ಚರಿತ್ರೆಯಲ್ಲಿ ಸಾಮಾನ್ಯವಾಗಿ ರಾಜ್ಯ ವ್ಯವಸ್ಥೆಯ ಕುರಿತು ಅಧ್ಯಯನ ನಡೆಸುವಾಗ ಪುರುಷಪ್ರಧಾನ ನೆಲೆ ಮುಖ್ಯ ಭೂಮಿಕೆಯಾಗಿರುತ್ತದೆ. ಚರಿತ್ರೆಯಲ್ಲಿ ರಾಜ್ಯವನ್ನಾಗಳಿದ ರಾಣಿಯರ ಉಲ್ಲೇಖ ಅಲ್ಲೊಂದು ಇಲ್ಲೊಂದು ಸಿಗುವುದರಿಂದಾಗಿ ರಾಜ್ಯವೆಂದರೆ ರಾಜ ಹಾಗೂ ರಾಜನೆಂದರೆ ಪುರುಷ ಎಂಬಂತಾಗಿ ಇಡಿ ವ್ಯವಸ್ಥೆಯ ಪುರುಷಪ್ರಧಾನವಾಗಿ ಮಾರ್ಪಟ್ಟಿರುವುದು ಚರಿತ್ರೆ ಪಠ್ಯಗಳಿಂದ ತಿಳಿದುಬರುತ್ತದೆ. ರಾಣಿಯರ ಉಲ್ಲೇಖಗಳು ಸಿಗುತ್ತವೆ ಎಂದಾಕ್ಷಣ ಅದನ್ನು ಮಹಿಳಾ ಚರಿತ್ರೆ ಎಂಬುದಾಗಿ ಪರಿಗಣಿಸಲು ಸಾಧ್ಯವಾಗುವುದಿಲ್ಲ. ಜನರ ಚರಿತ್ರೆ, ಮಹಿಳಾ ಚರಿತ್ರೆ ಮುಂತಾದ ಪರಿಕಲ್ಪನೆಗಳು ಖಚಿತವಾದ ಸೈದ್ಧಾಂತಿಕತೆಯೊಂದಿಗೆ ರೂಪುಗೊಂಡಂಥವು. ಅಲೆಮಾರಿಯಾಗಿದ್ದ ಮಾನವ ಒಂದು ಕಡೆ ಸ್ಥಿರವಾಗಿ ನೆಲೆನಿಂತು ಕೃಷಿಯಲ್ಲಿ ತೊಡಗಿದಂದಿನಿಂದ ಭೂಮಿ ಹಾಗೂ ಹೆಣ್ಣಿನ ಮೇಲೆ ಅಧಿಕಾರ ಸ್ಥಾಪಿಸಿರುವುದು, ಫಲವಂತಿಕೆಯ ನೆಲೆಯಲ್ಲಿ ಭೂಮಿ ಹಾಗೂ ಹೆಣ್ಣನ್ನು ನೋಡಿರುವುದು, ಅದಕ್ಕೆ ಸಂಬಂಧಿಸಿದ ಅಲೌಕಿಕ ಚಿಂತನೆಗಳನ್ನು ಹುಟ್ಟುಹಾಕಿರುವುದು ಮುಂತಾದ ವಿಚಾರಗಳನ್ನು ಸ್ತ್ರೀವಾದಿ ಚರಿತ್ರೆ ವಿಮರ್ಶಾತ್ಮಕವಾಗಿ ಪರಿಶೀಲಿಸುತ್ತದೆ. ಚರಿತರೆ ಅಧ್ಯಯನದ ಹಳೆಯ ಮಾದರಿಗಳು ಬದಲಾದ ಅಧ್ಯಯನ ಕ್ರಮದಿಂದಾಗಿ ತನ್ನ ಹಿಂದಿನ ವರ್ಚಸ್ಸು ಹಾಗೂ ಹಿಡಿತವನ್ನು ಕಳೆದುಕೊಂಡು ಟೀಕೆಗಳನ್ನು ಎದುರಿಸುತ್ತಿದೆಯಾದರೂ ಅದು ಮೂಡಿಸಿದ ಛಾಪು ಇನ್ನೂ ಸಂಪೂರ್ಣವಾಗಿ ಮರೆಯಾಗಿಲ್ಲ. ಚರಿತ್ರೆಯನ್ನು ಅಲಕ್ಷಿತ ನೆಲೆಯಿಂದ ನೋಡುವ ಕ್ರಮ ಆರಂಭವಾದಾಗಿನಿಂದ ಚರಿತ್ರೆಕಾರರು ಚರಿತ್ರೆಯ ಬಹುಸತ್ಯಗಳ ಕಡೆಗೆ ಮುಖಮಾಡಲಾರಂಭಿಸಿದರು. ಇದರ ಪರಿಣಾಮವಾಗಿಯೆ ಪಾಡ್ದನಗಳಂಥ ಮೌಖಿಕ ಆಕರಗಳು ಚರಿತ್ರೆ ನಿರ್ಮಾಣಕ್ಕೆ ಅತ್ಯಮೂಲ್ಯವಾದ ಹಾಗೂ ಅನಿವಾರ್ಯವಾದ ಆಕರಗಳಾಗಿ ಕಂಡುಬಂದಿರುವುದು. ಮಾನವನ ಅನುಭವಗಳ ನೆಲೆಯಲ್ಲಿ ಚರಿತ್ರೆಯನ್ನು ರಚಿಸುವ ಕಾರ್ಯ ಈ ಹಿನ್ನೆಲೆಯಿಂದಲೇ ಗಟ್ಟಿಗೊಂಡಿರುವಂತದ್ದು.

