ತುಳುನಾಡಿನ ಸಂಸ್ಕೃತಿಯ ಮುಖ್ಯ ಅಂಗವಾದ ಭೂತಾರಾಧನೆಗೆ ಸಂಬಂಧಪಟ್ಟ ಅಥವಾ ಭೂತ ಚರಿತ್ರೆಗೆ ಸಂಬಂಧಿಸಿದ ಪಾಡ್ದನ(ಪಾರ್ದನ) ಇಲ್ಲವೆ ಸಂಧಿಗಳ ಸಂಹಿತೆಯನ್ನು ತುಳುನಾಡಿನ ಪುರಾಣ ಸಮುಚ್ಚಯವೆನ್ನಲು ಅಡ್ಡಿಯಿಲ್ಲ. ದೈವಗಳನ್ನು ಆವೇಶ ಬರಿಸುವ ಕಾರ್ಯಕ್ರಮದ ಅಂಗವಾಗಿ ಆಯಾ ದೈವದ ಹುಟ್ಟುಕಟ್ಟು, ಆಯಬೀರ, ಕಲೆಕಾರಣಿಕಗಳನ್ನು ವಿಶಿಷ್ಟವಾದ ಶೈಲಿಯಲ್ಲಿ ನಿರೂಪಿಸುವ ಜನಪದ ಕಥನಕಾವ್ಯಗಳೇ ಪಾಡ್ದನಗಳು. ಈ ಪಾಡ್ದನ ಪ್ರಪಂಚ ವಿಸ್ತಾರವೂ, ವೈವಿಧ್ಯಪೂರ್ಣವೂ ಆಗಿದ್ದು, ತುಳುನಾಡಿನ ಬದುಕಿನ ನೂರಾರು ಬಿಂಬಗಳನ್ನು ಕಾವ್ಯಾತ್ಮಕವಾಗಿ ನೀಡಲು ಶಕ್ತವಾಗಿದೆ. ಇತಿಹಾಸದ ಕೆಲವು ಎಳೆಗಳು ಈ ಪಾಡ್ದನಗಳಲ್ಲಿ ಪೋಣಿಸಲ್ಪಟ್ಟಿರುವುದು ಅಸಂಭವವೇನಲ್ಲ. ಹಾಗಾಗಿ ಇತಿಹಾಸದ ಮರುಸೃಷ್ಟಿಯಲ್ಲಿ, ಸೂಕ್ಷ್ಮಜ್ಞರಾದ ಇತಿಹಾಸಕಾರರಿಗೆ ಪಾಡ್ದನದಂಥ ಆಕರ ಸಾಮಗ್ರಿಗಳು ಸಾಕಷ್ಟು ನೆರವನ್ನು ನೀಡಬಲ್ಲವು.

ಪ್ರಸಿದ್ಧ ಪುರಾಣ ದೇವತೆಗಳಲ್ಲಿ ಸುಬ್ರಹ್ಮಣ್ಯನೂ ಒಬ್ಬ. ಪುರಾಣಗಳಲ್ಲೂ ಕಾವ್ಯಾದಿಗಳಲ್ಲೂ ಸಾಕಷ್ಟು ಕೀರ್ತಿತನಾದ ಈ ಶಿವಪುತ್ರನು ಸ್ಕಂದ, ಕಾರ್ತಿಕೇಯ, ಷಣ್ಮುಖ, ಗುಹ, ಕುಮಾರ, ವೇಲಾಯುಧ, ಶ್ರೀವಳ್ಳಿಪ್ರಿಯ ಇತ್ಯಾದಿ ಹೆಸರುಗಳಿಂದ ಪ್ರಸಿದ್ಧನಾಗಿದ್ದಾನೆ. ದಕ್ಷಿಣ ಭಾರತದಲ್ಲಿ ಈ ಜನಪ್ರಿಯ ದೇವರನ್ನೇ ಆರಾಧಿಸುವ ಅನೇಕ ಪ್ರಸಿದ್ಧ ಸ್ಕಂದ ಕ್ಷೇತ್ರಗಳಿವೆ. ತುಳುನಾಡಿನಲ್ಲೂ ಸುಬ್ರಹ್ಮಣ್ಯನ ಆರಾಧನೆಗೆ ವಿಶೇಷ ಪ್ರಾಶಸ್ತ್ಯವಿದೆ. ಸುಬ್ರಹ್ಮಣ್ಯನಿಗೆ ಸಂಬಂಧಪಟ್ಟ ಅನೇಕ ಚಿಕ್ಕ ದೊಡ್ಡ ದೇವಸ್ಥಾನಗಳಿವೆ. ಸುಳ್ಯ ತಾಲೂಕಿನ ಮಲೆನಾಡ ಮಡಿಲಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವಂತೂ ಸುಪ್ರಸಿದ್ಧವಾದ ಸಪ್ತ ಕ್ಷೇತ್ರಗಳಲ್ಲಿ ಒಂದೆನಿಸಿ, ಸುಬ್ರಹ್ಮಣ್ಯನ ಹೆಸರನ್ನೇ ಹೊತ್ತಿದೆ. ಸುಬ್ರಹ್ಮಣ್ಯ ಷಷ್ಠಿ ತುಳುನಾಡಿನ ಜನಪ್ರಿಯ ಹಬ್ಬಗಳಲ್ಲಿ ಒಂದಾಗಿದೆ.

ತುಳುನಾಡಿನ ಕೆಲವು ವಿಶಿಷ್ಟ ಕ್ಷೇತ್ರಗಳಲ್ಲಿ – ಮುಖ್ಯವಾಗಿ ಸುಬ್ರಹ್ಮಣ್ಯದಲ್ಲಿ – ಸುಬ್ರಹ್ಮಣ್ಯನನ್ನು ನಾಗನನ್ನೂ ಸಮೀಕರಿಸಿ ಆರಾಧಿಸುವ ಪದ್ಧತಿ ರೂಢವಾಗಿದೆ. ಸರ್ಪಾರಾಧನೆ ಹಾಗೂ ಸ್ಕಂದಾರಾಧನೆ ಯಾವುದೋ ಒಂದು ಕಾಲಘಟ್ಟದಲ್ಲಿ ವಿಶಿಷ್ಟ ಸಾಂಸ್ಕೃತಿಕ ಕಾರಣಗಳ ದೆಸೆಯಿಂದ ಪರಸ್ಪರ ಮಿಳಿತವಾಗಿ ಸ್ಕಂದನು ನಾಗರೂಪಿಯಾಗಿ ಪೂಜೆಗೊಳ್ಳಲು ಕಾರಣವಾಯಿತೆನ್ನಬೇಕು. ನಾಗನು ಸಂತಾನಕಾರಕ ದೈವತವಾಗಿರುವುದರಿಂದ ನಾಗರೂಪಿಯಾದ ಸುಬ್ರಹ್ಮಣ್ಯನೂ ಸಂತಾನಪ್ರದ ದೇವರೆನಿಸಿದ್ದಾನೆ. ತುಳುನಾಡಿನ ಮೂಡುಗಡಿಯ ರಕ್ಷಕ ದೇವರಾಗಿಯೂ ವರ್ಣಿಸಲ್ಪಟ್ಟಿದ್ದಾನೆ.

ಹಲವಾರು ಪಾಡ್ದನಗಳಲ್ಲಿ ಸುಬ್ರಹ್ಮಣ್ಯ ದೇವರ, ಮುಖ್ಯವಾಗಿ ಕುಕ್ಕೆ ಸುಬ್ರಹ್ಮಣ್ಯ ದೇವರ ಉಲ್ಲೇಖವಿದೆ. ಅನೇಕ ದೈವಗಳ ಪಾಡ್ದನಗಳಲ್ಲಿ ಅವು ಗಟ್ಟದಿಂದ ತುಳುನಾಡಿಗೆ ಇಳಿಯುವ ಬೇರೆ ಬೇರೆ ಮಾರ್ಗಗಳಿದ್ದರೂ ಹೆಚ್ಚಿನ ಪಾಡ್ದನಗಳಲ್ಲಿ ಸುಬ್ರಹ್ಮಣ್ಯದ ದಾರಿಯಾಗಿಯೇ ದೈವಗಳು ತುಳುನಾಡಿಗೆ ಬಂದುದಾಗಿ ಹೇಳುವುದರಿಂದ ಈ ದಾರಿ ಬಹು ಪ್ರಾಚೀನಕಾಲದಿಂದಲೇ ಹೆಚ್ಚು ಪರಿಚಿತವಾಗಿದ್ದಿರಬೇಕೆಂದು ಹೇಳಬೇಕಾಗುತ್ತದೆ.

ರೆವರೆಂಡ್ ಎ. ಮೇನರ್ ಎಂಬ ಮಿಶನರಿ ಮಹನೀಯರಿಂದ ಸಂಪಾದಿಸಲ್ಪಟ್ಟು ೧೮೮೬ರಲ್ಲಿ ಮಂಗಳೂರಿನ ಬಾಸೆಲ್ ಮಿಶನ್ ಸಂಸ್ಥೆಯಿಂದ ಪ್ರಕಟವಾದ ‘ಪಾಡ್ದನೊಳು’ ಎಂಬು ೨೧ ಪಾಡ್ದನಗಳ ಅಪೂರ್ವ ಸಂಗ್ರಹದಲ್ಲಿ, ಅಲ್ಲಲ್ಲಿ ಸುಬ್ರಹ್ಮಣ್ಯ ದೇವರ ಪ್ರಸ್ತಾಪ ಬರುತ್ತದೆ. ಸುಬ್ರಹ್ಮಣ್ಯದ ಸುಬ್ರಹ್ಮಣ್ಯ ದೇವರನ್ನು ಸಾಮಾನ್ಯವಾಗಿ ‘ಕುಕ್ಕೆ ಸುಬ್ರಾಯ ದೇವರ್’ (ಕುಕ್ಕೆ ಎಂದರೆ ಸ್ಥಳೀಯ ಪರಿಶಿಷ್ಟರ ಭಾಷೆಯಲ್ಲಿ ಮಗು ಎಂದರ್ಥ) ಎಂದು ಕರೆಯಲಾಗಿದೆ. ಕೆಲವು ಉದಾಹರಣೆ ನೀಡಬಹುದು:

ಪಂಜುರ್ಳಿ ದೈವದ ಒಂದು ಪಾಡ್ದನದಲ್ಲಿ, ಗಂಡು-ಹೆಣ್ಣು ವರಾಹಗಳು ಗಟ್ಟದಿಂದ ತುಳುನಾಡಿಗೆ ಇಳಿಯಲು ಇಚ್ಛಿಸಿ ಬೇರೆ ಬೇರೆ ದೇವರುಗಳನ್ನು ಒಲಿಸುವ ಆಲೋಚನೆಯನ್ನು ಬಿಟ್ಟು ಕೊನೆಗೆ ಸುಬ್ರಹ್ಮಣ್ಯ ದೇವರ ಅನುಗ್ರಹವನ್ನು ಪಡೆಯಲು ಮುಂದಾಗುವ ಚಿತ್ರ ಸಿಗುತ್ತದೆ.

‘‘ನನ ಸುಬ್ರಾಯ ದೇವೆರೆ ಗಟ್ಟ ಜಪ್ಪೊಡು, ಆರ್ ಬುಡುವೆರ್; ಆರೆ ಗಂಡಗಣಕುಳು ಬುಡಾಯೊ ಅಂದ್‌ದ್ ಪಂಡ್‌ದ್ ಕರಂಡೆದ ಕಾಯಿಗ್ ಕಪ್ಪಾಯಿನಾಯೆ ಪಂಜಿನ ಗುಜ್ಜಾರೆ, ತುಂಬೆದ ಪುರ್ಪೊಗು ಮೇಲಾಯಿನಾಳ್ ಪಂಜಿನ ಕಾಳಿ, ಇರುವೆರ್‌ಲಾ ಮದಿಪು ಮಲ್ತದ್, ಆರೆ ಗಂಡಗಣೊಕುಳು ಬುಡುಜಿಂಡ ಕಾಣಿಕೆ ಆಂಡ್ಲಾ ಕಟ್ಟ್‌ದ್ ಗಟ್ಟಿ ಜಪ್ಪುಗೊ ಅಂದ್‌ದ್ ಪಂಡ್‌ದ್ ಐನ್ ಆಜ್ದಿ ಕಪ್ಪ ಕಾಣಿಕೆ ಕಟ್ಟ್‌ದ್ ತರೆಕೊ ಮೈಕೊ ಮೀದ್ ಮೂಡಾಯಿ ಗೋಪುರೊಡ್ದು ಜತ್ತ್‌ದ್ ಪಡ್ಡಾಯಿ ಗೋಪುರೊಡು ವರ ನಟ್ಟ್‌ನಿ ದಾನೆಂದ್‌ಡ – ಈತ್ ದಿನ ತಗೆ ತಂಗಾಡಿ ಆದಿತ್ತೊ, ನನ ಗಟ್ಟ ಜಪ್ಪುವೊ, ಕಂಡಣಿ ಬುಡೆದಿ ಆಪೊ ಅಂದ್‌ದ್ ಪಂಡೆರ್. ಅಂಚನೆ ದೇವರೆ ಅಪ್ಪಣಿ ಆದ್ ಗಟ್ಟ ಜತ್ತೊಂದು ಬನ್ನಗ ಬಂಜಿ ಬತ್ತ್ಂಡ್ ’’(ಪು.೭) (ಇನ್ನು ಸುಬ್ರಹ್ಮಣ್ಯ ದೇವರ ಗಟ್ಟಿ ಇಳಿಯಬೇಕು. ಅವರು ಬಿಟ್ಟಾರು; ಅವರ ಭೂತಗಣಗಳು ಬಿಡಲಾರವು ಎಂದುಕೊಂಡು ಕರಂಡೆಕಾಯಿಯಂತೆ ಕಪ್ಪಾದ ಹಂದಿಯ ಗುಜ್ಜಾರ ಮತ್ತು ತುಂಬೆಯ ಹೂವಿಗೆ ಮೇಲಾದ (ಬಣ್ಣದ) ಹಂದಿ ಕಾಳಿ ಇಬ್ಬರೂ ತೀರ್ಮಾನ ಮಾಡಿ, ಅವರ ಗಂಡ ಗಣಗಳು ಬಿಡದಿದ್ದರೆ ಕಾಣಿಕೆಯಾದರೂ ಕಟ್ಟಿ, ಗಟ್ಟವಿಳಿಯೋಣ ಎಂದು ಹೇಳಿ, ಐದಾರು ಕಪ್ಪ ಕಾಣಿಕೆ ಕಟ್ಟಿ, ತಲೆಗೂ ಮೈಗೂ ಮಿಂದು, ಮೂಡು ದಿಕ್ಕಿನ ಗೋಪುರದಿಂದ ಇಳಿದು ಪಡುವಣ ಗೋಪುರದಲ್ಲಿ ವರ ಬೇಡಿದುದು ಏನೆಂದರೆ – ಇಷ್ಟು ದಿನ ಅಣ್ಣ ತಂಗಿ ಆಗಿದ್ದೆವು. ಇನ್ನು ಗಟ್ಟ ಇಳಿಯುತ್ತೇವೆ. ಗಂಡ ಹೆಂಡತಿ ಆಗುತ್ತೇವೆ ಎಂದರು. ಹಾಗೆಯೆ ದೇವರ ಅನುಜ್ಞೆ ಆಗಿ ಗಟ್ಟ ಇಳಿಯುತ್ತ ಬರುವಾಗ ಬಸಿರು ಬಂತು.)

