ಕೊಡಂಗಲ್ಲೂರು

ಶ್ರೀ ಕುರುಂಬಾ ಭಗವತಿಯ ಮೂಲಸ್ಥಳವೆನ್ನಲಾದ ಹಾಗೂ ಸಾಧ್ವಿ ಕಣ್ಣಗಿಯ ಸಮಾಧಿಸ್ಥಾನವೆನ್ನಲಾದ ಕೊಡಂಗಲ್ಲೂರು ಅನೇಕ ಸಾಂಸ್ಕೃತಿಕ ಪದರುಗಳನ್ನು ತನ್ನಲ್ಲಿ ನಿಕ್ಷೇಪಿಸಿಕೊಂಡಿರುವ ಪ್ರಾಚೀನ ಕ್ಷೇತ್ರ. ಬೌದ್ಧದೇವತೆಯಾದ ತಾರಾಭಗವತಿಯ ಆರಾಧನೆಯು ಕೊಡಂಗಲ್ಲೂರಿನಲ್ಲಿ ನಡೆಯುತ್ತಿತ್ತೆಂಬ ಅಭಿಪ್ರಾಯವಿದೆ. ಭರಣಿ ಉತ್ಸವದ ಅಂಗವಾದ ‘ಕಾವುತೀಂಡಲ್’ ಎಂಬುದು ಬೌದ್ಧಕ್ಷೇತ್ರಕ್ಕೆ ಸನಾತನ ಧರ್ಮೀಯರ ಆಕ್ರಮಣವನ್ನು ಸೂಚಿಸುತ್ತದೆ ಎನ್ನಲಾಗಿದೆ. ವೀರಾವೇಶದ ಆಕ್ರಮಣ ಸ್ವರೂಪದ ಈ ವಿಲಕ್ಷಣ ಆಚರಣೆಯ ಸಂದರ್ಭದಲ್ಲಿ ತುಂಬ ಅಶ್ಲೀಲವಾದ ಹಾಡುಗಳನ್ನು ಹಾಡುವುದು ಕುಣಿಯುವುದೂ ಒಂದು ಧಾರ್ಮಿಕಾಚಾರವೆನಿಸಿತ್ತು. ಕೊಡಂಗಲ್ಲೂರಿನಲ್ಲಿ ಹಿಂದೆ ನೆಲಸಿದ್ದ ಬೌದ್ಧ ಸನ್ಯಾಸಿ-ಸನ್ಯಾಸಿನಿಯರನ್ನು ಅಲ್ಲಿಂದ ದೂರಮಾಡಲು ಈ ಅಸಹ್ಯ ಪ್ರಯೋಗ ಮಾಡಲಾಯಿತೆಂಬ ಊಹೆಯೂ ಇದೆ. ಇಂಥ ಅಶ್ಲೀಲ ಹಾಡು ಕುಣಿತಗಳು ಫಲವಂತಿಕೆಯ ಆಚರಣೆಯ(Fertility cult) ಒಂದು ಅಂಗ ಎಂದೂ ವಿಶ್ಲೇಷಿಸುವವರಿ ದ್ದಾರೆ. ಕೆಲವು ವರ್ಷಗಳ ಹಿಂದೆ ಈ ಅಶ್ಲೀಲ ಹಾಡು ಕುಣಿತಗಳನ್ನು ಸರಕಾರ ನಿಷೇಧಿಸಿದೆ.

ಈ ದೇವಳದಲ್ಲಿ ಹಿಂದೆ ಮದ್ಯನೈವೇದ್ಯ ಸಮೇತವಾದ ತಾಂತ್ರಿಕ ಪೂಜೆ ನಡೆಯುತ್ತಿತ್ತೆಂದು ತಿಳಿಯುತ್ತದೆ. ಇಲ್ಲಿನ ಪೂಜೆ ‘ಅಡಿಗಳು’ ಎಂದು ಕರೆಯಲ್ಪಡುವ ಮಧು ಬ್ರಾಹ್ಮಣರಿಂದ ನಡೆಯುತ್ತದೆ.

ಕೊಡಂಗಲ್ಲೂರಿನಲ್ಲಿ ನೆಲಸಿದ ‘ವಸೂರಿಮಾಲಾ ಭಗವತಿ’ ರೋಗಾಧಿ ದೇವತೆಯಾಗಿ ದ್ದಾಳೆ. ವಸೂರಿ ಎಂದರೆ ಸಿಡುಬು. ದಾರುಕನನ್ನು ಕೊಲ್ಲಲೆಂದು ಹೊರಟ ಕಾಳಿಯ ಜತೆ ಕಳುಹಿಸಲು ಶಿವನು ಮೂರನೆಯ ಕಣ್ಣಿನಿಂದ ಸೃಷ್ಟಿಸಿದ ದೇವತೆ ಇವಳೆನ್ನಲಾಗಿದೆ. ಇವಳಿಗೆ ಹದಿನೆಂಟು ವ್ಯಾಧಿಗಳ ಒಡೆತನದ ವರವಿದೆಯಂತೆ. ಕೊಡಂಗಲ್ಲೂರಿನಲ್ಲಿರುವ ವಸುರಿಮಾಲಾ ವಿಗ್ರಹ ತುಂಬ ಪ್ರಾಚೀನವಾದುದು.

ಆಟ್ಟುಕಲ್ ಕ್ಷೇತ್ರ

ತಿರುವನಂತಪುರ ಪರಿಸರದ ಕರವನಯಾರ್ ಮತ್ತು ಕಿಳಿಯಾರ್ ಹೊಳೆಗಳ ಸಂಗಮಸ್ಥಳಕ್ಕೆ ಸಮೀಪವಾಗಿ ಆಟ್ಟುಕಲ್ ಭಗವತಿ ಕ್ಷೇತ್ರವಿದೆ. ಸ್ತ್ರೀಯರೇ ನಡೆಸುವ ಪೊಂಗಲ್ ಆಚರಣೆ ಇಲ್ಲಿಯ ವಿಶೇಷತೆ. ಆದ್ದರಿಂದಲೇ ಈ ಕ್ಷೇತ್ರವನ್ನು ಸ್ತ್ರೀಯರ ಶಬರಿಮಲೆ ಎಂದು ಕರೆಯುತ್ತಾರೆ.

ಸಾವಿರಾರು ಹೆಂಗಸರು ವ್ರತದಿಂದ ಇದ್ದು ಪಾತ್ರೆ ಪರಡಿಗಳನ್ನೂ, ನೈವೇದ್ಯಸಾಧನಗಳನ್ನೂ ತಲೆಯ ಮೇಳೆ ಹೊತ್ತು ತಂದು ದೇವಳದ ಆವರಣದಲ್ಲಿ ತಾತ್ಕಾಲಿಕ ಒಲೆ ಹೂಡಿ ಪೊಂಗಲ್ ನೈವೇದ್ಯವನ್ನು ಸಿದ್ಧಗೊಳಿಸುತ್ತಾರೆ. ಮಧ್ಯಾಹ್ನ ಪೂಜೆ ಮುಗಿಸಿ ಅರ್ಚಕ ಗರ್ಭಗೃಹದಿಂದ ತಂದ ತೀರ್ಥಜಲವನ್ನು ನೈವೇದ್ಯಪಾತ್ರಗಳ ಮೇಲೆ ಚಿಮುಕಿಸುತ್ತಾನೆ. ಇದು ದೇವಿಯಿಂದ ನೈವೇದ್ಯವು ಸ್ವೀಕೃತವಾಯಿತೆಂಬುದರ ಸಂಕೇತ. ಅವರವರೇ ಪೊಂಗಲು ಅಟ್ಟು, ಅರ್ಪಿಸಿದರೆ ದೇವರಿಗೆ ಸಂತೃಪ್ತಿ ಎಂಬುದು ನಂಬಿಕೆ. ಈ ಸಾಮೂಹಿಕ ನೈವೇದ್ಯಾರ್ಪಣೆಯಲ್ಲಿ ಪಾಲುಗೊಳ್ಳುವ ಮಹಿಳೆಯರು ಅಪೂರ್ವವಾದೊಂದು ಸಾರ್ಥಕಭಾವ ಪಡೆಯುತ್ತಾರೆ.

