ತುಳುನಾಡಿನ ಜನಪದ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಸ್ಥಳೀಯ ಹಾಗೂ ವಿದೇಶಿ ವಿದ್ವಾಂಸರು ಸಾಕಷ್ಟು ಅಧ್ಯಯನ ನಡೆಸಿ ತಮ್ಮದೇ ಆದ ದೃಷ್ಟಿಕೋನದ ಮೂಲಕ ಹೊಸ ಫಲಿತಗಳನ್ನು ನೀಡಿದ್ದಾರೆ. ತುಳು ಜನಪದ ಸಾಹಿತ್ಯವನ್ನು ನಾನಾ ನೆಲೆಗಟ್ಟಿನಲ್ಲಿಟ್ಟು ನೋಡುವ ಪ್ರಯತ್ನಗಳು ಅಧ್ಯಯನದ ಹೊಸ ಸಾಧ್ಯತೆಗಳನ್ನು ಪರಿಚಯಿಸಿ, ಆ ನಿಟ್ಟಿನಲ್ಲಿ ಅಧ್ಯಯನಗಳು ನಡೆಯುವಂತೆ ಮಾಡಿದವು. ಮೌಖಿಕ ಪಠ್ಯಗಳನ್ನು ಗುರುತಿಸುವ, ಸಂಗ್ರಹಿಸುವ, ಲಿಖಿತ ರೂಪಕ್ಕೆ ತರುವ, ಪ್ರಕಟಿಸುವ ಹಾಗೂ ವಿಶ್ಲೇಷಿಸುವ ಪ್ರಯತ್ನಗಳಂತೂ ನಿರಂತರವಾಗಿ ನಡೆಯುತ್ತಲೇ ಬಂದಿವೆ. ತುಳು ಭಾಷೆಯಲ್ಲಿರುವ ಜನಪದ ಸಾಹಿತ್ಯವನ್ನು ಉಳಿಸಿ ಬೆಳೆಸಿದವರು ತುಳುನಾಡಿನ ಕೆಳಸಮುದಾಯದವರು. ಏಕೆಂದರೆ ತುಳುನಾಡಿನಲ್ಲಿರುವ ವೈದಿಕ ದೇವತೆಗಳ ಆರಾಧನೆ ತುಳುನಾಡಿನ ಚೌಕಟ್ಟಿನಲ್ಲಿ ನಡೆಯುತ್ತಿದ್ದರೂ, ಅದು ಅಲ್ಲಿನ ಜನಪದ ಸಾಹಿತ್ಯ ಹಾಗೂ ಆರಾಧನಾ ವಿಧಾನಗಳಿಂದ ದೂರ ನಿಂತು ಪ್ರತ್ಯೇಕವಾಗಿಯೇ ನಡೆಯುತ್ತಾ ಬಂದಿದೆ. ಅದೇ ರೀತಿ ಸ್ಥಳೀಯ ಶ್ರೀಮಂತ ವರ್ಗಗಳು ತಮ್ಮ ಪ್ರತಿಷ್ಠೆಯ ನೆಲೆಯಲ್ಲಿ ಜನಪದ ಸಾಹಿತ್ಯವನ್ನು ಬಳಸಿಕೊಂಡವೇ ಹೊರತು ಅವನ್ನು ಉಳಿಸಿ ಬೆಳೆಸಬೇಕೆನ್ನುವ ದೃಷ್ಟಿಯಿಂದಲ್ಲ. ಆದರೂ ಅಧಿಕಾರ ಹಾಗೂ ಭೂಮಿಯಿಂದ ವಂಚಿತರಾಗಿದ್ದರೂ ತಮ್ಮ ಬದುಕಿನ ಭಾಗವಾಗಿ ತಮ್ಮೊಂದಿಗೆ ಜನಪದ ಸಾಹಿತ್ಯವನ್ನು ಕೊಂಡೊಯ್ದು ಮುಂದಿನ ಪೀಳಿಗೆಗೆ ಪರಿಚಯಿಸಿದ ತುಳುನಾಡಿನ ಕೆಳಸಮುದಾಯಗಳಿಗೆ ಎಷ್ಟು ಕೃತಜ್ಞತೆಗಳನ್ನು ಸಲ್ಲಿಸಿದರೂ ಅದು ಕಡಿಮೆಯೆಂದೇ ಹೇಳಬೇಕು. ಚರಿತ್ರೆಕಾರರು, ಜನಪದ ವಿದ್ವಾಂಸರು ಹಾಗೂ ಹವ್ಯಾಸಿ ಬರಹಗಾರರು ತುಳು ನಾಡಿನ ಬೇರೆ ಬೇರೆ ಜನಪದ ಆಚರಣೆಗಳಿಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಿ ಅವು ದಾಖಲಾಗುವಂತೆ ಮಾಡಿದರು.