ಈ ಪಾಡ್ದನ ಭಾಗದ ಸಮೀಕ್ಷೆಯಲ್ಲಿ ಕೆಲವೊಂದು ವಿಚಾರಗಳನ್ನು ಕಂಡುಕೊಳ್ಳಬಹುದು. ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ತೆರಳುವ ಅದರಲ್ಲೂ ಗಟ್ಟ ಇಳಿಯುವಂಥ ಪ್ರಸಂಗದಲ್ಲಿ ಮೊದಲಿಗೆ ಕಾಣಸಿಕ್ಕುವ ಪ್ರಾದೇಶಿಕ ರಕ್ಷಕನೆನಿಸುವ ದೇವರ ಅನುಗ್ರಹವನ್ನು ಯಾಚಿಸಬೇಕೆನ್ನುವ ಶಿಷ್ಟಾಚಾರ ಇಲ್ಲಿ ವ್ಯಕ್ತವಾಗುದೆ, ಸಾತ್ವಿಕ ಪ್ರಕೃತಿಯ ದೇವರ ಜೊತೆಯಲ್ಲಿ ರಾಜಸ ಅಥವಾ ತಾಮಸ ಪ್ರಕೃತಿಯ ‘ಗಂಡಗಣ’ಗಳೂ ಇರುವುದು ವಾಡಿಕೆ. (ಇದು ನಮ್ಮ ಜನನೇತಾರರ, ಮಂತ್ರಿಮಾಗಧರ ಸುತ್ತಲೂ ಸಹಜವಾಗಿಯೇ ಇರುವ ದುಷ್ಟಕೂಟವನ್ನು ನೆನಪಿಸುತ್ತದೆ.) ಈ ಗಂಡ ಗಣಗಳು ಉಪದ್ರವ ಮಾಡಿಯಾವೆಂದು ಆ ವರಾಹಗಳು ನಿರೀಕ್ಷಿಸುವುದು ಸಹಜವೇ. ಇಂಥ ಗಂಡಗಣಗಳನ್ನು ತೃಪ್ತಿಪಡಿಸಲು ‘ಕಾಣಿಕೆ’(ಲಂಚ) ಆದರೂ ಕಟ್ಟಿ ಪಾರಾಗುವ ಆಲೋಚನೆ ಅವುಗಳದು.

ಈ ವೇಳೆಯಲ್ಲಿ ಮಿಂದು ಮಡಿಯಾಗಿ ಅಣ್ಣ ತಂಗಿ ವರಾಹಗಳು ಸುಬ್ರಾಯ ದೇವರೊಡನೆ ತಾವಿನ್ನು ದಂಪತಿಗಳಾಗುವ ಆಸೆಯನ್ನು ವ್ಯಕ್ತಗೊಳಿಸಿ ಅದಕ್ಕೆ ದೇವರ ಅನುಮತಿಯ ಮುದ್ರೆಯನ್ನು ಯಾಚಿಸುತ್ತವೆ. ಈ ಅನುಮತಿಯ ಅವಶ್ಯಕತೆಯೇನೆಂದರೆ, ಈ ಅಣ್ಣ ತಂಗಿ ವರಾಹಗಳು ದಂಪತಿಗಳಾಗಬಯಸುವುದು ಸಹಜವಾದ ಜೀವನ ಪ್ರಕ್ರಿಯೆಯಾಗಿರದೆ, ಇದೊಂದು ಅಸಾಧಾರಣ ಪ್ರಮೇಯವಾಗಿರುತ್ತದೆ. ಅಣ್ಣತಂಗಿಯಾದ ವರು ಗಂಡ ಹೆಂಡಿರಾಗುವುದು ಸಾಮಾಜಿಕ, ಧಾರ್ಮಿಕ ನಿಷಿದ್ಧ(Taboo) ಅಪರಾಧಗಳಲ್ಲಿ ಒಂದು. ಹೀಗಿದ್ದರೂ ಮಾನವ ಮನಸ್ಸಿನ ಪ್ರಕೃತಿ ವಿಕೃತಿಗಳನ್ನು ಬಿಂಬಿಸುವ ಪುರಾಣಗಳಲ್ಲಿ, ಜನಪದ ಸಾಹಿತ್ಯದಲ್ಲಿ ಇಂಥ ನಿಷಿದ್ಧಗಳ ಬಗೆಗೆ ವಿರಳವಾದರೂ ಕೆಲವೊಂದು ಕಥಾನಕಗಳು ಹೆಣೆಯಲ್ಪಟ್ಟಿರುವುದು ಕುತೂಹಲಕರವಾದ ಅಂಶ.

ಇಂಥ ನಿಷಿದ್ಧ ವಿವಾಹದ ಪ್ರಶ್ನೆಯನ್ನು ಸಂತಾನಕಾರಕನಾದ ಸುಬ್ರಹ್ಮಣ್ಯ ದೇವರ ಸಮ್ಮುಖದಲ್ಲಿ ಇರಿಸಲಾಗುವುದು ಮುಖ್ಯವಾಗಿದೆ. ಸಾಮಾನ್ಯ ನಿಯಮಗಳನ್ನು ಸಡಿಲಿಸುವ, ತಿದ್ದುವ ಅಥವಾ ವಿಶೇಷ ಅನುಗ್ರಹವನ್ನು ನೀಡುವ ಹೆಚ್ಚಿನ ಯೋಗ್ಯತೆ, ಪ್ರಭಾವ ಈ ದೇವರಿಗಿತ್ತು ಎಂಬುದು ಇದರಿಂದ ವ್ಯಕ್ತವಾಗುತ್ತದೆ.

ಅದೇ ಗ್ರಂಥದಲ್ಲಿರುವ ಪಂಜುರ್ಳಿದೈವದ ಇನ್ನೊಂದು ಪಾಡ್ದನದಲ್ಲಿ ಪಂಜುರ್ಳಿಯು ವರಾಹರೂಪಿಯಾಗಿ ವೈಕುಂಠದಲ್ಲಿ ಜನಿಸಿ ನಾರಾಯಣ ದೇವರ ಅಪ್ಪಣೆಯಂತೆ ಭೂಲೋಕಕ್ಕೆ ಇಳಿದು ನೆಲೆಗೊಳ್ಳುವ ವಿವರವಿದೆ.

‘‘ಆ ಪಂಜುರ್ಳಿ ಆಕಾಸೊಡ್ಡು ತಿರ್ತ್ ಬೂಲೋಕೊಗ್ ಬರಿಯೆರೆ ಸಾದಿ ನಾಡಿಯೆ. ನಾಡ್‌ನಗ ಆಯಗ್ ದಿಂಜ ಸಾದಿಳು ತೋಜಿಂಡ್. ಆಂಡಲಾ ಆಯೆ ಗಟ್ಟದ ಮಿತ್ತ್ ಯೆಲೆನಾಡಿ ಸೀಮೆದ ಯೆಲೆನಾಡಿ ಪರಿಕ್ಕೆಡ್ ಜತ್ತ್ ದ್, ಅಂಚನೆ ತಿರ್ಗೊಂನ್ದು ಯೇಳ್ ಇರ್ಲ್‌ಡ್ ಯೇಳ್ ಪಗೆಲ್‌ಡ್ ತಿಂರ್ಗೊಣುದು ಸುಬ್ರಹ್ಮಣ್ಯೊಗು ಬತ್ತ್‌ದ್ ಗುಂಡೊಗು ಕೈಮುಗಿದ್ ಸುಬ್ರಾಯ ದೇವೆರೆಗ್ ಅಡ್ಡ ಬೂರುದು ಕೈ ಮುಗಿದ್ ಪಂಡಿನಿ ಸ್ವಾಮಿ ಸುಬ್ರಮಣ್ಯ ದೇವೆರೆ, ಈರೆ ಪಾದೊದ ಬರಿಕ್ ಬತ್ತ್‌ದ್ ಬೂರಿಯೆ. ನನ ಯಾನ್ ಪೋಯಿ ಜಾಗ್‌ಳೆಗ್ ಮಾತ ಈರ್‌ಲಾ ಸಹಾಯ ಆದ್‌ಯೆನ ಮಿತ್ತ್ ದಯದೀದ್ ನಡಪುಡೊದು ಅಂದ್‌ದ್ ಪ್ರಾರ್ಥನೆ ಮಲ್ಪುನಗ ಉಳಯಿ ಗುಂಡೊದ ಯೆದ್‌ರ್‌ಡ್ ಗಣಾಲನೆ ಗಂಟೆದ ಸಬ್ದ ಆಂಡ್ . ಆಪಗ ಪಂಜುರ್ಳಿ ಉಂದು ದೇವೆರೆ ಕಾರಣಿಕ ಉಂದು ಬಹಳ ಸಂತೋಷ ಆಂಡ್ ಅಂದ್‌ದ್ ಆಲೋಚನೆ ಮಳ್ತ್‌ದ್ ಅಳ್ತ್ ಪಿದಾಡ್ದ್ ಪಡ್ಡಾಯಿ ಮುಖ ಮಳ್ತ್‌ದ್ ಬನ್ನಗ ಕಾಡ್‌ದ ಉಳಯಿ ಮಲ್ಲೆ ಆದ್ ಮರ್ದಳದ ಬೂಡು ಪೊರ್ಲಾದ್ ಆಯಗ್ ತೋಜಿಂಡ್ ’’(ಪು.೫೯) (ಆ ಪಂಜುರ್ಳಿ ಆಕಾಶದಿಂದ ಕೆಳಗೆ ಭೂಲೋಕಕ್ಕೆ ಬರಲು ಹಾದಿ ಹುಡುಕಿದ. ಹುಡುಕುವಾಗ ಅವನಿಗೆ ಹಲವು ಹಾದಿಗಳು ತೋರಿದವು. ಆದರೂ ಆತ ಗಟ್ಟದ ಮೇಲೆ ಯೆಲೆನಾಡು ಸೀಮೆಯ ಯೆಲೆನಾಡು ಬಯಲಿಗೆ ಇಳಿದು, ಹಾಗೆಯೇ ತಿರುಗುತ್ತಾ ಏಳು ಇರುಳು ಏಳು ಹಗಲು ತಿರುಗುತ್ತಾ ಸುಬ್ರಹ್ಮಣ್ಯಕ್ಕೆ ಬಂದು ಗರ್ಭಗೃಹಕ್ಕೆ ಕೈ ಮುಗಿದು, ಸುಬ್ರಹ್ಮಣ್ಯ ದೇವರೆ, ನಿಮ್ಮ ಪಾದದ ಬಳಿಗೆ ಬಂದು ಬಿದ್ದೆ, ಇನ್ನು ನಾನು ಹೋಗುವ ಸ್ಥಳಗಳಿಗೆ ನೀವೂ ಸಹಾಯವಾಗಿ, ನನ್ನ ಮೇಲೆ ದಯೆ ಇಟ್ಟು ನಡೆಯಿಸಿಕೊಳ್ಳಬೇಕು ಎಂದು ಪ್ರಾರ್ಥನೆ ಮಾಡುವಾಗ, ಒಳಗೆ ಗರ್ಭಗುಡಿಯ ಎದುರಿಗೆ ಗಣಾಲನೆ ಗಂಟೆಯ ಶಬ್ದವಾಯಿತು. ಆಗ ಪಂಜುರ್ಳಿ, ‘ಇದು ದೇವರ ಪವಾಡ, ಬಹಳ ಸಂತೋಷವಾಯಿತು, ಎಂದು ಯೋಚಿಸಿ ಅಲ್ಲಿಂದ ಹೊರಟು ಪಡುಮುಖವಾಗಿ ಬರುವಾಗ, ಕಾಡಿನ ಒಳಗೆ ಹಿರಿದಾಗಿ ಮರ್ದಾಳ ಬೀಡು ಸೊಗಸಾಗಿ ಆತನಿಗೆ ಕಾಣಿಸಿತು.)

