಯ ಹಾಗೂ ಆಚರಣೆಗಳನ್ನು ಹೈಜಾಕ್‌ ಮಾಡಿರುವ ಬಗೆ, ಸಿರಿ ಪಠ್ಯದೊಳಗೆ ಕಂಡು ಬರುವ ರಾಜಕೀಯ ಸಂಘರ್ಷದ ನೆಲೆಗಳು, ಊಳಿಗಮಾನ್ಯ ಸಾಮಾಜಿಕ ರಚನೆ, ಸಿರಿ ಪಠ್ಯದಲ್ಲಿ ಬಹುಮುಖ್ಯವಾಗಿ ಚರ್ಚಿತವಾದ ಮಾತೃವಂಶೀಯತೆ ಮುಂತಾದ ವಿಚಾರಗಳ ಸೂಕ್ಷ್ಮ ಅಧ್ಯಯನ ನಡೆಸಲಾಗಿದೆ.

ಸಿರಿ ಪಾಡ್ದನವು ಚರಿತ್ರೆಯ ಪುರುಷ ಪ್ರಾಧಾನ್ಯತೆಯನ್ನು ನಿರಾಕರಿಸುವ ಒಂದು ಕಥನ. ಇದು ಮಾತೃವಂಶೀಯ ಕುಟುಂಬವೊಂದರ ನಾಲ್ಕು ತಲೆಮಾರುಗಳ ಬದುಕಿನ ವಿವಿಧ ಅವಸ್ಥೆಗಳ ವಿವರಗಳನ್ನೊಳಗೊಂಡ ಸುದೀರ್ಘವಾದ ಜನಪದ ಕಾವ್ಯ ಸಿರಿಯ ಹುಟ್ಟು, ಮದುವೆ, ಉತ್ತರಾಧಿಕಾರತ್ವ, ವಿಚ್ಛೇದನ, ಮರುಮದುವೆ, ಸಿರಿ ಮಾಯವಾಗುವುದು ಹಾಗೂ ಸಿರಿಯ ಮಗಳಾದ ಸೊನ್ನೆ ಮತ್ತು ಸೊನ್ನೆಯ ಮಕ್ಕಳಾದ ಅಬ್ಬಗ-ದಾರಗ ಹೀಗೆ ಪಾಡ್ದನವು ಹಲವಾರು ವಿಚಾರಗಳನ್ನು ಒಳಗೊಂಡಿದ್ದು ಸಂಘರ್ಷ ಹಾಗೂ ಹೊಂದಾಣಿಕೆಗಳ ಮೂಲಕ ವಿಸ್ತಾರಗೊಳ್ಳುತ್ತಾ ಹೋಗುತ್ತದೆ. ಸಿರಿಯ ಅಜ್ಜ ಬೆರ್ಮಾಳ್ವ, ಗಂಡ ಬಸ್ರೂರಿನ ಕಾಂತುಪೂಂಜ, ಮರುಮದುವೆಯಾದ ಕೊಟ್ರಪಾಡಿಯ ಕೊಡ್ಸರಾಳ್ವ, ಮಗ ಕುಮಾರ, ಮಗಳು ಸೊನ್ನೆ, ಸೊನ್ನೆಯ ಗಂಡ ಗುರುಮಾರ್ಲ ಹಾಗೂ ಮಕ್ಕಳು ಅಬ್ಬಗ-ದಾರಗ ಇವರ ಈ ನಾಲ್ಕು ತಲೆಮಾರುಗಳ ಬದುಕಿನ ಚಿತ್ರಣ ಮೇಲ್ನೋಟಕ್ಕೆ ತುಳುನಾಡಿನ ಕೃಷಿಕ ಸಮಾಜವೊಂದರ ಬದುಕನ್ನು ತೆರೆದಿಡುವಂತೆ ಕಂಡುಬಂದರೂ, ಅದರೊಳಗಿರುವುದು ಊಳಿಗಮಾನ್ಯ ಸಮಾಜವೊಂದರಲ್ಲಿ ನಡೆಯುವ ಸಾಂಸ್ಕೃತಿಕ ರಾಜಕಾರಣ. ಇದು ಧರ್ಮ, ಅಧಿಕಾರ, ಲಿಂಗ ಮುಂತಾದ ವಿಚಾರಗಳ ಮೂಲಕ ಸಿರಿಯ ಜನನದಿಂದ ಅಬ್ಬಗ-ದಾರಗರ ಸಾವಿನವರೆಗೂ ಮುಂದುವರಿದಿರುವುದು ಪಾಡ್ದನದಿಂದ ತಿಳಿದುಬರುತ್ತದೆ.

