ಸಿರಿ ಪಠ್ಯದಲ್ಲಿ ಬಹುಮುಖ್ಯವಾಗಿ ಕಂಡುಬರುವುದು ರಾಜಕೀಯ ಸಂಘರ್ಷದ ವಿವಿಧ ಆಯಾಮಗಳು. ತುಳುನಾಡಿನ ರಾಜಕಾರಣದಲ್ಲಿ ಕಾಣಿಸಿಕೊಳ್ಳುವುದು ಸತ್ಯನಾಪುರದ ಅರಮನೆಯ ಉತ್ತರಾಧಿಕಾರದ ಪ್ರಶ್ನೆ ಹುಟ್ಟಿಕೊಂಡಾಗ. ಇದು ರಾಜಕೀಯ ಅಧಿಕಾರ, ಆರ್ಥಿಕ ಸವಲತ್ತು ಹಾಗೂ ಸಾಮಾಜಿಕ ಸ್ಥಾನಮಾನಕ್ಕೆ ಸಂಬಂಧಿಸಿದ ಪ್ರಶ್ನೆಯೂ ಆಗಿತ್ತು. ಸತ್ಯನಾಪುರದ ಬೆರ್ಮಾಳ್ವರು ಸತ್ತೊಡನೆ ಅರಮನೆಯ ಪಟ್ಟದ ಕುರಿತು ರಾಜಕೀಯ ಆರಂಭಗೊಳ್ಳುತ್ತದೆ. ಸಿರಿಯ ಗಂಡ ಕಾಂತು ಪೂಂಜ ಬೆರ್ಮಾಳ್ವರ ಆಳಿಯ ಶಂಕರ ಆಳ್ವನನ ನು ಪಟ್ಟಕ್ಕೆ ತರುವ ಸಂಚು ಹೂಡುತ್ತಾನೆ. ಆದರೆ ಸಿರಿ ಇದನ್ನು ವಿರೋಧಿಸಿ ಬೆರ್ಮಾಳ್ವರ ಮಗಳಾಗಿ ನಾನಿರುವಾಗ ಪಟ್ಟದ ಆಧಿಕಾರ ನನಗಲ್ಲದೆ ಶಂಕರ ಆಳ್ವನಿಗೆ ಬಿಟ್ಟುಕೊಡಲಾರೆ ಎನ್ನುವ ಖಡಾಖಂಡಿತವಾದ ತೀರ್ಮಾನವನ್ನು ತೆಗೆದುಕೊಳ್ಳುತ್ತಾಳೆ. ತನ್ನ ಗಂಡನ ವ್ಯವಹಾರವನ್ನು ಪ್ರಶ್ನಿಸಿ ಖಂಡಿಸುತ್ತಾಳೆ. ಇದು ರಾಜಕೀಯ ಸಂಘರ್ಷಕ್ಕೆ ಕಾರಣವಾಗುತ್ತದೆ. ಇಲ್ಲಿ ಸಿರಿಯ ಗಂಡ ಕಾಂತು ಪೂಂಜ ತನ್ನ ಹೆಂಡತಿಯ ವಿರುದ್ಧವೇ ಸಂಚು ನಡೆಸುವುದಕ್ಕೆ ಕಾರಣಗಳೂ ಇದ್ದವು. ಸಿರಿ ಬಸುರಿಯಾಗಿ ಅವಳ ಸೀಮಂತ ನಡೆಯುವ ಸಂದರ್ಭದಲ್ಲಿ ಬಸುರಿಗೆ ಕೊಡಬೇಕಾದ ಬಯಕೆ ಸೀರೆಯನ್ನು ಉಡಲು ನಿರಾಕರಿಸುತ್ತಾಳೆ. ಗಂಡ ತನಗೆ ಮೋಸ ಮಾಡಿದ ಎನ್ನುವ ತೀರ್ಮಾನಕ್ಕೆ ಬಂದ ಸಿರಿ ಅವನನ್ನು ಯಾವ ಕಾರಣಕ್ಕೂ ಕ್ಷಮಿಸುವುದಿಲ್ಲ. ಈ ಘಟನೆ ಗಂಡ-ಹೆಂಡತಿಯರ ಮಧ್ಯೆ ವಿರಸಕ್ಕೆ ಕಾರಣವಾಗುತ್ತದೆ. ಹುಟ್ಟಿದ ಮಗುವನ್ನು ನೋಡಲು ಕಾಂತು ಪೂಂಜ ತನ್ನ ಹೆಂಡತಿಯ ವಿರುದ್ಧವೇ ಸಂಚು ನಡೆಸುವುದಕ್ಕೆ ಕಾರಣಗಳೂ ಇದ್ದವು. ಸಿರಿ ಬಸುರಿಯಾಗಿ ಅವಳ ಸೀಮಂತ ನಡೆಯುವ ಸಂದರ್ಭದಲ್ಲಿ ಬಸುರಿಗೆ ಕೊಡಬೇಕಾದ ಬಯಕೆ ಸೀರೆಯನ್ನು ಕಾಂತು ಪೂಂಜನ ಸೂಳೆ ಸಿದ್ದು ಉಟ್ಟು ಮಡಿ ಕೆಡಿಸುತ್ತಾಳೆ. ಇದರಿಂದ ಕೆರಳಿದ ಸಿರಿ ಬಯಕೆ ಸೀರೆಯನ್ನು ಉಡಲು ನಿರಾಕರಿಸುತ್ತಾಳೆ. ಗಂಡ ತನಗೆ ಮೋಸ ಮಾಡಿದ ಎನ್ನುವ ತೀರ್ಮಾನಕ್ಕೆ ಬಂದ ಸಿರಿ ಅವನನ್ನು ಯಾವ ಕಾರಣಕ್ಕೂ ಕ್ಷಮಿಸುವುದಿಲ್ಲ. ಈ ಘಟನೆ ಗಂಡ-ಹೆಂಡತಿಯರ ಮಧ್ಯೆ ವಿರಸಕ್ಕೆ ಕಾರಣವಾಗುತ್ತದೆ. ಹುಟ್ಟಿದ ಮಗುವನ್ನು ನೋಡಲು ಕಾಂತು ಪೂಂಜ ಸತ್ಯನಾಪುರಕ್ಕೆ ಬರುವುದಿಲ್ಲ. ಇದೇ ಸಂದರ್ಭದಲ್ಲಿ ಬೆರ್ಮಾಳ್ವರು ಸತ್ತು ಉತ್ತರಾಧಿಕಾರತ್ವದ ಪ್ರಶ್ನೆ ಎದುರಾಗುತ್ತದೆ. ಸಹಜವಾಗಿಯೆ ಕಾಂತು ಪೂಂಜ ಸಿರಿಯ ವಿರುದ್ಧ ನಿಲ್ಲುತ್ತಾನೆ. ಬೆರ್ಮಾಳ್ವರ ಶವ ಸಂಸ್ಕಾರಕ್ಕೂ ಬರೆದ ತನ್ನ ವಿರೋಧವನ್ನು ಪ್ರಕಟಿಸುತ್ತಾನೆ. ಆದರೆ ಸ್ವಾಭಿಮಾನಿಯಾದ ಸಿರಿ ಇದನ್ನು ಸವಾಲನ್ನಾಗಿ ಸ್ವೀಕರಿಸಿ ತಾನೇ ಶವ ಸಂಸ್ಕಾರವನ್ನು ಮಾಡುತ್ತಾಳೆ.

ಅರಮನೆಯ ಉತ್ತರಾಧಿಕಾರಿಯ ಪ್ರಶ್ನೆ ಕೇವಲ ಕುಟುಂಬದ ಪ್ರಶ್ನೆಯಾಗರಲಿಲ್ಲ. ಏಕೆಂದರೆ ಅದು ಆಡಳಿತಕ್ಕೆ ಸಂಬಂಧಿಸಿದ್ದಾಗಿತ್ತು. ಹಾಗಾಗಿ ಊರಿನ ಹಿರಿಯರೆಲ್ಲಾ ಸೇರಿ ಪಂಚಾಯತಿ ಕೂಟಕ್ಕೆ ಏರ್ಪಾಡು ನಡೆಯುತ್ತದೆ. ಕಾಂತು ಪೂಂಜ ಹಾಗೂ ಶಂಕರ ಆಳ್ವ ಗುತ್ತು-ಬರ್ಕೆಗಳವರನ್ನು ತಮ್ಮೆಡೆಗೆ ಸೆಳೆಯುವುದರಲ್ಲಿ ಯಶಸ್ವಿಯಾಗುತ್ತಾರೆ. ನ್ಯಾಯ ತೀರ್ಮಾನಕ್ಕಾಗಿ ಸಿರಿಯನ್ನು ಕೂಟದ ಕಟ್ಟೆಗೆ ಕರೆಸುತ್ತಾರೆ. ಒಳಸಂಚನ್ನು ಮೊದಲೆ ಅರಿತಿದ್ದ ಸಿರಿ ಗುತ್ತು-ಬರ್ಕೆಗಳವರ ಸಮ್ಮುಖದಲ್ಲಿ ಸತ್ಯನಾಪುರದ ಅರಮನೆಯ ಪಟ್ಟ ತನಗೇ ಸಿಗಬೇಕೆಂದು ತನ್ನ ವಾದವನ್ನು ಮಂಡಿಸುತ್ತಾಳೆ. ಆದರೆ ಊಳಿಗಮಾನ್ಯ ಮನಸ್ಸು ತುಂಬಿದ್ದ ಹಾಗೂ ಪುರುಷ ಪ್ರಭುತ್ವಕ್ಕೆ ಒಳಗಾಗಿದ್ದ ಪಂಚಾಯತಿ ಕಟ್ಟೆ ಸಿರಿಯ ವಾದವನ್ನು ತಳ್ಳಿ ಹಾಕುತ್ತದೆ. ಅದು ಇಕೊಟ್ಟ ತೀರ್ಮಾನವೆಂದರೆ ಇಲ್ಲಿಯವರೆಗೆ ಗಂಡಸರ ಅಧೀನದಲ್ಲಿದ್ದ ಅರಮನೆ ಹಾಗೂ ಗಂಡಸರು ಕೂತು ಆಡಳಿತ ನಡೆಸಿದ ಸಿಂಹಾಸನ ಗಂಡಸರಿಗಲ್ಲದೆ ಯಾವ ಕಾರಣಕ್ಕೂ ಹೆಂಗಸರಿಗೆ ಸೇರಬಾರದು. ಆಡಳಿತ ನಡೆಸುವ ಅಧಿಕಾರ ಹೆಂಗಸರಿಗಲ್ಲದೆ ಯಾವ ಕಾರಣಕ್ಕೂ ಹೆಂಗಸರಿಗೆ ಸೇರಬಾರದು. ಆಡಳಿತ ನಡೆಸುವ ಅಧಿಕಾರ ಹೆಂಗಸರಿಗಿಲ್ಲವೆಂದು ಪಂಚಾಯಿತಿ ಕಟ್ಟೆ ಸರ್ವಾನುಮತದಿಂದ ತೀರ್ಮಾನಿಸಿತು. ಇದು ಸಿರಿಯ ಸಂದರ್ಭದ ನ್ಯಾಯಾಂಗ ವ್ಯವಸ್ಥೆ ಯಾವ ಸ್ವರೂಪದ್ದು ಎನ್ನುವುದನ್ನು ತೋರಿಸಿಕೊಡುತ್ತದೆ.

ಹೆಣ್ಣನ್ನು ಆಳ್ವಿಕೆ ನಡೆಸಲು ಬಿಡೆವು. ಅವಳು ಅಸಮರ್ಥಳು ಎನ್ನುವ ಕೂಟದ ಕಟ್ಟೆಯ ತೀರ್ಮಾನ ಸಿರಿಯನ್ನು ಕೆಲವೊಂದು ಕಠಿಣ ತೀರ್ಮಾನಗಳನ್ನು ತೆಗೆದುಕೊಳ್ಳುವಂತೆ ಮಾಡಿತು. ಅವುಗಳೆಂದರೆ ಸತ್ಯನಾಪುರವನ್ನು ತೊರೆಯುವುದು, ಗಂಡನಿಗೆ ವಿಚ್ಛೇದನ ನೀಡುವುದು ಹಾಗೂ ಮರುಮದುವೆಯಾಗುವುದು. ಕೂಟದ ಕಟ್ಟೆಯಿಂದ ಅವಮಾನಿತಳಾದ ಸಿರಿ ‘ಸತ್ಯನಾಪುರದ ನೆಲ ಬಂಜರು ಬೀಳಲಿ ಅರಮನೆ ಸುಟ್ಟುಹೋಗಲಿ’ ಎಂದು ಶಪಿಸಿ, ತೊಟ್ಟಿಲ ಮಗು ಕುಮಾರ ಹಾಗೂ ಕೆಲಸದಾಕೆ ದಾರುವಿನೊಂದಿಗೆ ಸತ್ಯನಾಪುರವನ್ನು ತೊರೆದು ಗಂಡನ ಮನೆಯಾದ ಬಸ್ರೂರು ಗುತ್ತಿಗೆ ಬರುತ್ತಾಳೆ. ತನಗೆ ಮೋಸ ಮಾಡಿದ ಗಂಡ ಕಾಂತು ಪೂಂಜನಿಗೆ ವಿಚ್ಛೇದನ ನೀಡಿ ಕನ್ಯಾಶುಲ್ಕವನ್ನು ಮರಳಿಸುತ್ತಾಳೆ. ಹೆಣ್ಣು ತನಗಿಷ್ಟವಿಲ್ಲದ ದುಷ್ಟ ಗಂಡನೊಂದಿಗೆ ಕಷ್ಟದ ಬದುಕನ್ನು ಸಾಗಿಸುವುದನ್ನು ಬಿಟ್ಟು ತನಗಿಷ್ಟನಾದ ಗಂಡನೊಂದಿಗೆ ಮರು ಮದುವೆಯಾಗಬೇಕು ಎನ್ನುವ ದಿಟ್ಟ ನುಡಿಗಳನ್ನಾಡಿ ಗಂಡನ ಮನೆಯನ್ನು ತೊರೆಯುತ್ತಾಳೆ. ತಾನು ಆಡಿದ ಮಾತಿನಂತೆ ಕೊಟ್ರಪಾಡಿಯ ಕೊಡ್ಸರಾಳ್ವನನ್ನು ಮರುಮದುವೆಯಾಗುತ್ತಾಳೆ. ಕೊಡ್ಸರಾಳ್ವನ ಹೆಂಡತಿ ಸಾಮು ಆಳ್ವೆದಿ ತನ್ನ ಗಂಡ ಮರುಮದುವೆಯಾಗುವುದನ್ನು ಪ್ರತಿಭಟಿಸಿದಳಾದರೂ ಸಿರಿ ಅವಳ ಮನವೊಲಿಸುವುವಲ್ಲಿ ಯಶಸ್ವಿಯಾಗುತ್ತಾಳೆ. ಹೀಗೆ ಸಿರಿ ತನ್ನನ್ನು ಅವಮಾನಿಸಿದ ಹಾಗೂ ಶೋಷಿಸಿದ ಸಮಾಜಕ್ಕೆ ಬೆನ್ನು ತೋರಿಸದೆ ಧೈರ್ಯದಿಂದ ಮುಖಮಾಡಿ ನಿಲ್ಲುತ್ತಾಳೆ. ಅಷ್ಟೇ ಅಲ್ಲದೆ ಹೆಣ್ಣಿನ ಶೋಷಣೆಯ ವಿರುದ್ಧ ಎಚ್ಚರಿಕೆಯನ್ನು ನೀಡುತ್ತಾಳೆ. ಹೆಣ್ಣು ಹಾಗೂ ಮಣ್ಣನ್ನು ರಕ್ಷಿಸುವ ಜವಾಬ್ದಾರಿಯನ್ನು ಹೊತ್ತ ಗಂಡು ತಾನು ಯಜಮಾನನಾಗಿ ಸ್ಥಾಪಿಸುವ ಯಜಮಾನಿಕೆಯ ಹಿಂದೆ ಅಧಿಕಾರ ಹಾಗೂ ಸವಲತ್ತುಗಳ ಪ್ರಶ್ನೆಯೇ ಪ್ರಮುಖವಾಗಿರುತ್ತದೆ ಎನ್ನುವುದನ್ನು ಸಿರಿ ಪಾಡ್ದನ ಪ್ರತಿಪಾದಿಸುತ್ತದೆ. ಇದನ್ನು ಪ್ರತಿಭಟಿಸುತ್ತಲೇ ಸಿರಿ ಹೆಣ್ಣಿನ ಧ್ವನಿಯನ್ನು ಗಟ್ಟಿಗೊಳಿಸುತ್ತಾ ಸಾಗುತ್ತಾಳೆ.

