ನೂರಾರು ವರ್ಷಗಳಿಂದ ತುಳುನಾಡಿನ ಜನರ ಸಾಂಸ್ಕೃತಿಕ ಬದುಕನ್ನು ನಿರ್ದೇಶಿಸುತ್ತ ಬಂದಿರುವ ಭೂತಾರಾಧನಾ ಸಂಪ್ರದಾಯವು ಹಲವಾರು ಸಾಂಸ್ಕೃತಿಕ ಅಂಶಗಳನ್ನು ಒಳಗೊಂಡಿರುವ ವಿಲಕ್ಷಣ ಬೆಸುಗೆಯಾಗಿದೆ. ಈ ‘ಧಾರ್ಮಿಕ ರಂಗಭೂಮಿ’ಯಲ್ಲಿ ಆರಾಧನಾಂಶ. ಕಲಾತ್ಮಕಾಂಶ. ಮನೋರಂಜನೆಯ ಅಂಶಗಳೊಂದಿಗೆ ಇನ್ನೊಂದು ಬಹುಮುಖ್ಯವಾದ ಸಾಮಾಜಿಕ ಸ್ವಾಸ್ಥ್ಯದ ಕಾಳಜಿಯುಳ್ಳ ಗಂಭೀರ ಮುಖವನ್ನು ಕಾಣಬಹುದು. ಅದೆಂದರೆ, ಭೂತಸನ್ನಿಧಿಯಲ್ಲಿ ಜರಗುವ ನ್ಯಾಯತೀರ್ಮಾನ ಕಲಾಪ.

ವಿಶ್ವದ ಯಾವುದೇ ನ್ಯಾಯಪದ್ಧತಿಯಾದರೂ ಮೂಲತಃ ಧಾರ್ಮಿಕ ಕಲಾಪ ಹಾಗೂ ಧಾರ್ಮಿಕ ಸಾಹಿತ್ಯದೊಂದಿಗೇ ಬೆಳೆದು ಬಂದಿರುವುದು ಗಮನೀಯ. ಪ್ರಪಂಚದ ಅತಿ ಪ್ರಾಚೀನ ಜನಾಂಗಗಳಲ್ಲೊಂದಾದ ಹಿಂದೂ ಸಮಾಜವು ಹಲವಾರು ಪಂಗಡಗಳ ವೈವಿಧ್ಯದಿಂದ ಕೂಡಿದ್ದರೂ, ಕೆಲವೊಂದು ಸಮಾನ ಜೀವನ ಧೋರಣೆ, ರೂಢಿ ಪರಂಪರೆಗಳನ್ನು ಪಾಲಿಸಿಕೊಂಡು ಬರುವ ಅನೇಕ ಗುಂಪುಗಳು ಈ ವಿಶಾಲ ಸಮಾಜದ ಘಟಕಗಳಾಗಿವೆ. ಮೇಲ್ನೋಟಕ್ಕೆ ಶಿಥಿಲವಾಗಿ ಹೆಣೆಯಲ್ಪಟ್ಟಿದ್ದರೂ, ನೂರಾರು ಆರಾಧನಾ ಸಂಪ್ರದಾಯಗಳೂ ಈ ಸಮಾಜದ ಜೀವಂತಿಕೆಯ ಸಾತತ್ಯಕ್ಕೆ ಕಾರಣವಾಗಿವೆಯೆನ್ನ ಬಹುದು. ಅಂಥ ವಿಶಿಷ್ಟ ಆರಾಧನಾ ಕ್ರಮಗಳಲ್ಲಿ, ತುಳುನಾಡು ಹಾಗೂ ಕೇರಳಗಳಲ್ಲಿ ಪ್ರಚಲಿತವಾಗಿರುವ ಭೂತಾರಾಧನೆಯೂ ಒಂದು.

ಧಾರ್ಮಿಕ ಅಥವಾ ರಾಜಕೀಯವಾದ ನ್ಯಾಯತೀರ್ಮಾನ ವ್ಯವಸ್ಥೆ ಪ್ರಾಚೀನ ಕಾಲದಿಂದಲೇ ಸಮಾಜದಲ್ಲಿ ಸಕ್ರಿಯವಾಗಿತ್ತು. ಮನು, ಬೃಹಸ್ಪತಿ, ನಾರದ, ಕಾತ್ಯಾಯನ, ಪರಾಶರ, ಯಾಜ್ಞವಲ್ಕ್ಯ, ವಸಿಷ್ಠ ಮೊದಲಾದವರಿಂದ ಪ್ರಣೀತವಾದ ಸ್ಮೃತಿಗಳು, ಗೌತಮ, ಬೋಧಾಯನ, ಹಾರೀತ, ಮೊದಲಾದವರ ಧರ್ಮಸೂತ್ರಗಳು, ಶುಕ್ರನೀತಿ, ಕೌಟಿಲ್ಯನ ಅರ್ಥಶಾಸ್ತ್ರ ಮೊದಲಾದ ಗ್ರಂಥಗಳು ನಮ್ಮ ಪುರಾತನ ನ್ಯಾಯ ವಿತರಣೆಯ ಪದ್ಧತಿಯ ಆಧಾರಸ್ತಂಭಗಳಾಗಿ ಇದ್ದುದನ್ನು ಸ್ಮರಿಸಬಹುದು. ಕುಲ, ಶ್ರೇಣಿ, ಪೂಗ, ಗಣ, ಧರ್ಮಾಧಿಕರಣ, ಮಹಾಜನ ಮುಂತಾದ ನ್ಯಾಯಸಭೆ ಅಥವಾ ನ್ಯಾಯ ಪರಿಷತ್ತುಗಳ ಕಾರ್ಯವಿಧಾನಗಳನ್ನು ಪ್ರಾಚೀನ ಧರ್ಮಶಾಸ್ತ್ರಗಳು ಉಲ್ಲೇಖಿಸಿವೆ.

ತುಳುನಾಡಿನಲ್ಲಿ ಹಿಂದೆ ‘ಪತ್ತೇರಿ ಕೂಟ’ದಂಥ ಗ್ರಾಮಮಟ್ಟದ ಪ್ರಾತಿನಿಧಿಕ ನ್ಯಾಯತೀರ್ಮಾನ ಸಭೆಗಳಿದ್ದುದಾಗಿ ತಿಳಿದುಬರುತ್ತದೆ. ಭೂತಾಳಪಾಂಡ್ಯನ ಕಟ್ಟುಕಟ್ಟಳೆಗಳೆಂಬವುಗಳು ಕೂಡಾ ತುಳುನಾಡಿನ ನ್ಯಾಯವ್ಯವಸ್ಥೆಯ ಕೆಲವಂಶಗಳನ್ನು ಸೂಚಿಸುತ್ತವೆ. ಭೂತಾರಾಧನೆಯ ವರ್ತುಲದಲ್ಲಿರುವ ಮಂದಿ ಪ್ರಾಚೀನ ಧರ್ಮಶಾಸ್ತ್ರ, ನೀತಿಶಾಸ್ತ್ರ, ದಂಡಶಾಸ್ತ್ರಗಳನ್ನು ಕುರಿತೋದಿಕೊಂಡವರಲ್ಲವಾದರೂ, ಅವುಗಳ ಸಾರಸರ್ವಸ್ವ ಪರಂಪರಾಗತವಾಗಿ ಜನಹೃದಯದಲ್ಲಿ ಬೇರು ಬಿಟ್ಟಿರುವುದನ್ನು ಗಮನಿಸಬಹುದು. ‘‘ಶಾಸ್ತ್ರಾಭಾವೇ ಶಿಷ್ಟಾಚಾರಮನುಗಚ್ಛಯೇತ್’’ ಎಂಬ ಚಾಣಕ್ಯನ ಉಕ್ತಿ ಇಂಥಲ್ಲಿ ಸತ್ಯವಾಗುತ್ತದೆ.

