ಜನಪದ ದೈವಗಳು ಶಿಷ್ಟ-ದೇವತೆಗಳಾಗಿ ಮಾರ್ಪಡುವುದೂ, ಶಿಷ್ಟ-ದೇವತೆಗಳು ಜನಪದ ದೈವಗಳಾಗಿ ಅವತರಿಸುವುದೂ ಆರಾಧನಾ ಪ್ರಪಂಚದಲ್ಲಿ ನಡೆಯುತ್ತಲೇ ಬಂದ ಪ್ರಕ್ರಿಯೆ. ಹೀಗಾಗಲು ಐತಿಹಾಸಿಕ, ಸಾಮಾಜಿಕ, ವ್ಯಾವಹಾರಿಕ, ಭಾವನಾತ್ಮಕ ಕಾರಣಗಳೂ ಇರುತ್ತವೆ. ಹೆಚ್ಚಿನ ಶಿಷ್ಟ ದೇವರುಗಳಿಗೆ ಜನಪದ ಸ್ವರೂಪ ಗಳೂ, ಕಥನಗಳೂ, ಆಚರಣಾ ವಿಧಿಗಳೂ ಇರುವುದನ್ನು ದೈವ ಪುರಾಣ, ಸ್ಥಳ ಪುರಣ, ಜನಪದ ಸಾಹಿತ್ಯ ಹಾಗು ಜನಪದ ಆರಾಧನಾ ವಿಧಿಗಳಲ್ಲಿ ಕಾಣಬಹುದು.

ಉತ್ತರ ಕೇರಳದಲ್ಲೂ, ತುಳುನಾಡಿನ ಕೆಲವು ಭಾಗಗಳಲ್ಲೂ ಮಲೆಯಾಳ ಸಂಪ್ರದಾಯದಲ್ಲಿ ಆರಾಧಿಸಲ್ಪಡುವ ಜನಪದ ದೈವಗಳಲ್ಲಿ ವಿಷ್ಣುಮೂರ್ತಿಯು ಒಂದು. ಬೇರೆ ಬೇರೆ ಸಮಾಜದವರಿಗೆ ತರವಾಡು ಪರಿದೇವತೆಯಾಗಿ, ಕುಟುಂಬ ದೈವವಾಗಿ, ಸಮಾಜ ದೈವವಾಗಿ, ಗ್ರಾಮ ದೇವತೆಯಾಗಿ ವಿಷ್ಣುಮೂರ್ತಿ ದೈವ ಆರಾಧನೆಯನ್ನು ಕೈಗೊಳ್ಳುತ್ತದೆ. ಆರ್ಯಾಕರ ಭಗವತಿ, ಪೊನ್ನಕ್ಕಾಲ್ ಭಗವತಿ, ಪಾಟಾರ ಕುಳಂಗರ ಭಗವತಿ -ಮೊದಲಾದ ಭಗವತಿಗಳು ಪ್ರಧಾನವಾಗಿರುವ ಅನೇಕ ದೈವ ಸಂಕೀರ್ಣಗಳಲ್ಲೂ ವಿಷ್ಣೂಮೂರ್ತಿಗೆ ಸ್ಥಾನ ಸಂದಿದೆ… ಆದರೆ ಭಗವತೀ ಆರಾಧನಾ ಪ್ರಸ್ಥಾನದಲ್ಲಿ ವಿಷ್ಣುವಿಗೆ ಅಥವಾ ವೈಷ್ಣವ ಶಕ್ತಿಗಳಿಗೆ ಅವಕಾಶ ದೊರಕಿದುದು, ಐತಿಹಾಸಿಕವಾಗಿ ಮತ್ತಿನ ಕಾಲಘಟ್ಟದಲ್ಲಾಗಿದೆ. ವೈಷ್ಣವ ಧರ್ಮ ಪ್ರಾಚುರ್ಯದೊಂದಿಗೆ ವಿಷ್ಣುವನ್ನು ಜನಾದನ, ಗೋಪಾಲಕೃಷ್ಣ, ವಿಷ್ಣುಮೂರ್ತಿ, ನರಸಿಂಹ ಎಂಬ ಬೇರೆ ಬೇರೆ ರೂಪಗಳಲ್ಲಿ ವೈದಿಕ ದೇವಸ್ಥಾನಗಳಲ್ಲಿ ಪೂಜಿಸಲಾರಂಭಿಸಿದಂತೆಯೇ ಜನಪದ ದೈವಾರಾಧನೆಯಲ್ಲೂ ವಿಷ್ಣುಮೂರ್ತಿ, ದೈವತ್ತಾರ್ ಮೊದಲಾದ ರೂಪಗಳಲ್ಲಿ ವಿಷ್ಣುವು ಸ್ಥಾನವನ್ನು ಪಡೆದುದನ್ನು ಕಾಣುತ್ತೇವೆ. (ದೈವತ್ತಾರ್ ಎಂಬುದು ಶ್ರೀರಾಮನ ಜನಪದ ದೈವರೂಪ ಎಂದು ಹೇಳುವವರುಂಟು. ‘ಕರಿಂ ಕುಟ್ಟಿಚಾತನ್ ಕಂಸವಧೆಗಾಗಿ ಶ್ರೀ ಕೃಷ್ಣಧರಿಸಿದ ರೂಪವೆನ್ನಲಾಗಿದೆ) ಇಲ್ಲಿನ ವಿಷ್ಣುಮೂರ್ತಿಯು ಶಂಖ ಚಕ್ರ ಗದಾ ಪದ್ಮಧಾರಿಯಾದ ಮಹಾವಿಷ್ಣುವಾಗಿರದೆ, ಸುರಿಗೆ, ಬಿಲ್ಲು ಬಾಣಗಳನ್ನು ಧರಿಸಿದ ಸಮರ ದೇವತೆಯಾಗಿ ಕಾಣಿಸಿಕೊಳ್ಳುತ್ತಾನೆ. ವಿಷ್ಣುಮೂರ್ತಿ ದೈವಕ್ಕೆ ಆಯುಧ ಪ್ರತಿಷ್ಠೆಯಲ್ಲದೆ, ವಿಗ್ರಹ ಪ್ರತಿಷ್ಠೆ ಕಂಡುಬರುವುದಿಲ್ಲ.

ಭಗವತಿಗಳ ನೌಕಾಯಾನದ ವೇಳೆ ‘ಚೆಂದಾವರೆ ಕಡಲ’ಲ್ಲಿ ತಾವರೆ ಬಳ್ಳಿಗಳ ದೆಸೆಯಿಂದ ಉಂಟಾದ ಆತಂಕವನ್ನು ತನ್ನ ‘ವಜ್ರ’ದ ಅಲಗುಗಳಿಂದ ಪರಿಹರಿಸುವ ಮೂಲಕ ವಿಷ್ಣುಭಗವತಿಗಳ ಸಹಾಯಕ ಸ್ಥಾನಕ್ಕೆ ಬರುತ್ತಾನೆ.

ವಿಷ್ಣುಮೂರ್ತಿ ತನ್ನ ನುಡಿಗಟ್ಟಿನಲ್ಲಿ ‘‘ತಳೀಲಪ್ಪಂಡೆ ಓಮನ ಕಿಡಾವು ವಜ್ರಂ ಕೆಟ್ಟಿಯಾನ ಲೋಗನಾಥಂ ಮಹಾವಿಷ್ಣು’’ (ನೀಲೇಶ್ವರದ ದೇವರ ಪ್ರೀತಿಯ ಬಾಲಕ, ವಜ್ರಕಟ್ಟಿದ ಆನೆ, ಲೋಕನಾಥ ಮಹಾವಿಷ್ಣು) ಎಂದು ಹೇಳುವುದಿದೆ. ವಿಷ್ಣುಮೂರ್ತಿಯನ್ನು ಓಂಕಾರ ಮೂರ್ತಿಯೆಂದೂ, ಕರೆಯುತ್ತಾರೆ. ಈ ದೈವ ಏಕಕಾಲದಲ್ಲಿ ಹಲವರ ಮೇಲೆ ಆವೇಶ ಬರುವುದನ್ನು ‘ಒತ್ತೆಕೋಲ’ದಂಥ ವಿಶಿಷ್ಟ ಉತ್ಸವ ಕಾಲದಲ್ಲಿ ಕಾಣಬಹುದು. ಒಂದು ನಿರ್ದಿಷ್ಟ ದೈವ ಏಕಕಾಲದಲ್ಲಿ ಹಲವರ ಮೇಲೆ ಆವೇಶ ತೋರುವ ವಿಶಿಷ್ಟತೆ, ದೈವಾರಾಧನೆಯಲ್ಲಿ ತೀರಾ ವಿರಳ. ತುಳುನಾಡಿನಲ್ಲಿ ಸಾಮೂಹಿಕ ಸಿರಿದರ್ಶನ ಉತ್ಸವದ ವೇಳೆ ಕವತ್ತಾರು, ಹಿರಿಯಡ್ಕ, ನಂದಳಿಕೆ, ನಿಡಿಗಲ್ಲು ಮೊದಲಾದ ಕಡೆಗಳಲ್ಲಿ ಮಾತ್ರ ಇಂಥ ವಿಶೇಷ ದೃಶ್ಯವನ್ನು ನೋಡಬಹುದಾಗಿದೆ.

‘ಒತ್ತೆಕೋಲ’(ಒಟ್ಟಕೋಲಂ) ಎಂಬುದು ಒಂದು ನಿರ್ದಿಷ್ಟ ದೈವವನ್ನು ಪ್ರಧಾನವಾಗಿ ಇಟ್ಟುಕೊಂಡು ಜರಗುವ ಉತ್ಸವ. ಸಾಮಾನ್ಯವಾಗಿ ವಿಷ್ಣುಮೂರ್ತಿ ದೈವಕ್ಕೆ ಸಂಬಂಧಪಟ್ಟ ಹಿರಿಯ ಪ್ರಮಾಣದ ಕೆಂಡಸೇವೆ ಉತ್ಸವಕ್ಕೆ ಮಾತ್ರ ಈ ಹೆಸರು ಅನ್ವಯಿಸುತ್ತದೆ.

ವಿಷ್ಣುಮೂರ್ತಿಯ ಪಾತ್ರಿಗಳಲ್ಲಿ ಸ್ಥೂಲವಾಗಿ ಎರಡು ವಿಧ. ನಿರ್ದಿಷ್ಟ ದೈವಸ್ಥಾನದ ಪಾತ್ರಿಗಳಾಗಿ ಆಯ್ಕೆ ಹೊಂದಿ ಕಲಶ ಸ್ನಾತರಾಗಿ ದೈವದ ಬಳೆಹೊಂದಿರುವವರು ಒಂದು ವರ್ಗ. ಹಾಗಿಲ್ಲದೆ, ದೈವಸ್ಥಾನದ ಹೊರಗೆ ಆವೇಶಗೊಳ್ಳುವವರು ಇನ್ನೊಂದು ವರ್ಗ, ಮೂಲಶಕ್ತಿ ಒಂದೇ ಆದರೂ ದೈವ ‘ಪಟ್ಟ’ ಕಟ್ಟಿ ಕೈಗೆ ಕಂಕಣವಿಟ್ಟವರ ಮೇಲೆ ಆವೇಶಗೊಳ್ಳುವ ಶಕ್ತಿಯನ್ನು ‘ಪಟ್ಟದಾನೆ’ ಎಂದೂ ಉಳಿದವರ ಮೇಲೆ ಕಾಣಿಸುವ ಶಕ್ತಿಯನ್ನು ‘ಮರವೆಳೆಯುವ ಆನೆ’ಯೆಂದೂ ಕರೆಯುತ್ತಾರೆ. ವಿಷ್ಣುಮೂರ್ತಿಯ ಗುಡಿಯಲ್ಲಿ ಸುರಿಗೆಗಳ ಸಂಖ್ಯೆ ಅಧಿಕವಾಗಿದ್ದು ಅವುಗಳನ್ನೆಲ್ಲ ಒಂದೊಂದಾಗಿ ಧರಿಸಿ ಬೆಳ್ಚಪಾಡರು ತಮ್ಮ ಎದೆಯನ್ನು ಘಾತಿಸಿಕೊಳ್ಳುತ್ತ ‘ಶಸ್ತ್ರಪವಾಡ’ವನ್ನು ತೋರುತ್ತಾರೆ.