ಚೆಂಗನ್ನೂರು ಕ್ಷೇತ್ರ

ಮನುಷ್ಯ ಸಹಜವಾದ ವಿದ್ಯಮಾನಗಳನ್ನು ದೇವತೆಗಳಿಗೆ ಅನ್ವಯಿಸುವ ಪರಿಪಾಠದಲ್ಲಿ ಕೆಲವೊಂದು ವಿಚಿತ್ರ ಸಂಪ್ರದಾಯಗಳು ಬೆಳೆದಿರುವುದನ್ನು ಗಮನಿಸಬಹುದು. ಸ್ತ್ರೀ ಧರ್ಮವಾದ ಋತುವಾಗುವಿಕೆಯನ್ನು ಒಂದು ವಿಶಿಷ್ಟ ಆಚಾರವಿಧಿಯಾಗಿ ಪರಿಗಣಿಸುವ ಸಂಪ್ರದಾಯವು ದಕ್ಷಿಣ ಕೇರಳದ ಚೆಂಗನ್ನೂರು ದೇವಳದಲ್ಲಿ ಪಾಲಿಸಲ್ಪಡುತ್ತದೆ. ಚೆಂಗನ್ನೂರು ಮಹಾದೇವ ಕ್ಷೇತ್ರದ ಒಳ ಆವರಣದ ಪಶ್ಚಿಮ ಭಾಗದಲ್ಲಿ ಪ್ರತಿಷ್ಠಿತವಾದ ಭಗವತಿ ವಿಗ್ರಹ ಮಾಸಿಕ ಧರ್ಮದ ಲಕ್ಷಣಗಳನ್ನು ಪ್ರಕಟಿಸುತ್ತದೆಂದು ನಂಬಲಾಗಿದೆ. ಈ ವಿಗ್ರಹದ ಕಟಿಪ್ರದೇಶಕ್ಕೆ ಸುತ್ತಿದ ಬಟ್ಟೆ ನಿರ್ದಿಷ್ಟ ದಿನಗಳಲ್ಲಿ ಕೆಂಪುಹಳದಿ ಬಣ್ಣಕ್ಕೆ ತಿರುಗುತ್ತದೆನ್ನುತ್ತಾರೆ. ಮೂರು ದಿನಗಳ ಬಳಿಕ ವಿಗ್ರಹವನ್ನು ಸಮೀಪದ ನದಿಗೆ ಒಯ್ದು ಎಣ್ಣೆ ನೀರಿನ ಅಭಿಷೇಕ ಮಾಡಿಹೊಸ ಬಟ್ಟೆಯನ್ನು ತೊಡಿಸಲಾಗುತ್ತದೆ. ಮಾಸಿಕ ಸ್ರಾವದಿಂದ ಮಲಿನವಾದ ಬಟ್ಟೆಯನ್ನು ತೊಳೆದು ಸ್ವಚ್ಛಗೊಳಿಸಿ ಪ್ರಸಾದ ರೂಪವಾಗಿ ಹಂಚಲಾಗುತ್ತದೆ ಎನ್ನುತ್ತಾರೆ. ಪವಿತ್ರವೆನಿಸುವ ಈ ವಸ್ತುವನ್ನು ನಿರ್ದಿಷ್ಟ ಮೊತ್ತವಿತ್ತು ಕೊಂಡುಕೊಳ್ಳುವವರಿದ್ದಾರೆ.

ದೇವಿ ರಜಸ್ವಲೆಯಾಗುವ ಸಂದರ್ಭದ ಧಾರ್ಮಿಕ ವಿಧಿಗಳನ್ನು ಅಸಂಗತವೆಂದು ಪರಿಗಣಿಸಿ ಹಿಂದೊಮ್ಮೆ ಕರ್ನಲ್ ಮನ್ರೋ ಎಂಬ ಬ್ರಿಟಿಷ್ ಅಧಿಕಾರಿ ನಿಲ್ಲಿಸಿದನಂತೆ. ಆದರೆ ಆತನ ಪತ್ನಿಗೆ ಋತುಸ್ರಾವ ಸಂಬಂಧವಾದ ಕಾಯಿಲೆ ತಲೆದೋರಲು ಗಾಬರಿಗೊಂಡ ಅಧಿಕಾರಿ ತನ್ನ ಆದೇಶವನ್ನು ಹಿಂದೆಗೆದುಕೊಂಡದ್ದಲ್ಲದೆ ದೇವಿಗೆ ಕಾಣಿಕೆ ಇತ್ಯಾದಿ ಸಲ್ಲಿಸಿದನಂತೆ! (ಸುಗುಣಮಾಲಾ ಪತ್ರಿಕೆ, ಪು.೨೫-೨೬, ಅಕ್ಟೋಬರ್ ೧೯೯೩)

ವರ್ಷಕ್ಕೊಮ್ಮೆ ದೇವಿ ಬಹಿಷ್ಠೆಯಾಗುವಳೆಂಬ ಕಲ್ಪನೆಯ ಹಿನ್ನೆಲೆಯಲ್ಲಿ ಉತ್ಸವ ಕಾಲಘಟ್ಟದಲ್ಲಿ ದೇವಳದ ಮುಂದೆ ಕೆಂಪು ಬಟ್ಟೆಯನ್ನು ಹಿಡಿಯುವ ಪದ್ಧತಿ ಕೆಲವೆಡೆ ಇದೆ. ಕಾರಿಂಜ ಕ್ಷೇತ್ರದ ಉತ್ಸವದಲ್ಲಿ ಇಂಥ ವಿಧಿ ಇದೆ.

ಮಾತೃದೇವತಾ ಉಪಾಸನೆ ಹಾಗೂ ಫಲಸಮೃದ್ದಿ ಆಚರಣೆಯ ಆಶಯದಿಂದ ಮೂಡಿಬಂದ ಪದ್ಧತಿ ಇದೆನ್ನಬಹುದು. ಋತುದರ್ಶನಕ್ಕೂ ಸಂತಾನಪ್ರಾಪ್ತಿಗೂ ಸಂಬಂಧವಿರುವುದರಿಂದ ದೇವಿಯ ಪೂಜೆಯಲ್ಲಿ ಈ ವಿಚಾರವು ಸೇರ್ಪಡೆಯಾಗಿರಬೇಕು. ತಾಂತ್ರಿಕ ಪೂಜೆಯಲ್ಲಿ ಋತು ರಕ್ತಕ್ಕೆ ಪ್ರಾಶಸ್ತ್ಯವಿದೆಯೆನ್ನಲಾಗಿದೆ. ಹೆಣ್ಣಿನ ರಜಸ್ಸು ಸೃಷ್ಟಿಕ್ರಿಯೆಗೆ ಮೂಲವಾದುದರಿಂದ ಪವಿತ್ರವೆಂದು ಭಾವಿಸಲ್ಪಟ್ಟಿರಬೇಕು. ಚೆಂಗನ್ನೂರಿನಲ್ಲಿ ಹಿಂದೆ ತಾಂತ್ರಿಕ ಪೂಜೆ ಪ್ರಚುರವಾಗಿರಬಹುದು.

ಮಾಡಾಯಿ ಕಾವು : ಉತ್ತರ ಕೇರಳದ ಪಳಯಂಗಡಿಗೆ ಸಮೀಪದ ‘ಮಾಡಾಯಿ ಕಾವು’ ಎಂಬ ಕ್ಷೇತ್ರ ‘ಮಾಡಾಯಿ ಪಾರ’ (ಮಾಡುಯಿ ಪಾದೆಕಲ್ಲು) ಹಾಗೂ ‘ಮಾಡಾಯಿ ಕಾವಿಲಮ್ಮೆ’ ಎಂಬ ದೇವಿಯಿಂದ ಪ್ರಸಿದ್ಧವಾಗಿದೆ. ವಿಶಾಲ ಪದವಿನಂಥ ಈ ಪ್ರದೇಶದ ಪಕ್ಕದಲ್ಲೆ ವಟುಕುಂದ ಹೊಳೆ ಹರಿಯುತ್ತದೆ. ಚಿರಕ್ಕಲ್ ರಾಜರ ಆಶ್ರಯದಲ್ಲಿದ್ದ ಪ್ರಧಾನಕ್ಷೇತ್ರಗಳಲ್ಲಿ ಇದೂ ಒಂದು. ಇಲ್ಲಿ ದೇವಿಯನ್ನು ಶತ್ರುಸಂಹಾರ ರೂಪಿಣಿಯಾಗಿ ಉಗ್ರರೂಪದಲ್ಲಿ ಆರಾಧಿಸುತ್ತಿದ್ದರೆಂದು ತಿಳಿದುಬರುತ್ತದೆ.