ತುಳು ಪಾಡ್ದನಗಳು ದೈವಗಳ ಮಹಿಮಾನುವರ್ಣನೆಯ ಕಥನಕಗಳು ಮಾತ್ರವಲ್ಲದೆ ನ್ಯಾಯಾನ್ಯಾಯಗಳ ಪರಿಣಾಮ ವೃತ್ತಾಂತಗಳೂ ಅವುಗಳಲ್ಲಿ ಸೇರಿಕೊಂಡಿವೆ. ಅನ್ಯಾಯಗಾರರನ್ನು ಬಗ್ಗುಬಡಿಯಲೆಂದೇ ಕೆಲವು ಭೂತಗಳು ಕೈಲಾಸದಿಂದ ಕೆಳಗಿಳಿದುದಾಗಿ ಹೇಳಲಾಗಿದೆ. ಭೂತಗಳ ದೆಸೆಯಿಂದ ಶಿಕ್ಷೆಗೊಳಗಾದ ಅನೇಕರ ದೃಷ್ಟಾಂತಗಳು ಪಾಡ್ದನಗಳಲ್ಲಿ ದೊರಕುತ್ತವೆ.

ತುಳುನಾಡಿನಲ್ಲಿ ದೈವಗಳನ್ನು ‘ಸತ್ಯೊಳು’ ಎಂದು ಕರೆಯಲಾಗುತ್ತದೆ ಎಂಬುದು ಗಮನೀಯ. ಸತ್ಯವೆಂಬುದು ನ್ಯಾಯದೃಷ್ಟಿಯುಳ್ಳದ್ದು ಎಂಬುದು ಸ್ವಯಂವೇದ್ಯ. ತನಗೆ ಅನ್ಯಾಯವಾಗಿದೆಯೆಂದು ತಿಳಿದುಕೊಂಡವರು ‘‘ಇಂಥ ಭೂತ ನೋಡಿಕೊಳ್ಳಲಿ!’’ -ಎಂದು ಅದರ ಅಥವಾ ಅದು ನೆಲಸಿದ ಸ್ಥಳದ ಹೆಸರೆತ್ತಿ ಪ್ರಾರ್ಥಿಸುವುದು, ಶಪಿಸುವುದು ಇಂದಿಗೂ ಇದೆ. ಇಂಥ ಆಕ್ರೋಶಪೂರ್ಣ ಪ್ರಾರ್ಥನೆಯೇ ದೈವದ ನ್ಯಾಯಾಲಯಕ್ಕೆ ಸಲ್ಲಿಸುವ ಫಿರ್ಯಾದು. ಕೆಲವು ವೇಳೆ ಸಂಬಂಧಿಕರನ್ನು ಅಥವಾ ಊರ ಹಿರಿಯರನ್ನು ಸಾಕ್ಷಿಯಾಗಿಟ್ಟುಕೊಂಡು ದೈವಸನ್ನಿಧಿಯಲ್ಲೋ ಇತರೆಡೆಗಳಲ್ಲೋ ಬಹಿರಂಗವಾಗಿ ಪ್ರಾರ್ಥಿಸಿಕೊಳ್ಳುವುದುಂಟು. ಭೂತವು ತನಗೆ ಪ್ರತ್ಯಕ್ಷವಾಗಿ ಅಥವಾ ಅಪ್ರತ್ಯಕ್ಷವಾಗಿ ನ್ಯಾಯ ಕೊಡುತ್ತದೆ ಅಥವಾ ಕೊಡಿಸುತ್ತದೆ ಎಂಬ ನಂಬಿಕೆ, ಹಾಗೂ ದೈವದ ಕೋಪಕ್ಕೆ ಪಕ್ಕಾದವರು ಕಷ್ಟನಷ್ಟಗಳಿಗೆ ಗುರಿಯಾಗುತ್ತಾರೆಂಬ ಭೀತಿ ಜನರ ನಡವಳಿಕೆಯ ಮೇಲೆ ತಕ್ಕಮಟ್ಟಿನ ನಿಯಂತ್ರಣವನ್ನು ಸಾಧಿಸುವಲ್ಲಿ ಸಫಲವಾಗುತ್ತದೆ. ಕಾನೂನಿನ ಭೀತಿಗಿಂತ ಎಷ್ಟೋ ವೇಳೆ ಭೂತಭೀತಿ ಹೆಚ್ಚು ಪರಿಣಾಮಕಾರಿಯಾಗುವುದುಂಟು. ಧರ್ಮಸ್ಥಳ, ಕಾನತ್ತೂರು, ಪಾದೆ ಆಲಿಸ್ಥಾನ ಮೊದಲಾದ ಸ್ಥಳಗಳ ಹೆಸರೆತ್ತುವುದಕ್ಕೆ ಇಂದೂ ಹಲವು ಜನ ಅಂಜುತ್ತಾರೆ. ಇಲ್ಲಿನ ದೈವಶಕ್ತಿಗಳು ಅತ್ಯಂತ ಕ್ರೂರವಾಗಿ ದಂಡಿಸುತ್ತವೆಂಬುದೇ ಆ ಭೀತಿಗೆ ಕಾರಣ. ಈಗಲೂ, ದೈವಗಳ ಪ್ರಕೋಪಕ್ಕೆ ಗುರಿಯಾಗಿ ಮೃತರಾದರೆಂದು ಹೇಳಲಾದ ಅನೇಕ ವ್ಯಕ್ತಿಗಳ ಪ್ರೇತಗಳನ್ನು ಸ್ಥಳದ ಪದ್ಧತಿಯಂತೆ ಬಿಡಿಸಿ ತರುವ ಪದ್ಧತಿ ಇದೆ.