ಪಂಜುರ್ಳಿಯ ಈ ಪಾಡ್ದನದಲ್ಲಿ ವರಾಹದಂಪತಿಗಳ ಪ್ರಸ್ತಾಪವಿಲ್ಲ. ಗಟ್ಟವಿಳಿಯುವ ಹಲವು ದಾರಿಗಳಲ್ಲಿ ಸುಬ್ರಹ್ಮಣ್ಯದ ದಾರಿಯೇ ಪ್ರಶಸ್ತವೆಂದು ಪಂಜುರ್ಳಿಯು ತಿಳಿದು ಈ ಪ್ರದೇಶದ ಮೂಲಕ ಹಾದು ಹೋಗಲು ದೇವರ ಅನುಮತಿಯನ್ನು ಯಾಚಿಸುತ್ತಾನೆ. ಗಂಡಗಣ ಕಪ್ಪ ಕಾಣಿಕೆಗಳ ಕುರಿತೂ ಇಲ್ಲಿ ಹೇಳಿಲ್ಲ. ದೇವರು ಮೌಖಿಕವಾಗಿ ಅಪ್ಪಣೆ ಕೊಟ್ಟದ್ದು ಇಲ್ಲಿ ಕಂಡುಬರುವುದಿಲ್ಲ. ಆದರೆ, ಇದ್ದಕ್ಕಿದ್ದಂತೆ ದೇಗುಲದ ಗಂಟೆಗಳು ಗಣಾಲನೆ ಮೊಳಗಿದ್ದೇ ದೇವರ ಅನುಮತಿಯ ಸೂಚನೆ ಎಂದು ಪಂಜುರ್ಳಿಯು ತಿಳಿದು ಸಮಾಧಾನ ಪಡುತ್ತಾನೆ. ಇಂಥ ಶಕುನಗಳ, ಹಾಗೇ ಅಮಾನುಷ ಘಟನೆಗಳ ಕುರಿತಾದ ನಂಬಿಕೆ ಜನಪದ ಜೀವನದಲ್ಲಿ ಹೇರಳವಾಗಿದೆ.

ಸುಬ್ರಹ್ಮಣ್ಯ ದೇವರ ಅನುಮತಿಯನ್ನು ವಿನಯದಿಂದ ಪಡೆದ ಉಲ್ಲೇಖ ಮೇಲಿನ ಪಾಡ್ದನದಲ್ಲಿದ್ದರೆ, ಈ ದೇವರಲ್ಲಿ ಕೆಲವು ದೈವಗಳಿಗೆ ಸಂಘರ್ಷ ಒದಗಿದ ಚಿತ್ರಣ ಇನ್ನು ಕೆಲವು ಪಾಡ್ದನಗಳಲ್ಲಿವೆ. ‘ಅತ್ತಾವರ ದೆಯ್ಯೊಂಗುಳು’ ಪಾಡ್ದನದಲ್ಲಿ ಇಂಥದೊಂದು ಘಟನೆಯ ವಿವರ ಬರುತ್ತದೆ.