ಇಂದಿಗೂ ಇಲ್ಲಿ ತಾಂತ್ರಿಕಪೂಜೆ ನಡೆಯುತ್ತಿದೆ. ಮಧು ಮತ್ಸ್ಯಾದಿ ನೈವೇದ್ಯಗಳು ಇಲ್ಲಿನ ವಿಧಿ. ‘ಪಿಡಾರ್’ ಅಥವಾ ‘ಪೂಡವರು’ ಎಂ ಶಾಕ್ತೇಯವರ್ಗದವರು (ಇವರು ಪೆರಿಂಜೆಲ್ಲೂರು ಗ್ರಾಮದವರು) ಇಲ್ಲಿನ ಅರ್ಚಕರು

ಹಲವು ಉತ್ಸವಗಳು ಈ ಕ್ಷೇತ್ರದಲ್ಲಿ ನಡೆಯುತ್ತವೆ. ವೃಶ್ಚಿಕ ಮಾಸದ ‘ಕಾರ್ತಿಕ ನಾಳ್’ (ಕೃತ್ತಿಕಾ ನಕ್ಷತ್ರ ದಿವಸ) ದೇವಿಯ ಜನ್ಮದಿನವಾಗಿ ಆಚರಿಸಲ್ಪಡುತ್ತದೆ. (ಭರಣಿ ಮತ್ತು ಕೃತ್ತಿಕಾ ನಕ್ಷತ್ರಗಳನ್ನು ಭಗವತಿಯ ಬೇರೆ ಬೇರೆ ಸ್ವರೂಪಗಳ ಜನ್ಮನಕ್ಷತ್ರವಾಗಿ ಪರಿಭಾವಿಸುತ್ತಾರೆ) ಅಂದು ೧೦೦೧ ನೇಂದ್ರ ಬಾಳೆಹಣ್ಣುಗಳನ್ನೂ ೧,೦೦೦ ಕದಳಿ ಹಣ್ಣುಗಳನ್ನು ನೈವೇದ್ಯವಾಗಿ ಅರ್ಪಿಸುವ ಪದ್ಧತಿ ಇದೆ.

ಪ್ರೇತ, ಪಿಶಾಚಾದಿ ಪೀಡಾ ನಿವಾರಣೆಗಾಗಿ ಜನ ಇಲ್ಲಿಗೆ ಬರುತ್ತಾರೆ. ಕರಿಮೆಣಸು ಹಾಗೂ ತುಪ್ಪ ಇಲ್ಲಿಗೆ ಸಲ್ಲಿಸುವ ವಿಶೇಷ ಕಾಣಿಕೆಗಳು. ಈ ಕ್ಷೇತ್ರವನ್ನು ‘ಮಾಡಾಯಿ ತಿರುಮರ್‌ಕಾಡ್ ಕಾವು’ ಎಂದೂ ಕರೆಯುತ್ತಾರೆ.

ಪೆರ್ನೆ ಕ್ಷೇತ್ರ : ಕುಂಬಳೆ ಸಮೀಪದ ಪೆರ್ನೆ ಕ್ಷೇತ್ರವು ಮುಚ್ಚಿಲೋಟು ಭಗವತಿಗೆ ಸಂಬಂಧಪಟ್ಟ ಹದಿನೆಂಟು ಕ್ಷೇತ್ರಗಳಲ್ಲಿ ಕೊನೆಯದು ಎನ್ನಲಾಗಿದೆ. ಆನುಪೂರ್ವಿಯಲ್ಲಿ ಕರಿವೆಳ್ಳೂರು, ಕ್ಷೇತ್ರವು ಮೊದಲನೆಯದು. ದೈವಸ್ಥಾನದ ಅಂಗಣದ ಮೂಲೆಯಲ್ಲಿ ತುಂಬ ಹಳೆಯದಾದ ಪಾಲೆಯ ಮರವಿದೆ. ದೈವೀಶಕ್ತಿಗಳು ಕರಿವೆಳ್ಳೂರಿನಿಂದ ಬಂದು ಮೊದಲು ನೆಲಸಿದ್ದು ಅದರ ನೆರಳಲ್ಲೆಂದು ನಂಬಿಕೆ. ಈ ಕ್ಷೇತ್ರದಲ್ಲಿ ಮುಚ್ಚಿಲೋಟು ಭಗವತಿ, ಕಣ್ಣಂಗಾಡ್ ಭಗವತಿ, ಪುಲ್ಲೂರಾಳಿ, ಮೂವಾಳಂ ಕುಳಿಯಿಲ್ ಚಾಮುಂಡಿ, ವಿಷ್ಣುಮೂರ್ತಿ ಮೊದಲಾದ ಮಲೆಯಾಳ ಸಂಪ್ರದಾಯದ ದೈವಗಳ ಜೊತೆಗೆ ಮಲರಾಯ(ಯಿ) ಮತ್ತು ‘ಬೀರಣಾಳ್ವ’ ಎಂಬ ತುಳುದೈವಗಳು ನೆಲಸಿವೆ. ಇದು, ಕೇರಳ-ತೌಳವ ಸಾಂಸ್ಕೃತಿಕ ಸಮೀಕರಣದ ದೃಷ್ಟಾಂತವಾಗಿದೆ.

ಮುಚ್ಚಿಲೋಟು ಭಗವತಿಯ ಇತರ ಕ್ಷೇತ್ರಗಳಂತೆಯೇ ಇಲ್ಲಿಯೂ ‘ಕೈಲಾಸ ಕಲ್ಲು’ ಮತ್ತು ‘ಮಣಿಕಿಣರ್’ ಎಂಬ ಬಾವಿ ದೈವಸ್ಥಾನದ ಅಂಗಳದಲ್ಲಿದೆ. ಭಗವತಿಯು ಕೈಲಾಸದಿಂದ ಶಿವಾನುಗ್ರಹ ಪಡೆದು ಬಂದವಳೆಂಬುದನ್ನು ಬಿಂಬಿಸುವುದಕ್ಕಾಗಿ ‘ಕೈಲಾಸಕಲ್ಲು’ ಎಂಬ ಹೆಸರನ್ನು ಬಳಸಲಾಗಿದೆ ಎನ್ನುತ್ತಾರೆ. ಸ್ಥಳಮಹಾತ್ಮೆಯನ್ನು ಉಜ್ವಲಗೊಳಿಸಲು ಇಂಥ ಸಂಕೇತಗಳ ಬಳಕೆ ಸಾಮಾನ್ಯ. ಕಳಿಯಾಟ ಉತ್ಸವದ ವೇಳೆ ದೈವ ಕಲಾವಿದ ಈ ಕಲ್ಲಿನ ಸಮೀಪ ವ್ರತನಿಷ್ಠನಾಗಿ ಇರಬೇಕೆಂಬುದು ನಿಯಮ. ದೇವಿ ಮೊದಲಿಗೆ ಕರಿವೆಳ್ಳೂರಿನಲ್ಲಿ ತನ್ನ ದಾಹ ತೀರಿಸಿದ ಬಾವಿಗೆ ಮೂಲತಃ ‘ಮಣಿಕಿಣರ್’ ಎಂದು ಹೆಸರಿದ್ದು, ಆ ಹೆಸರು ಎಲ್ಲ ಕ್ಷೇತ್ರಗಳ ಬಾವಿಗಳಿಗೂ ಅನ್ವಯಿಸುತ್ತದೆ. ಕಳಿಯಾಟ ಉತ್ಸವದ ವೇಳೆ ಮುಚ್ಚಿಲೋಟು ಭಗವತಿ ಬಾವಿನೀರನ್ನು ಬಗ್ಗಿ ನೋಡುವ ವಿಧಿಯಿದೆ.

‘ಸತ್ಯಚಾವಡಿ’ ಎಂದು ಕರೆಯಿಸಿಕೊಳ್ಳುವ ಇಲ್ಲಿನ ‘ಪಡಿಪ್ಪುರೆಯ ಛಾವಣಿಗೆ ಮುಳಿ ಹುಲ್ಲು ಹೊದಿಸುವ ವಾಡಿಕೆಯನ್ನು ಈಗಲೂ ಉಳಿಸಿಕೊಳ್ಳಲಾಗಿದೆ.

ಪೂರಂ ಉತ್ಸವ ಸಂದರ್ಭದಲ್ಲಿ, ಉತ್ಸವಾಂಗವಾಗಿ ವಾಣಿಯ ಸಮಾಜದವರ ಸಾಮೂಹಿಕ ವಿವಾಹ ಸಮಾರಂಭವು ಈ ಕ್ಷೇತ್ರದಲ್ಲಿ ನಡೆಯುವುದು ಒಂದು ಉಲ್ಲೇಖನೀಯ ಅಂಶ. ಇವರು ತಮ್ಮ ಮನೆಗಳಲ್ಲಿ ಮದುವೆ ನಡೆಸುವ ವಾಡಿಕೆಯಿಲ್ಲ. (ಈಚೆಗೆ ವರ್ಷದಲ್ಲಿ ಎರಡು ಬಾರಿ ಸಾಮೂಹಿಕ ವಿವಾಹವು ಇಲ್ಲಿ ನಡೆಯುತ್ತದೆ.) ವಿವಾಹ ಕಾರ್ಯಕ್ಕೆ ಮೊದಲು ಚಿಕ್ಕ ಮಕ್ಕಳಿಗೆ ‘ಪಂದಲ್ ಕಲ್ಯಾಣಂ’ (ಚಪ್ಪರದ ಮದುವೆ) ಎಂಬೊಂದು ವಿಧಿಯಿದೆ. ಇದರಲ್ಲಿ ಕನ್ನಿಕೆಯರ ತಲೆಗೆ ಸಿಂಗಾರ ಹೂವು ಇರಿಸಿ ಮುಖ್ಯ ದೈವಪಾತ್ರಿ (ನವಲಿಯ ಕೋಮರಂ) ತಾಲಿಕಟ್ಟಿ ಹರಸುವ ವಿಧಿ ಇದೆ. ಒಂದು ಬಗೆಯ ಅಣಕು ವಿವಾಹ ವಿಧಿಯಂತಿರುವ ಇದನ್ನು ‘ತಾಲಿಕೆಟ್ಟ್ ಕಲ್ಯಾಣಂ’ ಎನ್ನುತ್ತಾರೆ. (ಈ ‘ಕಲ್ಯಾಣ’ ನಡೆಯದೆ ಹೆಣ್ಣು ಹೆಂಗುಸಾದರೆ ಹಿಂದೆ ಬಹಿಷ್ಕಾರಕ್ಕೆ ಗುರಿಯಾಗಬೇಕಿತ್ತು.) ಯಾವುದೋ ಐತಿಹಾಸಿಕ ಕಾರಣಕ್ಕೆ ಈ ಸಂಪ್ರದಾಯ ರೂಢಿಗೆ ಬಂದಿರಬೇಕು.

ಮುಚ್ಚಿಲೋಟು ಭಗವತಿ ನಿತ್ಯಕನ್ನಿಕೆ ಎಂಬುದನ್ನು ನೆನಪಿಸುವಂಥ ಕಲಾಪವೊಂದು ಕಳಿಯಾಟ ಸಂದರ್ಭದಲ್ಲಿ ಅಭಿನೀತವಾಗುತ್ತದೆ. ತಾಳಿ ಕಟ್ಟಿಸಿಕೊಳ್ಳಲು ದೇವಿ ಮುಂದಾಗುವಾಗ ಯಾವುದೋ ಅಶುದ್ದಿ ಅಡ್ಡ ಬಂದು, ಹಾಗಿದ್ದರೆ ಮುಂದಿನ ಕಳಿಯಾಟಕ್ಕೆ ಕಲ್ಯಾಣವಾಗಲಿ ಎಂದು ತಾಳಿ ಕಟ್ಟುವುದನ್ನು ಪ್ರತಿಸಲವೂ ಮುಂದೂಡುತ್ತಾ ಬರುತ್ತಾರೆ. ದೇವಿ ಚಿರಕನ್ನಿಕೆಯಾಗಿಯೇ ಉಳಿಯುತ್ತಾಳೆ.

ಪಾದೆಸ್ಥಾನ : ಕುಂಬಳೆಯ ಸಮೀಪದ ಒಂದು ಚಿಕ್ಕ ಗುಡ್ಡದಲ್ಲಿ ಈ ಕ್ಷೇತ್ರವಿದೆ. ಇಲ್ಲಿನ ಪ್ರಧಾನದೇವಿ ಪಾಡಾಂಗರೆ ಪೋದಿ (ಪಾಟಾರ್‌ಕುಳಂಗದ ಭಗವತಿ)ಯಾದರೂ, ‘ಆಲಿಚಾಮುಂಡಿ’ಯಿಂದಲೆ ಈ ಕ್ಷೇತ್ರ ವಿಖ್ಯಾತವಾಗಿದೆ. ಹೆಮ್ಮೆಗಾರನೂ ಲಂಪಟನೂ ಆಗಿದ್ದ ಆಲಿ ಬ್ಯಾರಿ ಎಂಬ ಮುಸ್ಲಿಂ ಮಂತ್ರವಾದಿ ತನ್ನ ಅತಿರೇಕವರ್ತನೆಯಿಂದ ಚಾಮುಂಡಿಯ ಆಗ್ರಹಕ್ಕೆ ಬಲಿಯಾಗಿ ಆತನ ಪ್ರೇತಾತ್ಮವು ಆ ದೈವದ ಸೇರಿಗೆಗೆ ಒಳಗಾದುದರಿಂದ ‘ಆಲಿ ಚಾಮುಂಡಿ’ ಎಂಬ ಪ್ರಬಲ ಸಂಯುಕ್ತ ಶಕ್ತಿ ರೂಪುಗೊಂಡಿತೆಂಬುದು ಐತಿಹ್ಯ. ಮೋಹಕ ರೂಪಿನ ಮಾಯೆಯಿಂದ ರಸಿಕನಾದ ಆಲಿಯನ್ನು ಚಾಮುಂಡಿ ಮರುಳುಗೊಳಿಸಿ ಉಪಾಯವಾಗಿ ನಿಗ್ರಹಿಸಿದಳೆಂಬ ಕಥೆ ರೋಚಕವಾಗಿದೆ. (ಅತಿರೇಕ ವರ್ತನೆಯ ಮಂತ್ರವಾದಿಯೊಬ್ಬನನ್ನು ಜನರೇ ಸಿಟ್ಟಿಗೆದ್ದು ಗುಪ್ತವಾಗಿ ಮುಗಿಸಿದ ವೃತ್ತಾಂತಕ್ಕೆ ಬೇರೊಂದೇ ಬಣ್ಣ ಬಂದಿರಲೂಬಹುದು. ಭೂತಮಹಿಮೆಯನ್ನು ಪ್ರಚುರಗೊಳಿಸಲು ಇಂಥ ಕಥೆಗಳು ಅನುಕೂಲ.)

ಪಾದೆಸ್ಥಾನದ ಕಳಿಯಾಟ ಸಂದರ್ಭದಲ್ಲಿ ಆಲಿಯ ತೆಯ್ಯಾಟವೂ ನಡೆಯುತ್ತದೆ. ಇತರ ದೈವಗಳಂತೆ ಆಲಿ ದೈವಕ್ಕೆ ಆಡಂಬರದ ಅಣಿ ಇತ್ಯಾದಿಗಳಿಲ್ಲ. ಬಣ್ಣ ಬಣ್ಣದ ಲುಂಗಿ, ಸೊಂಟಪಟ್ಟಿ, ತಲೆಗೆ (ಬಂಗಾರದ) ಟೊಪ್ಪಿಯಂಥ ಶಿರೋಭೂಷಣ ಇರುತ್ತದೆ. ಮೈಗೆ ಗಂಧ ಪೂಸಿ ಮುಖಕ್ಕೆ ಕಪ್ಪುಬಣ್ಣ ಲೇಪಿಸುತ್ತಾರೆ.