ವಿಷ್ಣುಮೂರ್ತಿಗೆ ಪುರುಷರೂಪ ಹಾಗೂ ಸ್ತ್ರೀರೂಪ ಎರಡೂ ಇವೆ ಎನ್ನಲಾಗಿದೆ. ಕೆಲವೆಡೆ ವಿಷ್ಣುಮೂರ್ತಿಯನ್ನು ವಿಷ್ಣುಮೂರ್ತಿ ಚಾಮುಂಡಿ ಎಂದು, ಸ್ತ್ರೀದೈವವಾದ ಚಾಮುಂಡಿಯೊಂದಿಗೆ ಸಮೀಕರಿಸಿ ಕರೆಯುತ್ತಾರೆ. ಅಂಥ ಕಡೆ ಉತ್ಸವ ಸಂದರ್ಭದಲ್ಲಿ ವಿಷ್ಣುಮೂರ್ತಿಗೆ ಸ್ತ್ರೀ ಸ್ವರೂಪದ ದೈವಗಳು ಧರಿಸುವ ‘‘ತಲೆಮೂಡಲ್’’ ಎಂಬ ಕೆಂಪು ಶಿರೋವಸ್ತ್ರವನ್ನು ತೊಡಿಸುತ್ತಾರೆ. ಕೈಯಲ್ಲಿ ಬಿಲ್ಲು ಬಾಣಗಳಲ್ಲದೆ ಸ್ತ್ರೀ ದೈವಗಳು ಧರಿಸುವಂಥ ‘ಪಳ್ಳಿಬಾಳ್’ ಎಂಬ ಆಯುಧ ಕೂಡಾ ಇರುತ್ತದೆ.

ವಿಷ್ಣುಮೂರ್ತಿ ದೈವ ಎಂಬುದು ನರಸಿಂಹಾವತಾರದ ಪ್ರತೀಕ ಎನ್ನಲಾಗಿದೆ. ‘ಒತ್ತೆಕೋಲ’ ಎಂಬ ವಿಶೇಷ ಉತ್ಸವದಲ್ಲಿ ಸ್ತಂಭದಿಂದ ಪ್ರಕಟವಾಗುವ ಉಗ್ರ ನರಸಿಂಹನು ಹಿರಣ್ಯ ಕಶಿಪುವನ್ನು ಚಿತ್ರವಧೆ ಮಾಡಿದ ದೃಶ್ಯವನ್ನು ಆವೇಶ ಪೂರ್ಣವಾಗಿ ಅಭಿನಯಿಸಿ ತೋರಿಸಲಾಗುತ್ತದೆ. ದೈವವೇಷವನ್ನು ತೊಡುವವರು ಮಲೆಯರೆಂಬ ದೈವ ನರ್ತಕರು. ದರ್ಶನ ಪಾತ್ರಿಗಳಾಗಿ (ಬೆಳ್ಚಪಾಡರಾಗಿ) ಆವೇಶಗೊಳ್ಳುವವರು ತೀಯರು, ಮೋಯರು, ಗಾಣಿಗರು ಮೊದಲಾದವರು.

ಒತ್ತೆಕೋಲದಲ್ಲಿ ‘ಮೇಲೇರಿ’ ಎಂಬ ದೊಡ್ಡ ಕೆಂಡದ ರಾಶಿಯನ್ನು ಬೆಳ್ಚಪಾಡರು ಏರಿ ಇಳಿಯುವುದು ಹಾಗೂ ದೈವಕ್ಕೆ ಕಟ್ಟಿದವನು ಅದರಲ್ಲಿ ಹೊರಳುವುದು(೧೦೧ ಸಲ ಎನ್ನಲಾಗಿದೆ) ಮುಖ್ಯವಾಗಿದೆ. ಈ ಕೆಂಡದ ರಾಶಿಯನ್ನು ಶಿವನು ನರಸಿಂಹನ ಕೋಪಾವೇಶದಿಂದ ಪಾರಾಗಲು ತನ್ನ ಮೂರನೆಯ ಕಣ್ಣಿನಿಂದ ಸೃಷ್ಟಿಸಿದ್ದು ಎಂಬ ಹೇಳಿಕೆಯಿದೆ. ಹಿರಣ್ಯಕಶಿಪುವನ್ನು ಕೊಂದ ಮೈಲಿಗೆಯನ್ನು ಅಗ್ನಿಸ್ನಾನದಿಂದ ನರಹರಿ ಪರಿಹರಿಸಿಕೊಂಡನೆಂದು ಪ್ರತೀತಿ. ನರಸಿಂಹಾವತಾರ ಕಾಲದಲ್ಲಿ ಅಷ್ಟ ದಿಕ್ಪಾಲಕರಲ್ಲಿ ಒಬ್ಬನಾದ ಅಗ್ನಿ ತುಸು ಕುಹಕ ನಗೆ ಬೀರಿದನಂತೆ. ಅದಕ್ಕಾಗಿ ಅಗ್ನಿಯನ್ನು ಮೆಟ್ಟಿ ಮರ್ದಿಸುವ ಸಂಕೇತವಾಗಿ ಮೇಲೇರಿಯ ಆಚರಣೆ ಎನ್ನುವವರುಂಟು. ಇನ್ನೊಂದು ಹೇಳಿಕೆಯಂತೆ ಉಷಾ ಅನಿರುದ್ಧರ ಪ್ರಕರಣದಲ್ಲಿ ಬಾಣಾಸುರನಿಗೆ ಕೇತು ಭಂಗವಾಯಿತು. ಅವನ ಕೋಟೆಯ ರಕ್ಷಣೆಗೆ ಶಿವನಿದ್ದ. ಮಾಹೇಶ್ವರ ಜ್ವರವನ್ನು ಶಿವ ನಿರ್ಮಿಸಿದ. ಇದಕ್ಕೆ ಪ್ರತಿಯಾಗಿ ಶ್ರೀಕೃಷ್ಣ ವೈಷ್ಣವ ಜ್ವರವನ್ನು ಉಂಟು ಮಾಡಿದ! (ರೋಗಾಭಿಮಾನಿ ದೇವತೆಗಳ ಪ್ರಸ್ತಾವ ಹಲವು ಸಂಸ್ಕೃತಿಗಳಲ್ಲಿ ಕಂಡುಬರುತ್ತವೆ. ಸಿಂಹಳದಲ್ಲಿ ಹದಿನೆಂಟು ತರದ ಸನ್ನಿಗಳಿಗೆ ಬೇರೆ ಬೇರೆ ಯಕ್ಷರು ಕಾರಣವೆಂದು ನಂಬಿ ವಿದ್ಯುಕ್ತವಾಗಿ ಪೂಜಿಸುವ ಪರಿಪಾಠವಿದೆ.) ಈ ಜ್ವರಗಳೆರಡು ಪರಸ್ಪರ ಸಂಘರ್ಷಗೊಂಡವು. ವೈಷ್ಣವ ಜ್ವರ ತಾಪದ ಸಂಕೇತವೇ ‘ಮೇಲೇರಿ’ ಎಂಬ ಕಲ್ಪನೆಯನ್ನು ಮಾಡಿದವರಿದ್ದಾರೆ. ಹಾಗೆಯೇ ದೈವದ ಶಕ್ತಿ ಪರೀಕ್ಷೆಗೋಸ್ಕರ ಬಲಾಢ್ಯರು ಏರ್ಪಡಿಸಿದ ವ್ಯವಸ್ಥೆಯ ಪ್ರತೀಕವಿದು ಎಂಬ ಕಥೆಯೂ ಇದೆ.

ಒತ್ತೆಕೋಲದಲ್ಲಿ ತುಳು ದೈವಗಳ ಕೋಲ, ನೇಮಗಳಲ್ಲಿರುವಂತೆ (‘ಗಗ್ಗರದ ಎಚ್ಚಿ’ ಮತ್ತು ‘ಅಣಿಯಲ್ಲಾಗುವುದು’) ಎರಡು ಭಾಗಗಳಿವೆ. ಇದನ್ನು ಕುಳಿಚ್ಚಾಟ್ಟು ಮತ್ತು ಕೋಲಂ ಎನ್ನುತ್ತಾರೆ. ‘ಕುಳಿಚ್ಚಾಟ್ಟು’ (ಕುಳಿಚ್ಚು+ಪಾಟ್ಟು = ಮಿಂದು ಹಾಡುವಿಕೆ) ಮಿತ ಉಡುಗೆಯಿಂದ ಕೂಡಿದ ಪೂರ್ವರಂಗ. ಕೋಲದಲ್ಲಿ ತೆಂಗಿನ ಎಳೆಯ ಗರಿಯ ಸ್ತಂಭಾಕೃತಿಯ ತೊಡುಗೆಯನ್ನು ದೈವ ನರ್ತಕನು ಧರಿಸುತ್ತಾನೆ. ಸ್ತಂಭದಿಂದ ನರಸಿಂಹನು ಪ್ರಕಟನಾಗುವ ಪ್ರತೀಕ ಇದಾಗಿದೆ. ಸಿಂಹದ ಬಾಲದಾಕೃತಿಯನ್ನೂ ಧರಿಸುವುದಿದೆ. ‘ಕಂಬತ್ತಿಲ್ ಪೊಟ್ಟಿಪ್ಪಿಳರ್ನು (ಕಂಬವೊಡೆದು ಧುಮುಕಿದ) ಎಂದು ‘ತೋಟ್ರಂ’ ಹಾಡುವಾಗ ಹಲವಾರು ಬೆಳ್ಚಪ್ಪಾಡರಿಗೆ ಒಟ್ಟಿಗೇ ‘ದರ್ಶನ’ ಪ್ರಾರಂಭವಾಗುವ ದ್ಯಶ್ಯ ರೋಚಕವೆನಿಸುತ್ತದೆ.

ಒತ್ತೆಕೋಲ ಆರಾಧನೆಗೆ ಸಂಬಂಧಪಟ್ಟು ‘ಪಾಲಂದಾಯ ಕಣ್ಣ’ ಎಂಬ ಭಕ್ತನ ಕಥೆ ಪ್ರಾಶಸ್ತ್ಯವನ್ನು ಪಡೆದಿದೆ. ನೀಲೇಶ್ವರದ ಕೋಟಪುರಂ ಎಂಬಲ್ಲಿ ಕುರುವಾಟನ್ ಕುರುಪ್ಪು ಎಂಬ ನಾಯರ್ ಒಬ್ಬಾತನ (ಈತ ಕೋಲವರ್ಮನ್ ರಾಜನ ಕಾರ್ಯಸ್ಥ) ಮನೆಯಲ್ಲಿ ಊಳಿಗಕ್ಕೆ ಇದ್ದ ತೀಯರ ಹುಡುಗ ಕಣ್ಣ ಮಾವಿನ ಮರದಿಂದ ಬೀಳಿಸಿದ ಮಾವಿನ ಹಣ್ನು ಪ್ರಮಾದವಶಾತ್ ಮರದಡಿಯಲ್ಲಿದ್ದ ಯಜಮಾನನ ಮಗಳ ಎದೆಗೆ ಬೀಳುತ್ತದೆ. ಆಕೆ ಸಿಟ್ಟಾಗುತ್ತಾಳೆ. ಇದರ ಪರಿಣಾಮಕ್ಕೆ ಹೆದರಿ, ಕಣ್ಣ ಊರು ಬಿಟ್ಟು, ಉತ್ತರಕ್ಕೆ ಪಯಣಿಸಿ ಮಂಗಳೂರಿಗೆ ಬರುತ್ತಾನೆ. (ಕುರುವಾಟನ್ ಕುರುಪ್ಪಿನ ಮಗಳು ಚೆಲುವನಾಗಿದ್ದ ಕಣ್ಣನನ್ನು ಗುಪ್ತವಾಗಿ ಪ್ರೀತಿಸುತ್ತಿದ್ದಳೆಂದೂ ಮತ್ತೊಂದು ಹೇಳಿಕೆ ಇದೆ.) ಜಪ್ಪು ಕೊಯಿಲು ಕುಡುಪ್ಪಾಡಿ ಬೀಡಿನಲ್ಲಿದ್ದ ಬಿಲ್ಲವವರ್ಗದ ವೃದ್ಧೆ ತಂಡಲರ್ ಮಾದು ಈತನಿಗೆ ಆಶ್ರಯ ನೀಡುತ್ತಾಳೆ. ಕಾಲಾಂತರದಲ್ಲಿ ಆಕೆ ಆಸ್ತಿಪಾಸ್ತಿಗಳನ್ನು ಕಣ್ಣನಿಗೊಪ್ಪಿಸಿ, ವಿಷ್ಣುಮೂರ್ತಿಯ ಕಟಾಕ್ಷ ನಿನ್ನಲ್ಲಿದೆ; ಆ ದೈವವನ್ನು ಆರಾಧಿಸಿಕೊಂಡು ಬಾ’’ ಎಂದು ಆಶೀರ್ವದಿಸಿ ಅಸು ನೀಗುತ್ತಾಳೆ. ಕಣ್ಣನು ದೈವವನ್ನು ಭಯಭಕ್ತಿಯಿಂದ ಆರಾಧಿಸುತ್ತ ಅಲ್ಲಿಯೇ ಹನ್ನೆರಡು ವರ್ಷ ಇರುತ್ತಾನೆ.