ತುಳುನಾಡಿನ ಮೌಖಿಕ ಸಾಹಿತ್ಯದಲ್ಲಿ ಕೃಷಿ ಮಾಡಿದ ದೇಶಿ ಹಾಗೂ ವಿದೇಶಿ ವಿದ್ವಾಂಸರಲ್ಲಿ ಬಿ.ಎ. ವಿವೇಕ ರೈ, ಅಮೃತ ಸೋಮೇಶ್ವರ, ಕೆ. ಚಿನ್ನಪ್ಪ ಗೌಡ, ವಾಮನ ನಂದಾವರ, ಎ.ವಿ.ನಾಗಡ, ಗಾಯತ್ರಿ ನಾವಡ, ಪುರುಷೋತ್ತಮ ಬಿಳಿಮಲೆ, ಯು.ಪಿ. ಉಪಾಧ್ಯಾಯ, ಶೀನಪ್ಪ ಹೆಗ್ಡೆ, ಪಾಲ್ತಾಡಿ ರಾಮಕೃಷ್ಣ ಆಚಾರ್, ಲೌರಿ ಹಾಂಕೊ, ಅನೆಲಿ ಹಾಂಕೊ, ಪೀಟರ್ ಜೆ.ಕ್ಲಾಸ್‌, ಎ. ಮ್ಯಾನರ್, ಎ.ಸಿ. ಬರ್ನೆಲ್‌, ಹೈಡ್ರೂನ್‌ ಬ್ರೂಕ್ನರ್ ಮುಂತಾದವರು ಪ್ರಮುಖರು. ಚಾರಿತ್ರಿಕವಾಗಿ ತುಳುನಾಡಿನ ಸಂಸ್ಕೃತಿ ಹಾಗೂ ಚರಿತ್ರೆಯ ಅಧ್ಯಯನ ನಡೆಸಿದವರಲ್ಲಿ ಎಂ. ಗಣಪತಿ ರಾವ್‌ ಐಗಳ್‌, ಪಿ. ಗುರುರಾಜ ಭಟ್‌, ಕೆ.ವಿ. ರಮೇಶ್‌, ಬಿ.ಎ. ಸಾಲೆತ್ತೂರ್, ಶೀನಪ್ಪ ಹೆಗ್ಡೆ ಮುಂತಾದವರು ಪ್ರಮುಖರು. ತುಳುನಾಡಿನ ಚರಿತ್ರೆ ಹಾಗೂ ಜನಪದ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಹಲವಾರು ಎಂ.ಫಿಲ್‌ ಹಾಗೂ ಪಿಎಚ್‌.ಡಿ. ಅಧ್ಯಯನಗಳು ನಡೆದಿದ್ದು, ಸಂಶೋಧನೆಯ ಯುವಪಡೆಯೊಂದೇ ನಿರ್ಮಾಣವಾಗಿದೆ. ಮೇಲೆ ಹೆಸರಿಸಿದ ಸಂಶೋಧಕರಲ್ಲಿ ಬಹುತೇಕರು ಪ್ರಸ್ತುತ ಅಧ್ಯಯನದ ವಸ್ತುವಾದ ಸಿರಿಯ ಬದುಕು ಹಾಗೂ ಹೋರಾಟ-ಹೊಂದಾಣಿಕೆಗಳ ಕುರಿತು ಅಧ್ಯಯನ ನಡೆಸಿದ್ದಾರೆ. ಬಿ.