ಭೂತೋತ್ಸವ ಸಂದರ್ಭವು ನ್ಯಾಯತೀರ್ಮಾನಕ್ಕೆ ಸೂಕ್ತ ಕಾಲವಾಗಿದೆ. ಉತ್ಸವದ ಉತ್ತೇಜಿತ ವಾತಾವರಣ, ದೈವಗಳ ಅತಿಮಾನುಷ ಮಹಿಮೆಗಳನ್ನು ಸಾರುವ ಪಾಡ್ದನಗಳ ಹಾಡುವಿಕೆ, ಭೂತಗಳ ವಿಚಿತ್ರ ವೇಷ ನಿರ್ಮಾಣ, ರೌದ್ರಾವೇಶ, ಖಡ್ಗದಿಂದ ಕಡಿದುಕೊಳ್ಳುವುದು, ದೀವಟಿಗೆಯನ್ನಿಟ್ಟುಕೊಳ್ಳುವುದು, ಬೆಂಕಿಯ ರಾಶಿಯ ಮೇಲೆ ಬೀಳುವುದು, ಕೋಳಿಯ ಹಸಿ ನೆತ್ತರನ್ನು ಈಂಟುವುದು ಇತ್ಯಾದಿ ಭೀಕರ ಕಲಾಪಗಳು ನೋಟಕರ ಮೇಲೆ ತೀವ್ರ ಮಾನಸಿಕ ಪರಿಣಾಮವನ್ನು ಬೀರಿ ಅವರ ಸಾಮೂಹಿಕ ಮನಸ್ಸಿನ ಮೇಲೆ ಪ್ರಭುತ್ವವನ್ನು ಸ್ಥಾಪಿಸಿರುವುದರಿಂದ ಮನೋವೈಜ್ಞಾನಿಕ ದೃಷ್ಟಿಯಿಂದ ಈ ವಾತಾವರಣವು ನ್ಯಾಯದ ಇತ್ಯರ್ಥಕ್ಕೆ ಹಸನಾದುದಾಗಿದೆ. ಭೂತಗಳು ಪಾತ್ರಿಗಳ ಮೂಲಕ ಭಕ್ತಾದಿಗಳಲ್ಲಿ ನೇರವಾಗಿ ಸಂಭಾಷಿಸುತ್ತವೆ; ಅವರ ಸುಖಕಷ್ಟಗಳನ್ನು ವಿಚಾರಿಸುತ್ತವೆ. ಅಭಯ ನೀಡಿ ಹರಸುತ್ತವೆ. ಅಲ್ಲದೆ ಊರಿನ ಪ್ರತಿನಿಧಿಗಳೂ ಅಲ್ಲಿ ಉಪಸ್ಥಿತರಿರುತ್ತಾರೆ. ಊರಿನಲ್ಲಿ ನೆಮ್ಮದಿ ನೆಲಸುವಂತೆ ಮಾಡುವ ಹೊಣೆ ಅವರಿಗೂ ಇದೆಯಷ್ಟೆ.

ಭೂತೋತ್ಸವದ ವಾಡಿಕೆಯ ಪ್ರಾರಂಭಿಕ ಕಲಾಪಗಳೆಲ್ಲ ಮುಗಿದ ಬಳಿಕ ನ್ಯಾಯತೀರ್ಮಾನದ ವಿಚಾರವನ್ನು ಎತ್ತಿಕೊಳ್ಳಲಾಗುತ್ತದೆ. ಇಲ್ಲಿ ವಿಶೇಷವೇನೆಂದರೆ, ಸಮಾಜದ ಕೆಳಸ್ತರದ ವ್ಯಕ್ತಿಯೊಬ್ಬ ಭೂತವೇಷಧಾರಿಯಾಗಿ ಸನ್ನಿವೇಶವನ್ನು ಸಂಪೂರ್ಣ ನಿಯಂತ್ರಿಸುವುದಲ್ಲದೆ ನ್ಯಾಯತೀರ್ಮಾನದ ಅಂತಿಮ ಅಧಿಕಾರವನ್ನು ಪಡೆದಿರುವುದು.

ಭೂತವು ಆವೇಶವಾದ ಬಳಿಕ ಭೂತವೇಷಧಾರಿಯ ಮಾತನ್ನು ದೈವೀವಾಣಿಯಾಗಿ ಬಹುಮಟ್ಟಿಗೆ ಪರಿಗಣಿಸುತ್ತಾರಾದರೂ ಹಾಗೆ ಭೂತಕ್ಕೆ ನಿಲ್ಲುವ ವ್ಯಕ್ತಿಗೆ ಸಾಕಷ್ಟು ಲೋಕಾನುಭವ, ನ್ಯಾಯ ಕಲ್ಪನೆ, ಮಾತಿನ ಚಾಕಚಕ್ಯತೆ, ಪ್ರತ್ಯುತ್ಪನ್ನಮತಿ, ವಿಷಯಗ್ರಹಣ ಸಾಮರ್ಥ್ಯ, ಸಮೂಹನಿಯಂತ್ರಣ ಶಕ್ತಿ ಇತ್ಯಾದಿ ಗುಣಗಳ ಅವಶ್ಯಕತೆಯಿದೆ.

‘‘ಆಯಾ ಜಾತಿ, ಗಣಪಾದ(ಪ್ರದೇಶ), ಶ್ರೇಣಿ, ಕುಲಗಳ ವೈಯಕ್ತಿಕ ರೂಢಿ ಸಂಪ್ರದಾಯಗಳನ್ನು ಗಮನಿಸಿ ನ್ಯಾಯದಾನ ಮಾಡಬೇಕು ಮತ್ತು ನ್ಯಾಯ ಪರಿಪಾಲನೆಗಾಗಿ ಸಂದರ್ಭಾನುಸಾರವಾಗಿ ದಂಡಾಧಿಕಾರವನ್ನು ಪ್ರಯೋಗಿಸಬೇಕು’’ ಎನ್ನುತ್ತಾನೆ ಮನು. ಭೂತನ್ಯಾಯದಲ್ಲೂ ಇದೇ ಆಶಯವಿದೆ. ‘ಸಮಾನ ನ್ಯಾಯ ಸಂಹಿತೆ’ಯನ್ನು ಭೂತಗಳು ಪುರಸ್ಕರಿಸುವುದಿಲ್ಲವೆನ್ನಬೇಕು!

ನ್ಯಾಯದ ಬಗ್ಗೆ ಅಭ್ಯರ್ಥನೆ, ನ್ಯಾಯ ವಿಚಾರಣೆ, ನ್ಯಾಯತೀರ್ಮಾನಗಳೆಲ್ಲ ಸಾಮಾನ್ಯವಾಗಿ ಅಲಿಖಿತವಾಗಿ, ಮೌಖಿಕವಾಗಿ ನಡೆಯುವುದಿದ್ದರೂ ಕೆಲವೊಂದು ವೇಳೆ ಲಿಖಿತದೂರು, ತೀರ್ಮಾನ ನೀಡಲ್ಪಡುವುದೂ ಇದೆ. ವಾದಿ, ಪ್ರತಿವಾದಿಗಳು ಸಮಕ್ಷದಲ್ಲಿದ್ದರೆ ಇಬ್ಬರ ವಾಙ್ಮೂಲವನ್ನೂ ಭೂತವು ಲಾಲಿಸುತ್ತದೆ. ಅಕ್ಕಪಕ್ಕದಲ್ಲಿರುವ ಗುರಿಕಾರರು, ತಂತ್ರಿ ಹಾಗೂ ಇತರ ಪ್ರತಿಷ್ಠಿತ ಗೃಹಸ್ಥರು ವಾದವಿವಾದವನ್ನು ಪರಿಶೀಲಿಸುತ್ತಾರೆ. ಕೊನೆಗೆ ಭೂತಕ್ಕೆ ತಮ್ಮ ನಿಲುವನ್ನು ತಿಳಿಸುತ್ತಾರೆ. ‘ಮದಿಪು (ಪ್ರತಿನಿಧಿಕ ಅಭಿಪ್ರಾಯ) ಮೊದಲು, ಮಾಯೆ ಮತ್ತೆ’ ಎಂಬ ಗಾದೆಯಂತೆ ಅವರ ಮದಿಪಿಗೆ ಆಧಾರವಾಗಿ ಭೂತವು ನ್ಯಾಯದ ನುಡಿ ಕೊಡುತ್ತದೆ. ಕೆಲವು ಸಂದರ್ಭಗಳಲ್ಲಿ ಇದಕ್ಕೆ ಜ್ಯೋತಿಷ್ಯ ಪ್ರಶ್ನೆಯನ್ನು ಅವಲಂಬಿಸುವುದಿದೆ. ಇದನ್ನು ಉಲ್ಲಂಘಿಸುವ ಧೈರ್ಯ ಸಾಮಾನ್ಯವಾಗಿ ಯಾರಿಗೂ ಇರುವುದಿಲ್ಲ. ಒಮ್ಮೊಮ್ಮೆ ನ್ಯಾಯವು ತುಂಬ ಕಗ್ಗಂಟಾಗಿ, ಊರ ಹಿರಿಯರಲ್ಲೂ ಒಮ್ಮತ ಬಾರದಿದ್ದಾಗ ಭೂತವು ತನ್ನದೇ ಸ್ವತಂತ್ರ ರೀತಿಯಲ್ಲಿ ನ್ಯಾಯ ತೀರ್ಮಾನ ನೀಡುವುದಿದೆ. ಕೆಲವು ಬಾರಿ ಹೂವಿನೆಸಳು, ವೀಳ್ಯದೆಲೆಗಳ ಸರಿ-ವಿಷಮ ಸಂಖ್ಯೆ, ತೆಂಗಿನ ಕಾಯಿಗಳ ಒಡೆತ ಇತ್ಯಾದಿ ಶಕುನಗಳ ಮೂಲಕ ತೀರ್ಮಾನದ ಖಚಿತತೆಯನ್ನು ಮಂದಟ್ಟು ಮಾಡಿಕೊಡುತ್ತದೆ. ಕೆಲವೊಮ್ಮೆ ಕಾಲ ಪಕ್ವವಾಗಿಲ್ಲವೆಂದು ಒಂದು ಅವಧಿ ಕೊಟ್ಟು (ಸಾಮಾನ್ಯವಾಗಿ ಮುಂದಿನ ಉತ್ಸವ ಸಂದರ್ಭಕ್ಕೆ) ಮುಂದುವರಿಸುವುದುಂಟು. ಭೂವಿವಾದಗಳು, ಕೌಟುಂಬಿಕ ಕಲಹಗಳು, ಅಧಿಕಾರ, ಮಾನಮರ್ಯಾದೆಯ ಪ್ರಶ್ನೆ, ಅಪಮಾನ, ಅಕೃತ್ಯಗಳು, ಕಳ್ಳತನ, ಸಾಲ ಅಥವಾ ಆಡವಿನ ಹಣ ಇಲ್ಲವೆ ವಸ್ತುಗಳ ಅಪಹರಣ, ವಚನಭಂಗ ಇತ್ಯಾದಿ ವಿವಾದಗಳು ಭೂತ ಸನ್ನಿಧಿಯಲ್ಲಿ ಇತ್ಯರ್ಥವನ್ನು ಆಪೇಕ್ಷಿಸುವಂಥವುಗಳು.

ದೂರು ಏಕಪಕ್ಷೀಯವಾಗಿದ್ದಾಗ ಅದನ್ನು ದೈವವು ಆಲಿಸಿ, ತನಗೂ ಇತರ ಪ್ರತಿನಿಧಿ ವ್ಯಕ್ತಿಗಳಿಗೂ ಅದು ಸ್ವೀಕಾರಾರ್ಹವೆನಿಸಿದರೆ, ಪ್ರತಿವಾದಿಯನ್ನು ಬರಮಾಡಿ ಕೂಲಂಕಷ ಪರಾಮರ್ಶೆ ನಡೆಸುತ್ತದೆ. ಪ್ರತಿವಾದಿ ಯಾರೆಂದು ತಿಳಿಯದೆ ಇದ್ದಾಗ (ಉದಾ : ಕಳ್ಳತನದ ಸಂದರ್ಭದಲ್ಲಿ) ತಾನು ಕಳ್ಳನನ್ನು ತುಬ್ಬು ಮಾಡಿ ಕೊಟ್ಟರೆ ತನಗೇನು ಕೊಡುವೆ ಎಂದು ಮೊದಲೇ ವಿಚಾರಿಸುವುದೂ ಇದೆ. ಭೂತವು ಕೇಳುವ ಮೊದಲೇ ಕೆಲವರು ಕದ್ದು ಹೋದ ಸೊತ್ತು ಅಥವಾ ಕಳ್ಳ ಪತ್ತೆಯಾದರೆ ಇಂತಿಷ್ಟು ಒಪ್ಪಿಸುವುದಾಗಿ ಹೇಳಿಕೊಳ್ಳುತ್ತಾರೆ. ಕೆಲವೊಮ್ಮೆ ಕದ್ದು ಹೋದ ಅಖಂಡ ವಸ್ತುವನ್ನೇ ಅರ್ಪಿಸಲು ಮುಂದಾಗುವುದುಂಟು. ಇಂಥ ಸಂದರ್ಭದಲ್ಲಿ ಭೂತವು ಪತ್ತೇದಾರ, ಸಾಕ್ಷಿ, ನ್ಯಾಯವಾದಿ, ನ್ಯಾಯಾಧಿಪತಿ ಹಾಗೂ ದಂಡಾಧಿಕಾರಿಗಳ ಪಾತ್ರಗಳನ್ನು ಬೇರೆ ಬೇರೆ ಸ್ತರಗಳ್ಲಲಿ ವಹಿಸಬೇಕಾಗುತ್ತದೆ. ಕಳ್ಳನು ಪತ್ತೆಯಾಗಿ ಭೂತದ ಎದುರಿಗೆ ತರಲ್ಪಟ್ಟು ಆತನೇ ಕಳ್ಳನೆಂದು ಸಾಬೀತಾದರೆ, ನಷ್ಟಗೊಂಡ ವ್ಯಕ್ತಿಯ ನಷ್ಟಕ್ಕಿಂತ ಹೆಚ್ಚಿನ ದಂಡವನ್ನು ಆತನಿಗೆ ವಿಧಿಸುವುದುಂಟು. ಭೂತಕ್ಕೂ ಊರ ಹಿರಿಯರಿಗೂ ಶರಣಾಗಿ ಮುಂದೆ ಹೀಗೆ ಮಾಡುವುದಿಲ್ಲವೆಂದು ಪಶ್ಚಾತ್ತಾಪಪಟ್ಟಲ್ಲಿ ದಂಡನೆಯ ಪ್ರಮಾಣ ಸ್ವಲ್ಪ ಕಡಿಮೆಯಾಗಬಹುದು.

೧೮೭೭ನೇ ಇಸವಿಯ ಒಂದು ದಾಖಲೆಯ ಪ್ರಕಾರ, ಮುಂಬಯಿಯ ಒಬ್ಬ ಸೇಟನ ಬಂಗಲೆಯಿಂದ ಸುಮಾರು ಐನೂರು ರೂಪ್ಯಾ ಮೌಲ್ಯದ ವಸ್ತುಗಳು ಕಳವಾಗಲಾಗಿ, ಅಲ್ಲಿ ಕೆಲಸಕ್ಕಿದ್ದ ಸೋಮೇಶ್ವರ ಉಚ್ಚಿಲದ ಕೆಲವರ ಸಲಹೆಯಂತೆ, ಕುಂಬಳೆಯ ಆಲಿ ದೈವಕ್ಕೆ ಊರವರ ಮೂಲಕ ಅರಿಕೆ ಮಾಡಲಾಯಿತು. ಆಲಿ ದೈವವು ತಾನು ಕಳ್ಳನನ್ನಾಗಲೀ ಕಳ್ಳ ಮ್ಹಾಲುಗಳನ್ನಾಗಲೀ ಪತ್ತೆ ಮಾಡಿಕೊಟ್ಟರೆ ಅರೆವಾಸಿ ಮೌಲ್ಯವು ತನಗೆ ಸಲ್ಲಬೇಕೆಂದು ಆರಂಭದಲ್ಲಿ ಅಪೇಕ್ಷಿಸಿದರೂ, ಕೊನೆಗೆ ಐವತ್ತು ರೂಪಾಯಿಗೆ ಚೌಕಶಿ ಮಾಡಿ ಒಪ್ಪುತ್ತದೆ!

