ಸಿರಿ ಪಠ್ಯವನ್ನು ಸೂಕ್ಷ್ಮವಾಗಿ ಅವಲೋಕಿಸುವಾಗ ಗೋಚರಿಸುವ ಒಂದು ಪ್ರಮುಖ ವಿಚಾರವೆಂದರೆ ಭೂಮಾಲೀಕ ಸಮಾಜವೊಂದರ ನೈಜ ಚಿತ್ರಣ. ಸಿರಿ ತನ್ನ ಹುಟ್ಟಿನಿಂದ ಮಾಯವಾಗುವವರೆಗೆ ಪ್ರೀತಿಸಿದ್ದು ಹಾಗೂ ದ್ವೇಷಿಸಿದ್ದು ಗುತ್ತು ಮನೆಯನ್ನು. ತುಳುನಾಡಿನಲ್ಲಿ ಗುತ್ತು ಎನ್ನುವುದು ಬಂಟ ಸಮುದಾಯಕ್ಕೆ ಸಂಬಂಧಿಸಿದ ಮನೆಯಾಗಿದ್ದು, ಒಂದು ಆಡಳಿತ ಘಟಕವೂ ಆಗಿತ್ತು. ಬಂಟರು ಕರ್ನಾಟಕ ಇತಿಹಾಸಭೂಮಾಲೀಕರಾಗಿದ್ದರಿಂದ ಸಹಜವಾಗಿಯೇ ಗ್ರಾಮಗಳ ಮೇಲೆ ಅಧಿಕಾರ ಹೊಂದಿದ್ದರು. ಸಿರಿಯು ಈ ಸ್ವರೂಪದ ಗುತ್ತು ಮನೆಗೆ ಸಂಬಂಧಿಸಿದವಳಾಗಿದ್ದಳು. ಹಾಗಾಗಿ ಸಿರಿಯನ್ನು ಕೃಷಿ ಕುಟುಂಬದ ಒಬ್ಬ ಸಾಮಾನ್ಯ ಮಹಿಳೆ ಎಂಬುದಾಗಿ ತೀರ್ಮಾನಿಸಲು ಸಾಧ್ಯವಾಗುವುದಿಲ್ಲ. ಅಧಿಕಾರ ಹಾಗೂ ಸವಲತ್ತುಗಳಿಂದ ಅವಳು ಸಂಪೂರ್ಣವಾಗಿ ವಂಚಿತಳಾಗಿದ್ದಳು ಎನ್ನುವ ತೀರ್ಮಾನಕ್ಕೆ ಬರುವುದೂ ಕಷ್ಟ. ಏಕೆಂದರೆ ಸಿರಿ ಊಳಿಗಮಾಣ್ಯ ಮನೆತನಕ್ಕೆ ಸೇರಿದ ಹೆಣ್ಣು. ಇವಳು ಇದ್ದ ಮನೆ ಸತ್ಯನಾಪುರದ ಅರಮನೆ, ಮದುವೆಯಾಗಿದ್ದು ಬಸ್ರೂರಿನ ಗುತ್ತಿನ ಮನೆಗೆ ಹಾಗೂ ಮರುಮದುವೆಯಾಗಿದ್ದು ಕೊಟ್ರಪಾಡಿ ಗುತ್ತಿನ ಮನೆಗೆ. ಒಟ್ಟಾರೆಯಾಗಿ ಸಿರಿ ಗುರುತಿಸಿಕೊಂಡಿರುವುದು ತುಳುನಾಡಿನ ಭೂಮಾಲೀಕ ಬಂಟ ಸಮುದಾಯದೊಂದಿಗೆ. ಹೀಗಾಗಿ ಸಿರಿ ಸಾಮಾಣ್ಯ ಪ್ರಜೆಯಾಗಿರಲಿಲ್ಲ, ಅವಳು ಒಂದು ಆಡಳಿತ ನಡೆಸುವ ಊಳಿಗಮಾನ್ಯ ಲಕ್ಷಣವಿದ್ದ ವ್ಯವಸ್ಥೆಯ ಭಾಗವಾಗಿದ್ದಳು ಎಂಬುದಾಗಿ ತೀರ್ಮಾನಿಸಬಹುದಾಗಿದೆ. ಇದೇ ಮಾತನ್ನು ತುಳುನಾಡಿನ ಇತರ ಹೆಣ್ಣು ದೈವಗಳಿಗೆ ಅನ್ವಯಿಸಿ ಹೇಳಲು ಸಾಧ್ಯವಾಗುವುದಿಲ್ಲ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಮೈಂದಲೆ. ಇವಳನ್ನು