ಎ. ವಿವೇಕ ರೈ, ಕೆ. ಚಿನ್ನಪ್ಪ ಗೌಡ, ಎ.ವಿ. ನಾವಡ, ಗಾಯತ್ರಿ ನಾವಡ, ಲೌರಿ ಹಾಂಕೊ ಮುಂತಾದ ವಿದ್ವಾಂಸರು ವಿಶೇಷವಾಗಿ ಸಿರಿಯ ಬಗ್ಗೆ ಅಧ್ಯಯನ ನಡೆಸಿ, ಸಿರಿ ಪಠ್ಯ ಹುಟ್ಟು ಹಾಕಿರುವ ಪ್ರಶ್ನೆಗಳನ್ನು ನಾನಾ ಮಗ್ಗಲುಗಳಿಂದ ವಿಶ್ಲೇಷಿಸುವ ಪ್ರಯತ್ನವನ್ನು ಮಾಡಿದ್ದಾರೆ. ಎ.ವಿ. ನಾವಡ ಅವರ ‘ರಾಮಕ್ಕ ಮುಗ್ಗರ್ತಿ ಕಟ್ಟಿದ ಸಿರಿ ಪಾಡ್ದನ’ ಹಾಗೂ ಲೌರಿ ಹಾಂಕೊ, ಚಿನ್ನಪ್ಪ ಗೌಡ, ಅನೆಲಿ ಹಾಂಕೊ, ವಿವೇಕ ರೈ ಇವರುಗಳು ಗೋಪಾಲ ನಾಯ್ಕ ಅವರು ಹಾಡಿದ ಸಿರಿ ಪಾಡ್ದನವನ್ನು ಸಂಗ್ರಹಿಸಿ ಪ್ರಕಟಿಸಿರುವುದು ಈ ನಿಟ್ಟಿನಲ್ಲಿ ಪ್ರಮುಖವಾದದ್ದು. ಲೌರಿ ಹಾಂಕೊ ಅವರ ‘ಟೆಕ್ಸ್‌ಚ್ವಲೈಸಿಂಗ್‌ ದಿ ಸಿರಿ ಎಫಿಕ್‌’, ಪೀಟರ್ ಜೆ. ಕ್ಲಾಸ್‌ ಅವರ ‘ದಿ ಸಿರಿ ಮಿಥ್‌ ಹ್ಯಾಂಡ್‌ ರಿಚ್ವಲ್‌: ದಿ ಮಾಸ್‌ ಪೊಸ್ಸೆಷನ್‌ ಕಲ್ಟ್‌ ಆಫ್‌ ಸೌತ್‌ ಇಂಡಿಯಾ’ ಎನ್ನುವ ಲೇಖನ, ಗಾಯತ್ರಿ ನಾವಡ ಅವರ‍ ‘ವಿರಚನೆ’ ಹಾಗೂ ‘ಕರಾವಳಿ ಜನಪದ ಸಾಹಿತ್ಯದಲ್ಲಿ ಸ್ತ್ರೀವಾದಿ ನೆಲೆಗಳು’ ಗ್ರಂಥಗಳು, ಬಿ.ಎ. ವಿವೇಕ ರೈ ಅವರ ‘ತುಳು ಜನಪದ ಸಾಹಿತ್ಯ’, ಎ.ವಿ. ನಾವಡ ಅವರ ‘ಒಂದು ಸೊಲ್ಲು ನೂರು ಸ್ವರ’ ಮುಂತಾದ ಬರಹಗಳು ಸಿರಿಯ ತಾಂತ್ರಿಕ ಹಾಗೂ ತಾತ್ವಿಕ ವಿಚಾರಗಳನ್ನು ಅರ್ಥೈಸಿಕೊಳ್ಳಲು ಸಹಕಾರಿಯಾಗಿವೆ.

