ಪಾಡ್ದನಗಳು ತುಳುನಾಡಿನ ಚರಿತ್ರೆಯ ಪುನಾರಚನೆಗೆ ಅತ್ಯಮೂಲ್ಯವಾದ ಮೌಖಿಕ ರಚನೆಗಳು. ಇವು ಪ್ರಭುತ್ವದ ಹಂಗಿನಲ್ಲಿ ಅಥವಾ ಪ್ರಭುತ್ವದ ಮುಖವಾಣಿಗಳಾಗಿ ಹುಟ್ಟಿಕೊಂಡವಲ್ಲ. ಇವು ಗ್ರಾಮೀಣ ಪರಿಸರದ ಜನರ, ಅದರಲ್ಲೂ ಬಹುಮುಖ್ಯವಾಗಿ ಕೃಷಿ ಕಾರ್ಮಿಕರ, ಬದುಕಿನ ಅನುಭವದ ನೆಲೆಗಳಲ್ಲಿ ರೂಪುಗೊಂಡ ಕಥನಗಳು. ಪಾಡ್ದನಗಳು ಊಳಿಗಮಾನ್ಯ ಸಮಾಜ ವ್ಯವಸ್ಥೆಯೊಳಗಿನ ಕ್ರೌರ್ಯವನ್ನು ಚಿತ್ರಿಸುವುದರ ಜೊತೆಗೆ ಅನ್ಯಾಯದ ವಿರುದ್ಧದ ಆಕ್ರೋಶವನ್ನೂ ಧ್ವನಿಸುತ್ತವೆ. ಅದೇ ರೀತಿ ಪಾಡ್ದನಗಳು ಜಮೀನ್ದಾರಿಕೆಯ ಸಂಕೇತಗಳಾದ ಬೀಡು ಹಾಗೂ ಗುತ್ತು ಮನೆಗಳ ದರ್ಪಿಷ್ಟ ಮನೋಭಾವವನ್ನು ಒಂದು ಕಡೆ ವಿರೋಧಿಸಿದರೆ ಇನ್ನೊಂದು ಕಡೆ ಈ ಮನೆಗಳ ಅಥವಾ ತಮ್ಮ ಒಡೆಯರ ವೈಭವದ ಚಿತ್ರಣವನ್ನೂ ನೀಡುತ್ತವೆ. ಊಳಿಗಮಾನ್ಯ ಸಂದರ್ಭವನ್ನು ಕಲ್ಪಿಸಿಕೊಂಡಾಗ ಇದು ಸಹಜವಾಗಿಯೇ ಕಂಡುಬರುತ್ತದೆ. ಏಕೆಂದರೆ ಆ ವ್ಯವಸ್ಥೆಯಲ್ಲಿ ನೇರ ಪ್ರತಿಭಟನೆ ಎನ್ನುವುದು ಸಾಧ್ಯವಿಲ್ಲದ ಮಾತಾಗಿತ್ತು. ಊಳಿಗಮಾಣ್ಯ ಚೌಕಟ್ಟಿನೊಳಗೆ ಹುಟ್ಟಿಕೊಂಡ ಪಾಡ್ದನಗಳು ಆ ಚೌಕಟ್ಟನ್ನು ಮೀರುವ ಪ್ರಯತ್ನಗಳನ್ನು ಕೆಲವೊಮ್ಮೆ ಮಾಡಿವೆಯಾದರೂ ಶ್ರೇಣೀಕೃತ ಸಾಮಾಜಿಕ ರಚನೆಯನ್ನು ಬುಡಮೇಲು ಮಾಡುವ ಸಾಮಾರ್ಥ್ಯವನ್ನು ಅವು ಹೊಂದಿರಲಿಲ್ಲ. ಆದರೆ ಚರಿತ್ರೆಯುದ್ದಕ್ಕೂ ದುಡಿಯುವ ವರ್ಗಗಳು ಮೌನ ಪ್ರತಿಭಟನೆಯನ್ನು ತಮ್ಮ ಹಾಡುಗಳ ಮೂಲಕ ತಲೆಮಾರಿನಿಂದ ತಲೆಮಾರಿಗೆ ವರ್ಗಾಯಿಸಿಕೊಂಡೇ ಬಂದವು. ಭೂಮಾಲೀಕ ವರ್ಗಗಳನ್ನು ಪಾಡ್ದನಗಳು ಹೊಗಳುವ ಸಂದರ್ಭವು ದುಡಿಯುವ ವರ್ಗಗಳ ಅಸಹಾಯಕತೆಯನ್ನು