ಭೂಮಿಯ ಅಧಿಕಾರವನ್ನು ಪಡೆಯುವ ಸಿರಿಯ ಪ್ರಯತ್ನವೇ ಸಿರಿ ಪಠ್ಯದಲ್ಲಿ ಕಂಡು ಬರುವ ರಾಜಕೀಯ ಸಂಘರ್ಷ. ಚರಿತ್ರೆಯುದ್ದಕ್ಕೂ ಭೂಮಿಯ ಮೇಲೆ ಅಧಿಕಾರ ಸ್ಥಾಪಿಸಿರುವ ಗಂಡು ಹೆಣ್ಣನ್ನು ಭೂಮಿತಾಯಿಯನ್ನಾಗಿ ಮಾಡಿ ಹೆಣ್ಣು ಹಾಗೂ ಮಣ್ಣಿನ ರಕ್ಷಣೆ ಗಂಡಿನ ಜವಾಬ್ದಾರಿ ಎನ್ನುವ ಪುರುಷಪ್ರಭುತ್ವ ವ್ಯವಸ್ಥೆಯನ್ನು ಹುಟ್ಟುಹಾಕಿದ. ಭೂಮಿಯ ರೀತಿಯಲ್ಲಿಯೇ ಹೆಣ್ಣನ್ನು ಗಂಡಿನ ಅಧಿಕಾರ ವ್ಯಾಪ್ತಿಯೊಳಗೆ ಬರುವ ಆಸ್ತಿಯನ್ನಾಗಿ ನೋಡಲಾಯಿತು. ಹೆಣ್ಣನ್ನು ಫಲವಂತಿಕೆಯ ಸಂಕೇತವಾಗಿಯೂ ನೋಡಲಾಯಿತು. ಹೀಗೆ ಗಂಡು ಭೂಮಾಲೀಕನಾದ, ರಾಜನಾದ ಹಾಗೂ ಲೌಕಿಕ ನೆಲೆಯ ಎಲ್ಲ ಸವಲತ್ತುಗಳನ್ನೂ ಅನುಭವಿಸಿದ. ಹೆಣ್ಣಿಗೆ ಅಲೌಕಿಕ ನೆಲೆಯ ಪಟ್ಟ ಕಟ್ಟಲಾಯಿತು. ಹೆಣ್ಣನ್ನು ಭೂಮಿತಾಯಿ, ಮಾತೃದೇವತೆ ಮುಂತಾದ ರೀತಿಯಲ್ಲಿ ದೈವತ್ವಕ್ಕೇರಿಸಲಾಯಿತು. ಹಾಗಾಗಿ ಹೆಣ್ಣು ಗಂಡಿನ ಅಧಿಕಾರಗಳಿಸುವ ಪ್ರಕ್ರಿಯೆಯಲ್ಲಿ ಪೂರಕವಾಗಿಯೇ ಕೆಲಸ ನಿರ್ವಹಿಸಬೇಕಾಯಿತು. ಹೆಣ್ಣು ವ್ಯವಸ್ಥೆಯ ಭಾಗವಾಗಿ ಗಂಡಿಗೆ ಕೈಜೋಡಿಸಿ ಮರೆಯಲ್ಲಿ ನಿಂತೇ ಪುರುಷ ಪ್ರಭುತ್ವಕ್ಕೇ ಒಪ್ಪಿಗೆ ಸೂಚಿಸುವ ಹಂತಕ್ಕೆ ಇಳಿಯಬೇಕಾಯಿತು. ಚರಿತ್ರೆಯಲ್ಲಿ ಕೆಲವು ರಾಣಿಯರು ಆಳ್ವಿಕೆ ನಡೆಸಿದ ಉಲ್ಲೇಖಗಳು ಕಂಡುಬರುತ್ತವಾದರೂ, ಅದು ಅರಮನೆ ನಿಯಂತ್ರಣದ ಹಾಗೂ ಅರಸುಮನೆತನದ ಸ್ತ್ರೀಯರಿಗಷ್ಟೇ ಸಂಬಂಧಿಸಿದ ವಿಚಾರವಾಗಿತ್ತು. ಆದರೆ ಗಂಡು ಅಧಿಕಾರ ಅನುಭವಿಸುವುದು ರಾಜನಿಂದ ಸಮಾಜದ ಕೆಳಸ್ತರದಲ್ಲಿರುವ ಗಂಡಿನವರೆಗೂ ಅವರವರ ಅಂತಸ್ತಿಗನುಗುಣವಾಗಿ ನಡೆದೇ ಇತ್ತು. ಸಿರಿಯಂಥ ಅನೇಕ ಮಹಿಳೆಯರು ಅಧಿಕಾರವನ್ನು ಪಡೆಯುವುದಕ್ಕಾಗಿ ಹೋರಾಟ ನಡೆಸಿರಬಹುದು. ಆದರೆ ಚರಿತ್ರೆಯಲ್ಲಿ ಉಲ್ಲೇಖಗಳು ಸಿಗುವುದಿಲ್ಲ. ಚರಿತ್ರೆಯಲ್ಲಿ ರಾಣಿಯರ ಬಗೆಗೆ ಸಿಗುವ ವಿವರಣೆಗಳನ್ನು ಸಾಮಾನ್ಯ ಮಹಿಳೆಯವರೆಗೆ ವಿಸ್ತರಿಸಲು ಸಾಧ್ಯವಾಗುವುದಿಲ್ಲ. ಗುರ್ಕಾರ್ಥಿ, ಪೆರಿಯಬ್ಬೆ, ಪಟ್ಟದಬ್ಬೆ, ಪಿರಿಯರಸಿ ಮುಂತಾದ ಉಲ್ಲೇಖಗಳು ಹೆಣ್ಣಿನ ಪ್ರಾಧಾನ್ಯತೆಯನ್ನು ತಿಳಿಸುತ್ತವಾದರೂ ಮೇಲೆ ವಿವರಿಸಿದಂತೆ ಅವು ಸೀಮಿತ ವಲಯಗಳಲ್ಲಿ ಅಲ್ಪಅವಧಿಯ ಸ್ವಾತಂತ್ರ್ಯವನ್ನು ಪಡೆದುಕೊಂಡಿದ್ದವು. ಹಾಗಾಗಿ ಹೆಣ್ಣು ರಾಣಿಯಾಗಿ ಗುರುತಿಸಿಕೊಂಡರೂ ರಾಜ್ಯವ್ಯವಸ್ಥೆಯನ್ನು ಹೆಣ್ಣಿಗೆ ಪೂರಕವಾಗುವಂತೆ ಮಾರ್ಪಡಿಸಲು ಸಾಧ್ಯವಾಗಲಿಲ್ಲ. ಏಕೆಂದರೆ ಪ್ರಭುತ್ವದ ಚೌಕಟ್ಟು ಗಂಡಿನ ನಿರ್ಮಾಣವಾಗಿತ್ತು. ಹೆಣ್ಣನ್ನು ಅಧೀನಳನ್ನಾಗಿ ಮಾಡುತ್ತಲೇ ಗಂಡು ರಾಜ್ಯವ್ಯವಸ್ಥೆಯನ್ನು ಹುಟ್ಟುಹಾಕಿದ್ದ. ಆ ರಾಜ್ಯವನ್ನು ಕಾಪಾಡುವ ದೇವತೆಯಾಗಿ ಹೆಣ್ಣನ್ನು ಅಲೌಕಿಕ ನೆಲೆಯಲ್ಲಿ ನೋಡಿ ಹೆಣ್ಣಿನ ವಿರೋಧವನ್ನು ತಪ್ಪಿಸಿಕೊಂಡ. ಇದು ಚರಿತ್ರೆಯಲ್ಲಿ ಕಂಡುಬರುವ ವಾಸ್ತವವಾದ್ದರಿಂದ ಅದಕ್ಕೊಂದು ಸಾಮಾಜಿಕ ಒಪ್ಪಿಗೆಯೂ ಲಭಿಸಿತು. ಈ ಕಾರಣಕ್ಕಾಗಿಯೇ ಸಿರಿ ತಾನು ಉತ್ತರಾಧಿಕಾರಿಯಾಗಬೇಕೆಂದಾಗ ಕೂಟದ ಕಟ್ಟೆ ಅವಳ ಬೇಡಿಕೆಯನ್ನು ತಿರಸ್ಕರಿಸಿ, ಅಧಿಕಾರ ಯಾವತ್ತೂ ಗಂಡಿನ ಹಕ್ಕು ಎಂಬ ತೀರ್ಮಾನವನ್ನು ನೀಡಿದ್ದು.