‘‘ಪಲಯನವು ಆನೆ ಮಂದಿ ಮಾರ್ಬಲ ಲಕ್ಕ್ಂಡ್. ಮೆಗ್ಯನವು ಕುದ್ರೆ ಮಂದಿ ಮಾರ್ಬಲ ಲಕ್ಕ್ ಡ್ . ತುಳು ರಾಜ್ಯೊ ಗಟ್ಟ ಜಪ್ಪೆರೆ ವೋಳು ಜಪ್ಪುಣಿಂದ್ ಕೇಂಡೆರ್ … ಯುಕ್ತಿಡ್ ಸಕ್ತಿಡ್ ಕುಕ್ಕೆ ಸುಬ್ರಾಯ ದೇವೆರೆ ತಲೊ ಗಟ್ಟ ಜತ್ತ್ ದೆರ್‌ಯೇ. ಐನ್ ತೂಯೆರ್ -ಸುಬ್ರಾಯ ದೇವೆರ್, ದೈವ ದೇವೆರ್ ನಾಗೆರ್ ಬೆರ್ಮೆರ್ ಹೊರತ್‌ದ್ ಉಂದು ಯೇರೆ ಸತ್ಯದಂಡೆ ಜಪ್ಪುಣಿಂದೆರ್. ಅಡ್ಡಣೊಡು ಕೋಟೆ ಗೋರಾಯೆರ್, ಸಪಲೊಡು ದರಿ ಗೋಪಾಯೆರ್. ಆ ದರಿನ್ ಕೋಟೆನ್ ನುರ್ತುದ್ ಜತ್ತೆರ್, ಸುಬ್ರಾಯ ದೇವೆರೆ ತಳೊಟು ಉಂತ್ಯೆರ್ ಮೆಗ್ಯೆ ಪಲಾಯೆ ದೇವಸ್ಥಾನೊಗು ಮೂಜಿಸುತ್ತು ಬಲಿ ಬತ್ತೆರ್. ಪಲಯ ಅಪ್ಪಣೆ ಆಂಡ್ ದೇವೆರೆಗಾ ನಂಕಾ ರಾಜಕಾರ್ಯ ಮಳ್ಪೊಡುಂದೆರ್. ಒಂಜಿ ದಿನೊತ ರಾಜಕಾರ್ಯೊಗು ಪಲಾಯೆ ಜತ್ತೆರ್. ದುಂಬು ಬಾಣ ಬುಡಿಯೆರ್. ಸುಬ್ರಾಯ ದೇವೆರೆ ಕೊಡಿಮರ ಮೂಜಿ ತುಂಡು ಆಂಡ್. ಮನದಾನಿದ ರಾಜಕಾರ್ಯೊಗು ಮೆಗ್ಯೆ ಜತ್ತೆರ್, ಬಾಣ ಬುಡಿಯೆರ್ ಗುಂಡದ ಮುಗುಲಿ ಮೂಜಿ ತುಂಡಾದ್ ಬೂರುಂಡು. ಸುಬ್ರಾಯ ದೇವೆರೆ ತಳ ಕಡತೆರ್, ಕುಮಾರ್ದಾರೆ, ಮತ್ಸಕೀರ್ತಿ, ಕಡತೀರ್ತ ಕಡತೆರ್ ’’.(ಪುಟ-೨೫) (ಅಣ್ಣನ ಆನೆ ಮಂದಿ ಮಾರ್ಬಲ ಎದ್ದಿತು. ತಮ್ಮನ ಕುದುರೆ ಮಂದಿ ಮಾರ್ಬಲ ಎದ್ದಿತು. ತುಳುರಾಜ್ಯಕ್ಕೆ ಯಾವ ಗಟ್ಟದ ದಾರಿಯಿಂದ ಇಳಿಯುವುದೆಂದು ಕೇಳಿದರು….ಯುಕ್ತಿಯಲ್ಲಿ ಶಕ್ತಿಯಲ್ಲಿ (ಮಿಗಿಲಾದ) ಕುಕ್ಕೆ ಸುಬ್ರಹ್ಮಣ್ಯ ದೇವರ ಸ್ಥಳದ ದಾರಿಯಿಮದ ಗಟ್ಟ ಇಳಿದರು. ಅದನ್ನು ನೋಡಿದರು ಸುಬ್ರಹ್ಮಣ್ಯ ದೇವರು, ದೈವ, ದೇವರು, ನಾಗರು, ಬ್ರಹ್ಮರು ಹೊರತಾಗಿ ಇದು ಯಾರು ಸತ್ಯದಂಡಿಗೆ (ಪಾಲಕಿ)ಯಲ್ಲಿ ಇಳಿಯುವುದೆಂದರು. ಗುರಾಣಿಯಲ್ಲಿ ಕೋಟೆ ಬಲಿದರು. ಸಬಳದಿಂದ ಬೇಲಿ ಪೋಣಿಸಿದರು. ಆ ಬೇಲಿಯನ್ನೂ, ಕೋಟೆಯನ್ನೂ (ದೈವಗಳು) ಮುರಿದು ಕೆಳಗಿಳಿದರು. ಸುಬ್ರಹ್ಮಣ್ಯ ದೇವರ ಸ್ಥಳದಲ್ಲಿ ಅಣ್ಣ ತಮ್ಮ ನಿಂತರು. ದೇವಸ್ಥಾನಕ್ಕೆ ಮೂರು ಸುತ್ತು ಪ್ರದಕ್ಷಿಣೆ ಬಂದರು. ದೇವರಿಗೂ ನಮಗೂ ‘ರಾಜಕಾರ್ಯ’ ಆಗಬೇಕೆಂದು ಅಣ್ಣನ ಅಪ್ಪಣೆಯಾಯಿತು. ಒಂದು ದಿನದ ‘ರಾಜಕಾರ್ಯ’ ಆಗಬೇಕೆಂದು ಅಣ್ಣನ ಅಪ್ಪಣೆಯಾಯಿತು. ಒಂದು ದಿನದ ರಾಜಕಾರ್ಯ (ಯುದ್ಧ)ಕ್ಕೆ ಅಣ್ಣ ಇಳಿದರು; ಬಾಣ ಬಿಟ್ಟರು. ಸುಬ್ರಹ್ಮಣ್ಯ ದೇವರ ಧ್ವಜಮರ ಮೂರು ತುಂಡಾಯಿತು. ಮರುದಿನ ರಾಜಕಾರ್ಯಕ್ಕೆ ತಮ್ಮ ಇಳಿದರು, ಬಾಣಬಿಟ್ಟರು, ಸುಬ್ರಹ್ಮಣ್ಯ ದೇವರ ಗರ್ಭಗುಡಿಯ ಕಲಶ ಮೂರು ತುಂಡಾಗಿ ಬಿತ್ತು. ಸುಬ್ರಹ್ಮಣ್ಯ ದೇವರ ಸ್ಥಳ ದಾಟಿದರು, ಕುಮಾರಧಾರೆ, ಮತ್ಸ್ಯತೀರ್ಥ, ಕಡತೀರ್ಥ ದಾಟಿದರು.)

ಈ ಕಥಾನಕದಲ್ಲಿ ಯಾವುದೋ ಐತಿಹಾಸಿಕ ಘಟನೆಯು ಹಾಸುಹೊಕ್ಕಾಗಿರುವಂತೆ ಭಾಸವಾಗುತ್ತದೆ. ಸತ್ಯದಂಡಿಗೆಯಲ್ಲಿ ಮಂಡಿಸಿ ಸುಬ್ರಹ್ಮಣ್ಯ ದೇವರ ಅನುಮತಿ ಪಡೆಯದೆ ಅತಿಕ್ರಮ ಪ್ರವೇಶ ಮಾಡಿದವರು ಯಾರೋ ವೀರಯೋಧರೋ ದಂಡ ನಾಯಕರೋ ಅರಸು ಕುಮಾರರೋ ಆಗಿರಬೇಕು. ಇದೇ ಪಾಡ್ದನದಲ್ಲಿ ಮುಂದೆ ಇವರು ಬಿಲ್ಲು ಸುಲ್ತಾನ ಈರಪ್ಪ ನಾಯ್ಕನ ದಂಡನ್ನು ಸಂಹಾರ ಮಾಡಿದರೆಂದಿದೆ. ಇದೊಂದು ಚಾರಿತ್ರಿಕ ಘಟನೆಯೇ ಆಗಿರಬೇಕು. ಪಾಡ್ದನದಲ್ಲಿ ಇವರು ದೈವಗಳೆಂದು ಹೆಸರಿಸಲ್ಪಟ್ಟಿ ದ್ದರೂ ಆ ದೈವತ್ವ ಅವರಿಗೆ ಆಮೇಲೆ ಲಭ್ಯವಾದುದೆಂದು ತಿಳಿಯಬೇಕಾಗುತ್ತದೆ. ಇವರು ದೈವದೇವರ ವರ್ಗಕ್ಕೆ ಸೇರಿದವರಲ್ಲವೆಂದು ಸುಬ್ರಹ್ಮಣ್ಯ ದೇವರೂ ಹೇಳುತ್ತಾರಷ್ಟೆ? ಕಾರಣಾಂತರಗಳಿಂದ ದೈವತ್ವಕ್ಕೇರಿದ ಅನೇಕ ವೀರ ಯೋಧರ ಕಥೆಗಳು ಪ್ರಚುರವಾಗಿವೆ. ಇಲ್ಲಿ ಉಲ್ಲೇಖಿತರಾದ ಅಣ್ಣ ತಮ್ಮಂದಿರೂ ಅಂಥ ವೀರಪುರಷರೇ ಇರಬೇಕು.

ಸುಬ್ರಹ್ಮಣ್ಯ ದೇವರು ಇವರ ಮಂದಿ ಮಾರ್ಬಲದ ಪ್ರವೇಶವನ್ನು ಪ್ರತಿಭಟಿಸುವ ವ್ಯವಸ್ಥೆ ಮಾಡಿದುದಾಗಿ ಇರುವ ಉಲ್ಲೇಖವು, ದೇವಸ್ಥಾನ ಕೇಂದ್ರಿತವಾದ ಒಂದು ರಾಜಕೀಯ ಪ್ರತಿಭಟನೆಯನ್ನು ಸೂಚಿಸುತ್ತದೆನ್ನಬಹುದು.