ಸಿರಿ ಪಠ್ಯ ರೂಪುಗೊಂಡಿರುವುದೇ ಸಂಘರ್ಷದ ಹಿನ್ನೆಲೆಯಲ್ಲಿ. ಅದು ರಾಜಕೀಯ, ಸಾಮಾಜಿಕ, ಆರ್ಥಿಕ ಎನ್ನುವ ಬೇರೆ ಬೇರೆ ನೆಲೆಗಳಿಂದ ಕಂಡುಬಂದರೂ ಅದರ ಉದ್ದೇಶ ಒಂದೆ. ಆದರೂ ಸಂಘರ್ಷದ ನೆಲೆಗಳನ್ನು ಬೇರ್ಪಡಿಸಿ ನೋಡಿದಾಗ ಪ್ರತಿಯೊಂದು ನೆಲೆಯೂ ಎಷ್ಟೊಂದು ಮಹತ್ವದ್ದು ಹಾಗೂ ಪರಿಣಾಮಕಾರಿಯಾದದ್ದು ಎನ್ನುವ ಅಂಶ ತಿಳಿದುಬರುತ್ತದೆ. ಸಿರಿ ಪಠ್ಯವನ್ನು ಸ್ತ್ರೀವಾದದ ಚರ್ಚೆಗೆ ಇಂದು ಹೆಚ್ಚು ಬಳಸಲಾಗುತ್ತಿದೆ. ಸಿರಿಯು ಪುರುಷಪ್ರಾನ ಸಮಾಜದ ತೀರ್ಮಾನಗಳನ್ನು ಧಿಕ್ಕರಿಸುವುದು ಹಾಗೂ ತನಗೆ ಅನ್ಯಾಯವಾದಾಗಲೆಲ್ಲ ಪ್ರತಿಭಟಿಸುವುದು ಸ್ತ್ರೀವಾದದ ಚರ್ಚೆಗೆ ಅವಳನ್ನು ಎಳೆದು ತರುವಂತೆ ಮಾಡಿದೆ. ಇದರಾಚೆಗೂ ಸಿರಿ ಪಠ್ಯವನ್ನು ನೋಡುವ ಸಾಧ್ಯತೆಗಳಿವೆ. ತುಳುನಾಡಿನ ಭೂ ಸಂಬಂಧಗಳು, ವೈವಾಹಿಕ ಸಂಬಂಧಗಳು, ಬಂಧುತ್ವ, ವ್ಯವಸ್ಥೆ, ಊಳಿಗಮಾನ್ಯತೆ, ರಾಜ್ಯ ವ್ಯವಸ್ಥೆ ಮುಂತಾದ ಮಹತ್ವದ ಪ್ರಶ್ನೆಗಳನ್ನು ಈ ಪಠ್ಯ ಹುಟ್ಟುಹಾಖಿದ್ದು, ಅವುಗಳ ಕಡೆಗೂ ಹೆಚ್ಚು ಚರ್ಚೆ ಆಗಬೇಕಾಗಿದೆ. ಇಲ್ಲಿ ನಾವು ಎರಡು ವಿಚಾರಗಳಿಗೆ ಹೆಚ್ಚಿನ ಒತ್ತನ್ನು ನೀಡಬೇಕಾಗುತ್ತದೆ. ಅವುಗಳೆಂಧರೆ ಸಿರಿ ಅವಳ ಸಂದರ್ಭದ ಸಮಾಜಕ್ಕೆ ಮುಖಾಮುಖಿ ಯಾಗಿರುವುದು ಹಾಗೂ ನಾವು ಇಂದು ಸಿರಿಗೆ (ಸಿರಿ ಪಠ್ಯಕ್ಕೆ) ಮುಖಾಮುಖಿಯಾಗಿರುತ್ತಿ ರುವುದು. ಸಿರಿ ಅವಳ ಸಂದರ್ಭದ ಸಮಾಜಕ್ಕೆ ಯಾವ ರೀತಿ ಮುಖಾಮುಖಿಯಾದಗಳು ಎನ್ನುವುದನ್ನು ಸಿರಿಪಾಡ್ದನ ಹಾಡುವ ಹಾಡುಗಾರರು ತಮ್ಮ ಹಾಡಿನ ಮೂಲಕ ತಿಳಿಸಿದರೆ, ನಾವು ಇಂದು ಆ ಹಾಡಿಗೆ ಯಾವ ರೀತಿ ಮುಖಾಮುಖಿಯಾಗುತ್ತಿದ್ದೇವೆ ಎನ್ನುವುದನ್ನು ಸಂಶೋಧಕರ ಸಂಶೋಧನ ದೃಷ್ಟಿಕೋನ ತಿಳಿಸುತ್ತದೆ.