ಸಿರಿ ಚರಿತ್ರೆಯ ಯಾವ ಕಾಲಘಟ್ಟದಲ್ಲಿ ಬದುಕಿದ್ದಳು ಎನ್ನುವುದಕ್ಕಿಂತ ಸಿರಿಯ ಬದುಕು ಯಾವ ರೀತಿ ರೂಪುಗೊಂಡಿತ್ತು ಎನ್ನುವುದು ಮುಖ್ಯವಾಗುತ್ತದೆ. ಚರಿತ್ರೆ ವರ್ತಮಾನದ ಕಥನವಾಗಿರುವುದರಿಂದ ಸಿರಿ ತನ್ನ ವರ್ತಮಾನವನ್ನು ಹೇಗೆ ಅನುಭವಿಸಿದಳು ಹಾಗೂ ಅವಳು ಯಾವ ವ್ಯವಸ್ಥೆಯೊಳಗೆ ಬಂದಿಯಾಗಿದ್ದಳು ಎನ್ನುವುದು ಕುತೂಹಲಕರವಾದ ವಿಚಾರವಾಗಿ ಕಂಡುಬರುತ್ತದೆ. ಚರಿತ್ರೆಗೆ ಕಾಲದ ನೆಲೆಯಷ್ಟೆ ಮುಖ್ಯವಾದರೆ ಅದು ಕಾಲದ ಸುಳಿಯೊಳಗೆ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆಗಳಿರುತ್ತವೆ. ಚರಿತ್ರೆಯನ್ನು ಮಾನವನ ಕ್ರಿಯೆ ಹಾಗೂ ಅನುಭವಗಳ ನೆಲೆಯಿಂದ ನೋಡುತ್ತಾ ಹೋದರೆ ಅದರೊಳಗೆ ಜೀವಂತಿಕೆಯನ್ನು ಕಾಣಲು ಸಾಧ್ಯ ಹಾಗೂ ಆಯಾ ಸಂದರ್ಭದ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತ್ಯಂತರಗಳನ್ನು ಅರ್ಥೈಸಿಕೊಳ್ಳಲು ಸಾಧ್ಯ. ಸಿರಿಯ ಬದುಕು ಇವತ್ತಿಗೆ ಮುಖ್ಯವಾಗುವುದು ಈ ದೃಷ್ಟಿಯಿಂದ ನೋಡಿದಾಗ ಮಾತ್ರ. ಸಿರಿಯನ್ನು ಕೃಷಿ ಸಮಾಜದ ಒಬ್ಬ ಮಹಿಳೆಯನ್ನಾಗಿ ನೋಡಿದಾಗ ಚರಿತ್ರೆಯ ಕಾಲಾವಧಿಗಳು ಮುಖ್ಯವೆನಿಸುವುದೇ ಇಲ್ಲ. ಸಮಕಾಲೀನ ಸಂದರ್ಭದ ಮಹಿಳೆಯ ಸ್ಥಿತಿಗತಿ ಕುರಿತು ಆಲೋಚನೆ ನಡೆಸುವಾಗ ಸಿರಿ ಜೀವಂತ ಮಹಿಳೆಯಾಗಿ ಕಂಡುಬರುತ್ತಾಳೆಯೇ ವಿನಹ ಚರಿತ್ರೆಯ ಯಾವುದೋ ಕಾಲಾವಧಿಗೆ ಸಂದುಹೋದ ಮಹಿಳೆಯಾಗಿ ಅಲ್ಲ. ಇಲ್ಲಿ ಜೀವಂತಿಕೆಯೆಂದರೆ ಸಿರಿ ಅನುಭವಿಸಿದ ಸಮಸ್ಯೆಗಳು, ಸಮಸ್ಯೆಗಳನ್ನು ಎದುರಿಸಿದ ರೀತಿ ಹಾಗೂ ಅವಳನ್ನು ಸುತ್ತುವರಿದಿದ್ದ ಅಧಿಕಾರದ ನೆಲೆಯ ಶಕ್ತಿಗಳು. ಇವು ಯಾವ ಕಾಲಕ್ಕೂ ಜೀವಂತವಾಗಿ ಇರುವಂಥ ಲಕ್ಷಣಗಳೇ ಆಗಿವೆ. ಹೀಗಾಗಿ ಸಿರಿ ಪಾಡ್ದನದಲ್ಲಿನ ಆಶಯಗಳು ಕಾಲದ ಚೌಕಟ್ಟನ್ನು ಮೀರಿರುವಂತವು ಹಾಗೂ ಎಲ್ಲ ಕಾಲಕ್ಕೂ ನಿಲ್ಲುವಂತವು. ಚರಿತ್ರೆ ಇಂದು ವ್ಯಾಖ್ಯಾನಗೊಳ್ಳುತ್ತಿರುವುದು ಈ ವೈಧಾನಿಕತೆಯ ಮೂಲಕ, ಇದು ಅಧ್ಯಯನಕಾರರ ಚಾರಿತ್ರಿಕ ದೃಷ್ಟಿಕೋನ ಅಥವಾ ಗ್ರಹಿಕೆಗೆ ಸಂಬಂಧಪಟ್ಟ ವಿಚಾರವಾದರೂ ವಸ್ತುಸ್ಥಿತಿಯನ್ನು ಅರ್ಥೈಸಿಕೊಳ್ಳಲುವುದಕ್ಕೆ ಅನಿವಾರ್ಯವಾದದ್ದಾಗಿದೆ.