ಬಾಲೆಮಾನಿ ಎಂಬ ಹೆಸರಿನಿಂದಲೂ ಕರೆಯಲಾಗಿದೆ. ಪಾಂಗೊಲ್ಲ ಬನ್ನಾರನೆನ್ನುವ ಗುತ್ತಿನ ಒಡೆಯ ಮೈಂದಲೆಯ ಅಣ್ಣನನ್ನು(ಆಲಿಬಾಲಿ ನಾಯಕ) ಅವಮಾನಿಸುವುದು ಮೈಂದಲೆ ದೈವವಾಗಿ ಪರಿವರ್ತನೆಗೊಳ್ಳುವುದಕ್ಕೆ ಕಾರಣವಾಗುತ್ತದೆ. ಇದೊಂದು ಜಮೀನ್ದಾರ ಹಾಗೂ ಆತನ ಅಡಿಯಾಳುವಿನ ಮಧ್ಯದ ಹೋರಾಟ. ಮೈಂದಲೆಯು ದೈವವಾಗಿ ಪರಿವರ್ತನೆಗೊಂಡ ಮೇಲೆ ಗುತ್ತಿನ ಒಡೆಯನ ವಿರುದ್ಧ ಸಮರ ಸಾರುತ್ತಾಳೆ. ಪಾಂಗೊಲ್ಲ ಬನ್ನಾರನನ್ನು ಶಿಕ್ಷಿಸಿ ಆತನಿಂದಲೇ ಪೂಜೆಗೊಳ್ಳುತ್ತಾಳೆ. ಊಳಿಗಮಾನ್ಯ ವ್ಯವಸ್ಥೆ ಹುಟ್ಟುಹಾಕಿದ ಅನಿಷ್ಟಗಳನ್ನು ವಿರೋಧಿಸುತ್ತಾಳೆ. ಮೈದಂಲೆಯು ಸ್ತ್ರೀಯರ ಅಧಿದೈವವಾಗಿ ಹಾಗೂ ಸುಖಪ್ರಸವ ದೈವವಾಗಿ ಮಹಿಳೆಯರಿಂದ ಆರಾಧನೆಗೊಳ್ಳುತ್ತಾಳೆ.

ಸಿರಿಯ ರೀತಿ ಮೈಂದಲೆ ಶ್ರೀಮಂತಿಕೆಯಿಂದ ಬಂದವಳಲ್ಲ. ಅದೇ ರೀತಿ ಸಿರಿ ತನ್ನ ಬದುಕಿನುದ್ದಕ್ಕೂ ನಡೆಸುವ ಹೋರಾಟ ಹಾಗೂ ಹೊಂದಾಣಿಕೆ ಮೈಂದಲೆಯ ಹೋರಾಟಕ್ಕಿಂತ ಭಿನ್ನವಾದದ್ದು. ಮೈಂದಲೆ ಯಾವ ಅಧಿಕಾರ ಅಥವಾ ಸಹಾಯವಿಲ್ಲದೆ ಹಾಗೂ ವೈಯಕ್ತಿಕ ಹಿತಾಸಕ್ತಿಗಳಿಲ್ಲದೆ ಹೋರಾಟ ನಡೆಸುತ್ತಾಳೆ. ಸಿರಿಯ ಹೋರಾಟದಲ್ಲಿ ಆಸ್ತಿಯನ್ನು ಪಡೆಯುವುದು, ಮರುಮದುವೆಯಾಗುವುದು, ತನ್ನ ಸ್ವಾರ್ಥಕ್ಕೆ ಮಗನನ್ನೇ ಮಾಯ ಮಾಡುವುದು ಮುಂತಾದ ವಿಚಾರಗಳು ಕಂಡುಬರುತ್ತವೆ. ಊಳಿಗ ದೊರೆಯ ಧೋರಣೆಯನ್ನು ವಿರೋಧಿಸುವುದಷ್ಟೆ ಮೈಂದಲೆಯ ಉದ್ದೇಶವಾಗಿರುತ್ತದೆ. ಆದರೆ ತುಳುನಾಡಿನ ಜನಪದ ಸಾಹಿತ್ಯದ ಅಧ್ಯಯನ ಸಂದರ್ಭದಲ್ಲಿ ಸಿರಿಯಷ್ಟು ಪ್ರಾಮುಖ್ಯತೆ ಮೈಂದಲೆಗೆ ಸಿಗಲಿಲ್ಲ. ಇದಕ್ಕೆ ಈಗಾಗಲೇ ವಿವರಿಸಿದಂತೆ ಸಿರಿಯ ಸಾಮಾಜಿಕ ಸ್ಥಾನಮಾನ ಹಾಗೂ ಅವಳು ಪ್ರತಿನಿಧಿಸುವ ಬಂಟ ಸಮುದಾಯ ಕಾರಣವಾಗಿರಬಹುದು. ಏಕೆಂದರೆ ಮೈಂದಲೆಗೆ ಈ ಬಗೆಯ ಯಾವ ಅಧಿಕಾರದ ಸ್ತರಗಳೂ ಇರಲಿಲ್ಲ. ಆದರೆ ಹೆಣ್ಣು ಎನ್ನುವ ವಿಚಾರವನ್ನು ತೆಗೆದುಕೊಂಡಾಗ ಹಾಗೂ ಊಳಿಗಮಾನ್ಯ ವ್ಯವಸ್ಥೆ ಅವಳಿಗೆ ಅಧಿಕಾರ ನೀಡಲು ಹಿಂದೇಟು ಹಾಕಿದ ಪ್ರಸಂಗವನ್ನು ಅವಲೋಕಿಸುವಾಗ ಸಿರಿ ಸಬಾಲ್ಟರ್ನ್ ವ್ಯಾಪ್ತಿಗೆ ಬರುತ್ತಾಳೆ. ಅದೇ ರೀತಿ ಅವಳು ಗುತ್ತು ಕೇಂದ್ರಿತ ವ್ಯವಸ್ಥೆಯೊಂದರ ಭಾಗವಾಗಿಯೂ ಕಂಡುಬರುತ್ತಾಳೆ. ಅದೇ ರೀತಿ ಅವಳು ಗುತ್ತು ಕೇಂದ್ರಿತ ವ್ಯವಸ್ಥೆಯೊಂದರ ಭಾಗವಾಗಿಯೂ ಕಂಡುಬರುತ್ತಾಳೆ. ಗುತ್ತು ಮನೆಗಳಲ್ಲಿ ಪುರುಷ ಪ್ರಧಾನ ಚಿಂತನೆಗಳು ಯಾವ ರೀತಿ ಕೆಲಸ ಮಾಡುತ್ತಿರುತ್ತವೆ ಎನ್ನುವುದರ ಮೂಲಕ ಸಿರಿಯನ್ನು ನೋಡಿದರೆ ಗುತ್ತು ಮನೆಯಲ್ಲಿದ್ದರೂ ಅವಳು ಸಬಾಲ್ಟರ್ನ್ ಆಗಿಯೇ ಕಂಡುಬರುತ್ತಾಳೆ. ಗುತ್ತು ಕೇಂದ್ರಿತ ವ್ಯವಸ್ಥೆಯಲ್ಲಿ ಹೆಣ್ಣಿಗಿರುವ ಸ್ವಾತಂತ್ರ್ಯ ಹಾಗೂ ಅಲ್ಲಿ ನಡೆಯುವ ಹೆಣ್ಣಿನ ಶೋಷಣೆ ಯಾವ ಸ್ವರೂಪದ್ದು ಎನ್ನುವುದನ್ನು ಸಿರಿ ಸಂಧಿ ವಿವರವಾಗಿ ಚಿತ್ರಿಸುತ್ತಾ ಹೋಗುತ್ತದೆ. ಇದರ ಮೂಲಕ ಮಧ್ಯಕಾಲೀನ ಸಂದರ್ಭದ ಸಾಮಾಜಿಕ ರಚನೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯ. ಪುರುಷಪ್ರಭುತ್ವವನ್ನು ಮೀರಿ ನಿಲ್ಲುವ ಪ್ರಯತ್ನವನ್ನು ಸಿರಿ ಮಾಡಿದಳಾದರೂ ಅವಳಿಗೆ ಎದುರಾಗುವುದು ಕೇವಲ ದುರಂತಗಳು ಮಾತ್ರ. ಸ್ವತಂತ್ರ ಬದುಕನ್ನು ಕಟ್ಟುವ ಸಿರಿಯ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ. ಸಿರಿಗೆ ಅಲೌಕಿಕ ನೆಲೆಯ ಸಾಮರ್ಥ್ಯಗಳು