ಇಲ್ಲಿ ಸಂಶೋಧಕರು ಎಂದಾಗ ಸಂಶೋಧಕರ ಚಾರಿತ್ರಿಕ ದೃಷ್ಟಿಕೋನ, ಜನಪದ ವಿಚಾರಗಳನ್ನು ಗ್ರಹಿಸುವ ಬಗೆ ಮುಂತಾದ ತಾತ್ವಿಕ ವಿಚಾರಗಳು ಮುಖ್ಯವಾಗುತ್ತಿವೆ. ಸಂಶೋಧಕರು ತಮ್ಮ ಅಧ್ಯಯನ ವಿಧಾನ ಹಾಗೂ ಸೈದ್ಧಾಂತಿಕತೆಗೆ ಅನುಗುಣವಾಗಿ ತಾವು ಆಯ್ಕೆಮಾಡಿಕೊಳ್ಳುವ ವಿಷಯವನ್ನು ವಿಶ್ಲೇಷಿಸುತ್ತಾರೆ. ಇದರಿಂದಾಗಿ ಒಂದು ಪಠ್ಯದೊಳಗಿನ ಹಲವಾರು ವಿಚಾರಗಳು ಅನಾವರಣಗೊಳ್ಳುವಂತಾಯಿತು. ಸಿರಿ ಪಠ್ಯದ ಬಗ್ಗೆ ಬಂದಿರುವ ಸಾಹಿತ್ಯವನ್ನು ವಿಮರ್ಶಿಸುವಾಗ ಅದು ಹೆಚ್ಚಿನ ಮಟ್ಟಿಗೆ ಲೇಖಕಕೇಂದ್ರಿತವಾಗಿಯೇ ಕಂಡುಬರುತ್ತದೆ. ಆದರೆ ಸಿರಿ ಪಾಡ್ದನದ ಮೌಖಿಕ ರೂಪವನ್ನು ನೋಡುವಾಗ ಅಲ್ಲಿ ಲೇಖಕ ಗೌಣ ಹಾಗೂ ವಸ್ತುವೇ ಪ್ರಧಾನ. ಪಾಡ್ದನವನ್ನು ಹಾಡುವ ಹಾಡುಗಾರರು ಪೂರ್ವಾಗ್ರಹಗಳಿಗೆ ಒಳಗಾಗಿರುವುದಿಲ್ಲ. ಅವರು ಸಹಜವಾಗಿಯೆ ತಮ್ಮ ಸೃಜನಶೀಲ ನೆಲೆಯಲ್ಲಿ ಹಾಡನ್ನು ವಿಸ್ತರಿಸುತ್ತಾ ಹೋಗುತ್ತಾರೆ. ಆದರೆ ಜನಪದ ಸಾಹಿತ್ಯದ ಅಧ್ಯಯನ ಸಂದರ್ಭದಲ್ಲಿ ಸಂಶೋಧಕರು ಪೂರ್ವಾಗ್ರಹಗಳಿಗೆ ಒಳಗಾಗಿರುವುದನ್ನು ಕಾಣಬಹುದಾಗಿದೆ. ಇದಕ್ಕೆ ಸಂಶೋಧಕರು ಪ್ರತಿನಿಧಿಸುವ ಜಾತಿ, ಧರ್ಮ ಅನುಸರಿಸುವ ವಿಶ್ವಾತ್ಮಕ ಮಾದರಿಗಳು ಹಾಗೂ ಬೌದ್ಧಿಕತೆ ಬಹುತೇಕ ಕಾರಣವಾಗಿರುತ್ತದೆ.