ಒಂದು ದೈವಸ್ಥಳದಲ್ಲಿ, ಹೆಂಗಸೊಬ್ಬಳು ಉತ್ಸವಕ್ಕೆ ಬಂದಿದ್ದ ಮತ್ತೊಬ್ಬಳ ಮಗುವಿನ ಚಿನ್ನದ ಸರವನ್ನು ಕದ್ದುದರಿಂದ ನಷ್ಟಗೊಂಡವರು ಭೂತಕ್ಕೆ ಹರಕೆ ಹೇಳಿಕೊಂಡರು. ಪರಿಣಾಮವಾಗಿಯೋ ಎನ್ನುವಂತೆ, ಕದ್ದ ಹೆಂಗಸು ಮತ್ತು ಅವಳ ತರುಣ ಮಗ ಅಕಾಲ ಮರಣಕ್ಕೆ ಗುರಿಯಾದರು. ಅವಳ ಕುಟುಂಬಸ್ಥರು ಜ್ಯೋತಿಷ್ಯ ಪ್ರಶ್ನೆಯಲ್ಲಿ ವಿಚಾರಿಸಿ ಸ್ಥಳದ ದೈವಕ್ಕೆ ಕಂಚಿನ ಮೊಗವನ್ನು ಒಪ್ಪಿಸಿ ವಿಶೇಷ ನೇಮವನ್ನು ನೀಡಬೇಕಾಯಿತು.

ಇನ್ನೊಂದು ಘಟನೆ : ಒಂದು ಮನೆಯ ತುಂಟ ಹುಡುಗರು ವಿನೋದಕ್ಕೆಂದು ಒಂದು ಕೇರೆ ಹಾವನ್ನು ಕೊಂದು ತಮ್ಮ ಸಂಬಂಧಿಕರೇ ಆದ ನೆರೆಮನೆಯವರ ಶೌಚಗೃಹದಲ್ಲಿ ಅದನ್ನು ಸುರುಳಿ ಸುತ್ತಿ ಇರಿಸಿದ್ದರು. ಈ ಚೇಷ್ಟೆಗೆ ಈಚೆ ಮನೆಯವರು ಕೆರಳಿ ಸಮೀಪದ ಕಾರಣಿಕ ಸ್ಥಳವೊಂದಕ್ಕೆ ಹರಕೆ ಹೇಳಿ ಆ ವಿಚಾರವನ್ನು ‘ಸಾರಿ’ದರು. ಸಂಬಂಧಿಕರಲ್ಲಿ ಅನ್ನ ನೀರು ವ್ಯವಹಾರ ನಿಂತುಹೋಗುವಂತಾಯಿತು. ಮುಂದೆ ಎರಡೂ ಮನೆಯವರು ಕೆಲವು ತೊಂದರೆಗಳನ್ನು ಅನುಭವಿಸಿ, ದೈವಸನ್ನಿಧಿಗೆ ಬಂದು, ಅರ್ಧ ಪವನಿನಂತೆ ಚಿನ್ನದ ಕಾಣಿಕೆಯಿತ್ತು, ನ್ಯಾಯ ಪರಿಹಾರ ದೊರಕಿಸಿಕೊಂಡರು.

ಕಳ್ಳತನದ ದೂರುಕೊಟ್ಟು ಯಾರ ಮೇಲಾದರೂ ಸಂಶಯವಿದ್ದರೆ ಅವರೊಂದಿಗೆ ಯಾವುದೇ ಸಂಪರ್ಕ, ಅನ್ನಕನ್ಯಾ ವ್ಯವಹಾರ ಇಟ್ಟುಕೊಳ್ಳಬಾರದೆಂಬುದು ಭೂತಕಟ್ಟಳೆಯ ನಿರ್ಬಧ. ಭೂವಿವಾದ ಇದ್ದ ವೇಳೆ ಕೂಡಾ ಹೀಗೆಯೇ. ಒಬ್ಬನ ಜಾಗವನ್ನು ಮತ್ತೊಬ್ಬ ಬಲಾತ್ಕಾರವಾಗಿ ಆಕ್ರಮಿಸಿಕೊಂಡಿದ್ದಾನೆ ಎನ್ನೋಣ. ಭೂತಕ್ಕೆ ಹೇಳಿಕೊಂಡರೆ ಭೂತವು ಪ್ರಸಾದವಿತ್ತು ‘‘ಈ ಪ್ರಸಾದವನ್ನು ಹನ್ನೆರಡು ದಿವಸ ನಿತ್ಯವೂ ಆ ನೆಲಕ್ಕೆ ಸಿಂಪಡಿಸು. ಆ ಭೂಮಿಯ ನೀರನ್ನು, ಅಲ್ಲಿನ ‘ಅಲಫಲ’ಗಳನ್ನು ಸದ್ಯಕ್ಕೆ ಮುಟ್ಟದಿರು’’ -ಎಂಬಂಥ ಆದೇಶವನ್ನು ಕೊಡುತ್ತದೆ. ವಿವಾದಕ್ಕೆ ಒಳಪಟ್ಟ ಇಬ್ಬರೂ ಸಮಕ್ಷದಲ್ಲಿದ್ದರೆ, ಇಬ್ಬರ ವಾದಗಳನ್ನೂ ಆಲಿಸಿ ಕೆಲವೊಮ್ಮೆ ‘ಹಾವು ಸಾಯದಂತೆ, ಕೋಲು ಮುರಿಯದಂತೆ’ ನ್ಯಾಯ ತೀರ್ಮಾನ ಜರಗುವುದಿದೆ. ಸಂಬಂಧಪಟ್ಟವರಿಗೆ ಯುಕ್ತ ಪರಿಹಾರ ಸೂಚನೆ, ಅದಕ್ಕೊಂದು ಅವಧಿದಾನ ಕೊಡುವುದುಂಟು. ಭೂಸುಧಾರಣೆಯ ಕಾನೂನಿನ ಹಿನ್ನೆಲೆಯಲ್ಲಿ ಅನೇಕ ವಿವಾದಗಳು ಕೋರ್ಟಿಗೆ ಹೋದರೂ ಕೆಲವು ಕೇಸುಗಳು ಭೂತಗಳ ಇತ್ಯರ್ಥಕ್ಕೆ ಒದಗಿದ್ದೂ ಇದೆ. ಇಂಥ ಸಂದರ್ಭಗಳಲ್ಲಿ ಕೆಲವೊಮ್ಮೆ ಸಂಬಂಧಪಟ್ಟ ಪಕ್ಷದವರು ವೈಯಕ್ತಿಕವಾಗಿ ಭೂತ ವೇಷಧಾರಿಯ ಮೇಲೆ ವರ್ಚಸ್ಸು ಬೀರಿ ನ್ಯಾಯದ ಮುಖ ತಿರುಗುವಂತೆ ಆದುದೂ ಇದೆ. ಸರಕಾರದ ಕಾನೂನನ್ನು ಭೂತವೂ ಸಾಮಾನ್ಯವಾಗಿ ಮನ್ನಿಸುತ್ತದೆ. ‘ರಾಜಶಾಸನಕ್ಕೆ ತಾನು ವಿರೋಧ ಹೋಗುವಂತಿಲ್ಲ’ ಎಂದು ತನ್ನ ಅಸಹಾಯಕತೆಯನ್ನೂ ಒಮ್ಮೊಮ್ಮೆ ತೋರ್ಪಡಿಸುವುದುಂಟು.

ಭೂತವು ಸಾಮಾನ್ಯವಾಗಿ ಜಾತೀಯ ಶಿಷ್ಟಾಚಾರಗಳು, ಅವಿಭಕ್ತ ಕುಟುಂಬಪದ್ಧತಿಗಳಿಗೆ ಪೋಷಕವಾಗಿ ವರ್ತಿಸುತ್ತದೆ. ನಾನಾ ಕಾರಣಗಳಿಂದ ಕುಟುಂಬ ಕಲಹವಾಗಿ ಎಲ್ಲರೂ ಒಂದಾಗಿ ನಿರ್ವಹಿಸಬೇಕಾದ ಕಾರ್ಯವನ್ನು ಒಬ್ಬ ಅಥವಾ ಕುಟುಂಬದ ಕನಿಷ್ಠಾಂಶದವರು ನಿರ್ವಹಿಸಲು ಮುಂದೆ ಬಂದಾಗ ಭೂತವು ಅದಕ್ಕೆ ಇಂಬು ಕೊಡದೆ ಎಲ್ಲರೂ ಒಂದಾಗಿ ಬಂದರೆ ಮಾತ್ರ ಕ್ಷೇಮದ ‘ಬೂಳ್ಯ’ ಪ್ರಸಾದವನ್ನು ಕೊಡುವೆನೆಂದು ನುಡಿಯುತ್ತದೆ. ಪರಸ್ಪರ ಅನ್ನನೀರು ವರ್ಜಿತವಾಗಿರುವ ಕುಟುಂಬಿಕರು ಭೂತದ ಸಮಕ್ಷದಲ್ಲಿ ರಾಜಿಯಾಗುವಂತಿದ್ದರೆ, ಅವರ ನ್ಯಾಯವನ್ನು ಭೂತವು ವಿಚಾರಿಸಿ ಇತ್ಯಾರ್ಥ ಮಾಡಿ, ಯಥೋಚಿತ ತಪ್ಪು ಕಾಣಿಕೆಯನ್ನು ವಸೂಲು ಮಾಡಿ, ಕುಟುಂಬದ ಹಿರಿಯರ ಕಾಲಿಗೆ ಕಿರಿಯರು ವಂದಿಸುವಂತೆ ಮಾಡಿ, ಸೀಯಾಳ, ಹಾಲು ಅಥವಾ ನೀರನ್ನು ಎಲ್ಲರೂ ಒಟ್ಟಿಗೆ ಹಂಚಿ ಕುಡಿಯುವಂತೆ ಆದೇಶಿಸುತ್ತದೆ. ಗಂಡಹೆಂಡಿರಲ್ಲಿ ವಿರಸವಾಗಿದ್ದ ಒಂದು ಸಂದರ್ಭದಲ್ಲಿ ದೈವವು ಸೆರಗೊಡ್ಡಿ ನಿಂತ ಇಬ್ಬರ ಕೈಗೂ ಸಿಂಗಾರದ ಹೂವಿನ ಪ್ರಸಾದವನ್ನು ಕೊಟ್ಟು ಅದನ್ನು ಪರಸ್ಪರ ವಿನಿಮಯ ಮಾಡಿಸಿ ಅವರಿಬ್ಬರ ಕೈಯನ್ನು ಜೋಡಿಸಿ, ಪವಿತ್ರ ನೀರಿನ ಧಾರೆಯನ್ನು ಎರೆಯುವುದರ ಮೂಲಕ ಹಾಗೂ ಒಂದು ಸೀಯಾಳವನ್ನು ಇಬ್ಬರು ಹಂಚಿ ಕುಡಿಯುವ ಮೂಲಕ ಎಳೆಗಡಿದಿದ್ದ ಅವರ ದಾಂಪತ್ಯವನ್ನು ಮತ್ತೆ ಬೆಸೆಯಿತು. ಅವರಿಗೆ ಬುದ್ದಿ ನೀತಿ ಹೇಳಿ ಮುಂದಕ್ಕೆ ಅನ್ಯೋನ್ಯವಾಗಿರಬೇಕೆಂದು ಆದೇಶಿಸುವಾಗಿ ಕಣ್ಣೀರು ಉಕ್ಕಿಬಾರದಿದ್ದೀತೆ?

ಜಿಗುಟಾದ ಸಮಸ್ಯೆಗಳನ್ನು ಬಿಡಿಸಲು ಹಾಗೂ ಮನಸ್ತಾಪಗಳನ್ನು ನಿವಾರಿಸಲು ಭೂತ ಪಾತ್ರಧಾರಿ ಕೆಲವು ವೇಳೆ ಕೆಲವೊಂದು ಉಪಾಯಗಳನ್ನು ಬಳಸಬೇಕಾಗುತ್ತದೆ. ಒಮ್ಮೆ ಭೂತವೊಂದು ಪ್ರಚಂಡ ವ್ಯಕ್ತಿಯ ವಿರುದ್ಧವಾಗಿ ತೀರ್ಮಾನ ನೀಡಿತು. ಒಡನೆ ಆತ ಭೂತವೇಷಧಾರಿಯನ್ನು ವಾಚಾಮಗೋಚರವಾಗಿ ಬಯ್ದುದಲ್ಲದೆ ಹೊಡೆಯಲೂ ಮುಂದಾದ. ಅಷ್ಟರಲ್ಲಿ ದೈವಕ್ಕೆ ಕಟ್ಟಿದ ವ್ಯಕ್ತಿ ಇದ್ದಕ್ಕಿದ್ದಂತೆ ಅಣಿಸಮೇತ ಕೆಳಗುರುಳಿದ. ಭೂತದ ಸುಳಿವೇ ಇಲ್ಲ! ಹಾಹಾಕಾರವಾಯಿತು. ಎಷ್ಟೆಷ್ಟು ಪ್ರಾರ್ಥಿಸಿದರೂ ಭೂತ ಮೈದುಂಬಲಿಲ್ಲ. ಕೊನೆಗೆ ಕ್ಷಮಾಪಣೆ, ತಪ್ಪು ಕಾಣಿಕೆ ನಡೆದಾಗ ಭೂತ ಮತ್ತೆ ಪ್ರಕಟಗೊಂಡಿತು.