ಅನೇಕ ರೀತಿಯ ಹರಕೆ ಹೊತ್ತವರು ಆಲಿಚಾಮುಂಡಿಯಿಂದ ಪ್ರಸಾದ ಪಡೆಯಲು ಬರುತ್ತಾರೆ. ಸಾಕಷ್ಟು ಸಂಖ್ಯೆಯಲ್ಲಿ ಮುಸ್ಲಿಮರೂ (ಅವರ ಸ್ತ್ರೀಯರೂ ಸಹ) ಅನುಗ್ರಹಾಕಾಂಕ್ಷಿಗಳಾಗಿ ಬರುವುದು ಕುತೂಹಲಕರವಾಗಿದೆ. ವೇಶ್ಯಾವೃತ್ತಿಯ ಹೆಂಗಳೆಯರೂ ಈತನಿಗೆ ನಡೆದುಕೊಳ್ಳುತ್ತಾರೆ. ‘ಈ ವರ್ಷದ ಬೆಳೆ ಹೇಗಿದೆ?’ ಎಂಬ ಸರಸ ಪ್ರಶ್ನೆಯನ್ನು ಈ ರಸಿಕದೈವ ಕೇಳುವುದುಂಟು.

ಮುಸ್ಲಿಂ ಮೂಲದ ವ್ಯಕ್ತಿಯೊಬ್ಬ ದೈವೀಕರಣಗೊಂಡು ಸಾವಿರಾರು ಜನರ ಆರಾಧ್ಯ ಶಕ್ತಿಯಾಗಿರುವುದು ವಿಶೇಷ ಮಾತ್ರವಲ್ಲ, ಈ ಆರಾಧನಾ ವಿದ್ಯಮಾನವು ಆರಾಧನಾ ಮಟ್ಟದ ಕೋಮುಸೌಹಾರ್ದಕ್ಕೆ ಒಂದು ಕೊಡುಗೆಯೂ ಆಗಿದೆ.

ಕುದ್ರೋಳಿ ಕೂಟಕ್ಕಳ : ತೀಯ (ಮಲೆಯಾಳಿ ಬಲ್ಲವ) ಸಮುದಾಯದ ಹದಿನೆಂಟು ಭಗವತೀಸ್ಥಾನಗಳಲ್ಲಿ ಮಂಗಳೂರು ನಗರದ ಕೊಡಿಯಾಲ ಬೈಲಿನಲ್ಲಿರುವ ಕುದ್ರೋಳಿ ಭಗವತೀ ಕ್ಷೇತ್ರವು ಕೆಲವೊಂದು ವಿಚಾರಗಳಲ್ಲಿ ಗಮನೀಯವಾಗಿದೆ. ಈ ಕ್ಷೇತ್ರವು ಗುತ್ಯಮ್ಮ ಸ್ಥಾನ ಎಂದೂ ಪ್ರಸಿದ್ಧವಾಗಿದೆ. ಗುತ್ಯಮ್ಮ ಎಂಬುದು ಭಗವತಿಯ ನಾಮಾಂತರ. ಪಾಡಾಂಗರೆ ಐವರು, ಚೀರುಂಬ ನಾಲ್ವರು ಮತ್ತು ಪುಲ್ಲೂರಾಳಿ ಐವರು -ಹೀಗೆ ಹದಿನಾಲ್ಕು ದೈವೀಶಕ್ತಿಗಳ ಸಂಗಮಸ್ಥಳವಾದುದರಿಂದ ಇದನ್ನು ‘ಕೂಟಕ್ಕಳ’ ಎಂದು ಕರೆಯಲಾಯಿತೆಂದು ಪ್ರತೀತಿ. ಈ ಭಗವತೀ ಶಕ್ತಿಘಟಕಗಳಲ್ಲದೆ ವಯನಾಡು ದೈವ, ಗುಳಿಗ ದೈವಗಳೂ, ಸ್ಥಳೀಯ ತುಳುದೈವವಾದ ಧೂಮಾವತಿಯೂ ಈ ದೈವಸಂಕೀರ್ಣದಲ್ಲಿ ನೆಲಸಿವೆ. ವಿಶೇಷ ಶಿಲ್ಪಕಲೆಯಿಂದ ಅಲಂಕೃತವಾದ, ಐತಿಹಾಸಿಕ ಮಹತ್ವವಿರುವ ಸುಮಾರು ಆರು ಅಡಿ ಎತ್ತರದ ವಿಶಿಷ್ಟ ವೀರಸ್ತಂಭವೊಂದು ಇಲ್ಲಿದೆ. ಹಿಂದೆ ಉತ್ಸವಕಾಲದಲ್ಲಿ ಇದಕ್ಕೆ ದೈವಾವೇಶದಂಥ ಕಂಪನವಿತ್ತೆಂಬ ನಂಬಿಕೆ ಪ್ರಚುರವಾಗಿತ್ತು. ಇದರ ಶಿಲ್ಪ ವೈಖರಿಯನ್ನು ಗಮನಿಸಿದರೆ ಇದೊಂದು ವೀರಗಲ್ಲೆಂದು ತಿಳಿಯಬಹುದು.

ಈ ಕ್ಷೇತ್ರವು ಹಿಂದೆ ಕುದ್ರೋಳಿಯ ಕಡಲಕಿನಾರೆಯಲ್ಲಿತ್ತೆಂದೂ ಸಮುದ್ರದ ಆಕ್ರಮಣದ ಆತಂಕವಿದ್ದುದರಿಂದ ದೈವಸಂಕೇತದಂತೆ ಈಗ ಇರುವ ಕೊಡಿಯಾಲ ಬೈಲಿಗೆ ಸ್ಥಳಾಂತರಗೊಳಿಸಲಾಯಿತೆಂದೂ ಹೇಳಲಾಗಿದೆ.

ಈಚೆಗೆ ಈ ಕ್ಷೇತ್ರದಲ್ಲಿ ನಾರಾಯಣ ಗುರುಗಳ ಬಿಂಬವನ್ನು ಪ್ರತಿಷ್ಠಿಸಲಾಗಿದೆ.

ವಾಡಿಕೆಯ ಸಂಕ್ರಮಣಾದಿ ಕಾರ್ಯಕ್ರಮಗಳಲ್ಲದೆ ಇಲ್ಲಿ ಪ್ರತಿವರ್ಷ ನಡಾವಳಿ ಉತ್ಸವ ನಡೆಯುತ್ತದೆ. ಪ್ರಥಮ ದಿನದಂದು ನಡೆಯುವ ಚೀರುಂಬ ಭಗವತಿಯ, ವಿಶಿಷ್ಟ ತಾಂತ್ರಿಕ ಕ್ರಿಯಾವಿಧಿಯನ್ನು ನೆನಪಿಸುವ ಅರುವತ್ತಾರು ಸುತ್ತು ಬಲಿ(ಪ್ರದಕ್ಷಿಣೆ), ಎರಡನೆಯ ದಿನದಂದು ಚೀರುಂಬ ಭಗವತಿ ಮತ್ತು ಪಾಡಾಂಗರೆ ಭಗವತಿಗಳ ಆಕರ್ಷಕ ‘ಭೇಟಿಕಳ’ ಉತ್ಸವ, ಬೆಳಗಿನ ಜಾವದಲ್ಲಿ ಜರಗುವ ಕೆಂಡನೇವೆ, ಇತ್ಯಾದಿ ಕಲಾಪಗಳು ವಿಶಿಷ್ಟವಾಗಿವೆ.