ಚರಿತ್ರೆಕಾರ ಆರ್.ಜಿ. ಕಾಲಿಂಗ್‌ವುಡ್‌ ಅವರು ತಮ್ಮ “ದಿ ಐಡಿಯಾ ಆಫ್‌ ಹಿಸ್ಟರಿ” ಕೃತಿಯಲ್ಲಿ ಚರಿತ್ರೆಯ ಘಟನೆಗಳಲ್ಲಿ ಅಡಕವಾಗಿರುವ ವಿಚಾರಗಳನ್ನು ಚರಿತ್ರೆಕಾರ ಪುನರ್ ವಿಮರ್ಶೆಗೆ ಒಡ್ಡಬೇಕು ಎಂದಿದ್ದಾರೆ. ಅವರ ಪ್ರಕಾರ ಘಟನೆಗಳನ್ನು ಅರಿಯುವುದು ಹಾಗೂ ಘಟನೆಗಳಲ್ಲಿರುವ ಆಲೋಚನೆಗಳನ್ನು ಪತ್ತೆಹಚ್ಚುವುದು ಚರಿತ್ರೆಕಾರನ ಮುಖ್ಯ ಉದ್ದೇಶಗಳಲ್ಲಿ ಒಂದಾಗಿರಬೇಕು. ಏಕೆಂದರೆ ಮಾನವನ ಪ್ರತಿಯೊಂದು ಘಟನೆಯೂ ಹಲವಾರು ಚಿಂತನೆಗಳಿಂದ ಕೂಡಿರುತ್ತದೆ. ಹಾಗೂ ಘಟನೆಗಳ ಹಿಂದೆ ಕ್ರಿಯೆಗಳಿರುತ್ತವೆ. ಏನು ನಡೆಯಿತು ಎನ್ನುವುದು ದೈಹಿಕ ಚಲನೆಗೆ ಸಂಬಂಧಿಸಿದ ಅಥವಾ ಮೇಲ್ನೋಟಕ್ಕೆ ಪ್ರಕಟವಾಗುವ ಅಂಶವಾದರೆ, ಯಾಕೆ ನಡೆಯಿತು ಎನ್ನುವುದು ಘಟನೆಯ ಚಿಂತನೆಯ ಭಾಗವಾಗಿರುತ್ತದೆ. ಸಿರಿಯ ಘಟನೆಯನ್ನು ಉದಾಹರಣೆಯನ್ನಾಗಿ ತೆಗೆದುಕೊಳ್ಳುವುದಾದರೆ ಅದು ಊಳಿಗಮಾನ್ಯ ಸಮಾಜದ ಸಾಮಾನ್ಯ ಲಕ್ಷಣವಾಗಿ ಮೇಲ್ನೋಟಕ್ಕೆ ಕಂಡುಬರುತ್ತದೆ. ಆದರೆ ಅದೇ ಘಟನೆಯನ್ನು ಪ್ರಸ್ತುತ ಸಂದರ್ಭದ ಸ್ತ್ರೀವಾದಿ ಚಿಂತನೆಯ ಮೂಲಕ ನೋಡಿದಾಗ ಸಿಗುವ ಚಿತ್ರಣವೇ ಬೇರೆ. ಅದೇ ರೀತಿ ಊಳಿಗಮಾನ್ಯತೆ, ಮಾತೃವಂಶೀಯತೆ, ಅಲೌಕಿಕತೆ, ಪುರುಷಪ್ರಭುತ್ವ ಮುಂತಾದ ವಿಚಾರಗಳ ಮೂಲಕ ಸಿರಿ ಪಾಡ್ದನವನ್ನು ನೋಡಿದಾಗ ಸಿರಿಯ ಸಂದರ್ಭದ ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘರ್ಷಗಳು ಅನಾವರಣಗೊಳ್ಳುತ್ತಾ ಹೋಗುತ್ತವೆ. ಈ ಸಂಘರ್ಷಗಳು ಅಂದಿನ ಸಂದರ್ಭದಲ್ಲಿ ಸಂಘರ್ಷದ ರೂಪದಲ್ಲಿದ್ದವೇ ಅಥವಾ ಇಂದು ಅದನ್ನು ಸಂಘರ್ಷದ ರೂಪದಲ್ಲಿ ನೋಡಲಾಗುತ್ತಿದೆಯೇ ಎನ್ನುವುದು ವೈಚಾರಿಕತೆಗೆ ಸಂಬಂಧಿಸಿದ ಪ್ರಶ್ನೆ.

ಆಧುನಿಕ ಪರಿಕಲ್ಪನೆಗಳ ಮೂಲಕ ಚರಿತ್ರೆಗೆ ಪ್ರವೇಶ ಪಡೆಯುವಾಗ ಈ ಬಗೆಯ ಪ್ರಶ್ನೆಗಳು ಹುಟ್ಟಿಕೊಳ್ಳುವುದು ಸಹಜ. ಅಧಿಕಾರ ಹಾಗೂ ಸವಲತ್ತುಗಳನ್ನು ಹೊಂದಿದ್ದ ಜನವರ್ಗದ ಯಜಮಾನಿಕೆಯ ವಿರುದ್ಧ ಅಸಮಾಧಾನಗಳು ಚರಿತ್ರೆಯುದ್ಧಕ್ಕೂ ಇದ್ದದ್ದು ನಿಜ. ಆದರೆ ಅದು ಸಾಂಘಿಕ ರೂಪವನ್ನು ಪಡೆದುಕೊಂಡಿರಲಿಲ್ಲ. ಹಾಗೂ ಸಮಕಾಲೀನ ಸಂದರ್ಭದ ಹೋರಾಟಗಳ ರೀತಿಯಲ್ಲಿ ತಮ್ಮದೇ ಆದ ಚೌಕಟ್ಟನ್ನು ನಿರ್ಮಿಸಿಕೊಂಡಿರಲಿಲ್ಲ. ಸಿರಿ ಅನ್ಯಾಯದ ವಿರುದ್ಧ ನಡೆಸಿದ ಹೋರಾಟಕ್ಕೆ ಒಂದು ಚೌಕಟ್ಟು ಹಾಗೂ ಸೈದ್ಧಾಂತಿಕ ಲಭ್ಯವಾಗಿರುವುದು ಇಂದು. ಈ ಮೂಲಕ ಇಂಥ ಅನೇಕ ಹೋರಾಟಗಳನ್ನು ಚರಿತ್ರೆಯಲ್ಲಿ ಹುಡುಕುವುದರೊಂದಿಗೆ ಇಂದಿನ ಹೋರಾಟಗಳು ಗಟ್ಟಿಗೊಳ್ಳುತ್ತಿವೆ. ಸಮುದಾಯಗಳು ತಮ್ಮ ತಮ್ಮ ಚರಿತ್ರೆಗಳನ್ನು ರಚಿಸುವ, ಮಠಗಳನ್ನು ಸ್ಥಾಪಿಸುವ ಹಾಗೂ ಗುರುವಿಗಾಗಿ ಹುಡುಕಾಡುತ್ತಿರುವ ಇಂದಿನ ಸಂದರ್ಭದಲ್ಲಿ ಚರಿತ್ರೆ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಸಿರಿಯನ್ನು ತುಳುನಾಡಿನ ಬಂಟರ ಮೂಲಸ್ತ್ರಿ ಎಂಬುದಾಗಿ ಕರೆಯಲಾಗಿದೆ. ಇದನ್ನು ಒಪ್ಪುವುದು ಅಥವಾ ಬಿಡುವುದು ಬೇರೆ ಪ್ರಶ್ನೆಯಾದರೂ ಈ ಬಗೆಯ ಪ್ರಯತ್ನ ಎಲ್ಲ ಸಮುದಾಯಗಳಲ್ಲೂ ನಡೆಯುತ್ತಿದೆ. ಇದರರ್ಥ ಪ್ರತಿಯೊಂದು ಸಮುದಾಯವೂ ತನ್ನದೇ ಆದ ಬಗೆಯಲ್ಲಿ ತನ್ನ ಅಸ್ತಿತ್ವದ ಬಗ್ಗೆ ಚಿಂತನೆ ನಡೆಸುತ್ತಿದೆ ಎನ್ನುವುದೇ ಆಗಿದೆ.