ಒಮ್ಮೆ ದೇವಸ್ಥಾನವೊಂದರಲ್ಲಿ ಹೊಸ ಧ್ವಜಸ್ತಂಭವನ್ನು ಮಾಡಿಸಲಾಯಿತು. ಆ ಮರದ ತುದಿಭಾಗ ಸ್ವಲ್ಪ ಒಣಗಿ ಹೋಗಿತ್ತು. ಇದು ಕೆಲವರಿಗೆ ಗೊತ್ತಿತ್ತು. ಅಲ್ಲಿನ ಮೊಕ್ತೇಸರರಲ್ಲಿ ಎರಡು ಪಕ್ಷವಿತ್ತು. ನಿರ್ಜೀವವಾದ ಮರದಿಂದ ಧ್ವಜಸ್ತಂಭ ನಿರ್ಮಿಸಿದುದನ್ನು ಅದು ಶಾಸ್ತ್ರೋಕ್ತವಲ್ಲದುದರಿಂದ ಅಮಾನತು ಮಾಡಬೇಕೆಂದು ಕೆಲವರು ಆ ದೇವಸ್ಥಾನಕ್ಕೆ ಉತ್ಸವಕಾಲದಲ್ಲಿ ಭೇಟಿಯೀಯುವ ದೈವದ ಪಾತ್ರಿಯೊಬ್ಬನ ಮೇಲೆ ಪ್ರಭಾವ ಬೀರಿದರು. ಇವರಿಗೆ ತಿಳಿಯದಂತೆ ಇನ್ನೊಂದು ಪಕ್ಷದವರೂ ಅದೇ ಪಾತ್ರಿಯನ್ನು ಖಾಸಗಿಯಾಗಿ ಕಂಡರು. ಧ್ವಜಸ್ತಂಭವನ್ನು ಸ್ವೀಕರಿಸಬೇಕಾದ ಸಂದರ್ಭದಲ್ಲಿ ದೈವ ಆವೇಶವಾಗಿ, ‘ರಸವಿಲ್ಲದ ಈ ಸೊತ್ತು ದೇವರಿಗೆ ಸಲ್ಲದು’ ಎಂದಿತು. ಧ್ವಜಸ್ತಂಭ ಮಾಡಿಸಿದವರ ಎದೆ ಧಸಕ್ಕೆಂದಿತು. ಬಹಳ ಚರ್ಚೆಯಾದ ಬಳಿಕ ದೈವವು ಐದು ಎಳನೀರುಗಳನ್ನು ತರಿಸಿಕೊಂಡು ‘‘ರಸವಿಲ್ಲದುದಕ್ಕೆ ರಸ, ಜೀವವಿಲ್ಲದುದಕ್ಕೆ ಜೀವ ನೀಡಲು ನಾವು ಶಕ್ತರು’’ ಎಂದು ಸೀಯಾಳದ ನೀರನ್ನು ಧ್ವಜಮರದುದ್ದಕ್ಕೂ ಸಿಂಪಡಿಸಿತು. ಧ್ವಜ ಮರ ಮಾಡಿಸಿದ ಮಂದಿ ಈಗ ಗೆದ್ದೆವೆಂದು ಉಸುರುಗರೆದರು!

ಒಂದೆಡೆ ಎರಡು ಪ್ರತಿಷ್ಠಿತ ವರ್ಗಗಳೊಳಗೆ ವಿಷ್ಣುಮೂರ್ತಿ ದೈವದ ಪ್ರಸಾದ ಪಡೆಯುವ ಆದ್ಯತೆ ಬಗ್ಗೆ ವಿವಾದ ಹುಟ್ಟಿಕೊಂಡಿತು. ಇಬ್ಬರಿಗೂ ಬಲಗೈಯಿಂದಲೇ ಪ್ರಥಮವಾಗಿ ಪ್ರಸಾದ ಲಭ್ಯವಾಗಬೇಕೆಂಬ ವಾದ. ದೈವವೂ ವಿಚಿತ್ರವಾಗಿಯೇ ಪರಿಹಾರ ಕಾಣಿಸಿತು. ಇಬ್ಬರನ್ನೂ ಎಡಬಲದಲ್ಲಿ ನಿಲ್ಲಿಸಿ ತನ್ನ ಎಡಗೈಯನ್ನು ಬಲಕ್ಕೂ ಬಲಗೈ ಯನ್ನು ಎಡಕ್ಕೂ ಚಾಚಿ ಪ್ರಸಾದ ನೀಡಿತು. ವಿಷ್ಣುಮೂರ್ತಿಗೆ ನಾಲ್ಕು ಕೈಗಳೆಂದಿರುವುದರಿಂದ ಎಡಕ್ಕೆ ಚಾಚಿದ ಬಲಗೈಯೂ, ಬಲಬದಿಗೆ ಚಾಚಿದ ಕೈಯೂ ಎರಡೂ ಬಲಗೈಗಳೇ ಎಂದು ದೈವ ನೀಡಿದ ಸಮಾಧಾನ ಉಭಯರನ್ನೂ ತೃಪ್ತಪಡಿಸಿತು.

‘ಪ್ರಮಾಣ’ ಎಂಬ ಕಲಾಪವು ಭೂತನ್ಯಾಯದಲ್ಲಿ ಮುಖ್ಯವಾದೊಂದು ಪಾತ್ರವಹಿಸು ತ್ತದೆ. ಹಿಂದೆ ಅನೇಕ ಬಗೆಯ ‘ದಿವ್ಯ’ಗಳು ಇದ್ದುದಾಗಿ ಸಾಹಿತ್ಯ ಹಾಗೂ ಶಾಸ್ತ್ರಗ್ರಂಥಗಳಿಂದ ತಿಳಿದುಬರುತ್ತದೆ. ತನ್ನ ಸತ್ಯಸಂಧತೆಯನ್ನೂ ಶೀಲವನ್ನೂ ಸ್ಥಾಪಿಸುವ ಸಲುವಾಗಿ ದೈವವನ್ನು ಸಾಕ್ಷಿಯಾಗಿಟ್ಟು ಹೇಳುವ ‘ಸತ್ಯವಚನ’ ವಿಧಾನವಿದು. ಅಗೋಚರ ಪರೀಕ್ಷೆ ಮತ್ತು ಶಿಕ್ಷೆಗೆ ಸಿದ್ಧರಾಗುವ ಆತ್ಮವಿಶ್ವಾಸ ಇಲ್ಲಿ ಅಗತ್ಯ. ಹೆಚ್ಚಾಗಿ ಕಳ್ಳತನ, ವ್ಯಭಿಚಾರ ಇತ್ಯಾದಿ ಅಪಕೀರ್ತಿ, ಅಪಮಾನಗಳಿಗೆ ಸಂಬಂಧಪಟ್ಟ ಹಾಗೆ ಇಂಥ ಪ್ರಮಾಣ ಜರಗುತ್ತದೆ. ರಾಜಕೀಯ ನ್ಯಾಯಸ್ಥಾನಗಳೂ ದೈವಸ್ಥಳಗಳಲ್ಲಿ ಕ್ರಮೋಚಿತವಾಗಿ ನಡೆಯತಕ್ಕ ಪ್ರಮಾಣವನ್ನು ಅಂಗೀಕರಿಸಿದ್ದವು. ಬ್ರಿಟಿಷ್ ಸರ್ಕಾರವೂ ಇಂಥ ಕ್ರಮವನ್ನು ಮನ್ನಿಸಿದುದಕ್ಕೆ ದಾಖಲೆಗಳಿವೆ.

‘ಪ್ರಮಾಣ’ ಮಾಡಿದ ವಾದಿ-ಪ್ರತಿವಾದಿಗಳು ಯಾವುದೇ ರೀತಿಯಲ್ಲಿ ಕೂಡಿನಡೆಯ ಬಾರದೆಂಬ ಕಟ್ಟು ಇದೆ. ಹಾಗೆ ಅಚಾತುರ್ಯದಿಂದ ಬೆರೆತು ನಡೆದರೆ ಅನಾಹುತವಾದೀತೆಂಬ ನಂಬಿಕೆಯಿದೆ. ಪ್ರಮಾಣದ ಪರಿಣಾಮವು ತೋರಿ ಬಂದ ಅನಂತರ ನ್ಯಾಯವು ಪುನಃ ಭೂತದ ಸಮಕ್ಷಕ್ಕೆ ಬಂದು ತಪ್ಪಿತಸ್ಥರಿಗೆ ದಂಡನೆ ನಡೆಯುತ್ತದೆ. ವಿವಾದಾಂತ್ಯದಲ್ಲಿ, ಹಿಂದೆ ರಾಜನಿಗೆ ನ್ಯಾಯಾಲಯ ಶುಲ್ಕ ಸಲ್ಲುತ್ತಿದ್ದಂತೆ ಇಲ್ಲಿಯೂ ದೈವಾಲಯಕ್ಕೆ ಕಾಣಿಕೆ ಸಲ್ಲುತ್ತದೆ.