ಸುಮಾರು ಐದು ವರ್ಷಗಳಿಗೊಮ್ಮೆ ಏಳು ದಿನಗಳವರೆಗೆ ಧ್ವಜಾರೋಹಣದೊಂದಿಗೆ ವಿಧಿವತ್ತಾಗಿ ನಡೆಯುವ ‘ಭರಣಿ’ ಉತ್ಸವವು ನಡಾವಳಿಯ ವಿಸ್ತೃತ ರೂಪವಾಗಿದೆ. ಮಾತ್ರವಲ್ಲ ಭೂತಾಲಿಪಾಟು, ಪುಷ್ಪಕಳ, ಅಮೃತಕಲಶ, ಕಂಚಿಲಸೇವೆ, ಆಯತಿರಿ (ಆರತಿ ಬಲಿ) ಚತುರ್ಕಳ, ಸರ್ಪಕಳ, ಜುಮಾದಿಬಂಟ ದೈವಗಳ ನೇಮ ಇತ್ಯಾದಿ ಹೆಚ್ಚುವರಿ ಕಲಾಪಗಳಿಂದ ಕೂಡಿರುತ್ತದೆ. ಹಲವಾರು ವರ್ಷಗಳಿಗೊಮ್ಮೆ ಅಪೂರ್ವ ಉತ್ಸವವಾಗಿ ಕಳಿಯಾಟ ಮಹೋತ್ಸವ ಜರಗುವುದುಂಟು. ಹದಿನಾಲ್ಕು ದಿನಗಳವರೆಗೆ ದೈವಕಟ್ಟು ವಿಧಿಗಳೊಂದಿಗೆ ನಡೆಯುವ ಇಂಥ ಮಹೋತ್ಸವ ೧೯೫೨ರಲ್ಲಿ ಜರಗಿದುದಾಗಿ ತಿಳಿದುಬರುತ್ತದೆ.

ಅಡ್ಕ ಭಗವತೀ ಕ್ಷೇತ್ರ

ಮೋಯ (ಮಲೆಯಾಳಿ ಬೋವಿ) ಸಮುದಾಯದ ಹನ್ನೊಂದು ಭಗವತೀ ಸ್ಥಾನಗಳಲ್ಲಿ ಕೊನೆಯದಾದ ಈ ಕ್ಷೇತ್ರವು ಮಂಗಳೂರು ತಾಲೂಕಿನ ಸೋಮೇಶ್ವರದಲ್ಲಿ, ಉಳ್ಳಾಲ ರೈಲ್ವೆ ನಿಲ್ದಾಣದ ಪೂರ್ವಭಾಗದಲ್ಲಿ ಇದೆ. ಸುಮಾರು ಐನೂರು ವರ್ಷಗಳ ಇತಿಹಾಸ ಇರಬಹುದಾಗಿ ಊಹಿಸಲಾಗುವ ಈ ಕ್ಷೇತ್ರವು ಸೀಮೆಯ ಮುಖ್ಯ ದೇವಸ್ಥಾನವಾದ ಸೋಮೇಶ್ವರ ಸೋಮನಾಥೇಶ್ವರ ದೇವಸ್ಥಾನದೊಂದಿಗೆ ಸಾಂಸ್ಕೃತಿಕವಾಗಿ ಸಂಬಂಧವಿರಿಸಿಕೊಂಡಿದೆ. ಈ ದೇವಸ್ಥಾನದ ಉತ್ಸವದ ವೇಳೆ ಧ್ವಜಸ್ತಂಭ ಏರಿಸುವ, ‘ಭೂತಬಲಿ’ಗೆ ನಿಲ್ಲುವ, ತೇರು ಎಳೆಯುವ ಸೇವೆ ಭಗವತಿ ಕ್ಷೇತ್ರದವರದ್ದಾಗಿದೆ. ‘ಆರಾಟ’ದಂದು ಭಗವತಿಗಳು ಭಂಡಾರ ಸಮೇತ ‘ದರ್ಶನ’ ರೂಪದಲ್ಲಿ ಬೇಟಿ ಉತ್ಸವವನ್ನು ನಡೆಸಿಕೊಡುವುದು ಪದ್ಧತಿ. ಜನಪದ ಉತ್ಸವಗಳಲ್ಲಿ ನಡೆಯುವ ಇಂಥ ‘ಭೇಟಿ’ ಪ್ರಕ್ರಿಯೆಗಳು ವಿಶೇಷ ಆಶಯಗಳನ್ನು ಹೊತ್ತಿವೆ. ಸೀಮೆಯ ‘ಪ್ರಧಾನ’ದೇವರನ್ನು ‘ಅಧೀನ’ ದೈವಗಳು ಕಂಡು ಗೌರವ ಸಲ್ಲಿಸುವ ಈ ಕ್ರಮ ‘ಪರಂಪರೆಯಿಂದ ಬಂದ ಊಳಿಗಮಾನ್ಯ ವ್ಯವಸ್ಥೆಯ ಒಂದು ಸಂಕೇತವೆನ್ನಬಹುದು. ಹೀಗಿದ್ದರೂ ಆ ದೇವಸ್ಥಾನದಲ್ಲಿ ಮಾಗಣೆಯವರ ಕಳದಲ್ಲಿ ಸಮಯೋಚಿತವಾದ ನುಡಿಕೊಟ್ಟು ನ್ಯಾಯವಿಚಾರಣೆ ಇತ್ಯಾದಿ ನಡೆಸುವ ಅಧಿಕಾರ, ಅವಕಾಶ ಭಗವತಿಗಳಿಗಿದೆ.

ಅಡ್ಕ ಸ್ಥಾನದ ಪ್ರಧಾನ ದೇವಿ ಪಾಡಾಂಗರೆ (ಪಾಟಾರ್ ಕುಳಂಗರ) ಭಗವತಿ. ಜೊತೆಗೆ ಆಮುಟ್ಟಿ ಭಗವತಿ, ವೀರಕಾಳಿ, ಕಲ್ಲಂಗರ ಚಾಮುಂಡಿ, ಮೇಚೇರಿ ಚಾಮುಂಡಿ -ಹೀಗೆ ಐವರು ದೇವಿಯರೂ ವೀರಮ್ಮಾರ್, ವೀರಪುತ್ರ(ಭದ್ರ) ಬೇಟಕ್ಕೊರುಮಗನ್, ಅಣ್ಣಪ್ಪ ಪಂಜುರ್ಳಿ, ಗುಳಿಗ, ಬಬ್ಬರ್ಯ ಎಂಬ ಪುರುಷ ದೈವಗಳೂ ಸಾನ್ನಿಧ್ಯವನ್ನು ವಹಿಸಿವೆ. ಈ ದೈವಗಳಲ್ಲಿ ‘ಬಬ್ಬರ್ಯ’ -ಮುಸ್ಲಿಂ ಮೂಲದ ದೈವವಾದರೆ, ಅಣ್ಣಪ್ಪ ಪಂಜುರ್ಳಿ ತುಳುನಾಡಿನ ದೈವವಾಗಿದೆ. ಆರಾಧನಾ ಪ್ರಸ್ಥಾನದಲ್ಲಿ ಇಂಥ ವಿಲಕ್ಷಣ ಸಾಹಚರ್ಯ ಸಾಮಾನ್ಯವಾಗಿದೆ; ಇದು ಅಪೇಕ್ಷಣೀಯವೂ ಹೌದು. ಜನವರ್ಗಗಳ ವಲಸೆ ಹಾಗೂ ಪರಸ್ಪರ ಸಂಪರ್ಕಗಳೂ ಇಂಥ ಸಂಕೀರ್ಣ ದೈವಘಟಕ ವ್ಯವಸ್ಥೆಗೆ ಕಾರಣಗಳಾಗುತ್ತವೆ.