ಒಮ್ಮೆ ದೈವ ಪ್ರೇರಣೆಯಂತೆ ಕಣ್ಣ ದೈವದ ಸುರಿಗೆಯೊಂದಿಗೆ ದಕ್ಷಿಣಕ್ಕೆ ಹೊರಡುತ್ತಾನೆ. ಅವನ ಮೇಲೆ ಆಗಾಗ ದೈವಾವೇಶ ಆಗುತ್ತಿರುತ್ತದೆ. ಕೀವೂರು ಚಾರ್ತಾವು (ಶಾಸ್ತಾವು) ದೇಗುಲವನ್ನು ಸಂದರ್ಶಿಸಿ ಮಂದೆ ಮೂಲಪಳ್ಳಿ ಎಂಬ ಕಮ್ಮಾರನ ಬಳಿಗೆ ಹೋಗಿ ಆಯುಧದ ಅಲಗನ್ನು ಪ್ರಶಸ್ತಗೊಳಿಸುತ್ತಾನೆ.

ಕಣ್ಣನು ಕೋಟಪುರಕ್ಕೆ ಮರಳಿದ್ದಾನೆಂದು ಸುದ್ದಿ ಕೇಳಿದ ಇವನ ಪೂರ್ವದ ಧನಿ, ರಹಸ್ಯವಾಗಿ ಅವನನ್ನು ಕೊಂದುಬಿಡುವಂತೆ ತನ್ನ ಅನುಚರರಿಗೆ ಆಜ್ಞಾಪಿಸುತ್ತಾನೆ. ಅವರು ಅಲ್ಲಲ್ಲಿ ನಿಂತು ಹೊಂಚು ಹಾಕುತ್ತಿರುತ್ತಾರೆ. ಒಮ್ಮೆ ಸ್ನಾನಕ್ಕೆಂದು ತೆರಳಿದ ಕಣ್ಣ ಅಲ್ಲಿನ ಕದಳಿಕೊಳದ ದಂಡೆಯ ಮೇಲೆ ಆಯುಧವನ್ನು ಇರಿಸಿ, ಸ್ನಾನಕ್ಕೆ ಇಳಿಯುತ್ತಾನೆ. ಅಡಗಿ ಹೊಂಚುಹಾಕುತ್ತಿದ್ದ ಧೂರ್ತರು ಕಣ್ಣನು ನೀರಲ್ಲಿ ಮುಳುಗಿ ಏಳುವುದರೊಳಗೆ ಅದೇ ಆಯುಧದಿಂದ ಅವನನ್ನು ಇರಿದುಕೊಂದು ಆಯುಧವನ್ನು ಅದೇ ಕೊಳಕ್ಕೆ ಬಿಸಾಡುತ್ತಾರೆ. ಅಲ್ಲಿದ್ದ ತಾವರೆಗಳೆಲ್ಲ ತರಿಯಲ್ಪಡುತ್ತವೆ. ಇಡೀ ಕೊಳ ಕೆಂಪಾಗುತ್ತದೆ!

ತನ್ನ ಭಕ್ತನಾದ ಕಣ್ಣನನ್ನು ಕೊಲೆ ಮಾಡಿಸಿದನೆಂಬ ಕ್ರೋಧದಿಂದ ವಿಷ್ಣುಮೂರ್ತಿ ವ್ಯಾಘ್ರರೂಪವನ್ನು ತಾಳಿ ಆ ಶ್ರೀಮಂತನ ಮನೆಯನ್ನೂ, ಹಟ್ಟಿಯನ್ನೂ ಹೊಕ್ಕು ಜೀವನಾಶ ಮಾಡುತ್ತಾನೆ. ಬೇರೆ ಗಂಡಾಂತರಗಳೂ ನಡೆಯುತ್ತವೆ. ಅಳಿದುಳಿದ ಮಂದಿ ಜ್ಯೋತಿಷ್ಯ ಪ್ರಶ್ನೆಯಲ್ಲಿ ವಿಚಾರಿಸಿದಾಗ, ಕಣ್ಣನೊಂದಿಗೆ ಬಂದ ದೈವಕ್ಕೆ ಗುಡಿಕಟ್ಟಿ ಕೋಲಕೊಟ್ಟು ನಂಬಿ ನಡೆಯತಕ್ಕದ್ದೆಂಬ ಸೂಚನೆ ಬರುತ್ತದೆ. ಆದರೆ ಬವರು ಬಡಪೆಟ್ಟಿಗೆ ಒಪ್ಪುವುದಿಲ್ಲ. ದೈವವನ್ನು ಪರೀಕ್ಷಿಸುವ ನೆವದಲ್ಲಿ ದೈವಕ್ಕೆ ಕಟ್ಟುವವರಿಗೆ ಪ್ರಾಣಾಪಾಯ ಬರುವಂಥ ವಿವಿಧ ತೊಂದರೆಗಳನ್ನು ಉಂಟು ಮಾಡುತ್ತಾರೆ. (‘ಮೇಲೇರಿ’ ಅಂಥದೊಂದು ಅಗ್ನಿಪರೀಕ್ಷೆ ಎನ್ನಲಾಗಿದೆ) ಕೊನೆಗೂ ಶರಣಾಗಿ ದೈವಕ್ಕೆ ಗುಡಿಕಟ್ಟಿಸಿ ನಂಬಿಕೊಂಡು ಬರುತ್ತಾರೆ. ಕೋಟಪುರದಲ್ಲಿ ‘ಎರಿಂಞ ಮಣಲ್ ಶ್ರೀವೈಕುಂಠ’ ಮತ್ತು ‘ಅಂಙಾಡಿ ಕೋಟಪುರಂ’ ಎಂಬ ಸ್ಥಾನಗಳು ನಿರ್ಮಾಣವಾಗುತ್ತವೆ. ಕಣ್ಣನಿಗೂ ದೈವಕಟ್ಟಿನಲ್ಲಿ ಸ್ಥಾನ ದೊರಕುತ್ತದೆ.

ಒತ್ತೆಕೋಲ ಉತ್ಸವವು ಕೆಲವೆಡೆ ವರ್ಷಂಪ್ರತಿ ನಿಶ್ಚಿತ ದಿನದಂದು ನಡೆಯುತ್ತದೆ. ಕೆಲವೊಮ್ಮೆ ಒಂದು ಮನೆಯವರ ಅಥವಾ ಊರವರ ವಿಶೇಷ ಹರಕೆಯಾಗಿಯೂ ನಡೆಯಬಹುದು.

ಒತ್ತೆಕೋಲದ ವಿಧಿವಿಧಾನಗಳನ್ನು ಸ್ಥೂಲವಾಗಿ ಹೀಗೆ ಹೇಳಬಹುದು. ಒತ್ತೆಕೋಲ ಜರಗುವುದಕ್ಕೆ ಕೆಲವು ದಿನ ಮೊದಲು ಕೆಂಡಸೇವೆಯ ಕಟ್ಟಿಗೆಯನ್ನು ವಿಧಿವತ್ತಾಗಿ ಪಡೆಯುವ ಕಾರ್ಯಕ್ರಮವಾಗಿ ‘ಮರದ ಮುಹೂರ್ತ’ ಜರಗುತ್ತದೆ. ನಿಶ್ಚಯ ಪಡಿಸಿದ ‘ಹಾಲುಳ್ಳ ಮರ’ದ (ಸಾಮಾನ್ಯವಾಗಿ ಹಲಸು) ಬುಡಕ್ಕೆ ಸಂಬಂಧಪಟ್ಟವರು ಶುದ್ಧದಲ್ಲಿ ಹೋಗಿ ಸ್ವಸ್ತಿಕವಿಟ್ಟು ಪ್ರಾರ್ಥನೆ ಸಲ್ಲಿಸುತ್ತಾರೆ. ಆಯುಧ ಪಾಣಿಗಳಾದ ವಿಷ್ಣುಮೂರ್ತಿಯ ಪಾತ್ರಿಗಳು ಆವೇಶಗೊಂಡು ಮರಕ್ಕೆ ಅರಸಿನದ ಹುಡಿಯ ಪ್ರಸಾದ ಇಕ್ಕುವರಲ್ಲದೆ, ಆಯುಧದಿಂದ ಮರಕ್ಕೆ ‘ಗಡಿ ಮಾಡುವ ಮೂಲಕ ‘ಮುಹೂರ್ತ’ ಮಾಡುತ್ತಾರೆ. ಬಳಿಕ ಊರ ಬಡಗಿಯು ಮರದ ಕೊಂಬೆಯ ಐದು ತುಂಡುಗಳನ್ನು ಕಡಿಯುತ್ತಾನೆ. ಅವುಗಳನ್ನು ವಾದ್ಯಾದಿ ಸಂಭ್ರಮಗಳೊಂದಿಗೆ ತಂದು ಒತ್ತೆಕೋಲ ಜರಗುವ ಬಯಲಿನಲ್ಲಿ ಹಾಕುತ್ತಾರೆ. ‘ದರ್ಶನದ ಪಾತ್ರಿಗಳು ನೆರೆದವರಿಗೆ ಅರಸಿನದ ಹುಡಿಯ ಪ್ರಸಾದ ನೀಡಿ ಅಭಯ ನೀಡುತ್ತಾರೆ. ಈ ಕಾರ್ಯಕ್ರಮವು ಒತ್ತೆಕೋಲದ ಸಂಕಲ್ಪ ವಿಧಿಯಾಗಿರುತ್ತದೆ.

ಊರವರು ಹಾಲುಳ್ಳ ಇತರ ಮರಗಳನ್ನೂ (ಆಲ, ಪಾಲೆ, ಇ) ಕಡಿದು ಕಟ್ಟಿಗೆ ಮಾಡಿ ತಂದು ಬಯಲಿನಲ್ಲಿ ಇಕ್ಕುತ್ತಾರೆ. ಒತ್ತೆಕೋಲದ ಮೊದಲ ದಿನದವರೆಗೂ ಈ ‘ಕೊಳ್ಳಿ’ಗಳ ಸಂಗ್ರಹ ನಡೆಯುತ್ತದೆ. ಸುಮಾರು ೧೫-೧೬ ಗಾಡಿಗಳಷ್ಟು ಕಟ್ಟಿಗೆ ಕೂಡುವುದುಂಟು.

ಒತ್ತೆಕೋಲದ ದಿನದಂದು ಬೆಳಗ್ಗೆ ಶೇಖರಣೆಯಾದ ಸೌದೆಯನ್ನು ಉತ್ಸವದ ಕಾರ್ಯಕರ್ತರು ಶುದ್ಧದಲ್ಲಿ ಚೌಕಾಕಾರದಲ್ಲಿ ನಿಶ್ಚಿತ ಆಯದಲ್ಲಿ ರಾಶಿಯೊಟ್ಟುತ್ತಾರೆ. ಹೀಗೆ ಜೋಡಿಸಿದ ಕಟ್ಟಿಗೆಯ ರಾಶಿ ೧೫ ರಿಂದ ೨೦ ಅಡಿ ಎತ್ತರವಿರುವುದುಂಟು.ಸುಮಾರು ೨೦-೨೫ ಅಡಿ ಉದ್ದಗಲವಿರುತ್ತದೆ. ಶಿಖರಕ್ಕೆ ತೆಂಗಿನ ಗರಿಯನ್ನು ಹೊದಿಸುತ್ತಾರೆ. ಉರಿಯುವಾಗ ಕೊಳ್ಳಿಯೊಂದೂ ಹೊರಕ್ಕೆ ಉರುಳದಂತಹ ರೀತಿಯಲ್ಲಿ ಕಲಾತ್ಮಕವಾಗಿ ಜೋಡಿಸುತ್ತಾರೆ.