ಸಿರಿ ಆರಾಧನಾ ಪದ್ಧತಿಯ ಕುರಿತಂತೆ ಸಾಕಷ್ಟು ಅಧ್ಯಯನಗಳು ನಡೆದಿವೆ. ಸಿರಿ ಜಾತ್ರೆಯ ಸಂದರ್ಭದಲ್ಲಿ ಮಹಿಳೆಯರೇ ಹೆಚ್ಚಾಗಿ ಭಾಗವಹಿಸುವುದು, ಸಿರಿ ಮೈಮೇಲೆ ಬರುವುದು, ಸಿರಿ ದೀಕ್ಷೆ ಪಡೆಯುವುದು ಮುಂತಾದ ವಿಚಾರಗಳನ್ನು ಜನಪದ ನೆಲೆಯಿಂದಷ್ಟೇ ಅಲ್ಲದೆ ಮನಃಶಾಸ್ತ್ರದ ಹಿನ್ನೆಲೆಯಿಂದಲೂ ಅಧ್ಯಯನ ನಡೆಸಲಾಗಿದೆ. ಪೀಟರ್ ಜೆ.ಕ್ಲಾಸ್‌ ಅವರು ಸಿರಿ ಆರಾಧನೆಯ ಮನಃಶಾಸ್ತ್ರೀಯ ಅಧ್ಯಯನ ನಡೆಸಿದ್ದಾರೆ. ಸಿರಿ ಜಾತ್ರೆಯಲ್ಲಿ ಮಹಿಳೆಯರು ಆವೇಶ ಬಂದಾಗ ವರ್ತಿಸುವ ರೀತಿ, ಎತ್ತುವ ಪ್ರಶ್ನೆಗಳು, ಕಂಡುಕೊಳ್ಳುವ ಪರಿಹಾರಗಳು ಹಾಗೂ ರಕ್ತಸಂಬಂಧದ ಸಾಮಾಜಿಕ ಆಯಾಮಗಳ ಅಧ್ಯಯನಗಳು ನಡೆದಿವೆ. ಸಿರಿ ಸಂಧಿ ಜೀವಂತವಾದ ಬದುಕಿನ ಅನುಭವಗಳ ಕಥನ. ಸಿರಿ ಸಂಧಿಯನ್ನು ಬೇರೆಬೇರೆ ಹಾಡುಗಾರರು ಹಾಡುವಾಗ ಅದು ಬೇರೆಬೇರೆ ರೀತಿಯಲ್ಲಿ ಪ್ರಕಟವಾಗುತ್ತಾ ಹೋದರೂ ಮೂಲ ಆಶಯ ಹಾಗೂ ಪಾತ್ರಗಳ ಹಿನ್ನೆಲೆಯಲ್ಲಿ ನೋಡುವಾಗ ವ್ಯತ್ಯಾಸಗಳು ಕಂಡುಬರುವುದಿಲ್ಲ. ಸಂಶೋಧಕರು ಮುಖ್ಯವಾಗಿ ಗಮನಿಸಬೇಕಾದ ವಿಚಾರವೆಂದರೆ ತುಳುನಾಡಿನ ಸಾಂಸ್ಕೃತಿಕ ಚೌಕಟ್ಟಿನಲ್ಲಿ ಸಿರಿ ಸಂಧಿಯ ಮಹತ್ವ, ತುಳು ಕೌಟುಂಬಿಕ ಪರಿಸರವನ್ನು ಅದು ಪ್ರತಿನಿಧಿಸುವ ಬಗೆ, ಕೃಷಿಕೇಂದ್ರಿತ ಅರ್ಥವ್ಯವಸ್ಥೆಯೊಳಗಿನ ಯಜಮಾನಿಕೆಯ ಪ್ರಶ್ನೆಗಳು ಹಾಗೂ ಕುಟುಂಬ ಮೂಲದ ರಾಜ್ಯ ವ್ಯವಸ್ಥೆಯ ಹಾಗೂ ಆಡಳಿತದ ಸ್ವರೂಪ. ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಅಧ್ಯಯನಗಳು ನಡೆಯಬೇಕಾದ ಅವಶ್ಯಕತೆ ಇದೆ.