ವೈವಿಧ್ಯಪೂರ್ಣವಾದ ವರ್ಣರಂಜಿತ ಕಲಾಪಗಳಿಂದ ಕೂಡಿದ ಇಲ್ಲಿನ ವರ್ಷಾವಧಿ ಜಾತ್ರೆ ತನ್ನ ಆಕರ್ಷಣೆಯನ್ನು ಈಗಲೂ ಉಳಿಸಿಕೊಂಡಿದೆ. ಕೆಂಪು ಶಿರೋವಸ್ತ್ರ ಸಹಿತ ಕೇರಳ ಶೈಲಿಯಲ್ಲಿ ಅಲಂಕೃತ ‘ತಂಬುರಾಟಿ’ ಪಾತ್ರಿಗಳ ಹಾಗೂ ಇತರ ಪಾತ್ರಿಗಳ ‘ದರ್ಶನ’ ವೈಖರಿ, ಕಾಲಾಟ, ಬಿಂಬದರ್ಶನ ಬಲಿ, ಬೆಳ್ಗೊಡೆ ಸೇವೆ, ಕೆಂಡಸೆವೆ ಇತ್ಯಾದಿಗಳು ದರ್ಶನೀಯವಾಗಿವೆ. ದೈವಗಳ ನುಡಿಗಟ್ಟು ಮಲೆಯಾಳ ಭಾಷೆಯಲ್ಲಿರುತ್ತದೆ. ಪಂಜುರ್ಳಿ ದೈವ ಮಾತ್ರ ಸ್ಥಳೀಯ ಭಾಷೆ ತುಳುವಿನಲ್ಲಿ ನುಡಿ ಕೊಡುತ್ತದೆ.

ಇಲ್ಲಿನ ಕೆಂಡಸೇವೆಯ ಕಲಾಪದೊಡನೆ ಉಳ್ಳಾಲ ಚೌಟರಾಣಿ ಅಬ್ಬಕ್ಕಾ ದೇವಿಗೆ ಸಂಬಂಧಪಟ್ಟ ಐತಿಹ್ಯದ ಸ್ಮರಣೆಯೊಂದು ಬೆಸೆದುಕೊಂಡಿದೆ. ಈ ಕ್ಷೇತ್ರದ ಕೆಂಡಸೇವೆಯ ವಿಚಾರ ಕೇಳಿದ ಅಬ್ಬಕ್ಕ ರಾಣಿ ತುಸು ಲಘುಭಾವದಿಂದ ಇಲ್ಲಿನ ದೈವಗಳ ಶಕ್ತಿಪರೀಕ್ಷೆ ಮಾಡಲು ಪ್ರತ್ಯೇಕ ಕೆಂಡಸೇವೆಯ ವ್ಯವಸ್ಥೆ ಮಾಡಹೋಗಿ ಪರೀಕ್ಷೆಯು ಫಲಿಸದೆ ಸೋತು, ಪಶ್ಚಾತ್ತಾಪದಿಂದ ಈ ಕ್ಷೇತ್ರಕ್ಕೆ ಉಂಬಳಿ ಉತ್ತಾರ ಬಿಟ್ಟಿದ್ದಾಳೆಂಬ ಐತಿಹ್ಯವಿದೆ. ದೈವಗಳ ನುಡಿಗಟ್ಟಿನಲ್ಲೂ ಇದು ವ್ಯಕ್ತವಾಗುತ್ತದೆ.

ಹಿಂದೆ ಅರುವತ್ತು ವರ್ಷಗಳಿಗೊಮ್ಮೆ ‘ಪೆರಿಂಕಳಿಯಾಟ’ ಎಂಬ ಎಂಟು ದಿನಗಳ ಮಹಾನಡಾವಳಿ ಉತ್ಸವ ಇಲ್ಲಿ ನಡೆಯುತ್ತಿದ್ದ ಪರಂಪರೆ ಇದೆ. ಈಚೆಗೆ ೧೯೭೦ರಲ್ಲಿ ಹಾಗೂ ೧೯೯೮ರಲ್ಲಿ ಅಂಥ ಮಹೋತ್ಸವ ಈ ಕ್ಷೇತ್ರದಲ್ಲಿ ಜರುಗಿದೆ.

ತುಳು ಸಂಸ್ಕೃತಿಯ ನಡುವೆ ಇದ್ದರೂ ತಮ್ಮ ವಿಶಿಷ್ಟತೆಗಳನ್ನು ಉಳಿಸಿಕೊಂಡಿರುವ ಕೇರಳೀಯ ಪರಂಪರೆಯ ಆರಾಧನಾ ಸ್ಥಾನಗಳಲ್ಲಿ ಅಡ್ಕ ಭಗವತೀ ಸ್ಥಾನವೂ ಒಂದು ಗಣ್ಯ ಕ್ಷೇತ್ರವಾಗಿದೆ.

ಭಗವತಿಗಳ ‘ತೋಟ್ಟಂ ಪಾಟು’ ಗಳು ಕಾವ್ಯಮಯವಾಗಿರುವಂತೆಯೇ ದೈವಪಾತ್ರಿಗಳ ಮುಖದಿಂದ ಬರುವ ಚರಿತ್ರ ಕಥನಗಳೂ ಆಶೀರ್ವಾದ, ಅಭಯವಾಕ್ಯಗಳೂ, ನ್ಯಾಯ ತೀರ್ಮಾನದ ಉಕ್ತಿಗಳೂ, ಇತರ ನುಡಿಗಟ್ಟುಗಳೂ ಬಹುಮಟ್ಟಿಗೆ ಸಾಹಿತ್ಯ ಮೌಲ್ಯಾತ್ಮಕವಾಗಿವೆ. ಕೆಲವೊಮ್ಮೆ ಗಾದೆಗಳನ್ನೋ ಕಿರಿದರಲ್ಲಿ ಹಿರಿಯ ಅರ್ಥವಿರುವ ತಿರುಳ್ನುಡಿಗಳನ್ನೋ ದೈವ ಬಳಸುತ್ತದೆ. ಭಗವತಿಯ ವಚನನಿರೂಪಣೆಯನ್ನು ‘ವಾಕ್ಕುಂ ವಯನೊಂ’ ಅಥವಾ ‘ಅರುಳಪ್ಪಾಡ್’ ಎನ್ನುತ್ತಾರೆ. ಕೆಲವು ನುಡಿಗಳನ್ನು ಉದಾಹರಿಸಬಹುದು:

ಮೞ ಪೋಲೆ ಬನ್ನೇನ ಮಞ್ಞಿಪೋಲೆ ಪಿರಿಯಿಚ್ಚಿ ಕೊಡ್ಕುಂ
(ಮಳೆಯಂತೆ ಬಂದುದನ್ನು ಮಂಜಿನಂತೆ ಮಾಯ ಮಾಡಿಯೇವು)

ಪಶು ಪಲತರಮಾಯಾಲುಂ ಪಾಲ್ ಒರು ನೆರಂ ತನ್ನೆ
(ಹಸುಗಳು ಹಲವು ತರವಾದರೂ ಹಾಲು ಒಂದೇ ಬಣ್ಣ ತಾನೆ?

ಮದಿಪ್ಪು ಮೀರ‍್ಯೆ ಮಾಯಗಾರ್ ಅಲ್ಲಲ್ಲೋ?
(ಜನರ ತೀರ್ಮಾನ ಮೀರಿದ ಮಾಯಗಾರರು ನಾವಲ್ಲವಲ್ಲಾ?)

ಭಕ್ತಿಕ್ಕ್ ಶಕ್ತಿಕೊಂಡು ಕೂಟುನ್ನ ಮಾದಾಕನ್ಮಾರ್ ಞಂಙಳ್
(ಭಕ್ತಿಗೆ ಶಕ್ತಿ ಕೂಡಿಸುವ ತಾಯಂದಿರು ನಾವು)

ಬಿಸೆಯಚ್ಚೋನ ಚದಿಕ್ಕೇಲ; ಚದಿಚ್ಚೋನ ಬಿಸೆಯಿಕೇಲ
ವಿಶ್ವಾಸವಿಟ್ಟವವನ್ನು ಮೋಸಗೊಳಿಸಲಾರೆವು; ಮೋಸವೆಸಗಿದವನನ್ನು ವಿಶ್ವಸಿಸಲಾರೆವು)

ಈಯತ್ತ್ಂಡೆ ಮೞ ಪೆಯ್ದಾಲ್, ಇರಿಂಬುಂಡೆ ಕೊಡ ಪಿಡಿಚ್ಚು ಕಾಕುಂ
(ಸೀಸದ ಮಳೆ ಹೊಯ್ದರೆ ಕಬ್ಬಿಣದ ಕೊಡೆ ಹಿಡಿದು ಕಾಯ್ದೇವು)

ಪಡನ್ನ ಬಳ್ಳಿ ಪೋಲೆಯುಂ, ಪರನ್ನ ವೆಳ್ಳಂ ಪೋಲೆಯುಂ, ನಿಙಳೆ ನೋರೋಡಿಯಾಕಿ ಕಾತ್ ರಕ್ಷಿಕ್ಕುಂ
(ಹಬ್ಬಿದ ಬಳ್ಳಿಯಂತೆಯೂ, ಹರಡಿದ ನೀರಿನಂತೆಯೂ ನಿಮ್ಮನ್ನು ಸಮೃದ್ದಿಗೊಳಿಸಿ ರಕ್ಷಿಸಿಯೇವು)

ಊಕೆಲ್ಲಂ ಪೋಯಿ ಊಂದುಬಡಿಯಾಯಲ್ಲೊ?
(ಶಕ್ತಿಯೆಲ್ಲ ಕುಂದಿ ಊರುಗೊಲು ಆಯಿತಲ್ಲ?)