ಇದರ ಎದುರಿಗೆ ಪೂರ್ವಾಭಿಮುಖವಾಗಿ ಸ್ವಲ್ಪ ದೂರದಲ್ಲಿ ಒಂದು ತಾತ್ಕಾಲಿಕ ಚಪ್ಪರವನ್ನು ತೆಂಗಿನ ಗರಿಗಳಿಂದ ನಿರ್ಮಿಸುತ್ತಾರೆ. ಚಪ್ಪರದ ಒಳಗೆ ಮೇಲು ಭಾಗದಲ್ಲಿ ಬಿಳಿ ಮಡಿಬಟ್ಟೆಯನ್ನು ಕಟ್ಟಿ ವೀಳೆಯದೆಲೆ, ಅಡಿಕೆಯ ಸಿಂಗಾರ (ಹಿಂಗಾರ)ಗಳಿಂದ ಅಲಂಕರಿಸುತ್ತಾರೆ. ಹೀಗೆ ಸಿದ್ಧವಾದ ಮಂಟಪಕ್ಕೆ ‘ಕೊಡಿಯಡಿ’ ಎಂದು ಹೆಸರು. ಪಕ್ಕದಲ್ಲಿ ಸೀಯಾಳ, ಬಾಳೆಗೊನೆ ಇತ್ಯಾದಿಗಳನ್ನು ಇರಿಸುವ ಕೊಟ್ಟಾರ (ಉಗ್ರಾಣ)ವಿರುತ್ತದೆ.

ಸಂಜೆಯ ವೇಳೆಗೆ ‘ಭಂಡಾರ ಏರುವ ಕಾರ್ಯಕ್ರಮ ನಡೆಯುತ್ತದೆ. ವಿಷ್ಣುಮೂರ್ತಿಯ ದೈವಸ್ಥಾನದಿಂದ ಅಥವಾ ತರವಾಡಿನಿಂದ ಭಂಡಾರ ಪರಿಕರಗಳನ್ನು (ಸುರಿಗೆ, ಬಿಲ್ಲುಬಾಣ, ಗುರಾಣಿ, ಪೀಠ, ಕಲಶ ಪಾತ್ರ, ಪೂಜಾ ವಸ್ತುಗಳು, ದೀವಟಿಗೆ, ಓಲೆಯ (ಹನೆಗರಿಯ) ಕೊಡೆ, ಟೆಕ್ಕೆ ಪಕ್ಕೆ ನಿಶಾನಿ, ದೀಪ, ಕಾಣಿಕೆ ಪಾತ್ರ ಇತ್ಯಾದಿ)’ ವ್ರತಸ್ಥರಾದ ವ್ಯಕ್ತಿಗಳು ವಿಧಿ ಪ್ರಕಾರ ಮೆರವಣಿಗೆಯಲ್ಲಿ ವಾದ್ಯ ಘೋಷದೊಂದಿಗೆ ಒತ್ತೆಕೋಲ ನಡೆಯುವಲ್ಲಿಗೆ ತರುತ್ತಾರೆ. ಬೇರೆ ಬೇರೆ ಸಮಾಜದವರಿಗೆ ಇಲ್ಲಿ ಪ್ರಾತಿನಿಧ್ಯವಿರುತ್ತದೆ.

ಹಲವಾರು ಮಂದಿ ಬೆಳ್ಚಪಾಡರು ದೈವದ ಆಯುಧಗಳನ್ನು ಧರಿಸಿ ಆದೇಶ ಪೂರ್ಣವಾಗಿ ಈ ಭಂಡಾರ ಏರುವಿಕೆಯಲ್ಲಿ ಭಾಗವಹಿಸುತ್ತಾರೆ. ಇವರಲ್ಲಿ ಹೆಚ್ಚಿನವರು ಮಲಯಾಳಿ ಒಲ್ಲವರು. ಮೋಯ, ಮಣಿಯಾಣಿ, ಶಾಲಿಯ, ವಾಣಿಯ ಮೊದಲಾದ ವರ್ಗದವರೂ ಬೆಳ್ಚಪಾಡರಾಗಿರುವುದುಂಟು. ದೈವಸ್ಥಾನದ ಭಂಡಾರದಲ್ಲಿ ‘ವಯನಾಡು ದೈವ’ವಿದ್ದರೆ ಆ ದೈವದ ಆಯುಧಗಳನ್ನೂ ತರಲಾಗುತ್ತದೆ.

ಭಂಡಾರ ಏರುವ ದಾರಿಯಲ್ಲಿ ಭಕ್ತಾದಿಗಳು ದಳಿ ತೋರಣ ಕಟ್ಟಿಸಿ ಭಂಡಾರಕ್ಕೆ ಸ್ವಾಗತ ಕೋರಿ ಕಾಣಿಕೆ ವಸ್ತುಗಳನ್ನು ಅರ್ಪಿಸುವುದಿದೆ. ದೈವ ಪಾತ್ರಿಗಳ ಆಶೀರ್ವಾದದ ನುಡಿಗಳನ್ನಾಡುತ್ತಾರೆ. ಇಂಥ ವೇಳೆ ಕೊಡೆ ಹಿಡಿದವನ ಆವೇಶ ಆಕರ್ಷಕವಾಗಿರುತ್ತದೆ.

ಒತ್ತೆಕೋಲದ ಬಯಲಿನ ಪ್ರವೇಶ ದ್ವಾರದಲ್ಲಿ ಅಲಂಕೃತ ‘ಮಕರ ತೋರಣ’ವಿರುತ್ತದೆ. ಭಂಡಾರವು ಅಲ್ಲಿಗೆ ತಲಪುವ ವೇಳೆಗೆ ಊರ ಹತ್ತು ಸಮಸ್ತರೆಲ್ಲ ನೆರೆದಿರುತ್ತಾರೆ. ಭಂಡಾರವು ‘ಮೇಲೇರಿ’ಗೆ ಮೂರು ಸುತ್ತು ಪ್ರದಕ್ಷಿಣೆ ಬಂದು, ಕೊಡಿಯಡಿಗೆ ಸಾಗುತ್ತದೆ. ಭಂಡಾರ ವಸ್ತುಗಳನ್ನೆಲ್ಲ ಓರಣವಾಗಿ ನಿಶ್ಚಿತ ಸ್ಥಾನದಲ್ಲಿ ಇರಿಸಿ ಧೂಪದಿಂದ ಶುದ್ದೀಕರಿಸುತ್ತಾರೆ.

ಮುಂದೆ ಕೊಡಿಯಡಿಯಲ್ಲಿ ‘ಪನಿಯಾರ’ (ನೈವೇದ್ಯ) ಬಡಿಸುವ ಕ್ರಿಯೆ ನಡೆಯುತ್ತದೆ. ಹದಿನಾರು ಬಾಳೆಯೆಲೆಗಳಲ್ಲಿ ನೈವೇದ್ಯ ವಸ್ತುಗಳನ್ನು ಸೀಯಾಳ, ಬಾಳೆಹಣ್ಣು, ತಾಂಬೂಲ, ಅಡಿಕೆ ಹೂ ಇತ್ಯಾದಿಗಳೊಂದಿಗೆ ಬಡಿಸುತ್ತಾರೆ. ಮತ್ತೊಮ್ಮೆ ಧೂಪಾರತಿ ನಡೆಯುತ್ತದೆ.

ಬಳಿಕ ‘ತೊಡಂಗಲ್’ (ಆರಂಭ) ನಡೆಯುತ್ತದೆ. ದೈವಕ್ಕೆ ಕಟ್ಟುವವನೂ ಅವನ ಜೊತೆಯವರೂ ಕೋಲಕ್ಕೆ ಸಂಬಂಧಿಸಿದ ‘ತೋಟ್ಟಂ’ ಎಂಬ ಮಲಯಾಳ ಸ್ತೋತ್ರ ಗೀತೆಯನ್ನು ಚರ್ಮ ವಾದ್ಯದೊಡನೆ ಹಾಡುತ್ತಾರೆ. ಇದು ಮುಖ್ಯವಾಗಿ ನರಸಿಂಹಾವತಾರದ ಕಥೆಯನ್ನು ಬಣ್ಣಿಸುತ್ತದೆ. ‘ಕಂಬತ್ತಿಲ್ ಪೊಟ್ಟಿಪ್ಪಿಳರ್ನು’(ಕಂಬವನ್ನು ಭೇದಿಸಿ ಪ್ರಕಟವಾದ) ಎಂದು ಉದ್ಗರಿಸುವಾಗ ಒಮ್ಮೆಲೆ ಎಲ್ಲ ಬೆಳ್ಚಪಾಡರಿಗೂ ಆವೇಶ ಪ್ರಾರಂಭವಾಗುತ್ತದೆ. ಎಲ್ಲರ ಕೈಗೆ ಆಯುಧ ನೀಡಲಾಗುತ್ತದೆ. ಅರ್ಚಕನು ಬಾಳೆಯಲೆಯಲ್ಲಿ ಐದು ವೀಳೆಯದೆಲೆ ಹಾಗೂ ಒಂದು ಅಡಕೆಯನ್ನಿಟ್ಟು ಅದರ ಮೇಲೆ ಐದು ಜ್ವಲಿಸುವ ಬತ್ತಿಗಳನ್ನಿರಿಸಿ ಮುಖ್ಯಸ್ಥನೊಬ್ಬನ ಕೈಗೆ ನೀಡುತ್ತಾನೆ. ಎಲ್ಲರೂ ಮೇಲೇರಿಯೆಡೆಗೆ ನಡೆಯುತ್ತಾರೆ. ಅರ್ಚಕನು ಸೀಯಾಳದ ನೀರನ್ನು ತಳಿದು ಮೇಲೇರಿಯನ್ನು ಶುದ್ದೀಕರಿಸುತ್ತಾನೆ. ಎಲ್ಲರೂ ಮೇಲೇರಿಗೆ ಮೂರು ಸುತ್ತು ಬರುತ್ತಾರೆ. ಮೇಲೇರಿಗೆ ಅಗ್ನಿ ಸ್ಪರ್ಶ ಮಾಡಲಾಗುತ್ತದೆ. ಸ್ವಲ್ಪವೇ ಹೊತ್ತಿನಲ್ಲಿ ಬೆಂಕಿ ಇಡೀ ಮೇಲೇರಿಯ ರಾಶಿಗೆ ವ್ಯಾಪಿಸಿ ಅದು ಜ್ವಾಲಾಮಯವಾದ ಅಗ್ನಿರಥದಂತೆ ಕಾಣಿಸುತ್ತದೆ. ಜನ ಆ ಧಗಧಗಿಸುವ ಬೆಂಕಿಯ ಪ್ರಚಂಡ ಉಷ್ಣತೆಯ ವಲಯದಿಂದ ದೂರ ಸರಿದು ನಿಲ್ಲುತ್ತಾರೆ. ಬೆಳ್ಚಪಾಡರು ಆರ್ಭಟಿಸುತ್ತಾ, ಆಯುಧಗಳನ್ನು ಹಿರಿಯುತ್ತಾ, ಆಗಾಗ ತಮ್ಮ ಹೆಗಲ ಮೇಲೆ ಆಯುಧ ಘಾತವನ್ನು ಮಾಡುತ್ತಾ ಮೇಲೇರಿಗೆ ಸುತ್ತುವರಿಯುತ್ತಿರುತ್ತಾರೆ. ಬಳಿಕ ಅವರಲ್ಲಿ ಹಲವರು ತಮ್ಮ ಜತೆಯವರೊಂದಿಗೆ ಆಸುಪಾಸಿನ ಊರುಗಳಿಗೆ ‘ದರ್ಶನದಲ್ಲಿಯೆ ತೆರಳಿ ಕಾಣಿಕೆಗಳನ್ನು ಪಡೆದು ಜನರಿಗೆ ಆಶೀರ್ವಾದ, ಆಭಯಗಳನ್ನು ನೀಡುತ್ತಾರೆ. ಈ ರೀತಿ ಸಂಚಾರ ಹೋಗುವುದಕ್ಕೆ ‘ತೆಂಡಲ್ ’ ಎನ್ನುತ್ತಾರೆ. ಊರಿಗೆ ಬರಬಹುದಾದ ‘ಮಾರಿ’(ರೋಗ ರುಜಿನಾದಿಗಳು)ಯ ನಿವಾರಣೆಯೇ ಇದರ ಉದ್ದೇಶ ಎನ್ನಲಾಗಿದೆ. (ಹಿಂದೆ ಸಾಂಕ್ರಾಮಿಕ ರೋಗಗಳ ಹಾವಳಿ ವಿಶೇಷವಾಗಿದ್ದಾಗ ಈ ರೀತಿಯ ಭರವಸೆ ಅನಿವಾರ್ಯವಾಗಿತ್ತು)

ಮೇಲೇರಿಯು ಜ್ವಲಿಸುತ್ತಾ ನಡುವಿರುಳಿನ ವೇಳೆ ಗಾತ್ರದಲ್ಲಿ ಕುಗ್ಗುತ್ತಿದ್ದಂತೆ ‘ಕುಳಿಚಾಟ್ಟು’ ಎಂಬ ಕೋಲದ ‘ಪೂರ್ವ ರಂಗ’ ವಿಧಿ ತೊಡಗುತ್ತದೆ. (ತುಳು ಸಂಪ್ರದಾಯದ ಕೋಲದಲ್ಲೂ ‘ಗಗ್ಗರದ ಎಚ್ಚಿ’ ಹಾಗೂ ‘ಅಣಿ ಹಾಕಿ ಕೋಲ’ ಎಂಬ ಕ್ರಮವಿದೆ) ದೈವಕ್ಕೆ ಕಟ್ಟುವ ‘ಮಲೆಯ’ ವರ್ಗದ ದೈವ ಕಲಾವಿದನಿಗೆ ಶುದ್ಧ ಸ್ನಾನಕ್ಕೆ ಎಣ್ಣೆಕೊಟ್ಟ ಬಳಿಕ ಆತ ಮಿಂದು ಬರುತ್ತಾನೆ. ಮಲೆಯ ಸ್ತೋತ್ರಕಾರರು ‘ತೋಟ್ಟಂ’ ಹಾಡುತ್ತಾರೆ.