ಪ್ರಾಪ್ತವಾಗಿದ್ದರೂ ಕೊನೆಗೆ ಅವಳು ಸೋಲಲೇ ಬೇಕಾಗುತ್ತದೆ. ಇಂದಿನ ಸಿರಿ ಆಚರಣೆಗಳಲ್ಲೂ ಕುಮಾರನೇ ಅಂತಿಮನಾಗಿರುವುದನ್ನೂ ಈ ಹಿನ್ನೆಲೆಯಿಂದಲೇ ನೋಡಬೇಕಾಗುತ್ತದೆ. ಸಿರಿ ತನ್ನ ಮೊದಲ ಪತಿ ಬಸ್ರೂರಿನ ಕಾಂತು ಪೂಂಜನನ್ನು ತ್ಯಜಿಸಿ, ವಿಚ್ಛೇದನ ನೀಡಿ ತನ್ನ ಸ್ವಾಭಿಮಾನವನ್ನು ಮೆರೆಯುತ್ತಾಳೆ. ಆದರೆ ಮತ್ತೆ ಕೊಟ್ರಪಾಡಿಯ ಕೊಡ್ಸರಾಳ್ವನನ್ನು ಮರುಮದುವೆಯಾಗಿ ಗಂಡಿನ ಅಧೀನಳಾಗುತ್ತಾಳೆ ಹಾಗೂ ಬಹುಪತ್ನಿತ್ವಕ್ಕೆ ಒಪ್ಪಿಗೆಯನ್ನೂ ನೀಡುತ್ತಾಳೆ. ಸಿರಿಯ ಈ ನಿರ್ಧಾರಗಳನ್ನು ಸ್ತ್ರೀವಾದದ ಹಿನ್ನೆಲೆಯಿಂದ ನೋಡುವಾಗ ಅದೊಂದು ಪ್ರತಿಭಟನೆ ಅಥವಾ ಸಂಘರ್ಷದ ರೀತಿಯಲ್ಲಿಯೂ ಕಂಡುಬರುತ್ತದೆ. ಇಲ್ಲಿ ಸಿರಿ ವ್ಯವಸ್ಥೆಯನ್ನು ಯಾವ ರೀತಿ ಬಳಸಿಕೊಂಡಳು ಹಾಗೂ ವ್ಯವಸ್ಥೆ ಸಿರಿಯನ್ನು ಯಾವ ರೀತಿ ಬಳಸಿಕೊಂಡಿತು ಎನ್ನುವ ಎರಡು ವಿಚಾರಗಳೂ ಅತ್ಯಂತ ಸೂಕ್ಷ್ಮ ವಿಚಾರಗಳಾಗಿರುವುದರಿಂದ ಮೇಲ್ನೋಟದ ಅಧ್ಯಯನ ಯಾವುದೇ ಫಲಿತಗಳನ್ನು ನೀಡದು.

ಊಳಿಗಮಾನ್ಯ ವ್ಯವಸ್ಥೆಯ ವಿರುದ್ಧ ಅಂದಿನ ಸಂದರ್ಭದಲ್ಲಿ ಹೋರಾಟಗಳು ಇದ್ದವೇ ಅಥವಾ ಹೋರಾಟಗಳು ಇದ್ದರೆ ಅವು ಯಾವ ಸ್ವರೂಪದ ಹೋರಾಟಗಳು ಎನ್ನುವ ಪ್ರಶ್ನೆಗೆ ಉತ್ತರಿಸುವುದು ಸ್ವಲ್ಪ ಕಷ್ಟ. ಹೋರಾಟಕ್ಕೆ ಸಂಬಂಧಿಸಿದ ಲಿಖಿತ ದಾಖಲೆಗಳೂ ಅಷ್ಟಾಗಿ ಕಂಡುಬರುವುದಿಲ್ಲ. ಆದರೆ ಪಾಡ್ದನಗಳಲ್ಲಿ ಪ್ರತಿಭಟನೆಯ ಕುರಿತ ಹಲವಾರು ವಿವರಗಳು ಸಿಗುತ್ತವೆ. ಪ್ರತಿಭಟಿಸಿದವರು ದೈವಗಳಾಗಿ ಪಾಡ್ದನಗಳಲ್ಲಿ ಕಂಡುಬರುತ್ತಾರೆ. ಉದಾಹರಣೇಗೆ ಸಿರಿ, ಕಲ್ಲುರ್ಟಿ, ಮೈಂದಲೆ ತನ್ನಿಮಾನಿಗ ಮುಂತಾದ ಸ್ತ್ರೀ ದೈವಗಳ ಪಾಡ್ದನಗಳಲ್ಲಿ ಸಂಘರ್ಷದ ನೆಲೆಗಳನ್ನು ಗುರುತಿಸಬಹುದಾಗಿದೆ. ಲೌಕಿಕ ಬದುಕಿನಲ್ಲಿ ಶೋಷಣೆಯನ್ನು ಅನುಭವಿಸಿ, ಅದಕ್ಕೆ ಬಲಿಯಾದ ವ್ಯಕ್ತಿಗಳು ಸತ್ತ ಮೇಲೆ ದೈವಗಳಾಗಿ ಪ್ರತೀಕಾರ ತೀರಿಸಿಕೊಳ್ಳುವುದು ಪಾಡ್ದನಗಳಲ್ಲಿ ಚಿತ್ರಿತವಾಗಿದೆ. ಸಿರಿ ಬದುಕಿನುದ್ದಕ್ಕೂ ನಡೆಸಿದ ಹೋರಾಟ ಅಂದಿನ ಸಂದರ್ಭದಲ್ಲಿ ಮಹತ್ವದ ಬದಲಾವಣೇಯನ್ನು ತರದಿದ್ದರೂ, ಸಿರಿ ದೈವವಾಗಿ ಆರಾಧನೆಗೊಳ್ಳಲು ಆರಂಭಗೊಂಡ ಬಳಿಕ ಅವಳ ಸಾಮಾರ್ಥ್ಯ ಬೇರೆ ಬೇರೆ ರೀತಿಯಲ್ಲಿ ಪ್ರಕಟಗೊಳ್ಳಲಾರಂಭಿಸಿತು. ಆದರೆ ಅದು ನಂಬಿಕೆ ಹಾಗೂ ಆಚರಣೆಗಳಿಗೆ ಹೆಚ್ಚಾಗಿ ಸಂಬಂಧಿಸಿತ್ತೇ ಹೊರತು ಅಧಿಕಾರ ಹಾಗೂ ಸವಲತ್ತುಗಳಿಗಲ್ಲ. ಏಕೆಂದರೆ ಲೌಕಿಕ ಬದುಕು ಊಳಿಗಮಾನ್ಯ ಹಾಗೂ ಬಂಡವಾಳಶಾಹಿ ಶಕ್ತಿಗಳ ನಿಯಂತ್ರಣದಲ್ಲಿ ಹಾಗೂ ನಿರ್ದೇಶನದಲ್ಲಿ ನಡೆಯಬೇಕಾಗಿತ್ತು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಗೆ ಅಭಿವ್ಯಕ್ತಗಿ ಸ್ವಾತಂತ್ರ್ಯವಿರುವುದರಿಂದಾಗಿ ಶೋಷಣೆ ನಡೆಸುವ ಶಕ್ತಿಗಳ ವಿರುದ್ಧ ಧ್ವನಿ ಹುಟ್ಟಿಕೊಂಡಿತು. ಹೀಗೆ ಪ್ರಜಾಪ್ರಭುತ್ವ ಸಂದರ್ಭದಲ್ಲಿ ನಡೆಯುವ ಹೋರಾಟಗಳಿಗೆ ಚರಿತ್ರೆಯುದ್ದಕ್ಕೂ ಸಾತ್ವಿಕವಾಗಿ ಹಾಗೂ ಮೌನವಾಗಿ ನಡೆದ ಹೋರಾಟಗಳು ಬಲವನ್ನು ತುಂಬಿದವು. ಹಳೆಯ ಕಟ್ಟುಪಾಡುಗಳನ್ನು ಮೀರುವ ಪ್ರಯತ್ನ ಮಾಡಿದ ಸಿರಿ ಈ ಕಾರಣದಿಂದಾಗಿ ಇಂದಿನ ಮಹಿಳಾ ಚಳವಳಿಯ ಸಂದರ್ಭದಲ್ಲಿ ಪ್ರಮುಖಳಾಗಿ ಕಂಡುಬರುತ್ತಾಳೆ. ಅದೇರೀತಿ ಮಾತೃವಂಶೀಯ ಕುಟುಂಬದೊಳಗಿನ ನಾನಾ ಬಗೆಯ ಸಂಘರ್ಷಗಳನ್ನು ಸಿರಿ ಪಠ್ಯ ತೆರೆದಿಡುತ್ತಾ ಹೋಗುತ್ತದೆ. ಇದು ಕುಟುಂಬದ ನೆಲೆಯ ರಾಜಕಾರಣದ ವಿವಿದ ಮುಖಗಳನ್ನು ಅನಾವರಣಗೊಳಿಸುತ್ತದೆ.