ಒಂದು ದೈವವು ತೀರ್ಮಾನಕ್ಕಾಗಿ ಎತ್ತಿಕೊಂಡ ವಿವಾದವನ್ನು ಇನ್ನೊಂದು ದೈವವು ತೀರ್ಮಾನಕ್ಕಾಗಿ ಸ್ವೀಕರಿಸುವ ಕ್ರಮವಿಲ್ಲ. ವಿಮರ್ಶೆ, ಮರುವಿಮರ್ಶೆ, ಪ್ರಾಯಶ್ಚಿತ್ತ ಅದೇ ದೈವದ ಸಮ್ಮುಖದಲ್ಲೆ ನಡೆಯಬೇಕು. ದೋಷಿಗಳ ಸಂಬಂಧಿಕರು ಅಥವಾ ಉತ್ತರಾಧಿಕಾರಿಗಳು ಅಂಥ ದೋಷಿಗಳ ಅನುಪಸ್ಥಿತಿಯಲ್ಲಿ ತಕ್ಕ ಪ್ರಾಯಶ್ಚಿತ್ತವನ್ನು ಮಾಡಬೇಕಾಗುತ್ತದೆ. ವ್ಯಕ್ತಿ ತೀರಿಕೊಂಡರೂ ಆತನ ಕರ್ಮದೋಷ ಬಿಟ್ಟುಹೋಗವಂತಿಲ್ಲ. ಮರೆತರೂ ನೆನಪಿಸುವ ಜ್ಯೋತಿಷ್ಯ ಪ್ರಶ್ನೆ ಭೂತಗಳ ಜೊತೆಗೆ ಸದಾ ಇದ್ದೇ ಇದೆ!

ಭೂತೋತ್ಸವ ಸಂದರ್ಭದಲ್ಲಿ ಮಾತ್ರವೇ ಅಲ್ಲ, ಯಾವುದಾದರೊಂದು ಸಮಾರಂಭ ದಲ್ಲಿಯೋ ಸಭೆಯಲ್ಲಿಯೋ ಬಿಕ್ಕಟ್ಟು ತಲೆದೋರಿ ಮಾರಾಮಾರಿಯಾಗುವ ಸಂದರ್ಭದಲ್ಲಿ ತಟ್ಟನೆ ದೈವವು ಪಾತ್ರಿಯ ಮೇಲೆ ಮೈದೋರಿ, ನ್ಯಾಯವನ್ನು ಕೈಗೆತ್ತಿ ತೀರ್ಮಾನ ನೀಡುವುದುಂಟು. ಕೆಲವೊಮ್ಮೆ ಜನರೇ ಹಾರೈಸಿ ದೈವಗಳನ್ನು ‘ಜೋಗ’ ಬರಿಸಿ ಸಲಹೆ ಕೇಳುವುದೂ ಇದೆ.

ಒಟ್ಟಿನಲ್ಲಿ, ಮನಃಶಾಸ್ತ್ರೀಯ, ಸಮಾಜಶಾಸ್ತ್ರೀಯ ದೃಷ್ಟಿಗಳಿಂದ ಭೂತನ್ಯಾಯ ಪ್ರಪಂಚದ ಅಧ್ಯಯನ ತುಂಬ ಕುತೂಹಲಕರವಾದುದೆಂಬುದರಲ್ಲಿ ಸಂದೇಹವಿಲ್ಲ. ತನ್ನ ಭಯಪ್ರದವಾದ ಮುಖದಿಂದ ಗ್ರಾಮೀಣ ಜನತೆಯ ಸಾಮಾಜಿಕ ನೀತಿ ನ್ಯಾಯಗಳನ್ನು ನಿಯಂತ್ರಣಗೊಳಿಸಲು ಶಕ್ತವಾಗಿರುವ ಭೂತಗಳ ನ್ಯಾಯನಿಷ್ಠುರತೆಯು ಕಾನೂನಿನ ಭಯ ಕಳಚಿಹೋಗುತ್ತಿರುವ ಇಂದಿನ ದಿನಗಳಲ್ಲಿ ಅನಿವಾರ್ಯವೇನೋ ಎನಿಸುತ್ತದೆ. ‘ಎಡ್ದೆ ಮಳ್ತಿನಾಯಗ್ ಅಮುರ್ತೊದ ಮಿರೆ, ಹಾಳ್ ಮಳ್ತಿನಾಯಗ್ ವಿಷೊತ್ತ ಮಿರೆ ಕೊರ್ಪಿ ದೈವ ಯಾನ್ ’ (ಒಳಿತನ್ನೆಸಗಿದವರಿಗೆ ಅಮೃತಸ್ತನ್ಯ, ಹಾಳೆಸಗಿದವರಿಗೆ ವಿಷದ ಮೊಲೆ ಕೊಡುವ ದೈವ ನಾನು), ‘ನ್ಯಾಯೊಗು ಇಂಬು ಅನ್ಯಾಯೊಗು ಅಂಬು’ (ನ್ಯಾಯಕ್ಕೆ ಇಂಬು, ಅನ್ಯಾಯಕ್ಕೆ ಅಂಬು), ‘ನ್ಯಾಯೊಗು ತಿಗಲೆಡ್ ಸಾದಿ ಕೊರ್ಪ, ಅನ್ಯಾಯೊಗು ಸುರಿಯೊಡು ಸಾದಿ ತೋಜಾವೊ’ (ನ್ಯಾಯಕ್ಕೆ ಎದೆಯಲ್ಲಿ ಹಾದಿ ಕೊಡುತ್ತೇವೆ; ಅನ್ಯಾಯಕ್ಕೆ ಖಡ್ಗದಲ್ಲಿ ಹಾದಿ ತೋರಿಸುತ್ತೇವೆ). ‘ನ್ಯಾಯೊಗು ಬೇಲಿ ಆದ್ ಉಂತುವೊ’ (ನ್ಯಾಯಕ್ಕೆ ಬೇಲಿಯಾಗಿ ನಿಲ್ಲುತ್ತೇವೆ) ಇತ್ಯಾದಿ ದೈವಗಳ ಸೊಲ್ಲುಗಳು ಅವುಗಳ ನಿಲುವನ್ನು ಪ್ರಕಟಿಸುವಂತೆಯೆ, ಸಮಾಜ ಸ್ವಾಸ್ಥ್ಯಕ್ಕೆ ಅವು ನೀಡುವ ಅಭಯವಾಕ್ಯಗಳೂ ಆಗಿವೆ.

(ಏರ್ಯ ಲಕ್ಷ್ಮೀನಾರಾಯಣ ಆಳ್ವರಿಂದ ಸಂಪಾದಿತವಾದ ಮಂಗಳ ತಿಮರು ವಿಶೇಷ ಸಂಚಿಕೆಯಲ್ಲಿ ಪ್ರಕಟ. ೧೯೮೭, ಮಂಗಳತಿಮರು ದೈವಸ್ಥಾನ, ಬಂಟವಾಳ, ದ.ಕ.)