ಒಂದು ಕಡೆ ಸೂಚಿಸಿದರೆ, ಇನ್ನೊಂದು ಕಡೆ ಅದು ಸಾಮಾಜಿಕ ಅಸಮಾನತೆಯ ಚಿತ್ರಣವನ್ನು ನೀಡುತ್ತದೆ. ಅಧಿಕಾರ ಹಾಗೂ ಸವಲತ್ತುಗಳನ್ನು ಹೊಂದಿದ್ದ ಜನವರ್ಗಗಳನ್ನು ನೇರವಾಗಿ ವಿರೋಧಿಸುವುದು ಸಾಧ್ಯವಿಲ್ಲದ ಕಾರಣ ದೈವಗಳ ರೂಪದಲ್ಲಿ ಅವರನ್ನು ಕಾಡುವ ಹಾಗೂ ಶಿಕ್ಷಿಸುವ ಪ್ರಸಂಗಗಳನ್ನು ಪಾಡ್ದನಗಳು ತೆರೆದಿಡುತ್ತವೆ. ಸಮಾಜದಲ್ಲಿ ಅಸಮಾನತೆ, ಶೋಷಣೆ ಹಾಗೂ ದಾಸ್ಯರೂಪಿ ಸಂಬಂಧಗಳ ಚಿತ್ರಣವನ್ನು ನೀಡುವ ಪಾಡ್ದನಗಳು ಜನಮುಖಿ ಚರಿತ್ರೆಯ ನಿರ್ಮಣಕ್ಕೆ ಸಹಕಾರಿಯಾಗಿವೆ.

ಪಾಡ್ದನಗಳನ್ನು ತುಳುನಾಡಿನ ಸಂಸ್ಕೃತಿಯನ್ನು ವೈಭವೀಕರಿಸಲು ಬಳಸಿದರೆ ಭೂತಾರಾಧನೆಯಂಥ ವಿಶಿಷ್ಟ ಆರಾಧನಾ ಸಂಪ್ರದಾಯ ಬಿಚ್ಚಿಕೊಳ್ಳಲು ಸಾಧ್ಯವಿಲ್ಲ. ಮೌಖಿಕ ಆಕರಗಳನ್ನು ಲಿಖಿತ ಆಕರಗಳಂತೆ ಅಭಿಮಾನದ ನೆಲೆಯಲ್ಲಿ ವೈಭವೀಕರಿಸುವ ಪ್ರಯತ್ನಗಳೂ ನಡೆಯುತ್ತಿರುತ್ತವೆ. ದೈವಾರಾಧನೆಯ ಸಂದರ್ಭದಲ್ಲಿ ಸಾಂಕೇತಿಕ ರೂಪದಲ್ಲಿ ಪ್ರಕಟಗೊಳ್ಳುವ ಪ್ರತಿಭಟನೆಗಳು ಆರಾಧನೆಯ ಅಬ್ಬರದಲ್ಲಿ ಗೌಣವಾಗಿ ಬಿಡುತ್ತವೆ. ಮೇಲ್ವರ್ಗದ ಶ್ರೀಮಂತಿಕೆಯ ಪ್ರದರ್ಶನದ ಹಿನ್ನೆಲೆಯಲ್ಲಿ ಭೂತಾರಾಧನೆ ಹೆಚ್ಚಾಗಿ ನಡೆಯುವುದರಿಂದಾಗಿ ಅದು ಪಾಡ್ದನಗಳಲ್ಲಿನ ಮೂಲ ಆಶಯಕ್ಕೆ ವಿರುದ್ಧವಾಗಿಯೇ ನಡೆಯುತ್ತಿರುತ್ತದೆ. ಪಾಡ್ದನಗಳಲ್ಲಿ ಪ್ರತಿಭಟನೆಯ ಧ್ವನಿ ಇದ್ದರೂ ಆಚರಣೆಯ ಸಂದರ್ಭದಲ್ಲಿ ಊಳಿಗಮಾನ್ಯ ಚೌಕಟ್ಟೇ ಅಂತಿಮವಾಗಿರುತ್ತದೆ. ಸಾಮಾಜಿಕ ಶ್ರೇಣೀಕರಣವೂ ಯಥಾವತ್ತಾಗಿ ಪಾಲಿಸಲ್ಪಡುತ್ತದೆ. ಪಾಡ್ದನಗಳು ಲಿಖಿತ ರೂಪಕ್ಕೆ ಬಂದು ವಿದ್ವಾಂಸರ ವಲಯದಲ್ಲಿ ಸಂಶೋಧನೆಯ ವಸ್ತು ಆದಾಗ ಅದು