ಇಲ್ಲಿ ಚಿಂತನೆಗಳು ಅಥವಾ ಆಲೋಚನೆಗಳ ಕುರಿತು ಚರ್ಚಿಸುವಾಗ ವಿವಿಧ ನೆಲೆಗಟ್ಟಿನಿಂದ ರೂಪುಗೊಂಡ ಚಿಂತನೆಗಳು ಎದುರಾಗುತ್ತವೆ. ಸಿರಿಯ ಸಂದರ್ಭವನ್ನು ಗಮನಿಸುವಾಗ ಮೂರು ಬಗೆಯ ಚಿಂತನೆಗಳು ಪ್ರಧಾನವಾಗಿ ಕಂಡುಬರುತ್ತವೆ. ಅವುಗಳೆಂದರೆ ಸಿರಿ ತಾನು ಬದುಕಿದ್ದ ಸಾಮಾಜಿಕ ಪರಿಸರದ ಬಗ್ಗೆ ಹೊಂದಿದ್ದ ಚಿಂತನೆ, ಸಿರಿಯನ್ನು ಇಂದಿನ ಅಧ್ಯಯನಕಾರರು ತಮ್ಮದೇ ಆದ ಸೈದ್ಧಾಂತಿಕ ದೃಷ್ಟಿಕೋನದ ಮೂಲಕ ನೋಡಿ ರೂಪುಗೊಳಿಸಿದ ಚಿಂತನೆ ಹಾಗೂ ಸಿರಿಯನ್ನು ಒಂದು ಜನಾಂಗಕ್ಕೆ ಸೀಮಿತಗೊಳಿಸಿ ಐಡೆಂಟಿಟಿ ಪ್ರಶ್ನೆಯ ಮೂಲಕ ಹುಟ್ಟುಹಾಕಲಾದ ಚಿಂತನೆ. ಈ ಎಲ್ಲ ಚಿಂತನೆಗಳು ಮಾನವ ತನ್ನ ಬದುಕಿಗಾಗಿ ನಡೆಸುವ ಸಂಘರ್ಷ ಹಾಗೂ ಹೊಂದಾಣಿಕೆಗಳ ಮೂಲಕ ಹುಟ್ಟಿಕೊಂಡಿರುವಂತವು. ಇಲ್ಲಿ ನಾವು ಯಾವ ಅಧ್ಯಯನ ವಿಧಾನವನ್ನು ಅನುಸರಿಸುತ್ತಿದ್ದೇವೆ ಹಾಗೂ ಯಾವ ಸೈದ್ಧಾಂತಿಕತೆಯ ಮೂಲಕ ಅಧ್ಯಯನಕ್ಕೆ ಪ್ರವೇಶ ಪಡೆಯುತ್ತಿದ್ದೇವೆ ಎನ್ನುವುದರ ಮೂಲಕ ಚಿಂತನೆಗಳು ರೂಪುಗೊಳ್ಳುತ್ತವೆ. ಚರಿತ್ರೆಯಲ್ಲಿ ಇಂದು ಹೆಚ್ಚು ಚರ್ಚೆಗೆ ಒಳಗಾಗಿರುವ ಸ್ಥಳೀಯ ಚರಿತ್ರೆ ಹಾಗೂ ಮೌಖಿಕ ಚರಿತ್ರೆ ಪರಿಕಲ್ಪನೆಗಳು ಚರಿತ್ರೆಯಲ್ಲಿ ಇಲ್ಲಿಯವರೆಗೆ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಅದೆಷ್ಟೋ ವಿಚಾರಗಳು ಬೆಳಕಿಗೆ ಬರುವಂತೆ ಮಾಡಿವೆ. ಆದರೆ ಹಳೆಯ ಮಾದರಿಗಳನ್ನೇ ಅನುಸರಿಸಿಕೊಂಡು, ಅದೇ ಚೌಕಟ್ಟಿನಲ್ಲಿ ಹೊಸ ವಿಚಾರಗಳನ್ನು ಚರ್ಚಿಸುತ್ತಿರುವುದು ಈ ಅಧ್ಯಯನದ ಮಿತಿಯಾಗಿ ಕಂಡುಬರುತ್ತದೆ. ಸಿರಿಯಂಥ ಹಲವಾರು ಸ್ಥಳೀಯ ವಿಚಾರಗಳು ಇಂದು ಜಾಗತಿಕ ಮಟ್ಟದಲ್ಲಿ ಚರ್ಚೆಗೊಳ್ಳುತ್ತಿರುವುದು ಸಂತೋಷದ ಸಂಗತಿ. ಸಿರಿ ಪಾಡ್ದನ ಕೇವಲ ಪಠ್ಯವಾಗಿ ಉಳಿದಿಲ್ಲ. ಅದು ಮಹಾಕಾವ್ಯವಾಗಿ ಬೆಳೆದಿದೆ. ಹೀಗಾಗಿ ಸಿರಿ ಆಚರಣೆಯೂ ಪ್ರಮುಖ ಸ್ಥಾನ ಪಡೆದುಕೊಂಡ ಇದೆ. ಆದರೆ ಸಿರಿ ಪಾಡ್ದನ ತನ್ನ ಮೂಲ ಆಶಯಗಳೊಂದಿಗೆ ಜಾಗತೀಕರಣಗೊಳ್ಳಲಿಲ್ಲ. ಅದು ಅಕಡೆಮಿಕ್‌ ನೆಲೆಯಿಂಧ ಮಹಾಕಾವ್ಯವಾಗಿ ಬೆಳೇಯುವ ಹಾಗೂ ಜಾಗತೀಕರಣಗೊಳ್ಳುವ ಪ್ರಕ್ರಿಯೆಗೆ ಒಳಗಾಯಿತು. ಸಿರಿ ತುಳುನಾಡಿನಲ್ಲಿ ಹೊಂದಿರುವ ಗೌರವ, ಆಕೆಯ ಬಗೆಗಿನ ನಂಬಿಕೆ ಹಾಗೂ ಆಚರಣೆಗಳು ಸೀಮಿತ ವಲಯದಲ್ಲಷ್ಟೇ ಕಂಡುಬರುತ್ತದೆ. ಇನ್ನು ತುಳುನಾಡಿನಲ್ಲಿ ಜನಪ್ರಿಯವಾಗಿರುವ ಭೂತಾರಾಧನೆಯ ಮಟ್ಟಕ್ಕೂ ಸಿರಿ ಆರಾಧನೆ ಏರಲಿಲ್ಲ. ಆದರೆ ಸಿರಿಯ ಕುರಿತಾಗಿ ಹುಟ್ಟಿ ಕೊಂಡಿರುವ ಪಾಡ್ದನ ಇಂದು ಅಕಡೆಮಿಕ್‌ ವಲಯಗಳಲ್ಲಿ ಬಹುಚರ್ಚಿತವಾಗಿ ಜಾಗತಿಕ ಮಟ್ಟಕ್ಕೆ ಏರಿದೆ.

ಸಿರಿಯನ್ನು ಚಾರಿತ್ರಿಕವಾಗಿ ನೋಡಿ ಅವಳ ಸಂದರ್ಭದ ರಾಜಕೀಯ ಹಾಗೂ ಸಾಮಾಜಿಕ ಸ್ಥಿತಿಗತಿಗಳನ್ನು ಅರ್ಥೈಸಿಕೊಳ್ಳುವಲ್ಲಿ ಮೊದಲೆ ವಿವರಿಸಿದಂತೆ ಸ್ಥಳೀಯ ಹಾಗೂ ಮೌಖಿಕ ಚರಿತ್ರೆ ಸ್ವಲ್ಪಮಟ್ಟಿಗೆ ಯಶಸ್ವಿಯಾದರೂ, ಅದು ಗೊಂದಲಗಳನ್ನು ಹುಟ್ಟುಹಾಕಿದ್ದೇ ಹೆಚ್ಚು. ಏಕೆಂದರೆ ಈ ಎರಡೂ ಅಧ್ಯಯನ ವಿಧಾನಗಳು ಇನ್ನೂ ಸ್ಪಷ್ಟತೆಯ ಕಡೆಗೆ ಮುಖ ಮಾಡಿಲ್ಲ. ಅರಸಕೇಂದ್ರಿತ ಚರಿತ್ರೆಯಲ್ಲಿ ಸಿರಿಯಂಥ ವಿಚಾರಗಳು ಪ್ರಸ್ತಾಪಗೊಳ್ಳಲು ಸಾಧ್ಯವೇ ಇಲ್ಲ. ಏಕೆಂದರೆ ಅರಸಕೇಂದ್ರಿತ ಚರಿತ್ರೆ ಅಧಿಕಾರ ಹಾಗೂ ಸವಲತ್ತುಗಳ ನೆಲೆಯಿಂದ ನಿರ್ಮಾಣಗೊಂಡಿರುವಂತದ್ದು. ಅದು ಕೇವಲ ಅರಮನೆ ಕೇಂದ್ರಿತವಾಗಿರುತ್ತದೆಯೇ ಹೊರತು ಜನಕೇಂದ್ರಿತವಾಗಿರುವುದಿಲ್ಲ. ಇದಕ್ಕೆ ಬದಲಾಗಿ ಹುಟ್ಟಿಕೊಂಡ ಸ್ಥಳೀಯ ಚರಿತ್ರೆ ಸಿರಿಯಂಥ ಹಲವಾರು ವಿಚಾರಗಳನ್ನು ತನ್ನ ಅಧ್ಯಯನ ವ್ಯಾಪ್ತಿಗೆ ಸೇರಿಸಿಕೊಂಢರೂ ಹಳೆಯ ಅರಸಕೇಂದ್ರಿತ ಚರಿತ್ರೆಯ ಚೌಕಟ್ಟಿನಲ್ಲಿಯೇ ಅಧ್ಯಯನ ನಡೆಸಿತು. ಅಧ್ಯಯನಗಳು ಸ್ಥಳೀಯತೆಯಿಂದ ವಿಶ್ವಾತ್ಮಕತೆಯೆಡೆಗೆ ಸಾಗಬೇಕೇ ಹೊರತು ವಿಶ್ವಾತ್ಮಕತೆಯಿಂದ ಸ್ಥಳೀಯತೆಯೆಡೆಗೆ ಅಲ್ಲ. ಆ ರೀತಿ ಬಂದರೆ ವಿಶ್ವಾತ್ಮಕ ಮಾದರಿಗಳೇ ಅಂತಿಮವಾಗುವ ಅಪಾಯವಿರುತ್ತದೆ. ಸ್ಥಳೀಯ ಚರಿತ್ರೆ ಸ್ವತಂತ್ರ ಅಧ್ಯಯನ ವಿಧಾನವಾದ್ದರಿಂದ ಸ್ಥಳೀಯತೆಯ ನೆಲೆಯಿಂದ ಚರಿತ್ರೆಯನ್ನು ಗ್ರಹಿಸಿ ಫಲಿತಗಳನ್ನು ನೀಡಬೇಕಾಗುತ್ತದೆ. ಉದಾಹರಣೆಗೆ ತುಳುನಾಡಿನ ಚರಿತ್ರೆಯನ್ನು ಬೃಹತ್‌ ಸಾಮ್ರಾಜ್ಯಗಳ ಚರಿತ್ರೆಯ ಮೂಲಕ ನೋಡಲಾಗುತ್ತಿತ್ತು. ಸ್ಥಳೀಯ ಚರಿತ್ರೆ ಅಧ್ಯಯನ ಜನಪ್ರಿಯವಾದಾಗಿನಿಂದ ತುಳುನಾಡಿನ ಚರಿತ್ರೆಯನ್ನು ಸ್ಥಳೀಯ ನೆಲೆಯಿಂದ ಅಂದರೆ, ಸ್ಥಳೀಯ ಅರಸುಮನೆತನಗಳ ನೆಲೆಯಿಂದ ಅರ್ಧಯಯನ ನಡೆಸುವ ವಿಧಾನ ಆರಂಭಗೊಂಡಿತು. ಇಲ್ಲಿ ಅರಸುಮನೆತನಗಳು ಎಂದಾಕ್ಷಣ ಮತ್ತೆ ಅದೇ ಹಳೆಯ ವಿಧಾನವನ್ನು ಅನುಸರಿಸಲಾಯಿತು. ಹೀಗಾಗಿ ಅಲ್ಲಿನ ಪಾಡ್ದನಗಳು ಹಾಗೂ ಅವು ಕಟ್ಟುವ ಚರಿತ್ರೆ ಸ್ಥಳೀಯ ಅರಸು ಮನೆತನಗಳ ಅಧ್ಯಯನದ ಸಂದರ್ಭದಲ್ಲಿ ಹೆಚ್ಚಾಗಿ ಬಳಕೆಯಾಗಲಿಲ್ಲ. ಮೌಖಿಕ ಚರಿತ್ರೆಯ ವಿಚಾರ ಬಂದಾಗ ಪಾಡ್ದನಗಳು ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡವು.ಭೂತಾರಾಧನೆಯನ್ನಂತೂ ವಿಜ್ರಂಭಣೆಯತ್ತ ಕೊಂಡೊಯ್ಯಲಾಯಿತು. ಭೂತಾರಾಧನೆ ನಿಜವಾಗಲೂ ಸಾರುವ ಸತ್ಯ ಏನು, ಅದು ನಡೆಸುವ ಪ್ರತಿಭಟನೆ ಯಾವ ಸ್ವರೂಪದ್ದು, ಕತ್ತಲ ಲೋಕದಲ್ಲಿ ಭಯವನ್ನು ಹುಟ್ಟಿಸಿ ಜಮೀನುದಾರ ರನ್ನು ತಲೆಬಾಗಿಸಿ ನಿಲ್ಲುವಂತೆ ಮಾಡುವುದರ ಹಿಂದಿನ ತರ್ಕವೇನು, ಲೌಕಿಕ ಶೋಷಣೆಗೆ ಬಲಿಯಾಗಿ ಅಲೌಕಿಕ ನೆಲೆಯಲ್ಲಿ ಭೂತವಾಗಿ ಸೇಡು ತೀರಿಸಿಕೊಳ್ಳುವ ಹಾಗೂ ಆ ಮೂಲಕ ನ್ಯಾಯ ಪಡೆಯುವ ಅನಿವಾರ್ಯತೆ ಸಮಾಜದಲ್ಲಿ ಯಾಕಾಗಿ ಸೃಷ್ಟಿಯಾಯಿತು, ಭೂತಾರಾಧನೆಯಲ್ಲಿ ಭೂಮಿಯ ಪ್ರಶ್ನೆ ಹಾಗೂ ಕಲಾವಿದರ ಬದುಕಿನ ಪ್ರಶ್ನೆ ಯಾಕಾಗಿ ಅಷ್ಟೊಂದು ಪ್ರಾಮುಖ್ಯತೆಯನ್ನು ಪಡೆದುಕೊಂಡಿಲ್ಲ ಎನ್ನುವ ವಿಚಾರಗಳು ಮೌಖಿಕ ಚರಿತ್ರೆ ಚೌಕಟ್ಟಿನೊಳಗೆ ಹೆಚ್ಚು ಚರ್ಚೆಗೆ ಒಳಗಾಗಬೇಕಿತ್ತು.