ಸಂಘರ್ಷದಲ್ಲಿ ದೇವಸ್ಥಾನದ ಭಾಗಗಳಿಗೂ ಹಾನಿ ತಟ್ಟಿದ ಸಂದರ್ಭಗಳು ಚಾರಿತ್ರಿಕವಾಗಿ ಅದೆಷ್ಟೋ ಇವೆ. ಸ್ವಾರ್ಥ ಪ್ರೇರಿತವಾದ ಅಭಿಯೋಗವು ದೇವಸ್ಥಾನಗಳಂಥ ಸಂಸ್ಥೆಗಳ ಮಹತ್ವಿಕೆ, ಪಾವಿತ್ರ್ಯಗಳನ್ನೂ ಲೆಕ್ಕಿಸುವುದಿಲ್ಲ ಎಂಬ ಅಂಶವೂ ಇಲ್ಲಿ ವ್ಯಕ್ತವಾದಂತಿದೆ.

ಉಳ್ಳಾಕುಳು ದೈವಗಳ (ಅತ್ತಾವರ ದೈವಗಳನ್ನು ಉಳ್ಳಾಕುಳು ಎಂದೇ ಕರೆಯುತ್ತಾರೆ.) ಇನ್ನೊಂದು ಪಾಡ್ದನದಲ್ಲಿ ಇದೇ ರೀತಿಯ ಸಂಘರ್ಷದ ಚಿತ್ರ ಸಿಗುತ್ತದೆ. ಆದರೆ ಕೊನೆಗೊಂದು ಸಂಧಾನ ಆದಂತಹ ನಿರೂಪಣೆಯೂ ಇದೆ. ಧ್ವಜಮರವನ್ನು ಮುಕ್ಕಡಿಗೈದ ಪರಿಹಾರವಾಗಿ ಏಳುಕೈಯ ಕೊಪ್ಪರಿಗೆಯನ್ನು ದೇವರಿಗೆ ತೋರಿಕೊಟ್ಟು ಉಳ್ಳಾಕುಳು ತುಳುನಾಡಿಗೆ ಇಳಿಯುತ್ತಾರೆ. ಇಲ್ಲಿ ಕೊಪ್ಪರಿಗೆ ಎಂದರೆ ಪರಿಹಾರ ನಿಧಿ ಎಂಧು ಅರ್ಥವಿಸಬಹುದು. ಅಥವಾ ವಶಪಡಿಸಲಾದ ಅಪಾರ ಸಂಪತ್ತನ್ನು ಬಿಟ್ಟು ಕೊಟ್ಟಂತೆಯೂ ಊಹಿಸಬಹುದು. ನಾಗನಿಗೂ ನಿಧಿಗೂ ಸಂಬಂಧವಿರುವುದನ್ನು ಇದು ಸೂಚಿಸುತ್ತಿರಬಹುದು.

ವಿವಿಧ ರೀತಿಯ ಆರಾಧನೆಗಳ ಆಂದೋಲನ, ಧಾರ್ಮಿಕ ಘರ್ಷಣೆಗಳು ನಡೆಯುತ್ತಾ ಬಂದಿರುವುದು ನಿಜವಷ್ಟೆ. ಸುಬ್ರಹ್ಮಣ್ಯದಲ್ಲಿ ಪ್ರತೀತವಾಗಿದ್ದ ಅಂದಿನ ನಾಗಾರಾಧನೆ ಅಥವಾ ಸ್ಕಂದಾರಾಧನೆಯ ವಿರೋಧವಾಗಿ ಪ್ರತಿಭಟನೆಗಳೇನಾದರೂ ಜರಗಿದ್ದರೂ ಇರಬಹುದು. ಸುಬ್ರಹ್ಮಣ್ಯದಲ್ಲಿನ ಧ್ವಜಸ್ತಂಭ ತುಂಡಾಯಿತೆಂಬುದಕ್ಕೆ ಹಾಗೂ ಅದು ಮುಂದಕ್ಕೆ ಇರಬಾರದೆಂದು ಅನುಶಾಸನಕ್ಕೆ – ಧಾರ್ಮಿಕ ಭಿನ್ನಾಭಿಪ್ರಾಯ, ಸಂಘರ್ಷ, ಆ ಮೇಲಿನ ಸಂಧಾನ ಕಾರಣವಾಗಿರಬೇಕೆಂದು ಊಹಿಸಬಹುದು.

ಸುಬ್ರಹ್ಮಣ್ಯನನ್ನು ಕುಕ್ಕೆಯಲ್ಲಿ ಮೊದಲಾಗಿ ಕಂಡು ಪೂಜಿಸಿದವರು ಮಲೆ ಕುಡಿಯರೆಂದು ಐತಿಹ್ಯವಿದೆ.(ಪರಿಶಿಷ್ಟ ವರ್ಗದವರಿಗೆ ದೇವರು ಮೊದಲು ನೋಡಸಿಕ್ಕಿದ ಕಥೆಗಳು ತುಳುನಾಡಿನಲ್ಲಿ ಸಾಕಷ್ಟಿವೆ.) ಸುಬ್ರಹ್ಮಣ್ಯ ಪರಿಸರದ ಮಲೆಯಲ್ಲಿ ಪ್ರಾಚೀನವಾದ ಬೇರೆಯೇ ಒಂದು ಸುಬ್ರಹ್ಮಣ್ಯ ದೇವಸ್ಥಾನ ಇದ್ದಿತೆಂದೂ ಹಾಳುಬಿದ್ದಿದ್ದ ಅದನ್ನು – ಈಚೆಗೆ ಜೀರ್ಣೋದ್ಧಾರಗೊಳಿಸಲಾಗಿದೆಯೆಂದೂ ತಿಳಿಯುತ್ತದೆ. ಈ ಪ್ರದೇಶದಲ್ಲಿ ಹಿಂದೊಮ್ಮೆ ತುಂಬಾ ಜನವಸತಿ ಇತ್ತೆಂಬುದಕ್ಕೆ ಅರಣ್ಯಮಧ್ಯದಲ್ಲಿ ಈಗಲೂ ಕಂಡುಬರುತ್ತಿರುವ ಜನವಸತಿಗಳ ಕುರುಹುಗಳೇ ಸಾಕ್ಷಿ. ಮೂಲತಃ ಮಲೆಕುಡಿಯರ ವಂಶದಲ್ಲಿದ್ದ ಆರಾಧನಾಲಯವು ಕ್ರಮೇಣ ಅವರ ಕೈಯಿಂದ ಕಸಿಯಲ್ಪಟ್ಟಿರುವ ಸಾಧ್ಯತೆಯೂ ಇಲ್ಲದಿಲ್ಲ.

ಬಚ್ಚನಾಯಕ ದೈವದ ಒಂದು ಪಾಡ್ದನದಲ್ಲಿ ಬಚ್ಚನಾಯಕನ ಸಹಿತ ಏಳು ಮಂದಿ ಸುಬ್ರಹ್ಮಣ್ಯಕ್ಕೆ ದಂಡು ಸಹಿತ ಬಂದು ಏಳು ಕೈಯ ಕೊಪ್ಪರಿಗೆಯನ್ನು (ಎಂದರೆ ವಿಪುಲ ಸಂಪತ್ತನ್ನು) ಎಳೆಯಬಂದಂತೆ ನಿರೂಪಿತವಾಗಿದೆ. ಮುಂದಕ್ಕೆ ಈತ ಬಳ್ಪದತ್ತ ಬಂದು ಯುದ್ಧದಲ್ಲಿ ಜೈಸಿದರೂ ಒಳಸಂಚಿಗೆ ಬಲಿಯಾಗಿ ಹೆಣ್ಣಿನ ಕೈಯ ವಿಷಪ್ರಾಶನದಿಂದ ಮಡಿಯುತ್ತಾನೆ. ಇಲ್ಲಿ ಬಚ್ಚನಾಯಕ (ಬಸ್ತಿ ನಾಯಕನೆಂದೂ ಕರೆಯುತ್ತಾರೆ.) ಒಬ್ಬ ಸೇನಾನಾಯಕ ಎಂಬುದು ಸ್ಪಷ್ಟ ದೇವಸ್ಥಾನಗಳನ್ನು ಸೂರೆ ಮಾಡಿದ ಇಂಥ ಸೇನಾನಾಯಕರ ವೃತ್ತಾಂತವು ಚರಿತ್ರೆಯಲ್ಲಿ ಸಾಕಷ್ಟು ಇದೆ. ತುಳುನಾಡು ಬೇರೆ ಬೇರೆ ಕಾಲಘಟ್ಟಗಳಲ್ಲಿ ಅನೇಕ ಸಾಮ್ರಾಜ್ಯಶಾಹಿ ಶಕ್ತಿಗಳ ಆಕ್ರಮಣಕ್ಕೂ ಅಂಕೆಗೂ ಗುರಿಯಾದುದನ್ನು ಮರೆಯುವಂತಿಲ್ಲ.