ಮಿತವಾದ ವೇಷಭೂಷಣಗಳಿಂದ ಕೂಡಿದ ಕುಳಿಚ್ಚಾಟ್ಟು ದೈವ ನರ್ತಕ ವಿಷ್ಣುಮೂರ್ತಿಯ ಅವತಾರ ಲೀಲೆಗಳನ್ನು ಕಥಕ್ಕಳಿಯ ಮಾದರಿಯಲ್ಲಿ ಅಭಿನಯಿಸುತ್ತಾನೆ. ಉಗ್ರ ನರಸಿಂಹನು ಹಿರಣ್ಯ ಕಶಿಪುವನ್ನು ಸೀಳುವ ರೌದ್ರಾಭಿನಯ ರೋಮಾಂಚಕವಾಗಿರು ತ್ತದೆ. ಬೇರೆ ಬೇರೆ ವಾದ್ಯಗಳ ವಾದನಗಳಿಗನುಸಾರವಾಗಿ ನೃತ್ತ ನಡೆಯುತ್ತದೆ. ಇಲ್ಲಿ ಮಾತಿಗೆ ಅವಕಾಶವಿಲ್ಲ. ನೃತ್ಯಾಭಿನಯ ಕೌಶಲಕ್ಕೇ ವಿಶೇಷ ಪ್ರಾಶಸ್ತ್ಯ.

‘ಕುಳಿಚ್ಚಾಟು’ ಪೂರೈಸಿ ದೈವ ನರ್ತಕ ತುಸುವೇ ವಿಶ್ರಾಂತಿ ಪಡೆದು ಮತ್ತೆ ಪೂರ್ಣ ಪ್ರಮಾಣದ ವಿಷ್ಣುಮೂರ್ತಿಯ ದೈವ ವೇಷಕ್ಕೆ ಸಜ್ಜಾಗುತ್ತಾನೆ. ಮೇಲೇರಿಯ ಜ್ವಾಲೆಗಳು ಇಷ್ಟರಲ್ಲಿ ಶಮನವಾಗಿ ಕೆಂಡದ ರಾಶಿ ಕಣ್ಣು ಕುಕ್ಕುವಂತೆ ಕನಲುತ್ತಿರುತ್ತದೆ. ಮೇಲೇರಿಯ ಕಾರ್ಯಕರ್ತರು ಮೇಲೇರಿಯ ಕೆಂಡದ ರಾಶಿಯನ್ನು ಪ್ರಶಸ್ತಗೊಳಿಸಲು ಮುಂದಾಗುತ್ತಾರೆ. ಉರಿಯದಿರುವ ಕೊಳ್ಳಿಗಳನ್ನು ಪ್ರತ್ಯೇಕಿಸುತ್ತಾರೆ. ಕೆಂಡದ ರಾಶಿಯನ್ನು ಶಂಕು ಆಕಾರದಲ್ಲಿ ನೇರ್ಪುಗೊಳಿಸುತ್ತಾರೆ. ಸುಡುವ ನೆಲದಲ್ಲಿ ನಿಂತು ಮಾಡುವ ಈ ಕೆಲಸ ಸುಲಭವಾದುದೇ ನಲ್ಲ. ಈಗ ಮೇಲೇರಿ ಐದಾರು ಅಡಿ ಎತ್ತರವಾಗಿರುತ್ತದೆ.

ಈ ನಡುವೆ ಮಲೆಯನೊಬ್ಬ ‘ಪನಿಯನ್ ’ ಎಂಬ ಲಘುಪ್ರಕೃತಿಯ ದೈವದ ವೇಷ ತೊಟ್ಟು ಅಣಕವಾಡುತ್ತಾ ಬೆಂಕಿಗೆ ಬೆದರಿ ಹಿಮ್ಮೆಟ್ಟುವಂತೆ ಅಭಿನಯಿಸುತ್ತಾ ನೆರೆದವರಲ್ಲಿ ನಗು ಹುಟ್ಟಿಸುವುದಿದೆ. (ಒತ್ತೆ ಕೋಲದಂಥ ಗಂಭೀರ, ರೌದ್ರಾದ್ಭುತ ಕಲಾಪದೆಡೆಯಲ್ಲಿ ಇಂಥ ಹಾಸ್ಯಗರ್ಭಿತ ಸನ್ನಿವೇಶ ವಿಲಕ್ಷಣವೆನಿಸಿದರೂ ಇತರ ಕೆಲವು ದೈವ ಸೇವೆಗಳಲ್ಲೂ ಇಂಥ ‘ವಿಚಿತ್ರ’ ವೇಷಗಳು ಬರುವುದುಂಟೆಂಬುದನ್ನು ನೆನೆಯಬೇಕು. ಉದಾ : ತುಳುನಾಡಿನ ‘ಜಾಲಾಟ’ ವೆಂಬ ದೈವ ಜಾತ್ರೆಯಲ್ಲಿ ಹಲವು ಹಾಸ್ಯವೇಷಗಳು ಬರುತ್ತವೆ. ಮಲೆಯಾಳ ಸಂಪ್ರದಾಯದ ‘ಕಳಿಯಾಟಂ’ನಲ್ಲಿ ‘ಪೀಯಾಯಿ’ ಎಂಬ ವೇಷ ನಗುವನ್ನು ಉಕ್ಕಿಸುತ್ತದೆ. ಮನರಂಜನೆ ಹಾಗೂ ‘ರಸ ಸಮತೋಲನ ಇಂಥವುಗಳ ಉದ್ದೇಶವಾಗಿರಬೇಕು.)

ಇಷ್ಟರಲ್ಲಿ ವಿಷ್ಣುಮೂರ್ತಿ ದೈವದ ಪೂರ್ಣ ವೇಷ ಸಿದ್ಧವಾಗುತ್ತದೆ. ತೆಂಗಿನ ಎಳೆಯ ಗರಿಗಳ ಸ್ತಂಭಾಕೃತಿಯ ತೊಡುಗೆಯನ್ನು ದೈವ ನರ್ತಕನು ಧರಿಸುತ್ತಾನೆ. ಈ ತಿರಿಯ ತೊಡುಗೆಗೆ ‘ಅರೆಯೊಡ’ ಎನ್ನುತ್ತಾರೆ ಸ್ತಂಭದಿಂದ ನರಸಿಂಹನು ಪ್ರಕಟವಾಗುವ ಪ್ರತೀಕ ಇದಾಗಿದೆ. ಸಿಂಹದ ಬಾಲದಾಕೃತಿಯನ್ನು ಧರಿಸುವುದಿದೆ. ಮುಖ ವರ್ಣಿಕೆಯು ಕೆಂಪು, ಹಳದಿ, ಕಪ್ಪು ಬಣ್ಣಗಳ ವಿಶಿಷ್ಟ ರೇಖೆ, ಮುದ್ರೆ, ಚುಕ್ಕಿಗಳಿಂದ ಕೂಡಿರುತ್ತದೆ. ದೈವ ವೇಷದ ಸಿದ್ಧತೆಗೆ ತೆಂಗಿನ ಇಪ್ಪತ್ತೊಂದು ‘\ಙ’ (ಎಳೆಯ ಸೋಗೆ) ಮತ್ತು ಎರಡು ಬಾಳೆ ಬೇಕಾಗುತ್ತದೆ. ‘ಅರೆಯೊಡ’ದಿಂದ ಮೇಲಕ್ಕೆ ಚಾಚಿದ ಬಲಗೈಯಲ್ಲಿ ಸುರಿಗೆ ಹಾಗೂ ಬೆರಳಿಗೆ ಸಿಕ್ಕಿಸಿದ ಚೌರಿ ಮತ್ತು ಎಡಗೈಯಲ್ಲಿ ಬಿಲ್ಲು ಬಾಣಗಳನ್ನು ಧರಿಸಿರುತ್ತಾನೆ. ತಲೆಗೆ ‘ನೆತ್ತಿಪಟ್ಟ’ ಹೂವಿನ ದಂಡೆ ಹಾಗೂ ತೆಂಗಿನ ಗರಿಯ ಕಲಾತ್ಮಕವಾದ ಚಿಕ್ಕ ತಲೆ ತೊಡವು ಇರುತ್ತದೆ. ಕಿವಿಗಳಿಗೆ ಕಂಚಿನ ಕರ್ಣಾಭರಣವಿರುತ್ತದೆ. ಕೈಮೆಯ್‌ಗಳಿಗೆ ಅಕ್ಕಿಹಿಟ್ಟು, ಅರಸಿನ, ಚಂದನಗಳ ಲೇಪನವಿರುತ್ತದೆ. ಕೈಯ ಮಣಿಗಂಟಿಗೆ ‘\ಙ’ಯ ಬೀಸಣಿಗೆಯಂಥ ತೊಡವನ್ನು ಧರಿಸುತ್ತಾನೆ.

ಮುಂದೆ ‘ಕಲಸಾಟ್’ ಎಂಬ ವಿಧಿ ನಡೆಯುತ್ತದೆ. ಅರ್ಚಕನು ದೀಪದೊಂದಿಗೆ ಮೇಲೇರಿಯ ಬಳಿಗೆ ನಡೆದು ಮೇಲೇರಿಯನ್ನು ಶುದ್ಧಗೊಳಿಸಿ, ಧೂಪದ ತಟ್ಟೆಗೆ ಮೇಲೇರಿಯ ಕೆಂಡಗಳನ್ನು ತುಂಬಿ ತರುತ್ತಾನೆ. ಕೊಡಿಯಡಿಯಲ್ಲಿ ಆಯುಧಾದಿಗಳಿಗೆ ಧೂಪಾರತಿ ಜರಗುತ್ತದೆ. ಒಡನೆ ದೈವಾವೇಶಗೊಂಡ ಎಲ್ಲ ಬೆಳ್ಚಪಾಡರು ಕೊಡಿಯಡಿಯಿಂದ ಮೇಲೇರಿಯ ಕಡೆಗೆ ಧಾವಿಸಿ, ಪೂರ್ವಾಭಿಮುಖವಾಗಿ ರಭಸದಿಂದ ಮೇಲೇರಿಯನ್ನು ಏರಿ ಇಳಿಯುತ್ತಾರೆ. (ವಯನಾಡು ದೈವದ ಬೆಳ್ಚಪಾಡನಿದ್ದರೆ ಉತ್ತರದಿಂದ ಮೇಲೇರಿಯನ್ನೇರು ತ್ತಾನೆ.) ಈ ಎಲ್ಲಾ ಬೆಳ್ಚಪಾಡರು ಇಂಥ ಅಗ್ನಿ ಪರ್ವತಾರೋಹಣ ಮಾಡುವ ರೌದ್ರ ರೋಮಾಂಚಕ ದೃಶ್ಯವನ್ನು ವೀಕ್ಷಿಸುತ್ತ ನೋಟಕರು ನಿಬ್ಬೆರಗಾಗುತ್ತಾರೆ. (ಇಂಥ ವೇಳೆ ಬೆಂಕಿಯಿಂದ ಅಪಾಯವಾಗದಿರುವ ವಿದ್ಯಮಾನವನ್ನು ವಿಜ್ಞಾನವು ಬೇರೆಯೇ ಆದ ರೀತಿಯಲ್ಲಿ ವಿವರಿಸುತ್ತದೆ.)