ಈ ಸಮಸ್ಯೆಗಳನ್ನು ಸಮಸ್ಥೀಕರಿಸಿಕೊಂಡಾಗ ಮಾತ್ರ ಸ್ಥಳೀಯ ವಿಚಾರವೊಂದರ ಚರಿತ್ರೆ ಮೌಖಿಕ ನೆಲೆಯಲ್ಲಿ ವ್ಯಾಖ್ಯಾನಗೊಂಡು ದಾಖಲಾಗಲು ಸಾಧ್ಯ. ಇಲ್ಲದಿದ್ದರೆ ಕೇವಲ ಹೊಗಳಿಕೆಯ ಅಥವಾ ಶ್ರೀಮಂತ ಕಲೆ ಎನ್ನುವ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಬಿಂಬಿಸುವ ಪ್ರಯತ್ನವಷ್ಟೇ ಆಗಲು ಸಾಧ್ಯ. ಸಿರಿಯ ಅಧ್ಯಯನದಲ್ಲೂ ಅಧ್ಯಯನಕಾರರು ಈ ಸೂಕ್ಷ್ಮ ವಿಚಾರಗಳನ್ನು ಎಚ್ಚರಿಕೆಯಿಂದ ಗಮನಿಸಬೇಕಾಗುತ್ತದೆ. ಸಿರಿ ಒಂದು ಜೀವಂತ ಸಮಾಜದ ನಿರಂತರ ಸೃಜನಶೀಲವಾದ ಪಠ್ಯವಾದ್ದರಿಂದ ಅದನ್ನು ನಮ್ಮ ಇಂದಿನ ಅಧ್ಯಯನ ಮಾದರಿಯಲ್ಲಿ ಇಟ್ಟು ನೋಡುವುದರ ಜೊತೆ ಜೊತೆಗೆ ಪಠ್ಯವನ್ನು ಅದರ ಸಾಂಸ್ಕೃತಿಕ ಸಂದರ್ಭ ಹಾಗೂ ಚೌಕಟ್ಟಿನಲ್ಲೂ ಇಟ್ಟು ನೋಡಬೇಕಾಗುತ್ತದೆ. ಇಲ್ಲದಿದ್ದರೆ ತುಳುನಾಡಿನ ಮೌಖಿಕ ಚರಿತ್ರೆ ರಚನೆಯಲ್ಲೂ ಸಿರಿ ನಿರ್ಲಕ್ಷ್ಯಕ್ಕೆ ಒಳಗಾಗುವ ಹಾಗೂ ಸಿರಿ ಪಠ್ಯದ ಮೂಲ ಆಶಯಗಳು ಅಲಕ್ಷಿತತೆಗೆ ಒಳಗಾಗುವ ಸಾಧ್ಯತೆ ಇದೆ. ಹೀಗಾಗಿ ತುಳುನಾಡಿನ ಚರಿತ್ರೆಯನ್ನು ಸ್ಥಳೀಯ ಹಾಗೂ ಮೌಖಿಕ ನೆಲೆಯಿಂದ ಅಧ್ಯಯನ ಮಾಡಿದಾಕ್ಷಣ ಅಲ್ಲಿನ ಎಲ್ಲ ವಿಚಾರ ಗಳೂ ಬೆಳಕಿಗೆ ಬರುತ್ತವೆ ಎನ್ನುವುದು ಕೇವಲ ಭ್ರಮೆ. ಹೊಸ ಪರಿಕಲ್ಪನೆಗಳು ಹುಟ್ಟಿಕೊಳ್ಳುವಾಗ ಅವು ತಮ್ಮದೇ ಆದ ಗಟ್ಟಿಯಾದ ಸೈದ್ಧಾಂತಿಕ ದೃಷ್ಟಿಕೋನವನ್ನು ಹೊಂದಿರುತ್ತವೆ. ಅಧ್ಯಯನಕಾರರು ಹೊಸ ಪರಿಕಲ್ಪನೆಗಳನ್ನು ತಮ್ಮ ಅಧ್ಯಯನಕ್ಕೆ ಒಳಪಡಿಸುವಾಗ ಅವುಗಳ ಹಿಂದಿರುವ ಸೈದ್ಧಾಂತಿಕತೆಯನ್ನು ಅರ್ಥೈಸಿಕೊಳ್ಳುವಲ್ಲಿ ಎಡವುದು ಸರ್ವೇಸಾಮಾನ್ಯ. ಇದು ಮೇಲೆ ವಿವರಿಸಿದ ಪರಿಕಲ್ಪನಾತ್ಮಕ ಸಮಸ್ಯೆಗಳಿಗೆ ಮೂಲ ಕಾರಣ.