ಪೆಟ್ಟ ಮಾದಾವುನ ಕಯಿಚ್ಚಾಲ್ ಪೋಟ್ಟಿಕೊಂಡ ಮಾದಾವು ಎನ್ನ್ ಕರಿದಿಕೋಳಿಂ
(ಹೆತ್ತ ತಾಯಿಯ ಹೊರತಾಗಿ ಸಾಕಿದ ತಾಯಿಯೆಂದು ನಂಬಿರಿ)

ಅಪೇಕ್ಷಿಕ್‌ನ್ನ ಕಾಲತ್ತ್ ಉಪೇಕ್ಷಿಕುನ್ನ ಮಾದಾಕನ್ನಾರ್ ಅಲ್ಲಲ್ಲೊ?
(ಅಪೇಕ್ಷಿಸುವ ಕಾಲದಲ್ಲಿ ಉಪೇಕ್ಷಿಸುವ ಮಾತೆಯರಲ್ಲವಲ್ಲ?)

ಭಕ್ತಿ ಬೆಚ್ಚಿ ನಡಕ್‌ನ್ನ ಕಾಲತ್ತ್ ಉಕ್ಕತ್ತ್ ಇರ್ಕಿ ಆದರಿಕ್ಕುಂ
(ಭಕ್ತಿ ಇರಿಸಿ ನಡೆಯುವ ಕಾಲಕ್ಕೆ ಬಗಲಲ್ಲಿ ಇರಿಸಿ ಆದರಿಸಿಯೇವು)

ದೈವಾರಾಧನೆಯ ಇತರ ಪ್ರಕಾರಗಳಂತೆಯೇ ಭಗವತೀ ಆರಾಧನೆಯೂ ಕುಟುಂಬಸ್ತರದಿಂದ ತೊಡಗಿ ಸಮಾಜ, ಗ್ರಾಮ ಮಟ್ಟಗಳಲ್ಲೂ ರೂಢಿಗತವಾಗಿ ಬಂದುದರಿಂದ ಆಯಾ ಮಟ್ಟದ ಸಮಾಜಘಟಕದ ಒಟ್ಟು ಕ್ಷೇಮ ಚಿಂತನೆ, ಒಕ್ಕಟ್ಟು, ಸಹಕಾರ ಪ್ರವೃತ್ತಿ ಇತ್ಯಾದಿಗಳ ನೆಲೆಯಲ್ಲಿ ಈ ಆರಾಧನೆ ಸಾಕಷ್ಟು ಕ್ರಿಯಾಶಾಲಿಯಾಗಿತ್ತು ಎನ್ನಬೇಕಾಗುತ್ತದೆ. ಕೆಲವು ದಶಕಗಳ ಹಿಂದೆ ಸಿಡುಬು, ವಾಂತಿಭೇದಿ, ಪ್ಲೇಗ್, ಮಲೆಜ್ವರ ಇತ್ಯಾದಿ ಅಂಟು ಜಾಡ್ಯಗಳಿಂದ ಸಾವಿರಾರು ಜನ ಬಾಧಿತರಾಗುತ್ತಿದ್ದರು. ಕೆಲವೊಮ್ಮೆ ಊರಿಗೆ ಊರೇ ಶ್ಮಶಾನವಾಗಿ ಪರಿಣಮಿಸುವುದೂ ಇತ್ತು. ದೈವಪ್ರಕೋಪವೇ ಇಂಥ ಉತ್ಪಾತಗಳಿಗೆ ಕಾರಣ ಎಂಬ ನಂಬಿಕೆ ಬಲವಾಗಿದ್ದ ಆ ಕಾಲದಲ್ಲಿ ಜನರ ಮನಸ್ಸಿಗೆ ಧೈರ್ಯವನ್ನುಂಟು ಮಾಡಲು ಜನಪದ ದೈವಗಳು ಸಿದ್ಧವಾಗುತ್ತಿದ್ದವು. ಹಲವು ಭಗವತಿಯರು ರೋಗಾಭಿಮಾನೀ ದೇವತೆಗಳೂ ಆಗಿದ್ದರೆಂದು ಹೇಳಲಾಗಿತ್ತು. ಹಾಗಾಗಿ ಈ ದೇವಿಯರಿಗೆ ರೋಗಶಮನದ ಶಕ್ತಿಯೂ ಉಂಟೆಂದು ನಂಬಲಾಗಿತ್ತು. ಆ ಸಂಬಂಧವಾಗಿ ಇವರಿಗೆ ಹರಕೆಯೊಪ್ಪಿಸುವುದೂ ರೂಢಿಯಾಗಿತ್ತು. ಕೆಲವೊಮ್ಮೆ ಇಂಥ ಸಾಂಕ್ರಾಮಿಕ ರೋಗಗಳಿಂದ ಮೃತಪಟ್ಟವರ ಅಂತ್ಯಕ್ರಿಯೆ ಮಾಡುವ ವೇಳೆ ಭಗವತಿಯರು ಪಾತ್ರಿಗಳ ಮೇಲೆ ಆವೇಶಗೊಂಡು ಅಂತ್ಯವಿಧಿಯ ವೇಳೆ ಮೃತರ ಸಂಬಂಧಿಗಳೀಗೆ ಧೈರ್ಯವಚನ ಹೇಳುವ ಪದ್ಧತಿ ಇತ್ತು.

ಒಟ್ಟಿನಲ್ಲಿ, ಜನಪದರ ಬದುಕಿನಲ್ಲಿ ಭಗವತೀ ಆರಾಧನೆಯು ಧಾರ್ಮಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಪ್ರಧಾನಪಾತ್ರವನ್ನು ಹಿಂದೆ ವಹಿಸಿತ್ತು ಎಂಬುದನ್ನು ನೆನಪಿನಲ್ಲಿಟ್ಟುಕೊಂಡು, ಆಧುನಿಕ ಬದುಕಿನಲ್ಲಿ ಈ ತೆರನಾದ ದೈವಾರಾಧನೆಯ ಕಲಾಪಗಳಲ್ಲಿ ಕಾಲೋಚಿತವಾಗಿ ಕೆಲವೊಂದು ಸುಧಾರಣೆಗಳು ಬೇಡವೇ ಎಂಬುದನ್ನು ಚಿಂತಿಸ ಬೇಕಾಗಿದೆ.

ಪರಾಮರ್ಶನ ಸಾಹಿತ್ಯ

  1. Dr.C.Achyuta Menon, Kali Worship in Kerala, Madras University, 1943
  2. V.T.Indu Chudan, The Secret Chamber, The Cochin Devaswam Boad, Trichur, 1969
  3. Dr. K.K.N.Kurup, The Cult of Teyyam and Hero worship in Kerala, Indian Publications, Calcutta, 1973
  4. Dr.K.K.N.Kurup, Aryan and Dravidian elements in Malabar Folklore, Kerala Historical Soceity, Trivandrum, 1977
  5. ಅಮೃತ ಸೋಮೇಶ್ವರ, ಭಗವತೀ ಆರಾಧನೆ, ಪ್ರಕೃತಿ ಪ್ರಕಾಶನ, ಕೋಟೆಕಾರು, ದಕ್ಷಿಣ ಕನ್ನಡ ಜಿಲ್ಲೆ, ೧೯೯೮