ವಿಷ್ಣುಮೂರ್ತಿ ದೈವವೇಷಕ್ಕೆ ‘ಪೂವೇರಿ’ (ಅಕ್ಷತೆ) ಅರ್ಪಿಸಿದೊಡನೆ ದೈವವು ಆವೇಶ ಪೂರ್ಣವಾಗಿ ಅಗ್ನಿ ಪ್ರವೇಶ ಮಾಡಲು ಧಾವಿಸುತ್ತದೆ. ಕೆಂಡದ ರಾಶಿಯ ಮೇಲೆ ಅಂಗಾತ ಹಾಗೂ ಕವುಚಿ ಬಿದ್ದು ಕೆಂಡಸೇವೆಯನ್ನು ಕೈಗೊಳ್ಳುತ್ತದೆ. ಹೀಗೆ ನೂರ ಒಂದು ಬಾರಿ ಬೀಳುತ್ತದೆಂದು ಹೇಳಲಾಗುತ್ತದೆ. ಅಷ್ಟದಿಕ್ಕುಗಳಿಂದಲೂ ಅಗ್ನಿಸ್ಪರ್ಶ ನಡೆಯುತ್ತದೆ. ದೈವನರ್ತಕನು ಕೆಂಡಕ್ಕೆ ಎರಗಿದೊಡನೆ ಅವನ ಸಹಕಾರಿಗಳು ಅವನ ಸೊಂಟದ ತಿರಿಗಳನ್ನು ಹಿಡಿದು ಎಳೆದು ಮೇಲೆತ್ತಿ ನಿಲ್ಲಿಸುತ್ತಾರೆ. ಸಾಕಷ್ಟು ಆವರ್ತನೆಯಾದ ಮೇಲೆ ಕೊನೆಯಲ್ಲಿ ಎರಡು ಕೈಗಳಲ್ಲಿ ಎರಡು ಸುರಗಿಗಳನ್ನು ಧರಿಸಿ ಮೇಲೇರಿ ಕೈಕೊಳ್ಳುವ ಕಾರ್ಯವನ್ನು ಉಪಸಂಹರಿಸುತ್ತಾನೆ. ಬಳಿಕ ಸಂಬಂಧ ಪಟ್ಟವರು ದೈವದ ಜೊತೆಗೆ ಮಕರ ತೋರಣದ ಕಡೆಗೆ ತೆರಳುತ್ತಾರೆ. ವಿಶಿಷ್ಟ ಪೀಠದಲ್ಲಿ ಆಸೀನವಾದ ದೈವ ಸಿಂಹದ ಮೊಗ(ಮುಖವಾಡ) ಧರಿಸುವುದಿದೆ. ಅಲ್ಲಿಂದ ಎಲ್ಲರೂ ಕೊಡಿಯಡಿಗೆ ಬರುತ್ತಾರೆ. ಪ್ರಸಾದ ರೂಪದಲ್ಲಿ ಅಕ್ಕಿಕಾಳಿನ ವಿತರಣೆಯಾಗುತ್ತದೆ. ಭಕ್ತಾದಿಗಳಿಂದ ಕಾಣಿಕೆ ಸಲ್ಲಿಕೆ ಹಾಗೂ ಕಷ್ಟ ನಿವೇದನೆ ಇತ್ಯಾದಿ ನಡೆಯುತ್ತದೆ. ಕೆಲವೊಮ್ಮೆ ನ್ಯಾಯ ತೀರ್ಮಾನ ಜರಗುವುದೂ ಉಂಟು. ಈ ಸಂದರ್ಭದ ದೈವದ ಅಭಯ ಪ್ರಧಾನ ವಾಕ್ಯಗಳು ಕಾವ್ಯಾತ್ಮಕವೂ ಪರಿಣಾಮಕಾರಿಯೂ ಆಗಿರುತ್ತವೆ.

‘ಬಾರಣೆ’(ಪಾರಣೆ)ಗೆ ಮೊದಲು ಉಪಸ್ಥಿತ ಅತಿಥಿ ಅಭ್ಯಾಗತರಲ್ಲಿ ಪ್ರಮುಖರಾದವರಿಗೆ ಸೀಯಾಳದ ಮರ್ಯಾದೆ ಸಲ್ಲುತ್ತದೆ. ಪಾರಣೆಗೆ ಅರಳು, ಬೆಲ್ಲ, ತೆಂಗಿನಕಾಯಿ, ತುಪ್ಪ ಮತ್ತು ಸೀಯಾಳಗಳನ್ನು ಅರ್ಪಿಸುತ್ತಾರೆ. ಆಗ ದೈವವು ಅದರಿಂದ ಅರ್ಧಾಶವನ್ನು ಪ್ರತ್ಯೇಕಿಸಿ ‘ನೆಲ್ಲಿಕತೀಯ’ ಬಳಗದವರಿಗೆ ನೀಡುತ್ತದೆ. ಇದು ಪಾಲಂದಾಯಿ ಕಣ್ಣನ ನೆನಪಿಗಾಗಿ ಎಂದು ಪ್ರತೀತಿ. ಮುಂದೆ ‘ಕಲಶ’ ಮತ್ತು ‘ಮಾರಿಕಳ’ ವಿಧಿ ನಡೆಯುತ್ತದೆ. ಬಾಳೆಯ ಹಂಬೆಯ ಚೌಕಟ್ಟಿಗೆ ಎಳೆಯ ತೆಂಗಿನ ಗರಿಗಳನ್ನು ಕಲಾತ್ಮಕವಾಗಿ ಕತ್ತರಿಸಿ ಸಿಕ್ಕಿಸಿ ತಯಾರಿಸಿದ ‘ಬಲಿ’ ಎಂಬ ರಚನೆಯ ಮಧ್ಯದಲ್ಲಿ ಅಡಿಕೆಯ ಹಿಂಗಾರದಿಂದ ಅಲಂಕೃತವಾದ ಬೃಹತ್ ಕಲಶ ಪಾತ್ರವನ್ನಿಟ್ಟು ಅದರೊಳಗೆ ಕಳ್ಳು ಅಥವಾ ಸೀಯಾಳದ ನೀರನ್ನು ತುಂಬಿಸಿರುತ್ತಾರೆ. ಕಲಶ ಸೇವೆಯನ್ನು ಕೈಕೊಂಡ ಬಳಿಕ ‘ಮಾರಿಕಳ’ ಎಂಬ ರಕ್ತಬಲಿಯ ಕಾರ್ಯಕ್ರಮ. ಸ್ಥಳದ ಈಶಾನ್ಯದಿಕ್ಕಿನಲ್ಲಿ ಇದು ನಡೆಯುವುದು ವಾಡಿಕೆ. ದೈವ ನರ್ತಕನೂ ಬೆಳ್ಚಪಾಡರೇ ಮೊದಲಾದವರೂ ‘ಮಾರಿಗಳಿಗೆ’ (ಭೂತಗಣಗಳಿಗೆ) ಬಲಿ ನೀಡಲು ಅಲ್ಲಿಗೆ ತೆರಳುತ್ತಾರೆ. ಆಡುಗಳಂಥ ಪ್ರಾಣಿಗಳನ್ನು ಬಲಿ ನೀಡಬಹುದಾಗಿದ್ದರೂ ಹೆಚ್ಚಾಗಿ ಕೋಳಿಗಳನ್ನು ಮಾತ್ರ ಕೊಯ್ಯಲಾಗುತ್ತದೆ. ಇಲ್ಲಿ ಮಾರಿ ಮೊದಲಾದ ರೋಗ ದೇವತೆಗಳ ಪ್ರೀತ್ಯರ್ಥವಾಗಿ ಅರಳು, ತೆಂಗಿನಕಾಯಿ ಇತ್ಯಾದಿಗಳನ್ನು ಬಡಿಸುವುದಲ್ಲದೆ, ಬಾಳೆಕಾಯಿ, ಕುಂಬಳಕಾಯಿ ಹೋಳು ಇತ್ಯಾದಿಗಳನ್ನು ಅರಸಿನದಲ್ಲಿ ಬೆರಸಿ ಸುತ್ತಲೂ ಎರಚುವ ಪದ್ಧತಿ ಇದೆ. ಇದನ್ನು ‘ಇಂಡಿ ಎಸೆಯುವುದು’ ಎನ್ನುತ್ತಾರೆ. ಓಕುಳಿ ನೀರನ್ನು ಎರಚುತ್ತಾರೆ. ತಾಂತ್ರಿಕ ವಿಧಿಯಂತಿರುವ ಈ ‘ಅಸುರ ಕ್ರಿಯೆ’ಯ ಕಲಾಪಗಳು ರೋಗಾದಿಗಳ ನಿವಾರಣೆಯ ಆಶಯವುಳ್ಳದ್ದೆನಿಸುತ್ತದೆ.

ನಾಲ್ಕು ದಿಕ್ಕುಗಳಿಗೆ ಧಾವಿಸಿ ದೈವನರ್ತಕನೂ, ಬೆಳ್ಚಪಾಡರೂ ಆಯುಧದಿಂದ ಕಡಿದುಕೊಂಡು ಶಸ್ತ್ರ ಪವಾಡ ತೋರಿಸುತ್ತಾರೆ. ಅಲ್ಲಿಂದ ಹಿಂದಿರುಗಿದ ಮೇಲೆ ಉತ್ತರ ಭಾಗದಲ್ಲಿ ಪಾಲಂದಾಯಿ ಕಣ್ಣನ ಸಲುವಾಗಿ ಕೋಳಿಯೊಂದನ್ನು ಕೊಯ್ಯಲಾಗುತ್ತದೆ. ದೈವಕ್ಕೂ ಕೋಳಿಬಲಿ ಸಲ್ಲುತ್ತದೆ. ಇದನ್ನು ‘ಬಡಕಂಬಾದಲ್ ’ (ಉತ್ತರ ದಿಕ್ಕಿನಲ್ಲಿ ನಡೆಸುವ ವಿಧಿ) ಎನ್ನುತ್ತಾರೆ.

ಕೋಳಿಯನ್ನು ಕೊಯ್ದ ಆಯುಧಗಳನ್ನು ತೊಳೆದು ಧೂಪದ ಹೊಗೆಯಿಕ್ಕಿ ಶುದ್ದೀಕರಿಸಲಾಗುತ್ತದೆ. ಆ ಬಳಿಕ ಪ್ರಸಾದ ವಿತರಣೆ ನಡೆಯುತ್ತದೆ. ಅರಸಿನ ಹುಡಿಯೇ ಪ್ರಸಾದವಾಗಿದೆ. ಪ್ರಸಾದ ವಿತರಣೆಯಾದ ಮೇಲೆ ದೈವವು ಕಾಣಿಕೆಯ ಬಟ್ಟಲನ್ನು ಮುಖ್ಯಸ್ಥನ ಕೈಗೆ ನೀಡುತ್ತದೆ. ಸಮಷ್ಟಿಗೆ ಶುಭಾಶೀರ್ವಾದ ನೀಡಿದ ಬಳಿಕ ದೈವ ಉಪಸಂಹಾರ ಗೊಳ್ಳುತ್ತದೆ. ದೈವಕ್ಕೆ ಕಟ್ಟಿದವನಿಗೆ ಅದೇ ಸ್ಥಳದಲ್ಲಿ ಸಂಭಾವನೆ ಸಲ್ಲಿಸುವ ವಾಡಿಕೆಯೂ ಇದೆ.

ಭಂಡಾರ ಪರಿಕರಗಳನ್ನು ಮತ್ತೆ ಸ್ವಸ್ಥಾನಕ್ಕೆ ತಂದಿರಿಸಿ, ಧೂಪ ತೋರಿಸುತ್ತಾರೆ. ಉತ್ಸವದ ಅಂಗವಾಗಿ ಭೂರಿ ಸಮಾರಾಧನೆಯೂ ಇರುವುದುಂಟು.

‘ಬಯಲು ಕೋಲ’ ಎಂಬುದು ಒತ್ತೆ ಕೋಲದ ತುಸು ಚಿಕ್ಕರೂಪ ಎನ್ನಬಹುದು. ಇದರ ಮೇಲೇರಿಯ ಪ್ರಮಾಣ ಒತ್ತೆ ಕೋಲದಷ್ಟಿಲ್ಲ. ಈ ಕೋಲದಲ್ಲಿ ‘ಪೊಟ್ಟಂತೆಯ್ಯಂ’ ಎಂಬ ದೈವವೂ ಇರುವುದುಂಟು. ಈ ಕೆಳಗಿನ ಸ್ಥಳಗಳಲ್ಲಿ ಸಾಮಾನ್ಯವಾಗಿ ಒತ್ತೆಕೋಲ ಉತ್ಸವವು ಜರಗುತ್ತದೆ. ಕೊಲ್ಲ ಪದವು, ಸುಳ್ಯ ಪದವು, ಕುಳ, ಕುದ್ದು ಪದವು, ಬೆರಿಪದವು, ಗೂವೆತ ಪಡ್ಪು, ಮುಂಡಿತಡ್ಕ, ಬೇಳ, ಆರ್ಯಾಪು, ಸುಬ್ರಹ್ಮಣ್ಯ, ಮಾನ್ಯ, ಎಡನೀರು, ಮಾಯಿಪ್ಪಾಡಿ, ಕನ್ಯಾನ, ಜಪ್ಪು ಕುಡುಪಾಡಿ, ಉಪ್ಪಳ, ಪೈವಳಿಕೆ, ಅಟ್ಟಿಗೋಳಿ, ಆಲೆಟ್ಟಿ, ಅಡೂರು, ಕುಕ್ಕುಜಡ್ಕ, ಕೂಡ್ಲು, ಈಶ್ವರ ಮಂಗಲ, ಅನಂತಪುರ ಇತ್ಯಾದಿ.

‘ಕೆಂಡಸೇವೆ’ ಎಂಬುದು ‘ಒತ್ತೆಕೋಲ’ದಲ್ಲಿ ಮಾತ್ರವೇ ಇರತಕ್ಕ ವಿಧಿಯಲ್ಲ. ಹಲವು ಜನಪದ ದೇವತೆಗಳ ಉತ್ಸವ ಕಲಾಪಗಳಲ್ಲಿ ಕೆಂಡಸೇವೆ ಅಥವಾ ಕೊಂಡ ಹಾಯುವುದು ಒಂದು ಚಡಂಗು(ವಿಧಿ). ಕೇರಳ, ತುಳುನಾಡುಗಳಲ್ಲಿ ಮಾತ್ರವೇ ಅಲ್ಲ ಕರ್ಣಾಟಕದ ಅನೇಕ ಕಡೆಯೂ, ಇತರತ್ರವೂ ಈ ಪದ್ಧತಿ ರೂಢಿಯಲ್ಲಿದೆ. ಮಲಯ, ಮಾರಿಷಸ್ , ಫಿಜಿ, ಬಲ್ಗೇರಿಯಾ, ನ್ಯೂಜಿಲೇಂಡ್ ದೇಶಗಳಲ್ಲಿಯೂ ಈ ಸಂಪ್ರದಾಯ ಜನಪದ ಮಟ್ಟದಲ್ಲಿ ಉಳಿದಿದೆ. ಗ್ರೀಸ್, ಚೈನಾ, ಜಪಾನ್, ಈಜಿಪ್ಟ್ ಮೊದಲಾದ ದೇಶಗಳ ಕೆಲವು ಜನಾಂಗಗಳಲ್ಲಿ ಈ ಪದ್ಧತಿ ರೂಢಿಯಲ್ಲಿತ್ತು. ಬೆಂಕಿಗೆ ಹಾಯುವ ಅಥವಾ ಕೆಂಡದ ಮೇಲೆ ನಡೆಯುವ ಆಚರಣೆ ಬೇರೆ ಬೇರೆ ಕಾರಣಗಳಿಗೋಸ್ಕರ ಬೇರೆ ಬೇರೆ ಕಡೆ ಬೆಳೆದು ಬಂದಿದೆ.

ತಾವು ಪೂಜಿಸುವ ದೇವತೆಗಳನ್ನು ಮೆಚ್ಚಿಸಲೆಂದೋ ತಮಗೂ ತಮ್ಮ ಕುಟುಂಬಕ್ಕೂ ಒಳಿತಾಗಲೆಂದೋ ಹರಕೆ ಹೊತ್ತುಕೊಂಡು ಆ ದೇವತೆಗಳ ಉತ್ಸವ ಸಂದರ್ಭದಲ್ಲಿ ಕೆಂಡದ ರಾಶಿಯ ಮೇಲೆ ಬರಿಗಾಲಲ್ಲಿ ನಡೆಯುವ ಕ್ರಿಯೆಯೇ ಕೆಂಡ ಹಾಯುವುದು, ಕೆಲವೊಮ್ಮೆ ಕೆಂಡದ ರಾಶಿಯ ಮೇಲೆ ಅತ್ತಿತ್ತ ಓಡಾಡುವುದೂ, ಕೆಂಡದ ಮೇಲೆ ಹೊರಳಾಡುವುದು, ಕೆಂಡವನ್ನು ಮೈ ಮೇಲೆ ಸುರುವಿಕೊಳ್ಳುವುದೂ ಉಂಟು. ಇಂಥ ಹರಕೆ ಒಪ್ಪಿಸಿಕೊಳ್ಳುವ ದೇವತೆಗಳು ಸಾಮಾನ್ಯವಾಗಿ ಉಗ್ರದೇವತೆಗಳು.

ಪಟ್ಲದಮ್ಮ, ಮದ್ದೂರಮ್ಮ, ಕಾಳಿಕಾದೇವಿ, ಮೋಗರಮ್ಮ ಇತ್ಯಾದಿ ಅನೇಕ ಹೆಸರುಗಳಿಂದ ಕರೆಸಿಕೊಳ್ಳುವ ‘ಮಾರಿ’ ಅಥವಾ ಮಾರಮ್ಮನ ಹೆಸರಲ್ಲಿ ಕೊಂಡ ಹಾಯುವ ಪದ್ಧತಿ ರೂಢಿಯಲ್ಲಿದೆ… ಸಾಮಾನ್ಯವಾಗಿ ಬೆಳಗಿನ ಜಾವದಲ್ಲಿ ಅಥವಾ ಉರಿ ಬಿಸಿಲಲ್ಲಿ ಕೊಂಡ ಹಾಯುವ ಕ್ರಿಯೆ ನಡೆಯುತ್ತದೆ. ದೇವತೆಗಳ ಉಗ್ರತೆಗೆ ಅಥವಾ ಶಕ್ತಿ ಸಾಮರ್ಥ್ಯಗಳಿಗೆ ಅನುಗುಣವಾಗಿ ಕೊಂಡಗಳ ವಿಸ್ತಾರದಲ್ಲೂ ಹೆಚ್ಚು ಕಡಿಮೆ ಇರುತ್ತದೆ. ಸಾತ್ವಿಕ ದೇವತೆಗಳ ಹೆಸರಲ್ಲಿ ಅಪೂರ್ವವಾದರೂ ಬಸವೇಶ್ವರ ಮೊದಲಾದ ದೇವತೆಗಳ ಹೆಸರಲ್ಲಿ ಕೊಂಡ ನಡೆಯುವುದನ್ನು ಕಾಣಬಹುದಾಗಿದೆ. ಮುಸಲ್ಮಾನ ದೇವತೆಗಳ ಹೆಸರಲ್ಲೂ ಕೊಂಡ ಹಾಯುವ ಪದ್ಧತಿಯುಂಟು. ಮೊಹರಂ ಹಬ್ಬದ ಸಂದರ್ಭದಲ್ಲಿ ಹಳ್ಳಿಯ ಕಡೆ ಬಾಬಯ್ಯನ ಹೆಸರಿನಲ್ಲಿ ವೃತ್ತಾಕಾರದ ಮಂಡಲದಲ್ಲಿ ಮೂರುಬಾರಿ ಕೊಂಡ ಹಾಯುವುದುಂಟು…

…ಊರೆಲ್ಲಾ ಮೆರವಣಿಗೆ ಬಂದ ಪೂಜಾರಿ ಮತ್ತು ಹರಕೆ ಕಟ್ಟಿಕೊಂಡ ಭಕ್ತರು ಕೊಂಡಕ್ಕೆ ಮೂರು ಬಾರಿ ಪ್ರದಕ್ಷಿಣೆ ಬಂದ ಮೇಲೆ ಒಂದು ಕಡೆಯಿಂದ ನುಗ್ಗಿ ಮತ್ತೊಂದೆಡೆಯಿಂದ ಹೊರಗೆ ಬರುತ್ತಾರೆ. ದೇವರನ್ನೋ ನೀರಿನ ಗಡಿಗೆಯನ್ನೋ ಹೊತ್ತ ಪೂಜಾರಿ ಮೊದಲು ಕೆಂಡ ನುಗ್ಗುತ್ತಾನೆ. ಅವನ ಹಿಂದೆ ಹರಕೆ ಕಟ್ಟಿಕೊಂಡ ಭಕ್ತರ ಸಮೂಹ ಕೆಂಡ ಹಾಯುತ್ತದೆ. ಕೆಲವು ಭಾಗದ ಪೂಜಾರಿಗಳ ಕೈಯಲ್ಲಿ ದೇವತೆಯ ಶಕ್ತಿ ಸ್ವರೂಪಗಳ ಪ್ರತೀಕವಾಗಿ ಖಡ್ಗ ಇರುತ್ತದೆ. ಕೆಲವರು ಬಾಯಿಗೆ ‘ಬೀಗ’ ಚುಚ್ಚಿಕೊಂಡು ಕೊಂಡ ಹಾಯುತ್ತಾರೆ. ಕೊಂಡ ಹಾಯುವ ಸಂದರ್ಭದಲ್ಲಿ ಕೆಲವು ಕಡೆ ಕುರಿಯನ್ನು ಬಲಿಕೊಡುವ ಸಂಪ್ರದಾಯವಿದೆ. ಪೂಜಾರಿ ಮತ್ತು ಹರಕೆ ಕಟ್ಟಿಕೊಂಡವರು ಅಂದೆಲ್ಲ ಕಟ್ಟುಪವಾಸ ಮಾಡಿ ಶುಚಿರ್ಭೂತರಾಗುತ್ತಾರೆ. ಕೆಂಡ ಹಾಯುವ ಭಯ ಅವರಾರಲ್ಲೂ ಇಲ್ಲದಿರುವುದು, ಅವರು ಕೊಂಡದಲ್ಲಿ ತುಳಿದ ಬೆಂಕಿಯಿಂದಾಗಿ ಯಾರ ಕಾಲೂ ಸುಟ್ಟು ಬೊಬ್ಬೆಯೇಳದಿರುವುದು, ಬೆಂಕಿ ಯಾರನ್ನೂ ಸುಡದಿರುವುದು ಸೋಜಿಗದ ಸಂಗತಿಗಳಾಗಿ ಕಾಣುತ್ತವೆ.’’(ಕನ್ನಡ ಜಾನಪದ ವಿಶ್ವಕೋಶ, ೧೯೮೫, ಪು.೫೦೦)

ಒಬ್ಬ ವ್ಯಕ್ತಿ ಅಪರಾಧಿಯೇ ಅಥವಾ ನಿರಪರಾಧಿಯೇ ಎಂದು ಗುರುತಿಸಲು ಹಿಂದೆ ಕೆಲವು ಬಗೆಯ, ‘ದಿವ್ಯ’ಗಳನ್ನು ನಡೆಸುತ್ತಿದ್ದುದು ತಿಳಿದುಬರುತ್ತದೆ. ಅವುಗಳಲ್ಲಿ ‘ಅಗ್ನಿದಿವ್ಯ’ವೂ ಒಂದು. ಸೀತೆಯ ಅಗ್ನಿ ಪ್ರವೇಶ ಪ್ರಸಿದ್ಧವಾದ ಪೌರಾಣಿಕ ಪ್ರಸಂಗ, ಚಾರಿತ್ರಿಕ ಕಾಲದಲ್ಲಿಯೂ ಇಂಥ ‘ಸತ್ಯ ಪ್ರಮಾಣ’ ನಡೆಯುತ್ತಿರಬಹುದು.