ಧರ್ಮ ಅರಸು ತೋಡಕುಕ್ಕಿನಾರ್ ದೈವದ ಸಂಧಿಯಲ್ಲಿ ಧರ್ಮ ಅರಸು ಸುಬ್ರಹ್ಮಣ್ಯ ದೇವರ ಪ್ರತಿಭಟನೆಯನ್ನು ಲೆಕ್ಕಿಸದೆ ದೇವಸ್ಥಾನಕ್ಕೆ ಪ್ರವೇಶ ಮಾಡಿದುದಾಗಿ ನಿರೂಪಿತವಾಗಿದೆ.

‘‘ಧರ್ಮ ಅರಸುಳು ಚನ್ನಮಂಗಳೆ ಚಲುವ ರಾಯೆನ್ಪಿ ಯೆರುತ ಮಿತ್ತ್ ವೋಲೆಗಾಯೆರ್. ಸುಬ್ರಾಯ ದೇವೆರೆ ತಳೊಕು ಜಪ್ಪುನಾಗ ಸುಬ್ರಾಯ ದೇವೆರ್ ತೂಯೆರ್. ದಾಂತಿ ಜಾಗ್ ಡ್ ಯೇರ್ ಜಪ್ಪುಣಿಂದೆರ್. ಅಡ್ಡಣೊಡು ಕೋಟೆ ಗೋರಾಯೆರ್. ಸಪಳೊಡು ದರಿ ಗೋರಾಯೆರ್. ಗೋಡೆಡ್ ಕತ್ತಿ ಬರ್ಚಿ ದೀಪಾಯೆರ್. ಅರಸುಳು ಮಾತ ಪೊಳ್ತುದು ಬತ್ತೆರ್. ಸುಬ್ರಾಯ ದೇವೆರೆ ತಳೊಕು ಬತ್ತ್ ದ್ ದೇವಸ್ಥಾನೊಗು ಪೊಗೈರ್. ಮೂಜಿ ಸುತ್ತು ಬಲಿಬತ್ತೆರ್. ಔಳು ಐನ್ ದಿನೊತ ಅಯನ ತೂಯೆರ್, ಅಳ್ತ್ ಯೆರುತ ಮೇಲ್ ಡ್ ಕುಮಾರದಾರೆ, ಮಚ್ಚತೀರ್ತ ಕಡತೆರ್ ….’’(ಧರ್ಮ ಅರಸು ಚೆನ್ನಮಂಗಳ ಚೆಲುವರಾಯ ಎಂಬ ಹೋರಿಯ ಮೇಲೆ ಓಲಗವಾದರು. ಸುಬ್ರಹ್ಮಣ್ಯ ದೇವರ ಸ್ಥಳಕ್ಕೆ ಇಳಿಯುವಾಗ ಸುಬ್ರಹ್ಮಣ್ಯ ದೇವರು ನೋಡಿದರು. ಸಲ್ಲದ ಸ್ಥಳದಲ್ಲಿ ಯಾರು ಇಳಿಯುವುದೆಂದರು, ಗುರಾಣಿಯಿಂದ ಕೋಟೆ ಬಲಿದರು. ಸಬಳದಿಂದ ಬೇಲಿ ಬಲಿದರು. ಗೋಡೆಯಲ್ಲಿ ಕತ್ತಿ ಬರ್ಚಿ ಇಡಿಸಿದರು. ಅರಸುಗಳು ಎಲ್ಲವನ್ನೂ ಮುರಿದು ಬಂದರು. ಸುಬ್ರಹ್ಮಣ್ಯ ದೇವರ ಸ್ಥಳಕ್ಕೆ ಬಂದು ದೇವಸ್ಥಾನಕ್ಕೆ ಹೊಕ್ಕರು. ಮೂರು ಸುತ್ತು ಪ್ರದಕ್ಷಿಣಿ ಬಂದರು. ಅಲ್ಲಿ ಐದು ದಿನದ ಜಾತ್ರೆ ನೋಡಿದರು. ಅಲ್ಲಿಂದ ಎತ್ತಿನ ಮೇಲೆ(ಕುಳಿತು) ಕುಮಾರಧಾರೆ, ಮತ್ಸ್ಯತೀರ್ಥ ದಾಟಿದರು.)

ಇಲ್ಲಿ ಧರ್ಮ ಅರಸು ಬೇರೆನೂ ಅನಾಹುತ ಮಾಡಿದ್ದು ಕಂಡುಬರುವುದಿಲ್ಲ. ದೇವಸ್ಥಾನಕ್ಕೆ ಪ್ರದಕ್ಷಿಣೆ ಬಂದು ಐದು ದಿವಸ ಉತ್ಸವ ವೀಕ್ಷಿಸಿದುದಾಗಿ ಹೇಳಲಾಗಿದೆ. ದೇವಸ್ಥಾನದಲ್ಲಿ ಇದ್ದಿರಬಹುದಾದ ಕೆಲವೊಂದು ಸಾಮಾಜಿಕ, ಧಾರ್ಮಿಕ, ವಿಧಿನಿಷೇಧಗಳ ಪ್ರತಿಭಟನೆಯು ಇಂಥ ಉಲ್ಲೇಖಗಳಲ್ಲಿ ವ್ಯಕ್ತಪಟ್ಟಿರಲೂ ಬಹುದಾಗಿದೆ. ಮೊದಲು ಸಂಘರ್ಷ, ಆಮೇಲೆ ಸಂಧಾನವೂ ಇಲ್ಲಿ ಧ್ವನಿತವಾದಂತಿದೆ.

ಬಲೀಂದ್ರನ ಸಂಧಿಯೊಂದರಲ್ಲಿ ‘ಬಾಲಬ್ರಹ್ಮಚಾರಿ ಮಾಣಿಗಳು’ ಕಂಡ ಸುಬ್ರಾಯ ದೇವರ ವರ್ಣನೆ ಸೊಗಸಾಗಿದೆ.