ಆಚರಣೆಯ ಸಂದರ್ಭದಲ್ಲಿ ಇದ್ದ ಸ್ವರೂಪದಿಂದ ಭಿನ್ನವಾಗಿ ಹಾಗೂ ಸಾಮಾಜಿಕ ಟೀಕೆಯ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಅಧ್ಯಯನದ ಸಂದರ್ಭದಲ್ಲಿ ಪಾಡ್ದನಗಳು ಸ್ವತಂತ್ರವಾಗಿರುತ್ತವೆ. ಗ್ರಾಮದ ದೈವ, ಕುಟುಂಬದ ದೈವ ಮುಂತಾದ ಗಡಿಗಳು ಸಂಶೋಧನೆಯ ಸಂದರ್ಭದಲ್ಲಿ ಮಹತ್ವವನ್ನು ಪಡೆಯುತ್ತವೆಯಾದರೂ, ಸಂಶೋಧನೆಯ ಉದ್ದೇಶ ಅಷ್ಟಕ್ಕೇ ಸೀಮಿತವಾಗಿರುವುದಿಲ್ಲ. ಪಾಡ್ದನಗಳ ಮೂಲಕ ತುಳುನಾಡಿನ ಸಾಮಾಜಿಕ ಚರಿತ್ರೆಯನ್ನು ನಿರ್ಮಿಸುವುದು ಸಂಶೋಧನೆಯ ಮುಖ್ಯ ಗುರಿಯಾಗಿರುತ್ತದೆ. ಸಮಾಜದ ಕೆಳಸಮುದಾಯಗಳ ಅಸಹಾಯಕತೆ ಹಾಗೂ ಅದಕ್ಕೆ ಕಾರಣವಾದ ಶಕ್ತಿಗಳ ವಿರುದ್ಧದ ಆಕ್ರೋಶ ಬಹುತೇಕ ಪಾಡ್ದನಗಳಲ್ಲಿ ಕಂಡುಬರುತ್ತದೆ. ದೈವಾರಾಧನೆಯ ಸಂದರ್ಭಗಳಲ್ಲಿ ಭೂತದ ವೇಷಧಾರಿಯ ಕುಣಿತ, ಬಣ್ಣಗಾರಿಕೆ, ವೇಷಭೂಷಣ ಮುಂತಾದ ವಿಚಾರಗಳಿಗೇ ಹೆಚ್ಚಿನ ಒತ್ತನ್ನು ನೀಡುವುದರಿಂದಾಗಿ ಅಲ್ಲಿ ಹಾಡುವ ಪಾಡ್ದನಗಳ ಆಶಯಗಳಿಗೆ ಹೆಚ್ಚಿನ ಒತ್ತು ಇರುವುದಿಲ್ಲ. ಪಾಡ್ದನಗಳು ಎತ್ತುವ ಹಲವಾರು ಪ್ರಶ್ನೆಗಳು ಆಯಾ ಸಾಮಾಜಿಕ ಸಂದರ್ಭದ ಹಿನ್ನೆಲೆಯಲ್ಲಿ ಮುಖ್ಯವೆಂದು ಕಂಡುಬರದೇ ಹೋದರೆ ಅದೊಂದು ಕೇವಲ ವಾರ್ಷಿಕ ಆಚರಣೆಯಾಗಿ ಮಾತ್ರ ಮುಂದುವರಿದುಕೊಂಡು ಹೋಗಬಹುದೇ ಹೊರತು ಸಾಮಾಜಿಕ ಪರಿವರ್ತನೆಯ ಹಾದಿಗಳನ್ನು ಸ್ಪಷ್ಟಗೊಳಿಸಲು ಸಾಧ್ಯವಿಲ್ಲ. ಸಂಶೋಧನೆಗಳಲ್ಲಿ ಈ ಸಂಗತಿಗಳು ಮಹತ್ವವನ್ನು ಪಡೆಯುತ್ತವೆಯಾದರೂ, ಸಂಶೋಧನೆಗಳು ಎಷ್ಟರಮಟ್ಟಿಗೆ ಜನರಿಗೆ ತಲುಪುತ್ತವೆ ಎನ್ನುವ ಪ್ರಶ್ನೆಯೇ ಸಂಶೋಧನೆಯ ಮಿತಿಯಾಗಿಯೂ ಕಂಡು ಬರುತ್ತದೆ.