ಭಾರತದಲ್ಲಿ ಧಾರ್ಮಿಕ ಬಲಿದಾನ ಪದ್ಧತಿ ಬಹಳ ಪ್ರಾಚೀನವಾದದ್ದು. ದೇವರಿಗಾಗಿ ಕೈಕೊಳ್ಳುವ ಬಲಿದಾನದಿಂದ ಸದ್ಗತಿ ಸಾಧ್ಯವೆಂಬ ನಂಬಿಕೆಯಿಂದ ಸೂರ್ಯಗ್ರಹಣದಂಥ ಪರ್ವದಿನಗಳಂದು ಅಗ್ನಿಪ್ರವೇಶ ಮಾಡಿದ ಉಲ್ಲೇಖಗಳು ಶಾಸನಗಳಲ್ಲಿ ದೊರಕುತ್ತವೆ.

ಲೌಕಿಕ ಬಲಿದಾನ ಮರಣದ ನೂರಾರು ಉದಾಹರಣೆಗಳು ನಮಗೆ ಶಾಸನಗಳಲ್ಲಿ ದೊರುಕ್ತವೆ. ರಾಜನಿಗಾಗಿ ವೀರಭತ್ಯರು ಪತಿಗಾಗಿ ಪತ್ನಿ ಪ್ರಿಯ ವ್ಯಕ್ತಿಗಾಗಿ ಇಷ್ಟವ್ಯಕ್ತಿಗಳು ವಿವಿಧ ರೀತಿಗಳಲ್ಲಿ ಪ್ರಾಣಾರ್ಪಣೆ ಮಾಡಿದ ಉಲ್ಲೇಖಗಳಿವೆ. ಅಗ್ನಿ ಪ್ರವೇಶ ಅವುಗಳಲ್ಲಿ ಮುಖ್ಯವಾದುದು. ಹೀಗೆ ಪ್ರಾಣವನ್ನು ತೆತ್ತವರ ಸಲುವಾಗಿ ಸ್ಥಾಪಿಸಿದ ವೀರಗಲ್ಲುಗಳೂ ಮಾಸ್ತಿಕಲ್ಲುಗಳೂ ಆ ಸಂಬಂಧವಾದ ಕಲ್ಬರಹಗಳೂ ನಮ್ಮ ನಾಡಿನಲ್ಲಿ ಹೇರಳವಾಗಿದೆ. ಜನಪದ ಕಥೆಗಳಲ್ಲೂ ಈ ಕುರಿತು ಸಾಕಷ್ಟು ಉಲ್ಲೇಖಗಳಿವೆ.

ತಮ್ಮ ಒಡೆಯರಿಗಾಗಿ ತಮ್ಮ ಜೀವನವನ್ನು ಮೀಸಲಾಗಿಟ್ಟವರನ್ನು ವೇಳವಾಳಿ (ವೇಳವಡಿಚ, ಬೆಳವಡಿಚ) ಲೆಂಕ, ಲೆಂಕವಾಳಿ, ಕೀಳ್ಗುಂಟೆ ಇತ್ಯಾದಿಯಾಗಿ ಕರೆಯುತ್ತಿದ್ದರು. ೧೨೨೦ರ ಹಳೇಬೀಡು ಶಾಸನವು ಕುವರ ಲಕ್ಷ್ಮ ಆತನ ಸತಿ ಸುಗ್ಗಲೆ ಮತ್ತು ‘ಲೆಂಕ ಸಾಸಿರ್ವರು’ ಹೊಯ್ಸಳ ರಾಜನ ಮರಣ ಸಂದರ್ಭದಲ್ಲಿ ಪ್ರಾಣಾರ್ಪಣೆ ಮಾಡಿದುದನ್ನು ತಿಳಿಸುತ್ತದೆ. ಇವರನ್ನು ಗರುಡರೆಂದೂ ಕರೆಯುತ್ತಾರೆ. ಅಗ್ನಿ ಪ್ರವೇಶ ಮಾಡಿ ಕಾಯವನ್ನು ಕಳೆದುಕೊಳ್ಳುವವರಿಗೆ ವೇಳವಾಳಿ (ಬೇಳ್ =ಸುಡು) ಎಂದು ಹೆಸರು ಅರ್ಥವತ್ತಾಗಿದೆ. ‘ವೆಳಿಚಪ್ಪಾಡ್ ’ (ದೈವಪಾತ್ರಿ) ಎಂಬ ಶಬ್ದ ವೇಳವಾಳಿಗೆ ಸಂಬಂಧಿಸಿರಬೇಕೆನಿಸುತ್ತದೆ. ಹೆಚ್ಚಿನ ವೆಳಿಚಪ್ಪಾಡರಿಗೆ ಕೆಂಡ ಹಾಯುವ ಕರ್ತವ್ಯ ಇರುತ್ತದೆ. ‘ವೆಳ್ಚಪ್ಪಾಡರು’ (ದರ್ಶನ ಪಾತ್ರಿಗಳು) ಅನೇಕ ಸಮಾಜಗಳಲ್ಲಿ ದೈವಸೇವೆಯನ್ನು ಮಾಡುತ್ತಿರಬಹುದಾದರೂ ತೀಯಾ (ಮಲೆಯಾಳ ಬಿಲ್ಲವ) ಸಮಾಜಕ್ಕೆ ‘ಬೆಳ್ಚಾಡ’ ಎಂಬ ಹೆಸರೂ ಪ್ರಚಲಿತವಿರಲು ಆ ಸಮಾಜದಲ್ಲಿ ಒಂದು ಕಾಲದಲ್ಲಿ ಒತ್ತೆಕೋಲದ ದರ್ಶನ ಪಾತ್ರಿಗಳು ವಿಪುಲ ಸಂಖ್ಯೆಯಲ್ಲಿದ್ದುದೇ ಕಾರಣವಾಗಿದೆಯೆನ್ನಬೇಕು.

ಭಗವತೀ ಸಂಬಂಧವಾದ ನಡಾವಳಿ ಉತ್ಸವದಲ್ಲಿ ‘ಕೆಂಡಸೇವೆ’ ಸಾಮಾನ್ಯವಾಗಿರುತ್ತದೆ. ವೀರಮ್ಮಾರ್ ಎಂಬ ಬ್ರಾಹ್ಮಣ ಮೂಲದ ದೈವವನ್ನುಳಿದು ಉಳಿದೆಲ್ಲ ದೈವಗಳು ಕೆಂಡಸೇವೆಯನ್ನು ಸ್ವೀಕರಿಸುತ್ತವೆ. ದೈವಗಳ ಅಂತಸ್ತಿಗನುಗುಣವಾಗಿ ಆನುಪೂರ್ವಿ ಇರುತ್ತದೆ. ದೈವ ಕೈ ಹಿಡಿದವರಿಗೆ ಬೆಂಕಿಯ ಬಿಸಿಯೂ ನಾಟದು ಎಂಬುದನ್ನು ಕಾಣಿಸಲೆಂದು ದೈವಪಾತ್ರಿಗಳು ಕಾರ್ಣವರೇ ಮೊದಲಾದ ‘ಶುದ್ಧ’ದಲ್ಲಿ ಇರತಕ್ಕ ಕಾರ್ಯಕರ್ತರೂ ತಮ್ಮ ಜೊತೆಯಲ್ಲಿ ಕೆಂಡವನ್ನು ತುಳಿಯುವಂತೆ ಮಾಡುತ್ತಾರೆ.

ಕುಂದಾಪುರ ಕಡೆ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಹಾಯ್ಗುಳಿ, ಚಿಕ್ಕು ಇತ್ಯಾದಿ ದೇವತೆಗಳ ಪ್ರೀತ್ಯರ್ಥವಾಗಿ ‘ಗೆಂಡ’ ಎಂಬ ಕೆಂಡಸೇವೆ ನಡೆಸುತ್ತಾರೆ. ತುಳುನಾಡಿನ ಕೆಲವು ದೈವಕೋಲಗಳಲ್ಲಿ (ಗುಳಿಗ, ಕಲ್ಲುರ್ಟಿ, ರಕ್ತೇಶ್ವರಿ ಇತ್ಯಾದಿ ದೈವಗಳ ಕೋಲಗಳಲ್ಲಿ) ಚಿಕ್ಕ ಕೆಂಡದ ರಾಶಿಯನ್ನು ಕೆಂಡಸೇವೆಗಾಗಿ ಬಳಸುತ್ತಾರೆ.

ನಾನಾ ಐತಿಹಾಸಿಕ ಕಾರಣಗಳಿಗೋಸ್ಕರ ಕೆಂಡ ತುಳಿಯುವ ಪದ್ಧತಿ ಬೆಳೆದು ಬಂದುದಾಗಿದೆ. ದೈವಗಳ ಮಹಿಮೆಯನ್ನು ಸಾರುವ ಒಂದು ಕಲಾಪವಾಗಿ ಇದು ಕಾಣಿಸಿದರೂ ಯಾವುದೋ ಐತಿಹಾಸಿಕ ಪ್ರಸಂಗದ ಪುನರಭಿನಯ ಇಲ್ಲಿ ನಡೆಯುತ್ತದೆನ್ನಬಹುದು.

ಐತಿಹಾಸಿಕ ವ್ಯಕ್ತಿಯಾಗಿದ್ದ ಹೊಯ್ಸಳ ರಾಜ ವಿಷ್ಣುವರ್ಧನನೇ ದೈವೀಕರಣಗೊಂಡು ವಿಷ್ಣುಮೂರ್ತಿಯಾಗಿರಬಹುದೇ ಎಂಬ ಅಭಿಪ್ರಾಯವೊಂದು ವಿಚಾರಣೀಯವಾಗಿದೆ. (Vaishnavism was very popular in Tuluva country during the 13th century under Vishnuvardhana of the Hoysals. He was a great champion of Vaihnavism. Most probably he was dified as  Vishnumoorthy and propitiated in the Bhoota eult of Tuluva and then propitiated as a prominent folk deity in the Teyyam Cult also- Dr.K.K.N.Kurup, 1986, Pp.18)

ಇತಿಹಾಸದಲ್ಲಿ ಸಂದು ಹೋದ ಅದೆಷ್ಟೋ ವ್ಯಕ್ತಿಗಳು ದೈವಗಳ ನೆಲೆಯನ್ನು ಮುಟ್ಟಿದ ಉದಾಹರಣೆಗಳಿರುವಾಗ ಈ ಸಂಭಾವ್ಯತೆಯನ್ನು ಅಲ್ಲಗಳೆಯಲಾಗುವುದಿಲ್ಲ. ಇತಿಹಾಸದ ಅದೆಷ್ಟೋ ಘಟನೆಗಳು ಪುರಾಣೀಕೃತವಾಗಿಬಿಡುವುದು ಸಾಮಾನ್ಯ ವಿದ್ಯಮಾನ.

ಪರಾಮರ್ಶನ ಸಾಹಿತ್ಯ

೧. ಸಿ.ಗೋಪಾಲಕೃಷ್ಣ ಶಾಸ್ತ್ರಿ, ಮೂಡಂಬೈಲು, ಒತ್ತೆಕೋಲ’(ಲೇಖನ), ಸುದರ್ಶನ’, ಪು.೧೫೯ ಡಾ.ಟಿ.ಎಮ್.ಎ.ಪೈ ಅಭಿನಂದನ ಗ್ರಂಥ,  ವಿಜಯ ಕಾಲೇಜ್ ಟ್ರಸ್ಟ್, ಮಾಲ್ಕಿ, ದ.ಕ., ೧೯೭೭

೨. ಪ್ರದೀಪ ಬೇಕಲ್, ವೈದಿಕಜಾನಪದ ಆಚರಣೆಗಳ ಸಂಗಮ ಒತ್ತೆಕೋಲ (ಲೇಖನ), ಉದಯವಾಣಿ ೬-೧-೨೦೦೫, ಮಣಿಪಾಲ

೩. ಅಮೃತ ಸೋಮೇಶ್ವರ, ಭಗವತೀ ಆರಾಧನೆ, ಪ್ರಕೃತಿ ಪ್ರಕಾಶನ, ಕೋಟೆಕಾರು, ದ.ಕ., ೧೯೯೮

೪. Dr. K.K.N.Kurup,’Teyyam’ Dept of Public Relation govt of Kerala, 1986