‘‘ನಂಕಾಂಡ ತುಳುರಾಜ್ಯೊ ತೂವೊಡು, ತುಳು ವಿದ್ಯೆ ಕಲ್ಪೊಡು, ವಾ ದೇವೆರೆ ಗಟ್ಟ ಬಲಿ ಜತ್ತೊಣ್ಗ ಎಂದ್‌ದ್ ಮೂಡಾಯಿ ಸುಬ್ರಹ್ಮಣ್ಯ ಸುಬ್ರಾಯ ದೇವೆರೆ ಗಟ್ಟಬಲಿ ಜತ್ತೊಣ್ಗ ಎಂದ್ ದ್ ಬತ್ತೆರ್ . ಅಪಗ ಸುಬ್ರಾಯ ದೇವೆರ್ ಅಜಿಪಕಾರ ಗದ್ದಿಗೆಡ್, ಮೂಜಿ ಕಾರ ಮುಂಡು ಮುಕ್ಕಾಳಿಗೆಡ್, ಮೊರಂಪಾಯಿ ಮಲ್ಲಿಗೆಡ್ ,ಕೇಕಯಿ ಸಂಪಿಗೆಡ್, ಸರ್ಪಲಿಂಗೊಡು, ಮೈರ ಬಾಣೊಡು, ಒಡ್ಡು ಪಾಡಿ ಓಲೆಗ ಆವೊಂದೆರ್. ಆತ್ ಪೊರ್ತಗು ಮಾಣಿಗುಳು ಬತ್ತ್ ಸರಿಸರಿ ಪಾದ ಕಾಣಿಕೆ ಮಲ್ತೊಂಡೆರ್. ಅಪಗ ಕೇಂಡೆರ್ ಸುಬ್ರಾಯ ದೇವೆರ್ ಒಲ್ತು ಬತ್ತಾರ್ ಮಾಣಿಗುಳೆ, ಓಡೆಗ್ ಪೋಪರ್ಂದ್ ಕೇಣ್ಣಗ, ಎಂಕ್ಲಾಂಡ ಗಟ್ಟದ ಮಿತ್ತ್ ಉದ್ಯ ಉದಿಪನ ಆವೊಂಡ, ಎಂಕ್ಲೆಗ್ ತುಳುರಾಜ್ಯೊ ತೂವೊಡು, ತುಳು ವಿದ್ಯೊ ಕಲ್ಪೊಡುಂದು ಈರೆನ ಗಟ್ಟ ಬಲಿ ಜತ್ತೊಂದು ಬತ್ತಂದ್ ಪಂಡೆರ್. ಆತ್ ಪೊರ್ತುಗು ಪಂಡೆರ್ ದೇವೆರ್ -ಎನ್ನ ಗಟ್ಟ ಬಲಿ ಜಪ್ಯೆರೆ ಬಲ್ಲಿ, ತುಳುರಾಜ್ಯೊ ತೂಯೆರೆ ಬಲ್ಲಿ. ಮುಲ್ತಾಂಡ ಬೇಗೊನೆ ಪೊವೊಡುಂದೆರ್.’’ (ನಮಗಾದರೋ ತುಳುರಾಜ್ಯವನ್ನು ನೋಡಬೇಕು, ತುಳುವಿದ್ಯೆ ಕಲಿಯಬೇಕು. ಯಾವ ದೇವರ ಗಟ್ಟವನ್ನು ಇಳಿಯೋಣ ಎಂದು ಯೋಚಿಸಿ ಮೂಡು ಸುಬ್ರಹ್ಮಣ್ಯ ದೇವರ ಗಟ್ಟವನ್ನು ಇಳಿಯೋಣ ಎಂದು ಬಂದರು. ಆಗ ಸುಬ್ರಹ್ಮಣ್ಯ ದೇವರು ಅರುವತ್ತು ಕಾಲ ಗದ್ದುಗೆಯಲ್ಲಿ, ಮೂರು ಕಾಲಿನ ಮುಂಡು ಮುಕ್ಕಾಲಿನ ಪೀಠದಲ್ಲಿ, ಮೊಣಕಾಲವರೆಗಿನ ಮಲ್ಲಿಗೆಯಲ್ಲಿ, ಕೊರಳವರೆಗಿನ ಸಂಪಿಗೆಯಲ್ಲಿ, ಸರ್ಪಲಿಂಗ ಲಾಂಛನದಲ್ಲಿ, ನವಿಲಗರಿಯ ಅಲಂಕಾರದಲ್ಲಿ ಒಡ್ಡೋಲಗ ಆಗಿದ್ದಾರೆ. ಅಷ್ಟರಲ್ಲಿ ಮಾಣಿಗಳು ಬಂದು ಸಮ್ಮುಖಕ್ಕೆ ಪಾದಕಾಣಿಕೆ ಮಾಡಿಕೊಂಡರು. ಆಗ ಕೇಳಿದರು ಸುಬ್ರಹ್ಮಣ್ಯ ದೇವರು -ಎಲ್ಲಿಂದ ಬಂದಿರಿ ಮಾಣಿಗಳೆ? ಎಲ್ಲಿಗೆ ಹೋಗುವಿರಿ ಮಾಣಿಗಳೆ? ಎಂದು ಕೇಳಲು ನಾವಾದರೋ ಗಟ್ಟದ ಮೇಲೆ ಉದ್ಭವವಾದೆವು. ನಮಗೆ ತುಳು ರಾಜ್ಯ ನೋಡಬೇಕು, ತುಳುವಿದ್ಯೆ ಕಲಿಯಬೇಕೆಂದು ನಿಮ್ಮ ಗಟ್ಟ ಇಳಿದುಕೊಂಡು ಬಂದೆವೆಂದರು. ಅಷ್ಟು ಹೊತ್ತಿಗೆ ಹೇಳುತ್ತಾರೆ ದೇವರು -ನನ್ನ ಗಟ್ಟ ಇಳಿಯಬಾರದು. ತುಳುರಾಜ್ಯ ನೋಡಕೂಡದು, ತುಳು ವಿದ್ಯೆ ಕಲಿಯಲೂ ಕೂಡದು. ಇಲ್ಲಿಂದ ಬೇಗನೆ ಹೋಗಬೇಕೆಂದರು).

ಇಲ್ಲಿಯೂ ಗಟ್ಟ ಇಳಿಯಲು ದೇವರ ಸಮ್ಮತಿ ಲಭಿಸುವುದಿಲ್ಲ. ತುಳುನಾಡಿನ ಅಭಿಮಾನದ ದೊರೆಯಾದ ಬಲಿರಾಜನನ್ನು ವಂಚಿಸಲು ‘ಮಾಣಿಗಳು’ ಬರುವ ಹಿನ್ನೆಲೆಯಲ್ಲಿ ಇಲ್ಲಿ ಸುಬ್ರಹ್ಮಣ್ಯ ದೇವರು ಇವರ ಆಗಮನವನ್ನು ಪ್ರತಿ ಬಂಧಿಸಿರಬೇಕೆನಿಸುತ್ತದೆ.

ಮುಖ್ಯವಾಗಿ ಗಟ್ಟದಿಂದ ತುಳುನಾಡಿಗೆ -ಮೂಡುದಿಕ್ಕಿನ ಈ ನೈಸರ್ಗಿಕ ಕೋಟೆಯನ್ನು ಭೇದಿಸಿ ಇಳಿಯುವುದು ಅಷ್ಟೊಂದು ಸುಲಭವಾಗಿರಲಿಲ್ಲವೆಂದೂ, ಸಂದರ್ಭವೊದಗಿದಾಗ ಸಂಘರ್ಷಗಳೂ ಏರ್ಪಡುತ್ತಾ ಇದ್ದಿತೆಂದೂ ಈ ಪಾಡ್ದನ ಭಾಗಗಳ ಉಲ್ಲೇಖಗಳಿಂದ ವ್ಯಕ್ತವಾಗುತ್ತದೆ. ಕುಕ್ಕೆ ಸುಬ್ರಹ್ಮಣ್ಯವಂತೂ ತುಳುನಾಡಿನ ಮೂಡುಭಾಗದ ಒಂದು ಪ್ರಮುಖ ಸಾಂಸ್ಕೃತಿಕ ಕೇಂದ್ರವಾಗಿದ್ದಿತೆಂದೂ ಆ ಕ್ಷೇತ್ರದಲ್ಲಿ ಹಲವು ಬಗೆಯ ಧಾರ್ಮಿಕ, ರಾಜಕೀಯ ಪ್ರಸ್ಥಾನಗಳು ಭಿನ್ನ ಭಿನ್ನ ಕಾರಣಗಳಿಗಾಗಿ ಮುಖಾಮುಖಿಯಾಗಿದ್ದುವೆಂದೂ ಊಹಿಸಬಹುದು.

ತುಳುನಾಡಿನ ಇತರ ಅನೇಕ ಸುಬ್ರಹ್ಮಣ್ಯ ದೇವಸ್ಥಾನಗಳಿಗೂ ಆಸುಪಾಸಿನ ದೈವಗಳಿಗೂ ಸಂಬಂಧ ಕಲ್ಪಿತವಾಗಿದ್ದು, ಆಯಾ ದೈವಗಳ ಪಾಡ್ದನಗಳಲ್ಲಿ ಈ ಸಾಹಚರ್ಯದ ಕಥನವನ್ನು ನೋಡಬಹುದು.

(ವಗೆನಾಡು ಶ್ರೀ ಸುಬ್ರಾಯ ದೇವಸ್ಥಾನದ ನವೀಕರಣ ಸ್ಮರಣಸಂಪುಟ ‘ಸ್ಕಂದ ವೈಭವ’ (೧೯೯೩)ದಲ್ಲಿ ಪ್ರಕಟ, ಸಂಪಾದಕರು : ಡಾ.ಪಾದೇಕಲ್ಲು ವಿಷ್ಣುಭಟ್ಟ)

ಪರಾಮರ್ಶನ ಸಾಹಿತ್ಯ

೧. ರೆ.ಎ.ಮೇನರ್, ಪಾಡ್ದನೊಳು, ಬಾಸೆಲ್ ಮಿಶನ್ ಪ್ರೆಸ್, ಮಂಗಳೂರು, ೧೮೮೬

೨. ಬೇರೆ ಬೇರೆ ಬಿಡಿ ಪಾಡ್ದನಗಳು.