ಪಾಡ್ದನಗಳು ಇಂದು ಹಲವಾರು ಜಾತಿ/ಸಮುದಾಯಗಳ ಐಡೆಂಟಿಟಿಯ ಹಿನ್ನೆಲೆಯಿಂದಲೂ ಮುಖ್ಯವಾಗಿವೆ. ಬಂಟರು, ಬಿಲ್ಲವರು, ಮೊಗವೀರರು ಮುಂತಾದ ಜಾತಿಗಳು ಇಂದು ತಮ್ಮ ಜಾತಿಯನ್ನು ಪ್ರತಿನಿಧಿಸುವ ದೈವಗಳನ್ನು ಅಪ್ಪಿಕೊಂಡಿವೆ. ಜಾತಿಗಳ ಆರ್ಥಿಕ ಮಟ್ಟಕ್ಕನುಗುಣವಾಗಿ ದೈವಗಳ ಗುಡಿಗಳ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿರುವುದನ್ನು ತುಳುನಾಡಿನಲ್ಲಿ ಕಾಣಬಹುದಾಗಿದೆ. ಮತ್ತೊಮ್ಮೆ ಸಮಾಜದ ಕೆಳಸ್ತರದ ಜನರ ದೈವಗಳು ಅಲಕ್ಷಿತವಾಗಿಯೇ ಉಳಿಯಬೇಕಾದ ಪರಿಸ್ಥಿತಿಯನ್ನು ಎದುರಿಸಿವೆ. ಪಾಡ್ದನಗಳ ಮೂಲಕ ಕಟ್ಟುವ ಚರಿತ್ರೆ ವರ್ತಮಾನದ ರಾಜಕಾರಣವನ್ನು ಅರ್ಥೈಸದೇ ಹೋದರೆ ಅದೊಂದು ಪರ್ಯಾಯ ಚರಿತ್ರೆಯಾಗಿ ಹೊರಹೊಮ್ಮಲು ಸಾಧ್ಯವಿಲ್ಲ. ಸಿರಿ ಹಾಗೂ ಕೋಟಿ-ಚೆನ್ನಯರ ಪಾಡ್ದನಗಳು (ಸಂಧಿ ಎಂಬುದಾಗಿಯೂ ಕರೆಯಲಾಗುತ್ತದೆ). ತುಳುನಾಡಿನಲ್ಲಿ ಯಾಕಾಗಿ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡವು ಎನ್ನುವ ವಿಚಾರವನ್ನು ತುಳುನಾಡಿನ ಜಾತಿ ರಾಜಕಾಋಣದ ಹಿನ್ನೆಲೆಯಿಂದಲೇ ನೋಡಬೇಕಾಗುತ್ತದೆ. ಏಕೆಂದರೆ ತುಳುನಾಡಿನ ಎಲ್ಲ ದೈವಗಳು ಹಾಗೂ ಅವುಗಳಿಗೆ ಸಂಬಂಧಿಸಿದ ಪಾಡ್ದನಗಳು ಆಚರಣೆಯ ದೃಷ್ಟಿಯಿಂದಾಗಲಿ ಅಥವಾ ಸಂಶೋಧನೆಯ ದೃಷ್ಟಿಯಿಂದಾಗಲಿ ಏಕರೀತಿಯ ಮಹತ್ವವನ್ನು ಪಡೆದುಕೊಂಡಿಲ್ಲ. ಇಲ್ಲೊಂದು ರೀತಿಯ ಆಯ್ಕೆ ಪ್ರಕ್ರಿಯೆ ಇದ್ದು, ಅದು ಪೂರ್ವಾಗ್ರಹ ಪೀಡಿತವಾಗಿದ್ದು, ಅಂತರ್ ಸಂಬಂಧಗಳನ್ನು ಗುರುತಿಸುವಲ್ಲಿ ವಿಫಲವಾಗಿದೆ. ಪಾಡ್ದನಗಳನ್ನು ಹಾಗೂ ದೈವಗಳನ್ನು ಜಾತಿಯ ಮೂಲಕ ಗುರುತಿಸುವ ವಿಧಾನದಿಂದ ಯಾವುದೇ ರೀತಿಯ ಫಲಿತಗಳನ್ನು ಕಂಡುಕೊಳ್ಳಲು ಸಾಧ್ಯವಿಲ್ಲ. ತುಳುನಾಡಿನ ಸಾಂಸ್ಕೃತಿಕ ಚರಿತ್ರೆ ರಚನೆಗೆ ಇದು ತಡೆಯೊಡ್ಡುವ ಎಲ್ಲ ಸಾಧ್ಯತೆಗಳೂ ಇದೆ. ಸಿರಿಯನ್ನು ಬಂಟರಿಗೆ ಸೀಮಿತಗೊಳಿಸುವ ಅಥವಾ ಕೋಟಿ-ಚೆನ್ನಯರನ್ನು ಬಿಲ್ಲವರಿಗೆ ಸೀಮಿತೊಗಳಿಸುವ ಪ್ರಯತ್ನಗಳು ಮೇಲೆ ವಿವರಿಸಿದಂತೆ ತುಳುನಾಡಿನ ಸ್ಥಳೀಯ ಅಥವಾ ಮೌಖಿಕ ಚರಿತ್ರೆ ನಿರ್ಮಾಣಕ್ಕೆ ತೊಡಕಾಗಿ ಪರಿಣಮಿಸಬಹುದು.

ತುಳುನಾಡಿನ ಮೌಖಿಕ ಸಾಹಿತ್ಯವನ್ನು ಜಾತಿಯ ಮೂಲಕ ಗುರುತಿಸಿದಂತೆ ಧರ್ಮದ ಮೂಲಕವೂ ಗುರುತಿಸಲಾಗಿದೆ. ಆದರೆ ತುಳುನಾಡಿನ ಮೌಖಿಕ ಚರಿತ್ರೆ ರಚನೆಯಲ್ಲಿ ಮುಸ್ಲಿಂ ಜಾನಪದವಾಗಲಿ ಅಥವಾ ಕ್ರಿಶ್ಚಿಯನ್‌ ಜಾನಪದವಾಗಲಿ ಅಷ್ಟೊಂದು ಮಹತ್ವವನ್ನು ಪಡೆದುಕೊಂಡಿಲ್ಲ. ಮುಸ್ಲಿಂ ಹಾಗೂ ಕ್ರಿಶ್ಚಿಯನ್‌ ಸಮುದಾಯಗಳ ಸಾಹಿತ್ಯ ಹಾಗೂ ಭೌತಿಕ ರಚನೆಗಳನ್ನು ಬಿಟ್ಟು ತುಳುನಾಡಿನ ಚರಿತ್ರೆ ರಚನೆಯಾದರೆ ಅದನ್ನು ತುಳುನಾಡಿನ ಸಮಗ್ರ ಚರಿತ್ರೆಯೆಂದು ಪರಿಗಣಿಸಲು ಸಾಧ್ಯವಾಗುವುದಿಲ್ಲ. ಆಯಾ ಧಾರ್ಮಿಕ ಚೌಕಟ್ಟಿನೊಳಗೆ ಅವುಗಳ ವಿಶಿಷ್ಟತೆಯನ್ನು ಗುರುತಿಸುವ ಹಾಗೂ ಒಂದು ಇನ್ನೊಂದರಿಂದ ಪ್ರಭಾವಿತಗೊಂಡ ಬಗೆಯನ್ನು ಅಧ್ಯಯನಿಸುವ ಕೆಲಸ ಇನ್ನಷ್ಟು ಆಗಬೇಕಾಗಿದೆ.